ಮಿನು ಎದ್ದು ಹೊರ ಬಂದರೆ ಹಾಲ್‌ನಲ್ಲಿ ಅಮ್ಮ ಹನಿ ತುಂಬಿದ ಕಣ್ಣುಗಳಿಂದ ಕಿಟಕಿಯಾಚೆ ನೋಡುತ್ತ ಕಳಾಹೀನಳಾಗಿ ಕುಳಿತದ್ದು ಕಾಣಿಸಿತು. ಬೆಳಿಗ್ಗೆ ಬೆಳಿಗ್ಗೆ ಇಂಥ ದೃಶ್ಯ ನೋಡುವುದೆಂದರೆ ಮಿನುಗೆ ಅಸಹನೆ. ನೋಡಿದರೂ ನೋಡದಂತೆ ಮುಖ ತೊಳೆಯಲು ನಡೆದಳು. ಅವಳು ಮುಖ ತೊಳೆದು ಬಂದು ಟೀ ಮಾಡಿಕೊಳ್ಳುವಾಗ ಅಲ್ಲಿದ್ದ ಕಪ್ ನೋಡಿ ಅಮ್ಮ ಆಗಲೇ ಮಾಡಿಕೊಂಡು ಕುಡಿದಿದ್ದಾಳೆ ಎಂದುಕೊಂಡಳು. ಇನ್ನೊಮ್ಮೆ ಕೇಳುವ ಗೋಜಿಗೂ ಹೋಗದೇ ಕಪ್ ಹಿಡಿದು ಹಾಲ್‌ಗೆ ಬಂದು ಟೀ ಹೀರುವಾಗಲೂ ಅಮ್ಮ ಮಿಸುಕಾಡದೆ ಹಾಗೆಯೇ ಕುಳಿತದ್ದು ಗಮನಿಸಿ ಯಾಕೋ ಮನದ ಮೂಲೆಯಲ್ಲಿ ಮರುಕ ಒಸರ ತೊಡಗಿತು. ಕಪ್ ಕೈಯಲ್ಲಿ ಹಿಡಿದೇ ಹತ್ತಿರ ಹೋದಳು.
ಮಮಾ… ಮಮಾ…
ಪಟಪಟನೆ ಕಣ್ಣು ರೆಪ್ಪೆಗಳನ್ನು ಬಡಿಯುತ್ತ ಕಣ್ಣಂಚಿನಲ್ಲಿ ಇದ್ದ ಹನಿಗಳನ್ನು ಅಡಗಿಸಲು ಪ್ರಯತ್ನಿಸುತ್ತ ತನ್ನತ್ತ ತಿರುಗಿದ ಅಮ್ಮನನ್ನು ನೋಡಿದಾಗ ಮಾತ್ರ ಮಿನು ಪೂರ್ಣ ಕರಗಿದಳು. ಛೇ… ತಾನ್ಯಾಕೆ ಇಷ್ಟು ಒರಟಾಗ್ತಿದ್ದೇನೆ….
ಮಮಾ ನೀಡ್ಸ್ ಯು… ನಿಂಗ್ಯಾಕೆ ಅರ್ಥವಾಗಲ್ಲ ಮಿನು… ಸ್ವಲ್ಪ ಸಮಯ ಅವಳ ಜತೆ ಕಳೆದ್ರೆ ನಿನ್ನ ಕೆರಿಯರ್ ಮುಳುಗಿಹೋಗಲ್ಲ ಎರಡು ದಿನದ ಹಿಂದೆ ಊರಿಗೆ ಹೋಗುವ ಮುಂಚೆ ಗಿರಿ ಹೇಳಿದ್ದು ನಿಜ.
ಮಮಾ… ಪ್ಲೀಸ್… ಈಗ.. ಬೆಳಿಗ್ಗೆ ಬೆಳಿಗ್ಗೆ ಅಳೋವಂಥದ್ದು ಏನಾಗಿದೆ…
ಎಷ್ಟೇ ಮೆತ್ತಗೆ ಹೇಳಬೇಕೆಂದರೂ ಬೆಳಿಗ್ಗೆ ಬೆಳಿಗ್ಗೆ ಎನ್ನುವಾಗ ಮಿನುವಿಗೆ ಅರಿವಾಗದಂತೆಯೇ ತುಸು ಅಸಹನೆ ಇಣುಕಿತು.
ಮಿನು.. ನಿಂಗೆ ಗೆಜ್ಜೆ ಸದ್ದು ಕೇಳ್ತಾ ಇದೆಯಾ… ಆ ಪಕ್ಕದ ಅಪಾರ್ಟ್‌ಮೆಂಟ್‌ನಿಂದ… ಅದೇ ಆ ಚಿಕ್ಕ ಹುಡುಗಿ ಬಹುಶಃ ಡಾನ್ಸ್ ಮಾಡ್ತಿದಾಳೆ.. ನಾನು ಬಾಲ್ಕನಿಯಲ್ಲಿ ಮರೇಲಿ ನಿಂತು ನೋಡಿದೆ. ಅವಳಪ್ಪ ಕಾಲಿಗೆ ಗೆಜ್ಜೆ ಕಟ್ತಾ ಇದ್ದ… ಮಿನು… ದಾದಾ ಕೂಡ ನಂಗೆ ಹಾಗೇ ಕಟ್ತಾ ಇದ್ರು ಮಿನು… ಮುಂದೆ ಮಾತಾಡಲಾಗದ ಅಮ್ಮ ಮುಖ ಮುಚ್ಚಿಕೊಂಡಳು.
ಮಿನುವಿಗೆ ತಟ್ಟನೆ ಎಲ್ಲ ಅರ್ಥವಾಯಿತು.
ಮಮಾ… ಅದೆಲ್ಲ ಮುಗಿದುಹೋಗಿದ್ದಲ್ಲವಾ… ಈಗ್ಯಾಕೆ ಅದರ ನೆನಪು… ಊಂ… ಕಮಾನ್ ಮಮಾ… ಬೇಕಿದ್ರೆ ನಾನು ಈಗ ನಿನ್ನ ಕಾಲಿಗೆ ಗೆಜ್ಜೆ ಕಟ್ತೀನಿ, ನೀನು ಡಾನ್ಸ್ ಮಾಡು…
ಮಿನು ಅಮ್ಮನನ್ನು ಸಮಾಧಾನಿಸುವಂತೆ, ಪುಸಲಾಯಿಸುವಂತೆ ಹತ್ತಿರ ಕುಳಿತು ಭುಜದ ಸುತ್ತ ಕೈ ಹಾಕಿದಳು.
ಘಟನೆಗಳಿಗೆ ಅಂತ್ಯ ಇರುತ್ತೆ ಮಿನು… ಮುಗ್ದು ಹೋಗಿರುತ್ತೆ…. ಆದ್ರೆ ಅದು ಒಳಗೊಂದು ಹುಣ್ಣು ಮಾಡಿ ಹೋಗುತ್ತಲ್ಲ ಅದು ಕೆಲವೊಮ್ಮೆ ಮಾಯೋದೆ ಇಲ್ಲ.. ಯಾವತ್ತೂ ಹಸಿಯಾಗಿ ಉಳಿದುಬಿಡುತ್ತೆ.. ದಿನದಿನಕ್ಕೆ ಆ ಹುಣ್ಣು ಮತ್ತಷ್ಟು ಒಳಕ್ಕೆ ಸರೀತಾ ಒಳಗೆ ಮತ್ತಷ್ಟು ನೋವು ಕೊಡುತ್ತ… ಹೊರಗೆ ಮಾತ್ರ ಏನೂ ಇಲ್ಲದ ಖಾಲಿ ಸಿಪ್ಪೆಯಂತೆ… ಅಮ್ಮ ಗೊಣಗಿದಳು.
’ಏಳು ಘಂಟೆಯಾಗ್ತಿದೆ…. ಬೇಗ ಹೊರಡದಿದ್ರೆ ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡು ಮತ್ತಷ್ಟು ತಡವಾಗುತ್ತೆ… ಹತ್ತಕ್ಕೆ ಸರಿಯಾಗಿ ಮೀಟಿಂಗ್ ಇದೆ, ತಲೆ ಸ್ನಾನ ಬೇರೆ ಮಾಡಬೇಕು, ಈ ಅಮ್ಮ ಇನ್ನು ತನ್ನ ಹಳೆಯ ಪುರಾಣ ಬಿಚ್ಚಿದರೆ ನನ್ನ ತಲೆಯೂ ಕೆಡುವುದು ಗ್ಯಾರಂಟಿ..’ ಮಿನುವಿನ ಮನಸ್ಸಿನಲ್ಲಿಯೇ ಲೆಕ್ಕಾಚಾರ.
ಓಕೆ ಮಮಾ… ನಿಂಗೆ ಹಳೆಯ ನೆನಪಿಂದ ಯಾತನೆಯಾಗುತ್ತೆ.. ಒಪ್ಪಿಕೊಳ್ತೀನಿ. ಆದ್ರೆ ಎಷ್ಟು ದಿನ ಅಂತ ನೀನು ಹೀಗೇ ಯಾತನೆ ಪಡ್ತಾ ಇರ್‍ತೀಯ ಮಮಾ… ಹೆಚ್ಚು ಕಡಿಮೆ ಇಪ್ಪತ್ತು ವರ್ಷದಿಂದ ಅದೇ ಯಾತನೆಯನ್ನು ನೆನಪು ಮಾಡಿಕೊಳ್ತಾನೆ ಇದೀಯ… ಇನ್ನೂ ಎಷ್ಟು ವರ್ಷ ಅದೇ ನೆನಪು ಮಾಡಿಕೊಳ್ತೀಯ… ನಂಗೆಲ್ಲ ಅರ್ಥ ಆಗತ್ತೆ ಮಮಾ……
ಮಿನುವಿನ ಕಣ್ಣಂಚಿನಲ್ಲಿ ದೊಡ್ಡವಳಾದ ನಂತರ ಒಂದೊಂದಾಗಿ ನಿಧಾನ ಅರ್ಥೈಸಿಕೊಂಡ ಚಿತ್ರಗಳ ಸರಪಳಿ….
