ಜಾಗತೀಕರಣದ ಸಾಂಸ್ಕೃತಿಕ ನೆಲೆ

ನಿನ್ನ ನಗೆಯನ್ನೆ ಮೊಳಗುತ್ತಿರುವ ಮಲ್ಲಿಗೆ,
ನಿನ್ನ ನಲ್ಮೆಯ ನೆಳಲನೀವ ಮಾವು:
ನಿನ್ನೊಲವನಪ್ಪಿ ತೋರುವ ಕೊಳದ ತಳ ಕೆಸರು-
ಇಲ್ಲಾಡುವುದು-ಇದೇ ಹೊಸ ಠರಾವು(ಕೂಪ ಮಂಡೂಕ)-ಗೋಪಾಲಕೃಷ್ಣ ಅಡಿಗ

ಆರ್ಥಿಕ ರಂಗದಲ್ಲಿ ‘ಜಾಗತೀಕರಣ’ ಇಂದು ಎಲ್ಲಾ ಸರ್ಕಾರಗಳ ಮೂಲಮಂತ್ರ. ಅದಕ್ಕೆ ಪೂರಕವಾಗಿರುವುದು ಮಾಹಿತಿ ತಂತ್ರಜ್ಞಾನ ಜಗತ್ತಿನಾದ್ಯಂತ ಹನೆದಿರುವ ಅತ್ಯದ್ಬುತವಾದ ಜಾಲ-ಇಂಟರ್‌ನೆಟ್. ಇವೆಲ್ಲಾ ಸಾಂಸ್ಕೃತಿಕವಾಗಿ ಉಂಟುಮಾಡುವ ಪರಿಣಾಮಗಳೇನು ಎಂಬುದು ನಮ್ಮ ಇಂದಿನ ಮುಖ್ಯ ಕಾಳಜಿಗಳಲ್ಲಿ ಒಂದು.

ನಿರಂತರವಾಗಿ ಅರಸುವ ಮನುಷ್ಯನ ಮನಸ್ಸೇ ಮಾನವ ಸಂಸ್ಕೃತಿಯ ಜೀವಾಳ. ಆ ತಳಹದಿಯ ಮೇಲೆ ನಾವು ಅನೇಕ ವಿವರಗಳನ್ನು ನಿರ್ಮಿಸಿಕೊಂಡಿದ್ದೇವೆ. ಪರಿಸರ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ರೂಪಗಳು ಬೇರೆ. ನಿರಂತರವಾದ ಈ ಶೋಧನೆಯ ಕ್ರಮಗಳೂ ಬೇರೆ.

ಅನುಷ್ಯ ಅರಿಯುವ ಒಂದು ರೀತಿ-ತಾನು ಇರುವ ತಾಣವೇ ಸಮಸ್ತ ಲೋಕವೂ ಇರುವ ತಾಣವೆಂದು ತಿಳಿದು ಶೋಧಿಸುವುದು. ಇನ್ನೊಂದು ಪ್ರಪಂಚವಿಡೀ ಸುತ್ತಿ, ಹುಡುಕಿ ಅರಸಿ ಕಾಣಲು ಹೊರಡುವುದು. ಇದನ್ನೊಂದು ಪೌರಾಣಿಕ ಉದಾಹರಣೆಯಿಂದ ಹೇಳುವುದಾದರೆ ಪ್ರಪಂಚ ಪ್ರದಕ್ಷಿಣೆ ಮಾಡು ಎಂದರೆ ಗಣಪತಿ, ತನ್ನ ತಾಯಿ ತಂದೆಯರಿಗೆ ಒಂದು ಸುತ್ತು ಬರುತ್ತಾನೆ. ಷಣ್ಮುಖನಾದರೋ ಪಕ್ಷಿವಾಹನನಾಗಿ ಭೂ ಪ್ರದಕ್ಷಿಣೆ ಮಾಡುತ್ತಾನೆ.

ಈ ಗಣಪತಿ ಹಾಗೂ ಸುಬ್ರಹ್ಮಣ್ಯರ ಗಮನ ಆದಿಯಿಂದಲೂ ಮನುಷ್ಯ ನಿರಂತರವಾಗಿ ಅರಸುತ್ತಾ ಬಂದ ಎರಡು ಸಾಧ್ಯತೆಗಳನ್ನು ಸೂಚಿಸುತ್ತದೆ. ಒಂದು ಇರುವಲ್ಲೆ ಇದ್ದು ಕಾಣಬಹುದಾದ್ದು. ಮತ್ತೊಂದು ಭೂ ಪ್ರದಕ್ಷಿಣೆಯಲ್ಲಿ ಪಡೆಯಬಹುದಾದ್ದು. ತೀರ್ಥಯಾತ್ರೆಗೆ ಎದುರಾಗಿ ಗಂಗೇಚ ಯಮುನೇಚೈವ ಗೋದಾವರೀ ಸರಸ್ವತಿ ಎಂದು ತನ್ನ ಮನೆ ಬಾವಿಯ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವ ಕ್ರಮದಂತೆ. ಇವೆರಡೂ ಪ್ರತ್ಯೇಕವಾದ ಎರಡು ಸಾಧ್ಯತೆಗಳನ್ನು ನಿರಂತರವಾಗಿ ತೋರಿಸುತ್ತಾ ಬಂದಿವೆ. ನಾವು ಟೆಕ್ನಾಲಜಿ (ಖಿeಛಿhಟಿoಟogಥಿ) ಎನ್ನುವ ಇಂದಿನ ಯಂತ್ರಕಲಾ ಶಾಸ್ತ್ರವು ಬಹುಶಃ ಈ ಎರಡೂ ಸಾಧ್ಯತೆಗಳನ್ನು ಒಂದಾಗಿ ನೀಡಲು ಪ್ರಯತ್ನಿಸುತ್ತಿದೆಯೇನೋ ಎಂದು ಅನಿಸುತ್ತಿದೆ.

ಇಂದಿನ ಇಂಟರ್‌ನೆಟ್ ಟೆಕ್ನಾಲಜಿ-ಒಂದು ರೀತಿಯಲ್ಲಿ ಗಣಪತಿ ಹಾಗೂ ಸುಬ್ರಹ್ಮಣ್ಯರನ್ನು ಒಟ್ಟಿಗೆ ಕೊಡಬಲ್ಲ ಜಾಲ. ಇರುವ ತಾಣದಲ್ಲೇ ಇದ್ದರೂ ಜಗತ್ತಿನ ನಂಟಿನ ನೇರ ಸಂಪರ್ಕ. ಒಂದನ್ನು ಇನ್ನೊಂದಕ್ಕೆ ಹೆಣೆಯುವ ಈ ಬಂಧ ಇದ್ದಲ್ಲೇ ಇದ್ದೂ ನಿಜವಾದ ಪ್ರಪಂಚ ಪ್ರದಕ್ಷಿಣೆಯನ್ನು ಒದಗಿಸಿಕೊಡುವಂತಹದ್ದು.

