ಎ ಸೂಯಿಸೈಡಲ್ ನೋಟ್

ಕಾಲೇಜು ಅಧ್ಯಾಪಕ ವಿಶ್ವನಾಥ್ ಅವರು ತಾವು ಕಾಲೇಜಿಗೆ ಹೋಗುವಾಗ ತಮ್ಮ ಪತ್ನಿಯನ್ನು ಮನೆಯಲ್ಲಿ ಕೂಡಿ ಎಲ್ಲ ಕಡೆ ಬೀಗ ಹಾಕಿ ಹೋಗುತ್ತಾರೆ…. ಎಂಬ ಸುದ್ದಿ ಇಡೀ ಕಾಲೇಜಿನಲ್ಲಿ, ವಿಶ್ವವಿದ್ಯಾನಿಲಯದಲ್ಲಿ ಹಬ್ಬಿಬಿಟ್ಟಿತು. ವಿಶ್ವನಾಥ್ ಅವರ ವಿರುದ್ಧ ಬಂಡಾಯಗಾರರು, ಸ್ತ್ರೀವಿಮೋಚನೆಯವರು ಸದ್ಯದಲ್ಲೇ ಸತ್ಯಾಗ್ರಹ, ಧರಣಿ ನಡೆಸಿ ಅವರನ್ನು ಕೆಲಸದಿಂದ ತೆಗೆದುಹಾಕಲು ಉಪಕುಲಪತಿಯವರನ್ನು ಒತ್ತಾಯಿಸುವ ನಿರ್ಣಯ ತೆಗೆದುಕೊಂಡಿರುವುದಾಗಿ ಗೊತ್ತಾಯಿತು.

ಇದಕ್ಕೆಲ್ಲ ಹೇಗೆ ಉತ್ತರಿಸುವುದೋ ನನಗೆ ಗೊತ್ತಾಗಲಿಲ್ಲ. ನನ್ನ ಹೆಸರು ಮೀನಾ. ವಿವರಣೆಗೆ ಸಿಕ್ಕದಿರುವ ದುಃಖದಲ್ಲಿ ಮುಳುಗಿಹೋಗುವ ನಾನು ಬುದ್ಧಿಜೀವಿ ಎಂದು ನನ್ನ ಗೆಳತಿಯರು ಕರೆಯುತ್ತಿದ್ದರು. ಹೇಗೆ ಎಲ್ಲವೂ ತಲೆಕೆಳಗಾಗಿ ಆತ್ಮಹತ್ಯೆಯೊಂದೇ ದಾರಿಯಾಗಿ ತೆರೆದುಕೊಳ್ಳುತ್ತದೆ ಎಂದು ವಿವರಿಸಿ ಹೇಳಲು ಈ ‘sಈ?ಓ’; ನನ್ನ ಪತಿಗೆ ತೊಂದರೆಯಾಗದೆ ಇರಲಿ ಎನ್ನುವುದೂ ನನ್ನ ಉದ್ದೇಶದಲ್ಲಿ ಸೇರಿದೆ.
ನಾನು ಓದುವಾಗ, ಮಾತಾಡುವಾಗ, ನನ್ನ ಮೌನದ ವೇಳೆಯಲ್ಲಿ, ನನ್ನ ಅತ್ಯಂತ ಖಾಸಗಿ ನಿಮಿಷಗಳಲ್ಲಿ ಈ ವ್ಯಾಘ್ರ ನನ್ನನ್ನು ನೋಡುತ್ತಾ ನಿಂತಿರುತ್ತದೆ. ಆದರೆ ನಾವೆಲ್ಲ ಅತ್ಯಂತ ಸಹಜವಾದ ಬದುಕನ್ನು ಸಾಗಿಸುತ್ತ ಇರುತ್ತೇವೆ. ಒಂದು ರೆಡಿಮೇಡ್ ಸ್ಕರ್ಟ್, ಒಂದು ಬ್ಲೌಸ್ ಪೀಸ್‌ಗಾಗಿ ದಿನವೆಲ್ಲ ಅಲೆಯುತ್ತೇವೆ. ನಾವು ನೋಡಿದ ಸಿನಿಮಾಗಳನ್ನು ಗಂಭೀರವಾಗಿ ತೆಗೆದುಕೊಂಡು ಹೀರೋನ ನಡಿಗೆ, ಮಾತಿನ ಶೈಲಿ ಮುಂತಾದ್ದನ್ನು ವಿವರವಾಗಿ ಚರ್ಚಿಸುತ್ತೇವೆ. ತೀರಾ ಕಳಪೆ ಇಂಗ್ಲಿಷ್ ಪುಸ್ತಕಗಳನ್ನು ಕೂಡ ಮೆಚ್ಚಿ ಮಾತಾಡುತ್ತೇವೆ.

ಆದರೆ ಇಷ್ಟೇ ಆಗಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯವೇ ಇರಲಿಲ್ಲ. ಮನುಷ್ಯ ತುಂಬ ಜಟಿಲ… ತಾಯಿಯನ್ನು ಕೂಡ ಒಂದು ಕ್ಷಣ ಪ್ರೇಯಸಿಯಂತೆ ನೋಡಿದರೂ ಪ್ರಾಯಶ್ಚಿತ್ತದ ಬಗ್ಗೆ ಯೋಚಿಸುವ ಮನುಷ್ಯ ಮಿಕ್ಕೆಲ್ಲ ಪ್ರಾಣಿಗಳಿಂದ ಭಿನ್ನನಾಗಿದ್ದುದರಿಂದಲೇ ಆತನ ನೆಚ್ಚಿನ ಶೇಕ್ಸ್‌ಪಿಯರ್, ವ್ಯಾಸರುಗಳೆಲ್ಲ ರೂಪುಗೊಂಡರು. ವಾಲ್ಮೀಕಿ ಒಂದು ಹಕ್ಕಿಯ ಸಾವನ್ನು ನೋಡಿ ಒಂದು ಮಹಾಕಾವ್ಯವನ್ನು ಬರೆದ.

