ಬಿಟ್ಟ್ಯಾ

ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ. ಸುಸ್ತಾಗಿ ಊರ ಹೊರಗಿನ ಒಂದು ಗಿಡದ ಕೆಳಗೆ ಕುಳಿತು ಸುತ್ತಲೂ ನೋಡಿದ. ಆಸು ಪಾಸು ಯಾರೂ ಇರಲಿಲ್ಲ. ‘ದೇವರೇ’ ಅಂತ ನಿಟ್ಟುಸಿರು ಬಿಟ್ಟು ಬೆನ್ನಿಗೆ ಕಟ್ಟಿಕೊಂಡಿದ್ದ ಜೋಳಿಗೆಯನ್ನು ಮುಂದೆ ತೊಡೆಯ ಮೇಲೆ ಇಟ್ಟುಕೊಂಡು ಮಗುವನ್ನು ನೋಡಿದ. ಅದು ಹಸಿವೆಗೋ, ಇವನು ಓಡಿದ ರಭಸಕ್ಕೋ ಆಯಾಸವಾಗಿ ಸತ್ತಂಗೆ ಬಿದ್ದಿತ್ತು. ‘ಅಯ್ಯೋ, ಇದನ್ನು ಬದುಕಿಸೋದಕ್ಕೆ ಅಂತ ನಾನು ಈಟು ದೂರ ಓಡಿ ಬಂದೆ. ಇದು ಸತ್ತೇ ಹೋಯಿತೇ’ ಎಂದು ಅದರ ಎದೆಗೆ ಕಿವಿಗೊಟ್ಟು ಕೇಳಿದ. ಅದಿನ್ನೂ ‘ಡವಡವ’ ಅಂತಿತ್ತು. ಬಾಯಿಗೆ ಬೆರಳು ಹಾಕಿದ. ಕಣ್ಣು ಮುಚ್ಚಿಕೊಂಡೇ ಜುರುಜುರು ಚೀಪಿತು. ‘ಪಾಪ, ಹಸಕೊಂಡೈತ್ಯೋ ಏನೋ’.

ಬಿಟ್ಟ್ಯಾನ ಕಣ್ಮುಂದೆ ತಾನು ಮನೆ ಬಿಟ್ಟು ಹೊರಡುವಾಗಿನ ದೃಶ್ಯ ಸುಳಿಯಿತು. ತನ್ನ ತಾಯಿಯ ಮುಖ ನೆನಪಾದಾಗ ಅಳು ಬಂತು. ಅವಳು ದೈನಾಸಬಟ್ಟು ಅವರಿಗೆಲ್ಲ ಕೈಮುಗಿದು ಕೇಳಿಕೊಳ್ಳುವ ಮಾತು ಮತ್ತೆ ಮತ್ತೆ ಕಿವಿಯಲ್ಲಿ ತುಂಬಿ ಬಿಟ್ಟ್ಯಾನಿಗೆ ಆಕ್ರೋಶ ಬಂತು. ಅವರೆಲ್ಲ ಬಂದದ್ದು ನೋಡಿ, ಅವ್ವ ಅವನನ್ನು ಕರದು
‘ಬಿಟ್ಟ್ಯಾ, ಈ ಮಗೀನ ಕರಕೊಂಡು ಈ ಜಾಗಾ ಕಾಲೀ ಮಾಡು. ಇಲ್ಲಾಂದ್ರ ನನ್ನ ಕೂಡ ನಿಮ್ಮನ್ನೂ ಸಾಯಿಸಿ ಬುಡ್ತಾರೆ’ ಅಂದಳು.
‘ಅದೆಂಗವ್ವಾ ನಿನ್ ಬುಟ್ಬುಟ್ ಓಗ್ಲಿ. ಈ ಎಳೆ ಮಗೀನ ನಾ ಅದೆಂಗ್ ಸಾಕ್ಲೆವ್ವಾ. ಅನ್ನ ತಿನ್ನೋ ಮಗಾ ಆಗಿದ್ರೆ ಎಲ್ಲಾನ ಬಿಕ್ಸೆ ಬೇಡಿ ಸಾಕ್ತಿದ್ದೆ.’
