ಕನ್ನಡದ ಮೊದಲ ಕಾದಂಬರಿಗಳಲ್ಲಿ ಆದರ್ಶ ಮತ್ತು ವಾಸ್ತವ

ಕಾದಂಬರಿ ಅಂದರೆ ಏನು? ಈ ಪ್ರಶ್ನೆಗೆ ಉತ್ತರವನ್ನು ಕೊಡಬೇಕಾದರೆ ಸದ್ಯಕ್ಕೆ ನಾವು ಪಾಶ್ಚಿಮಾತ್ಯ ವಿಮರ್ಶೆಯ ಮೊರೆ ಹೋಗಲೇಬೇಕಾಗಿದೆ. ಸದ್ಯಕ್ಕೆ ಆ ಮಾನದಂಡಗಳಿಂದ ಕನ್ನಡ ಕಾದಂಬರಿಯ ಉಗಮವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದರೆ, ಕನ್ನಡದ ಸಂದರ್ಭದಲ್ಲಿ ಪಾಶ್ಚಿಮಾತ್ಯ ಪ್ರಕಾರವೊಂದು ಪಡೆದುಕೊಳ್ಳುವ ವಿಶಿಷ್ಟ ರೂಪ ಕೂಡ ಬಿಚ್ಚಿಕೊಳ್ಳಲು ಪ್ರಾರಂಭವಾಗುತ್ತದೆ. ಇದು ನಮ್ಮ ಬಹುಮಟ್ಟಿನ ವಿಮರ್ಶಾ ಸಂವೇದನೆಯಲ್ಲಿ ತುಂಬಿರುವ ಒಂದು ಬಗೆಯ ‘ತಾತ್ವಿಕ ಮುಗ್ಧತೆ’ ಯಿಂದ ಬಿಡಿಸಿಕೊಳ್ಳುವ ಕ್ರಮ ಕೂಡ ಹೌದು ಎಂದು ನನ್ನ ನಂಬಿಕೆ. ನಮ್ಮ ಅಪ್ರಜ್ಞಾಪೂರ್ವಕ ಗೃಹೀತಗಳ ಕಡೆಗೆಷ್ಟು ನಿರ್ದಿಷ್ಟ ಗಮನಕೊಟ್ಟರೆ ನಮ್ಮ ವೈಚಾರಿಕ ಬಿಡುಗಡೆ ಕೂಡ ಪ್ರಾರಂಭವಾಗುತ್ತದೆ. ಕನ್ನಡ ವಿಮರ್ಶೆ ತನ್ನ ಸಂಸ್ಕೃತಿ ವಿಶಿಷ್ಟ ಪರಿಕಲ್ಪನೆಗಳನ್ನು ರೂಢಿಸಿಕೊಳ್ಳುವ ಮಹಾನ್ ಪ್ರಯತ್ನದ ಒಂದು ಅನಿವಾರ್ಯ ಅಂಗ ಇದು.

ಬರೀ ಕಥೆ ಕಾದಂಬರಿ ಅಲ್ಲ; ಒಂದು ದೀರ್ಘವಾದ ಕಥೆ ಕೂಡ ಕಾದಂಬರಿ ಅಲ್ಲ. ಪಾಶ್ಚಿಮಾತ್ಯ ವಿಮರ್ಶೆಯಲ್ಲಿ ಜಾರ್ಜ್ ಲುಕಾಚ್ಸ್, ಸಾರ್ತ್ರ್, ಗೋಲ್ದ್‌ಮನ್, ಹೆಗೆಲ್‌ರು ಈ ಸಮಸ್ಯೆಯನ್ನು ವಿಶ್ಲೇಷಿಸಿರುವ ರೀತಿ ಈ ಬಗ್ಗೆ ಒಂದು ಮಹತ್ವದ ಚರ್ಚೆಗೆ ಪ್ರಾರಂಭದ ನೆಲೆಯನ್ನೂ ಒದಗಿಸುತ್ತದೆ. ಇವರ ತಾತ್ವಿಕ ಚರ್ಚೆಯಲ್ಲಿ ಒಂದು ಸಾಮಾನ್ಯ ಅಂಶ ಇದೆ. ಅದನ್ನು ಹೀಗೆ ಸಂಗ್ರಹಿಸಬಹುದು: ಸಾಂಪ್ರದಾಯಿಕ ಕಥೆಯಲ್ಲಿ ಸಮಾಜದ ಜೊತೆಗೆ ಸಾವಯವ ಬಿರುಕು (ಆರ್ಗಾನಿಕ್ ಬ್ರೇಕ್ ಎಂಬರ್ಥದಲ್ಲಿ) ಇರುವುದಿಲ್ಲ. ಕಾದಂಬರಿ ಹುಟ್ಟಿಕೊಳ್ಳುವುದೇ ಈ ಸಾವಯವ ಬಿರುಕಿನ ಮೂಲ ನೆಲೆಯಲ್ಲಿ. ಕಾದಂಬರಿ ಪ್ರಕಾರದ ಒಳಗೇ ನಿರೂಪಣಾ ಪ್ರಜ್ಞೆ ಮತ್ತು ಸಮಾಜದ ನಡುವೆ ಒಂದು ಮೂಲಭೂತ ಸಾವಯವ ಛಿದ್ರೀಕರಣ ಇರುತ್ತದೆ. ಎಲ್ಲೋ ನಿರೂಪಣಾ ಪ್ರಜ್ಞೆ ಸಮಾಜದ ಸಮಷ್ಟಿ ಸ್ಥಿತಿಯಿಂದ ಸಿಡಿದು ದೂರ ನಿಂತಿರುತ್ತದೆ. ಜಾನಪದ ಕಥೆಯನ್ನೋ, ಸಾಂಪ್ರದಾಯಕ ಕಥನವನ್ನೋ ತೆಗೆದುಕೊಳ್ಳೋಣ. ಅಲ್ಲಿ ನಿರೂಪಣಾ ಪ್ರಜ್ಞೆ ಮತ್ತು ಕಥನ ಪರಿಕರಗಳ ನಡುವೆ ಒಂದು ಬಗೆಯ ಅಖಂಡ ಸಂಬಂಧವಿರುತ್ತದೆ. ನಿರೂಪಣಾ ಪ್ರಜ್ಞೆಗೆ ಜಾನಪದ ಮತ್ತಿತರ ಸಾಂಪ್ರದಾಯಕ ಕಥನಗಳಲ್ಲಿ ಮೂಲತನ್ಮಯ ಸ್ಥಿತಿ ಇರುತ್ತದೆ.