ದಾದಾ ಮಮಾಗೆ ತುಂಬ ಪ್ರೀತಿಯಿಂದ ಡಾನ್ಸ್ ಕಲಿಸಿದ್ದರು, ಮಮಾನ ಕಂಠವೂ ಚೆನ್ನಾಗಿತ್ತು, ದಾದ ತಾವು ಸಾಯೋ ಮುಂದೆ ಅವಸರದಲ್ಲಿ ಮದುವೆ ಮಾಡಿದ್ರಲ್ಲ ಅದೇ ತಪ್ಪಾಯಿತೇನೋ… ಆಮೇಲೆ ಕೂಡು ಕುಟುಂಬದಲ್ಲಿ ಮಮಾಗೆ ಕುಣಿಯೋಳು ಅಂತ ಹಂಗಿಸ್ತಾ ಇದ್ರು, ಪಪಾ ಕೂಡ ಡಾನ್ಸ್ ಮಾಡೋದು ಬೇಡ ಅಂದ್ರು, ತನ್ನ ಉಸಿರಾಗಿದ್ದ ಗೆಜ್ಜೆಯನ್ನ ಅಖಂಡ ಹತ್ತು ವರ್ಷಗಳ ಕಾಲ ಮಮಾ ಕಾಲಿಗೆ ಕಟ್ಟಿಕೊಳ್ಳಲೇ ಇಲ್ಲ, ಅದರ ನಡುವೆ ತಾವಿಬ್ಬರು ಹುಟ್ಟಿದ್ದು, ಮಮಾಗೆ ಆಗ ದುಃಖ ಹಂಚಿಕೊಳ್ಳಲು ಯಾರೂ ಇರಲಿಲ್ಲ, ಆಮೇಲೆ ಪಪಾಗೆ ಬಾಂಬೆಗೆ ವರ್ಗವಾಗಿ ಹೋದ ಮೇಲೆ ಅವನ ಇಷ್ಟವನ್ನೂ ಮೀರಿ ಮಮಾ ಡಾನ್ಸ್ ಮಾಡತೊಡಗಿದಳು, ಮತ್ತೆ ಮಮಾನ ಎದೆ ಬಡಿತ ಗೆಜ್ಜೆ ಸದ್ದಿನೊಂದಿಗೆ ಮಿಳಿತವಾಗಿತ್ತು… ಮಮಾನ ಸಂಘರ್ಷ, ಯಾತನೆ, ಒಂಟಿತನದ ಗಳಿಗೆಗಳು…. ಆದರೆ ನೆನಪುಗಳು ಇಷ್ಟೇ ಮಾತ್ರವಲ್ಲ… ಇದರೊಂದಿಗೆ ತಳಕು ಹಾಕಿಕೊಂಡಿರುವ ತನ್ನ ಮತ್ತು ಪುಟ್ಟ ತಮ್ಮ ಪರಾಶರನ ಭಾವನೆಗಳು ಕೂಡ… ತಮ್ಮಿಬ್ಬರದೇನು ತಪ್ಪಿತ್ತು… ಎಲ್ಲ ಹೊತ್ತಿಗೂ ವ್ಯಗ್ರತೆ, ಅಸಹನೆ ಹುಟ್ಟಿಸುತ್ತ ಉಳಿದೇ ಬಿಟ್ಟ ಯಾತನೆಯಾಗಿತ್ತು ಅದು. ಅರ್ಥೈಸಿಕೊಂಡಿದ್ದೇನೆ, ಜತೆಗಿದ್ದೇನೆ ಮಮಾ ಎಂದು ಹೇಳುವ ಮಾತು ಮಿನುವನ್ನು ಮತ್ತೆಲ್ಲಿಗೋ ನಿಲ್ಲಿಸಿಬಿಡುತ್ತಿತ್ತು.
ನೀವಿಬ್ಬರೂ ಒಂದೇ ಮನೆಯಲ್ಲಿದ್ದರೂ ತಿಂಗಳುಗಟ್ಟಲೆ ಒಬ್ಬರಿಗೊಬ್ಬರು ಪ್ರೀತಿಯಿಂದ ಮಾತಾಡ್ತಿರಲಿಲ್ಲ, ನಿಮ್ಮಿಬ್ಬರ ನಡುವೆ ಏನೆಲ್ಲ ಕಂದಕ ಸೃಷ್ಟಿಸುವಲ್ಲಿ ನಿನಗಿಂತ ಪಪಾ ಹನ್ನೆರಡು ವರ್ಷ ದೊಡ್ಡವನಾಗಿದ್ದದ್ದೂ ಕಾರಣವಿರಬೇಕು ಅಲ್ವಾ ಮಮಾ, ನಿನ್ನ ಆಸೆ, ಆಕಾಂಕ್ಷೆ, ಕಾಮನೆಗಳು ಯಾವುದಕ್ಕೂ ಆತ ಸಾಥ್ ಆಗಲಿಲ್ಲ, ಆತ ಕನಸು ಕಂಡ ಸಂಪ್ರದಾಯಸ್ಥ ಹೆಂಡತಿಯ ಪಾತ್ರಕ್ಕೂ ನೀನು ಸರಿಹೊಂದಲಿಲ್ಲ, ಆದರೆ ಮಮಾ… ಇದೆಲ್ಲದರ ಬಲಿಪಶು ನೀವು ನನ್ನನ್ನ ಪರಾಶರನನ್ನು ಮಾಡಿಬಿಟ್ರಿ… ನಮಗಿಬ್ಬರಿಗೂ ಎಷ್ಟು ಹೊಡೆತ, ಬೈಗುಳ… ಒಂದು ದಿನವೂ ನಾವು ನಿಮ್ಮಿಬ್ಬರೊಂದಿಗೆ ತಿರುಗಾಡಲಿಲ್ಲ… ಉಳಿದ ಗೆಳೆಯ, ಗೆಳತಿಯರು ಅಪ್ಪ ಅಮ್ಮಂದಿರೊಂದಿಗೆ ಖುಷಿಯಾಗಿ ಇದ್ರೆ ನಾವಿಬ್ರೂ ಪ್ರತಿ ರಾತ್ರಿ ನಿಮ್ಮಿಬ್ಬರ ಯುದ್ಧ ಯಾವಾಗ ಶುರುವಾಗುತ್ತೋ ಅಂತ ಒಂಥರ ಭಯದಿಂದ ಎದಿರು ನೋಡುವಂತೆ ಆಗಿತ್ತಲ್ಲ ಮಮಾ… ನಾವಿಬ್ರು ಏನೋ ಒಂದು ವಸ್ತು ಅನ್ನೋ ಹಾಗೆ ನಮ್ಮಿಬ್ಬರ ಮೇಲೆ ಹಕ್ಕು ಸಾಧಿಸಲು ಇಬ್ರೂ ಎಷ್ಟು ಪ್ರಯತ್ನ ಪಡ್ತಾ ಇದ್ರಲ್ಲ ಮಮಾ… ನಂಗೂ ಅದೆಲ್ಲ ಇನ್ನೂ ಮಾಯದ ಹುಣ್ಣಿನ ಥರ ಉಳ್ಕೊಂಬಿಟ್ಟಿದೆ ಮಮಾ…ಹೇಳ ಹೇಳುತ್ತ ಮಿನು ಜೋರಾಗಿಯೇ ಅಳ ತೊಡಗಿದಳು.
ಪಕ್ಕದ ಅಪಾರ್ಟ್‌ಮೆಂಟ್‌ನಿಂದ ಕೇಳಿದ ಪುಟ್ಟ ಹುಡುಗಿಯ ಗೆಜ್ಜೆಯ ನಾದ ಇಂಥದೊಂದು ಸದ್ದನ್ನು ಹುಟ್ಟುಹಾಕುತ್ತೆ ಎಂಬುದನ್ನು ನಿರೀಕ್ಷಿಸದ ಅಮ್ಮ ತಬ್ಬಿಬ್ಬಾಗಿ ಕುಳಿತುಬಿಟ್ಟಳು. ಈ ಸದ್ದು ಮಗಳೊಳಗೆ ಎಷ್ಟೆಲ್ಲ ವರ್ಷಗಳಿಂದ ಇದೆ?
ಅರೆಕ್ಷಣದ ಬಳಿಕ ಸಾವರಿಸಿಕೊಂಡಿದ್ದು ಮಿನುವೇ.
ಮಮಾ… ಅರ್ಥ ಮಾಡ್ಕೋ ಮಮಾ… ನೀನು ನಿಂಗಾಗಿ ಬದುಕಬೇಕು…. ಬೇರೆಯವರಿಗಾಗಿ ಅಲ್ಲ, ಹಾಗೇ ಬೇರೆಯವರೂ ನಿಂಗಾಗಿ ಬದುಕಲ್ಲ ಮಮಾ… ಟ್ರೈ ಟು ಕಂಟ್ರೋಲ್ ಯುವರ್ ಫೀಲಿಂಗ್ಸ್ ಮಮಾ… ಆರಾಮಾಗಿರು ಮಿನು ಮತ್ತೆ ಅಮ್ಮನನ್ನು ಬಳಸಿದಳು. ಮಾತಾಡದ ಅಮ್ಮ ಆಗಲಿ ಎಂಬಂತೆ ತಲೆಯಲ್ಲಾಡಿಸಿದಳು.
’ನೀನೀಗ ವಾಪಾಸು ನಂಗೇನು ಬೈಯಬೇಕು ಹೇಳು…’ ಮಿನು ಕಣ್ಣೊರೆಸಿಕೊಳ್ಳುತ್ತ ನಗಲು ಯತ್ನಿಸಿದಳು.
ಏನು ಎಂಬಂತೆ ಅಮ್ಮ ನೋಡಿದಳು.
ಅರೆ ಪಾಗಲ್.. ನೀನೂ ಅದನ್ನೆಲ್ಲ ಎಷ್ಟು ವರ್ಷ ಅಂತ ನೆನಪಿಸಿಕೊಳ್ತಾ ಯಾತನೆ ಪಡ್ತೀಯ… ನಂಗೇನೋ ಊರು ಹೋಗು ಅಂತಿದೆ ಕಾಡು ಬಾ ಅಂತಿದೆ… ನೀನು ಬಾಳಿ ಬದುಕಬೇಕಾದವಳು ಮಗಳೇ.. ಅದೆಲ್ಲ ಮರೆತು ಹೊಸ ಗೆಜ್ಜೆಯೊಂದಿಗೆ ಹೆಜ್ಜೆ ಹಾಕು ಮಗಳೇ ಅಂತೆಲ್ಲ ಹಳೇ ಸಿನಿಮಾದಲ್ಲಿ ಬರುತ್ತಲ್ಲ ಹಾಗೆ ಹೇಳಬೇಕು… ಅಮ್ಮನ ಕಣ್ಣಲ್ಲಿ ಮೆಲ್ಲಗೆ ನಗು ಬೆಳಗುತ್ತ… ಹೇಳಿದ ಮಿನುವಿನ ಒದ್ದೆ ಕಂಗಳಲ್ಲಿ ನಗು ಪ್ರತಿಫಲಿಸುತ್ತ…..
ಅರೆ ಮಮಾ… ನಾನೇನೆಂದೆ… ಹೊಸ ಗೆಜ್ಜೆ… ಮರೆತೇ ಬಿಟ್ಟಿದ್ದೆ ಮಮಾ… ಅದು ಹಾಗೇ ಇದೆ ಮಮಾ… ತಂದಿಟ್ಟವಳು ಆಮೇಲೆ ಎಲ್ಲೂ ಕಾರ್ಯಕ್ರಮ ಕೊಡಲೇ ಇಲ್ಲ… ಎರಡು ವರ್ಷ ಆಯ್ತು…. ಈಗ ಪ್ರಾಕ್ಟೀಸ್ ಸಹಿತ ಮಾಡದೆ ಎಷ್ಟು ದಿನವಾಯ್ತು…
ಮಿನು ಒಂದಕ್ಕೊಂದು ಸಂಬಂಧವಿರದ ವಾಕ್ಯಗಳನ್ನು ಬಡಬಡಿಸಿದವಳು ಓಡು ನಡಿಗೆಯಲ್ಲಿ ಒಳಗೆದ್ದು ಹೋದಳು. ಅವಳಲ್ಲಿ ಇನ್ನೂ ಹುಡುಗತನದ ಛಾಯೆ ಲಾಸ್ಯವಾಡುವುದನ್ನು ಅಮ್ಮ ಅಚ್ಚರಿಯಿಂದ ದಿಟ್ಟಿಸುವಾಗ ಮಿನು ಎರಡು ಗೆಜ್ಜೆ ಪಟ್ಟಿಯನ್ನು ಹಿಡಿದು ಬಂದಳು.
ಮಮಾ ಪ್ಲೀಸ್.. ಮಮಾ… ಲೆಟ್ ಅಸ್ ಡಾನ್ಸ್.. ಕಮಾನ್.. ಮಮಾ..ಮಿನು ಒಂದು ಪಟ್ಟಿಯನ್ನು ಅಮ್ಮನಿಗೆ ಕಟ್ಟಿ ಇನ್ನೊಂದನ್ನು ತಾನು ಕಟ್ಟಿಕೊಂಡಳು.
