ಕುಮಟೆಗೆ ಬಂದಾ ಕಿಂದರಿಜೋಗಿ

ಈ ಕಥಾ ಪ್ರಸಂಗ ಬಹಳ ವರ್ಷಗಳ ಹಿಂದೆ ಕುಮಟೆಯಲ್ಲಿ ನಡೆಯಿತು. ಕಥೆ ಕೇಳಿದ ಮೇಲೆ ಇದು ನಮ್ಮ ಕಾಲಕ್ಕೆ ಸೇರಿದ್ದೇ ಅಲ್ಲವೆಂದು ನಿಮಗೆ ಅನ್ನಿಸಿದರೆ ಆಶ್ಚರ್ಯವಲ್ಲ. ನನಗೂ ಮೊದಲು ಹಾಗೇ ಅನ್ನಿಸಿತ್ತು. ಆದರೆ ಇದು ಜರುಗಿದ ಜಾಗಗಳೆಲ್ಲವನ್ನೂ ಒಮ್ಮೆ ನೋಡಿದರೆ ಅಲ್ಲಿ ಈಗಲೂ ನೆಲೆ ನಿಂತ, ಬಹು ಪುರಾತನವೆನ್ನಬಹುದಾದ ವಾತಾವರಣವೇ ನಿಮ್ಮ ಎಲ್ಲ ಸಂಶಯಗಳನ್ನೂ ದೂರ ಮಾಡದೇ ಇರಲಾರದು.

ಕುಮಟೆಯೇ ಬಹು ಪುರಾತನ ಪಟ್ಟಣವಂತೆ. ಅದಕ್ಕೆ ಕುಮಟೆ ಅಥವಾ ಕುಮಠಾ ಎನ್ನುವ ಹೆಸರು ಬರುವ ಮೊದಲು ಅದು ಕುಂಭಾಪುರ ಎನ್ನುವ ಪವಿತ್ರ ಹೆಸರಿನಿಂದ ಲೋಕವಿಖ್ಯಾತವಾಗಿತ್ತೆಂದು ಮಠಕೇರಿಯ ಭಟ್ಟರು ತುಂಬಾ ಅಭಿಮಾನದಿಂದ ಹೇಳುತ್ತಾರಂತೆ. ಬಸ್ತೀಪೇಟೆಯಲ್ಲಿ ಜೈನ ಬಸದಿಯ ಎದುರು ಇದ್ದ ಕುಂಭೇಶ್ವರ ದೇವಸ್ಥಾನದಿಂದಾಗಿ ಈ ಊರಿಗೆ ಕುಂಭಾಪುರ ಎಂಬ ಹೆಸರು ಬಂದಿರಬೇಕೆಂದು ನನಗೆ ಈ ಕಥಾಪ್ರಸಂಗವನ್ನು ನಿರೂಪಿಸಿದ ಗ್ರಹಸ್ಥರ ಅಭಿಪ್ರಾಯ. ಮಠಕೇರಿಯ ನಾಲ್ಕು ಪ್ರಖ್ಯಾತ ದೇವಾಲಯಗಳ ಮಧ್ಯದ ದೊಡ್ಡ ಚೌಕದ ಆಜುಬಾಜಿಗೆ ಬೆಳೆದ ಇಲ್ಲಿಯ ಜನಜೀವನದ ಹೊಸ ಕೇಂದ್ರವಾದ ದೊಡ್ಡ ಪೇಟೆಯಿಂದಾಗಿ ಕುಂಭಾಪುರ ಎನ್ನುವ ಹೆಸರು ಕುಮಟೆಯಾಗಿ ಭ್ರಷ್ಟಗೊಂಡಿರಬೇಕು ಎನ್ನುವುದೂ ನನ್ನ ಈ ಹಿರಿಯ ಮಿತ್ರರದೇ ಅಂದಾಜು.

ಕುಮಟೆಯಲ್ಲಿ ಹಲವು ಹಳೇ ಜನವಸತಿಗಳು ಈಗಲೂ ಅವು ಮೊದಲು ಇದ್ದ ಹಾಗೇ ಇದೆಯೆಂದು ಅವುಗಳನ್ನು ನನಗೆ ತೋರಿಸಿದ ಈ ಮಿತ್ರರು ಹೇಳಿದರು. ನನಗಂತೂ ನಾನು ನೋಡಿದ ಪ್ರತಿಯೊಂದು ಮೂಲೆಯೂ ಹಳೆಯದಾಗಿ ಕಂಡಿತು ; ತೀರ ಹೊಸತೆನ್ನುವುದು ಸಹ ಇಲ್ಲಿ ಬಹುಬೇಗ ಹಳೆಯದಾಗಿಬಿಡುತ್ತದೆಯೇನೋ ಅನ್ನಿಸಿತು. ಹೊಸತಾಗಿ ಎದ್ದ ಬಸ್‌ಸ್ಟ್ಯಾಂಡು, ಕಾಲೇಜು, ಫಾರ್ಮು, ಡೇರಿಗಳು ಕೂಡ ಹೊಸವೆಂದು ಎಂದೂ ತೋರಲಿಲ್ಲವಂತೆ. ಪಟ್ಟಣದ ಪ್ರವೇಶದ್ವಾರದಲ್ಲಿ ನಿಂತ ನೆಲ್ಲಿಕೇರಿ ; ಅದನ್ನು ದಾಟಿ ಬಂದರೆ ಹತ್ತುವ ವಲ್ಲೀಗದ್ದೆ, ಬಸ್ತೀಪೇಟೆ ; ಎಡಕ್ಕೆ ಹೊರಳಿ ಮುಂದೆ ಸಾಗಿದರೆ ಸಿಗುವ ಗುಡಿಗಾರ ಗಲ್ಲಿ ; ಅದಕ್ಕೂ ಮುಂದೆ ಹೋಗಿ ಹುಲಿದೇವರ ಗುತ್ತದ ಘಾಟಿ ಹತ್ತಿ, ಇಳಿದದ್ದೇ ಮೊದಲಾಗುವ ಹೆರವಟ್ಟೆ ; ಗುಡಿಗಾರ ಗಲ್ಲಿಗೆ ಹೋಗುವ ಮೊದಲು ಬಲಕ್ಕೆ ಹೊರಳಿದರೆ ಪೈವಾಡೆ, ಗುಜ್ಜರವಾಡೆ, ತಾಮ್ರಪೇಠೆ ; ಅಲ್ಲಿಂದ ದೂರ ಸಣ್ಣ ಬಂದರ, ಇನ್ನೂ ದೂರ ದೊಡ್ಡ ಬಂದರ ; ತಾಮ್ರಪೇಠೆಯಿಂದ ಮುಂದೆ ಹೋಗುವ ಬದಲು ಬಲಕ್ಕೆ ಹೊರಳಿದರೆ ‘ಬಾಜಾರ್’ ಎನ್ನುವ ಹೆಸರಿನಿಂದ ಮೆರೆಯುವ ಹತ್ತು ಫೂಟು ಅಗಲದ ಓಣಿಯ ಇಬ್ಬದಿಗಳಲ್ಲಿ ಪದ್ಮಾಸನ ಹಾಕಿ ಸೆಟೆದು ಕುಳಿತ ಸಾಲು ಅಂಗಡಿಗಳು; ಕೊನೆಯಲ್ಲಿ ಮಠಕೇರಿಯ ದೊಡ್ಡ ಚೌಕು ; ಅದರ ಗಡಿಗಳಲ್ಲಿ ನಾಲ್ಕು ದೇವಾಲಯಗಳು, ಮೂರು ಅಶ್ವತ್ಠ ಕಟ್ಟೆಗಳು, ಇನ್ನಷ್ಟು ಅಂಗಡಿಗಳು ; ಅಲ್ಲಿಂದ ಬಲಕ್ಕೆ ಹೊರಳಿ ಮತ್ತೊಮ್ಮೆ ಬಲಕ್ಕೆ ಹೊರಳಿದರೆ ಹತ್ತುವುದೇ ಮಿಣಮಿಣ್ಯಾ ಓಣಿ; ಎಡಕ್ಕೆ ಹೊರಳಿ ಆಮೇಲೆ ಬಲಕ್ಕೆ ಹೊರಳಿದ್ದೇ ಮೊದಲಾಗುವುದು ಚಿತ್ರಗಿ ; ದಾರಿಯಲ್ಲಿ ಹಾಳುಬಿದ್ದ ಜಟ್ಕಾ ದೇವರ ಗುಡಿ-ಹೆಸರುಗಳಲ್ಲಿ ಹೇಗೋ ಹಾಗೇ ಕಾಣುವುದರಲ್ಲೂ ಹಳೆಯವೇ. ಹೊಸತಿಗೆ, ಅದು ಹುಟ್ಟಿಕೊಳ್ಳುವ ಕ್ಷಣದಲ್ಲೇ, ಹಳೆಯದರ ಮೆರುಗು ಬರುವಂತೆ ಮಾಡುವ ಖುಬಿ ಈ ಊರಿನ ಹುಟ್ಟುಗುಣವಾದಂತಿತ್ತು. ಅಂದಮೇಲೆ ನಾನು ಹೇಳಲು ಹೊರಟ ಕಥಾಪ್ರಸಂಗವಾದರೂ ಈ ಕ್ರಿಯೆಯಿಂದ ಹೇಗೆ ತಪ್ಪಿಸಿಕೊಂಡೀತು !

ಉತ್ತರ ಕನ್ನಡದ ಇತರ ಊರುಗಳ ಜನರೊಂದಿಗೆ ಹೋಲಿಸಿದರೆ ಕುಮಟೆಯ ಜನರಲ್ಲಿ ‘ರಪ್’ನೆ ಎದ್ದುಕಾಣುವ ಗುಣವೆಂದರೆ ನಾಲ್ಕು ಕೇರಿಗಳನ್ನು ಒಂದು ಮಾಡುವಂತೆ ತೆಂಗಿನ ಮರದಷ್ಟು ಎತ್ತರವಾದ ದನಿಯಲ್ಲಿ ಮಾತನಾಡುವ ಇವರ ದುರಭ್ಯಾಸ ; ಮಾತುಮಾತಿಗೆ ಬಾಯಿಂದ ಉದುರುವ ‘ಮೇಡ್ ಇನ್ ಕುಮಠಾ’ ಛಾಪುಳ್ಳ ಬೈಗಳು ತುಂಬಿದ ಗಂಡುಭಾಷೆ. ಯಾವಾಗಲೂ ಬಾಯಿ ತುಂಬಿರುತ್ತಿದ್ದ ಕವಳದೆಂಜಲಿನಿಂದ ಒದ್ದೆಯಾದ ವಿಶಿಷ್ಟ ಉಚ್ಛಾರ. ನನಗೆ ಈ ಕಥೆ ಹೇಳುವ ನನ್ನ ಮಿತ್ರರ ಆತುರ ಇಂಥ ಭಾಷೆಯಲ್ಲೇ ವ್ಯಕ್ತಗೊಂಡಿತ್ತು.

“ಒಂದೇ ಬಟ್ಟಲಲ್ಲಿ ಉಣ್ಣುತ್ತಿದ್ದ ಈ ಬೋಳೀಮಕ್ಕಳಷ್ಟು ಅನ್ಯೋನ್ಯರಾದ ಗೆಳೆಯರು ನಿಮಗೆ ಹುಡುಕಿದರೂ ಸಿಗಲಾರರು. ಅವರ ಬಗ್ಗೆ ಹೇಳುವ ಮೊದಲು ಅವರಿಬ್ಬರೂ ಜೊತೆಯಾಗಿ ಓಡಾಡಿದ ಜಾಗಗಳನ್ನು ತೋರಿಸುತ್ತೇನೆ.”

ಊರು ನೋಡಿ ಬಂದ ರಾತ್ರಿ ಕಥೆ ಹೇಳಲು ತೊಡಗಿದಾಗ ನನ್ನ ಮಿತ್ರರು ಒಮ್ಮೆಲೇ ಗಂಭೀರರಾದರು. ಭಾಷೆ ಬದಲುಗೊಂಡಿತ್ತು. ಅದರಲ್ಲಿ ಒಂದೂ ಬಯ್ಗುಳವಿರಲಿಲ್ಲ. ದನಿ ಮೆತ್ತಗಾಯಿತು. ಉಚ್ಛಾರಗಳು ಸ್ಫುಟವಾದವು. ಕವಳ ಮೆಲ್ಲುವ ಅಭ್ಯಾಸವಿದ್ದೂ ಒಮ್ಮೆಯೂ ಕವಳ ಹಾಕಿಕೊಳ್ಳಲಿಲ್ಲ. ಅಂದು ಭೇಟಿಯಿತ್ತ ಜಾಗಗಳೇ ಜಾದು ಮಾಡಿದವು ಎನ್ನುವ ತರಹ ನಿರೂಪಣೆಯ ಧಾಟಿಗೆ. ಅದರ ಕ್ರಮಕ್ಕೆ ಬೇರೆಯೇ ಕಳೆ ಬರತೊಡಗಿತು

– ೨ –

ಅನ್ಯೋನ್ಯತೆಯ ಮಟ್ಟಿಗೆ ತಮಗೆ ತಾವೇ ಉದಾಹರಣೆಯಾಗಿದ್ದ ಈ ಗೆಳೆಯರು ಹುಟ್ಟಿ ಬೆಳೆದದ್ದು ಮಠಕೇರಿಯಲ್ಲಿ. ಒಬ್ಬನ ಹೆಸರು ಗೋವಿಂದ. ಇನ್ನೊಬ್ಬನದು ವಿಷ್ಣು. ಎರಡೂ ಸಹಸ್ರ ನಾಮಾವಳಿಗೆ ಸೇರಿದ ಹೆಸರುಗಳೇ. ಒಂದೇ ವಯಸ್ಸಿವರು ಇಬ್ಬರೂ_ಈ ಕಥೆ ಒಂದು ದುಷ್ಟ ತಿರುವು ತೆಗೆದುಕೊಂಡು ಈಗಿನ ಮರೆಯಲಾಗದ ಪ್ರಸಂಗವಾಗುವ ಹೊತ್ತಿಗೆ ಇಪ್ಪತ್ತು-ಇಪ್ಪತ್ತೊಂದು ವರ್ಷದವರಿರಬೇಕು. ಗೋವಿಂದ, ಮಠದ ವೆಂಕಟರಮಣ ದೇವರ ಮುಖ್ಯ ಪೂಜಾರಿಗಳಾದ ಪರಶುರಾಮಭಟ್ಟರ ಮಗ. ಮೂರು ಹುಡುಗಿಯರ ನಂತರ ಏಕೈಕ ಗಂಡುಸಂತಾನವಾಗಿ ಹುಟ್ಟಿದವನು. ಮಠದ ಪೌಳಿಯಲ್ಲೇ ಮೂರು ಸಾಲುಕೋಣೆಗಳಲ್ಲಿ ಹೂಡಿದ ಬಿಡಾರದಲ್ಲಿ ದೊಡ್ಡವನಾದವನು. ಉತ್ತರ ಕನ್ನಡದಲ್ಲಿ ಆಗಿನ್ನೂ ಕಾಲೇಜು ಇದ್ದಿರಲಿಲ್ಲವಾದ್ದರಿಂದ ಧಾರವಾಡದಲ್ಲಿ ಸಂಸ್ಕೃತದಲ್ಲಿ ಬಿ.ಎ. ಪರೀಕ್ಷೆ ಮುಗಿಸಿ ಆಗಷ್ಟೇ ಊರಿಗೆ ಬಂದಿದ್ದ. ಪರಿಣಾಮ ತಿಳಿದಮೇಲೆ ಕುಮಟೆಯದೇ ಸಾಲೆಯಲ್ಲಿ ಶಿಕ್ಷಕನಾಗುವ ವಿಚಾರವಿತ್ತು ಅವನಿಗೆ. ವಿಷ್ಣು ಕುಮಟೆಯಲ್ಲಿ ಪೈ ಸಾವಕಾರರೆಂದೇ ಕರೆಯಲ್ಪಡುತ್ತಿದ್ದ ಊರಿನ ಶ್ರೀಮಂತರಾದ ಶೇಷ ಪೈಗಳ ಒಬ್ಬನೇ ಮಗ. ಮಠದೆದುರಿನ ಅಂಗಡಿಗಳ ಸಾಲಿನ ಹಿಂಬದಿಯ ದೊಡ್ಡ ಕಂಪೌಂಡಿನಲ್ಲಿದ್ದ ಬಂಗಲೆಯಂಥ ಮನೆಯಲ್ಲಿ ಬೆಳೆದವನು. ಅವನೂ ಧಾರವಾಡದಲ್ಲಿ ಬಿ.ಎಸ್.ಸಿ. ಮುಗಿಸಿ ಗೋವಿಂದನ ಜೊತೆಗೇ ಊರಿಗೆ ಬಂದಿದ್ದ. ಮುಂದೆ ಕಲಿಯುವ ಮನಸ್ಸಿತ್ತು. ಮನೆಯವರ ನೆರವೂ ಇತ್ತು. ಆದರೂ ತಾನೇ ಗಟ್ಟಿಯಾದ ನಿರ್ಧಾರಕ್ಕೆ ಬಂದಿರಲಿಲ್ಲ.

ಭಟ್ಟರ ಹುಡುಗ ಗೋವಿಂದ ಎಲ್ಲ ಭಟ್ಟರ ಹುಡುಗರ ಹಾಗೆ ಇರಲಿಲ್ಲ. ತೆಳ್ಳಗೆ, ಬೆಳ್ಳಗೆ, ಉದ್ದನಿದ್ದ. ಚೆಂದನಿದ್ದ. ಅಪ್ಪ-ಅಮ್ಮರ ಹಾಗೆ ಲಠ್ಠನಿರಲಿಲ್ಲ. ಆದರೆ ಭಟ್ಟರಿಗೆ ಶೋಭಿಸದ ರೀತಿಯಲ್ಲಿ ತುಂಬಾ ಷೋಕಿಯಾಗಿದ್ದ. ಸಾಹಸಿಯಾಗಿದ್ದ. ಸಿಗರೇಟು-ಬೀಡಿಗೆ ಇನ್ನೂ ಕೈ ಹಚ್ಚಿರಲಿಲ್ಲವಾದರೂ ಕುಮಟೆಯ ಹಲವು ಹುಡುಗರ ಹಾಗೆ ಆಗೊಮ್ಮೆ ಈಗೊಮ್ಮೆ ಪಾನ್-ಬೀಡ ಮೆಲ್ಲುತ್ತಿದ್ದ. ನಾಲಗೆ ಕೆಂಪಾದುದನ್ನು ನೋಡಿ ‘ಹೀ’ ಎಂದು ಖುಶಿಪಡುತ್ತಿದ್ದ. ತಲೆಗೆ ಚಂಡಿಕೆ ಇಡದೇ ಕ್ರಾಪು ಮಾಡಿಕೊಂಡು ಶರ್ಟು-ಪ್ಯಾಂಟು ಧರಿಸುತ್ತಿದ್ದ. ಕಾಲಲ್ಲಿ ‘ಚರ್‍ಮುರ್’ ಚಪ್ಪಲಿ ಮೆಟ್ಟುತ್ತಿದ್ದ. ಕುಮಟೆಯ ಜನರ ಹಾಗೆ ದೊಡ್ಡಕ್ಕೆ ಮಾತಾಡುತ್ತಿದ್ದ. ಮಾತುಮಾತಿಗೆ ದೊಡ್ಡಕ್ಕೆ ನಗುತ್ತಿದ್ದ.

