ರೈಲು ಜನ

ಇರುಳು ಮೈನೆರೆದ ಹುಡುಗಿಯಂತೆ ಹೊರಗೆ ಗಾಳಿಯ ಜೊತೆ ಸರಸವಾಡುತ್ತಿತ್ತು. ಆಕಾಶದಲ್ಲಿ ನಕ್ಷತ್ರದ ಹಣತೆಗಳನ್ನು ಯಾರೋ ಹಚ್ಚಿದ್ದರು. ರೈಲು ಓಡುತ್ತಿತ್ತು. ಅದರೊಳಗಿನ ತರಾವರಿ ಜನ ನೂರಾರು ರೀತಿಯಲ್ಲಿ ತಮ್ಮ ಲೋಕದ ಲಹರಿಗಳಲ್ಲಿ ರೀಲು ಬಿಡುತ್ತ ಸುತ್ತಿಕೊಳ್ಳುತ್ತ ಒಳಗಿನ ನಿಜವ ಮತ್ತಷ್ಟೂ ಬಿಚ್ಚಿಡುತ್ತಾ ಸುಮ್ಮನೆ ನಗುತ್ತ ಸುಮ್ಮನೆ ನಿದ್ದೆ ಮಾಡಿದಂತೆ ನಟಿಸುತ್ತಿದ್ದರು. ನನಗೆ ರೈಲು ಪ್ರಯಾಣ ಅಷ್ಟಾಗಿ ಹಿಡಿಸುವುದಿಲ್ಲವಾದರೂ ಯಾವುದೋ ಒಂದು ಗುಜುರಿ ವ್ಯವಹಾರಕ್ಕೆ ಸಿಲುಕಿ ಸಾಲಕ್ಕೆ ಜಾಮೀನಾಗಿ ಆ ಮಹಾಶಯ ಸಾಲ ತೀರಿಸದೆ ಅದು ನನ್ನ ಕುತ್ತಿಗೆಗೆ ಬಂದು ದಿನವೂ ಬಡ್ಡಿ ವ್ಯವಹಾರದ ಧಾಂಡಿಗರು ಮನೆಯ ಮುಂದೆ ಬಂದು ಸ್ವತಃ ಇವನೇ ಸಾಲ ಮಾಡಿ ತಿಂದು ಕುಡಿದು ದುಂದು ಮಾಡಿ ಈಗ ಸಾಲ ತೀರಿಸಲಾರದೆ ಕಳ್ಳಾಟ ಆಡುತ್ತಿದ್ದಾನೆಂಬಂತೆ ರಾದ್ಧಾಂತ ರೂಪಿಸಿ ವಠಾರದ ಜನರೆದುರು ನನ್ನನ್ನು ಏವನ್ ಧೋಖಾ ಪಾರ್ಟಿ ಎಂಬಂತೆ ಇಕ್ಕಟ್ಟನ್ನೂ ಸೃಷ್ಟಿಸಿದ್ದರು. ಬಡ್ಡಿ ವಸೂಲಿಯ ಧಾಂಡಿಗರ ಜೊತೆ ನಾನು ರಗಳೆಗೆ ಇಳಿದಷ್ಟು ಅಪಾಯವೇ ಹೆಚ್ಚಿತ್ತು. ‘ದೂಸ್ರಾ ಮಾತಾಡಿದ್ರೆ ಒಂದೇ ಏಟ್ಗೆ ನಿನ್ ಬುರುಡೆ ಬಿಚ್ಚಿ ಕೈಗೆ ಕೊಡಬೇಕಾಗ್ತದೆ, ಉಷಾರ್’ ಎಂದು ಬೆದರಿಕೆ ಹಾಕಿ ಇನ್ನು ಒಂದು ವಾರದಲ್ಲಿ ಎಲ್ಲ ಹಣವನ್ನು ತಂದೊಪ್ಪಿಸಬೇಕು ಎಂದು ತುರ್ತು ಪರಿಸ್ಥಿತಿಯನ್ನು ತಂದೊಡ್ಡಿದ್ದರು.

ನನ್ನ ಆ ಮೂರ್ಖ ಮಿತ್ರ ಸಾಲ ಪಡೆದು ನುಣ್ಣಗೆ ಮಾತಾಡಿ ಬಿಸಿನೆಸ್ ಮಾಡಿ ಮುಂದೆ ಬರುತ್ತೇನೆಂದು ನನ್ನನ್ನು ನಂಬಿಸಿದ್ದ. ಬಿಸಿನೆಸ್‌ನ ಎಬಿಸಿಡಿ ತಿಳಿಯದ ನಾನು ಅವನ ನೀಲಿ ನಕ್ಷೆಗಳಿಗೆ ರೋಸಿ ಹೋಗಿದ್ದೆ. ಎಲ್ಲೋ ನಾನೇ ಅವನಿಗಿಂತ ಪರಮಾವಧಿ ಮೂರ್ಖ ಎಂದು ಈಗ ಅನಿಸುತ್ತದೆ. ಮುಂಬಯಿಗೆ ಹೋಗಿ ಅಲ್ಲಿ ಚೋರ್ ಬಜಾರಿನಲ್ಲಿ ಬಹಳ ಸಸ್ತಾ ಆಗಿ ಸಿಗುವ ಎಂತೆಂತದೋ ಮಾಲುಗಳನ್ನು ಈ ಪೇಟೆಗೆ ತಂದು ಅವನ್ನು ಒಂದಕ್ಕೆ ಐದರಷ್ಟು ಬೆಲೆ ಕಟ್ಟಿ ಮಾರಿದರೆ ಈ ತನಕ ಮಾಡಿರುವ ತನ್ನೆಲ್ಲ ಸಾಲವೂ ಚುಕ್ತ ಆಗ್ತವೆಂದೂ ಜೊತೆಗೆ ಸಾಲ ಕೊಡಿಸಿದ್ದಕ್ಕಾಗಿ ಮುಫತ್ತಾಗಿ ನಿನಗೂ ಕೂಡ ಒಂದಷ್ಟು ಪರ್ಸೆಂಟ್ ದುಡ್ಡು ಕೊಡುವುದಾಗಿಯೂ ಇದರಿಂದ ಇಬ್ಬರ ಸಾಲಗಳಿಗೂ ಒಂದು ದಾರಿ ಆಗುತ್ತದೆಂದು ಆ ಗೆಳೆಯ ಒಂದು ರಾತ್ರಿಯೆಲ್ಲ ಪ್ಯಾಕೆಟ್ ಪರಮಾತ್ಮನ ಅಮಲಿನಲ್ಲಿ ನಂಬರ್ ‘ಟೆನ್ ಮಟನ್’ ತಿಂತಾ ನನ್ನನ್ನು ನಂಬಿಸಿಬಿಟ್ಟಿದ್ದ. ಹಾಗಾಗಿಯೇ ಬಹಳ ಹಿಂದೆ ಯಾವುದೋ ಒಂದು ಜುಜುಬಿ ಕಾರಣಕ್ಕೆ ಪರಿಚಯವಾಗಿದ್ದ ಬಡ್ಡಿ ವ್ಯವಹಾರದ ಮಿತ್ರನೊಬ್ಬನಿಂದ ಅಂತೂ ಕೊನೆಗೆ ಸಾಲ ಕೊಡಿಸಿ ಸಿಕ್ಕಿಹಾಕಿಕೊಂಡಿದ್ದ.

ಮಿತ್ರನಾದ ತಿಮ್ಮಯ್ಯ ಬೊಂಬಾಯಿಗೆ ಹೋಗಿ ಮೂರೇ ದಿನಗಳಲ್ಲಿ ಹಿಂದಿರುಗುತ್ತೇನೆಂದು ಹೇಳಿದ್ದವನು ಆರು ತಿಂಗಳಾದರೂ ವಾಪಸ್ಸು ಬಂದಿರಲಿಲ್ಲ. ಅವಿವಾಹಿತನಾದ ಅವನು ಮತ್ತೆ ಇಲ್ಲಿಗೆ ಮರಳಿ ಬರುವನೆಂಬ ಆಸೆಯೆ ನನಗೆ ಉಳಿಯದೆ ಹೋಯಿತು. ಯಾವಾಗಲೋ ಒಂದೆರಡು ಬಾರಿ ಪತ್ರ ಬರೆದು ಸಾಲ ಕೊಡಿಸಿದ್ದಕ್ಕಾಗಿ ಕೃತಜ್ಞತೆ ಹೇಳಿ ತಾನಿಲ್ಲಿ ಯಾವುದೊ ಒಂದು ಪಾರ್ಟಿಯಿಂದ ಮೋಸ ಹೋದೆನೆಂದು ತಿಳಿಸಿ ಸದ್ಯ ಎಂತದೋ ಒಂದು ಕಂಪನಿಯಲ್ಲಿ ದುಡಿಯುತ್ತಿರುವೆನೆಂದೂ ಆದಷ್ಟು ಬೇಗ ದುಡ್ಡು ಕಳಿಸುವೆ ಎಂದು ಬರೆದಿದ್ದ. ಆ ಪತ್ರವನ್ನೇ ಬಡ್ಡಿಗರಿಗೆ ನಾನು ತೋರಿಸಿ ತೋರಿಸಿ ಅದು ಅವರ ತಾಳ್ಮೆಯನ್ನೇ ಗೇಲಿ ಮಾಡಿ ಧ್ವಂಸ ಮಾಡಿಬಿಟ್ಟಿತ್ತು. ಒಮ್ಮೆ ಹಾಗೆ ಆ ಪತ್ರವನ್ನು ಅತಿ ವಿನಯದಿಂದ ಬಡ್ಡಿ ವಸೂಲಿಯ ಧಾಂಡಿಗನಿಗೆ ತೋರಿಸಿ ಕನಿಕರಿಸಿ ಸ್ವಲ್ಪ ತಡೆದುಕೊಳ್ಳಬೇಕೆಂದು ಪ್ರಾರ್ಥಿಸಿದ್ದೆ. ಆ ವಸೂಲಿಗಾರ ರಭಸವಾಗಿ ಆ ಸವೆದು ಹಣ್ಣಾಗಿ ಹೋಗಿದ್ದ ಪತ್ರವನ್ನು ಪಟಾರೆಂದು ಕಿತ್ತುಕೊಂಡು ಸಿಟ್ಟಿನಿಂದ ಅದನ್ನು ಮುದುರಿ ಬಿಸಾಡಲೂ ಆಗದೆ ಆ ನನ್ ಮಗ ಕೈಗೆ ಸಿಕ್ಕಿದ್ರೆ ಅವನನ್ನ ಇಂಗೇ ಅಗಿದು ಹಾಕ್ತಿದ್ದೆ ಎಂದು ಆ ಪತ್ರವನ್ನು ಬಾಯಿಗೆ ಕಬಾಬನ್ನು ಎಸೆದುಕೊಂಡಂತೆ ಹಾಕಿಕೊಂಡು ಅಗಿದು ವ್ಯಾ ಥ್ಯೂ ಎಂದು ಉಗಿದು ರೀ ಆ ಲೋಫರ್ ನನ್ ಮಗನ್ನ ಕಾಯ್ತಾ ನಾವ್ಯಾಕ್ರೀ ಕುತ್ಗೋಬೇಕು. ನೀವಿದ್ದೀರಲ್ಲಾ ಎಮ್ಮಾ ನಿಮ್ದೇರೀ ನಾಟ್ಕಾ. ತಿಕಾ ಮುಚ್ಕೊಂಡು ದುಡ್ಡು ನೀವು ಕೊಟ್ರಾ ಸರಿ ಇಲ್ಲಾ ಅಂದ್ರೆ ಮುಂದಿಂದು ಬಾಳಾ ಡೇಂಜರ್ ಐತೆ ಎಂದು ವೀರಾವೇಶದಿಂದ ನನ್ನ ಎದುರು ಕೂಗಾಡಿ ನನ್ನ ಹೆಂಡತಿ ಮಕ್ಕಳು ಎದಿರು ನನ್ನನ್ನೇ ಜರ್ದಾ ಅಗಿದು ಉಗಿದು ಹಾಕುವಂತೆ ಮೇಲೆ ಕೆಳಗೆ ನೋಡಿದ್ದ. ನನ್ನ ಎರಡು ಹೆಣ್ಣು ಮಕ್ಕಳು ಅವನು ಹೊರಟ ಮೇಲೆ ಅಪ್ಪಾ ನೀವು ಆತ ಅಂದಂತೆಲ್ಲ ಅನಿಸಿಕೊಂಡು ನಿಂತಿದ್ದೀರಲ್ಲಾ ನಾಲ್ಕು ಬಾರಿಸಬಾರದಿತ್ತೇ ಎಂದವು. ಜೊತೆಗೆ ನನ್ನ ಧರ್ಮಪತ್ನಿಯೂ ದನಿಗೂಡಿಸಿ ಕೊನೆ ಪಕ್ಷ ಜೋರಾಗಿ ಮಾತಾಡಿಯಾದ್ರೂ ಅವರಿಗೆ ಎದುರುತ್ತರ ಕೊಡಬಾರದಿತ್ತಾ. ಆ ಹಣ ಪಡೆದು ನಾವೇನಾದ್ರೂ ತಿಂದಿದ್ದೆವಾ ಎಂದು ರೇಗಾಡಿದ್ದಳು. ಸಿಟ್ಟಾದಾಗ ಮಕ್ಕಳು ಸರಿಯಾಗಿ ಓದದೆ ಕಳ್ಳಾಟ ಆಡುವಾಗ ನಾನು ನಾಲ್ಕಾರು ಏಟುಗಳನ್ನು ಕೊಡುವುದರ ರುಚಿ ಕಂಡಿದ್ದ ನನ್ನ ಹೆಣ್ಣು ಮಕ್ಕಳು ತಮಗೆ ಹೊಡೆದಷ್ಟೇ ಸುಲಭವಾಗಿ ಆ ಧಾಂಡಿಗರಿಗೂ ಹೊಡೆಯಬಹುದಿತ್ತಲ್ಲವೇ ಎಂದು ಸಹಜವಾಗಿ ಹಾಗೆ ಕೇಳಿದ್ದರು. ಆ ಗೆಳೆಯ ತಿಮ್ಮಯ್ಯನ ಮೇಲಿನ ಸಿಟ್ಟನ್ನೂ ಈ ದಾಂಡಿಗರ ಮೇಲಿನ ಕೋಪವನ್ನೂ ನಾನು ನನ್ನ ಹೆಂಡತಿ ಮಕ್ಕಳ ಮೇಲೆ ಸಾದ್ಯಂತ ಯಶಸ್ವಿಯಾಗಿ ಉಡಾಯಿಸಿ ಅಂತೂ ಕೊನೆಗೆ ಆ ತಿಮ್ಮಯ್ಯನನ್ನು ಮುಂಬಯಿಯ ಯಾವುದೋ ಮೂಲೆಯಲ್ಲಿ ಇದ್ದರೂ ಸರಿಯೆ ಹಿಡಿದು ತರಬೇಕೆಂದು ಆ ರಾತ್ರಿಯೇ ಯಾರ್‍ಯಾರ ಬಳಿಯೋ ಸಾಲ ಮಾಡಿ ರೈಲು ಹತ್ತಿ ಹೊರಟುಬಿಟ್ಟಿದ್ದೆ.

ರೈಲು ಭರ್ತಿಯಾಗಿತ್ತು. ಹೇಗೋ ಟಿ.ಸಿ.ಗೆ ದುಂಬಾಲು ಬಿದ್ದು ಒಂದು ಜಾಗವನ್ನು ಹೊಡೆದುಕೊಂಡಿದ್ದೆ. ಮನೆ ಮಠ ತೊರೆದು ಎಲ್ಲೊ ಕದ್ದು ದೇಶಾಂತರ ಹೋಗುತ್ತಿರುವಂತೆ ಅನಿಸುತ್ತಿತ್ತು. ದಪ್ಪ ದಪ್ಪವಾದ ಜನ ಅವರ ಆಕಾರದಂತೆಯೇ ಇದ್ದ ಲಗೇಜುಗಳನ್ನು ಸೀಟಿನ ಕೆಳಗೆ ಮೇಲೆ ಅಲ್ಲೆಲ್ಲ ಜೋಡಿಸಿಟ್ಟುಕೊಂಡು ಆರಾಮವಾಗಿ ಕುಳಿತವರಂತೆ ಕಾಣುತ್ತಿದ್ದರು. ಇವನಾರೋ ಪರದೇಶಿ ಎಂಬಂತೆ ಅಲ್ಲಿದ್ದ ಅನೇಕರು ನನ್ನನ್ನು ಅನುಮಾನದಿಂದ ನೋಡುತ್ತಿದ್ದರು. ನನಗೆ ಆ ರೈಲು ಜನ ಗೌರವ ಕೊಡದಿದ್ದರೂ ಕೆಟ್ಟ ಅನುಮಾನದಿಂದ ನೋಡುವುದಂತೂ ಬಹಳ ಕಿರಿಕಿರಿಯನ್ನು ಸೃಷ್ಟಿಸುತ್ತಿತ್ತು. ನನ್ನ ಎದುರೆ ಕುಳಿತಿದ್ದ ಪೆಡಂಭೂತದಂತಹ ಒಬ್ಬ ಆಸಾಮಿ ತನ್ನ ಕೋಮಲವಾದ ಪುಟಾಣಿ ಮುದ್ದು ಮೊಲದಂತಹ ಹೆಂಡತಿಯನ್ನು ಕಿಟಕಿಯ ಬಳಿಗೆ ಹಾಕಿಕೊಂಡು ಈಕೆಯನ್ನು ಯಾರೂ ನೋಡಬಾರದು ಎಂಬಂತೆ ಇಡೀ ತನ್ನ ಗಜಗಾತ್ರದ ದೇಹದಿಂದ ಒತ್ತರಿಸಿ ಮೂಲೆಗೆ ಹಾಕಿಕೊಂಡು ಹಿಂದಿಯಲ್ಲಿ ಏನೇನೋ ಗೊಣಗುತ್ತಿದ್ದ. ಪದೇ ಪದೇ ನನ್ನನ್ನೇ ದಿಟ್ಟಿಸಿ ಇವನು ನಿಜವಾಗಿಯೂ ನ್ಯಾಯೋಚಿತ ಪ್ರಯಾಣಿಕನೇ ಅಲ್ಲ. ಎಲ್ಲೋ ಕದ್ದು ಹೇಗೋ ಇಲ್ಲಿ ಬಂದು ಕುಳಿತು ಟಿಕೇಟ್ ಇಲ್ಲದೆ ಕಳ್ಳ ಪಯಣಿಗನಾಗಿ ನನ್ನೆದುರೇ ಬಂದು ವಕ್ಕರಿಸಿಕೊಂಡಿದ್ದಾನಂತೆ ಭಾವಿಸಿ ತನ್ನ ಲಗೇಜುಗಳನ್ನು ಮತ್ತೆ ಮತ್ತೆ ಆಗಾಗ ನೋಡಿಕೊಳ್ಳುತ್ತಾ ಒಮ್ಮೆ ಕೋಪದಿಂದ ಎಚ್ಚರಿಕೆಯಿಂದ ಇನ್ನೊಮ್ಮೆ ತನಗೇನೂ ಮೋಸ ಮಾಡಬೇಡಯ್ಯೋ ಎಂಬಂತೆ ವಿನಂತಿ ಭಾವದಲ್ಲೂ ಹಾಗೇ ಮತ್ತೊಮ್ಮೆ ತನ್ನ ಹೆಂಡತಿಯ ಕಡೆ ಪಿಸು ಮಾತಿನಲ್ಲಿ ಎನೋ ಹೇಳಿ ಈಕೆಯ ಮೈಮೇಲಿರುವ ಬಂಗಾರವನ್ನಾದರೂ ಕಿತ್ತುಕೋ ಆದರೆ ಅವಳ ದೇಹದ ಒಳಸಿರಿಯ ಬಗ್ಗೆ ಕಲ್ಪಿಸಿಕೊಂಡೆಯೋ ನಿನ್ನ ಜೀವನವನ್ನು ಕ್ಷಣಾರ್ಧದಲ್ಲಿ ತೆಗೆದುಹಾಕಿಬಿಡುತ್ತೇನೆಂಬಂತೆ ನನ್ನನ್ನೇ ನೋಡುತ್ತಿದ್ದ.

ಆ ದಡೂತಿ ಪತಿಯನ್ನು ಆ ಹೆಂಗಸು ಯಾವ ಬೇಸರ ನಿರಾಶೆಯೂ ಇಲ್ಲದೆ ಅವನಿಗೆ ಅಂಟಿಕೊಂಡು ಪುಟ್ಟ ಪಿಂಚ್ ಹಕ್ಕಿಯಂತೆ ರೈಲು ಕಿಟಕಿಯ ಕಂಬಿಗಳನ್ನು ಹಕ್ಕಿಗಳು ಕಾಲಿನಿಂದ ಹಿಡಿದುಕೊಂಡಂತೆ ಕೋಮಲವಾದ ರಕ್ತ ತುಂಬಿಕೊಂಡ ಬೆರಳುಗಳಿಂದ ಹಿಡಿದುಕೊಂಡು ಆಕಾಶದ ನಕ್ಷತ್ರದ ತೋಟಕ್ಕೆ ತಾನೀಗ ಹಾರಿ ಹೋಗುತ್ತಿರುವಂತೆ ಹಾಗೇ ನೋಡುತ್ತಿದ್ದಳು. ಅವಳ ಕಡೆ ನೋಡಿದರೆ ಈ ಮನುಷ್ಯ ರಗಳೆ ಮಾಡಿಯೇ ತೀರುತ್ತಾನೆ ಎಂಬ ಪ್ರಜ್ಞೆ ಒಳಗಿಂದ ತಿಳಿಸುತ್ತಿತ್ತು. ಯಾರ್‍ಯಾರೋ ಪಯಣಿಗರು ಒಂದು ಬೋಗಿಯಿಂದ ಇನ್ನೊಂದು ಬೋಗಿಯ ತನಕ ಉದ್ದವೂ ಓಡಾಡುತ್ತಾ ಯಾವ ಬೋಗಿಯಲ್ಲಿ ಯಾವ್ಯಾವ ಚೆಲುವೆಯರು ಕುಳಿತಿದ್ದಾರೆ ಎಂಬಂತೆ ಅಂಕಿ ಅಂಶಗಳ ಹಾಕುತ್ತಾ ತಿರುಗುತ್ತಿದ್ದರು. ನನ್ನ ಪಕ್ಕದಲ್ಲೂ ಇನ್ನೊಬ್ಬ ಮಧ್ಯವಯಸ್ಕ ಆಗಲೇ ತೂಕಡಿಕೆಯಲ್ಲಿ ರೈಲಿನ ವಾಲಾಟಕ್ಕೆ ಹೊಂದಿಕೊಳ್ಳಲಾರದೆ ಆಗಾಗ ನನ್ನ ಭುಜದ ಮೇಲೆ ಒರಗಿಕೊಳ್ಳುತ್ತಾ ತಟ್ಟನೆ ಮೇಲೆದ್ದು ಬಹಳ ಘಾಟಾದ ಸಿಗರೇಟನ್ನು ಹಚ್ಚಿ ಎಲ್ಲರ ಮುಖದ ಮೇಲು ಧೂಪ ಹಾಕುತ್ತಿದ್ದ.

ನಾನು ಹೀಗೆ ಹೊರಟ ಮೇಲೆ ಆ ಬಡ್ಡಿ ವಸೂಲಿಗರು ನನ್ನ ಮನೆಗೆ ಹೋಗಿ ಏನೇನು ತಗಾದೆ ತೆಗೆದು ಎಲ್ಲೋ ಹೆದರಿ ಮನೆ ಬಿಟ್ಟು ಓಡಿ ಹೋಗಿದ್ದಾನೆ. ಇನ್ನು ಅವನನ್ನು ಕಾಯುವುದರ ಬದಲು ಮನೆಯಲ್ಲಿರುವ ಅಂತಿಂತಹ ವಸ್ತುಗಳನ್ನೇ ಎತ್ತಿಕೊಂಡು ಹೋಗಿ ಸಾಲಕ್ಕೆ ಸಮ ಮಾಡಿಕೊಳ್ಳಲು ಸಂಚು ಮಾಡುತ್ತಿರಬಹುದೆ ಎಂಬ ಒಂದು ಅನುಮಾನ ಬಂದು ಹೋಯಿತು. ರೈಲಿನ ಒಳಗೆಲ್ಲ ತರತರದ ತಿಂಡಿ ಸಾಮಾನುಗಳನ್ನು ಮಾರಾಟ ಮಾಡುವವರು ಪೈಪೋಟಿಯಿಂದ ಎಲ್ಲರ ಮುಖದ ಎದಿರು ಹಿಡಿದು ನುಗ್ಗಾಡಿದಂತೆ ಒಡಾಡುತ್ತಿದ್ದರು. ನನ್ನ ಕಡೆ ನೋಡಿ ಇವನ ಮೋರೆ ನೋಡಿದರೇ ಗೊತ್ತಾಗುತ್ತೆ. ಇವನಿಂದ ಒಂದು ಪೈಸೆಯ ವ್ಯಾಪಾರವೂ ತಮಗಾಗದು ಎಂಬಂತೆ ಲೆಕ್ಕಿಸಿ ಹಾಗೇ ಹೊರಟು ಹೋಗುತ್ತಿದ್ದರು. ನನ್ನ ವೇಷಭೂಷಣಗಳು ಅವರವರ ಊಹೆಗೆ ಪುಷ್ಟಿ ಕೊಡುವಂತೆಯೇ ಇದ್ದವು. ನಾನು ನನ್ನ ಹಳೆಯ ಕಾಲದ ಬೆಲ್‌ಬಾಟಂ ಪ್ಯಾಂಟಿನ ವಾಂಛೆಯಿಂದ ಇನ್ನೂ ಬಿಡಿಸಿಕೊಂಡಿರಲಿಲ್ಲ. ಬೆಲ್‌ಬಾಟಂ ಪ್ಯಾಂಟೇ ಆಗಬೇಕೆಂದು ಟೈಲರ್‌ಗಳ ಬಳಿ ನಾನು ರೋಪು ಹಾಕಿ ಯಾವ ಹೊಸ ಫ್ಯಾಷನ್ ಕೂಡ ನನಗೆ ಬೇಡವೆಂದೂ ನನಗೆ ನನ್ನದೇ ಇಷ್ಟದ ಶೈಲಿಯಲ್ಲಿ ಸ್ಟಿಚ್ ಮಾಡಿಕೊಡಬೇಕೆಂದು ತಾಕೀತು ಮಾಡಿದ್ದೆ. ನಾನೀಗ ಅಂತಹ ಒಂದು ಲಡ್ಡಾದ ಪ್ಯಾಂಟಿನ ಮೇಲೆ ಕಡಿಮೆ ಬೆಲೆಗೆ ರಸ್ತೆ ಬದಿ ಅಂಗಡಿಗಳಲ್ಲಿ ಸಿಕ್ಕಿದ್ದ ಬಹು ದೊಗಳೆ ಅಂಗಿಯನ್ನು ಹಾಕಿಕೊಂಡಿದ್ದೆ. ನನ್ನ ಮಂಡಿಗಳ ತನಕ ಆ ಅಂಗಿ ಜೋಲಾಡುತ್ತಿತ್ತು. ಗಡ್ಡ ಬೇರೆ ಕತ್ತರಿಸಿರಲಿಲ್ಲ. ನೋಡಿದರೆ ಥೇಟ್ ಗಮಾರನಂತೆ ವಿಜೃಂಭಿಸುತ್ತಿದ್ದೆ. ಅವರ ಕಲ್ಪನೆ ನ್ಯಾಯಬದ್ಧವಾಗಿತ್ತು. ಅದೇ ಬೋಗಿಯಲ್ಲಿದ್ದ ಮೂರ್ನಾಲ್ಕು ಹುಡುಗಿಯರು ಅಲ್ಲಿ ನನ್ನ ಪ್ರಸ್ತುತತೆಯ ಬಗ್ಗೆಯೇ ಸಮಾಧಾನಗೊಂಡಂತಿತ್ತು. ಅವರೆಲ್ಲ ರಂಗು ರಂಗಿನ ಚೆಂದಗಳಲ್ಲಿ ಗೋಚರಿಸುತ್ತ ನನ್ನೊಳಗೆ ವಿಚಿತ್ರ ಕೀಳರಿಮೆಯನ್ನು ಉಲ್ಬಣಿಸುತ್ತಿದ್ದರು. ಆದರೂ ಮದುವೆ ಆಗಿ ಮಕ್ಕಳಾಗಿ ಅದೂ ಈಗ ಬಡ್ದಿ ದುಡ್ಡಿನ ಗಾಳಕ್ಕೆ ಸಿಲುಕಿ ಎಲ್ಲೋ ಇರುವ ಆ ತಿಮ್ಮಯ್ಯನನ್ನು ಹುಡುಕಿ ಬರಲು ಹೋಗುತ್ತಿರುವಾಗ ಆ ಹುಡುಗಿಯರ ಉಪೇಕ್ಷೆಯ ಬಗ್ಗೆ ತಾನೇಕೆ ತಲೆ ಕೆಡಿಸಿಕೊಳ್ಳಬೇಕೆಂದರೂ ಏನೋ ಒಂಥರದ ಯೌವ್ವನದ ಅವಮಾನವಾಗುತ್ತಿತ್ತು. ಅವರೆಲ್ಲರ ಎದಿರು ಏನಾದರೂ ತಿಂಡಿ ತೆಗೆದುಕೊಂಡು ತಿನ್ನಲು ಅಧೈರ್ಯವಾಗಿ ತೆಪ್ಪಗೆ ಕಿಟಕಿ ಕಡೆ ಮುಖ ಮಾಡುತ್ತ ಆ ಧಾಂಡಿಗನ ಕಡೆ ನೋಡಿದೆ. ಅವನೊಳಗೆ ಅದೇನು ಅನಿಸಿತೋ ಯಾಕೋ ಒಟ್ಟಿನಲ್ಲಿ ಬಹಳ ಹರಿತವಾದ ಒಂದು ಚಾಕನ್ನು ಮೆಲ್ಲಗೆ ಹೊರಗೆ ತೆಗೆದು ನನ್ನ ಕಡೆ ಎಚ್ಚರಿಕೆ ಎಂಬಂತೆ ತೋರುತ್ತ ಗಂಭೀರವಾಗಿ ನೋಡುತ್ತಿದ್ದ. ನನಗೆ ಬಹಳ ಗಾಬರಿಯಾಗಿ ನಾನು ಮುಂಬಯಿಗೆ ತಲುಪುವೆನೋ ಇಲ್ಲಾ ಅರ್ಧ ದಾರಿಯಲ್ಲೇ ಏನಾದರೂ ಆಗಿ ಹೋಗುವೆನೋ ಏನೋ. ಇವನ ಕಣ್ಣಿಗೆ ನಾನು ಹೇಗೆ ಕಾಣುತ್ತಿರುವೆನೋ ಗೊತ್ತಿಲ್ಲವಲ್ಲಾ ದೇವರೇ. ಎಲ್ಲೋ ಇವನಿಗೆ ಬೇಕಾಗಿರುವ ಶತ್ರು ಥೇಟ್ ನನ್ನಂತೆಯೇ ಇರಬಹುದೇನೋ. ನನ್ನನ್ನೇ ಆ ವ್ಯಕ್ತಿ ಎಂದು ತಿಳಿದು ಮಲಗಿದ್ದಾಗ ಚಾಕು ಹಾಕಿಬಿಟ್ಟರೆ ಏನಪ್ಪಾ ಗತಿ ಎಂದು ಸಣ್ಣಗೆ ಒಳಗೆ ನಡುಕ ಹುಟ್ಟಿ ಆ ಸೂಳೆಮಗ ತಿಮ್ಮಯ್ಯನ ದೆಸೆಯಿಂದ ನಾನು ಯಾವ್ಯಾವ ಪಡಬಾರದ ಪಾಡು ಪಡಬೇಕಾಗುತ್ತದೋ ಎಂದು ಉಕ್ಕಿಬಂದ ಸಿಟ್ಟನ್ನು ಗುಟ್ಟಾಗಿ ಒಳಗೇ ಉಗುಳಿನ ಜೊತೆ ನುಂಗಿಕೊಂಡು ನಿಷ್ಪಾಪಿಯಂತೆ ಆಕಾಶದ ಕಡೆ ನೋಡಿದೆ. ನನ್ನೆದುರಿನವನು ಒಮ್ಮೆ ಭೀಕರವಾಗಿ ಕೆಮ್ಮಿ ನನ್ನೆಡೆಗೆ ‘ನೋಡೀಯೆ ಜೋಕೆ’ ಎಂಬಂತೆ ಆ ಶಬ್ದದಲ್ಲೇ ಸೂಚಿಸಿದಾಗ ಬೆಳಗಾನ ನಿದ್ದೆ ಮಾಡಬಾರದು ಎಂದು ತೀರ್ಮಾನಿಸಿದೆ.

ಕಾಲ ಓಡುತ್ತಿತ್ತು. ನನ್ನ ಮನಸ್ಸು ತರಲೆ ತಾಪತ್ರಯಗಳಲ್ಲಿ ಇರುಕಿಸಿಕೊಂಡು ವದ್ದಾಡುತ್ತಿತ್ತು. ರೈಲಿನ ಜನ ಬಹಳ ಸಡಗರ ಸಂಭ್ರಮ ಆನಂದಗಳಲ್ಲಿ ಯಾವುದೋ ಗ್ರಹಕ್ಕೆ ಹೊರಟವರಂತೆ ಕಂಗೊಳಿಸುತ್ತಿದ್ದರು. ಅವರ ನಡುವೆ ಕೆಂಪು ಮೂತಿಯ ಕೆಲವರು ಲೆಫ್ಟಿನೆಂಟ್ ಜನರಲ್ ತರದಲ್ಲಿ ಆಗಾಗ ದಿಟ್ಟಿಸುತ್ತಾ ಇದ್ದರು. ವಿದೇಶಿ ವೇಷ ತೊಟ್ಟಕೆಲವು ಭಾರತೀಯರು ಇಂಗ್ಲೀಷರನ್ನೇ ನಾಚಿಸುವಂತೆ ಟಸ್‌ಪುಸ್ ಎಂದು ಏನೇನೋ ಇಂಗ್ಲೀಷಿನಲ್ಲಿ ಅರಚುತ್ತಿದ್ದರು. ಎದುರಿನ ಸೀಟಿನ ಕೊನೆಯಲ್ಲಿದ್ದ ತೆಳ್ಳಗಿನ ಆದ್ಮಿಯೊಬ್ಬ ಜಗತ್ತಿನ ಷೇರು ಪೇಟೆಯನ್ನೆಲ್ಲ ಅರೆದು ಕುಡಿದವನಂತೆ ಏನೇನೋ ಯಾರ ಜೊತೆಯೋ ಚರ್ಚಿಸುತ್ತ ಬೀಗುತ್ತಿದ್ದ. ಕೆಲವು ಲಲನೆಯರು ವಯ್ಯಾರದಿಂದ ಸುಂದರಾಂಗರ ಕಡೆ ಲೈನು ಹೊಡೆಯುತ್ತ ಮಜಾ ತೆಗೆದುಕೊಳ್ಳುತ್ತಿದ್ದರು. ಅವರ ಕಡೆ ನಾನೂ ನೋಡಿ ಏನಾದರೂ ಸ್ವಲ್ಪ ನನಗೂ ಸಿಗಬಹುದೇ ಎಂದು ನೋಡೋಣ ಎಂದರೆ ಎದುರಿಗಿದ್ದ ಪೆಡಂಭೂತ ಆಗಾಗ ಕ್ಯಾಕರಿಸಿ ಕೆಮ್ಮಿ ನನ್ನ ಮೇಲೆ ಹದ್ದಿನ ಕಣ್ಣಿಟ್ಟಿರುವಂತೆ ಕಾಣುತ್ತಿದ್ದರಿಂದ ಅವರನ್ನು ನೋಡಿ ನಗಲು ಅಂಜಿಕೆಯಾಗುತ್ತಿತ್ತು.

ಎಷ್ಟೇ ಆಗಲಿ ಅವರೆಲ್ಲ ರೈಲಿನ ಜನ. ಬ್ರಿಟಿಶರು ಬಿಟ್ಟು ಹೋದ ಹಳಸಲು ರೈಲಿನ ಒಳಗೆ ದಿವಾನ್‌ಗಿರಿಯಲ್ಲಿ ಮೆರೆಯುವಂತೆ ಕಾಣುತ್ತಿದ್ದರು. ನಮ್ಮ ಊರು ಕೇರಿಯಂತಲ್ಲ ಈ ರೈಲು ಎಂದುಕೊಂಡು ಅರೆತೆರೆದಂತೆ ಕಣ್ಣು ಮುಚ್ಚಿಕೊಂಡು ಆ ಹುಡುಗಿಯರ ಕಡೆ ನೋಡಿದೆ. ಅವರಲ್ಲೊಬ್ಬಳು ಬರ್ತ್ ಹತ್ತಿ ಕಾಲು ಚಾಚಿಕೊಂಡು ತನ್ನ ದಪ್ಪ ಮೊಲೆಗಳ ಮೇಲೆ ಎರಡೂ ಅಂಗೈಗಳನ್ನು ಮೃದುವಾಗಿ ಹಿಡಿದುಕೊಂಡಳು. ಅಂದರೆ ಅವನ್ನು ತಾನಾರಿಗೂ ಕೊಡುವುದಿಲ್ಲ ಎಂಬಂತೆಯೋ ಅಥವಾ ಈ ಹೂಗಳನ್ನು ಹೀಗೆ ಹಿಡಿದುಕೊಳ್ಳಬೇಕು ಎನ್ನುವಂತೆಯೋ ಹಾಗೇ ಮೇಲೆ ಮಲಗಿದ್ದಳು. ಅವಳ ಮೀನಖಂಡ ಲೈಟು ಬೆಳಕಿಗೆ ಮಿನುಗುತ್ತ ರೇಶಿಮೆಯಂತಹ ಕಾಲ ಮೇಲಿನ ಕೂದಲುಗಳು ಸೂಕ್ಷ್ಮವಾಗಿ ಕಾಣಿಸುತ್ತಿದ್ದವು. ಮತ್ತೊಬ್ಬಳು ಪ್ಯಾಂಟಿನ ಬೆಲ್ಟನ್ನು ಸಡಿಲ ಮಾಡಿಕೊಳ್ಳುತ್ತಿದ್ದಳು. ಇದ್ದಕ್ಕಿದ್ದಂತೆ. ನನ್ನ ನೋಟ ಧ್ಯಾನಕ್ಕೆ ಭಂಗ ತರುವಂತೆ ಎದುರಿಗಿದ್ದ ಪೆಡಂಭೂತನ ಕಡೆಗೆ ಆ ರೈಲಿನ ಶಬ್ದದಲ್ಲೂ ಡೊಯ್ ಎಂದು ಹೂಸೊಂದು ತೇಲಿ ಬಂದು ಅದರ ವಿಕಾರ ವಾಸನೆಗೆ ಅಸಹ್ಯವಾಗಿ ಇವನು ಅಂತಾದ್ದೇನನ್ನು ತಿಂದಿದ್ದನೋ ದೇವರೇ ಎಂದುಕೊಂಡು ಗಾಳಿಯನ್ನು ಒಳಗೇ ಎಳೆದುಕೊಳ್ಳದೆ ಉಸಿರು ಹಿಡಿದುಕೊಂಡು ಸುಮಾರು ಹೊತ್ತಾದ ಮೇಲೆ ಉಸಿರೆಳೆದುಕೊಂಡೆ. ಆಗಲೂ ಅವನ ಹೂಸಿನ ವಾಸನೆ ಕರಗದೆ ಅಲ್ಲೆಲ್ಲ ತೆಳ್ಳಗೆ ವ್ಯಾಪಿಸಿಕೊಂಡು ವಿಚಿತ್ರವಾದ ವಾಕರಿಕೆಯನ್ನು ಸೃಷ್ಟಿಸಿತ್ತು. ಸುತ್ತಮುತ್ತ ಇದ್ದವರಾಗಲಿ ಆ ಹುಡುಗಿಯರಾಗಲಿ ಅವನ ಹೂಸಿಗೆ ಪ್ರತಿಭಟನೆಯಾಗಿ ಮೂಗು ಮುರಿದು ಕೊಂಡೋ ಇಸ್ಸೀ ಎಂದೋ ಏನನ್ನು ಮಾಡದೆ ತಮಗೇನೂ ಆಗೇ ಇಲ್ಲ ಎಂಬಂತೆ ಇದ್ದರು. ಅವನ ಪಕ್ಕದಲ್ಲಿದ್ದವನು ಬಹಳ ದೀರ್ಘವಾಗಿ ಆಕಳಿಕೆಯನ್ನು ಅವನ ಹೂಸಿನ ಜೊತೆ ತೆಗೆದು ಮೈ ಮುರಿದು ಶ್ವಾಸಕೋಶಗಳ ತುಂಬ ಹೂಸಿನ ವಾಸನೆಯನ್ನು ಎಳೆದುಕೊಂಡು ಯಾಕೋ ಆ ಹುಡುಗಿಯರ ಕಡೆ ಸುಮ್ಮನೆ ನಕ್ಕು ಕನ್ನಡಕ ಸರಿ ಮಾಡಿಕೊಂಡು ಸುತ್ತ ಕಣ್ಣಾಡಿಸಿದ. ಬ್ಯಾಗಿನಿಂದ ತೆಗೆದು ಏನನ್ನೋ ಮೇಯುತ್ತಿದ್ದ ಪೆಡಂಭೂತವನ್ನು ಕಣ್ಣು ಕೆಕ್ಕರಿಸಿಕೊಂಡು ನೋಡಿದೆ. ಅವನ ಹೆಂಡತಿ ಅವನ ಭುಜಕ್ಕೆ ಒರಗಿ ನಿದ್ದೆ ಮಾಡುತ್ತಿದ್ದಳು. ಆಗಾಗ ಮೆಲ್ಲಗೆ ಕಣ್ಣರಳಿಸಿ ಪತಿರಾಯನನ್ನು ಮೃದುನಗೆಯ ಲಾಸ್ಯದಲ್ಲಿ ನೋಡಿ ಅವನ ಕಾಲುಕೇಜಿಯಷ್ಟು ತೂಕವಿರುವ ಹೆಬ್ಬೆರಳನ್ನು ಹಿಡಿದುಕೊಂಡು ಕೆಂಪುರಂಗಿನ ತನ್ನ ಸಣ್ಣ ತುಟಿಗಳನ್ನು ಸ್ವಲ್ಪವೇ ಬಿಚ್ಚಿ ಹಾಗೇ ಮುದುಡಿಕೊಳ್ಳುತ್ತಿದ್ದಳು. ಗಾಳಿ ಜೋರಾಗಿ ಬೀಸಿದ್ದರಿಂದ ಅನೇಕರ ಹೂಸುಗಳು ತೂರಿಹೋಗಿದ್ದವು.

ಹೀಗೇ ಸುಮಾರು ಹೊತ್ತು ಕಳೆಯಿತು. ನಾನಿದ್ದ ಬೋಗಿಯಲ್ಲಿ ಯಾರೊಬ್ಬರೂ ಕನ್ನಡ ಮಾತನಾಡುವವರು ಇಲ್ಲ ಎಂದು ಭಾವಿಸಿದ್ದೆ. ಸದ್ಯ ನನಗೊಬ್ಬ ಆ ಬೋಗಿಯಲ್ಲಿ ಕನ್ನಡ ಮಾತನಾಡುವ ಮನುಷ್ಯ ಸಿಕ್ಕಿದ. ಬೇಸರ ಕಳೆಯಲೆಂದು ಎಂತದೋ ಒಂದು ಪತ್ರಿಕೆಯನ್ನು ತೆಗೆದುಕೊಂಡು ಬ್ಯಾಗಿನಲ್ಲಿ ತುರುಕಿದ್ದೆ. ಆ ಪತ್ರಿಕೆಯನ್ನು ಹೊರಗೆ ತೆಗೆದ ಕೂಡಲೆ ಎದುರಿನ ಸಾಲಿನ ಕೊನೆಯಲ್ಲಿ ಕುಳಿತು ಭಯಂಕರ ಇಂಗ್ಲೀಷಿನ ಮಳೆಗರೆಯುತ್ತಿದ್ದವನು ನನ್ನೆಡೆ ನಗುಮೊಗದಿಂದ ನೋಡಿ ಎಕ್ಸ್‌ಕ್ಯೂಸ್‌ಮೀ ಸ್ವಲ್ಪ ಪೇಪರ್ ಕೊಡ್ತೀರಾ ಎಂದು ಕನ್ನಡದಲ್ಲಿ ಕೇಳಿದ್ದ. ಅಬ್ಬಾ ಒಬ್ಬ ಸಹಭಾಷಿಕ ನನಗೆ ಇಂತಹ ವೇಳೆಯಲ್ಲಿ ಸಿಕ್ಕಿದನಲ್ಲಾ ಎಂದು ಜೀವ ಬಂದಂತಾಗಿ ಅದೇ ನೀವು ಕನ್ನಡದವರು ಅಂತಾ ಗೊತ್ತಾಗ್ಲೇ ಇಲ್ಲ. ನೀವು ಹೀಗೆ ಹ್ಯಾಟು ಟೈ ಹಾಕ್ಕೊಂಡು ಜಬರ್‌ದಸ್ತಾಗಿ ಇಂಗ್ಲೀಷ್ ಮಾತಾಡ್ತಿದ್ರಿಂದ ನೀವೆಲ್ಲೋ ಇಂಗ್ಲೀಷ್ ಕಡೆಯೋರು ಅಂತಾ ತಪ್ಪಾಗಿ ತಿಳಿದುಬಿಟ್ಟಿದ್ದೆ ಎಂದು ಪತ್ರಿಕೆಯನ್ನು ಅವನ ಕೈಗೆ ರವಾನಿಸಿದೆ. ಅವನ ಮಾತುಕತೆಗಳನ್ನು ಗಮನಿಸಿಯೇ ಇವನೆಲ್ಲೊ ಭಯಂಕರ ಡಿಬೇಟ್ ಫೆಲೋ ಎಂದು ಗ್ರಹಿಸಿದೆ. ಭಾರತೀಯತೆಯ ಬಗ್ಗೆ ಘನವಾಗಿ ನಾನು ಕೇಳದೇ ಇದ್ದರೂ ಮಾತು ತೆಗೆದು ಹೊಗಳಿ ಹಾಡುತ್ತಿದ್ದ.

ಹೇಗೋ ದಾರಿ ಸವೆಸಲು ಎಂತಹ ಮಾತಾದರೂ ಸರಿಯೆ. ಅದರಿಂದ ನಾನೀಗ ಕಳೆದುಕೊಳ್ಳುವುದು ಏನೂ ಇಲ್ಲವೆಂದೂ, ಮುಖ್ಯವಾಗಿ ಎದುರಿಗಿದ್ದವನ ಭಯದಿಂದ ಕೊಂಚ ಬಿಡಿಸಿಕೊಳ್ಳಲು ಇದರಿಂದ ಅನುಕೂಲವೆಂದು ಅವನು ಹೇಳುತ್ತಿದ್ದ ವಿಚಾರಗಳಿಗೆ ಹೌದೌದು ಎಂದು ತಲೆ ಆಡಿಸುತ್ತಾ ಬರದ ನಗೆಯನ್ನು ಬರಿಸುತ್ತಾ ನನಗೂ ಒಬ್ಬ ಸಪೋರ್ಟಿಗೆ ಈ ರೈಲಿನಲ್ಲಿ ನನ್ನ ಭಾಷೆಯವನು ಇದ್ದಾನೆ, ಹುಷಾರ್ ಎಂದು ಪೆಡಂಭೂತನಿಗೆ ಗೊತ್ತಾಗಲಿ ಎಂದು ಏನೋ ನಾನೂ ಕೂಡ ಹರಕು ಮುರುಕಾದ ವಿಚಾರದ ಕೆಲವು ವಾಕ್ಯಗಳನ್ನು ಜೋಡಿಸುತ್ತಾ ಆ ಕನ್ನಡಿಗನ ಜೊತೆ ಗುರುತಿಸಿಕೊಳ್ಳುತ್ತಿದ್ದೆ. ಎಂತೆಂತದೋ ಪುಸ್ತಕಗಳಿಂದೆಲ್ಲ ವಿಚಾರಗಳನ್ನು ಕೋಟ್ ಮಾಡುತ್ತಾ ಆ ಸಾಹಿತಿ ಗೊತ್ತಾ ಈ ಸಾಹಿತಿ ಬಗ್ಗೆ ತಿಳಿದಿದ್ದೀಯಾ ಎಂದು ನನ್ನ ಬುದ್ಧಿ ಪರೀಕ್ಷೆಗೆ ಈಗ ಇಳಿದಿದ್ದ. ಇವನನ್ನು ಮಾತನಾಡಿಸಿದ್ದೇ ತಪ್ಪಾಯ್ತಲ್ಲಾ ಎಂದು ನಾನೇ ನೊಂದುಕೊಂಡು ಪ್ರಯಾಣದ ವೇಳೆ ವಾದ ವಿವಾದ ರಗಳೆ ಜಗಳ ಸರಿ ಇಲ್ಲವೆಂದು ತಿಳಿದು ಇವನ ಜೊತೆ ನಾನು ನಾಟಕ ಆಡಬೇಕೆಂದು ತೀರ್ಮಾನಿಸಿದೆ. ಅವನು ಚರ್ಚೆ ಆರಂಭಿಸಿದ.
“ಅಲ್ಲಾರೀ ಹೋಗಿ ಹೋಗಿ ಇಂತಾ ಪತ್ರಿಕೆಗಳನ್ನೇನ್ರಿ ಓದೋದು. ಈ ಪತ್ರಿಕೆಯ ಎಡಿಟರ್ ಯಾರು ಗೊತ್ತೇನ್ರಿ. ನಂಬರ್ ಒನ್ ಈಡಿಯಟ್ ಬಾಸ್ಟರ್‍ಡ್ ಅವನು. ಅಂತವರೇ ಇದ್ರಲ್ಲಿ ಬರೆಯೋದು ಹೆಚ್ಚು. ಅವನ್ನೆಲ್ಲ ಓದಿ ತಲೆ ಕೆಡಿಸ್ಕೊಳೋ ಬದಲು ಗುಪ್ತ ಸಮಾಚಾರ ಓದೋದು ಒಳ್ಳೇದು. ಈ ಪತ್ರಿಕೆನಾ ಕೊಂಡ್ಕೊಂಡು ಮನೆಗೆ ಹೋದ್ರೆ ಸಂಸಾರ ಶ್ಮಶಾನ ಆಗೋಗ್ತದೆ. ಬ್ಲಡಿ ಇಂಡಿಯನ್ ಜರ್ನಲಿಸ್ಟ್…” ಎನ್ನುತ್ತಾ ಗೊತ್ತಾಗ್ತಿದೆಯಾ ಎಂದು ನೋಡಿದ.
“ಹೌದಾ ಸಾರ್. ನನಗೆ ಅದೆಲ್ಲ ಗೊತ್ತಿರ್‍ಲಿಲ್ಲ ಸಾರ್. ಸುಮ್ನೆ ಜರ್‍ನಿ ಟೈಂನಲ್ಲಿ ಬೇಜಾರಾಯ್ತದಲ್ಲಾ ಅಂತಾ ತಕಂಡಿದ್ದೆ” ಎಂದು ಪತ್ರಿಕೆಯನ್ನು ಹಿಂತಿರುಗಿ ಪಡೆದು ಅದರ ಮೇಲೆ ಹುಸಿ ಕೋಪ ತೋರುತ್ತ ಮುದುರಿ ಬ್ಯಾಗಿನ ಒಳಕ್ಕೆ ಹಾಕುತ್ತಾ ತಟ್ಟನೆ ಅವನ ಕಡೆ ನೋಡುತ್ತಾ ಇದು ಇರ್‍ಲೋ ಅಥವಾ ಕಿಟಕಿ ಹೊರಗೆ ಹಾಕಿಬಿಡ್ಲೋ ಸಾರ್ ಎಂದೆ. ಅರೇ ಬಿಸಾಕ್ರಿ ಅದನ್ಯಾವನು ಓದ್‌ತಾನೆ ಎಂದ. ಬಿಸಾಡಿ ಕೈಕಟ್ಟಿ ಅವನ ಮುಂದೆ ಕುಳಿತೆ. ಆತ ನನ್ನನ್ನು ಬಹಳ ನಿಯತ್ತಿನವನು ಹೇಳಿದಂತೆಲ್ಲ ಕೇಳಬಲ್ಲ ಮನುಷ್ಯ, ಏನೂ ಅರಿಯದ ಮುಗ್ಧ ಎಂದು ತಿಳಿದುಕೊಳ್ಳಲಿ ಎಂದು ಅವನಣತಿಯಂತೆ ಪತ್ರಿಕೆಯನ್ನು ಬಿಸಾಡಿ-
“ಬಾಳ ವಿಷ್ಯ ತಿಳ್ಕಂಡಿದ್ದಿರಿ ಸಾರ್, ನಮ್ಗಂತವೆಲ್ಲ ತಲೆಗೆ ವಳಿಯದೆ ಇಲ್‌ವಲ್ಲಾ…. ನೀವೇಳಿದ್ದು ಕರೆಕ್ಟಾಗಿದೆ ಅನಿಸ್ತದೆ ಸಾರ್.”
“ಅಲ್ರೀ ವಿಷ್ಯ ತಿಳ್ಕಳ್ದೇ ಏನಾರ ಹೇಳೋಕಾಗುತ್ತಾ, ಈ ಕಾಲ್ದಲ್ಲಿ. ಬಾಳ ಕೇರ್‌ಫುಲ್ಲಾಗಿ ಇರ್‌ಬೇಕ್ರೀ” ಎಂದವನು ವಿಷಯ ಬದಲಿಸಿ ಬಾಂಬೆಗೆ ಯಾವ ಕೆಲಸದ ಮೇಲೆ ಹೋಗ್ತಾ ಇದ್ದೀರಿ ಎಂದು ಕೇಳಿದ ಮೇಲೆ ನನ್ನ ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸತೊಡಗಿದ.
“ಯಾವೂರು”
“ನಂದು ಮೈಸೂರು ಸಾರ್”
“ಮೈಸೂರಲ್ಲಿ ಎಲ್ಲಿ. ಯಾವ್ ಏರಿಯಾ”
“ಮೈಸೂರಲ್ಲಿ ದೊಂಬರ ಕೇರಿ ಕಡೆ ಇದ್ದೀನಿ ಸಾರ್”
(ಆಶ್ಚರ್ಯದಿಂದ) ‘ಹಾ, ದೊಂಬರ ಕೇರೀ… ಅರೇ ದೊಂಬರ ಕೇರಿ. ಕ್ಯಾ ಕ್ಯಾ ಕೇರಿ ಹೈ ಮೇರಾ ಭಾರತ್ ಮೇ. ದೊಂಬರ ಕೇರಿ ಅಂತಾಲೂ ಇದೆಯಾ?’
‘ಒಂದೇಸ್ ಒಂದ್ ಪ್ಯಾಟೆ ಅಂದ್ಮೇಲೆ ಅಂತವೆಲ್ಲ ಇರ್‍ತವೆ ಸಾರ್. ಇಂತಾ ಕೇರಿನಾ ನೀವು ಕೇಳೇ ಇರ್‍ಲಿಲ್ಲ ಅನಿಸ್ತದೆ.”
‘ನಾನು ಹೊಲಗೇರಿ ಮಾದಿಗರ ಕೇರಿ ಅಂತಾ ಕೇಳಿದ್ದೆ. ಹಾಗೆನೇ ಬೆಸ್ತರ ಕೇರಿ ವಕ್ಕಲಗೇರಿ ಅಂತೆಲ್ಲಾ ಐ ಹರ್‍ಡ್. ಬಟ್ ಅಪ್‌ಟು ನೌ ನಾನು ಈ ದೊಂಬರ ಕೇರಿನಾ ಕೇಳೇ ಇರ್‍ಲಿಲ್ಲ. ಮೈಸೂರಿನ ಮಹಾರಾಜರ ಊರಲ್ಲಿ ದೊಂಬರ ಕೇರಿ ಇರೋದು ಅಂದ್ರೆ ಅವಮಾನ ಕಣ್ರೀ.’
‘ಯಲ್ಲಾ ನಾವೇ ಮಾಡ್ಕಂದಿರುದು ಸಾರ್. ಕೇರಿ ಅಂದ್ರೆ ಅದ್ರೆಲೇನ್ ಕೀಳು ಸಾರ್, ನಂ ದೊಂಬ್ರು ಎಂತೆಂತಾ ಸರ್ಕಸ್ ಮಾಡ್ತರೆ ಅನ್ನುದಾ ನೀವು ನೋಡಿಲ್ಲವೆ ಸಾರ್.?’
‘ಮೈಸೂರಿನ ಯಾವ ಏರಿಯಾದಲ್ಲಿರೀ ನಿಮ್ಮ ದೊಂಬರ ಕೇರಿ ಇರೋದು.’
‘ಅದೇ ಸಾರ್ ಒಂಟಿಕೊಪ್ಪಲ್ ಕಡೆ ಇದೆ.’
‘ಓಹೋ ಐ ಸೀ. ಅದೇ ಆ ಒಂಟಿಕೊಪ್ಪಲ್ ಪಂಚಾಂಗದ ಏರಿಯಾನಾ? ಲವ್ಲೀ. ಪರವಾಗಿಲ್ಲ ದೊಂಬರು ಒಳ್ಳೆ ಜಾಗನೇ ಹಿಡ್ದಿದ್ದಾರೆ.’
‘ಅಂಗೇನಿಲ್ಲ ಸಾರ್ ಮುನ್ಸಿಪಾಲ್ಟಿಯವರು ಯಾವಾಗ ಬೇಕಾದ್ರೂ ಜಾಗ ಖಾಲಿ ಮಾಡಿಸಬಹುದು.’
‘ಅದಿರ್‍ಲೀ, ಐ ಥಿಂಕ್ ಯೂ ಬಿಲಾಂಗ್ಸ್ ಟು ದೊಂಬಾ?’
‘ಹಾ ಹಾ, ಅರ್ಥ ಆಗ್ಲಿಲ್ಲಾ.’
‘ಅಂದ್ರೆ ನೀವು ದೊಂಬ್ರಾ’
‘ಇಲ್ಲಾ ಸಾರ್ ನನ್ನೇರಿಯಾ ದೊಂಬರಕೇರಿ ಅಷ್ಟೇ.’
‘ನಿಮ್ಮ ಜಾತಿ’
‘ಸಾರ್ ನಂದು ದಮಕಿ ಕ್ಯಾಸ್ಟು’
‘ಅರೇ, ಸರ್‌ಪ್ರೈಸ್. ವಾಟ್ ಕೈಂಡ್ ಆಫ್ ದಿಸ್ ಕ್ಯಾಸ್ಟ್. ಇಂತಾ ಒಂದು ಜಾತಿ ಹೆಸರನ್ನೇ ನಾನು ಕೇಳಿಲ್ಲಾರೀ. ಇದೆಲ್ಲಿತ್ರೀ ಇಲ್ಲೀತನಕ. ಎಷ್ಟಿದೆ ನಿಂ ಪಾಪುಲೇಷನ್.’
‘ಏನ್ ಹೆಚ್ಚು ಕಡಿಮೆ ನಾನೂರಿಪ್ಪತ್ತಿದೆ ಅಂತಾ ನಂ ಜಾತಿಯೋರೊಬ್ರು ಹೇಳವರೆ ಸಾರ್.’
‘ಓಹ್, ಫೋರ್‌ಟ್ವೆಂಟೀ ಬರೀ ನಾನೂರಿಪ್ಪತ್ತೆನಾ. ಯುವರ್ ಕಮ್ಯುನಿಟೀ ಈಸ್ ಜಸ್ಟ್ ಫೋರ್‌ಟ್ವೆಂಟಿ.’
‘ಹೌದು ಸಾರ್ ಬಾಳ ಹಿಂದುಳಿದ ಜಾತಿ ಸಾರ್ ನಮುದು. ಇಡೀ ಕರ್ನಾಟಕದಲ್ಲೆಲ್ಲ ಹುಡುಕಂಡ್ರೂ ಅಷ್ಟೆಯಾ. ನಂಗೆ ಯಾರೂ ಲೀಡ್ರು ಇಲ್ಲಾ ಏನೂ ಇಲ್ಲಾ ಸಾರ್.’
‘ಏನ್ ಓದಿದ್ದೀಯಪ್ಪಾ’
‘ಯೆಸೆಲ್ಸಿ ಫೇಲ್ ಸಾರ್’
‘ಕೆಲ್ಸ?’
‘ಮುನ್ಸಿಪಾಲಿಟಿ ಡ್ರೈನೇಜ್ ಸೂಪರ್‌ವೈಸರ್ ಆಗಿದ್ದೀನಿ ಸಾರ್’
‘ಸಂಬ್ಳ’
‘ಐನೂರು ಸಾರ್’
‘ಮಕ್ಕಳು’
‘ನಾಲ್ಕು, ಮೂರೆಣ್ಣು ಒಂದ್ ಗಂಡು’
‘ಕಷ್ಟ ಅಲ್ಲಾ’
‘ಅಂಗನಿಸ್ತದಷ್ಟೇ ಸಾರ್. ಆದ್ರೆ ನಾನು ಇನ್ನೂ ಬೇರ್ ಬೇರೆ ಕೆಲ್ಸ ಮಾಡಿ ಸಂಪಾದ್ಸುದ್ರಿಂದ ಸರೋಯ್ತದೆ.’
ಏನೇನ್ ಕೆಲ್ಸಾ…. ಏನ್ ಬಿಸಿನೆಸ್ ಉಂಟಾ’.
‘ಅಯ್ಯೋ ಬಿಸಿನೆಸ್ ನಮ್ಮಂತೋರಿಗೆ ಯಾಕ್ ಬೇಕು ಸಾರ್. ಏನೋ ಸಂಜೆ ಹೊತ್ತು ನಮ್ಮ ಏರಿಯಾದ ಸರಾಯಿ ಅಂಗಡಿಗಳಲ್ಲಿ ಬೋಂಡ ಚಕ್ಕಲಿ ಬಜ್ಜಿ ಅಂತಾ ಅದೂ ಇದೂ ಚಾಕ್ಣ ಅಂತಾ ಮಾರೋದ್ರಿಂದ ಸ್ವಲ್ಪ ಕಾಸ್ ಸಿಕ್ತದೆ.’
‘ಅದಷ್ಟ್ರಲ್ಲಿ ಏನ್ರಿ ಸಿಗ್ತದೆ.’
‘ಅಂಗಲ್ಲಾ ಸಾರ್ ಯೀ ಕಸುಬಿನ ಜೊತೆ ಇನ್ನೊಂದ್ ಕೆಲ್ಸ ಮಾಡ್ತೀನಿ ಸಾರ್. ನಂ ಮುನಿಸ್ಪಾಲ್ಟಿಲಿ ಡ್ರೈನೇಜ್ ವರ್ಕರ್‍ಸ್‌ಗೆ ಬಡ್ಡಿ ದುಡ್ಡು ಕೊಡೋ ಜನ ಸಾಕಷ್ಟಿದ್ದಾರೆ. ಸರಿಯಾಗಿ ದುಡ್ಡು ಕೊಡದೆ ತಡಾ ಮಾಡೋರತ್ರಾ ರೋಪು ಹಾಕಿ ಹೆದುರ್‍ಸಿ ಬೆದುರ್‍ಸಿ ಹಣ ವಸೂಲ್ ಮಾಡಿದ್ರೆ ಕಮಿಸನ್ ಸಿಕ್ತದೆ. ಅಂಗೆನೇ ಸಾಲ ಬೇಕಾದೋರಿಗೆ ಸಾಲ ಕೊಡಿಸಿದ್ರೆ ಎರುಡ್ ಕಡೆನು ವಸಿ ಸಿಗ್ತದೆ. ಎಂಗೋ ಅದ್‌ಕಿದ್‌ಕೆ ಬ್ಯಾಲೆನ್ಸ್ ಮಾಡ್ಕಂಡು ಸಂಸಾರ ತೂಗ್ತಿನಿ ಸಾರ್.’
‘ಲವ್ಲೀ, ಎಕ್ಸಲೆಂಟ್, ಪರವಾಗಿಲ್ಲಾ, ನೋಡಿದ್ರೆ ಅಂಗ್ ಕಾಣೋದಿಲ್ಲವಲ್ರೀ. ಬಾಳ ಜೋರಿದ್ದೀಯ ಅನಿಸ್ತದೆ. ತುಂಬ ಒಪನ್ ಆಗಿದ್ದೀಯೆ. ಇಂಗಿರಬೇಕಪ್ಪ. ಏನ್ ನಿನ್ ಹೆಸರು.’
‘ಜಿ. ಜಿ. ಗುರುವಾ ಅಂತ ಸಾರ್’.
‘ಏನ್ ಜಿ. ಜಿ. ಅಂದ್ರೆ’
‘ಜಿ.ಜಿ. ಅಂದ್ರೆ ಇನ್ಸೆಲ್ಲು ಸಾರ್, ಗುಡೇಮಾರ್‍ನಳ್ಳಿ ಗುರುಡಯ್ಯನ ಮಗ ಗುರುವಾ ಅಂತಾ.’
‘ಆಡ್ಕೊಂಡ್ ನಗ್ತಿದ್ದಿನಿ ಅಂತಾ ತಿಳ್ಕೋಬ್ಯಾಡಾ…. ದೊಂಬ್ರತ್ರಾ ಏನಾದ್ರೂ ಸರ್ಕಸ್ಸು ಗಿರ್ಕಸ್ಸು ಕಲ್ತಿದ್ದಿಯೋ?’
‘ಕಲ್ತಿದ್ದಿನಿ, ಆದ್ರೆ ಅವ್ನೇನೂ ಎಲ್ಲೂ ತೋರಿಸ್‌ಬ್ಯಾಡ ಅಂತಾ ದೊಂಬ್ರು ಬಾಸೆ ತಕಬುಟ್ಟವರೆ ಸಾರ್. ಅಂಗಾಗಿ ನಾನು ಏನೂ ಏಳಂಗಿಲ್ಲ ತೋರ್‍ಸಂಗಿಲ್ಲ’
‘ಅಯ್ಯೋ ಆ ದೊಂಬುನ್ ಮಾತ್ ಅತ್ತಾಗಿ ಬಿಸಾಕ್ರಿ. ಏನಾದ್ರೂ ಒಂದಾಟ ತೋರಿಸ್ರಿ. ಎಂಗೂ ಇಲ್ಲಿ ರೈಲಿನ ತುಂಬ ಜನಾ ಇದ್ದೇವೆ. ಏನಾದ್ರೂ ಗಿಟ್ಟಬಹುದು.’
‘ಅಂಗೆಲ್ಲ ಅನ್ನುಕ್ಕಾಗುತ್ತಾ ಸಾರ್. ದೊಂಬ್ರು ವಿದ್ಯೆನಾ ನಾನು ಇಲ್ಲಿ ರೈಲೆಲಿ ಎಂಗೆಂಗೋ ತೋರ್‍ಸಿ ಅವುರ್ ಕಲೆಗೆ ಅವಮಾನ ಮಾಡಿ ಗೌರವ ಕಡಿಮೆ ಮಾಡಬಾರ್‍ದು ಸಾರ್.’
‘ಗೌರವ ಕೊಡಬೇಡ ಅಂತಾ ನಾನೆಲ್ರಿ ಹೇಳ್ದೇ. ಯಾರೇ ಆದ್ರೂ ಗೌರವಕ್ಕೆ ಮೊದಲು ಅರ್ಹತೆ ಪಡೀಬೇಕು, ಅರ್ಹತೇನ. ಅದೇನಯ್ಯಾ ಮುಖ್ಯ.’
‘ಅರ್ಹತೆ ಅಂದ್ರೆ ಬಾಳ ಕಸ್ಟ ಆಯ್ತದೆ ಸಾರ್. ನಮ್ಮಾಪಿಸಲಿರೊ ಸಾಹೆಬ್ರುಗಳೆಲ್ಲ ಏನೇನ್ ಕಲ್ತು ಏನೇನ್ ಮಾಡ್ತಾರೆ ಎಂತೆಂತಾ ಗೌರವ ತಕತರೆ ಅಂತಾ ನಾನು ಬಾಳ ಚೆನ್ನಾಗಿ ಕಂಡಕಂದಿವಿನಿ ಸಾರ್. ಏಲ್ ಮೇಲೆ ಬಿದ್ದಿರು ಕಾಸ ನಾಲ್ಗೆಲೆತ್ಕತರೆ. ಅಂತಾ ಜನ ಅವರು ಸಾರ್.’
‘ಅರೆ ಏನಯ್ಯಾ ಇಂತಾ ದೊಡ್ ಮಾತಾಡ್ತಿಯೆ. ಅರ್ಹತೆ ಅಂದ್ರೆ ಏನು ಗೊತ್ತಾ ಮೊದ್ಲು ಅದನ್ನ ಸ್ವಲ್ಪ ಡೀಪಾಗಿ ಅಂಡರ್‌ಸ್ಟ್ಯಾಂಡ್ ಮಾಡ್ಕೋ.’
‘ಅಂಗೇನಿಲ್ಲಾ ಸಾರ್ ನಿಮ್ಮಂತವರು ಏನೋ ದೊಡ್ಡದಾಗಿ ಓದಿ ತಿಳ್ಕಂಡಿದ್ದೀರಿ. ನಿಮಗೆ ಸರೋಯ್ತದೆ. ನಮ್ಮಂತವರ ಕತೆ ಯೇಳಿ.’
‘ಬುದ್ಧಿವಂತರಿಗೆ ಅನ್ಯಾಯ ಆಗಬಾರದು ಅನ್ನೋದು ನನ್ನ ಅರ್ಹತೆಯ ಅರ್ಥ. ಯಾವನು ಬುದ್ಧಿವಂತನೋ ಅರ್ಹನೋ ಅವನಿಗೆ ಇಲ್ಲಿ ಈ ದೇಶದಲ್ಲಿ ಏನ್ರಿ ಸಿಗ್ತಾ ಇದೆ, ಬರಿ ಮಣ್ಣು. ಎಲ್ಲಾನು ಉರಿದು ತಿಂದಾಕ್ತಾ ಇರ್‍ತಾರೆ ದರಿದ್ರ ನಾಯಿಗಳು. ಈಗ ನೋಡು ಈ ರಿಜರ್ವೇಷನ್ ಅಂತಾ ಅದ್ನೇ ಈ ದೇಶ ಮುಳುಗಿ ಹೋಗೊತನಕ ಈ ಜನ ಬಿಡ್ದೆ ಹಿಡ್ಕಂಡು ಕಿರುಚ್ತಾ ಕುಂತಿರ್‍ತವೆ. ಮೀಸಲಾತಿ ಹೆಸ್ರಲ್ಲಿ ಎಷ್ಟೊಂದು ಅನ್ಯಾಯ ಆಗ್ತಿದೆ ಗೊತ್ತ. ನಮ್ಮಂತವರಿಗೆ ಇದರಿಂದ ಜೀವ್ನವೇ ಹಾಳಾಗ್ತಿದೆ. ನಾನು ರ್‍ಯಾಂಕ್ ಬಂದ್ರೂ ಕೆಲ್ಸ ಇಲ್ಲಾ. ಆದ್ರೆ ಈ ಲಫಡ ಯಾವನೋ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾಗಿದ್ರೂ ಕೆಲ್ಸನಾ ಕರ್‍ದು ಕೊಟ್‌ಬಿಡ್ತಾರೆ. ಇಂತಾದ್ರಿಂದ್ಲೇ ರೀ ಈ ದೇಶಾ ಹಾಳಾಗ್ತಿರೋದು. ವೀ ಮಸ್ಟ್ ಬ್ಯಾನ್ ದಿ ರಿಜರ್ವೇಷನ್. ಅದರ್‌ವೈಸ್ ಇಂಡಿಯಾ ಹ್ಯಾವ್ ನೋ ಫ್ಯೂಚರ್ ಅಟ್ ಆಲ್.’
ನಾನೀಗ ಮಹಾಪರಾಧವಾಯ್ತು ಬುದ್ಧೀ ಎಂಬಂತೆ ಮುಖ ಮಾಡಿಕೊಂಡು ‘ಸಾರಿ ಸಾರ್ ಬೇಜಾರಾಯಿತೇನೋ ನಾನಂಗಂದಿದ್ರಿಂದ. ಅದೇನೇನೋ ಇಂಗ್ಲೀಷಿಲಿ ಹೇಳ್ತಿದ್ದಿರಿ. ವಸಿ ಕನ್ನುಡುದಲ್ಲಿ ಹೇಳಿ ಸಾರ್. ನನಗೆ ಇಂಗ್ಲಿಷ್ ಅಂದ್ರೆ ಏನೇನೂ ಅರ್ಥ ಆಗೋಲ್ತು. ನಾನು ಎಂಟು ಸಾರಿ ಯೆಸೆಲ್ಸಿಲಿ ಇಂಗ್ಲಿಷ್ ಕಟ್ಟಿ ಕಟ್ಟಿ ಕೊನೆಗೆ ಯೇಗಲಾರದೆ ಬಿಟ್ಟು ಬಿಟ್ಟೆ. ದೇವರು ಆ ಬಾಸೆಯ ನನಗೆ ದಕ್ಕಿಸ್‌ಕೊಡ್ದೆ ವೋದ. ಎಷ್ಟೊಂದ್ ಚನ್ನಾಗಿ ಇಂಗ್ಲಿಷ್ ಮಾತಾಡ್ತಿರಿ….’
-ಆತ ಮಿಕಿ ಮಿಕಿ ನನ್ನನ್ನೇ ನೋಡಿ-
‘ಇಂಗ್ಲೀಷ್ ಬರೋದೆ ಇಲ್‌ವೇನ್ರೀ. ಇನ್ನೂ ಯಾವ್ ಕಾಲ್ದಲಿದ್ದೀರಿ. ಅದೂ ರೈಲು ಜನಗಳ ಜೊತೆ ರೈಲು ಪ್ರಯಾಣ ಮಾಡಲು ಬಂದಿದ್ದೀಯಲ್ಲಪ್ಪಾ. ಇಂಗ್ಲೀಷ್‌ನವರು ಕೊಟ್ಟು ಹೋದ ರೈಲಿನಲ್ಲಿ ಕೂತು ಪಯಣ ಮಾಡೋದಿಕ್ಕೆ ಒಂದಿಷ್ಟಾದ್ರೂ ಇಂಗ್ಲಿಷ್ ಇರಬೇಕು. ಹೋಗ್ಲಿ ಹಿಂದಿಯಾದ್ರೂ ಬರ್‍ತದಾ?’
ನಮ್ಮಿಬ್ಬರ ಸುತ್ತ ರೈಲು ಜನ ತರಾವರಿಯಾಗಿ ಅವರಿಚ್ಛೆಯಲ್ಲಿ ಇದ್ದರು. ಒಳಗಿನ ಜನ ಓಡಾಡುತ್ತಿದ್ದರು. ಮಲಗುವವರು ಮಲಗುತ್ತಿದ್ದರು. ಪೆಡಂಭೂತ ಗರಗಸದ ಗೊರಕೆಯನ್ನು ಆ ಪುಟ್ಟ ಹೆಂಗಸಿನ ಮೈ ಮೇಲೆ ಕೊರೆಯುತ್ತಿದ್ದ. ಇಂಗ್ಲಿಷ್ ಮಾತನಾಡುವ ಹರಟೆಕೋರರು ಕಾರ್ಡ್ಸ್ ಆಡುತ್ತ ನಗಾಡುತ್ತಿದ್ದರು. ನಮ್ಮಿಬ್ಬರ ಮಾತು ಸಾಗಿತ್ತು-
‘ಸದ್ಯ ಹಿಂದಿಯಾದ್ರೂ ಬರ್‍ತದಲ್ಲಾ’-ಬಂದ್ರು ಈಗ ನನ್ನೊಡನೆ ಮಾತನಾಡಲು ಮನಸ್ಸಿಲ್ಲ ಎಂಬಂತೆ ಕಿಟಕಿಯ ಕಡೆ ನೋಡಿ ಆಕಳಿಸಿದ. ನಾನು ಬಿಡದೆ-
‘ನಮುದು ದಮಕಿ ಕ್ಯಾಸ್ಟ್ ಅಲ್ಲವಾ, ಅದ್ಕೇ ನಮಗೆ ಇಂಗ್ಲೀಸು ಹಿಂದಿ ಕನ್ನಡ ಇವೆಲ್ಲ ಅಷ್ಟಾಗಿ ಸರಿಯಾಗಿ ಬರೊಲ್ಲಾ ಸಾರ್. ಏನೋ ಆ ದೇವರ ದಯದಿಂದ ಸ್ವಲ್ಪ ಕನ್ನಡ ಮಾತು ಕಲ್ತುಬಿಟ್ಟಿವಿನಿ. ನಮ್ಮ ತಾಯಿ ಭಾಷೆ ದಮಕಿ ಅಂತಾ ಸಾರ್. ದಮಕಿ ಬಾಸೆಲಿ ಏನ್ ಬೇಕಾದ್ರು ಕೇಳಿ ಜಗತ್ತೆಲಿ ಏನಿರ್‍ತದೋ ಅದೆಲ್ಲನು ಅದ್ರೆಲಿ ಸರಾಗವಾಗಿ ಎಲ್ಲು ನಿಲ್ಲಿಸ್ದಂಗೆ ಹೇಳ್ತಿನಿ ಮಾತಾಡ್ತಿನಿ. ನಮ್ ದಮಕಿ ಬಾಸೆನ ಈಗ ಮಾತಾಡೋರೆ ಇಲ್ಲಾ ಸಾರ್.’
ಈಗಾತ ನನ್ನೆಡೆಗೆ ಸಿಟ್ಟಿನ ಉಪೇಕ್ಷೆಯನ್ನು ಹರಿಯ ಬಿಡುತ್ತಿದ್ದ. ನನ್ನ ಭಾಷೆಯ ತಂಟೆಗೆ ಏನು ಮಾಡಿದರೂ ಬರದೇ ಹೋದ. ಬಂದಿದ್ದರೆ ನನ್ನ ಮನಸೋ ಇಚ್ಛೆಯಾಗಿ ಎಂತೆಂತದೋ ಅಪಸ್ವರದ ಧ್ವನಿ ಪದ ಸಂಕೇತ ಉಚ್ಚಾರಗಳನ್ನೆಲ್ಲ ಸೃಷ್ಟಿಸಿ ಇದಾವುದೋ ಒಂದು ಪೈಶಾಚಿಕ ಭಾಷೆಯೇ ಇರಬೇಕೆಂಬಂತೆ ನಂಬಿಸಿ ಅವನ ಕೆಡಿಸಿ ಅಂತಹ ಉಚ್ಚಾರಣೆಗಳನ್ನೇ ಅತಿ ಕೆಟ್ಟ ಬೈಗಳ ಎಂದು ರೂಪಿಸಿಕೊಂಡು ಒಟ್ಟು ಈ ಬಡ್ಡಿ ದುಡ್ಡಿನ ಇಕ್ಕಳದಲ್ಲಿ ಸಿಲುಕಿದ ನನ್ನೆಲ್ಲ ಸಿಟ್ಟನ್ನು ಕಕ್ಕಿಕೊಂಡು ತೀರಿಸಿಕೊಳ್ಳುವಾ ಎಂದು ಲೆಕ್ಕ ಹಾಕಿದ್ದೆ. ನನ್ನ ದುರಾದೃಷ್ಟಕ್ಕೆ ಅವನು ಮಲಗಲು ತೊಡಗಿದ.

ಎರಡನೆ ಸಾಲು

ಆಕ್ರೋಶದಿಂದ ಕತ್ತಲನ್ನು ಸೀಳುವಂತೆ ರೈಲು ಕೂಗುತ್ತ ವೇಗವಾಗಿ ನುಗ್ಗುತ್ತಿತ್ತು. ಅದರೊಳಗಿನ ಲೋಕ ಅರೆ ಎಚ್ಚರ ಅರೆನಿದ್ದೆ ಅರೆ ಅರಿವುಗಳಲ್ಲಿ ಮುಳುಗಿತ್ತು. ನನ್ನೆದುರಿನ ಪೆಡಂಭೂತ ಈಗ ಗಾಢವಾದ ನಿದ್ದೆಯಲ್ಲಿ ಮುಳುಗಿದ್ದ. ಅವನ ದೇಹ ಅಲುಗಾಟದಲ್ಲಿ ತೂಗಾಡುತ್ತಿತ್ತು. ಚೆಲುವ ಕನ್ನಡಿಗ ತನ್ನ ಆಡಿನ ಕಣ್ಣುಗಳಲ್ಲಿ ಅರೆತೆರೆದಂತೆ ನಿದ್ದೆ ಮಾಡುತ್ತಿದ್ದ. ನನ್ನ ಪಕ್ಕದವನು ವಿಪರೀತ ಕುಡಿದಿದ್ದರಿಂದ ವಾಸನೆ ಸುತ್ತಿಕೊಳ್ಳುತ್ತಿತ್ತು. ಹುಡುಗಿಯರಿಬ್ಬರೂ ಶಾಲು ಹೊದ್ದು ನಿದ್ದೆಯಲ್ಲೂ ನಗುಮೊಗದಲ್ಲಿ ಯಾವುದೋ ಹೂ ತೋಟದಲ್ಲಿ ವಿಹರಿಸುತ್ತಿರುವಂತೆ ಕಾಣುತ್ತಿದ್ದರು. ನನಗೆ ನಿದ್ದೆ ಬಂದಿರಲಿಲ್ಲ. ಪೆಡಂಭೂತ ಆಗ ಕೈಯಲ್ಲಿ ಹಿಡಿದಿದ್ದ ಚಾಕನ್ನು ನಿದ್ದೆಯಲ್ಲೂ ಹಾಗೇ ಹಿಡಿದು ಗೊರಕೆ ಹೊಡೆಯುತ್ತಿದ್ದ. ನನ್ನಂತಹ ಒಬ್ಬ ಯಃಕಶ್ಚಿತ್ ಮನುಷ್ಯನನ್ನು ಕಂಡು ಅವನಿಗೆ ಅಂತಹ ಗಾತ್ರದವನಿಗೂ ಯಾಕೆ ಭಯ ಆವರಿಸಿತು ಎಂದು ಅರ್ಥವಾಗಲಿಲ್ಲ. ಯಾವುದೋ ಸೇತುವೆಯ ಮೇಲೆ ರೈಲು ಹೋಗುತ್ತಿತ್ತೋ ಅಥವಾ ಯಾವ ಸುರಂಗ ನುಗ್ಗಿ ಯಾವ ಭೋರ್ಗರೆವ ಸದ್ದನ್ನು ಕಕ್ಕುತ್ತಿತ್ತೋ ಅತ್ತ ಕಡೆಗೆ ನನ್ನ ಗಮನ ಹೋಗಲಿಲ್ಲ. ಮನಸ್ಸಿನ ಒಳಗೆ ಏನೋ ನುಲಿಯತೊಡಗಿತು. ತಿಮ್ಮಯ್ಯ ಸಿಗದೆ ಹೋದರೆ ಅಥವಾ ಸಿಕ್ಕಿದರೂ ಹಣ ಕೊಡದಿದ್ದರೆ ಹೇಗೆ ಹಿಂತಿರುಗುವುದು ಎಂದು ಗಾಬರಿಯಾಯಿತು. ನನ್ನ ಹೆಂಡತಿ ಮಕ್ಕಳು ಈ ಅವೇಳೆಯಲ್ಲಿ ನಿದ್ದೆ ಮಾಡುತ್ತ ಕನಸು ಕಾಣುತ್ತಿರಬಹುದೋ ಏನೋ ಎಂದುಕೊಂಡೆ. ರೈಲು ಸೃಷ್ಟಿಸುವ ವಿಪರೀತ ಶಬ್ದ ಮತ್ತಷ್ಟು ತಲೆನೋವು ತರಿಸುತ್ತಿತ್ತು. ಪೆಡಂಭೂತನ ಪತ್ನಿ ಆಗಾಗ ಎಚ್ಚರಗೊಂಡು ಸುತ್ತ ಒಮ್ಮೆ ಗಮನಿಸಿ ಕಣ್ಣು ಮುಚ್ಚುತ್ತಿದ್ದಳು. ಚಳಿಗಾಳಿ ಒಳಕ್ಕೆ ನುಗ್ಗುತ್ತಿತ್ತು. ಮಧ್ಯ ರಾತ್ರಿ ಮೀರುತ್ತಿತ್ತು. ಭಾಗಶಃ ಎಲ್ಲರೂ ಮಲಗಿರುವಂತೆ ಕಾಣುತ್ತಿತ್ತು. ಇನ್ನೊಂದು ಬರ್ತಿನಲ್ಲಿ ಮಲಗಿದ್ದ ನಡುವಯಸ್ಕ ಹೆಂಗಸಿನ ಸೀರೆ ಮಂಡಿ ಮೇಲೆ ಹೋಗಿ ಅವಳ ತೊಡೆ ಅಸ್ಪಷ್ಟ ಬೆಳಕಿನಲ್ಲಿ ಕಾಣದಿದ್ದರೂ ಕಂಡಂತೆ ಭಾಸವಾಗುತ್ತಿತ್ತು. ಯಾವನೋ ನಿದ್ದೆಯಿಲ್ಲದ ಮುದುಕ ಹಿಂದಿನ ಸೀಟಿನಲ್ಲಿ ಪದೇ ಪದೇ ಕೆಮ್ಮುವುದು ಕಿರಿಕಿರಿ ತರುತ್ತಿತ್ತು. ಇದ್ದಕ್ಕಿದ್ದಂತೆ ಈ ರೈಲು ಹಳಿ ತಪ್ಪಿದರೆ ಎಂತಹ ಸಾವುನೋವು ಒಂದೇ ಕ್ಷಣದಲ್ಲಿ ಉಂಟಾಗಬಹುದೆಂದು ಊಹಿಸಿಯೇ ಅಂತಹ ಕಲ್ಪನೆಗಳೇ ಅಪರಾಧ ಎಂದು ಸುಮ್ಮನಾಗಿಬಿಟ್ಟೆ. ನಿದ್ದೆಗೆ ಬರುವೆಯಾ ಎಂದು ರೈಲು ಸವಾಲು ಹಾಕಿ ಕರೆದು ಸಿಳ್ಳು ಊದಿದಂತಾಗುತ್ತಿತ್ತು. ಅಹೋರಾತ್ರಿಯಲ್ಲಿ ಯಾವುದೋ ಊರು ಯಾವುದೋ ಪೇಟೆ ಎಂತದೋ ದೂರ ದಿಬ್ಬದ ಒಂದು ಹಳ್ಳಿ ಇನ್ನೆಲ್ಲಿಯದೋ ಕಣಿವೆ ದಾರಿಯ ಪ್ರಪಾತದ ಒಳಗಿರುವಂತಹ ಕೇರಿಯ ಮಿಣುಕು ದೀಪಗಳು ಆ ಕತ್ತಲಲ್ಲಿ ಯಾರ್‍ಯಾರಿಗಾಗಿಯೋ ಯಾರೋ ಹಚ್ಚಿಟ್ಟು ಯಾಕಾಗಿಯೋ ಯಾರನ್ನೋ ಹಗಲೂ ರಾತ್ರಿ ಕಾಯುತ್ತ ಕುಳಿತಿರುವಂತೆ ಕಿಟಕಿಯ ಒಳಕ್ಕೆ ಒಂದು ಕ್ಷಣ ಬಂದು ಕಣ್ಣಿಗೆ ಮುಟ್ಟಿ ಮಾಯವಾಗುತ್ತಿದ್ದವು. ಯಾವುದೋ ಒಂದು ನಗರ ಅದರ ಹರಕು ಮುರುಕು ಬೀದಿ ದೀಪಗಳಲ್ಲಿ ಕಲ್ಲು ನೀರು ಕರಗುವಂತಹ ವೇಳೆಯಲ್ಲಿ ಈ ರೈಲಿನೊಳಗಿನ ನನ್ನ ಕಣ್ಣುಗಳಿಗೆ ಹತ್ತಿಕೊಂಡು ಉರಿಯುತ್ತಿರುವ ನಗರದಂತೆ ಕಂಡು ಬೆಚ್ಚಿದೆ.
ಕೆಲವೇ ಕ್ಷಣಗಳಲ್ಲಿ ಬೆಂಕಿಯ ಆ ನಗರವನ್ನು ರೈಲು ದಾಟಿಕೊಂಡು ಬಂದಿತ್ತು. ಆಕಾಶದ ನಕ್ಷತ್ರಗಳು ಇಣುಕಿ ನೋಡುತ್ತ ಕರಗುತ್ತಿದ್ದವು. ಯಾವುದೋ ಸ್ಟೇಷನ್‌ನ ಯಾವುದೋ ಬೆಳಕು ಕಣ್ಣನ್ನು ಕುಕ್ಕುತ್ತಿತ್ತು. ಚಾಯ್ ಚಾಯ್ ಎಂದು ಅಂತಹ ವೇಳೆಯಲ್ಲೂ ಮಾರಾಟ ಮಾಡುವವರು. ಪ್ಲಾಟ್‌ಫಾರ್ಮ್ ಉದ್ದಕ್ಕೂ ಓಡಾಡುತ್ತ ನಿದ್ದೆಯಿಲ್ಲದೆ ಜರ್ಜರಿತವಾದ ಧ್ವನಿಪೆಟ್ಟಿಗೆಯ ವಿಚಿತ್ರ ಸ್ವರದಲ್ಲಿ ಕೂಗುತ್ತಿದ್ದರು. ಯಾರೋ ಹೇಸಿಗೆ ಮಾಡಲು ಹೋದಂತೆ ಬಂದಂತೆ ಮತ್ಯಾರೋ ಎಲ್ಲೊ ಯಾವುದೋ ಊರಿನಲ್ಲಿ ಕೆಳಗಿಳಿದಂತೆ ಅಥವಾ ಜಿಗಿದಂತೆ ಇಲ್ಲವೇ ಬಿದ್ದು ಹೋದಂತೆ ಭಾಸವಾಗುತ್ತಿತ್ತು. ಬರುವ ನಿದ್ದೆಯನ್ನು ವಿಷಾದದಿಂದ ತಳ್ಳಿ ಬಿಟ್ಟಿದ್ದೆ. ಹತ್ತು ಸಾವಿರ ರೂಪಾಯಿಗಳನ್ನು ಬಡ್ಡಿಯವರಿಂದ ಕೊಡಿಸುವಾಗ ನನಗೆ ಏನೂ ಅನಿಸಿರಲಿಲ್ಲ. ಅದಕ್ಕೂ ನನಗೂ ಸಂಬಂಧ ಕೇವಲ ಆಕಸ್ಮಿಕ ಅಥವಾ ಏನೂ ಇಲ್ಲವೇ ಇಲ್ಲ ಎಂದುಕೊಂಡಿದ್ದೆ. ಗೆಳೆಯ ತಿಮ್ಮಯ್ಯ ಆ ಹಣದಲ್ಲಿ ನನಗೆ ಒಂದು ಪೈಸೆಯನ್ನೂ ಕೊಟ್ಟಿರಲಿಲ್ಲ. ನನ್ನ ಜೀವಮಾನದಲ್ಲಿ ಒಂದೇ ಸಂಪಾದನೆಯಲ್ಲಿ ಒಂದೇ ಬಾರಿಗೆ ಅಷ್ಟು ದುಡ್ಡನ್ನು ನೋಡುವುದು ಸಾಧ್ಯವೇ ಇರಲಿಲ್ಲ. ನಾನೆಂತಹ ಮೂರ್ಖ ಎಂದರೆ ದುಡ್ಡು ಕೊಡುವವನು ಒಬ್ಬ ಅದನ್ನು ತೀರಿಸುವವನು ಇನ್ನೊಬ್ಬ. ಇದರ ಮಧ್ಯೆ ನನ್ನದೇನೂ ಇಲ್ಲ. ಏನೋ ವಿಶ್ವಾಸಕ್ಕೆ ಇವನಿಗೆ ಸಾಲ ಕೊಡಿ ಎಂದಷ್ಟೇ ನನ್ನ ಜವಾಬ್ದಾರಿ ಎಂದು ಭಾವಿಸಿದೆ. ಈ ರೈಲು ಜನಕ್ಕೆ ನನ್ನ ಸಮಸ್ಯೆ ಅರ್ಥವಾಗಿದ್ದರೆ ಮತ್ತಷ್ಟು ನನ್ನನ್ನು ಗೇಲಿಗಣ್ಣಿನಿಂದ ನೋಡುತ್ತಿದ್ದರೇನೋ.

