ಕಾಲದೊಡನೆ ಅಶ್ವತ್ಥನ ಸ್ಪರ್ಧೆ

ನಾವು ಐವರು, ಶಾಸ್ತ್ರಿಗಳ ಮನೆಯ ಮುಂದಿನ ಉದ್ಯಾನವನದಲ್ಲಿ ಎಳೆಹಗಲಿನ ಬಿಸಿಲಿನ ಹಿತಕ್ಕೆ ಬೆನ್ನೊಡ್ಡಿಕುಳಿತಿದ್ದೆವು. ಗರಿಕೆಯಮೇಲಿನ ಹಿಮಮಣಿ ಇನ್ನೂ ತನ್ನ ಹೊಳಪನ್ನು ನೀಗಿಕೊಂಡಿರಲಿಲ್ಲ. ಅಗಸೆ ಗಿಡದ ನೀಲಿ ಹೂ ಆಕಾಶದ ನೀಲಕ್ಕೆ ಬಣ್ಣ ಹಚ್ಚುತ್ತಿತ್ತು. ಶಾಲು ಹೊದೆದು ಕುಳಿತಿದ್ದ ಶಾಸ್ತ್ರಿಗಳು ಕಾಫಿಯನ್ನು ಪಿಂಗಾಣಿಯ ಬಟ್ಟಲಿನಿಂದ ನಿಧಾನವಾಗಿ ಚುಂಬಿಸುತ್ತಾ ಆಸ್ವಾದಿಸುತ್ತಿದ್ದರು. ಶಾಮನೂ, ರಾಧಾಕೃಷ್ಣನೂ ಕಾಫಿಯನ್ನು ಕುಡಿದು ತಳದಲ್ಲಿದ್ದ ಗಸ್ಟನ್ನು ನಿರ್ವೇದದಿಂದ ಅವಲೋಕಿಸುತ್ತಿದ್ದರು. ನಾನೂ, ರಾಘವನೂ ಆಗತಾನೆ ಕುಡಿದು ಬಟ್ಟಲನ್ನು ಕೆಳಗಿಡುತ್ತಿದ್ದೆವು . ಪ್ರಾತಃಕಾಲ ಬಹಳ ತಂಪಾಗಿತ್ತು. ಅಗಸೆ ಮರದ ರೆಂಬೆಗಳ ಮೂಲಕ ಆಕಾಶವು ನಮ್ಮನ್ನು ಬೋನಿನ ಸಲಾಕೆಗಳ ನಡುವೆ ಕ್ಷುದ್ರಮೃಗಗಳನ್ನು ನೋಡುವಂತೆ ನೋಡುತ್ತಿತ್ತು. ನಾವೂ ಪ್ರತಿಯಾಗಿ ಅದನ್ನು ಅಷ್ಟೇ ಕುತೂಹಲದಿಂದ ದೃಷ್ಟಿಸುತ್ತಿದ್ದೆವು. ರಾಘವನೆಂದ, ” ಈ ದಿನ ಬಹಳ ಆನಂದವಾಗಿದೆ. ನಾವು ಇದೇ ರೀತಿ ಇಷ್ಟು ಶಾಂತಿ ತುಷ್ಟಿಗಳಿಂದ ಇರುಳಿನವರೆಗೂ ಇದ್ದುಬಿಟ್ಟರೆ ಎಷ್ಟು ಚೆನ್ನಾಗಿರುತ್ತದೆ” ಎಂದು.

ಶಾಸ್ತ್ರಿಗಳು ಇದನ್ನು ಕೇಳಿ ನಗುತ್ತಾ ಹಾಗಾದರೆ “ಕಾಲಪುರುಷನಿಗೆ ರಜ ಕೊಡಿಸಿಬಿಡಿ -ಆತ ಈವೊಂದು ದಿನವಾದರೂ ನಿದ್ದೆ ಹೋಗಲಿ” ಎಂದರು.

“ಯಾರನ್ನು ಕೇಳಿ ಯಾರಿಗೆ ರಜೆ ಕೊಡಿಸೋಣ? ಇದಕ್ಕೆ ಮದ್ದು ನಾವೇ ನಿದ್ದೆ ಹೋಗುವುದು” ಎಂದ ರಾಧಾಕೃಷ್ಣ. ನಾವೆಲ್ಲ ಅಂದು ಸಂಪೂರ್ಣವಾಗಿ ಎಚ್ಚೆತ್ತು ಹಗುರವಾಗಿದ್ದೆವು. ನಿದ್ದೆಯ ಮಾತು ಕೂಡ ನಮಗೆ ಅನಾರೋಗ್ಯದಂತೆ ಅನಿಷ್ಟವಾಗಿತ್ತು.ಅಂದು ನಾವು ಶಾಂತರು- ಶಾಂತರಲ್ಲ”ನೀನು ಜಡ- ಸೋಮಾರಿ, ನಿನ್ನ ಹಾಸಿಗೆಯನ್ನು ಇನ್ನೂ ಎತ್ತಿಯೇ ಇಲ್ಲ. ಬೇಕಾದರೆ ಮನೆಗೆ ಹೋಗಿ ಬಿದ್ದುಕೋ-ನಾವು ಕೂತೇ ಕಾಲವನ್ನು ಜಯಿಸುತ್ತೇವೆ” ಎಂದೆ ನಾನು. “ಕಾಲ ಅಜೇಯ,ಅವನನ್ನು ಜಯಿಸುವ ಮಾತೆಂತು” ಎಂದ ರಾಧಾಕೃಷ್ಣ. “ಆತ್ಮ ಅನಂತ, ನಾವು ಆತ್ಮವಂತರು,ಇಷ್ಟು ಸಾಕು-ನಮ್ಮನ್ನು ನೋಡಿ ಓಟ ಕೀಳುವುದಕ್ಕೆ”ಎಂದೆ ನಾನು. ಬರಿಮಾತು. ಶಬ್ದ, ಸದ್ದು -ಆತ್ಮವೆಂದರೇನೋ, ಕಾಲವೆಂದರೇನೋ, ಒಬ್ಬೊಬ್ಬರಿಗೆ ಒಂದೊಂದು ತಿಳಿವಳಿಕೆ ಈ ಶಬ್ದಗಳಿಂದ” ಎಂದ ಶಾಮ “ನಿಜವಾಗಿ ಕಾಲ ಎಂದರೇನು?”ಎಂದರು ಶಾಸ್ತ್ರಿಗಳು. ಹೀಗೆ ಆ ಪ್ರಾತಃಕಾಲ ನಾವು ಕಾಲದ ಚರ್ಚೆಯಿಂದ ಕಾಲಯಾಪನೆಗೆ ತೊಡಗಿದ್ದೆವು.

“ಶಿವನೆದೆಯ ಮೇಲೆ ಕಾಳಿ ಕುಣಿಯುತ್ತಾಳೆ. ಈ ತುಳಿತದಿಂದ ಕಾಲ ಹುಟ್ಟಿ ಹರಿಯುತ್ತದೆ.” ರಾಘವ ಈ ರೀತಿ ಹೇಳಲು , “ಶಿವ, ಕಾಳಿ ಇಬ್ಬರೂ ಇದ್ದರು ಎಂದಾಗಲೇ ಕಾಲವಿರಬೇಕಾಯಿತಲ್ಲ, ಕುಣಿತದಲ್ಲಿ ಕಾಲ ಹೇಗೆ ಹುಟ್ಟುತ್ತದೆ” ಎಂದು ಶಾಮ ಟೀಕಿಸಿದ. “ಹಾಗಲ್ಲ,ಹಾಗಲ್ಲ ಆಕೆ ಕುಣಿಯುವಾಗ ಹುಟ್ಟುತ್ತದೆ, ನಿಂತಾಗ ಅಳಿಯುತ್ತದೆ. ಸುಮ್ಮನಿದ್ದಾಗ ಯಾವುದೂ ಇಲ್ಲ.ಕಾಲ ಎನ್ನುವುದು ಶಿವ-ಶಕ್ತಿ ಜನ್ಯ ಶಕ್ತಿ” ಎಂದು ಮರು ನುಡಿದ ರಾಘವ. “ಓಹೋ, ಇವ ವಿಘ್ನರಾಜನಿಗೆ ಅಣ್ಣನೋ ತಮ್ಮನೋ ” ಎಂದು ಕಿರುನಗೆ ಬೀರಿದರು ಶಾಸ್ತ್ರಿಗಳು. “ಆತ ಅಣ್ಣ- ತಮ್ಮನನ್ನು ಒಲಿಸಿಕೊಳ್ಳದಿದ್ದರೆ ಅಣ್ಣ ನಡೆಯುವಂತೆಯೂ ಇಲ್ಲ” ಎಂದ ಶಾಮ. “ವಿಷ್ಣುವಿನ ಪಾದದಿಂದ ಗಂಗೆ ಹರಿದಂತೆ, ಕಾಳಿಯ ಕುಣಿತದಿಂದ ಮೃದುವಾದ ಶಿವನೆದೆಯಿಂದ ಕಾಲ ಹುಟ್ಟಿದರೆ, ದೇಶವೋ?” ಎಂದ ರಾಧಾಕೃಷ್ಣ. “ಆ ಕಲ್ಪನೆಯೇ ತಪ್ಪು, ಇದು ಸರಿ- ಅರ್ಧನಾರೀಶ್ವರ ಮೊದಲು ಢಮರು ಭಾರಿಸಿದ .ಒಂದುಗೂಟಿ ಗಾಢವಾಗಿದ್ದ ದಿಕ್ಕುಗಳೆಲ್ಲಾ ಆ ಶಬ್ದದ ನೋಕಿಗೆ ದೂರ ಸರಿದು, ತಂತಮ್ಮ ಜಾಗಗಳಲ್ಲಿ ನಿಂತವು. ಆ ಶಬ್ದದಿಂದಲೇ ಮೋದಗೊಂಡು ಆತ ಕಾಲನ್ನೆತ್ತಿ ಕುಣಿದ. ಕಾಲಿನ ತಾಳವೇ ಕಾಲ ಎನ್ನಿಸಿಕೊಂಡಿತು. ಡಮರು ನಿಂತರೆ ದೇಶವಳಿಯಾಗುತ್ತದೆ. ಹೀಗೆ ಡಮರುವಿನ ನಾದವೂ, ಕಾಲಿನ ತಾನವೂ ಹೊಂದಿಕೊಂಡು ನಡೆಯಬೇಕು. ಒಂದಿಲ್ಲದೆ ಇನ್ನೊಂದಿಲ್ಲ. ದೇಶ, ಕಾಲ ಇವೆರಡೂ ಪರಸ್ಪರ ಹೆಣೆದುಕೊಂಡು ಗಂಟು ಗಂಟಾಗುವುದೇ ಸೃಷ್ಟಿ” ಎಂದ ಶಾಮ. “ದಿಟ, ದಿಟ ಕಲ್ಪನೆ ಸುಂದರವಾಗಿದೆ, ಕೆಲವು ಗಂಟುಗಳು ಗೋಜಿಕೊಂಡಿವೆ, ಕೆಲವುಸರಳವಾಗಿವೆ, ಗೋಜಿಕೊಂಡಿರುವುದು ಅಸುಂದರ ಗಹನ, ಗೋಜಿಕೊಳ್ಳದಿರುವ ಗ್ರಂಥಿಯೇ ಸರಳ ಸುಂದರ” ಎಂದರು ಶಾಸ್ತ್ರಿಗಳು.

