ಅಂತರಾಳದ ಬದುಕು

“ಆಗ ಹೋಗದ್ದೆಲ್ಲ ವರದಿ ಮಾಡುತ್ತೀ, ನನ್ನದೊಂದು ಸುದ್ದಿ ವರದಿ ಮಾಡು ನೋಡುವ.”
ಎಂಬುದು ಚಿಕ್ಕಮ್ಮ ಯಾವತ್ತೂ ಮಾಡುವ ಒಂದು ಕುಶಾಲು. “ನೀನು ಮಾಡುವ ವರದಿ ವರದಿಯೇ ಅಲ್ಲ, ದಂಡ” ಎನ್ನುವಳು.
“ಸುದ್ದಿ ಮಾಡು. ವರದಿ ಮಾಡಲಿಕ್ಕೇನಂತೆ? ನನಗದೇ ಕೆಲಸ ಎಂದಮೇಲೆ?” ಎನ್ನುತ್ತಿದ್ದೆ. ಅದೊಂದು ಲಘುನಗೆಯಲ್ಲಿ ಮುಕ್ತಾಯವಾಗುವ ಸಂಭಾಷಣೆ ಮಾತ್ರವಾಗಿತ್ತು.

ಒಂದು ತಿಂಗಳಿಂದ ಅವಳ ಜೊತೆಗಿದ್ದೇನೆ. ನನಗಿಂತ ಮುಂಚೆ ವೃಂದಾ ಇದ್ದಳು. ಅವಳಿಗಿಂತ ಮುಂಚೆ ಚಂಪಾ. ಹೀಗೆ ಒಬ್ಬರಲ್ಲಿ ಒಬ್ಬ ಸಂಬಂಧದ ಮನೆ ಹುಡುಗಿಯರನ್ನು ಒತ್ತಾಯದಿಂದ ತನ್ನ ಜೊತೆಗಿರಿಸಿಕೊಂಡು ಓದಿಸಿ ಕಳಿಸಿದವಳು ಚಿಕ್ಕಮ್ಮ. ವೃಂದಾ, ನನ್ನ ತಂಗಿ, ಓದಿ ಮುಗಿಯುತ್ತದೆ ಎನ್ನುವಾಗ ನನಗೆ ವರ್ಗವಾಗಿ ಬಂದಿದ್ದೆ. ಚಿಕ್ಕಪ್ಪನ ಮನೆಯಿದೆ ಎಂದ ಮೇಲೆ ಅಪ್ಪ ಬೇರೆ ಕಡೆ ಇರಲು ಒಪ್ಪುವವರೂ ಅಲ್ಲ. ಈ ಚಿಕ್ಕಮ್ಮ ಬಿಡುವವಳೂ ಅಲ್ಲ. ಅಂತೂ ಈ ಸಲ ಓದುವ ಮಕ್ಕಳ ಬದಲಿಗೆ ನಾನು. ನಾ ಬಂದಾಗ ವೃಂದಾನ ಓದು ಮುಗಿಯಲು ಇನ್ನೂ ವಾರವಿತ್ತು. ನನ್ನನ್ನು ಕಂಡದ್ದೇ “ಇನ್ನು ವರ್ಗವಾಗುವ ವರೆಗೂ ನೀನು ಇಲ್ಲಿಯೇ?” ಕೇಳಿದಳು ಬೆಚ್ಚಿದಂತೆ.