ಆದರೆ ಕಾದಂಬರಿಯ ಹುಟ್ಟು ಎಲ್ಲಿದೆ ಅಂದರೆ ನಿರೂಪಣಾ ಪ್ರಜ್ಞೆಗೆ ಈ ರೀತಿಯ ತನ್ಮಯತೆ ಸಾಧ್ಯವಿಲ್ಲದ ಸ್ಥಿತಿಯಲ್ಲಿ. ಸಾಂಪ್ರದಾಯಕ ಕಥನದಲ್ಲಿ ಕಥಾಕೃತಿ ಎನ್ನುವುದು ಸೃಷ್ಟಿಯಾಗುವುದೇ ಅಖಂಡತೆಯ ನೆಲೆಯಲ್ಲಿ, ಕಾದಂಬರಿ ರೂಪಗೊಳ್ಳುವುದೇ ಇದಕ್ಕೆ ಪೂರ್ಣ ವಿರುದ್ಧವಾದ ಸ್ಥಿತಿಯಲ್ಲಿ.

ಇದನ್ನೇ ಪಾಶ್ಚಿಮಾತ್ಯ ವಿಮರ್ಶೆ ಹೀಗೆ ಹೇಳುತ್ತದೆ: ಬಂಡವಾಳಶಾಹಿ ನಾಗರಿಕತೆಯ ಉಗಮದ ಜೊತೆಗೆ ಕಾದಂಬರಿಯ ಉಗಮವೂ ಆಗುತ್ತದೆ. ಹೊಸ ಮಧ್ಯಮ ವರ್ಗವೊಂದು ಹುಟ್ಟುತ್ತದೆ. ಆ ಮಧ್ಯಮ ವರ್ಗದ ‘ಮಹಾಕಾವ್ಯ’ವೇ ಕಾದಂಬರಿ. (ಹೆಗೆಲ್‌ನ ವ್ಯಾಖ್ಯೆ ಇದು.) ಆದರೆ, ಈ ಹೊಸ ‘ಮಹಾಕಾವ್ಯ’ಕ್ಕೂ ಹಿಂದಿನ ಕಥನಕ್ಕೂ ಎಂಥ ವ್ಯತ್ಯಾಸವಿದೆ! ‘ದೇವರಿಲ್ಲದ ಜಗತ್ತಿನ ಮಹಾಕಾವ್ಯ’ ಇದು ಎಂದು ಲುಕಾಚ್ಸ್ ಹೇಳುವ ಮಾತಿನಲ್ಲಿ ಈ ರುದ್ರ ವ್ಯತ್ಯಾಸದ ಸ್ವರೂಪ ಸ್ಪಷ್ಟವಾಗಿ ಮೂಡುತ್ತದೆ. ಆಮೇಲೆ, ಇನ್ನೊಂದು ಮಾತನ್ನೂ ಕಾದಂಬರಿ ಮತ್ತು ಸಾಂಪ್ರದಾಯಕ ಕಥನಗಳ ಬಗ್ಗೆ ಸಾರ್ತ್ರ್ ಹೇಳುತ್ತಾನೆ. ಸಾಂಪ್ರದಾಯಕ ಕಥನಗಳಲ್ಲಿ ಗದ್ಯಕ್ಕಿರುವ ಗುಣ ಕಾಲಾತೀತವಾದದ್ದು. ಇಲ್ಲವೇ ಭೂತಕ್ಕೆ ಹೊಂದಿಕೊಂಡಂಥದ್ದು; ಇದು ಸಾಂಪ್ರದಾಯಕ ಕಥನದ ಗದ್ಯವನ್ನು ಓದುತ್ತಿದ್ದರೆ ತಕ್ಷಣ ಅನುಭವಕ್ಕೆ ಬರುವಂಥದು. ‘ಕಲಾವತಿ ಪರಿಣಯ’ದ ಯಾವುದೇ ಭಾಗ ತೆಗೆದು ಓದಿದರೂ ಈ ಮಾತು ಸ್ಪಷ್ಟವಾಗುತ್ತದೆ. ಹೀಗೆ ಕಾಲಾತೀತ ಅಥವಾ ಭೂತ ಅಥವಾ ವರ್ತಮಾನ ಸಾಂಪ್ರದಾಯಕ ಗದ್ಯವನ್ನು ಹಿಡಿತದಲ್ಲಿಟ್ಟಿರುತ್ತದೆ. ಪಾಶ್ಚಿಮಾತ್ಯ ಕಾದಂಬರೀ ಮೀಮಾಂಸೆಯಲ್ಲಿ ನಮಗೆ ಪ್ರಸ್ತುತವಾದ ಅಂಶ ಬಹುಶಃ ಇದೊಂದೇ.

ಇನ್ನೊಂದು ಮುಖ್ಯ ವ್ಯತ್ಯಾಸವನ್ನು ನಾವು ಸಾಂಪ್ರದಾಯಕ ಕಥನ ಮತ್ತು ಕಾದಂಬರಿಯ ನಡುವೆ ಕಾಣಲು ಸಾಧ್ಯ. ಅದು ಪಾತ್ರಗಳ ವರ್ತನೆಯ ಹಿಂದಿನ ಕಾರಣವನ್ನು ಹುಡುಕುವಿಕೆಯ ಕುರಿತದ್ದು. ಇವನು ಯಾಕೆ ಹೀಗೆ? ಯಾಕೆ ಹೀಗೆ ವರ್ತಿಸಿದ? ಈ ಕಾದಂಬರಿ ಪಾತ್ರನಿರ್ಮಾಣಕ್ಕೆ , ವರ್ತನೆಗೆ ನಿರ್ದಿಷ್ಟ ಕಾರಣಗಳನ್ನೂ ಹುಡುಕುವ ಕೆಲಸ ಮಾಡುತ್ತದೆ. ಈ ನೆಲೆಯಲ್ಲಿ ಕಾದಂಬರಿ ತನ್ನ ತಾತ್ವಿಕತೆಯನ್ನು ಕಂಡುಕೊಳ್ಳುವುದು ಕೂಡಾ. ವರ್ತನೆಗಳ ಸಾಮಾಜಿಕ ಮೂಲವನ್ನು ಹುಡುಕುವುದೇ ಕಾದಂಬರಿಯ ಮುಖ್ಯ ಲಕ್ಷಣ.