ಅನಾದಿಯಿಂದ ಇಂದಿನವರೆಗೆ ಮನುಷ್ಯನ ಮುಖ್ಯ ಸಂಕ್ರಮಣ ಹಂತಗಳನ್ನು ಗುರುತಿಸಿ ಉದ್ಯೋಗದ ಸಂಸ್ಕೃತಿ ಹಾಗೂ ಅದಕ್ಕೆ ಬೇಕಾದ ಆಡಳಿತ ತಂತ್ರದ ಬದಲಾವಣೆಗಳನ್ನು ನಾವು ಸುಲಭವಾಗಿ ಪಟ್ಟಿ ಮಾಡಬಹುದು. ಮರದಿಂದ ಇಳಿದ ಕಾಡು ಮನುಷ್ಯ ಒಂದು ಕಡೆ ನೆಲೆ ನಿಲ್ಲಲು ಕಲಿತದ್ದು. ನಂತರದ ಹಂತಗಳು ಕೃಷಿ, ಕೈಗಾರಿಕಾ ಕ್ರಾಂತಿ. ಮುಂದಿನ ಹಂತವಾದ ಕಂಪ್ಯೂಟರ್ ಮೂಲದಿಂದ ಇಂಟರ್‌ನೆಟ್ ವ್ಯವಸ್ಥೆ ಬೆಳೆದಂತೆ ನಮ್ಮ ಉತ್ಪಾದನೆ ಹಾಗೂ ಕೆಲಸದ ಕ್ರಮದಲ್ಲಿ-ಮುಖ್ಯವಾಗಿ ಕೆಲಸದ ಜಾಗಗಳ ವಿಕೇಂದ್ರೀಕರಣ ಆಗುತ್ತದೆ. ಹಾಗೆಯೇ ಈ ವಿಕೇಂದ್ರೀಕರಣದ ನಿಯಂತ್ರಣವೂ ಕೇಂದ್ರೀಕರಣಕ್ಕೆ ಒಳಗಾಗುತ್ತದೆ.

ನೇರವಾದ ಎಂಜಿನಿಯರಿಂಗ್ ಉತ್ಪಾದನೆ, ಗಣಿಗಾರಿಕೆ ಮುಂತಾದುವನ್ನು ಬಿಟ್ಟರೆ, ಇತರ ವಾಣಿಜ್ಯ ವ್ಯವಹಾರದ ಕೆಲಸದ ಜಾಗಕ್ಕೆ ಕಛೇರಿಗಳೇ ಬೇಕಾಗಿಲ್ಲ. ಮನೆಯಲ್ಲಿ, ಪ್ರವಾಸದಲ್ಲಿ ಎಲ್ಲಿದ್ದರೂ ಇಂಟರ್‌ನೆಟ್ ಸಂಪರ್ಕದ ಮೂಲಕ ಕೆಲಸ ಮಾಡುತ್ತಾ ಇರಬಹುದು. ಕೆಲಸಕ್ಕಾಗಿ ಹೋಗಬೇಕಾಗಿಯೇ ಇಲ್ಲ. ನಾನು ಈಗ ಕೆಲಸ ಮಾಡುತ್ತಿರುವ ಸಿಸ್ಕೋ ಸಿಸ್ಟಮ್ಸ್ ಕಂಪೆನಿ ಭಾರತದಲ್ಲೇ ಇಂತಹ ಸಾಧ್ಯತೆಗಳ ಸೂಕ್ಷ್ಮ ರೂಪಗಳನ್ನು ತೋರಿಸುತ್ತಾ ಇದೆ. ಸಿಸ್ಕೋ ಸಿಸ್ಟಮ್‌ನ ಮುಂಬಯಿ ಕಛೇರಿಯಲ್ಲಿ ಒಬ್ಬ ಉದ್ಯೋಗಿಗೆ ಆಫೀಸಿನಲ್ಲಿ ನಿಶ್ಚಿತವಾದ ಮೇಜು ಕುರ್ಚಿ, ಜಾಗ ಇಲ್ಲ. ಆಫೀಸಿಗೆ ಬಂದಾಗ ಖಾಲಿ ಇದ್ದ ಮೇಜು ಕುರ್ಚಿಯಲ್ಲಿ ಕುಳಿತು ತನ್ನ ಲ್ಯಾಪ್‌ಟಾಪ್ ಕಂಪ್ಯೂಟರ್‌ನಿಂದ ಅಲ್ಲಿರುವ ಇಂಟ್ರನೆಟ್ ಮೂಲಕ ಮೇಜಿನ ಫೋನು. ಧ್ವನಿ ರೆಕಾರ್ಡಿಂಗ್ ಎಲ್ಲವೂ ಸಂಪರ್ಕಕ್ಕೆ ಬಂದು ತಾನು ಇರುವ ತಾಣದಲ್ಲೇ ಕೆಲಸದ ಕಛೇರಿ ಸಿದ್ಧವಾಗುತ್ತದೆ. ಇದು ಸಿಸ್ಕೊ ಕಂಪನಿಯ ಓeತಿ Woಡಿಟಜ ಔಜಿಜಿiಛಿe. ಮುಂದೆ ಇದೇ ಟೆಕ್ನಾಲಜಿಯ ಬಳಕೆ ಹೆಚ್ಚಾದಾಗ ಅದಕ್ಕೆ ಆಫೀಸು, ಮನೆ, ಯಾವ ವ್ಯತ್ಯಾಸಗಳೂ ಇಲ್ಲ. ಬರೆಯುವ ಪೇಪರುಗಳ ಅಗತ್ಯವೇ ಇಲ್ಲ.

ಇಂತಹ ಟೆಕ್ನಾಲಜಿ ಕೆಲಸಕ್ಕೆ ವಿಕೇಂದ್ರೀಕೃತ ವ್ಯವಸ್ಥೆ ಮಾಡಿದಂತೆಯೇ, ಇಡೀ ಜಗತ್ತಿಗೇ ಒಂದು ಕೇಂದ್ರೀಕೃತ ವ್ಯವಸ್ಥೆಯನ್ನು ಸಮರ್ಥವಾಗಿ ಅದೇ ಇಂಟರ್‌ನೆಟ್ ಟೆಕ್ನಾಲಜಿ ಮೂಲಕ ನಿರ್ಮಿಸಿಕೊಡಬಲ್ಲದು. ಇಂತಹ ಟೆಕ್ನಾಲಜಿ ಸಂಸ್ಕೃತಿಯ ಮೇಲೆ ಬೀರುವ ಪ್ರಭಾವ ಈ ಹೊಸ ರಚನೆಯಲ್ಲೇ ಅಡಗಿದೆ.