ವಿಷ್ಣು ತೀರ ವಿರುದ್ಧ ಪ್ರಕೃತಿಯವನು. ರೂಪದಲ್ಲೂ ಹಾಗೇನೆ : ದುಂಡಗಿದ್ದ. ಕುಳ್ಳನಲ್ಲವಾದರೂ ಹೆಚ್ಚು ಉದ್ದನೂ ಆಗಿರಲಿಲ್ಲ. ಕಪ್ಪನಲ್ಲವಾದರೂ ಬೆಳ್ಳಗಿರಲಿಲ್ಲ. ಗುಂಗುರು ತಲೆಗೂದಲು, ದೊಡ್ಡ ಕಿವಿಗಳು. ಆಗರ್ಭ ಶ್ರೀಮತನ ಮಗನಾಗಿಯೂ ಮೋರೆಯ ಮೇಲೆ ಒಂದು ಬಗೆಯ ಮ್ಲಾನತೆಯ ಕಳೆ. ತುಟಿಯ ಅಂಚುಗಳಲ್ಲಿ ಮಾತ್ರ ನೋಡಿದವರಿಗೆ ಖುಶಿ ಕೊಡುವ ಮುಗುಳ್ನಗೆ. ಕಣ್ಣುಗಳಲ್ಲಿ ಅಸಾಧಾರಣ ತೇಜಸ್ಸು. ಮಾತಿಗಿಂತ ಮೌನ ಹೆಚ್ಚು ಪ್ರಿಯನಾದವನು ಮಾತನಾಡುವುದು ಮೇಲುದನಿಯಲ್ಲಾಗಿತ್ತು.

ಇವರು ಇಷ್ಟು ಹತ್ತಿರದ ಗೆಳೆಯರು ಆದರಾದರೂ ಹೇಗೆ ಎನ್ನುವುದು ಕೊನೆಯವರೆಗೆ ಒಡೆಯದ ಒಗಟಾಗಿಯೇ ಉಳಿಯಿತು. ಒಂದೇ ಕೇರಿಯಲ್ಲಿ ಹುಟ್ಟಿ ದೊಡ್ಡವರಾದವರು ಎನ್ನುವ ವಿವರಣೆ ತೀರ ಸಪ್ಪೆಯಾಗಿ ತೋರಿತು. ಚಿಕ್ಕವರಿದ್ದಾಗ ಕೈಯಲ್ಲಿ ಕೈಹಿಡಿದು ಓಡಾಡುತ್ತಿದ್ದ ಪುಟಾಣಿಗಳನ್ನು ನೋಡಿದ ಜನ ಲವ-ಕುಶರ ಜೋಡಿಯನ್ನು ನೆನೆದರೆ, ದೊಡ್ಡವರಾದ ಮೇಲೆ ಕೈಯಲ್ಲಿ ಕೈ ಹಿಡಿದು ಅಲ್ಲವಾದರೂ ನೋಡಿದವರ ಕಣ್ಣು ತುಂಬುವ ಜೋಡಿಯಾಗಿ ತಿರುಗಾಡುತ್ತಿದ್ದವರನ್ನು ನೋಡಿದ ಜನ ಭರತ-ಶತ್ರುಘ್ನರನ್ನು ನೆನೆದರು. ಒಟ್ಟಿನಲ್ಲಿ ಬೇರೆ ಕಾರಣ ಹೊಳೆಯದ್ದಕ್ಕೆ ಈ ನಿಗೂಢ ಆಕರ್ಷಣೆಯನ್ನು ಪೂರ್ವಜನ್ಮದ ಋಣಾನುಬಂಧವೆಂದು ಕರೆದು ಸಮಾಧಾನಪಟ್ಟರು.

ಇಷ್ಟಕ್ಕೂ ಈ ಪ್ರಖ್ಯಾತ ಸಂಚಾರಗಳಲ್ಲಿ ಪರಸ್ಪರರೊಳಗೆ ಅವರು ಮಾತನಾಡಿಕೊಳ್ಳುತ್ತಿದ್ದುದಾದರೂ ಏನು ? ಯಾರಿಗೂ ಪತ್ತೆಯಾಗಿರಲಿಲ್ಲ. ಆದರೂ ಒಂದು ಸಂಗತಿ ಲಕ್ಷ್ಯಕ್ಕೆ ಬಾರದಿರಲಿಲ್ಲ. ಈ ಸಂಚಾರಗಳ ಕಾಲಕ್ಕೆ ಮಾತನಾಡುತ್ತಿದ್ದವನು ಭಟ್ಟರ ಹುಡುಗ ಗೋವಿಂದನು ಮಾತ್ರ. ವಿಷ್ಣು ಬರೇ ಕೇಳಿಕೊಳ್ಲುತ್ತಿದ್ದ : ಗೋವಿಂದ ಮಾಡುತ್ತಿದ್ದ ಹಾವಭಾವಗಳನ್ನು ನೋಡುತ್ತಿದ್ದ.

ಗೋವಿಂದ ವಿಷ್ಣು ಭೇಟಿ ಕೊಡುತ್ತಿದ್ದ ಜಾಗಗಳನ್ನು ತೋರಿಸುತ್ತಲೇ ಅವರನ್ನು ಸಂಕ್ಷಿಪ್ತವಾಗಿ ಪರಿಚಯಿಸಿದ ನನ್ನ ಮಿತ್ರರು ದಿನದ ಕೊನೆಯಲ್ಲಿ ನನ್ನನ್ನು ಮಠಕೇರಿಯ ಆ ದೊಡ್ಡ ಚೌಕಕ್ಕೆ ಕರೆದುಕೊಂಡು ಬಂದರು. ಈ ಚೌಕ ಅವರ ಕಥೆಗೆ ಜೀವಂತ ಸಂಬಂಧವುಳ್ಳದ್ದಾಗಿರುವಾಗಲೂ ನಮ್ಮ ಸುತ್ತಾಟದ ಕೊನೆಯಲ್ಲಿ ಇಲ್ಲಿಗೆ ಬಂದದ್ದು, ಆಕಸ್ಮಿಕವಲ್ಲವೆಂದು ನನಗೆ ಕೂಡಲೇ ಹೊಳೆಯಿತು. ಅಂದು ಕೈಗೊಂಡ ಸಂಚಾರಕ್ಕೆ, ಕಥಾಪ್ರಸಂಗದ ನಾಯಕದ್ವಯರ ಪರಿಚಯಕ್ಕೆ ನಿಶ್ಚಿತವಾದ ಕ್ರಮವಿದ್ದದ್ದು ನನ್ನ ಲಕ್ಷ್ಯಕ್ಕೆ ಬಂದಿತ್ತು. ಬಹುಶಃ ತಮ್ಮ ನಿರೂಪಣೆಯ ಪ್ರಾಮಾಣಿಕತೆಯನ್ನು ನನ್ನ ಮೇಲೆ ಬಿಂಬಿಸಲು ಈ ಕ್ರಮ ಅವಶ್ಯವೆಂದು ಅವರು ತಿಳಿದಿರುವ ಅನುಮಾನವಾಯಿತು.

ಮಠಕೇರಿಗೆ ನಾವು ಬಂದು ಮುಟ್ಟಿದಾಗ ಚೌಕದ ಮೇಲೆ ಮುಸ್ಸಂಜೆಯ ಮಬ್ಬುಗತ್ತಲೆ ಇಳಿದಿತ್ತು. ರಥಸಪ್ತಮಿಯ ದಿವಸ ಕುಮಟೆಯಲ್ಲಿ ತೇರಿನ ಜಾತ್ರೆ ನೆರೆಯುತ್ತಿದ್ದದ್ದು ಇದೇ ಚೌಕದಲ್ಲಾಗಿತ್ತು. ಚೌಕದ ಒಂದು ತುದಿಯಲ್ಲಿದ್ದ ವೆಂಕಟರಮಣ ದೇವಸ್ಥಾನದಿಂದ ಆರಂಭವಾಗುವ ರಥಯಾತ್ರೆ ಶಾಂತೇರಿ ಕಾಮಾಕ್ಷಿ ದೇವಸ್ಥಾನವನ್ನು ದಾಟಿ ಇನ್ನೊಂದು ಕೊನೆಯಲ್ಲಿದ್ದ ಕಾವೇರಿ ಕಾಮಾಕ್ಷಿ, ಮ್ಹಾಳಸಾ ದೇವಸ್ಥಾನಗಳವರೆಗೂ ಸಾಗುತ್ತಿತ್ತು. ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಪ್ರವೇಶದ್ವಾರದ ಹೊರಗೆ ದೊಡ್ಡದೊಂದು ಕಟ್ಯ್ಟೆಯಿದ್ದ ಬಾವಿ. ಬಾವಿಕಟ್ಟೆಯಿಂದ ತುಸು ದೂರವಾಗಿ ಅದರ ರಸ್ತೆಯಂಚಿಗೆ ಹತ್ತಿರವಾಗಿ ಸಿಮೆಂಟಿನಲ್ಲಿ ಕಟ್ಟಿಸಿದ ಒಂದು ಬೆಂಚು ಇತ್ತು. ಸುಮಾರು ಎಂಟು ಫೂಟು ಉದ್ದವಾದ ಸೋಫಾ ಆಕಾರದ ಈ ಬೆಂಚು ಹಲವು ಕಡೆಗಳಲ್ಲಿ ಮುರಿದಿತ್ತು. ಆದರೂ ನನ್ನ ಮಿತ್ರರು ನನ್ನನ್ನು ಆ ಬೆಂಚಿಗೇ ಕರೆದೊಯ್ದರು. ಬೆಂಚಿನ ಈಗಿನ ಸ್ಥಿತಿಯಲ್ಲಿ ಅದರ ಮೇಲೆ ಯಾರೂ ಕೂರುತ್ತಿರಲಿಲ್ಲವೇನೋ. ಹಾಗಾಗಿ ಈಗ ಕುಳಿತುಕೊಂಡ ನಾವಿಬ್ಬರೂ ಹಲವರ ಕುತೂಹಲಕ್ಕೆ ವಸ್ತುವಾದೆವು.

ಬೆಂಚಿನ ಮೇಲೆ ಕುಳಿತುಕೊಳ್ಳುತ್ತಲೇ “ಇಲ್ಲಿ ಕುಳಿತಾಗ ಏನಾದರೂ ವಿಶೇಷ ಅನ್ನಿಸುತ್ತಿದೆಯೆ ?” ಎಂದು ಕೇಳಿದರು. ನನ್ನ ಬದಿಯಲ್ಲಿ ಕುಳಿತ ಮಿತ್ರರು, ನನಗೆ ಪ್ರಶ್ನೆಯ ಅರ್ಥ ತಿಳಿಯದೇ ಗೊಂದಲದಲ್ಲಿ ಬಿದ್ದೆ. ನನ್ನ ಉತ್ತರವನ್ನು ಕಾಯದೇ ಅವರು ನಾವು ಕೂತಲ್ಲಿಂದ ಕಾಣುವ ಎಲ್ಲವನ್ನೂ ಇದು ಮಠ. ಅದು ಇಲ್ಲಿಯ ಬಾಜಾರು ಎಂಬಂಥ ತೀರ ವಾಸ್ತವಿಕವಾದ ಸರಳ ಧಾಟಿಯಲ್ಲಿ ವರ್ಣಿಸುತ್ತಿದ್ದಂತೆ ಪರಿಸರದ ಸಣ್ಣಪುಟ್ಟ ವಿವರಗಳಿಗೂ ವಿಲಕ್ಷಣ ನಿಗೂಢತೆಯ ಮೆರುಗು ಬರತೊಡಗಿದ ಭಾಸವಾಗಿ ಮೈ ಮುಳ್ಳು ಬಿಟ್ಟಿತು. ಇವರು ಹೇಳಹೊರಟ ಕಥೆಯ ಜೀವಾಳ ಇಲ್ಲೆಲ್ಲೋ ಇದೆಯೆಂದು ಭಾವನೆಯಾಗುತ್ತಿದ್ದಂತೆ ನನ್ನ ಮಿತ್ರರು, “ಚಂದ್ರನ ಬೆಳಕಿನಲ್ಲಿ ನೋಡಬೇಕು. ಆಗ, ಈ ಚೌಕ ಮನಸ್ಸಿನ ಮೇಲೆ ಮಾಡುವ ಪರಿಣಾಮವೇ ಬೇರೆ. ಈಗ ನೀವೇ ನೋಡುವಿರಂತೆ. ನಾಳೆ ಹುಣ್ಣಿಮೆ. ಇನ್ನು ಕೆಲ ಹೊತ್ತಿನಲ್ಲೇ ಚಂದ್ರೋದಯ” ಎಂದರು. ಆಮೇಲೆ ಐನು ಮಾತಿಗೆ ಬರುವ ಧರ್ತಿಯಲ್ಲಿ, “ಊರೆಲ್ಲ ಸುತ್ತಾಡಿ ಬಂದಮೇಲೆ ಅವರಿಬ್ಬರೂ ವಿರಮಿಸುತ್ತಿದ್ದುದು ಇದೇ ಬೆಂಚಿನ ಮೇಲಾಗಿತ್ತು. ಸುತ್ತಲಿನದನ್ನು ನೋಡುತ್ತ ಮೌನ ಧರಿಸಿ ಕುಳಿತುಬಿಡುತ್ತಿದ್ದರು. ಒಂದು ಅರ್ಧ ಗಂಟೆ ಹಾಗೆ ಕುಳಿತವರು ಗಪ್‌ಚಿಪ್ ಎದ್ದು ಮನೆಯ ಹಾದಿ ಹಿಡಿಯುತ್ತಿದ್ದರು. ಇಬ್ಬರ ಮನೆಗಳೂ ಇಲ್ಲಿಂದ ಎರಡು ಮಿನಿಟಿನ ಹಾದಿ. ಈ ಪರಿಪಾಠದ ಪರಿಚಯವಿದ್ದ ಯಾರೂ ಮುಸ್ಸಂಜೆಯ ಈ ಹೊತ್ತಿನಲ್ಲಿ ಆ ಬೆಂಚಿನ ಮೇಲೆ ಕೂರುವ ಆಗ್ರಹ ಹಿಡಿಯುತ್ತಿರಲಿಲ್ಲ” ಎಂದರು.

ಕಥಾಪ್ರಸಂಗಕ್ಕೆ ಚಾಲನೆಯಿತ್ತ ಮುಖ್ಯ ಘಟನೆಗೆ ಬರುವ ಮೊದಲು ಆಚರಿಸಲೇಬೇಕಾದ ಒಂದು ಧಾರ್ಮಿಕ ವಿಧಿಯೆಂಬಂತೆ ಕೈಕೊಂಡ ಈ ಪರಿಭ್ರಮಣ. ಮಬ್ಬುಗತ್ತಲೆಯಲ್ಲಿ ಆಮೇಲೆ ಬೆಳ್ದಿಂಗಳ ಬೆಳಕಿನಲ್ಲಿ ಮಾಡಿದ ಚೌಕದ ವೀಕ್ಷಣಗಳು ಮುಗಿದು ನಾವು ಮನೆಯ ಹಾದಿ ಹಿಡಿದಾಗ ನನ್ನ ಮಿತ್ರರು ಒಮ್ಮೆಲೇ ಮೌನ ಧರಿಸಿದರು. ಈ ಮೌನ ಕೂಡ ಈ ಕರ್ಮಕಾಂಡದ್ದೇ ಮುಂದುವರಿಕೆಯಿರಬೇಕೆಂದು ತಿಳಿದು ನಾನೂ ಮೌನನಾದೆ. ಮನೆ ತಲುಪಿದಮೇಲೂ ಬಹಳ ಹೊತ್ತು ಅವರು ನನ್ನನ್ನು ಮಾತನಾಡಿಸಲಿಲ್ಲ. ಆಮೇಲೆ ಊಟಕ್ಕೆ ಕೂರುವ ಕೆಲಹೊತ್ತಿನ ಮೊದಲಷ್ಟೇ ಬಾಯಿ ತೆರೆದರು_

“ಈ ತರುಣರ ಒಡನಾಟ ಇಲ್ಲಿಯ ಜನರ ಬದುಕಿನಲ್ಲಿ ಎಷ್ಟೊಂದು ಆತ್ಮೀಯವಾಗಿ ಹಾಸುಹೊಕ್ಕಾಗಿದೆಯೆಂದರೆ ಅವರು ಕಾಲೇಜು ಸೇರಿದಮೇಲೆ ಊರಲ್ಲಿಲ್ಲದ ಅಲ್ಪ ಕಾಲದಲ್ಲಿ ಕೂಡ ಏನೋ ಕಳಕೊಂಡವರ ಹಾಗೆ ಬೇಚೈನರಾಗುತ್ತಿದ್ದೆವು. ಹೀಗಿರುವಾಗ ಅವರು ತಮ್ಮ ಪರೀಕ್ಷೆಗಳನ್ನು ಮುಗಿಸಿ ಊಗಿಗೆ ಬಂದ ಕೆಲವು ದಿನಗಳಲ್ಲೇ ಒಂದು ರಾತ್ರಿ ಇಬ್ಬರೂ ಇದ್ದಕ್ಕಿದ್ದ ಹಾಗೆ ಮನೆಯಿಂದ ಬೇಪತ್ತೆಯಾಗಿರುವ ಸುದ್ದಿ ತಿಳಿದಾಗ ನಮಗೆಲ್ಲ ಅಕ್ಷರಶಃ ತಲೆಯ ಮೇಲೆ ಆಕಾಶವೇ ಕಳಚಿಬಿದ್ದ ಅನುಭವವಾಯಿತು. ಇಬ್ಬರ ಹಾಸಿಗೆಗಳಲ್ಲೂ, “ಒಂದು ಒಳ್ಳೆ ಉದ್ದೇಶಕ್ಕಾಗಿಯೇ ದೂರ ಹೊರಟಿದ್ದೇನೆ. ಹುಡುಕಬೇಡಿ’ ಎಂಬಂಥ ಮಜಕೂರು ಗೀರಿದ ಚೀಟಿಗಳಿದ್ದವು. ಇದರಾಚೆ ಯಾರಿಗೂ ಆಗ ಏನೂ ತಿಳಿಯಲಿಲ್ಲ.”

– ೩ –

ಈ ನಿಗೂಢ ನಿರ್ಗಮನಗಳಿಂದಾಗಿ ಊರ ಜನರ ಭಾವನಾತ್ಮಕ ಜೀವನದಲ್ಲಿ ತುಂಬಲಾರದ ದೊಡ್ಡ ಪೊಳ್ಳು ನಿರ್ಮಾಣವಾಯಿತು. ತಮಗರಿವಿಲ್ಲದೇನೆ ತಾವು ಅಷ್ಟೊಂದು ಪ್ರೀತಿಸಿದ ಈ ವಿಲಕ್ಷಣ ಮುಗ್ಧರ ಬಗ್ಗೆ ಜನ ಆಡಿಕೊಳ್ಳತೊಡಗಿದರು. ಮಮ್ಮಲ ಮರುಗಿದರು. ಹಲವರಿಗೆ ನೆಲ್ಲಿಕೇರಿಯ ನಾರದಮುನಿಯೆಂದೋ, ಕೃಷ್ಣಕಾರಸ್ಥಾನಿಯೆಂದೋ, ಕೌಟಿಲ್ಯ ದೀಡಬುದ್ವಂತನೆಂದೋ-ಒಟ್ಟಿನಲ್ಲಿ ಹಲವು ಅಭಿದಾನಗಳಿಂದ ಪ್ರಖ್ಯಾತನಾಗಿದ್ದ-ವೈಕುಂಠಬಾಳ್ಗಿಯ ಮೇಲೆ ಗುಮಾನಿ ; ಈ ಓಟುಗಳ ಹಿಂದೆ ಒಬ್ಬರ ಒಳಿತನ್ನು ನೋಡಲಾಗದ ಇವನದೇ ಕಪಟ ಹಸ್ತವಿದೆಯೆಂದು, ಖಾತರಿ ಮಾಡಿಕೊಳ್ಳಲು ಹೋಗಿ ಅವನನ್ನು ಎದುರು ಹಾಕಿಕೊಳ್ಳುವ ಧೈರ್ಯ ಮಾತ್ರ ಊರಲ್ಲಿ ಯಾರಿಗೂ ಇರಲಿಲ್ಲ.

