ಕುಮಾರ್ ಉರುಫ್ ಜುಂಜಪ್ಪ

“ಇನ್ನು ಐದು ಕಿ.ಮೀ. ನಡೆದರೆ ಎನ್.ಎಚ್-೪ ಸಿಗುತ್ತದೆ” ಅಂತ ಹೇಳಿದ, ಕುಮಾರ್, ತುಮಕೂರು ಜಿಲ್ಲೆಯ ಹಳ್ಳಿಯೊಂದರ ಅಂಚಿನಲ್ಲಿ ನಾವು ಐವರು ನಡೆಯುತ್ತಿದ್ದೆವು. ಎರಡು ವರ್ಷಗಳ ಹಿಂದಿನ ಮಾತು, ಬೆಳುದಿಂಗಳ ರಾತ್ರಿಯಲ್ಲಿ ಸುತ್ತ ಬೆಂಗಾಡೇ ಕಾಣುತ್ತಿತ್ತು. ಬರಗಾಲದ ಕಾಲ. ಹೆಂಗಸಿನ ಪಾದದ ಹಿಮ್ಮಡಿ ಒಡೆದು ಬಿರುಕು ಬಿಟ್ಟಂತಿದ್ದ ಕೆರೆಯಂಗಳದಲ್ಲಿ ನಡೆಯುತ್ತಿದ್ದೆವು. ಕಾಡುಗೊಲ್ಲರ ಹಟ್ಟಿಯೊಂದರಿಂದ ನಮ್ಮ ಪ್ರಯಾಣ. ನನ್ನ ಮಟ್ಟಿಗೆ ಅಲ್ಲಿ ಕಳೆದ ಸಂಜೆ ಅಪೂರ್ವವೆನಿಸಿತ್ತು. ಚರಿತ್ರೆಯಾಚೆಗಿರುವ ಸ್ಥಾವರಗಳಂತೆ ಕಾಣುತ್ತಿದ್ದ ಮುದುಕ ಮುದುಕಿಯರು ನನ್ನ ಬೆರಗನ್ನೂ ಕುತೂಹಲವನ್ನೂ ಹೆಚ್ಚಿಸಿದ್ದರು. ಆಧುನಿಕ ಮಧ್ಯಮ ವರ್ಗದವನ ಪರಕೀಯತೆಯ ಪರಿಣಾಮ ಈ ರಮ್ಯೀಕರಣ ಎಂದು ಒಳ ಮನಸ್ಸು ಮತ್ತೆ ಮತ್ತೆ ಹೇಳುತ್ತಿದ್ದರೂ, ಆ ಹಂಗಿಸುವಿಕೆಯನ್ನು ಮೀರಿದ ಆಕರ್ಷಣೆ ಈ ಜೀವನ ಕ್ರಮದಲ್ಲಿದೆ ಎಂದು ತೀವ್ರವಾಗಿ ಅನಿಸುತ್ತಿತ್ತು. ಆ ಗಣೆಯ ಸಂಗೀತದಲ್ಲೂ ಎಂಥದೋ ಮೋಡಿ.