ಕಾದಂಬರಿಯ ಇನ್ನೊಂದು ಗುಣ ಎಂದರೆ ‘ಅವನತಮುಖೀ ಪ್ರಪಂಚದಲ್ಲಿ ಅಧಿಕೃತ ಮೌಲ್ಯಗಳ ಹುಡುಕಾಟ’. ಗೋಲ್ಡ್‌ಮನ್‌ನ ಮಾತು ಇದು. ಇವುಗಳೆಲ್ಲದರ ಹಿಂದೆ ಇರುವ ತಾತ್ವಿಕ ಚರ್ಚೆಯನ್ನು ಹೀಗೆ ಸಂಗ್ರಹಿಸಬಹುದು. ‘ಇಂಡಿವಿಜುವಲಿಸಂ’ (ವ್ಯಕ್ತಿ ವಿಶಿಷ್ಟ ಸಿದ್ಧಾಂತ)ನ ಉಗಮದ ಜೊತೆಗೆ ಕಾದಂಬರಿಯೂ ಹುಟ್ಟಿಕೊಳ್ಳುತ್ತದೆ. ಆಧುನಿಕ ವ್ಯಕ್ತಿಯೊಬ್ಬ, ಸಮಾಜದ ಜೊತೆಗೆ ಮೂಲಭೂತ ಸಂಘರ್ಷವಿರುವ ವ್ಯಕ್ತಿಯೊಬ್ಬ ಹುಟ್ಟಿಕೊಳ್ಳುತ್ತಾನೆ. ಕಾದಂಬರಿಯ ಹುಟ್ಟು ಇಲ್ಲಿಯೇ. ಇದು ಪಾಶ್ಚಿಮಾತ್ಯ ವಿಮರ್ಶೆ ಮತ್ತು ಪಾಶ್ಚಿಮಾತ್ಯ ಕಾದಂಬರಿಗಳ ಕಥೆ.

ಆದರೆ ಮೂರನೇ ಜಗತ್ತಿನ ಕಾದಂಬರಿಗೆ ಸಂಬಂಧಿಸಿದಂತೆ ಸನ್ನಿವೇಶ ಕೊಂಚ ಬೇರಾಗುತ್ತದೆ. ಇಲ್ಲಿ ಕಾದಂಬರಿಯ ಉಗಮ ಇರುವುದು ವಸಾಹತೀಕರಣದ ಜೊತೆಗೆ, ಅಥವಾ ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ ಪರಕೀಯ ಯಜಮಾನ ಸಂಸ್ಕೃತಿ ಮತ್ತು ದೇಸೀ ಸಂಸ್ಕೃತಿಗಳ ನಡುವಿನ ಮುಖಾಮುಖಿಯಲ್ಲಿ ಕಾದಂಬರಿ ಹುಟ್ಟುತ್ತದೆ. ದೇಸಿ ಮಧ್ಯಮವರ್ಗ ರೂಪುಗೊಂಡು ತನಗೊಂದು ಆಧುನಿಕ ಸಾಂಸ್ಕೃತಿಕ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳುವಾಗ ಉಂಟಾಗುವ ದ್ವಂದ್ವದಲ್ಲಿ ಕಾದಂಬರಿ ಹುಟ್ಟುತ್ತದೆ. ಪರಕೀಯ ಯಜಮಾನ ಸಂಸ್ಕೃತಿ ದೇಸಿ ಮಧ್ಯಮವರ್ಗದ ಒಳಗೇ ಹೊಕ್ಕು ಭದ್ರವಾಗಿ ಕೂತಿದೆ. ಅದು ಹಳೆಯ ದೇಸಿ ಜೊತೆಗೆ ಮುಖಾಮುಖಿಯಾಗಿ ದೇಸಿಯನ್ನು ಟೀಕಿಸುವ, ವಿಮರ್ಶಿಸುವ. ಅದನ್ನೂ ತನ್ನ ಜೊತೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತದೆ. ದೇಸಿ ಕೂಡಾ ತನಗೆ ಸಾಧ್ಯವಾದಷ್ಟು ಪ್ರತಿಭಟಣೆಯನ್ನು, ಪರಕೀಯ ಯಜಮಾನನನ್ನು ಟೀಕಿಸುವ ಕೆಲಸವನ್ನೂ ಮಾಡುತ್ತದೆ. ಭಾರತದ ಅನೇಕ ಭಾಷೆಗಳ ಮೊದಲ ಕಾದಂಬರಿಗಳ ಮೂಲ ಅನುಭವ ಇದು. ಹೀಗಾಗಿ ಇಲ್ಲಿ ಒಂದು ಇಡೀ ಜನಾಂಗದ ಅನುಭವದ ಆತ್ಮವಿಮರ್ಶೆ ಪ್ರಧಾನವಾಗಿ ಕಾಣುತ್ತದೆ. ಹೀಗಾಗಿ, ಇದರ ತಾರ್ಕಿಕ ಪರಿಣಾಮ ಎಂಬಂತೆ ಕಾದಂಬರಿ ಘಟನಾಪ್ರಧಾನವಾಗಿ ಬಿಡುತ್ತದೆ. ಸಾಮಾಜಿಕ ಗುಂಪುಗಳ ಅನುಭವ ಮುಖ್ಯ ನೆಲೆಗೆ ಬಂದು ನಿಂತು ಕಾದಂಬರಿಯನ್ನು ನಿಯಂತ್ರಿಸುತ್ತದೆ. (ಚಾರ್ಲ್ಸ್ ಲಾಸನ್ ಎಂಬ ವಿಮರ್ಶಕ ಇದನ್ನು ಚರ್ಚಿಸುತ್ತಾನೆ).