ವೃಂದಾಗೆ ಚಿಕ್ಕಮ್ಮನನ್ನು ಕಂಡರೇ ಆಗುತ್ತಿರಲಿಲ್ಲ. ಅದಕ್ಕೆ ಸ್ಪಷ್ಟ ಎದ್ದು ಕಾಣುವ ಕಾರಣವೂ ಇಲ್ಲ. ಸಹಿಸಲಿಕ್ಕೇ ಆಗದ ಕಿರಿಕಿರಿ ಕೊಡುತ್ತಾಳೆ ಅಂತ. ಕಿರಿಕಿರಿ ಎಂದರೆ ಊಟ-ತಿಂಡಿ ಪ್ರೀತಿಯ ಕಿರಿಕಿರಿಯಲ್ಲ. ಒಂದು ಬಗೆಯಲ್ಲಿ ಪ್ರೀತಿ ಹೆಚ್ಚಳದ ಕಿರಿಕಿರಿ. ಕತ್ತಲೆಯಾಗುವುದರೊಳಗೆ ಮನೆಯಲ್ಲಿರಬೇಕು ಎಂಬುದೇ ವೃದಾಗೆ ಅತ್ಯಂತ ದೊಡ್ಡ ಕಿರಿಕಿರಿಯಾದದ್ದು. ಕತ್ತಲು ಮಾಡಿಕೊಂಡು ಬರಲೇಬೇಕಾದ ಪ್ರಸಂಗಗಳಲ್ಲಿ ಚಿಕ್ಕಮ್ಮ ಸಿಟ್ಟುಗೊಳ್ಳದಿದ್ದರೂ-ವಿಹ್ವಲಳಾಗುತ್ತಿದ್ದುದು, “ನನಗೇನೂ ಆಗುವುದಿಲ್ಲ ಚಿಕ್ಕಮ್ಮ” ಎಂದರೂ “ಆಗುವುದು ನಿನಗಲ್ಲ, ನನಗೆ”-ಎನ್ನುತ್ತಿದ್ದುದು, ಮನೆಯಲ್ಲಿ ಚಿಕ್ಕಪ್ಪ ಇದ್ದರೂ ಕೆಲಸದ ಕಲ್ಯಾಣಿಯನ್ನು ತಾನು ಬರುವವರೆಗೂ ನಿಲ್ಲಿಸಿಕೊಳ್ಳುತ್ತಿದ್ದುದು-ಎಲ್ಲ ವಿವರಿಸುತ್ತಾ ವೃಂದಾ “ಆಕೆ ಹೀಗೇ ಅಂತೆ. ಇಲ್ಲಿದ್ದು ಹೋದವರೆಲ್ಲ; ನಿಧಾನ ಬಾಯಿಬಿಡುತ್ತಾರೆ…. ‘ವಿಚಿತ್ರ ಚಿಕ್ಕಮ್ಮ’ ಅಂತ” ಹೇಳಲು ಸುರುಮಾಡಿದರೆ ಹೇಳುತ್ತಾ ಹೋಗುವವಳು ವೃಂದಾ. “ಕಾಲೇಜಿನ ಯೂನಿಯನ್ ಡೇ ದಿನವಂತೂ ರಾತ್ರಿ ವಿಪರೀತ ತಡವಾಗಿಬಿಟ್ಟಿತು. ಗೊತ್ತಲ್ಲ ನಿನಗೇ? ಬೇಗ ಬಾ ಅಂದರೆ ಹೇಗೆ ಬರುವುದು? ಹೆದರಿ ಹೆದರಿ ಮನೆಗೆ ಬಂದೆ. ಚಿಕ್ಕಮ್ಮ ಮಲಗಿರಬಹುದು ಅಂತ ಅಂದುಕೊಂಡಿದ್ದರೆ, ಕೇಳು, ಕಲ್ಯಾಣಿಯೂ ಹೊರಟು ಹೋಗಿ ಗೇಟಿನಲ್ಲಿ ನಿಂತಿದ್ದಳು ಇವಳು ಒಬ್ಬಳೇ….ಭೂತದಂತೆ! ಸುಮ್ಮನೇ ಹೇಳುತ್ತಿಲ್ಲವೇ. ಆಕೆ ಒಂದು ಕ್ಷಣ ಆ ನಿನ್ನ ನಿಗೇಟಿವ್‌ನಲ್ಲಿ ಕಾಣುತ್ತಾರಲ್ಲ ಮನುಷ್ಯರು-ಹಾಗೇ ಕಂಡಳು! ಕಣ್ಣಲ್ಲಿ ಬೆಳಕೇ ಇಲ್ಲದ ಭೂತ! ನನ್ನನ್ನು ನೋಡಿದ್ದೇ, ಆ ಚರ್ಯೆ ಎಲ್ಲಿ ಮಾಯವಾಯಿತೋ; ತಕ್ಷಣ ಪಾಸಿಟಿವ್! “ಅಯ್ಯಬ್ಬ, ಅಂತೂ ಬಂದೆ!” ಎಂದಳು. ಒಳಗೆ ಬರುತ್ತ ಮತ್ತೆ “ಬಂದೆಯಲ್ಲ, ಅಂತೂ…” ನನಗೂ ರೇಗಿ “ಏನು ಚಿಕ್ಕಮ್ಮಾ, ಯಾರನ್ನಾದರೂ ಕಟ್ಟಿಕೊಂಡು ಹಾರುತ್ತೇನೆ ಅಂತ ಮಾಡಿದಿರಾ ಹೇಗೆ?”-
“ಅದು ಅಷ್ಟು ಸುಲಭ ಅಲ್ಲ ಬಿಡು”-ಎಂದಳು! ಅದಕ್ಕೇ ನಾನು ಹೇಳಿದ್ದು. ಇದು ವಿಚಿತ್ರದ ಚಿಕ್ಕಮ್ಮ ಅಂತ. ಈ ಚಿಕ್ಕಪ್ಪ ಬರೀ ಬೂಸು….ಪಾಪ ಜಾಸ್ತಿಯಾಯಿತು ಅವರು. ನಾನು ಅವಳ ಗಂಡ ಆಗಬೇಕಿತ್ತು. ಕುಣಿಸಿಕೊಡುತ್ತಿದ್ದೆ….” ಎಂದಳು. “ಸಧ್ಯ ಅಲ್ಲವಲ್ಲ….ದೇವರು ದೊಡ್ಡವ.”
“ಹಾಗೆಲ್ಲ ಹೇಳಬೇಡವೆ, ಅಷ್ಟು ಜೋಪಾನ ಮಾಡುವವರು ಯಾರಿರುತ್ತಾರೆ ಇವತ್ತು, ಹೇಳು.”
“ಯಾಕೆ ಇರಬೇಕು ಅಂತ? ಜೋಪಾನ ಅಂತೆ! ತನ್ನನ್ನು ಮಾಡಿಕೊಳ್ಳಲಿ. ನನ್ನನ್ನೇಕೆ?…. ಅದೇನು ಸಾಧಾರಣ ಜೋಪಾನವಲ್ಲವೇ, ಕೇಳು, ಬೇಕಾದರೆ ಇನ್ನಷ್ಟು ಖುಶಿಪಟ್ಟುಕೋ. ನಾನು ಬಂದ ದಿನದಿಂದ ನನ್ನ ಕೋಣೆಯಲ್ಲಿಯೇ ಆಕೆ ಮಲಗುವುದು. ಆ ತುದಿ ಮಂಚದಲ್ಲಿ. ಒಂದು ದಿನವಾದರೂ ಅವಳ ಕೋಣೆಗೆ ಹೋಗಿದ್ದರೆ ಹೇಳು….ನಾನೊಂದಷ್ಟು ಬೇಕಾದ ಹಾಗೆ ಮೈ ಮರೆತು ಬಿದ್ದುಕೊಳ್ಳಲೂ ಆಗದಂತೆ…. ಶ್ಯೆ! ಒಳ್ಳೇ, ಇನ್ಸ್‌ಪೆಕ್ಟರ್ ಆದಳಲ್ಲ!”
“ಹಾಗೇ ಆಗಬೇಕು ನಿನಗೆ. ಅಮ್ಮ ಅಷ್ಟು ಹೇಳಿದರೂ ನೀಟಾಗಿ ಮಲಗುವುದನ್ನು ಕಲಿಯಲಿಲ್ಲ ನೋಡು!”
“ತಡೆ ಇನ್ನೂ ಇದೆ. ನಾನೇನು ಸಣ್ಣವಳು ಅಂತ ಅವಳ ಮನಸ್ಸಿನಲ್ಲಿ ಬಹುಶಃ ಅಷ್ಟೂ ಅರ್ಥ ಆಗುವುದಿಲ್ಲವೆ ನನಗೆ ಹಾಗಾದರೆ? ಚಿಕ್ಕಪ್ಪನಾದರೂ ಏನು ತಿಳಿದುಕೊಳ್ಳಬೇಕು? ಇದೊಂದು ಪೀಡೆ ಯಾಕೆ ಬಂತಪ್ಪ ನಮ್ಮ ಮಧ್ಯೆ ಅಂತ ಅಂದುಕೊಳ್ಳುವುದಿಲ್ಲವೆ?….‘ಹೋಗಿ ಚಿಕ್ಕಮ್ಮ, ನನಗೆ ಹೆದರಿಕೆ ಇಲ್ಲ. ಒಬ್ಬಳೇ ಮಲಗಿ ಅಭ್ಯಾಸ ಇದೆ.’ ಅಂದರೂ ‘ಹೋಗುವುದಾ ಎಲ್ಲಿಗೆ? ನಾನೇನು ಈಗ ಈಗ ಮದುವೆಯಾದ ಮದುಮಗಳು ನೋಡು. ಕೋಣೆಗೆ ಹೋಗಿ ಬಾಗಿಲು ಹಾಕಿಕೊಳ್ಳುವುದಕ್ಕೆ’-ಎನ್ನುವಳು. ಒಮ್ಮೆಯಂತೂ…. ಅಯ್ಯಬ್ಬ ಈಗ ಎಣಿಸಿದರೂ ಮೈ ನಡುಗುತ್ತದೆ. ಗಂಟಲು ಪಸೆ ಆರುತ್ತದೆ….ನಿಜಕ್ಕೂ ನಾನಾಗಿದ್ದಕ್ಕೆ ಇಷ್ಟು ದಿನ ಕಳೆದೆ……ಹೇಗೋ ಏನೋ! ನೀನಾಗಿದ್ದರೆ….”
“ಹರಿಕಥೆ ಸಾಕು. ಏನಾಯಿತು ಹೇಳು.”
“ಏನು ಗೊತ್ತ? ಅಪರಾತ್ರಿ. ಚಿಕ್ಕಪ್ಪ ಚಿಕ್ಕಮ್ಮನನ್ನು ಮೆಲ್ಲ ಕರೆದದ್ದು ಕೇಳಿಸಿತು. ….ಆ ಸ್ವರ ಹೇಗಿತ್ತು ಅಂತಿ!…ನನಗೆ ಯಾಕಾದರೂ ನಿದ್ದೆ ಬಂದಿರಲಿಲ್ಲವೋ ದೇವರೇ! ಅವರು ಕರೆದ ರೀತಿ ಕೇಳಿ ಮೈಯೆಲ್ಲಾ ಬೆವರಿ…ಕಿವಿಗೆ ಹೊದಿಕೆ ತುಂಬಿಕೊಂಡು ಮಲಗಿಬಿಟ್ಟೆ. ಈ ಚಿಕ್ಕಮ್ಮ! ಓ ಎನ್ನಲೂ ಇಲ್ಲ. ಎದ್ದು ಹೋಗಲೂ ಇಲ್ಲ! ಚಿಕ್ಕಪ್ಪ ಊಳಗೆ ಬರುವ ಶಬ್ದ ಕೇಳಿಸಿತು. ನನಗೋ ಗಂಟಲು ಒಣಗಿ ನಿಂತಿದ್ದರೆ ಉಂಟಲ್ಲ, ಬಿದ್ದೇ ಬಿಡುತ್ತಿದ್ದೆನೇನೋ. ಮಲಗಿದ್ದ ಹೊತ್ತಿಗೆ ಬಚಾವು.”
“ಇರಲಿ ಮುಂದೆ ಹೇಳು.”
“ಏನು ಇರಲಿ?, ನಿನಗೆ ಹೇಗೆ ಗೊತ್ತಾಗಬೇಕು ನನ್ನ ಕಷ್ಟ? ಏನೇ ಹೇಳು ಅಕ್ಕ, ವಯಸ್ಸಿಗೆ ಬಂದ ಮಕ್ಕಳನ್ನು ಯಾರ ಮನೆಯಲ್ಲೂ ಬಿಡಬಾರದು…….”
ಓದಲು ಹೊರಟ ಆ ಪುಟ್ಟ ವೃಂದಾ ಎಲ್ಲಿ ಹೋದಳು?
ಅವಳ ಮಾತಿಗೆ ಬೇಕೆಂದೇ ಬೇರೆ ಮಹತ್ವ ಕೊಡದೆ ನಕ್ಕು “ಹೋಂ. ಅದಿರಲಿ ಮಾರಾಯ್ತಿ, ಏನಾಯಿತು ಹೇಳು ಒಮ್ಮೆ.”
“ನಗೆ…..ಯಾಕೆ, ನಿನ್ನ ಕರ್ಮಕ್ಕೆ! ನನ್ನ ಬಾಯಲ್ಲಿ ಮತ್ತೆ ಏನೂ ಬರುತ್ತದೆ!…..ಹ್ಞಂ. ಚಿಕ್ಕಮ್ಮ ಎದ್ದಳು. ಚಿಕ್ಕಪ್ಪನ ಹಿಂದೆ ನಡೆದಳು. ಹೋ…..ಹೋದಳು. ಇನ್ನು ಅಡ್ಡಿಲ್ಲ……”
“ಕವುಚಿ, ಆಚೆಗೊಂದು ಕಾಲು ಈಚೆಗೊಂದು ಕಾಲು ಹಾಕಿ ಬೇಕಾದ ಹಾಗೆ ಬಿದ್ದುಕೊಳ್ಳಬಹುದು ಅಂದುಕೊಂಡೆ…..”
“ಅಯ್ಯೋ, ಮಧ್ಯೆ ಮಾತಾಡಬೇಡ ಕೇಳೂ…..ನಿಂತು, ಇಬ್ಬರೂ ಏನೋ ಪಿಸಿಪಿಸಿ ಆತಾಡಿದರು. ಚಿಕ್ಕಪ್ಪ ಚಿಕ್ಕಮ್ಮನ ಕೈ ಹಿಡಿದರು. ಚಿಕ್ಕಮ್ಮ ಮೆಲ್ಲ ಕೈ ಬಿಡಿಸಿಕೊಂಡು ಅವರ ಹಿಂದೆಯೇ ನಡೆದಳು. ಚಿಕ್ಕಪ್ಪ ಬಾಗಿಲು ದಾಟಿದೊಡನೆ ಬಾಗಿಲು ಮುಚ್ಚಿ ಚಿಲಕ ಹಾಕಿ ಬಂದು ಮಲಗಿದಳು! ‘ವೃಂದಾ’ ಅಂತ ಮೆಲ್ಲ ಕರೆದಳು. ಖಂಡಿತಾ ನನಗೆ ಎಚ್ಚರವುಂಟಾ ಅಂತ ನೋಡಲಿಕ್ಕೆ. ಮಾತಾಡಿಯೇ ಬಿಟ್ಟೇನಾ ನಾನು?….ನಿದ್ದೆ ಬಂದವರಿಗಿಂತ ಜಾಸ್ತಿ ನಿದ್ದೆ ಮಾಡಿದೆ!….ಇದೇನು, ಒಮ್ಮೆಯೆಂದರೆ, ಒಮ್ಮೆ ಅಂತ ತಿಳಿಯಬೇಡವೇ….”
ಸಣ್ಣ ನಗೆಯ ನಡುವೆಯೇ ಕಂಪಿಸಿದಳು ವೃಂದಾ.
“ಇಂಥದ್ದನ್ನೆಲ್ಲ ಏನೂ ಕಾಣದೆಯೇ ಬೆಳೆದವರು ನಾವು….ಸಾಕಲ್ಲ? ಅಪ್ಪ ಅಮ್ಮನ ಹತ್ತಿರ ಇದನ್ನೆಲ್ಲ ಹೇಳುವುದು ಹೇಗೆ? ಹೇಳಿದರೆ ಪ್ರಾಯ ಬಂದದ್ದು ಹೌದು ನಿನಗೆ ಅಂತ ಬಂದ ಪ್ರಾಯ ಅಲ್ಲಿಯೇ ಕಂತಿ ಹೋಗುವ ಹಾಗೆ ಬೈಯ್ದಾರು! ಚಿಕ್ಕಪ್ಪನಿಗೆ ಹಿಂಸೆಯಾಗುತ್ತದೆ ಎಂದರೂ, ಅದೆಲ್ಲ ನಿನಗೇಕೆ, ಹೇಗೆ ಗೊತ್ತು…..ತಲೆಯಲ್ಲಿ ಇಂಥದ್ದನ್ನೆಲ್ಲ ಯೋಚಿಸುತ್ತೀಯಲ್ಲ ಕೊಳಕು! ಎಲ್ಲಿಂದ ಕಲಿತೆ? ಎಂದಾರು…..ಇಲ್ಲ, ಹೆಚ್ಚೆಂದರೆ ‘ಕಾಲೇಜು ಬಿಟ್ಟು ಮನೆಗೆ ಬಾ….” ಅಷ್ಟೆ. ಎಂತಲೇ ತುಟಿಪಿಟಿಕ್ಕೆನ್ನದೆ ದಿನಕಳೆದೆ…..”
“ಇಂತಹ ಚಿಕ್ಕಮ್ಮನ ಮನೆ ನಾನು ಬಿಡುತ್ತಿದ್ದಂತೆ ನೀನು ಬಂದೆಯಲ್ಲ! ಗ್ರಹಚಾರ” ಎಂದು ಹೇಳುವ ಬದಲು ಇಷ್ಟೆಲ್ಲ ಹೇಳಿದಳು ವೃಂದಾ. “ಇದನ್ನು ಅವಳ ಒಳ್ಳೆಯತನ ಎನ್ನುತ್ತೀಯಾ? ಖಂಡಿತ ಅಲ್ಲ ನನ್ನ ಅಕ್ಕ…..” ಎಂದು ನಾಟಕೀಯವಾಗಿ ಹೇಳಿ ಚಾಳಿಸಿದಳು.
“ನೀನು ಜೋರಾಗಿದ್ದೀ!”-
ನಾನು ಬಂದರೂ ವೃಂದಾ ಜೊತೆ ನಾನಿದ್ದರೂ ತುದಿ ಮಂಚ ಬಿಡಲಿಲ್ಲ ಚಿಕ್ಕಮ್ಮ. “ಪರವಾಗಿಲ್ಲ ಚಿಕ್ಕಮ್ಮ. ನೀವು ನಿಮ್ಮ ಕೋಣೆಗೆ ….”ಎನ್ನುವುದರೊಳಗೆ “ಏನು, ಈ ಪಿಡ್ಡಿ ಹೇಳಿಕೊಟ್ಟಳಾ ಹೀಗೆ ಹೇಳು ಅಂತ?….ನನ್ನ ಕೋಣೆ ಇರುತ್ತದೆ. ಎಲ್ಲಿಗೆ ಹೋಗುತ್ತದೆ?….” ಎಂದು ಮೃದುವಾಗಿ ಸುರುಮಾಡಿದವಳು “ನಾನು ಇಲ್ಲಿಯೇ, ಡೋಂಟ್ ವರಿ”-ಎಂದಳು. ನಿರ್ಧಾರ ಮಾಡಿಕೊಂಡವರ ಹಾಗೆ. (ವಿಶೇಷವಾಗಿ ಒತ್ತಿ ಹೇಳಬೇಕು ಅಂದಾಗೆಲ್ಲ ಹೀಗೇ ಚಿಕ್ಕಮ್ಮ; ಸುಲಭಕ್ಕೆ ಸಿಗುವ ಇಂಗ್ಲಿಷ್ ಶಬ್ದ ಪ್ರಯೋಗಿಸುತ್ತಾಳೆ ಎಂಬುದಕ್ಕೆ ಇದೊಂದು ಉದಾಹರಣೆ ಇರಲಿ) ನಿರ್ಧಾರ ಮಾಡಿಕೊಂಡವರ ಎದುರು ಚರ್ಚೆ ನಡೆಯುವುದಿಲ್ಲ. ಆದರೂ ಹೀಗೆ ಮನೆಯಲ್ಲಿ ನಮ್ಮಂಥವರನ್ನು ಉಳಿಸಿಕೊಳ್ಳುವುದೇಕೆ?….ಮತ್ತೆ ಉಸಿರುಗಟ್ಟಿಸುವುದೇಕೆ?