ಸಾಫ್ಟ್‌ವೇರ್ ಕಂಪನಿಯ ಕೆಲಸಗಾರರು ನಿತ್ಯ ತಮ್ಮ ಮೇಜಿನ ಮೇಲಿರುವ ಕಂಪ್ಯೂಟರ್ ಹಾಗೂ ಇಂಟರ್‌ನೆಟ್‌ನಿಂದಾಗಿ ಪ್ರಪಂಚದಾದ್ಯಂತ ತಮ್ಮದೇ ಒಂದು ಗುಂಪನ್ನು ಅದರದ್ದೇ ನೀತಿ ನಿಯಮಗಳನ್ನು ಹೊಂದಿರುತ್ತಾನೆ. ನಾನು ಕೆಲಸ ಮಾಡುವ ಕಂಪನಿ ಸಿಸ್ಕೊ ಸಿಸ್ಟಮ್ಸ್ ಭಾರತದಲ್ಲೇ ಬಹುದೊಡ್ಡದಾದ ಸಂಪರ್ಕಜಾಲ ಹೊಂದಿದೆ. ಕೆಲಸದ ಕಛೇರಿಯಲ್ಲಿ ನನ್ನ ಮೇಜಿನ ಮೇಲೆ ಸದಾ ಇರುವ ೪೮ ಎಂ.ಬಿ.ಪಿ.ಎಸ್.(ಒಂದು ಸೆಕೆಂಡಿಗೆ ನೀಡಬಲ್ಲ ೪೮ ಮೆಗಾಬಿಟ್ಸ್ ಕಂಪ್ಯೂಟರ್ ಇಂಟರ್‌ನೆಟ್ ಜಾಲ ಸಂಪರ್ಕ) ಇಂಟರ್‌ನೆಟ್ ಸಂಪರ್ಕ ಅನೇಕ ಟೆಕ್ನಾಲಜಿ ವಿಚಾರಗಳನ್ನು ಒಂದು ಸಾಧಾರಣ, ಸಾಮಾನ್ಯ ವಿಚಾರವೆನ್ನಿಸುವಂತೆ ಮಾಡಿದೆ. ಆದರೆ ಭಾರತದಲ್ಲಾಗಲಿ, ಅಮೆರಿಕಾ ದೇಶದಲ್ಲೇ ಆಗಲಿ ಕಂಪ್ಯೂಟರ್ ಕಂಪನಿಗಳಿಂದ ಹೊರಗೆ ಕೆಲಸ ಮಾಡುವವರ ಜೊತೆ ವ್ಯವಹರಿಸುವಾಗ, ಈ ಟೆಕ್ನಾಲಜಿ ನನ್ನಲ್ಲಿ ಉಂಟು ಮಾಡಿದ ಮನಸ್ಥಿತಿ ಬಹಳ ಸಂಕಷ್ಟಗಳನ್ನು ಒಡ್ಡುತ್ತದೆ.

ಈಗ ಐದಾರು ವರುಷಗಳ ಹಿಂದೆ, ದೊಡ್ಡ ಪ್ರಮಾಣದ ಎಂಜಿನಿಯರಿಂಗ್ ವಸ್ತುಗಳ ತಯಾರಿಕಾ ಸಂಸ್ಥೆಯಾದ ಎಚ್.ಎಮ್.ಟಿ. ಕಂಪನಿಯ ಕೆಲಸ ಬಿಟ್ಟು ಅಮೆರಿಕಾದ ಪ್ರಖ್ಯಾತ ಸಾಫ್ಟ್‌ವೇರ್ ಕಂಪನಿಗಳಲ್ಲಿ ಒಂದಾದ ನಾವ್ಹೆಲ್ ಸಾಫ್ಟ್‌ವೇರ್ ಸಂಥೆಯ ಟೆಕ್ನಾಲಜಿ ಕಮ್ಯುನಿಕೇಷನ್ ಮುಖ್ಯ ಅಧಿಕಾರಿಯಾಗಿ ನಾನು ಸೇರಿಕೊಂಡಾಗ ಅದು ಸಾರ್ವಜನಿಕ ಸಂಪರ್ಕ ವಲಯದಲ್ಲಿ ಬೆಂಗಳೂರು ನಗರದೊಳಗೆ ಎಲ್ಲರೂ ಗಮನಿಸಿದ ಸುದ್ದಿಯಾಯಿತು. ಬಹಳ ಜನ ಖಾಸಗಿ ಕಂಪನಿಗಳ ಅಪೇಕ್ಷಿತರು ಆ ಹುದ್ದೆಗೆ ಆಯ್ಕೆಯಾಗದೇ ಇದ್ದಾಗ ಸರ್ಕಾರಿ ಒಡೆತನದ ಸಾರ್ವಜನಿಕ ಸ್ವಾಮ್ಯದ ಕಂಪನಿಯೊಂದರ ಉದ್ಯೋಗಿಯಾಗಿದ್ದ ನನ್ನ ಆಯ್ಕೆಗೆ ಇದ್ದ ವಿಶೇಷತೆ ಏನು ಎಂಬುದು ಅನೇಕರಿಗೆ ಆಶ್ಚರ್ಯ ಉಂಟಾಗಲು ಕಾರಣ. ಯಾವುದೇ ಪ್ರಭಾವಕ್ಕು ಒಳಗಾಗದೆ ಇಂತಹ ಅಂತರಾಷ್ಟ್ರೀಯ ಕಂಪನಿಗಳ ಆಯ್ಕೆ ನಡೆಯುವುದರಿಂದ ಈ ಆಯ್ಕೆಯ ಕಾರಣದ ಕುತೂಹಲ ಹೆಚ್ಚಿರುತ್ತದೆ.

