ಟಿಪ್ಸ್ ಸುತ್ತ ಮುತ್ತ

“ಕಾಫಿಗೆ ಬರ್‍ತಿಯೇನೊ?”

ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು.

ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ.
“ಕಾಸಿಲ್ಲ ಕೊಡಿಸ್ತೀಯ?”
“ಬಾ ಹೋಗೋಣ…”

-ಹೊರಗಡೆ ಸಣ್ಣದಾಗಿ ಮಳೆ. ಮತ್ತೊಂದು ಸಂಜೆ ಕತ್ತಲೆಗೆ ತಿರುಗುತ್ತಿತ್ತು. ಪ್ರಿನ್ಸಿಪಾಲರ ರೂಮಿನಿಂದ ಹೊರಬಿದ್ದರು. ಅವಳು ಉಪಾಧ್ಯಾಯಿನಿ. ಅವನು ಗುಮಾಸ್ತ. ಅವಳ ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ. ಅವನ ಮನೆಯಲ್ಲಿ ಹೆಂಡತಿ, ಮಕ್ಕಳು, ಅಪ್ಪ, ಅಮ್ಮ, ದೊಡ್ಡ ಪರಿವಾರ. ಬೆಳಗಾದರೆ ಕಾಲೇಜು. ಕಾಲೇಜಾದರೆ ಮನೆ. ಮಧ್ಯೆ ಒಂದಷ್ಟು ಜಗಳ. ಮನೆಯಲ್ಲೂ, ಕಾಲೇಜಿನಲ್ಲೂ. ಯಾರಿಗಾದರೂ ಸರಿ-ತನ್ನನ್ನು ತಾನು ತೆರೆದಿಡಲೇ ಬೇಕು ಎಂಬ ಗಳಿಗೆಗಳು ಬಂದೇ ಬರುತ್ತವೆ. ಮಾತನಾಡಲು ತೊಡಗುತ್ತಾರೆ. ಒಳಗೊಂದು- ಹೊರಗೊಂದು. ಆ ಹೊರಗಿಗೂ ಒಂದು ಅರ್ಥವಿರುತ್ತದೆ. ಆ ಆರ್ಥದಲ್ಲೂ ಸಾರ್ಥಕತೆ ಕಾಣುವಾಸೆ… ಹೊರಗಿನದೂ ಕೇಂದ್ರವಾಗುತ್ತಾ ಸಾಂದ್ರವಾಗುತ್ತಾ ಹೋಗುತ್ತದೆ. ಅವರಿಬ್ಬರೂ ಮಾತನಾಡಲು ತೊಡಗುತ್ತಾರೆ. ಹೆಚ್ಚಾಗಿ ಅವಳನ್ನೇ ಅವನು ಮಾತನಾಡಲು ಬಿಡುತ್ತಾನೆ. ಶೋತೃವಾಗುತ್ತಾನೆ-ಪ್ರೇಕ್ಷಕನಾಗುತ್ತಾನೆ. ಗೋಚರಿಸದ್ದನ್ನೆಲ್ಲ ತಬ್ಬಿಕೊಳ್ಳುತ್ತಾನೆ. ಶ್ರದ್ಧೆಯಾಗುತ್ತಾ ಹೋಗುತ್ತದೆ…

ಎಷ್ಟೋ ಬಾರಿ ಅವನು ಅವಳ ಮಾತುಗಳನ್ನು ನಿರಾಕರಿಸಿಬಿಡುತ್ತಿದ್ದ. ಅವನ ನಿಲುವನ್ನೆಲ್ಲ, ನಿರಾಕರಣೆಯನ್ನೆಲ್ಲ ಅವಳು ತಾತ್ಸಾರದಿಂದ ಕಡಿದು ಉಗಿದು ಬಿಡುತ್ತಿದ್ದಳು. ಈ ಆವಾಹನೆ – ವಿಸರ್ಜನೆಗಳ ನಡುವೆ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ…ಇಲ್ಲಡಿದ್ದರೆ ಕುಡಿಯುತ್ತಿದ್ದ ಕಾಫಿಗಾಗಲಿ, ಆಡುವ ಮಾತಿಗಾಗಲಿ ಅರ್ಥವೆಲ್ಲಿಯದು? ಅಪ್ಪಿಕೊಂಡಾಗ ಅವನಿಗಂತು ಅಂತರಂಗ ಸೇರಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಪರಿವರ್ತನೆ.

ಒಮ್ಮೆ ಹೀಗೆ ಔಪಚಾರಿಕವಾಗಿ ಏನಾದರೂ ಮಾತನಾಡಲೆಬೇಕಲ್ಲ ಎಂಬ ಧ್ವನಿಯಲ್ಲಿ-
” ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಇದೆ..ಚಿಕ್ಕಹುಡುಗ.ಇನ್ನೂ ಹದಿನೆಂಟು ವರ್ಷ, ನಿರ್ದೇಶಿಸ್ತಾ ಇರೋದು..ಒಳ್ಳೆಯವನು, ಬರ್‍ತಿಯೇನೋ?” ಕೇಳಿದ್ದಳು.
” ಹದಿನೆಂಟು ವರ್ಷ…ದುರಹಂಕಾರ..” ಅವನು ಕೆಂಡ ಕಾರಿದ. ಅವಳ ಅಹ್ವಾನದಲ್ಲಿನ ಔಪಚಾರಿಕತೆಗೋ ಅಥವ..

ಆಹ್ವಾನವನ್ನು ತಿರಸ್ಕರಿಸಿದ್ದಕ್ಕೋ ಅಥವ ಅವನ ತಾತ್ಸಾರಕ್ಕೋ ಅವಳಿಗೂ ರೇಗಿತು. ತಟಕ್ಕನೆ ಕೇಳಿದ್ದಳು: ” ನಿನಗಿರೋ ಕೊಬ್ಬು ನೋಡು.. ಆ ಹುಡುಗನ ಬಗ್ಗೆ ನಿನಗೇನೂ ಗೊತ್ತಿಲ್ಲ. ನಿನಗೇನು ಹಕ್ಕಿದೆ ಮಾತನಾಡೋಕ್ಕೆ?” ಆಹ್ವಾನದ ಹಿಂದಿನ

ಔಪಚಾರಿಕ ಭಾವ ಕಳೆದು ಅವಳು ಹೂಡಿದ ವಾದದಲ್ಲಿ : ಹೌದು ನಿಜ- ಎಂದನ್ನಿಸಿ ಬಿಟ್ಟಿತು.