‘ಅದ್ಯಾಂಗಾರ ಆಗ್ಲಿ. ದೇವ್ರು ಅವ್ನೆ. ನೀ ಮೊದ್ಲು ಇಲ್ಲಿಂದ ಒಂಟೋಗು. ಇದು ಹಾದರಕ್ಕ ಹುಟ್ಟಿದ್ದಲ್ಲ. ನನ್ನ ಗಂಡಗ” ಹುಟ್ಟಿದ್ದು, ಇದು ಬದಕ ಬೇಕು. ಇದು ತಂದಿಗೆ ಹುಟ್ಟಿದ್ದಾದ್ರ ಎಲ್ಲಾರ ಬಾಳಿ ಬದಕ್ತೈತಿ. ಇವರೆಲ್ಲ ಅದು ಹಾದರಕ್ಕ ಹುಟ್ಟಿದ್ದು ಅಂತ ಅದನ್ನ ಸಾಯಿಸ್ತಾರ. ನನ್ನ ಪರಸ್ತಿತಿ ಅಂಗೈತಿ. ದ್ಯಾವ್ರು ಎಲ್ಡೂ ಕಾಲ್ನ ಕಿತ್ಕೊಂಡ್‌ಬುಟ್ಟ. ಎದ್ದೇಳಾಕ ಬರಾಕಿಲ್ಲ. ಗಂಡ ಎಂಗೋ ಸಾಕ್ತಿದ್ದ. ಈ ಮಗೀನ ಬಸ್ರಿ ಇದ್ದಾಗ್ಲೇ ತೀರೋಗಿಬುಟ್ಟ. ಮನೀ ಕಾಲೀ ಮಾಡಿ ಊರು ಬಿಟ್ಟು ಹೊಂಟೋಗು ಅಂತವ್ರೆ. ನಾ ಬುಡಾಕಿಲ್ಲ, ಇದು ನನ್ ಗಂಡನ್ ಮನಿ ಅ೦ದದಕ ಇವರೆಲ್ಲ ನಂಗೆ ಹಾದರಗಿತ್ತಿ ಅಂತವ್ರೆ. ಮಗಾ, ನಾ ಹಾದರಗಿತ್ತಿ ಅಲ್ಲ. ಈಟೊಂದು ಚೆಂದದ ಮಗಾ ಎಲ್ಲದ್ರೂ ಬದಕ್ಲಿ. ಇವರ ಕೈಗೆ ಮಾತ್ರ ಸಿಗಬಾರ್ದು. ನನ್ ಅಣೇಬರಾ ಎಂಗೈತೋ ಅಂಗಾಗ್ಲಿ.’ ಎಂದು ಎಂಟು ವರ್ಷದ ತನ್ನ ದೊಡ್ಡ ಮಗ ಬಿಟ್ಟ್ಯಾನ ಕೈಗೆ ತನ್ನ ಎಂಟು ಹತ್ತು ದಿನದ ಹಸುಳೆಯನ್ನು ಹಾಕಿ ಕಣ್ಣೀರಿಟ್ಟಳು.
ಆ ಮಾತು ಬಿಟ್ಟ್ಯಾನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಿತು.
‘ಅಯ್ಯೋ, ಅದನ್ನ ನೆನಸಿಕೊಂತ ಕುಂತ್ರ ಎಂಗೆ. ಈಟೊತ್ತಿಗಾಗ್ಲೇ ನಮ್ಮವ್ವನ್ನ ಸಾಯಿಸಿಬುಟ್ಟಿರ್ತಾರೆ. ಮದ್ಲು ಯಾರ್‌ತಾವಾನಾದ್ರೂ ಮಗೀಗೆ ಒಸಿ ಹಾಲ್ನ ಕೇಳಾದು’ ಅಂತ ಸಂಜೆಯ ಕತ್ತಲಲ್ಲೇ ಊರ ಕಡೆಗೆ ನಡೆದ.
ಒಂದು ದೊಡ್ಡ ಮನೆ ಕಂಡ. ಮನೆಯಲ್ಲಿ ತುಂಬಾ ಬೆಳಕಿತ್ತು.
