ದೀಪಾವಳಿ

ಅಲ್ಲಲ್ಲಿ ಹುಲ್ಲು ಹಳದಿಗೆ ತಿರುಗಿ, ಗದ್ದೆಯಲಿ ನೆಲ್ಲು ತೆನೆಹಾಯ್ದು
ಗಾಳಿಯುದ್ದಕು ಬಾಗಿ ಬಾಚುತ್ತ ಬಿಸಿಲಿನಲಿ ಮಿರಿಮಿರಿ ಮಿಂಚಿ;
ಆಕಾಶದಲ್ಲಿ ಸ್ವಾತಿಯ ಮೋಡ ಸುರಿದು ಹಿಂಜರಿದು
ಕ್ಷಿತಿಜದಂಚಿನಲಿ ಸಂಜೆಯ ಸೂರ್ಯ ಝಗಝಗಿಸಿ
ಅಲ್ಲೊಂದು ಇಲ್ಲೊಂದು ಚಿಕ್ಕೆ ಕುತೂಹಲದಿ ಕಣ್ಣು ತೆರೆದಾಗ
ಬೆಳ್ಳಗೆ ಮಂಜುಮುಸುಕಿನಲಿ ಬಂತು ದೀಪಾವಳಿ.

ಗೋದಿಸಸಿ ನಾಟಿ ಜೋಳದ ತುಂಬುತೆನೆ ತಲೆದೂಗಿ
ಹುಚ್ಚೆಳ್ಳು ಹಚ್ಚಹಸುರಿಗೆ ಅಚ್ಚ ಬಂಗಾರದಂತಾಗಿ;
ದನಕರುಗಳೆಲ್ಲ ಮೇದು ಮೆಲುಕಾಡಿಸುತ ಬರುವಾಗ
ಕೆರೆಯಂಚಿನಲ್ಲಿ ಸಾಲಾಗಿ ಕುಳಿತ ಬೆಳ್ಳಕ್ಕಿ ಬಾನಿಗೆ ಹಾರಿ,
ನಸುಗಪ್ಪಿನಲಿ ತೊಗಲಬಾವಲಿ ಹಿಂಡ ಹಿಂಬಾಲಿಸುತ
ಮನೆಮನೆಯ ಶಿವನಬುಟ್ಟಿಗೆ ಇಳಿದು ಬಂತು ದೀಪಾವಳಿ.

ನೆಲದ ಹುಲ್ಲಿನ ಮೇಲೆ ಮುಗಿಲ ಮಲ್ಲಿಗೆ ಜಗುಳಿ,
ಹೊನ್ನವರೆ, ಅಡಿಕೆ, ಗೊರಟಿಗೆ, ಚೆಂಡು ದುಂಡಗೆ ಅರಳಿ,
ಬೇಲಿಗುಂಟ ಬಿಳಿ, ಹಳದಿ, ಕೆಂಪು, ಚಾಂಬಳಿ, ನೀಲಿ ಹೂಗಳ ಮೇಲೆ
ಕುಳಿತ ಪಾತರಗಿತ್ತಿ ಬೆಂಬತ್ತಿ ಮಕ್ಕಳಾಡಿರಲು,
ನೂರುಸಲ ಗುಬ್ಬಿ ಗೂಡಿಗೆ ಮರಳು ಗುಟುಕಿಡಲು
ಅಕ್ಕರತೆಯಲಿ ಮರಿಗೆ ರೆಕ್ಕೆ ಮೂಡಿಸಿ ಬಂತು ದೀಪಾವಳಿ.

ಸಂದಿಗೊಂದಿಯ ಕಸ-ಧೂಳಿ-ಜೊಂಡಿಗ-ಜೇಡಬಲೆ ಗುಡಿಸಿ
ಸುಣ್ಣ ಬಣ್ಣವ ಹಚ್ಚಿ, ಹಳೆಯ ತಲೆದಿಂಬಿಗೆ ಹೊಸ ಚೀಲ ತೊಡಿಸಿ,
ಹರಕು ಮುರುಕು ಸಾಮಾನುಗಳ ಗಂಟುಕಟ್ಟಿ ಮೂಲೆಗೆ ಇರಿಸಿ,
ಸ್ನೇಹಿತರ ಬಳಗಕ್ಕೆ ರೆಡಿಮೇಡ್ ಶುಭಾಶಯವ ಕಳಿಸಿ,
ವಿಶೇಷ ಸಂಚಿಕೆಯ ಮುಖಪುಟದಲ್ಲಿ ಹೆಣ್ಣಿನ ವಿಚಿತ್ರ ಭಂಗಿ ಕಂಡಾಗ
ಮುಸಿಮುಸಿ ನಕ್ಕು, ಇದ್ದುದರಲ್ಲೆ ಖುಷಿಯಾಗಿ ಬಂತು ದೀಪಾವಳಿ.

ಹೊಲ, ಗದ್ದೆ, ಗಿರಣಿ, ಕಚೇರಿ, ಕಾರ್ಖಾನೆಯಲಿ ಬೆವರು ಸುರಿಸಿ,
ಸಂಪು, ಹರತಾಳ, ಕೊಲೆ, ಸುಲಿಗೆ, ಅಪಘಾತ ರಕ್ತ ಕುಂಕುಮವಿರಿಸಿ,
ವಿಧಾನಸಭೆಯ ವಿಧಿಯಿರದ ಗೊಂದಲದೊಳಗೆ ಸಿಕ್ಕಿ ಪಾರಾಗಿ,
ಪಕ್ಷಾಂತರಕ್ಕೆ ಮನಸೋಲದೆ ತನ್ನ ಹಾದಿಯ ತಾನು ಹಿಡಿದು-
ಕಲ್ಲಿನೇಟಿಗೆ ಎಲ್ಲ ವಿದ್ಯುದ್ದೀಪ ಒಡೆದು ಚೂರಾಗಿರಲು
ಹಣತೆಗಳ ಹುಡುಹುಡುಕಿಕೊಂಡು ಬಂತು ದೀಪಾವಳಿ.

ಹಲವಾರುಸಲ ಮಾವನ ಮನೆಗೆ ಬಂದ ಅಳಿಯನಂತೆ
ಭೆಟ್ಟಿಯಾದಾಗೊಮ್ಮೆ ‘ಚಹಾ ಕುಡಿಸಪಾ’ ಎನ್ನುವ ಗೆಳೆಯನಂತೆ
ದಿನದಿನವು ಪತ್ರಿಕೆಯಲ್ಲಿ ಬರುವ ವಾಚಕರ ಪತ್ರಗಳ ದೂರಿನಂತೆ
ಹೊಸ್ತಿಲ ತೊಳೆವ ಮೊದಲೆ ಬಾಗಿಲಲಿ ಸಪ್ಪಳಾಗುವ ಹಾಲಿನ ಬಾಟ್ಲಿಯಂತೆ
ಬಹುದಿನದ ಮೇಲೆ ಬಂದ ಕವನ ಸಂಕಲನದ ತಿದ್ದಿದೆರಡನೆಯ ಆವೃತ್ತಿಯಂತೆ
ಬರುವ ಕಾಲಕ್ಕೆ ಬಂತು ದೀಪಾವಳಿ.
*****
೧೯೭೪