ಸಂಜೆ ಅವನೂ ರವೀಂದ್ರ ಕಲಾಕ್ಷೇತ್ರಕ್ಕೆ ಹೋದ. ಹತ್ತು ರೂ ತೆತ್ತು ನಾಟಕ ಪೂರ್ತಿ ನೋಡಿದ. ನಾಟಕ್ ಕೆಟ್ಟದಾಗಿತ್ತು. ರವೀಂದ್ರ ಕಲಾಕ್ಷೇತ್ರದ ವಿರುದ್ಧವೇ ಅವನ ಹಠ ಮತ್ತಷ್ಟು ಗಟ್ಟಿಯಾಗಿತ್ತು. ಆದರೆ ಅವನು ಅಂದು ರವೀಂದ್ರ ಕಲಾಕ್ಷೇತ್ರಕ್ಕೆ ಹೋದ ಬಗೆಗೆ ಪಶ್ಚಾತ್ತಾಪವಿರಲಿಲ್ಲ. ಅವನ ಮಟ್ಟಿಗೆ ಅದು ಸಣ್ಣ ಪರಿವರ್ತನೆಯೇನು ಅಲ್ಲ. ಎಲ್ಲವನ್ನೂ ತೆರೆದ ಕಣ್ಣೀನಿಂದ ನೋಡು ನಂತರ ಮಾತನಾಡುವ ಹಾದಿಗೆ ಬಿದ್ದ. ಅವಳನ್ನು ಅವನು ತನ್ನನ್ನೂ ಮೀರಿ ಗುರುಸ್ಥಾನಕ್ಕೇರಿಸಿದ್ದ. ಮೊದಲು ನೋಡು, ನಂತರ ಮಾತನಾಡು- ಇದು ಅವಳ ಥಿಯರಿಯಾಗಿರಲಿಲ್ಲ. ಅವಳ ಸ್ವಭಾವದಲ್ಲೇ ಇತ್ತು , ಇರಲಿಲ್ಲ. ಅದು ಅವನಿಗೆ ಬೇಕಾಗಿರಲಿಲ್ಲ. ಇದೆ – ಅವಳಲ್ಲಿ ಇದೆ ಎಂಬ ನಂಬಿಕೆಯೆ ಅವಳನ್ನು ಅಪ್ಪಿಕೊಳ್ಳುವ ಶ್ರದ್ಧೆಯಾಗಿತ್ತು . ಆಧಾರವಾಯ್ತು . ಸಾಕು , ಅರ್ಥಗಳು ಗೋಚರಿಸಲಾರಂಭಿಸಿತು….

ಹೋಟೆಲ್ಲಿಗೆ ಹೋಗುವ ಹಾದಿಯಲ್ಲಿ ಫುಟ್‌ಪಾತಿನ ಮೇಲೆ ರಾಶಿ ರಾಶಿ ಬಟ್ಟೆಗಳು. ಬಳಿಗೆ ಹೋಗಿ ರಾಶಿಯಿಂದ ಒಂದು ಅಂಗಿಯನ್ನು ಆರಿಸಿಕೊಂಡು ಅಳತೆಯನ್ನು ಅಂದಾಜು ನೋಡತೊಡಗಿದಳು. ” ಅಣ್ಣನಿಗಾ?” – ಕೇಳಿದ. “ಹೂಂ” ಅಳತೆಯಲ್ಲಿ ಮಗ್ನಳಾದಳು. ಅವನು ಅವಳನ್ನು ಮತ್ಸರದಿಂದ ನೋಡತೊಡಗಿದ. ಅವಳ ಮಗ್ನತೆ ಅವನಿಗೆ ಸಾಧ್ಯವಿರಲಿಲ್ಲ. ಅವಳು ಖರೀದಿಸಲಿಲ್ಲ. ಕಾರಣವೇ ಎಂದು ಅವನೇನೂ ಕೇಳಲಿಲ್ಲ. ಸುಮ್ಮನೆ ಮೆಜೆಸ್ಟಿಕ್‌ನ ಫುಟ್‌ಪಾತಿನ ಮೇಲೆ ಇನ್ನೂ ಕಡಿಮೆ ಕಾಸಿಗೆ ಸಿಕ್ಕುತ್ತೆ ಎಂದಷ್ಟೆ ಗೊಣಗಿದ. ಅವಳು ಹೂಂ ಅನ್ನಲಿಲ್ಲ- ಊಹೂಂ ಅನ್ನಲಿಲ್ಲ. ಹೋಟೆಲ್‌ನಲ್ಲಿ ಕಾಫಿಗೆ ಆರ್ಡರ್ ಮಾಡಿ ತಟಕ್ಕನೆ ತಪ್ಪು ಅರಿವಾದವಳಂತೆ ” ಏನಾದ್ರೂ ತಿಂತೀಯೇನೋ?” ಪ್ರಶ್ನಿಸಿದಳು. ರೋಟಿ ಆರ್ಡರ್ ಮಾಡಿದ.

ಅವ್ನಿಗೆ ರೋಟಿಯೆಂದರೆ ಬಹಳ ಇಷ್ಟ. ಬಯಸಿ ಬಯಸಿ ತಿನ್ನುತ್ತಿದ್ದ. ಬ್ರೆಡ್ ಬಟರ್ ಜಾಮ್, ಕಟ್ಲೆಟ್, ಸ್ಯಾಂಡ್‌ವಿಚ್, ಸ್ಕ್ರಾಂಬಲ್ಡ್ ಎಗ್, ಫ್ರೆಂಚ್ ಟೋಸ್ಟ್, ಹೀಗೆ ಮೆನುವನ್ನೆ ಮೆತ್ತಿಕೊಡು ಬೆಳೆದಿದ್ದ ಹೋಟೆಲ್ಲನ್ನು ಕಂಡರೆ ಅವನಿಗೆ ಆಗುತ್ತಿರಲಿಲ್ಲ. ಶುದ್ಧ ಭಾರತೀಯ ಹೆಮ್ಮೆಯ ಘೋಷಣೆ ಬರಿಯ ಕವಚವಾಗಿದ್ದದ್ದನ್ನು ಕಂಡು ತೀರಾ ಅಸಹ್ಯಿಸಿಕೊಂಡಿದ್ದ. ಆ ರಸ್ತೆಯ ತುಂಬಾ ಅಂತಹ ಹೋಟೆಲ್ಲುಗಳೆ. ಊಳಿದದ್ದು ಪಬ್‌ಗಳು. ಅಲ್ಲೊಂದು ಇಲ್ಲೊಂದು ಪಾನಿಪುರಿ, ಭೇಲ್ ಪುರಿ ಗಾಡಿಗಳು.ಅವುಗಳ ಮುಂದೆ ರಸ್ತೆಯಲ್ಲಿ ಕಾರುಗಳು.