ನನ್ನ ಆಯ್ಕೆಗೆ ಕಾರಣವಾದ ಬಯೋಡೇಟ ನೀಡುವುದು ಇಲ್ಲಿ ನನ್ನ ಉದ್ದೇಶವಲ್ಲ. ಸಾಂಸ್ಕೃತಿಕ ಗಮನ ಎಲ್ಲಾ ಕಡೆ ಹೇಗೆ ಅನಿವಾರ್ಯ ಎಂಬುದನ್ನು ಸೂಚಿಸುವುದಕ್ಕಾಗಿ ಮಾತ್ರ ಈ ಮಾತು. ಬಹು ದಿರ್ಘವಾಗಿ ನಡೆದ ಅನೇಕ ಸುತ್ತಿನ ಸಂದರ್ಶನಗಳ ಕೊನೆಯಲ್ಲಿ ನಾವ್ಹೆಲ್‌ನ ಆಡಳಿತ ನಿರ್ದೇಶಕರು ನನಗೆ ಕೇಳಿದ ಪ್ರಶ್ನೆ. ‘ಒಂದೇ ವಾಕ್ಯದಲ್ಲಿ ಹೇಳಬೇಕಾದರೆ, ಸಂಪರ್ಕದ ಮುಖ್ಯಾಧಿಕಾರಿಯಾಗಿ ನಿನ್ನ ಕೆಲಸವನ್ನು ಹೇಗೆ ಸಂಗ್ರಹಿಸುತ್ತಿ’ ನಾನು ನೀಡಿದ ಉತ್ತರ ಸಾಂಸ್ಕೃತಿಕ ನೆಲೆಯಿಂದ ಬಂದುದಾಗಿತ್ತು. ನಾನು ಹೇಳಿದ ಒಂದೇ ವಾಕ್ಯ ‘I ತಿಚಿಟಿಣ ಣo bಡಿeಚಿಞ mಚಿಟಿ ಚಿಟಿಜ mಚಿಛಿhiಟಿe ಡಿeಟಚಿಣioಟಿshiಠಿ ಣo esಣಚಿbಟish ಡಿeಟಚಿಣioಟಿshiಠಿ ತಿiಣhiಟಿ ಚಿಟಿಜ ouಣsiಜe’ ನನಗಿದ್ದ ಇತರ ಎಲ್ಲಾ ಅರ್ಹತೆಗಳಿಗಿಂತ ಹೆಚ್ಚಾಗಿ ಈ ಒಂದು ಮಾತು, ನನಗೆ ಕೆಲಸ ಸಿಕ್ಕುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.

ಸಾಫ್ಟ್‌ವೇರ್ ಹಾಗೂ ಕಂಪ್ಯೂಟರ್ ಕಂಪನಿಗಳೊಳಗೆ ಮನುಷ್ಯ ಮತ್ತು ಯಂತ್ರದ ಸಂಬಂಧಗಳ ಬಗ್ಗೆ ಅನೇಕ ಸಾವಿರ ಹಾಸ್ಯ ಚಟಾಕಿಗಳಿವೆ. ಅವೆಲ್ಲದರ ಹಿಂದೆ ಮನುಷ್ಯ ಪರಸ್ಪರ ಹೆಚ್ಚು ಹೆಚ್ಚು ಅಪರಿಚಿತನಾಗುವ ಬಗ್ಗೆ, ಪರಕೀಯನಾಗುತ್ತಾ ಹೋಗುವ ಬಗ್ಗೆ ಆತಂಕ ತುಂಬಿದೆ. ಕಂಪನಿಯೊಳಗಿನ ಅಂತರ್ಜಾಲದ (ಇನ್‌ಟ್ರಾನೆಟ್)ನೋಟೀಸು ಬೋರ್ಡಿನಲ್ಲಿ ನೋಡಿ, ತನ್ನಿಂದ ನಾಲ್ಕು ಮೇಜು ಆಕಡೆ ಇರುವವನಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿ ಒಂದು ಇ-ಮೈಲ್ ಕಳುಹಿಸುತ್ತಾರೆ. ಐದು ನಿಮಿಷಗಳ ಬಳಿಕ ಆತ ಎದುರು ಸಿಕ್ಕಾಗ ಹುಟ್ಟುಹಬ್ಬದ ಶುಭಾಶಯ ಹೇಳುವುದಿಲ್ಲ. ಇದೊಂದು ಪುಟ್ಟ ಉದಾಹರಣೆ ಮಾತ್ರ. ಆದರೆ ಪರಿಣಾಮವೆಂದರೆ ಪರಸ್ಪರ ಮಾತನಾಡುವ ಅವಶ್ಯಕತೆಯನ್ನೂ ಮನುಷ್ಯ ಕಂಪ್ಯೂಟರ್ ಯಂತ್ರಗಳ ಮೂಲಕವೇ ಪೂರೈಸುತ್ತಿದ್ದಾನೆ. ಇದು ದೂರವಾಣಿಯಂತೆ ಕನಿಷ್ಠಮಾತಿನ ಧ್ವನಿಯ ಅವಶ್ಯಕತೆಯನ್ನೂ ಹೊಂದಿಲ್ಲ. ಹುಟ್ಟುಹಬ್ಬದ ಶುಭಾಶಯಕ್ಕೆ, ಆಟೋಮೆಟಿಕ್ ಆದ ‘ಕೃತಜ್ಞತೆಗಳು’ ಇ-ಮೈಲ್ ಉತ್ತರವನ್ನು ನಮ್ಮ ಕಂಪ್ಯೂಟರ್ ಸ್ವತಂತ್ರವಾಗಿ ಕಳುಹಿಸುವಂತೆ ಪ್ರೋಗ್ರಾಂ ಮಾಡಬಹುದು. ಅದೇ ರೀತಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕಂಪ್ಯೂಟರ್ ಸ್ವತಂತ್ರವಾಗಿ ಇನ್ನೊಂದು ವಿಳಾಸಕ್ಕೆ ಕಳುಹಿಸಬಹುದು. ಅಂದರೆ ಒಬ್ಬ ತೊಡಗಿಕೊಳ್ಳದೆ, ಸಹಜ ಸಂಪರ್ಕದಲ್ಲಿ ಆಪ್ತವಾಗಬೇಕಿದ್ದ ಒಂದು ಅಭಿವ್ಯಕ್ತಿಯನ್ನು, ಮಾನವ ಸಂಪರ್ಕದ ಯಾವುದೇ ತೊಡಗುವಿಕೆ ಇಲ್ಲದೆಯೇ ಕೃತಕವಾಗಿ ಮಾಡಿ ಮುಗಿಸಬಹುದು.