ಮಮಾ… ನೆನಪಿದ್ಯಾ ನಿಂಗೆ… ನಾನು ಚಿಕ್ಕವಳಿದ್ದಾಗ ಸ್ಕೂಲ್‌ನಲ್ಲಿ ಗ್ರೂಪ್‌ಡಾನ್ಸ್‌ನಲ್ಲಿ ಸೇರಲೂ ಪಪಾ ಬಿಡ್ತಿರಲಿಲ್ಲ, ನೀನೂ ಯಾಕೋ ಮೌನವಾಗಿಬಿಟ್ಟೆ… ಇಲ್ಲಿಗೆ ಓದಲು ಬಂದಿದ್ದೇ ಮನಸ್ಸು ತಡೆಯದೇ ಡಾನ್ಸ್ ಕ್ಲಾಸ್‌ಗೆ ಸೇರ್‍ಕೊಂಡಿದ್ದು ಒಳ್ಳೆಯದಾಯ್ತು ಅಲ್ವಾ ಮಮಾ….. ಎಲ್ಲೋ ಒಳಗೆ ನಿನ್ನ ರಕ್ತ ಹರೀತಾ ಇತ್ತು ಕಾಣುತ್ತೆ… ತುಂಬ ಬೇಗ ಕಲಿತೆ… ಮಿನು ಹೇಳುತ್ತಲೇ ಆಫೀಸ್, ಟ್ರಾಫಿಕ್, ಮೀಟಿಂಗ್, ಮನಸ್ತಾಪ, ಅಸಹನೆ ಎಲ್ಲ ಮರೆತಂತೆ ಟೇಪ್ ರೆಕಾರ್ಡ್‌ರಲ್ಲಿ ಯಾವುದೋ ಕೆಸೆಟ್ ತುರುಕಿದಳು.
ಇದೀಗ ಅಮ್ಮನಿಗೂ ತುಸು ಹುರುಪು. ಇಬ್ಬರಿಗೂ ಪ್ರಾಕ್ಟೀಸ್ ಇಲ್ಲದೆ ಎಷ್ಟೋ ದಿನಗಳಾಗಿದ್ದರೂ ಹೆಜ್ಜೆ ತಪ್ಪದ ಪಾದಗಳು… ತಾವೇ ತಾವಾಗಿ ನರ್ತಿಸುವ ಪಾದಗಳು… ಮುದ್ರಾ ಹಸ್ತ… ಕಣ್ಣೋಟ…ಭಾವ ಭಂಗಿ… ಯಾವುದೂ ಮರೆತಿಲ್ಲ, ಮರೆಯುವುದಿಲ್ಲ, ಇದು ಸಹಜ ನಡೆಯೆಂಬಂತೆ. ಕೆಲ ನಿಮಿಷಗಳ ನಂತರ ಮೊದಲು ಕುಸಿದು ಕುಳಿತದ್ದು ಮಂಡಿನೋವಿನ ಅಮ್ಮನೇ. ಮಿನು ಇನ್ನೂ ನರ್ತಿಸುತ್ತಿದ್ದಳು… ಅಮ್ಮ ಏದುಸಿರು ಬಿಡುತ್ತಲೇ ತಾಳ ಹಾಕತೊಡಗಿದಳು. ಮಿನು ಹೆಜ್ಜೆ ನಿಂತಿದ್ದು ಕಡೆಯ ತಿಲ್ಲಾನದೊಂದಿಗೆ.
ನೆಲದ ಮೇಲೆ ಕುಳಿತ ಮಿನುವಿನ ಮುಖ ಕುತ್ತಿಗೆಯ ಮೇಲಿನ ಬೆವರನ್ನು ಅಮ್ಮ ಸೆರಗಿನಿಂದ ಒರೆಸ ಹೋದಳು.
’ಬೇಡಾ…. ಬೇಡ ಮಮಾ’ ಕೊಸರಿಕೊಂಡು ಎದ್ದವಳು ಸೋಫಾ ಮೇಲೆ ಕುಸಿದಳು. ಎಷ್ಟು ಚೆನ್ನಾಗಿ ಮಾಡ್ತೀಯ ರಾಣಿ ಅಮ್ಮ ಅಕ್ಕರೆ ಹತ್ತಿಕ್ಕಿಕೊಳ್ಳಲಾಗದೆ ಮೆತ್ತಗೆ ಉಸುರಿ, ಮಗಳನ್ನು ಬಳಸಿ ಹಿಡಿದುಕೊಳ್ಳಲು ನೋಡಿದಳು. ಮಮಾ.. ಪ್ಲೀಸ್ ಮಮಾ…. ಮಾತಾಡಿಸ್ಬೇಡ…. ನಂಗೊಬ್ಬಳಿಗೇ ಬಿಡು.. ಮಿನು ತನ್ನ ಮಂಡಿಯಲ್ಲಿ ಮುಖ ತೂರಿಸಿದಳು.
ನನ್ನೊಳಗೆ ಒಂದು ಜ್ವಾಲಾಮುಖಿ ಇದೆ, ಸುಡ್ತಾ ಇದೆ ನನ್ನನ್ನ…
ಅಮ್ಮ ಈಗ ಪೂರ್ಣ ಕಕ್ಕಾಬಿಕ್ಕಿ.
ಮಿನು… ನೀನು ಗಿರಿಯನ್ನು ತುಂಬ ಪ್ರೀತಿಸ್ತೀಯ ಅಲ್ವಾ… ನೀವಿಬ್ರೂ… ಅಮ್ಮನಿಗೆ ಮುಂದೇನು ಹೇಳಬೇಕು.. ತುಂಬ ಪ್ರೀತಿಸ್ತಾ ಇದೀರ ಎನ್ನಬೇಕೋ, ತುಂಬ ಅರ್ಥಮಾಡಿಕೊಂಡೇ ಮದುವೆಯಾಗಿದ್ದೀರ ಅಲ್ಲವಾ ಎನ್ನಬೇಕೋ ತಿಳಿಯದೇ ಅರ್ಧಕ್ಕೆ ನಿಲ್ಲಿಸಿದಳು.
ಮಮಾ… ನಾನು ಅವನನ್ನ ಪ್ರೀತಿಸ್ತೀನಿ, ಅವನಿಗೆ ನನ್ನ ಬಿಟ್ರೆ ಮತ್ಯಾರು ಹತ್ತಿರದ ಸ್ನೇಹಿತೆಯರಿಲ್ಲ, ಪ್ರತಿಯೊಂದನ್ನೂ ನನ್ನ ಹತ್ತಿರ ಹೇಳಿಕೊಳ್ತಾನೆ, ಪ್ರತಿಕ್ಷಣ ನಾನು ಅವನ ಮಾತುಗಳನ್ನ, ಭಾವನೆಗಳನ್ನು ಆಲಿಸ್ತೀನಿ, ಆದ್ರೆ.. ನಂಗೆ ನನ್ನನ್ನು ಪ್ರೀತಿಸೋರು ಬೇಕು, ಗಿರಿಗೆ ಬರೀ ನನ್ನಿಂದ ಪಡೆಯೋದೆ ಗೊತ್ತು… ಕಾಳಜಿ ಪಡೆಯೋದು ಗೊತ್ತು.. ಪ್ರೀತಿ ಮಾಡಿಸಿಕೊಳ್ಳೊದು ಗೊತ್ತು… ನಂಗೆ ವಾಪಾಸು ಪೂರ್ಣ ಖಾಲಿಯಾದ ಹಾಗೆ ಅನ್ನಿಸ್ತಾ ಇದೆ… ಓಹ್ ಮಮಾ ನೀನು ಹಳೇ ಕಾಲದವ್ಳು… ನಿಂಗಿದೆಲ್ಲ ತಿಳಿಯಲ್ಲ…
ಯಾವಾಗಿನಂತೆ ಅವಳಿಂದ ಈಗಲೂ ಹಳೇ ಕಾಲದವಳು ಎನ್ನಿಸಿಕೊಂಡ ಅಮ್ಮನಿಗೆ ಏನು ಮಾತಾಡಬೇಕೆಂದು ತೋಚದೆ ಪೆಚ್ಚಾಗಿ ನಿಂತಳು.
ನಿಧಾನವಾಗಿ ಗೆಜ್ಜೆ ಬಿಚ್ಚಿಟ್ಟ ಮಿನು ಸ್ನಾನಕ್ಕೆ ನಡೆದಳು.
ಮತ್ತೆ ಲೋಕಾಭಿರಾಮದ ಮಾತಿನ ಹೊರತಾಗಿ ಇಬ್ಬರೂ ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಲೂ ಇಲ್ಲ.
ಎಂದಿನಂತೆ ಆ ಸಿಗ್ನಲ್ ಬಳಿ ಬರುವಾಗಲೇ ಪರಾಶರನ ನೆನಪು.