ಇದು ಇನ್ನೂ ಜಟಿಲವಾದದ್ದು. ಆಂಟನ್ ಚೆಕಾವ್‌ನ ಒಂದು ಕತೆಯಲ್ಲಿ ಥಿಯೇಟರ್‍ನಲ್ಲಿ ನಾಟಕ ನೋಡುತ್ತಿರುವ ಗುಮಾಸ್ತನೊಬ್ಬ ತನ್ನ ಬಾಸ್ ಎದುರಿನ ಸಾಲಿನಲ್ಲಿ ಕೂತಿರುವುದನ್ನು ಗಮನಿಸದೆ ಸೀನಿಬಿಡುತ್ತಾನೆ; ಬಾಸ್ ಚಡಪಡಿಸುತ್ತಾನೆ, ಅಷ್ಟೆ. ತನ್ನ ಸೀನಿಗೆ ಬಲಿಯಾದವನು ತನ್ನ ಗೌರವಾನ್ವಿತ ಬಾಸ್ ಎಂದು ತಿಳಿದೊಡನೆ ಆ ಗುಮಾಸ್ತ ತನ್ನನ್ನು ಕ್ಷಮಿಸಬೇಕೆಂದು ಕೇಳಿಕೊಳ್ಳುತ್ತಾನೆ. ಬಾಸ್ ‘ಪರವಾಗಿಲ್ಲ, ನನಗೇನೂ ಆಗಿಲ್ಲ’ ಎಂದು ಹೇಳುತ್ತಾನೆ. ಆದರೆ ಗಮಾಸ್ತನಿಗೆ ಸಮಾಧಾನವಿಲ್ಲ. ಬಾಸ್‌ನನ್ನು ಮತ್ತೆ ಮತ್ತೆ ಕ್ಷಮಿಸಲು ಬೇಡಿಕೊಳ್ಳುತ್ತಾನೆ. ಬಾಸ್ ತನ್ನ ಗುಮಾಸ್ತನ ಪಶ್ಚಾತ್ತಾಪಕ್ಕೆ ಮರುಗಿ ಅವನನ್ನು ಇನ್ನೂ ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ಗುಮಾಸ್ತನಿಗೆ ಸಮಾಧಾನವೇ ಇಲ್ಲ. ಬಾಸ್ ತನ್ನನ್ನು ಕ್ಷಮಿಸಿಯೇ ಇಲ್ಲ ಎನ್ನುವುದರಿಂದ ಹಿಡಿದು ತನ್ನಿಂದ ಎಂಥ ಅಚಾತುರ್ಯವಾಯಿತು ಎಂದು ಚಿಂತಿಸಿ ನಾಟಕ ಮುಗಿದ ಮೇಲೆ ಬಾಸ್ ಮನೆಗೆ ಹೋಗಿ ಕ್ಷಮಿಸಲು ಬೇಡಿಕೊಳ್ಳುತ್ತಾನೆ. ಬಾಸ್‌ಗೆ ಅವನ ಅತೀ ವಿನಯ ನೋಡಿ ಸ್ವಲ್ಪ ರೇಗುತ್ತದೆ. ‘ನನಗೇನೂ ಆಗಿಲ್ಲ ಮಾರಾಯ, ಎಲ್ಲವನ್ನೂ ಥಿಯೇಟರ್‍ನಲ್ಲಿಯೇ ಮರೆತುಬಿಟ್ಟಿದ್ದೇನೆ’ ಎಂದು ಹೇಳುತ್ತಾನೆ. ಆ ಮಾತಿನಲ್ಲಿ ಕೂಡ ಗುಮಾಸ್ತನಿಗೆ ಕೊಂಕು ಇರುವಂತೆ ಅನ್ನಿಸುತ್ತದೆ. ಕೊನೆಗೆ ಆತ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾನೆ.
ನಾನು ಇನ್ನೂ ನನ್ನ ಟಿಪ್ಪಣಿಯ ಹಿನ್ನೆಲೆಯನ್ನು ಕೂಡ ಹೇಳಲಾಗಿಲ್ಲ.

ನಿಮಗೆ ಅಚ್ಚರಿಯಾಗಬಲ್ಲ ಒಂದು ವಿಷಯ ಹೇಳಿ ನನ್ನ ಹಾಸ್ಯಾಸ್ಪದ ಪ್ರೇಮದ ಬಗ್ಗೆ ಹೇಳುತ್ತೇನೆ. ವೇಳೆ ಇದ್ದರೆ ಕೇಳಿ.
ತಾವು ಹೆಂಡತಿಯನ್ನು ಮನೆಯಲ್ಲಿ ಕೂಡಿ ಬೀಗ ಹಾಕಿಕೊಂಡು ಹೋಗುವುದಾಗಿ ಸುದ್ದಿ ಹಬ್ಬಿದ್ದನ್ನು ಕೇಳಿದ ನನ್ನ ಪತಿಗೆ ಬೇಸರವಾಯಿತು. ನನ್ನ ಅವರ ನಡುವೆ ಅಖಂಡ ಮೌನ ಆವರಿಸಿತು. ಈ ಪ್ರಕರಣದ ಅರ್ಥ ಯಾರಿಗೂ ಆಗುವಂತಿರಲಿಲ್ಲ. ಎಂದೂ ಹುಂಬತನದಿಂದ ಮಾತಾಡದಿರುವ ನಾನು ಅವರಿಗೆ ಸಮಾಧಾನ ಮಾಡುವುದು ಸಾಧ್ಯವಿರಲಿಲ್ಲ. ಏನೆಂದು ಸಮಾಧಾನ ಮಾಡುವುದು? ಬೀಗ ಹಾಕಿದ್ದು ಸುಳ್ಳು ಎಂದೆ? ‘ನಾನು ಪತ್ರಿಕಾ ಹೇಳಿಕೆ ಕೊಡಬಲ್ಲೆ’ ಎಂದೆ? ಎಲ್ಲವೂ ಹಾಸ್ಯಾಸ್ಪದವಾಗುತ್ತಿದ್ದವು. ಹೀಗಾಗಿ ನನ್ನ ದುಃಖ ತೀವ್ರವಾಯಿತು. ನಾನು ಎಲ್ಲರನ್ನೂ ವಂಚಿಸಿದ ಭಾವನೆ ನನ್ನಲ್ಲಿ ಬೆಳೆಯತೊಡಗಿತು. ಅದನ್ನು ವಿವರಿಸಿ ಈ ದುಗುಡವನ್ನು ಕೊನೆಗೊಳಿಸಬೇಕೆಂದು ಈ ನೋಟ್ ಬರೆದಿದ್ದೇನೆ.
*
*
*
ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಹದಿನೆಂಟು ವರ್ಷದವಳು. ಅದು ಒಂದು ರೀತಿಯಲ್ಲಿ ಮುಗ್ಧತೆ ತುಂಬಿದ್ದ ಕಾಲ. ಆ ಕಾಲ ಎಲ್ಲಿ ಹೋಯಿತೆಂದು ಕೆಲವೊಮ್ಮೆ ಕನಸಿನಲ್ಲಿ ಕೂಡ ಹುಡುಕಿದ್ದೇನೆ. ಕಾಲ ಸಿಕ್ಕುವುದಿಲ್ಲ. ಆದರೆ ನಿಮ್ಮಿಂದ ನಷ್ಟವಾದದ್ದು ಏನೆಂಬುದು ಮಾತ್ರ ನಮ್ಮಲ್ಲಿ ಉಳಿದುಹೋಗುತ್ತದೆ. ಒಂದು ಬಗೆಯ ಲವಲವಿಕೆ, ಹುಡುಗಾಟ, ಸುಲಭವಾದ ನಗು; ಎಲ್ಲರೂ ನಮ್ಮ ನಡಿಗೆ, ಮಾತು, ಧ್ವನಿ, ವೈಯಾರವನ್ನು ಗಮನಿಸುತ್ತಿದ್ದಾರೆ ಎಂಬ ವಿಶ್ವಾಸ; ಇದು ಪ್ರತಿಭಾವಂತ ನಟಿ ರಂಗದ ಮೇಲೆ ಅನುಭವಿಸುವ ಭಾವನೆ. ಎಲ್ಲರೂ ನೋಡುತ್ತಿದ್ದಾರೆ ಎನ್ನುವ ಗ್ರಹಿಕೆ, ನೋಟ ನನಗೆ ಏನೂ ಮಾಡುವುದಿಲ್ಲ. ನನ್ನ ನಟನೆಯನ್ನು ಕೆಡಿಸುವುದಿಲ್ಲ ಎಂಬ ತಿಳಿವು. ನಿಜಕ್ಕೂ ಆ ನಟಿಯ ನಟನೆ ಎಲ್ಲರೂ ಆಕೆಯನ್ನು ನೋಡಿ ಮೆಚ್ಚುವುದರಿಂದ ಉತ್ತಮಗೊಳ್ಳುತ್ತಾ ಹೋಗುತ್ತದೆ. ಅಂಥದೇ ಪ್ರಾಯದ ಹುಡುಗಿಯ ಸ್ಥಿತಿ. ನಾನು ಮನುಷ್ಯಳಾಗಿ ನನ್ನಲ್ಲಿ ಪಶುವನ್ನು ಕಂಡದ್ದು ಆ ಕಾಲದಲ್ಲಿ ಮಾತ್ರ. ನನ್ನಲ್ಲಿನ ಪಶು ನನ್ನ ಹರೆಯದಲ್ಲಿ ಹುಮ್ಮಸ್ಸಿನಿಂದ ಕೂಡಿರುತ್ತದೆ; ನನ್ನ ದಾಹ ಸೂಚಿಸಿದ್ದನ್ನೆಲ್ಲ ಸ್ವೀಕರಿಸುತ್ತದೆ. ಅದಕ್ಕೆ ಪಾಪಪ್ರಜ್ಞೆ ಎನ್ನುವುದಿಲ್ಲ. ಅಂಥ ಪಶುತ್ವದ ದಿನಗಳಲ್ಲಿ ನನಗೆ ಈ ಮೆಡಿಕಲ್ ಫೈನಲ್ ವಿದ್ಯಾರ್ಥಿ ಚೀನಿ ಪರಿಚಿತನಾದ. ಅದು ಹೇಗೆ ಇವನು ನನ್ನ ಬದುಕಿನೊಳಕ್ಕೆ ಅಡಿ ಇಟ್ಟ ಎನ್ನುವುದು ಕೂಡ ನನಗೆ ಮರೆತುಹೋಗಿದೆ. ಪ್ರಾಯದ ಸಡಗರದಲ್ಲಿ ಅದೆಲ್ಲ ಎಲ್ಲಿ ನೆನಪಿರುತ್ತದೆ. ಇಷ್ಟು ಮಾತ್ರ ನಿಜ. ಎರಡು ದಿನಗಳ ಗೆಳೆಯನಂತೆ ಬಂದ ಚೀನಿ ನನ್ನ ಮೆಚ್ಚಿನ ಹುಡುಗನಾದ. ಆತ ನನ್ನನ್ನು ಕಂಡರೆ ಆಡುತ್ತಿದ್ದುದು ನೋಡಿದರೆ ಅವನ ಗ್ರಹಿಕೆಯ ರೀತಿಯೇ ನನ್ನಿಂದ ಬದಲಾಗಿತ್ತು. ನನ್ನ ಕ್ಲಾಸ್‌ಮೇಟ್ ರೋಹಿಣಿಯ ಮನೆಯಲ್ಲಿ ಒಂದು ದಿನ ನಾವು ಪರಿಚಿತರಾದದ್ದು ಈಗ ನೆನಪಾಗುತ್ತಿದೆ. ರೋಹಿಣಿ ನಮ್ಮಿಬ್ಬರ ಪರಸ್ಪರ ಸ್ಪಂದನವನ್ನು ಊಹಿಸಿದಂತಿತ್ತು. ಎಂದೂ ಮತ್ಸರಪಡದ ಗೆಳತಿ ಆಕೆ. ನಾನು ಮತ್ತು ಚೀನಿ ನಡುವಿನ ರ್‍ಯಾಪರ್ಟ್ ಕಂಡು ಚಕಿತಳಾದ ಆಕೆ ‘ಮಾತಾಡ್ತಿರಿ’ ಎಂದು ಹೇಳಿ ಒಮ್ಮೆ ಕಾಫಿಪುಡಿ ತರಲು ಹೋದಳು. ಅವಳು ಹೋದೊಡನೆ ನನಗೆ ಭಯವಾಗಿತ್ತು. ಚೀನಿ ಕೂಡ ಸಣ್ಣಗೆ ನಡುಗುತ್ತಿದ್ದಂತಿದ್ದ. ಮತ್ತು ತನ್ನ ಕಂಪನವನ್ನು ಪೂರ್ಣ ಹಿಡಿತದಲ್ಲಿಟ್ಟುಕೊಂಡು ತನ್ನ ಆಕರ್ಷಣೆಗೆ ವಿಶೇಷ ಶಕ್ತಿ ಕೊಟ್ಟುಕೊಂಡಂತಿತ್ತು. ಕ್ಷಣಗಳುರುಳಿದಂತೆ ಆತ ಗಂಡಸಿನ ದಿಟ್ಟತನ ಕೂಡಿಸಿಕೊಂಡ. “ಮೀನಾ, ನಿನ್ನನ್ನು ಮೀನಾ ಅಂತ ಕರೆದರೆ ಬೇಸರವಾಗುತ್ತ?” ಅಂದು ನಾನು ಕೂತಿದ್ದ ಸೋಫಾದ ಮೇಲೆ ತನ್ನ ತೋಳುಗಳನ್ನಿಟ್ಟುಕೊಂಡು ನನ್ನತ್ತ ಬಗ್ಗಿ, ‘ನೀನು ತುಂಬ ಒಳ್ಳೆಯ ಹುಡುಗಿ’ ಅಂದ. ‘ನಾನು ನಿನ್ನಂಥ ಸೂಕ್ಷ್ಮ ಹುಡುಗಿಯನ್ನು ನೋಡೇ ಇಲ್ಲ’ ಅಂದ. ನಾನು ಆಗ ಸುಮ್ಮನಿರಕೂಡದೆಂದು ಇದ್ದ ಧೈರ್ಯವನ್ನೆಲ್ಲ ಕೂಡಿಸಿಕೊಂಡು ತಲೆಯೆತ್ತಿ ನೋಡಿ, ‘ಅದು ಭಂಡತನ’ ಅಂದೆ. ಅವನು ಕೂತಲ್ಲಿಂದ ಬಿದ್ದವನಂತೆ ಸಣ್ಣಗೆ ಬೆವರುತ್ತಾ, ‘ನಾನು ಹೇಳಿದ್ದರಲ್ಲಿ ಏನಾದರೂ ತಪ್ಪಿದೆಯೆ?’ ಅಂದ. ‘ಪೂರ್ತಿ ತಪ್ಪು. ನಿನ್ನ ಮಾತು ಪರಂಪರಾಗತ ಮೋಸದ ನುಡಿಕಟ್ಟುಗಳಿಂದ ತುಂಬಿದೆ. ಪ್ರತಿಯೊಬ್ಬ ಹುಡುಗನೂ ಮಾತಾಡುವುದೇ ಹಾಗೆ’ ಅಂದೆ.
‘ಎಷ್ಟು ಜನ ಹುಡುಗರು ನಿನಗೆ ಗೊತ್ತು?’ ಅಂದ. ಅವನ ದನಿಯಲ್ಲಿ ಮುನಿಸು ಇತ್ತು.
‘ಅದು ವಲ್ಗರ್, ಅಂಥ ಪ್ರಶ್ನೆಯನ್ನು ಪಡ್ಡೆ ಹುಡುಗರು ಮಾತ್ರ ಕೇಳುತ್ತಾರೆ. ನಾನು ಎಷ್ಟು ಜನರನ್ನು ಕಂಡಿದ್ದರೆ ನಿನಗೇನು?’ ಅಂದೆ. ಆತ ಇನ್ನೂ ಮಂಕಾಗಿ ಕುಳಿತ.

ಅಷ್ಟರಲ್ಲಿ ರೋಹಿಣಿ ಬಂದಳು. ಅವಳು ಎಷ್ಟು ಸ್ವಚ್ಛ ಹುಡುಗಿಯೆಂದರೆ ನಮ್ಮಿಬ್ಬರ ಸಂಭಾಷಣೆಯನ್ನು ಕುರಿತು ಕೊಂಕು ತೋರಲಿಲ್ಲ, ಅಶ್ಲೀಲವಾದ ಊಹೆಗೆ ಇಳಿಯಲಿಲ್ಲ.