ಇತ್ತ, ಮನೆ ಬಿಟ್ಟು ಮೂರು ತಿಂಗಳಾಗುತ್ತ ಬಂದರೂ ಇನ್ನೂ ಹಿಂದಿರುಗಿರದ ಮಕ್ಕಳ ಬಗ್ಗೆ ಆತಂಕಗೊಂಡ ಪರಶುರಾಮಭಟ್ಟ ಮತ್ತು ಶೇಷ ಪೈಗಳು ಪರಸ್ಪರರನ್ನು ಕಂಡು ಮಾತನಾಡಿದರು. ಆಮೇಲೆ ಊರಿನ ಕೆಲವರಿಗಾದರೂ ತಮ್ಮ ಮನೆಯಲ್ಲಿ ನಡೆದದ್ದನ್ನು ತಿಳಿಸುವುದನ್ನು ನಿಶ್ಚಯಿಸಿ ಇಬ್ಬರು ಘನಸ್ಥರನ್ನು ಮನೆಗೆ ಕರೆಸಿಕೊಂಡರು. ಹಾಗೆ ಕರೆಸಿಕೊಂಡ ಇಬ್ಬರಲ್ಲಿ ನನ್ನ ಮಿತ್ರರು ಒಬ್ಬರಾಗಿದ್ದರು. ಮಕ್ಕಳ ಅಪ್ಪಂದಿರಿಂದ ಗೊತ್ತಾದದ್ದಿಷ್ಟು.

ವಿಧಿನಿಯಮದಿಂದಲೋ ಎಂಬಂತೆ ಇಬ್ಬರೂ ಅಪ್ಪಂದಿರಿಗೆ ಒಂದೇ ಕಾಲಕ್ಕೆ ಇವರ ಗೆಳೆತನ ಅತಿಗೆ ಹೋಗುತ್ತಿದೆ, ಇದು ಇವರ ಭವಿಷ್ಯಕ್ಕೆ ಒಳ್ಳೆಯದಲ್ಲ ಎನ್ನುವ ವಿಚಾರ ತಲೆಯಲ್ಲಿ ಹೊಕ್ಕುಬಿಟ್ಟಿದೆ. ಹೇಗಾದರೂ ಮಾಡಿ ಇವರ ಈ ಹುಚ್ಚನ್ನು ಬಿಡಿಸಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಪರೀಕ್ಷೆಗಳನ್ನು ಮುಗಿಸಿ ಊರಿಗೆ ಬಂದಿರುವ ಈ ಸಮಯವೇ ಈ ಕೆಲಸಕ್ಕೆ ಯೋಗ್ಯವಾದದ್ದೆಂದೂ ಇವರ ಗೆಳೆತನವನ್ನು ಕೆಡಿಸುವುದೇ ಈ ಹುಚ್ಚು ಬಿಡಿಸುವ ಸುಲಭ ಉಪಾಯವೆಂದು ತೀರ್ಮಾನಿಸಿದ್ದಾರೆ. ಆದರೆ ಇಂಥ ಗೆಳೆತನವನ್ನು ಕೆಡಿಸುವುದಾದರೂ ಹೇಗೆಂದು ತಿಳಿಯದೇ ತಮ್ಮ ತಲೆಯಲ್ಲಿ ಬಂದ ವಿಚಾರಗಳಿಗೆ ತಾವೇ ನಾಚಿಕೆಪಟ್ಟುಕೊಂಡು ಅವುಗಳನ್ನು ಬಿಟ್ಟುಕೊಟ್ಟ ಗಳಿಗೆಯಲ್ಲೇ-ಕರ್ಮ-ಧರ್ಮ ಸಂಯೋಗದಿಂದ ಎಂಬಂತೆ-ಕುಮಟೆಯಲ್ಲಿ ಒಬ್ಬ ವಿಲಕ್ಷಣ ವ್ಯಕ್ತಿಯ ಆಗಮನವಾಯಿತು.

ಅಪರಿಚಿತ ಆಗಂತುಕನ ಚಿತ್ರವಿಚಿತ್ರ ವೇಷಭೂಷೆಯೇ ನೋಡಿದವರ ಮನಸ್ಸನ್ನು ತಕ್ಷಣ ಸಮ್ಮೋಹಿಸುವಂಥಾದ್ದಾಗಿತ್ತು. ಪಾದಗಳವರೆಗೂ ಉದ್ದವಾಗಿ ಇಳಿದ, ಉದ್ದ ತೋಳುಗಳುಳ್ಳ ಕಪ್ಪಾನುಕಪ್ಪು ನಿಲುವಂಗಿ, ತಲೆಗೆ ಹಸಿರು ಕೆಂಪು ಬಣ್ಣದ ಹಗ್ಗಗಳಿಂದ ಹೆಣೆದ ಟೋಪಿಯ ಆಕಾರದ ಶಿರಸ್ತ್ರಾಣ. ಅಂಗಿಯ ತೋಳುಗಳಿಂದ ಆಗೀಗ ಹೊರಗೆ ಇಣುಕುತ್ತಿದ್ದ ಸಪೂರ ಮುಂಗೈಗೆ ದೊಡ್ಡ ದೊಡ್ಡ ಬೆಳ್ಳಿಯ ಬಳೆಗಳು, ಕೊರಳಿಗೆ ದೊಡ್ಡ ದೊಡ್ಡ ಕವಡಿಗಳ ಮಾಲೆ, ಕಾಲಿಗೆ ಪಾದುಕೆಯನ್ನು ಹೋಲುವ ಕೆಂಪು ಹಸಿರು ಪಟ್ಟಿಗಳನ್ನು ಬಿಡಿಸಿದ ಕಟ್ಟಿಗೆಯ ಪಾದರಕ್ಷೆ. ಸವತೇಕಾಯಿಯ ಹಾಗೆ ಉದ್ದವಾದ ಮೋರೆಗೆ ತೈಮೂರ್ಲಿಂಗನ ನೆನಪು ಕೊಡುವ ದಾಡಿ ಮೀಸೆಗಳು. ಯಾವ ಪ್ರಾಂತದವನೆಂದು ಊಹಿಸುವುದು ಸಾಧ್ಯವಿರಲಿಲ್ಲ. ಇವರು ಕೇಳಲಿಲ್ಲ. ಅವನಾಗಿ ತಿಳಿಸಲಿಲ್ಲ. ಅವನ ಹರುಕುಮುರುಕು ಹಿಂದಿಯಿಂದ ಇವರಿಗೆ ಅವನು ನೇಪಾಳ, ಸಿಕ್ಕಿಮ್ ಆ ಕಡೆಯವನಿರಬೇಕು ಎನ್ನುವ ಕಲ್ಪನೆಯಾಯಿತಂತೆ. ಅವರು ಮಾಡಿದ ಒಟ್ಟೂ ವರ್ಣನೆಯಿಂದ ಅವನೊಬ್ಬ ಸಾದಾ ಮನುಷ್ಯನಾಗಿರದೇ ಮುಂದೆ ನಡೆದ ಅನಾಹುತವನ್ನು ಒದಗಿಸಲೆಂದೇ ಮನುಷ್ಯ ರೂಪ ಧರಿಸಿ ಬಂದ ತಮ್ಮ ಅದೃಷ್ಟವಾಗಿದ್ದನೆಂದು ಇವರು ಸೂಚಿಸುತ್ತಿದ್ದಾರೆ ಎನ್ನುವ ಭಾವನೆಯಾಯಿತಂತೆ ನನ್ನ ಮಿತ್ರರಿಗೆ.

ಅಪರಿಚಿತನು ನೇರ ಶೇಷ ಪೈಗಳ ಮನೆಯ ಅಂಗಳದಲ್ಲಿ ಹೋಗಿ ಹಾಜರಾದನು.

ಇಡೀ ಕಂಪೌಂಡಿನಲ್ಲಿದ್ದ ಒಂದೇ ಮನೆಯೆನ್ನುವ ಕಾರಣಕ್ಕಷ್ಟೇ ಬಂಗಲೆಯೆಂದು ಕರೆಸಿಕೊಳ್ಳುತ್ತಿದ್ದ ಮನೆ ನಿಜಕ್ಕೂ ಒಂದು ಹಾಳು ಬಿದ್ದ ಕೋಟೆಯ ಹಾಗಿತ್ತಂತೆ. ದೊಡ್ಡ ಅವಿಭಾಜ್ಯ ಕುಟುಂಬದ ಹದಿನೈದು-ಇಪ್ಪತ್ತು ಮಂದಿಗಾದರೂ ಸಾಕಾಗುವಂತೆ ಕಟ್ಟಿಸಿದ ದೊಡ್ಡ ಮನೆಯಲ್ಲಿ ಈ ಕತೆ ನಡೆದಹೊತ್ತಿಗೆ ಇದ್ದವರು ನಾಲ್ಕೈದು ಜನ ಮಾತ್ರ. ನನ್ನ ಲಕ್ಷ್ಯವೆಲ್ಲ ನನ್ನಲ್ಲಿ ಈಗಾಗಲೇ ಎಲ್ಲಿಲ್ಲದ ಕುತೂಹಲ ಕೆರಳಿಸಿದ ಕತೆಯೆ ಮೇಲಿತ್ತು. ಇದರ ಅರಿವು ಇದ್ದೂ ನನ್ನ ಮಿತ್ರರಿಗೆ ಆ ಮನೆಯನ್ನು ವರ್ಣಿಸುವ ಚಪಲವನ್ನು ಹತ್ತಿಕ್ಕುವುದಾಗಲಿಲ್ಲ. ಬಹುಶಃ ತಾವು ಅರುಹಲಿದ್ದ ಮಹಾ ಭಯಂಕರ ಘಟನೆ ನಿಜಕ್ಕೂ ನಡೆದದ್ದೆಂದು ನಂಬಿಸಲು ಈ ವರ್ಣನೆ ಅವಶ್ಯವಾಗಿ ಕಂಡಿರಬೇಕು. ಅವಾಢವ್ಯವಾದ ಹಿತ್ತಲಲ್ಲಿ ಹಗಲಲ್ಲೂ ಕತ್ತಲೆ ತುಂಬಿದ ವಾತಾವರಣ ನಿರ್ಮಿಸಿದ ರಾಕ್ಷಸಾಕಾರದ ಮರಗಳಿಂದ ಆರಂಭವಾದ ವರ್ಣನೆ ಆ ಮನೆಯ ಮಹಾಗಾತ್ರದ ಮರದ ಕಂಬಗಳಿಗೆ, ತೊಲೆ-ಜಂತೆಗಳಿಗೆ ; ಲೆಕ್ಕವಿಲ್ಲದಷ್ಟು ಕೋಣೆಗಳಿಗೆ ; ಬಾಗಿಲು-ಕಟಕಿಗಳಿಗೆ ಬರುವಷ್ಟರಲ್ಲಿ ನನ್ನ ಕಣ್ಣೆದುರು ಹಲವು ಜಾನಪದ ಕಥೆಗಳಲ್ಲಿ ಬಂದ ನಾನಾ ಬಗೆಯ ಸರ್ಪಗಳು, ಚಿತ್ರವಿಚಿತ್ರ ಹಕ್ಕಿಗಳು, ಸಾಲದೇಹೋದರೆ ಅಕರಾಳ ವಿಕರಾಳ ರಾಕ್ಷಸರು ಕಾವಲಿಗಿದ್ದ ಅರಮನೆಯ ಚಿತ್ರ ಮೂಡಿ ನಿಂತಿತು.

ಆಗಂತುಕರು ಅಂಗಳದಲ್ಲಿ ಪ್ರಕಟಗೊಂಡ ಹೊತ್ತಿಗೆ ಆಗಷ್ಟೇ ಮಧ್ಯಾಹ್ನದ ಊಟಕ್ಕೆಂದು ವಖಾರಿಯಿಂದ ಬಂದಿದ್ದ ಶೇಷ ಪೈಗಳು ಇನ್ನೂ ಹೊರ ಜಗಲಿಯ ಮೇಲೆ ನಿಂತು ಕಾಲಲ್ಲಿಯ ಮೆಟ್ಟು ಕಳಚುತ್ತಿದ್ದರು. ಆಗಂತುಕನು ಅವರನ್ನು ಸಮೀಪಿಸಿ ತಾನೊಬ್ಬ ಸಾಮುದ್ರಿಕ ಜ್ಯೋತಿಷಿಯೆಂದೂ , ಬಹುದೂರದ ದೇಶದಿಂದ ಬಂದವನೆಂದೂ ತನ್ನ ಪರಿಚಯ ಸಾರಿದ. ಕಣ್ಣೆದುರು ಪ್ರಕಟಗೊಂಡವನ ರೂಪದಿಂದಾಗಿಯೋ, ಕಿವಿ ತುಂಬಿದ ಅವನ ದನಿಯಿಂದಾಗಿಯೋ, ಅವನು ಮನೆ ಬಾಗಿಲಿಗೆ ಬಂದ ಗಳಿಗೆ ಕೆಟ್ಟದ್ದಾಗಿದ್ದಕ್ಕೋ-ಅಂದು ಅಮಾವಾಸ್ಯೆಯೆಂದು ತಡವಾಗಿ ಲಕ್ಷ್ಯಕ್ಕೆ ಬಂದಿತಂತೆ, ತಲೆಯಲ್ಲಿ. ಈ ಮೊದಲೂ ಒಮ್ಮೆ ಬಂದಿದ್ದ ಕೆಟ್ಟ ವಿಚಾರ ಈಗ ಮತ್ತೆ ಬಂದಿದೆ-ತಮ್ಮ ಕೈಯಿಂದ ಸಾಧ್ಯವಾಗಿರದ ಕೆಲಸವನ್ನು ಈ ಜ್ಯೋತಿಷಿಯ ಮೂಲಕ ಮಾಡಿಸಬಹುದೇನೋ ಎಂದು ಆಸೆಯಾಗಿ ಅವನನ್ನು ಅವಸರ ಅವಸರವಾಗಿ ಮಾಳಿಗೆಯ ಮೇಲಿನ ಕೋಣೆಯೊಂದಕ್ಕೆ ಕರೆದೊಯ್ದರು. ಕೆಲಹೊತ್ತಿನಲ್ಲಿ ಪೈಗಳ ಹೆಂಡತಿ ಹಾಗೂ ವಿಧವೆ ಅಕ್ಕ ಕೂಡ ಅಲ್ಲಿಗೆ ಬಂದರು. “ಪರ ಊರಿನಲ್ಲಿ ಕಲಿಯುತ್ತಿದ್ದ ನಮ್ಮ ಮಗ ಎರಡು ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದಾನೆ. ಅವನ ಕೈ ನೋಡಿ ಹೇಳಬೇಕು. ಯಾಕೆಂದರೆ…..” ಒಮ್ಮೆಲೆ ದನಿ ತಗ್ಗಿಸಿದ ಪೈಗಳಿಗೆ ತಮ್ಮ ಅರಿಕೆಯನ್ನು ವಿವರಿಸುವ ಮನಸ್ಸಾಗಿತ್ತೇನೋ. ಆದರೆ ಜೋತಿಷಿ ಅವರನ್ನು ಅರ್ಧಕ್ಕೆ ತಡೆದು : “ಏನೂ ಹೇಳಲು ಹೋಗಬೇಡಿ. ನಿಮ್ಮ ಮಗ ಮನೆಯಲ್ಲಿದ್ದರೆ ಅವನನ್ನೇ ಕರೆಯಿಸಿ. ಅವನ ಕೈ ನೋಡಲೆಂದೇ ಬಂದಿದ್ದೇನೆ” ಎಂದ. ಅವನ ದನಿಯೊಳಗಿನ ಗದರಿಕೆಗೆ ಪೈಗಳು ಕುಳಿತಲ್ಲೆ ತತ್ತರಿಸಿದರು.

ಕಾಲೇಜು ಕಲಿತ ಮಗ. ಇಂಥದ್ದಕ್ಕೆ ದಾದು ಮಾಡುವವನಲ್ಲವೆಂದು ಗೊತ್ತಿದ್ದೂ ಅಳುಕುತ್ತಲೇ ಅವನನ್ನು ಕರೆತರಲು ಏಳುತ್ತಿರುವಷ್ಟರಲ್ಲಿ ಮಗನೇ ಬಾಗಿಲಲ್ಲಿ ಪ್ರಕಟಗೊಂಡ ಆಕಸ್ಮಿಕಕ್ಕೆ ಏನನ್ನೋಣ ! ಎದುರು ಕುಳಿತವನ ಪರಿಚಯದ ಹಾದಿ ಕಾಯದೇ, ತನ್ನ ಹಸ್ತವನ್ನು ಅವನ ಮೋರೆಯ ಮುಂದೆ ಚಾಚಿ, “ನನಗೆ ಇದ್ಯಾವುದರಲ್ಲಿಯೂ ವಿಶ್ವಾಸವಿಲ್ಲ. ಆದರೂ ಕೇವಲ ಕುತೂಹಲಕ್ಕಾಗಿ ಕೇಳಲು ಸಿದ್ಧನಿದ್ದೇನೆ, ಹೇಳಿ” ಎಂದ. ಕೋಣೆಯಲ್ಲಿದ್ದವರಿಗೆ ತಮ್ಮ ಕಣ್ಣುಗಳ ಮೇಲೆ ತಮಗೇ ವಿಶ್ವಾಸ ಮೂಡದಾಯಿತು. ಸಾಮುದ್ರಿಕ ಅವನ ಹಸ್ತವನ್ನು ತನ್ನ ಕೈಯಲ್ಲಿ ಹಿಡಿದು ಪರೀಕ್ಷಿಸುತ್ತಿದ್ದಂತೆ, “ಬರೇ ಮುಂದಾಗುವುದನ್ನು ಹೇಳಬೇಡಿ. ಅದನ್ನು ನೋಡಲು ನೀವಿಲ್ಲಿ ಇರಲಾರಿರಿ. ಹಿಂದಿನದನ್ನೂ ಹೇಳಿರಿ. ವಿಶ್ವಾಸ ಮೂಡೀತು” ಎಂದು ಹುಡುಗ ನಗುತ್ತಲೇ ಆಹ್ವಾನಿಸಿದ.

ಜ್ಯೋತಿಷಿಯೂ ಹಿಂದೆಗೆಯಲಿಲ್ಲ. ಅವನ ಬಾಲ್ಯದಿಂದಲೇ ಆರಂಭಿಸಿದವನು ಹಲವು ಸತ್ಯ ಸಂಗತಿಗಳನ್ನು ತಿಳಿಸುತ್ತ ನೇರವಾಗಿ ಗೋವಿಂದನೊಡನೆಯ ಅವನ ಗೆಳೆತನಕ್ಕೇ ಬಂದುಮುಟ್ಟಿದ. “ನೀವಿಬ್ಬರೂ ಬೆಳಕಿನ ಆರಾಧಕರು. ಬೆಳಕಿನ ರಹಸ್ಯವನ್ನು ಕುರಿತು ನಿಮಗೆ ಅಗಾಧ ಕುತೂಹಲವಿದೆ. ನಿಮ್ಮ ಎಳೆ ವಯಸ್ಸು ಇದಕ್ಕೆ ಸಾಲದು. ಆದರೂ ಈ ಕುತೂಹಲವೇ ನಿಮ್ಮನ್ನು ಹತ್ತಿರ ಸೆಳೆದಿದೆ. ಇಂದಿನಿಂದ ಹನ್ನೆರಡು ವರ್ಷಗಳ ಮೇಲೆ ನೀವಿಬ್ಬರೂ ಈ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ್ದನ್ನು ಸಾಧಿಸುತ್ತೀರಿ. ನಿನ್ನ ಗೆಳೆಯನ ಸಂಸ್ಕೃತದ ಜ್ಞಾನ, ನಿನ್ನ ವಿಜ್ಞಾನದ ಅಭ್ಯಾಸ ಇದಕ್ಕೆ ನೆರವು ನೀಡುತ್ತವೆ.”