’ನಂಗೆ ಮನೆಯಲ್ಲಿರಕ್ಕಾಗಲ್ಲ, ಓಡಿ ಹೋಗ್ತೀನಿ’ ಎಂದವನು ಹಾಗೇ ಮಾಡಿಬಿಟ್ಟಿದ್ದನಲ್ಲ ಒಮ್ಮೆ, ಅವನಿಗಾಗ ಎಷ್ಟು ಹೆಚ್ಚೆಂದ್ರೆ ಹತ್ತು ಹನ್ನೊಂದು ವರ್ಷ… ತಾನು ಏ ಹೋಗ್ಬೇಡ ಕಣೋ ಎನ್ನುತ್ತಿದ್ದದ್ದು, ತಾವಿಬ್ಬರೂ ಏನು ಮಾಡ್ತಿದ್ದೇವೆ ಎಂಬುದನ್ನು ಗಮನಿಸಲೂ ಸಮಯವಿಲ್ಲದಂತಿದ್ದ ಪಪಾ, ಮಮಾ, ಆ ದೊಡ್ಡ ಮನೆಯ ವಿಶಾಲವಾದ ಹಜಾರಗಳು, ಅಲ್ಲಿಯ ಕತ್ತಲೆ ಬೆಳಕಿನ ವಿನ್ಯಾಸಗಳು, ರಾತ್ರಿ ಪಪಾ ಕುಡೀತಾ ಕುಳಿತರೆ ಮಮಾ ಎಷ್ಟೋ ಹೊತ್ತಿನ ಮನೆ ಸೇರುತ್ತಿದ್ದದ್ದು, ಸುಶ್ರಾವ್ಯವಾಗಿ ಹಾಡುತ್ತಿದ್ದ ಮಮಾ ಮನೆಯಲ್ಲಿ ಕೂಡ ಆಗೀಗ ರಾತ್ರಿ, ಹಗಲು ನೋಡದೆ ಹಾಡಿನಲ್ಲಿ ಮಗ್ನಳಾಗುತ್ತಿದ್ದದ್ದು… ಎಲ್ಲ ನೆನಪಾಗುತ್ತೆ. ಇದನ್ನೆಲ್ಲ ಒಮ್ಮೆ ಗಿರಿಗೆ ಹೇಳಿ ಹಗುರಾಗಬೇಕೆಂದುಕೊಳ್ಳುವುದೇನೋ ಹೌದು. ಯಾಕೆ ಹೇಳಲಾಗುತ್ತಿಲ್ಲ.. ಅವನೆಲ್ಲ ತನ್ನದೆಲ್ಲ ತೋಡಿಕೊಂಡು ಹಗುರಾದ ಗಳಿಗೆಯಲ್ಲಿ, ತಾನು ಅದೆಲ್ಲ ಆಲಿಸುವ ಗಳಿಗೆಯಲ್ಲಿಯೂ ತನಗೆ ಹಾಗೆ ಭಾವಬೆತ್ತಲಾಗುವುದು ಸಾಧ್ಯವೇ ಆಗುತ್ತಿಲ್ಲ. ಅಥವ ಅವನು ಅದಕ್ಕೆ ಆಸ್ಪದ ಕೊಡುತ್ತಿಲ್ಲವೇ… ಮೊದಲಿಂದ ಕೆನ್ನೆ ಮೇಲಿಳಿಯುವ ಅವನ ಹಳಹಳಿಕೆಗಳನ್ನು ಒರೆಸುವುದೇ ಆಗುತ್ತಿದೆ…. ತನ್ನಷ್ಟೇ ವಯಸ್ಸಿನವನು, ಜತೆಗೇ ಕಲಿತವನು, ತನ್ನನ್ನು ಇನ್ನೊಂದು ಆತ್ಮದಂತೆ ಭಾವಿಸಿದವನು, ಮದುವೆಯ ಪ್ರಪೋಸಲ್ ಎದುರಿಟ್ಟಾಗ ಮಿನುಗೆ ಆಗ ನಿರಾಕರಿಸಲು ಕಾರಣಗಳೇ ಇರಲಿಲ್ಲ. ಹೆಸರಾಂತ ಜಾಹೀರಾತು ಕಂಪನಿಯಲ್ಲಿ ದೊಡ್ಡ ಕೆಲಸದಲ್ಲಿದ್ದಾನೆ, ಸಿತಾರ್ ಬಾರಿಸುತ್ತಾನೆ, ಚೆಸ್ ಆಡುತ್ತಾನೆ, ಎಂದೋ ಓದಿದ ಇಂಗ್ಲಿಶ್ ಕಾದಂಬರಿಗಳ, ಕವನದ ಸಾಲನ್ನು, ತನ್ನ ಮನೆಭಾಷೆ ತಮಿಳಿನ ಗಾದೆಗಳನ್ನು ಉದ್ದರಿಸಿ ಸೊಗಸಾಗಿ ಮಾತಾಡುತ್ತಾನೆ, ಅಷ್ಟೇ ಯಾಕೆ ಹಾಸಿಗೆಯಲ್ಲಿ ಕೂಡ ಹಿಂಡಿ ಹಿಪ್ಪಿ ಮಾಡಿ ಮತ್ತೇರಿಸುವಂತೆ ಮಾಡಿ, ಸುಖ ನೀಡುತ್ತಾನೆ… ತನಗೂ ಸೆಕ್ಸ್ ಇಷ್ಟವೇ.. ತಾನೇನೂ ಸನ್ಯಾಸಿನಿಯಾಗಲು ಹೊರಟವಳಲ್ಲ… ಯಾವಾಗಿದ್ದರೂ ಮದುವೆಯಾಗಲೇಬೇಕು… ಗಿರಿ ಒಳ್ಳೆಯ ಗೆಳೆಯ… ಯಾಕೆ ಇವನನ್ನೇ ಮದುವೆಯಾಗಬಾರದು…. ಹಾಗೆಲ್ಲ ಯೋಚಿಸಿ ಮದುವೆಯಾದದ್ದಾಗಿತ್ತು.
ಪಪಾ, ಮಮಾ ತನ್ನ ಮದುವೆಯಲ್ಲಿ ಮಾತ್ರ ಗಿರಿಯ ಮನೆಯವರಿಗೆ ತಮ್ಮ ಬಿರುಕು ಗೊತ್ತಾಗದಂತೆ ನಟಿಸಿದರು. ಗಿರಿಯನ್ನು ಮಮಾ ಕೂಡ ಇಷ್ಟಪಡಲಾರಂಭಿಸಿದ್ದಾಳೆ. ಎಲ್ಲ ಸರಿಯೇ… ಆದ್ರೆ ಈಗ್ಯಾಕೆ ತನಗೆ ಹೀಗೆ ತಣಿಯದ ಹುಡುಕಾಟವಿದ್ದಂತೆ ಭಾಸವಾಗುತ್ತಿದೆ… ಯಾವುದು ಭ್ರಮೆ… ತನಗೆ ಆ ಮಾರ್ಕ್ ಬಗ್ಗೆ ಹುಟ್ಟಿದ ಹುಚ್ಚು ವ್ಯಾಮೋಹಕ್ಕೆ ಇದು ತಾನು ಕೊಟ್ಟುಕೊಳ್ಳುತ್ತಿರುವ ನೆವವೇ ಅಥವ ಗಿರಿಯೊಂದಿಗೆ ಸುಖವಾಗಿರುವೆ ಎಂದುಕೊಳ್ಳುವುದು ಭ್ರಮೆಯೇ… ಮಾರ್ಕ್ ಕೂಡ ಮದುವೆಯಾದವನು, ಮಗು ಕೂಡ ಇದೆ, ತನಗೂ ಬೇಕೆಂದರೆ ಪ್ಲಾನಿಂಗ್ ಕೊಂಚ ಸಡಿಲಿಸಿದರೆ ಮುಂದಿನ ತಿಂಗಳೇ ಕನ್ಸೀವ್ ಆಗಬಹುದು, ಯಾರ ಮಗು ಬೇಕು ಗಿರೀದು… ಅಥವ ಮಾರ್ಕ್? ಓಹ್… ಇನ್ನೂ ಅಲ್ಲಿಯವರೆಗೆ ಹೋಗಿಲ್ಲ, ಹೋದರೆ…. ಹೊಕ್ಕಳಿನಾಳದಿಂದ ವಿಚಿತ್ರ ಕಂಪನ. ಗಿರಿ ತನಗೆ ಲಹರಿಯಿದ್ದ ರಾತ್ರಿಗಳಲ್ಲಿ ಸೊಂಟ, ಬೆನ್ನು, ತೊಡೆ, ಮೊಲೆ ಎಲ್ಲಡೆ ಕಚ್ಚಿ ಮದ್ದಿಡುವಾಗ, ತನ್ನಿಂದ ಅಷ್ಟೆಲ್ಲ ಸುಖ ಹೀರುವಾಗ ಯಾವ ಮಾರ್ಕ್‌ನ ನೆನಪೂ ಕಾಡುವುದಿಲ್ಲ. ಎಲ್ಲ ಮುಗಿದ ನಂತರವೂ ತನ್ನೆದೆ ಮೇಲೆ ತಲೆಯಿಟ್ಟು ಮಾತಾಡ್ತಾ ಮಾತಾಡ್ತಾ, ತಾನು ಆಲಿಸುತ್ತ ಅವನು ನಿಧಾನಕ್ಕೆ ನಿದ್ದೆಗೆ ಜಾರಿದ ನಂತರ ತನಗೇಕೆ ಹೀಗೆ ಖಾಲಿಯಾದಂತೆ, ಜತೆಗೆ ಅವನೊಂದಿಗೆ ತೋಡಿಕೊಳ್ಳಲಾರದೆ ಉಳಿದ ಭಾವದಿಂದಾಗಿ ತೀರಾ ಒಜ್ಜೆಯಾದಂತೆ ಎರಡೂ ಒಟ್ಟಿಗೇ ಅನ್ನಿಸುತ್ತೆ… ಗಿರಿ ಬೇಗ ಊರಿನಿಂದ ಬಂದರೆ ಸಾಕಪ್ಪ, ಗಿರಿಯ ಮೈಮನಸ್ಸಿನಲ್ಲಿ ಕರಗಿಹೋಗಬೇಕು ಎಂದು ಉತ್ಕಟವಾಗಿ ಅನ್ನಿಸುವ ಗಳಿಗೆಯಲ್ಲಿಯೂ ಮಾರ್ಕ್ ತನ್ನನ್ನು ಕೊಂಚ ಕಾಳಜಿಯಿಂದ ವಿಚಾರಿಸಿಕೊಂಡರೂ ಸಾಕು ತಾನು ಯಾಕೆ ಹಾಗೆ ಇನ್ನಿಲ್ಲದ ಹಾಗೆ ಕೊಚ್ಚಿಕೊಂಡು ಹೋಗುತ್ತೇನೆ… ತನಗಿಂತ ಅವನು ಸಾಕಷ್ಟು ದೊಡ್ಡವನಾಗಿದ್ದರಿಂದ ಪಪಾನಿಂದ ದೊರೆಯದ ಅಕ್ಕರೆ, ಪ್ರೀತಿ, ಕಾಳಜಿ ಆ ಕಾಂಪ್ಲೆಕ್ಸ್‌ನ್ನು ಪೂರೈಸಿಕೊಳ್ಳಲೆಂದೆ… ಆದರೆ ಅಷ್ಟೇ ಅಲ್ಲ… ಎಲ್ಲೋ ಮೂಲೆಯಲ್ಲಿ ಗಿರಿಗಿಂತ ಮಾರ್ಕ್‌ನನ್ನು ಸೆಕ್ಷುವಲಿ ಕೂಡ ಇಷ್ಟಪಡಲಾರಂಭಿಸಿದ್ದೇನೆಯೇ ಎಂಬ ಅನುಮಾನ ಕೂಡ. ಮಿನುಗೆ ಪ್ರತಿಬಾರಿ ಗಿರಿ ಊರಿಗೆ ಹೋದಾಗ ಇಂಥಹದೇ ತಳಮಳ. ಇಲ್ಲ ಈ ಸಲ ಗಿರಿ ಬಂದ ನಂತರ ಒಮ್ಮೆ ಎಲ್ಲ ಹೇಳಿಕೊಂಡು ಹಗುರಾಗಬೇಕು… ಬರೀ ಪ್ರೀತಿ ಪಡೆಯೋದಷ್ಟೆ ಅಲ್ಲ, ನನ್ನೊಳಗೆ ಒಂದಿಷ್ಟು ತುಂಬು, ನನ್ನನ್ನು ಚಿಕ್ಕ ಮಗುವಿನಂತೆ ಕಾಳಜಿ ಮಾಡಿ ಮುದ್ದು ಮಾಡು ಎನ್ನಬೇಕು ಎಂದುಕೊಳ್ಳುತ್ತಲೇ ಗಾಡಿ ಓಡಿಸಿದಳು.
ಮಧ್ಯಾಹ್ನ ಇನ್ನೇನು ಊಟಕ್ಕೆ ಕುಳಿತು ಕೊಳ್ಳಬೇಕು… ಮೊಬೈಲ್ ಸದ್ದು. ಆ ಕಡೆಯಿಂದ ಅಮ್ಮನ ಧ್ವನಿ-\\”ಮಿನು… ಪಿಂಕಿ ನನ್ನ ಉಂಗುರ ನುಂಗಿ ಬಿಟ್ತು…\\” – ಅಮ್ಮ ಹೇಳಿದ್ದನ್ನು ಅರಗಿಸಿಕೊಳ್ಳಲು ಮಿನುಗೆ ಒಂದೆರಡು ಸೆಕೆಂಡ್‌ಗಳೇ ಬೇಕಾಯ್ತು.
ಮಮಾ… ಏನು ಹೇಳ್ತಿದ್ದಿಯಾ… ಅದು ವಜ್ರದ ಹರಳಿಂದು ಅಂತ ಗೊತ್ತು ತಾನೆ.. ನಿಂಗೆ ಗೊತ್ತಿದೆ ಪಿಂಕಿ ಎಷ್ಟು ಹುಡುಗಾಟ ಮಾಡುತ್ತೆ ಅಂತ… ಬಾಲ್ ಥರ ಅದ್ರ ಜತೆ ಉಂಗುರ ತಗೊಂಡು ಆಡ್ತಿದ್ಯಾ…
ಮಿನುಗೆ ಕೋಪ ಏರ ತೊಡಗಿತು. ಆ ಕಡೆಯಿಂದ ಪುಟ್ಟ ಹುಡುಗಿಯ ಹಾಗೆ ಅಮ್ಮನ ಮುಗ್ಧ ನಗು.