ಅದು ನಾನು ಮತ್ತು ಚೀನಿ ಪರಿಚಯವಾದ ಕ್ಷಣ. ಅವನು ಕೀಳಾಗಿ ಮಾತಾಡಿದ್ದೇನೋ ನಿಜ. ಆದರೆ ನಾನು ಅಷ್ಟು ನಿಷ್ಠುರವಾಗಿ ಮಾತಾಡುವ ಅಗತ್ಯವಿರಲಿಲ್ಲ. ಅವನು ಅವತ್ತು ತನ್ನ ಗಂಡಿನ ಎಗ್ಗನ್ನೆಲ್ಲ ಬಿಟ್ಟು ಮೌನವಾಗಿ ಕುಳಿತಿದ್ದ. ರೋಹಿಣಿಯೊಂದಿಗೆ ಕೂಡ ಅವನು ನಗುತ್ತಾ ಮಾತಾಡಲಿಲ್ಲ.
ಇದಾದ ಆರು ತಿಂಗಳು ನನ್ನನ್ನು ಈ ಭೇಟಿ ಕೊರೆದುಹಾಕಿತ್ತು. ಚೀನಿಯನ್ನು ನೋಡಿ ‘ಸಾರಿ’ ಹೇಳಬೇಕೆಂದು ಅನೇಕ ಸಲ ಅನ್ನಿಸಿತ್ತು. ಆದರೆ ನಾನೇ ಹೋಗಿ ನೋಡುವುದು ನನ್ನಿಂದ ಸಾಧ್ಯವಿರಲಿಲ್ಲ. ಆತ್ಮಗೌರವಕ್ಕೆ ಕುಂದು ತರಬಲ್ಲಂಥ ಯಾವ ಕೃತ್ಯವೂ ನನ್ನಿಂದ ಸಾಧ್ಯವಿರಲಿಲ್ಲ. ಆದ್ದರಿಂದ ಸುಮ್ಮನಾದೆ. ನನ್ನಲ್ಲಿ ಅವನ ಬಗ್ಗೆ ಯಾವ ರೀತಿಯ ಪ್ರೇಮವೂ ಇರಲಿಲ್ಲ. ಒಂದೇ ದಿನದ ಪರಿಚಯದಲ್ಲಿ ಅದೆಲ್ಲ ಶುರುವಾಗುವ ಸಂಭವವೂ ಇರಲಿಲ್ಲ. ಆದರೆ ರೋಹಿಣಿಯ ಹತ್ತಿರ ಆತ, ‘ಮೀನಾಗೆ ನನ್ನ ಮಾತಿಂದ ಬೇಸರವಾಗಿದೆ. ಮರೆತುಬಿಡು ಅಂತ ಹೇಳು’ ಎಂದು ಹೇಳಿದ್ದ. ಆಮೇಲೆ ಅವನಿಗೆ ಗಂಟಲುನೋವು, ಜ್ವರ ಶುರುವಾಯಿತು. ಇದನ್ನೆಲ್ಲ ವರದಿ ಮಾಡಿದ ರೋಹಿಣಿ ಅದಕ್ಕೆ ಯಾವ ಅರ್ಥವನ್ನೂ ಹಚ್ಚಲಿಲ್ಲ. ಆದರೆ ನನ್ನ ಆಳದಲ್ಲಿ ಆತನ ಕಾಯಿಲೆಗೂ ನನ್ನ ಕಟುವರ್ತನೆಗೂ ಸಂಬಂಧವಿದೆ ಅನ್ನಿಸುತ್ತಿತ್ತು. ಆತನನ್ನು ಗೆದ್ದೆ ಎನ್ನುವ ಭಾವನೆಗೆ ಬದಲಾಗಿ ಆತನಿಗೆ ತೊಂದರೆಯಾಯಿತು ಅನ್ನಿಸಿತು ನನಗೆ. ದಿನಗಳುರುಳಿದಂತೆ ಚೀನಿ ಮರೆತುಹೋದ. ಆತನ ಮುಗ್ಧ ಮುಖ, ಮಾತಾಡಿದ್ದನ್ನು ಗುರಿ ಮುಟ್ಟುವಂತೆ ಆಯ್ದ ಮಾತುಗಳಲ್ಲಿ ಆಡಲಾಗದ ಗೊಂದಲ ನನಗೆ ನಗೆ ತರಿಸುತ್ತಿದ್ದವು.
ಇದೇ ವೇಳೆಯಲ್ಲಿ ನನಗೆ ರೋಹಿಣಿಯ ಅಣ್ಣ ಜಗ್ಗುವಿನ ಪರಿಚಯವಾಯಿತು. ಆತ ತುಮಕೂರಿನಲ್ಲಿ ಪುಟ್ಟ ಫ್ಯಾಕ್ಟರಿಯೊಂದನ್ನು ಇಟ್ಟುಕೊಂಡಿದ್ದ. ಮಹಾ ಸೈಲೆಂಟ್ ಮನುಷ್ಯ. ಪರಿಚಯವಾದರೆ ಎಲ್ಲರೂ ಆಡುವ ಮಾತುಗಳನ್ನು ಕೂಡ ಆಡದಿರುವ ಮನುಷ್ಯ. ‘ಇವಳು ಮೀನಾಕ್ಷಿ. ಬಿ‌ಇ‌ಎಲ್‌ನಲ್ಲಿ ಅವರ ತಂದೆ ನೌಕರಿಯಲ್ಲಿದ್ದರು. ಅಪಘಾತದಲ್ಲಿ ತೀರಿಕೊಂಡರು. ನನ್ನ ಎರಡು ವರ್ಷದ ಗೆಳತಿ ಮೀನಾ. ತುಂಬ ಒಳ್ಳೆಯ ಹುಡುಗಿ’ ಅಂದಳು ರೋಹಿಣಿ. ಅವನು ನನ್ನನ್ನು ಸುಮ್ಮನೆ ನೋಡುತ್ತ ಇದ್ದ. ಒಂದು ಪುಟ್ಟ ವಾಕ್ಯ ಕೂಡ ಹೇಳಲಿಲ್ಲ. ನೋಡುತ್ತಲೇ ಇದ್ದ. ಅವನ ಕಣ್ಣು ಚಿರತೆಯ ಕಣ್ಣಿನಂತೆ ಹೊಳೆಯುತ್ತಿದ್ದವು; ಮಾಗ್ನೆಟ್ ರೀತಿಯಲ್ಲಿ ಸೆಳೆಯುತ್ತಿದ್ದವು. ನಾನು ‘ನಮಸ್ಕಾರ’ ಎಂದು ಕೂಡ ಹೇಳಲು ಮರೆತು ಅವನ ಕಣ್ಣುಗಳಿಂದ ತಪ್ಪಿಸಿ ಕೂತೆ. ಆತ ಆಕಾರದಲ್ಲಿ ಆಕರ್ಷಕ ಹುಡುಗನಲ್ಲ. ಮೋಟರ್ ಸೈಕಲ್ ಮೇಲೆ ವೇಗವಾಗಿ ಸಂಚರಿಸುತ್ತಾನಂತೆ; ಪ್ರಾಣದ ಹಂಗಿಲ್ಲದೆ ಹೊಡೆದಾಡುತ್ತಾನಂತೆ. ‘ಗುಡ್ ಶಾಟ್’, ಗೂಂಡಾಗಳ ಜೊತೆ ಹೊಡೆದಾಡಲು ನಿಂತನೆಂದರೆ ಅವನ ಎದುರಿಗೆ ನಿಲ್ಲುವವರೇ ಇರಲಿಲ್ಲ.