ಯಾವುದೋ ಕತ್ತಲೆಯ ಲೋಕದಿಂದ ಎದ್ದು ಬಂದು ಕಣ್ಣೆದುರು ಅವಿಷ್ಕಾರಗೊಂಡವನು ತನ್ನ ಹರಕುಮುರುಕು ಹಿಂದಿಯಲ್ಲಿ ಬೆಳಕಿನ ಬಗ್ಗೆ ಹೇಳಿದ್ದನ್ನು ನನ್ನ ಮಿತ್ರರು ತಮ್ಮ ಭಾಷೆಯಲ್ಲಿ ನನಗೆ ಮುಟ್ಟಿಸುತ್ತಿದ್ದದ್ದು ಸ್ಪಷ್ಟವಿತ್ತು. ಅವರಾಗಿ ವಿಶದಪಡಿಸದಿದ್ದರೂ ಈ ಯುವಕರು ದಿನವೂ ಊರು ಸುತ್ತುತ್ತಿದ್ದಾಗ ಅವರ ಚರ್ಚೆಗೆ ಒಳಪಡುತ್ತಿದ್ದದ್ದು ಬೆಳಕಿನ ರಹಸ್ಯವಿರಬೇಕು ಎನ್ನುವ ಕಲ್ಪನೆಯಾಯಿತು. ಅವರ ವಯಸ್ಸಿನಲ್ಲಿ ಹಗಲುಗನಸುಗಳು ಅನಿರೀಕ್ಷಿತವೇನಲ್ಲ. ಆದರೆ ಇವರ ಹಗಲುಗನಿಸಿಗೆ ಇಂಥ ಗಹನ ಸಂಗತಿ ವಿಷಯವಾದದ್ದು ಆಶ್ಚರ್ಯ ಹುಟ್ಟಿಸುವಂಥಾದ್ದಾಗಿತ್ತು. ಈ ಸಾಮುದ್ರಿಕ ಜೋಯಿಸ ಹಸ್ತರೇಖೆಯನ್ನು ಓದಿ ಇದನ್ನು ಹೇಳಿದನೇ ಅಥವಾ ಯಾರಿಂದಲೋ ಮೊದಲೇ ತಿಳಿದುಕೊಂಡಿದ್ದನ್ನೇ ತಮಗೆ ಹೇಳುವ ನಾಟಕವಾಡಿದನೇ? ತಿಳಿಯುವ ಮಾರ್ಗವಿರಲಿಲ್ಲ. ಆದರೂ ಮಗನ ಮೋರೆಯ ಮೇಲಿನ ಸಂತೋಷ ನೋಡಿಯೇ ತಂದೆತಾಯಿಗಳು ಉಬ್ಬಿದರು.

ಜೋಯಿಸರ ಮುಂದಿನ ಮಾತಿಗೆ ಕಾದು ಕುಳಿತಾಗ ತಾನು ಈಗ ಹೇಳಲಿದ್ದ ಮಾತು ಎಲ್ಲೆರೆದುರು ಆಡುವಂಥದ್ದಲ್ಲ ಎಂದನಂತೆ. ಕೋಣೆಯೊಳಗಿನ ಇತರ ಮೂವರೂ ಎದ್ದುಹೋದಮೇಲೆ ಅಲ್ಲಿ ಏನು ನಡೆಯಿತು, ಯಾರಿಗೂ ತಿಳಿಯಲಿಲ್ಲ. ಮುಂದಿನ ಎರಡು ದಿನಗಳಲ್ಲೇ ಮಗ ಮಲಗಿದ ಹಾಸಿಗೆಯ ಮೇಲೆ ಚೀಟಿ ಬಿಟ್ಟು ಊರು ತೊರೆದದ್ದಕ್ಕೂ ಜ್ಯೋತಿಷಿ ನುಡಿದಿರಬಹುದಾದ ಭವಿಷ್ಯವಾಣಿಗೂ ಸಂಬಂಧವಿದೆಯೆನ್ನುವ ಬಗ್ಗೆ ಮಾತ್ರ ಮನೆಯೊಳಗಿನ ಯಾರಿಗೂ ಸಂಶಯ ಉಳಿಯಲಿಲ್ಲ.

ಗೋವಿಂದನ ಮನೆಯಲ್ಲೂ ಈ ನಾಟಕ ತದ್ವತ್ತಾಗಿ ಚಾಚೂ ಫರಕಿಲ್ಲದೇ ನಡೆದಿದೆಯೆಂದು ಗೊತ್ತಾದದ್ದು ಹುಡುಗರ ತಂದೆಯರು ಪರಸ್ಪರ ಮಾತನಾಡಿಕೊಂಡಮೇಲೇ, ನಡೆದದ್ದು ಊರ ಜನರಿಗೂ ಗೊತ್ತಾಗಿ ಕುಮಟೆಗೆ ಬಂದಿದ್ದ ಜ್ಯೋತಿಷಿ ಈ ಎರಡು ಮನೆಗಳನ್ನು ಬಿಟ್ಟು ಇನ್ನೆಲ್ಲೂ ಹೋಗಿರದ ಸತ್ಯ ಲಕ್ಶ್ಯಕ್ಕೆ ಬಂದಾಗಲಂತೂ ಬಂದವನು ಜ್ಯೋತಿಷಿಯಾಗಿರಲಾರ, ಮಾಟಗಾರನಾಗಿರಬೇಕು. ಯಾರೋ ಹೊಟ್ಟೆಕಿಚ್ಚಿನವರೇ ಮಾಡಿಸಿದ ಕೆಲಸವಿದು ಎಂದು ಊರ ತುಂಬ ಗುಲ್ಲೆದ್ದಿತು.

ಒಮ್ಮೆ ಊರು ಬಿಟ್ತವರು ಒಂದು ವರ್ಷವಾದರೂ ಹಿಂತಿರುಗಿ ಬರುವುದುಳಿಯಲಿ, ಅವರ ಬಗ್ಗೆ ಯಾವ ಒಂದು ಸುಳಿವೂ ಸಿಗದೇಹೋದಾಗ ಹತಾಶರಾದ ತಂದೆಯರು ಊರಿನ ಕೆಲವು ಹಿರಿಯರನ್ನು ಜೊತೆಗೆ ಕರೆದುಕೊಂಡು ಸೀದಾ ಹೋಗಿ ನೆಲ್ಲಿಕೇರಿಯ ದೀಡಬುದ್ವಂತರನ್ನು ಸಂಧಿಸಿದರು. “ಹೇಳಿ ! ನೀವು ಊರಿಗೆ ಕರೆಸಿಕೊಂಡ ಆ ದರ್ವೇಸಿ ನಿಜಕ್ಕೂ ಯಾರು ? ನಮ್ಮ ಹುಡುಗರು ಏನಾದರು ? ಆ ನಿಷ್ಪಾಪರನ್ನು ಊರಿನಿಂದ ಹೊರಗಟ್ಟಿ ನೀವು ಸಾಧಿಸಿದ್ದೇನು ?” ಎಂದು ಕೇಳಿದರು.

ವೈಕುಂಠ ಬಾಳ್ಗಿ ಇಂಥ ಆರೋಪಕ್ಕೆಲ್ಲ ಸೊಪ್ಪು ಹಾಕುವವನಲ್ಲ-

“ಊರಿಗೆ ಊರೇ ಈ ಹುಡುಗರನ್ನು ಹೊಗಳಿ ತಲೆಯ ಮೇಲೆ ಇರಿಸಿಕೊಂಡು ಕುಣಿದಾಡುತ್ತಿದ್ದಾಗ ನಾನೊಬ್ಬನು ಮಾತ್ರ ಎಷ್ಟೆಲ್ಲರ ಎದುರು ಎಷ್ಟೆಲ್ಲ ಸಾರೆ ಇಂಥ ಗೆಳೆತನ ಆರೋಗ್ಯಕರವಾದದ್ದಲ್ಲ ಎಂದಿದ್ದೆ. ಎಂದಿದ್ದೆನೋ ಇಲ್ಲವೋ ? ಒಂದಲ್ಲ ಒಂದು ದಿನ ತೀರ ಅಪ್ರಿಯವಾದ ಮುಸೀಬತ್ತಿಗೆ ಒಳಗಾಗುತ್ತೀರಿ ಎಂದು ಬಜಾಯಿಸಿದ್ದೆ. ಬಜಾಯಿಸಿದೆನೋ ಇಲ್ಲವೋ ? ಅಂದಮೇಲೆ ಇಂತ ದುಷ್ಟ ಹಿಕ್ಮತಿಗೆ ಯಾಕೆ ಕೈ ಹಾಕಿಯೇನು?” ಎಂದು ಇವರನ್ನೇ ಮೂದಲಿಸಿದನಂತೆ. ಇವರಲ್ಲಿಯ ಯಾರೋ, “ನಿಮ್ಮ ಮಾತನ್ನು ನಿಜ ಮಾಡಿ ತೋರಿಸಲಿಕ್ಕೆ” ಎಂದು ಹಂಗಿಸಿದಾಗ. “ನೀವು ಹೇಳಿದರೆ ನಂಬಲಿಕ್ಕಿಲ್ಲ. ಆದರೂ ಹೇಳುತ್ತೇನೆ, ಯಾರಿಗಾದರೂ ಜ್ಯೋತಿಷಿಯನ್ನು ಒಂದು ಕುಟಿಲ ಬೇತಿಗಾಗಿ ಉಪಯೋಗಿಸಿಕೊಳ್ಳುವ ಉದ್ದೇಶ ಇದ್ದದ್ದೇ ಆದರೆ ಆ ಬೇತು ಇವರನ್ನು ಪರಸ್ಪರರಿಂದ ಬೇರೆ ಮಾಡುವುದಾಗುತ್ತಿತ್ತೇ ಹೊರತು ಹೀಗೆ ಇನ್ನಷ್ಟು ಹತ್ತಿರ ತರುವುದಲ್ಲ” ಎಂದನಂತೆ. ಒಟ್ಟಿನಲ್ಲಿ ತಕರಾರು ಮಾಡಲು ಬಂದವರೇ ಗೊಂದಲದ್ದಲ್ಲಿ ಬೀಳುವಂತೆ ಮಾಡಿದ ಆ ನಾರದ ಮುನಿಯ ಠಾಮು ಅಭಿಪ್ರಾಯದ ಪ್ರಕಾರ-ಪಾತಾಳಲೋಕದ ಅವತಾರನಂತಿದ್ದ ಜ್ಯೋತಿಷಿಯನ್ನು ಊರಿಗೆ ಕರೆಸಿದ್ದು ಈ ಹುಡುಗರದೇ ಕೆಲಸವಂತೆ ; ಅವನಾಡಿದ ಭವಿಷ್ಯವಾಣಿಯನ್ನು ನೆಪಮಾಡಿ ಇಬ್ಬರೂ ಒಂದೇ ರಾತ್ರಿ ಮನೆ ಬಿಟ್ಟದ್ದು ಕೂಡ ಆಕಸ್ಮಿಕವಲ್ಲ ; ಪೂರ್ವಯೋಜಿತವಾದದ್ದು ; ಇಬ್ಬರೂ ದೂರದ ಊರೊಂದರಲ್ಲಿ ತಮ್ಮಷ್ಟಕ್ಕೆ ಸುಖವಾಗಿದ್ದಾರೆ ; ಹೆದರುವ ಕಾರಣವಿಲ್ಲ, ಎಂದು. ಎಲ್ಲ ಗೊತ್ತಿದ್ದವರ ಹಾಗೆ ಇಬ್ಬರೂ ಅಪ್ಪಂದಿರನ್ನು ಸಂತಯಿಸಿದನಂತೆ. ಇಬ್ಬರಿಗೂ ಇವನ ತಲೆಯಮೇಲೆ ಜಪ್ಪಿಬಿಡಬೇಕು ಎನ್ನುವಷ್ಟು ಸಿಟ್ಟು ಬಂದಿರುವಾಗಲೂ ಅದನ್ನು ತೋರಗೊಡದೇ ಅಲ್ಲಿಂದ ಹೊರಬಿದ್ದರು.

ಎಷ್ಟೆಲ್ಲವನ್ನು ಓದಿಕೊಂಡ, ಏನೆಲ್ಲವನ್ನು ತಿಳಿದುಕೊಂಡ ಈ ಪಾಖಂಡಿ ಯಾರ ಬಗೆಗೂ ಒಳ್ಳೆಯ ಅಂತಃಕರಣ ಉಳ್ಳವನಲ್ಲ. ತಮ್ಮ ಮಕ್ಕಳ ಗೆಳೆತನದ ಬಗ್ಗೆ ಆಡಿದ ಒಗಟಿನಂಥ ಮಾತುಗಳ ಬಗ್ಗೆ ಎಷ್ಟೊಂದು ತಲೆ ಕೆಡಿಸಿಕೊಂಡರೂ ಅವುಗಳ ಅರ್ಥ ಈ ಅಪ್ಪಂದಿರಿಗೆ ಹೊಳೆಯಲಿಲ್ಲ. ಹಾಗೆ ನೋಡಿದರೆ ಕುಮಟೆಯ ಬಹುತೇಕೆ ಜನರಿಗೆ ಹೊಳೆಯುವಂಥದ್ದಲ್ಲವಾಗಿತ್ತು. ಅದು : “ಓಣಿಗೊಬ್ಬ ಕಲಾವಂತ ಹೆಣ್ಣು ಉಳ್ಳ ಕುಮಟೆಯಲ್ಲಿ ಪಡ್ಡೆ ಹುಡುಗರು ಕಲಾವಂತ ಹುಡುಗಿಯರಿಗೆ ಮೋಹಿತರಾಗುವುದು ಅಸಹಜವಲ್ಲ. ಮೋಹಿತರಾಗದಿರುವುದು ಅಸಹಜ.”

ತಕರಾರು ಮಾಡಲು ಬಂದವರ ಬಾಯಿ ಮುಚ್ಚಿಸಲು ಇದಕ್ಕಿಂತ ಬಲವಾದ ಅಸ್ತ್ರ ಬೇಡವಾಯಿತು.

ಅಂತಃಕರಣವುಳ್ಳ ಊರ ಜನರೆಲ್ಲರೂ ಹೆತ್ತ ತಂದೆತಾಯಿಗಳನ್ನು ಜೊತೆಗೂಡಿ ಹುಡುಗರಿಗೆ ಶುಭ ಕೋರಿದರು. ಇಬ್ಬರೂ ಊರಿಗೆ ಹಿಂತಿರುಗಿ ಬಂದು ದುಃಖಾರ್ತರಾದ ತಂದೆತಾಯಿಯರಿಗೆ ಮತ್ತೆ ಮೋರೆ ತೋರಿಸುವಂತಾಗಲಿ ಎಂದು ಪ್ರಾರ್ಥಿಸಿ ಕುಮಟೆಯ ನಾಲ್ಕೂ ದೇವಸ್ಥಾನಗಳಲ್ಲಿ, ಚಿತ್ರಿಗಿಯ ಜಟ್ಟಿಗ ದೇವರಲ್ಲಿ ಹರಕೆ ಹೊತ್ತರು.

– ೪ –

ಇವರೆಲ್ಲರ ಪ್ರಾರ್ಥನೆಯ ಫಲವಾಗಿಯೇ ಎನ್ನುವಂತೆ ಊರು ಬಿಟ್ಟು ಸರಿಯಾಗಿ ಮೂರು ವರ್ಷಗಳಾಗಿರುವಾಗ ಒಂದು ದಿನ ಪೂರ್ವಾಹ್ನ ಇಬ್ಬರೂ ಜೊತೆಯಾಗಿಯೇ ಶಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ಪ್ರಕಟಗೊಂಡಾಗಿನ ದೃಶ್ಯವನ್ನು ನೋಡಿದ ಯಾರೂ ಮರೆಯಲಾರರು. ಇಬ್ಬರೂ ಪೀತಾಂಬರವುಟ್ಟು ಬಿಳಿ ಪಂಚೆಯ ಉತ್ತರೀಯ ಧರಿಸಿದ್ದರು. ಪೂಜೆಯ ಹೊತ್ತಿಂಗಿಂತ ತುಸು ಮೊದಲು ದೇವಸ್ಥಾನ ಹೊಕ್ಕವರು ಒಂದೇ ಕಾಲಕ್ಕೆ ಢಣ್ ಎಂದು ಗಂಟೆ ಬಾರಿಸುತ್ತಲೇ ಅದರ ನಾದದಲ್ಲಿ ವಿಶೇಷವೇನೋ ಕೇಳಿಸಿದಂತಾಗಿ ಜನ ಭಡಭಡನೆ ಅವರಿಗೆ ಜಾಗ ಮಾಡಿಕೊಟ್ಟರು. ಹಾಗೆ ಮಾಡಿದ್ದೇ ಬರೀ ನೆಲದ ಮೇಲೆ ಒಬ್ಬರಿಗೊಬ್ಬರು ಸಮಾಂತರವಾಗಿ ದೇವರೆದುರು ಸಾಷ್ಟಾಂಗ ಬಿದ್ದರು. ಜನರಿಗೆ ಅವರು ಯಾರೆಂದು ಕೂಡಲೇ ತಿಳಿಯಲಿಲ್ಲ. ದೇವಸ್ಥಾನದಲ್ಲಿ ಆಗ ನೆರೆದ ಗರ್ದಿಯಲ್ಲಿ ತಿಳಿಯುವ ಅವಕಾಶವೂ ಇರಲಿಲ್ಲ.

ಅಂದು ಅಕ್ಷಯ ತೃತೀಯ. ದೇವಸ್ಥಾನದಲ್ಲಿ ಚಂಡಿಕಾ ಹೋಮ. ಮಹಾ ಪೂಜೆಗಳಿದ್ದವು. ಪೂಜೆಗೆ ಬಂದವರಿಗೆಲ್ಲ ದೇವಸ್ಥಾನದಲ್ಲೇ ಊಟವಿತ್ತು. ಸಾಲುಪಂಕ್ತಿಗಳಲ್ಲಿ ಊಟಕ್ಕೆ ಕುಳಿತಾಗ ಎಲ್ಲರ ಲಕ್ಷ್ಯ ಗಾಳಿಯೊಳಗಿಂದಲೇ ಘನೀಭೂತರಾದವರ ಹಾಗೆ ಮೈಗೊಂಡ ಈ ಲಕ್ಷಣವಂತ ಯುವಕರ ಮೇಲೇ. ಅಜ್ಞಾತವಾಸದಲ್ಲಿದ್ದ ಪಂಚಪಾಂಡವರ ಪೈಕಿ ಯಾರಾದರೂ ಇರಬೇಕೆಂದು ತಿಳಿದವರ ಹಾಗೆ ಕುತೂಹಲದಿಂದ ಕೌತುಕದಿಂದ ಮತ್ತೆಮತ್ತೆ ನೋಡಿದರು. ಇವರು ಊರು ಬಿಟ್ಟಂದಿನಿಂದ ಹಾಸಿಗೆ ಹಿಡಿದುಬಿಟ್ಟಂತಿದ್ದ ದುಃಖಾರ್ತ ತಂದೆತಾಯಿಗಳು ದೇವಸ್ಥಾನಕ್ಕೆ ಬಂದಿರಲಿಲ್ಲ. ಬಂದಿದ್ದರೆ ಅವರಿಗೂ ಇವರ ಗುರ್ತು ಹತ್ತುತ್ತಿರಲಿಲ್ಲವೇನೋ. ಅಷ್ಟೊಂದು ಬದಲುಗೊಂಡಿದ್ದರು. ಗೋವಿಂದ ಮೈ ಕೈ ತುಂಬಿಕೊಂಡು ಮೊದಲಿಗಿಂತ ತೋರನಾಗಿದ್ದ. ವಿಷ್ಣು ಹೆಚ್ಚಿನ ಚರ್ದಿ ಕಳೆದುಕೊಂಡು ಮೊದಲಿಗಿಂತ ಸಪೂರನಾಗಿದ್ದ. ಪರಿಣಾಮವಾಗಿ ಇಬ್ಬರೂ ಒಬ್ಬರನ್ನೊಬ್ಬರು ಹೋಲುವ ಅವಳಿಜವಳಿಗ ಹಾಗೆ ಕಾಣುತ್ತಿದ್ದರು. ಕೆಲವರಿಗಂತೂ ಥೇಟು ನಕುಲ-ಸಹದೇವರ ಹಾಗೆ ಕಂಡರು. ಇಬ್ಬರಿಗೂ ಕುರುಚಲು ಗಡ್ಡವಿತ್ತು. ಮೃದುವಾಗಿ ನೇವರಿಸಿದಂತೆ ತೋರುವ ಕುಡಿಮೀಸೆಗಳಿದ್ದವು. ಕತ್ತನ್ನು ಸಂಪೂರ್ಣವಾಗಿ ಮುಚ್ಚುವಷ್ಟು ಕೆಳಗಿಳಿದ ತಲೆಗೂದಲಿಗೆ ಕಂದುಬಣ್ಣದ ಹೊಳಪಿತ್ತು. ತುಟಿಗಳ ಅಂಚುಗಳಲ್ಲಿ ನೋಡಿದವರನ್ನು ಮಾತಿಗೆಳೆಯುವ ಮಂದಸ್ಮಿತ. ಕಣ್ಣುಗಳಲ್ಲೂ ಅಂಥದೇ ಹೊಳಪು. ಒಂದಿಬ್ಬರು “ಎಲ್ಲಿಯವರು ?” ಎಂದು ಕೇಳುವ ಧೈರ್ಯ ಮಾಡಿದಾಗ ಚುಟುಕಾಗಿ, “ಇಲ್ಲಿಯವರೇ” ಎಂದು ಉತ್ತರ ಕೊಟ್ಟರು. ಬಸ್ ! ಹೆಚ್ಚಿನ ಮಾತಿಲ್ಲ.

