ಈಗ ಕವಿತೆ ಬರೆಯಲು ನಾನು ಹೊರಟಿಲ್ಲ ;
ಹೊರಟೀದ್ದು ಆಫೀಸಿಗೆ: ಉಂಡು ಅವಸರದಿಂದ-
ಸಿಕ್ಕರೆ ಬಸ್ಸು ಹಿಡಿದು, ಇಲ್ಲ, ಮೆಲ್ಲಗೆ ನಡೆದು ;
ಸಡಿಲಾಗಿರುವ ಕೋಟು ಪ್ಯಾಂಟುಗಳನ್ನು ಇದ್ದು –
ದರಲ್ಲಿ ಸರಿಪಡಿಸಿಕೊಂಡು. ಎಷ್ಟೋ ವರ್ಷಗಳ
ಹಿಂದೆ ಎಡಗಾಲ ಹಿಂಬಡ ಗಾಯ ಮಾದದ್ದು
ಈಗ ಮತ್ತೆ ನೋವು. ಮದುವೆಯಲಿ ಕಟ್ಟಿದ ವಾಚು
ಆಗೀಗ ಬಂದುಬಿದ್ದರೂ ಅದರಂತರಂಗದದ್ಭುತ –
ಸೂಕ್ಷ್ಮಯಂತ್ರಕ್ಕೆ ಸಾಗಿದ ನಾನು ಮಂತ್ರ ಮುಗ್ಧ.
ನನ್ನ ದಾರಿಗೆ ಅಡ್ಡ ಎಮ್ಮೆಗಳು (ನಮ್ಮೂರ ದೊಡ್ಡ
ಹೆಮ್ಮೆಗಳು) ಉದ್ದಕ್ಕೂ ಉಚ್ಚೆ ಹೊಯ್ಯುತ್ತ, ಸಗಣಿ
ಹಾಕುತ್ತ, ಅತ್ತಿತ್ತ ಸುಖವಾಗಿ ಬಾಲ ಜಾಡಿಸುತ್ತ ;
ಸೈಕಲ್ಲು, ಕಾರು, ಸ್ಕೂಟರು ಜಾರಿ ತಮತಮಗೆ ದಾರಿ
ಮಾಡಿಕೊಂಡು. ಚೀಲದ ತುಂಬ ಪುಸ್ತಕ ಭಾರ ಹೊತ್ತು
ಶಾಲೆಗೆ ನಡೆದ ಮಕ್ಕಳುತ್ಸಾಹಕ್ಕೆ, ಎಡಬಲದ
ಗಿಡಮರಗಳಲ್ಲಿ ಚೈತ್ರ ನಗುವ ಚಿಗುರು.
ಆಫೀಸಿನ ಕುರ್ಚಿ ಮೇಜುಗಳ ರೀತಿರಿವಾಜು
ಗಳಲ್ಲಿ ಫೈಲುಗಳು ; ಪತ್ರಕುತ್ತರ ಮತ್ತೆ ಸುತ್ತೋಲೆ ;
ಟೀಕೆ-ಟಿಪ್ಪಣಿ ಸರಣಿ ; ದೂರವಾಣಿಯಲಿ ದೂರುಗಳು.
ಸುಸೂತ್ರ ಸಾಗುತ್ತಿದ್ದಂತೆ ಕೆಂಪು ಪಟ್ಟಿಯಲಿ ಕಗ್ಗಂಟು-
ಹೀಗೆ ಇಪ್ಪತ್ತೆಂಟು ಗಲಿಬಿಲಿಯ ನಡುವೆ, ಬಿಟ್ಟೂ
ಬಿಡದೆ ಟೈಪ್‌ರೈಟರಿನ ಲಯಬದ್ಧ ನಡಿಗೆ ; ಕೊನೆಗೆ
ಕೆಳಗಿಂದ ಮೇಲಿನ ತನಕ ರುಜುವಾಗಿ, ಹೊರ ಜಗತ್ತಿಗೆ
ರವಾನೆ. (ಹೇಗಿದ್ದರೂ ಮುಗಿಸಬೇಕಾದ ಕೆಲಸ ತಾನೆ?)
ಹೊತ್ತು ಇಳಿಯುವ ಸಮಯ : ಬಾಗಿದ ಬೆನ್ನು ಎತ್ತಿ
ಹೊರಗಿನ ಗಾಳಿ ಬೆಳಕಿಗೆ ತೇಲಿ ಬರುವಾಗ
ಮೇದು ಮೆಲುಕಾಡಿಸುತ ಬರುವ ದನ-ಕರುಗಳು.
ಹುಡುಗನ ಹೆಗಲಲ್ಲಿ ಜೋತ ಟ್ರಾನ್ಸಿಸ್ಟರಿನ ಹಾಡು.
ಕಟ್ಟಿಗೆಯ ಹೊರೆ ಹೊತ್ತು ದಣಿದ ಹೆಜ್ಜೆಯ ಹೆಣ್ಣು
ಮಕ್ಕಳ ಹಣೆಯ ಬೆವರು. ಗುಡ್ಡವನ್ನಿಳಿದು
ಸಾಗಿದ ನೆರಳು. ಬಾನ ಮನಸಿಗೆ ಅವಿಸ್ಮರಣೀಯ
ನೆನಪುಗಳ ಮೆಲ್ಲ ತೇಲಿಸಿ ತರುವ ಬೆಳ್ಳಕ್ಕಿಸಾಲು.
ಆಟದ ಬಯಲಿನಲ್ಲಿ ಬರೀ ಕ್ರಿಕೆಟ್ಟು.
ಮನೆಯ ಮೆಟ್ಟಿಲು ಹತ್ತಿ ಹಾಗೆ ಹೊರಳಿದರೆ –
ದಿನದ ದುಡಿಮೆಯ ಕೆಂಪು, ಬಾನಿನಲಿ ಮೆಲ್ಲಗೆ
ನಂದಿ, ಒಂದೆರಡು ಅಸ್ಪಷ್ಟ ಚಿಕ್ಕೆಗಳು ಮೂಡಿ
ಗೂಡಿನಲಿ ಸ್ತಬ್ಧ ಹಕ್ಕಿಗಳು.
ಈ ದಿವಸ ಮಾಡಿ ಮಟ್ಟಿದ್ದೇನು? ಎದೆಯ ತಟ್ಟಿದ್ದೇನು?
ನಿನ್ನೆಗಳ ಇಂದು ಎಳತಂದು, ನಾಳೆಗುತ್ತರವ
ಹುಡುಕುವ ಉತ್ತರೋತ್ತರ ಕೆಲಸ. ಪುರಸತ್ತಿರದೆ
ಸುತ್ತುವದು ಹೀಗೆ ನಮ್ಮ ಸುತ್ತು : ಈ ಜಗತ್ತು –
ವಿವಿಧ ಛಂದಸ್ಸಿನಲಿ ಕಸರತ್ತು ಲಯವಾಗಿ, ಈಗೀಗ
ವಿರಳ ಸರಳ ರಗಳೆಯ ಹೊಕ್ಕು ಹೊರಬಂದು
ಮುಕ್ತಛಂದದ ಹೆಸರಿನಲ್ಲಿ ನಿದಾನ ಹೆಜ್ಜೆನಿಂದು.
*****
೧೯೮೦