“ನಾನು ಹಳ್ಳಿಗೆ ಹೋದಾಗ ನಮ್ಮತ್ತೆ – ಅಜ್ಜಿ ಹೀಗೆ ಕೆಂಡದ ರೊಟ್ಟಿ ಸುಟ್ಟು ಕೊಡುತ್ತಿದ್ದರು.” – ಯಾಕೆ ರೋಟಿಯನ್ನು ಇಷ್ಟ ಪಡುತ್ತೇನೆ ಎಂಬುದಕ್ಕೆ ಕಾರಣ ಅವಳ ಸಮ್ಮುಖದಲ್ಲಿ ಬಯಲಾಗಿ , ಅವನ ಅರಿವಿಗೂ ಗೋಚರವಾದದ್ದು ಅವನಿಗೆ ಆಶ್ಚರ್ಯವಾಯ್ತು- ಆಗಲಿಲ್ಲ. ಅವಳ ಬಗೆಗೆ ಮತ್ತಷ್ಟು ಗೌರವ.
“ನಾನು ನಿನ್ನನ್ನು ಪ್ರೀತಿಸುತ್ತೇನೆ..” ಒಳಗೆ ಗಟ್ಟಿಯಾದ ಭಾವವನ್ನು ಹೊರಗೆಡವಲು ನಾಲಿಗೆ ತುದಿಗೆ ಬಂದಿದ್ದ ಪದಗಳನ್ನು ಕತ್ತರಿಸಿದ. “ಹಾಗಂದರೆ ಏನು?”- ಅವಳು ಕೇಳೆ ಕೇಳುತ್ತಾಳೆ.ಒಳಗೆ ತಡಕಿಕೊಂಡಾಗ ಉತ್ತರ ಅವನಿಗೆ ಸ್ಪಷ್ಟವಿರಲಿಲ್ಲ. ಹೀಗೆ ಸ್ಪಷ್ಟವಾಗದ್ದರ ಕುರಿತು ಏನೆ ಹೇಳಿದರೂ ಸುಳ್ಳಾಗುತ್ತದೆ. ಬೇಡವೆಂದು ನಿರ್ಣಯಿಸಿ ಸುಮ್ಮನಾದ. ಹೊರಗಡೆ ಕತ್ತಲು- ಒಳಗೆ ಮಂಕು ಬೆಳಕು. ರೊಟ್ಟಿ ತಿನ್ನುತ್ತಲೇ ಅವಳ ಮುಖವನ್ನು ನೋಡತೊಡಗಿದ.
” ನನಗೆ ಬೆಂಗಳೂರು ಬೇಜಾರಾಗಿ ಹೋಗಿದೆ. ದೂರ ಹೋಗ್ಬೇಕೂಂತನ್ನಿಸ್ತಿದೆ.” ಅವಳ ಮಾತುಗಳಲ್ಲಿ ಅವನ ಭಾವ ಧ್ವನಿಯೊಡೆದಿತ್ತು. ವಯಕ್ ಎಂದು ನಾಸಿಯಾ. “ಯಾಕೆ ?” ಕಷ್ಟ ಪಟ್ಟು ಕೇಳಿದ. ಅನುಚಿತವಾದರೆ…ಆತಂಕ. ತೀರಾ ವೈಯಕ್ತಿಕವಾದದ್ದನ್ನು ಕೇಳಲು ಸಂಕೋಚ. ಅವಳು:
” ಮನೇಲಿ ಮದುವೆ ಮಾಡ್ಕೋಂತ ಹಠ ಹಿಡಿದಿದ್ದಾರೆ…ನನಗೆ ಯಾರೋ ಅಪರಿಚಿತನ ಜೊತೆ …ಆಗೋಲ್ಲ…”
“ನಿನ್ನ ತಂದೆ ತಾಯಿ ಸಂಕಟಾನ ಅರ್ಥ ಮಾಡಿಕೋಬಲ್ಲೆಯ..?
ತಪ್ಪೂಂತನ್ನಿಸೋಲ್ವ?”

” ಆಯ್ತು- ಅರ್ಥವಾಗುತ್ತೆ…ಆದ್ರೂ ನನಗಾಗೋಲ್ಲ…ಅದಕ್ಕೇ ಈ ಕೆಲಸ ಬಿಟ್ಟು ಬೇರೆ ಕಡೆ ಹೋಗ್ಬೇಕೂಂತನ್ನಿಸ್ತಿದೆ…”

” ಆಗ ಅವರ ಸಂಕಟವೇನೂ ಕಮ್ಮಿಯಾಗೋಲ್ಲ. ನೀನು ನಿನ್ನ ನೀರ್ಣಯ ಏನೂನ್ನೋದನ್ನ ಅವರಿಗೆ ಹೇಳು. ಮನದಟ್ಟು ಮಾಡಿಸು…”

” ಅವರಿಗೆ ಅರ್ಥವಾಗೋಲ್ಲ. ಯಾರನ್ನಾದರೂ ಸರಿ ಮದ್ವೆ ಮಾಡ್ಕೋಂತ ಹಠ ಹಿಡೀತಾರೆ”

” ಈ ಪಲಾಯನದಿಂದ ಯಾರಿಗೂ ಏನೂ ಪರಿಹಾರ ಸಿಕ್ಕೋಲ್ಲ.”

” ನಿಜ ಇರಬಹುದು… ಆದರೂ..”

ಅವಳ ಹಠ ಅವಳ ತಳಮಳ ಅವನಿಗೆ ಅರ್ಥವಾಗುತ್ತೆ. ಆದರೂ ಅವನು ಅವಳ ತಾಯ್ತಂದೆಯರ ಪರವಾಗೇ ವಾದಿಸುತ್ತಾನೆ.ಹಾಗೆ ವಾದಿಸುವುದೂ ಪ್ರಯೋಜನವಿಲ್ಲ.- ನಿರ್ಣಯ ಅವಳದೇ ಅಲ್ಲವೆ..ಅವನಿಗೆ ಗೊತ್ತು. ಆದರೂ ಒಳಗೇ ಗೊಣಗಿಕೊಳ್ಳುತ್ತಾನೆ- ಅಪ್ಪ ಅಮ್ಮನ ಮಾತುಗಳನ್ನ ಕೇಳಿಕೊಡು ಇರೋಕ್ಕೆ ಯಾಕಾದ್ರು ಆಗೋಲ್ಲ? ಹಾಳಾಗಿ ಹೋಗಲಿ ಒಂದು ನಿರ್ಣಯಕ್ಕಾದರೂ ಬಂದು.. ಆಚೆಗೂ ನಿಲ್ಲದ ಈಚೆಗೂ ನಿಲ್ಲದ… ಹ್ಯಾಗೂ ಕಾಲ ಕಳೀತಿದೆ. ಜೀವನದಲ್ಲಿ ಮದ್ವೇನೆ ಎಲ್ಲವೂ ಅಲ್ಲ. ಅದು ಅವ್ನಿಗೂ ತಿಳಿದಿದೆ..ಆದರೂ ..ಮತನ್ನಾಡಿದರೆ ಜಗಳವಾಗುತ್ತೆ.

“ಅತಿಯಾಗಾಡ್ಬೇಡ ” ಗದರಿಸ್ತಾಳೆ. ಸಹಮತ ಯಾವುದರಲ್ಲೂ ಇಲ್ಲ. ಸದಾಜಗಳ.ಒಮ್ಮೊಮ್ಮೆ ಇಬ್ಬರಿಗೂ ಸಿಟ್ಟು ಬರುತ್ತೆ. ಕಪಾಳಕ್ಕೆ ಹೊಡೆಯುವಷ್ಟು. ಹಾಗಂತ ಅವಳೂ ಹೇಳಿದ್ದಾಳೆ. ಅವನೂ ಹೇಳಿದ್ದಾನೆ. ಒಮ್ಮೆ ಹೊಡೆದು ಬಿಡುವಷ್ಟು ಕೋಪ.