‘ಇಲ್ಲೇ ಒಸಿ ಹಾಲ್ ಕೇಳಾವಾ’ ಅಂತಾ ಗೇಟು ದಾಟಿ ಒಳಗೆ ಹೆಜ್ಜೆ ಹಾಕಿದ. ಮಗುವಿದ್ದ ಜೋಳಿಗೆಯನ್ನು ಜಗುಲಿಯ ಮೇಲಿಟ್ಟು ಬಾಗಿಲ ಕಡೆಗೆ ನೋಡುತ್ತ ‘ಅವ್ವಾ’ ಎಂದ. ಎಲ್ಲಿತ್ತೋ ಏನೋ ನಾಯಿಯೊಂದು ‘ಬೊವ್ ಬೊವ್’ ಎಂದು ಅವನ ಮೇಲೇರಿ ಬಂದು ಹಿಗ್ಗಾಮುಗ್ಗಾ ಎಳದಾಡಿತು. ‘ಅಯ್ಯೋ ಅವ್ವಾ’ ಎಂಬ ಕೂಗು ಕೇಳಿ ಮನೆಯವರೆಲ್ಲ ಹೊರಗೆ ಬಂದರು. ನಾಯಿ ಅವನನ್ನು ಚೆನ್ನಾಗಿ ಕಚ್ಚಿಬಿಟ್ಟಿತ್ತು. ಹೊಟ್ಟೆಯಲ್ಲಿ ಕೂಳಿಲ್ಲ, ನಾಯಿ ಕಚ್ಚಿದ್ದಕ್ಕೆ ಬಿಟ್ಟ್ಯಾ ಪ್ರಜ್ಞೆ ತಪ್ಪಿದ.
‘ಅಯ್ಯೋ ಪಾಪ, ಅವನನ್ನು ಮೊದ್ಲು ಆಸ್ಪತ್ರೆಗೆ ಕರಕೊಂಡು ಹೋಗೋಣ.’ ಎಂದು ಆಸ್ಪತ್ರೆಗೆ ಸಾಗಿಸಿದರು.
ಸ್ವಲ್ಪ ಹೊತ್ತಿನಲ್ಲಿ ಜೋಳಿಗೆಯಲ್ಲಿದ್ದ ಮಗು ‘ಕಿರ್ರೋ ಕಿರ್ರೋ’ ಎಂದು ಅರಚತೊಡಗಿತು.
‘ಇದೆಲ್ಲಿ೦ದ ಬರ್ತದೆ ಮಗು ಅಳೋ ಶಬ್ದ’ ಎಂದು ಎಲ್ಲರೂ ದೂರದಿಂದಲೇ ನೋಡುತ್ತಿದ್ದರೆ ಜ್ಯೋತಿ ಓಡೋಡಿ ಬಂದು ಆ ಮಗುವನ್ನು ಎತ್ತಿಕೊಂಡು ಒಳಗೆ ಓಡಿಬಿಟ್ಟಳು. ಎಲ್ಲರೂ ಬಿಟ್ಟ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದಂತೆಯೇ ಜ್ಯೋತಿ ಮಗುವನ್ನು ಎತ್ತಿಕೊಂಡು ತನ್ನ ರೂಮಿಗೆ ನಡೆದೇ ಬಿಟ್ಟಳು. ಬಾಗಿಲು ಹಾಕಿಕೊಂಡು ಮಗುವಿಗೆ ಹಾಲುಣಿಸತೊಡಗಿದಳು. ಅವಳಿಗಾದ ಸಂತೋಷ ಅಷ್ಟಿಷ್ಟಲ್ಲ. ಹಾಲು ತುಂಬಿದ ಎದೆನೋವು ತಾಳಲಾರದೆ ಹುಚ್ಚಿಯಂತೆ ಅಳುತ್ತಿದ್ದ ಅವಳು ಈಗ ತಾಯ್ತನದ ಆನಂದ ಪಡೆದಿದ್ದಳು. ಅವಳ ಮುಖ ಪ್ರಸನ್ನವಾಗಿತ್ತು. ಎಲ್ಲರಿಗೂ ಇದೇನು ನಡೆಯುತ್ತಿದೆ ಅನ್ನುವದು ತಿಳಿಯದೇ ಗಾಬರಿಯಿಂದ ಯಾರಿಗೂ ಮಾತೇ ಬಾರದಂತಾಯಿತು. ಆದರೆ ಜ್ಯೋತಿಯ ಮುಖ ನೋಡಿದಾಗ ಎಲ್ಲರಿಗೂ ಸಮಾಧಾನವಾಯಿತು.