ಎರಡು ಮೂರು ಬಾರಿ ಬಂದ ತೂಕಡಿಕೆಯನ್ನು ಹಿಂದಕ್ಕೆ ತಳ್ಳಿದೆ. ಪೆಡಂಭೂತನ ಹೆಂಡತಿ ಆ ಕತ್ತಲೆಯಲ್ಲಿ ಎದ್ದು ಕುಳಿತಳು. ಸೀರೆಯನ್ನು ಸರಿ ಮಾಡಿಕೊಂಡು ಮೈತುಂಬ ಸೆರಗು ಸರಿ ಮಾಡಿಕೊಳ್ಳುತ್ತಿದ್ದಳು. ಈಗ ನಾನೇನಾದರೂ ನಿದ್ದೆ ಇಲ್ಲದಂತೆ ಎಚ್ಚರವಾಗಿರುವುದನ್ನು ಇವಳ ಪತಿರಾಯ ಎದ್ದು ನೋಡಿದರೆ ಇವರಿಬ್ಬರೂ ಏನೋ ಸರಸದ ಮಾತುಗಳಲ್ಲಿ ಮೈಥುನದ ಅಮಲುಗಳಲ್ಲಿ ಮುಳುಗೇಳುತ್ತಿದ್ದಾರೆಂದೇ ಭಾವಿಸಿ ಕೈಯಲ್ಲಿ ಹಿಡಿದಿರುವ ಚಾಕುವಿನಿಂದಲೇ ತಿವಿದು ಹಾಕಿಯಾನು ಎಂದು ಕಣ್ಣು ಮುಚ್ಚಿಕೊಂಡೆ. ಆದರೂ ಕಣ್ಣ ರೆಪ್ಪೆಗಳು ಒಂದಕ್ಕೊಂದು ಅಂಟಿಕೊಳ್ಳದೆ ಮೆಲ್ಲಗೆ ಸ್ವಲ್ಪವೇ ತೆರೆದುಕೊಂಡು ಯಾಕೋ ಆಕೆಯ ಕಡೆಗೇ ನೆಟ್ಟವು.
ಸುಮಾರು ಹೊತ್ತು ಹಾಗೇ ಎದ್ದು ಕೂತಿದ್ದವಳು ಗಂಡನ ಮೈಯನ್ನೊಮ್ಮೆ ಮೆಲ್ಲಗೆ ತಡವಿದಳು. ಆ ಮಹಾಶಯನಿಗೆ ಎಚ್ಚರವೇ ಇರಲಿಲ್ಲ. ರೈಲು ಅದರ ಪಾಡಿಗೆ ಅದು ಕರ್ಕಶವಾಗಿ ಕೂಗುತ್ತಿತ್ತು. ಅದು ಯಾರನ್ನು ಯಾವ ಹೊತ್ತಿನಲ್ಲಿ ಯಾವ ವರಸೆಯಲ್ಲಿ ಯಾರ್‍ಯಾರನ್ನು ಕರೆದುಕೊಳ್ಳುತ್ತದೋ ನನಗೊಂದೂ ಅರಿವಾಗದ ಮಂದ ಮಂಪರಿನಲ್ಲಿ ತಾನೆಲ್ಲೊ ಯಾವುದೋ ಲೋಕಕ್ಕೆ ಸತ್ತು ಕೇವಲ ಜೀವ ಮಾತ್ರ ಈ ರೈಲಿನ ಮೂಲಕ ಹೋಗುತ್ತಿದೆ ಎನಿಸಿ ಒಂಥರಾ ಸಂಕಟ ಹೊಂಡತೊಡಗಿತು. ನನ್ನ ಎರಡೂ ಹೆಣ್ಣು ಮಕ್ಕಳು ಪದೇ ಪದೇ ಕಾಡತೊಡಗಿದವು. ಎದ್ದು ಕುಳಿತಿದ್ದ ಈ ಕೋಮಲ ಹೆಂಗಸು ಗಂಡನ ಕೈಲಿದ್ದ ಚಾಕುವನ್ನು ಮೆಲ್ಲಗೆ ಬಿಡಿಸಿಕೊಂಡಳು. ಅದು ಅವನ ಕೈಯಿಂದ ಮೆಲ್ಲಗೆ ಹೂವಿನಂತೆ ಕಳಚಿ ಅವಳ ಕೈಸೇರಿ ಆ ಮೇಲೆ ಅದು ಎಲ್ಲೋ ಅವಳ ಸೊಂಟದ ಮರೆಯಲ್ಲಿ ಅವಿತುಕೊಂಡಿತು. ನೋಡ ನೋಡುತ್ತಿದ್ದಂತೆಯೇ ಅವಳು ಅಲ್ಲಿಂದ ಎದ್ದು ಗಂಡನಿಗೆ ಗೊತ್ತಾಗದಂತೆ ಹುಷಾರಿನಿಂದ ಜಾರಿದಂತೆ ಹೊರಳಿ ಆ ಕಡೆ ನಡೆದೇಬಿಟ್ಟಳು. ನನಗೆ ಕುತೂಹಲ ತಡೆಯಲಾಗಲಿಲ್ಲ. ಆಕೆ ಎದ್ದು ಕುಳಿತ ಪರಿ ಹೊರಟ ರೀತಿ ಮತ್ತೆ ಮತ್ತೆ ಹಿಂತಿರುಗಿ ನೋಡಿದ ತರ ಇವೆಲ್ಲ ಏನೋ ಒಂದು ನಿಗೂಢವನ್ನು ಒಳಗೊಂಡಿರುವಂತೆ ಕಂಡವು. ನಾನೂ ಎದ್ದು ಅವಳು ನಡೆದ ಕಡೆ ಬಂದೆ. ಜನ ಜನ ಕಾಲು ಕಾಲಿಗೂ ಜನ ರೈಲಿನ ತುಂಬ ಮಲಗಿದ್ದರು. ರೈಲಿನ ಸಪ್ಪಳ ಬಿಟ್ಟರೆ ಮನುಷ್ಯರ ಗದ್ದಲ ತಗ್ಗಿ ಹೋಗಿತ್ತು. ಅವಳು ಎದ್ದು ಗಂಡನನ್ನು ಅವಲೋಕಿಸಿದ ರೀತಿಯನ್ನು ಕಂಡೇ ನನಗೆ ಭಯವಾಗಿತ್ತು. ಎಲ್ಲಿ ಚಾಕುವಿನಿಂದ ಅವನ ದುಂಡು ಹೊಟ್ಟೆಯನ್ನು ಬಗೆದುಹಾಕುವಳೋ ಎಂಬ ಅನುಮಾನ ಬಂದಿತ್ತು. ಅದಾಗಿರಲಿಲ್ಲ. ಟಾಯ್ಲೆಟ್ ರೂಮಿನ ಕಡೆ ಆಕೆ ಹೋಗಬಹುದು ಎಂದು ನೋಡಿದೆ. ಹಿಂತಿರುಗಿ ನಾನು ಬಂದದ್ದನ್ನು ನೋಡಿ ಹಗುರವಾಗಿ ಒಮ್ಮೆ ನಗಾಡಿದಳು. ಅಲ್ಲೇ ಒಂದು ಮೂಲೆಯಲ್ಲಿ ನಿಂತಳು. ನನಗೆ ಮುಂದೇನು ಮಾಡಬೇಕೆಂದು ತೋಚಲಿಲ್ಲ. ಅವಳ ಕೈಯಲ್ಲಿ ಹೊಳೆವ ಹರಿತವಾದ ಚಾಕು ನನ್ನನ್ನೇ ನೋಡಿದಂತಿತ್ತು. ಅಪರಿಚಿತರನ್ನು ಹೀಗೆ ಎದುರಾಗುವುದು ಬಹಳ ಅಪಾಯ ಎಂದು ಅನುಮಾನ ಆಕೆಗೆ ಬರದಿರಲಿ ಎಂದು ಟಾಯ್ಲೆಟ್ ಕಡೆಗೆ ಬಂದೆ. ಆಕೆ ನಿರುದ್ವಿಗ್ನಳಾಗಿ ಮಂದಹಾಸದಲ್ಲಿರುವಂತೆ ಹೊರಗಿನ ಕತ್ತಲನ್ನೇ ನುಂಗುವಂತೆ ನೋಡುತ್ತಿದ್ದಳು. ಅವಳ ಮೈ ತುಂಬ ಬಂಗಾರವಿತ್ತು. ಅವಳ ರೇಶಿಮೆಯಂತಹ ನೀಳ ಕೂದಲು ಗಾಳಿಗೆ ರೊಯ್ಯನೆ ಹಾರಾಡುತ್ತಿತ್ತು. ಏನೋ ಮಾತನಾಡಿಸಲು ಬಾಯಿ ತೆಗೆದಂತೆ ಕಾಣುತ್ತಿತ್ತಾದರೂ ನೆಟ್ಟಗೆ ಟಾಯ್ಲೆಟ್ ಕ್ಯಾಬಿನ್ ಒಳಕ್ಕೆ ಹೊರಟು ಹೋದೆ. ಎಂತದೋ ಅಧೀರತೆ ಸುತ್ತಿಕೊಂಡಿತು. ಉಚ್ಚೆ ಹೊಯ್ದು ಹೊರಬಂದಂತೆ ನಾಟಕ ಮಾಡಿದೆ. ಆಕೆ ಆ ಬಾಗಿಲ ಬಳಿಯೇ ನಿಂತು ಕಠೋರ ವೇಗದ ರೈಲಿನ ಆರ್ಭಟವನ್ನು ಆನಂದಿಸುತ್ತಿರುವಂತೆ ಇಲ್ಲಾ ಆ ಆನಂದದ ನೆಪದಲ್ಲಿ ಕಣ್ಣಾಳದಿಂದ ಜಿನುಗುವ ದುಃಖದ ಛಾಯೆಯಂತೆ ಏನನ್ನೋ ಯಾರನ್ನೋ ಕಾಯುತ್ತಿರುವಂತೆ ಕರೆಯುತ್ತಿರುವಂತೆ ನೋಡುತ್ತಿರುವಂತೆ ನಿಂತೇ ಇದ್ದಳು. ಅವಳ ಸೆರಗು ಗಾಳಿಗೆ ಪಟಪಟಿಸುತ್ತಿತ್ತು. ಮೈಮೇಲೆ ಆಕೆಗೆ ಎಚ್ಚರವಿದ್ದಂತಿರಲಿಲ್ಲ. ಅವಳ ಮೃದುವಾದ ಎಳೆಯ ಮೊಲೆಗಳು ಏದುಸಿರಿಗೆ ಬೆದರುತ್ತಿರುವಂತೆ ಕಾಣುತ್ತಿದ್ದವು. ಅಂತಹ ಚೆಲುವಾದ ಪರಂಗಿಹಣ್ಣಿನ ಹೋಳಿನ ಬಣ್ಣದಂತಹ ಅವಳ ಹೊಟ್ಟೆ ಪುಕಪುಕಾ ಎಂದು ಉಸಿರಾಡುತ್ತಿತ್ತು. ಅವಳಿಗೆ ಅನುಮಾನ ಬರದಿರಲಿ ಎಂಬಂತೆ ತಾನೊಬ್ಬ ಅನಾಥ ರೋಗಿ ಆರಾಮವಿಲ್ಲ ಎಂಬಂತೆ ಕೆಮ್ಮುತ್ತಾ ಕುಂಟುತ್ತಾ ಅಲ್ಲೇ ಒಂದೆರಡು ನಿಮಿಷ ನಿಂತು ಅವಳನ್ನೇ ನೋಡಿದೆ. ಆಕೆ ಸುಮ್ಮನೆ ಅವಳ ಪಾಡಿಗೆ ಅವಳೇ ನಗಾಡಿಕೊಂಡಂತೆ ಅಥವಾ ಈ ನಗೆಸಾರಿಕೆಗಳ ಸಹವಾಸ ಬೇಡ ಎಂಬಂತೆ ಒಮ್ಮೆ ನಕ್ಕು ನನ್ನೆಡೆಗೆ ತಿರುಗಿ ನೋಡಿದಳು. ಅವಳ ವೇಷ ಭೂಷಣವನ್ನು ನೋಡಿದರೆ ಗುಜರಾತಿನ ಯಾವುದೋ ಶೇಠ್‌ಜೀ ಮನೆತನದವಳೆಂದು ತಿಳಿಯುತ್ತಿತ್ತು. ಕ್ಷಣ ಕ್ಷಣಕ್ಕೂ ನಗುತ್ತಿರುವಂತೆ ಇಲ್ಲಾ ಇಲ್ಲಾ ಅದು ಬಿಕ್ಕುತ್ತಿರುವಂತೆ ಅಥವಾ ಯಾವುದೋ ಹುಚ್ಚು ಸೆಳೆತದಲ್ಲಿ ಯಾರನ್ನೋ ನೋಡಿ ಪೆಚ್ಚಾಗಿ ನಗುತ್ತಿರುವಂತೆ ಇಲ್ಲವೇ ತಾನೊಂದು ದೊಡ್ಡ ಸುಖದ ಪರಿಸರದಲ್ಲಿ ಹಾರಾಡುತ್ತಿರುವೆನೆಂಬಂತೆ ಅರಿವಿಗೆಟುಕದ ಮರುಭಾವದಲ್ಲಿ ನಿಂತೇ ಇದ್ದಳು.

ಇಂತಹ ಅವೇಳೆಯಲ್ಲಿ ಅಪರಿಚಿತ ಹೆಂಗಸಿನ ಪಕ್ಕ ನಿಂತು ಮಾತಿಗೆಳೆಯುವುದು ಸರಿಯಿಲ್ಲವೆಂದು ಯಾರೋ ನನ್ನ ಮನಸ್ಸು ಜಗ್ಗಿದ್ದರಿಂದ ನಾನು ಕುಳಿತಿದ್ದಲ್ಲಿಗೇ ಹಿಂತಿರುಗತೊಡಗಿದ. ಆಕೆ ನನ್ನನ್ನೇ ನೋಡುತ್ತಿದ್ದಳು. ನಗುತ್ತಿದ್ದಳು. ಅಳುತ್ತಿದ್ದಳು ವ್ಯಂಗ್ಯವಾಗಿ ಸಿಟ್ಟಿನಿಂದ ಮುಖ ಕಿವುಚುತ್ತಿದ್ದಳು. ಹತಾಶೆಯಿಂದ ದೂರದ ಆಗಸದ ತಾರೆಯರ ಕೂಗಿಕೊಳ್ಳುವಂತೆ ಅವಳ ಕಣ್ಣುಗಳು ಪಟಪಟಿಸುತ್ತಿದ್ದವು.

ಎಂದೂ ಇಲ್ಲದಂತಹ ಉದ್ವೇಗ ನನ್ನೊಳಗೆ ಹುಟ್ಟಿ ಆಕೆಯನ್ನು ಮಾತನಾಡಿಸಿಯೇ ಬಿಡುವಾ ಎಂದು ಹಿಂದಿರುಗತೊಡಗಿದೆ. ಆಕೆ ಅರಿತುಕೊಂಡಂತೆ ಬರಬೇಡ ಬರಬೇಡಾ ಹೋಗು ಹೋಗೂ ಎಂಬಂತೆ ತಲೆ ಆಡಿಸುತ್ತಾ ಆಕ್ರೋಶದಿಂದ ರಭಸವಾಗಿ ಓಡುತ್ತಿದ್ದ ರೈಲು ಬೋಗಿಯ ಬಾಗಿಲ ತುದಿಯಲ್ಲಿ ನಿಂತಿದ್ದವಳು ದಡಕ್ಕೆಂದು ಒಂದೇ ಬಾರಿಗೆ ಆಚೆಗೆ ಜಿಗಿದು ಬಿಟ್ಟಳು. ನನಗೆ ನಿಲ್ಲಲೂ ಶಕ್ತಿ ಇಲ್ಲದಂತಾಗಿ ಗಂಟಲು ಒಣಗಿ ಮಾತು ಹೊರಡದೆ ಕೈಕಾಲು ನಡುಗಿ ತೂರಾಡುತ್ತ ಬಂದು ನನ್ನ ಜಾಗದಲ್ಲಿ ಕುಳಿತುಬಿಟ್ಟೆ.

ಆ ದಡೂತಿ ಮನುಷ್ಯ ಅವಳ ಗಂಡ ಹಾಗೇ ಗೊರಕೆಯಲ್ಲಿ ಮಲಗಿದ್ದ. ಅವನ ಕೈಯಲ್ಲಿ ಈಗ ಚಾಕು ಇರಲಿಲ್ಲ. ಹಾಗೆ ಹೊರಕ್ಕೆ ಜಿಗಿದು ಸಾವನ್ನು ಆಯ್ಕೆ ಮಾಡಿಕೊಳ್ಳಲು ಹೊರಟವಳ ಕೊನೆಯ ನಗು ಕೊನೆಯ ಅಳು ಕೊನೆ ನೋಟ ನನ್ನೊಳಗೆ ಭೂತಾಕಾರವಾಗಿ ತುಂಬಿಕೊಂಡವು. ನಿನ್ನ ಮಡದಿ ಹೊರಗೆ ಬಿದ್ದು ನಜ್ಜಿ ಬಜ್ಜಿಯಾದಳು. ಹೋಗಿ ನೋಡು ಹೋಗು ಎಂದು ಹೇಳಲು ಎಷ್ಟೇ ಪ್ರಯತ್ನಿಸಿದರೂ ಧೈರ್ಯ ಬರಲಿಲ್ಲ. ಒಂದು ವೇಳೆ ಹಾಗೆ ಹೇಳಿದ್ದರೂ ಇವನೆಲ್ಲೋ ಅವಳ ಮೈಮೇಲಿನ ಬಂಗಾರ ಕಿತ್ತುಕೊಳ್ಳಲು ಹೋಗಿ ಏನೋ ಯಡವಟ್ಟಾಗಿ ಆಕೆ ಹೊರಕ್ಕೆ ಜಾರಿ ಬಿದ್ದು ಪ್ರಾಣ ಕಳೆದುಕೊಂಡಿರಬೇಕೆಂದು ಆಮೇಲೆ ಕತೆ ಹುಟ್ಟಿಕೊಂಡು ನನ್ನನ್ನೂ ಜೈಲಿಗೆ ನೂಕಿದರೆ ಆಮೇಲೆ ನನ್ನ ಗತಿ ಏನಾಗಬೇಕು ಎಂದು ತೆಪ್ಪಗಾಗಿಬಿಟ್ಟೆ. ಏನೇ ಆಗಲಿ ಯಾರೂ ಕೂಡ ಸಾವಿಗೆ ಹೊರಟವರ ಅದರಲ್ಲೂ ಆತ್ಮಹತ್ಯೆಗೆ ನಿಂತವರ ಕೊನೆಯ ಆ ಸ್ಥಿತಿಯನ್ನು ಕಣ್ಣಿಂದ ನೋಡಬಾರದೆಂದು ಅನಿಸಿತು. ಬಡ್ಡಿ ಸಾಲದವರಿಗಿಂತಲೂ ಭೀಕರವಾಗಿ ಅವಳ ಕೊನೆಯ ನಗು ನನ್ನನ್ನು ಇರಿಯತೊಡಗಿತು. ಸಾಯುವ ಕೊನೆ ಗಳಿಗೆಯಲ್ಲಿ ಅವಳ ಪಾಲಿಗೆ ನಾನು ನಕ್ಕುಬಿಟ್ಟಿದ್ದಿದ್ದರೆ ಏನಾಗುತ್ತಿತ್ತು. ಅದರಲ್ಲೂ ಅಂತಹ ವೇಳೆಯಲ್ಲಿ ಗಂಡನ ಕೈಯಿಂದ ಚಾಕು ಬಿಡಿಸಿಕೊಂಡು ಬಂದು ಅದನ್ನಾಗೆ ಹಿಡಿದು ಸಾಯಲು ಯಾಕೆ ಇಚ್ಛಿಸಿದಳು. ಅಯ್ಯೋ ದೇವರೇ, ಆ ಚಾಕುವನ್ನು ಪೆಡಂಭೂತ ಯಾಕಾದರೂ ಹೊರಗೆ ತೆಗೆದು ಕೈಯಲ್ಲಿ ಇಟ್ಟುಕೊಂಡಿದ್ದನೋ ಗೊತ್ತಾಗಲಿಲ್ಲವಲ್ಲಾ. ಇನ್ನು ಬೆಳಿಗ್ಗೆ ಏನೇನು ಕತೆಯಾಗುತ್ತದೇ ಎಂದು ದಂಗಾಗಿ ಕುಳಿತೆ.

ರೈಲು ಅದರ ಪಾಡಿಗೆ ಅದು ಹೋಗುತ್ತಿತ್ತು. ಅದರೊಳಗಿನ ಜನ ಅವರ ಪಾಡಿಗೆ ಅವರು ಮಲಗಿದ್ದರು. ನನಗೆ ನನ್ನ ಪಾಡಿಗೆ ನಾನಿರಲು ಸಾಧ್ಯವಿರಲಿಲ್ಲ. ಅವಳನ್ನು ಕರೆದುಕೊಂಡು ಹೋಗಲು ಬಂದಿದ್ದ ಸಾವು ನನ್ನ ಪಕ್ಕವೇ ಸುಳಿದಾಡು ನಗಾಡಿ ಹೋದಂತೆನಿಸುತ್ತಿತ್ತು. ಮುಂಜಾವು ಹತ್ತಿರ ಹತ್ತಿರವಾಗುತ್ತಿದ್ದಂತೆ ನನ್ನ ಆತಂಕ ಹೆಚ್ಚುತ್ತಿತ್ತು. ಚೆಲುವ ಕನ್ನಡಿಗ ನಿದ್ರಾದೇವಿಯ ಬಂಧನದಿಂದ ಇನ್ನೂ ಬಿಡಿಸಿಕೊಂಡಿರಲಿಲ್ಲ. ಎಷ್ಟು ಬೇಗ ಕಾಲ ಜಾರುತ್ತಿದೆ ಎನಿಸಿತು. ಆಗಲೇ ಅನೇಕರು ಎದ್ದು ಟಾಯ್ಲೆಟ್ ಕಡೆಗೆ ದೌಡಾಯಿಸಿದರು. ನನಗೆ ಅಸಾಧ್ಯವಾದ ಬೇಸರ ಕಳವಳ ಆ ಮುಂಜಾವಿನಲ್ಲೇ ಹಿಡಿದುಕೊಂಡಿತ್ತು.