‘ಬೆಸ್ಟ್ ಆಫ್ ಲಕ್’-ಎನ್ನುತ್ತಾ ಹೊರಟು ಹೋದಳು ವೃಂದಾ. ಆಕೆ ಹೇಳಿದಂತೆ ಈಗ ನನ್ನ ಪಾಳಿ. ತಡವಾಗಿ ಬರುವಂತಿಲ್ಲ. ಎಲ್ಲಿಯೂ ಒಂದು ರಾತ್ರಿಯೂ ಉಳಿಯುವಂತಿಲ್ಲ. ಹಾಗೆಂತ ಸಿಟ್ಟು ಸೆಡ ಅನುಮಾನದ ಸುಳಿವು ಸಹ ಚಿಕ್ಕಮ್ಮನಲ್ಲಿ ಕಾಣಿಸುವುದಿಲ್ಲ. ಹಾಗೇನಾದರೂ ಇದ್ದಲ್ಲಿ ದಾರಿ ಸುಗಮವಾಗುತ್ತಿತ್ತು. ಎರಡು ಮಾತು ಚಕಮಕಿಗಳಲ್ಲಿ ಎಲ್ಲ ಮುಗಿಸಬಹುದಿತ್ತು. ಮನೆಗೆ ಹೋಗಿ ಚಿಕ್ಕಮ್ಮ ಹಾಗೆಂದಳು, ಹೀಗೆಂದಳು, ನಾನಿರಲಾರೆ ಅಲ್ಲಿ-ಅಂತ ಹೇಳಿ ನಂಬಿಸಲು ಸಾಧ್ಯವಿತ್ತು. ಆದರೆ ಹಾಗೆಲ್ಲ ಹಿಡಿತಕ್ಕೆ ಸಿಗದ ಚಿಕ್ಕಮ್ಮ, ವೃಂದಾ ಹೇಳಿದಂತೆ ಈಗಿರುವ ರೀತಿಯನ್ನು ಮನೆಯಲ್ಲಿ ಹೇಳಿದರೆ ಚಿಕ್ಕಮ್ಮನ ಕಾಳಜಿ ಕುರಿತೇ ಭಾಷಣ ಕೇಳಬೇಕಾದೀತು ಹೊರತು ನಮ್ಮ ಸ್ವಾತಂತ್ರ್ಯ ಹರಣದ್ದಲ್ಲ.