” ಹೊಡೀತೀನಿ ಈಗ..”

“ನಮ್ಮಪ್ಪ ಅಮ್ಮನೇ ಹೊಡೆದಿಲ್ಲ.” – ತಟಕ್ಕನೆ ಅವಳು ಮಾತುಗಳಲ್ಲಿ ಹೊಡೆದೇ ಬಿಟ್ಟಳು.

ಅವನಿ‌ಇಗೇನೂ ಬೇಸರವಾಗಲಿಲ್ಲ. ಗೆರೆ ಹಾಕಲೇ ಬೇಕಿತ್ತು. ಹಾಕಿಯಾಯ್ತು. ಅವಳಿಗೂ ಬೇಸರವಾಗಲಿಲ್ಲ.

ರೋಟಿ ತಿಂದು ಮುಗಿಸಿದ್ದ. ಕಾಫಿ ಆಯ್ತು. ಬಿಲ್ ಕೊಟ್ಟು ಒಂದು ರೂಪಾಯಿ ಟಿಪ್ಸ್ ಬಿಟ್ಟಳು.

” ಟಿಪ್ಸ್ ಯಾಕೆ ಬಿಡ್ತೀಯ?” ಜಗಳ ಆಡಬಾರದು ಎಂದು ಎಷ್ಟೇ ನಿರ್ಣಯಿಸಿದ್ದರೂ ಒಮ್ಮೊಮ್ಮೆ ಅತಿಯಾಗಿ ಆಡುತ್ತಾನೆ – ಬಫೂನ್.

ಅವಳ ಕಣ್ಣಲ್ಲಿ ಉರಿ ಕಾಣಿಸಿಕೊಂಡಿತು. ಈ ಪ್ರಶ್ನೆಯನ್ನು ಅವನು ನಾಲ್ಕನೆ ಬಾರಿ ಕೇಳುತ್ತಿರುವುದು. ಆದರೂ ಕೇಳಿದ ಪ್ರಶ್ನೆಗೆ ಸಂಕಟದ ಉತ್ತರ.

” ನನಗೆ ಗೊತ್ತಿಲ್ಲ. ನಮ್ಮಪ್ಪ ಅಮ್ಮನ ಜೊತೆ ಹೋಟೆಲ್‌ಗೆ ಹೋದಾಗ ಟಿಪ್ಸ್ ಬಿಡೋದು ನೋಡಿರಬೇಕು. ಬಹುಶಃ ಟಿಪ್ಸ್ ಬಿಡೋದು ನಮ್ಮಪ್ಪನಿಂದ ಕಲಿತಿದ್ದಿರಬೇಕು…”

ಅವನಿಗೆ ನಿಜವಾಗಿಯೂ ಕೋಪ ಉಮ್ಮಳಿಸಿಕೊಂಡು ಬಂದಿತ್ತು. ಕೋಪವನ್ನು ಮುಷ್ಠಿಗೆ ರವಾನಿಸಿ ಬೆರಳುಗಳ ಮೂಲಕ ಹೊರಗೆ ಹಾಕಿದ. ಆದರೂ ಅದು ಜಿಗುಟು ಸ್ವರದಲ್ಲಿ ಒಡೆದಿತ್ತು.” ಸುಳ್ಳು..” ಕಿರುಚಿದ.

” ಹೋಗೋ ಎಲ್ಲವನ್ನೂ ಕಾನ್ಶಿಯಸ್ಸಾಗೆ ಮಾಡ್ಬೇಕಾಗಿಲ್ಲ..ಯಾಕೇಂತ ನನಗೆ ಗೊತ್ತಿಲ್ಲ..”- ಅವಳಿಗೂ ಸಿಟ್ಟು-ವಾಕರಿಕೆ-ಅಸಹ್ಯ.

” ನನಗೆ ಗೊತ್ತು ಯಾಕೇಂತ, ನೀನು ಈ ಹ್ಯಾಬಿಟ್ಟನ್ನ ಎಲ್ಲಿ ಪಿಕಪ್ ಮಾಡಿದ್ದೀಯಾನ್ನೋದು..”

ಇದನ್ನು ಈವರೆಗೆ ಅವನು ಕಾಲೇಜಿನ ವಲಯದಲ್ಲಿ ಸಹೋದ್ಯೋಗಿಗಳ ನಡುವೆ ಸಾಕಷ್ಟು ಬಾರಿ ಹೇಳೀದ್ದ. ಬಹಳ ಜನಕ್ಕೆ ಹೇಳುತ್ತಲೇ ಇರುತ್ತಾನೆ. ಒಳ್ಗೆ ಮುಷ್ಠಿ ಹಿಡಿದು ಕಟಕಟಿಸಿ, ದ್ರವಿಸಿ…

” ಹೇಳು ಹಾಗಾದೆರೆ..” ಅವಳು ಸವಾಲು ಹಾಕಿದಳು.

“ಈಗಲ್ಲ , ಸಮಯ ಬರಲಿ ಸಾಧ್ಯಾವಾದರೆ ನೀನೆ ಯೋಚಿಸು, ಹೊಳೆದರೆ ಹೇಳು..”

” ಹೀಗೆ ಆಲೋಚಿಸ್ತಾ ಕೂತರೆ ಸಿಗೋ ಸಣ್ಣ ಪುಟ್ಟ ಸಂತೋಷಗಳನ್ನೂ ಕಳ್ಕೋಬೇಖಾಗುತ್ತೆ. ನಿನ್ನ ತರಹ ಎಲ್ಲವನ್ನೂ ಗಂಭೀರವಾಗಿ ಯೋಚಿಸಬಾರದು..”

ಇಬ್ಬರೂ ಹೋಟೆಲ್ಲಿಂದ ಎದ್ದು ಆಚೆಗೆ ಬಂದರು.ಸಣ್ಣದಾಗಿ ಮಳೆ ಹನಿಯುತ್ತಿತ್ತು. ಅಸಹನೆಯನ್ನೂ ಕೋಪವನ್ನು ಮುಚ್ಚಿಟ್ಟುಬಿಡುವಷ್ಟು ನಯಗಾರಿಕೆ ಅವಳಿಗಿಲ್ಲದ್ದು ಅವನಿಗೆ ಮೆಚ್ಚಿಗೆಯಾದ ಅಂಶ. ಕೋಪವನ್ನು ತೋರಿಸಿಕೊಳ್ಳೋದಕ್ಕೂ ಒಳಗಡೆ ಎಲ್ಲೋ ಇಂಟಗ್ರೆಟಿ ಇರಬೇಕು. ಅಸಲಿ ಗುಣವನ್ನ ಯಾವ ಎಗ್ಗೂ ಇಲ್ಲದೆ , ಅಪರೂಪಕ್ಕೊಮ್ಮೆ ಇಂತಹವರು ಕಾಣ ಸಿಗೋದು…ಕಾಲೇಜಿನ ಒಳಗೆ ಬಂದಿದ್ದರು.

“ಹ್ಯಾಗೆ ಹೋಗ್ತೀಯ?” ಕೇಳಿದ.

“ಬಸ್ ಸ್ಟಾಪಿಗೆ ನಡ್ಕೊಂಡು ಹೋಗ್ತೀನಿ.”- ಕಾಲೇಜಿನಿಂದ ಬಸ್ ಸ್ಟಾಪಿಗೆ ಐದು ನಿಮಿಷದ ಹಾದಿ.

” ಜೊತೆಗೆ ಬರಲ?”

” ಬೇಡ ಒಬ್ಬಳೆ ಹೋಗ್ತೀನಿ.”

ಕತ್ತಲಲ್ಲಿ ಒಬ್ಬಳೇ ನಡೆಯ ತೊಡಗಿದಳು. ಜನರೊಂದಿಗೆ ಅವಳು ಬೆರೆತರೂ ಅವಳು ಒಬ್ಬಂಟಿ ಎಂದನ್ನಿಸಿತವನಿಗೆ. ನಡೆಯುತ್ತಾ ಹೋಗುತ್ತಿದ್ದವಳನ್ನು ಬೆರಗುಗಣ್ಣಿನಿಂದ ನೋಡುತ್ತಾ ನಿಂತ. ಕ್ರಮೇಣ ಅವನ ದೃಷ್ಟಿಯಾಚೆಗೆ ಕರಗಿದಳು.ಅವಳಿಗೆ ಗೊತ್ತಿಲ್ಲ. ಸಣ್ಣ ಸಣ್ಣ ಸಂಗತಿಗಳಲ್ಲಿ ಅವನೂ ಸಂತೋಷಿಸುತ್ತಾನೆಂದು. ಅವನು ಹೇಳುವುದೂ ಇಲ್ಲ- ಅವಳು ಕೇಳುವುದೂ ಇಲ್ಲ. ಇಬ್ಬರಿಗೂ ಗೊತ್ತು.

” ಬೆಳೆಗಾಂ ಡಿಸ್ಟ್ರಿಕ್ಟ್‌ನಲ್ಲಿ ಒಂದು ಅಮೆರಿಕನ್ ಫ್ಯಾಕ್ಟ್ರಿ ಇದೆ. ಅದರ ಸುತ್ತಮುತ್ತಲಿನ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡ್ಬೇಕೂಂತಿದ್ದಾರೆ. ಅವರಿಗೆ ಸೋಷಿಯಲ್ ವೆಲ್‌ಫೇರ್ ಆಫಿಸರ್ ಬೇಕಂತೆ. ನನಗೆ ಇಂಟೆರ್‌ವ್ಯೂ ಬಂದಿದೆ , ಹೋಗ್ತೀನಿ. ಯಾರೀಗೂ ಹೇಳ್ಬೇಡ..”

ಒಂದು ದಿನ ದಿಡೀರನೆ ಹೇಳಿದಳು. ಅವನಿಗೆ ಒಂದು ನಿಮಿಷ ಕಳವಳವಾಯ್ತು. ಆ ಕಳವಳಕ್ಕೆ ಎರಡು ಕಾರಣಗಳು ಅವನಿಗೆ ಸ್ಪಷ್ಟವಾಯ್ತು. ಒಂದನ್ನು ಹೇಳಿದ ಒಂದನ್ನು ಮುಚ್ಚಿಟ್ಟ. ಬಹಿರಂಗವಾದರೆ ಅದಕ್ಕೊಂದು ಲೆಜಿಟಿಮಸಿ ಹುಡುಕುವ ಪ್ರಯತ್ನ..ಥೂ ಹೇಳುವುದೇ ಬೇಡ. ಇನ್ನೊಂದು ಕಾರಣ ಅವನು ಪ್ರಾಮಾಣಿಕವಾಗಿ ಶ್ರದ್ಧೇಯಾಧಾರದಲ್ಲಿ ನಂಬಿಕೊಂಡು ಬಂದದ್ದು. ಅದನ್ನು ಹೇಳಿದ:

” ಅಮೆರಿಕನ್ ಕಂಪನಿ ಅಂತೀಯಾ. ಅಲ್ಟಿಮೇಟ್ಲಿ ಅದು ಲಾಭಬಡುಕ ಸಂಸ್ಥೆ. ಆ ಫ್ಯಾಕ್ಟ್ರೀ ಅಲ್ಲಿಲ್ಲದೆ ಹೋಗಿದ್ದರೆ ಅವರು ಯಾವ ಕುಗ್ರಾಮವನ್ನೂ ದತ್ತು ತೊಗೋತಾ ಇರ್‍ಲಿಲ್ಲ.ಪ್ರಾದೇಶಿಕವಾಗಿ ಯಾವುದೇ ವಿರೋಧ ಬರದೇ ಇರ್‍ಲೀಂತ ಅವರು ಈ ತರಹ ಮಾಡೋದು ಉಂಟು. ಒಲೈಸ್ತಾರೆ, ಮಣಿಯದೆ ಇದ್ದರೆ ಕರಾಮತ್ತು ಮಾಡ್ತಾರೆ. ಅಂತಹವರ ಮಧ್ಯೆ ನೀನು..? ಕಲ್ಪಿಸಿಕೊಳ್ಳೋಕ್ಕೂ ಆಗ್ತಿಲ್ಲ..”

” ಅಲ್ಲಿ ಸೇವಾಗ್ರಾಮದಲ್ಲಿ ಎಷ್ಟೊಂದು ಜನ ಮುಂದೆ ನಿಂತು ಶ್ರದ್ಧೆಯಿಂದ ಪ್ರಾಮಾಣಿಕತೆಯಿಂದ ದುಡೀತಿರ್‍ತಾರೆ ಗೊತ್ತಾ? ಇಲ್ಲಿ ಕೂತ್ಕೊಂಡು ಕಾಫಿ ಕುಡೀತ ಇಂಟಗ್ರಟಿ ಬಗ್ಗೆ ಮಾತಾಡೋದೂದ್ರೆ ಅಸಹ್ಯವಾಗಿಬಿಟ್ಟಿದೆ.”
” ಆದರೆ ನೀನು ಅಲ್ಲಿಗೆ ಹೋಗ್ಬೇಕೂಂತಿರೋದಕ್ಕೆ ನಿಜವಾದ ಕಾರಣ ಅದಲ್ಲ.”
“ನಿಜ, ಆದ್ರೆ ನಾನು ಹೋದ ಕಡೆ ಪ್ರಾಮಾಣಿಕವಾಗಿರ್‍ತೀನೀಂತ ನನಗನ್ನಿಸುತ್ತೆ. ಜನಸೇವೆ, ಸಮಾಜಸೇವೆಯ ಮಾತುಗಳನ್ನೇನೂ ಆಡೋದಿಲ್ಲ ಹೆದರ್‍ಕೋಬೇಡ…”