ಶಾಸ್ತ್ರಿಗಳು ಒಂದು ತೆರೆದ ಮನುಷ್ಯ. ಯಾವಾಗಲೂ ತರ್ಕ ನಮ್ಮದು, ಸಿಧ್ಧಾಂತ ಅವರದು. ಯಾವ ಸಿಧ್ಧಾಂತದಲ್ಲೂ ನಂಬಿಕೆಯಿಲ್ಲ. ಲೋಕ ಉಂಟೇ, ಉಂಟು. ಇಲ್ಲವೇ,ಇಲ್ಲ. ಸರ್ಪವೋ, ರಜ್ಜುವೋ, ಯಾವುದು ದಿಟ,ಎರಡೂ ದಿಟ. ಏಕೆಂದರೆ ಎರಡೂ ಅನಿತ್ಯ. ಎಲ್ಲ ಸತ್ಯವೂ ಕಾಲ ದೇಶಕ್ಕಂಟಿಕೊಂಡಿದೆ. ಕಾಲ ದೇಶವೋ, ಅರ್ಧ ನಾರೀಶ್ವರನ ನೃತ್ಯದಿಂದಲೂ, ಢಮರುವಿನ ಶಬ್ದದಿಂದಲೂ, ಹೊರಡುತ್ತಾ, ಹರಡುತ್ತಾ ಹೆಣೆದುಕೊಳ್ಳುತ್ತಿದೆ, ಬಿಚ್ಚಿಕೊಳ್ಳುತ್ತಿದೆ. ಸೃಷ್ಟಿಯೆಲ್ಲಾ ಈ ಹಾಸುಹೊಕ್ಕಿನ ಗಂಟುಗಂಟೇ. ಆದರೆ ಈ ಕುಣಿತಕ್ಕೆ ಮೂಲ, ಅರ್ಧ ಗಂಡು – ಅರ್ಧ ಹೆಣ್ಣು. ಕಾಲು ತಪ್ಪಿ ಲಯ ಕೆಡುವುದು ಸಹಜ. ಅಗ ಸೃಷ್ಟಿ ಗೋಜಿಕೊಳ್ಳುತ್ತದೆ-ಎಂದು ನಗುವುದಕ್ಕೆ ಮೊದಲಿಟ್ಟರು ಶಾಸ್ತ್ರಿಗಳು. ನಗುವುದಾತಂಕ.ಅದರ ಮುಂದೆ ಎಂಥವರ ಬುಧ್ಧಿಯೂ ಕುಂಠಿತವಾಗುತ್ತದೆ. ಅದರಷ್ಟು ಸಾಂಕ್ರಾಮಿಕ ಮತ್ತೊಂದಿಲ್ಲ, ನಾವೆಲ್ಲರೂ ನಗುವುದಕ್ಕೆ ಪ್ರಾರಂಭಿಸಿದೆವು.

ಅಷ್ಟು ಹೊತ್ತಿಗೆ, ನಮ್ಮ ಅಶ್ವತ್ಥ ನಮ್ಮನ್ನು ಹುಡುಕಿಕೊಂಡು ಶಾಸ್ತ್ರಿಗಳ ಮನೆಗೆ ಬರುತ್ತಿದ್ದ. ಅವನದು ಷಹರು- ನಮ್ಮದು ಬರಿ ಊರು. ನಮ್ಮೂರಿಗೂ ಅವನ ಪಟ್ಟಣಕ್ಕೂ ರೈಲಿನಲ್ಲಿ ಒಂದೂವರೆ ಗಂಟೆಯ ಕಾಲದ ಪ್ರಯಾಣ. ಅವನು ಬರುವ ನಿರೀಕ್ಷಣೆಯೇನೋ ನನಗಿತ್ತು. ಆದರೆ ದಿನ ಗೊತ್ತಿರಲಿಲ್ಲ. ಇದ್ದಕ್ಕಿದ್ದ ಹಾಗೆಯೇ ಅಶ್ವತ್ಥ ನಮ್ಮೂರಿಗೆ ಬರುವುದು ಪದ್ಧತಿ. ಅವನಿಗೆ ಅಭ್ಯಾಗತನಾಗುವುದಕ್ಕಿಂತ ಅತಿಥಿಯಾಗುವುದಕ್ಕೇ ಆಸೆ; ಅತಿಥಿ ಸ್ವತಂತ್ರ-ಅಭ್ಯಾಗತ ಪರತಂತ್ರ. ಆತ ಎಲ್ಲಿಂದಲೋ ತನ್ನೂರಿಗೆ ಹಿಂತಿರುಗುವಾಗ ದಾರಿಯಲ್ಲಿ ಇಲ್ಲಿ ತಂಗಿರಬೇಕು ಎಂದುಕೊಂಡೆ. ಅ ವೇಳೆಗೆ ಅವನೂರಿನಿಂದ ಬರುವ ಗಾಡಿ ಯಾವುದೂ ಇಲ್ಲ. ಆ ಊರಿಗೆ ಹೋಗುವ ಗಾಡಿಯ ವೇಳೆ ಇದು; ಆತ ಆಗತಾನೆ ರೈಲಿಳಿದು, ಗಂಟನ್ನು ನಮ್ಮಮನೆಯಲ್ಲಿ ಹಾಕಿ, ನಾವಿಲ್ಲಿರುವುದನ್ನು ತಿಳಿದು ಇಲ್ಲಿಗೇ ನೆಟ್ಟಗೆ ಬರುತ್ತಿದ್ದ. ಅಶ್ವತ್ಥ ಆರೋಗ್ಯಭಾಗ್ಯಶಾಲಿ. ಆದರೆ ಅದರ ಅರಿವು ಅವನಿಗಿಲ್ಲ. ನೋಡಿದವರಿಗೆ ತಾನು ಸುಖವಾಗಿಯೂ ಸಂತೋಷವಾಗಿಯೂ ಇರುತ್ತೇನೆ ಎಂಬ ಭಾವನೆ ಬಂದರೆ, ಎಲ್ಲಿ ತನ್ನ ಆರೋಗ್ಯಕ್ಕೂ, ಸೌಖ್ಯಕ್ಕೂ ದೃಷ್ಟಿ ತಾಗಿದಂತಾಗುತ್ತದೆಯೋ ಎಂದು ಆತ ಭಾಗ್ಯಗಳನ್ನು ಒಂದು ತೆರೆದ ಸುಯ್ಯಲಿನಿಂದ ಮರೆಸಲು ಪ್ರಯತ್ನಿಸುತ್ತಾನೆ- ಲೋಭಿ ತನ್ನೈಶ್ವರ್ಯ ಅಂತಃಸುಖವನ್ನು ಹೊರಗಿನ ಕಾರ್ಪಣ್ಯದಿಂದ ಮರೆಸಿಡುವಂತೆ. ಶಾಸ್ತ್ರಿಗಳು ಅದಕ್ಕೋಸ್ಕರ ಅಶ್ವತ್ಥನನ್ನು ಅವನ ಬೆನ್ನ ಹಿಂದೆ ಅಶ್ವತ್ಥ ಎನ್ನುತ್ತಾರೆ. ಅಶ್ವತ್ಥನನ್ನು ನೋಡಿ ನಾನು ಆಶ್ಚರ್ಯವನ್ನು ತೋರಿ, ಸ್ವಾಗತ ಸ್ಮಿತವನ್ನು ಬೀರಿದೆ. ಮಿಕ್ಕವರು ” ಹೋ ಬನ್ನಿ, ಬನ್ನಿ ” ಎಂದು ಉದ್ಗಾರ ತೆಗೆದರು. ಅಶ್ವತ್ಥ ಬಂದು ಕುಳಿತುಕೊಂಡ ಮೇಲೆ ಶಾಸ್ತ್ರಿಗಳು,ನನ್ನ ಕಡೆಗೆ ಕಿರುನಗೆ ಬೀರುತ್ತಾ” ಏನು ಅಶ್ವತ್ಥಯ್ಯನವರೇ, ಎಂದು ಬಂದಿದ್ದು, ಆರೋಗ್ಯವೇ” ಎಂದರು.
“ನೀವು ನೋಡುವ ಹಾಗೆ ಇದೋ ಈಗ ತಾನೆ ಬಂದೆ.ಏನೋ ಹೀಗಿದ್ದೀನಿ, ನೀವೆಲ್ಲ ಆರೋಗ್ಯ ತಾನೆ” ಎಂದ ಅಶ್ವತ್ಥ.

