ನೀವೂ ದಾರ ಕಟ್ಟಿ

ಕಣ್ಣು ಮುಟ್ಟುವವರೆಗೂ ನೋಡಿದರೆ ಬೆಂಗಳೂರಿನ ರೋಡಿನಲ್ಲಿ ದಿನಾಲೂ ಟ್ರಾಫಿಕ್ ಜಾಮನ್ನೇ ಕಾಣುವ ಎಸ್.ವಿನಾಯಕ ದಂಪತಿಗಳಿಗೆ ಈ ಭರತಪುರ ದಾಟಿದ ನಂತರ ರೋಡ್ ಮೇಲೆ ಸಿಕ್ಕ ಹೊಂಡದಿಂದ ಹಂಡೆಯ ಒಳಗಿನ ಇಲಿಯ ಸ್ಥಿತಿ ಆಗಿದೆ. ಅವರಿದ್ದ ಕಾರು ಒಂದೇ ಸಮನೆ ಅವರನ್ನು ಎತ್ತಿ ಹಾಕುತ್ತಿದೆ. ಹೊಟ್ಟೆ ಪಕ್ಕೆಲಬುಗಳು ನೋಯಲಾರಂಭಿಸಿವೆ. ಅಸಾಹಯಕತೆಯಿಂದ ತೀರ ಚಿಕ್ಕದಾದ ಸಿಟ್ಟು ಬಂದಿದೆ. ಕಣ್ಣು ಮುಟ್ಟುವವರೆಗೂ ಆ ರಸ್ತೆ ನೋಡಿದರೆ ದೊಡ್ಡ ದೊಡ್ಡ ಉಬ್ಬು ಹೊಂಡಗಳು ಸಮುದ್ರದ ಅಲೆಗಳಂತೆ ವಿಶಾಲವಾಗಿ ಕಂಡಿವೆ. ೩ನೇ ತರಗತಿ ಇತಿಹಾಸದಲ್ಲಿ ಭರತಪುರದ ರಾಷ್ಟ್ರೀಯ ಉದ್ಯಾನದ ಬಗ್ಗೆ ಓದುವಾಗ ಈ ಶ್ರೇಷ್ಠ ರಸ್ತೆಗಳ ಬಗ್ಗೆ ನಾವ್ಯಾಕೆ ಓದಿಲ್ಲ?, ನಮ್ಮ ಊರಿನ ಮೇಲೆ ಹಾದು ಹೋಗುವ ಈ ರಾಜಸ್ಥಾನದ ಟ್ರಕ್ಕುಗಳಿಗೆ ಈ ರಸ್ತೆಯಲ್ಲಿ ಎಷ್ಟು ಕಷ್ಟ ಆಗಿರಲಿಕ್ಕೆ ಸಾಕು ಎಂದುಕೊಂಡ ವಿನಾಯಕ. ವಿನಾಯಕ ದಂಪತಿಗಳು ಮದುವೆಯಾಗಿ ಕೇವಲ ೨ ವರ್ಷಗಳಾದವು. ಕಳೆದ ನಿನ್ನೆಯೆ ಅವರ ಮದುವೆಯ ೨ನೇಯ ವಾರ್ಷಿಕ ದಿನ. ಇದರ ನೆನಪಿಗಾಗಿಯೇ ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದು. ಬಣ್ಣದ ಜೈಪುರಿ ನೋಡಿ ಈಗ ಅವರು ಫತೇಪುರ ಸಿಕ್ರಿಯ ಕಡೆಗೆ ಹೊರಟಿದ್ದಾರೆ.

ಮೂಲತ: ವಿನಾಯಕ ೧೭ನೇ ಹೆದ್ದಾರಿಯಲ್ಲಿ ಸಿಗುವ ಹೊನ್ನಾವರದ ಹತ್ತಿರದ ರಾಮತೀರ್ಥದವರು. ಎಷ್ಟೋ ಬಾರಿ ಊರಿನ ಜನ ಎಸ್. ವಿನಾಯಕ ಅಂದರೆ ಸಿದ್ದಿ ವಿನಾಯಕನೇ ಎಂದು ಕೇಳಿದ್ದುಂಟು. ಈ ಮೀಸಲಾತಿ, ಬ್ರಾಹ್ಮಣರ ಕಷ್ಟ, ಅರಿತ ತಂದೆ ಮಹಾಬಲೇಶ್ವರ ಶಾಸ್ತ್ರಿಗಳು, ಶಾಸ್ತ್ರಿ ಎಂಬ ಪದ ಮಗನ ಹೆಸರಿನಲ್ಲಿ ಗೊತ್ತಾಗದಂತೆ ಎಸ್.ಎಂಬ ಪದ ಮೊದಲೇ ಸೇರಿಸಿದ್ದಾರಂತೆ. ಕೆಲವರು ಊರಿಗೆ ಪತ್ರ ಹಾಕುವವರು ಎಸ್.ವಿನಾಯಕ ಶಾಸ್ತ್ರಿ ಎಂದೂ ಹಾಕುವುದುಂಟು. ಹೆದ್ದಾರಿ ಸರಿ ಮಾಡಲೆಂದು ಜೆಲ್ಲಿ ಕಲ್ಲು ಹಾಕಿದಾಗಲೆಲ್ಲಾ ಬಚ್ಚಲು ಮನೆ ಗಟ್ಟಿಮಾಡಿಕೊಳ್ಳುವ ವಿದ್ವಾನ್ ಶಾಸ್ತ್ರಿಗಳು ಹತ್ತಿರದ ಕಡತೋಕದ ಸಂಸ್ಕೃತ ಪಾಠಶಾಲೆಯಲ್ಲಿ ಮಾಸ್ತರುರಾಗಿ ನಿವೃತ್ತರಾದವರು. ಮಗ ವಿನಾಯಕ ಬೆಂಗಳೂರಿನ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಾರೆ. ತನ್ನ ಬರವಣಿಗೆಯನ್ನು ಜನ ಗಮನಿಸಬೇಕೆಂದು ಸತತ ಪ್ರಯತ್ನದಲ್ಲಿ ತೊಡಗಿದ್ದಾರೆ. ಮಲ್ಯರ ಚುನಾವಣಾ ಪ್ರಚಾರ, ಅಶ್ವಥ್ಥರ ಕನ್ನಡವೇ ಸತ್ಯ ಕಾರ್ಯಕ್ರಮ, ಮೊನ್ನೆಯ ೧೫ ವರ್ಷಕ್ಕೆ ಹುಡುಗಿಯರು ಮದುವೆಯಾಗ ಬಹುದು ಎಂಬ ಸುದ್ದಿ ಪ್ರಕಟಿಸಿದವರು ಇವರೇ.

