ದೂಧ್ ಸಾಗರ್

(ಲೋಂಡಾದಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲಿ ಕಾಣಸಿಗುವ ದೂಧ್ ಸಾಗರ್ ಜಲಪಾತದ ನೋಟ ಮನೋಹರ. ಆಕಾಶದಿಂದ ಧುಮ್ಮಿಕ್ಕುವ ಹಾಲಿನ ಹೊಳೆಯಂತೆ ಕಾಣುವ ಇದರೆದುರು ನಿಂತಾಗ….)

ಕ್ಷೀರ ಸಾಗರವ ಸುಮನಸ ವೃಂದ
ಬಾನಿಂ ಕಟ್ಟಿರೆ ಸಡಲಿತೆ ಬಂಧ?
ಓಹೋ ತಪ್ಪಿದೆ ತಪ್ಪಿದೆನಲ್ಲ
ದೈವಶಕ್ತಿಗನುಮಾನವೆ ಸಲ್ಲ.

ರಾಧೆಯು ಹೊತ್ತಿರೆ ಬಿಂದಿಗೆ ಹಾಲ
ಕೃಷ್ಣನು ಅಲ್ಲಿಗೆ ಹೊಡೆದನೆ ಕಲ್ಲ?
ಆದರೆ ಸಂದೇಹವು ಬಂತಲ್ಲ
ಕಾಣದು ರಾಧೆಯ ಕೆಂಪಿನ ಗಲ್ಲ!

ದೇವಧೇನುವಿನ ಕೆಚ್ಚಲ ಹಾಲೆ?
ಸಟೆ; ನಿಲ್ಲಳು ಅವಳೊಂದೆಡೆಯಲ್ಲೇ.
ರತ್ನಗರ್ಭನಿಗೆ ಅಮೃತದ ಪಾಲೆ?
ಕತೆಯದು ಮುಗಿದುದು ಕೃತಯುಗದಲ್ಲೇ.

ಉಪ್ಪಿನ ರಾಜಗೆ ಸಕ್ಕರೆ ಹಾಲೆ?
ಪ್ರಕೃತಿಯ ಪುತ್ರಿಗೆ ತಾಯ್ಮೊಲೆವಾಲೆ?
ಆವ ಹಾಲಿನದು ಈ ಘನ ಶರಧಿ?
ಕವಿಯ ಕಲ್ಪನೆಗದೆಲ್ಲಿದೆ ಪರಿಧಿ?
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