ಎಲ್ಲಕ್ಕಿಂತ ಹೆಚ್ಚಾಗಿ ಅವರು ಹಾಡಿದ ಕಥನ ಕಾವ್ಯಗಳು ನನ್ನನ್ನು ವಿಶೇಷವಾಗಿ ಆಕರ್ಷಿಸಿದುವು. ಅಲ್ಲಿಯ ರೂಪಕಗಳಿಗಿರುವ ಶಕ್ತಿ ಅಪಾರ. ಕಣಿ ಹೇಳುವ ಕೊರವಂಜಿ ತನ್ನ ಕಣ್ಣಿಗೆ ಲೋಕದ ಸಮಸ್ತವನ್ನೂ ಆಹ್ವಾನಿಸುವ ಭಾಗ, ವಿಶೇಷವಾಗಿ ಮನಸ್ಸನ್ನು ಹಿಡಿದಿತ್ತು. ‘ಆಕಾಸುದ ವೇಣಿ ನೀ ಬಾರೆ ನನ್ನ ಕಣಿಗೆ’ ಎನ್ನುತ್ತಾಳೆ, ಆ ಕೊರವಂಜಿ ಕಥೆಯಲ್ಲಿ. ಸುತ್ತ ಹರಿದಿದ್ದ ಜನರ ಉಡುಪುಗಳು ಮಧ್ಯೆ ಮಧ್ಯೆ ಆ ಮಾಯಾಲೋಕವನ್ನು, ಆ ಪುರಾಣ ಲೋಕವನ್ನು ಕತ್ತರಿಸುತ್ತಿದ್ದವು. ಅಗ್ಗದ ಟೆರಿಲಿನ್ ಸೀರೆಗಳು. ಮಧ್ಯೆ ಮಧ್ಯೆ ಪ್ಲಾಸ್ಟಿಕ್ ಚೆಂಬು, ಗಡಿಗೆಗಳು, ಬಂಡವಾಳಶಾಹಿ ನಾಗರಿಕತೆ ಏಕೆ ಅಸಹನೀಯ? ಮುಖ್ಯವಾಗಿ, ಅದು ತನ್ನ ಹಿಂದಿನ ಜೀವನಕ್ರಮಗಳಿಗಿದ್ದ ರಂಜಕತೆಯನ್ನು, ಎಲ್ಲ ನಿಗೂಢ ಪ್ರಭಾವಳಿಯನ್ನು, ನಿರ್ನಾಮ ಮಾಡಿಬಿಡುತ್ತದೆ. ಹಿಂದಿನ ಜಗತ್ತುಗಳ ಜೋಗಿ ಜಂಗಮರು ಕಚಡಾ ಭಿಕ್ಷುಕರಾಗಿಬಿಡುತ್ತಾರೆ. ಯಾತ್ರೆಗಳು ತಮ್ಮ ಅರ್ಥ ಕಳೆದುಕೊಳ್ಳುತ್ತವೆ. ನಾಗರಿಕತೆಯ ಕನಸುಗಳು ಕರಗಿಕರಗಿ ಕುರೂಪಿ ವಾಸ್ತವವೊಂದು ಮಾತ್ರ ಉಳಿದು ಕೊಳ್ಳುತ್ತದೆ.

ಆ ಹಟ್ಟಿ, ಆ ಗುಡಿಸಲುಗಳನ್ನು ನೋಡುತ್ತಿದ್ದಂತೆ ಯೋಚಿಸುತ್ತಿದ್ದೆ: ಇವುಗಳಲ್ಲಿ ಎಷ್ಟೇ ಮೋಹಕತೆಯಿದ್ದರೂ, ಇವು ಉಳಿದುಕೊಳ್ಳಲಾರವು. ಇದ್ದಕ್ಕಿದ್ದಂತೆ ಮುದುಕನೊಬ್ಬ ಎದ್ದು ತನ್ನ ಕಂಬಳಿಯನ್ನು ಸರಿಪಡಿಸಿಕೊಳ್ಳುತ್ತ ಏನನ್ನೋ ಹೇಳಿದ. ಜನ ಗೊಳ್ಳನೆ ನಕ್ಕರು. ಅವನು ಏನು ಹೇಳಿದ? ಅವರು ಯಾಕೆ ನಕ್ಕರು? ಮತ್ತೆ ಕೇಳಲು ನಾಚಿಕೆಯಾಯಿತು. ಆದರೂ ಅವನ ಕನ್ನಡದ ಬನಿ, ರೀತಿ ಮೋಹಕವಾಗಿದ್ದುವು. ತಡೆಯಲಾಗದೆ ಪಕ್ಕದಲ್ಲಿದ್ದ ಕುಮಾರ್‌ನನ್ನು ಕೇಳಿದೆ: ‘ಏನು ಹೇಳಿದ ಆ ಮುದುಕ?’ ಕುಮಾರ್ ಸಂಜೆಯಿಂದ ಒಂದು ರೀತಿಯ ಒದ್ದಾಟದಲ್ಲಿದ್ದುದನ್ನು ಗಮನಿಸಿದ್ದೆ. ಅವನ ಬಗೆಗೂ ಜನ ಮುಖ ಸಿಂಡರಿಸಿಕೊಂಡಂತಿತ್ತು. ‘ಬಿಡಿ ಸಾರ್, ತರಲೆ ಮುದುಕ ಏನೋ ಹೇಳಿದ, ಅಂತ ಪಿಸುಗುಟ್ಟಿದ; ಆಟೊಮ್ಯಾಟಿಕ್ ವಾಚನ್ನು ನೋಡಿಕೊಂಡು ‘ಎಂಟಾಯಿತು ಸಾರ್, ಹೊರಡನ’ ಎಂದ. ಹಿಂದುಗಡೆಯಿಂದ ಇನ್ನೊಬ್ಬ ಗೆಳೆಯ ‘ಇವನ ಮೇಲೆ ಏನೋ ಜೋಕು ಹೊಡೆದಂತಿತ್ತು’ ಅಂದ ‘ಹೇಗೆ’? ಎಂದೆ. ‘ಜುಂಜ’ ಅನ್ನೋ ಹೆಸರು ಬಂದಂಗಿತ್ತು. ಕುಮಾರ್‌ನ ಮೊದಲ ಹೆಸರು ಜುಂಜ ಎಂದು ಅವನೇ ಸೇರಿಸಿದ.