ನಿರಂತರವಾಗಿ ಮೌಖಿಕ ಸಂವಹನದಲ್ಲಿ ಸಾವಿರಾರು ವರ್ಷಗಳ ಕಾಲ ಬೆಳೆದು ಬಂದ ಭಾರತದಂತಹ ದೇಶಗಳ ಸಾಂಸ್ಕೃತಿಕ ಸಂದರ್ಭದಲ್ಲಿ ಇದು ಬಹಳ ಅಘಾತಕಾರಿ. ಅದನ್ನು ತಡೆದುಕೊಳ್ಳುವ ಸಲುವಾಗಿ ಕಂಪ್ಯೂಟರ್ ಎದುರಿರುವವರು ಅತ್ಯಂತ ಹೆಚ್ಚು ಪಿಕ್‌ನಿಕ್ ಚಾರಣ, ಟ್ರೆಕ್ಕಿಂಗ್‌ಗಳಲ್ಲಿ ಭಾಗವಹಿಸುವವರಾಗಿರುತ್ತಾರೆ. ಸಾಕಷ್ಟು ಜನ ಉದ್ಯೋಗಿಗಳು, ಸಂಗೀತ, ಸಾಹಿತ್ಯ, ಚಿತ್ರಕಲೆ ಹೀಗೆ ಯಾವುದಾದರೊಂದು ಆಸಕ್ತಿ ಕುದುರಿಸಿಕೊಳ್ಳಲು ಹೆಣಗುತ್ತಾ ಇರುತ್ತಾರೆ. ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳಿಗೆ ಹೋಲಿಸಿದರೆ, ಕಂಪ್ಯೂಟರ್ ಕಂಪನಿಗಳಲ್ಲಿ ಇಂತಹ ಪ್ರಮಾಣ ಹೆಚ್ಚು. ಇದು ಸಾಂಸ್ಕೃತಿಕವಾಗಿ ಕಳೆದುಕೊಳ್ಳುತ್ತಿರುವುದನ್ನು ಇನ್ನೆಲ್ಲೋ ಪಡೆಯಲು ಪ್ರಯತ್ನಿಸುವ ಯತ್ನದಂತೆ ನನಗೆ ಒಮ್ಮೊಮ್ಮೆ ತೋರುತ್ತದೆ.

ಕಂಪ್ಯೂಟರ್ ಸಂಪರ್ಕ ಸಂಸ್ಕೃತಿ ಬೆಳೆಸುತ್ತಿರುವ ಹೊಸದಾದೊಂದು ಆಸಕ್ತಿ ಕ್ರಮೇಣ ಹೊಸದಾದ ಒಂದು ಸಾಂಸ್ಕೃತಿಕ ನೆಲೆಯಾಗಿ ಬೆಳೆಯುತ್ತಿರುವುದನ್ನು ನಾವು ಗಮನಿಸಬೇಕು. ಇದನ್ನೊಂದು ವೈಯಕ್ತಿಕ ಉದಾಹರಣೆಯಿಂದ ಹೇಳಬಹುದು. ಬಾಯಿಂದ ಬಾಯಿಗೆ ಬಂದು ಕೇಳಿದ ಕತೆಗಳು, ಆಡುಮಾತಿನ ಉದಾಹರಣೆ, ಇನ್ನೆಲ್ಲೋ ಕೇಳಿದ ಸಂಗತಿ-ಇವುಗಳಿಂದಲೇ ತನ್ನ ವಿಚಾರಗಳನ್ನು ನನ್ನ ಅಜ್ಜ ಮಂಡಿಸುತ್ತಿದ್ದರು. ಬಾಯಿ ಮಾತಿನಿಂದ ಕೇಳಿದ ಜ್ಞಾನದ ಮೂಲಕವೇ ಕ್ರಿಮಿನಲ್ ಹಾಗೂ ಸಿವಿಲ್ ಕಾನೂನಿನ ದೊಡ್ಡ ತಿಳುವಳಿಕೆಯನ್ನೇ ಅವರು ಹೊಂದಿದ್ದರು. ಅವರ ಜ್ಞಾನದ ಮೂಲ ಆಕರ ಮಾತು. ಇಂಗ್ಲಿಷ್ ಅಕ್ಷರಗಳೇ ಅವರಿಗೆ ತಿಳಿದಿರಲಿಲ್ಲ. ಅವರು ಕಳೆದ ಶತಮಾನದ ಆದಿಯಲ್ಲಿ ಜನಿಸಿದವರು.

ಅವರಿಂದ ೩೨ ವರುಷಗಳ ನಂತರ ಹುಟ್ಟಿದ ನನ್ನ ತಂದೆಯವರಿಗೆ ಪ್ರಿಂಟಾದ ಪುಸ್ತಕಗಳೇ ಜ್ಞಾನದ ಮೂಲ ಆಕರ. ಒಂದೋ ಎರಡೋ ಪತ್ರಿಕೆಗಳು ಅವರಿಗೆ ಸುದ್ದಿಯ ಅವಶ್ಯಕತೆಗಾಗಿ ಮಾತ್ರ. ಅಲ್ಲಿಂದ ಮೂವತ್ತು ವರುಷಗಳ ಬಳಿಕ ಜನಿಸಿದ ನನಗೆ ಯಾವ ಪತ್ರಿಕೆಯ ಮೂಲೆಯಿಂದಲೂ ಮಾಹಿತಿ ಸಂಗ್ರಹ ಸಾಮಾನ್ಯ ವಿಚಾರ. ಈಗ ನನ್ನ ಮಗ ಶಾಲೆಯ ಪ್ರಾಜೆಕ್ಟ್ ಮಾಡಬೇಕೆಂದರೆ ಮೊದಲು ಹೊರಡುವುದು ಇಂಟರ್೬ನೆಟ್‌ನಲ್ಲಿ ಏನಿದೆಯೆಂದು ನೋಡಲು. ಪುಸ್ತಕ ಬಿಡಿಸುವ ಬದಲು ಸಿ.ಡಿ.ಯಲ್ಲಿ ಹುಡುಕುವುದು.

ಅಂದರೆ ಕಾಲಕಾಲಕ್ಕೆ ಯಂತ್ರಗಳ, ಕೈಗಾರಿಕೆಗಳ ಬೆಳವಣಿಗೆ ಆಗುತ್ತಾ ಬಂದಂತೆ, ನಾವು ವರ್ತಿಸುವ, ಚಿಂತಿಸುವ, ಅನುಭವಿಸುವ, ಆ ಮೂಲಕ ನಾವು ಬದುಕುವ ರೀತಿ ಬದಲಾಗುತ್ತಾ ಬಂದಿದೆ. ಅದನ್ನು ಬಳಸಿಕೊಳ್ಳುವವರಲ್ಲಿ ಕೆಲವು ಸೃಜನಶೀಲರು ಕಲಾ ಪ್ರೌಡಿಮೆಯನ್ನು ಸಾಧಿಸಿದರೆ, ಇತರ ಅನೇಕರು ಅದರ ಪ್ರಯೋಜನದ ಬಗ್ಗೆ ಮಾತ್ರ ಆಸಕ್ತರಾಗಿದ್ದಾರೆ. ಸಂಸ್ಕೃತಿಯ ಮೇಲಾಗುವ ಪರಿಣಾಮದಲ್ಲಿ ಈ ಎರಡೂ ಅಂಶಗಳು ಮುಖ್ಯವಾಗುತ್ತವೆ.