ಮಿನು ಮಾತಾಡುತ್ತ ಆ ಮೂರನೇ ಮಹಡಿಯ ತುದಿಯ ಬಾಲ್ಕನಿಗೆ ಬಂದಿದ್ದರಿಂದ ಸಹೋದ್ಯೋಗಿಗಳಿಗೆ ಅವಳತ್ತ ಗಮನ ಇರಲಿಲ್ಲ.
ಹಾಂ.. ಮಿನು… ಸುಮ್ಮನೆ ಬೆರಳಿಂದ ತೆಗೆದು ಹಿಡ್ಕೊಂಡಿದ್ದೆ… ಪಿಂಕಿ ಬಾಲ ಅಲ್ಲಾಡಿಸ್ತಾ ಕಾಲಿನ ಹತ್ತಿರ ಕುಳಿತಿತ್ತು… ಎರಡು ಸಲ ಮೇಲೆ ಹಾರಿಸಿದೆ… ಹಿಡಿದು ಕೊಡ್ತು.. ಮೂರನೇ ಸಲ ಅದರ ಬಾಯೊಳಗೆ ಹೋಯ್ತು ಕಾಣುತ್ತೆ ನುಂಗಿಬಿಟ್ಟಿದೆ… ಅದು ಟಾಯ್ಲೆಟ್ ಮಾಡಿದಾಗ ಹೊರಗೆ ಬೀಳಬಹುದು ಬಿಡು… ಪಿಂಕಿಗೆ ಏನು ಗೊತ್ತಾಗುತ್ತೆ. ಪಾಪ.
ಮಮಾ.. ಅದಕ್ಕೆ ಗೊತ್ತಾಗಲ್ಲ, ಆದ್ರೆ ನಿಂಗೆ ಗೊತ್ತಾಗುತ್ತೆ ತಾನೆ… ಉಂಗುರ ಎಲ್ಲ ತಗೊಂಡು ಅದಕ್ಕೆ ಆಡಕ್ಕೆ ಕೊಡ್ತಾರಾ… ಅದರ ಗಂಟಲೊಳಗೆ ಸಿಕ್ಕೊಂಡಿಲ್ಲ ತಾನೆ… ಮಿನು ಸಣ್ಣಗೆ ಚೀರಿ ಮಾತಾಡಲು ಶುರುಮಾಡಿದಳು.
ನೋ ಬೇಟಾ… ಅದು ಆರಾಮಾಗಿಯೇ ಇದೆ.. ಇನ್ನು ಮೂರು ನಾಲ್ಕು ದಿನ ಅದು ಟಾಯ್ಲೆಟ್ ಮಾಡೋದನ್ನೇ ನಾವು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಲ್ಲ… ಅದೇ ಬೇಸರ… ಅಮ್ಮ ಪುಟ್ಟ ಹುಡುಗಿಯ ಕಾಲ್ಗೆಜ್ಜೆಯ ಸದ್ದಿನಿಂದ ಗಲಗಲನೆ ನಕ್ಕಷ್ಟೂ ಮಿನುಗೆ ಸಿಟ್ಟು ಏರತೊಡಗಿತು. ಅಮ್ಮನ ನಗು ಹಿಂದಿನ ಯಾವುದೋ ಯಾತನೆಗಳ ಮೇಲೆ ಸದ್ದು ಮಾಡಿ ಬೀಳುತ್ತಿದೆ…. ಆ ಯಾತನೆ ಇದೀಗ ಮೊಬೈಲ್ ಹಿಡಿದ ಅಂಗೈನ ಸ್ಪರ್ಶಕ್ಕೂ ನಿಲುಕುತ್ತಿರುವಂತೆ….
ಯೂ ಬಿಚ್… ಡೋಂಟ್ ಯು ಹ್ಯಾವ್ ಎನಿ ಸೆನ್ಸ್…
ಫಕ್ಕನೆ ಅಮ್ಮನ ನಗು ನಿಂತಿತು. ನರ್ತಕಿಯ ಹೆಜ್ಜೆ ತಟ್ಟನೆ ನಿಂತಾಗ ಗೆಜ್ಜೆ ಸದ್ದು ನಿಂತು ಆವರಿಸುವ ತಣ್ಣಗೆ ಕೊರೆಯುವಂತಹ ಮೌನ.
ವಾಟ್ ಬೇಟಾ… ನಂಗೆ ಬಿಚ್ ಹೇಳ್ತಾ ಇದ್ದೀಯ.. ಅರೆಕ್ಷಣದ ನಂತರ ನಿಧಾನ ಹೇಳಿದ ಅಮ್ಮನ ಧ್ವನಿಯಲ್ಲಿ ಸಣ್ಣಗೆ ನಡುಕ.
ಹಾಂ ಬಿಚ್…. ನೆನಪು ಮಾಡ್ಕೋ ಮಮಾ.. ನಾನು ಚಿಕ್ಕವಳಿದ್ದಾಗ ಸಣ್ಣಪುಟ್ಟ ತಪ್ಪಿಗೂ ನೀನು ಹ್ಯಾಗೆ ಹೊಡೀತಾ ಇದ್ದೆ, ಎಷ್ಟು ಕೆಟ್ಟದಾಗಿ ಬೈಯ್ತಾ ಇದ್ದೆ, ಒಂದು ಸಲವಾದ್ರೂ ಪ್ರೀತಿಯಿಂದ ತಲೆ ಸವರ್‍ತಾ ಇದ್ಯಾ… ಈಗ ನನ್ನನ್ನ ತಬ್ಬಿಕೊಂಡು ಮುದ್ದು ಮಾಡಲಿಕ್ಕೆ ನಿಂಗೆ ಆಸೆಯಾಗುತ್ತೆ, ನನ್ನ ಜತೆಗಿರಲಿಕ್ಕೆ ಆಸೆಯಾಗುತ್ತೆ, ಯಾಕಂದ್ರೆ ನಿನ್ನ ಯೌವನ ಈಗ ಇಲ್ಲ, ಆ ಸೊಕ್ಕು ಇಲ್ಲ, ಏಕಾಂಗಿ ಅನ್ನಿಸುತ್ತೆ, ಮಕ್ಕಳು ನಿನ್ನನ್ನ ಪ್ರೀತಿಸಬೇಕು, ಕಾಳಜಿ ಮಾಡಬೇಕು ಅನ್ನಿಸುತ್ತೆ.. ಅದೇ ಆಗ ನಮಗೆ ನೀನು ಹೇಗೆ ನೋಡಿಕೊಂಡಿದ್ದೆ… ನಮ್ಮನ್ನ ಹ್ಯಾಗೆ ದೂರ ಮಾಡಿದ್ದೆ… ನಾವಿಬ್ರೂ ನಿನ್ನ ಹನಿ ಪ್ರೀತಿಗಾಗಿ ಕಾತರಿಸಿದ್ದು ಜೀವಮಾನವಿಡೀ ಆ ಯಾತನೆ ಉಳಿಯುವಂತೆ ಮಾಡಿದ್ಯಲ್ಲ ಮಮಾ ಎಷ್ಟೋ ವರ್ಷಗಳಿಂದ ಮಡುಗಟ್ಟಿದ್ದನ್ನು ಮತ್ತೆ ಮತ್ತೆ ಹಾಗೇ ನೆನಪಿಸಿಕೊಳ್ಳುತ್ತ ಅದನ್ನು ಮತ್ತಷ್ಟು ಗಟ್ಟಿಯಾಗಿಸಿಕೊಂಡ ನೋವ ನೆನಪು ಮಿನುವಿನ ಕಟ್ಟಿದ ಗಂಟಲಿನಿಂದ ಹೊರಬರುತ್ತ ಕಟುವಾಗುತ್ತ…ಕಹಿಯಾಗುತ್ತ…. ತಂತಿಯ ಆಧಾರದ ಅಗತ್ಯವೂ ಇರದೆ ಮೊಬೈಲ್‌ನಲ್ಲಿ ಸಾಗತೊಡಗಿದ ಕಟು ಧ್ವನಿ ಇದೀಗ ಏನೆಲ್ಲ ವಾಸ್ತವ ಬಿಂಬವನ್ನು ಎರಡೂ ಕಡೆ ಮೂಡಿಸತೊಡಗಿತು.
