ಎಲ್ಲರು ಮಾಡುವುದು ಹೊಟ್ಟೆಗಾಗಿ

ರಾಗ — ಸೌರಾಷ್ಟ್ರ
ತಾಳ — ಏಕ

ಎಲ್ಲರು ಮಾಡುವುದು ಹೊಟ್ಟೆಗಾಗಿ |
ಗೇಣು ಬಟ್ಟೆಗಾಗಿ ||ಪ||

ನೆಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು |
ಕೂಲಿಗಳ ಮಾಡುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೧||

ನಾಲುಕು ವೇದ – ಪುರಾಣ ಶಾಸ್ತ್ರ ಪಂಚಾಂಗ ಹೇಳಿಕೊಂಡು |
ಕಾಲಕಳೆಯುವುದೆಲ್ಲ ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೨||

ಬಡಿದು ಬಡಿದು ಕಬ್ಬಿಣವ ಕಾಸಿ ತುಬಾಕಿ ಮಾಡಿ |
ಹೊಡೆವ ಗುಂಡು ಮಾಡುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೩||

ಚಂಡಭಟರೆಲ್ಲ ಮುಂದೆ ಕತ್ತಿ ಹರಿಗೆಯ ಪಿಡಿದು |
ಖಂಡತುಂಡ ಮಾಡುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೪||

ದೊಡ್ಡ ದೊಡ್ಡ ಕುದುರೆಯನೇರಿ ನೇಜೆ ಹೊತ್ತು ರಾಹುತನಾಗಿ |
ಹೊಡೆದಾಡಿ ಸಾಯುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೫||

ಕುಂಟಿ – ಕೂರಿಗೆಯಿಂದ ಹೆಂಟೆ ಮಣ್ಣ ಹದಮಾಡಿ |
ರಂಟೆಹೊಡೆದು ಬೆಳೆಸುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೬||

ಕೆಟ್ಟತನದಿಂದ ಕಳ್ಳತನವನ್ನೆ ಮಾಡಿ |
ಕಟ್ಟಿ ಹೊಡಿಸಿಕೊಂಬುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೭||

ಸಂನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡಬೈರಾಗಿ |
ನಾನಾ ವೇಷಕೊಂಬುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೮||

ಉನ್ನತ ಕಾಗಿನೆಲೆಯಾದಿಕೇಶವನ |
ಅನುದಿನ ನೆನೆವುದು ಭಕ್ತಿಗಾಗಿ – ಪರಮುಕ್ತಿಗಾಗಿ ||೯||
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.