ನಾನೋ, ಒಮ್ಮೊಮ್ಮೆ ಮನೆಗೆ ಬರುವುದು ಅನಿವಾರ್ಯವಾಗಿ ತಡವಾಗಿಯೇ ಆಗುತ್ತಿತ್ತು. ಸಮಾರಂಭ, ಗೋಷ್ಠಿ, ಸಂಕಿರಣ, ಅವಘಡ-ಅದೂ ಇದೂ….ಚಿಕ್ಕಮ್ಮ ಹೇಳಿದಂತೆ ಎಷ್ಟೋ ಸಲ ‘ಆಗಹೋಗದ್ದೇ’. ವರದಿ ಎನ್ನುವುದೇ ಹಾಗೆ ತಾನೆ? ಇಷ್ಟವಿರಲಿ, ಇಲ್ಲದಿರಲಿ, ಅದು ಸುದ್ದಿಯೆಂದ ಮೇಲೆ ವರದಿ ಮಾಡಬೇಕು. ಯಾರೋ ಬರೆದುಕೊಟ್ಟ ಭಾಷಣವನ್ನು ಭಾಷಣಕಾರ ಅರ್ಥಾರ್ಥ ತಿಳಿಯದೆ ಓದಿದರೂ ಅದು ಓದಿದವರ ಮಾತೆಂದು ವರದಿ ಮಾಡಬೇಕು. ಪ್ರಶ್ನೆ ತರ್ಕಗಳೆಲ್ಲ ಆಮೇಲಿನವು. ಯಾವುದೋ ಮೂರನೇ ದರ್ಜೆ ಚರ್ಚೆ, ಸಂಕಿರಣ ಯಾವುದನ್ನೂ ಬಿಡುವಂತಿಲ್ಲ. ಒಮ್ಮೊಮ್ಮೆ ಯಾಕಾದರೂ ಈ ಕೆಲಸಕ್ಕೆ ಬಂದೆ? ಸುಮ್ಮನೆ ಮನೆಯಲ್ಲಿ ಕುಳಿತು ನನ್ನಷ್ಟಕ್ಕೇ ಏನಾದರೂ ಓದಿಕೊಂಡು ಬರೆದುಕೊಂಡು ಇದ್ದರೂ ನನ್ನ ಮಟ್ಟಿಗಾದರೂ ನಾನು ಅರ್ಥಪೂರ್ಣವಾಗಿರುತ್ತಿದ್ದೆನೇ-ಅಂತ ಅನಿಸುತ್ತಿತ್ತು. ಅಂದರೆ ಯಾವತ್ತೂ ಹೀಗೇ ಅಂತಲ್ಲ. ವರದಿಯೂ ಅರ್ಥಪೂರ್ಣವಾಗಲು ಸಾಧ್ಯ. ವರದಿಯಿಂದಲೂ ಅರ್ಥಪೂರ್ಣವಾದ ಬದಲಾವಣೆಯೋ, ಎಚ್ಚರವೋ ಘಟಿಸಲು ಸಾಧ್ಯ ಎಂಬುದೂ ಯಾವ ವರದಿಗಾರರ ಅನುಭವಕ್ಕೆ ಬರುವುದಿಲ್ಲ? ಹೀಗೆ ಎರಡು ಬಗೆಯ ಜಗ್ಗಾಟ ಸೆಳೆತಗಳಲ್ಲಿ ಸಾಗುತ್ತಿದ್ದ ಜೀವನವನ್ನು ಈ ವಿಚಿತ್ರ ಚಿಕ್ಕಮ್ಮ ಆವರಿಸಿದ್ದಾಳೆ. ರಾತ್ರಿ ಸಹಜವಾಗಿ ತಡವಾಗಿ ಬಂದರೂ ಗೇಟಿನ ಬಳಿ ನಿಂತೇ ಇರುತ್ತಾಳೆ. ವೃಂದಾ ಹೇಳಿದ್ದು ಸುಳ್ಳಲ್ಲ. ಥೇಟ್ ನಿಗೆಟಿವ್‌ನಲ್ಲಿ ಕಾಣುವ ಮನುಷ್ಯಾಕೃತಿಯಂತೆಯೇ. ನಿಸ್ತೇಜದ ಜೊತೆಗೆ ಎದ್ದು ಕಾಣುವ ವಿಹ್ವಲತೆ. ನಮ್ಮನ್ನು ಹೀಗೆ ಜೊತೆಯಲ್ಲಿ ಇರಿಸಿಕೊಳ್ಳುವುದು ಏಕೆ; ಅತಿಯಾದ ಜವಾಬ್ದಾರಿಯೆಂಬತೆ ನಲುಗುವುದೇಕೆ? ನನ್ನನ್ನು ನೋಡಿದ್ದೇ ಆ ಚರ್ಚೆಯೇ ಬದಲಾಗಿ ಅವಳು ಹಗುರವಾಗಿದ್ದು ಗೋಚರವಾಗುತ್ತದೆ.-ವೃಂದಾ ಇದನ್ನು ಕೂಡಾ ಹೇಳಿದ್ದಳಲ್ಲ! ಪ್ರೀತಿಯ ವೃಂದಾ, ನೀನು ಸೂಕ್ಷ್ಮಮತಿ ಆಗಿದ್ದು ಹೌದು ಅಂತ ಕಾಗದ ಬರೆದದ್ದಕ್ಕೆ “ನೀನು ಮಾತ್ರ ಮಂದಮತಿ. ತಿಳಕೊ. ನಾನು ಅಷ್ಟು ಹೇಳಿಯೂ, ಸಂಪಾದಿಸುವ ಶಕ್ತಿ ಇದ್ದೂ, ಅಪ್ಪ ಹೇಳಿದ್ದು ಅಂತ ಇನ್ನೂ ಅವರ ಮನೆಯಲ್ಲಿ ಇದ್ದೀಯಲ್ಲ! ಹಾಸ್ಟೆಲಿಗೆ ನಡೆ. ಅವರಿಬ್ಬರು ಅವರಷ್ಟಕ್ಕೆ ಇರಲಿ. ಏನೆಂದುಕೊಂಡಿದ್ದಾಳೆ ಚಿಕ್ಕಮ್ಮ? ಅವಳ ಮನೆಯಲ್ಲಿರುವ ನಾವು ಹಸುಗೂಸುಗಳೆಂದೇ?….” ವೃಂದಾಳ ಮಾತಿನಂತೆಯೇ ಪತ್ರವೂ, ಸುರುಮಾಡಿದರೆ ಮುಕ್ತಾಯ ಕಷ್ಟ. ಓದಲು ಬಿಡುವು ಬೇಕು.