ನನ್ನ ಮುಂದಿನ ಮಾತುಗಳ, ವಿಶ್ಲೇಷಣಾ ಕ್ರಮಗಳ ಹಿಂದೆ ಕೆಲಸ ಮಾಡಿರುವ ಚೌಕಟ್ಟು ಮೇಲಿನದೇ. ಅಂದರೆ ಮುಖ್ಯವಾಗಿ ಇಲ್ಲಿ ನಮ್ಮ ಕಾದಂಬರಿಗಳು ಕೊಡುವ ಅನುಭವದ ಒಳಗಿನಿಂದಲೇ ವಿಮರ್ಶಾಸೂತ್ರವೊಂದನ್ನು ರೂಪಿಸುವ ಪ್ರಯತ್ನ ಮಾಡಿದ್ದೇನೆ.

ಆದರ್ಶ ಮತ್ತು ವಾಸ್ತವಗಳ ನಡುವಿನ ಸಂಬಂಧವನ್ನು ರೂಪಿಸುವುದು ಕಾದಂಬರೀ ರೂಪ. ಇಲ್ಲಿ ರೂಪ ಎನ್ನುವುದು ಕೃತಿಯ ವಸ್ತು, ಅದರ ತತ್ವ ಮತ್ತು ಜೀವನದರ್ಶನಗಳ ನಡುವಿನ ಅಂತರ್‌ಪ್ರಕ್ರಿಯೆಯಿಂದ ಸಿದ್ಧವಾಗುತ್ತದೆ.

ಉದಾಹರಣೆಗೆ ‘ಮಾಡಿದ್ದುಣ್ಣೋ ಮಹರಾಯ’ವನ್ನೆ ತೆಗೆದುಕೊಳ್ಳೋಣ. ಇದು ಮೂಲತಃ ಒಂದು ಸಾಂಪ್ರದಾಯಕ ಕಥನದ ಚೌಕಟ್ಟಿನೊಳಗೆ ನಿಂತು ಕಾದಂಬರಿಯನ್ನು ಒಳಗೊಳ್ಳುವ, ಕಾದಂಬರಿಯನ್ನು ಹೀರಿಕೊಳ್ಳಲು ಮಾಡಿರುವ ಪ್ರಯತ್ನ. ಸಾಂಪ್ರದಾಯಕ ಕಥನಗಳಲ್ಲಿ ಸಾಮಾನ್ಯ ತಂತ್ರವಾಗಿರುವ ಕತೆಯೊಳಗೊಂದು ಕತೆಯ ಸ್ವರೂಪ ಇದಕ್ಕಿದೆ. ಈ ಅಂಶ ಪುಟ್ಟಣ್ಣನವರಿಗೂ ಗೊತ್ತಿದೆ. ಅದಕ್ಕಾಗಿಯೇ ಅವರು ಈ ಕೃತಿಯ ಮುನ್ನುಡಿಯಲ್ಲಿ ಆ ಅಂಶವನ್ನು ಪ್ರಸ್ತಾಪಿಸುತ್ತಾರೆ. ಮೇಲುನೋಟಕ್ಕೆ ಅತ್ತಿತ್ತ ಚದುರಿಹೋದಂತೆ ಕಾಣುವ ಘಟನೆಗಳು ಕೂಡಾ ಮುಖ್ಯ ಪ್ಲಾಟ್‌ಗೆ ಸಂಬಂಧಿಸಿದ್ದೇ ಎಂದು ಬರೆಯುತ್ತಾರೆ. ಕಾದಂಬರಿಗೆ ಇರಲೇಬೇಕಾದ ಐಕ್ಯತೆಯ ಬಗ್ಗೆ ಗಮನವಿದ್ದೂ ‘ಸರಗತೆ’ಯ ರೂಪದ ಕಾರಣಕ್ಕಾಗಿ ಅದು ಸಾಧ್ಯವಾಗದೇ ಇರುವ ಕೃತಿ ಇದು.

ಈ ಹಿನ್ನೆಲೆಯಲ್ಲಿ ನನಗೆ ‘ಮಾಡಿದ್ದುಣ್ಣೊ ಮಹರಾಯ’ಕ್ಕಿಂತ ಹೆಚ್ಚು ಆಸಕ್ತಿ ಮೂಡಿಸಿರುವ ಕೃತಿ ’ಮುಸುಗ ತೆಗೆಯೇ ಮಾಯಾಂಗನೆ’. ಕನ್ನಡ ಕಾದಂಬರಿ ತನ್ನ ಭ್ರೂಣ ರೂಪದಿಂದ ಬೇರೆ ಬೇರೆ ರೂಪಗಳನ್ನು, ಹಂತಗಳನ್ನು ದಾಟಿ ಪ್ರಬುದ್ಧ ರೂಪವಾಗಿ ಕಾರಂತರಲ್ಲಿ, ಪುಟ್ಟಪ್ಪನವರಲ್ಲಿ ಫಲಿಸಿತು. ಆ ದೃಷ್ಟಿಯಿಂದ ’ಮುಸುಗ ತೆಗೆಯೇ ಮಾಯಾಂಗನೆ’ ಕಾದಂಬರಿ ಆಗುವ ಕಡೆಗಿನ ಒಂದು ದಾಪುಗಾಲು.