‘ಸರಿ, ಆಮೇಲೆ ನೋಡ್ತೀನಿ’ ಎಂದು ಜಗ್ಗು ಎದ್ದ. ಅದನ್ನು ರೋಹಿಣಿಗೆ ಹೇಳಿದನೋ ನನಗೆ ಹೇಳಿದನೋ ಗೊತ್ತಿರಲಿಲ್ಲ. ಅವನು ದಾರಿಯಲ್ಲಿ ಸಿಕ್ಕರೆ ಗತಿಯೇನೆಂದು ಮಾತ್ರ ಭಯಗೊಂಡಿದ್ದೆ. ಜಗ್ಗು ಕೂಡ ಚೀನಿಯಂತೆಯೇ ಮನಸ್ಸಿನ ಪರದೆಯ ಮೇಲೆ ಮಾಸತೊಡಗಿದ. ನಾನು ಕೆಲವೊಮ್ಮೆ ಚೀನಿ ಒಳ್ಳೆಯವನೋ ಜಗ್ಗು ಒಳ್ಳೆಯವನೋ ಎಂದು ಕೇಳಿಕೊಳ್ಳುತ್ತಿದ್ದೆ. ಅಂಥ ಪ್ರಶ್ನೆಗಳೆಲ್ಲ ನನ್ನ ಘನತೆಗೆ ತಕ್ಕುದಾಗಿರಲಿಲ್ಲ ಎನ್ನುವುದು ನನ್ನ ನಂಬಿಕೆಯಾಗಿತ್ತು. ಆದರೆ ಮನಸ್ಸಿನ ಸ್ವಾತಂತ್ರ್ಯವನ್ನು ಮಿತಗೊಳಿಸುವವರು ಯಾರು? ಜಗ್ಗು, ಚೀನಿ ಮುಂತಾದವು ನನ್ನ ವ್ಯಕ್ತಿತ್ವವನ್ನು ತುಂಬಿಹೋಗುವ ಹೆಸರುಗಳು, ಮುಖಗಳು.

ಹೀಗಿದ್ದಾಗ ಒಂದು ದಿನ ನಾನು ಬಸ್‌ಸ್ಟಾಪಿಗೆ ಹೋಗುವಾಗ ದಾರಿಯಲ್ಲಿ ಸಿಕ್ಕ ಜಗ್ಗು. ಆತ ನನ್ನನ್ನು ನೋಡಿ ನಿಂತನೋ ಎಂದು ಕೂಡ ನನಗೆ ಸ್ಪಷ್ಟವಾಗಿರಲಿಲ್ಲ. ಅವನು ತನ್ನ ಎನ್‌ಫೀಲ್ಡ್ ಮೋಟರ್ ಬೈಕ್‌ಗೆ ಸ್ಟಾಂಡ್ ಹಾಕಿ ನನ್ನತ್ತ ನೋಡಿದ. ನಾನು ನಿರ್ವಾಹವಿಲ್ಲದೆ ನಿಂತೆ. ಅವನು ನನ್ನ ಹತ್ತಿರ ಬಂದು ತನ್ನ ಮೃಗದ ದೃಷ್ಟಿ ನೆಟ್ಟು, ‘ಬನ್ನಿ’ ಅಂದ. ಅವನು ‘ಬಾ’ ಅನ್ನಲಿಲ್ಲ; ಬರ್ತೀರಾ ಅನ್ನಲಿಲ್ಲ. ‘ಬನ್ನಿ’ ಅಂದ. ಅವನ ಧ್ವನಿ ಗಂಡಸಿನ ತುಂಬು ಧ್ವನಿಯೊಂದಿಗೆ ಮಾಧುರ್ಯ ಸೂಸಿದಂತೆ ಕಂಡಿತು. ಆತನ ವ್ಯಕ್ತಿತ್ವ ನಿಗೂಢವಾಗಿತ್ತು. ನಾನು ‘ಕಾಲೇಜಿಗೆ ಹೋಗಬೇಕು’ ಅಂದೆ. ಆತ ಮೆಲ್ಲಗೆ ತಲೆಯಲ್ಲಾಡಿಸಿದ. ನಾನು ಅವನನ್ನು ಹಿಂಬಾಲಿಸಿದೆ. ಅವನ ಮೋಟರ್ ಬೈಕಿನ ಪಿಲಿಯನ್ ಮೇಲೆ ಕೂತೆ. ಅವನ ಭುಜವನ್ನು ಎಡಗೈನಿಂದ ಹಿಡಿದುಕೊಂಡೆ. ಒಮ್ಮೆಗೇ ಸ್ಫೋಟಗೊಂಡಂತೆ ಶಬ್ದ ಮಾಡುತ್ತ ಆ ರಾಕ್ಷಸ ಮೋಟರ್ ಬೈಕ್ ಹೊರಟಿತು. ಅವನು ಒಂದು ಮಾತನ್ನೂ ಆಡಲಿಲ್ಲ. ನಾನು ಓದುತ್ತಿದ್ದುದು ಯಾವ ಕಾಲೇಜಿನಲ್ಲಿ ಎಂದು ಕೂಡ ಅವನಿಗೆ ಗೊತ್ತಿದ್ದಂತಿತ್ತು. ಕಾಲೇಜಿನ ಅಂಗಳಕ್ಕೆ ತನ್ನ ವಾಹನ ನಿಲ್ಲಿಸಿ ಸರ್ಕಾರಿ ಬಸ್ ಡ್ರೈವರ್‍ನ ವಸ್ತುನಿಷ್ಠೆಯ ಧ್ವನಿಯಲ್ಲಿ ‘ಸರಿ ಆಮೇಲೆ ನೋಡ್ತೀನಿ’ ಎಂದು ಭೀಕರ ಸದ್ದು ಮಾಡುತ್ತಾ ಹೊರಟುಹೋದ.

ಜಗ್ಗು ತರಹದವರು ಅಪಾಯಕರ ವ್ಯಕ್ತಿಗಳು, ಯಾಕೆಂದರೆ ಅವರು ಹೆಣ್ಣು ಬಯಸುವ ಮೌನ, ದಿಟ್ಟತನ, ಕಠೋರತೆಯ ಜೊತೆಗೆ ಮೃದುತ್ವವನ್ನು ಆಗಾಗ ಸೂಸುವವರು. ನಿಮಗೆ ಆಶ್ಚರ್ಯವಾಗಬಹುದು. ನಾನು ಯಾವುದೇ ಕಾರಣವಿಲ್ಲದೆ ಭಾನುವಾರ ಬಸ್‌ಸ್ಟಾಪಿಗೆ ಹೊರಟೆ. ರೋಹಿಣಿ, ಕುಸುಮ, ಶ್ರೀಮತಿ ಯಾರ ಮನೆಗೆ ಹೋಗುವುದೆಂದು ತೀರ್ಮಾನಿಸಿರಲಿಲ್ಲ. ಆದರೆ ಜಗ್ಗು ನನ್ನ ಪಕ್ಕದಲ್ಲಿ ತನ್ನ ಮೋಟರ್ ಬೈಕ್ ನಿಲ್ಲಿಸಿದ. ‘ಬನ್ನಿ’ ಅಂದ. ಅವನ ನಿಷ್ಠುರ ಮುಖ ನೋಡಿ ನಾನು ಕುಂಟು ನೆಪ ಒಡ್ಡಿ ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ವಿಧೇಯ ವಿದ್ಯಾರ್ಥಿನಿಯಂತೆ ಮೋಟರ್ ಬೈಕ್ ಹತ್ತಿ ಕೂತೆ. ನನ್ನಲ್ಲಿ ಯಾವ ಭಯವೂ ಇರಲಿಲ್ಲ. ಯಾವುದೇ ಅಪಾಯದಿಂದ ನನ್ನನ್ನು ಜಗ್ಗು ರಕ್ಷಿಸಬಲ್ಲ ಅನ್ನಿಸಿತ್ತು. ಅವನ ಭುಜದ ಮೇಲಿದ್ದ ನನ್ನ ಕೈ ರೋಮಾಂಚನದಿಂದ ತನ್ನ ಶಕ್ತಿಯನ್ನೆಲ್ಲ ಕಳೆದುಕೊಂಡಿತ್ತು. ‘ಎಲ್ಲಿಗೆ ಜಗ್ಗು?’ ಅಂದೆ. ಆತ ಉತ್ತರಿಸಲಿಲ್ಲ. ಕೊನೆಗೆ ಊರ ಹೊರಗೆ ಸೇತುವೆಯ ಹತ್ತಿರ ನಿಲ್ಲಿಸಿದ. ‘ಇಳೀರಿ’ ಎಂದು ಆತ ಹೇಳಲಿಲ್ಲ. ನಾನು ಇಳಿದು ಅವನ ಹತ್ತಿರ, ಅವನಿಗೆ ತಾಕುವಂತೆ ನಿಂತೆ. ಅವನು ನನ್ನ ತೋಳು ಹಿಡಿದುಕೊಂಡು ಮುತ್ತುಕೊಟ್ಟ. ಇಡೀ ಮುಖ, ಕಣ್ಣು, ತುಟಿ…. ನಾ ಸವಿದ ಮೊದಲ ಚುಂಬನ ಅದು. ‘ಹೋಗೋಣ’ ಅಂದೆ. ಜಗ್ಗು ಸುಮ್ಮನೇ ನಿಂತ. ತನ್ನ ಗೆಳೆಯನನ್ನು ಅಪ್ಪಿಕೊಳ್ಳುವಂತೆ ನನ್ನ ಕೊರಳನ್ನು ಅಪ್ಪಿಕೊಂಡು ನಿಂತ. ಅವನ ಮೈ ಕೆಂಡವಾಗಿತ್ತು.