ರಸ್ತೆಯ ಹಂಪುಗಳ ಮಹಾಪುರ ಮುಗಿಯುತ್ತಿದ್ದಂತೆ ಟಿನ್ ಟಿನ್ ಎಂಬ ಎಸ್.ಎಮ್.ಎಸ್. ಶಬ್ದಗಳಿಂದ ಎಲ್ಲರ ಮೊಬೈಲ್ ಪೋನು ಬೆಳಕಿನಿಂದ ಬೆಳ್ಳಗಾಯಿತು. ಕಾರು ಓಡಿಸುತ್ತಿದ್ದ ಪಿ.ಕೆ.ಮೇಹ್ತ, “ಸರ್, ನಾನು ಹೆಚ್ಚಾಗಿ ಡೆಲ್ಲಿಯಲ್ಲಿ ಬಾಡಿಗೆ ಕಾರು ಓಡಿಸುತ್ತೇನೆ. ಪ್ರತಿ ೪೦ ಕಿ.ಮೀ.ಗೂ ಒಂದು ರಾಜ್ಯ ಬರುತ್ತದೆ. ಅಲ್ಲಿ ದಿನ ನಾನು ೩ ರಾಜ್ಯಗಳಿಗೆ ಹೊಕ್ಕುತ್ತೇನೆ ಹೊರಬರುತ್ತೇನೆ. ಪ್ರತೀ ಸಾರಿ ಈ ನನ್ನ ಮೊಬೈಲ್ ‘ವೆಲ್ ಕಂ ಟು ಉತ್ತರಪ್ರದೇಶ್’, ‘ವೆಲ್ ಕಂ ಟು ಹರಿಯಾಣ’ ಎಂದು ಹೇಳುತ್ತಿರುತ್ತದೆ. ನನಗಂತೂ ತಲೆ ಚಿಟ್ಟು ಹಿಡಿದು ಹೋಗಿದೆ. ಸರ್ ಇದನ್ನು ಬಂದು ಮಾಡುವ ಸೆಟ್ಟಿಂಗ್ ಗೊತ್ತಾ” ಎಂದ. “ಮೊಬೈಲ್ ಕಂಪನಿಯವರಾದರೂ ನಿನಗೆ ಪ್ರೀತಿಯಿಂದ ಪ್ರತಿ: ಸಾರಿ ಸ್ವಾಗತಿಸುತ್ತಾರಲ್ಲಾ, ಅವರಿಗಾದರೂ ನೀವು ಧನ್ಯವಾದ ಹೇಳಬೇಕು” ಎಂದು ವಿನಾಯಕ ಶಾಸ್ತ್ರಿ ಹೇಳುತ್ತಿದ್ದಂತೆ ಸ್ವಲ್ವ ಜೋರಾಗಿ ಹೋಗುತ್ತಿದ್ದ ಕಾರಿಗೆ ಒಂದಿಬ್ಬರು ಅಡ್ಡ ಕಟ್ಟಿದಂತೆ, ಕೈಯಲ್ಲಿ ಜೋರಾಗಿ ಬಡಿದಂತೆ ಆಯಿತು. ಗಾಬರಿಯಿಂದ ವಿನಾಯಕ ಪಕ್ಕಕ್ಕೆ ನೋಡುವುದರ ಒಳಗೆ ಡ್ರೈವರ್ ಪಿ.ಕೆ. ರವರು “ಗೈಡ್‌ಗಳು ಸಾರ್. ಫತೇಪುರ ಸಿಕ್ರಿ ತೋರಿಸುವವರು. ೨-೩ ಕಿ.ಮೀ ಕ್ಕಿಂತ ಮುಂಚೆ ಬರುವ ಕಾರುಗಳಿಗೆಲ್ಲ ಅಡ್ಡ ಕಟ್ಟಿ ನಾನು ಗೈಡಾಗಿ ಬರುತ್ತೇನೆಂದು ಒತ್ತಾಯದಿಂದ ಕಾರು ಮುಂದೆ ಹೋಗಲು ಕೋಡುವುದಿಲ್ಲ” ಎನ್ನತ್ತಿದ್ದಂತೆ ಫತೇಪುರ ಸಮೀಪಿಸಿತು. ದೊಡ್ಡ ದೊಡ್ಡ ಬಿಳಿಕೊಡೆ ಹೊತ್ತ ಮಹಾಧಾಕಾರದ ಗ್ಲಾಸಿನ ಬಾಕ್ಸಗಳಂತೆ ಕಾಣುವ ಬೆಂಗಳೂರು ಐ.ಟಿ. ಬಿಲ್ಡಿಂಗ್ ಕಂಡು ಬೇಸರ ಬಂದಿದ್ದ ವಿನಾಯಕ ದಂಪತಿಗಳಿಗೆ ಸ್ವಾಭಾವಿಕವಾಗಿ ಊರಿಗೆ ಊರೇ ಅಗಸದೆತ್ತರಕ್ಕೆ ಎದ್ದು ನಿಂತಂತೆ ಕಂಡು ದಸಕ್ ಆಯಿತು. ಇಬ್ಬರ ಕಣ್ಣು ಗುಡ್ಡೆಗಳು ಪೂರಾ ಫತೇಪುರವನ್ನು ಅವರಿಸಲು ತವಕಿಸಿದವು. ಖುಷಿ ಪ್ರೀತಿಯಿಂದ ವಿನಾಯಕ “ಅಲ್ಲಿ ನೋಡು ಅಲ್ಲಿ ನೋಡು” ಎನ್ನುತ್ತಲೇ ಹೆಂಡತಿಯ ತಲೆ ನೇವರಿಸುತ್ತಾ ತನ್ನ ಭುಜದ ಮೇಲೆ ಒರಗಿಸಿಕೊಂಡ, ಅವಳು ತಲೆಯನ್ನು ಒರಗಿಸಿಕೊಂಡೇ ಪೂರಾ ಊರನ್ನೆಲ್ಲಾ ದಿಟ್ಟಿಸತೊಡಗಿದಳು.