’ಮುಸುಗ ತೆಗೆಯೇ ಮಾಯಾಂಗನೆ’ಯಲ್ಲಿ ಪುಟ್ಟಣ್ಣನವರು ರಾಜತ್ವದ ನ್ಯಾಯಬದ್ಧತೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ. ಅದು ಬದುಕುತ್ತದೆಯೇ, ಉಳಿಯುತ್ತದೆಯೇ ಎಂದು ಪರೀಕ್ಷೆ ಮಾಡುತ್ತಿದ್ದಾರೆ. ವಾಚ್ಯದಲ್ಲಿ ಅದರ ಬಗ್ಗೆ ದೊಡ್ಡ ದೊಡ್ದ ಗೌರವವಿದ್ದಂತೆ ಕಂಡರೂ, ಕೃತಿಯ ಸಂವಿಧಾನದಲ್ಲಿ ಅದನ್ನು ನಿರಾಕರಿಸುತ್ತಾರೆ. ಅದು ಉಳಿಯುವುದಿಲ್ಲ ಅಂತ ಅವರಿಗೆ ಆಳವಾಗಿ ಅನ್ನಿಸಿಬಿಟ್ಟಿದೆ. ಮತ್ತು ಈ ಮೂಲಕ ಬಂಡವಾಳಶಾಹಿಯ ಉಗಮಕ್ಕೆ, ಆ ನಾಗರಿಕತೆಗೆ ಪ್ರತಿಕ್ರಿಯಿಸುತ್ತಿದ್ದಾರೆ. ಇದು ಮೇಲ್ನೋಟಕ್ಕೆ ಪತ್ತೇದಾರಿ ಕಾದಂಬರಿ. ಉದ್ದಕ್ಕೂ ನಿರೂಪಕ ಮಾತಾಡುತ್ತಾ, ಟೀಕಿಸುತ್ತಾ ಬರುತ್ತಾನೆ. ನಿರೂಪಕನ ಮನಸ್ಸಿನಲ್ಲಿ ಆಗಲೇ ಸಮಾಜದಲ್ಲಿ ಆಗುತ್ತಿರುವ ಸ್ಥಿತ್ಯಂತರಗಳ ಬಗೆಗೆ ಒಂದು ಸ್ಪಷ್ಟವಾದ ಚಿತ್ರ ಬಂದುಬಿಟ್ಟಿದೆ. ಕಾದಂಬರಿಕಾರನ ಮನಸ್ಸು ಮತ್ತು ಮೌಲ್ಯಗಳು ಹಳೆಯ ಕಾಲದವು. ಹೊಸ ಯುಗ – ಬಂಡವಾಳಶಾಹಿಯುಗ – ಲೇಖಕರ ತೀವ್ರ ಟೀಕೆಗೆ ಗುರಿಯಾಗಿದೆ. ಕಾದಂಬರಿಯ ಉದ್ದಕ್ಕೂ ಪುನರಾವರ್ತನೆಯಾಗುವ ಅಂಶ ಇದು. ಒಂದು ಪುಟ್ಟ ಟೀಕೆಯನ್ನು ಇಲ್ಲಿ ಉದಾಹರಿಸುತ್ತೇನೆ. “ಪರದೇಶಿಗಳು, ದಿಕ್ಕುಗೆಟ್ಟವರು ಅಂದರೆ ಅವರನ್ನು ಆದರಿಸುವ ಧರ್ಮಗುಣವು ನಮ್ಮ ಜನರಲ್ಲಿ ಬಲವಾಗಿಯೇ ಇತ್ತು. ಬಂದ ಅತಿಥಿಗಳನ್ನು ‘ಏನಾದರೂ ಕೆಲಸಮಾಡು, ದುಡಿದು ಸಂಪಾದನೆ ಮಾಡು, ಆಚೆಗೆ ನಡೆ, ನಿನ್ನಂಥಹ ಮುಟ್ಟಿಲಿಗಳಿಂದಲೇ ನಮ್ಮ ದೇಶವು ಹಾಳಾಯಿತೆಂದು’ ಅಟ್ಟಿ ಹರಿಯುವ ಕೋಣೆಮನೆ ಶೂರರು, ದೇಶಾಭಿಮಾನಿಗಳು ಆಗ ಇನ್ನೂ ಹುಟ್ಟಿರಲಿಲ್ಲ.” ಈ ಮಾತನ್ನೂ ಗಮನಿಸಿ: “ಧರ್ಮಗುಣವು ಹಿಂದೂಸ್ಥಾನವನ್ನು ಇನ್ನೂ ಬಿಟ್ಟಿರಲಿಲ್ಲ”.

ಈ ಹಿನ್ನೆಲೆಯಲ್ಲಿ ಶಿವರಾಮಕಾರಂತರಿಗೂ ಪುಟ್ಟಣ್ಣನವರಿಗೂ ಇರುವ ವ್ಯತ್ಯಾಸವನ್ನು ಗಮನಿಸಿ. ಬಂಡವಾಳಶಾಹಿ ನಾಗರಿಕತೆಯ ಸತ್ವವೇ ದುಡಿಮೆಯ ಪರಮೋಚ್ಚತೆ. ಅದು ಬೆಳೆಯುವುದೇ ನಿರ್ದಯ ದಕ್ಷತೆಯ ಆಧಾರದ ಮೇಲೆ. ಕಾರಂತರ ಕೃತಿಗಳ ಮೌಲ್ಯ ನಿಂತ್ತಿರುವುದೇ ಪ್ರತಿಯೊಬ್ಬ ವ್ಯಕ್ತಿಯೂ ಪ್ರಾಮಾಣಿಕವಾಗಿ, ದಕ್ಷತೆಯಿಮ್ದ ದುಡಿಯಬೇಕು ಎಂಬ ನೆಲೆಯಲ್ಲಿ. ಹೀಗಾಗಿ ಕಾರಂತ ಮತ್ತು ಪುಟ್ಟಣ್ಣನವರಿಬ್ಬರೂ ಎರಡು ಬೇರೆ ಬೇರೆ ಯುಗಗಲ, ಮೌಲ್ಯಗಳ ಪ್ರತಿನಿಧಿಗಳು.

ಆದ್ದರಿಂದಲೇ, ‘ಮುಸುಗ ತೆಗೆಯೇ ಮಾಯಾಂಗನೆ’ಯಲ್ಲಿ ಎರಡು ಲೋಕಗಳ ಸಹ-ಅಸ್ತಿತ್ವವನ್ನು ಕಾಣುತ್ತೇವೆ. ಹಳೆಯ ಲೋಕ ಕಥೆಯಲ್ಲಿ, ಘಟನೆಗಳಲ್ಲಿ, ವಿವರಗಳಲ್ಲಿ ಇದ್ದರೆ, ಹೊಸಲೋಕ ಎನ್ನುವುದು ನಿರೂಪಕನ ಪ್ರಜ್ಞೆಯಲ್ಲಿ ದಟ್ಟವಾಗಿ ನಿಂತಿದೆ. ಪದಾರ್ಥ ಹಳೆಯ ಲೋಕದ್ದು, ಪ್ರಜ್ಞೆ ಹೊಸಲೋಕದ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡಿರುವಂಥದ್ದು. ವಾಸ್ತವ ಮತ್ತು ಆದರ್ಶಗಳ ನಡುವಿನ ತೀಕ್ಷ್ಣ ಸಂಘರ್ಷವನ್ನು ಅದು ಗ್ರಹಿಸಿರುವ ಕಾರಣಕ್ಕಾಗಿಯೇ ಕಾದಂಬರಿ ಅಗೋಚರದ ಕಡೆಗೆ ದೊಡ್ದ ಹೆಜ್ಜೆಯನ್ನು ಹಾಕಿದೆ. ಈ ಕೃತಿಯಲ್ಲಿ ಕಡೆಗೆ ಒಂದು ಥರ ಶುಭಮಂಗಳದ ಪ್ರಸ್ತಾಪ ಬಂದು ಬಿಡುತ್ತದೆ. ಎಲ್ಲವೂ ಸರಿ ಹೋಯಿತು, ಇನ್ನೇನು ಯೋಚನೆ ಮಾಡಬೇಕಿಲ್ಲ ಅನ್ನುವ ಸ್ಥಿತಿ ಬರುತ್ತದೆ. ಪ್ರಭುಗಳು ಕಥಾನಾಯಕನನ್ನು ಕರೆದು ಸತ್ಕರಿಸುತ್ತಾರೆ. ಆಗ ಪ್ರಭುಗಳು ಹೇಳುವ ಮಾತು ಇಡೀ ಕೃತಿಯನ್ನು ಹೊಸ ಎತ್ತರಕ್ಕೆ ಒಯ್ದುಬಿಡುತ್ತದೆ. ಈ ಹಿಂದೆ ಪ್ರಸ್ತಾಪಿಸಿದ ಹಾಗೆ ಈ ಮಾತಿನಲ್ಲಿ ಇಡೀ ವ್ಯವಸ್ಥೆಯ ಯೋಗ್ಯತೆ, ನ್ಯಾಯಬದ್ಧತೆ ಪರೀಕ್ಷೆಯಾಗಿ ಬಿಡುತ್ತದೆ.

