ಚಕೋರಿ – ೩

ಅದಕ್ಕೇ ಹೇಳಿದೆ: ಯಾರಾದರೊಬ್ಬರು
ಕಾಯಬೇಕಿದೆ ನಿನ್ನ ತೋಟವ. ಅದಕ್ಕೇ
ಎಲ್ಲಿದ್ದರೆ ಅಲ್ಲಿಂದ
ಮಗನೇ ನೀ ಬೇಗನೆ ಬಾ-
-ಎಂದು ಹೇಳುತ್ತ ಮಣ್ಣಿನಾಟಿಗೆಯ ಹಿಡಿದುಕೊಂಡು ಗೋಳು ಗೋಳೆಂದತ್ತಳು ಅಬ್ಬೆ. ಕೈಯಲ್ಲಿ ಆಟಿಗೆಯಾಯ್ತು. ದಿನಾ ಕಣ್ಣಲ್ಲಿ ಕಂಬನಿಯಾಯ್ತು.
ಎಷ್ಟು ದಿನ ಕಾದರೂ ಮಗ ಬಾರದೆ, ನೀರು ತುಂಬಿದ ಕಣ್ಣಲ್ಲಿ ಆಟಿಕೆಗಳು ಕಾಣದೆ ನೀರಲ್ಲಿ ತೇಲಿಬಿಟ್ಟ ದೀಪದ ದೊನ್ನೆಯಂಥ ಕಣ್ಣಿಂದ ಮಗನ ದಾರಿ ನೋಡಿದಳು ಅಬ್ಬೆ :
ಬಾಳೋ ಭಕ್ತಳಿಗೊಂದು ವ್ಯಾಳ್ಯಾವು ಬಂದರೆ
ಕಾಯೋರ್‍ಯಾರೋ ಶಿವನೆ ನಿನ್ನ ಬಿಟ್ಟು?
ಒಳ್ಳೆಯ ಸಂಗತಿಗಳನ್ನ ನೆನಪಿಟ್ಟುಕೊಳ್ಳೋನೇ,
ಕೆಟ್ಟ ಸಂಗತಿಗಳನ್ನ ಮರೆಯೋನೇ,
ಹರಕೆಯ ಬೀಸು ಬಲೆಗೆ ಸಿಕ್ಕಲಾರದ ಶಿವನೇ,
ಅಣುಗಳನ್ನ ಕಳಿಸೊ ಎಂದು-
ಕುಲದೇವರು ನನ್ನ ಪಾಲಿಗಿಲ್ಲದಂಗಾಯ್ತು
ಮನೆದೇವರು ಮರೆತು ಹೋಯ್ತು
ಮನೆ ಜ್ಯೋತಿ ಬೆಳಗಿಸಬೇಕೆಂಬೋ ಬುದ್ದಿ
ನಿನಗಾದರೂ ಬ್ಯಾಡ್ವೇನೇ ಬೆಟ್ಟದ ಮಾಯೀ ಎಂದು,
ನರಲೋಕ ಸುರಲೋಕಗಳ
ಜಬರ್‍ದಸ್ತ್ ಆಳುವ ಶಿವನೇ,
ಮಗನೆಲ್ಲಿ ಅಂತ ನಿನಗೂ ಗೊತ್ತಿಲ್ಲವೇ?
ಗೊತ್ತಿದ್ದೂ ಪಂತಪರೀಕ್ಷೆ ಮಾಡದೆ
ಮಗನ್ನ ಕಳಿಸೋ ಮಾದೇವಾ ಎಂದು
ದಿನದಿನಕ್ಕೆ ಹೊಸ ಹೊಸ ಕಣ್ಣೀರನತ್ತಳು ಅಬ್ಬೆ.
ಸುತ್ತೂದೈವಂಗಳಿಗೆ ಹರಕೆ ಹೊತ್ತದ್ದು, ಉರುಳು ಸೇವೆ ಪಂಜಿನ ಸೇವೆ ಮಾಡಿದ್ದು, ಬೇಕಾದಷ್ಟು ದೂಪ ದೀಪ ಉರಿಸಿದ್ದು ಎಲ್ಲವೂ ವ್ಯರ್ಥವಾಯಿತು. ಹಾದಿ ಸಿಕ್ಕಿದ್ದರೆ ಕೈಲಾಸಕ್ಕೂ ಹೋಗಿ ಶಿವನ ಕೈಕಾಲು ಕಟ್ಟುತ್ತಿದ್ದಳು. ಆಗಲೂ ಮಗ ಬಾರದೆ ಇಂತೆಂಬ ಕಷ್ಟನಿಷ್ಠೂರ ಹೆಂಗೆ ತಾಳಿಕೊಳ್ಳಲೋ ಶಿವನೇ ಎಂದು ಮಂಡೆಯ ಮ್ಯಾಲೆ ಕೈಹೊತ್ತು ಕುಂತಿರುವಲ್ಲಿ ಹುಸಿಹೋಗದ ಹೊಸ ಮದ್ದೊಂದು ನೆಪ್ಪಾಯಿತು ನೋಡು, ಅವಳೇ ಸೈ ಎಂದು ಮಂಗಳವಾರದ ಅಮಾವಾಸ್ಯೆ ಸಪ್ಪಟು ಸರಿ ರಾತ್ರಿ ಮಾರಿಮಸಣಿ ಭೂತಪಿಶಾಚಿ ಅಡ್ಡಾಡೋ ಹೊತ್ನಲ್ಲಿ ತಣ್ಣೀರು ಮಿಂದು, ತಣ್ಣನೆ ದಟ್ಟಿ ಉಟ್ಟು, ಬುಟ್ಟಿ ತುಂಬ ಹಸಿರು ಸೆಗಣಿ, ಗಡಿಗೆ ತುಂಬ ಮೆಣಸಿನ ನೀರು ತಗೊಂಡು ಹಟ್ಟಿಯ ಹೊರಗಿನ ಯಕ್ಷಿಯ ಗುಡಿಗೆ ಹೋದಳು ಅಬ್ಬೆ.
ಹೋಗಿ, ಸೆಗಣಿಯಲ್ಲಿ ಮೆಣಸಿನ ನೀರು ಹುಯ್ದು ಗಂಜಳ ಮಾಡಿ ಯಕ್ಷಿಯ ಶಿಲಾಮೂರ್ತಿಯ ಮುಖಕ್ಕೆ ಬಡಿದು ಡಬ್ಬು ಮಲಗಿಸಿ-
ಎಲಗೆಲಗೇ ಸೋಗಲಾಡಿ ದೇವೀ,
ಹಾಡಿಯ ಬಲ್ಲವಳು ಹಟ್ಟಿಯ ಬಲ್ಲವಳು
ಕಾಡು ನೋಡಿಕೊಂಬೋಳು, ಗೂಡು ನೋಡಿಕೊಂಬೋಳು
ಮುಗಿಲಿನ ಆಚೆ ಬಲ್ಲವಳು ಈಚೆ ಬಲ್ಲವಳು
ಮಗ ಎಲ್ಲಿ ಹೋದ ಅಂಬೋದು
ನಿನಗೆ ಗೊತ್ತಿಲ್ಲ ಅಂದಮ್ಯಾಕೆ
ನೀನ್ಯಾಕೆ ವೈನಾಗಿರಬೇಕು?
ಮಗ ನಿನ್ನ ಪೂಜೆ ಮಾಡಲಿಲ್ಲವ?
ಚಾಕರಿ ಮಾಡಲಿಲ್ಲವ?
ತಪ್ಪು‌ಒಪ್ಪುಗಳ ತೂಕ ಮಾಡೋಳಲ್ಲವ ನೀನು?
ನಿನ್ನ ನಂಬಿದ ನಂಬಿಕೆ ಏನುಳಿಸಿಕೊಂಡೆ?
ನಿನಗ್ಯಾಕೆ ಇನ್ನುಮ್ಯಾಕೆ ಪೂಜೆಪುನಸ್ಕಾರ?
ಇಂದು ಮಂಗಳವಾರದಿಂದ
ಇನ್ನೊಂದು ಮಂಗಳವಾರದವರೆಗೆ- ಮುದ್ದುತು ಕೊಟ್ಟೆ. ಅಷ್ಟರೊಳಗೆ,
ದಿಕ್ಕು ದೇಶಾಂತರ ಹೋದ ಮಗ ಬಂದರೆ ಗುಡ್ಡುಬಿಡ್ತೀನಿ
ಬರದಿದ್ದರೆ ನಿನಗಿದೇ ಗತಿ.
-ಎಂದು ಉರಿಮಾತುಗಳ ಸುರಿದು ಮುದಿಕಿ ಯಕ್ಷಿಯ ಶಿಲಾಮೂರ್ತಿಯ ಬೆನ್ನಿಗೂ ಸೆಗಣಿ ಗಂಜಳ ಸುರಿದು, ಹೊರಬಂದು ಗುಡಿಯ ದ್ವಾರ ಬಾಗಿಲಿಗೆ ಮುಳ್ಳಿನ ಬೇಲಿಯ ಬಿಗಿದು ಬೆಳ್ಳಿ ಮೂಡಿ ಬೆಳಗಾಗೋ ಹೊತ್ತಿಗೆ ಹಾಡಿಗೆ ಬಂದಳು.

೨೩. ಆಕಾಶಕ್ಕೆ ಉರಿ

ಲೋಕ ಲೌಕಿಕದಲ್ಲಿ ಅಬ್ಬೆ ಈ ಪರಿ ಯಕ್ಷಿಗೆ ಶಿಕ್ಷೆ ಮಾಡಿದೇಟ್ಗೆ ಆಕಾಶವೆಂಬ ಬಯಲ ಅರಮನೆಗೆ ಉರಿ ತಾಗಿತು ನೋಡು!
ಮೇಲು ಮಿರಿಲೋಕದ ಏಳುಪ್ಪರಿಗೆ ಮ್ಯಾಲೆ ಕೊಳಲುಲಿಯ ಮತ್ತಿನಲ್ಲಿ ಸೊಗದಿಂದ ಮಲಗಿದ್ದ ನಮ್ಮ ಕಿವಿಯಲ್ಲಿ ಯಾರೋ ಸಿಡಿಲು ಸಿಡಿಸಿದಂತಾಗಿ ಸ್ವಪ್ನಂಗಳಾದ ನಾವೇ ದುಃಸ್ವಪ್ನ ಕಂಡ ಮಕ್ಕಳಂತೆ ಚಂಗನೆ ನೆಗೆದು ನಿಂತೆವು. ಭೀತ ಬೆರಗಿನಲ್ಲಿ ನೋಡಿದರೆ ಶಿವ ಶಿವಾ-
ಮೆಣಸಿನ ನೀರಿನ ಕಾರದುರಿ
ಸೆಗಣಿಗಂಜಳದ ಅವಮಾನದುರಿಗಳಿಂದ
ಯಕ್ಷಿ ಹೊತ್ತಿಕೊಂಡುರಿಯುತ್ತಿದ್ದಾಳೆ ಪಂಜಿನಂತೆ!
ಉರಿ ಉರಿ ಎಂದು ಕಿರುಚುತ್ತ
ಮೈ ಪರಚಿಕೊಳ್ಳುತ್ತ
ನಿಲ್ಲದೆ ಕೂರದೆ ನೆಗೆದಾಡುತ್ತ
ತಾರಾಮಾರು ಹಾರ್‍ಯಾಡುತ್ತಿದ್ದಾಳೆ ಯಕ್ಷಿ ಮಿಂಚಿನಂತೆ!
ಬೆಳ್ದಿಂಗಳು ಸೂಸುವ ಅವಳ ಮುಖ ಮೈಗಳಿಗೆ ಸೆಗಣಿ ಗಂಜಳವಂಟಿದೆ! ಶಿವನೇ ಇದೇನಾಗಿದೆಯೆಂದು ಕಂಗಾಲಾಗಿ ನಿಂತಿದ್ದಾನೆ ಚಂದಮುತ್ತ! ಶಕ್ತಿಗುಂದಿ ಬಾಯೆಂಜಲೊಣಗಿ, ಮಾತು ಬಾರದೆ ಕೈಬಾಯಿ ಸನ್ನೆಯಲಿ ಯಾಕೆಂದು ಏನೆಂದು ಕೇಳಿದ್ದಕ್ಕೆ ಉತ್ತರ ಕೊಡದೆ ಮೈಯಲ್ಲಿ ಆವೇಶವಾದವರಂತೆ ನೆಗೆದಾಡುತ್ತಿದ್ದವಳ ಸಂತವಿಸಲೆಂದು ಸಮೀಪ ಹೋದರೆ “ಮುಟ್ಟಿದರೆ ಕೆಟ್ಟೀಯಾ”- ಎಂದು ಆಕಾಶ ಹರಿವಂತೆ ಕಿಟಾರನೆ ಕಿರಿಚಿ ಎಚ್ಚರಿಸಿದಳು ಯಕ್ಷಿ. ಅವಳ ಮಾತೆಲ್ಲ ಬೆಂಕಿ ಹೊಳೆ, ಕಣ್ಣೆಲ್ಲ ಉರಿಯ ಮಳೆ. ಇಂಪಿರದ ಅವಳ ಮಾತಿಗೆ ಕಂಪಿಸಿತು ಚಂದಮುತ್ತನ ಕಾಯ. ಬೆವರು ಜಲದಿಂದ ನೆಲ ತೊಯ್ದವು. ಏನು ಮಾಡಲೂ ತೋಚದೆ ನಮ್ಮಪ್ಪ ಶಿವನೇ ಕಾಪಾಡೆಂದು ಕರುಳು ಕಿತ್ತು ಬಾಯಿಗೆ ಬರುವಂತೆ ಎದೆ ಬಾಯಿ ಬಡಕೊಂಡು ಒದರಿ ಅಳುತ್ತಿದ್ದಾನೆ ಚಂದಮುತ್ತ.
ಆನಂದಗಳನುಂಡು ಬೆಳೆದ ಚಕೋರಿಯ
ಮುಖದರ್ಶನದಿಂದ ಸಂತೋಷವಾಗುತ್ತಿದ್ದ ನಮಗೆ
ಅವಳ ಕರಾಳ ಮುಖ ನೋಡಿ
ಕರುಳು ಹೊಸಕಿದ ಹಂಗಾಯ್ತು.
ಸರ್ವನಾದಂಗಳ ದೇವಿ
ಈ ಪರಿ ಅಪಸ್ವರದಲ್ಲಿ ಕಿರಿಚಿದ್ದನ್ನು ನಾವೆಂದೂ ಕೇಳಿರಲಿಲ್ಲ.
ಕೇಳಿಸಿಕೊಂಡ ಆಲದ ಅರಮನೆ
ಬೇರು ಸಮೇತ ಥರಾಥರ್‍ನೆ ನಡುಗಿದ್ದ ಕಂಡೆವು.
ನೋವು ತಾಳದೆ ಚಕೋರಿ ಎಂಬ ಯಕ್ಷಿ
ವಿಕಾರವಾಗಿ ಒದರಿ
ಧಾರಾವತಿ ಕಣ್ಣೀರು ಜಲವ ಸುರಿಸಿದಳು.
ಹಸ್ತಗಳಿಂದ ಮೈಮುಟ್ಟಿಕೊಳ್ಳದೆ, ಸುಮ್ಮನಿರಲೂ ಆಗದೆ
ಏಳೇಳು ಲೋಕದ ಸಂಕಟ ಪಟ್ಟಳು.
ತುಟಿ ಕಚ್ಚಿ ಕಣ್ಣುಮುಚ್ಚಿ
ನೋವಿಗೆ ಗುರಿಯಾದ ಮೃದು ಮೈಯ್ಯನ್ನ
ಕಲ್ಲಾಗಿಸಿ ಕಬ್ಬಿಣವಾಗಿಸಿ
ಕೊನೆಗೆ ವಜ್ರವಾಗಿಸಿ
ನೋವು ತಾಳಿಕೊಳ್ಳಲು ಯತ್ನಿಸಿದಳು.
ಶಿವನ ಜೊತೆ ವಾದ ಮಾಡುತ್ತಿರುವಂತೆ
ತನಗಾದ ದ್ರೋಹದ ಬಗ್ಗೆ
ಸಾರಿ ಸಾರಿ ತಕರಾರು ಹೇಳುತ್ತಿರುವಂತೆ
ಆಕಾಶದ ಕಡೆ ನೋಡಿ ಶಿವದುಃಖ ಮಾಡಿದಳು.
ನಿಜ ಹೇಳಬೇಕೆಂದರೆ
ಹೂವಿನಂಥ ಅವಳ ಮನಸ್ಸಿಗೂ
ಕೋಪದಲ್ಲಿ ಕುದಿಯುತ್ತಿದ್ದ ಅವಳ ಆಲೋಚನೆಗಳಿಗೂ
ಹೊಂದಾಣಿಕೆಯಿರಲಿಲ್ಲ.
ಬೆಳ್ದಿಂಗಳಂಥ ಯಕ್ಷಿ
ಇಂತೀಪರಿ ಕೊತ ಕೊತ ಕುದಿಯುವುದೆಂದರೇನು?
ಕುದಿಯೋ ಬೆಳ್ದಿಂಗಳನ್ನ ಯಾರಾದರೂ ಕಂಡಿದ್ದೀರಾ?
ಅಳ್ಳೆ ಅರಳಿವೆ, ಕೋಪಗೊಂಡ ಗೂಳಿಯ ಕಣ್ಣಿನಂತೆ
ಕೆಂಡಕೆಂಡವಾಗಿವೆ ಕಣ್ಣು.
ಚಂದಮುತ್ತ ಆ ಕೆಂಡದಲ್ಲಿ
ಸುಡದ ಹಾಗೆ ನೋಡಿಕೋಬೇಕು.
ನೋಡಿದೆಯಾ ಶಿವನೆ,
ಹ್ಯಾಗೆ ಪರಚಿಕೊಳ್ಳುತ್ತಿದ್ದಾಳೆ ಹೃದಯವ?