ನನ್ನೆದುರಿದ್ದ ಆತ ದಡಬಡನೆ ತನ್ನ ಹೆಂಡತಿ ಕುಳಿತಿದ್ದ ಕಡೆ ನೋಡಿ ಸುತ್ತಮುತ್ತ ತಿರುಗಿ ಕೈಯಲ್ಲಿಡಿದಿದ್ದ ಚಾಕೂ ಇಲ್ಲವಲ್ಲ ಎಂದು ಯೋಚಿಸಿದಂತೆ ಕಂಡು ಎದ್ದು, ಟಾಯ್ಲೆಟ್ ಕಡೆ ಹೋದ. ಹೆದರಿಕೆಯಿಂದ ನನ್ನ ಹೊಟ್ಟೆ ನುಲಿಯತೊಡಗಿತು. ಅವನಿಗೆ ಆಕೆ ಜಿಗಿದು ಬಿದ್ದು ಸತ್ತಳೆಂದು ನನ್ನಿಂದ ಹೇಳಲು ಸಾಧ್ಯವೇ ಇರಲಿಲ್ಲ. ನನಗೂ ಅದಕ್ಕೂ ಯಾವ ಸಂಬಂಧವೂ ಇರದಿದ್ದರೂ ಯಾರದೋ ಸಾವು ನನ್ನದೇ ಸಾವಿನಂತೆ ಆತಂಕದಂತೆ ನಾವೇ ಅದರಲ್ಲಿ ಬಂಧಿಯಾದಂತೆ ಯಾಕೆ ಪರಿತಪಿಸಬೇಕೆಂದು ಗೊತ್ತಾಗದೆ ಸುಮ್ಮನೆ ಕುಳಿತೆ. ಕಾಫಿ, ಟೀ, ಮಾರುವವರು ಪದೇಪದೇ ಬಂದು ಬಂದು ಹೋಗುತ್ತಿದ್ದರು. ಒಂದಾದ ಮೇಲೊಂದರಂತೆ ನಾನು ಟೀ ಹೀರುತ್ತ ಸಿಗರೇಟು ಸೇದುತ್ತ ಕಿಟಕಿಯ ಬಳಿ ಆಕೆ ಕುಳಿತಿದ್ದ ಜಾಗವನ್ನೇ ದಿಟ್ಟಿಸುತ್ತ ಮುಂದೇನಾಗುವುದೋ ಎಂದು ಕಾದೆ. ಚಲುವ ಕನ್ನಡಿಗ ಮೇಲೇಳುವ ಪ್ರಯತ್ನ ಮಾಡುತ್ತಿದ್ದ. ಏನಾದರಿರಲಿ, ಎದ್ದ ಕೂಡಲೆ ಅವರ ಜೊತೆ ವಿಶ್ವಾಸದಿಂದ ಮಾತನಾಡಿಸಬೇಕೆಂದುಕೊಂಡೆ. ರೈಲು ಮುಂಬಯಿಯ ಹತ್ತಿರ ಬಂದಿತ್ತು. ಆ ರಾತ್ರಿ ಅವರ ಜೊತೆ ನಾನೊಬ್ಬ ದಮಕಿ ಕ್ಯಾಸ್ಟಿನ ಮನುಷ್ಯ ಎಂದು ಹೇಳಿಕೊಳ್ಳಬಾರದಿತ್ತು. ಹಾಗೆಲ್ಲ ಸುಳ್ಳು ಹೇಳಿದ್ದೇ ಆಗ ಆತ ನನ್ನನ್ನು ಮಹಾ ಉಪೇಕ್ಷೆಯಿಂದ ಕಾಣುವಂತೆ ಮಾಡಿತ್ತು. ಬಹಳ ಲಘುವಾದ ಕೆಳದರ್ಜೆಯ ಈ ವ್ಯಕ್ತಿಯ ಜೊತೆ ತಾನು ಆಪ್ತವಾಗಿ ಸಹಪ್ರಯಾಣಿಕ ಎಂಬ ಭಾವನೆಯಲ್ಲಿ ಮಾತನಾಡಿಸಲು ಕಷ್ಟವಾಗುತ್ತದೆ ಎಂಬ ಭಾವನೆಯನ್ನು ಆ ರಾತ್ರಿಯೇ ತೋಡಿಕೊಂಡಿದ್ದ. ಅತ್ಯಂತ ಲಡ್ಡಾದ ನಿರುಪಯುಕ್ತವಾದ ಇಂಥವರ ಜೊತೆ ಹರಟೆಹೊಡೆಯುವುದು ತನ್ನ ಘನತೆಗೆ ಕುಂದಾಗುತ್ತದೆಂದು ಭಾವಿಸಿದಂತಿತ್ತು. ರೈಲು ನಿಧಾನವಾಗಿ ಚಲಿಸುತ್ತಿತ್ತು. ಆಗದು ಯಾವುದೋ ಸ್ಲಂ ಹಾಯ್ದು ಬರುತ್ತಿತ್ತು.

ಮುಂಜಾವು ಎಂದಿನಂತೆ ಬೆಳಗುತ್ತಿತ್ತು. ರೈಲು ಹಳಿಗಳ ಉದ್ದಕ್ಕೂ ಸಾವಿರಾರು ಜೋಪಡಿಗಳ ಜನ ಸಾಲುಸಾಲಾಗಿ ಕಕ್ಕಸ್ಸಿಗೆ ಕುಳಿತಿದ್ದರು. ಹಾಳಾದ ರೈಲು ಇಂತಹ ಜಾಗದಲ್ಲೇ ಬಹಳ ನಿಧಾನವಾಗಿ ಚಲಿಸುವುದಕ್ಕೂ ಆ ಸ್ಲಮ್ಮಿನ ವಾಸನೆಗೂ ಅಲ್ಲಿ ರೈಲು ಹಳಿಗಳ ಪಕ್ಕದಲ್ಲೇ ಕುಳಿತು ಹೇತುಕೊಳ್ಳುತ್ತಿರುವುದಕ್ಕೂ ಮತ್ತೂ ಮಿಗಿಲಾಗಿ ಬೆಳಗ್ಗೆ ಟಾಯ್ಲೆಟ್ ಕ್ಯಾಬಿನ್‌ನಲ್ಲಿ ಅನೇಕರು ಪಾಯಿಖಾನೆ ಮಾಡಿಕೊಂಡು ಗಬ್ಬೆಬ್ಬಿಸಿರುವುದಕ್ಕೂ ಇಡೀ ವಾತಾವರಣವೇ ಹೇಲುಮಯವಾಗಿಬಿಟ್ಟಿತ್ತು. ಅರ್ಧ ದಾರಿಯಲ್ಲೇ ಹಿಂದಿರುಗುವಂತಹ ಮನಸ್ಸು ನನ್ನೊಳಗೆ ಹೆಡೆಬಿಚ್ಚುತ್ತಿತ್ತು. ಹೊತ್ತಾರೆಯ ಹೊಂಗಿರಣಗಳು ಕಿಟಕಿಯಿಂದ ತೂರಿ ಬರುತ್ತಿದ್ದವು. ಪೂರ್ವಾಕಾಶದಲ್ಲಿ ಕೆಂಪು ಕಂದು ಹಳದಿ ಬಿಳಿ ಮಿಶ್ರಿತ ಮೋಡಗಳು ಬೇಗ ಬೇಗನೆ ವರ್ಣ ಕಳೆದುಕೊಳ್ಳುತ್ತಿದ್ದವು. ಆ ಪೆಡಂಭೂತ ಹಿಂದಿರುಗಿ ಬಂದು ಆಕೆ ಟಾಯ್ಲೆಟ್ ಒಳಗಿರಬಹುದೆಂದು ಭಾವಿಸಿ ಕೆಳಗೆ ಬಗ್ಗಿ ಲಗ್ಗೇಜೆಲ್ಲ ಸರಿಯಾಗಿದೆಯೇ ಎಂದು ನೋಡಿಕೊಂಡು ನನ್ನ ಕಡೆಗೆ ನೋಡಿ ಮೆಲ್ಲಗೆ ನಕ್ಕು ಏನನ್ನೋ ಲೆಕ್ಕ ಹಾಕುವವನಂತೆ ಆ ಕಡೆ ತಿರುಗಿದ. ಈ ಕ್ಷಣದಲ್ಲಿ ಇವನಿಗೆ ಅವನ ಹೆಂಡತಿ ಸಾವನ್ನು ಹೇಳಿದರೆ ಹೇಗಿರುತ್ತದೆಂದು ಊಹಿಸಿಕೊಂಡೆ. ಕೂತಲ್ಲಿ ಕೂರಲಾರದೆ ಅತ್ತಿತ್ತ ಬಂದು ಹುಡುಕಾಡುತ್ತಿದ್ದ. ಟಾಯ್ಲೆಟ್ ಕ್ಯಾಬಿನ್ನಿನ ಬಾಗಿಲು ಬಡಿದು ಎಷ್ಟು ಹೊತ್ತು ಒಳಗೇ ಇದ್ದೀ, ಹೊರಗೆ ಬಾ. ನಾನು ನಿನ್ನ ಗಂಡ ಕರೆಯುತ್ತಿರುವುದು ಎಂಬಂತೆ ಅವಳಿಗೆ ಸೂಚನೆ ಕೊಡುವ ಸಲುವಾಗಿ ಅವಳು ಒಳಗಿದ್ದಾಳೆಂದು ಭ್ರಮಿಸಿ ಕರೆಯುತ್ತಿದ್ದ. ಆ ಮುಂಜಾವಿನಲ್ಲೂ ಬೆವರಿದಂತಿದ್ದ. ಚಾಯ್‌ವಾಲಾಗಳ ಮೇಲೆ ಅನಗತ್ಯವಾಗಿ ರೇಗುತ್ತಿದ್ದ. ಬ್ಯಾಗುಗಳ ಜಿಪ್ಪು ಎಳೆದು ಏನೇನೋ ಹುಡುಕಾಡುತ್ತಿದ್ದ. ಅವನ ದೇಹ ಅವನ ಭಾರವನ್ನೇ ಹೊರಲಾರದೆ ಕಷ್ಟಪಡುತ್ತಿತ್ತು.

ರೈಲಿನ ಒಳಗಿನಿಂದ ನಾನು ಸೂರ್ಯೋದಯವನ್ನು ನೋಡಿ ಆಗಿತ್ತು. ಆ ಸ್ಲಂ ದಾರಿಯಲ್ಲೇ ಯಾಕೋ ರೈಲು ನಿಂತುಬಿಟ್ಟಿತು. ಚೆಲುವ ಕನ್ನಡಿಗ ಎದ್ದವನೇ ನನ್ನ ಮುಖ ನೋಡಲು, ಅದೂ ಡ್ರೈನೇಜ್ ಸೂಪರ್‌ವೈಸರ್ ಎಂದು ಹೇಳಿಕೊಂಡಿದ್ದ ನನ್ನ ಮೂತಿ ನೋಡಲು ಸುತರಾಂ ಮನಸ್ಸಿಲ್ಲ ಎಂಬಂತೆ ತನ್ನ ಬೊಗಸೆಕೈಗಳನ್ನು ನೋಡಿಕೊಂಡು ಕಣ್ಣು ಮುಚ್ಚಿದಂತೆ ಕೆಳಗಿಳಿದು ಬಂದು ಕಿಟಕಿಯ ಹೊರಗೆ ಯಾವುದಾದರೂ ಗಿಡ ಮರದ ದರ್ಶನ ಮಾಡುವಾ ಎಂದು ಕಣ್ಣುತೆರೆದ. ಅವನ ಅದೃಷ್ಟ ಅನೇಕರ ಅದೃಷ್ಟದಂತೆ ಸರಿ ಇರಲಿಲ್ಲ. ಕಿಟಕಿಯ ಮುಂಭಾಗದಲ್ಲೇ ವಿವಿಧ ವಯಸ್ಸಿನ ಗಂಡಸರು ಮುದುಕಿಯರು ಬಹಿರ್ದೆಸೆಗೆ ಕುಳಿತು ಇದೆಲ್ಲ ತಮಗೆ ಬಹಳ ಮಾಮೂಲು ಎಂಬಂತೆ ಹೇಲು ಹೊರಹೋಗಲು ಅನುವಾಗುವಂತೆ ವಿವಿಧ ಭಂಗಿಗಳಲ್ಲಿ ಕುಳಿತು ದೇಹವನ್ನು ಆಗಾಗ ಅತ್ತಿತ್ತ ತಿರುವುತ್ತ ಎತ್ತುತ್ತ ಕೂರುತ್ತ ಅಮೇಧ್ಯದ ಪರ್ವತವನ್ನೇ ಸೃಷ್ಟಿಸುವವರಂತೆ ಅಂತಹ ಕಾಯಕಕ್ಕಾಗಿಯೇ ಶತಶತಮಾನಗಳಿಂದ ತಾವಿಲ್ಲಿ ನಿರಂತರವಾಗಿ ಕ್ರಿಯಾಶೀಲವಾಗಿ ಕೂತಿರುವಂತೆ ಕಾಣುತ್ತಿದ್ದರು.

ಇಂತಹ ಸುಂದರ ದೃಶ್ಯಾವಳಿಗಳಲ್ಲೇ ಆ ಚೆಲುವ ಕನ್ನಡಿಗ ಅಲ್ಲಿ ಗಿಡಮರ ಕಾಣಬಹುದೆಂದು ಇಳಿದು ಕಿಟಕಿಯಲ್ಲಿ ಮುಖವಿಟ್ಟು ಕಣ್ಣರಳಿಸಿದ್ದ. ಅವನಿಗೆ ಈಗ ಏನೂ ಮಾಡುವಂತಿರಲಿಲ್ಲ. ಒಂದೇ ಏಟಿಗೆ ಹತ್ತಾರು ನೂರಾರು ಜನರ ಅಮೇಧ್ಯ ದರ್ಶನವಷ್ಟೇ ಅಲ್ಲದೇ ಗುಪ್ತಾಂಗಗಳ ನೋಟವೂ ಸಿಕ್ಕಿ ಆ ಬಗೆಯ ದರ್ಶನದಿಂದಲೇ ಮೂರ್ಛೆ ಹೋದವನಂತಾಗಿ, ಛೇ ಛೇ ವಾಟ್ ಎ ಡರ್ಟಿ ಕಂಟ್ರಿ ದಿಸ್ ಈಸ್? ರಿಯಲಿ ದಿಸ್ ಈಸ್ ಆನ್ ಹೆಲ್, ಥೂ ಥೂ ರಾಮಾ ರಾಮಾ ಎಂದು ನನ್ನೆಡೆ ನೋಡಿದ. ಗುಡಿಯ ನೋಡಿರಣ್ಣಾ ದೇವರ ಗುಡಿಯ ನೋಡಿರಣ್ಣಾ ಇಂತಹ ಪ್ರಸಂಗಗಳ ವೇಳೆ ಹಿಂದೆ ಹಾಡಿಕೊಳ್ಳುತ್ತಿದ್ದ ಹಾಡು ನನಗೆ ನೆನಪಾದರೂ ನಗು ಬರಲಿಲ್ಲ. ರೇಶಿಮೆಯ ಹಣ್ಣು ಹುಳದಂತಹ ಆ ಕೋಮಲ ಚೆಲುವೆ ಆ ರಾತ್ರಿ ಜಿಗಿದು ಬಿದ್ದದ್ದೇ ತಲೆ ತುಂಬ ಹಿಡಿದುಕೊಂಡಿತ್ತು.

ನಾನೆಲ್ಲೋ ನರಕಕ್ಕೆ ಹೋಗುತ್ತಿದ್ದೇನೆಂದು ಆಗಲೇ ಅನಿಸಿಬಿಟ್ಟಿತ್ತು. ಆ ಹುಡುಗಿಯರು ಆಗಲೇ ಮುಂಜಾವಿನ ಕ್ರಿಯಾವಿಧಿಗಳನ್ನು ಮುಗಿಸಿ ಹೊಳೆವ ಕಣ್ಣುಗಳಲ್ಲಿ ಹಸನಾಗಿ ಕಾಣುತ್ತಿದ್ದರು. ದಡೂತಿ ತನ್ನ ಹೆಂಡತಿ ಎಲ್ಲಿ ಹೋದಳೆಂದು ಅರಿಯದೆ ಕೇಳುತ್ತಿದ್ದ.ದುಗುಡದ ಅವನ ದೇಹ ರಕ್ತದೊತ್ತಡದಿಂದ ತತ್ತರಿಸುತ್ತಿದೆ ಎಂದು ಊಹಿಸಿಕೊಂಡೆ. ಅವನ ಮುಖದಲ್ಲಿ ಅಪಶಕುನದ ಅಲೆಗಳೇಳುತ್ತಿದ್ದವು. ತನಗೆ ಕೈಕೊಟ್ಟು ಯಾವನ ಜೊತೆ ಓಡಿಹೋದಳೋ ಎಂದು ಕುದಿಯುತ್ತ ಸಂಕಟಪಡುತ್ತಿದ್ದ. ಅವಳಿಗಾಗಿ ಎಷ್ಟು ಕಷ್ಟಪಟ್ಟು ಮದುವೆ ಮಾಡಿಕೊಂಡು ಬಂದಿದ್ದೆ ಗೊತ್ತಾ ಎಂದು ಹಲುಬುತ್ತಿದ್ದ. ಕಣ್ಣಂಚಲ್ಲಿ ವ್ಯಾಕುಲ ದುಃಖ ಅವಮಾನ ಹಾಗೂ ಕಿಚ್ಚುಗಳಲ್ಲಿ ಬೆರೆತ ಕಣ್ಣೀರು ಇಣುಕಿ ನೋಡುತ್ತಿತ್ತು. ನನ್ನ ಕಡೆ ಅನುಮಾನದಿಂದ ನೋಡುವುದನ್ನು ಮತ್ತೆ ಆರಂಭಿಸಿದ್ದ. ನನ್ನ ಚೆಲುವ ಕನ್ನಡಿಗ ಯಾವುದಕ್ಕೂ ಸಪೋರ್ಟಿಗಿರಲೆಂದು ಅವನ ಮುಂದೆ ನಿಯತ್ತಿನ ನಿನ್ನ ಹಿಂಬಾಲಕ ಎಂಬಂತೆ ನಡೆದಿರುವ ಘಟನೆಯ ಬಗ್ಗೆ ತನಗೆ ಏನೊಂದೂ ಗೊತ್ತಿಲ್ಲವೆಂಬಂತೆ ಅಯ್ಯೋ ಪಾಪ ಎಂದು ಕನಿಕರ ತೋರುತ್ತಿದ್ದ. ಕನ್ನಡಿಗನಿಗೆ ಆ ತಲೆ ಬಿಸಿಯೆಲ್ಲ ಬೇಕಾಗಿರಲಿಲ್ಲ. ಅಯ್ಯೋ ಬಿಡ್ರೀ, ಯಾವನೋ ಘರ್‌ವಾಲಿಗೆ ಬುಕ್ ಮಾಡಿರ್‍ತಾನೆ, ಕರ್‍ಕಂಡೋಗಿರ್‍ತಾನೆ. ಇಷ್ಟು ಹೊತ್ತಿಗಾಗಲೇ ಫಸ್ಟ್ ಗಿರಾಕಿಯ ಭೆಟ್ಟಿಯೂ ಆಗಿ ಕೆಲ್ಸ ಮುಗ್ದಿರ್‍ತದೆ. ಇವೆಲ್ಲ ರೈಲಲ್ಲಿ ಮಾಮೂಲು ಕಣ್ರೀ. ನಾನೊಬ್ಬ ಸೇಲ್ಸ್‌ಮನ್ ಆಗಿ ಇಂತಾವನ್ನೆಲ್ಲ ಎಷ್ಟೊಂದು ಕಂಡಿದ್ದೇನೆ ಗೊತ್ತಾ. ನನಗೆ ಎಲ್ಲೋ ಇವನೇ ಘರ್‌ವಾಲಿಯ ಏಜೆಂಟ್ ಇರಬೇಕೆಂದು ಅನಿಸ್ತಾ ಇತ್ತು. ಆದ್ರೆ ಅವಳೇ ಪಾಕ್ಡಾ ಇದ್ದಾಳೆ. ಇವನಿಗೆ ಟೋಪಿ ಹಾಕಿ ಹೋಗಿದ್ದಾಳೆಂದು ಹೇಳುತ್ತ ಪೆಡಂಭೂತನ ಕಡೆಗೊಮ್ಮೆ ನೋಡಿ, ಅಯ್ಯೋ ಪಾಪ ಪೂರ್ ಫೆಲೋ, ಎನ್ನುತ್ತಿದ್ದ. ಒಂದು ವೇಳೆ ಇಲ್ಲಿ ಜನ ಹೆಚ್ಚಿದ್ದಾರೆ ಎಂದು ಅಲ್ಲೆಲ್ಲಾದರೂ ಬೇರೆ ಬೋಗಿಯ ಟಾಯ್ಲೆಟ್‌ಗೆ ಹೋಗಿರಬಹುದೇ ಎಂದು ಎಲ್ಲ ಬೋಗಿಗಳನ್ನು ತಲಾಶ್ ಮಾಡಿ ಬಂದು ಉದ್ವೇಗದಿಂದ ಮನದೊಳಗೇ ಹುಡುಕಾಡುತ್ತಿದ್ದ.

ಆ ಸ್ಲಮ್ಮಿನಿಂದ ಮುಂದೆ ಬರುತ್ತಿದ್ದಂತೆಯೇ ಅಮೇಧ್ಯದ ನದಿಯೊಂದು ವಿಸ್ತಾರವಾಗಿ ಹರಿಯುತ್ತಾ ಗತನಾತವನ್ನು ಚೆಲ್ಲುತ್ತಾ ಎದುರಾಯ್ತು. ರೈಲುಜನ ಅದನ್ನೂ ಒಂದು ಜಲ ನದಿಯಂತೆ ನೋಡುತ್ತಿದ್ದರು. ನನಗೆ ಇಡೀ ರೈಲೇ ಒಂದು ನಿಗೂಢವಾಗಿ ರೈಲು ಜನರೇ ಒಂದು ದೊಡ್ಡ ನಾಟಕದ ಕಂಪನಿಯಂತೆ ಭಾಸವಾಗಿ ಕಕರುಮಕರು ಹಿಡಿಯಿತು. ಯಾವುದೋ ಒಂದು ನಿಷ್ಠುರವಾದ ಖಾಸಗೀ ಸಾವಿನಂತೆ ಆ ಹೆಂಗಸಿನ ಸಾವನ್ನು ನಾನು ನನ್ನೊಳಗೆ ಬಚ್ಚಿಟ್ಟುಕೊಂಡೇ ಎಲ್ಲವನ್ನೂ ನೋಡುತ್ತಿದ್ದೆ. ಅವಳು ಕದ್ದು ಓಡಿಹೋಗಿದ್ದಾಳೆಂದೇ ಎಲ್ಲರೂ ತೀರ್ಮಾನಿಸುತ್ತಿದ್ದರು. ಸದ್ಯ ಅವಳು ಸತ್ತಳು ಎಂಬ ಅಂತಿಮ ನಿಲುವಿಗೆ ಬರದೆ ಕೊನೆ ಪಕ್ಷ ಬದುಕಿ ದಾರಿ ತಪ್ಪಿ ಎಲ್ಲಿಗೋ ಹೋದಳೆಂದು ಅವರು ಜರಿದಾಡುತ್ತಿರುವುದೇ ಸದ್ಯಕ್ಕೆ ಹಿತವಾಗಿ ಕಂಡಿತು.

ನನಗೆ ತಿಮ್ಮಯ್ಯನ ಮೂರ್‍ನಾಲ್ಕು ವಿಳಾಸಗಳು ನೆನಪಾದವು. ಮುಂಬಯಿಗೆ ಬಂದಾಗಿತ್ತು. ರೈಲು ಇಳಿದು ನಡೆದಂತೆ ಏನೋ ಒಂದು ವಿಪತ್ತಿನಿಂದ ಬಿಡುಗಡೆ ಹೊಂದಿದ ಭಾವನೆಯಿಂದ ಮನಸ್ಸು ಹಗುರಾಗಿ ಮುಂದಿನ ಕೆಲಸಕಾರ್ಯಗಳು ರಭಸವಾಗಿ ನೆನಪಾಗುತ್ತಿದ್ದವು.

ಮೂರನೆ ಸಾಲು.

ಅಂತೂ ತಿಮ್ಮಯ್ಯನೊಬ್ಬ ಬೇತಾಳ ಎಂಬಂತೆ ನಾನು ಅದನ್ನು ಹಿಡಿಯಲು ಬಂದ ವಿಕ್ರಮ ರಾಜನಂತೆ ಆ ದೊಡ್ಡ ಮುಂಬೈ ಷಹರಿನಲ್ಲಿ ಎರಡು ಮೂರು ದಿನ ಎಲ್ಲೆಲ್ಲೋ ಇದ್ದು ಅಲೆದು ಹುಡುಕಾಡುವುದರಲ್ಲಿ ನನ್ನ ಅರ್ಧ ಆಯಸ್ಸಿನ ತಾಳ್ಮೆ ನೆಮ್ಮದಿಗಳೆಲ್ಲ ಸುಟ್ಟು ಹೋದಂತೆ ಅನಿಸಿದವು. ಎಲ್ಲಿ ಹೋದರೂ ಅವನನ್ನು ಪತ್ತೆ ಮಾಡುವುದೇ ಒಂದು ದೊಡ್ಡ ಜೀವನ ಮರಣದ ಸವಾಲಿನಂತೆ ಕಾಣತೊಡಗಿತು. ಬಾಂದ್ರಾ ಮುಲುಂದ್‌ಗಳಲ್ಲಿನ ಎಲ್ಲ ಸ್ಲಮ್ಮುಗಳಲ್ಲೆ ಅವನಿಗಾಗಿ ತಲಾಶ್ ಮಾಡಿ ಮಾಡಿ ಬೇಸತ್ತು ಹೋದೆ. ಅವನ ಮೂರು ವಿಳಾಸಗಳು ಹೆಚ್ಚು ಕಡಿಮೆ ಮುನ್ನೂರು ವಿಳಾಸದ ಅವನ ರಹಸ್ಯ ನೆಲೆಗಳನ್ನು ತೋರಿಸಿ ಅಲ್ಲೆಲ್ಲೂ ಅವನ ನೆರಳೂ ನನಗೆ ಸಿಗದಾಗಿತ್ತು. ನಾನು ಅವನ ಅಣ್ಣನೆಂದೂ ನಮ್ಮ ತಂದೆ ತಾಯಿಗಳಿಬ್ಬರೂ ವ್ಯಾಧಿಯಿಂದ ಒಂದೇ ದಿನದಲ್ಲಿ ಸತ್ತು ಹೋದರೆಂದೂ ಈಗ ನನಗೂ ನನ್ನ ತಂಗಿ ತಮ್ಮಂದಿರಿಗೂ ಈ ತಿಮ್ಮಯ್ಯನೇ ಆಶ್ರಯವಾಗಬೇಕಾಗಿದೆ ಎಂದೂ ತಿಥಿಗಾಗಿ ಅವನನ್ನು ಕರೆದೊಯ್ಯಲು ಬಂದಿರುವುದಾಗಿ ಒಂದೊಂದು ವಿಳಾಸದ ನೆಲೆಯಲ್ಲೂ ನಾನು ಪರಿಪರಿಯಾಗಿ ನನ್ನ ಕಷ್ಟಗಳನ್ನು ವಿವರಿಸಿದರೂ ಪ್ರಯೋಜನವಾಗಲಿಲ್ಲ. ತಿಮ್ಮಯ್ಯ ಇಲ್ಲಿ ಮುಂಬೈಗೆ ಬಂದು ಎಂತೆಂತದೋ ತರಲೆ ತಾಪತ್ರಯಗಳಲ್ಲಿ ಸಿಕ್ಕಿಬಿದ್ದು ದಾರಿ ತಪ್ಪಿದ್ದಾನೆಂದೂ ಹೋದ ಎಲ್ಲ ಜಾಗಗಳಲ್ಲೂ ನನಗೆ ಸುಳಿವು ದೊರೆಯುತ್ತಿತ್ತು. ಅವನಿಂದ ಹತ್ತು ಸಾವಿರವನ್ನು ಪಡೆಯುವ ಮಾತು ಆ ಕಡೆ ಬಿದ್ದಿರಲಿ, ಸದ್ಯ ಅವನು ಜೀವಂತವಾಗಿ ನನ್ನ ಕೈಗೆ ಸಿಕ್ಕಿ ಕನಿಷ್ಠ ಪಕ್ಷ ಈ ಕಡೆಯಿಂದ ಊರಿಗೆ ಹಿಂತಿರುಗಿ ಹೋಗಲು ರೈಲು ಚಾರ್ಜನ್ನಾದರೂ ಗಿಟ್ಟಿಸಿಕೊಂಡು ಹೋಗುವಾ ಎಂದರೆ ಎಲ್ಲೂ ಅವನ ಸುಳಿವಿರಲಿಲ್ಲ. ಅನೇಕರು ನನ್ನನ್ನು ಅವನ ಅಣ್ಣ ಎಂದು ತಿಳಿದ ಕೂಡಲೆ ಕೆಂಡ ಕಾರಿ ಆ ದುಷ್ಮನ್ ಕಾ ಅಣ್ಣಾ ನೀನೂ ಎನ್ನುತ್ತಾ ಹಲ್ಲು ಮಸೆದು ಚಲ್ ಚಲ್ ಚಲ್‌ರೇ ಬದ್ಮಾಷ್ ಎಂಬಂತೆ ಬೈಸಿಕೊಂಡು ಅಲ್ಲಿಂದ ಬದುಕಿದೆಯಾ ಬಡ ಜೀವವೇ ಎಂದು ಬಂದಿದ್ದೆ.

