-೧-
(ಈಕೆ)
ಹೂ.
ಹಸಿ ಹೂ.
(ದತ್ತ ಹೇಳಿಧಾಂಗ)
ಇದೀಗ ಬಿಸಿಯಾಗುತ್ತಿರುವ,
ಸಸಿಯ ಹೂ,
ಹಗುರು, ನವಿರು.
ಆತ
ಮಧ್ಯಕಾಲೀನ ಪುರುಷ.
ಎಳಸು.
ಮುಖವಾಡದವ.
ಸೋಕಿತವನ
ದುರಾಸೆಯ
ನಖ!
ನಿಗಿಕೆಂಡದಿ ಕಾದ
ಸಲಾಕೆಯ ಮುಖ!
ನಂಜು!!
ಕಾರ್ಖಾನೆಯ
ನಿಗರಿ ನಿಂತ
ನಳಿಕೆಯ
ಹೊಗೆ, ಧಗೆ!!
(ಈಕೆ)
ಇನ್ನೇನು ಘಮ್ಮೆಂದು
ಬಿರಿಯುವ ಮೊದಲೇ
ಕಂದು, ಮಂಕು.
(ಈಕೆ)
ಹೊಳೆ,
ಇನ್ನೂ ಎಳೆ.
(ಅದೇ ದತ್ತ ಹೇಳಿಧಾಂಗ)
ತೂರಾಡೋ ವಾಲಿ,
ನಂದಿಸಿ ಸಜ್ಜಿ ಸಾಲಿ,
ಧುಮ್ಮಿಕ್ಕುವ ಮದ.
ದೈತ್ಯ ರಾವಣನ,
ಭಾಕ್ರ-ಸರ್ದಾರನ ತೋಳು,
ತೀಟೆ.
ಮುಳ್ಳು-ರೆಂಬೆ, ಬಿರುಸುಗಲ್ಲು,
ಆಣೇಕಟ್ಟಿನ ಏಟು!!
ಹಣೆ,
ಹಸಿ ಕುಂಕುಮ ಒರೆಸಿಟ್ಟ
ಜಿನುಗು.
(ಈಕಿ)
ರಾಗರತಿ
(ಮತ್ತದೇ ದತ್ತ ಹೇಳಿಧಾಂಗ)
ಅರಳು ಮಲ್ಲಿಗಿಯ ಇರುಳ ಜಡಿ,
ಮಳ್ಳಗಾಳಿಯ ಸುಳಿಗೆ ಸೆರಗು
ಸರಿಯಾಗಿಸುತ್ತ ಬಿಸಿಯಾಗಿ,
ಕೂಡಲು ಕಾದ ಗರತಿ.
(ಆತ)
ಅತ್ಯಾಧುನಿಕ ವಿಕಾರಪುರುಷ
ಆ ಕಿರಣ, ಈ ಕಿರಣ
ಕ್ಷಕಿರಣ ಹಾಯಿಸಿ,
ವಿಕಿರಣವಾಗಿಸಿ,
ಅವಳದ್ದನ್ನು ಇವಳಿಗೋ,
ಇವಳದ್ದನ್ನು ಇನ್ಯಾರಿಗೋ
ಕೂಡಿಸಿ ಕಳೆದು
ವೀರ್ಯವಿಲ್ಲದೇ ಅಂಡ ಬೆಳೆಸಿ
ಹಿಟ್ಲರುಗಳ
ಪ್ರತಿರೂಪ ಸೃಷ್ಟಿಸಿ,
ಬೇಸರವೆನೆಸಿದರೆ ಸಾಯಿಸಿ,
ತನಗೆತಾನೇ ಲಿಂಗಪೂಜೆ
ಗೇಲಿಮಾಡಿ
ಅಪ್ರಸ್ತುತ ಷಂಡ! ಮುಖೇಡಿ!!