ಇದು ದಿನ ನಿತ್ಯದ ಪರಿಣಾಮದ ಸಾಮಾನ್ಯ ನೆಲೆಗಳು. ಆದರೆ ನಾವಿದನ್ನು ಮೇಲು ಮೇಲಿನ ಸಾಮಾನ್ಯ ನೆಲೆಗಳಲ್ಲಿ ಗ್ರಹಿಸಿದರೆ ದೊಡ್ಡದೇನೂ ಹೇಳಿದಂತಲ್ಲ. ಇಂದಿನ ಜಾಗತೀಕರಣ ಹಾಗೂ ಅದರೊಳಗೆ ಹಾಸು ಹೊಕ್ಕಂತಿರುವ ಟೆಕ್ನಾಲಜಿಯ ಅವಿನಾ ಸಂಬಂಧ ಸಾಂಸ್ಕೃತಿಕ ನೆಲೆಗಳ ಮೇಲೆ ಮಾಡುವ ಪರಿಣಾಮದ ಹಿನ್ನೆಲೆಯಲ್ಲಿ ಇದನ್ನು ಗಮನಿಸಬೇಕು.

ಇಂದಿನ ಜಾಗತೀಕರಣ ವಿಶ್ವ ಭ್ರಾತೃತ್ವ ಮುಂತಾದ ಉದಾತ್ತ ಆದರ್ಶಗಳ ತಳಹದಿಯಲ್ಲಿ ನಿಂತಿರುವುದಲ್ಲ. ಅಥವಾ Wiಣheಡಿiಟಿg ಚಿತಿಚಿಥಿ oಜಿ sಣಚಿಣe ನ ತಾತ್ವಿಕ ಭಿತ್ತಿಯೂ ಅಲ್ಲ. ಅದು ಇಡೀ ಜಗತ್ತನ್ನೇ ಅಡೆ ತಡೆಗಳಿಲ್ಲದ ಒಂದೇ ಮಾರುಕಟ್ಟೆಯನ್ನಾಗಿ ಮಾಡುವ ವಿಧಾನ. ಈ ಮಾರುಕಟ್ಟೆಯೊಳಗೆ ಯಾರು ಎಲ್ಲಿಂದ ಬೇಕಾದರೂ ಪ್ರವೇಶಿಸಬಹುದು. ಇದರಲ್ಲಿ ಗೆಲ್ಲುವುದಕ್ಕೆ ಅನೇಕ ಕಾರಣಗಳಿವೆ. ಇಂತಹ ಮಾರುಕಟ್ಟೆ, ಅವು ಕುದುರಿಸುವ ಆಸಕ್ತಿಗಳು, ಮಾನವನ ವೈವಿದ್ಯವನ್ನು ಎಷ್ಟು ಮೊಟಕಾಗಿಸಬಲ್ಲದು ಎಂಬುದು ಇಂದಿನ ಪ್ರಶ್ನೆ. ಅದರ ಪರ ಹಾಗೂ ವಿರೋಧವಾದ ಅನೇಕ ಚರ್ಚೆಗಳು ಜಗತ್ತಿನಾದ್ಯಂತ ನಡೆಯುತ್ತಾ ಇವೆ. ಅದನ್ನು ಇಲ್ಲಿ ಚರ್ಚಿಸುವುದು ಈ ಬರಹದ ಉದ್ದೇಶವಲ್ಲ. (ಡಾ.ಯು.ಆರ್. ಅನಂತಮೂರ್ತಿಯವರ ನೂತನ ಕಾದಂಬರಿ ‘ದಿವ್ಯ’-ಜಾಗತೀಕರಣಕ್ಕೆ ಧ್ಯಾನಸ್ಥ ಲೇಖಕನ ಸೃಜನಶೀಲ ಪ್ರತಿಕ್ರಿಯೆ ಎಂಬ ನನ್ನ ಲೇಖನವೊಂದರಲ್ಲಿ ಈ ಕೆಲವು ಅಂಶಗಳನ್ನು ಈಗಾಗಲೇ ಚರ್ಚಿಸಿದ್ದೇನೆ.)

ಇಂದು ಬರುವ ಟೆಕ್ನಾಲಜಿಯನ್ನು, ಸಮೂಹ ಮಾಧ್ಯಮಗಳನ್ನು ಮನುಷ್ಯ ಯಾವ ರೀತಿ ಬಳಸಲು ಕಲಿಯುತ್ತಾನೆ ಎಂಬುದು ಸಂಸ್ಕೃತಿಯ ಮೇಲೆ ಅದು ಮಾಡುವ ಪರಿಣಾಮವನ್ನು ನಿರ್ಣಯಿಸುತ್ತದೆ. ಪ್ರಿಂಟಿಂಗ್ ಟೆಕ್ನಾಲಜಿಯ ಆವಿಷ್ಕಾರವಾದ ಬಳಿಕ ಅದರ ಅನೇಕ ರೀತಿಯ ಬಳಕೆ ನಾವು ಬದುಕುವ, ಚಿಂತಿಸುವ ಕ್ರಮದ ಮೇಲೆ ಪರಿಣಾಮ ಬೀರಿವೆ. ಪತ್ರಿಕಾ ಮಾಧ್ಯಮವೇ ಸೃಷ್ಠಿಯಾಗಿದೆ. ಅದು ಸಾಂಸ್ಕೃತಿಕವಾಗಿ ಮಾಡಿದ ಪರಿಣಾಮವೂ ಅಗಾಧ. ಹೀಗೆ ಪ್ರತಿಯೊಂದು ಟೆಕ್ನಾಲಜಿಯ ಆವಿಷ್ಕಾರವೂ ಮನುಷ್ಯ ಜೀವನದ ಮೇಲೆ ಪರಿಣಾಮ ಉಂಟುಮಾಡುತ್ತದೆ. ಇಂದಿನ ಕಂಪ್ಯೂಟರ್ ಟೆಕ್ನಾಲಜಿಯನ್ನು ಮನುಷ್ಯ ಮುಂದೆ ಬೆಳೆಸಿ ಬಳಸಿಕೊಳ್ಳುತ್ತಾನೆ ಎಂಬುದು ಸಾಂಸ್ಕೃತಿಕ ಪರಿಣಾಮಗಳನ್ನು ನಿರ್ಣಯಿಸುವಂತಹದ್ದು. ಉದಾಹರಣೆಗೆ, ನಾನು ಮಾಡುವ ಯಾವುದೇ ಅಧ್ಯಯನಕ್ಕೆ ಪೂರಕವಾಗು ಇಂಟರ್‌ನೆಟ್‌ನ್ನೂ, ಟಿ.ವಿ. ಚಾನೆಲ್‌ಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದು ನನ್ನ ಅರಿವಿಗೆ ಬಂದ ಕ್ಷಣ ಆ ಮಾಧ್ಯಮಗಳು ನನ್ನ ಓದಿನ ಆಸಕ್ತಿಗೆ ಅಡ್ಡ ಬರಲೇ ಇಲ್ಲ.

ಆದರೆ, ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಹೊಸ ಟೆಕ್ನಾಲಜಿ ಜಗತ್ತಿಗೆ ಒಂದು ಕೇಂದ್ರೀಕರಣದ ನಿಯಂತ್ರಣ ನೆಲೆಯನ್ನೂ ನೀಡುತ್ತದೆ. ಮೈಕ್ರೋಸಾಫ್ಟ್ ಕಂಪನಿ ನೂರಕ್ಕೂ ಅಧಿಕ ದೇಶಗಳಲ್ಲಿದ್ದರೂ ಅಮೆರಿಕಾದಲ್ಲಿ ತನ್ನ ಕೇಂದ್ರ ನಿಯಂತ್ರಣವನ್ನು ಹೊಂದಿದೆ. ಅವರ ಸ್ವಂತದ ಇಂಟರ್‌ನೆಟ್ ಜಾಲದ ಮೂಲಕ ಪ್ರತಿಯೊಂದು ವಿಚಾರವನ್ನು ಕ್ಷಣ ಕ್ಷಣದ ಹಿಡಿತದಲ್ಲಿಟ್ಟು ಇಡೀ ಜಗತ್ತಿನ ವ್ಯವಹಾರವನ್ನು ಒಂದು ಪುಟ್ಟ ಊರಿನೊಳಗೆ ವ್ಯಾಪಾರದಂತೆ ನಿಯಂತ್ರಿಸುವ ಶಕ್ತಿಯನ್ನು ಕೇಂದ್ರ ಕಛೇರಿಗೆ ಇಂತಹ ಟೆಕ್ನಾಲಜಿ ನೀಡುತ್ತದೆ. ಇದು ವ್ಯಾಪಾರದ ಲಾಭದ ದೃಷ್ಟಿಯಿಂದ ಅನೇಕ ಪ್ರೋತ್ಸಾಹಗಳನ್ನು ನೀಡಬಹುದು. ಆದರೆ ಸಂಸ್ಕೃತಿಯ ಮೇಲೆ ಅದು ಮಾಡುವ ಪರಿಣಾಮ ಏನು? ಜಗತ್ತಿನ ವೈವಿಧ್ಯವನ್ನು ಅದು ಹೇಗೆ ಸ್ವೀಕರಿಸುತ್ತದೆ ಎಂಬುದೇ ಮುಖ್ಯ. ಜಾಗತಿಕ ವ್ಯಾಪಾರದ ಅವಶ್ಯಕತೆ ವೈವಿಧ್ಯಗಳ ಸಂಕಷ್ಟಗಳನ್ನು ಬಯಸುವುದಿಲ್ಲ. ದರ್ಜಿಯ ಬಳಿ ಹೋಗಿ ಬಟ್ಟೆ ಹೊಲಿಸುವ ಕಾಲದಲ್ಲಿ ಮೈಯಳತೆಗೆ ಹೊಂದಿಕೆಯಾಗಿವ ದಿರಿಸು ಫ್ಯಾಷನ್. ಅಂದರೆ ಪ್ರಪಂಚದಾದ್ಯಂತ ಮಾರುವ ಬ್ರಾಂಡ್‌ಗಳ ರೆಡಿಮೇಡ್ ಬಟ್ಟೆಗಳು ಬಂದಾಗ, ಎಲ್ಲರೂ ಹಾಕಬಲ್ಲ ಸ್ವಲ್ಪ ದೊಗಳೆಯಾದ ಅಂಗಿಗಳೇ ಫ್ಯಾಷನ್ ಆದವು. ಮಾರುಕಟ್ಟೆ ವಿಸ್ತರಣೆಯಾಯಿತು. ವೈವಿಧ್ಯ ನಾಶವಾಯಿತು. ಅಭಿರುಚಿ ಫ್ಯಾಷನ್ ಹೆಸರಲ್ಲಿ ನಿಯಂತ್ರಣಕ್ಕೊಳಗಾಯಿತು.

ಇಂದಿನ ಟೆಕ್ನಾಲಜಿ ತಾನಿರುವ ತಾಣದಲ್ಲೆ ಸಕಲ ಲೋಕದ ವೈವಿಧ್ಯಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದೆ. ತನ್ನ ಗರ್ಭದೊಳಗೆ ಉದ್ಯೋಗದ ವಿಕೇಂದ್ರೀಕರಣದ ಕೆಲಸದ ತಾಣಗಳನ್ನು ಮತ್ತು ಅದರ ನಿಯಂತ್ರಣಕ್ಕೆ ಕೇಂದ್ರೀಕರಣದ ಸಾಧ್ಯತೆಯನ್ನು ಜೊತೆಜೊತೆಯಾಗಿ ಒದಗಿಸಿಕೊಡುತ್ತದೆ. ನಾಸ್‌ಡ್ಯಾಕ್‌ನಂತಹ ಷೇರು ಮಾರುಕಟ್ಟೆ ಪ್ರಪಂಚದಾದ್ಯಂತ ವ್ಯವಹಾರವನ್ನು ಟೆಕ್ನಾಲಜಿ ಮೂಲಕ ಹಬ್ಬಿಸಲು ಆಕರಗಳನ್ನು ಹೊಂದಿದೆ. ಹೀಗೆ ಭೂಗೋಲ ಒಂದು ಅಂಗೈಯೊಳಗಿನ ವಸ್ತುವಾದಾಗ ನಮ್ಮ ರಾಜಕೀಯ ಸಾಂಸ್ಕೃತಿಕ ಹಾಗೂ ಆಡಳಿತಾತ್ಮಕ ಚಿಂತನೆಗಳು ಟೆಕ್ನಾಲಜಿಯ ವೈರುದ್ಯಗಳನ್ನು ಹದ್ದುಬಸ್ತಿನಲ್ಲಿಡಲು ಬಹಳ ಸಹಕಾರಿ.