ಮೂರೂ ದಿನವು ನನಗೆ ಊಟದ ನೆನಪಾಗಿರಲಿಲ್ಲ. ತಿಮ್ಮಯ್ಯ ಮುಂಬೈ ಷಹರದ ಮಾಫಿಯಾ ಜಗತ್ತಿನ ಭೂಗತ ಕಳ್ಳ ಸಾಗಾಣಿಕೆಯ ಅನೇಕ ಕೃತ್ಯಗಳಲ್ಲಿ ಸಹಭಾಗಿಯಾಗಿದ್ದ ಎಂಬುದು ಅಲ್ಲಿಗೆ ಹೋದ ಮೇಲೇ ತಿಳಿಯಿತು. ನನ್ನ ಹಳೆ ಕಾಲದ ಬೆಲ್‌ಬಾಟಂ ವೇಷ ಇವನೆಲ್ಲೊ ಬೆಂಗಳೂರಿನಿಂದ ಬಂದಿರಬಹುದಾದ ಗುಪ್ತದಳದ ಪೊಲೀಸೇ ಇರಬೇಕೆಂಬ ಅನುಮಾನವನ್ನು ಅದರಲ್ಲಿ ಬಿತ್ತಿದ್ದವು. ಅಂತಹ ಒಬ್ಬನ ಕಡೆಯಿಂದ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದೆ. ನೀನು ಯಾವ ಸಿ.ಐ.ಡಿ. ಹೇಳೋ ಬೋಸುಡಿ ಮಗನೇ ಎಂದು ಮುಖದ ಮೇಲೆಲ್ಲ ಅದಾವನೋ ಒಬ್ಬ ರೌಡಿ ಗುದ್ದಿ ಕೆಂಪೆಣ್ಣೆ ಹರಿಸಿ ನನ್ನ ನಡವೇ ಮುರಿದು ಹೋಗುವಂತೆ ಒದ್ದು ತುಳಿದು ಕುತ್ತಿಗೆಯ ಕುಳಿಯಲ್ಲಿರುವ ಮೃದುವಾದ ಮೂಳೆಗಳ ಸಹಿತ ಕೊರಳ ನರಗಳನ್ನು ಒತ್ತಿ ಬಿಗಿ ಹಿಡಿದು ಅರೇ ಬೋಲೋ ಮಗನೇ ಎಂದು ಹಿಂಡಿಬಿಟ್ಟಿದ್ದ. ಇದ್ದ ಒಂದಿಷ್ಟು ಧೈರ್ಯ ಶಕ್ತಿಗಳ ಜೊತೆ ಯುಕ್ತಿ ಬಳಸಿ ಅಯ್ಯೋ ಸ್ವಾಮೀ ನಾನಂತವನಲ್ಲಾ ನಾನು ಇವನ ಅಣ್ಣಾ. ತಿಥಿಗೆ ತಲೆ ಬೋಳಿಸಲು ಕರೆದುಕೊಂಡು ಹೋಗಲು ಬಂದಿರುವುದಾಗಿ ಕಣ್ಣೀರ್‌ಗರೆಯುತ್ತ ಬೇಡಿಕೊಂಡ ಮೇಲೆ ಬಿಟ್ಟು ಕಳಿಸಿದ್ದ. ಇನ್ನು ಮುಂದೆ ಅವನನ್ನು ಹುಡುಕಿ ಯಾವ ಲಾಭವೂ ಇಲ್ಲ. ಹಠ ಹಿಡಿದು ಹುಡುಕಿದರೆ ಅದಕ್ಕೆ ಬೆಲೆಯಾಗಿ ನನ್ನ ಪ್ರಾಣವನ್ನೇ ಕೊಡಬೇಕಾಗುತ್ತದೆ. ಇಲ್ಲಿಯ ನರಕಕ್ಕಿಂತ ಅಲ್ಲಿ ನಮ್ಮೂರಿನ ಬಡ್ಡಿ ವಸೂಲಿಗರ ಹಿಂಸೆಯೇ ಸಾವಿರ ಪಾಲು ಹಿತವಾಗಿದೆ ಎಂದುಕೊಂಡು ಹಿಂತಿರುಗಲು ದಾರಿ ಹುಡುಕಿದೆ.

ತಿಮ್ಮಯ್ಯ ಎಂತೆಂತದೋ ದಂಧೆಯಲ್ಲಿದ್ದ ಎಂಬುದಂತೂ ಖಾತ್ರಿಯಾಯಿತು. ಹುಡುಗಿಯರನ್ನು ನಮ್ಮೂರ ಕಡೆಗಳಿಂದ ಅಪಹರಿಸಿ ಇಲ್ಲಿಗೆ ರವಾನಿಸಿ ಮಾರಾಟದ ಏಜೆಂಟಾಗಿ ಕೆಲಸ ಮಾಡಿದ್ದಾನೆಂದು ತಿಳಿಯಿತು. ಅವನ ವಿಳಾಸ ಹುಡುಕುತ್ತ ಯಾವುದೋ ಒಂದು ವೇಶ್ಯಾವಾಟಿಕೆಯ ಕೇಂದ್ರಕ್ಕೆ ಹೋದರೆ ಅಲ್ಲಿ ನಮ್ಮೂರಿನ ಕಡೆಯ ಒಂದು ಹೆಂಗಸು ಬಂದು ಆತ ಇನ್ನೆಂದೂ ನಿನಗೆ ಸಿಗುವುದಿಲ್ಲವೆಂದೂ ಭೂಗತ ಜಗತ್ತಿನ ಹೊಡೆದಾಟಗಳಲ್ಲಿ ಆತ ಕೊಲೆಯಾಗಿ ಹೋದನೆಂದು ಹೇಳಿದಳು. ಅದರ ಹಿಂದೆಯೇ ಗಳಗಳನೇ ಕಣ್ಣೀರ್ ಗರೆಯುತ್ತಾ ನನ್ನನ್ನು ನಂಬಿಸಿ ಕರಕೊಂಡು ಬಂದು ಇಲ್ಲಿ ನನ್ನನ್ನು ಆ ಹಾಳಾದವನು ಮಾರಿಬಿಟ್ಟ. ಅದಕ್ಕೆ ದೇವರು ಅವನಿಗೆ ಸರಿಯಾದ ಶಿಕ್ಷೆಯನ್ನೇ ಕೊಟ್ಟ ಎಂದು ಅವನ ಸಾವನ್ನು ತೀರಾ ಅಸಡ್ಡೆಯಿಂದ ವಿವರಿಸಿ ದಯಮಾಡಿ ನೀನಾದರೂ ನನ್ನನ್ನು ಬಿಡಿಸಿ ಕರೆದುಕೊಂಡು ಹೋಗು. ಅಷ್ಟು ದಿನದಿಂದ ನಾನಿಲ್ಲಿ ದುಡಿದಿರುವುದರಿಂದ ಈಗ ಏನಿಲ್ಲ ಎಂದರೂ ಆರೇಳು ಸಾವಿರವನ್ನು ಘರ್‌ವಾಲಿಗೆ ಕೊಟ್ಟರೆ ನನ್ನನ್ನು ನಿನ್ನ ಜೊತೆ ಕಳಿಸಿಬಿಡುತ್ತಾರೆಂದೂ ಅದಕ್ಕಾಗಿ ವಿನಂತಿಸುತ್ತಿದ್ದಳು. ನನಗೆ ಬದುಕಿನ ಬಗ್ಗೆಯೇ ಹೇಸಿಗೆ ಅನಿಸತೊಡಗಿತು. ಊರಿಗೆ ಹಿಂತಿರುಗಿ ಆ ಬಡ್ಡಿಗರಿಗೆ ಸಬೂಬು ಹೇಳುವುದೂ ಅಸಾಧ್ಯವಾಗಿತ್ತು. ಯಾರೂ ದಿಕ್ಕಿಲ್ಲದ ಈ ಷಹರದಲ್ಲಿ ಅಷ್ಟು ಹಣವನ್ನು ನಾನೆಂದೂ ಹುಟ್ಟಿಸುವಂತಿರಲಿಲ್ಲ. ಅವಳಿಗೆ ಏನನ್ನೂ ಹೇಳದೆ ಅಲ್ಲಿಂದ ಜಾಗ ಖಾಲಿ ಮಾಡಿದ್ದೆ.

ಒಟ್ಟಿನಲ್ಲಿ ತಿಮ್ಮಯ್ಯನ ಬಗ್ಗೆ ಅಸಾಧ್ಯವಾದ ಸಿಟ್ಟು ಬಂದರೂ ನನ್ನ ಕೈಗೆ ಈಗವನ ಮೂಳೆಗಳೂ ಸಿಗುವಂತಿರಲಿಲ್ಲ. ಅಂತೂ ನಾನೂ ಕೊನೆಗೆ ಅಲ್ಲಿದ್ದ ಕನ್ನಡಿಗರನ್ನು ಭೆಟ್ಟಿ ಮಾಡಿ ನನ್ನ ಪಡಪಾಟಲೆಲ್ಲವನ್ನು ಸವಿವರವಾಗಿ ವರ್ಣಿಸಿ ಹೇಗಾದರೂ ಮಾಡಿ ನಾನು ನನ್ನ ಊರು ತಲುಪುವ ವ್ಯವಸ್ಥೆ ಮಾಡಿ ಎಂದು ಬೇಡಿಕೊಂಡಿದ್ದೆ. ಹೇಗೋ ನನ್ನ ಅದೃಷ್ಟ ಚೆನ್ನಾಗಿತ್ತು. ಅವರ ಕರುಣೆ ಕೆಲಸ ಮಾಡಿತ್ತು. ಬಸ್ ಚಾರ್ಜಿಗೆ ಹಣ ಕೊಟ್ಟಿದ್ದೇ ತಡ ಬೆಂಗಳೂರಿನ ಬಸ್ಸು ಹತ್ತಿ ಬಂದು ಬಿಟ್ಟಿದ್ದೆ. ಅಸಾಧ್ಯವಾದ ದಣಿವು ಮೆಟ್ಟಿಕೊಂಡಿತ್ತು. ಮನೆಗೆ ಹೋಗಿ ಯಾವ ಮುಖ ತೋರಿಸಿ ಏನು ಹೇಳುವುದೆಂಬ ಚಿಂತೆಗಿಂತ ಹೇಗೆ ಆ ಸಾಲವನ್ನು ನಾನೇ ಈಗ ತೀರಿಸಬೇಕೆಂಬುದರ ಬಗೆ ಅಲೋಚಿಸುತ್ತಿದ್ದೆ.

ಮನೆಗೆ ಬಂದೆ. ಯಾವತ್ತೂ ಹೀಗೆ ಬರಿಗೈ ದಾಸಯ್ಯನಾಗಿ ಹಿಂತಿರುಗುವುದನ್ನು ಕಂಡಿದ್ದ ನನ್ನ ಹೆಂಡತಿ ಮಕ್ಕಳು ಮೌನಿಯಾಗಿ ಒಂದೆಡೆ ಯಾವುದೋ ಗಹನವಾದ ಚಿಂತನೆಯಲ್ಲಿ ಮುಳುಗಿರುವಂತೆ ಕಂಡರು. ತಿರಸ್ಕಾರದ ಕಣ್ಣುಗಳಲ್ಲೇ ನನ್ನ ಪತ್ನಿ ಕಾಲಾಂತರದ ತನ್ನ ಸೇಡೆಲ್ಲವನ್ನೂ ತೀರಿಸಿಕೊಳ್ಳುವಂತೆ ನೋಡುತ್ತಿದ್ದಳು. ಒಬ್ಬರಿಗೊಬ್ಬರು ಮಕ್ಕಳು ಜಡೆ ಹೆಣೆದುಕೊಂಡು ಅಪ್ಪನನ್ನು ಮಾತನಾಡಿಸಬಾರದು ಎಂಬಂತೆ ಎತ್ತ ಕಡೆಯೋ ನೋಡುತ್ತಿದ್ದರು. ಬಡ್ಡಿ ದುಡ್ಡಿನವರನ್ನು ಹೆದರಿಸುವುದರ ಜೊತೆಗೆ ಇವರನ್ನೂ ಹೇಗೆ ನಿಭಾಯಿಸುವುದೆಂದು ಬೇಸರಗೊಂಡೆ. ಆದದ್ದೆಲ್ಲ ಆಗಿಹೋಗಲಿ ಎಂದು ಮಾತು ತೆಗೆದೆ. ಇಡೀ ಮನೆ ಸ್ಮಶಾನದಂತಹ ಮೌನದಲ್ಲಿ ತುಂಬಿತ್ತು. ಯಾಕೆ ಯಾರೂ ಮಾತನಾಡುವುದಿಲ್ಲವೇ ಆ ದೇವರು ನಿಮಗೆ ಬಾಯಿ ಕೊಟ್ಟಿಲ್ಲವೇ ಅಲ್ಲಿಂದ ನಾನು ಬದುಕಿ ಬಂದಿರುವುದೇ ಹೆಚ್ಚು. ನಿಮಗಾರಿಗೂ ಮನುಷ್ಯತ್ವವೇ ಇಲ್ಲ, ನಿಮ್ಮೆಲ್ಲರನ್ನು ಕಟ್ಟಿಕೊಂಡು ನನಗೆ ಸಾಕಾಗಿ ಹೋಗಿದೆ ಎಂದು ರೇಗಾಡಿದೆ. ನನ್ನ ಯಾವ ಮಾತಿಗೂ ಅವರು ಸೊಪ್ಪು ಹಾಕಲಿಲ್ಲ., ಊಟ ಮಾಡು ಎನ್ನಲಿಲ್ಲ. ಭಾಗಶಃ ಅಡಿಗೆ ಮಾಡಲು ಏನೂ ಇರಲೂ ಇಲ್ಲವೇನೇ. ನಿನ್ನಂತಹ ಪರಮ ಪಾಷಂಡಿ ಯಮ ಭಯಂಕರ ದರಿದ್ರನ ಕೈಹಿಡಿದಿದ್ದಕ್ಕೆ ತನಗೆಂತಹ ಸುಖ ಸಿಕ್ಕಿತೆಂದು ಹೆಂಡತಿ ರೇಗಾಡುತ್ತಾ ಆ ಸಿಟ್ಟನ್ನು ನನ್ನ ಮೇಲೆ ಕಾರಿ ಏನೂ ಉಪಯೋಗವಿಲ್ಲೆಂದು ತಿಳಿದು ಮಕ್ಕಳಲ್ಲಿ ಏನೂ ತಪ್ಪಿಲ್ಲದಿದ್ದರೂ ಮಹಾಪರಾಧ ಕಂಡು ಹಿಡಿದವಳಂತೆ ಅವರಿಬ್ಬರಿಗೂ ಪೊರಕೆಯಿಂದ ಬಾರಿಸತೊಡಗಿಡಳು. ನನ್ನ ಪರಮ ಸಂಪತ್ತಾಗಿದ್ದ ಆ ಎರಡೂ ಹೆಣ್ಣು ಮಕ್ಕಳು ಓಡೋಡಿ ಬಂದು ಈಗ ಅಪ್ಪಾ ಕಾಪಾಡು ಎಂಬಂತೆ ಹಿಡಿದುಕೊಂಡಿದ್ದರು. ಈ ಮೂರೂ ಜನರು ನನ್ನನ್ನೊಬ್ಬ ರಣಹೇಡಿ ಮೂರ್ಖ ಸೋಂಬೇರಿ ಮುಠ್ಠಾಳ ಎಂದೇ ತಿಳಿದು ಮಂಗನನ್ನು ಆಡಿಸುವಂತೆ ಆಡಿಸುತ್ತಿದ್ದಾರೆಂದು ಸಿಟ್ಟಾಯಿತು. ಹೇಯ್ ಸುಮ್ನೆ ಒಂದೆಡೆ ಬಿದ್ದಿರ್‍ತಿರೋ ಇಲ್ಲಾ ಮೂರೂ ಜನಕೆ ಹಬ್ಬ ಮಾಡಲೋ ಎಂದು ಭಯೋತ್ಪಾದಕರ ಶೈಲಿಯಲ್ಲಿ ಬೆದರಿಕೆ ಹಾಕಿದೆ. ಅದಕ್ಕೆ ಅವರಾರೂ ಸಣ್ಣ ಭಯವನ್ನೂ ತೋರಿದಂತೆ ಕಾಣಲಿಲ್ಲ. ನಮ್ಮ ಕಷ್ಟಗಳೇ ಇವರಿಗೆ ಬೇಕಾಗಿಲ್ಲವೇ ಇವರ ಕೊಬ್ಬು ಎಷ್ಟರ ಮಟ್ಟಿಗೆ ಹೆಚ್ಚಿದೆ. ನೋಡಿದೆಯಾ ಇವರ ಜಂಭವಾ ಎಂದು ನಾಲ್ಕು ಬಾರಿಸುವಾ ಎನ್ನುವ ವೇಳೆಗಾಗಲೇ ಆ ಎರಡೂ ಮಕ್ಕಳು ಮತ್ತಷ್ಟು ನನ್ನ ಸುತ್ತ ತಪ್ಪಿಸಿಕೊಳ್ಳುವ ಆಟ ಆಡುತ್ತ ನನಗೆ ಪೊರಕೆ ಏಟು ಬೀಳಲಿಲ್ಲ ಎಂದು ನಗಾಡುತ್ತಾ ದಣಿದು ಸುಸ್ತಾಗಿ ನಿತ್ರಾಣವಾಗಿ ಬಂದಿದ್ದ ನನ್ನನ್ನು ಯಾವುದೋ ಆಟದ ಒಂದು ಕಂಬ ಎಂದು ಭಾವಿಸಿ ಹಿಡಿದು ಎಳೆದಾಡಿದರು. ಅವರಿಬ್ಬರ ರಭಸದ ಮೇಲೆ ನನ್ನ ಧರ್ಮಪತ್ನಿ ಪೊರಕೆ ಹಿಡಿದು ಚಾಮುಂಡಿಯಂತೆ ಸಿಟ್ಟು ಕಾರುತ್ತಿದ್ದಳು. ಮಕ್ಕಳಿಬ್ಬರೂ ಜಡಿದು ಎಳೆದಿದ್ದರಿಂದ ನಾನು ಆಯತಪ್ಪಿ ಕೆಳಕ್ಕೆ ಬಿದ್ದೆ. ಅವರೂ ಬಿದ್ದರು. ಹೆಂಡತಿ ಅವರಿಗೆ ಹೊಡೆಯಲು ಪಟಪಟನೆ ಬಡಿದ ಪೊರಕೆ ಏಟು ನನ್ನ ಮುಖ ತಲೆಗೆಲ್ಲ ಬಿದ್ದು ರೋಸಿ ಹೋಯಿತು.

ಓಹೋ ಅಪ್ಪ ಪೊರಕೆ ಏಟು ತಿಂದ್ರೂ ಪೊರಕೆ ಏಟು ತಿಂದ್ರೂ ಎಂದು ಎದ್ದು ಕುಣಿದಾಡಿದರು. ನನ್ನ ಹೆಂಡತಿ ಪೆಚ್ಚು ಪೆಚ್ಚಾಗಿ ನಗುತ್ತ ಕೋಣೆಯ ಒಳಕ್ಕೆ ಹೋಗಿ ನಗತೊಡಗಿದಳು. ಇವರು ಬೇಕೆಂದೇ ಈ ನಾಟಕ ಮಾಡಿ ತನ್ನ ಅಸಮಾಧಾನವನ್ನು ಹೀಗೆ ತೋರಿಕೊಂಡರೇ ಎಂಬ ಸಣ್ಣ ಅನುಮಾನವೂ ಬಂತು. ತಾರಾಮಾರಾ ಬಡಿದು ಹಾಕುವಾ ಎಂದು ಎದ್ದು ನಿಂತ ಕೂಡಲೇ ಯಾವ ದುರಾದೃಷ್ಟಕ್ಕೋ ಏನೋ ಆ ಲಫಡಾ ಬಡ್ಡಿ ದುಡ್ಡಿನ ವಸೂಲಿಗಾರರು ಬಾಗಿಲಿಗೆ ಬಂದು ನಿಂತು ಏನ್ಸಾರ್ ಬಾಳಾ ಖುಷಿಯಾಗಿದ್ದೀರಿ. ಹೋದ ಕೆಲ್ಸ ಆಯ್ತು ಅನಿಸ್ತದೆ. ಸದ್ಯ ನಿಮಗೂ ಒಳ್ಳೇದಾಯ್ತು ಎಂದು ಒಳಕ್ಕೆ ಬಂದವರೇ ಮುರುಕಲು ಮಂಚದ ಮೇಲೆ ಕೂತುಕೊಂಡು ಕಾಫಿ ಟೀ ಕೊಟ್ಟು ಸತ್ಕರಿಸಿ ನೀಲಿ ನೋಟುಗಳ ಕಂತೆಯನ್ನು ತಟ್ಟೆಯಲ್ಲಿ ತಂದಿಟ್ಟು ಕೈಮುಗಿಯಬಹುದು ಎಂಬಂತೆ ಅವರು ಭಾವಿಸಿದರು. ನಾನೀಗ ಅವರಿಗೂ ಹೊಡೆಯುವಂತಿರಲಿಲ್ಲ. ಇವರನ್ನೂ ದಬಾಯಿಸುವಂತಿರಲಿಲ್ಲ. ಹಲ್ಲಿ ಗಿಂಜುತ್ತಾ ಬನ್ನಿ ಬನ್ನಿ ಎಂದು ಬರ ಮಾಡಿಕೊಂಡು ಬಹಳ ಸಂತೋಷದಲ್ಲಿ ಇದ್ದೇನೆಂಬಂತೆ ತೋರಿಸಿಕೊಳ್ಳುತ್ತಾ ‘ಏನೋ ಬಂದಾಯ್ತು ಸದ್ಯ ನಿಮ್ಮ ಋಣದಿಂದ ಪಾರಾಗುವ ಕಾಲ ಬಂತು. ನಾನೇ ನಿಮ್ಮ ಯಜಮಾನರ ಬಳಿ ಬಂದು ಮಾತಾಡ್ತೀನಿ ನಡೀರಿ’ ಎಂದು ಹೊರಕ್ಕೆ ಸಾಗಾಕಿದೆ.

ಮೈಯಲ್ಲೆಲ್ಲ ವಿಚಿತ್ರ ನಡುಕ ಆತಂಕ ಸಂಕಟ ಅವಮಾನದ ಕಜ್ಜಿಗಳು ಸೇರಿಕೊಂಡಿವೆ ಎನಿಸಿತು. ಕಣ್ಣು ಮುಚ್ಚಿಕೊಂಡು ಮಲಗಿಬಿಟ್ಟೆ. ಹೆಂಡತಿ ಮಕ್ಕಳನ್ನು ಹೊಡೆದುರುಳಿಸುವ ಮನಸ್ಸೂ ಇರಲಿಲ್ಲ. ಮಕ್ಕಳಿಬ್ಬರೂ ಹೊರಗೆ ಅಂಗಳದಲ್ಲಿ ಚಿಗುರಿದ್ದ ಹೊಂಗೆ ಮರಕ್ಕೆ ಹಗ್ಗ ಕಟ್ಟಿಕೊಂಡು ಈಗ ಉಯ್ಯಾಲೆ ಆಡುತ್ತಿದ್ದರು. ಸುಮಾರು ಹೊತ್ತಾದ ಮೇಲೆ ಹೆಂಡತಿ ಘಮಘಮಿಸುವ ಕಾಫಿ ಮಾಡಿಕೊಂಡು ಬಂದು ಏಳ್ರಿ ಮೇಲೆ, ರೀ ಏಳ್ರೀ ಕಾಫಿ ಕುಡಿಯೋರಂತೇ ಎಂದು ಮೃದುವಾಗಿ ಈಗ ತಾನೆ ಹೊಸದಾಗಿ ಮದುವೆ ಆಗಿ ಮೊದಲ ರಾತ್ರಿಯ ಆಟಗಳನ್ನು ಮುಗಿಸಿ ಬೆಳಿಗ್ಗೆ ಎದ್ದು ಮಡಿ ಸ್ನಾನ ಮಾಡಿ ಪೂಜೆ ಮಾಡಿ ಹೂ ಮುಡಿದು ಬಂದು ನಲ್ಲನನ್ನು ಕಾಫಿಗೆ ಎಬ್ಬಿಸುವಂತೆ ಎಲ್ಲೊ ಸ್ವತಃ ನನ್ನ ಹೆಂಡತಿಯೇ ಹಾಗೆ ಈಗ ಎದುರಿಗೆ ಬಂದಿದ್ದಾಳೆಂಬಂತೆ ಭ್ರಾಂತು ಬಡಿದು ಅರೇ ಎಂದು ಎದ್ದು ಕುಳಿತೆ. ಅದೇ ನನ್ನ ಹೆಂಡತಿ. ನನ್ನೆಲ್ಲ ರಗಳೆಗಳಿಂದ ನೊಂದು ಹಣ್ಣಾಗಿದ್ದ ಮಡದಿ ಪೊರಕೆ ಏಟು ಬಿದ್ದಿದ್ದರಿಂದ ಬೇಜಾರು ಮಾಡಿಕೊಳ್ಳಬೇಡಿರಿ ಎಂಬಂತೆ ನೋಡುತ್ತಿದ್ದಳು.

ನಾನೂ ಸುಮ್ಮನೆ ನಗಾಡಿದೆ. ಕಾಫಿ ಕುಡಿದೆ. ಮುಂಬೈಯಲ್ಲಿ ತೆಗೆದುಕೊಂಡಿದ್ದ ಐದು ರೂಪಾಯಿಗಳ ಚಾಕಲೇಟುಗಳ ನೆನಪಾಗಿ ಮಕ್ಕಳಿಬ್ಬರನ್ನು ಕರೆದು ಅವರಿಗೆ ಕೊಟ್ಟೆ. ಓಹೋ ಅಪ್ಪಾ ಎಷ್ಟು ಒಳ್ಳೆಯವರು ಮುಂಬಯಿಂದ ನಮಗೆ ಚಾಕಲೇಟ್ ತಂದಿದ್ದಾರೆ ಎಂದು ಉಯ್ಯಾಲೆಯ ಕಡೆಗೆ ಓಡಿದರು.

ನನ್ನ ಹೆಂಡತಿ ನನ್ನನ್ನೇ ದಿಟ್ಟಿಸಿ ನೋಡುತ್ತಾ ಕಣ್ಣಲ್ಲಿ ನೀರು ಬಟ್ಟಾಡಿಸುತ್ತಿರುವುದು ಅರಿವಾಯಿತು. ಯಾಕೆ ಎಂಬಂತೆ ಮುಖ ನೋಡಿದೆ. ರೀ ದಯಮಾಡಿ ಏನಾದ್ರೂ ಮಾಡಿ ಆ ಬಡ್ಡಿ ದುಡ್ಡಿನವರು ಇನ್ನೆಂದೂ ನಮ್ಮ ಮನೆ ಕಡೆ ಬಾರದಂತೆ ಮಾಡ್ರಿ. ಆ ದುಡ್ಡು ಕೊಟ್ಟವನು ನೀವು ಹೋದ ಮೇಲೆ ಬಂದು ಏನೇನೋ ಬಾಳ ಕೆಟ್ಟದಾಗಿ ನಾನೊಬ್ಬಳೆ ಇರುವಾಗ ಮಾತಾಡಿದ. ಆ ನೀಚನ ಮುಖದ ಮೇಲೆ ಹಣ ಬಿಸಾಕಿ ಬಿಡ್ರಿ. ಈ ಜನ ಬಾಳ ಕೆಟ್ಟೋರು. ಏನ್ ಬೇಕಾದ್ರೂ ಮಾಡೋದಕ್ಕೆ ಹೇಸದವರು ಎಂದು ಗಳಗಳ ಅತ್ತುಬಿಟ್ಟಳು. ಮುಂದಿನದನ್ನೆಲ್ಲ ಅವಳು ಹೇಳಬೇಕಾಗಿರಲಿಲ್ಲ. ನಾನು ಕೇಳುವಂತೆಯೂ ಇರಲಿಲ್ಲ. ನನಗಂತೂ ತಲೆ ಕೆಟ್ಟುಹೋಯಿತು. ಹೊರಗೆ ಮಕ್ಕಳು ಅವರಿಚ್ಛೆಯಲ್ಲಿ ಆನಂದದಲ್ಲಿ ಉಯ್ಯಾಲೆ ಆಡುತ್ತಿದ್ದವು.