ಜಗ್ಗು ಆಮೇಲೆ ನನ್ನನ್ನು ನನ್ನ ಮನೆಯಲ್ಲಿ ಬಿಟ್ಟು ‘ನಿಮಗೆ ಬೇಸರವಿಲ್ಲ ಅಲ್ಲವೇ?’ ಎನ್ನುವಂತೆ ನೋಡಿದ. ಅವನ ಕೈಗಳನ್ನು ಎತ್ತಿಕೊಂಡು ಹಸ್ತವನ್ನು ಕೆನ್ನೆಗೆ ಒತ್ತಿಕೊಂಡೆ.
ಚೀನಿ ಮತ್ತು ಜಗ್ಗುವಿನ ಹತ್ತಿರ ಮದುವೆ, ಕುಟುಂಬ, ಅಂಗಡಿ, ಬಡ್ತಿ ಇತ್ಯಾದಿಯ ಬಗ್ಗೆ ಮಾತಾಡುವುದೇ ನನ್ನಿಂದ ಸಾಧ್ಯವಿರಲಿಲ್ಲ. ರೋಹಿಣಿ ಹೇಳಿದಳು, ‘ನಿನಗೆ ಕಷ್ಟವಾದರೆ ನಾನೇ ಕೇಳ್ತೇನೆ.’
‘ಬೇಡ’ ಅಂದೆ.
ನಾನು ನನ್ನ ಅಮ್ಮನಿಗೆ ಬರುತ್ತಿದ್ದ ಪೆನ್‌ಶನ್ ಮೇಲೆ ಭಾರವಾಗಿ ಬಹಳ ವರ್ಷ ಇದ್ದುಬಿಡುವುದು ಸಾಧ್ಯವಿರಲಿಲ್ಲ. ಹಾಗೆಂದು ಜಗ್ಗು, ಚೀನಿ ನನ್ನ ಸಂಗಾತಿಗಳಾಗಲು ಸಾಧ್ಯವಿರಲಿಲ್ಲ.
‘ಯಾಕೆ’ ಎಂದು ನೀವು ಕೇಳಬಹುದು. ಹುಡುಗರು ಸಾಮಾನ್ಯವಾಗಿ ಮದುವೆಯಿಂದ ಸ್ಟ್ರೈಕಿಂಗ್ ಡಿಸ್ಟೆನ್ಸ್‌ನಲ್ಲೇ ಪ್ರೇಮಿಸುತ್ತಾರೆ. ಅವರ ಬದುಕೆಲ್ಲ ಮದುವೆಯ ಬಗ್ಗೆ ಚಿಂತಿಸುವುದರಲ್ಲೇ ಕಳೆದಿರುತ್ತದೆ. ಮೊದಲು ಹುಡುಗಿಯ ಜೊತೆಗೆ ಕಾಫಿ ಕುಡಿಯುವುದು, ಸುತ್ತಿ ಬಳಸಿ ತನ್ನ ಇಂಗಿತ ಹುಡುಗಿಗೆ ಗೊತ್ತಾಗುವಂತೆ ವರ್ತಿಸುವುದು. ಆಮೇಲೆ ಮದುವೆ. ಅಗತ್ಯವಿಲ್ಲದಿದ್ದರೂ ಹನಿಮೂನ್- ಹೆಸರುಘಟ್ಟ, ನಂದಿಬೆಟ್ಟ ಇತ್ಯಾದಿ. ತಿಂದುಹಾಕುವ ಬೇಸರ. ಇತ್ಯಾದಿ.
ನನ್ನ ಬದುಕು ಈ ರೀತಿ ಆಗುವುದು ಸಾಧ್ಯವಿರಲಿಲ್ಲ. ಜಗ್ಗು ಮತ್ತೆ ಮೂರುನಾಲ್ಕು ಸಲ ನನ್ನನ್ನು ಕಂಡರೂ ಆತ ಮುಂದುವರಿದಿರಲಿಲ್ಲ; ನಾನು ಕೂಡ ಆ ಲೈಂಗಿಕ ವಿಷಯದ ಹತ್ತಿರ ಕೂಡ ಸುಳಿದಿರಲಿಲ್ಲ.
“ಅವರ ಹೆಸರು ವಿಶ್ವನಾಥ್ ಅಂತ. ತುಂಬ ಎಳೆಯವಯಸ್ಸಿನಲ್ಲಿ ಹೆಂಡತಿಯನ್ನು ಕಳೆದುಕೊಂಡಿದ್ದಾರೆ. ಕಾಲೇಜಿನಲ್ಲಿ ಪ್ರೊಫೆಸರ್. ಎಲ್ಲರಿಗೆ ಬೇಕಾದ ವ್ಯಕ್ತಿ. ಅವರನ್ನು ನೋಡಿ ನಾನೇ ‘ಮತ್ತೆ ಯಾಕೆ ಮದುವೆಯಾಗಬಾರದು’ ಅಂದೆ. ಅವರಿಗೆ ಇಷ್ಟವಿಲ್ಲ. ಹೆಂಡತಿ, ಮಕ್ಕಳು, ಕುಟುಂಬ ಅದೆಲ್ಲದರ ಗೋಳು ಯಾವುದೂ ಬೇಡ ಅಂತಿದ್ದಾರೆ. ನೀನು ಒಮ್ಮೆ ಅವರನ್ನು ನೋಡು” ಅಂದಳು ನನ್ನ ಅಮ್ಮ.
ನಾನು ಏನೂ ಹೇಳಲಿಲ್ಲ. ‘ಅವರು ಯಾವ ಪ್ರೊಫೆಸರ್?’ ಅಂತ ಮಾತ್ರ ಕೇಳಿದೆ.
‘ಅದೇನೋ ಫಿಲಾಸಫಿ ಅಂತೆ,’ ಅಂದಳು ಅಮ್ಮ.