…..ಹ್ಞಾಂ. ನನ್ನನ್ನು ನೋಡಿದ್ದೇ ಆ ಚರ್ಚೆಯೇ ಬದಲಾಗಿ ಹಗುರಾಗುತ್ತಿದ್ದಳು. ಒಳಗೆ ಬಂದರೆ ಚಿಕ್ಕಪ್ಪನೋ, ಸ್ವಸ್ಥ ನಿದ್ದೆ ಗೊರೆಯುವುದು ಕೇಳಿಸುತ್ತಿತ್ತು. ಚಿಕ್ಕಪ್ಪನ ನಿಶ್ಚಿಂತೆಯಲ್ಲಿ ಒಂದು ಪಾಲನ್ನೂ ಇವಳು ಸಂಸರ್ಗದಿಂದಲಾದರೂ ಪಡೆಯಲಿಲ್ಲವಲ್ಲ!

ಪಾಪ. ಚಿಕ್ಕಪ್ಪ ಒಂದು ರೀತಿಯಲ್ಲಿ ಎಮ್ಮೆ ತಮ್ಮಣ್ಣನೇ. ಊಟ ತಿಂಡಿ ಗಡದ್ದು ಆಗಿಬಿಟ್ಟರೆ ಮತ್ತೆ ಸುದ್ದಿಯಿಲ್ಲ. “ಮುಂಚಿನಿಂದಲೂ ಅಷ್ಟೆ. ರುಚಿರುಚಿಯಾಗಿ ಉಂಡು ತಿಂದು ಖುಶಿಪಡುವವ. ಅವನಿಗೆ ಅಟ್ಟು ಹಾಕದವರು ಪಾಪಿಗಳು…..” ಎನ್ನುತ್ತಿದ್ದರು ಅಜ್ಜಿ. ಒಳ್ಳೆಯ ಅಡುಗೆ ಮಾಡುವ ಹುಡುಗಿಯನ್ನೇ ಹುಡುಕಿ ಮಗನಿಗೆ ತಂದುಕೊಂಡು ಗೆದ್ದೆ ಎಂದವರು. ಚಿಕ್ಕಪ್ಪನ ಪ್ರಶ್ನೆಗಳಾದರೂ ಅಷ್ಟೆ. ಪಟ್ಟಿ ಮಾಡಬಹುದು. ಎಲ್ಲಿಯೂ ಅಧಿಕವಿಲ್ಲ. ಆಯ್ತಾ ಊಟ? ನಿದ್ದೆ ಬಂತಾ? ಸೊಳ್ಳೆ ಇತ್ತಾ? ಊಟಕ್ಕೆ ಬಾ. ತಿಂಡಿಗೆ ಬಾ. ಇನ್ನೊಂದು ಸ್ವಲ್ಪ ಹಾಕಿಕೋ ಏನಂತೆ ವರದಿಗಾರ್ತಿಯ ವಿಶೇಷ ವರದಿ?- ಹೀಗೇ. ಬೆಳಿಗ್ಗೆ ತಿಂಡಿ ತಿಂದು ಆಫೀಸಿಗೆ ಹೋದರೆ ಸಂಜೆಗೆ ಬರುವರು. ಏನಾದರೂ ಹೇಳಲು ಇದ್ದೇ ಇರುತ್ತದೆ. ಊರ ಮೇಲಿನ ವಿಚಾರ. ಹೇಳುವರು. ಚಿಕ್ಕಮ್ಮನೂ ಆಸ್ಥೆ ತೋರಿಸಿ ಕೇಳುವಳು. ಮನೆವಾರ್ತೆ ವಿಚಾರ ಚಿಕ್ಕಮ್ಮನಿಗೂ ಇರುತ್ತದೆ ಹೇಳಲು. ಮೊನ್ನೆ ತಂದ ಬೇಳೆ ಚೆನ್ನಾಗಿಲ್ಲ ಎಂದೋ, ಅಕ್ಕಿ ಬಹಳ ಚೆನ್ನಾಗಿದೆ ಅದನ್ನೇ ಇನ್ನೂ ಸ್ವಲ್ಪ ತಂದು ಬಿಡಿ, ಇಲ್ಲವಾದರೆ ಅಂಗಡಿಯಲ್ಲಿ ಖರ್ಚಾಗಿಹೋದೀತು ಎಂದೋ, ತೋಟ ಚೊಕ್ಕಮಾಡಲು ಬರುತ್ತೇನೆ ಎಂದಾತ ಬರಲೇ ಇಲ್ಲವೆಂದೋ, ಕಲ್ಯಾಣಿಗೆ ಸಂಬಳವೆಂದೋ….