ಅಂತಿಮವಾಗಿ ಒಂದು ತೀರ್ಮಾನಕ್ಕೆ ಬರುವುದಕ್ಕೂ ನನ್ನಲ್ಲಿ ಚೈತನ್ಯ ಉಳಿದಿರಲಿಲ್ಲ. ಹತ್ತು ಸಾವಿರಗಳನ್ನು ಒಂದೇ ಏಟಿಗೆ ಎಲ್ಲಿಂದ ತರಲಿ ಎನಿಸಿ ಎಲ್ಲಿಯಾದರೂ ಕಳ್ಳತನ ಮಾಡಲೆ ಎನಿಸುವಷ್ಟು ತಾಳ್ಮೆ ಕೆಟ್ಟು ಹೋಯಿತು. ಗೆಳೆಯ ತಿಮ್ಮಯ್ಯನ ಅಧ್ಯಾಯ ಮುಗಿದಿದ್ದರೂ ತನ್ನ ಉಳಿದ ಪಾಠಗಳನ್ನು ನೀನು ಮುಂದುವರಿಸು ಎಂಬಂತೆ ಆತ ನನ್ನನ್ನು ಸಿಕ್ಕಿಸಿ ಹೋಗಿದ್ದ. ಸತ್ತ ಅವನ ಮೇಲೆ ನನಗೀಗ ಕೋಪವಿರಲಿಲ್ಲ. ಬಡ್ಡಿ ವಹಿವಾಟಿನವರ ಮೇಲೂ ಸಿಟ್ಟಿರಲಿಲ್ಲ. ಎಲ್ಲೋ ನಾನೇ ಈ ಬದುಕಿನ ಅಂಗಡಿಯಲ್ಲಿ ಎಲ್ಲಕ್ಕೂ ಸರಿಯಾಗಿ ಲೆಕ್ಕ ಹೊಂದಿಸದೆ ಎಲ್ಲವನ್ನೂ ಕ್ರಮವಾಗಿ ಜೋಡಿಸದೆ ಎಲ್ಲವೂ ಅಸಹ್ಯವಾಗಿ ಕಾಣುತ್ತಿದೆ ಎಂಬ ಬೇಸರ ನಿರಾಶೆ ಸಿಟ್ಟು ನನ್ನ ಮೇಲೇ ಬರತೊಡಗಿದವು.

ಎದ್ದು ಹೊರಬಂದೆ. ಮಟಮಟ ಮಧ್ಯಾಹ್ನ ಬಿರಿಯುತ್ತಿತ್ತು. ಇರುವ ಆ ಒಬ್ಬ ಗೆಳೆಯನನ್ನಾದರೂ ಭೆಟ್ಟಿ ಆಗಿ ಎಲ್ಲ ಸಮಸ್ಯೆಗಳನ್ನು ಅವನ ಮುಂದೆ ವಿವರಿಸೋನ ಮುಂದಿನದಕ್ಕೆ ಆತ ದಾರಿ ತೋರಿಸಬಹುದು ಎಂದು ಇನ್ನೊಬ್ಬ ಗೆಳೆಯ ರಾಮಚಂದ್ರನ ಮನೆಗೆ ಹೋದೆ. ಅವನಾಗಲೇ ಕಛೇರಿಗೆ ಹಿಂದಿರುಗಿದ್ದ. ಆ ಸಣ್ಣ ಪೇಟೆಯಲ್ಲಿ ಅವನ ಕಛೇರಿ ಹುಡುಕಲು ಕಷ್ಟವಾಗಲಿಲ್ಲ. ಅವನೊಂದು ಸಣ್ಣ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದ. ನಾಲ್ಕಾರು ಜನಗಳಿಗೆ ಬೇಕಾಗಿದ್ದ. ಎಂತೆಂತದೋ ದೊಡ್ಡವರೆಲ್ಲ ಅವನಿಗೆ ಫೋನು ಮಾಡುತ್ತಿದ್ದರು. ರಾಜಕಾರಣಿಗಳು ವಿಶೇಷ ಗುಂಡು ಪಾರ್ಟಿಗಳಿಗೆ ಆಹ್ವಾನಿಸುತ್ತಿದ್ದರು. ಪತ್ರಿಕೆಗಳಲ್ಲಿ ತಮ್ಮ ಪರವಾದ ಒಳ್ಳೆಯ ಸುದ್ದಿ ಬರೆಸಿಕೊಳ್ಳಲು ಅವನ ಮುಂದೆ ತುದಿಗಾಲಲ್ಲಿ ಅನೇಕರು ನಿಲ್ಲುತ್ತಿದ್ದರು. ಇಂತಹ ಒಬ್ಬ ಗೆಳೆಯನನ್ನು ನಾನು ಈ ಮೊದಲೇ ಭೆಟ್ಟಿ ಮಾಡಿದ್ದರೆ ಚೆನ್ನಾಗಿತ್ತೇನೊ. ಅಂತೂ ಒಟ್ಟಿನಲ್ಲಿ ಗೆಳೆಯ ರಾಮಚಂದ್ರ ನನ್ನನ್ನು ನೋಡಿ ಬಹಳ ಅಚ್ಚರಿ ಆನಂದ ಪಟ್ಟು ಇಷ್ಟು ವರ್ಷಗಳ ತನಕ ಎಲ್ಲಿಗೆ ಹಾಳಾಗಿ ಹೋಗಿದ್ದೆಯೋ ಎಂದು ಹೆಗಲ ಮೇಲೆ ಕೈ ಹಾಕಿ ಬಾ ಕೆಳಗೆ ಕಾಫಿ ಕುಡಿಯೋಣ ಎಂದು ಕರೆದುಕೊಂಡು ಬಂದ. ಅವನೂ ನಾನೂ ಹಿಂದೆ ಕಾಲೇಜಿನಲ್ಲಿ ಬಹಳ ದೋಸ್ತ್‌ಗಳಾಗಿ ಒಟ್ಟಿಗೇ ಯಾವಾಗಲೂ ಇರುತ್ತಿದ್ದೆವು. ಕ್ರಾಂತಿ ಪ್ರಾಂತಿ ಎಂದು ಆಗವನು ಏನೆನೋ ಮಾಡುತ್ತಿದ್ದ. ಅವನ ಜೊತೆಯಲ್ಲೇ ನಾನೂ ಸೇರಿಕೊಂಡಿದ್ದೆ. ಓದು ಬರಹಕ್ಕಿಂತ ಹೋರಾಟವೇ ಮುಖ್ಯ ಎಂದು ಇಬ್ಬರೂ ಆಗ ಭಾವಿಸಿದ್ದೆವು. ಅದು ಯಾವ ಕೇಡಿಗೋ ಏನೋ ನಾನು ಹೋರಾಟದ ಪ್ರಭಾವಗಳಿಂದಾಗಿ ಗೋಡೆಗಳ ಮೇಲೆ ಸ್ಲೋಗನ್ ಬರೆಯಲು ಸ್ಟ್ರೈಕ್‌ಗಳಲ್ಲಿ ಅಂತವನ್ನು ಕೂಗಲು ಕರಪತ್ರ ಬರೆದು ಹಂಚಲು ವಿಶೇಷವಾಗಿ ಬೇಕಾಗಿದ್ದ ಭಾಷಾ ಪಾಂಡಿತ್ಯವನ್ನು ಪಡೆದುಬಿಟ್ಟಿದ್ದೆ.ನಾನು ಬರೆದ ಕರಪತ್ರ ಸ್ಲೋಗನ್‌ಗಳು ಆಗ ಬಹಳ ಚಾಲ್ತಿಯಲ್ಲಿದ್ದವು. ಕರಪತ್ರಗಳನ್ನು ಮನ ಮಿಡಿಯುವಂತೆ ತೀವ್ರವಾಗಿ ಮೈದುಂಬಿ ಬರೆಯುತ್ತಿದ್ದುದು ನನಗೀಗಲೂ ನೆನಪಿದೆ. ನೀನೊಬ್ಬ ಸಾಹಿತಿಯಾಗಬೇಕಾದವನು ಎಂದು ಬಲ್ಲವರು ಹೇಳುತ್ತಿದ್ದರು. ನನಗೆ ಆ ಸಾಹಿತ್ಯ ಸಾಹಿತಿಗಳಾಗುವುದು ಎಂದರೆ ಬಹಳ ಕೀಳು ಎಂಬ ಭಾವನೆಯಿದ್ದ ಕಾರಣ ಆ ಕಡೆಗೆ ಹೋಗಲೇ ಇಲ್ಲ. ಆ ಮೇಲೆ ಕಾಲದ ಸೆಳೆತದಲ್ಲಿ ರಾಮಚಂದ್ರ ಮತ್ತೆ ಸಿಕ್ಕಿದ್ದು ಕೂಡ ಬಹಳ ಆಕಸ್ಮಿಕವಾಗಿ. ಕಾಫಿ ಕುಡಿಯುತ್ತ ನನ್ನೆಲ್ಲ ಅಳಲನ್ನು ಅವನ ಮುಂದೆ ವಿನಂತಿಸಿಕೊಂಡು ಇದಕ್ಕೊಂದು ಪರಿಹಾರ ಕಂಡುಹಿಡಿಯಬೇಕೆಂದು ಪಟ್ಟುಹಿಡಿದೆ.

ರಾಮಚಂದ್ರ ಒಂದು ಸಿಗರೇಟು ಸೇದಿ ಬಿಸಾಡಿದಂತೆ ನನ್ನ ಸಮಸ್ಯೆಯನ್ನು ಪರಿಗಣಿಸಿ ಇಷ್ಟೇನಾ, ಅಲ್ಲಯ್ಯ ಇದೊಂದು ದೊಡ್ಡ ಸಮಸ್ಯೆ ಎಂದು ದಂಗಾಗಿ ಹೋಗಿದ್ದೀಯಲ್ಲಾ ಇಷ್ಟೊಂದು ಸೆನ್ಸಿಟೀವ್ ಆದ್ರೆ ಹೇಗೆ. ಬಿಡು ಆ ಸಮಸ್ಯೆನಾ ಮರ್‍ತು ಬಿಡು. ಈ ಸಂಜೆಯೇ ನಾನು ಇದನ್ನು ಫೈನಲೈಜ್ ಮಾಡ್ತೇನೆ. ಹೆದರಬೇಡ ಕಾಫಿ ಕುಡಿ ಎಂದು ಎಲ್ಲವನ್ನು ಕೆಲವೇ ನಿಮಿಷಗಳಲ್ಲಿ ಮುಗಿಸಿಬಿಟ್ಟ.

ಮೇಲೆ ಬಂದು ತನ್ನ ಕಛೇರಿಯ ಸೀಟಿನಲ್ಲಿ ಕುಳಿತು ಯಾರಿಗೋ ಫೋನು ಮಾಡಿದ. ಈ ಸಂಜೆ ಆರು ಗಂಟೆಗೆ ನಿಮ್ಮನ್ನು ನೋಡಲು ಬರುತ್ತಿರುವುದಾಗಿ ತಿಳಿಸಿದ. ಆ ಕಡೆಯಿಂದ ಆಯ್ತು ಬನ್ನಿ ಕಾದಿರ್‍ತೇನೆ ಎಂಬಂತೆ ಸಂದೇಶ ಬಂತು. ಗೆಳೆಯ ರಾಮಚಂದ್ರ ನಗುತ್ತಾ ಬ್ರದರ್ ನೀವು ಸಂಜೆ ಐದುವರೆಗೆ ಕರೆಕ್ಟಾಗಿ ಇಲ್ಲಿಗೆ ಬಂದು ಬಿಡಿ. ಆ ಮೇಲೆ ನಾನೊಂದು ಕಡೆಗೆ ಕರೆದುಕೊಂಡು ಹೋಗ್ತೇನೆ. ಅಲ್ಲಿ ಎಲ್ಲ ಫಿನಿಸ್ಸ್ ಆಗ್ತದೆ. ಯೋಚ್ನೆ ಮಾಡ್‌ಬ್ಯಾಡಿ. ನಾನಿದ್ದೇನೆ ಹೋಗಿದ್ ಬನ್ನಿ ಎಂದು ಹೇಳಿ ಕಳುಹಿಸಿ ಕೊಟ್ಟ. ಅವನೇ ಮತ್ತೆ ಕೆಳಗಿಳಿದು ಬಂದು ಹೊಗುತ್ತಿದ್ದ ನನ್ನನ್ನು ಕೂಗಿ ಬನ್ನಿ ಇಲ್ಲಿ ಎಂದು ಅಲ್ಲಿದ್ದ ಬೇಕರಿಯಲ್ಲಿ ತರಾವರಿ ಸಿಹಿತಿಂಡಿಗಳನ್ನು ಪ್ಯಾಕ್ ಮಾಡಿಸಿ ಮನೆಗೆ ತೆಗೆದುಕೊಂಡು ಹೋಗಿ ಎಂದ. ನನಗೆ ಮರು ಮಾತಿರಲಿಲ್ಲ.

ಮನೆಗೆ ನೆಮ್ಮದಿಯಿಂದ ಬಂದೆ. ಹೆಂಡತಿ ಮಕ್ಕಳು ಈ ಪರಿಯ ಸಿಹಿಯನ್ನು ನೋಡಿ ಎಲ್ಲಿಯಾದರೂ ಯಾರಾದರೂ ಪ್ಯಾಕ್ ಮಾಡಿಸಿ ಇಟ್ಟಿದ್ದನ್ನು ಕದ್ದು ತಂದೆಯೋ ಏನೋ ಎಂಬಂತೆ ನೋಡುತ್ತ ಸದ್ದಿಲ್ಲದೆ ತಿನ್ನತೊಡಗಿದರು. ನಾನು ಸಂಜೆ ಆಗುವುದನ್ನೇ ಕಾಯತೊಡಗಿದೆ. ಅಂತೂ ಆದಷ್ಟು ಬೇಗ ನನಗಾಗಿಯೇ ಎಂಬಂತೆ ಸಂಜೆ ಸಮೀಪಿಸಿತು. ಮತ್ತೆ ಗೆಳೆಯನ ಕಛೇರಿಯ ಕಡೆ ನಡೆದೆ.

ಸಂಜೆಯಾಗುತ್ತಿತ್ತು. ಆಟೋ ಹತ್ತಿ ಇಬ್ಬರೂ ಹೊರಟೆವು. ದಾರಿಯ ಉದ್ದಕ್ಕೂ ಚುನಾವಣೆಯ ರಭಸ ಮೆಲ್ಲಗೆ ಅಂಟಿಕೊಳ್ಳುತ್ತಿತ್ತು. ಗೋಡೆಗಳ ಮೇಲೆಲ್ಲ ಎಂತೆಂತವರೋ ದಪ್ಪ ಅಕ್ಷರದ ಹೆಸರು ಚಿತ್ರಗಳಲ್ಲಿ ಮೆರೆಯುತ್ತಿದ್ದರು. ಚುನಾವಣೆಯ ಪ್ರಚಾರಗಳು ಅಲ್ಲಲ್ಲಿ ಕೇಳಿಸುತ್ತಿದ್ದವು. ನನ್ನ ನೂರೆಂಟು ಸಮಸ್ಯೆಗಳಿಂದ ಆ ಚುನಾವಣಾ ಪ್ರಕ್ರಿಯೆಯನ್ನೇ ಗಮನಿಸಿರಲಿಲ್ಲ. ಅದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ ಎಂದು ಕೈ ಬಿಟ್ಟಿದ್ದೆ. ಜೊತೆಗೆ ನಾನೆಂದೂ ಯಾರಿಗೂ ಮತ ಚಲಾಯಿಸಿರಲಿಲ್ಲ. ಓಟಿನ ರಾಜಕೀಯದಲ್ಲಿ ವಿಶ್ವಾಸವೇ ಇರಲಿಲ್ಲ. ಆಟೋ ಹತ್ತಾರು ತಿರುವು ಮುರುವುಗಳನ್ನು ದಾಟಿ ಒಂದು ದೊಡ್ಡ ಭವ್ಯ ಬಂಗಲೆಯ ಮುಂದೆ ನಿಂತಿತು. ಆ ವಿಶಾಲವಾದ ಅರಮನೆಯಂತಹ ಕಟ್ಟಡ ಗೇಟಿನ ಮುಂದೆ ನಿಂತ ಆಟೋ ಒಂದು ಕಾಗೆಯಂತೆ ಕಂಡು ತಾವೀಗ ಕಾಗೆ ವಾಹನದಲ್ಲಿ ಇಂತಹ ಅರಮನೆಗೆ ಬಂದೆವಲ್ಲಾ ಎಂದು ನನಗೆ ನಾನೇ ಅಂದುಕೊಂಡು ಗೆಳೆಯನನ್ನು ಹಿಂಬಾಲಿಸಿದೆ.

ಮುಂದಿನದೆಲ್ಲ ನನ್ನ ನಿರೀಕ್ಷೆಯನ್ನೇ ತಲೆಕೆಳಗು ಮಾಡುವಂತೆ ಏನೇನೋ ಆಯಿತು. ಆ ಭವ್ಯವಾದ ಬಂಗಲೆಯ ಒಳಗೆ ನೂರಾರು ರೀತಿಯ ಜನರಿದ್ದರು. ಗೆಳೆಯ ಯಾರಿಗೋ ಭೇಟಿ ಕೊಟ್ಟು ತಾನು ಬಂದಿರುವುದನ್ನು ತಿಳಿಸಬೇಕೆಂದು ಹೇಳಿದ. ನನಗೆ ಅರ್ಥವಾಗಿತ್ತು. ‘ಅರ್ಥ’ ಪ್ರಾಪ್ತವಾಗಿತ್ತು. ಅದೊಂದು ಮಂತ್ರಿಗಳ ಮನೆಯಾಗಿತ್ತು. ಸಚಿವರ ಎದುರು ಮೊಟ್ಟಮೊದಲ ಬಾರಿಗೆ ನನಗೆ ಕುಳಿತುಕೊಳ್ಳಲೂ ಬಾರದೆ ಉಸಿರುಗಟ್ಟಿದಂತಾಗಿ ಪೆಂಗನಂತಾಗಿಬಿಟ್ಟಿದ್ದೆ. ಗೆಳೆಯ ರಾಮಚಂದ್ರ ಮೊದಲೇ ಫೋನಿನಲ್ಲಿ ತನ್ನ ಸಮಸ್ಯೆಯನ್ನು ತಿಳಿಸಿಬಿಟ್ಟಿದ್ದ. ಸಚಿವರು ಬಹಳ ಸಜ್ಜನಿಕೆಯಿಂದ ಇಂಥಾದ್ದಕ್ಕೆಲ್ಲ ಹೆದರಿ ಬದುಕಿಗೆ ವಿಮುಖವಾಗಬಾರದು. ನೀವೇನೂ ಚಿಂತಿಸಬೇಡಿ. ಆ ಹತ್ತು ಸಾವಿರವನ್ನ ಆಗಲೆ ನಮ್ಮ ಕಡೆಯವರು ಆ ಫೈನಾನ್ಸ್‌ನವರಿಗೆ ತಲುಪಿಸಿ ಆಗಿದೆ. ಆರಾಮಾಗಿರಿ ಎಂದು ಧೈರ್ಯ ಹೇಳುತಿದ್ದರು. ಗೆಳೆಯ ಅವರಿಂದ ಸಿಗರೇಟು ಪಡೆದು ಹೊಗೆ ಉಗುಳುತ್ತಿದ್ದ. ಇಂತಹ ಮಂತ್ರಿಗಳೂ ಇಂತಹ ಕಾಲದಲ್ಲೂ ಇರಲು ಸಾಧ್ಯವೇ. ಇಷ್ಟು ಹಣವನ್ನು ಲೆಕ್ಕಿಸದೇ ಯಾವುದೋ ನನ್ನಂತಹ ಒಬ್ಬ ಜುಜುಬಿ ಮನುಷ್ಯನ ಸಾಲದ ಹೊಣೆಯನ್ನು ಇವರು ಯಾಕೆ ತೀರಿಸುತ್ತಾರೆಂಬ ವಿಚಿತ್ರ ಭಾವನೆಗಳೆಲ್ಲ ಬಂದು ಅಂತೂ ಈ ಶನಿಕಾಟಮುಗಿಯಿತಲ್ಲಾ ಎಂದು ನಿಟ್ಟುಸಿರು ಬಿಟ್ಟೆ. ಗೆಳೆಯ ಮಂತ್ರಿಗಳ ಜೊತೆ ಚುನಾವಣೆಯ ಡೆವಲಪ್‌ಮೆಂಟ್ ಹಾಗೂ ಟ್ರೆಂಡ್ಸ್ ಹೇಗೇಗೆ ನಡೆಯುತ್ತಿದೆ ಎಂದು ಚರ್ಚಿಸುತ್ತಿದ್ದ. ಸಚಿವರು ಎಲ್ಲಿಂದಲೋ ಬಂದ ಫೋನೆತ್ತಿಕೊಂಡು ಓ ಹೌದಾ, ನಾನೀಗಲೇ ಬಂದೆ. ಒಂದೈದು ನಿಮಿಷ, ಬಂದುಬಿಡುತ್ತೇನೆ. ಅಲ್ಲೇ ಇರಿ ಎಂದು ಹೇಳುತ್ತಿದ್ದರು. ಗೆಳೆಯ ನಾನೂ ಹಾಗೂ ಸಚಿವರೂ ಎದ್ದು ಹೊರಬಂದೆವು. ಭೆಟ್ಟಿ ಆಗಲು ಸಾಧ್ಯವಾಗದ ಜನ ಮಂತ್ರಿಗಳ ಹಿಂದೆಯೇ ಹೋಗುತ್ತಿದ್ದರು.

ನಾವು ಬಂದುಬಿಟ್ಟೆವು. ಖರ್ಚಿಗೆ ಇಟ್ಟುಕೋ ಎಂದು ಗೆಳೆಯ ರಾಮಚಂದ್ರ ಒಂದಿಷ್ಟು ದುಡ್ಡನ್ನು ಜೇಬಿಗಿಟ್ಟು ನಾನು ಇನ್ನು ಒಂದು ವಾರದ ನಂತರ ಸಿಗ್ತೇನೆ. ಎಲೆಕ್ಷನ್ ಬಿಸಿಯಲ್ಲಿರುವೆ. ಇಡೀ ಜಿಲ್ಲೆಯ ಚುನಾವಣಾ ಸಮೀಕ್ಷೆಗೆ ಹೋಗ್ತಾ ಇದ್ದೇನೆ. ಇನ್ನು ಒಂದು ವಾರ ಬಿಟ್ಟುಕೊಂಡು ಬಂದು ನನ್ನನ್ನು ಕಾಣಿ ಎಂದು ತಿಳಿಸಿ ಹೊರಟುಹೋದ.

ನಾನೆಂದೂ ಇಲ್ಲದಷ್ಟು ಸರಾಗವಾಗಿ ಮನೆಗೆ ಬಂದೆ. ಹೆಂಡತಿ ಈ ವಿಷಯ ಹೇಳಿದ ಕೂಡಲೆ ಕುಣಿದುಕುಪ್ಪಳಿಸುವಷ್ಟು ಸಂತೋಷಪಟ್ಟು ಯಾವತ್ತೂ ಹಗಲಿನಲ್ಲಿ ಮಕ್ಕಳ ಎದುರು ನನ್ನನ್ನು ಅಪ್ಪಿಕೊಳ್ಳದಿದ್ದವಳು. ಅಪ್ಪಿಕೊಂಡು ಮುತ್ತು ಕೊಟ್ಟುಬಿಟ್ಟಳು. ಕಿರಿಯ ಮಗಳು ಓಹೋ ಮಮ್ಮಿ ಪಪ್ಪಾ ಇಬ್ರೂ ಲವ್ ಮಾಡ್ತಿದ್ದಾರೆ. ಬಾರೇ, ನೋಡೇ ಲವ್ ಮಾಡ್ತಿದ್ದಾರೆ ಎಂದು ಬೀದಿಯಲ್ಲಿ ಆಟ ಆಡುತ್ತಿದ್ದ ಅವಳಕ್ಕನಿಗೆ ತೋರಿಸಲು ಹೋಗಿ ಅಲ್ಲಿ ಜೋರಾಗಿ ಕೂಗಿಕೊಳ್ಳುತ್ತಿದ್ದಳು. ನನಗೇ ನಾಚಿಕೆಯಾಗಿ ಹೇ ಹೇ, ಇಲ್ಲಾ ಇಲ್ಲಾ, ಹಂಗೆಲ್ಲಾ ಹೇಳಬೇಡ ಬಾ, ಎಂದು ಓಡಿಹೋಗಿ ಹಿಡಿದುಕೊಂಡೆ. ಹಿರಿಮಗಳು ದಿಢೀರನೆ ಕೇಳಿಸಿಕೊಂಡು ಬಂದವಳೇ ಅಪ್ಪಾ ಅಪ್ಪಾ ನನಗೂ ತೋರ್‍ಸಿ, ಮಮ್ಮಿಗೆ ಹೇಗೆ ಲವ್ ಮಾಡಿದ್ರಿ ಅಂತಾ ಎಂದು ಮುಗ್ಧವಾಗಿ ಕೇಳಿದಳು. ಅವಳ ಅಮ್ಮ ನಾಚಿ ನೀರಾಗಿ ಕೋಣೆಗೆ ಹೋಗಿ ಅವಿತುಕೊಂಡಳು. ಮಕ್ಕಳಿಬ್ಬರೂ ನಾವು ಹೇಗೆ ಅಪ್ಪಿಕೊಂಡು ನಿಂತಿದ್ದೆವು ಎಂಬುದನ್ನು ಪ್ರಾಕ್ಟೀಸ್ ಮಾಡಿ ತೋರಿಸುವಂತೆ ಆಟ ಮಾಡಿಕೊಂಡವು. ನನ್ನ ಹೆಂಡತಿ ಬಂದು ಇಬ್ಬರಿಗೂ ಎರಡೆರಡು ಬಾರಿಸಿದ ಮೇಲೆ ತೆಪ್ಪಗಾದರು. ಅಂತೂ ಆ ರಾತ್ರಿ ನೆಮ್ಮದಿಯಿಂದ ಊಟ ಮಾಡಿ ಮಲಗಿದೆವು. ಹೀಗೇ ಹೀಗೇ ಐದಾರು ದಿನಗಳು ಕಳೆದುಹೋದವು. ಗೆಳೆಯನ ಬಗ್ಗೆ ನನ್ನ ಗೌರವ ಅಪಾರವಾಯ್ತು. ತಿಮ್ಮಯ್ಯ ಕೈ ಕೊಟ್ಟರೂ ಇನ್ನೊಬ್ಬ ಗೆಳೆಯ ನನ್ನನ್ನು ಉಳಿಸಿಕೊಂಡನಲ್ಲಾ ಎಂದು ಮನುಷ್ಯರ ಬಗ್ಗೆ ವಿಶ್ವಾಸ ಹೆಚ್ಚಾಯ್ತು. ದುಡ್ಡು ತಲುಪಿದೆಯೋ ಇಲ್ಲವೋ ಎಂದು ನಾನೇ ಖುದ್ದಾಗಿ ಹೋಗಿ ಬಡ್ಡಿಯವರನ್ನು ಕಂಡು ಕೇಳಿದೆ. ಅವರೆಲ್ಲ ಬೆಚ್ಚಿಬಿದ್ದಿದ್ದರು. ಸಾರ್, ನೀವು ಇಷ್ಟು ದೊಡ್ಡವರು ಎಂದು ತಿಳಿದಿರಲಿಲ್ಲ. ಮೊದಲೇ ನಾನು ಸಾಹೇಬರ ಕಡೆಯವನು ಎಂದು ಹೇಳಬಾರದಿತ್ತಾ? ಸಾಹೇಬ್ರು ಕರೆಸಿ ನಮಗೆಲ್ಲ ಸರಿಯಾಗಿ ಮುಖಕ್ಕೆ ಉಗಿದು ಉಪ್ಪು ಹಾಕಿದ್ರು. ನೀವು ಕೊಡಬೇಕಾಗಿದ್ದ ಹತ್ತು ಸಾವಿರ ರೂಪಾಯಿಗಳನ್ನು ಖುದ್ದಾಗಿ ಸ್ವತಃ ಸಾಹೇಬರೇ ತಮ್ಮ ಅಕೌಂಟಿನ ಲೆಕ್ಕಕ್ಕೆ ಮಾಡಿಕೊಂಡುಬಿಟ್ಟರು. ಎಷ್ಟೇ ಆಗ್ಲಿ, ಈ ಫೈನಾನ್ಸ್ ಸೊಸೈಟಿ ಅವರದೇ ಅಲ್ಲವೇ. ನೀವು ದುಡ್ಡು ಕೊಡಬೇಕಾಗಿಲ್ಲ. ಸಾಹೇಬ್ರ ಲೆಕ್ಕಕ್ಕೆ ಅದು ಸೇರೋಯ್ತು ಬನ್ನಿ ಸಾರ್, ಕೂತ್ಕೊಳ್ಳಿ ಎಂದು ಕೈಕೈ ಹಿಸುಕಿಕೊಳ್ಳುತ್ತಾ ಈ ಹಿಂದೆ ರೋಪು ಹಾಕಲು ಬರುತ್ತಿದ್ದ ವಸೂಲಿಗರು ನನ್ನೆದುರು ದೈನ್ಯವಾಗಿ ನಿಂತಿದ್ದರು.