ಕೆರೆಯಂಗಳದಲ್ಲಿ ನಡೆಯುತ್ತಿದ್ದಂತೆ ಗೆಳೆಯರ ಜತೆಗೆ ಮಾತು ಬಂಡವಾಳಶಾಹಿಪೂರ್‍ವದ ಸಮಾಜಗಳಲ್ಲಿನ ಬಡತನ, ಶೋಷಣೆಯ ಸ್ವರೂಪದ ಬಗೆಗೆ ಸಾಗಿತ್ತು. ‘ಆ ಸಮಾಜಗಳ ಬಡತನ ಹೆಚ್ಚು ಸಹನೀಯ ಅದರಲ್ಲೂ, ಭಾರತದಂಥ ದೇಶಗಳಲ್ಲಿ ಅದಕ್ಕೂ ಒಂದು ಸೊಗಸು, ಸಂಸ್ಕೃತಿ ಇರುತ್ತವೆ’ ಅಂತ ವಾದಿಸುತ್ತಿದ್ದೆ. ಗಂಗೆದೊಗಲಿನವರು, ಗೊಂದಲಿಗರು, ಜೋಗತಿಯರು, ಬುಡು ಬುಡಿಕೆಯವರು, ಬಹುರೂಪಿಗಳು ಆಧುನಿಕ ಬಂಡವಾಳಶಾಹಿ ಜಗತ್ತಿನ ದೃಷ್ಟಿಕೋನದಿಂದ ಭಿಕ್ಷುಕರಾಗಿ ಮಾತ್ರ ಕಾಣುತ್ತಾರೆ ಎಂದು, ಹಿಂದೆ ಹಟ್ಟಿಯಲ್ಲಿ ಅನ್ನಿಸಿದ್ದನ್ನೇ ಹೇಳಿದೆ. ನಗರದಲ್ಲಿ ಭಿಕ್ಷುಕನನ್ನು ಕಂಡರೆ ಬೆಚ್ಚುತ್ತೇವೆ. ಅವನು ಕೊಳಕಾಗಿದ್ದಷ್ಟೂ ಅಸಹ್ಯ ತೀವ್ರವಾಗುತ್ತ ಹೋಗುತ್ತದೆ. ಮಾನವ ಸಂವಾದ ಅಸಾಧ್ಯವಾಗುತ್ತ ಹೋಗುತ್ತದೆ. ಜೋಗಿ ಜಂಗಮರು ಬಂದರೆ ನಮ್ಮ ಊರುಗಳಲ್ಲಿ ಹಾಗನ್ನಿಸುವುದಿಲ್ಲ. ಬಡತನ, ಆಧುನಿಕ ಬಂಡವಾಳಶಾಹಿಯಲ್ಲಿ ಇಷ್ಟು ಅಸಹನೀಯ ಎಂದೇ ಅಲ್ಲಿ ಬಡವರ ಸಿಟ್ಟು ಜ್ವಾಲಾಮುಖಿಯಾಗುತ್ತದೆ. ಅವರ ಅವಮಾನದ ದಳ್ಳುರಿ ಸಮಾಜವನ್ನು ಸುಡುತ್ತದೆ ಎಂದೆ.