ಅವಳ ಮಾತುಗಳಲ್ಲಿ ಪ್ರಾಮಣಿಕತೆಯಿತ್ತು. ಅವನು ಸುಮ್ಮನೆ ಅವಳು ತೊಟ್ಟಿದ್ದ ಖಾದಿ ಸೆಲ್ವಾರ್ ಕಮೀಜನ್ನೇ ನೋಡತೊಡಗಿದ್ದ. ಒಮ್ಮೆ ಅವಳು ಹೇಳಿದ್ದಳು:

” ಖಾದಿ ನನಗೆ ಬಹಳ ಅನುಕೂಲ. ಮೂವತ್ತೊಂಬತ್ತು ರೂಪಾಯಿ ಮೀಟರ್. ಯಾರು ಕೊಡ್ತಾರೆ ಹೇಳು. ನಾನು ಅದನ್ನ ಹಾಕಿಕೊಂಡು ದೇಶಭಕ್ತಿಯ ಸೋಗು ಹಾಕ್ತಾ ಇಲ್ಲ. ಆ ಮಾತುಗಳನ್ನ ಆಡ್ತಲೂ ಇಲ್ಲ.ಅನುಕೂಲವಾಗಿದೆ, ಉಪಯೋಗಿಸ್ತಿದೀನಿ, ಅಷ್ಟೆ.”

ಅಮೆರಿಕನ್ ಫ್ಯಾಕ್ಟರಿ, ಸೋಷಿಯಲ್ ವೆಲ್‌ಫೇರ್ ಖಾದಿ, ಮನೆ ಹೀಗೆಲ್ಲ ಅವಳು ಅಂದು ಸುದೀರ್ಘವಾಗಿ ಮಾತನಾಡತೊಡಗಿದಳು. ಅವಳ ಧ್ವನಿಯಲ್ಲಿನ ಮುಗ್ಧತೆ, ಪ್ರಾಮಾಣಿಕತೆ, ಏಕಾಕಿತನವೆಲ್ಲ ಅವನಿಗೆ ಹೊಸ ಅರ್ಥಗಳೊಂದಿಗೆ ಗೋಚರವಾಗತೊಡಗಿ ಗೊಂದಲದಲ್ಲಿ ಅವಳೇ ಹುಟ್ಟಿಹಾಕಿಕೊಂಡಿದ್ದ ವಿಪರ್ಯಾಸಗಳನ್ನೆಲ್ಲ ಬದಿಗೊತ್ತಿ ಅವನು ಭಾವುಕನಾದ.

ಆಗ ಅವನಿಗೆ ಕಾಣಿಸಿದ್ದು- ಶ್ರದ್ಧೆ ಹುಟ್ಟಿಕೊಳ್ಳುವ ಮುನ್ನದ ಪೂರ್ವಾವಸ್ಥೆಯಾದ ಗೊಂದಲಗಳು.. ಆಲೋಚಿಸುತ್ತಲೇ ನಿರ್ಣಯ ಏನಾಗಬಹುದು ಎಂಬ ಕುತೂಹಲಕ್ಕೆ ಸಿಕ್ಕಿಕೊಂಡ.

ಬೆರಗಿನಿಂದ ನೋಡುತ್ತಿದ್ದ ಅವನ ಕಣ್ಣುಗಳಿಗೆ ಅವಳು ಹಿರಿಯವಳಾಗಿ ಅವನು ಕುಗ್ಗತೊಡಗಿದ್ದ. ಆದರೂ ಅವಳು ಹೋಗದೆ ಇದ್ದರೆ ಎಷ್ಟು ಚೆಂದವಲ್ಲವೆ. ಹೀಗೆಯೆ ಇವಳು ಮಾತನಾಡುತ್ತಿದ್ದರೆ ಎಷ್ಟು ಚೆಂದವಲ್ಲವೆ ಎಂದನ್ನಿಸ ತೊಡಗಿ ಹೋಗಿಯೇ ಬಿಡುತ್ತಾಳೆ ಎಂಬ ಆತಂಕವೂ ಅಧಿಕವಾಗಿ ” ಹೋಗ್ಬೇಡಾ” ಎಂದು ಚೀರಬೇಕನ್ನನಿಸಿತು. ಅವನಿಗೆ ಆ ಸ್ವಾತಂತ್ರ್ಯವೂ ಇಲ್ಲ. ಆತ್ಮೀಯತೆ- ಸಲಿಗೆಗಳೂ ಸೋಗಾಗಿಬಿಡುವ ಅಸಹ್ಯ ಚೀರಾಟ, ಒಳಗೇ ಹುತು ಹೋಗಿ ಗೊಗ್ಗರು ಧ್ವನಿ ಹೊರಡತೊಡಗಿ ಜೋಕರ್ ಆದ, ‘ ಪಾಪ ’ ಎಂದು ಕನ ಆಡತೊಡಗಿದಂತೆ ಭಾಸವಾಗಿ ನಿಲ್ಲಿಸಿ ಎಂದು ಚೀರಬೇಕನ್ನಿಸಿತು. ಸಾಧ್ಯವಾಗದೆ ಹೋಯಿತು.

ಕಾಲೇಜಿಗೆ ಸಣ್ಣ ಬ್ರೀಫ್ ಕೇಸಿನೊಂದಿಗೆ ಬಂದಿದ್ದಳು. ಅಂದಿನ ಕೆಲಸ ಮುಗಿಸಿ ನೇರ ಸ್ಟೇಷನ್‌ಗೆ ಅಲ್ಲಿಂದ ಬೆಳಗಾಂಗೆ ಪ್ರಯಾಣ.

” ಸ್ಟೇಷನ್‌ಗೆ ನಾನು ಬರಲ..?” – ಕೇಳಿದ.
” ಬೇಡ , ನಾನು ನೇರ ಸ್ಟೇಷನ್‌ಗೆ ಹೋಗ್ತಾ ಇಲ್ಲ”

ಅವಳು ಬ್ರೀಫ್‌ಕೇಸ್ ಹಿಡಿದು ಹೊರಟಾಗ:

“ನನ್ನನ್ನ ಸೀರಿಯಸ್ಸಾಗಿ ತೊಗೋಬೇಡ..”

ಅವಳು ಬೇರೆ ಜನರ ನಡುವೆ ಮರೆಯಾಗುತ್ತಲೆ ಇವನೂ ಬೇರೆಯವರ ತೆಕ್ಕೆಗೆ ಬಿದ್ದ.ಅಷ್ಟು ಜನರ ನಡುವೆಯೂ ಏಕಸಕಿತನ ಖಾಲಿ ಖಾಲಿ. ಕಾಫಿ ತಿಂಡಿ ಮಾತುಗಳಲ್ಲಿ ತೊಡಗಿಸಿಕೊಳ್ಳಲಾಗದ ಒಳ ಚೀರಾಟ.