ಕಾರು ಕೋಟೆಯೊಳಗೆ ಹೊಕ್ಕುತ್ತಿದ್ದಂತೆ ಇನ್ನೊಂದು ಗುಂಪು ಅಡ್ಡಕಟ್ಟಿತು. ಕಾರಿಗೆ ಇದ್ದ ಎಲ್ಲಾ ಕಿಟಕಿಯಲ್ಲೂ ಒಬ್ಬೊಬ್ಬರು ಅವರವರ ಐಡೆಂಟಿಟಿಕಾರ್ಡ್ ತೋರಿಸಿ ನೂರು ರೂ.ದಿಂದ ಐವತ್ತು ರೂ.ಗೆ ಇಳಿದು “ಮೇಲೆ ಎಲ್ಲಾ ಕಡೆ ಪಾರ್ಕಿಂಗ್ ಫ್ರೀ ಮಾಡಿಸುತ್ತೇವೆ ಸಾರ್. ಕೆಲಸ ನೋಡಿ ನಂತರ ದುಡ್ಡು ಕೊಡಿ, ನೋಡಿ ಇದು ನನ್ನ ಐ.ಡಿ. ಕಾರ್ಡ್, ನಾವು ಸುಳ್ಳು ಹೇಳುವುದಿಲ್ಲ ನಮ್ಮೆಲ್ಲರ ಅಧಿಕೃತ ನೇಮಕಾತಿ ಆಗಿದೆ” ಎನ್ನುತ್ತಿದ್ದಂತೆ ಅವರಲ್ಲೇ ಒಬ್ಬ ನನಗೆ ಎಂ.ಎ. ಆಗಿದೆ. ಇತಿಹಾಸ ಮತ್ತು ಪ್ರಾಚ್ಯ ವಸ್ತುಗಳು ನನ್ನ ಆಸಕ್ತಿ ಎಂದ, ಸೋತ ತಲೆಯನ್ನು ಭುಜದ ಮೇಲೆ ಒರಗಿಸಿ ಮುಖವನ್ನು ಸ್ವಲ್ವ ಎಳೆದುಕೊಂಡು ಸಮತೋಲನ ತಪ್ಪಿದ್ದಂತೆ ಮಾತನಾಡುವ ಆತನ ಕಡೆಗೆ ವಿನಾಯಕನ ಗಮನ ಹೋಯಿತು. ಈತ ನಮಗೆ ಈ ಸ್ಥಿತಿಯಲ್ಲಿ ಪೂರಾ ಫತೇಪುರ ತೋರಿಸಬಹುದೇ? ಎಂಬ ಸಂಶಯದಿದ್ದರೂ ಈತನ ಪ್ರೋಫೈಲ್ ವಿನಾಯಕ ದಂಪತಿಗಳಿಗೆ ಇಷ್ಟವಾಯಿತು. ಸರ್ ನನ್ನ ಹೆಸರು ಮೊಹಮ್ಮದ್ ನಾನು ಬರುತ್ತೇನೆ ಎನ್ನುತ್ತಿದ್ದಂತೆ ಈತನನ್ನೇ ಕರೆದುಕೊಂಡು ಹೊರಟರು.

ಅಕ್ಬರ್‌ನ ರಾಜಧಾನಿಯಾದ ಫತೇಪುರ್ ಸಿಕ್ರಿ ೧೫೭೨ ರಲ್ಲಿ ಕಟ್ಟಲು ಪ್ರಾರಂಭಿಸಿದರು. ಇಲ್ಲಿ ರಾಜಧಾನಿ ಮಾಡಿಕೊಂಡ ಮೇಲೆ ಆತ ತನ್ನ ಖಡ್ಗವನ್ನು ಗೋಡೆಯ ಮೇಲೆ ಒರಗಿಸಲೇ ಇಲ್ಲ. ಈ ಸಮಯದಲ್ಲಿ ಗುಜರಾತ್, ಬೆಂಗಾಲ್, ಬಿಹಾರ್, ಒರಿಸ್ಸಾ, ಕಶ್ಮೀರ ದಿಂದ ಲಾಹೋರ್‌ವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. “ಸೋಲೇ ಕಾಣದ ಲಕ್ಕಿ ಜಾಗ್ ಸರ್ ಅದು” ಎಂದು ಗೈಡ್ ಹೇಳಿದ. ಈ ಮೇಲಿನ ಗೋಪುರಗಳು ಕಾಣುತ್ತಿವೆಯಲ್ಲ. ಅವುಗಳಲ್ಲಿ ರಾತ್ರಿ ದೀಪ ಹಚ್ಚುತ್ತಿದ್ದರು ಇಲ್ಲಿ ನೋಡಿ ಎಡಕ್ಕೆ ಅಕ್ಬರನ ವಂಶಸ್ಥರ ಗೋರಿಗಳು, ಹೆಂಗಸರನ್ನೆಲ್ಲ ಒಳಗೆ, ಗಂಡಸರನ್ನೆಲ್ಲ ಹೊರಗೆ, ಸಮಾಧಿ ಮಾಡಿದ್ದಾರೆ ಎನ್ನುತ್ತಿದ್ದಂತೆ ಬದುಕಿದ್ದಾಗಂತೂ ಹೊರಗೆ ಕಾಣದ ಹೆಂಗಸರನ್ನು, ಸತ್ತ ಮೇಲೂ ಒಳಗೆ ಶಾಶ್ವತವಾಗಿ ಮಲಗಿಸಿದ್ದನ್ನು ನೋಡಿ ವಿನಾಯಕನಿಗೆ ದು:ಖವಾಯಿತು.

ಈ ಸುರಂಗ ನೋಡಿದಿರಾ, ಇದೇ ಸುರಂಗದಿಂದ ಸರ್ ಫತೇಪುರ ದಿಂದ ಲಾಹೋರ್ ಗೆ ಹೋಗಬಹುದು. ಇದು ಅಗ್ರಾವನ್ನೂ ಜೋಡಿಸುತ್ತದೆ. ಅನಾರ್‌ಕಲೀಯನ್ನು ಇದರಲ್ಲೇ ಸಾಗಿಸಿದ್ದು ಎಂದ. ಥಟ್ಟಂತ ವಿನಾಯಕನ ಹೆಂಡತಿ “ಈಗ ಅದು ಓಪನ್ ಇದೆಯಾ? ಈಗ ಸರ್ಕಾರದ ಪ್ರಣಾಳಿಕೆಯಲ್ಲಿರುವ ಇರಾನ್ ನಿಂದ ಭಾರತಕ್ಕೆ ಎಳೆಯುವ ಇಂಧನದ ಪೈಪನ್ನು ಇದರ ಮೂಲಕವೇ ಹಾಕಬಹುದಲ್ಲ! ” ಎಂದು ಹೇಳಿದಳು.