ಜತೆಗಿದ್ದವರು ನಮ್ಮ ಹಾಗೆಯೇ ಚಿಕ್ಕ ಊರುಗಳ ನೆನಪಿದ್ದ ನಗರಿಗರು. ಗ್ರಾಮ್ಯ, ಅರೆ ಗ್ರಾಮ್ಯದ ಬದುಕಿನಲ್ಲಿ ಬಾಲ್ಯ ಕಳೆದವರಾದ್ದರಿಂದಲೋ ಏನೋ, ಮಾತಿಗೆ ತಲೆ ಹಾಕುತ್ತಿದ್ದರು, ಕುಮಾರ್ ಮಾತ್ರ ಮಧ್ಯೆ ಮಧ್ಯೆ ಗುರುಗುಟ್ಟುತ್ತ ನಡೆಯುತ್ತಿದ್ದ. ನನ್ನ ಮಾತಿನಲ್ಲಿನ ತತ್ತ್ವ ಕಾಣೆಯಾಗಿ ಅವನಿಗೆ ಬರೀ ಹಳಹಳಿಕೆ ಕಂಡಿರಬೇಕು ಎಂದು ತಿಳಿಯಿತಾದರೂ, ನನ್ನ ಪಾಡಿಗೆ ನಾನು ಅರೆಸ್ವಗತ, ಅರೆಚರ್ಚೆಯನ್ನು ಮುಂದುವರಿಸಿದೆ. ನೀವು ಫೋಕ್ ಸಾಂಗ್ ಕೇಳಕ್ಕೆ ಜನ ಹಿಂಗೇ ಇರಬೇಕು ಅಂತೀರಾ, ಅಂದದ್ದಕ್ಕೆ ಚರ್ಚೆ ನಿಲ್ಲಿಸಿದೆವು. ಅದು ಹಾಗಲ್ಲ, ಹೀಗೆ ಎಂದು ಜತೆಯ ಗೆಳೆಯರೊಬ್ಬರು ವಿವರಿಸಲು ಶುರು ಮಾಡಿದರು. ನಾನು ಸುಮ್ಮನಾದೆ.

ಕೆರೆಯಂಗಳ ದಾಟಿ ಹೊಲಗಳ ಮಧ್ಯೆ ನಡೆಯುತ್ತಿದ್ದೆವು. ವ್ಯತ್ಯಾಸವೇ ಗೊತ್ತಾಗಲಿಲ್ಲ. ಹಸಿರೇ ಇರದ ನೆಲ ಬಿದ್ದಿತ್ತು. ಅತ್ತಿತ್ತ ತೋಡಿದ ಹಳ್ಳಗಳು. ಸುಮ್ಮನೆ ಕುತೂಹಲಕ್ಕೆ ಒಂದೆರಡು ಬೇಲಿ ಹಾಕಿದ್ದ ಜಮೀನೊಳಕ್ಕೆ ಹಾರಿ ಹೋದೆವು. ಬಾವಿಗಳಲ್ಲೂ ನೀರಿಲ್ಲ. ಒಂದೆರಡು ಬೋರ್‌ವೆಲ್‌ಗಳಲ್ಲೂ ಹ್ಯಾಂಡ್ ಪಂಪಿನಿಂದ ನೀರೆಳೆಯಲು ಪ್ರಯತ್ನಿಸಿದೆವು. ನೀರು ಬರಲಿಲ್ಲ. ಹಸಿರಿಲ್ಲದ ಒಣನೆಲದಲ್ಲಿ ನೀರವ ರಾತ್ರಿಯಲ್ಲಿ ಸುಮ್ಮನೆ ನಡೆಯುತ್ತ ಇದ್ದರೆ ಆಧ್ಯಾತ್ಮಿಕವೆಂಬಂತೆ ಕಾಣುವ ಶೂನ್ಯ ಆವರಿಸಿಬಿಡುತ್ತದೆ. ಹೊಲಗಳಲ್ಲಿ ಹಸಿರಿರಲೇ ಬೇಕು, ಬಾವಿಗಳಲ್ಲಿ ನೀರಿರಲೇಬೇಕು ಎನ್ನಿಸಿತು.