ಸ್ಟೇಷನ್‌ಗೆ ಹೋಗಲೋ ಬೇಡವೋ- ಸಂದಿಗ್ಧದ ನಡುವೆಯೇ ಅಂತೂ ಹೋಗಬೇಕೆಂಬ ಹಠ ಬೆಳೆದು ಜಿಟಿಜಿಟಿ ಮಳೆಯ ನಡುವೆಯೇ ಹೊರಟ. ಟ್ರೈನು ಹೊರಡುವುದಕ್ಕೆ ಇನ್ನೂ ಬಹಳ ಸಮಯವಿತ್ತು. ಬಂದಿರಲಾರಳೆ? ಹುಡುಕಿದ. ಶಬರಿಮಲೈಗೆ ಹೊರಟಿದ್ದ ದೊಡ್ಡ ಗುಂಪೊಂದರ ಮಧ್ಯೆ ಅವಳು ಕಾಣಿಸಲಿಲ್ಲ. ಬದಲಿಗೆ ಮುರುಗೇಸನ್ ಕಂಡ. ಮುರುಗೇಸನ್‌ಗೂ ಇವನನ್ನು ಕಂಡು ಸೋಜಿಗ.ದಡ ದಡ ಹೆಜ್ಜೆ ಹಾಕುತ್ತ ಅದೇ ಹಳೆ ಪ್ರೀತಿಯನ್ನು ಜಿನುಗಿಸಿ-

” ಏನ್ಗುರೂ ಸ್ಟೇಷನ್‌ನಲ್ಲಿ..?” – ತಮಿಳಿನಲ್ಲಿ.
” ಮುರುಗೇಸಾ ಏನೋ ಇದು- ಶಬರಿಮಲೈಗೆ ಹೊರಟಿದ್ದೀಯ..?”
” ಹೂಂ..ಎಂಟನೆ ವರ್ಷ…ನಿನ್ನನ್ನ ನೋಡಿ ಎಷ್ಟು ವರ್ಷಗಳಾಗೋಯ್ತು..! ನಿನ್ನ ಕತೇನೆಲ್ಲಾ ಒದ್ತಾ ಇರ್‍ತೀನಿ.”
” ಅದ್ಸರಿ ಈಗೇನ್ಮಾಡ್ತಾ ಇದ್ದೀಯ?”

” ಬಿನ್ನಿ ಮಿಲ್ಸ್ ಹತ್ತಿರ ಸಣ್ಣ ಹೊಟೆಲ್ ಇಟ್ಟೀದೀನಿ ಹೆಂಡ್ತಿ, ಅವಳ ತಮ್ಮ ಎಲ್ರೂ ಹೋಟೆಲ್ ನಡ್ಸೋಕ್ ಸಹಾಯ ಮಾಡ್ತಾರೆ. ಊಟ ತಿಂಡಿ ಬಾಡಿಗೆಗೇನೂ ಕೊರತೆ ಇಲ್ಲ. ಅದೇ, ಬೆಂಗಳೂರ್ ಯೂನಿವರ್ಸಿಟಿ ಕ್ಯಾಂಟೀನ್‌ನಲ್ಲಿ ಸಪ್ಲಯರ್ ಆಗಿದ್ದಾಗ ಎಷ್ಟು ಸಂತೋಷವಾಗಿದ್ನೋ ಅಷ್ಟೆ ಸಂತೋಷವಾಗಿದೀನಿ. ನೀನು ಕಾಮತ್ ಹೋಟ್ಲು ಬಿಟ್ಟು ಸಪ್ಲಯರ್ ಕೆಲಸ ಬಿಟ್ಟು ದೊಡ್ಡೋನಾಗಿದ್ದೀ. ನೀನು ಹ್ಯಾಗಿದ್ದೀ?”
” ಏನೋ ಇದೀನಿ. ನಾನೂ ನೀನು ಟಿಪ್ಸ್ ಕಾಸೆಲ್ಲಾ ಕೂಡಿಹಾಕಿ ಎಂಜಿ‌ಆರ್ ಸಿನಿಮಾ ನೋಡ್ತಿದ್ದು ಜ್ಞಾಪ್ಕ ಇದ್ಯ?”
” ಇಲ್ದೇ ಏನು ಗುರು, ನಿನ್ನ ಜತೆ ಸಿನಿಮಾ ನೋಡ್ಬೇಕೂಂತ ಆವಾಗಾವಗ್ ಅನ್ಸುತ್ತೆ.ನಾನು ಮಲೈನಿಂದ ವಾಪಸ್ ಬಂದ್ಮೇಲೆ ತಿರ್‍ಗಾ ಹೋಗೋಣ. ದರಿದ್ರ ಟಿಪ್ಸ್ ಕಾಸು ಬೇಡ. ನಂದೆ ಕಾಸು. ಏನಂತೀಯ?”

– ಮುರುಗೇಸನ ಮಾತುಗಳನ್ನ ಮತ್ಸರದಿಂದ ಕೇಳುತ್ತಾ ನಿಂತಾಗ ಒಳಗೆ ಖಾಲಿ ಖಾಲಿ- ಬಿಕ್ಕಿ ಬಿಕ್ಕಿ ಅಳಬೇಕನ್ನಿಸಿತು. ಅವಳು ಹೋಗುತ್ತಾಳೆ ಎಂಬ ವ್ಯಥೆಗೋ ಅಥವ ಮುರುಗೇಸನಂತ ಪ್ರೀತಿಯ ಒಡನಾಡಿ ಸಿಕ್ಕಿದ ಸಂತೋಷಕ್ಕೋ? ಗೊತ್ತಿಲ್ಲ.

” ಸಿಗರೇಟು ಸೇದ್ತೀಯೇನೊ?”
“ಬೀಡಿ ಗುರು, ಆದರೆ ಈಗ ವ್ರತ ಹಿಡಿದ್ದೀನಲ್ಲ….ಆಗಲ್ಲ. ಗುರುಚಾಮಿ ಕರೀತಾ ಅವ್ರೆ. ಬಂದ್ಮೇಲೆ ಸಿಗ್ತೀನಿ.”

ಮುರುಗೇಸ ಹೊರಟ. ಅವನ ಗುಂಪು- ಸ್ಥಳ ಬದಲಾಯಿಸುವುದನ್ನು ಇವನು ನೋಡುತ್ತಾ ನಿಂತ. ಖಾಲಿ ಖಾಲಿ. ಸಿಗರೇಟಿನ ಮೇಲೆ ಸಿಗರೇಟನ್ನ ಸುಟ್ಟ. ಅವಳು ಬಂದಿರುತ್ತಾಳೇನೊ ಎಂದು ಹುಡುಕಲಾರಂಭಿಸಿದ. ದೊಡ್ಡ ಉದ್ದದ ಟ್ರೈನಿನ ಪ್ರತಿಯೊಂದು ಬೋಗಿಯನ್ನೂ ಜಾಲಾಡಿದ. ಕಾಣಿಸಲಿಲ್ಲ. ತಟಕ್ಕನೆ ತಲೆ ಮೇಲೊಂದು ಏಟು ಬಿತ್ತು! ಹಿಂದಕ್ಕೆ ತಿರುಗಿದ- ” ಏನೋ ” ಎಂದು ಮುಗುಳ್ನಕ್ಕಳು! ಟ್ರೈನೂ ಹೊರಡುವುದಕ್ಕೆ ಐದು ನಿಮಿಷಗಳಷ್ಟೆ ಇತ್ತು.