ಕಂಪ್ಯೂಟರ್ ಟೆಕ್ನಾಲಜಿಯ ಇಂಟರ್‌ನೆಟ್ ವ್ಯವಸ್ಥೆ ತನ್ನ ಒಳಗೇ ಜನಭಿಪ್ರಾಯವನ್ನು ರೂಪಿಸಬಲ್ಲ ಅನಿಯಂತ್ರಿತ ವ್ಯವಸ್ಥೆಯನ್ನು ಬೆಳೆಸಬಲ್ಲ ಒಂದು ಸ್ವತಂತ್ರ ಅಭಿವ್ಯಕ್ತಿಯ ಸಾಧ್ಯತೆಯನ್ನು ಹೊಂದಿದೆ. ಅದನ್ನು ಅನೇಕ ಹಂತಗಳಲ್ಲಿ ನಿಯಂತ್ರಣಕ್ಕೆ ಒಳಪಡಿಸುವ ಸೂಕ್ಷ್ಮವಾದೊಂದು ಪ್ರಯತ್ನವೂ ನಡೆಯುತ್ತಿದೆ. ಈ ಟೆಕ್ನಾಲಜಿಯ ಕಟ್ಟಿ ಹಾಕುವ ಶಕ್ತಿಯೊಡನೆಯೇ ಅದರ ಬಿಡುಗಡೆಯ ಸ್ವಾತಂತ್ರ್ಯ ಶಕ್ತಿಯೂ ಇದೆ. ಅಂತಹ ಬಿಡುಗಡೆಯ ಅಂತರ್ಗತ ಶಕ್ತಿಗಳನ್ನು ಟೆಕ್ನಾಲಜಿ ಸಮುದಾಯ ಜತನದಿಂದ ಕಾಪಾಡಿಕೊಳ್ಳುವುದೇ ಒಂದು ಅಂತರ್ಗತ ರಕ್ಷಣಾ ವ್ಯವಸ್ಥೆಯಾಗಿ ಬೆಳೆಯಬೇಕು.

ಈ ರೀತಿಯ ಜಾಗೃತ ಪ್ರಯತ್ನಗಳು ಮನುಷ್ಯನ ಎಚ್ಚರಿಕೆಯ ಪ್ರವೃತ್ತಿಯಿಂದ ಉದ್ದಿಪನಗೊಳ್ಳುತ್ತಾ ಇರುತ್ತದೆ. ಅದು ಮನುಷ್ಯನ ಸ್ವಾತಂತ್ರ್ಯ ಪ್ರಜ್ಞೆಯ ನಿರಂತರ ಎಚ್ಚರಿಕೆಯ ಜಾಗೃತ ಸ್ಥಿತಿ. ಇಂತಹ ಪ್ರಯತ್ನಗಳು ಸುಕ್ಷ್ಮ ಚಿನ್ಹೆಗಳನ್ನು ನಾವು ಅಲ್ಲಲ್ಲಿ ಕಾಣಬಹುದು. ಉದಾಹರಣೆಗೆ, ಟೆಕ್ನಾಲಜಿಯಲ್ಲಿ ‘ಪೇಟೆಂಟ್’ ಎಂಬುದು ಬಹಳ ಶಕ್ತಿಯುತವಾದ ಕಾನೂನು. ಸಾಫ್ಟ್‌ವೇರ್ ಟೆಕ್ನಾಲಜಿಯಲ್ಲಿ ‘ಪೇಟೆಂಟ್’ ಬಹಳ ಮುಖ್ಯವಾದೊಂದು ನಿಯಂತ್ರಣ. ಈಗ ಅಮೆರಿಕಾದಲ್ಲಿ ಅನೇಕರು ಸಾಫ್ಟ್‌ವೇರ್‌ನಲ್ಲಿ ಪೇಟೆಂಟ್ ನಿಯಂತ್ರಣ ಇರಕೂಡದು ಎಂಬ ವಾದ ಮಂಡಿಸತೊಡಗಿದ್ದಾರೆ. ( ಇವರಲ್ಲಿ ಭಾರತ ಮೂಲದ ಕೆಲವು ವಕೀಲರು ಮಂಚೂಣಿಯಲ್ಲಿದ್ದಾರೆ.) ಇದಕ್ಕೆ ವಿರುದ್ಧವಾಗಿ ‘ಪೆಟೆಂಟ್’ ೨೫ ವರುಷಗಳಿಗೆ ಇದ್ದರೆ ಸಾಲದು, ಬದಲಾಗಿ ಅದು ‘೭೫’ವರುಷಗಳಿಗೆ ವಿಸ್ತರಿಸಬೇಕೆಂದು ಪ್ರತಿವಾದ ಹೂಡಿದ ವಿರೋಧ ಚಳವಳಿಯೂ ಇದೆ.

ಇಂದು ಇಂಟರ್‌ನೆಟ್ ಮೂಲಕ ಒಂದು ಹೊಸ ಸಮಾಜ ವ್ಯವಸ್ಥೆಯ ನಿರ್ಮಾಣ ನಡೆಯುತ್ತಿದೆ. ಇದು ಕೈಗಾರಿಕಾ ಕ್ರಾಮ್ತಿಯ ನಾಗರಿಕತೆಯ ಮುಮ್ದಿನ ಹಂತ. ಇಲ್ಲೂ ಸಾಂಸ್ಕೃತಿಕವಾಗಿ ಜವಾಬ್ದಾರಿ ಉಳ್ಳವರ ಕರ್ತವ್ಯ ಎಂದರೆ-ನಮ್ಮ ಸ್ವಾತಂತ್ರ್ಯವನ್ನು, ಚಿಂತನೆ ಅಭಿವ್ಯಕ್ತಿಯ ಮೂಲಗುಣಗಳನ್ನು ಉಳಿಸಿಕೊಳ್ಳುವತ್ತ ನಿರಂತರ ಜಾಗೃತವಾಗಿರುವುದು. ಮನುಷ್ಯನ ಬದುಕಿನ ಸ್ವಾತಂತ್ರ್ಯದ ಮೂಲ ಸೆಲೆಗೆ, ಜೀವ ಪ್ರೀತಿಗೆ ಒತ್ತು ನೀಡುವ ಇಂತಹ ನಿರಂತರ ಎಚ್ಚರಕ್ಕೆ ಸಾಂಸ್ಕೃತಿಕ ವೈವಿಧ್ಯತೆ ಪೂರಕವಾಗುತ್ತದೆ. ಇಂತಹ ವೈವಿಧ್ಯವನ್ನು ನಿವಾಳಿಸುವಂತೆ ಬ್ಳೆಯುತ್ತಿರುವ ಟೆಕ್ನಾಲಜಿ ಒಳಗೆ ಮನುಷ್ಯನ ಕಲಾವಂತಿಕೆ, ಸ್ವಾತಂತ್ರ್ಯ ಹಾಗೂ ಸಹನೆಗಳು ಮಾತ್ರ ಅಂತಹ ವೈವಿಧ್ಯವನ್ನು ಬೆಳೆಸಬಲ್ಲವು. ಗೋಪಾಲಕೃಷ್ಣ ಅಡಿಗರು ತಮ್ಮ ‘ಕೂಪ ಮಂಡೂಕ’ ಕವನದಲ್ಲಿ ಹೇಳಿದಂತೆ ‘ಇಲ್ಲಾಡುವುದು-ಇದೇ ಹೊಸ ಠರಾವು’.

-ಸೆಪ್ಟಂಬರ್ ೨೦೦೧
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.