ಅಂತೂ ಎನ್.ಎಚ್-೪ ಸಿಕ್ಕಿತು. ಆಗಾಗ ಕಣ್ಣು ಕುಕ್ಕುವ ಬೆಳಕಿನಿಂದ ಬರುವ ಲಾರಿಗಳು. ಆ ಬೆಳಕಿನಲ್ಲಿ ಧಡಕ್ಕನೆ ಅತ್ತಿಂದಿತ್ತ ಓಡುವ ಇಲಿಗಳು. ಈ ಬರಗಾಲದಲ್ಲಿ ಅವಕ್ಕೆ ತಾನೇ ಏನು ಸಿಗುತ್ತದೆ?

ಲಾರಿಯೊಂದು ನಿಂತಿತು. ಅದರಲ್ಲೇ ನಾವೂ ತುಮಕೂರು ತಲುಪಬಹುದೆಂದು ಧಡಕ್ಕನೆ ನುಗ್ಗಿದೆವು. ಏನಾಗುತ್ತಿದೆ ಅಂತ ತಿಳಿಯುವ ಮೊದಲೇ ಲಾರಿಯಿಂದ ಇಳಿದ ನಾಲ್ಕೈದು ಜನ ಕುಮಾರನ ಕಡೆಗೆ ನುಗ್ಗಿದರು. ‘ಏನು, ಯಾಕೆ, ಯಾಕೆ’ ಅಂತ ನಾವು ಕುಮಾರನನ್ನು ಸುತ್ತುವರಿಯುವ ಹೊತ್ತಿಗೆ ‘ಯಾಕೆ ತರಲೆ’, ಅಂತ ಸರ್ದಾರ್‌ಜಿ ಲಾರಿಯನ್ನು ಓಡಿಸಿಯೇ ಬಿಟ್ಟ. ಬಂದಿದ್ದವರು ಕುಮಾರನ ನೆಂಟರೇ, ಹಟ್ಟಿಯವರೇ ಎಂಬುದು ಸ್ಪಷ್ಟವಾಗಿತ್ತು. ಕುಮಾರನೂ ಜೋರಾಗಿ ಕೂಗಾಡುತ್ತಿದ್ದ. ಒಂದೆರಡು ಏಟು ಬಿದ್ದ ಹಾಗಿತ್ತು.ಆ ನಾಕೈದು ಜನ ನಮ್ಮನ್ನು ದುರುಗುಟ್ಟಿಕೊಂಡು ನೋಡಿ, ನಾವು ಬಂದ ದಾರಿಯ ಹೊಲಗಳಿಗೇ ಇಳಿದು ನಡೆಯುತ್ತ ಹೋದರು. ಮೂರು ನಾಲ್ಕು ನಿಮಿಷಗಳತನಕ ಅವರ ಮಾತಿನ ಸದ್ದು ಕೇಳುತ್ತಿತ್ತು.

ಗಲಾಟೆಯ ತಲೆಬುಡ ತಿಳಿಯಲಿಲ್ಲ. ಯಾಕೋ ಇಲ್ಲಿ ಕಾಯುವುದೇ ಸರಿಯಿಲ್ಲ ಅನಿಸಿ, ಮುಂದಕ್ಕೆ ನಡೆಯುತ್ತಾ ಹೋಗೋಣ, ಯಾರಾದರೂ ಲಾರಿ ನಿಲ್ಲಿಸಿದರೆ ಹತ್ತಿಕೊಳ್ಳೋಣ ಅಂತ ನಡೆಯುತ್ತ ಹೊರಟೆವು.