ಯಾರನ್ನೋ ಶಪಿಸುವುದಕ್ಕಾಗಿ
ಅಧೋಲೋಕದ ಕರಾಳ ಶಬ್ದಗಳನ್ನ
ಹುಡುಕುತ್ತಿದ್ದಾಳೆ.
ಶಾಪಂಗಳು ಅವಳ ಬಾಯಿಂದ ಸಿಡಿಯುವ ಮುನ್ನ
ಸತಿಯ ಸಂತವಿಸಿರೇ.
ಇರು ಇರು ದೇವೀ
ಅನುಚಿತವ ನೆನೆಯದಿರು.
ಬುದ್ಧಿ ತಪ್ಪಿದಮೇಲೆ ಪಶ್ಚಾತ್ತಾಪ ಪಡಬೇಡ.
ಈಗಲೇ ಎಚ್ಚರಾಗು.
ಇಲ್ಲಿ ಯಾರದೂ ತಪ್ಪಿಲ್ಲ
ಪುಣ್ಯಕೋಟಿ ಹಸುವೇನು ಮಾಡೀತು
ತಪ್ಪಿಸಿಕೊಂಡ ಕರು ನಿನ್ನ ಬಳಿ ಬಂದರೆ?
ಕರುವೇನು ಮಾಡೀತು
ಹಸುವಿನ ಒಡಲ ಹಂಬಲ ತಿಳಿಯದಿದ್ದರೆ?
ನಾಡು ನರಲೋಕದ ನಡಾವಳಿ ಬಲ್ಲವಳು ನೀನು.
ಮುಂದೆ ನಡೆವ ವಿಚಾರ
ಹಿಂದೆ ನಡೆದ ವಿಚಾರ ತಿಳಿದವಳು ನೀನು,
ನೀನಲ್ಲವೇ ನಿಭಾಯಿಸಬೇಕಾದವಳು?
ಕೋಪವ ಪಳಗಿಸು ದೇವೀ.
ನಮ್ಮ ನುಡಿ ಕೇಳಿ ಸಮಾಧಾನವಾಗಿರಬೇಕು ಇಲ್ಲವೆ ಮೈಯುರಿ ಕಮ್ಮಿಯಾಗಿರಬೇಕು. ಚಕೋರಿ ಎಂಬ ಯಕ್ಷಿ ಒಂದು ಸಲ ನಮ್ಮ ಕಡೆ ದಯಮಾಡಿ ನೋಡಿದಳಷ್ಟೆ. ಇನಿಸಿನಿಸಾಗಿ ಮುನಿಸಿಳಿಯಿತು. ಮುಳ್ಳಿರಲಿಲ್ಲ ನೋಟದಲ್ಲಿ. ಹುಬ್ಬು ಗಂಟಿಕ್ಕಿದವು. ಮುಖದಲ್ಲಿ ಬೇರೆ ಬೇರೆ ಹಾವಭಾವ ಮೂಡಿದವು. ನಮಗೆ ತೋರದೆ ಮುಖ ಆ ಕಡೆ ತಿರುಗಿಸಿದಳು. ಗಾಬರಿಯಾದೆವು ನಾವು. ಈಗ ನಮಗವಳ ಗಾಯಗೊಂಡ ಬೆನ್ನು ಮಾತ್ರ ಕಂಡಿತು. ಹೇಳಿದಳು :
ಇಲ್ಲಿಂದ ಈಗಿಂದೀಗ
ತೊಲಗಲಿ ಇವನು.
ಹಿಂದೆ ಮುಂದೆ ಏನೇನೂ ಗೊತ್ತಿಲ್ಲದ ಚಂದಮುತ್ತ ಆಕಡೆ, ಈ ಕಡೆ, ಯಕ್ಷಿಯ ಕಡೆ, ನಮ್ಮ ಕಡೆ ಗಲಿಬಿಲಿಯಲ್ಲಿ ನೋಡುತ್ತ ಅಸಹಾಯಕನಾಗಿ ಅಂಗಲಾಚುವ ದೃಷ್ಟಿಗಳಿಂದ ವಿನಂತಿಸುತ್ತ ನಿಂತ. ನುಡಿದಾಡದೆ ಇಲ್ಲಿಂದ ತೊಲಗೆಂದು ನಾವು ಹಸ್ತಾಭಿನಯದಿಂದ ಹೇಳಿ ಸಪ್ಪಳಾಗದ ಹಾಗೆ ಅವನನ್ನ ಗೇಟಿನ ಕಡೆಗೆ ನಡೆಸಿದೆವು.
“ನಿಲ್ಲು”
ಎಂದಳು ಯಕ್ಷಿ ಉರಿನಾಲಿಗೆಯಿಂದ. ಅವಳಾಡುವ ನುಡಿ ಶಾಪವಲ್ಲದೆ ಬೇರೆ ಆಗಿರಲಾರದೆಂದು ಥರಥರ್‍ನೆ ನಡುಗಿ ನಾವು ಯಾಕೆಂದು ಕೇಳುವ ಧೈರ್ಯ ಮಾಡಲಿಲ್ಲ. ಅವಳೇ ಹೇಳಿದಳು :
ಇಲ್ಲಿ ನೋಡಿದ್ದು ನೋಡಿದ ಲೆಖ್ಖಕ್ಕಿಲ್ಲ
ಇಲ್ಲಿ ಕೇಳಿದ್ದು ಕೇಳಿದ ಲೆಕ್ಖಕ್ಕಿಲ್ಲ.
ಇಲ್ಲಿ ಕಂಡದ್ದನ್ನು ಕಂಡೆನೆನ್ನಕೂಡದು
ಕೇಳಿದ್ದನ್ನು ಕೇಳಿದೆನೆನ್ನಕೂಡದು
ಇದು ಮೀರಿ ಯಾವಾನಾನೊಬ್ಬನಿಗೆ ಹೇಳಿದರೆ
ಹೇಳಿದವನು ಕೇಳಿದವನಿಬ್ಬರೂ
ನಾಲಗೆ ಹಿರಿದು ಸಾಯುತ್ತಾರೆಂದು ತಿಳಿದಿರಲಿ.
ಹಿಂದಿರುಗಿ ಮಾತ್ರ ನೋಡದಿರಲಿ.
ಅವಳಾಜ್ಞೆ ಮುಗಿಯುವುದನ್ನೇ ಕಾಯುತ್ತಿದ್ದ ನಾವು ಸಧ್ಯ ಪಾರಾದೆವೆಂದು ಹಗುರು ಮನಸ್ಸಿನವರಾಗಿ ಚಂದಮುತ್ತನ್ನ ಆಲದ ಮರದಿಂದ ಕೆಳಗಿಳಿಸಿ ‘ನೇರ ನಿಮ್ಮ ಹಟ್ಟಿಯ ಯಕ್ಷಿಯ ಗುಡಿಗೆ ಹೋಗೆಂ’ದು ಕಳಿಸಿದೆವು.

೨೪. ಕೊಟ್ಟೆ ಮಗನ; ನಿನ್ನಡಿಗಿಟ್ಟೆ ಸಿಟ್ಟು ಬಿಡು

ಮೂರು ಹಗಲು ಮೂರು ರಾತ್ರಿ ನಡೆದು ಮಂಗಳವಾರ ಮಟ ಮಟಾ ಮದ್ಯಾಹ್ನ ಚಂದಮುತ್ತ ಸೀದಾ ಯಕ್ಷಿಯ ಗುಡಿಗೆ ಬಂದಾಗ ಅಲ್ಲೇನಿದೆ?
ನರಮಾನವರ ಸುಳಿವಿಲ್ಲ
ಕಾ ಎಂಬ ಕಾಗೆಯಿಲ್ಲ, ಗೂ ಎಂಬ ಗೂಗೆಯಿಲ್ಲ.
ಮಳೆ ತಪ್ಪಿ ಮೇಲುಲೋಕದ ಮೇಘದಲ್ಲೇ ಇದೆ.
ಬೆಳೆತಪ್ಪಿ ಭೂಲೋಕದ ಮಣ್ಣಿನಲ್ಲೇ ಸುಟ್ಟು ಹೋಗಿದೆ.
ಸುತ್ತೂ ಸೀಮೆಯ ಜಲ ಇಂಗಿ ನೆಲ ಬಿರಿದು
ಭಿಕೋ ಅಂತಿದೆ ಕಾಡು ನಾಡು ಒಣಗಿ.
ಯಾರೋ ಬೆಂಕಿ ಹಚ್ಚಿ,
ಈಗಷ್ಟೇ ನಂದಿದ ಹಾಂಗಿದೆ ಬಯಲು.
ಓಡ್ಯಾಡುತಾವೆ ಬಿಸಿಲುಗುದರಿ!
ಕೊತಕೊತ ಕುದಿಯುತ್ತಿದೆ ಆಕಾಲದ ಬೇಸಿಗೆ.
ಮೌನದೊಳಗೆ ಹುಗಿದ ಹಾಗಿದೆ ಜಗವು.
ಕಂದಿಬಿಟ್ಟಿದೆ ಬೆಳಕು,
ಸುರಿಯುತ್ತಾ ಇದೆ ಹಾಳು ಹಾಳು.