ದೇವಸ್ಥಾನದಿಂದ ಹೊರಬಿದ್ದ ನಂತರ ಇಬ್ಬರೂ ತಮ್ಮತಮ್ಮ ಮನೆಗಳಿಗೆ ಹೋಗಿ ತಂದೆತಾಯಿಯರಿಗೆ ನಮಸ್ಕಾರ ಮಾಡಿದ ಕೆಲವೇ ಕ್ಷಣಗಳಲ್ಲಿ ಸುದ್ದಿ ಕಾಡುಗಿಚ್ಚಿನಂತೆ ಊರೆಲ್ಲ ಹಬ್ಬಿ ಮಠದೆದುರಿನ ಚೌಕದಲ್ಲಿ ಜನ ನೆರೆದರು. ಸರ್ವತ್ರ ಉತ್ಸಾಹದ ಉತ್ಸುಕತೆಯ ವಾತವರಣ. ಇಷ್ಟು ದಿನ ಎಲ್ಲಿದ್ದರಂತೆ ? ಒಬ್ಬರನ್ನೊಬ್ಬರು ಎಲ್ಲಿ ಭೇಟಿಯಾದರಂತೆ ? ಹೊಟ್ಟೆಪಾಡಿಗೆ ಏನು ಮಾಡಿದರಂತೆ ? ಊರು ಬಿಡಲು ಕಾರಣವಾದದ್ದಾದರೂ ಏನೆಂತೆ ? ಆ ಹಾಳೂರ ಜೋಯಿಸ ಹೇಳಿದ್ದಾದರೂ ಏನಂತೆ ? ನೆಲ್ಲಿಕೇರಿಯ ದೀಡಬುದ್ವಂತೆ ಆಡಿದ ಚಾಡಿಯ ಮಾತು ಇವರಿಗೆ ಗೊತ್ತಾಯಿತೆ ? ಸಾವಿರ ಪ್ರಶ್ನೆಗಳು ಎಲ್ಲೆಲ್ಲಿಂದ ಬಂದು ಕಿವಿ ಹೊಕ್ಕರೂ ಒಂದು ಪ್ರಶ್ನೆಗೂ ಉತ್ತರ ಕೊಡುವ ಗೋಜಿಗೆ ಅವರು ಹೋಗಲಿಲ್ಲ. ಊರ ಜನರ ಕುತೂಹಲ ತಣಿಸುವ ಆಸ್ಥೆಯೇ ಅವರಿಗಿರಲಿಲ್ಲ. ಒಂದು ನಿಶ್ಚಿತವಾದ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡು ಬಂದಂತೆ ಬಂದವರು ಊರು ಸೇರಿದಾಗ ರಾತ್ರಿ ಹನ್ನೆರಡು ದಾಟಿತ್ತಂತೆ. ಮಠಕೇರಿಯ ಭಟ್ಟರೊಬ್ಬರ ಮನೆಯಲ್ಲಿ ರಾತ್ರಿ ಕಳೆದವರು ಪ್ರಾತರ್ವಿಧಿ ಸ್ನಾನಗಳನ್ನು ಅವರಲ್ಲೇ ಮುಗಿಸಿ ಅಲ್ಲೇ ಮಡಿ ಬಟ್ಟೆಯುಟ್ಟು ದೇವಸ್ಥಾನಕ್ಕೆ ಬಂದಿದ್ದರಂತೆ. ಮನೆಯಲ್ಲಿ ಅಪ್ಪ-ಅಮ್ಮರ ಸಮಾಧಾನಕ್ಕೆಂದು ಕೊಟ್ಟಿದ್ದ ಅಲ್ಪ ಮಾಹಿತಿ ಕೂಡ ನಮಗೆ ಗೊತ್ತಾದದ್ದು ಇವರಿಬ್ಬರಿಗೂ ಕೊನೆಯ ಬಾರಿ-ಊರಿಗೆ ಇನ್ನೆಂದೂ ಹಿಂತಿರುಗಲಾರೆವು ಎಂದು ಪಣತೊಟ್ಟವರ ಹಾಗೆ-ಊರು ಬಿಟ್ಟುಹೋದ ಬಹಳ ದಿನಗಳ ಮೇಲೆ-

ಜ್ಯೋತಿಷಿ ಇಬ್ಬರೂ ಹುಡುಗರನ್ನು ಬೇರೆಬೇರೆಯಾಗಿ ಕಂಡು, ಅವರವರ ಕೈ ನೋಡಿಯೇ ಹೇಳಿದ್ದೆಂದು ಭರವಸೆ ಹುಟ್ಟಿಸುವ ಹಾಗೆ ಹೇಳಿದ ಭವಿಷ್ಯವಾಣಿ ಒಂದೇ ಆಗಿತ್ತು. ಭಯಾನಕವಾಗಿತ್ತು. ಒಂದೇ ಆಗಿತ್ತೆಂದು ಸ್ವತಃ ಇವರಿಗೇ ತಿಳಿದದ್ದು ಊರಿಗೆ ವಾಪಸ್ಸಾಗುವ ನಾಲ್ಕು ದಿನ ಮೊದಲು ಮುಂಬಯಿಯಲ್ಲಿ ಅಚಾನಕವಾಗಿ ರೆಸ್ಟೋರೆಂಟೊಂದರಲ್ಲಿ ಒಂದೆಡೆ ಸೇರಿದ್ದಾಗ-

“ನಿನ್ನ ಕೈಯಿಂದ, ಅಚಾತುರ್ಯದಲ್ಲೇ ಆಗಲಿ, ತೀರ ಹತ್ತಿರವಾದವರೊಬ್ಬರ ಹತ್ಯೆಯಾಗುವ ಸಂಭವವಿದೆ. ಇಂದಿನಿಂದ ಮೂರು ದಿನಗಳಲ್ಲಿ ಆರಂಭವಾಗುವ ಹನ್ನೆರಡು ವರ್ಷಗಳ ದೋಷಕಾಲದ ಮೊದಲಿನ ಮೂರು ವರ್ಷ, ಮೂರು ತಿಂಗಳು, ಮೂರು ದಿನಗಳು ಅತ್ಯಂತ ಕೆಟ್ಟವಾಗಿದ್ದು ನೀನು ತುಂಬಾ ಜಾಗ್ರತೆಯಿಂದಿರಬೇಕು. ಯಾರೇ ಎಷ್ಟೇ ಪ್ರಚೋದಿಸಲಿ, ನಿನ್ನ ಸಿಟ್ಟನ್ನು ನೀನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಈ ನಿಗ್ರಹವನ್ನು ಒಂದು ಕಠಿಣ ವ್ರತವೆಂಬಂತೆ ಪಾಲಿಸಬೇಕು. ಮುಂದಿನ ಒಂಬತ್ತು ವರ್ಷಗಳನ್ನು ಯಾರೊಡನೆಯೂ ಮತಭೇದಕ್ಕೆ ಅನವಶ್ಯ ಮನಸ್ತಾಪಕ್ಕೆ ಎಡೆಯಾಗದ ಹಾಗೆ ಕಳೆಯಲು ಈ ನಿಗ್ರಹವೇ ನಿನ್ನ ನೆರವಿಗೆ ಬರುತ್ತದೆ. ಈ ಕಾಲ ಯಾವುದೇ ವಿಕೋಪಕ್ಕೆ ಒಯ್ಯುವಷ್ಟು ಕೆಟ್ಟದಾಗಿಲ್ಲ.”

ಹುಡುಗರಿಗೆ ಭವಿಷ್ಯವಾಣಿಯಲ್ಲಿ ನಂಬಿಕೆ ಮೂಡಲಿಲ್ಲ. ಆದರೂ ಯಾರು ಬಲ್ಲರು ? ಎಂಬಂಥ ಅನುಮಾನದ ಸ್ಥಿತಿಯಲ್ಲಿ ಮುಂದಿನ ಮೂರು ವರ್ಷವಾದರೂ ತನ್ನ ಗೆಳೆಯನಿಂದ ದೂರವಿರುವುದೇ ಒಳ್ಳೆಯದೇನೋ ಎನ್ನುವ ಇಚಾರ ಇಬ್ಬರ ತಲೆಗಳಲ್ಲೂ ಬಂದು ಊರು ಬಿಡುವುದನ್ನು ನಿಶ್ಚಯಿಸಿದರು. ಊರು ಬಿಟ್ಟರು ಕೂಡ. ಮುಂದಿನ ಮೂರು ವರ್ಷ ಒಂದೇ ಊರಿನಲ್ಲಿದ್ದೂ ಪರಸ್ಪರರ ದೃಷ್ಟಿಗೆ ಬೀಳಲಿಲ್ಲ. ಆಮೇಲೆ. ಜ್ಯೋತಿಷಿ ಇನಾರೆಯಿತ್ತ ದುಷ್ಟಕಾಲ ಮುಗಿಯಲು ಇನ್ನೂ ಮೂರು ತಿಂಗಳು ಮೂರು ದಿನಗಳಿವೆ ಎನ್ನುವಾಗ ಒಂದು ದಿನ ಒಂದೇ ರೆಸ್ಟೋರೆಂಟಿಗೆ ಊಟಕ್ಕೆ ಬಂದವರಿಗೆ ಯಾರೋ ತಮ್ಮೊಡನೆ ದುಷ್ಟ ಆಟ ಆಡಿದ್ದಾರೆಂದು ಗೊತ್ತಾದಾಗ ಸಿಟ್ಟು ಬಂದಿತೆ ? ಕೆಡುಕೆನಿಸಿತೇ ? ತಿಳಿಯುವ ಬಗೆಯಿರಲಿಲ್ಲ. ಊರು ಬಿಡುವಾಗ ಜೊತೆಗೂಡಿರದವರು ಜೊತೆಯಾಗಿ ಊರು ಸೇರಿದರು. ಮಾರನೇ ದಿವಸ ರಾತ್ರಿಯೇ ಅವಸರ ಅವಸರವಾಗಿ ಮತ್ತೆ ಊರು ಬಿಟ್ಟರು. ಎಲ್ಲಿ ಹೋದರು ? ಏನಾದರು ? ಇಂದಿಗೂ ಪತ್ತೆಯಾಗಿಲ್ಲ-ಊರು ಬಿಟ್ಟು ಇಪ್ಪತ್ತೊಂದು ವರ್ಷಗಳಾದರೂ!

ಅವರು ಹೊರಟುಹೋದ ರಾತ್ರಿಯೇ ಊರಿನಲ್ಲಿ ನಡೆದ ಭೀಕರ ದುರ್ಘಟನೆಯೊಂದು ಈ ಅವಸರದ ನಿರ್ಗಮನಕ್ಕೆ ಗಂಟುಹಾಕಿಕೊಂಡು ಎಲ್ಲೆಲ್ಲೂ ಎಣೆಯಿಲ್ಲದ ಊಹೆಗಳಿಗೆ ಎಡೆಮಾಡಿತು. ನೆಲ್ಲಿಕೇರಿಯ ದೀಡಬುದ್ವಂತ ಉಟ್ಟಧೋತರವನ್ನೇ ಮಾಡಿನ ಜಂತೆಯಿಂದ ಇಳಿಬಿಟ್ಟ ನೇಣುಮಾಡಿ ಅಸುನೀಗಿದ್ದ. ಕಾಲುಬುಡಕ್ಕೆ ಒಂದರ ಮೇಲೊಂದು ಪೇರಿಸಿಟ್ಟ ಎರಡು ದಪ್ಪ ಟ್ರಂಕುಗಳನ್ನೂ ಇಟ್ಟುಕೊಂಡಿರಬೇಕು.

ಭಾಗ ಎರಡು

ಅವರು ಹೊರಟುಹೋದ ರಾತ್ರಿಯೇ ಊರಿನಲ್ಲಿ ನಡೆದ ಭೀಕರ ದುರ್ಘಟನೆಯೊಂದು ಈ ಅವಸರದ ನಿರ್ಗಮನಕ್ಕೆ ಗಂಟುಹಾಕಿಕೊಂಡು ಎಲ್ಲೆಲ್ಲೂ ಎಣೆಯಿಲ್ಲದ ಊಹೆಗಳಿಗೆ ಎಡೆಮಾಡಿತು. ನೆಲ್ಲಿಕೇರಿಯ ದೀಡಬುದ್ವಂತ ಉಟ್ಟಧೋತರವನ್ನೇ ಮಾಡಿನ ಜಂತೆಯಿಂದ ಇಳಿಬಿಟ್ಟ ನೇಣುಮಾಡಿ ಅಸುನೀಗಿದ್ದ. ಕಾಲುಬುಡಕ್ಕೆ ಒಂದರ ಮೇಲೊಂದು ಪೇರಿಸಿಟ್ಟ ಎರಡು ದಪ್ಪ ಟ್ರಂಕುಗಳನ್ನೂ ಇಟ್ಟುಕೊಂಡಿರಬೇಕು. ಈಗ ಅಸ್ತವ್ಯಸ್ತವಾಗಿದ್ದವು. ಈ ಎರಡೂ ಟ್ರಂಕುಗಳು ಈ ತರುಣಗಿಗೆ ಸೇರಿದವುಗಳಾಗಿದ್ದವು. ಅವು ಅಲ್ಲಿಗೆ ಹೇಗೆ ಬಂದವು ? ಯಾಕೆ ಬಂದವು ? ಊಹಾಪೋಹ ಅಲ್ಲಿಂದಲೇ ಆರಂಭಗೊಂಡಿತ್ತು. ಈಲರೂ ತಿಳಿದಹಾಗೆ ಇದು ಆತ್ಮಹತ್ಯೆಯಾಗಿರದೇ ಕೊಲೆಯಾಗಿರಬಹುದೇ ? ಈ ಕೊಲೆಯಲ್ಲಿ ಈ ತರುಣರ ಕೈಯಿರಬಹುದೇ ? ಮೃತರ ಮಗ ಪೊಲೀಸ್ ಚೌಕಿಗೆ ಹೋಗಿ ಇದು ಕೊಲೆಯೆಂದೇ ಸಾಬೀತುಗೊಳಿಸಲು ಕಾರಣ ಕೊಟ್ಟು ದೂರು ಬರೆಸಿದ. ಇದಿಷ್ಟು ಸಾಲದೆನ್ನುವಂತೆ ತಾನು ಪೊಲೀಸ್ ಠಾಣೆಯಲ್ಲಿ ಬರೆಸಿದ್ದನ್ನು, ಊರ ತುಂಬ ಡಂಗುರ ಸಾರುವವನ ಹಾಗೆ ಹೇಳುತ್ತ ಸಿಕ್ಕವರ ಎದುರು ಕಂಠಶೋಷ ಮಾಡಿಕೊಂಡ.

ಇವನು ಕೊಟ್ಟ ಕಾರಣ ಕೇಳಿದಮೇಲೆ ಜನರಿಗೆ ಇವನ ಅಪ್ಪನ ಮೇಲೇ ಇನ್ನಷ್ಟು ಸಿಟ್ಟು ಬಂದಿತು. ಅದೇ ಕಾರಣಕ್ಕೆಂಬಂತೆ ಪೊಲೀಸರು ಕೂಡ ಇದು ಆತ್ಮಹತ್ಯೆಯೇ ಎನ್ನುವ ನಿರ್ಧಾರಕ್ಕೆ ಬಂದು ಪ್ರಕರಣವನ್ನು ಅಲ್ಲಿಗೆ ನಿಕಾಲೆಗೊಳಿಸಿದರು.

– ೫ –

ಆರಂಭವಾದಂದಿನಿಂದಲೂ ಒಂದಿದ್ದರೊಂದಿಲ್ಲದಂತೆ ನಡೆದ ಘಟನೆಗಳಿಂದ ಗೋಜುಗೋಜಾಗುತ್ತ ನಡೆದ ಪ್ರಸಂಗ ಈಗ ಆತ್ಮಹತ್ಯೆಯೋ ಕೊಲೆಯೋ, ಒಟ್ಟಿನಲ್ಲಿ ಒಂದು ನಿಗೂಢ ಸಾವಿನಲ್ಲಿ ಕೊನೆ ಮುಟ್ಟುತ್ತಿರುವ ಹೊತ್ತಿಗೆ ಗೋಜು ತನ್ನ ಪರಕಾಷ್ಠೆಯನ್ನು ತಲುಪಿತ್ತು. ಇಂಥ ಸ್ಥಿತಿಯಲ್ಲಿ ವೈಕುಂಠ ಬಾಳ್ಗಿಯ ಮಗ ಕೊಟ್ಟ ದೂರೊಂದೇ ಈ ಘಟನಾವಳಿಗೆ ಸ್ವಲ್ಪವಾದರೂ ಅರ್ಥವಾಗುವ ಆಕಾರ ಕೊಡುವಂಥಾದದ್ದು ಕೆಟ್ಟ ವ್ಯಂಗ್ಯವಾಗಿ ತೋರುವಾಗಲೂ ಸತ್ಯಸಂಗತಿಯಾಗಿತ್ತು. ಅದನ್ನು ನನಗೆ ಅರುಹುವ ಮೊದಲು ನಿಜಕ್ಕೂ ನೆಲ್ಲಿಕೇರಿಯ ಆ ಮನೆಯನ್ನು ನನಗೆ ತೋರಿಸುವ ಮನಸ್ಸಾಯಿತೋ, ಸರಿರಾತ್ರಿ ದಾಟಿರುವ ಈ ಹೊತ್ತಿನಲ್ಲಿ ಹೇಳುವುದು ಬೇಡವೆನ್ನಿಸಿತೋ, ನನ್ನ ಮಿತ್ರರು “ಉಳಿದದ್ದನ್ನು ನಾಳೆ ಆ ಮನೆಯನ್ನು ನೋಡಿದಮೇಲೆಯೇ ಕೇಳುವಿರಂತೆ” ಎಂದರು.