ಪ್ರಭುಗಳು ಹೇಳುತ್ತಾರೆ: “ಇಂಥ ಘಟಕರೂ, ಸಾಹಸಿಗಳೂ ನಮಗೆ ದೊರೆಯುವುದು ಅಪೂರ್ವ. ಇಂಥವರು ತಾವಾಗಿಯೇ ನಮ್ಮಲ್ಲಿಗೆ ಬರುವುದಿಲ್ಲ. (ಯಾಕೆಂದರೆ ಈ ಮಾತು ಕಾದಂಬರಿಯಲ್ಲಿ ಮತ್ತೆ ಮತ್ತೆ ಪುನರಾವರ್ತನೆಯಾಗುವುದು. ಮಹಾರಾಜರ ಸುತ್ತ ನಿಜವಾದ ಪ್ರಾಮಾಣಿಕರು ಶ್ರದ್ಧಾವಂತರು ಯಾರೂ ಇರುವುದಿಲ್ಲ.) ಒಂದು ವೇಳೆ ಯಾರಾದರೂ ಹಠಾತ್ತಾಗಿ ಬಂದರೂ, ನಮ್ಮ ಸುತ್ತಮುತ್ತ ಓಡಾಡಿಕೊಂಡು ನಮ್ಮನ್ನು ಸ್ತೋತ್ರಮಾಡುತ್ತಾ, ಅರಮನೆಯಿಂದ ಬೇಕಾದ್ದನ್ನು ದೋಚಿಕೊಂಡು ತಮ್ಮ ಹೊಟ್ಟೆ ತುಂಬಿಕೊಳ್ಳುತ್ತಾ, ಸಮಯದಲ್ಲಿ ನಮಗೇ ಎರಡು ಬಗೆಯುತ್ತಾ ಇರುವ ಪರಮನೀಚರು, ಅಂಥವನು ನಮ್ಮ ದೃಷ್ಟಿಗೆ ಬೀಳದಂತೆಯೇ ಮಾಡಿ ನಮ್ಮ ಈ ಲೋಕವೆಲ್ಲಾ ಈ ಖೂಳರೇ ಎನ್ನುವ ಹಾಗೆ, ಹಾಗೂ ಅರಮನೆ ಎನ್ನುವುದು ಕಾರಾಗೃಹವೆನ್ನುವ ಹಾಗೆ ಮಾಡಿಬಿಟ್ಟಿದ್ದಾರೆ. ದೊರೆತನ ಮಾಡುವವನಿಗೆ ದೈವ ಕೃಪೆಯಿಂದ ನಿಮ್ಮಂತಹ ಸತ್‌ಪುರುಷರ ಸಹವಾಸ ದೊರೆಯಬೇಕೇ ಹೊರತು ಮತ್ತೆ ಬೇರೆ ಮೋಕ್ಷವೇ ಇಲ್ಲ”.

ಪ್ರಭುಗಳ ಮಾತಿನಲ್ಲಿರುವ ನಿರಾಶಾವಾದವನ್ನು ಗಮನಿಸಿ.

ಈ ಕೃತ್ರಿಮ ಘಟನೆಗಳು ಏನು ಹೇಳುತ್ತಾ ಇವೆ? ಅವುಗಳ ತರ್ಕ ಏನು ಹೇಳುತ್ತಾ ಇದೆ? ಮಹಾರಾಜರ ಆಡಳಿತದ ಆದರ್ಶ ಅದು. ಪುಟ್ಟಣ್ಣನವರು ಬೇರು ಬಿಟ್ಟಿರುವುದೂ ಆ ಜಗತ್ತಿನ ಒಳಗಡೆಯೇ. ಆದರೆ ವಾಸ್ತವ ತರ್ಕ ಬೇರೆ. ಮಹಾರಾಜರ ಪ್ರಭುತ್ವ ಎಷ್ಟೇ ಘನವಾದ ಆದರ್ಶದ ಮೇಲೆ ನಿಂತಿದ್ದರೂ ಅದು ಬದುಕೋದಿಲ್ಲ. ಆದ್ದರಿಂದ, ಇಲ್ಲಿ ಅದರ ಸೋಲು ಅನಿವಾರ್ಯ ಎಂಬ ಧ್ವನಿಯನ್ನು ಪುಟ್ಟಣ್ಣನವರು ಮೂಡಿಸುತ್ತಾರೆ.