“ಎಲ್ಲಾ ಆರೋಗ್ಯ. ಒಳ್ಳೆಯ ಸಮಯಕ್ಕೆ ಬಂದಿರಿ. ಲೇ, ರುಕ್ಮಿಣಿ, ಅಶ್ವತ್ಥ ಮಾವನಿಗೆ ಒಂದು ಬಟ್ಟಲು ಕಾಫಿ ತಂದುಕೊಡು ” ಎಂದರು ಶಾಸ್ತ್ರಿಗಳು.
“ಏನು ಅಂಥ ಒಳ್ಳೆ ಸಮಯ, ಅಷ್ಟು ಕಾಕು ಹಾಕುತ್ತಿದ್ದೀರಲ್ಲಾ, ಏನು ಸಮಾಚಾರ? ಎಂದ ಅಶ್ವತ್ಥ.

“ನಾವು ಕಾಲ ಎಂದರೆ ಏನು ಎಂದು ತರ್ಕ ಮಾಡುತ್ತಿದ್ದೆವು,ಬಗೆ ಹರಿಯಲಿಲ್ಲ. ನಿಮ್ಮ ಸಲಹೆ ಬೇಕಾಗಿದೆ, ಈ ವಿಚಾರದಲ್ಲಿ. ಅದರ ರಹಸ್ಯ ನಿಮ್ಮಿಂದಲೇ ಬಯಲಾಗಬೇಕಾದದ್ದು” ಎಂದರು ಶಾಸ್ತ್ರಿಗಳು.
“ಒಳ್ಳೆಯ ವಿಚಾರ, ಒಳ್ಳೆಯ ಪ್ರಶ್ನೆ. ಅದರ ಮಾತು ಬಿಡಿ. ಅದೊಂದು ಹಾಳು! ನನಗೆ ಎಂಥ ಕಸರತ್ತು ಮಾಡಿಸಿತು, ನಿನ್ನೆಯ ದಿನ ಅದು. ಅದು ಅಲಾರಂ ಗಡಿಯಾರ, ಅದು ಮಿಲ್ಲಿನ ಕೊಂಯ್ ಕೊಳವೆ, ಅದು ದುರ್ಲಭ ಜಟಕಾಗಾಡಿ, ಅದು ಬಸ್ಸು, ಅದು ರೈಲು, ಅದು ಆ ಹೆಣ್ಣು- ಆ ಗಂಡು: ನಿನ್ನೆಯ ದಿನ ಅದರ ಮೇಲೆ ನನ್ನ ಯುಧ್ದ, ರಾಮ ರಾವಣರ ಯುಧ್ಧಕ್ಕೂ ಮಿಗಿಲು. ಸುಖವಾಗಿರಬೇಕಾಗಿದ್ದರೆ ಎರಡೇ ದಾರಿ ಅದನ್ನು ಗೆಲ್ಲಬೇಕು-ಯೂರೋಪಿನವರ ಹಾಗೆ – ಇಲ್ಲ ಅದನ್ನು ಅಲಕ್ಷ್ಯದಲ್ಲಿಡಬೇಕು-ನಮ್ಮ ಪೂರ್‍ವೀಕರ ಹಾಗೆ” ಎಂದ ಅಶ್ವಥ್ಥ.

“ಅದೆಂಥ ಯುಧ್ಧವಪ್ಪ ಇದು, ಕಾಲದ ಮೇಲೆ ನಿಮ್ಮದು” ಎಂದ ರಾಧಾಕೃಷ್ಣ. ರಾಧಾಕೃಷ್ಣನಿಗೂ, ಅಶ್ವತ್ಥನಿಗೂ ಒಂದು ತೆರೆದ ಮಮತೆ. ಅಶ್ವತ್ಥಯ್ಯ ಏನೆಂದರೂ ಸರಿಯೆ ಅದಕ್ಕೆ ರಾಧಾಕೃಷ್ಣ ನಗುತ್ತಾನೆ,ಒಬ್ಬನಿಂದ ಒಬ್ಬನಿಗೆ ಸ್ಪೂರ್ತಿ.ಇದು ಪರಸ್ಪರವಾಗಿ, ಇವರಿಬ್ಬರೂ ಸೇರಿದಾಗ ನಮ್ಮ ಕೂಟಕ್ಕೆ ಬಹಳ ಕಳೆ ಬರುತ್ತದೆ. ಮಾತೆಲ್ಲ ಅಶ್ವತ್ಥನದೇ. ಅವನಿರುವಾಗ ಬೇರೆಯವರು ಉಸಿರೆತ್ತುವುದಕ್ಕೂ ದಾರಿಯಿಲ್ಲ. ಮಾತಾಡುತ್ತಿರುವಾಗ ಆತನ ಮಾತನ್ನು ಕೇಳಿ ನಲಿಯಬಹುದು; ಇಲ್ಲದೇ ಹೋದರೆ ಆತನ ಅಭಿನಯಕ್ಕೆ ನಾವು ತಲೆದೂಗಬಹುದು. ತಲೆ ಜುಟ್ಟು ಬಿಚ್ಚಿಹೋಗುತ್ತದೆ. ಮುಂದುಗಡೆ ಮೇಜು ಇದ್ದರೆ, ಆತನ ಅಂಗೈ ತಾಳಕ್ಕೆ ಅದು ಗಡಗಡನೆ ನಡುಗುತ್ತಿರುತ್ತದೆ.(ಅದರ ಮೇಲೆ ಕಾಫಿ ಬಟ್ಟಲು ಇಲ್ಲದೇ ಇದ್ದರೇನೇ ಒಳ್ಳೆಯದು) ಅವನ ಕೈಗಳು ಗಾಳಿಯಲ್ಲಿ ಸಿಕ್ಕಿದ ಮರದ ರೆಂಬೆಗಳಂತೆ ಕುಣಿದಾಡುತ್ತಿರುತ್ತವೆ. ಆ ಸ್ವಾರಸ್ಯವಾದ ಮಾತುಗಳ ನೊರೆಯಂತೆ ಆತನ ನಗೆ ಗಳಿಗೆಗೊಮ್ಮೆ ಚಿಮ್ಮಿ ತೇಲುತ್ತದೆ. ನಮ್ಮ ಅಶ್ವತ್ಥ ಬಹು ಸರಸಿ, ರಸಿಕ. ಮಧ್ಯೆ ಮಧ್ಯೆ ಈ ನಗೆ ಮಾತನ್ನು ನಿಲ್ಲಿಸಿ, ‘ ಸಾಕಪ್ಪಾ ನನಗೆ ಸುಸ್ತು ಸಂಕಟ, ನಿಮಗೇನು ಹೇಳಿ, ಏಕೋ ನೋಡು ನಿನ್ನೆಯೆಲ್ಲಾ ನಿದ್ದೆಯೇ ಬರಲಿಲ್ಲ, ಅನ್ನ ಸ್ವಲ್ಪವೂ ಸೇರಲಿಲ್ಲ ’ ಎನ್ನುವಾಗ, ಈ ವಿಷ್ಕಂಭವೂ ಬಹು ಮುದ್ದಾಗುತ್ತದೆ.

ಈ ದಿನ ಅಶ್ವತ್ಥ, ತಾನು ಕಾಲದ ಮೇಲೆ ಮಾಡಿದ ಯುಧ್ಧವನ್ನು ವರ್ಣಿಸುವುದಕ್ಕೆ ಅಣಿಯಾದ. ರುಕ್ಮಿಣಿ (ಶಾಸ್ತ್ರಿಗಳ ಮಗಳು) ಕಾಫಿಯನ್ನು ತಂದುಕೊಟ್ಟಳು. ಅದನ್ನು ಕುಡಿದು, ಉಸ್ಸಪ್ಪಾ, ಬದುಕಿದೆ ಎಂದುಕೊಂಡು ಈ ತೆರೆದ ವರ್ಣನೆಗೆ ಪ್ರಾರಂಭಿಸಿದ.