ಇಬ್ಬರೂ ಶಾಂತವಾಗಿ ಹೇಗೆ ಮಾತಾಡಿಕೊಂಡಿರುತ್ತಾರೆ. ಮಾತಿನ ಸಖ್ಯವೆಂಬುದು ಹೀಗೇ ಎಂದು ಮಾದರಿ ತೋರಿಸುವಷ್ಟು, ಅಪ್ಪ-ಅಮ್ಮ ಒಂದು ದಿನವಾದರೂ ಹೀಗೆ ಮಾತಾಡುತ್ತ ಕುಳಿತದ್ದನ್ನು ನಾನಂತೂ ಕಂಡಿರಲಿಲ್ಲ. ಅದೂ ಇದೂ ಪಟ್ಟಾಂಗ ಹೊಡೆದು ರಾತ್ರಿ ಊಟ ಮಾಡಿ ಹಾಸಿಗೆ ಮೂಸಿದರೆಂದರೆ ನಿದ್ದೆಯೇ ಚಿಕ್ಕಪ್ಪನಿಗೆ. ನಿದ್ದೆ ಅಂದುಕೊಳ್ಳುತ್ತೇನೆ. ವೃಂದಾ ಹೇಳಿದ ಪ್ರಕರಣ ಕೇಳಿದರೆ ಈ ನಿದ್ದೆ ಎಷ್ಟು ಹೊತ್ತಿಗೆ ಎಚ್ಚರಾಗುತ್ತದೇ, ಎಷ್ಟು ಹೊತ್ತಿಗೆ ಹಂಬಲವಾಗುತ್ತದೋ…..! ಅವಳು ಹೇಳಿದ್ದು ಸಧ್ಯ, ನನ್ನ ಅನುಭವಕ್ಕಿನ್ನೂ ಬಂದಿಲ್ಲ. ಬಂದು ತಿಂಗಳಷ್ಟೇ ಆಗಿದ್ದಕ್ಕೋ, ಅಥವಾ ನಾನು ದೊಡ್ಡವಳು ಎಂಬ ಹಿಂಜರಿಕೆಯೋ…..ಅಥವಾ…..ಮೈ ಮರೆತು ನಿದ್ದೆ ಬಂದ ಹೊತ್ತಿನಲ್ಲಿ…..ಏನಂದರೂ ನಾನಿಲ್ಲಿರುವುದು ಸರಿಯಲ್ಲ. ಉಪಾಯದಿಂದ ಜಾರಿಕೊಳ್ಳಬೇಕು. “ಚಿಕ್ಕಮ್ಮಾ, ಯಾಕಾದರೂ ಹೀಗೆ ಮಾಡಬೇಕು? ಜೊತೆಗಿರುವ ನಮ್ಮನ್ನು ಅಡಕತ್ತರಿಗೆ ಸಿಕ್ಕಿಸಿಡಬೇಕು? ಚಿಕ್ಕಪ್ಪ ಪಾಪದವರು. ಏನೂ ಹೇಳದೇ ಇರುತ್ತಾರೆ ನಿಜ. ಆದರೆ ನಿನ್ನದು ಜವಾಬ್ದಾರಿಯ ಗೀಳು; ಅತಿಯಾಯಿತು. ನಮಗೇನೂ ಸೂಕ್ಷ್ಮವಿಲ್ಲ ಅಂದುಕೊಂಡೆಯಾ? ಒಂದೋ ನೀನು ನಿನ್ನ ಕೋಣೆಗೆ ಹೋಗು; ಇಲ್ಲ ನಾನೇ ಹಾಸ್ಟೆಲಿಗೆ ಹೋಗುತ್ತೇನೆ….”ಎಂದು ಹೇಳಿಬಿಡಬೇಕು ಒಮ್ಮೆ. ಕಾದು, ಒಂದು ದಿನ ಹೇಳಿ, ಹೊರಟು ಬಿಡಬೇಕು.

-ಅಂದುಕೊಳ್ಳುತ್ತ ಹೇಳುವ ಒಕ್ಕಣೆಯನ್ನು ಮನದಲ್ಲಿಯೇ ರಚಿಸಿ ಅಳಿಸಿ ಹಾಕುತ್ತ ದಿನಗಳು ಕಳೆದು ಹೋದವು. ನಾಲ್ಕು ದಿನ ರಜೆ ಹಾಕಿ ಎಲ್ಲಿಗಾದರೂ ಹೋಗಿ ಬಂದರೆ ಹೇಗೆ? ಮನಸ್ಸು ತುಸು ಪ್ರಪುಲ್ಲವಾಗುತ್ತದೆ. ಹೇಳಬೇಕಾದ ಮಾತು ಹೆಚ್ಚು ಕಷ್ಟವೆನಿಸುವುದಿಲ್ಲ. ಮನೆಯಿಂದ ಹೊರಗಿದ್ದ ಕಾಲದ ಏಕಾಂತದಲ್ಲಿ ಚಿಂತಿಸುವ ಫಲವಾಗಿ ಅಪ್ಪ-ಅಮ್ಮನ ಹತ್ತಿರ ಹೇಳಲೂ ಧೈರ್ಯವಾಗುತ್ತದೆ, ಸುಲಭವೂ ಆಗುತ್ತದೆ……
“ಚಿಕ್ಕಮ್ಮಾ, ರಜೆ ಹಾಕಿದ್ದೇನೆ. ನಾಕು ದಿನ ಒಂದು ಸಣ್ಣ ತಿರುಗಾಟಕ್ಕೆ ಹೋಗಿ ಬರುತ್ತೇನೆ.” ಎಂದೆ.
ತಕ್ಷಣ “ಎಲ್ಲಿಗೆ?”
“ಹೀಗೇ, ನನ್ನಷ್ಟಕ್ಕೇ ಒಂದು ಕ್ಯಾಮರಾ ಹಿಡಿದುಕೊಂಡು ಕಳಸ ಹೊರನಾಡು ಎಲ್ಲ ಸುತ್ತಿಬರುತ್ತೇನೆ.
“ಒಬ್ಬಳೇ?…”

ನನ್ನ ತಪ್ಪು ಕೂಡಲೇ ಅರಿವಾಯಿತು. ತಿಳಿದೂ ಜಾಣ್ಮೆಯ ಉತ್ತರ ಹೇಳಲಿಲ್ಲವಲ್ಲ. ಒಮ್ಮೊಮ್ಮೆ ಹೀಗೇ ತಾನೆ? ಮಿದುಳು ಕೆಲಸವನ್ನೇ ಮಾಡುವುದಿಲ್ಲ. ಅಥವಾ ವ್ಯತಿರಿಕ್ತವಾಗಿ ಕೆಲಸ ಮಾಡುತ್ತದೆ. ಇಲ್ಲವಾದರೆ ಸೀದಾ ಹುಡುಗಿಯೇನೂ ನಾನಲ್ಲ. ಸತ್ಯಂಭಟ್ಟೆಯಂತೆ ಯಾಕೆ ಪೂರ್ತಿ ನಿಜ ಹೇಳಬೇಕಿತ್ತು?
“ನಾನು ಬರುತ್ತೇನೆ ನಡೆ. ಒಬ್ಬಳೇ ಹೋಗುತ್ತಾಳಂತೆ….ಒಬ್ಬಳೇ….!”
“ಇಲ್ಲ ಇಲ್ಲ ಚಿಕ್ಕಮ್ಮ. ಸುಮ್ಮನೆ ಹೇಳಿದೆ. ಪುಕ್ಕಿ ನಾನೆಲ್ಲಿ ಒಬ್ಬಳೇ ಹೋಗುತ್ತೇನೆ? ನಾವು ನಾಲ್ಕೈದು ಜನ ಸ್ನೇಹಿತೆಯರು (ಸ್ನೇಹಿತರು ಎಂದರೆ ಮತ್ತೆ ‘ಬರುತ್ತೇನೆ’ ಎಂದಾಳು) ಒಟ್ಟಾಗಿ ಹೋಗಿಬರುವುದು. ಒಬ್ಬಳೇ ತಿರುಗುವ ಧೈರ್ಯ, ಸಧ್ಯ, ನನಗೆ?”
*
*
*
“ಬೇಗ ಬಾ. ನಾಲ್ಕು ದಿನಗಳಿಗಿಂತ ಹೆಚ್ಚು ಇರಬೇಡ.”-ಕೂಗಿ ಹೇಳಿದಳು ಚಿಕ್ಕಮ್ಮ.
ಇದು ಎಷ್ಟನೆಯ ಸಲವೋ.