‘ಆ ಹುಡುಗ ಯಾರು, ಈ ಕೂಸು ಅವನ ಕೈಗೆ ಹೇಗೆ ಬಂತು’ ಎಲ್ಲರಿಗೂ ಕುತೂಹಲ.
ಅಷ್ಟೊತ್ತಿಗೆ ಜ್ಯೋತಿಯ ಗಂಡ ಸಾಗರ್ ಆಸ್ಪತ್ರೆಯಿಂದ ಬಂದ. ಜ್ಯೋತಿ ಓಡೋಡಿ ಬಂದು
‘ನೋಡ್ರಿ, ನನ್ನ ಮಗೂನ. ಸತ್ತು ಹೋಯಿತು ಅಂದ್ರಲ್ಲಾ. ನೀವು ಬರೀ ಸುಳ್ಳು ಹೇಳ್ತೀರಿ’ ಎಂದಾಗ ಸಾಗರ್ ಇದೇನೆಂದು ಆಶ್ಚರ್ಯದಿಂದ ಎಲ್ಲರ ಕಡೆ ನೋಡಿದ. ಸಾಗರ್‌ನ ತಂದೆ
‘ಆ ಹುಡುಗ ಹೇಗಿದ್ದಾನೆ?’ ಎಂದು ಕೇಳಿದರು.
‘ಪರವಾಗಿಲ್ಲ. ಸುಧಾರಿಸ್ಕೋತಿದ್ದಾನೆ’
ಒಳಗೆ ಕರೆದುಕೊಂಡು ಹೋಗಿ ನಡೆದದ್ದನ್ನೆಲ್ಲ ಹೇಳಿದರು.

ಜ್ಯೋತಿ ಎಂಟು ದಿನಗಳ ಹಿಂದೆ ತನ್ನ ಮಗುವನ್ನು ಕಳೆದುಕೊಡು ಹುಚ್ಚಿಯಂತಾಗಿದ್ದರಿಂದ ಎಲ್ಲರೂ ಅವಳನ್ನು ಹೇಗೆ ಸಂತೈಸುವದೆಂದು ಚಿಂತಿಸುತ್ತಿದ್ದರು. ಯಾವುದಾದರೂ ಮಗುವಿನ ಅಳುವನ್ನು ಕೇಳಿದ ಕೂಡಲೇ ಓಡೋಡಿ ಹೋಗುತ್ತಿದ್ದಳು. ಹುಟ್ಟುವಾಗಲೇ ಸತ್ತು ಹುಟ್ಟಿದ ತನ್ನ ಮಗುವನ್ನು ನೋಡಿ ಜ್ಯೋತಿ ಕಿರಿಚಿಕೊಂಡು ಪ್ರಜ್ಞೆ ತಪ್ಪಿದ್ದಳು. ಡಾಕ್ಟರೆಲ್ಲ ಉಪಚರಿಸಿ ಅವಳನ್ನೇನೋ ಬದುಕಿಸಿದರು. ಆದರೆ ಜ್ಯೋತಿಯ ಬುದ್ಧಿ ಸ್ತಿಮಿತದಲ್ಲಿ ಉಳಿಯಲಿಲ್ಲ. ಮಗುವಿಗಾಗಿ ಹಂಬಲಿಸುತ್ತಿದ್ದಳು. ಹಾಲು ತುಂಬಿದ ಎದೆ ನೋವು ಬೇರೆ. ಶ್ರೀಮಂತರ ಮನೆಯ ಕೂಸಿಗಾದರೆ ಬಡವರ ಮನೆಯ ಬಾಣಂತಿಯನ್ನು ಕರೆಸಿ ಹಾಲು ಉಣಿಸಬಹುದು. ಆದರೆ ಶ್ರೀಮಂತರ ಮನೆಯ ಬಾಣಂತಿ ಕೂಸು ಕಳೆದುಕೊ೦ಡು ಎದೆ ತುಂಬಿ ನೋವಾದರೂ ತಾಯಿಯನ್ನು ಕಳೆದುಕೊಂಡು ಪರದೇಶಿಯಾದ ಬಡವರ ಮಕ್ಕಳಿಗೆ ಹೇಗೆ ಹಾಲು ಉಣಿಸಿಯಾಳು! ಇದು ನಮ್ಮ ಸಮಾಜದ ರೀತಿ. ಜ್ಯೋತಿಯದೂ ಅದೇ ಹಣೆಬರಹವಾಗಿತ್ತು. ಆದರೆ ಮಗುವೊಂದು ತಾನಾಗಿಯೇ ಅವಳನ್ನು ಹುಡುಕಿಕೊಂಡು ಬಂದು ತಾಯ್ತನದ ಸುಖ ನೀಡಿತ್ತು. ಆದರೆ ಮನೆಯಲ್ಲಿ ಎಲ್ಲರೂ ‘ಇದೆಲ್ಲಿಯ ಮಗುವೋ? ಅದರದೇನು ಕಥೆಯೋ? ಈಗೇನು ಮಾಡಬೇಕು?’ ಎಂದು ಚಿಂತೆಗೀಡಾದರು. ಆಸ್ಪತ್ರೆಯಲ್ಲಿರುವ ಆ ಹುಡುಗನಿಂದಲೇ ಎಲ್ಲ ವಿಷಯ ತಿಳಿಯಬೇಕು.
ಬೆಳಗ್ಗೆ ಬಿಟ್ಟ್ಯಾನಿಗೆ ಎಚ್ಚರ ಬಂತು. ಸಾಗರ್ ಆಸ್ಪತ್ರೆಗೆ ಬ೦ದು ಹುಡುಗನನ್ನು ಮಾತಾಡಿಸಿದ.
‘ನಿನ್ನ ಹೆಸರೇನು’
‘ಬಿಟ್ಟ್ಯಾ… ಅಯ್ಯೋ ನನ್ ತಮ್ಮ ಎಲ್ಲಿ?’
‘ನಮ್ಮ ಮನೇಲಿದ್ದಾನೆ. ಚೆನ್ನಾಗಿದ್ದಾನೆ. ಸರಿ. ನೀನ್ಯಾಕೆ ಮಗೂನ ಎತ್ತಿಕೊಂಡ್ ಬಂದೆ?’
‘ಅದೊಂದ್ ಕತೇನೇ ಬುಡಿ. ಅವ್ವನಿಗೆ ಕಾಲಿರಲಿಲ್ಲ. ನಮ್ಮಪ್ಪ ದುಡದು ಹಾಕ್ತಿದ್ದ. ಮನೇಲೇ ಕೆಲ್ಸ ಮಾಡ್ಕೊಂಡಿದ್ಲು. ಒಂದಿನ ಯಾರೋ ಅಪ್ಪನ್ನ ಕೊಂದಾಕಿದ್ರು. ಯಾಕಂತ ಗೊತ್ತಿಲ್ಲ. ನಮ್ಮವ್ವ ಕಣ್ಣೀರು ಹಾಕ್ತಿದ್ಲು. ನನ್ ತಮ್ಮ ಹುಟ್ದಾಗ ನಮ್ಮ ಜನಾ ಎಲ್ಲಾ ಸೇರಿ ಈ ಮನೆ ಬುಟ್ಟಿ ಎಲ್ಲಿಗಾದ್ರೂ ಒಂಟೋಗು, ಹಾದರಗಿತ್ತಿ ಅಂತಾ ಬಯ್ತಿದ್ರು. ಅಂಗಂದ್ರೇನ್ ಸ್ವಾಮಿ? ನಿನ್ನೆ ಅವರೆಲ್ಲ ಸೇರಿ ಅವ್ವನ್ನ ಹೊಡೀತಾ ಇದ್ರು. ಅಲ್ಲಿದ್ರೆ ನಮ್ಮನ್ನೂ ಸಾಯಿಸ್ತಾರೆ ಅಂತಾ ಮಗೀನ ಎತ್ಕೊಂಡ್ ಓಡೋಡಿ ಬಂದೆ. ಮಗೀಗೆ ಒಸಿ ಹಾಲ್ ಕೇಳಾನ ಅಂತ ನಿಮ್ಮ ಮನಿ ತಾವ ಬಂದೆ. ನಾ ಮಾಡಿದ್ದು ತಪ್ಪಾ ಬುದ್ದೀ?’