ಇರುವೆ ಮೊದಲು ಆನೆ ಕಡೆ ಖಗಮೃಗ ಜಾತಿಯ
ಹೆಣಗಳಲ್ಲಲ್ಲೇ ಬಿದ್ದೈದಾವೆ.
ಹಿಂಗಿರುವಾಗ ಭೂಲೋಕ ಬದುಕೋದು ಹ್ಯಾಂಗೆಂದು
ಹಳೆದೇವರು ಶಕ್ತಿಗುಂದಿದವೇ ಶಿವನೇ ಎಂದು
ಬದುಕುಳಿದಿರುವ ಜೀವಸಂಕುಲ ಚಿಂತೆ ಮಾಡುತ್ತ ಇವೆ.
ಒಳಗೆ ಇಣಕಿ ನೋಡಿದರೆ ಮೈಗೆಲ್ಲ ಸೆಗಣಿ ಗಂಜಳ ಬಡಿದ ಯಕ್ಷಿಯ ಶಿಲಾಮೂರ್ತಿ ಬೆನ್ನುಮೇಲಾಗಿ ಬಿದ್ದುಕೊಂಡಿದೆ! ಚಂದಮುತ್ತನಿಗೆ ಎಲ್ಲವೂ ವೇದ್ಯವಾಯಿತು. ಯಾರೋ ಮಾಡಿದ ತಪ್ಪಿಗೆ ತನಗೆ ನಾಯಿನರಕವಾಯಿತೆಂದು ಖಾತ್ರಿಯಾಗಿ ಕೆನ್ನೆ ಕೆನ್ನೆ ಬಡಿದುಕೊಂಡ. ಕಿವಿಗೆ ಹರಳು ಹಚ್ಚಿಕೊಂಡ. ಆಮ್ಯಾಲೆ ದ್ವಾರಬಾಗಿಲಿನ ಕೊರೆಬೇಲಿ ತೆಗೆದು ಈಚೆ ಚೆಲ್ಲಬೇಕೆಂಬಲ್ಲಿ ಅಲ್ಲೊಂದು ಮುದಿಕೋತಿ ಕೂತಂಗಿತ್ತು. ವಿಸ್ಮಯಂಬಟ್ಟು ನೋಡಿದರೆ ಓಂ ಸಾವಳಗಿ ಶಿವ ಶಿವಾ- ಒಣಗಿದ ಮಲ್ಲಿಗೆ ಬಳ್ಳಿಯ ಗೂಡಿನಲ್ಲಿ ಸುಟ್ಟ ಕಾಡಿನಂತೆ ಕುಂತಿದ್ದಾಳೆ ಪುಣ್ಯಕೋಟಿ ಲಕ್ಕಬ್ಬೆ! ಅತ್ತು ಅತ್ತು ಕಣ್ಣಿರು ಖಾಲಿಯಾದಂಗಿತ್ತು ಆಕೆಯ ಮೋತಿ. ಚಂದಮುತ್ತನ ಕರುಳು ಕಿತ್ತು ಕಣ್ಣಿಗೆ ಬಂದು ಕಣ್ಣೀರು ಜಲ ಸಣ್ಣ ತೊರೆಯಾಗಿ ಹರಿಯಿತು. ‘ಅಬ್ಬೇ’ ಎಂದೊದರಿ ಓಡಿ ಹೋಗಿ ತಬ್ಬಿಕೊಂಡ. ಕೂಗಿಗೆಚ್ಚರವಾಗಿ ಮುದುಕಿ ಕಣ್ಣು ತೆರೆಯುವುದರೊಳಗೆ ಕಂದನ ಅಪ್ಪುಗೆಯಲ್ಲಿದ್ದಳು. ಸ್ಮೃತಿಯಾಯಿತು ನೋಡು, ಕಣ್ಣು ಭಗ್ಗನೆ ಹೊತ್ತಿಕೊಂಡವು. ಮಗನ ಕಂಡಳೇ- ಕೊಚ್ಚಿ ಹೋದವು ಅವಳ ದುಃಖ ದುಗುಡಂಗಳು. “ಬಂದೆಯಾ ಕಂದಾ” ಎಂದು ಚೀರಿ ಮೈಮ್ಯಾಲೆ ಆವೇಶವಡರಿ ಏಳೇಳು ಲೋಕದ ಆನಂದಪಟ್ಟಳು. ಕಣ್ಣಿಂದ ಮಗನ ಹೀರುವಂತೆ ನೋಡಿ ತಬ್ಬಿ ತೂಪಿರಿದು ನೆತ್ತಿಯ ಮೂಸಿ ಆನಂದದ ಆವೇಶ ಹಿಂಗದೆ ಬಂದವನು ಮಗ ಹೌದೋ, ಅಲ್ಲವೋ ಎಂದು ಮತ್ತೆ ಮತ್ತೆ ನೋಡಿ ಹೌದೆಂದು ಖಾತ್ರಿಯಾಗಿ ಮತ್ತೆ ಮತ್ತೆ ತಬ್ಬಿ ಬುದಿಂಗನೆ ಎದ್ದು ‘ಬಾ ಹಟ್ಟಿಗೆ’ ಎಂದು ಕೈಪಿಡಿದು ನಡೆದಳು. ಅಷ್ಟು ದೂರ ಹೋಗಿದ್ದವಳು ಯಕ್ಷಿಯ ನೆನಪಾಗಿ ದುಡುದುಡುನೆ ಓಡೋಡಿ ಹಿಂದಿರಿಗಿ ಬಂದು ಬಾಗಿಲೆದುರು ಕೈಮುಗಿದು ನಿಂತು ‘ನಿನ್ನ ಮರೆತಿದ್ದೇ ತಪ್ಪಾಯಿತೇ ತಾಯಿ, ಭಕ್ತಿಯ ಮಾಡಲು ಮಡಿಯಾಗಿ ಬರುತ್ತೇನಿರು’ ಎಂದು ದಿಂಡುರುಳಿ ಶರಣು ಮಾಡಿ ಮಗನಿಗೂ ದಿಂಡುರುಳಲು ಹೇಳಿದಳು.
ಲಕ್ಕಬ್ಬೆಯ ಸಂತೋಷವನ್ನಾಚರಿಸಲು ಹಟ್ಟಿಯಲ್ಲಿ ಹೆಚ್ಚು ಮಂದಿಯಿರಲಿಲ್ಲ. ಇದ್ದವರೆಲ್ಲರ ಮನೆಮನೆಗೆ ಹೋಗಿ ಮಗಬಂದ ಸುದ್ಧಿಯ ಸಾರಿ ಸಾರಿ ಹೇಳಿ ಮಾತು ನಡೆಸಿಕೊಟ್ಟಳೆಂದು ಭಕ್ತಿಯಿಂದ ಯಕ್ಷಿಯ ಹೊಗಳಿ ಯಕ್ಷಿಯ ಮೀಸಲು ನಾಳೆ ಬರಬೇಕೆಂದು ಆಮಂತ್ರಣ ನೀಡುತ್ತ ಬಂದಳು. ಹಟ್ಟಿಯಾಳ್ತನವ ಮಾಡುವ ಹೆಗಡೇರಿಗೆ ಕೈಯೆತ್ತಿ ನಮಸ್ಕಾರ ಮಾಡಿ ದಯಮಾಡಿಸಬೇಕಪ್ಪ ಎಂದಳು. ಕುಲಗುರುವಿನ ಪಾದಮುಟ್ಟಿ ಧರೆಗೆ ದೊಡ್ಡವನು, ಹರಕೆಯ ನಡೆಸಿಕೊಡು ನನ್ನಪ್ಪ ಎಂದು ಬೇಡಿಕೊಂಡಳು. ಶಿಷ್ಯನ ನೋಡಿ ಕುಲಗುರು ಆನಂದದಲಿ ಮೈಮರೆತಿದ್ದರೆ ‘ಕಂದನ ಹರಸು ತಂದೆ’ ಎಂದು ಅವನ ಕೈ ತಗೊಂಡು ಬಾಗಿದ ಮಗನ ನೆತ್ತಿಯ ಮ್ಯಾಲಿಟ್ಟಳು.