ತಿರುವಿನಲ್ಲಿ ಆಟೋದಿಂದ ಇಣುಕಿದರೆ ಒಳಗೆ ಹೋಗದೆ ಗೇಟಿನ ಬಳಿ ನಿಂತೇ ಇದ್ದಳು. ಪ್ರೀತಿಯಿಂದ ಜೋಪಾನ ಮಾಡುವ ಚಿಕ್ಕಮ್ಮ. ಪ್ರೀತಿಯ ಚಿಕ್ಕಮ್ಮ, ಪ್ರೀತಿ ವಿಷ ಮಾಡಬೇಡವೆ….ದೂರ ಹೋಗುತ್ತಿದ್ದಂತೆ ಅವಳ ಬಗ್ಗೆ ಮನಸ್ಸು ಮೃದುಗೊಳ್ಳುತ್ತ ಹೋಯಿತು. ಒಂದೇ ಒಂದು ದಿನ ಬೇಸರ ಮಾಡಿಕೊಳ್ಳದೆ ಒಂದೂ ಬಿರು ನುಡಿಯದೆ ಒಂದು ದಿನವೂ ಬಸ್ಸು ತಪ್ಪಿಸದೆ ಹೊತ್ತುಹೊತ್ತಿಗೆ ಸರಿಯಾಗಿ ತಿಂಡಿ ಅಡಿಗೆ ಮಾಡಿ ಹಾಕಿದಳಲ್ಲ! ಕಾಯುವ ಕೆಲಸವೊಂದನ್ನು ಬಿಟ್ಟಿದ್ದರೆ…
ಮತ್ತೆ ಇಣುಕಿದೆ. ಇನ್ನೂ ನಿಂತೇ ಇದ್ದಳು. ಅರೆ! ತಬ್ಬಲಿ ಕರುವಿನ ಹಾಗೆ ಕಾಣುತ್ತಿದ್ದಾಳೆ! ಮನಸ್ಸು ತನ್ನ ಮೂಗಿನ ನೇರಕ್ಕೇ ಎಲ್ಲವನ್ನೂ ನೇಯುತ್ತಾ ಹೋಗುತ್ತಿಲ್ಲ ತಾನೆ?
*
*
*
ನಾಲ್ಕು ದಿನವೆಂಬುದು ನಾಲ್ಕು ಗಳಿಗೆಯಂತೆ ದಾಟುತ್ತಿದೆ. ಪ್ರಕೃತಿ ಸಾನ್ನಿಧ್ಯವೆಂಬುದೇ ಹಾಗೆಯಷ್ಟೆ. ಕಾಲಬಾಧೆಯಿಂದ ಮುಕ್ತವಾದದ್ದು. ಬಾಡಿದ ಜೀವಕ್ಕೆ ಹೊಸ ಉಸಿರು ಜೋಡಿಸುವಂತಹದು. ಮತ್ತೆ ಜಗತ್ತಿಗೆ ಮರಳಿ ಜೀವನದೆದುರು ನಿಲ್ಲಲು ಕೈಕಾಲಿಗೆ ತ್ರಾಣ ನೀಡುವಂಥದು. ಕಳಸ ಹೊರನಾಡು ಸುತ್ತಮುತ್ತಣ ಪ್ರಾಕೃತಿಕ ನಿಲುವೇ ಈ ರೀತಿಯದು! ಜೊತೆಗೆ ಕ್ಯಾಮರಾ ಇತ್ತು. ನೋಡಿ ಗ್ರಹಿಸುವುದಷ್ಟೇ ಅಲ್ಲ; ಮನಸ್ಸನ್ನೂ ಕ್ಯಾಮರಾ ಆಲಿಸುತ್ತದೆ ಎಂಬುದು ಅರಿವಾಗಲು ಅದರ ಜೊತೆಗೆ ಒಬ್ಬರೇ ತಿರುಗಾಟ ಹೊರಡಬೇಕು…..ವೃಂದಾ, ಹೀಗೆಲ್ಲ ಹೇಳಿದರೆ, ಏನೆಂದಾಳು? ‘ಸರಿಯೆ. ನನಗೂ ಒಂದು ಕ್ಯಾಮರಾ ತೆಗೆಸಿಕೊಡು ಮತ್ತೆ!’ ಎಂದಾಳು. ಹಾಂ ಹಾಂ ಹುಡುಗೀ, ಒಂದು ಕ್ಯಾಮರಾ ತೆಗೆದುಕೊಳ್ಳಲು ನಾನೆಷ್ಟು ಆಸೆಪಟ್ಟೆ. ಕೊಂಡುಕೊಳ್ಳಬೇಕಾದರೆ ನನಗೇ ಕೆಲಸ ಸಿಗಬೇಕಾಯಿತು……ಇನ್ನೂ ನಾನು ತೆಗೆದುಕೊಂಡಿದ್ದು ಅಪ್ಪನಿಗೆ ಗೊತ್ತಿಲ್ಲವೇ. ಗೊತ್ತಾದರೆ ಅದೇ ರಾಮಾಯಣವಾಗುತ್ತದೆ. ದುಡ್ಡೆಲ್ಲ ಫಿಲ್ಮಿಗೆ ಹಾಕಿ ದಂಡಮಾಡುತ್ತಾಳೆ, ಮದುವೆಗೆ ಉಳಿಸುವುದಿಲ್ಲ ಅಂತೆಲ್ಲ, ಗೊತ್ತಲ್ಲ? ವೃಂದಾ, ನಿನಗೆ ಹಾಗಲ್ಲ. ಕೆಲ ತಿಂಗಳು ಹೋಗಲಿ. ನಾನೇ ಒಂದು ಕ್ಯಾಮರಾ ತೆಗೆಸಿಕೊಡುತ್ತೇನೆ. ಒಂದು ಕಂಡಿಶನ್. ನೀನು ಸಂಪಾದನೆಗಿಳಿದ ಮೇಲೆ ನೀನು ಇನ್ನೊಬ್ಬಳಿಗೆ ತೆಗೆಸಿಕೊಡಬೇಕು……ಒಂದು ಹದದಲ್ಲಿ ಫೋಟೋ ತೆಗೆಯುವ ಅಭ್ಯಾಸ ಮಾಡಿಕೋಬೇಕು…….ಕ್ಯಾಮರಾ ಕೇಳುತ್ತಿತ್ತು, ನಗುತ್ತಿತ್ತು. ನಡುನಡುವೆ ಕ್ಲಿಕ್‌ಕ್ಲಿಕ್ ಎನ್ನುತ್ತಿತ್ತು. ದೃಶ್ಯ-ದೃಶ್ಯಾರ್ಥ ಗ್ರಹಿಸುವಂತೆ ಒಳಮನಸ್ಸಿನಲ್ಲಿ ಮಾತು-ಮಾತಿನ ಪದಾರ್ಥವನ್ನು ಗ್ರಹಿಸಿದೆ ಎನ್ನುವಂತೆ……

ನಾಲ್ಕು ದಿನ ಹಾರಿದ್ದೇ ತಿಳಿಯಲಿಲ್ಲ. ದಿನಗಳು ಹಕ್ಕಿಯಂತೆ ಹಾರುತ್ತವಲ್ಲ! ರೆಕ್ಕೆ ಕಾಣಿಸದೆ, ಪಟಪಟ ಕೇಳಿಸದೆ. ದಿನಗಳು ಹಾರುವ ಪರಿಯೇ ಕಾವ್ಯ. ಕಾವ್ಯವೆಂದರೆ ಮತ್ತಿನ್ನೇನು? ದೈನಂದಿನ ಲೌಕಿಕದ ಒಡಲೇ.
*
*
*
ಮನೆ ತಲುಪಿದ ಮೇಲೆ ರೂಮೋ ಹಾಸ್ಟೆಲೋ ವ್ಯವಸ್ಥೆ ಮಾಡಿಕೊಳ್ಳುವುದು. ಚಿಕ್ಕಪ್ಪ ಚಿಕ್ಕಮ್ಮರೊಡನೆ ನಿಧಾನವಾಗಿ ಹೇಳಬೇಕಾದ್ದು ಹೇಳಿ ಪೆಟ್ಟಿಗೆ ಕಟ್ಟುವುದು. ಬೇಡವೆಂದರೆ ಕೇಳಲು ಸಣ್ಣ ಹುಡುಗಿಯೇನಲ್ಲವಲ್ಲ ನಾನು? ಯಾರ ಮನೆಯಲ್ಲಿದ್ದರೂ ಒಂದೋ ನಮ್ಮ ಸ್ವಾತಂತ್ರ್ಯ ಹಾನಿ ಇಲ್ಲ, ಅವರ ಸ್ವಾತಂತ್ರ್ಯ ಹಾನಿ ಅಂತ ಇಷ್ಟು ದೊಡ್ಡವರಾದ ನಿಮಗೂ ತಿಳಿಯುವುದಿಲ್ಲವೇನಪ್ಪಾ ಅಂತ ಅಪ್ಪನನ್ನೇ ಕೇಳಿ ತುಸು ಎಚ್ಚರ ಹುಟ್ಟಿಸಬೇಕು. ಎಚ್ಚರಾಗುವಂತೆ ಮಾತಾಡಲು ಇನ್ನೂ ಬರದಿದ್ದರೆ!
ಬಂದಿಳಿಯುವಾಗ ಸಂಜೆಯಾಗಿತ್ತು.