ಹಾಂ ಮಿನು… ನಾನು ಕೆಟ್ಟದಾಗಿ ನೋಡಿಕೊಂಡಿದ್ದೆ… ಹದಿನಾರಕ್ಕೆ ಮದುವೆಯಾಗಿ, ಗಾಣದೆತ್ತಿನ ಥರ ದುಡಿಸಿಕೊಂಡ್ರು ನೋಡು, ನಿಮ್ಮ ಪಪಾ ಉಸಿರಿಲ್ಲದೆ ಸುಮ್ಮನಿದ್ರು ನೋಡು… ಅಖಂಡ ಹತ್ತು ವರ್ಷ ಗೆಜ್ಜೆ ಕಟ್ಟದಿದ್ರೂ ಕುಣಿಯೋಳು ಅಂತ ಹೇಳಿಸ್ಕೊಂಡೆ ನೋಡು… ಆ ನೋವನ್ನ ಯಾತನೆಯನ್ನ, ಆಕಾಶದೆತ್ತರ ನನ್ನೊಳಗೆ ಜ್ವಾಲೆ ದಹಿಸ್ತಾ ಇತ್ತಲ್ಲ ಅದನ್ನ ನನ್ನೊಳಗೇ ಸಹಿಸ್ಕೊಂಡೆ ನೋಡು… ಮರಾಠಿ ಅರ್ಥೋಡಾಕ್ಸ್ ಕುಟುಂಬದಲ್ಲಿ ಅದಕ್ಕೆ ಮಾನಸಿಕ ತಯಾರಿಯೇ ಇಲ್ಲದೆ ಕಾಲಿಟ್ಟ ನಾನು ಹೇಗೆ ಒಳಗೊಳಗೇ ನುಂಗಿದೆ… ಅದನ್ನೆಲ್ಲ ಆಗೀಗ ತಡೆಯಲಾರದೆ ನಿಮ್ಮಿಬ್ಬರ ಮೇಲೆ ಹಾಕ್ತಾ ಇದ್ದೆ.. ನಾನು ಮಾಡೋದು ತಪ್ಪು, ಒಂದಲ್ಲ ಒಂದು ದಿನ ನೀವಿಬ್ರೂ ಈ ಥರ ನನ್ನನ್ನೂ ಕೆಟ್ಟದ್ದಾಗಿ ನಡಸ್ಕೋತೀರ ಅನ್ನಿಸ್ತಾ ಇರ್‍ತಿತ್ತು. ಆದ್ರೂ ನಂಗೆ ನನ್ನನ್ನ ತಡ್ಕೋಳೋಕೆ ಆಗ್ತಾ ಇರಲಿಲ್ಲ….. ನಾನು ಅಂಥ ಕೆಟ್ಟ ಮನಸ್ಥಿತಿಯಲ್ಲಿಯೂ ತಾಯಿಯಾಗಿ ನಿಮ್ಮಿಬ್ಬರನ್ನ ಸಾಕಷ್ಟು ಚೆನ್ನಾಗಿಯೇ ನೋಡ್ಕೊಳ್ಳಲಿಲ್ಲವಾ… ನೀನು ಎರಡೂವರೆ ವರ್ಷದವರೆಗೆ ನನ್ನ ಮೊಲೆ ಜಗ್ಗಿ ಹಾಲು ಕುಡೀತಾ ಇದ್ದೆ, ಪರಾಶರ ಕೂಡ ಎರಡು ವರ್ಷ ಹಾಲು ಕುಡೀತಾ ಇದ್ದ, ಆಗಿನ ಕಾಲದಲ್ಲಿ ಆ ಕೂಡು ಕುಟುಂಬದಲ್ಲಿ ನಾನು ಒಳ್ಳೆ ಬ್ರೇಸಿಯರ್ ಕೂಡ ಹಾಕ್ಕೊಳ್ಳೋ ಹಾಗೆ ಇರಲಿಲ್ಲ, ಹತ್ತು ವರ್ಷದ ನಂತರ ಬಾಂಬೆಗೆ ವರ್ಗವಾಗಿ ಹೋದ ಮೇಲೆ ಕೋಮಲಾ ದೀದಿ ಹತ್ರ ಮತ್ತೆ ಡಾನ್ಸ್ ಮಾಡ್ತೀನಿ ಅಂತ ಹೋದಾಗ ಮೊದಲು ಅವರು ಏನು ಹೇಳಿದ್ಲು ಗೊತ್ತಾ… ನಿನ್ನ ಮೊಲೆ ಈ ವಯಸ್ಸಿಗೇ ಜೋತು ಬಿದ್ದಿದೆ, ಸೊಂಟ ಬೇರೆ ಇಷ್ಟು ದಪ್ಪ ಮಾಡಿಕೊಂಡಿದ್ದೀಯ ಈಗೇನು ಡಾನ್ಸ್ ಮಾಡ್ತೀಯ ಅಂತ ಹುಡುಗಿಯರ ಎದುರಿಗೇ ಬೈದಿದ್ದರು, ಹೂತು ಹೋಗೋ ಅಷ್ಟು ಅವಮಾನ ಆಗಿದ್ರೂ ನಾನು ಛಲ ಬಿಡದೆ ಪ್ರಾಕ್ಟೀಸ್ ಮಾಡಿದ್ದರಿಂದ ಮತ್ತೆ ಹತ್ತಿರ ಕರ್‍ಕೊಂಡ್ರು…. ನಿಮ್ಮ ಪಪಾಗೆ ನಾನು ನನ್ನನ್ನ ಪೂರ್ಣ ಸಮರ್ಪಣೆ ಮಾಡಿಕೊಂಡಿರಲಿಲ್ಲವಾ… ಆದ್ರೂ ಅವರು ಯಾಕೆ ನನ್ನ ಈ ನಡೆಯನ್ನ, ಲಾಸ್ಯವನ್ನು ಸಹಿಸಲಿಲ್ಲ, ಇಷ್ಟಾಗಿ ನನಗಿಂತ ಹತ್ತು ವರ್ಷ ದೊಡ್ಡವರಾಗಿದ್ದ ನಿಮ್ಮ ಪಪಾನಿಂದ ನೀವಿಬ್ಬರು ಹುಟ್ಟಿದ ನಂತರ ನಂಗೆ ಮೈ ಹಿಚುಕಿಸಿಕೊಳ್ಳೂದು ಬಿಟ್ಟರೆ ಬೇರೆ ಸುಖ ಸಿಗ್ತಿರಲಿಲ್ಲ ಅನ್ನೊದು ನಿಂಗೆ ಹ್ಯಾಗೆ ಅರ್ಥ ಆಗುತ್ತೆ… ನನ್ನನ್ನ ಹಿಂದಿನ ಕಾಲದವಳು ಅಂತೀಯಲ್ಲ… ನಾನು ಯಾವತ್ತೂ ಸುಖದ, ತೃಪ್ತಿಯ ಉತ್ತುಂಗ ಶಿಖರ ತಲುಪಲೇ ಇಲ್ಲ ಅನ್ನೋದನ್ನು ನೀನು… ಆಧುನಿಕ ಮನೋಭಾವದವಳು ಅರ್ಥ ಮಾಡ್ಕೋತೀಯ….
ಆ ಕಡೆಯಿಂದ ಅಮ್ಮನ ಧ್ವನಿ ಕೂಡ ಏನೆಲ್ಲ ಕಹಿವಾಸನೆಯನ್ನಂಟಿಸಿಕೊಂಡು … ತಾವಿಬ್ಬರೂ ಯಾಕೆ ಹೀಗೆ ಜಗಳ ಮಾಡಿಕೊಂಡು ಪರಸ್ಪರ ಹಿಂಸಿಸಿಕೊಳ್ಳುತ್ತಿದ್ದೇವೆ ಎಂಬ ಯೋಚನೆ ಅರೆಕ್ಷಣ ಮಿನುವಿನ ಮನದಲ್ಲಿ ಹಾದು ಹೋದರೂ ಅಮ್ಮನ ಧ್ವನಿ ಕೇಳುತ್ತ ಕೇಳುತ್ತ ಹಾಗೆ ಮೂಡಿದ ಯೋಚನೆ ಅಷ್ಟೇ ಬೇಗನೆ ಆವಿಯಾಗಿ ಕಡೆಗೆ ಅವಳೂ ಕೆಟ್ಟದಾಗಿ ಚೀರಿದಳು.
ಹಾಗಿದ್ರೆ ನೀನು ಪಪಾನನ್ನ ಬಿಟ್ಟು ಹೋಗಿ ಡಾನ್ಸ್ ಮಾಡ್ತಲೇ ಇರಬಹುದಿತ್ತಲ್ಲ… ಕಡೆಕಡೆಗೆ ನೀನು ಹೇಗೂ ಪಪಾನ ಮಾತು ಕೇಳದೆ ಕಾರ್ಯಕ್ರಮಕ್ಕೆ ಹೋಗ್ತಾ ಇದ್ದೆಯಲ್ಲ… ಯಾಕೆ ನಮ್ಮ ಜತೆಗಿದ್ದೂ ಇಲ್ಲದವಳ ಹಾಗೆ ನಮ್ಮನ್ನ ಅಷ್ಟು ಗೋಳು ಹೊಯ್ಕೊಂಡೆ ಮಮಾ… ಸುಖ ಬೇಕಿದ್ರೆ ಬೇರೆ ಯಾರನ್ನಾದ್ರೂ.. ಅದೇ ನಿನ್ನ ಜತೆಗೆ ಕೆಲವೊಮ್ಮೆ ಡಾನ್ಸ್ ಮಾಡ್ತಾ ಇದ್ದನಲ್ಲ ಅವನನ್ನು.. ಛೇ… ನಿಂಗೆ ಆ ಧೈರ್ಯವೂ ಇರಲಿಲ್ಲ.
ನಂಗೆ ಬಿಚ್ ಅಂದೆಯಲ್ಲ ಬಿಚ್ ನಾನಲ್ಲ ನೀನು ಮಿನು… ಆ ಮಾರ್ಕ್ ಬಗ್ಗೆ.. ನಂಗೆ ಗೊತ್ತಿಲ್ಲ ಅಂದುಕೊಬೇಡ… ಬೇಡ ಬಿಡು ಅದನ್ನ ನೀನೇ ಯೋಚನೆ ಮಾಡು. ಇಲ್ಲಿ ಕೇಳು ಮಿನು … ನಂಗೆ ಬೇಕಾಗಿದ್ದಿದ್ದು ಬರಿಯ ಹಾಸಿಗೆ ಸುಖ ಮಾತ್ರ ಆಗಿರಲಿಲ್ಲ… ಒಂದೆರಡು ದಿನದ ಸುಖ ಮಾತ್ರ ಆಗಿರಲಿಲ್ಲ… ಒಂದು ಸಂಸಾರದ ನೆಮ್ಮದಿ, ಸಾಂಗತ್ಯದ ನೆಮ್ಮದಿ…. ಇಂಥ ಒಂದು ಕನಸಿನ ತುಣುಕಿಗಾಗಿ ಬದುಕಿಡೀ ಎಂಥ ಯಾತನೆ ಅನುಭವಿಸಿದೆ, ಅಷ್ಟೆಲ್ಲ ದೂರ ಸಾಗಿದೆ… ಒಂದು ಸಂಸಾರದ, ಸಾಂಗತ್ಯದ ಹುಡುಕಾಟ ಯಾವ್ಯಾವುದೋ ಬಿಂದುವಿಗೆ ನನ್ನನ್ನ ಎಳ್ಕೊಂಡು ಬಂದುಬಿಡ್ತಲ್ಲ…
ಕಡೆಕಡೆಗೆ ಮಿನುಗೆ ಅಮ್ಮನ ಗದ್ಗದ ಕಂಠದಲ್ಲಿ ವಾಕ್ಯಗಳು ಬಿಡಿಬಿಡಿಯಾಗಿ ಕೇಳುತ್ತ… ಕಹಿತನ, ಕಟುತನ ಯಾವುದೂ ಇಲ್ಲದ ಕೇವಲ ಒಂದು ಆತ್ಮದ ಯಾತನೆಯ ಧ್ವನಿಯಾಗಿ, ಮಮಾನದಲ್ಲದೆ ಬೇರೆ ಯಾರದೂ ಆಗಿಬಿಡುವ ಸಾಧ್ಯತೆ ಇರುವ ಆರ್ತನಾದದಂತೆ ಮೊಬೈಲ್‌ನಲ್ಲಿ ಕೇಳುತ್ತ….. ಕೊನೆಯಲ್ಲಿ ಮೊಬೈಲ್ ಕೈಯಿಂದ ಜಾರಿದ ಶಬ್ದ. ನಂತರ ಆಚೆಯಿಂದ ಯಾವ ಸದ್ದೂ ಇಲ್ಲ. ಮಮಾ ಮೊದಲೇ ಡಿಪ್ರೆಶನ್‌ನಲ್ಲಿದ್ದಾಳೆ… ಏನಾದ್ರೂ ಹೆಚ್ಚು ಕಡಿಮೆಯಾದರೆ… ಮಿನುಗೆ ತೀರ ಕಳವಳಕ್ಕಿಟ್ಟುಕೊಂಡಿತು. ಊಟದ ನಂತರದ ಮೀಟಿಂಗ್‌ಗೆ ಇರಲೇ ಅಥವ ಅರ್ಧ ದಿನ ರಜೆ ಬರೆದಿಟ್ಟು ಹೋಗಲೇ… ಆದ್ರೆ ಇವತ್ತಿನದು ಮುಖ್ಯವಾದ ಮೀಟಿಂಗ್… ಮೇಲೆ ಬರಬೇಕೆಂದು ಇಷ್ಟೆಲ್ಲ ಒದ್ದಾಡುವ ತಾನು, ಈಗೆರಡು ವರ್ಷದಿಂದ ಡಾನ್ಸ್ ಮಾಡಲೂ ಸಮಯವಿಲ್ಲದಂತೆ ಹಗಲು ರಾತ್ರಿ ಎನ್ನದೆ ಆಫೀಸಿನ ಕೆಲಸದಲ್ಲಿ ತೊಡಗಿರುವ ತಾನು ಮೀಟಿಂಗ್‌ನ್ನು ತಪ್ಪಿಸಿ ಹೋಗುವುದೇ… ಅದೂ ಸಾಧ್ಯವಾಗದು…ಛೇ.. ಏನಾದ್ರೂ ಆಗಲಿ ರಾತ್ರಿ ಮನೆಗೆ ಹೋದ ಮೇಲೆ ನೋಡುವ ಎಂದುಕೊಂಡು ಸುಮ್ಮನಾಗಿ ಬಿಟ್ಟಳು.