ಅಂದರೆ ಈ ಕಾದಂಬರಿ ನಿಂತಿರುವುದು ನಾಶವಾಗುತ್ತಿರುವ ವ್ಯವಸ್ಥೆ, ಮೌಲ್ಯಗಳ ನೆಲದಲ್ಲಿ. ನಾಶವಾಗುತ್ತಿರುವ ಆದರ್ಶದ ಮೇಲೆ ಈ ಕಾದಂಬರಿ ನಿಂತಿದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

‘ಇಂದಿರಾಬಾಯಿ’ಗೂ ’ಮುಸುಗ ತೆಗೆಯೇ ಮಾಯಾಂಗನೆ’ ಕೃತಿಗೂ ಈ ದೃಷ್ಟಿಯಿಂದ ಇರುವ ವ್ಯತ್ಯಾಸ ತುಂಬ ಕುತೂಹಲಕಾರಿ. ‘ಇಂದಿರಾಬಾಯಿ’ಯಲ್ಲಿ ಇರುವಂಥ ಆದರ್ಶ ಯಾವುದೆಂದರೆ, ಕಾದಂಬರಿಯಲ್ಲೇ ನಿಜವಾಗಿಬಿಡುವ ಆದರ್ಶ ಅದು. ‘ಇಂದಿರಾಬಾಯಿ’ ಕಾದಂಬರಿಯಲ್ಲಿ ವಾಸ್ತವ ಮತ್ತು ಆದರ್ಶಗಳೆರಡೂ ಬೆರೆತು ಹೋಗುತ್ತವೆ. ಇದು ನಿಂತಿರುವುದು ಕೃತಿಯಲ್ಲೇ ಸಾಕ್ಷಾತ್ಕಾರಗೊಳ್ಳುವ ಆದರ್ಶದ ಮೇಲೆ. ಆ ಕಾದಂಬರಿಯ ಬಂಧದಲ್ಲಿ ಈ ಅಂಶ ಸ್ಪಷ್ಟವಾಗಿ ಮೂಡಿದೆ.

ಈ ಕಾದಂಬರಿಯಲ್ಲಿ ಪರಸ್ಪರ ವಿರೋಧೀ ಶಕ್ತಿಗಳ ನಡುವೆ ಪೂರ್ಣ ಪ್ರಮಾಣದ ಘರ್ಷಣೆ ಇಲ್ಲ. ಇಂದಿರಾಬಾಯಿ ನಮಗೆ ಗೊತ್ತಿರುವ ಪೂರಾ ಪ್ಯಾಸೀವ್ ಪಾತ್ರ. ಅಲ್ಲಿ ಭಾಸ್ಕರರಾಯ ಮತ್ತು ಆತನ ವಿರೋಧೀ ಮೌಲ್ಯಗಳ ನಡುವೆ ಪೂರ್ಣ ಪ್ರಮಾಣದ ಸಂಘರ್ಷವೇ ಇಲ್ಲ. ನಾಟಕೀಯ ಮುಖಾಮುಖಿಯೇ ಇಲ್ಲ. ಕಲಾತ್ಮಕ ಬೆಳವಣಿಗೆಯ ದೃಷ್ಟಿಯಿಂದ ಕೂಡಾ ಅನಿವಾರ್ಯವಾಗಿದ್ದ ಪ್ರಸಂಗ ಅದು. ಆದರೆ ಅದು ಘಟಿಸುವುದೇ ಇಲ್ಲ. ಯಾಕೆ ಹೀಗೆ? ಈ ಪ್ರಶ್ನೆ ಈ ಕಾದಂಬರಿಯ ಅತ್ಯಂತ ಮುಖ್ಯ ಪ್ರಶ್ನೆ ಎಂದು ನಾನು ಭಾವಿಸಿದ್ದೇನೆ. ಇಲ್ಲಿ ಮೊದಲಿನಿಂದಲೇ ಈ ಘರ್ಷಣೆ ಪರಿಹಾರವಾಗಿ ಬಿಟ್ಟಿದೆ. ಮೊದಲಿನಿಂದಲೂ ಭೀಮರಾಯ ಮತ್ತು ಆತನ ಹೆಂಡತಿ ಖಳರೇ. ಅವರ ವ್ಯಕ್ತಿತ್ವದಲ್ಲಿ ಯಾವ ಒಂದು ಒಳ್ಳೆಯ ಅಂಶವೂ ಇಲ್ಲ. ತಮ್ಮ ಪಾಪದ ಭಾರಕ್ಕೆ ತಾವೇ ಕುಸಿಯುವ ಹಾಗೆ ಅವರು ಕಡೆಯಲ್ಲಿ ಸೋತು ಹೋಗುತ್ತಾರೆ.

ಹೀಗೆ ಕಾದಂಬರಿಯಲ್ಲಿ ಮೊದಲಿನಿಂದಲೂ ಒಂದು ರೀತಿಯ ಚಾರಿತ್ರಿಕ ಖಚಿತತೆಯನ್ನೂ ಆಶಾವಾದವನ್ನೂ ಕಾಣುತ್ತೇವೆ. ಚರಿತ್ರೆಯಲ್ಲಿ ಗೆದ್ದವರ ದನಿ ಅದು. ಪುಟ್ಟಣ್ಣನವರು ಚರಿತ್ರೆಯ ಈಚೆ, ಗುಲ್ವಾಡಿಯವರು ಆಚೆ ದಡದಲ್ಲಿ. ಇಡೀ ಕಾದಂಬರಿಯಲ್ಲಿ ಕಾಣುವ ಸುಭದ್ರ ದೃಷ್ಟಿಕೋನ ಆಶ್ಚರ್ಯಕರವಾದದ್ದು. ಇಲ್ಲಿ ಗಮನಿಸತಕ್ಕ ಸಂಗತಿ ಎಂದರೆ ಕಾದಂಬರಿಯ ಕಚ್ಚಾವಸ್ತುವಿಗೇ ಆ ರೀತಿಯ ತರ್ಕ ಇದೆ ಎಂಬುದು. ಭೀಮರಾವ್-ಅಂಬಾಬಾಯಿ ಯಾಕೆ ಜಯಗಳಿಸಲಿಲ್ಲ? ಚರಿತ್ರೆಯಲ್ಲೇ ಅವರಿಗೆ ಜಯ ಸಿಕ್ಕಲಿಲ್ಲ. ಸಾರಸ್ವತ ಬ್ರಾಹ್ಮಣ ಜಗತ್ತು ತನ್ನ ಚರಿತ್ರೆಯಲ್ಲಿ ಅಂಥವರನ್ನು ನಿರಾಕರಿಸಿ ಬಿಟ್ಟಿತು. ಚರಿತ್ರೆಯಲ್ಲಿ ಗೆದ್ದದ್ದೇ ಕಾದಂಬರಿಯಲ್ಲೂ ಗೆದ್ದಿದೆ. ವಾಸ್ತವ ಮತ್ತು ಆದರ್ಶಗಳು ಬೆರೆತುಹೋಗುತ್ತ ಆದರ್ಶ ಸಾಕ್ಷಾತ್ಕಾರಗೊಳ್ಳುವ ಸ್ಥಿತಿ ಅದು ಎನ್ನುವ ಮಾತಿನ ಅರ್ಥ ಇದೇ ಆಗಿದೆ. ಈ ಕಾರಣಕ್ಕಾಗಿ ಕಲಾತ್ಮಕವಾಗಿ ಸಮಶಕ್ತಿಯ ವಾತಾವರಣ ಇಲ್ಲ.