ಮಾರನೆ ದಿನ ಬೆಳ್ಳಿ ಮೂಡುವ ಮೊದಲೆ ಸಿರಿಲಕ್ಕಬ್ಬೆ ಮತ್ತು ಚಂದಮುತ್ತ ತಣ್ಣೀರು ಮಿಂದು ಮೈಲಿಗೆ ಕಳೆದು ಒದ್ದೆ ಮಡಿಯುಟ್ಟರು. ಹರಕೆಯ ಸಾಮಾನು ಸರಂಜಾಮು ಸಜ್ಜುಮಾಡುವಲ್ಲಿ ಬೆಳ್ಳಂಬೆಳಕಾಗಿ ಸಕಲ ಜನ ಕುಲಗುರು ಹೆಗಡೇರ ಸಮೇತ ಯಕ್ಷಿಯ ಗುಡಿಗೆ ಬಂದರು. ಗುಡಿಸಿ ಗುಡಿಯಂಗಳ ಸೆಗಣೆ ಸಾರಣೆ ಮಾಡಿ ಗಂಧದ ನೀರು ಸಿಂಪಡಿಸಿ ರಂಗೋಲಿ ಬರೆದರು ತಾಯಿ ಮಗ.“ನಿನ್ನಿಂದಧಿಕ ದೇವರಿಲ್ಲ ಬಿಡು” ಎಂದು ನೂರೆಂಟು ಗುಣಗಳಿಂದ ಯಕ್ಷಿಯ ಹೊಗಳುತ್ತ ಹಸುಗೂಸನ್ನ ಎರೆವಂತೆ ಯಕ್ಷಿಯ ಮೂರ್ತಿಯ ತೊಡೆಯ ಮ್ಯಾಲೆ ಚೆಲ್ಲಿಕೊಂಡು ಸಣ್ಣ ಯಕ್ಷಿಯ ಪಾತಾಳ ಗಂಗೆಯ ತಣ್ಣೀರಲ್ಲಿ ತೊಳೆದಳು ಅಬ್ಬೆ. ಆಮ್ಯಾಲೆ ಎಣ್ಣೆ, ಬೆಣ್ಣೆ, ತಿಳಿದುಪ್ಪದಲ್ಲಿ ಎರೆದು ನೂರೊಂದು ಚೊಂಬು ಬಿಸಿನೀರಲ್ಲಿ ಸೀಗೆಯಿಂದೊಮ್ಮೆ ಶುದ್ಧ ಮಾಡಿದಳು. ಸಾಬೂನಿನಿಂದೊಮ್ಮೆ ಶುದ್ಧ ಮಾಡಿದಳು. ಬೆನ್ನುಜ್ಜಿ ಮೈಯುಜ್ಜಿ ಕೈಕಾಲು ಮುಖ ತಿಕ್ಕಿ ತಿಕ್ಕಿ ತೊಳೆದಳು. ಸೊಂಪಾದ ಕೂದಲನ್ನ ಚೆನ್ನಾಗಿ ತೊಳೆದು ನೀಟಾದ ಬೈತಲೆಯ ತಿದ್ದಿ ತೀಡಿ ಉಜ್ಜಿದಳು. ಕಿವಿ, ಕಣ್ಣು, ಮೂಗುಜ್ಜಿ ಮೂಗುತಿ, ವಾಲೆ, ಕೊರಳಸರ, ನೇವುಳ, ಬೆರಳುಂಗುರಗಳ ತಿಕ್ಕಿ ತಿಕ್ಕಿ ತೊಳೆದಳು. ಸೊಂಟದ ಡಾಬು ಕಾಲಿನ ಕಡಗ ಮುಂಗೈ ಬಳೆಗಳ ತಿಕ್ಕಿ ತೀಡಿ ತೊಳೆದಳು. ಆಮ್ಯಾಲೆ ನೂರೊಂದು ಚೊಂಬು ಬಿಸಿನೀರಲ್ಲಿ ಬಿಸಿ ಮಾಡಿ ಆಮ್ಯಾಕೆ ಮೈ ಒಣಗಿಸಿ ಬಣ್ಣದಲ್ಲಿ ಮೇಲಾದ ಹಸಿರು ಗಿಣಿ ನೂರು ಬರೆದ ಇಳಕಲ್ ಬಣ್ಣವನುಡಿಸಿ ಗುಳೇದಗುಡ್ಡದ ಬಣ್ಣವ ತೊಡಿಸಿದಳು. ಹೆಗಡೇರು ಕೊಟ್ಟ ಚಿನ್ನದ ಕಣ್ಣು ಬೆಳ್ಳಿಯ ಮೀಸೆ ಇಟ್ಟಳು. ನೊಸಲಲ್ಲಿ ಚಂದ್ರನ ಬೊಟ್ಟಿಟ್ಟು ಕರಗಳ ಮ್ಯಾಲೆ ಗೀರು ಗಂಧ ಬರೆದಳು. ತುರುಬಿಗೆ ಮಲ್ಲಿಗೆ ದಂಡೆ ತುರುಕಿದಳು. ಇಂತೀಪರಿ ಚಿಕ್ಕ ಯಕ್ಷಿಯ ಶೃಂಗಾರಮಾಡಿ ತೆಂಗಿನ ಚಿಪ್ಪಿನಲ್ಲಿ ಕಪಿಲೆ ಹಸುವಿನ ತುಪ್ಪದ ಸೊಡರಿಟ್ಟು ಪೂಜೆಯ ಮಾಡಿದಳು. ಜನ ತಾಳ ಕುಟ್ಟಿ ಜಾಗಟೆ ಬಡಿದು ಶಂಖ ಊದಿದರು. ಆಮ್ಯಾಲೆ ಎಂಟು ಕಾಲಿನ ಕುರಿಯ ಬಲಿ ಕೊಟ್ಟು ಬಾಡಿನ ನೈವೇದ್ಯ, ಕಳ್ಳಿನ ನೆರೆ, ಈಚಲ ರುಚಿಗಳ ಒಪ್ಪಿಸಿಕೊ ಎಂದು ನೀಡಿ ಅಡ್ಡಬಿದ್ದರು.
ಇಂತೀಪರಿ ಪೂಜೆ ಮುಗಿದು ಕಡ್ಡಿ ಕರ್ಪೂರ ಸುಟ್ಟು ಹಣ್ಣುಕಾಯಿ ಅನ್ನ ಶಾಂತಿ ಪುಣ್ಯ ಫಲಗಳ ಎಲ್ಲರೂ ಹಂಚಿಕೊಂಡು ಉಘೇ ಚಾಂಗುಭಲಾ ಎಂದು ಶಬ್ದ ಸಡಗರದಲ್ಲಿ ಜನ ಎದ್ದೇಳುವ ಪ್ರಸ್ತಾವದಲಿ ಯಕ್ಷಿಯ ಗುಡಿಯೇ ಕಿರಿಚಿದ ಹಾಗೆ ಕುಲಗುರು ಕಿಟಾರ್‍ನೆ ಕಿರಿಚಿದ ಶಿವನೆ! ಭೀತ ಮಂದಿ ಮತ್ತೇನು ಘೋರ ಬಂತೆಂದು ನೋಡಿದರೆ ಕುಲಗುರು ಥರಥರ್‍ನೆ ನಡುಗುತ್ತಿದ್ದ. ಅವನ ಮೈಯಲ್ಲಿ ಯಕ್ಷಿಯ ಆವೇಶವಾದದ್ದು ಜನಕ್ಕೆ ಬಹುಬೇಗ ಅರಿವಿಗೆ ಬಂದು ಹಿಂದಿದ್ದ ಹೆಗಡೆ ಮುಂದೆ ಬಂದು ಕೈಮುಗಿದು ನಿಂತ. ಲಕ್ಕಬ್ಬೆ ಚಂದಮುತ್ತ ಸಮೇತ “ಅಪ್ಪಣೆಯಾಗಲಿ ಘನಪಾದವೇ” ಎಂದು ಮೈಚೆಲ್ಲಿ ಕುಲಗುರುವಿನ ಪಾದ ಹಿಡಕೊಂಡು ಕುಂತರು. ಕುಲಗುರು ಆರ್ಭಟಿಸಿ ನಡುಗುವ ಶಬ್ದಂಗಳ ಗರ್ಜಿಸಿದ:
ನನ್ನ ಮಾತು ನಾನುಳಿಸಿಕೊಂಡೆ.
ಇನ್ನುಮ್ಯಾಕೆ ಅತ್ತೆಯೆಂಬಾಕೆ
ತನ್ನ ಮಾತು ತಾನುಳಿಸಿಕೊಳ್ಳಲಿ!