ಆದರೂ ಮನಸ್ಸು ತಡೆಯದೇ ಮತ್ತೆ ನಾಲ್ಕರ ಸುಮಾರಿಗೆ ಫೋನ್ ಮಾಡಿದಳು. ಅಷ್ಟರಲ್ಲಿ ಅಮ್ಮನಿಗೂ ಮನಸ್ಸು ಸ್ತಿಮಿತಕ್ಕೆ ಬಂದಿತ್ತೇನೋ.. ಫೋನ್ ಕರೆಯನ್ನೇ ನಿರೀಕ್ಷಿಸಿದವಳಂತೆ ಮೊದಲ ರಿಂಗ್‌ಗೇ ತೆಗೆದುಕೊಂಡಳು.
ಮಮಾ… ಮಮಾ..
ಪಿಸುಗುಟ್ಟಿದಳು.
ಊಂ ಗುಟ್ಟಿದ ಅಮ್ಮನಿಗೆ ಮುಂದೆ ಮಾತು ಹೊರಡಲಿಲ್ಲ.
ಸಂಜೆ ಬೇಗ ಬರ್‍ತೀನಿ ಮಮಾ
ಹಾಂ ರಾಣಿ ಈ ಬಾರಿ ಮಿನು ಎನ್ನಲಿಲ್ಲ. ಸಧ್ಯ ಅಮ್ಮ ಸಹಜವಾಗಿದ್ದಾಳೆ ಎಂದುಕೊಂಡಳು.
ಸಂಜೆ ಮೀಟಿಂಗ್ ಮುಗಿದಾಗಲೇ ಏಳು ಘಂಟೆ.. ಹೊರ ಬಂದ ಮಿನುಗೆ ಬರುವಾಗ ಗಾಡಿ ಸರ್ವಿಸ್‌ಗೆ ಕೊಟ್ಟಿರುವುದು ನೆನಪಾಯಿತು. ಅಲ್ಲಿ ಹೋಗಿ ತೆಗೆದುಕೊಳ್ಳಲೋ ಅಥವ ಸೀದಾ ಮನೆಗೆ ಹೋಗಿ ನಾಳೆ ತೆಗೆದುಕೊಳ್ಳಲೋ… ಯಾಕೋ ಗಾಡಿ ಹೊಡೆಯಲು ಚೈತನ್ಯ ಉಳಿದಿಲ್ಲ ಎನ್ನಿಸಿ ಹಾಗೇ ಹೊರಗೆ ಬಂದಳು. ಆಟೋ ಹಿಡಿಯಲು ಮುಖ್ಯ ರಸ್ತೆಗೆ ಬಂದವಳಿಗೆ ಬೇಡ ಸಿಟಿಬಸ್‌ನಲ್ಲಿ ಹೋದ್ರಾಯ್ತು ಎನ್ನಿಸಿ ಸ್ಟಾಪ್‌ಗೆ ನಡೆದಳು. ಗಾಡಿ ಇಲ್ಲದಿದ್ದಾಗಲೆಲ್ಲ ಅಥವ ಹೊಗೆ ಕುಡಿಯುತ್ತ ಸಿಗ್ನಲ್‌ನಲ್ಲಿ ನಿಲ್ಲುವುದು ಬೇಡ ಎಂದುಕೊಂಡಾಗಲೆಲ್ಲ ಅರೆ ಕ್ಷಣ ಆಟೋ ಎಂದುಕೊಂಡರೂ ಸಿಟಿಬಸ್‌ನ ದೃಶ್ಯಗಳ ಆಕರ್ಷಣೆಯಿಂದ ಮಿನುಗೆ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ. ಟಿಕೆಟ್ ತೆಗೆದು ಕುಳಿತರಾಯ್ತು…. ಮುಕ್ಕಾಲು ಘಂಟೆ ಬೆಂಗಳೂರು ಬದುಕಿನ ಒಂದಿಷ್ಟು ಬಿಡಿ ಬಿಡಿ ಭಾಗದ ಪ್ರದರ್ಶನ ನೋಡಬಹುದು… ಎಂದುಕೊಳ್ಳುವ ಮಿನು ವಾರಕ್ಕೊಮ್ಮೆಯಾದ್ರೂ ಬಸ್ಸಿಗೆ ಹೋಗುವುದು ಸಾಮಾನ್ಯ.
ಅವಳು ಸ್ಟಾಪ್‌ಗೆ ಬರುವಾಗ ತುಸು ದೂರದಲ್ಲಿ ಎದುರಿನಿಂದ ಹದಿನೆಂಟರ ಸುಮಾರಿನ ಹುಡುಗನ ಕೈ ಹಿಡಿದು ಬರುತ್ತಿದ್ದ ಹೆಂಗಸು ಕಾಣಿಸಿದಳು. ಹೂ ಮುಡಿದು, ಒಂದಿಷ್ಟು ಮೇಕಪ್ ಬಳಿದುಕೊಂಡು, ಬಂದ ಯಾವ ಬಸ್ಸಿಗೂ ಹತ್ತದೆ ಕಾಯುತ್ತ ನಿಂತಿರುತ್ತಿದ್ದ ಅವಳನ್ನು ಅದೇ ಸ್ಟಾಪ್‌ನಲ್ಲಿ ಆಗೀಗ ನೋಡಿದ್ದ ಮಿನುಗೆ ತಟ್ಟನೆ ಅವಳ ಗುರುತು ಹತ್ತಿತು. ಅವಳ ಹಾಗೆ ಓಡಾಡುವ ನಾಲ್ಕಾರು ಹೆಂಗಸರನ್ನು ಅದೇ ಸ್ಟಾಪ್‌ನಲ್ಲಿ ಬಸ್ ಹತ್ತುವ, ಇಳಿಯುವ ಮಿನುವಿನ ಇನ್ನಿತರ ಸಹೋದ್ಯೋಗಿಗಳು ಗಮನಿಸಿದ್ದರು. ಮಧ್ಯಾಹ್ನದ ಊಟದ ಸಮಯದಲ್ಲಿ ಆಗೀಗ ಗಂಡಸರ್‍ಯಾರು ಇಲ್ಲದಿದ್ದಾಗ ಹಾಗೆ ನೋಡಿದ ದೃಶ್ಯಗಳನ್ನ ಡಬ್ಬಿ ಹಂಚಿಕೊಂಡಷ್ಟೇ ಆಸ್ಥೆಯಿಂದ ಹಂಚಿಕೊಳ್ಳುತ್ತಿದ್ದರು. ಉಳಿದ ನಾಲ್ಕಾರು ಹೆಂಗಸರು ಕೊಂಚ ದಪ್ಪಕ್ಕೆ, ಉಬ್ಬಿದ ಮೊಲೆಗಳನ್ನು ಅರೆತೆರೆದ ರವಿಕೆಯಿಂದ ಕೆಟ್ಟದಾಗಿ ಪ್ರದರ್ಶಿಸುತ್ತ ತಮ್ಮದೇ ಆದ ವಿಚಿತ್ರ ಹಾವಭಾವದೊಂದಿಗೆ ಇದ್ರೆ ತೆಳ್ಳಗಿನ ಪೀಚು ದೇಹದ ಈ ಹೆಂಗಸು ಅಂಥ ಹಾವಭಾವಗಳನ್ನು ಅಷ್ಟಾಗಿ ಪ್ರದರ್ಶಿಸದೇ ತೀರಾ ಸಾದಾ ಸೀದಾ ಎಂಬಂತೆ ಇದ್ದಳು. ಮಿನು ಆ ಹೆಂಗಸನ್ನು ನೋಡಿದಾಗೆಲ್ಲ ವಿಚಿತ್ರ ಅಚ್ಚರಿಗೆ ಪಕ್ಕಾಗುತ್ತಿದ್ದಳು. ಇಂಥ ಹೆಂಗಸರ ಬಳಿ ಬರುವ ಗಂಡಸರಿಗೆ ಬಹುಶಃ ಬೇಕೇಬೇಕೆನ್ನಿಸುವ ದಪ್ಪ ಮೊಲೆ, ತೊಡೆ ಯಾವುದೂ ಇಲ್ಲದ ಇವಳ ಬಳಿ ಮಲಗಲು ಯಾರಾದ್ರೂ ಬರಬಹುದೇ… ಅವಳಿಗೆ ಕೊಂಚವಾದ್ರೂ ಗಳಿಕೆಯಾಗಬಹುದೇ… ಉಳಿದವರಷ್ಟು ದುಡ್ಡು ಇವಳಿಗೆ ಸಿಕ್ಕುವುದಿಲ್ಲವೇನೋ ಅಥವ ಈ ಹೆಂಗಸು ಅಂಥವಳಲ್ಲವೇ… ಅವಳ ನಸುಗಪ್ಪಿನ ಆ ಕೋಲು ಮುಖದಲ್ಲಿ ಒಂದು ಪುಟ್ಟ ಆಕರ್ಷಣೆ ಇದ್ದರೂ ಇಷ್ಟು ತೆಳ್ಳಗಿರುವ ಈ ಹೆಂಗಸು ಈ ದಂಧೆ ಮಾಡಲಾದ್ರೂ ಸಾಧ್ಯವೇ… ಹೀಗೇ ಇಂಥದೇ ಅಚ್ಚರಿ.
ಆ ಹುಡುಗನ ಕೈಹಿಡಿದು ಅವನೊಂದಿಗೆ ನಗುತ್ತ ಮಾತಾಡುತ್ತ ಎದುರಿನಿಂದ ಬರುತ್ತಿದ್ದ ಆ ಹೆಂಗಸನ್ನು ನೋಡಿದ ಮಿನು ಅವಳ ತಮ್ಮ ಯಾರಾದ್ರೂ ಇರಬೇಕು ಎಂದು ಸಂಸಾರದ ಒಂದು ಎಳೆಯನ್ನು ಆ ದೃಶ್ಯಕ್ಕೆ ಪೋಣಿಸಿಕೊಂಡಳು, ಹಾಗೊಂದು ಸಾಧ್ಯತೆ ಪೋಣಿಸಿದ್ದೇ ಛೇ.. ಈ ಹೆಂಗಸು ಆ ದಂಧೆ ಮಾಡ್ತಿರಲಿಕ್ಕಿಲ್ಲ ಎಂಬ ಭಾವವೂ ಸುಳಿದುಹೋಯ್ತು. ಅವರು ಮಿನುವಿನಿಂದ ತುಸು ದೂರದಲ್ಲಿಯೇ ರಸ್ತೆ ದಾಟಿದರು. ಆಗ ಮಿನುಗೆ ಕಾಣಿಸಿದ್ದು ಆ ಹುಡುಗನ ಕೈಯಲ್ಲಿದ್ದ ಮಡಚಿದ ಕೋಲು… ಅವಳತ್ತ ನೋಡದೆ ನಗುತ್ತ ಮಾತಾಡುತ್ತಿದ್ದ ಆ ಹುಡುಗ… ಮಿನುಗೆ ತಟ್ಟನೆ ಅರಿವಾಯಿತು… ಅವನು ಅಂಧ ಹುಡುಗ.. ಅವನಿಗೆ ಇವಳು ರಸ್ತೆ ದಾಟಿಸುತ್ತಿದ್ದಾಳೆ… ಮಿನು ಅವರತ್ತಲೇ ನೋಡುತ್ತಿದ್ದಳು. ಎಷ್ಟೋ ದಿನಗಳ ಪರಿಚಯವಿದೆಯೆಂಬಂತೆ ಆ ಹುಡುಗ ಅವಳೊಂದಿಗೆ ಮಾತಾಡುತ್ತ ನಗುತ್ತಿದ್ದ.
ಫಕ್ಕನೆ ಕೆಲದಿನಗಳ ಹಿಂದೆ ಕುಮುದ ಹೇಳಿದ್ದು ನೆನಪಾಯ್ತು.
