ನನ್ನ ಕನಸಿನ ಹೊನ್ನ ತಾವರೆಯ ಹೂವರಳಿ
ಎನ್ನ ಬೊಗಸೆಯೊಳಿಂದು ಕಂಗೊಳಿಸಿದೆ;
ಎನ್ನಿನಿಯ ಭಾವಗಳ ಮಧುರ ಮಕರಂದವೂ
ಮೃದುಲ ದಲದಲಗಳಲಿ ಪರಿಮಳಿಸಿದೆ!
ಮಾನಸ ಸರೋವರದ ಶಾಂತಿಸೌಖ್ಯಾಭೋಗ
ಸಕಲ ಸೌಂದರ್‍ಯದೀ ಮೊಗ್ಗೆಯಾಗಿ
ನೇಹ ನೇಸರನೊಂದು ಮೀಸಲದ ಕಿರಣದೆಡೆ
ಮೊಗವ ಚಾಚಿದೆ ಸೊಗಕೆ ಕಳಸವಾಗಿ.
ಹಲವಾರು ಹೂವುಗಳ ಅಂದಚಂದವದಿರಲಿ
ಸೌಗಂಧವೇ ಇದರ ಸೌಭಾಗ್ಯವು,
ಕಂಡ ಕಣ್ಣಿಗೆ ತಂಪು, ಎದೆಗೆ ಕುಂದದಲಂಪು-
ನಕ್ಷತ್ರ ಗಂಗಳಕ್ಷಯದ ಒಲವು!
ಎದೆಗೆದೆಯ ತುಂಬಿಸುವ ರಂಬಿಸುವ ಝೇಂಕಾರ-
ಹಲವು ಹಂಬಲವಿಲ್ಲಿ ಹಣ್ಣಾಗಿವೆ;
ಬಿಸಿಲೊ ಬೆಳುದಿಂಗಳವು, ಕಾಡೊ ನಂದನವನವು
ಮಧುರ ಮಿಲನದೊಳೆಲ್ಲ ಜೇನಾಗಿವೆ.
ಆವ ಚೆಲುವಿನ ದಿವ್ಯ ಸಾನ್ನಿಧ್ಯವನು ಬಯಸಿ
ಜೀವವನವರತವೂ ಹುಡುಕುತಿತ್ತೊ-
ಸತ್ಯ ಸೌಂದರ್‍ಯಗಳ ಹತ್ತು-ಗಡಿಯನ್ನು ತಡಕಿ
ಅಂತರಂಗದೊಳಿಂತು ಮಿಡುಕುತಿತ್ತೊ
ಅಂಥ ಪಂಥದ ಮುದ್ದು ಮೊಗವನಪ್ಪಿತು ಗೆಲವು
ಬಾಳಬೀದಿಗೆ ಬೆಳಕು ನುಗ್ಗಿ ಬಂತು!
ಹೊಂಗೆಳೆತಿ ಸಂಗಾತಿ ಪ್ರೇಮಕುಂಡಜ್ಯೋತಿ
ನಿನ್ನ ಜೊತೆಯೊಳು ಬಾಳು ತುಂಬಿ ಬಂತು.
*****