“ಅದನ್ನು ಕೆಣಕಿದರೆ, ನಾವು ಬಹು ಜಾಗರೂಕರಾಗಿದ್ದುಕೊಂಡು ಗೆಲ್ಲಬೇಕು. ಇಲ್ಲದೇಹೋದರೆ ಅದನ್ನು ಲೆಕ್ಕಿಸಲೇಬಾರದು. ನಿನ್ನೆಯ ಗಂಟೆ ರೈಲಿನಲ್ಲಿ ಕುಳಿತು ಇಲ್ಲಿಗೆ ಬರಬೇಕೆಂದು ಮೊನ್ನೆ ಸಂಕಲ್ಪ ಮಾಡಿಕೊಂಡೆ. ಆದರೆ ಕಾಲ ನನ್ನ ಈ ನಿರ್ಧಾರವನ್ನು ಕಂಡು, ‘ನನ್ನ ಮೇಲೆ ತೊಡೆ ತಟ್ಟುತ್ತೀಯಾ’ ಎಂದಿತು: ನಾನು ಎದೆಗೆಡದೆ ಹ್ಞೂ ಎಂದೆ.‘ಅಲಾರಂ ಇಡಬೇಡ’ ಎಂದು ನಿದ್ದೆ ನನ್ನನ್ನು ಗೋಗರೆದುಕೊಂಡಿತು. ಕಾಲ ನನ್ನ ಕಡೆ ಇರುವ ಹಾಗೆ ‘ಅದರ ಮಾತು ಕೇಳಬೇಡ- ಇಡು’ ಎಂದಿತು. ನಾನು ಐದು ಗಂಟೆಗೇ ಅಲಾರಂ ಇಟ್ಟೆ. ಕೊಕ್ಕಾಟದಲ್ಲಿ ಕೊಕ್ ಕೊಡುವ ಹಾಗೆ ನಿದ್ದೆಗೇನೋ ಅಲಾರಂ ಸರಿಯಾಗಿ ಐದು ಗಂಟೆಗೇ ಕೊಕ್ಕೊಟ್ಟಿತು. ನನಗೂ ಎಚ್ಚರವಾಯಿತು. ಆದರೆ ಹೊರಗಡೆ ಇನ್ನೂ ಕತ್ತಲು. ಕನಸು ಬೇರೆ ಚೆನ್ನಾಗಿತ್ತು. ಅದರಲ್ಲಿ ಸುಳಿದುಹೋದವಳ ಕಣ್ಣು ಹೊಳಪನ್ನು ಇನ್ನೆಲ್ಲಿ ಕಾಣಬೇಕು, ತಿರುಗಿ ಅದೇ ಕನಸು ಬರಲೆಂದು ಕಣ್ಣು ಮುಚ್ಚಿಕೊಂಡೆ, ಬಸವನಿಗೆ ಕೆಂಪು ಶಾಲನ್ನು ತೋರಿಸುವಂತೆ, ಕಾಲ ನನಗೆ ಏಳು ಏಳು ಹೊತ್ತಾಯಿತು ಎನ್ನುತ್ತಲೇ ಇತ್ತು. ಆದರೆ ಅದೆಲ್ಲಾ ಬರಿಯ ಬೂಟಾಟಿಕೆ. ನನಗೆ ರೈಲು ತಪ್ಪಿಸಿ ಕಾಡಬೇಕೆಂದೇ ಅದಕ್ಕೆ ಆಸೆ. ನಾನು ಎದ್ದೆ. ಆಗ ಆರು ಗಂಟೆ. ಶೌಚಾಹಾರ ತೀರಿಸಿಕೊಂಡು, ಆಕೆ ಗೊಣಗುಟ್ಟುತ್ತಾ ಮಾಡಿಕೊಟ್ಟ ಕಾಪಿಯನ್ನು ಕುಡಿದು, ಕೆಳಗೆ ಬಟ್ಟಲಿಡುವ ಹೊತ್ತಿಗೆ ಆರೂವರೆ. ಅವಸರವರಸರವಾಗಿ ಹೊರಕ್ಕೆ ಹೊರಟೆ.

ಸಣ್ಣ ಗಂಟೊಂದು, ಆ ಮೇಲೆ ಈ ಛತ್ರಿ ಎರಡೇ ನನ್ನ ಸಾಮಾನು. ಹೊತ್ತೆತ್ತೋ ಆಗಿಹೋಯಿತು.ಜಟಕಾ ಸ್ಟಾಂಡಿನಲ್ಲಿ ಒಂದು ಜಟಕವೂ ಇಲ್ಲ. ಬಸ್ಸನ್ನಾದರೂ ಹಿಡಿಯೋಣ ಎಂದುಕೊಂಡು ಜೋರು ಜೋರಾಗಿ ನಡೆದೆ. ಬಸ್ ಸ್ಟಾಂಡಿರುವುದು ನಮ್ಮ ಮನೆಗೆ ಅರ್ಧ ಮೈಲಿ ದೂರ. ಬೆಳಕು ಹರಿಯುತ್ತಾ ಬರುತ್ತಿತ್ತು. ಯಾರೂ ಕಾಣದೆ ನಿರ್ಜನವಾಗಿರುವ ರಸ್ತೆಯಲ್ಲಿ ಸ್ವಲ್ಪದೂರ ಓಡಿಯೂ ಓಡಿದೆ. ಮಿಲ್ಲುಗಳು ಕೊಂಯ್ ಎಂದವು. ಅದು ಕಾಲದ ತುತ್ತೂರಿ. ನನ್ನ ಚಪ್ಪಲಿಗಳು ವೇಗವನ್ನು ತಪ್ಪಿಸುತ್ತಿವೆ ಎಂದು ಅವೆರಡನ್ನೂ ಬಲಗೈಯಲ್ಲಿ ಹಿಡಿದುಕೊಂಡೆ. ಛತ್ರಿಯೂ, ಗಂಟೂ ಎಡಗೈಯಲ್ಲಿ. ಬಿಚ್ಚಿಹೋದ ತಲೆ ಕೂದಲನ್ನು ಕಟ್ಟಿಕೊಳ್ಳುವುದಕ್ಕೂ ಆಸ್ಪದವಿಲ್ಲ.ನನಗೋ ಮೇಲುಸಿರು. ನಿಂತರೆ ತೊಡೆ ನಡುಗುವಷ್ಟು ನಿಶ್ಯಕ್ತಿ. ದೂರದಲ್ಲಿ ಬಸ್ಸು ಧ್ವನಿ ಮಾಡುತ್ತಿದೆ. ಕಾಲ ಕಾಮರೂಪಿ. ಈಗ ಅದು ಬಸ್ಸಿನ ಅವತಾರವನ್ನು ತಾಳಿ, ನನಗೆ ‘ ಓ ಬಾ ಹಿಡಿ’ ಎನ್ನುತ್ತಿದೆ. ನಾನು ಈ ಪೈಶಾಚಿ ವೇಷದಲ್ಲಿಯೇ, ಆವೇಶ ಬಂದವನಂತೆ ‘ಸ್ಟಾಪ್ ಸ್ಟಾಪ್ ಎಂದು ಕಿರುಚುತ್ತ, ಎಕ್ಕಡಗಳನ್ನೂ ಛತ್ರಿ, ಗಂಟುಗಳನ್ನೂ ಝಳಪಿಸುತ್ತಾ ನಿಲ್ದಾಣಕ್ಕೆ ಓಡಿದೆ. ಹತ್ತು ಮಾರು ದೂರದಲ್ಲಿರುವಾಗಲೇ ಬಸ್ಸು ಹೊರಟುಬಿಟ್ಟಿತು. ನಾನು ಸುಸ್ತಾಗಿಯೂ, ನಿರಾಶನಾಗಿಯೂ ಅದರ ಹತ್ತಿರದಲ್ಲಿದ್ದ ಸೈಕಲ್ಲಿನ ಕಾಂಪೌಂಡು ಗೋಡೆಯ ಮೇಲೆ ಕುಳಿತು, ಕೈ ಬಿಡುವು ಮಾಡಿಕೊಂಡು ಜುಟ್ಟು ಗಂಟು ಹಾಕಿದೆ.

ಆದರೆ ಆಸೆ ಸಾಮಾನ್ಯವಾಗಿ ಸಾಯುವುದಿಲ್ಲ. ನನ್ನ ಗಡಿಯಾರ ಆಗ ಏಳೂ ಹತ್ತು ಎನ್ನುತ್ತಿತ್ತು. ದೂರದಲ್ಲಿ ಮತ್ತೊಂದು ಬಸ್ಸು ಬರುತ್ತಿತ್ತು. ಏಳೂ ಕಾಲಿಗೆ ಅದನ್ನು ಹತ್ತಿ ಕುಳಿತುಕೊಂಡೆ. ಅದು ಹೊರಡುವುದಕ್ಕೆ ಎಷ್ಟು ವಿಘ್ನಗಳು, ಎಷ್ಟು ಸಲ ಮದ್ಯದಲ್ಲಿ ಅದು ನಿಲ್ಲಬೇಕು. ಈ ಜನಗಳೆಲ್ಲಾ ಕಾಲದ ವಿಕಟಾವತಾರಗಳೇ- ಎಲ್ಲ ವಿಘ್ನಕಾರಿಗಳು. ಅದರೊಡನೆ ನಾವಾಡುತ್ತಿರುವ ಈ ಕುಸ್ತಿಯಲ್ಲಿ ನನಗೆ ಜಯ ಬಯಸುವವರೊಬ್ಬರೂ ಇಲ್ಲ. ಏಳೂವರೆಗೆ ರೈಲ್ವೆ ಸ್ಟೇಷನ್ ತಲುಪಿದೆ. ಟಿಕೇಟು ಕೊಡುವ ಜಾಗದಲ್ಲಿ ಜನವೇ ಇಲ್ಲ. ಆದರೆ ಕಿಟಕಿ ಬಾಗಿಲು ಮುಚ್ಚಿರಲಿಲ್ಲ. ಆ ದಿನ ರೈಲು ಸ್ವಲ್ಪ ತಡವಾಗಿ ಹೊರಡುತ್ತದೆ ಎಂಬ ಸಮಾಚಾರವನ್ನು ಟಿಕೇಟು ಮಾರುವವನ ಹತ್ತಿರ ತಿಳಿದುಕೊಂಡೆ. ನನ್ನ ಜೇಬಿನಲ್ಲಿ ಚಿಲ್ಲರೆ ಇಲ್ಲ. ನನ್ನ ಅವಸರ ಅವನಿಗೆ ಗೊತ್ತು.ಅವನು ಚಿಲ್ಲರೆ ಇಲ್ಲವೆಂದು ತಡಕಾಡುತ್ತಿದ್ದ. ನಾನು ಚಿಲ್ಲರೆಯನ್ನು ಅಲ್ಲೆ ಬಿಟ್ಟು ಸ್ಟೇಷನೊಳಕ್ಕೆ ಓಡಿದೆ. ಪುಣ್ಯಕ್ಕೆ ರೈಲು ನಿಂತಿತ್ತು.ಕೂಗಿಕೊಳ್ಳುತ್ತಿತ್ತು. ಅದರ ಕೊಳವೆಯಿಂದ ತಿಮಿಂಗಿಲದ ಉಸಿರಿನಂತೆ ಆವಿ ಸಶಬ್ದವಾಗಿ ಏಳುತ್ತಿತ್ತು. ಗಾರ್ಡು ತುಟಿಗೆ ಶಿಲ್ಪಿ ಸಿಕ್ಕಿಸಿಕೊಂಡು ಓಡಿಯಾಡುತ್ತಿದ್ದ. ಕಾಲದ ಪರಿಪೂರ್ಣಾವತಾರ ಈ ರೈಲು ಪೆಡಂಭೂತ. ಇದರ ಗರ್ಭದಲ್ಲಿ ನಾನು ಹೋಗಿ ಕುಳಿತೆ. ಜೈ ಎಂದೆ. ಆ ಗಾಡಿಯಲ್ಲಿ ಹತ್ತು ಮಂದಿ ಹಾಯಾಗಿ ಕೂರಬಹುದು. ಅಲ್ಲಿದ್ದವರು ಐವರು. ಕೊನೆಯ ಗಾಡಿ. ಗಲಾಟೆ ಇರಲಿಲ್ಲ, ನನ್ನ ಪುಣ್ಯಕ್ಕೆ.