ನನಗೊಬ್ಬನಿಗೇ ಮಾಳಿಗೆಯ ಮೇಲಿನ ಒಂದು ಪ್ರಶಸ್ತ ಕೋಣೆಯಲ್ಲಿ ಹಾಸಿಗೆ ಹಾಸಿದ್ದರು. “ಇಡೀ ಮನೆಯಲ್ಲಿ ಪಶ್ಚಿಮಕ್ಕೆ ಮುಖ ಮಾಡಿದ ಈ ಕೋಣೆಯಲ್ಲಷ್ಟೇ ಚೆನ್ನಾಗಿ ಗಾಳಿ ಬೀಸುತ್ತಿದೆಯೆಂದು ಇಲ್ಲಿ ಹಾಸಿಗೆ ಹಾಕಿಸಿದ್ದೇನೆ ಒಬ್ಬರಿಗೇ ಹೆದರಿಕೆಯಾಗುವುದಿಲ್ಲ ತಾನೆ ?” ಎಂದು ಕೇಳಿದರು. ಮಿತ್ರರು. ನಾನು ದೊಡ್ಡಕ್ಕೆ ನಕ್ಕುಬಿಟ್ಟೆ. ನಿಜ ಹೇಳುವುದಾದರೆ ನಾನು ಹೆದರಿದ್ದೆ. ಉಳಿದ ಕಥೆಯನ್ನವರು ನಾಳೆ ಹಗಲಲ್ಲಿ ಹೇಳಿದರೆ ಒಳ್ಳೆಯದೆಂದು ನನಗೂ ಅನ್ನಿಸಿತು.

ಪರದೆ ಹಾಕಿರದ ಕಿಟಕಿಯ ಹೊರಗೆ ಹಿಟ್ಟು ಚೆಲ್ಲಿದ ಹಾಗೆ ಬೆಳ್ದಿಂಗಳಿತ್ತು. ಹಿತ್ತಲಲ್ಲಿಯ ತೆಂಗು, ಅಡಿಕೆ, ಹಲಸಿನ ಮರಗಳು ತಿಂಗಳ ಬೆಳಕಿನಲ್ಲಿ ಸವಿಯುತ್ತ ಗಾಳಿ ಬೀಸಿದಾಗೊಮ್ಮೆ ಪಿಸುನುಡಿಯುವ ವಿಚಿತ್ರ ಸದ್ದು ಮಾಡುತ್ತಿದ್ದವು. ಇವರ ಮನೆಯ ಹಿಂದೆಯೇ ನಾಗರಬಲೆಯೆನ್ನುವ ಸಣ್ಣ ಕಾಡು ಇದೆ. ಅದರಾಚೆ ಹೆರವಟ್ಟೆಯ ಗುಡ್ಡ. ನಾಗರಬಲೆಗೆ ಆಗೀಗ ತೋಳ-ನರಿಗಳು ಬರುವುದುಂಟಂತೆ ; ಇಂಥ ಬೆಳ್ದಿಂದಳ ರಾತ್ರಿಯಲ್ಲಿ ಅಳುವ ಮಕ್ಕಳ ದನಿಯಲ್ಲಿ ಕೂಗುವುದುಂಟಂತೆ. ಗಿಡಗಂಟೆಗಳಲ್ಲಿ ಆಗಲೇ ಜೀರುಂಡಗಳು ವಿಚಿತ್ರ ಕಂಠದಲ್ಲಿ ಕೋಲಾಹಲ ಎಬ್ಬಿಸಿದ್ದವು. ನಿನ್ನೆ ಇಂದು ಸುತ್ತಾಡಿ ಬಂದ ಕೇರಿಗಳೆಲ್ಲ ಕಣ್ಣೆದುರು ನಿಂತಾಗ ಕಣ್ಣು ಮುಚ್ಚುವುದೇ ಅಸಾಧ್ಯವಾಯಿತು. ಸುಮಾರುಹೊತ್ತಿನ ಮೇಲೆ ಸರಕ್ಕನೆಂಬಂತೆ ನನ್ನ ಮಿತ್ರರು ಈವರೆಗೆ ಹೇಳಿದ ಕಥಾನಕಕ್ಕೂ ಈ ಪರಿಸರ ವಿಶೇಷಗಳಿಗೂ ಅನ್ಯೋನ್ಯ ಸಂಬಂಧವಿದೆಯೆಂದು ಅನ್ನಿಸಿಹೋಯಿತು. ಕುಮಟೆಯ ಕೇರಿಗಳಿಗೆ, ಏರಿ-ತಗ್ಗುಗಳಿಗೆ ಈಗಿನ ಆಕಾರವಿರದಿದ್ದರೆ ಕಥೆಗೆ ಈಗಿನ ಆಕಾರ ಬರುತ್ತಿರಲಿಲ್ಲವೇನೋ ಎಂಬ ಅನ್ನಿಸಿಕೆಯ ಹಿಂದೆಯೇ, ಬಹುಶಃ ನಾನು ನಾಳೆ ನೋಡಲಿದ್ದ ಮನೆಗೆ ಈಗಿನ ಆಕಾರ ಇದ್ದಿರದಿದ್ದರೆ ಕಥೆ ಈಗಿನ ಹಾಗೆ ಕೊನೆಗೊಳ್ಳುತ್ತಿರಲಿಲ್ಲವೇನೋ ಎಂಬಂಥ ವಿಚಿತ್ರ ವಿಚಾರ ತಲೆಯಲ್ಲಿ ಬರುತ್ತಲೇ ನಾಳೆ ಆ ಮನೆಯನ್ನು ನೋಡುವ ಮೊದಲು ಈ ಕಥೆಯ ಕೊನೆಯನ್ನು ಊಹಿಸುವುದೇ ಬೇಡ ಎನ್ನುವ ನಿರ್ಧಾರಕ್ಕೆ ಬಂದೆ.

ನಾವಂದು ನೋಡಿ ಬಂದ ಮನೆ ನೆಲ್ಲಿಕೇರಿಯ ಗುಡ್ಡದ ಉತ್ತರ ಓವರಿಯಲ್ಲಿತ್ತು. ದಕ್ಷಿಣ ಓವರಿಯಲ್ಲಿ ಇಲ್ಲಿಯ ಪ್ರಖ್ಯಾತ ಬಸ್‌ಸ್ಟ್ಯಾಂಡು. ಮನೆಗಳಿದ್ದ ಕೇರಿಗಳೆಲ್ಲ ಪೂರ್ವ ಹಾಗೂ ಪಶ್ಚಿಮ ಸೆರಗುಗಳಲ್ಲಿದ್ದವು. ನನ್ನನ್ನು ನೇರವಾಗಿ ಮನೆಗೇ ಒಯ್ಯದೇ ಪಶ್ಚಿಮದ ಕಂಪೌಂಡೊಂದರ ಹೊರಗೆ ನಿಲ್ಲಿಸಿಕೊಂಡು ದೂರದಿಂದಲೇ ತೋರಿಸಿದರು : “ಅಲ್ಲೀಗ ಯಾರೂ ಇರುವುದಿಲ್ಲ. ಅಂದು ನಡೆದ ದುರ್ಘಟನೆಯ ನಂತರ ಮನೆಯವರು ಬೇರೆಡೆಯಲ್ಲಿ ನಿಲ್ಲಲು ಹೋದರು. ಅವನು ಈ ಮನೆ ಕಟ್ಟಿಸಿದಾಗ ಈ ಕೇರಿಗಳು ಇರಲಿಲ್ಲ. ಇವೆಲ್ಲ ಸಧ್ಯವೇ ಹುಟ್ಟಿಕೊಂಡವುಗಳು. ಮನೆ ಮುಖ ಮಾಡಿದ್ದು ತುಂಬಾ ಆಳವಾದ ಕಣಿವೆಯ ಕಡೆಗೆ, ಮನೆಯ ಹಿಂಬದಿಯಲ್ಲಿ ಬೇಣದಲ್ಲೊಂದು ತಗಡು ಹೊದಿಸಿದ ಮಾಡಿನ ಶೆಡ್ಡು ಕಾಣಿಸುವುದಿಲ್ಲವೆ ? ಅದು ಅಲ್ಲಿಯ ಸ್ಮಾಶಾನ. ನೋಡುವವರಿಲ್ಲದೇ ಹಾಳು ಸುರಿಯುವ ಮನೆ ಹಿತ್ತಲುಗಳ ಕಡೆಗೀಗ ಹಗಲಲ್ಲೂ ಯಾರೂ ಹಾಯರು. ಸುತ್ತಲ ಜನವಸತಿಗಳಿಂದ ಬೇರೆಯಾಗಿ ನಿಂತ ಒಂಟಿ ಮನೆ ಇವನ ಜೀವನಶೈಲಿಗೆ ಒಂದು ಪ್ರತೀಕದಂತಿದೆ. ಯಾವಾಗಲೂ ಜನರಿಂದ ದೂರ, ಜನರಿಂದ ಬೇರೆ. ಬೇರೆ ಅನ್ನಿಸಿಕೊಳ್ಳುವುದರಲ್ಲೇ ಧನ್ಯತೆ ಕಂಡವನು.”

ನನಗೆ ಗೊತ್ತಾಗುವ ಮೊದಲೇ ನಾವು ಮೊದಲು ನಿಂತ ಜಾಗದಿಂದ ತುಸು ದೂರವಿದ್ದ ದೊಡ್ಡ ಕಲ್ಲುಬಂಡೆಯನ್ನು ಹತ್ತಿ ಕುಳಿತಿದ್ದೆವು. ಅಲ್ಲಿಂದ ಕಾಣುವ ಕಣಿವೆಯ ಆಳ ಮನಸ್ಸಿಗೆ ನಾಟದ ವೇಗಕ್ಕೆ ಕುಳಿತಲ್ಲೇ ತೋಲ ಹೋಗುವ ಭಯವಾಗಿ ಸಾವರಿಸಿಕೊಂಡೆ.

“ಅಂದು ರಾತ್ರಿ ಈ ಮನೆಯಲ್ಲಿ ಏನೆಲ್ಲ ಆಯಿತು ? ಯಾಕೆ ಆಯಿತು ? ಕೊನೆಗೂ ಯಾರೂ ಅರಿಯದ ರಹಸ್ಯವಾಗಿಯೇ ಉಳಿಯುತ್ತದೆಯೇ ? ಏನೋ. ಯಾವುದರಲ್ಲೂ ನಂಬಿಕೆಯಿಲ್ಲದ, ಯಾರ ಬಗೆಗೂ ಮಾಯ ಮಮತೆ ತೋರಿಸಿ ಗೊತ್ತಿಲ್ಲದ, ಯಾವಾಗಲೂ ತಾನು ನೋಡಿದ ಮೊಲಕ್ಕೆ ಮೂರೇ ಕಾಲುಗಳೆಂದು ಮೊಂಡುವಾದ ಹೂಡುವುದರಲ್ಲೇ ಸುಖ ಕಾಣುತ್ತಿದ್ದ ಈ ನಾಸ್ತಿಕ ಎಂಥ ಪ್ರಚೋದನೆಗೂ ಸುಲಭವಾಗಿ ವಿಚಲಿತನಾಗುವವನಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಂತೂ ಖಂಡಿತ ಅಲ್ಲ. ಸತ್ತಂದ್ದಂತೂ ಖರೆ. ಇತ್ತ, ಈ ಶಾಂತ ಗಂಭೀರ ಮುಖಮುದ್ರೆಯ-ಹಲವರಲ್ಲಿ ಒಮ್ಮೆ ಲವ-ಕುಶರ, ಇನ್ನೊಮ್ಮೆ ನಕುಲ-ಸಹದೇವರ ಪ್ರತಿಮೆಗಳನ್ನು ಮೂಡಿಸಿದ-ಸ್ನಿಗ್ಧ ಜೀವಿಗಳು ಯಾರೇ ಎಷ್ಟೇ ಕೆಣಕಿದರೂ ಕೋಪಗೊಳ್ಳುವವರಲ್ಲ. ಕೊಲೆ ಮಾಡುವ ವಿಕೋಪಕ್ಕೆ ಹೋಗುವ ಪೈಕಿಯಂತೂ ಅಲ್ಲವೇ ಅಲ್ಲ. ದುರ್ಘಟನೆಯ ರಾತ್ರಿ ಈ ಮನೆಗೆ ಬಂದದ್ದಂತೂ ಖರೆ. ಅದೇ ದಿನ ಊರಿನಿಂದ ಓಡಿಹೋದದ್ದೂ ಖರೆ. ಮನುಷ್ಯಜೀವನದ ಸತ್ಯಗಳನ್ನು ಆಖೈರಾಗಿ ತಿಳಿದವರು ಯಾರೆಂದಾಗಬೇಡವೆ ? – ಎಂದುಕೊಂಡು ಸುಮ್ಮನಿದ್ದುಬಿಡೋಣವೇ ? ಸತ್ತವನ ಮಗ ಹೇಳಿದ್ದನ್ನು ಮರೆಯುವಂತಿಲ್ಲ. ಆ ಹಾಳು ಜೋಯಿಸನ ಭವಿಷ್ಯವಾಣಿಯನ್ನೂ ಕಡೆಗಣಿಸುವಂತಿಲ್ಲ. ಜೋಯಿಸ ಹೇಳಿದ್ದು ನಿಮಗೆ ಗೊತ್ತಿದೆ. ಸತ್ತವನ ಮಗ ಹೇಳಿದ್ದಷ್ಟನ್ನು ಹೇಳಿ ನಾನು ನಿಮ್ಮನ್ನು ಈ ಊರಿಗೆ ಕರೆಸಿಕೊಂಡ ಮುಖ್ಯ ಉದ್ದೇಶಕ್ಕೆ ಬರುತ್ತೇನೆ.”

ಅಪ್ಪನ ಸಾವಿನಿಂದ ಸಂತ್ರಸ್ತನಾದ ಮಗ ಕಂಡಕಂಡವರ ಎದುರು, ನಂಬೀ, ನಂಬೀ-ಎನ್ನುತ್ತ ಆಣೆ ಭಾಷೆ ಮಾಡುವವರ ಹಾಗೆ ಹೇಳಿದ್ದಿಷ್ಟು-

“ಆ ರಾತ್ರಿ ಒಂಬತ್ತರ ಸುಮಾರಿಗೆ ಇವರು ನಮ್ಮ ಮನೆಗೆ ಬಂದರು. ನಾನಾಗ ಇನ್ನೂ ಅಂಗಡಿಯಲ್ಲಿದ್ದೆ. ಮನೆಯಲ್ಲಿ ಅಪ್ಪ, ನನ್ನ ಹೆಂಡತಿ ಇಬ್ಬರೇ. ಅಮ್ಮ ಸತ್ತು ಈಗ ಒಂದು ವರ್ಷವಾಯಿತು. ನಿಮಗೆ ಗೊತ್ತಿದೆ. ಅಪ್ಪ ಊಟಕ್ಕೆ ಕೂರುವ ತಯಾರಿಯಲ್ಲಿದ್ದರು. ಬಂದವರಿಬ್ಬರೂ ಇದಾವುದರ ಕಡೆಗೆ ಲಕ್ಷ್ಯ ಕೊಡದೇ “ನಿಮ್ಮ ಮೇಲಿನ ಕೋಣೆಗೇ ಹೋಗೋಣ” ಎಂದೇನೋ ಗುಣಿಗುಣಿಸಿ ಅವರನ್ನು ಎಳೆದೇ ಒಯ್ಯುವವರಂತೆ ಕೈಹಿಡಿದು ಮೇಲಕ್ಕೆ ಕರೆದೊಯ್ದರು. ‘ನಮ್ಮ ಹತ್ತಿರ ಹೆಚ್ಚು ಹೊತ್ತಿಲ್ಲ. ನಾವು ಹಿಂದೆ ನಿಮ್ಮ ಹತ್ತಿರ ಇಡಲು ಕೊಟ್ಟ ಟ್ರಂಕುಗಳನ್ನು ವಾಪಸ್ಸು ಕೊಡಿ’ ಎಂದರು. ಅಪ್ಪ ಅಜ್ಞಾನ ನಟಿಸುತ್ತ ‘ಯಾವ ಟ್ರಂಕುಗಳ ಬಗ್ಗೆ ಮಾತನಾಡುತ್ತಿದ್ದೀರಿ ?’ ಎಂದು ಕೇಳಿದರು. ಕೆಳಗಿನಿಂದ ಕೇಳುತ್ತಿದ್ದ ನನ್ನ ಹೆಂಡತಿಗೂ ಈ ಪ್ರಶ್ನೆಯಿಂದ ಆಶ್ಚರ್ಯವಾಯಿತು. ಯಾಕೆಂದರೆ ವರ್ಷಗಳ ಹಿಂದೆ ಇಂಥದೇ ಒಂದು ರಾತ್ರಿಯಲ್ಲಿ ಇಬ್ಬರೂ ಒಬ್ಬರ ನಂತರ ಒಬ್ಬರು ಬಂದು ಅಪ್ಪನ ಹತ್ತಿರ ಟ್ರಂಕುಗಳನ್ನು ಇಟ್ಟು ಹೋದಾಗ ಮನೆಯಲ್ಲಿ ಅಮ್ಮ, ಹೆಂಡತಿ ಇಬ್ಬರೂ ಇದ್ದರು.

‘ನಾವು ಮೂರು ವರ್ಷಗಳ ಹಿಂದೆ ಊರು ಬಿಡುವ ಮೊದಲು ಇರಿಸಿದ್ದೆವು’

‘ಓ ! ಅವುಗಳೆ ? ಅವುಗಳಲ್ಲಿ ಅಂಥ ಮೌಲಿಕವಾದದ್ದೇನಿತ್ತಪ್ಪ ? ನೀವು ಆಗ ಹೇಳಿರಬೇಕು, ಈಗ ಮರೆತುಹೋಗಿದೆ.’

‘ನಾವು ಸಂಗ್ರಹಿಸಿದ ಕೆಲವು ವಿರಳ ಪುಸ್ತಕಗಳಿದ್ದವು. ಬರೆದಿಟ್ಟ ಟಿಪ್ಪಣಿಗಳಿದ್ದವು.’

‘ಓಹೋಹೋ ! ಈಗ ನೆನಪಾಯ್ತು. ನ್ಯೂಟನ್. ಐನ್‌ಸ್ಟಾನ್‌ರನ್ನು ಹಿಂದೆ ಹಾಕುವ ನಿಮ್ಮ ಮಳ್ಳ ಉಪದ್ವ್ಯಾಪಕ್ಕೆ ಸಂಬಂಧಪಟ್ಟವುಗಳು ! ನೀವು ಅವುಗಳನ್ನು ವಾಪಾಸು ಪಡೆಯಲು ಇಷ್ಟು ವರುಷ ತೆಗೆದುಕೊಳ್ಳುತ್ತೀರೆಂದು ನನಗೆ ಹೇಗೆ ಗೊತ್ತಾಗಬೇಕು ? ನೀವು ಇಲ್ಲಿಂದ ಹೋದ ಆರು ತಿಂಗಳಲ್ಲೇ ನನ್ನ ತಾಬೆಯಲ್ಲಿಟ್ಟ ನಿಮ್ಮ ಮೌಲಿಕ ಅಮಾನತ್ತಿಗೆ ಒರಲೆ ಹಿಡಿಯಿತು. ನಾನೇ ಎರಡನೆಯ ಬಾರಿ ಸಾಪು ಮಾಡಿ ಒಳಗಿರಿಸಿದೆ. ನೀವು ಮತ್ತೆ ಊರಿಗೆ ಮೋರೆ ತೋರಿಸಲಾರಿರಿ ಎಂಬ ವದಂತೆ ಊರಲ್ಲಿ ಹಬ್ಬಿದಾಗ ಸಾಪುಗೊಳಿಸುವ ಉಮೇದು ಉಳಿಯಲಿಲ್ಲ. ಆಗಲೆ ಗೆದ್ದಲು ಅವುಗಳನ್ನು ಅರ್ಧ ತಿಂದುಹಾಕಿತ್ತು. ಆಮೇಲೆ ನಾನೇ ಅವನ್ನು ಅಂಗಳಕ್ಕೆ ಒಯ್ದು ಚಿಮಣಿ ಎಣ್ಣೆ ಸುರಿದು ಸುಟ್ಟುಹಾಕಿದೆ. ಟ್ರಂಕುಗಳು ಮಾತ್ರ ನೀವಿಟ್ಟ ಜಾಗದಲ್ಲೇ ಇವೆ.