ಮೌನವಾಗಿ ನಡೆಯುತ್ತಿದ್ದ ಕುಮಾರ ಮಾತು ಶುರುಮಾಡಿದ. ಕತೆ ಹೇಳಿದ. ಅವನನ್ನು ಹಿಡಿದು ತದುಕಿದವರು ಅವನ ಹಟ್ಟಿಯವರೇ, ಕುಲಸ್ಥರೇ. ಕಾರಣ-ಇವನು ತನ್ನ ಹೆಂಡತಿಗೆ ಹೆರಿಗೆ ಮಾಡಿಸಿದ ರೀತಿ. ಅವರಲ್ಲಿ ಹೆಂಗಸನ್ನು ಹೆರಿಗೆಗೆ ಹೊರಗೆ ಗುಡ್ಲು ಹಾಕಿ ಕೂರಿಸುವ ಅಮಾನುಷ ಪದ್ಧತಿ ಇದೆ. ಹೆಂಗಸು ನಂಜೇರಿ ಸತ್ತರೂ ಆಶ್ಚರ್ಯವಿಲ್ಲ. ತನ್ನ ಪ್ರಿಯ ಮಡದಿಗೆ ಹೀಗಾಗುವುದು ಜುಂಜಪ್ಪ ಉರುಫ್ ಕುಮಾರನಿಗೆ ಇಷ್ಟವಿರಲಿಲ್ಲ. ತಾನು ಹಾಗೆ ಮಾಡುವುದಿಲ್ಲ ಎಂದ. ಹಿರಿಯರಿಗೆ ಸವಾಲು ಹಾಕಿ ತುಮಕೂರಿನ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿ, ಹೆಂಡತಿಯನ್ನು ನೇರವಾಗಿ ತನ್ನ ಮನೆಗೇ ಕರೆದುಕೊಂಡು ಹೋದ. ಕುಲದ ಹಿರಿಯರಿಗೆ ಅದು ಪ್ರತಿಷ್ಠೆಯ ಪ್ರಶ್ನೆ, ಛಲದ ಪ್ರಶ್ನೆ. ಎಲ್ಲರೂ ಸೇರಿ ಪಂಚಾಯಿತಿ ಮಾಡಿದರು, ಹೆದರಿಸಿದರು. ಕುಮಾರ್ ಜಗ್ಗಲಿಲ್ಲ. ತಕ್ಷಣ ಹೆಂಡತಿಯನ್ನು ಕರೆತಂದು ತುಮಕೂರಿನಲ್ಲಿ ಸ್ನೇಹಿತರ ಮನೆಗೆ ಬಿಟ್ಟ. ತಾನು ಕೆಲಸದಲ್ಲಿದ್ದ ತುಮಕೂರಿನಲ್ಲೇ ಚಿಕ್ಕ ಮನೆ ಮಾಡಿ ಊರ ಕಡೆಗೆ ತಲೆ ಹಾಕುವುದೇ ಬಿಟ್ಟ. ಈವತ್ತೇ, ಗಲಾಟೆಯಾದ ಆರು ತಿಂಗಳ ನಂತರ, ಒಲ್ಲದ ಮನಸ್ಸಿನಿಂದ ನಮ್ಮ ಜತೆಗೆ ಬಂದಿದ್ದ. ಹಟ್ಟಿಯಲ್ಲಿ ಸಂಜೆ ಕಂಡಿದ್ದ ಸಿಡುಕು ನೋಟ, ಗುರುಗುಟ್ಟುವಿಕೆಯ ಅರ್ಥ ಹೊಳೆದುಹೋಯಿತು. ನಮ್ಮ ಗೆಳೆಯರ ಗುಂಪಿನಲ್ಲಿ ದೊಡ್ಡ ಸರಕಾರಿ ಅಧಿಕಾರಿಯೊಬ್ಬರಿದ್ದುದರಿಂದ ಗಲಾಟೆ ಆಗಲಿಲ್ಲ ಎಂದು ಅವನೇ ವಿವರಿಸಿದ. ಕೊನೆಗೆ ಉದ್ವಿಗ್ನನಾಗೇ ಹೇಳಿದ: ‘ಇಷ್ಟೆಲ್ಲಾ ಕೇಳಿದ ಮೇಲೂ ಈ ಕಾಡುಜನ ಹಂಗೇ ಗಣೆ ಊದಬೇಕು, ಕಥೆ ಹೇಳಬೇಕು, ಹಾಡಬೇಕು, ಅಂತ ಹೇಳ್ತೀರಾ?’