“ಬಂದರಲ್ಲ ಅಮ್ಮ!”-ಕಲ್ಯಾಣಿಯ ಸ್ವರ ಕೇಳಿಸಿತು. ಆಟೋದವನಿಗೆ ದುಡ್ಡು ಕೊಟ್ಟೂ ಇತ್ತ ತಿರುಗುತ್ತೇನೆ, ಚಿಕ್ಕಮ್ಮ. ಮೆಟ್ಟಿಲಿಳಿದು ಬರುತ್ತಿದ್ದಾಳೆ. ಬಾಗಿಲು ದಾರಂದಕ್ಕೆ ಎರಡೂ ಕೈ ಆನಿಸಿ “ಹೋ ಬಂದೆಯಾ?” ಎಂದರು ಚಿಕ್ಕಪ್ಪ. ಅವರ ಪಟ್ಟಿಯೊಳಗಿನ ಒಂದು ಪ್ರಶ್ನೆ! ನಗೆ ಬಂತು. ಅವರೂ ನಗುತ್ತಿದ್ದಾರೆ!….ವ್ಹಾರ್ರೆ ವ್ಹಾ! ಏನು ಸರದಾರ ನಗೆ! (ವೃಂದಾಳ ಮಾತು ಕೇಳಿ ಕೇಳಿ ಖಿಲಾಡಿಯಾಗಿದೆ ಮನಸ್ಸು. ತಿಳಿಯುವುದಿಲ್ಲವೆ ನನಗೆ? ಅದರ ಕುಚೋದ್ಯಕ್ಕೆ ಗಮನವೇ ಕೊಡಬಾರದು. ಏನಂತಹ ಸರದಾರ ನಗೆ ಇದೆ ಅದರಲ್ಲಿ? ಚಿಕ್ಕಪ್ಪ ಗೆಲುವಾಗಿದ್ದಾರೆ. ತುಸು ಕಣ್ಣಿಗೆದ್ದು ಕಾಣುವಂತೆ- ಅಷ್ಟೇ.)

“ಕಲ್ಯಾಣೀ, ಅವಳ ಬ್ಯಾಗು ತಗೋ. ಒಳಗಿಡು.” ಎಂದಳು ಚಿಕ್ಕಮ್ಮ. ಸಂಜೆಗತ್ತಲಿಗೆ ಮ್ಲಾನತೆಯ ಗುಣವಿದೆಯೇ?….ತಲೆ ಕೀಸಿ ಬಾಚಿಕೊಂಡು ಹೂ ಮುಡಿದು ನಿಂತ ಚಿಕ್ಕಮ್ಮ…..ಚಿಕ್ಕಮ್ಮನಾಗಿರಲೇ ಇಲ್ಲ!” ಬಾ….ಬಾ….ಅಂತೂ ಬಂದೆ!” ……ನನ್ನ ಕಣ್ಣು ತಪ್ಪಿಸುತ್ತಿದ್ದಾಳೆ! ಏನು, ಏನಿರಬಹುದು?…..ಏನಾಯಿತು ಚಿಕ್ಕಮ್ಮ….

ತಪ್ಪಿಸಿಹೊರಳುತ್ತಿದ್ದ ಅವಳ ಕಣ್ಣು ನನ್ನನ್ನು ಚುರುಕಾಗಿ ದಾಟಿ ಹೋಗುತ್ತಿತ್ತು. ಅದು ಹಾದು ಹೋಗುವುದರೊಳಗೆ ಕಂಡ ಚೂರು ಚೂರಿನಲ್ಲಿಯೇ ದೃಷ್ಟಿ ನೆಟ್ಟು ನೋಡಿದೆ. ಅಲ್ಲಿ- ಚಿಕ್ಕಮ್ಮ ಇರಲೇ ಇಲ್ಲ! ಅಲ್ಲಿರುವವಳು ಅವಳಲ್ಲ…..ಚಿಕ್ಕಮ್ಮನಲ್ಲ!…..ಬಳಲಿದ ವೇಶ್ಯೆಯಂಥವಳು! ಇಷ್ಟು ದಿನ ಈಕೆ ನನಗೇಕೆ ಕಾಣಿಸಲಿಲ್ಲ? ಈ ನಾಲ್ಕೇ ದಿನಗಳಲ್ಲಿ ಪ್ರತ್ಯಕ್ಷಳಾದಳು ಎಲ್ಲಿಂದ?
ವರದಿಗಾರ್ತಿ ಗಡಬಡಿಸಿ ಎಚ್ಚರಾದಳು.
“ಬಾ….ಒಳಗೆ ಬಾ…..ತಿರುಗಾಟ ಚೆನ್ನಾಗಾಯ್ತ?”-ಕೈ ಹಿಡಿದು ಮೆಟ್ಟಲನ್ನೇರಿದಳು ಚಿಕ್ಕಮ್ಮ. “ಅಂತೂ……ಬಂದೆಯಲ್ಲ!”
“……….”
“ಯಾಕೆ, ಮಾತಾಡುತ್ತಿಲ್ಲ? ಆಯಾಸವ? ಜ್ಯೂಸ್ ಮಾಡಿಟ್ಟಿದ್ದೇನೆ, ಕುಡಿದು…..ಒಂದು ಸ್ನಾನ ಮಾಡಿ…..” ಆಕೆ ಹೇಳುತ್ತಾ ಒಳಬಂದಂತೆ, ವರದಿಗಾರ್ತಿ ತಟಸ್ಥ ಯೋಚಿಸುತ್ತಿದ್ದಳು.
ವರದಿ ಮಾಡುವ ಗಳಿಗೆ ಈಗ ಬಂದಿದೆ…..ಚಿಕ್ಕಮ್ಮಾ ಹೇಗೆ ಮಾಡಲಿ?…..ನಿಮ್ಮಿಬ್ಬರಲ್ಲಿ ಯಾರನ್ನು ಕುರಿತು?…….ಯಾರಿಗೆ?
‘ಪ್ರೀತಿಯ ವೃಂದಾ, ನಿನಗೆ ಸಿಕ್ಕಿದ್ದೆಲ್ಲ ನಿಗೆಟಿವ್ ಮಾತ್ರ. ಪೊಸಿಟಿವ್ ಕಂಡದ್ದು ನಾನು. ನಾನಿನ್ನು ಚಿಕ್ಕಮ್ಮನನ್ನು ಬಿಟ್ಟು ಹೋಗುವುದಿಲ್ಲ. ಕೊನೇಪಕ್ಷ ವರ್ಗವಾಗುವವರೆಗಾದರೂ.
-ಪ್ರೀತಿಯ ಅಕ್ಕ, ನೀನು ಮಂದಮತಿ.
-ನಾನಲ್ಲ, ನೀನು.
-ಅಲ್ಲ, ನೀನು!
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.