ನಾನು ಸುಮ್ಮನಾದೆ. ಆಮೇಲೆ ತಿಳಿಯಿತು. ಅವರು ಸಾಹಿತ್ಯದ ವಿದ್ಯಾರ್ಥಿ, ತತ್ವಶಾಸ್ತ್ರದ ಅಧ್ಯಾಪಕ ಮತ್ತು ಯಾರೂ ಅರಿಯದ ಲೇಖಕ. ಕೇವಲ ಮೂವತ್ತೆರಡಕ್ಕೇ ಹೆಂಡತಿ ತೀರಿಕೊಂಡಿದ್ದಳು. ಮಕ್ಕಳಿರಲಿಲ್ಲ. ಅಧ್ಯಾಪಕರೆಂದರೆ ಪುಸ್ತಕಕೀಟ, ಗಂಭೀರ ವ್ಯಕ್ತಿ, ಮಾತೆತ್ತಿದರೆ ಶಿಸ್ತು, ನೈತಿಕತೆಯ ಮೇಲೆ ಉಪನ್ಯಾಸಕ್ಕಿಳಿಯುವ ಕೊರಕ; ಇವೆಲ್ಲ ಕ್ಲೀಷೆಗಳನ್ನು ವಿಶ್ವನಾಥ ಒಡೆದುಹಾಕಿದ್ದರು. ಎಲ್ಲರಂತಿದ್ದ ಈ ವ್ಯಕ್ತಿ ಗಂಡನಾಗಿ ಒಂದೇ ಒಂದು ಹಿತವಚನ ಹೇಳಿಲ್ಲ. ಮತ್ತು ನಾನು ಸಾಹಿತ್ಯದ ಮರ್ಮವನ್ನು ಅರಿತದ್ದೇ ಇವರಿಂದ. ಆತ ಮಾಹಿತಿ ನೀಡುವ ಮಟ್ಟದಲ್ಲಿ ಹೇಳುತ್ತಾ ಹೋದಂತೆ ಅವರು ಹೇಳಿದ ಪಾತ್ರಗಳ ದ್ವಂದ್ವಗಳು ಮತ್ತು ತಳಮಳ ನನ್ನನ್ನು ಮುತ್ತುತ್ತಿದ್ದವು. ಸಿನಿಮಾ ನಟಿ ಏವಾ ಗಾರ್ಡಿನರ್ ತಾನು ಇಷ್ಟಪಡಬಲ್ಲ ಪ್ರಿಯಕರನಿಗಾಗಿ ಭೂಗೋಳವನ್ನೆಲ್ಲ ಸುತ್ತಿ ಕೊನೆಗೆ ಹೆಮಿಂಗ್‌ವೇಯ ನೆರವಿನಿಂದ ಸ್ಪೇನಿನ ಬುಲ್‌ಫೈಟರ್ ಒಬ್ಬನನ್ನು ಆರಿಸಿ ಕೂಡಿದ್ದಳು; ಬುಲ್‌ಫೈಟರ್‍ಗೆ ಇಂಗ್ಲಿಷ್ ಬರುತ್ತಿರಲಿಲ್ಲ, ಏವಾ ಗಾರ್ಡಿನರ್‍ಗೆ ಸ್ಪ್ಯಾನಿಷ್ ಬರುತ್ತಿರಲಿಲ್ಲ. ಅವರ ಸಂವಹನವೆಲ್ಲ ಸ್ಪರ್ಶ, ಸನ್ನೆ, ಸಂಭೋಗವನ್ನು ಅವಲಂಬಿಸಿತ್ತು. ‘ಲಾಸ್ಟ್ ಟ್ಯಾಂಗೋ ಇನ್ ಪ್ಯಾರಿಸ್’ನಲ್ಲಿ ಮರ್ಲನ್ ಬ್ರಾಂಡೋ ಫ್ರೆಂಚ್ ಹುಡುಗಿಯನ್ನು ಸಂಭೋಗಿಸಿದ; ಅವರಿಗೆ ಪರಸ್ಪರ ಹೆಸರು ಕೂಡ ಗೊತ್ತಿರಲಿಲ್ಲ. ಹೆಸರು, ಹಿನ್ನೆಲೆ, ನೆನಪು ಎಲ್ಲವನ್ನೂ ತೊಳೆದುಹಾಕಿ ದೇಹದ ಮಟ್ಟದಲ್ಲಿ ಬದುಕಿದರೆ… ಇಂಥ ಪ್ರಶ್ನೆಗಳೆಲ್ಲ ನನ್ನ ಗಂಡ ವಿಶ್ವನಾಥ್‌ಗೆ ಅರ್ಥವಾಗುವುದಿಲ್ಲ ಎಂದು ನನಗೆ ಗೊತ್ತಿತ್ತು; ಹಾಗೆಯೇ ಚೀನಿ. ಅವನು ಎಲ್ಲವನ್ನೂ ಚರ್ಚೆಯ ಮಟ್ಟಕ್ಕೆ ಇರಿಸಿಬಿಡುತ್ತಿದ್ದ. ಇನ್ನು ಜಗ್ಗು.
ಪತಿ ವಿಶ್ವನಾಥ ನನಗೆ ಅನುರೂಪನಾದ, ಅನೇಕ ವಿಷಯಗಳಲ್ಲಿ ನನ್ನ ಚಿಂತನೆ, ವ್ಯಥೆಯನ್ನು ಪಾಲುಗೊಳ್ಳುವ ವ್ಯಕ್ತಿ. ಅವರ ನಿಷ್ಠೆ, ಹಾಸ್ಯ ಎಲ್ಲವೂ ಮೋಹಕವಾಗಿತ್ತು.
ಒಂದು ದಿನ ವಿಶ್ವನಾಥ್ ಕಾಲೇಜಿಗೆ ಹೋದಮೇಲೆ ಒಬ್ಬಳೇ ಓದುತ್ತಾ ಕುಳಿತಿದ್ದೆ. ನಾನೆಷ್ಟು ಸುಖಿ ಅನ್ನಿಸತೊಡಗಿತ್ತು.
ಆದರೆ ಬಾಗಿಲು ಬಡಿದ ಸದ್ದು.
ಜಗ್ಗು ನಿಂತಿದ್ದ.
ತೀವ್ರ ನಡುಕ ನನ್ನ ಮೈಯನ್ನೆಲ್ಲ ಆವರಿಸಿತು. ಆತಂಕ ಎನ್ನುವುದು ಏನು ಎಂದು ನನಗೆ ತಿಳಿಯಿತು. ವಿಚಿತ್ರ ಭಯದಿಂದ ತತ್ತರಿಸಿಹೋದೆ. ಯಾರೋ ಬರೆ ಇಟ್ಟಂತೆ ಆಗಿತ್ತು.
ನಾನೆಂದೂ ಜಗ್ಗುವಿಗೆ ‘ಇಲ್ಲ’ ಅಂದಿರಲಿಲ್ಲ. ಬಾಗಿಲ ಹತ್ತಿರ ಬಂದು ನೋಡಿದೆ. ಅವನು ಎಲ್ಲದಕ್ಕೆ ಜಡ್ಡುಗಟ್ಟಿದಂತೆ, ಎಲ್ಲ ಪ್ರಜ್ಞೆ ಹೊರಟು ಹೋದಂತೆ ನಿಂತಿದ್ದ. ಏನನ್ನೋ ಕಳೆದುಕೊಂಡಂತೆ ಮಂಕಾಗಿದ್ದ. ಪರ್ವತವೊಂದು ಸ್ಮಶಾನಸದೃಶ್ಯವಾಗಿಬಿಟ್ಟಂತೆ ಅನ್ನಿಸುತ್ತಿತ್ತು. ಆ ಪರ್ವತದಿಂದ ಎಲ್ಲ ಹಕ್ಕಿ, ಪ್ರಾಣಿ, ಸಸ್ಯಗಳು ಹೊರಟುಹೋದಂತೆ ಅನ್ನಿಸಿತು. ನನ್ನಲ್ಲಿ ಕರುಣೆ ಉಕ್ಕಿತು. ನಾನು ವಿಧೇಯಳಾಗಿ ಬಾಗಿಲು ತೆಗೆದೆ.