ನಾನು ಕುಳಿತುಕೊಳ್ಳುವಷ್ಟರಲ್ಲಿ ಓಡಿ ಬಂದರಯ್ಯಾ, ಮತ್ತೆ ಮೂವರು. ಹುಡುಗಿ ಒಬ್ಬಳು -ಬಲಿತ ಹುಡುಗಿ, ಒಬ್ಬ ಗಂಡಸು, ಒಬ್ಬ ಹುಡುಗ. ಆಕೆ ಹೇಗೆ ಓಡಿ ಬಂದಳಯ್ಯಾ, ಎಂಥ ಗೆಲುವಿತ್ತು ಆ ಕಾಲುಗಳಲ್ಲಿ. ಒಳ್ಳೆ ನಾಜೂಕಾದ ಹುಡುಗಿ. ಗಂಡು ಬೀರಿಯಲ್ಲ.ನಾನು ದಿಗ್ಬ್ರಾಂತನಾಗಿ ನೋಡುತ್ತಿದ್ದೆ. ಛಂಗನೆ ಆಕೆ ಗಾಡಿಗೆ ಹತ್ತಿದಳು.ಅವಳ ಹಿಂದೆ ಆ ಹುಡುಗ, ಅವನ ಹಿಂದೆ ಆ ಗಂಡಸು. ಆಮೇಲೆ ಗಂಟನ್ನು ಹೊತ್ತುಕೊಂಡು ಬರುತ್ತಿದ್ದ ಕೂಲಿಯಾಳು. ಒಂದು ಕ್ಷಣದಲ್ಲಿ ಎಲ್ಲರೂ ಒಳಕ್ಕೆ ಬಂದರು. ಕೂಲಿ ಇಳಿದ ತಕ್ಷಣ ರೈಲು ಹೊರಟಿತು. ಕೂಲಿ ನಾಕಾಣೆ ಕೇಳಿದ. ಗಂಡಸು ತಕ್ಷಣ ಕೊಟ್ಟುಬಿಟ್ಟ. ರೈಲು ಹೊರಟ ಮೇಲೆ ನಾನು ನಿಧಾನವಾಗಿ ಉಸಿರಾಡುತ್ತಾ ಕೊನೆಗೂ ನಾನೇ ಗೆದ್ದೆ ಎಂದುಕೊಂಡೆ. ಅದು ಸ್ಟೇಷನ್ನು ಬಿಡುವ ಹೊತ್ತಿಗೆ, ಈ ಆಗಂತಕರೂ, ಸ್ವಸ್ಥವಾಗಿ ನನ್ನ ಬಲ ಪಕ್ಕಕ್ಕಿದ್ದ ಮೂರು- ನಾಲ್ಕು ಜನ ಕೂರುವಂಥಾ ಸೀಟಿನಲ್ಲಿ ಕುಳಿತುಕೊಂಡರು. ಆ ಹುಡುಗಿ ನನಗೆ ಹತ್ತಿರವಾಗಿ, ಆಮೇಲೆ ಆ ಹುಡುಗ ಅವನ ಮಗ್ಗುಲಲ್ಲಿ ಅ ಗಂಡಸು. ಆಕೆಯ ಮುಖ ಬೆವತಿತ್ತು. ಕುಂಕುಮ ಹರಡಿತ್ತು. ಕುರುಳು ಮುಖಕ್ಕೆ ಅಂಟಿಕೊಂಡು ಅಚಂಚಲವಾಗಿತ್ತು. ಕೆನ್ನೆ ಕೆಂಪಾಗಿತ್ತು. ಆಕೆ ಬುಲಾಕನ್ನು ತೊಟ್ಟುಕೊಂಡಿದ್ದಳು. ಈ ಆಭರಣವನ್ನು ಅಲ್ಲಗಳೆಯುವವರ ಮೌಢ್ಯಕ್ಕೆ ನಾವು ಏನು ಹೇಳೋಣ. ಆ ಬುಲಾಕಿನ ಮುತ್ತು ಆಕೆ ನಕ್ಕಾಗ ಬೆಳ್ಳಗಾಗುತ್ತಿತ್ತು. ಆಕೆಗೆ ಹದಿನೆಂಟು ವಯಸ್ಸಿರಬಹುದು. ಆದರೆ ಏನು ಗೆಲುವಯ್ಯಾ ಅವಳ ಮುಖದಲ್ಲಿ. ಎಂಥ ಸರಳತೆ-ಅವಳ ಉಡುಪಿನಲ್ಲಿ, ಎಂಥ ಬೆಡಗು, ರೀತಿಯಲ್ಲಿ ಎಂಥ ಕೊಂಕು. ಆಕೆ ನನ್ನನ್ನು ನೋಡಿ ತುಸು ನಗುತ್ತಾ ಕುರುಳನ್ನು ಸರಿಮಾಡಿಕೊಳ್ಳುತ್ತಿದ್ದಳು. ಆಕೆಯ ಬಳೆಗಳು – ಬಣ್ಣಗಳ ಹೊಂದಾಣಿಕೆ ಎಷ್ಟು ಸೊಗಸಾಗಿತ್ತು ಎನ್ನುತ್ತೀಯಾ – ಚಿನ್ನದ್ದು, ಗಾಜಿನದು, ರತ್ನಗಳದು- ಹಾ -ಹಾ ಅದೇನು ದನಿಗೈದುವಯ್ಯಾ, ನಾನು ಮೂಢನಾದೆ.
ಒಳ್ಳೆಯ ಬಲಿತ ಗೋಧಿನಾಗರಿನಂತ ದುಂಡು ತೋಳುಗಳು ಅಕೆಗೆ. ಕುರುಳನ್ನು ಸರಿಮಾಡಿಕೊಂಡು, ಸೀರೆಯ ನಿರಿಯನ್ನು ಅಲ್ಲಿ ಇಲ್ಲಿ ಮುಟ್ಟಿ, ಸುಕ್ಕನ್ನು ಸರಳವಾಗಿ ಹರಡಿಸುತ್ತಾ ತಿರುಗಿ ನನ್ನ ಕಡೆ ನೋಡಿ ನಕ್ಕಳು. ನಾನು ಸುಸ್ತಾದೆ. ಬೇರೆಯ ಕಡೆ ನೋಡಲು ತೊಡಗಿದೆ. ಆ ಗಂಡಸು ಮೊದ್ದ, ಶುದ್ಧ ಮೊದ್ದ. ಕೂಲಿ ಕೇಳಿದಷ್ಟು ಕೊಟ್ಟಾಗಲೇ ಅವನ ಯೋಗ್ಯತೆ ನನಗೆ ಗೊತ್ತಾಗಿಹೋಯಿತು. ಗಂಡನೇ ಇರಬಹುದು. ತಲೆಯಲ್ಲಿ ಬೈತಲೆ ತೆಗೆದ ಕ್ರಾಪು, ಅದಕ್ಕೆ ಬಾಚಣಿಗೆ ಊರಿ ಎಷ್ಟು ದಿನಗಳಾಗಿತ್ತೋ. ಗಡ್ಡದಲ್ಲಿ ಐದು ದಿನಗಳ ಕೂದಲು, ಅಂಗಿ ರೇಷ್ಮೆಯದು. ಆದರೆ ಶುದ್ಧ ಕೊಳಕು; ಇಸ್ತ್ರಿಯ ಪೆಟ್ಟಿಗೆಯನ್ನು ಅದು ಕಂಡ ಹಾಗೆ ಕಾಣುತ್ತಲೇ ಇರಲಿಲ್ಲ. ಕೈ ಬೆರಳುಗಳಿಗೆಲ್ಲಾ ಕಜ್ಜಿ ಹತ್ತಿದ ಹಾಗೆ ಉಂಗುರ.ಮುಖಕ್ಕೆ ನಾಮ.ಎಂಥ ಬಾಬಯ್ಯನ ಹಬ್ಬದ ಮನುಷ್ಯ ಈತ. ಸಿರಿವಂತ ಇರಬಹುದು. ಆದರೆ ಶುದ್ಧ ಅಸಂಸ್ಕೃತ. ಜತೆಗೆ ಮೊದ್ದ. ಒಂದು ಮಾತಿಲ್ಲ, ಒಂದು ಸದ್ದಿಲ್ಲ.ಸುಮ್ಮನೆ ಕತ್ತನ್ನು ಕೂತ ಕಿಟಕಿಯ ಹೊರಗೆ ಹಾಕಿ ಎಲ್ಲವನ್ನೂ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದ. ಇವನೆಲ್ಲಿ, ಈಕೆ ಎಲ್ಲಿ? ಈಕೆಯ ಉಡುಗೆಯಲ್ಲೇ ಎಂಥ ಕಳೆ. ಈ ಅಪ್ಸರೆಗೆ ಇಂಥವನೇ ಗಂಡನಾಗಬೇಕೆ ಎಂದುಕೊಂಡೆ.