(ಈಕಿ)
ವಸುದೇವನಿಗೆ ಬಸಿರಾದ ದೇವಕಿ
ಕಾದು ನಿಂತದ ಇಡೀ ದ್ವಾರಕಿ
(ಅದ ದತ್ತನ ಧಾಟಿಯೊಳಗ)
(ಆತ)
ಅತ್ತ
ವೇದ ಅವೇದ್ಯವಾಗಿ,
ಕುರಾನು ಕದರಿಲ್ಲದೇ
ಸದರಾಗಿ ಇತ್ತ
ರಾಕೆಟ್ಟೂ ಹಾರಿಸದೇ,
ಹಾರಲು ಬರದ
ಕಂಗಾಲು ಕ್ರೂರಕಂಸ!
ರೈಲು, ದ್ವಾರಕಾ, ಅಹ್ಮದಾಬಾದು
ಬರಬಾದು!
“ಮಾರೋ ಇಸ್‌ಕೋ, ಪೀಟೋ ಉಸ್‌ಕೋ
ಢಮ್! ಢಮಾರ್!
ಠಣ್!! ಠಣಾರ್!!
ನವಮಾಸವಿನ್ನೂ ತುಂಬಿಲ್ಲ
ಚೊತೋ ಉಸ್‌ಕೋ!”
-೨-
ಬಾಡಿ ತೊಟ್ಟು ಕಳಚುವ ಮೊದಲೇ
ಬಿಳಚಿ ಬತ್ತುವ ಮೊದಲೇ,
ಅಂಡಾಂಶ ವಿಧ್ವಂಸವಾಗುವ ಮೊದಲೇ,
ಅಷ್ಟಪುತ್ರನೂ ನಷ್ಟನಾಗುವ ಮೊದಲೇ,
ಅವರೆಲ್ಲಾ ಸೇರಿ
ಋಷಿಪಂಚಿಮೆಯ ವ್ರತ ಹಿಡಿಸುವ ಮೊದಲೇ,
ಆಕೆ
ತಂತ್ರಾಂಶಗಳ ಮಂತ್ರ
ಉದ್ಘೋಷಿಸುವ ಪುರೋಹಿತೆ.
ಕಟ್ಟಿದ ತುರುಬಿಗೆ,
ತೊಟ್ಟ
ನೀಲಿ ಜೀನಿಗೆ,
ಸರ್ದಾರನ ಸೊಕ್ಕು,
ಮುಕ್ಕುವ ಈ ಹಕ್ಕಿಗೆ
ತಕ್ಕ-
ತಲೆಏತ್ತಿದ ನಿಲುವಿನ
ಆ ನರ್ಮದೆ
ಯಂತ್ರಗಳ ಕಿರಿದಾಗಿಸಿ,
ಸರ್ಕೀಟಿನಲಿ
ಎಲೆಕ್ಟ್ರಾಣುಗಳ ಊದಿ
ಅಲೆಅಲೆಗಳ ಚದುರಿಸಿ
ಅರಿವು ಮೂಡಿಸುವ
ವೀರ
ಕಟ್ಟೆಗಳ ಕೆಡವಿ
ಪುಟ್ಟ ಪಾತಿ ತೋಡುವ
ತಕ್ಕ-
ಪ್ರಗಲ್ಭತೆಯ
ನವ-ಮೋಹನನೋರ್ವನ
ರಮಿಸಿ,
ಹಿಗ್ಗಿ, ತೂರಾಡಿ
ಮಧುವುಕ್ಕಿಸಿ,
ಅವನ
ಒಳಸೆಳೆದು,
ಮುಖಜ ಭೂಮಿಯ ಮೇಲೆ,
ಚೆಲ್ಲಾಟವಾಡಿ
ಮತ್ತಷ್ಟು
ಅಂಥವನ
ಬೀಜ
ಚೆಲ್ಲಾಡಬೇಕೀಕೆ.
ಅದೇ
ಅವರೊಳೊತಿಗಾಗಿ ಅವಗೆ ಅವಳು
ಅವಳಿಗೆ ಅವನು
ತಿಳಿಹೇಳಬೇಕಾದ ನಿಯಮ!!
*****
ಏಪ್ರಿಲ್, ೨೦೦೩