ಈ ಘಟ್ಟ ಮುಗಿದ ಮೇಲೆ ಕನ್ನಡದ ಯಾವ ಮುಖ್ಯ ಕಾದಂಬರಿಯಲ್ಲೂ ವಾಸ್ತವ – ಆದರ್ಶಗಳ ನಡುವಿನ ಸಂಘರ್ಷ ಪರಿಹಾರವಾಗುವುದಿಲ್ಲ. ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಚೋಮನದುಡಿ – ಹೀಗೆ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು.

ಯಾಕೆ ‘ಇಂದಿರಾಬಾಯಿ’ (‘ವಾಗ್ದೇವಿ’ಗೂ ಅನ್ವಯವಾಗುವ ಮಾತು ಇದು) ಕಾದಂಬರಿಯಲ್ಲಿ ಸಾಕ್ಷಾತ್ಕಾರಗೊಳ್ಳುವ ಆದರ್ಶವನ್ನು ಕಾಣುತ್ತೇವೆ? ವಾಸ್ತವದಲ್ಲೇ ಆದರ್ಶ ಫಲಿಸಿಬಿಡುತ್ತದಲ್ಲ, ಯಾಕೆ? ಕಾರಣ ಹುಡುಕಬೇಕಾದರೆ ನಾವು ಈ ಕಾದಂಬರಿಗಳನ್ನು ಸೃಷ್ಟಿಸಿದ ಸಾಮಾಜಿಕ ವರ್ಗದ ಅನುಭವಕ್ಕೆ, ಮನಸ್ಥಿತಿಗೆ ಹೋಗಬೇಕು.

ಕನ್ನಡದಲ್ಲಿ ಸಾಮಾಜಿಕ ಕಾದಂಬರಿ ಅನ್ನುವುದು ಹುಟ್ಟಿದ್ದು ಒಂದು ನಿರ್ದಿಷ್ಟ ಸಾಮಾಜಿಕ ಗುಂಪಿನ ಸ್ವ-ವಿಮರ್ಶೆಯಿಂದ. ಬ್ರಾಹ್ಮಣರ ಸ್ವ-ವಿಮರ್ಶೆಯಿಂದ. ಅದರಲ್ಲೂ ದಕ್ಷಿಣ ಕನ್ನಡದ ವಿಶೇಷ ಸಾಮಾಜಿಕ ಪರಿಸರ ಇಲ್ಲಿ ಮುಖ್ಯ. ಈ ವರ್ಗದ ಸಾಮಾಜಿಕ ಚಿಂತನೆಯ ತೀವ್ರ ರೂಪದ ಪರಿಣಾಮ ಅದು. ಒಂದು ರೀತಿಯ ಒಂದು ರೀತಿಯ ಉಗ್ರವಾದ ವಿಮರ್ಶೆಯನ್ನು, ಟೀಕೆಯನ್ನು ನಾವು ಕಾಣುತ್ತೇವೆ. ಈ ಉಗ್ರವಾದ ಸ್ವ-ವಿಮರ್ಶೆಗೆ, ಟೀಕೆಗೆ ಅವರು ತೆಗೆದುಕೊಂಡ ಭಾಷೆ ಪಶ್ಚಿಮದ್ದು. ಅವರ ಟೀಕೆಗಳು ಮೂರ್ತರೂಪದಲ್ಲಿ ಫಲಿಸಿಯೂ ಬಿಟ್ಟವು. ಈ ಸಾಮಾಜಿಕ ವರ್ಗದ ಕಾಳಜಿಗಳ ಸೀಮಿತತೆ ಮತ್ತು ತತ್‌ಕ್ಷಣತೆಯ ಪ್ರತಿಫಲನವನ್ನು ನಾವು ‘ಇಂದಿರಾಬಾಯಿ’ ‘ವಾಗ್ದೇವಿ’ಗಳಲ್ಲಿ ಕಾಣುತ್ತೇವೆ. ಚರಿತ್ರೆಯ ಅಲ್ಪಕಾಲದಲ್ಲಿ ನಿಜವಾಗಿಬಿಟ್ಟ ಕಾಳಜಿಗಳ ಸಾಮಾಜಿಕ ಅನುಭವದ ಗುಂಪಿನಿಂದ ಹುಟ್ಟಿದ ಕಾದಂಬರಿಗಳು ಇವು ಎಂಬ ಮಾತು ಮೂಲಭೂತವಾಗಿ ನಮ್ಮ ಮೊದಲ ಕಾದಂಬರಿಗಳ ಸೀಮಿತ ಪ್ರತಿಭೆಯನ್ನು ಹೇಳುತ್ತದೆ.

ತಮ್ಮ ತಕ್ಷಣದ ಆಚೆಗೆ ಹೋಗಿ ಒಟ್ಟು ಭಾರತೀಯ ಬದುಕಿನ ಮೂಲ ದುರಂತದ ಕಡೆಗೆ ಆ ಪ್ರತಿಭೆ ಮುಖ ಮಾಡಿದ್ದರೆ? ಹಾಗೆ ನಡೆಯಲಿಲ್ಲ. ಬಹುಶಃ ಕನ್ನಡ ಸಾಹಿತ್ಯದ ಮೊದಲ ಘಟ್ಟದ ಸೀಮಿತ ಸಂವೇದನೆಗೆ ಇದೂ ಕೂಡಾ ಒಂದು ಸಾಕ್ಷಿ.
*****

ಕೀಲಿಕರಣ: ರಾಘವೇಂದ್ರ ಉಡುಪ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.