‘ನಮ್ಮ ಮನೆಗಳಿಗಿಂತ ನಿಮ್ಮ ಈ ಮನೆ ಹೆಚ್ಚು ಸುರಕ್ಷಿತವೆಂದು ತಿಳಿದು ಇಲ್ಲಿಗೆ ತಂದಿದ್ದೆವು. ನೀವೂ ಪುಸ್ತಕಗಳನ್ನು ಓದಿದವರು. ನಾವು ಮಾಡಬೇಕೆಂದು ಯೋಚಿಸಿದ್ದರ ಪರಿಚಯವಿದ್ದವರು. ನಮ್ಮ ಆಕಾಂಕ್ಷೆ ತೀರ ಬಾಲಿಶವೆಂದು ನಮಗೂ ಗೊತ್ತು. ಆದರೆ ಆಕಾಂಕ್ಷೆ ಇಟ್ಟುಕೊಳ್ಳುವುದು ಕೆಟ್ಟದ್ದಲ್ಲವೆಂದು ನೀವೇ ಹುರಿದುಂಬಿಸಿದ್ದಿರಿ. ಈಗ ಹೀಗೇಕೆ ಮಾಡಿದಿರಿ ?’

‘ಅದೆಲ್ಲ ಸರಿ. ಈಗ ಏನು ಮಾಡಲಾಗುತ್ತದೆ ?’ ಮುಂದೇನಾಯಿತು ? ಹೆಂಡತಿಗೆ ತಿಳಿಯಲಿಲ್ಲ. ಅಪ್ಪನ ಮಾತಿನಿಂದ ಸ್ವತಃ ತಾನೇ ಜಿಗುಪ್ಸೆಪಟ್ಟ ಅವಳು ಆಗ ಮಾರಾಮಾರಿಯಾಗದೇ ಇರಲಾರದೆಂದುಕೊಂಡು ಹೆದರಿ ನನ್ನನ್ನು ಕರೆತರಲು ಅಂಗಡಿಗೆ ಓಡಿಬಂದಳು. ಅಂಗಡಿ ನಮ್ಮ ಮನೆಯಿಂದ ಹದಿನೈದು ನಿಮಿಷಗಳ ಹಾದಿ. ನಾನು ಅಂಗಡಿ ಮುಚ್ಚಿ ಹೆಂಡತಿಯ ಜೊತೆಗೆ ಮನೆಗೆ ಬರುವಷ್ಟರಲ್ಲಿ ಎಲ್ಲವೂ ಮುಗಿದುಹೋಗಿತ್ತು.’

ಅಪ್ಪನ ಹಾರಿಕೆ ಮಾತು ಯಾರನ್ನೂ ಸಿಟ್ಟಿಗೆಬ್ಬಿಸುವಂಥದ್ದೇ. ಹೀಗಿರುವಾಗ ಈ ಹುಡುಗರು ಸಿಟ್ಟಿಗೆದ್ದದ್ದು ಆಶ್ಚರ್ಯವಲ್ಲ ಎಂದು ಸಾಧಿಸುವ ಭರದಲ್ಲಿ ಹುಡುಗ ಎಲ್ಲವನ್ನೂ ಹೇಳಿರಬೇಕು. ಯಾಕೆಂದರೆ, ಅವರು ಹಾಗೆ ಸಿಟ್ಟಿಗೆದ್ದದ್ದು ಹೌದೆಂದಾದರೆ ಈ ಘೋರ ಕೃತ್ಯ ಅವರ ಕೈಯಿಂದಲೇ ನಡೆದದ್ದು ಎನ್ನುವುದು ನಿರ್ವಿವಾದ, ಯಾಕೆಂದರೆ ಜ್ಯೋತಿಷಿ ಇದನ್ನೇ ಹೇಳಿದ್ದ !

ಜನ ಒಪ್ಪಲಿಲ್ಲ : ಇವನ ಹೆಂಡತಿ ಮನೆ ಬಿಟ್ಟು ಹೋದ ಕ್ಷಣದಲ್ಲೇ ಹುಡುಗರು ಇಂಥ ಅತಿರೇಕಕ್ಕೆ ಪ್ರಚೋದಿಸುವಂಥದ್ದನ್ನೇನಾದರೂ ಅಂದಿರಬೇಕು. ಇವಳು ಅಂಗಡಿ ತಲುಪಿ, ಅವನು ಅಂಗಡಿ ಮುಚ್ಚಿ, ಇಬ್ಬರೂ ಮನೆಗೆ ಬಂದಮೇಲೆ ಹೋಗಿ ನೋಡುವುದರೊಳಗೆ ಮೂವ್ವತ್ತೈದು-ನಾಲ್ವತ್ತು ಮಿನಿಟುಗಳಾದರೂ ಕಳೆದಿರಬೇಕು. ಈ ಸಮಯದಲ್ಲಿ ಏನು ನಡೆಯಿತು ? ಇವಳು ನೋಡಿಲ್ಲ. ಮಾವ ಸಿಟ್ಟು ಬರಿಸುವಂಥ ಮಾತು ಆಡಿದ್ದು, ಅಪರಿಚಿತ ಜ್ಯೋತಿಷಿ ಭವಿಷ್ಯ ನುಡಿದದ್ದು-ಇವಷ್ಟನ್ನೇ ನಂಬಿ ಹುಡುಗರು ದೋಷಿಗಳೆಂದು ನಿರ್ಧರಿಸುವುದು ಮೂರ್ಖತನವಾದಿತು. ಇಷ್ಟಕ್ಕೂ ಸಾವು ಒದಗಿದ ಸಮಯದ ಬಗ್ಗೆ ಮಗ-ಸೊಸೆ ಸತ್ಯವನ್ನೇ ಹೇಳಿದ್ದಾರೆಂದು ಯಾವ ಖಾತರಿ ? ಹುಡುಗರು ಹೊರಟುಹೋದಮೇಲೆ ಮುದುಕ, ಯಥಾವಕಾಶ ಊಟಗೀಟ ಮುಗಿಸಿ, ಮಗ-ಸೊಸೆ ನಿದ್ದೆ ಹೋದಮೇಲೇ ಈ ಕೆಲಸ ಏಕೆ ಮಾಡಿರಬಾರದು ? ಕೆಲವರು ಹಾಗೇ ಹೇಳಿದರು-ಕೊಲೆಯೇ ಆಗಲೀ ಆತ್ಮಹತ್ಯೆಯೇ ಆಗಲೀ ಮಾಡಿಗೆ ತೂಗಿ ಬೀಳುವ ಕೆಲಸವೇನು ಅರ್ಧಗಂಟೆಯೊಳಗೆ ಮುಗಿಯುವಂಥದ್ದೇ ? ಮುದುಕ ತಂಬಿಗೆ ಹಿಡಿದು ‘ಗುಡ್ಡಕ್ಕೆ ಹೋಗುವ’ ಕೆಲಸವನ್ನು ಕೂಡ ಇಷ್ಟು ಬೇಗ ಮಾಡುತ್ತಿರಲಿಕ್ಕಿಲ್ಲ !

ಬಹಳ ದಿನಗಳ ಮೇಲೆ ನಡೆದದ್ದು ಕೆಟ್ಟ ನೆನಪಾಗತೊಡಗಿದಂತೆ ಕುಮಟೆಯ ಜನ ತಮಗೆ ಮಾತ್ರ ಸಾಧ್ಯವಿದ್ದ ತಾತ್ವಿಕ ತೀರ್ಮಾನಕ್ಕೆ ಬಂದರು-

ಹೌದು-ಅಲ್ಲ ಈ ಎರಡೂ ಹೇಳಬಹುದಾದದ್ದು ಇಷ್ಟು ಮಾತ್ರ : ವೈಕುಂಠ ಬಾಳ್ಗಿ ಕೊರಳಿಗೆ ಉರುಳು ಬಿದ್ದು ಸತ್ತದ್ದು ಹೌದು. ಅದೇ ರಾತ್ರಿ ವಿಷ್ಣು, ಗೋವಿಂದ ಎಂಬ ಇಬ್ಬರು ಯುವಕರು ಊರು ಬಿಟ್ಟು ಓಡಿಹೋದದ್ದೂ ಹೌದು. ಇದರಾಚೆ ಏನೂ ಹೇಳುವುದು ಶಕ್ಯವಿಲ್ಲ. ಶಕ್ಯವಿದೆಯೆಂಬಂತೆ ನುಡಿದ ಸಾಮುದ್ರಿಕನೇ ಬೇಕಾದರೆ ಜಂತಿಯಿಂದ ತೂಗಲಿ. ನಮ್ಮ ಅಭ್ಯಂತರವಿಲ್ಲ !

ನನಗೂ ಬೇರೆ ವಿವರಣೆ ಹೊಳೆಯಲಿಲ್ಲ. ಆದರೂ ಆ ಮನೆ, ವೈಕುಂಠ ಬಾಳ್ಗಿಯ ಸಾವು ಮಾತಿನಲ್ಲಿ ಹೇಳಲಾಗದ ರೀತಿಯಲ್ಲಿ ಬೇಚೈನುಗೊಳಿಸಿದವು. ಇದು ನನ್ನ ಮಿತ್ರರ ಲಕ್ಷ್ಯಕ್ಕೆ ಬಂದಿರಲಾರದು. “ಬನ್ನಿ, ಮನೆಗೆ ಹೋಗೋಣ. ಇದೆಲ್ಲ ಈಗ ಮುಗಿದ ಪ್ರಕರಣವೆಂದು ತಿಳಿದು ಕಳೆದ ಇಪ್ಪತ್ತೊಂದು ವರ್ಷ ನಿರ್ಧಾಸ್ತನಾಗಿದ್ದವನ ಕಣ್ಣಿಗೆ ಮೊನ್ನೆಮೊನ್ನೆ ಮತ್ತೇನೋ ಹೊಸತು ಬಿದ್ದಾಗಿನಿಂದ, ಯಾರಿಗೂ ಹೇಳಲಾರೆ ; ನನ್ನಲ್ಲೇ ಇಟ್ಟುಕೊಳ್ಳಲಾರೆ-ಎಂಬಂಥ ಸ್ಥಿತಿಯಲ್ಲಿ ರಾತ್ರಿ ನಿದ್ದೆಗೆ ಎರವಾಗಿದ್ದೇನೆ. ನಿಮ್ಮೊಡನೆ ಚರ್ಚೆ ಮಾಡಿದರೆ ಮನಸ್ಸಿಗೆ ಸಮಾಧಾನವಾದೀತೆಂದು ಯಾಕೆ ಅನ್ನಿಸಿತೋ, ಅನ್ನಿಸಿದ್ದೇ ನಿಮ್ಮ ಅಪ್ಪನಿಗೆ ಪತ್ರ ಬರೆದು ಇಲ್ಲಿಗೆ ಕರೆಸಿಕೊಂಡೆ. ನಾವೇ ನೀವಿದ್ದಲ್ಲಿಗೆ ಬರಬಹುದಾಗಿತ್ತು. ಆದರೆ ಈ ಕಥೆಗೆ ಜನ್ಮವಿತ್ತ ನೆಲದ ಪರಿಚಯವಿಲ್ಲದೇ ಅದು ತೆಗೆದುಕೊಂಡ, ತೆಗೆದುಕೊಳ್ಳುತ್ತಲೇ ಇರುವ ತಿರುವುಗಳು ನಿಮಗೆ ಅರ್ಥವಾಗಲಾರವು, ಅನ್ನಿಸಿತು.”

– ೬ –

ಮನೆ ತಲುಪುತ್ತಲೇ ಒಳಗೆಲ್ಲೋ ಮೇಜಿನ ಖಣದಲ್ಲಿ ಜೋಪಾನವಾಗಿ ಇರಿಸಿದಂತಿದ್ದ ಇಂಗ್ಲಿಷ್ ವೃತ್ತಿಪತ್ರಿಕೆಯೊಂದರ ಕ್ಲಿಪಿಂಗ್ ಹೊರತಂದು ನನ್ನ ಕೈಯಲ್ಲಿರಿಸಿದರು. ವೃತ್ತಾಂತದ ಶೀರ್ಷಿಕೆ ನೋಡಿಯೇ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು.

‘ಭಾರತೀಯ ಮೂಲದ ಇಬ್ಬರು ವಿದ್ವಾಂಸರು ಪ್ರಿನ್ಸ್‌ಟನ್ ಯೂನಿವರ್ಸಿಟಿಯಲ್ಲಿ ಬೆಳಕಿನ ಸ್ವರೂಪವನ್ನು ಕುರಿತು ಮಂಡಿಸಿದ ಹೊಸ ವಿಚಾರಗಳು : ನ್ಯೂಟನ್ ಹಾಗೂ ಐನ್‌ಸ್ಟೈನ್‌ರ ವಿಚಾರಗಳಿಂದ ತೀರ ಭಿನ್ನವಾದ ವಿಚಾರಗಳಿಗೆ ಆಧುನಿಕ ಭೌತಶಾಸ್ತ್ರದಂತೆ ವೇದ-ಉಪನಿಷತ್ತುಗಳಂಥ ಪ್ರಾಚೀನ ಸಂಸ್ಕೃತ ಗ್ರಂಥಗಳು ಆಧಾರವಾದದ್ದು ಇಲ್ಲಿಯ ವಿಜ್ಞಾನಿಗಳಲ್ಲಿ ಕುತೂಹಲ ಕೆರಳಿಸಿದೆ.’

ನಾನು ಶೀರ್ಷಿಕೆಯನ್ನು ಮತ್ತೆಮತ್ತೆ ಓದುತ್ತ ಈ ವಿದ್ವಾಂಸರು ನಮ್ಮ ವಿಷ್ಣು, ಗೋವಿಂದರು ಆಗಿರಬಹುದೇ ಎಂಬ ಅನುಮಾನದಿಂದಲೇ ಪುಳಕಗೊಳ್ಳುತ್ತಿದ್ದಂತೆ ನನ್ನ ಮೋರೆಯ ಮೇಲಿನ ಕ್ಷೋಭೆ ನೋಡಿಯೇ ಉತ್ತೇಜಿತರಾದ ಮಿತ್ರರು, “ಹೆಸರು ನೋಡಿದಿರಾ ?” ಎಂದು ಕೇಳಿ ತಾವೇ ಒಂದು ಜಾಗದಲ್ಲಿ ಬೆರಳಿಟ್ಟು ತೋರಿಸಿದರು.

‘ಈಗ ಪ್ರಚಲಿತವಿದ್ದ ಸಿದ್ಧಾಂತಗಳ ಪ್ರಕಾರ ಬೆಳಕು ಕಣವೂ ಹೌದು, ತರಂಗವೂ ಹೌದು. ಈ ಎರಡು ಸ್ಥಿತಿಗಳ ಹೊರತಾಗಿ ಬೆಳಕಿಗೆ ಮೂರನೆಯ ಸ್ಥಿತಿಯೊಂದು ಇರುವುದು ಶಕ್ಯವಿದೆಯೆಂದು ಸಾರಿದ ವಿದ್ವಾಂಸರು ವರ್ಷಗಳ ಹಿಂದೆ ಭಾರತದಿಂದ ವಲಸೆ ಬಂದು ಈಗ ಅಮೇರಿಕೆಯಲ್ಲಿ ನೆಲೆಸಿದ ಡಾ|| ಕೆ. ಜಿ. ವರ್ಮಾ ಹಾಗೂ ಡಾ|| ಕೆ. ವಿ. ಶರ್ಮಾ….”

ಇವು ನಾವು ತಿಳಕೊಂಡವರ ಹೆಸರುಗಳಲ್ಲ ಎಂದುಕೊಳ್ಳುತ್ತಿರುವಾಗಲೇ ನನ್ನ ಮಿತ್ರರು ಒಮ್ಮೆಲೇ ಉತ್ಸಾಹಿತರಾಗಿ, “ನಿಮ್ಮ ಲಕ್ಷ್ಯಕ್ಕೆ ಬಂದಿತೆ ?” ಎಂದು ಕೇಳಿದರು. ನನ್ನ ಪ್ರತಿಕ್ರಿಯೆಗೆ ಕಾಯದೇ, “ಒಬ್ಬನು ಕುಮಟೆಯ ಗೋವಿಂದ ; ಏ sಣಚಿಟಿಜs ಜಿoಡಿ ಏumಣಚಿ, ಉ ಜಿoಡಿ ಉoviಟಿಜ. ಇನ್ನೊಬ್ಬನು ಕುಮಟೆಯ ವಿಷ್ಣು. ಇಬ್ಬರೂ ಅಡ್ಡ ಹೆಸರುಗಳನ್ನಷ್ಟೇ ಬದಲಾಯಿಸಿಕೊಂಡಿದ್ದಾರೆ, ಹೊಳೆಯಿತೆ ? ಇವರು ನಮ್ಮ ಹುಡುಗರೇ. ನಿಸ್ಸಂಶಯ. ಇಬ್ಬರೂ ಡಾಕ್ಟರ್ ಆಗಿದ್ದಾರೆ, ನೋಡಿದಿರಾ ?” ಎಂದರು ತುಂಬಿದ ಅಭಿಮಾನದಿಂದ.

ವರ್ಮಾ ಶರ್ಮಾರ ಆಸ್ಥೆಯ ಕ್ಷೇತ್ರವನ್ನು ನೋಡಿದರೆ ಇವರು ನಮ್ಮ ಗೋವಿಂದ, ವಿಷ್ಣು ಆಗಿರುವುದು ಶಕ್ಯವಿದೆ ಎಂದು ನನಗೂ ಅನಿಸಿತು. ಆದರೆ ಹೆಸರುಗಳನ್ನು ಬದಲಿಸಿಕೊಂಡಿದ್ದೇಕೆ ? ದೂರದ ಅಮೇರಿಕೆಗೆ ವಲಸೆ ಹೋದದ್ದು ಹೌದಾದರೆ ಹೋಗುವ ಮೊದಲು ಯಾರಿಗೂ ತಿಳಿಸಲಿಲ್ಲವೇಕೆ ? ಹೋಗಿ ವರ್ಷಗಳೇ ಸಂದಿರುವಾಗಲೂ ಒಮ್ಮೆಯೂ ತಮ್ಮ ಹುಟ್ಟಿದೂರನ್ನು, ಹೆತ್ತವರನ್ನು ನೆನೆಯಲಿಲ್ಲವೇಕೆ ? ಇವರು ನಿಜಕ್ಕೂ ನಮ್ಮ ಹುಡುಗರೇ ಆಗಿರುವ ಪಕ್ಷದಲ್ಲಿ ವೈಕುಂಠ ಬಾಳ್ಗಿಯನ್ನು ಕೊಲೆಗೈದು ತಲೆಮರೆಸಿಕೊಂಡಿರುವ ಸಂಶಯ ಬರುವುದಿಲ್ಲವೆ ? ನನ್ನ ಎದುರು ಕುಳಿತವರ ನಿದ್ದೆಗೇಡಿಗೆ ಕಾರಣವಾದದ್ದು ಇಂಥ ಸಂಶಯ ಆಗಿರಲಾರದು. ಆಗಿದ್ದರೆ ಅವರು ಇಷ್ಟೊಂದು ಉತ್ಸಾಹಗೊಳ್ಳುತ್ತಿರಲಿಲ್ಲ. ಬಹುಶಃ ನನ್ನನ್ನು ಕಾಡಿದ ಸಂಗತಿಗಳು, ಇವರು ನಮ್ಮ ಹುಡುಗರೆನ್ನುವ ಅಭಿಮಾನದಿಂದ ಬೀಗಿದ ಅವರ ಲಕ್ಷ್ಯಕ್ಕೆ ಬಂದಿರಲಿಕ್ಕೂ ಇಲ್ಲ. ನಾನು ನನ್ನ ಕುತೂಹಲವನ್ನು ಸದ್ಯ ತಡೆ ಹಿಡಿದು ಅವರ ಮುಂದಿನ ಮಾತಿಗೆ ಕಾದೆ-

“ನೀವು ಸ್ವತಃ ವಿಜ್ಞಾನಿಗಳು. ನಿಮ್ಮ ಕ್ಷೇತ್ರದಲ್ಲಿ ನೀವು ಹೆಸರು ಗಳಿಸಿದ್ದು ನನಗೆ ಗೊತ್ತಿದೆ. ನಾನು ಕೇಳುವ ಪ್ರಶ್ನೆಗೆ ನಿಮ್ಮ ಪ್ರಾಮಾಣಿಕ ಉತ್ತರ ಕೊಡಿ-ಈ ಹುಡುಗರು ಕುಮಟೆಯಲ್ಲೇ ಉಳಿದಿದ್ದರೆ ಇಷ್ಟು ಮುಂದೆ ಬರುತ್ತಿದ್ದರೆ ?”