ಮೌನವಾಗಿ ನಡೆಯುತ್ತಲೇ ಇದ್ದೆವು. ಬಂದ ಒಂದೆರಡು ಲಾರಿಗಳು ನಿಲ್ಲಲೇ ಇಲ್ಲ. ಜುಂಜಪ್ಪನ ಕಥೆಯ ಮಾದಕ ರಾಗ ಬಾಣಂತನಕ್ಕೆ ಹೆಂಗಸನ್ನು ಹೊರಗೆ ಹಾಕಿದ ಕ್ಷಣದಲ್ಲೇ ಹುಟ್ಟುತ್ತದೆಯೆ? ಒಂದೊನ್ನೊಂದು ಬಿಟ್ಟು ಇವು ಇರಲಾರವೆ? “ಆಕಾಸುದ ವೇಣಿ ಏಳು ಲೋಕದ ರಾಣಿ”ಯನ್ನು ಕರೆಯುವ ಕೊರವಂಜಿಯ ಕಥೆ ಇಂಥ ಉಗ್ರ ಕಟ್ಟುಪಾಡುಗಳಿಂದ ಮಾತ್ರ ಹುಟ್ಟುತ್ತದೆಯೆ? ಕುಮಾರ್ ಹೇಳುತ್ತಿದ್ದ: “ನಮ್ಮ ಜನ ‘ಡೆವಲಪ್’ ಆಗಬೇಕು. ಹೆಲ್ತ್ ವರ್ಕರ್‍ಸ್ ಗರ್ಭಿಣೀರನ್ನ ಬಲ್ವಂತವಾಗಿ ಎಳ್ಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಬೇಕು. ಜನ ‘ಮಾಡರ್ನ್’ ಆಗಬೇಕು.”

ನಾನು ಯೋಚಿಸಿದೆ: ಆಧುನಿಕ ಆಸ್ಪತ್ರೆ, ಶಾಲೆಕಾಲೇಜುಗಳು, ಇಲೆಕ್ಟ್ರಿಸಿಟಿ, ಬಸ್ಸುಗಳು ಬಂದ ಸಮಾಜದೊಳಗೂ ಆಕಾಸುದ ವೇಣಿ ಏಳು ಲೋಕದ ರಾಣಿಯನ್ನು ಕೊರವಂಜಿ ಕರೆಯಲಾರಳೆ? ಜುಂಜಪ್ಪನ ಕಥಾ ಲಹರಿ ಚಿಮ್ಮಲಾರದೆ? ಅಭಿವೃದ್ಧಿಯ ಈ ತರ್ಕ ಹೀಗೆ ಸಂಸ್ಕೃತಿಯ ಮೂಲ ಸೆಲೆಗಳನ್ನು ನಾಶಮಾಡಿ, ಬಂಡವಾಳಶಾಹಿ ಕುರೂಪವನ್ನು ಮಾತ್ರ ಸೃಷ್ಟಿಸಿ ಬಿಡುತ್ತದೆ. ಅಭಿವೃದ್ಧಿಯ ಪಥ ಏಕೆ ಕೆಲವು ಅತ್ಯುತ್ತಮ ಅಂಶಗಳಿಗೆ ಮಾರಕವಾಗಿ ಬಿಡುತ್ತದೆ?

ನಡೆಯುತ್ತ ನಡೆಯುತ್ತ ದಣಿವು ಹೆಚ್ಚುತ್ತಿದ್ದಂತೆ, ಈ ಪ್ರಶ್ನೆಗಳ ಚರ್ಚೆಗೆ ಪ್ರಯತ್ನಿಸಿದೆವು. “ಬಿಡಿ ಸಾರ್, ಬಿಡಿ. ಇವೆಲ್ಲಾ ಪ್ರಯೋಜನ ಇಲ್ಲ. ಮೊದಲು ಜನರ ಜೀವನ ಡೆವಲಪ್ ಆಗಲಿ” ಅಂತ ಒಂದೇ ರಾಗ ಹಿಡಿದು ವಾದಿಸುತ್ತಿದ್ದ ಜುಂಜಪ್ಪ ಉರುಫ್ ಕುಮಾರನ ದನಿಗೆ ಮಾತ್ರ ಶಕ್ತಿ ಏರುತ್ತ ಬರುತ್ತಿತ್ತು. ಯಾವ ಲಾರಿಗಳೂ ನಿಲ್ಲುವ ಹಾಗೆ ಕಾಣಲಿಲ್ಲ.

‘ನಾವು ನೀವು’ ವಾರಪತ್ರಿಕೆ ಇಷ್ಟಾರ್ಥ ಅಂಕಣದಲ್ಲಿ ಪ್ರಕಟ
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.