ಇವರಿಬ್ಬರ ನಡುವೆ ಕುಳಿತಿದ್ದ ಆ ಹುಡುಗ, ಅವನ ತಮ್ಮನೋ ಇವಳ ತಮ್ಮನೋ ಕಾಣೆ. ತಾನು ಈ ಪಕ್ಕದ ಕಿಟಕಿಯ ಹತ್ತಿರಕ್ಕೆ ಬರಬೇಕೆಂದು ಆ ಹುಡುಗಿಯನ್ನು ಕಾಡುತ್ತಿದ್ದ. ಅದಕ್ಕೆ ಸರಿಸಮನಾಗಿ ಆಕೆಯೂ ಹಠ ಹಿಡಿದು, ಆ ಹುಡುಗನ್ನು ಕೀಟಲೆ ಮಾಡಿ ಅಳಿಸುತ್ತ, ತನ್ನ ಜಾಗ ಬಿಡದೆಯೇ ಕುಳಿತಿದ್ದಳು. ತನ್ನ ಗಂಡನ ಹತ್ತಿರ ಕುಳಿತುಕೊಳ್ಳುವುದಕ್ಕೆ ಅವಳಿಗೆ ಇಷ್ಟವಿಲ್ಲವೇನೋ ಎಂದುಕೊಂಡೆ. ಆಕೆಯ ಮಾತು ಎಷ್ಟು ಮಧುರ. ದೋರುದಾಳಿಂಬೆಯ ಬಿತ್ತದ ಹಾಗೆ ಹಲ್ಲು,ಅವಳ ನಗುವಿನಲ್ಲಿ ಎಂಥ ಬೆಳಕಿನ ಸುಗ್ಗಿ .ಅದು ತುಟಿಯಲ್ಲಿ ಹರಡಿ, ಕೆನ್ನೆಯಲ್ಲಿ ಗುಳಿ ಬಿದ್ದಾಗ ಅದೆಂಥ ಮೋಹಕ ರೂಪ ಅವಳದು. ಆ ಬುಲಾಕಿನ ಮುತ್ತು ಈ ದಿವ್ಯಸ್ಮಿತಕ್ಕೆ ತಕ್ಕ ಕನ್ನಡಿ. ಆಕೆ ನಕ್ಕ ಬೆಳಕನ್ನೆಲ್ಲಾ ಶೇಖರಿಸಿಕೊಂಡು ಇದು ಇಷ್ಟು ಹೊಳಪೂ, ಗಾತ್ರವೂ ಆಯಿತೇನೋ, ನೋಟದ ಮಿಂಚಿದ ಘಾತ ಮಾತ್ರ ನನಗೆ.
ನನ್ನೊಡನೆ ಚೆಲ್ಲಾಟವಾಡಬೇಕೆಂದೇ ಆ ಹುಡುಗನನ್ನು ಈ ರೀತಿ ಕುಚೇಷ್ಟೆ ಮಾಡುತ್ತಿದ್ದಾಳೋ ಎಂದು ನನಗೆ ತೋರುತ್ತಿತ್ತು. ಒಮ್ಮೆ ಅವನನ್ನು ಸಿಡುಕಿಕೊಂಡು, ಒಂದು ತರದ ಕೊಂಕಿನಿಂದ ಮುಖವನ್ನು ಕಿಟಕಿಯ ಹೊರಕ್ಕೆ ಹಾಕುತ್ತಾಳೆ. ಇನ್ನೊಂದು ಕ್ಷಣದಲ್ಲಿ, ಆ ಹುಡುಗನ ಕಡೆಗೆ ಸರ್ರನೆ ತಿರುಗಿ ಒನಪಿನಿಂದ ತಿರುಗುವಾಗ, ಆಡುವ ಹಾವಿನ ಹೆಡೆಯಂತೆ ಈ ತೆಳುನಡುವಿನವಳ ದೇಹ ಮೋಹಕವಾಗುತ್ತದೆ. ಈ ಮಧ್ಯದಲ್ಲಿ ನನ್ನ ಕಡೆಗೆ ಬಲುತುಂಟ ಕಟಾಕ್ಷವನನ್ನು ಬೀರುತ್ತಾಳೆ. ಆ ಮಿಂಚಿನ ಹೊಳಪನ್ನು ಹೇಳತೀರದು. ನನ್ನ ಹೃದಯ ಮೊದಲೇ ಈ ರೂಪಿನಿಂದ ಅಸ್ಥಿರವಾಗಿಬಿಟ್ಟಿದೆ. ಈಗ ಈ ಕಣ್ಣಿನ ಝಳಕು ಬೇರೆ ಅದರ ಮೇಲೆ ಬಿದ್ದು ನನ್ನ ಭ್ರಾಂತ ಮನಸ್ಸು ಎಲ್ಲೆಲ್ಲಿಯೋ ಅಲೆಯುತ್ತಿದೆ- ಕೈಕನ್ನಡಿಯ ಮೇಲೆ ಬಿದ್ದ ಸೂರ್ಯಕಿರಣದ ಹಾಗೆ. ನನಗಾದ ಆ ಚಿತ್ತ ಚಾಂಚಲ್ಯವನ್ನೂ, ಆಗಿನ ನನ್ನಾತ್ಮದ ದೀಪ್ತಿಯನ್ನೂ ಹೇಳಲಾಸಲ್ಲ. ತುಂಟ ಹುಡುಗಿ- ಬಲು ತುಂಟ ಹುಡುಗಿ.

ಅವಳು ಸ್ವಲ್ಪ ಅಲುಗಿದರೂ, ಆಕೆ ಯಾವ ವಿಧವಾದ ಅಂಗಚಲನೆಯನ್ನು ಮಾಡಿದರೂ, ನನಗೊಂದು ತರದ ಹಿತವಾದ ನೋವಾಗುತ್ತಿತ್ತು. ಹಾಗೆ ನಗಬೇಡ, ಈ ತೆರ ಕಡೆಗಣ್ಣು ಹಾರಿಸಬೇಡ, ಈ ರೀತಿ ನಿನ್ನ ಮೈಯನ್ನು ತಿರುಗಿಸಬೇಡ, ಕೈ ಆಡಿಸಬೇಡ, ಸ್ವಸ್ಥಳಾಗಿರು ದಮ್ಮಯ್ಯಾ, ಎಂದು ಗೋಗರೆಯುವ ದುಃಸ್ಥಿತಿಗೆ ಇಳಿದಿದ್ದೆ ನಾನು. ಕೊನೆಗೆ ಆ ಹುಡುಗನಿಗೆ ಕಿಟಕಿಯ ಹತ್ತಿರ ಜಾಗಕೊಟ್ಟು ಈ ಕಡೆಗೆ ಒತ್ತರಿಸಿಕೊಂಡಳು. ಗಂಡ ಪಕ್ಕದಲ್ಲಿ ಮೊದ್ದಾಗಿ ಕಿಟಕಿಯ ಕಡೆ ತಲೆಹಾಕಕೊಂಡೇ ಕುಳಿತಿದ್ದ. ಈಕೆ ಅವನನ್ನು ಮಾತನಾಡಿಸುವುದಕ್ಕೆ ಪ್ರಯತ್ನಪಟ್ಟಳು. ಆತ ಮೌನ. ಇಲ್ಲವೇ ಏನೋ ಒಂದು ಮಾತಿನ ಗುಟುರನ್ನು ಹಾಕುತ್ತಾನೆ ಅಷ್ಟೆ. ಈ ಕಡೆಯೂ ನೋಡುವುದಿಲ್ಲ. ವಿಧಿ ಎಂತಹ ಕುರುಡ. ಎಂಥ ಗೆಲುವಾದ ಬೆಡಗಿ ಈ ಹೆಣ್ಣು , ಶುದ್ಧ ಮಂಕು ಈ ಗಂಡ ಎಂದು ನಾನು ಮನಸ್ಸಿನಲ್ಲಿ ಪರಿತಾಪ ಪಡುತ್ತಿರುವಾಗ, ಈ ವಿಷಾದಕ್ಕೆ ಅವಕಾಶ ಕೊಡದಂತೆ ಆಕೆ, ತಿರುಗಿ ನನ್ನ ಕಡೆಗೆ ಮಿಂಚಿನ ನೋಟವನ್ನೆಸೆದು, ಕಿಟಕಿಯ ಹತ್ತಿರ ಕುಳಿತಿದ್ದ ಆ ಹುಡುಗನನ್ನು ಕೀಟಳೆ ಮಾಡುತ್ತಾಳೆ. ಬಲು ಚಟುವಟಿಕೆಯುಳ್ಳ ಹುಡುಗಿ. ಅವಳ ಭಾವ ಭಂಗಿ ಎಂಥವರ ಮನಸ್ಸನ್ನೂ ಚಿಟುಕುಮುಳ್ಳಾಡಿಸುತ್ತದೆ. ಪ್ರಣಯ ಪ್ರಸಂಗದಲ್ಲಿ ಬಾಲೆಯಲ್ಲ, ಪ್ರೌಢೆ ಎನ್ನಿಸುವಂತಿತ್ತು ಆಕೆಯ ಆಟಗಾರಿಕೆ. ಆಕೆಗೆ ನಾನು ತೀರ ಬೆರಗಾದೆ. ಅಂಥ ಚೆಲುವುಳ್ಳ, ಅಷ್ಟು ಗೆಲುವುಳ್ಳ ಹೆಣ್ಣನ್ನು ನಾನು ನೋಡಿಯೇ ಇಲ್ಲ. ಅವಳು ನನ್ನನ್ನು ಈ ರೀತಿಯಾಗಿ ಗೋಳುಹೊಯ್ದುಕೊಳ್ಳುತ್ತಿರುವಾಗ ಒಂದು ಸ್ಠೇಷನ್ ಸಮೀಪಿಸಿತು.ಅಲ್ಲಿ ಒಂದು ಚಮತ್ಕಾರ ನಡೆಯಿತು.