ದಿಗಿಲಾಯಿತೆಲ್ಲರಿಗೂ. ಈಗ ಅತ್ತೆಯೆಂಬಾಕೆ ಲಕ್ಕಬ್ಬೆಯಲ್ಲದೆ ಬೇರೆ ಯಾರೂ ಅಲ್ಲ. ಅವಳು ಉಳಿಸಿಕೊಳ್ಳಬೇಕಾದ ಮಾತು ಯಾವುದೆಂದು ಜನ ತಂತಮ್ಮಲ್ಲಿ ಅಂದಾಡಿಕೊಂಡರು. ತಾನು ಕೊಟ್ಟ ಮಾತು ಆತ್ಮಕ್ಕೆ ಅರಿವಾಗಿ ಲಕ್ಕಬ್ಬೆಯ ಬೆವರು ಜಲ ಸಳಸಳ ಭೂಮಿಗಿಳಿದು ಕುಂತ ನೆಲ ಒದ್ದೆಯಾದವು. ಹತಾಶೆಯಿಂದ ಹೃದಯ ಪರಚಿಕೊಂಬಂತೆ ಎರಡೂ ಕೈಗಳಿಂದ ಎದೆ ಹಿಡಿದುಕೊಂಡು ನೆಲಮುಗಿಲಿಗೆ ತನ್ನ ದುಃಖವ ನಿವೇದಿಸಿಕೊಳ್ಳುವಂತೆ ಮ್ಯಾಲೆ ಕೆಳಗೆ ನೋಡಿದಳು. ಆಹಾಶ ದೇವರಲ್ಲಿ ಸಿಡಿಲಿಲ್ಲವೆ? ಇದ್ದರ್‍ಯಾಕೆ ನನ್ನ ಮ್ಯಾಲೆ ಬೀಳಬಾರದು? ಭೂಮಿಯ ದೇವ ದೈವ ಬೂತಂಗಳಲ್ಲಿ ನ್ಯಾಯವಿಲ್ಲವೆ? ಇದ್ದರ್‍ಯಾಕೆ ನನಗೆ ಸಿಗುತ್ತಿಲ್ಲ? ಎಂದು ಹಣೆ ಹಣೆ ಬಡಿದುಕೊಂಡಳು. ಅಷ್ಟರಲ್ಲಿ-
“ನ್ಯಾಯನುಡಿ ಹೇಳಕೇಳೋರ್‍ಯಾರೂ ಇಲ್ಲವೆ ಈ ಹಾಳು
ಹಟ್ಟಿಯಲ್ಲಿ? ಜವಾಬ್ದಾರಿಯಿದ್ದವರು ನುಡಿಯಿರಯ್ಯಾ”
-ಎಂದು ಕುಲಗುರು ಆರ್ಭಟಿಸಿ ಅಳ್ಳೆ ಅರಳಿಸಿಕೊಂಡು, ಹಲ್ಲು ಕಡಿಯುತ್ತ, ಅಗಲವಾಗಿ ಕಣ್ಣು ಕಿಸಿದು ಸುತ್ತ ನೋಡಿದ. ಗಾಬರಿಗೊಂಡರು ಮಂದಿ. ಮುಖದಲ್ಲಿ ಸೇಡು ಶಾಪಂಗಳ ಹಾವಭಾವಗಳು ಮೂಡಿ ಮುಳುಗಿದವು. ತಕ್ಷಣ ಹೆಗಡೆ ಲಕ್ಕಬ್ಬೆಗೆ ಗದರಿದ:
ತಾಯಿ ಹೇಳಿದ್ದು ನಿನ್ನ ಮಾತು ನೀನುಳಿಸಿಕೊ ಎಂದು
ಅದೇನೆಂದು ಮೊದಲು ಹೇಳು.
ಅಬ್ಬೆ: ಮಗ ಒಂದು ವಾರದ ಮುದ್ದತಿನೊಳಗೆ
ಕ್ಷೇಮದಿಂದ ಗೂಡು ಸೇರಿದರೆ ನಿನಗೇ ಗುಡ್ಡ
ಬಿಡುವುದಾಗಿ ಬೇಡಿಕೊಂಡಿದ್ದೆ.
ದಿನಕ್ಕೊಂದು ಹರಕೆ ಹೊತ್ತು, ಸುತ್ತ ದೇವರಿಗೆ
ದುಬಾರಿ ಬೆಲೆತೆತ್ತು,
ಮಗನ ಯೋಗಕ್ಷೇಮ ಆಯುಷ್ಯ ಅಭಿವೃದ್ಧಿಕೊಂಡಿದ್ದೇನೆ,
ಇಂಥಾ ಮಗನ್ನ ಯಕ್ಷಿಗೆ ಹ್ಯಾಗೆ ಗುಡ್ಡ ಬಿಡಲಿ ಶಿವನೆ?
ಹೆಗಡೆ: ಹರಕೆ ಹೊತ್ತವಳು ನೀನಲ್ಲವೆ?
ಅಬ್ಬೆ: ಹೌದು.
ಹೆಗಡೆ: ತೀರಿಸಬೇಕಾದವಳೂ ನೀನೇ ಅಲ್ಲವೆ?
ಅಬ್ಬೆ: ಲೋಕ ಲೌಕಿಕಳಯ್ಯ ನಾನು. ನನ್ನ ಮಾತಿಗೆ ಕೂಡ
ಉಪ್ಪು, ಹುಳಿ ರುಚಿಯುಂಟು. ಧರ್ಮ, ಕರ್ಮ ಅರಿಯದ
ಮಾತುಕೊಟ್ಟೆ.
ಇದ್ದೊಬ್ಬ ಮಗನ ದೈವಕ್ಕೆ ಅಡವಿಟ್ಟು
ನಾನು ಬರಿಗೈಯಲ್ಲಿ ಕೂತಿರಲೆ?
ಮಾನವನ ತಪ್ಪು ಲೆಕ್ಕಕ್ಕಿದೆಯೆ? ಇದೆಯೆಂದಾದರೆ-
ತಪ್ಪಿ ನುಡಿದ ಮಾತಿಗೆ ತಪ್ಪು ದಂಡ ಹೇಳು.
ಮಗನ್ನನ್ನ ಕೊಡೆಂದರೆ ಹ್ಯಾಗೆ? ಅರಿತವರು ನೀವು ಆಡಿರಯ್ಯಾ
ನುರಿತವರು ನೀವು ನುಡಿಯಿರಯ್ಯಾ.
ದೇವತೆಯೊಂದಿಗೆ ಈ ಪರಿ ಒಗೆತನ ಸಾಧ್ಯವೆ?
ಹೆಗಡೆ : (ಕೋಪದಿಂದ)ಹಾಗಂತ ವೈರ ಸಾಧ್ಯವೆ?
ನಮ್ಮ ದೇವಿ ಸೇಡುಮಾರಿ ಯಕ್ಷಿಯಲ್ಲ,
ಆಲ ಅವಳ ಮರ, ಗಿಣಿ ಅವಳ ಹಕ್ಕಿ.
ಕಲೆಗೆ ಹ್ಯಾಗೋ ಹಾಗೆ ಒಲವಿಗೂ ದೇವತೆ ಅವಳು.
ಬಲಗೈಯಲ್ಲಿ ವರ ಕೊಡುವವಳು.
ನಮ್ಮ ಅಳತೆಗೆ ಮೀರಿದ ಸತ್ಯಗಳೆಷ್ಟೋ ಇದ್ದಾವೆ,
ದೇವಿ ನೋಡಿಕೊಳ್ಳುತ್ತಾಳೆ ಅವುಗಳನ್ನ.
ಹಟ್ಟಿಗೇನು ಸುಖವಿದೆಯೆ? ನೀನೇ ನೋಡು
ಮೊದಲೇ ಮಳೆ ಕಾಣದ ಬರಗಾಲ,
ಸುತ್ತ ದೇವರ ಕೋಪತಾಪ ಶಾಪಂಗಳೇ
ಸಾಕಷ್ಟಿರುವಾಗ
ಈ ಹೊಸದನ್ನ ಸಹಿಸುವ ಶಕ್ತಿ ಯಾರಿಗಿದೆ?
ಹೇಳಿದ ಹಿತನುಡಿ ಕೇಳು.
ಕೆಟ್ಟದ್ದನ್ನ ಯೋಚಿಸದೆ
ಕೊಟ್ಟ ಮಾತು ಉಳಿಸಿಕೊ-ಎಂದು ಕೋಪದಲ್ಲಿ ಗದರಿದ.
ಅಷ್ಟರಲ್ಲಿ ಕುಲಗುರು-
ಆಹಾಹಾ ಇನ್ನೂ ಒಪ್ಪಿಕೊಳ್ಳಲಿಲ್ಲವೆ ಅವಳು?
ಹಟ್ಟಿಯ ಸುಟ್ಟು ಭಸ್ಮ ಮಾಡುತ್ತೇನೆ…
ಎಂದು ಬಗಲ ಚೀಲಕ್ಕೆ ಕೈಹಾಕಿದ್ದೇ ತಡ ಲಕ್ಕಬ್ಬೆ ತಕ್ಷ್ಣ ನಡುಗುವ ಕೈಗಳಿಂದ ಕುಲಗುರುವಿನ ಪಾದ ಹಿಡಿದು ದಮ್ಮಯ್ಯಾ, ದಕ್ಕಯ್ಯಾ ಎಂದು ನಿಜ ಒಪ್ಪಿ ದೀನಭಾವಗಳಿಂದ ಹೇಳಿದಳು:
ಆಯಿತಾಯಿತೇ ತಾಯೀ. ನನ್ನ ನುಡಿ ತಪ್ಪು
ನುಡಿದ ನಾಲಿಗೆ ತಪ್ಪು. ಸಮಾಧಾನ ಮಾಡಿಕೊ.
ಸುಡುಸುಡುವ ಮಾತುಗಳ ಸುರಿಸಬ್ಯಾಡವೆ ತಾಯಿ. ಇಗೊ-
ಕೊಟ್ಟೆ ಮಗನ. ನಿನ್ನಡಿಗಿಟ್ಟೆ. ಸಿಟ್ಟು ಬಿಡು.
ಎಂದು ಹೇಳುವುದ ಹೇಳಿ ಉಳಿದುದ ನುಂಗಿದಳು.
ಈ ಮಾತು ಕೇಳಿದ್ದೇ ಕುಲಗುರು-
ಆಹಾಹಾ ಆನಂದ!
ಪರಮಾನಂದ!
ಶಿವಾನಂದ!
ಎಂದು ತಕ್ಕತೈ ಕುಣಿಯುತ್ತ-
“ಮಗನಿಗೆ ಕೀರ್ತಿ ಶಿಖರವ ಹತ್ತುವ
ಶಿವಯೋಗವಿದೆ. ಇಗೋ ಇಗೋ
ಬಂಡಾರ ತಗೊ ತಗೋ.”