“ಖಂಡಿತ ಇಲ್ಲ ! ಕುಮಟೆಯಲ್ಲೇ ಯಾಕೆ, ಭಾರತದ ಯಾವುದೇ ಪಟ್ಟಣದಲ್ಲಿದ್ದರೂ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ”

ಅಮೇರಿಕೆಯಲ್ಲಿ ಹೆಸರು ಮಾಡಿದ ವಿದ್ವಾಂಸರು ಕುಮಟೆಯ ವಿಷ್ಣು, ಗೋವಿಂದರೇ ಎನ್ನುವ ತಮ್ಮ ಅಚಲ ಅಭಿಪ್ರಾಯವನ್ನು ನಾನೂ ಒಪ್ಪಿದ್ದೇನೆ ಎಂದು ಗ್ರಹೀತ ಹಿಡಿದೇ ಮಾತನಾಡಿದರು, ನನ್ನ ಮಿತ್ರರು-

“ಆ ದಿನ ತಾನೊಬ್ಬ ಜ್ಯೋತಿಷಿ ಎಂದು ಹೇಳಿಕೊಂಡು ಬಂದವನು ಈ ಇಬ್ಬರನ್ನು ಕುಮಟೆಯಿಂದ ದೂರ ಕರೆದೊಯ್ಯಲೆಂದೇ ಬಂದಿದ್ದೆಂದು ತೋರುವುದಿಲ್ಲವೇ ? ನನಗೆ ಖಾತರಿಯಿದೆ : ಆ ದಿನ ಬಂದವನು ಜ್ಯೋತಿಷಿ ಅಲ್ಲವೇ ಅಲ್ಲ, ಜ್ಯೋತಿಷಿಯ ವೇಷ ಹಾಕಿಕೊಂಡಿದ್ದ ಇನ್ನು ಯಾರೋ ! ನನಗೆ ಇಂಥದ್ದರಲ್ಲಿ ಇಷ್ಟು ದಿನ ವಿಶ್ವಾಸವೇ ಇರಲಿಲ್ಲ. ಆದರೆ ಇದನ್ನು ಓದಿದಮೇಲೆ ಮೂಡಿದೆ. ವಿಶ್ವಾಸ ಮೂಡಿದಂದಿನಿಂದ ರಾತ್ರಿ ನಿದ್ದೆಯೇ ಬಾರದಾಗಿದೆ.”

ಅವರ ಮಾತಿಗೆ ತಲೆ-ಬುಡ ಗೊತ್ತಾಗದೇ ನಾನು ಗೊಂದಲದಲ್ಲಿ ಬಿದ್ದೆ. ತಲೆಗೆ ಜ್ವರ ಏರಿದವರ ತರಹ ಮಾತನಾಡತೊಡಗಿದವರು ನನ್ನಲ್ಲಿ ಆತಂಕ ಹುಟ್ಟಿಸಿದರು. ನನ್ನ ಆತಂಕ ಇನ್ನೂ ತಮ್ಮ ವಿಚಾರಗಳ ಗುಂಗಿನಲ್ಲೇ ಇದ್ದ ಅವರ ಲಕ್ಷ್ಯಕ್ಕೆ ಬಂದಿರಲಾರದು_

“ನನಗೀಗ ಎಳ್ಳಷ್ಟೂ ಸಂಶಯವಿಲ್ಲ : ಜ್ಯೋತಿಷಿಯ ವೇಷ ಹಾಕಿಕೊಂಡು ವಿಷ್ಣು-ಗೊವಿಂದನ ಮನೆಗಳಿಗೆ ಮಾತ್ರ ಭೇಟಿಯಿತ್ತ ಮಹಾನುಭಾವ ಬೇರೆ ಯಾರೂ ಅಲ್ಲ. ಚಿತ್ರಿಗಿಯ ಜುಟ್ಕಾದೇವರು. ಚಿಕ್ಕಂದಿನಲ್ಲಿ ಅಪ್ಪ-ಅಮ್ಮಂದಿರಿಂದ ಇವನ ಮಹಿಮೆಯ ಬಗ್ಗೆ ಕೇಳಿ ಗೊತ್ತಿತ್ತು. ನಂಬಿರಲಿಲ್ಲ. ಕಷ್ಟದಲ್ಲಿದ್ದವರನ್ನು ರಕ್ಷಿಸಲು, ಯೋಗ್ಯರಾದವರಿಗೆ ಅಭ್ಯುದಯದ ದಾರಿ ತೋರಿಸಲು ಎಂಥೆಂಥೆ ವೇಷ ಧರಿಸಿ ಬರುತ್ತಿದ್ದವನ ಬಗ್ಗೆ ಅದ್ಭುತ ಕತೆಗಳನ್ನು ಕೇಳಿದ್ದೆ, ಅನುಭವಿಸಿರಲಿಲ್ಲ.”

ಅವರ ಮಾತಿನಲ್ಲಿನ್ನೂ ತಲೆಗೇರಿದ ಜ್ವರವಿತ್ತು. ನನ್ನ ಕಣ್ಣೆದುರೇ ಹೊಚ್ಚ ಹೊಸ ಪುರಾಣವೊಂದು ಹುಟ್ಟಿಕೊಳ್ಳತೊಡಗಿದ ವಿಸ್ಮಯಕ್ಕೆ ನಾನು ದಂಗುಬಡಿದೆ. ಅಪ್ಪ ನಾನು ಇಲ್ಲಿಗೆ ಹೊರಡುವ ಮೊದಲು ಈ ಜಟ್ಕಾದೇವರ ಬಗ್ಗೆ, ಅವನ ಮಹಿಮೆಯಲ್ಲಿ ಕುಮಟೆಯ ಜನರಿಗಿದ್ದ ಅಪಾರ ವಿಶ್ವಾಸದ ಬಗ್ಗೆ ಚುಟುಕಾಗಿ ತಿಳಿಸಿದ್ದ. ಬಹುಶಃ ಈ ಮಿತ್ರರು ಅಪ್ಪನಿಗೆ ಬರೆದ ಪತ್ರದಲ್ಲಿ ನನ್ನನ್ನು ಇಲ್ಲಿಗೆ ಕರೆಯಿಸಿಕೊಳ್ಳುವ ಉದ್ದೇಶ ತಿಳಿಸುವಾಗ ತಮ್ಮನ್ನು ಕಾಡುತ್ತಿದ್ದ ಪ್ರಶ್ನೆಯನ್ನು ಚರ್ಚಿಸಿರಬೇಕು ಎಂದು ಅನುಮಾನವಾಯಿತು. ತಡೆಯುವ ನನ್ನ ಪ್ರಯತ್ನ ಮೀರಿ ಮೋರೆಯ ಮೇಲೆ ಮುಗುಳ್ನಗೆ ಮೂಡಿತು. ಆದರೂ ನನ್ನ ಮುಂದೆ ಕೂತವರ ಭಾವನೆಗಳಿಗೆ ಅನಾದರ ತೋರಿಸದ ಹಾಗೆ-“ನಿಮ್ಮ ಪ್ರಕಾರ ವೈಕುಂಠ ಬಾಳ್ಗಿಯ ಕೊಲೆ ಮಾಡಿದವನು ಕೂಡ ಈ ಜಟ್ಕಾದೇವರೇ ಇರಬೇಕು, ಹಾಗಾದರೆ ?” ಎಂದು ಕೇಳಿದೆ.

ನನ್ನ ಬಾಯಿಂದ ತನ್ನಿಂದ ತಾನೇ ಎಂಬಂತೆ ಹೊರಬಿದ್ದ ಪ್ರಶ್ನೆಯಿಂದ ನಾನೇ ಚಕಿತನಾದೆ.

“ಬೇಶಕ್” ಎಂದರು, ಮಿತ್ರರು. ಎರಡೂವರೆ ಅಕ್ಷರಗಳ ಈ ಉತ್ತರದಲ್ಲಿ ಅವರ ಆತ್ಮವಿಶ್ವಾಸದ ಸಂಪೂರ್ಣ ಒತ್ತು ಮೂಡಿತ್ತು.

‘ಹಾಗೆ ನೋಡಿದರೆ ವೇಷ ಹಾಕ್ಕೊಳ್ಳುವ ಕೆಲಸ ಜಟ್ಕಾದೇವರಿಗಿಂತನಿಮ್ಮ ದೀಡಬುದ್ವಂತನಿಗೆ ಹೆಚ್ಚು ಸುಲಭವಾದದ್ದಲ್ಲವೇ ? ಜ್ಯೋತಿಷಿಯ ವೇಷದಲ್ಲಿ ಬಂದವನು ಅವನೇ ಏಕೆ ಆಗಿರಬಾರದು ? ತನ್ನ ಮಾತನ್ನು ನಿಜ ಮಾಡುವ ಹಠದಲ್ಲಿ ಕೊಲೆಯೆಂದು ಸಂಶಯ ಹುಟ್ಟಿಸುವ ಹಾಗೇ ಆತ್ಮಹತ್ಯೆ ಮಾಡಿಕೊಂಡಿರಬಾರದು ?’ ಕೇವಲ ಅವರನ್ನು ಚುಡಾಯಿಸಲೆಂದೇ ಕೇಳಬೇಕೆಂದಿದ್ದ ಪ್ರಶ್ನೆಯಲ್ಲಿ ತಂತಾನೆ ಆವಿಷ್ಕಾರಗೊಂದ ನನ್ನ ಶೋಧದಿಂದ ನಾನೇ ಎಷ್ಟು ಚಕಿತನಾದೆನೆಂದರೆ ಬಾಯಿಂದ ಮಾತೇ ಹೊರಡದಾಯಿತು. ನನ್ನ ಮೌನವನ್ನು ತಪ್ಪಾಗೀ ತಿಳಕೊಂಡ ಮಿತ್ರರು-

“ನಿಮ್ಮಂಥ ತರುಣ ಪ್ರಾಯದವರಿಗೆ, ಅದರಲ್ಲೂ ವಿಜ್ಞಾನದಲ್ಲಿ ಅಚಲವಾದ ವಿಶ್ವಾಸವಿದ್ದವರಿಗೆ ನನ್ನ ಮಾತಿನಲ್ಲಿ ಕೂಡಲೇ ವಿಶ್ವಾಸ ಮೂಡಸ್ಲಾರದು. ಸಂಜೆ ಇನ್ನೊಮ್ಮೆ ಚಿತ್ರಿಗಿಗೆ ಹೋಗಿಬರೋಣ. ಆಮೇಲೆ ಹೇಳಿ” ಎಂದರು.

ಅವರ ದನಿ ಒಮ್ಮೆಲೇ ಬಹಳ ಮೆತ್ತಗಾದದ್ದು ನೋಡಿ ನನಗೇ ಕೆಡುಕೆನ್ನಿಸಿತು. ಕುಮಟೆಯ ನೆಲ ಹವಾಮಾನಗಳು ವಾಸ್ತವ ಸತ್ಯಕ್ಕಿಂತ ಪುರಾಣದ ಹುಟ್ಟಿಗೇ ಲಾಯಕ್ಕಾಗಿದ್ದರೆ ತಕರಾರು ಮಾಡಲು ನಾನು ಯಾರೆಂದಾಗಬೇಡವೆ !

“ನಿಮ್ಮ ಮಟ್ಕಾದೇವರ ಗುಡಿಯನ್ನು ನನಗೂ ಇನ್ನೊಮ್ಮೆ ನೋಡಬೇಕಾಗಿದೆ. ಸಂಜೆ ಹೋಗೋಣ” ಎಂದೆ. ನನ್ನ ಸೂಚನೆ ಪ್ರಾಮಾಣಿಕವಾಗಿತ್ತು. ಅದನ್ನು ಗುರುತಿಸಿದ ಮಿತ್ರರು ಖುಷಿಯಿಂದ ನಕ್ಕರು.

– ೭ –

ಸಂಜೆ ಚಿತ್ರಿಗಿಗೆ ಹೋಗಿ ಜಟ್ಕಾದೇವರ ಗುಡಿಯನ್ನು ಇನ್ನೊಮ್ಮೆ ನೋಡಿ ಬಂದೆವು. ಗುಡಿಯೆದುರು ನಿಂತಾಗ ನಾವಿಬ್ಬರೂ ಮೌನವಾಗಿದ್ದೆವು. ಲಕ್ಷ್ಯವನ್ನೆಲ್ಲ ಮೂರ್ತಿಯ ಮೇಲೇ ಕೇಂದ್ರೀಕರಿಸಿ ತದೇಕಚಿತ್ತನಾಗಿ ನೋಡಹತ್ತಿದೆ. ಕರಿಯ ಶಿಲೆಯಲ್ಲಿ ಕಡೆದ ಎರಡು ಫೂಟು ಎತ್ತರದ ಮೂರ್ತಿ ತುಂಬಾ ಹಳೆಯದಿರಬೇಕು. ಅಲ್ಲವಾದರೂ ಗಾಳಿ ಮಳೆಗಳಿಗೆ ಮೈಯೊಡ್ಡಿ, ನಿಂತಲ್ಲೇ ಸವೆದುಹೋಗಿ, ಅದರ ರೂಪವನ್ನು ಗುರುತಿಸುವುದು ಕಷ್ಟವಾಗಿತ್ತು. ಎಣ್ಣೆ ಸವರಿಕೊಂಡಂತಿದ್ದ ಮೈ ಸಣ್ಣಗೆ ಜಗಜಗಿಸುತ್ತಿತ್ತು. ಮೈಗೆ ಅಲ್ಲಲ್ಲಿ ಅರಿಶಿಣ ಕುಂಕುಮಗಗಳ ಹುಡಿ ಮೆತ್ತಿತ್ತು. ಒಂದೆರಡು ಕರವೀರ ದಾಸವಾಳದ ಹೂವುಗಳು ತಲೆ ಹೆಗಲುಗಳಿಂದ ಕಳಚಿ ಕಾಲ ಬಳಿ ಬಿದ್ದಿದ್ದವು. ಅಲ್ಲೇ ಹತ್ತಿರದಲ್ಲಿದ್ದ ಮಣ್ಣಿನ ಡೊಡ್ಡ ಹಣತೆಯಲ್ಲಿ ಎಣ್ಣೆಯಿತ್ತು. ಅರ್ಧ ಉರಿದು ನಂದಿಹೋದ ಬತ್ತಿಯಿತ್ತು. ಗುಡಿಯನ್ನು ಬಿಡುವ ಮೊದಲು ನನ್ನ ಕೈಗಳು ನಮಸ್ಕಾರದ ರೂಪದಲ್ಲಿ ಒಂದಾಗಿದ್ದುವೆ ? ಖಾತರಿಯಿಲ್ಲ. ಖಾತರಿಯಿದ್ದ ಸಂಗತಿ ಇಷ್ಟು-

ಮನೆಯ ಹಾದಿ ಹಿಡಿದಾಗ ದಾರಿಯಲ್ಲಿ, ಹತ್ತುವ ಯಾವುದೂ ಈ ಮೊದಲು ನೋಡಿದಾಗ ಇದ್ದ ಹಾಗೆ ಇರಲಿಲ್ಲ : ಮಠಕೇರಿ, ಬಾಜಾರ, ಪೈವಾಡೆ, ಗುಡಿಗಾರ ಗಲ್ಲಿ, ಹುಲಿದೇವರ ಗುತ್ತ, ಸಾಲೆಯ ಗುಡ್ಡ, ಹೆರವಟ್ಟೆ-ಎಲ್ಲವೂ ಬದಲುಗೊಂಡು ನಾನು ಬೇರೆಯೇ ಒಂದು ಲೋಕದಲ್ಲಿ, ಬೇರೆಯೇ ಒಂದು ಕಾಲದಲ್ಲಿ ವಿಹರಿಸುತ್ತಿದ್ದಂತೆ ಭಾಸವಾಯಿತು. ಹುಡುಗರು ಊರು ತೊರೆದು ಇಪ್ಪತ್ತೊಂದು ವರ್ಷಗಳು ಆಗಿರುವಾಗ ಆಕಸ್ಮಾತ್ತಾಗಿ ಕೈಗೆ ಹತ್ತಿದ ಕಾಗದದ ತುಂಡಿನಲ್ಲಿ ಕಾಣಿಸಿಕೊಂಡ ಸುದ್ಧಿಯೇ ಪ್ರಚೋದನೆಯಾಗಿ ನನ್ನ ಮಿತ್ರರ ಕಲ್ಪನೆಯಲ್ಲಿ ಗರಿಗೊಂಡ ಪುರಾಣ ಈಗ ನನ್ನ ಮೇಲೂ ಮಾಟ ಮಾಡಿತೆನ್ನುವಂತೆ ನನಗೆ ಮನದಟ್ಟಾಗಹತ್ತಿತು-

ಬೆಳಕಿನ ರಹಸ್ಯವನ್ನು ತಿಳಿಯುವ ಕುತೂಹಲದಿಂದ ಸಪ್ತಸಾಗರ ದಾಟಿ ಹೋದ ಇಬ್ಬರು ವೀರ ಯುವಕರ ಸುತ್ತ ಬೆಳೆದ ಈ ಪುರಾಣಕ್ಕೆ ಕಾರಣ ಪುರುಷನಾಗುವ ಯೋಗ್ಯತೆ ಜಟ್ಕಾದೇವರಂಥ ಮಹಾಮಹಿಮನಿಗೆ ಸೇರಿದ್ದೇ ಹೊರತು ತನ್ನ ಮೂಗಿನ ನೇರಕ್ಕೇ ನಡೆಯುವ ಹಠದಲ್ಲಿ ಕೊರಳಿಗೆ ನೇಣು ಹಾಕಿಕೊಂಡು ಸತ್ತ ಅಧಮನಿಗಲ್ಲ !

ಮನೆಯ ಅಂಗಳದಲ್ಲಿ ಕಾಲಿರಿಸುತ್ತಿದ್ದಂತೆ ರಾಮಭಕ್ತ ಹನುಮಂತನಂತೆಯೋ, ವಿಷ್ಣುವಾಹನ ಗರುಡನಂತೆಯೋ ಹೊಳೆಯುವ ಬೃಹದಾಕೃತಿಯ ಬೆನ್ನುಹತ್ತಿ ಉಡ್ಡಾಣಗೈಯುತ್ತಿದ್ದಯುವಕರ ಜೋಡಿ ದೃಷ್ಟಿಗೋಚರವಾದಂತಾಗಿ ಜೀವ ಝಲ್ಲೆಂದಿತು !

ಪುಣ್ಯದಿಂದ ಮನೆ ಸೇರಿದ ಮೇಲೆ ನನ್ನ ಮಿತ್ರರು ಸಂಜೆಯ ಭೇಟಿಯ ಬಗ್ಗೆ ಒಂದೂ ಪ್ರಶ್ನೆ ಕೇಳಲಿಲ್ಲ. ಕೇಳಿದ್ದರೆ ನನ್ನ ಬಳಿ ಉತ್ತರವಿರಲಿಲ್ಲ !
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.