ಅಲ್ಲಿ ರೈಲುಗಾಡಿಯ ಹತ್ತಿರಕ್ಕೆ ತಾಳೆ ಹೂಗಳನ್ನು ಕುಕ್ಕೆ ತುಂಬ ತುಂಬಿಕೊಂಡು ಒಬ್ಬ ಮಾರುವುದಕ್ಕೆ ಬಂದಿದ್ದ. ಆ ಹೂವನ್ನು ನೋಡಿ ಈ ಮೊದ್ದುಗಂಡ, ತಲೆಯನ್ನು ಗಾಡಿಯೊಳಕ್ಕೆ ತಿರುಗಿಸಿ, ಹೆಂಡತಿಯನ್ನು ಒಂದು ತೆರದ ನಗೆ ಭಾವದಲ್ಲಿ ‘ಬೇಕೇ?’ ಎನ್ನುವ ಹಾಗೆ ನೋಡುತ್ತಾನೆ. ಆಕೆ ತಲೆಯಾಡಿಸಿ, ದಿವ್ಯಸ್ಮಿತವೊಂದನ್ನು ಬೀರಿ, ಸನ್ನೆಯಿಂದಲೇ ಹ್ಞೂ ಎನ್ನುತ್ತಾಳೆ.ಆತನ ನಗೆ ಅವನ ರೂಕ್ಷ ಭಾವವನ್ನೆಲ್ಲ ತೊಳೆದು ಮುಖಕ್ಕೆ ಒಂದು ಅಲೌಕಿಕವಾದ ತೇಜಸ್ಸನ್ನು ಕೊಡುತ್ತದೆ. ಅದು ಪ್ರೇಮದ ಹೊಳಪು. ಈಕೆಯ ಮಿದು ನಗೆ ಅದಕ್ಕೆ ಹೊಳಲು ಕೊಡುತ್ತಿದೆ. ಆಕೆಯ ಈ ಮೊದಲಿನ ಚೆಲ್ಲಾಟಕ್ಕೂ, ಈಗಿನ ಈ ಭಾವಕ್ಕೂ ಯಾವ ಸಂಬಂಧವೂ ಇಲ್ಲ. ಅವಳ ಹೃದಯದ ಸ್ಥಿರ ಸ್ವರೂಪ ಈ ಪ್ರೇಮಭಾವ. ನನಗೆಸೆಯುತ್ತಿದ್ದ ಕಟಾಕ್ಷ ಅದರ ಚರ ಸ್ವರೂಪ. ಅದು ಸತ್ಯ, ಇದು ಮಿಥ್ಯ, ಮಾಯೆ. ಇವೆರಡೂ ಅನುಭಬೈಕವೇದ್ಯ. ಆತ ತೆಗೆದುಕೊಟ್ಟ ತಾಳೆ ಮೋತೆಯ ಒಂದೆಸಳನ್ನು ಆಕೆ, ನನ್ನನ್ನು ಮೊದಲಿನ ಕೊಂಕಿನ ಭಾವದಲ್ಲೇ ನೋಡುತ್ತಾ ಮುಡಿದುಕೊಳ್ಳುತ್ತಾಳೆ, ತಿರುಗಿ ಕಳೆದಿಡುತ್ತಾಳೆ. ಈಗ ಜಡೆ ಬಿಚ್ಚಿ ನಾಲ್ಕೆಸಳನ್ನು ಹೆಣೆದುಕೊಳ್ಳುತ್ತಾಳೆ, ಮೇಲೊಂದು ಮುಡಿಯುತ್ತಾಳೆ. ಆ ತೋಳಿನ ಕುಲುಕಾಟ, ಬೆರಳುಗಳ ಮನೋಹರವಾದ ನರ್ತನ, ಕೆನ್ನೆಗುಳಿ ಬೀಳಿಸುವ ನಗು. ತಲೆ ಬಗ್ಗಿ ಹೂವನ್ನು ಮುಡಿದುಕೊಳ್ಳುವಾಗ ನನ್ನ ಕಡೆಗೆಸೆಯುವ ಕೋರೆನೋಟ- ಎಲ್ಲ ಬಲು ಮನೋಹರವಾಗಿವೆ.

ಆದರೆ ಇವೊಂದೂ ಈಗ ನನ್ನನ್ನು ಮರುಳು ಮಾಡುತ್ತಿಲ್ಲ. ಆ ತುಂಟ ಹುಡುಗಿ ನನ್ನನ್ನು ಬೇಕೆಂದೇ ನೋಡಿ ನಗುತ್ತಿದ್ದಾಳೆ. ನನಗೆ ಅವಳಲ್ಲಿ ಆಸಕ್ತಿ ಈಗ ಕಡಿಮೆ. ಗಂಡಸಿಗೆ ಹೆಂಗಸಿನ ಮೇಲೆ ಗೌರವ ಹುಟ್ಟಿಬಿಟ್ಟ ಮೇಲೆ ಏನು ಪ್ರಯೋಜನ? ನನಗೆ ತೀರ ನಾಚಿಕೆಯಾಯಿತು. ಎಲೆ ಎಲಾ ಹುಡುಗಿ ಎಂದು ನಾನು ವಿಭ್ರಾಂತನಾದೆ. ರೈಲು ಹೊರಟಿತು. ಸ್ಟೇಷನ್ನಿನ ಹೆಸರು ನನಗೆ ಈಗ ಕಣ್ಣಿಗೆ ಬಿತ್ತು. ನಾನು ಇಳಿಯಬೇಕಾಗಿದ್ದುದು ಇದಕ್ಕೆ ಹಿಂದಿನ ಸ್ಟೇಷನ್ನಿನಲ್ಲಿ! ಈ ದಾರಿಯಲ್ಲಿ ಎಲ್ಲಾ ಸ್ಟೇಷನ್ನುಗಳೂ ಒಂದೇ ತರಹ. ಅಲ್ಲದೆ ಇದುವರೆವಿಗೂ ಈ ಚೆಲ್ಲಾಟದ ಹುಡುಗಿಯ ಭ್ರಮೆ ಬೇರೆ ನನಗೆ. ಹೊತ್ತೇ ಗೊತ್ತಾಗಲಿಲ್ಲ. ಎಂಥ ಮೋಸವಾಗಿ ಹೋಯಿತು, ಎಂಥ ಮೋಸವಾಗಿ ಹೋಯಿತು! ಆದರೆ ಅಬ್ಬ, ಎಂಥ ಹುಡುಗಿ, ಎಂಥ ಚಮತ್ಕಾರ.
ಕಾಲ ಈ ಮಾಯಾಂಗನೆಯ ವೇಷ ಹಾಕಿಕೊಂಡು ನನ್ನನ್ನು ಗೇಲಿಮಾಡುವುದಕ್ಕೆ ಈ ತೆರ ಬಂದಿತ್ತೇನೋ. ಅಬ್ಬ ಎಂಥ ಹುಡುಗಿ, ಎಂಥ ಚೆಲ್ಲಾಟ; ಆ ಮೊದ್ದನನ್ನು ಕಂಡರೆ ಎಂಥ ಪ್ರೇಮ, ಹೆಂಗಸರನ್ನು ನಂಬುವಂತೆಯೇ ಇಲ್ಲ. ಸದಾರಮೆ ಆ ಕಳ್ಳನನ್ನು ವಂಚಿಸಿದ ಹಾಗೆ ಈಕೆ ನನ್ನನ್ನು ವಂಚಿಸಿದಳು. ಅಂಥ ಠಕ್ಕಿನ ವಿಲಾಸ ಇವಳದು. ಅವಲ ಗಂಡನಿಗೊಂದು ತರದ ಭಾವ-ನಮ್ಮಂಥವರಿಗೊಂದು ಭಾವ. ಅಬ್ಬ ಎಂಥ ಹುಡುಗಿ.ಕೊನೆಗೆ ಕಾಲ ನನ್ನನ್ನು ಸೋಲಿಸಿತು. ನಿನ್ನೆ ನಮ್ಮೂರಿಗೆ ನಾನು ಬರಲೇ ಆಗಲಿಲ್ಲ.
ರೈಲು ಮುಂದುವರೆಯುತ್ತಿರಲು, ನನಗೆ ಕುತೂಹಲ ಕಡಮೆಯಾಗದಿದ್ದರೂ, ಆ ಹುಡುಗಿಯಲ್ಲಿದ್ದ ಮೋಹ ಹೊರಟುಹೋಯಿತು. ಈಗ ಗಂಡ ಕಿಟಕಿಯಿಂದ ಮುಖವನ್ನು ಒಳಕ್ಕೆ ಇಟ್ಟುಕೊಂಡು ಹೆಂಡತಿಯ ಕಡೆ ನೋಡುತ್ತಾನೆ. ಈಗ ಆತ ನನಗೆ ಮೊದ್ದನಂತೆ ಕಾಣುವುದಿಲ್ಲ. ಬಹಳ ಗೌರವಸ್ಥನಂತೆ ಕಾಣುತ್ತಾನೆ, ಆಕೆ ಒಂದು ಸಣ್ಣ ತಾಳೆಯ ಹೂವಿನ ಎಸಳನ್ನು ಆತನ ಅಂಗಿಗೆ ಸಿಕ್ಕಿಸಿ ಒಂದು ತೆರದಲ್ಲಿ ನಲಿಯುತ್ತಾಳೆ. ಆಮೇಲೆ ನನ್ನ ಕಡೆಗೆ ನೋಡಿ ನಗುತ್ತಾಳೆ. ಅಂಥ ಹುಡುಗಿಯನ್ನು ಈ ಜನ್ಮದಲ್ಲಿ ನಾನು ತಿರುಗಿ ನೋಡುವಂತಿಲ್ಲ. ಮುಂದಿನ ಸ್ಟೇಷನ್ನು ಬಂತು. ನನಗೆ ಈ ಹುಡುಗಿಯ ಸಹವಾಸ ಸಾಕಾಗಿ, ಪ್ರಕೃತಿ ದರ್ಶನದಲ್ಲಿ ನಾನು ಸಮಾಧಾನವನ್ನು ಕಾಣುತ್ತಿದ್ದೆ. ಈ ಸ್ಟೇಷನ್ನಿನಲ್ಲಿ ನನ್ನ ಹಳೆಯ ಸ್ನೇಹಿತ ರಾಮು ಕಣ್ಣಿಗೆ ಬಿದ್ದ. ಅದರ ಹತ್ತಿರದ ಒಂದು ಹಳ್ಳಿಯಲ್ಲಿ ಅವನ ಮನೆ. “ರಾಮೂ” ಎಂದೆ. ಅವ ಹತ್ತಿರ ಬಂದು, “ಎಲ್ಲಿಗೆ ಪ್ರಯಾಣ” ಎಂದ. “ಎಲ್ಲಿಗೂ ಇಲ್ಲ” ಎಂದೆ. ” ಹಾಗಾದರೆ ಇಲ್ಲೆ ಇಳಿ” ಎಂದ. ಹ್ಞೂ ಎಂದು ಇಳಿದೇಬಿಟ್ಟೆ. ರಾಮುವಿಗೂ ಆಶ್ಚರ್‍ಯ.