-ಎಂದು ಹೇಳಿ ತಾಯಿ ಮಗನ ಹಣೆಗೆ ಬಗಲ ಚೀಲದ ಬಂಡಾರ ಹಚ್ಚಿ ಕೇಳು ಇನ್ನೇನು ಬೇಕೆಂದ. ತಾಯಿ ಇದ್ಯಾವುದರೆಗ್ಗಿಲ್ಲದೆ ದೋಚಿದ ಮನೆಯಲ್ಲಿದ್ದಂತೆ ಕುಂತಿದ್ದಳು. ಹೆಗಡೆಗೆ ಪ್ರೋತ್ಸಾಹವಾಗಿ ಕುಲಗುರುವಿನ ಪಾದದ ಮ್ಯಾಲೆ ದೊಪ್ಪನೆ ಬಿದ್ದುರುಳಿ:
ಅಂಬಾ ಜಗದಂಬಾ
ನೀ ನಮಗ ತಾಯಿ
ಗತಿ ಯಾರಿಲ್ಲ ನಿನ್ನ ಶಿವಾಯಿ
ಮಳಿ ಕೊಟ್ಟು ನಮ್ಮನ್ನ ಕಾಯಿ
-ಎಂದು ಗಟ್ಟಿಯಾಗಿ ಪಾದ ಹಿಡಿದ. ಕುಲಗುರು ಹೆಗಡೆಯ ಹಣೆಗೆ ಬಂಡಾರ ಹಚ್ಚಿ,
?ಬರುವ ಹುಣ್ಣಿವೆಯಂದು
ಅತ್ತೆಯ ಮಗ ಮಳೆರಾಗ ನುಡಿಸಿದರೆ
ಆಕಾಶದ ಮಳೆ ಅಬ್ಬರಿಸಿ ಬಿದ್ದಾವು
ಏಳೇಳು ಎದ್ದೇಳೆಂದು
-ಎಬ್ಬಿಸಿ ತಾನೂ ಎದ್ದು ನಿಂತು ಬಗಲ ಚೀಲದ ಬಂಡಾರವ ಚಾಂಗುಭಲಾ ಎಂದು ಆಕಾಶಕ್ಕೆ ಎರಚಿದ. ಎರಚಿದ್ದೇ ಆಯ್ತು ನೋಡು: ಹಾಳು ಬಿಸಿಲು ಹೊಂಬಿಸಿಲಾಗಿ ಅರಿಷಿಣದ ಮಜ್ಜನ ಮಾಡಿಸಿಧಂಗಾಯ್ತು ಕಾಡಿಗೆ.

೨೫. ಸುಡುವ ಈ ಸುಣ್ಣದಲಿ ಸಣ್ಣಾದೆನೇ!

ಆಮ್ಯಾಲೆ ಆಳಾಗಲೇ ಇಲ್ಲ ಅಬ್ಬೆ;
ಆರಿಹೋಯ್ತು ಕಣ್ಣಲ್ಲಿಯ ಬೆಳಕು.
ಅನ್ನೋದಕ ಬಿಟ್ಟು
ಬೆನ್ನು ಹಚ್ಚಲೇ ಇಲ್ಲ ಹಾಸಿಗೆಗೆ.
ಕೊಟ್ಟಂತೆ ಮಾಡಿ ಕಸಿದ ಯಕ್ಷಿಯ ರೀತಿ
ಆರುವ ಬೆಂಕಿಯಲ್ಲಿ ಹುಲ್ಲೊಗೆದ ಹಂಗಾಗಿ
ಬೆಂಕಿ ಹತ್ತಿದ ಕಾಡಿನಂತಾದಳು ಮುದುಕಿ.
ಮಕ್ಕಳಾಗಿ, ಗೆಜ್ಜೆ ಕಾಲಿನ ಹಸುಗೂಸುಗಳಾಗಿ
ಗೂಡಿನ ಮೂಲೆಮೂಲೆಗಂಟಿದ್ದ ಕನಸುಗಳನ್ನ
ಕೋಲಿನಿಂದ ಹೊರಗಟ್ಟಿ
ದರೋಡೆಯಾದ ಮನೆಯಲ್ಲಿದ್ದಂತೆ
ಚಡಪಡಿಸಿದಳು ಮುದುಕಿ.
ಚಿತ್ತವೈಕಲ್ಯದ ಹುಚ್ಚಿಯ ಹಾಗೆ
ಕ್ಷಣ ನಕ್ಕು ದಿನವೆಲ್ಲ
ಹುಬ್ಬುಗಂಟಾದಳು ಮುದುಕಿ.
ವಂಶದ ಕುಡಿ ತನ್ನಿಂದ ಬೆಂದುಹೋದವೆಂದು
ಪುರಾತನರೆದುರು ಗೋಳುಗೋಳೆಂದಾಡಿ
ಹಡೆದೊಡಲು ಜೋರಾಗಿ ಹೊಡೆದುಕೊಂಡಳು ತಾಯಿ.
“ನಿನ್ನ ದೃಡವ ಪರೀಕ್ಷೆ ಮಾಡಿದ ಮ್ಯಾಲೂ
ನಿನ್ನ ಹೆಸರುಗೊಳ್ಳುತ್ತೇನೆ ತಾಯೀ ಧೈರ್ಯದಿಂದ.
ನನ್ನ ದುರ್ಗುಣಗಳ ಬೇಕಾದಷ್ಟು ಸಾರಿ ಜಪಿಸು.
ನಮ್ಮ ಮುಕ್ಕೋಟಿ ತಪ್ಪುಗಳ ಮಾಫಿ ಮಾಡೋಳಲ್ಲವೆ ನೀನು?
ಮಗನ ನಿನ್ನಡಿಗಿಟ್ಟು ದುಃಖದ ಹಬ್ಬ ಮಾಡುತ್ತಿದ್ದೇನೆ
ಹುಚ್ಚಲ್ಲವೆ ತಾಯಿ ಇದು?
ಜಗತ್ತಿಗೆ ಬೇಕಾದ ಯಕ್ಷಿ ನೀನು.
ಚಂದಮುತ್ತನಿಗೆ ಮೊದಲು ಹುಟ್ಟಿದ
ಅಕ್ಕ ಅಣ್ಣ ಇಲ್ಲ.
ಮತ್ತೆ ಹುಟ್ಟಿದ ತಮ್ಮ ತಂಗಿಯರಿಲ್ಲ.
ಮಗ್ಗುಲಿಗೆ ಸೊಸೆಯಿಲ್ಲ.
ಮೊಳಕಾಲಿಗಂಟುವ ಮೊಮ್ಮಕ್ಕಳಿಲ್ಲ.
ಮಗನ ನಂತರ ನಂದಾದೀಪವ
ಉರಿಸುವ ಗತಿಗೋತ್ರ ಇಲ್ಲದ ವಂಶ
ಅದ್ಯಾತರದೇ ತಾಯೀ?
ಧಿಕ್ಕರಿಸಬೇಕದನು.
ಸುಡುವ ಈ ಸುಣ್ಣದಲಿ ಸಣ್ಣಾದೆನೇ!
ಕಣ್ಣಿಗಿಲ್ಲವೆ ನಿದ್ದೆ ನಿನ್ನ ಆಣೆ.
ಅನುಚಿತವಾಡಿದೆನೆನ್ನಬ್ಯಾಡ. ನಿನ್ನ ಹೆಸರಲಿ ವಂಶ ಬೆಳೆಸುತ್ತೇನೆ
ನನ್ನ ಕಂದನ ನನಗೆ ಹಿಂದಿರುಗಿ ಕೊಡೆ ತಾಯಿ”
-ಎಂದು ಸೆರಗೊಡ್ಡಿ ಬೇಡಿದಳು ಅಬ್ಬೆ.

೨೬. ಕನಿಕರವಿದ್ದವರು ಕಾಯ್ದುಕೊಳ್ಳಲಿ

ಅಬ್ಬೆಯ ವೇದನೆಯ ಭೇಧಿಸಲಾಗಲೇ ಇಲ್ಲ ಚಂದಮುತ್ತನಿಗೆ. ತನ್ನನ್ನ ಗುಡ್ಡ ಬಿಟ್ಟಿದ್ದು ಅನುಕೂಲವಾಗಿ ಕಂಡರೂ ವ್ಯತ್ಯಾಸ ಕಾಣದೆ ಯಥಾ ತಥಾ ಇದ್ದ. ಏನಿದ್ದೇನು?
ಯಕ್ಷಿ ವಿರಹಿತ ಲೋಕ
ಸಾವಿಗಿನ್ನೊಂದು ಪರಿ
ಹುಗಿದ ಹಾಗಿದೆ ಜಗವು ಮೌನದೊಳಗೆ.