ನಿನ್ನೆ ಎಂಥ ನೋಡಿದ್ದು ಗೊತ್ತಾ ಮಿನು… ಅದೇ ಆ ಸ್ಟಾಪ್‌ನಲ್ಲಿ ತುಂಬ ಚಿಕ್ಕ ವಯಸ್ಸಿನ ಒಬ್ಬಳು ಹುಡುಗಿ, ಇವರೆಲ್ಲಗಿರಿಂತ ಭಾರೀ ಸೆಕ್ಸಿಯಾಗಿ ಡ್ರೆಸ್ ಮಾಡಿಕೊಂಡು ಕಾಣಿಸಿಕೊಳ್ಳತಾಳಲ್ಲ… ಇಷ್ಟು ಚಿಕ್ಕ ವಯಸ್ಸಿಗೆ ಈ ದಂಧೆಗೆ ಇಳಿದ ಅವಳ ಮಜಬೂರಿ ಏನಿದೆಯೋ ಅಂತ ನಾವು ಮಾತಾಡಿಕೊಳ್ಳಿದ್ದೆವಲ್ಲ ಅವಳು ನಾನು ಬಸ್ ಸ್ಟಾಪ್‌ನಲ್ಲಿ ನಿಂತಾಗ ಆ ಕಡೆ ತಿರುವಿನಲ್ಲಿ ನಿಂತಿದ್ದಳು. ಸ್ವಲ್ಪ ಹೊತ್ತಿನ ಮೇಲೆ ಬನಶಂಕರಿ ಕಡೆಯಿಂದ ಟುನಾಟ್ ಟು ಬರುತ್ತಲ್ಲ ಅದರಿಂದ ಒಂದು ಹುಡುಗಿ ಇಳಿದ್ಲು… ಇವಳೋ ಅವಳಿಗೇ ಕಾಯ್ತಿದ್ದಳೋ ಅನ್ನೋ ಹಾಗೆ ಅವಳ ಕೈ ಹಿಡ್ಕೊಂಡಳಪ್ಪ… ಓ.. ಆ ಹುಡುಗಿಯೂ ಎಲ್ಲೋ ಇವಳ ಫ್ರೆಂಡ್ ಇರಬೇಕಪ್ಪ ಅಂದುಕೊಂಡೆ… ಅವರಿಬ್ರೂ ಹೆಂಗೆ ನಗ್ತಾ ಮಾತಾಡ್ತಾ ಬರ್‍ತಾ ಇದ್ರೂ ಗೊತ್ತಾ ಮಿನು… ಅವರಿಬ್ರೂ ತಿರುವಿನಿಂದ ರಸ್ತೆ ದಾಟಿ ನಮ್ಮ ಸ್ಟಾಪ್ ಹತ್ರ ಬರ್‍ತಾ ಇರುವಾಗ ನಂಗೊತ್ತಾಗಿದ್ದು ಆ ಹುಡುಗಿ ಅಂಧ ಹುಡುಗಿ ಅಂತ… ಆ ಅಂಧ ಹುಡುಗಿಗೆ ಇವಳು ನೋಡಲು ಹೇಗಿದ್ದಾಳೆ ಅಂತ ಕಾಣುವುದಿಲ್ಲ… ಅವಳಿಗೆ ಇವಳು ತನ್ನ ಜತೆಗೆ ಮಾತಾಡ್ತಾ ಇರೋ ಒಂದು ಜೀವ, ತನ್ನ ಕೈ ಹಿಡಿದ ಒಂದು ಹುಡುಗಿಯ ಧ್ವನಿ ಮಾತ್ರ… ಇವಳಿಗೆ ಆ ಅಂಧ ಹುಡುಗಿ ತನ್ನ ಹಾಗಿನ ಒಂದು ಜೀವ… ನಾವು ನಿಲ್ಲೋ ಸ್ಟಾಪ್‌ನ ರಸ್ತೆ ಕೊನೆಗೆ ಈ ಅಂಧ ಹುಡುಗೀರ ಒಂದು ಹಾಸ್ಟೆಲ್ ಇದ್ದ ಹಾಗೆ ಇದೆ, ನಾಲ್ಕೈದು ಜನ ಅಂಧ ಹುಡುಗೀರು, ಅಲ್ಲಿಗೆ ಹೋಗೋದು ಬರೋದು ನೋಡ್ತೀವಿ ಅಲ್ಲವಾ ಮಿನು. ಆ ಹುಡುಗಿ ಅಲ್ಲಿಯವಳಿರಬೇಕು…
ನಂತರ ಕುಮುದ, ಮಿನು ಅರ್ಧ ಘಂಟೆ ಚರ್ಚಿಸಿದ್ದು ಎಲ್ಲೆಲ್ಲೋ ಕೆಲಸ ಮಾಡುವ, ನಗರದ ಯಾವುದೋ ಭಾಗದಿಂದ ಮತ್ತಾವುದೋ ಭಾಗಕ್ಕೆ ಆರಾಮಾಗಿ ಬಸ್ಸು ಹಿಡಿದೇ ಸಂಚರಿಸುವ, ಆತ್ಮವಿಶ್ವಾಸದ ಈ ಅಂಧ ಹುಡುಗಿಯರ ಕುರಿತಾಗಿ ಆಗಿತ್ತು. ಕಣ್ಣೇ ಇಲ್ಲದ ಈ ಹುಡುಗೀರು ಇಷ್ಟು ಮರ್‍ಯಾದೆಯಿಂದ ಕೆಲಸ ಮಾಡಿಕೊಂಡು ಜೀವನ ಮಾಡ್ತಾರಂತೆ.. ಎಲ್ಲ ನೆಟ್ಟಗಿರೋ ಈ ಹೆಂಗಸರು ದೇಹ ಮಾರಿಕೊಳ್ಳೋದು ಬಿಟ್ಟು ಮರ್‍ಯಾದೆಯಿಂದ ದುಡಿದು ತಿನ್ನಬಾರದೆ ಎಂಬ ಮಂಗಳ ವಾಕ್ಯದೊಡನೆ ಚರ್ಚೆ ಮುಗಿಸಿದ್ದರು. ಎಲ್ಲಕ್ಕಿಂತ ಹೆಚ್ಚು ಹೇಗೆ ಹಾಗೆಲ್ಲ ಮಲಗಲಾಗುತ್ತೆ ಎನ್ನುವುದೇ ಮಿನುಗೆ ಸದಾ ಕಾಡುವ ಪ್ರಶ್ನೆಯಾಗಿತ್ತು. ದುಡ್ಡಿಗಾಗಿ, ಅದು ಬರಬರುತ್ತ ರೂಢಿಯಾಗುತ್ತೆ, ಊಟ ತಿಂಡಿ, ನಿದ್ದೆಯ ಹಾಗೆ ಅದೂ ಕೂಡ, ದುಡಿಮೆಯ ಉಳಿದ ಕೆಲಸಗಳಂತೆ ಎಂದೆಲ್ಲ ಅಂದುಕೊಂಡರೂ ಯಾವುದೇ ಬಗೆಯ ಮಾನಸಿಕ ಬಂಧವೇ ಇಲ್ಲದೆ, ಮಾನಸಿಕ ಅಗತ್ಯವೇ ಇಲ್ಲದೆ ಬರಿಯ ದುಡ್ಡಿಗಾಗಿ ಹೀಗೆ ಮಲಗುವುದು ಈ ಹೆಂಗಸರಿಗಾಗಲೀ, ದೇಹದ ಹಸಿವೆಗಾಗಿ ಅವರೊಡನೆ ಹೋಗುವ ಆ ಗಂಡಸರಿಗಾಗಲೀ ಹೇಗೆ ಸಾಧ್ಯವಾಗುತ್ತಪ್ಪ ಎನ್ನುವುದೇ ಮಿನುಗೆ ವಿಚಿತ್ರವೆನ್ನಿಸಿಬಿಡುತ್ತಿತ್ತು.
ಅವರನ್ನೇ ನೋಡುತ್ತಿದ್ದ ಮಿನು ತನ್ನ ಬಸ್ ಬಂದರೂ ಹತ್ತುವುದು ಮರೆತು ಬಿಟ್ಟಳು. ಅದು ತುಸು ಚಲಿಸಿದ ಮೇಲೆ ಹಿಂಬದಿಯ ಬೋರ್ಡ್ ನೋಡಿದಾಗಲೇ ಅರಿವಾಯ್ತು. ಇನ್ನೊಂದು ಬರುತ್ತೆ ಎಂದುಕೊಂಡವಳು ಮತ್ತೆ ಅತ್ತಲೇ ದೃಷ್ಟಿ ನೆಟ್ಟಳು. ಈಗ ಅವರಿಬ್ಬರೂ ರಸ್ತೆಯ ಆಚೆಯ ಬಸ್‌ಸ್ಟಾಪ್‌ನಲ್ಲಿದ್ರು. ಎರಡು ಮೂರು ಬಸ್ ಬಂದಾಗ ಈ ಹೆಂಗಸು ಬಾಗಿ ಅದು ಎಲ್ಲಿಗೆ ಹೋಗುತ್ತೆ ಅಂತ ವಿಚಾರಿಸಿಕೊಂಡು, ಕಡೆಗೆ ಬಂದ ಒಂದು ಬಸ್ಸಿಗೆ ಅವನನ್ನು ಹತ್ತಿಸಿದಳು. ಅಲ್ಲೇ ನಿಂತು ಇನ್ನೂ ಹತ್ತುತ್ತಿದ್ದ ಅವನಿಗೆ ಟಾಟಾ ಎಂಬಂತೆ ಚಿಕ್ಕ ಮಗುವಿನ ಹಾಗೆ ಕೈ ಮಾಡಿದಳು. ಅವನಿಗೆ ಕಾಣಿಸುವುದಿಲ್ಲ ಎಂಬುದನ್ನೇ ಅವಳು ಮರೆತಂತೆ, ಅವನಿಗೆ ಕಾಣಿಸಬೇಕಾದ ಅಗತ್ಯವೇ ಇಲ್ಲ ಎಂಬಂತೆ ಆ ಕೈಬೀಸುವಿಕೆ ಇತ್ತು. ಈ ದೃಶ್ಯಕ್ಕೆ ಸಂಬಂಧವೇ ಇರದಂತೆ ಇದ್ದಕ್ಕಿದ್ದಂತೆ ಅವಳಿಗೆ ಮಾರ್ಕ್‌ನ ವ್ಯಾಮೋಹ ನೆನಪಾಯಿತು. ಮನೆಯಲ್ಲಿ ಕಾಯುತ್ತಿರುವ ಮಮಾ…. ನಾಳೆ ಬೆಳಗಿನ ಜಾವ ಊರಿಂದ ಬಂದಿಳಿಯುವ ಗಿರಿ ನೆನಪಾಗುತ್ತಿದ್ದಂತೆ ಅವಳ ಕೈಬೀಸುವಿಕೆಯಲ್ಲಿ ಅಡಗಿದ ಒಂದು ಸಹಜ ಜೈವಿಕತೆಯೇ ತನ್ನನ್ನು ಕಾಯ್ದು, ಕಾಪಿಡಲಿ ಎಂದು ಮಿನು ಮನದಲ್ಲಿಯೇ ಪ್ರಾರ್ಥಿಸತೊಡಗಿದಳು.
*****
ಲಂಕೇಶ್ ಪತ್ರಿಕೆಯ ೨೬ ನೆ ವರ್ಷ ಪ್ರಕಟಣೆಯ ಸಲುವಾಗಿ ನಡೆದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ ಕತೆ
ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದದ್ದು-ಜುಲೈ ಮೊದಲವಾರ- ೨೦೦೫