ನನಗೆ ನನ್ನನ್ನೇ ನಂಬಲಿಕ್ಕಾಗದಷ್ಟು ಕನ್‌ಫ್ಯೂಸ್ ಆಗಿ, ಅರೇ ಇದೆಲ್ಲ ಏನು ಮ್ಯಾಜಿಕ್ ಮಾಡಿಬಿಟ್ಟ ಆ ರಾಮಚಂದ್ರಾ ಎಂದು ಹಿಂತಿರುಗಿ ಬಂದುಬಿಟ್ಟಿದ್ದೆ. ಒಂದು ವಾರ ಕಣ್ಣು ಮುಚ್ಚಿ ಬಿಡುವುದರಲ್ಲಿ ಬಂದು ಹೋಗಿತ್ತು. ಗೆಳೆಯನನ್ನು ಕಾಣಲು ಹೋದೆ. ಓಹೋ, ಸರಿಯಾದ ಟೈಮಿಗೆ ಬಂದೆ. ಬಾ, ಮಂತ್ರಿಗಳು ಈಗ ತಾನೆ ಫೋನು ಮಾಡಿದ್ದರು. ಅವರನ್ನು ನೋಡಿ ಬರಬೇಕೆಂದು ಆಟೋ ಹತ್ತಿಸಿ ಹೊರಟೇಬಿಟ್ಟ.

ಮೊದಲಿನಂತೆಯೇ ಆ ಭವ್ಯ ಮನೆ ಮುಂದೆ ನಾನು ಅಧೀರನಾಗಿ ನಿಂತೆ. ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು, ಬಂಧುಗಳು ಎಲ್ಲ ಮಂತ್ರಿಯ ಮನೆಯಲ್ಲಿ ತುಂಬಿದ್ದರು. ಹೊರಗೆ ಪ್ರಚಾರ ವಾಹನಗಳು ಚುನಾವಣೆಯ ದಣಿವಿನಿಂದ ನಿಂತಿದ್ದವು. ಈಗ ಚುನಾವಣೆಯ ಪ್ರಚಾರ ಬಹಳ ಬಿರುಸಿನಿಂದ ನಡೆಯುತ್ತಿತ್ತು. ಮಂತ್ರಿಗಳು ಭಾಷಣ ಮುಗಿಸಿ ಬಂದಿದ್ದರು. ಅವರ ಪಕ್ಷದ ಪ್ರತಿಷ್ಠೆಯ ಕ್ಷೇತ್ರದಲ್ಲಿ ಸ್ವತಃ ಅವರ ಬಂಧುವೊಬ್ಬರೇ ಎಲೆಕ್ಷನ್ನಿಗೆ ನಿಂತಿದ್ದರು. ಅವರನ್ನು ಗೆಲ್ಲಿಸಿದರೆ ಸೆಂಟ್ರಲ್‌ನಲ್ಲಿ ಸಚಿವರ ಘನತೆ ಹೆಚ್ಚುವುದಿತ್ತು. ಜೊತೆಗೆ ಅವರು ರಾಜಕೀಯ ಜೀವನದ ಮಹತ್ವದ ತಿರುವುಗಳಲ್ಲೀಗ ಮುಳುಗಿದ್ದರು. ಅವರಿಗೆ ಅನೇಕ ಕಡೆಯಿಂದ ಅನೇಕ ಬಗೆಯಿಂದ ಜನರ ಬೆಂಬಲ ಬೇಕಿತ್ತು. ಗೆಳೆಯ ರಾಮಚಂದ್ರನ ಜೊತೆ ಮೊದಲೇ ನನ್ನ ವಿಷಯದ ಬಗ್ಗೆ ಮಾತಾಡಿದ್ದರೆಂದು ಕಾಣುತ್ತದೆ. ನೋಡಿ, ನಿಮ್ಮ ಕಷ್ಟಕ್ಕೆ ನಾವಾಗಿದ್ದೇವೆ. ಈಗ ನನ್ನ ಕಷ್ಟಕ್ಕೆ ನೀವಾಗಬೇಕು. ಏನಿಲ್ಲ, ನಿಮ್ಮ ಕೈಲಾದಷ್ಟನ್ನು ನೀವು ಪ್ರೀತಿಯಿಂದ ಹಾರೈಸಿ ಮಾಡಿಕೊಟ್ಟರೆ ಅದೇ ನಮ್ಮ ಪುಣ್ಯ. ದಯಮಾಡಿ ನೀವು ಇದೊಂದು ಕೆಲಸ ಮಾಡಿಕೊಡಲೇಬೇಕು. ಮುಂದೆ ನಿಮ್ಮ ಪಾಲಿಗೆ ನಾನಿದ್ದೇನೆ ಎಂದು ಹೇಳುತ್ತಿದ್ದರು.

ನನಗೆ ‘ಅರ್ಥ’ದ ಸ್ಪಷ್ಟತೆ ಉಂಟಾಯಿತು. ಹೂಂ, ಆಯ್ತು ಎಂದು ತಲೆ ಆಡಿಸಿ ಗೆಳೆಯನ ಜೊತೆಗೆ ಹೊರ ಬಂದುಬಿಟ್ಟೆ. ಕಾಲೇಜಿನ ದಿನಗಳಲ್ಲಿ ಗೆಳೆಯ ರಾಮಚಂದ್ರನಂತೆಯೇ ನಾನೂ ಭಯಂಕರ ಕ್ರಾಂತಿ, ಪ್ರಾಂತಿಗಳ ಭಾಷಣಗಳಲ್ಲಿ ಹೆಸರುವಾಸಿಯಾಗಿದ್ದವನು. ಆಗ ಕಲಿತಿದ್ದ ನನ್ನ ಅಂತಃಸಾಕ್ಷಿಯ ಕನಸಿನ ಬದಲಾವಣೆಯ ಅರಿವನ್ನು ನಾನೀಗ ಮಂತ್ರಿಗಳ ಪ್ರತಿಷ್ಠೆಯ ಚುನಾವಣೆಯ ತಂತ್ರ ಮಂತ್ರಗಳ ಪ್ರಚಾರಕ್ಕೆ ಅವನ್ನೆಲ್ಲ ಬಳಸಬೇಕಾಗಿತ್ತು. ಹಳ್ಳಿ ಹಳ್ಳಿಗಳಿಗೆ ಹೋಗಿ ನನಗೆ ಗುರುತು ಪರಿಚಯವೇ ಇಲ್ಲದ ನಾನೆಂದೂ ಆತ ಸಜ್ಜನ, ಒಳ್ಳೆಯ ಮನುಷ್ಯ ಎಂದು ಕೇಳಿಯೇ ಇರದವರನ್ನು ಈ ದೇಶದ ಜೀವ, ಈ ನಾಡಿನ ಶಕ್ತಿ, ಈ ಜನರ ಉಸಿರಾಗಿರುವ ನಮ್ಮ ಶ್ರೀಶ್ರೀಶ್ರೀ ಅವರಿಗೆ ಮತ ಚಲಾಯಿಸಿ ಗೆಲ್ಲಿಸಬೇಕೆಂದು ಸುಳ್ಳು ಹೇಳಬೇಕಾದ ಸಂದರ್ಭ ಬಂದೊದಗುತ್ತದೆಂದು ನಾನೆಂದೂ ಭಾವಿಸಿರಲಿಲ್ಲ. ಅಂತಹದನ್ನೆಲ್ಲ ಹೇಳಬೇಕಾದ ತಪ್ಪನ್ನು ನಾನೆಂದೂ ಮಾಡಿರಲಿಲ್ಲ. ಸುಳ್ಳು ಹೇಳುತ್ತಾ ಒಬ್ಬ ಕಳ್ಳನನ್ನು, ಮೋಸಗಾರನನ್ನು, ವಂಚಕನನ್ನು, ಕೊಲೆಗಾರನನ್ನು ನಮ್ಮ ನಾಯಕ, ನಮ್ಮ ಕನಸಿನ ಕಿರೀಟ ಎಂದು ಮೈಕುಗಳ ಮುಂದೆ ಸಾರಿ ಸಾರಿ ಹೇಳಬೇಕಾಗಿತ್ತು. ಅವನ ಪರವಾಗಿ ಕರಪತ್ರ ಬರೆದು ಅವನ ಘನತೆ, ವ್ಯಕ್ತಿತ್ವ, ಸಾಧನೆ, ಜನಸೇವೆ ಇವನ್ನೆಲ್ಲ ಸೃಷ್ಟಿಸಿ ನನ್ನ ಭಾಷೆಯನ್ನು ಕಟುಕರಿಗಾಗಿ ವ್ಯರ್ಥವಾಗಿ ಬಳಸಬೇಕಾಗಿತ್ತು. ಮಾನವೀಯತೆಯ ಸಾಕಾರ ಮೂರ್ತಿ ಎಂಬಂತೆ ಆ ಪಕ್ಷದ ಬಗ್ಗೆ ಸ್ಲೋಗನ್‌ಗಳನ್ನು ದುಂಡಾಗಿ, ಮುದ್ದಾಗಿ ನಾನು ಗೋಡೆಗಳ ಮೇಲೆ ಬರೆದು ಕೊಡಬೇಕಾಗಿತ್ತು. ನನಗೀಗ ನಿಜವಾಗಿಯೂ ರೋಸಿ ಹೋಗಿತ್ತೆನ್ನುವುದಕ್ಕಿಂತ ತಲೆ ಕೆಟ್ಟು ಹೋಗಿತ್ತು. ಚುನಾವಣೆಗೆ ನಿಂತಿರುವವನು ಎಂತಹ ನೀಚ ಎಂಬುದನ್ನು ಹೊರಗೆ ಜನ ನಿರ್ಭಿಡೆಯಿಂದ ಮಾತನಾಡಿಕೊಳ್ಳುವುದು ನನ್ನನ್ನೇ ಗೇಲಿ ಮಾಡಿದಂತೆ ಕೇಳಿಸುತ್ತಿತ್ತು. ಗೆಳೆಯ ರಾಮಚಂದ್ರ ಖರ್ಚಿಗೆಂದು ದುಡ್ಡು ಕೊಡಲು ಬಂದ. ಬೇಡ ಎಂದು ತಿರಸ್ಕರಿಸಿದೆ. ವಿಪರೀತ ಬಿಸಿಲು ಬಾ, ಚಿಲ್ಡ್‌ಬಿಯರ್ ಕುಡಿಯುವಾ ಎಂದು ಬಲವಂತವಾಗಿ ಬಾರೊಂದಕ್ಕೆ ಎಳೆದುಕೊಂಡು ಹೋದ. ನನ್ನಿಂದ ಇಂತಹ ಕೆಲಸ ಸಾಧ್ಯವಿಲ್ಲ ಎಂದು ಹೇಳಲು ನನ್ನಿಂದಾಗಲಿಲ್ಲ. ಒಳಗೆ ಆ ಕೆಲಸದ ಬಗ್ಗೆ ಹೆದರಿಕೆ ಉಕ್ಕಿ ಬರುತ್ತಿದ್ದರೂ ನನ್ನ ಬಾಯಿ ಕಟ್ಟಿಹೋಗಿತ್ತು. ಗೆಳೆಯ ಈ ಕೆಲಸವನ್ನು ನೀನು ಎಷ್ಟು ಚೆನ್ನಾಗಿ ನಿಭಾಯಿಸುತ್ತಿಯೋ ಅಷ್ಟೇ ಚೆನ್ನಾಗಿ ನಿನ್ನ ಮುಂದಿನ ದಿನಗಳು ಇರುತ್ತವೆ ಎಂದು ಕಿವಿಮಾತು ಹೇಳುತ್ತಿದ್ದ. ಹೊಟ್ಟೆ ತುಂಬ ಬಿಯರು ಕುಡಿದೆ. ಏನೇನೋ ತೊದಲಾಡಿದೆ. ರಾಮಚಂದ್ರ ತಣ್ಣಗೇ ಇದ್ದ. ಚುನಾವಣೆಯಲ್ಲಿ ಯಾರು ಎಷ್ಟೆಷ್ಟು ಮತ ಗಳಿಸಬಲ್ಲರೆಂಬ ಒಟ್ಟು ಚಿತ್ರದ ಸಮೀಕ್ಷೆಯನ್ನು ನನ್ನೆದುರು ವಿವರವಾಗಿ ಹೇಳುತ್ತಿದ್ದ. ರಾಜಕಾರಣದ ಎಲ್ಲ ತಂತ್ರ ಮಂತ್ರಗಳನ್ನು ತನ್ನ ಮಾತಿಗೆ ಬಳಸಿಕೊಳ್ಳುತ್ತಿದ್ದ. ತಿಮ್ಮಯ್ಯನ ಬಳಿ ಬಿಸಿನೆಸ್ ನೀಲಿನಕ್ಷೆಗಳನ್ನು ಕೇಳಿಸಿಕೊಂಡು ಸಿಟ್ಟಾಗಿದ್ದುದು ನೆನಪಾಗಿ ಆ ಪಾಪಿ ತಿಮ್ಮಯ್ಯ ಯಾಕಾದರೂ ಮುಂಬಯಿಗೆ ಹೋಗಿ ಅಲ್ಲಿ ಎಲ್ಲಾ ಹಲ್ಕಟ್ ಲಫಡಾ ಕೆಲಸಗಳನ್ನು ಮಾಡಿ ಅನ್ಯಾಯವಾಗಿ ಪ್ರಾಣ ಕಳೆದುಕೊಂಡನೋ ಎಂದು ಬೇಸರವಾಯಿತು.

ರಿಪೋರ್ಟ್ ಬರೆಯಬೇಕೆಂದು ಗೆಳೆಯ ಹೊರಟ ಮೇಲೆ ನನಗೆ ಏನೆಲ್ಲ ನೆನಪುಗಳು ಅಟ್ಟಿಸಿಕೊಂಡು ಬಂದವು. ಮನೆಗೆ ಬಂದವನೇ ಮಲಗಿ ಬಿಟ್ಟೆ. ಹೆಂಡತಿ ರಾಶಿ ರಾಶಿ ಬಟ್ಟೆಗಳನ್ನು ಒಗೆಯಲು ಹಾಕಿಕೊಂಡು ಆ ಕಾಯಕದಲ್ಲಿ ಮಗ್ನಳಾಗಿದ್ದಳು. ಎಷ್ಟೋ ಹೊತ್ತಿನ ತನಕ ನಿದ್ದೆ ಮಾಡಿ ಎದ್ದೆ. ಇಲ್ಲಾ ನನ್ನ ಹೆಂಡತಿಯೇ ಎಬ್ಬಿಸಿ ಯಾರೋ ಬಂದಿದ್ದಾರೆ ಎಂದಳು. ನನ್ನ ಗೆಳೆಯನ ಪರಿಚಯವೇ ಆಕೆಗೆ ಆಗಿರಲಿಲ್ಲ. ಏನೆಂದು ಕೇಳುವುದಕ್ಕಿಂತ ಗೆಳೆಯನಿಗೆ ಕಾಫಿ ಮಾಡಿಕೊಟ್ಟು ಆಯ್ತು ಈ ರಾತ್ರಿ ಕರಪತ್ರಗಳನ್ನೆಲ್ಲ ಬರೆದು ಬಿಡ್ತೇನೆ. ನಾಳೆ ಗೋಡೆ ಬರಹಕ್ಕೆ ಖಂಡಿತ ಬರ್‍ತೇನೆ ಎಂದು ಹೇಳಿ ಕಳಿಸಿ ಬಿಟ್ಟೆ.

ಹೆಂಡತಿಗೆ ಇದನ್ನೆಲ್ಲ ಹೇಳಲೋ ಬೇಡವೋ ಎಂದು ಒಬ್ಬನೇ ಟೇರೇಸಿನಲ್ಲಿ ಕುಳಿತು ವಿವರವಾಗಿ ಯೋಚಿಸಿದೆ. ಎಂದೂ ಇಲ್ಲದ ವ್ಯಾಕುಲತೆ ಬಂದು ಈ ಮಹಡಿ ಮೇಲಿಂದ ಕೆಳಕ್ಕೆಬಿದ್ದು ಸತ್ತು ಹೋಗಲಾ ಎನಿಸಿ ಅಯ್ಯೋ ಆ ರೈಲಿನಲ್ಲಿ ಆ ಹೆಣ್ಣು ಮಗಳು ಹಾಗೇಕೆ ಜಿಗಿದು ಪ್ರಾಣ ಕಳೆದುಕೊಂಡಳೆಂದು ಹೆದರಿಕೆಯಾಗಿ ಕೆಳಗಿಳಿದು ಬಂದು ಬಿಟ್ಟೆ. ಆಗಲೇ ಸಂಜೆ ಮುಳುಗಿ ರಾತ್ರಿ ಬಂದಿತ್ತು. ಬದುಕಿನಲ್ಲಿ ಯಾವುದೂ ತಾರ್ಕಿಕವಾಗಿರುವುದಿಲ್ಲವೆಂದರೂ ಇಡೀ ಜೀವಮಾನದ ಎಲ್ಲ ಸ್ಥಿತಿಯನ್ನು ನಿಭಾಯಿಸುವ ಕೈಗಳು ಅಗಾಧವಾಗಿ ಚಾಚಿಕೊಂಡಿರುತ್ತವೆ ಎನಿಸಿತು.

ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನೆಂದೂ ನಡೆದುಕೊಂಡಿರಲಿಲ್ಲ. ನಾನು ಯಾವುದೋ ಇನ್ನೊಂದು ದೊಡ್ಡ ಬಲೆಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದೇನೆನಿಸಿತು.

ಎಲ್ಲೆಲ್ಲೋ ಯಾರ್‍ಯಾರೊ ಎಂತೆಂಥವರನ್ನೋ ಬಲೆ ಬೀಸಿ ಹಿಡಿದು ಹಾಕುತ್ತಿರುತ್ತಾರೆಂಬ ಹಳೆಯ ಭಯ ಮತ್ತೆ ಎದುರಾಯಿತು. ನನ್ನ ಮಕ್ಕಳು ಗೋವಿನ ಹಾಡು ಪದ್ಯವನ್ನು ಹಾಡುತ್ತ ನಾನು ಹುಲಿ ನೀನು ಹಸು ಎಂದು ಎರಡೂ ಪಾತ್ರಗಳನ್ನು ಅಭಿನಯಿಸುತ್ತಾ ಹಜಾರದಲ್ಲಿ ಆಟ ಆಡುತ್ತಿದ್ದರು. ಕತ್ತಲು ಕರಗುತ್ತಿತ್ತು. ಯಾವ ರೀತಿಯಲ್ಲೂ ಕರಪತ್ರ ಬರೆಯಲು ಸ್ಲೋಗನ್‌ಗಳನ್ನು ರಚಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಇಂತಹ ಹೇಯ ಕೆಲಸಕ್ಕಿಂತ ಎಲ್ಲಿಯಾದರೂ ಭಿಕ್ಷೆಬೇಡಿ ಬದುಕುವುದು ಉತ್ತಮ ಎನಿಸಿತು. ನನ್ನ ಕಾಲೇಜು ದಿನಗಳು ನೆನಪಾದವು. ಅರೇ ಇದೆಲ್ಲ ಯಾಕೆ ಹೀಗಾಗುತ್ತದೆಂದು ಪೆಚ್ಚಾದೆ.

ನನ್ನ ಸಮಸ್ಯೆಗಳಲ್ಲಿ ಮನಸ್ಸು ಕಲೆಸಿ ಹೋಯಿತು. ಇಲ್ಲ ಆ ನೀಚ ಎಂತಹ ಕೊಲೆಗಾರ ಎಂದು ನಾನು ಬಲ್ಲೆ. ಅವನನ್ನು ಹೊಗಳಲಾರೆ. ಸತ್ಯವಂತ ಎಂದು ಬರೆಯಲಾರೆ. ಇಲ್ಲಾ ನಾನೊಂದು ತೀರ್ಮಾನಕ್ಕೆ ಈ ರಾತ್ರಿಯೇ ಬಂದು ಬಿಡಬೇಕೆಂದು ಹಠ ತೊಟ್ಟೆ. ಊಟ ಮಾಡಲು ಮನಸ್ಸಾಗಲಿಲ್ಲ. ಆದರೂ ಒಂದೆರಡು ಗಚ್ಚು ತಿಂದೆ. ಹೆಂಡತಿ ಯಾಕ್ರೀ ಹೀಗೆ ಸಪ್ಪಗಿದ್ದೀರಿ, ಹುಷಾರಿಲ್ಲವಾ ಎಂದು ತಲೆ ನೀವಿದಳು. ಬಹಳ ಸಮಯ ಜಾರಿ ಹಾರಿಹೋಯಿತು. ಮಕ್ಕಳು ಮಡದಿ ಎಲ್ಲರೂ ಮಲಗತೊಡಗಿದರು. ಎಲ್ಲೆಲ್ಲೂ ಕತ್ತಲು ತುಂಬಿತ್ತು. ನೀರವತೆ-ವ್ಯಾಪಿಸಿತ್ತು. ಅದು ಮಧ್ಯರಾತ್ರಿಯ ಹೊತ್ತು. ಎದ್ದೆ, ಒಂದೇ ದೃಢದಲ್ಲಿ ಧೈರ್ಯದಲ್ಲಿ ಗುರಿಯಲ್ಲಿ ಮೇಲೆದ್ದು ಕುಳಿತೆ. ಹೆಂಡತಿ ಮಕ್ಕಳನ್ನು ಮತ್ತೆ ಮತ್ತೆ ನೋಡಿದೆ. ಅವರು ನಿದ್ರಿಸುತ್ತಿರುವಂತೆ ಕಂಡಿತು. ಮೆಲ್ಲಗೆ ಬಾಗಿಲು ತೆಗೆದೆ. ಬೀದಿಗೆ ಬಂದೆ. ಸುತ್ತಮುತ್ತ ನೋಡಿದೆ. ಯಾರೂ ಇಲ್ಲ. ಯಾವ ತಡೆಯೂ ಇಲ್ಲ. ಓಡತೊಡಗಿದೆ. ಓಡಿ ಓಡಿ ಜಿಗಿದಂತೆಲ್ಲ ಹಾರಿ ಹಾರಿ ಮೇಲೇರಿ ತೇಲಿ ಹೋದಂತಾಯಿತು. ವೇಗವಾಗಿ ಹಾರತೊಡಗಿದೆ. ಈ ಊರು ಬೇಡ ಈ ಜನಾ ಬೇಡ. ಈ ದಂಧೆ ಬೇಡ ಈ ಹಿಂಸೆ ನರಕ ಯಾವೊಂದು ಬೇಡ ಬೇಡ ಎಂದು ಎಲ್ಲೂ ನಿಲ್ಲದೆ ಚಲಿಸಿದೆ. ಸುಮಾರು ಹೊತ್ತಾದ ಮೇಲೆ ಹಿಂತಿರುಗಿ ನೋಡಿದರೆ ಅರೇ ನನ್ನ ಹೆಂಡತಿ ಮಕ್ಕಳೂ ನನ್ನಂತೆಯೇ ಹಾರಿ ಹಾರಿ ಬರುತ್ತಿದ್ದಾರೆ. ನೀನು ಯಾವ ಮೂಲೆಗೆ ಹೋದರೂ ಸರಿಯೆ ನಿನ್ನನ್ನು ನಾವೆಂದಿಗೂ ಬಿಡುವುದಿಲ್ಲ ಎಂಬಂತೆ ರಭಸವಾಗಿ ಬೆನ್ನಟ್ಟಿ ಹಾರಿ ಬರುತ್ತಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೇನೋ ಎಂಬಂತೆ ನಾನು ನನ್ನ ವೇಗವನ್ನು ಹೆಚ್ಚಿಸಿದೆ. ಅನೇಕ ಹಳ್ಳಕೊಳ್ಳ ಕೆರೆ ನದಿ ಸರೋವರ ಬೆಟ್ಟಗುಡ್ಡ ಕಣಿವೆ ಕಾಡು ಬಯಲು ಎಲ್ಲೆಲ್ಲೋ ನಾನು ಹಾರಿ ಹಾರಿ ದೂರ ದೂರ ಹಾರತೊಡಗಿದೆ.
ನನ್ನ ಮಕ್ಕಳು ಕೂಗುತ್ತಿದ್ದವು. ಹಿಂಬಾಲಿಸಲಾರದ ಮರಿ ಹಕ್ಕಿಗಳಂತೆ ಕರೆಯುತ್ತಿದ್ದವು. ನನ ಹೆಂಡತಿ ಅವರಿಬ್ಬರನ್ನು ತನ್ನ ರೆಕ್ಕೆ ಮೇಲೆ ಕೂರಿಸಿಕೊಂಡು ಅಪಾರ ವೇಗದಲ್ಲಿ ನನ್ನನ್ನೇ ನುಂಗುವಂತೆ ನೋಡುತ್ತ ಬರುತ್ತಿದ್ದಳು.

ನಾನು ತೀರ್ಮಾನಿಸಿದೆ. ಅಲ್ಲೊಂದು ಬೆಟ್ಟದ ಮೇಲೊಂದು ಮಹಾ ವೃಕ್ಷ ಗೋಚರಿಸಿತು. ಅದು ಎಂತಹುದೋ ಒಂದು ಮಾಯಾ ಮರವೇ ಇರಬೇಕು. ಇಲ್ಲ ಇಲ್ಲಾ ಅದು ಬೋಧೀ ವೃಕ್ಷವೇ ಇರಬೇಕು. ಅದರ ಕೆಳಕ್ಕೆ ಇಳಿಯತೊಡಗಿದೆ. ಇಳಿದೇ ಬಿಟ್ಟೆ. ನಿಜವಾಗಿಯೂ ಅದು ಮಹಾ ಮರ. ಜೀವದ ಮರ ನೆರಳಿನ ಮರ ಹಸುರಿನ ಮರ ಫಲಗಳ ಮರ. ನನ್ನಂತೆಯೇ ಹೆಂಡತಿ ಮಕ್ಕಳೂ ನನ್ನೊಡನೆ ಕೆಳಕ್ಕೆ ಇಳಿದರು. ನನ್ನನ್ನು ಸುತ್ತಿಕೊಂಡರು. ಅಹೋ ರಾತ್ರಿ ಹೀಗೆ ಓಡಿ ಹೋಗಲು ಬಿಡುವುದಿಲ್ಲ ಎಂಬಂತೆ ನೀನು ಎಲ್ಲೇ ಹೋದರೂ ನಾವೂ ಬರುತ್ತೀವೆಂಬಂತೆ ಅಪ್ಪಿಕೊಂಡರು. ನಾನು ತೀರ್ಮಾನಿಸಿ ಆಗಿತ್ತು. ಬೆಳಕು ಹರಿಯುತ್ತಿತ್ತು. ಈ ಮರಕ್ಕೆ ತೊಟ್ಟಿಲು ಕಟ್ಟುವಾ. ಉಯ್ಯಾಲೆ ಕಟ್ಟುವಾ. ಇದರ ಕೆಳಗೊಂದು ಗುಡಿಸಲು ಕಟ್ಟುವಾ. ಅಲ್ಲಿ ಎದುರಿನ ನದಿಯಲ್ಲಿ ಮೀಯುವಾ ಬನ್ನಿ. ನಾನೆಲ್ಲೂ ಹೊರಟು ಹೋಗುವುದಿಲ್ಲ. ಇನ್ನು ಮುಂದೆ ಇಲ್ಲೇ ಇರುವ ಎಂದು ಅವರ ಜೊತೆ ಕೂಡಿಕೊಂಡೆ.

ನನ್ನ ಮಕ್ಕಳಿಬ್ಬರೂ ಗುಡಿಸಲು ಕಟ್ಟಲು ನೆರವಾಗುತ್ತಿದ್ದವು. ಗೂಡು ಕಟ್ಟಲು ನನಗೂ ನನ್ನ ಹೆಂಡತಿಗೂ ಹೊಸ ಚೈತನ್ಯವೊಂದು ಮೊಳಕೆ ಒಡೆಯುತ್ತಿತ್ತು. ಅಲ್ಲಿಂದ ಹಾರಿ ಬಂದ ಮೇಲೆ ನಮಗೆ ದಣಿವೇ ಇರಲಿಲ್ಲ. ಇನ್ನು ಮುಂದೆ ನಮಗೆ ಸಾವುನೋವು ಹಿಂಸೆ ನರಕ ಯಾವುದೂ ಇಲ್ಲ ಎಂಬಂತೆ ಅಲ್ಲಿದ್ದ ಉಯ್ಯಾಲೆಯಲ್ಲಿ ಒಬ್ಬೊಬ್ಬರೂ ಒಬ್ಬೊಬ್ಬರನ್ನು ಕೂರಿಸಿಕೊಂಡು ಹಾಡುತ್ತ ತೇಲತೊಡಗಿದೆವು. ಕಾಲ ನಮ್ಮ ಮುಂದೆ ನಡೆದು ಹೋಗುತ್ತಿತ್ತು.
*****
ಬರೆದದ್ದು: ೧೯೯೫ ಪ್ರಕಟವಾದದ್ದು: ೧೯೯೮ (ಕನ್ನಡಪ್ರಭ ದೀಪಾವಳಿಯ ವಿಶೇಷಾಂಕ)

ಕೀಲಿಕರಣ: ಶ್ರೀನಿವಾಸ (ಚೀನಿ), ಮತ್ತು ಗುರುಪ್ರಸಾದ್ (ಪಚ್ಚಿ)
ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.