ಅವನ ಜಡ ವ್ಯಕ್ತಿತ್ವ ಹತ್ತಿಕೊಂಡು ಉರಿಯಿತು. ನಾನು ಒಂದು ಮಾತನ್ನೂ ಆಡಲಿಲ್ಲ. ನನ್ನನ್ನು ವಿಚಿತ್ರ ಪ್ರೇಮ, ಕರುಣೆ ತುಂಬಿತ್ತು.
ಅವನು ಒಳಗೆ ಬಂದು ನನ್ನನ್ನು ಅಪ್ಪಿಕೊಂಡ.
*
*
*
ಏನು ಮಾಡುವುದು? ವಿಶ್ವನಾಥ್ ಹೇಳಿದ್ದರು: ಮನುಷ್ಯನ ವಿವೇಕ ಎರಡುಪಾಲು, ಅವಿವೇಕ ಎಂಟುಪಾಲು. ನಮ್ಮ ಜಗತ್ತಿನ ಎಲ್ಲ ಪ್ರೇಮ, ಸಾಹಿತ್ಯ, ಸಾಹಸ ಬಂದಿರುವುದು ಎಂಟುಪಾಲಿನಿಂದ!
ಅವತ್ತಿನಿಂದ ಜಗ್ಗು ನಾಲ್ಕು ಸಲ ಬಂದ. ಆತ ಬಂದಿದ್ದ ಒಂದೊಂದು ದಿನವೂ ಪತಿ ವಿಶ್ವನಾಥ್‌ರನ್ನು ನೋಡುವುದು ನನಗೆ ಕಷ್ಟವಾಯಿತು. ನಾನು ನನ್ನ ಪತಿಯನ್ನು ದ್ವೇಷಿಸುತ್ತಿರಲಿಲ್ಲ, ಬದಲಾಗಿ ಪ್ರೀತಿಸುತ್ತಿದ್ದೆ. ನನ್ನನ್ನು ಮಗುವಿನಂತೆ, ಗೆಳತಿಯಂತೆ, ವಿದ್ಯಾರ್ಥಿನಿಯಂತೆ ನೋಡಿಕೊಳ್ಳುತ್ತಿದ್ದ ವಿಶ್ವನಾಥ್ ನಿಜಕ್ಕೂ ನನ್ನ ಇಷ್ಟದ ವ್ಯಕ್ತಿ. ನಾವಿಬ್ಬರೂ ಆಟ ಆಡುತ್ತಿದ್ದೆವು, ಜೋಕ್ಸ್ ಹೇಳಿಕೊಂಡು ತಮಾಷೆ ಮಾಡುತ್ತಿದ್ದೆವು. ನಮ್ಮ ಅಗ್ಗದ ಸಿನಿಮಾ, ಕಾದಂಬರಿಗಳಲ್ಲಿ ಹೇಳುವಂತೆ, ‘ಒಂದು ಪುಟ್ಟ ಮರಿ ಬೇಡವಾ’ ಎಂದು ಕೇಳಿ ನಗುತ್ತಿದ್ದೆವು. ಅವನು ತನ್ನ ಕಲ್ಪನೆಯ ಶತ್ರುಗಳನ್ನು ಎದುರಿಸಿ ಯುದ್ಧ ಮಾಡುವವನಂತೆ ನಟಿಸುತ್ತಿದ್ದ. ಪ್ರೇಮಿಯಾಗಿ ಕೂಡ ವಿಶ್ವನಾಥ್ ಅದ್ಭುತ ವ್ಯಕ್ತಿ. ಆತನಲ್ಲಿ ದೋಷವೇ ಇರಲಿಲ್ಲ. ಜಗತ್ತಿನ ಎಲ್ಲ ಮಹಾನ್ ವ್ಯಕ್ತಿಗಳು, ಅವರ ಚಿಂತನೆಗಳು, ಅವರ ಕ್ರಿಯೆಗಳು ನನಗೆ ಬಂದದ್ದೇ ವಿಶ್ವನಾಥ್‌ರಿಂದ. ಶೇಕ್ಸ್‌ಪಿಯರ್‍ನ ನಾಟಕಗಳ ಕತೆ ಹೇಳಿ ರಂಜಿಸುತ್ತಿದ್ದ. ‘ನನಗೆ ನಿದ್ದೆ ಬರುತ್ತಿಲ್ಲ’ ಅಂದರೆ ಡ್ಯೂಮಾ, ಹ್ಯೂಗೋ ಮುಂತಾದ ಕಾದಂಬರಿಗಳ ಕತೆ ಹೇಳುತ್ತಿದ್ದ. ಶೇಕ್ಸ್‌ಪಿಯರನ ವಿಪರ್ಯಾಸವನ್ನು ವಿವರಿಸುತ್ತಿದ್ದ. ಆತ ಎಂದೂ ಕವಿಯಾಗುವ ಆಶೆ ಹೊಂದಿರಲಿಲ್ಲ. ಆತ ಬರೆದದ್ದೇ ಎಲ್ಲರನ್ನೂ ರಂಜಿಸುವ ಘಟನೆಗಳು ಹೇಳಿ. ಏಟ್ಸ್‌ನ ಈ ಪದ್ಯ ನೋಡು; ಈತ ತನ್ನ ಮಾಗಿದ ಮನಸ್ಸಿನಲ್ಲಿ ಅನುಭವಿಸುವ ತಳಮಳ ವಿಚಿತ್ರ ಅಲ್ಲವೆ….

ಇಷ್ಟಾದರೂ ಜಗ್ಗುವಿಗೆ ನಾನು ‘ಬೇಡ’ ಅನ್ನಲಾಗಲಿಲ್ಲ. ಅದು ನನ್ನಿಂದ ಸಾಧ್ಯವಿರಲಿಲ್ಲ. ಆದ್ದರಿಂದ ಪತಿ ವಿಶ್ವನಾಥ್ ಕಾಲೇಜಿಗೆ ಹೋದೊಡನೆ ನಾನೇ ಮನೆಗೆ ಬೀಗ ಹಾಕಿದೆ. ಆದರೆ ಬೀಗದ ಕೈಯನ್ನು ಜಗ್ಗುವಿಗೆ ಕೊಟ್ಟು ಕರೆದುಕೊಳ್ಳುತ್ತಿದ್ದೆ.

ಇದೆಂಥ ವಿಚಿತ್ರ ದ್ವಂದ್ವ ಮತ್ತು ವಂಚನೆ! ಇದರಿಂದ ಮುಕ್ತಳಾಗಲು ನನಗಿರುವ ದಾರಿ ಒಂದೇ- ಈ ನೋಟ್ ಬರೆದು ಜೀವ ತೆಗೆದುಕೊಳ್ಳುವುದು.
ಸೂಕ್ಷ್ಮಜ್ಞತೆಯ ದುರಂತ ಇದೇ ಅಲ್ಲವೆ? ಇದು ನನ್ನ ಸೂಯಿಸೈಡ್ ನೋಟ್ ಅಥವಾ ಅತ್ಯಂತ ಪ್ರಾಮಾಣಿಕ ಕ್ರಿಯೆ. ವಂಚನೆಗೆ ತೆರೆ ಎಳೆಯುವ ಕೆಲಸ. ನಾನು ಬದುಕಿದ್ದಕ್ಕೆ, ತೀರಿಕೊಂಡಿದ್ದಕ್ಕೆ ಸಾಕ್ಷಿ.
*****
ಮಾರ್ಚ್ ೨೪, ೧೯೯೯

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.