ಒಂದಾದ ಮೇಲೋಂದು ಮೂರು ಮಕ್ಕಳನ್ನು ಕಳಕೊಂಡ ಅಕ್ಬರ್‌ನಿಗೆ ಎಷ್ಟು ರಾಜ್ಯವನ್ನು ಗೆದ್ದರೂ ಎಲ್ಲವೂ ಶೂನ್ಯವಾಗಿ ಕಂಡಿತು. ರಣತಂಬೂರು ಗೆದ್ದು ನೇರವಾಗಿ ಸಿಕ್ರಿಯಲ್ಲಿರುವ ಸೂಫಿ ಸಂತ ಸಲೀಂ ಕ್ರಿಸ್ತಿಯಲ್ಲಿ ಮಕ್ಕಳನ್ನು ಕರುಣಿಸು ಎಂದು ಅಶೀರ್ವಾದ ಬೇಡಲು ಹೋದ. ಸಂತ ಕ್ರಿಸ್ತಿಯ ಅಶೀರ್ವಾದದಿಂದ ಒಂದಲ್ಲ ಮೂರು ಮಕ್ಕಳಾದವು. ಅಕ್ಬರ್‌ನ ಖುಷಿಗೆ ಪಾರವೇ ಇರಲಿಲ್ಲ. ಕೃತಜ್ಞ ಭಾವದಿಂದ ಅಲ್ಲಿ ಒಂದು ದೊಡ್ಡ ಮಸೀದಿ ಕಟ್ಟಲು ಪ್ರಾರಂಭಿಸಿದ. ೧೫೭೨ರಲ್ಲಿ ಸಂತ ಕ್ರಿಸ್ತಿ ದೈವಾಧೀನರಾದ ಮೇಲೆ ಅವರ ಸಮಾಧಿಯನ್ನು ಈ ಮಸೀದಿಯ ಅಂಗಣದಲ್ಲೇ ಕಟ್ಟಲಾಯಿತು. “ನೋಡಿ ಗಂಡಸರು, ಹೆಂಗಸರು, ಆ ಕಿಟಕಿಯ ಕಿಂಡಿಗೆ ದಾರವನ್ನು ಕಟ್ಟುತ್ತಿದ್ದಾರೆ. ಮಕ್ಕಳಿಲ್ಲದವರು ಈ ಕಿಟಕಿ ಕಿಂಡಿಗೆ ದಾರ ಕಟ್ಟಿದರೆ ಅವರ ಇಷ್ಟಾರ್ಥವು ಪೂರೈಸುತ್ತದಂತೆ. ಸರ್ ನೀವೂ ಹೋಗಿ ದಾರ ಕಟ್ಟಿ ಬನ್ನಿ, ನಾನು ಇಲ್ಲೇ ಹೊರಗೆ ನಿಲ್ಲುತ್ತೇನೆ” ಎಂದ ಗೈಡ್. ವಿನಾಯಕ ದಂಪತಿಗಳಿಗೆ ಕಣ್ಣು ತುಂಬಿ ಬಂತು. ಸಮಾಧಿಯ ಸುತ್ತಲಿನ ಕಿಟಕಿಗಳಲ್ಲಿನ ಸಾವಿರಾರು ರಂಧ್ರಗಳು ಸಾವಿರಾರು ಕನ್ನಡಿಗಳಂತೆ ಕಂಡವು. ಒಂದೊಂದು ಕನ್ನಡಿಯೂ ಒಂದೊಂದು ಮನೋಕಾಮನೆಗಳನ್ನು ಹೇಳತೊಡಗಿತು. ತಾನಸೇನ ಕೂಡುವ ಜಾಗದಲ್ಲೇ ಕುಂತ ಸೂಫಿ ಹಾಡುಗಾರರು ‘ಕೃಪಾಕರೋ ಮಹಾರಾಜ’ ಹಾಡುತ್ತಾ ಸಮಾಧಿಯ ಎದುರು ಕುಂತಿದ್ದರು. ಒರಗಿದ ತಲೆ ಎಳೆದುಕೊಳ್ಳವ ಮುಖ ಸಮತೋಲನ ತಪ್ಪಿದಂತೆಯೇ ನಡೆಯುತ್ತಾ ಬಹಳಷ್ಟು ಸಮಯದಿಂದ ವಿವರವಾಗಿ ಫತೇಪುರ್ ಸಿಕ್ರಿಯ ಬಗ್ಗೆ ಹೇಳುತ್ತಿರುವ ಗೈಡ್ ಹತ್ತಿರ ವಿನಾಯಕನ ಹೆಂಡತಿಗೆ ಏನೋ ಕೇಳಬೇಕೆಂದೆನಿಸಿತು. ಪಾಪ ಬೇಸರ ಆಗಬಹುದೇನೋ ಎಂದು ಕೊಳ್ಳತ್ತಲೇ “ಮೊಹಮ್ಮದ್ ನೀನು ಆ ಕಿಟಕಿಗೆ ದಾರ ಕಟ್ಟಿಲ್ಲವೇ? ನಿನ್ನ ಈ ತೊಂದರೆಗೆ ದೇವರು ಕಿವಿಗೊಡಲಿಲ್ಲವೇ” ಎಂದು ಸಣ್ಣ ಧ್ವನಿಯಲ್ಲೇ ಕೇಳಿದಳು. “ನನಗೆ ಮೊದಲಿನಿಂದಲೂ ಈ ಜಾಗವೆಂದರೆ ಬಹಷ ಇಷ್ಟ. ನಾನು ಸಣ್ಣವನಿದ್ದಾಗ ಇದೇ ಮೆಟ್ಟಿಲ ಮೇಲೆ ಫತೇಪುರ ಸಿಕ್ರಿ ಗ್ರೀಟಿಂಗ ಕಾರ್ಡ್, ಕ್ಯಾಲೆಂಡರ್ ಮಾರುತ್ತಿದ್ದೆ. ಸಂದರ್ಶಕರನ್ನು ಹಿಂಬಾಲಿಸುತ್ತಾ ಅವರ ಕೈ ಜೋಲುತ್ತಿದ್ದೆ. ಶಾಲೆ ತಪ್ಪಿಸುತ್ತಿರಲಿಲ್ಲ. ಮಧ್ಯಾಹ್ನದ ಶಾಲೆ ಗ್ಯಾಪ್‌ನಲ್ಲಿ ಇಲ್ಲಿ ಬಂದು ಬಿಡುತ್ತಿದ್ದೆ. ನಾನು ಕಾಲೇಜಿನಲ್ಲಿರಬೇಕಾದರೆ ಈ ತೊಂದರೆ ಕಾಣಿಸಿಕೊಂಡಿತು. ನಮ್ಮೂರ ಡಾಕ್ಟರ್ ನಿನಗೆ ಸ್ಟ್ರೋಕ್ ಆಗಿದೆ ಅಂದೇ ಸುಮಾರು ವರ್ಷ ಕಳೆದರು. ಹಿಂದಿನ ವರ್ಷ ಒಬ್ಬ ಜರ್ಮನ್ ಸಂದರ್ಶಕ ಬಂದಿದ್ದ. ಆತ ಡಾಕ್ಟರ್ ಅಂತೆ, ಅವನನ್ನು ನಾನೇ ತೋರಿಸಲು ಕರೆದುಕೊಂಡು ಹೋಗಿದ್ದೆ. ಆತನೇ ನಿನಗೆ ಸ್ಟೋಕ್ ಅಲ್ಲ, ಅದು ಪಾರ್ಕಿನ್ ಸನ್ ಕಾಯಿಲೆ ಅಂದ. ನಮ್ಮೂರ ಡಾಕ್ಟರ್ ಹತ್ತಿರ ಮತ್ಯಾಕೆ ತಲೆ ಜಪ್ಪಿಸಿಕೊಳ್ಳಲಿ, ಎಂದು ಊರ ಗ್ರ್ರಂಥಾಲಯ, ಇಂಟರ್‌ನೆಟ್ ಮೂಲಕ ಸ್ವಲ್ಪ ಮಾಹಿತಿ ತಿಳಿದುಕೊಂಡೆ, ನನ್ನ ದೇಹದಲ್ಲಿ ‘ಡೋಪೋಮೈನ್’ ಎಂಬ ಕೆಮಿಕಲ್ ಕಡಿಮೆ ತಯಾರಾಗುತ್ತದಂತೆ. ಇದೇ ನಮ್ಮ ದೇಹದ ಮೂಮೆಂಟುಗಳನ್ನು ಸ್ಮೂತ್ ಮಾಡೋದು. ಇಲ್ಲದಿದ್ದರೆ ಇಡೀ ಜಗತ್ತಿನ ಎಲ್ಲಾ ಜೀವಿಗಳು ರೋಬೋಟ್ ಗಳ ತರಹ ನಡೆಯಬೇಕಿತ್ತು. ಚಿಕ್ಕ ಮಗು ಸುಮ್ಮನೆ ಬಂದು ಹಿಂದಿನಿಂದ ತಾಯಿಯನ್ನು ಹಿಡಿದುಕೊಳ್ಳುವುದು, ಮಲಗಿದವರ ಕಿವಿಗೆ ಮೆಲ್ಲಗೆ ಗರಿ ತಾಗಿಸುವುದು, ಮೆಲ್ಲಗೆ ಹೋಗಿ ಕಳ್ಳತನ ಮಾಡುವುದು ಆಗುತ್ತಿರಲಿಲ್ಲವೇನೋ. ನನಗೆ ಸಮಾಧಾನ ಎಲ್ಲಿದೆ ಅನ್ನುತ್ತೀರಿ. ಇದೇ ಕಾಯಿಲೆ ನನ್ನದೇ ಹೆಸರಿನ ಇನ್ನೊಬ್ಬನಿಗಿದೆ. ಆತ ವಿಶ್ವದ ಶ್ರೇಷ್ಠ ಬಾಕ್ಸಿಂಗ್ ಪಟು ಮೊಮಹ್ಮದ್ ಆಲಿ, ಅದು ಬಿಡಿ ನಮ್ಮ ಪೋಪು, ಹಿಟ್ಲರ್, ಡಾಲಿ, ಎಲ್ಲರಿಗೂ ಇತ್ತು. ಈ ಕಾಯಿಲೆ ಇದ್ದೂ ಬಹಳ ಸಾಧಿಸಬಹುದೆಂಬ ವಿಶ್ವಾಸ ಅವರೇ ತೋರಿಸಿಕೊಟ್ಟಿದ್ದಾರೆ. ಇದೆಲ್ಲ ಅದ ಮೇಲೆ ನಮ್ಮ ತಾಯಿ ನನ್ನನ್ನು ದೂರ ಕಳುಹಿಸಲು ಹೆದರಿದರು. ಅದಕ್ಕಾಗಿ ನಾನು ಇಲ್ಲಿ ಗೈಡ್ ಆಗಿ ಕೆಲಸ ಮಾಡುತ್ತಿದ್ದೇನೆ. ಈ ಜಗತ್ತಿನಲ್ಲಿ ‘ಡೊಪಮೈನ್’ ತುಂಬಿಕೊಂಡ ದೇಹಗಳೇ ಪಾರ್ಕಿನಸನ್ ಕಾಯಿಲೆ ಬಂದಂತೇ ಆಡುತ್ತವೆ ಅನ್ನುವುದೇ ನನಗೆ ಬೇಸರ. ನನ್ನ ವೈಯುಕ್ತಿಕ ವಿಚಾರ ಕೇಳಿ ಬೇಸರ ಬಂತೇನೋ. ಹೋಗಲಿ, ಆ ವಿಚಾರ ಬಿಡಿ, ನೀವು ಶಾರೂಖ್ ಖಾನ್, ಮಹಿಮಾ ಚೌಧರಿ ಚಿತ್ರ ಪರದೇಶ್ ನೋಡಿದ್ದೀರಾ, ಆ ಚಿತ್ರದ ಶೂಟಿಂಗ್ ಇಲ್ಲೇ ಆಗಿತ್ತು. ಆ ಚಿತ್ರದ ಚಿತ್ರೀಕರಣಕ್ಕೆ ಇಲ್ಲಿ ಎತ್ತರದ ಸ್ಟೇಜ್ ಕಟ್ಟಲಾಗಿತ್ತು. ನೋಡಿ ಹುಡುಗ, ಹುಡುಗಿಯರಲ್ಲ ಆ ಜಾಗದಲ್ಲಿ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ” ಅನ್ನುತ್ತಾ ನಡೆದು ಬರುತ್ತಿದ್ದಂತೆ ಮಹಾದಾಕೃತಿಯ ದ್ವಾರ ಎದುರಾಯಿತು. ಕಂದಕವನ್ನು ಈ ಮಹಾ ಎತ್ತರದ ದ್ವಾರಕ್ಕೆ ಜೋಡಿಸುವ ಎತ್ತರದ ಮೆಟ್ಟಿಲುಗಳು ಒಂದು ಕಡೆ, ಅತೀ ಎತ್ತರದ ದ್ವಾರ ಇನ್ನೊಂದು ಕಡೆ, ತ್ರಿಶಂಕು ಸ್ಥಳದಿಂದ ಎರಡನ್ನೂ ವೀಕ್ಷಿಸುತ್ತಿರುವ ವಿನಾಯಕ ದಂಪತಿಗಳಿಗೆ ಒಮ್ಮಿಂದೊಮ್ಮೆ ಉಸಿರು ಕಟ್ಟಿದಂತಾಯಿತು. ಮಾತು ನಿಂತಂತಾಗಿ ಇಬ್ಬರೂ ಒಂದು ಸಾರಿ ಕಣ್ಣು ಮುಚ್ಚಿಕೊಂಡರು. ಚಲಿಸುವ ಮೋಡಗಳು, ಆ ದ್ವಾರವೇ ಚಲಿಸುತ್ತಿವೆ. ಈಗ ನಮ್ಮ ಮೈಮೇಲೆ ಬರಬಹುದೆಂಬ ಭ್ರಮೆ ಹುಟ್ಟಿಸುತ್ತಿದ್ದವು. ಪಕ್ಕದಲ್ಲಿದ್ದ ಗೈಡ್ “ಇದೇ ಬುಲಂದ್ ದರವಾಜಾ, ಅತೀ ಎತ್ತರದ ಹೆದರಿಕೆ ಹುಟ್ಟಿಸುವ ಮಹಾದ್ವಾರ, ಗುಜರಾತಿನ, ಶ್ರೀಮಂತ ಬಂದರುಗಳನ್ನು ಕಬಳಿಸಿದ ಖುಷಿಗೆ ಅಕ್ಬರ್ ಕಟ್ಟಿಸಿದ್ದು, ‘ಜಯದ ನಗರ’ ಫತೇಪುರ್ ಸಿಕ್ರಿ ಎಂದು ನಾಮಕರಣ ಮಾಡಿದ್ದು ಆಗಲೇ. ಸರ್ ನೀವು ಇಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವಾಗ ಹುಷಾರು ಅನ್ನುತ್ತಾ ಪಕ್ಕದ ಕೆರೆ ತೋರಿಸಿ ನೂರು ರೂ.ಕೊಟ್ಟರೆ ಒಬ್ಬ ಮೇಲಿನ ಗೋಪುರದಿಂದ ಕೆರೆಗೆ ಹಾರುತ್ತಿದ್ದ ಈಗ ಇಲ್ಲ. ಆತ ಹಿಂದಿನ ವರುಷ ತೀರಿಕೊಂಡ” ಎಂದ. ವಿನಾಯಕನ ಹೆಂಡತಿ ಸುಮ್ಮನಾಗದೇ “ಅದನ್ನು ಅವರ ಮಕ್ಕಳು ಯಾರೂ ಮುಂದುವರೆಸಿಕೊಂಡು ಹೋಗುತ್ತಿಲ್ಲವಾ? ” ಎಂದು ಅಧಿಕ ಪ್ರಸಂಗ ಮಾಡಿದಳು.

ಸುಮ್ಮನೆ ಇದ್ದ ವಿನಾಯಕ ಶಾಸ್ತ್ರಿ ಒಮ್ಮಿಂದೊಮ್ಮೆ ಮೊಹಮ್ಮದನಿಗೆ ಮುಖ ಮಾಡಿ, “ಇದೆಲ್ಲ ಸುಳ್ಳಂತೆ ಅಲ್ವಾ? ” ಎಂದ, ವಿನಾಯಕನ ಹೆಂಡತಿಗೆ ಏನೂ ಅರ್ಥವಾಗದೇ ಇಬ್ಬರನ್ನೂ ಆಶ್ಚರ್ಯದಿಂದ ದಿಟ್ಟಿಸಿತೊಡಗಿದಳು. ಗಂಭೀರದ ಧ್ವನಿಯಲ್ಲೇ “ಹೌದು ಸಾರ್, ನಿಮಗೆ ಗೊತ್ತಲ್ಲ ಸುಳ್ಳು ಅಂತ, ಹಾಗಾದರೆ ನೀವ್ಯಾಕೆ ಇಲ್ಲಿ ಬಂದಿದ್ದೀರಿ? ಸರ್ ನನಗೂ ಎಂ.ಎ. ಆಗಿದೆ, ನಾನು ಈ ಜಾಗದ ಬಗ್ಗೆ ಬಹಳ ಅಭ್ಯಸಿಸಿದ್ದೇನೆ. ಇಂತಹ ಆಧ್ಬುತ ಸ್ಥಳವನ್ನು ಶಾರೂಖ್ ಖಾನನ್ ಶೂಟಿಂಗ್ ಉದಾಹರಣೆಗೆ ತೆಗೆದುಕೊಂಡು ತಿಳಿಸಿ ಹೇಳಲು ನನಗೂ ನಾಚಿಕೆಯಾಗುತ್ತದೆ, ಏನು ಮಾಡಲೀ ಕೆಲವು ಸಾರಿ ಸತ್ತ ಗುಂಪುಗಳಾಗಿ ನನ್ನನ್ನು ಕೇಳಿಸಿಕೊಳ್ಳತ್ತಿರುತ್ತವೆ. ಶಾರೂಖ್ ಖಾನ್‌ನ ಸುದ್ದಿ ಹೇಳಿದ ಮೇಲೆ ಒಮ್ಮಿಂದೊಮ್ಮೆ ಜನರೆಲ್ಲ ಅಲ್ಲಿ ಪೋಟೋ ತೆಗಿಸಿಕೊಳ್ಳಲು ಶುರು ಹಚ್ಚಿಕೊಳ್ಳುತ್ತಾರೆ. ‘ಅಕ್ಬರ್ ಈ ಫತೇಪುರ ಸಿಕ್ರಿಯನ್ನು ದೇವಸ್ಥಾನ ಅಡಿಮಾಡಿ ಕಟ್ಟಿದ್ದಾನೆ. ನಮಗೆ ಒಂದು ಸರಸ್ವತಿಮೂರ್ತಿ ಕೂಡಾ ಸಿಕ್ಕಿದೆ’ ಎಂದು ಅರ್ಕಿಯಾಲಜಿ ಇಲಾಖೆ ಹೇಳಿ ‘ನಮಗೆ ನಿಮ್ಮ ನಂಬಿಕೆಯನ್ನು ಹಾಳುಮಾಡಬೇಕೆಂಬುದಲ್ಲ. ಅದರೆ ಸತ್ಯ ತಿಳಿಸಬೇಕೆಂಬ ಆಸೆ’ ಎಂದಿತು. ಎಲ್ಲಾ ಧರ್ಮವನ್ನು ಒಟ್ಟು ಮಾಡಿ ಸಮಾನತೆ ಸಾಧಿಸಬೇಕೆಂತಲೇ ಬೇರೆ ಧರ್ಮಗಳ ಸ್ತ್ರೀಯರನ್ನು ಮುದುವೆಯಾದ ಅಕ್ಬರ್ ಆತನ ಮಗನ ಪ್ರೀತಿಯಾದ ಅನಾರ ಕಲಿಯನ್ನು ತಿರಸ್ಕರಿಸುತ್ತಾನೆಯೇ? ತಾನಸೇನನ ಸಂಗೀತದಿಂದ ಮಳೆ ದೀಪ ಆಗುತ್ತಿದ್ದರೆ ನೀರಿಲ್ಲದೇ ಬರಗಾಲದಿಂದ ಈ ಸ್ಥಳ ತತ್ತರಿಸಿ ೧೫ ವರ್ಷಗಳಲ್ಲೇ ಅಕ್ಬರ್ ರಾಜಧಾನಿಯನ್ನು ಲಾಹೋರಕ್ಕೆ ಸಾಗಿಸಬೇಕಿತ್ತೇ? ಎನ್ನುವ ಪ್ರಶ್ನೆಗಳು ನನಗೂ ಹುಟ್ಟುತ್ತವೆ. ಎಲ್ಲರೂ ಎಕೆ-೪೭ ತಯಾರಿಸಿದ ಕಲಾಶ್ನಿಕೋವಾನನ್ನು ಹಿಡಿದು ಬೈಯುತ್ತಾರೆ, ಆದರೆ, ಈ ಕಥೆಗಾರರನ್ನೇಕೆ ಹಿಡಿದು ಬೈಯುವುದಿಲ್ಲ? ತಮ್ಮ ಕಲ್ಪಿತ ವ್ಯಕ್ತಿಗಳನ್ನು ತೆಗೆದುಕೊಂಡು ನಿಜವಾದ ಇತಿಹಾಸ ಸ್ಥಳ ಮತ್ತು ವ್ಯಕ್ತಿಗಳೊಡನೆ ಹೆಣೆಯುತ್ತಾರಲ್ಲ? ಅದು ಮುಂದೊಂದು ದಿನ ನಂಬಿಕೆಯನ್ನೂ ಮೀರಿ ಗಂಡಾಂತರಕ್ಕೆ ಒಳಗಾಗುತ್ತವೆ ಎಂದು ಗೊತ್ತಿಲ್ಲವೇ, ಕಲ್ಪಿತ ವ್ಯಕ್ತಿಯು ನೂರು ವರ್ಷಗಳ ನಂತರ ನಿಜ ವ್ಯಕ್ತಿಗಳೊಡನೆ ಸೇರಿ ರಾಜ್ಯಭಾರವನ್ನೂ ಮಾಡಬಹುದು. ಪ್ರೀತಿಯನ್ನೂ ಮಾಡಬಹುದು, ಯುದ್ದವನ್ನೂ ಮಾಡಬಹುದು! ಪಾಪ ಶತಮಾನದ ನಂತರದ ಜನಾಂಗ ಈ ಕಲ್ಪಿತ ಕಥೆಯನ್ನು ಇತಿಹಾಸ ಎಂದು ತಿಳಿದು ಚಲನಚಿತ್ರವನ್ನೂ ಮಾಡಬಹುದು. ಅಮೇರಿಕದ ಬ್ರಾಡ್‌ವೇಯಲ್ಲಿ ಗೀತ ನಾಟಕವನ್ನೂ ಮಾಡಬಹುದು. ಅದಕ್ಕೆ ಫಿಲಂಫೇರ್, ಅಸ್ಕರ್ ಸಿಗಬಹುದು. ನೋಡಿದಿರಾ, ಇತಿಹಾಸದ ಮೇಲೊಂದು ಇತಿಹಾಸ, ನಮ್ಮ ಮೊಗಲ್-ಇ-ಆಝಂ, ಇಲ್ವಾ? ಬುಲಂದ್ ದರವಾಜಾದ ಮೇಲೆ ಅಂಟಿಸಿದ ವಜ್ರದ ಹರಳುಗಳು, ತಾಜಮಹಲ್‌ನ ತುದಿ ಗೋಪುರವನ್ನು ಬದಲಿಸಿದ್ದರಿಂದ ಹಿಡಿದು. ಇಡೀ ದೇಶವನ್ನೇ ಲೂಟಿ ಮಾಡಿ ಹೋದ ಅದೇ ಇಂಗ್ಲೀಷರು ಇಂದು ಇಲ್ಲಿಗೆ ಬಂದು ಇವನ್ನೆಲ್ಲಾ ನೋಡಿಕೊಂಡು ಹೋಗಿ ‘ಆಕ್ಬರ್‌ನಿಗೆ ಆ ಹೆಸರಿನ ಹೆಂಡತಿಯೇ ಇರಲಿಲ್ಲ, ಅನಾರ್‌ಕಲಿ ಅಕ್ಬರ್‌ನ ಹೆಂಡತಿ ಅದಕ್ಕಾಗೆ ಆತನ ಮಗ ಪ್ರೀತಿಸಿದ್ದಕ್ಕೆ ಸಿಟ್ಟಾಗಿದ್ದು, ಲಾಹೋರ್‌ನ್ನು ಜೋಡಿಸುವ ಸುರಂಗ ಇಲ್ಲವೇ ಇಲ್ಲ. ಇವೆಲ್ಲಾ ಬುಲ್‌ಶಿಟ್’ ಎಂದು ಬರೆಯುತ್ತಾರೆ. ಆದರೆ ೨೨೧ಬಿ, ಬೇಕರ್ ಸ್ಟ್ರೀಟ್ ನಲ್ಲಿರುವ ಕಲ್ಪಿತ ವ್ಯಕ್ತಿ ಶೆರ್ಲಾಕ್ ಹೋಂಮ್ಸ್‌ನ ಸ್ಮಾರಕಕ್ಕೆ ೧೦ ಪೌಂಡ್ ಕೊಟ್ಟು ನಿಜವೇ ಎಂಬಂತೆ ಕಣ್ಣು ತುಂಬಿಸಿಕೊಂಡು ಕ್ಯಾಮರಾವನ್ನ ತುಂಬಿಸಿಕೊಂಡು ಬರುವರಲ್ಲಾ? ನಮಗೆ ಹಿಂದಿನ ಗಂಡಾಂತರಕ್ಕಿಂತ ಈಗಿನ ಸೌಹಾರ್ದ ಮುಖ್ಯ. ಕೆಲವು ಸಾರಿ ಬೇಸರ ಆಗುತ್ತದೆ. ನಾನು ದಿನಾಲೂ ಸಾವಿರ ಜನರಿಗೆ ಸುಳ್ಳು ಹೇಳುತ್ತಿದ್ದೇನಲ್ಲಾ ಎಂದು, ನನ್ನದೇನು ಬಂತು, ಇಡೀ ದೇಶದ ತಂದೆ ತಾಯಿಗಳು ಮಕ್ಕಳನ್ನು ಕೂಡ್ರಿಸಿ ಇದೇ ಸುಳ್ಳನ್ನೇ ಹೇಳುತ್ತಾರಲ್ಲ. ನಿಮ್ಮ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ದಿನಾಲೂ ರಾತ್ರಿ ಕೃಷ್ಣ ಗೋಪಿಕಾ ಸ್ತ್ರೀಯರೊಡನೆ ನೃತ್ಯ ಮಾಡುತ್ತಾನೆ ಎಂದು ಒಂದು ಸುದ್ದಿ ಹಬ್ಬಿಸಿ; ನಾಳೆಯೇ ನೀವು ಅದರ ಎಂಟ್ರಿ ಫೀ ಹತ್ತು ಪಟ್ಟು ಹೆಚ್ಚಿಸಬಹುದು. ಅದಕ್ಕೇ ಹೇಳುವುದು ನಂಬಿಕೆ ಎಂದು, ಸ್ಪಲ್ಪ ಎತ್ತರದಿಂದ ಬಿದ್ದ ಅಬ್ಬಿಗೆ ರಾಮತೀರ್ಥ, ಲಕ್ಷ್ಮಣ ತೀರ್ಥ ಎಂದು ಕರೆದಿಲ್ಲವೆ? ಸ್ವಲ್ಪ ದೊಡ್ಡ ಹೊಂಡವಿದ್ದರೆ ಇಲ್ಲಿ ಭೀಮ ಗಧೆ ಊರಿದ್ದು ಎಂದು ಪೂಜಿಸಿಲ್ಲವೆ? ಇವೆಲ್ಲ ನಾವು ನಂಬಿಲ್ಲವೇ? ಅದರಂತೆ ನಾವು ತಾನಸೇನ್, ಅನಾರ್ ಕಲಿ, ಸುರಂಗವನ್ನೇಕೆ ನಂಬಬಾರದು. ಇವ್ಯಾಕೆ ನಮ್ಮ ಸುಂದರ ಸತ್ಯ ನೆನಪುಗಳಾಗಬರದು, ಸರ್ ನಮ್ಮದು ನಂಬಿಕೆಯ ಬದುಕು, ನಮ್ಮ ಸುತ್ತ ಎಷ್ಟು ಕಥಗಳಿವೆಯಲ್ಲ. ಸರ್ ನೀವೇ ಹೇಳಿ ನಮ್ಮ ಬದುಕು ವಾಸ್ತವವೋ, ಕಥೆಯೋ, ” ಎನ್ನುತ್ತಿದ್ದಂತೆ ಪೂರ್ತಿ ಕೇಳಿಸಿಕೊಂಡ ವಿನಾಯಕನ ಹೆಂಡತಿಗೆ ಮನತುಂಬಿ ಬಂತು, ಕಡತೋಕ ಸಂಸ್ಕೃತ ಪಾಠಶಾಲೆಯಲ್ಲಿ ಕಲಿಯುತ್ತಿದ್ದ ತನ್ನ, ಅಂಗವಿಕಲ ತಮ್ಮನ ನೆನಪಾಯಿತು. ಆತನದ್ದೇ ಕಣ್ಣು, ಮಾತನಾಡುವಾಗ ಕೈಮಾಡುವುದು, ಎಲ್ಲವೂ ಅವನದ್ದೇ, ಎಂದುಕೊಂಡಳು. “ಮಹಮ್ಮದ ನೀವೂ ದಾರಕಟ್ಟಿ ನಿಮ್ಮ ಸಂಗಡ ನಾವೂ ಬರುತ್ತೇವೆ” ಎನ್ನುತ್ತಿದ್ದಂತೇ. ಮಕ್ಕಳ ಗುಂಪೊಂದು ಬಂದು ಕ್ಯಾಲೆಂಡರ್, ಪೋಟೋ, ತಗೋಳ್ಳಿ, ಕೇವಲ ೧೦ ರೂ ಎಂದು ವಿನಾಯಕ ದಂಪತಿಗಳನ್ನು ಆವರಿಸಿತು. ಅದರಲ್ಲೇ ಒಬ್ಬ ಹುಡುಗ ‘ಮೈ ಏಕ್ ಶೇರ್ ಸುನಾವು’ ಎಂದ, “ಅವರು ತೆಗೆದುಕೊಳ್ಳವುದಿಲ್ಲ ಎಂದರಲ್ಲ ಅವರಿಗೆ ಲೇಟಾಯ್ತು, ದಾರಿ ಬಿಡಿ, ದಾರಿ ಬಿಡಿ” ಎಂದು ಗೈಡ್ ಮಹಮ್ಮದ್, ಸಲೀಂ ಕ್ರಿಸ್ಟಿಯು ಸಮಾಧಿಯ ಕಡೆ ಹೊರಟ ವಿನಾಯಕ ದಂಪತಿಗಳನ್ನು ಹಿಂಬಾಲಿಸಿದ.
*****
ವಿಷ್ಣುನಾಯ್ಕರ ಪ್ರಕಾಶನ ಹಾಗು ‘ಕಥನ’ ಕನ್ನಡ ಜಾಗತಿಕ ಕೂಟದವರು ಏರ್ಪಡಿಸಿದ್ದ ಯುಗಾದಿ ಸಣ್ಣಕತೆಗಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಕತೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.