‘ಇಲ್ಲ, ನಿಂದೇನೂ ತಪ್ಪಿಲ್ಲ. ನೀ ಬೇಗ ವಾಸಿಯಾಗಿ ಬಂದು ನಿನ್ ತಮ್ಮನ್ನ ಕರಕೊಂಡು ಹೋಗು.’

ಸಾಗರ್ ಮನೆಗೆ ಬಂದ. ಮನೆಯಲ್ಲಿ ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು. ಅವನ ತಂದೆ ತಾಯಿ ಯೋಚಿಸುತ್ತಿದ್ದರು. ಮಗು ಬಂದದ್ದರಿಂದ ಜ್ಯೋತಿಯ ಆರೋಗ್ಯ ಸುಧಾರಿಸಿದೆಯಾದ್ದರಿಂದ ಒಳ್ಳೆಯದೇ ಆಯಿತು ಎಂದು ಒಮ್ಮೆ ಅನ್ನಿಸಿದರೆ ಮತ್ತೊಮ್ಮೆ ಯಾರ ಮಗುವೋ ಏನು ಕಥೆಯೋ. ನಾಳೆ ಯಾರಾದರೂ ಬಂದು ಕೇಳಿದರೆ ಏನು ಹೇಳುವದು? ದೇವರು ಎಂಥ ಇಕ್ಕಟ್ಟಿಗೆ ಸಿಕ್ಕಿಸಿಬಿಟ್ಟ! ಇರೋ ಒಬ್ಬ ಮಗ ಸೊಸೆಗೆ ಎಷ್ಟೋ ವರ್ಷ ಮಕ್ಕಳಾಗಿರಲಿಲ್ಲ. ಈಗ ದೇವರು ಒಂದು ಮಗು ಕೊಟ್ಟ ಅನ್ನುವಷ್ಟರಲ್ಲೇ ಅದೂ ಹುಟ್ಟುವಾಗಲೇ ಸತ್ತುಹೋಯಿತು. ಇನ್ನು ಮುಂದೆ ಮಕ್ಕಳಾಗುವದಿಲ್ಲ ಎಂದು ಡಾಕ್ಟರು ಬೇರೆ ಹೇಳಿದ್ದಾರೆ. ಜ್ಯೋತಿಗೆ ಮಕ್ಕಳೆಂದರೆ ಅಪಾರ ಪ್ರೀತಿ. ಮಕ್ಕಳು ಮಕ್ಕಳು ಎಂದು ಹಂಬಲಿಸುವ ಈಕೆಗೆ ಈ ಮಗುವನ್ನೂ ಆ ಹುಡುಗನಿಗೆ ಕೊಟ್ಟುಬಿಡು ಎಂದು ಹೇಳಿದರೆ ಅವಳ ಗತಿ ಏನಾದೀತು? ಪ್ರಶ್ನೆ ಬಗೆಹರಿಯದಂತಾಗಿತ್ತು.

ಆಸ್ಪತ್ರೆಯಲ್ಲಿ ಬಿಟ್ಟ್ಯಾ ಸ್ವಲ್ಪ ಚೇತರಿಸಿಕೊಂಡ. ‘ನಾನೀಗ ಆ ಮನೆಗೆ ಹೋದರೆ ಮಗೀನ ನನ್ ಕೈಗೇ ಕೊಟ್‌ಬಿಡ್ತಾರೆ. ಈಗ ನನ್ ತಮ್ಮ ಒಳ್ಳೇ ಕಡೆಗೇ ಸೇರ್‌ಕೊಂಡೈತಿ. ನಾ ಅವ್ವನ ಮಾತು ನಡೆಸಿದಂಗೆ ಆಗೈತೆ. ಇನ್ನ ನಾ ಅಲ್ಲಿಗೆ ಹೋಗಾದೂ ಬ್ಯಾಡ, ಇಲ್ಲಿರಾದೂ ಬ್ಯಾಡ’ ಎಂದು ಬಿಟ್ಟ್ಯಾ ಹೊರಟು ಹೋಗಿಬಿಟ್ಟ.


೦೮-೧೨-೨೦೦೫

ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.