ನಾನು ರೈಲಿಳಿಯುವಾಗಲೂ ಆಕೆ ನನ್ನನ್ನು ನೋಡಿ ಒಂದು ಸಲ ನಕ್ಕಳು. ಆಮೇಲೆ ಗಂಡನನ್ನು ನೋಡಿ ಒಂದು ಕಿರುನಗೆ ಬೀರಿದಳು. ಆ ಹುಡುಗನಿಗೆ ಕಚಗುಳಿಯಿಟ್ಟು ಅವನ ಕೂದಲನ್ನೆಳೆದಳು. ಆಹಾ ಬಲು ಸೋಜಿಗದ ಹುಡುಗಿ ಆಕೆ. ನನಗೆಲ್ಲಿಯಾದರೂ ಆಕೆ ಗಂಟುಬಿದ್ದಿದ್ದರೆ, ನಾನು ಅಸೂಯೆಯಿಂದ ಏನಾಗಿಬಿಡುತ್ತಿದ್ದೆನೋ. ಅವಳ ಗಂಡ ಗಂಭೀರವಾದ ಹುಡುಗ, ಗಟ್ಟಿಗ. ಕಾಳಿ ಆಕೆ- ಕಾಲ ಸ್ವರೂಪಿಣಿ, ನನ್ನ ಹೃದಯವನ್ನು ಚೆನ್ನಾಗಿ ಕುಣಿಸಿದಳು. ರೈಲು ಹೊರಡುವವರೆಗೂ ರಾಮುವಿಗೆ ಅಞ ಊಞ ಎಂದು ಉತ್ತರ ಕೊಡುತ್ತಾ ಈ ದಂಪತಿಗಳ ಮೇಲೆ ನನ್ನ ಓರೆನೋಟವನ್ನಿಡುತ್ತಾ ಅಲ್ಲೆ ನಿಂತಿದ್ದೆ. ಅದು ಹಾಯಾಗಿ ಸಿಗರೇಟನ್ನು ಸೇದುವಂತೆ ಹೊಗೆಯನ್ನು ಕಾರುತ್ತಾ, ಮೂಲೆ ತಿರುಗಿ ಕೊಂಯ್ ಗುಟ್ಟಿದಾಗ, ಹಿಂದಕ್ಕೆ ತಿರುಗಿ ನೋಡಿ ನನ್ನನ್ನು ಗೇಲಿ ಮಾಡುತ್ತಿರುವಂತೆ ತೋರಿತು. ನಾನು ಖಿನ್ನನಾಗಿ ತಲೆತಗ್ಗಿಸಿಕೊಂಡೆ, ಸೋತನೆಂದು. ರಾಮುವಿನ ಹಳ್ಳಿಯಲ್ಲಿ ತಂಗಿದ್ದು, ಬೆಳಗಿನ ರೈಲಿನಲ್ಲಿ ನಾನು ಈ ಕಡೆಗೆ ಬಂದೆ. ವಿಚಿತ್ರ ಹುಡುಗಿ ಅವಳು, ಕಾಲದ ಗುಪ್ತಚಾರಿಣಿ. ಕಾಲದ ಮೇಲೆ ಮಾತ್ರ ಸ್ಪರ್ಧೆಗೆ ಹೋಗಬಾರದು. ಹೀಗೆ ಹಾಯಾಗಿದ್ದುಕೊಂಡು ಅದನ್ನು ಅಸಡ್ಡೆ ಮಾಡಬೇಕು. ಅದಕ್ಕೆ ಲಕ್ಷ್ಯಗೊಡುವುದೇ ಸಂಸಾರ. ಅದನ್ನು ಅಲಕ್ಷಿಸುವುದೇ ವಿಹಾರ. ಎಂಥ ಹುಡುಗಿ, ಎಂಥ ಮೋಸ.

ಹೀಗೆ ಅಶ್ವತ್ಥ ಮಾತು ಮುಗಿಸಿದ. ” ಒಳ್ಳೆಯ ಪ್ರಯಾಣ ನಿಮ್ಮದು” ಎಂದು ರಾಧಾಕೃಷ್ಣ ಗಟ್ಟಿಯಾಗಿ ನಕ್ಕ. ಶಾಮ ಮತ್ತು ರಾಘವ ಇದಕ್ಕೆ ಪಕ್ಕವಾದ್ಯ ಬಾರಿಸಿದರು. ನಾನು ಸುಮ್ಮನಿದ್ದೆ. ದಿಟವಾಗಿ ಬೆರಗುಗೊಳಿಸುವಂಥ ಅನುಭವ ಅಶ್ವತ್ಥನದು. ಅಷ್ಟು ಹೊತ್ತಿಗೆ ಫಲಾಹಾರ ಸಾಮಗ್ರಿಗಳೊಡನೆ ಇನ್ನೊಂದು ತಂಬಿಗೆ ತುಂಬ ಕಾಫಿ, ಶಾಸ್ತ್ರಿಗಳ ಮನೆಯಿಂದ ನಮ್ಮೆಡೆಗೆ ಬರುತ್ತಿತ್ತು. ನಮಗೆಲ್ಲಾ ಅದರ ಮೇಲೆ ಗಮನವಾಯಿತು. ಶಾಸ್ತ್ರಿಗಳು ” ಆ ಭದ್ರಕಾಳಿಯ ಕಡೆಗಣ್ಣು ಈತನ ಮೇಲೆ ಕಣಿದು, ಇವನ ಮನಸ್ಸನ್ನು ಸ್ವಲ್ಪಕಾಲ ಗೋಜ ಗೋಜಾಗಿ ಮಾಡಿತು” ಎನ್ನುತ್ತಾ ನಮ್ಮೆಡೆಗೆ ಸ್ಮಿತಪೂರ್‍ವಕವಾದ ದೃಷ್ಟಿಯನ್ನು ಬೀರಿದರು. ಅಶ್ವತ್ಥನಿಗೆ ಇದು ಕೇಳಿಸಲೇ ಇಲ್ಲ. ಆತ ಕುರ್ಚಿಯ ಹಿಂದಕ್ಕೆ ತಲೆಯಿಟ್ಟು, ಬಾನನ್ನು ದಿಟ್ಟಿಸಿತ್ತಾ, ನಿದ್ದೆಯಲ್ಲಿರುವವನು ಕನವರಿಸುವಂತೆ, ” ಅದು ಸಂಸಾರ, ಇದು ವಿಹಾರ” ಎನ್ನುತ್ತಲೇ ಇದ್ದ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.