” ಒಂದನ್ನು ಹೇಳ್ಬೇಕೂಂತನ್ನಿಸ್ತು. ಬಂದೆ. ಹೇಳದೆ ಹೋಗಿದ್ದಿದ್ದರೆ ನಿದ್ದೆ ಬರ್‍ತಿರಲಿಲ್ಲ.”

ತಟಕ್ಕನೆ ಅವನ ಎದುರಿಗೆ ಅರ್ಧ ಅಡಿಯೂ ಇರಲಿಲ್ಲ ಅಷ್ಟು ಸಮೀಪ ಬಂದು ನಿಂತು ಕಣ್ಣುಗಳಲ್ಲಿ ಜೀವಧ್ವನಿಯನ್ನು ತುಂಬಿಕೊಡು ಈಗಲಾದರೂ ಹೇಳುತ್ತಾನೆ- ” ಏನದು? ಏನು ಹೇಳೋ..” ಎಂದು ಕೇಳಿದಳು.

ಅವಳನ್ನೇ ನೋಡುತ್ತಾ – ಆಕಾರವನ್ನು ಮನಸ್ಸಿನಲ್ಲಿ ನಿಲ್ಲಿಸಿಕೊಂಡು ಅದರ ಬೆರಗಿನಲ್ಲಿ ಮೈಮರೆತು-

ಮರೆತು ಹೋದಾತು- ಹೇಳಿಯೇ ಬಿಡಬೇಕು ಎಂದು ಅನ್ನಿಸಿ ರಿಹರ್ಸಲ್ ಮಾಡಿಕೊಂಡು ಬಂದಿದ್ದ ಸಾಲುಗಳನ್ನು ಸಕಲ ಶಕ್ತಿಯನ್ನು ಕ್ರೋಢೀಕರಿಸಿಕೊಂಡು ಹೇಳಿದ-

” ನಾನು ಯಾವಾಗ್ಲಾದ್ರೂ ನೀನು ಹೋಗ್ಬೇಡಾ ಅಂತ ಹೇಳಿದ್ರೆ ಮರೆತು ಬಿಡು. ನೀನು ಹೋಗ್ಬೇಕೂಂತಿದ್ರೆ, ನಿರ್ಧಾರ ಅಚಲವಾಗಿದ್ರೆ ಸ್ನೇಹದ ಹೆಸರಿನಲ್ಲಿನಿರ್ಧಾರದ ಅಚಲತೆಯ ಶಕ್ತಿಹರಣ ಮಾಡೋದು ತಪ್ಪು..”

ಟ್ರೈನು ಹೊರಡುವ ಸೂಚನೆ ಕಾಣಿಸಿಕೊಡು ಲಗುಬಗೆಯಿಂದ ಅವಳು ಹತ್ತಿ ತನ್ನ ಸೀಟಿನಲ್ಲಿ ಕುಳಿತಿರಬೇಕು. ಕಿಟಕಿಯಲ್ಲೂ ಕಾಣಿಸಲಿಲ್ಲ.

ಕೈ ಬೀಸಲಿಲ್ಲ. ಅವನು ಪೆಚ್ಚು ಮುಖ ಹಾಕಿಕೊಂಡು ಒಂದೆರಡು ಸಿಗರೇಟು ಸುಟ್ಟು ಏನನ್ನೋ ಯೋಚಿಸಿದವನಂತೆ ಕರಿಮುಂಡು ಅಂಗಿಗಳಲ್ಲಿ, ಗುಂಪು ಗುಂಪಾಗಿ ನಿಂತಿದ್ದ ಯಾತ್ರಿಕರ ನಡುವೆ ಕರಗಿದ. ಅವನ ಮನಸ್ಸು ತುಟಿಗಳು ಒಂದಾಗಿ ಹಳೆ ಎಂಜಿ‌ಆರ್ ಚಿತ್ರದ ಹಾಡೊಂದನ್ನು ಗುಣಗುಣಿಸುತ್ತಿತ್ತು.

ವಾಳ್ಕೈ ಎನ್ರೊರು ಪಯಣತ್ತಿಲೆ
ಪಲರ್ ವರುವಾರ್ ಪೋವಾರ್ ಭೂಮಿಯಿಲೆ
ವಾನತ್ತು ನಿಲವಾಯ್ ಸಿಲರಿರುಪ್ಪಾರ್
ಅಂದ ವರಿಸೈಯಿಲ್ ಮುದಲ್ವನ್ ತೊಳಿಲಾಳಿ.

ಜೊತೆಗೆ ಮನಸ್ಸಿನಲ್ಲಿ ಅಚ್ಚಾಗಿ ಹೋಗಿದ್ದ ಆಕಾರ ಮತ್ತಷ್ಟು ತುಂಬಿಬಂದಂತಾಗಿ

ಅವಿದ್ಯಾನಾಮಂತಸ್ತಿಮಿರಮಿಹಿರ ದ್ವೀಪನಗರಿ
ಜಡಾನಾಂ ಚೈತನ್ಯಸ್ತಬಕ ಮಕರಂದ ಸ್ರುತಿಝರಿ
ದರಿದ್ರಾನಾಂ ಚಿಂತಾಮಣಿ ಗುಣನಿಕಾ ಜನ್ಮಜಲಧೌ
ನಿಮಗ್ನಾನಾಂ ದಂಷ್ಟ್ರಾ ಮುರರಿಪು ವರಾಹಸ್ಯ ಭವತಿ

ಜೊತೆಗೆ-
ಓಂ-ಹರಿಃ ಓಂ-ಚತುಸ್ಸಾಗರ ಪರ್‍ಯಂತಂ
ಆತ್ರೇಯ ಗೋತ್ರಸ್ಯ ಋಗ್‌ಶಾಖಾಧ್ಯಾಯಿ
ಸೋಮಶೇಖರ ಶರ್ಮನ್
ಅಹಂಬೋ ಅಭಿವಾದಯೇ..”

ಬರುತ್ತಾಳೋ ಬರುವುದಿಲ್ಲವೋ- ಬಂದರೂ ಚೆನ್ನ- ಬರದಿದ್ದರೂ ಚೆನ್ನ
ಅವಳು ಬರದೆ ಇದ್ದರೆ- ಪತ್ರ ಒಂದನ್ನು ಬರೆದ-
ಒಂದೇ ಒಂದು ಸಾಲಿನ ಪತ್ರ:

‘ಕ್ಷಮಿಸು, ನಿನ್ನನ್ನು ತಬ್ಬಿಕೊಂಡದ್ದಕ್ಕೆ-ವಾಸ್ತವವಾಗಿ ತಬ್ಬಿಕೊಳ್ಳದ್ದಕ್ಕೆ’ ಕಂಗಾಲಾದ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.