ಅವರು ಹೀಗಿರುವುದು ನಮ್ಮ ಅದೃಷ್ಟ,
ಹೀಗಿರದೇ ಹಾಗೆ –
’ಎಲ್ಲರ ಹಾಗೆ’ ಇದಿದ್ದರೆ, ಆಗ ತಿಳಿಯುತ್ತಿತ್ತು !!
ಬೇಕಾದ್ದು ಮಾಡಬಹುದು
ಎಂದೂ ಏನೂ ಅಂದಿಲ್ಲ.
ಅದನ್ನೆಲ್ಲ ತಿಳಿಯವ ಆಸಕ್ತಿಯೂ ಅವರಿಗಿಲ್ಲ,
ಪುರಸೊತ್ತ೦ತು ಮೊದಲೇ ಇಲ್ಲ.
ನಮಗಂತೂ ಅವರ ಪಕ್ಕದಲ್ಲೇ ಜಾಗ.
ಅತ್ತ ಮೇಜು, ಕುರ್ಚಿ, ಟಿವಿ; ಇತ್ತ ನಾವು!
ಮತ್ತೆಲ್ಲ ಕಡೆ ರಾಶಿ ರಾಶಿ ಸಾಮಾನು.
ಸಂಜೆಗೆ ತಂಗಲೊಂದು ಮನೆ,
ರುಚಿಗೆ ತಕ್ಕ ಊಟ, ಮಲಗಲೊಂದಷ್ಟು ಜಾಗ…
ಮೂಲಭೂತ ಬೇಕುಗಳಲ್ಲೇ ಸಂತೃಪ್ತ.
ಸರ್ವೇಜನಾ ಸುಖಿನೋಭವಂತು!
ಬುದ್ಧನ ಅಪರಾವತಾರ.
ಆಸೆ ಇಲ್ಲ, ಅಹಂಕಾರವಿಲ್ಲ, ಕಾಮ ಮೋಹಗಳಿಲ್ಲ,
ಈ ಇಲ್ಲಗಳ ಬಾಲಗೋಚಿ ಅಳೆದು ನೋಡಿದರೆ,
ಕಡೆಗೆ ಏನೂ ಇಲ್ಲ.
ಸ್ವಯಂಕೇಂದ್ರಿತ ಅಹುದುಗಳಿಗೆ ಅಹುದೆನ್ನವ
ಕೂಪಮಂಡೂಕ.
ಬಟ್ಟೆ, ಪಾತ್ರೆ, ಅಡಿಗೆ…
ನಾವು ಮಾಡುವುದು ನಿತ್ಯಕರ್ಮ!
ಹುಣ್ಣಿಮೆಗೋ ಅಮಾವಾಸ್ಯೆಗೋ
ತಮ್ಮ ನಾಲಿಗೆ ರುಚಿಗೆ ತಾವು ಬೇಯಿಸಿಕೊಂಡದ್ದು
ನಮಗೆ ಮಾಡಿದ ಉಪಕಾರ?
ತಿಳಿದೇ ಇರಲಿಲ್ಲ ಇಂಥದ್ದನ್ನೆಲ್ಲಾ ಗಮನದಲ್ಲಿಡಬೇಕೆಂದು.
ಅವರು ಹೀಗಿರುವುದು ನಮ್ಮ ಅದೃಷ್ಟ,
ಹೀಗಿರದೇ “ಹಾಗೆ”-
`ಎಲ್ಲರ ಹಾಗೆ’ ಇದಿದ್ದರೆ, ಆಗ ತಿಳಿಯುತ್ತಿತ್ತು !!
ಛೆ!
ಎಷ್ಟು ದುರಹಂಕಾರ ನಮಗೆ!!
*****