ಎಂದು ಯಕ್ಷಿಯ ವಿಗ್ರಹದೆದುರು ಕುಂತು ಸೋತು ಮಾತಾಡಿದ. ಅವಳ ಕಲ್ಲಿನಂಥಾ ಮನಸು ಬೆಣ್ಣೆಸಮವಾಗಲೆಂದು ಬೇಡಿಕೊಂಡು ನಾಲಗೆಯಲ್ಲವಳ ನಾಮಸ್ಮರಣೆ ತೇದು ಧೀನಭಾವಂಗಳಿಂದ ಅಂಗಲಾಚಿದ:
ಗಜಗಮನೆಯೇ ನಿನ್ನ ನಿಜವ ತಿಳಿದವರ್‍ಯಾರು?
ಅಬ್ಬೆಯ ತಪ್ಪಿಗೆ ನನ್ನ ಶಿಕ್ಷಿಸಬ್ಯಾಡ,
ಅಬ್ಬೆಯ ಮ್ಯಾಲೂ ಕೋಪ ಮಾಡಬ್ಯಾಡೆಂದ.
ನಿನ್ನ ಬದಿಯಗಲಿ ನಾ ಅರೆಗಳಿಗೆ ಇರಲಾರೆ
ಸಿಡಿದು ಸಿಟ್ಟಲಿ ದೂಡಬ್ಯಾಡ ಹೊರಗೆ.
ಅನುಮಾನವ್ಯಾತಕೆ ಮುನಿಸು ಮಾಣೆ ದೇವಿ
ನೆನೆದಂತೆ ಮಾಡುವೆ ಶಿವನ ಆಣೆ.
ರಚನೆಯ ಮಾತಲ್ಲ
ಅಸು ಹೋದರೂ ಹುಸಿಯಾಡುವವನಲ್ಲ,
ಖಚಿತವಾದರೆ ನನ್ನ ವಚನವ ನಂಬು ಎಂದ.
ಮಾನಿನಿಯಳೇ
ಮಧುರ ವಾಕ್ಯದವಳೇ
ತಾವರೆಯ ಮುಖದವಳೇ
ತೆಳ್ಳಾನೆ ಹೊಟ್ಟ್ಯವಳೇ
ಪೂರ್ಣಳೇ, ಪರಿಪೂರ್ಣಳೇ ಎಂದು
ಒಂದು ನೂರಾ ಎಂಟು ಹೆಸರುಗಳಿಂದವಳ ಹೊಗಳಿದ.
ಇದಕ್ಕೆ ಒಪ್ಪಿಗೆ ಉಂಟೆಂಬ ಇಲ್ಲೆಂಬ ಯಾವ ಸನ್ನೆಯೂ ಸಿಗದೆ ಒಂದೆರಡು ದಿನಗಳಲ್ಲಿ ತನ್ನಿಂದಾದ ತಪ್ಪು ಮನ್ನಿಸಿ ಮತ್ತೆ ಕರೆಕಳಿಸುವಳೆಂದು ಹದ್ದುಗೈ ಇಟಗೊಂಡು ಹಾದಿಯ ನೋಡಿದ. ಹುಣ್ಣಿವೆ ಬಂತೆಂದಾಗ ಹತಾಶನಾದ.
ಯಕ್ಷಿಯ ಲೋಕಕ್ಕೆ ಬಾಹಿರನಾದಾಗಿಂದ ಹಾಡು ತನ್ನಿಂದ ಮಾಯವಾಗಿದೆಯೆಂದೇ ಅಂದುಕೊಂಡ. ಹಾಗೆಂದು ಹಾಡದಿರಲೂ ಸಾಧ್ಯವಿಲ್ಲೆಂದ. ಹುಣ್ಣಿವೆ ದಿನ ಶಿವಪಾರ್ವತಿಯರ ಹೆಸರುಗೊಂಡು ಮಳೆರಾಗ ಹಾಡುವುದೆಂದು ಕೃತ ನಿಶ್ಚಯವ ಮಾಡಿದ. ಮಾತು ಕೊಟ್ಟವಳು ಯಕ್ಷಿ. ಗೆಲ್ಲಬೇಕಾದ್ದು ಅವಳ ಸತ್ಯ. ಮಳೆ ಸುರಿಯಿತೇ ಹಟ್ಟಿಯ ಭಾಗ್ಯ. ಇಲ್ಲವೇ? ಅವಳ ಕೇಡು. ಶಿವಕಾರುಣ್ಯ ತೋರಿದ ಹಾಗೆ ನುಡಿಸುವುದು ನನ್ನ ಧರ್ಮ. ಒಂದಂತು ನಿಜ:
ಹಾಡಿಗೆ ಆಕಾಶದ ಮಳೆ ಸುರಿಯಬೇಕು.
ಆಲದ ಯಕ್ಷಿ ಒಲಿದು ಬರಬೇಕು.
ಬಂದರಿದೇ ಮೊದಲ ಹಾಡು.
ಇಲ್ಲವೇ? ಇದೇ ಕೊನೆಯ ಹಾಡೆಂದು
ಶಿವನ ಹೆಸರಿನಲ್ಲಿ ಆಣೆ ಪಂಥವ ಮಾಡಿದ.
ಕನಿಕರವಿದ್ದವರು ಕಾಯ್ದುಕೊಳ್ಳಲಿ
ಎಂದು ಎದ್ದ.

೨೭. ನುಡಿಸಿದನು ನಿವಳಾ ಸುರಿಧಾಂಗ ಹವಳಾ

ಹುಣ್ಣೀವೆಯ ದಿನ ಕೋಳಿ ಕೂಗಿಗೆದ್ದು ಚಂದಮುತ್ತ ತಣ್ಣೀರು ಮುಳುಗೆದ್ದು ತಾಯ ಪಾದವ ಪಡಕೊಂಡ. ಕುಲಗುರುವಿನ ಪಾದದ ಮ್ಯಾಲೆ ಮೈಚೆಲ್ಲಿ ಪಾದಧೂಳಿಯ ಹಣೆಗಿಟ್ಟುಕೊಂಡಾಗ ಕುಲಗುರು ಅನುಮಾನದಿಂದ ಮಂಗಳವಾಕ್ಯವ ಅನುಗ್ರಹಿಸಿದ. (ಅನುಮಾನವ್ಯಾಕೆಂದರೆ ತನಗೇ ಬಾರದ ಮಳೆರಾಗವ ತಾನು ಶಿಷ್ಯನಿಗೆ ಕಲಿಸಿಲ್ಲವಾಗಿ ಅವನು ನುಡಿಸುವುದು ಸಾಧ್ಯವೇ-ಎಂದು) ಮಳೆ ಬೀಳುವತನಕ ಗುಡಿಯ ಕಡೆಗ್ಯಾರೂ ಸುಳಿಯಬಾರದೆಂದು ಕೈಮುಗಿದು ಕೇಳಿಕೊಂಡು ಗುಡಿಗೆ ಹೊರಟ.
ಗುಡಿಯ ರಜವ ಗೂಡಿಸಿ ಗಂಧದ ನೀರು ಸಿಂಪಡಿಸಿ ರಂಗೋಲಿ ಹುಯ್ದು ಮಡಿಬಟ್ಟೆಯ ಯಕ್ಷಿಯ ಮುಂದಿಟ್ಟು ಹೊರಬಂದು ನಿಂತುಕೊಂಡ. ಹಿಂದಿನ ವಾಡಿಕೆಯಂತೆ ಯಕ್ಷಿ ಮಡಿ ಉಡಲಿಲ್ಲವಾಗಿ ಮೈಲಿಗೆ ಬಟ್ಟೆ ಹೊರಬೀಳಲಿಲ್ಲ. ಅಮಂಗಳವೆಂದು ಹೃದಯ ನಡುಗಿ ಉಸಿರುಗರೆದ. ಮೂರು ಬಾರಿ ಗುಡಿಯ ಬಲಗೊಂಡು ದಿಂಡುರುಳಿ ಯಕ್ಷಿಯ ವಿಗ್ರಹದೆದುರು ಕುಂತು ಕಣ್ಣೀರ ಧಾರೆಯ ಸುರಿದ. ಹೆತ್ತಯ್ಯ ಮುತ್ತಯ್ಯರ ನೆನೆದು, ತಂದೆತಾಯಿಯ ನೆನೆದು, ಸುತ್ತ ದೇವರ ನೆನೆದು ಕೊಳಲು ತುಟಿಗಿಟ್ಟ. ನಡುಗುವ ಬಿಸಿ ಉಸಿರನ್ನ ಒತ್ತಾಯದಿಂದ ಒಳಕ್ಕೆ ತಳ್ಳಿದಾಗ ಕೊಳಲು ಅರಚಿಕೊಂಡಿತು.
ರಾಗ ಸರಾಗವಾಗಿ ಸುರುವಾಗಲಿಲ್ಲ. ಉಸಿರು ಗಂಟಲಲ್ಲೇ ಹುಟ್ಟಿ ಸ್ವರ ತುಂಡು ತುಂಡಾಗಿ ಹೊರಬಂತು. ಕೊಳಲು ಕೆಳಗಿಟ್ಟು ಯಕ್ಷಿಯ ಶಿಲಾವಿಗ್ರಹವ ನೆತ್ತಿಗೆ ಹೊಡೆದುಕೊಂಡು ಪ್ರಾಣ ಬಿಡಲೇ? ಎಂದುಕೊಂಡ. ಕಲಾವಿದನಾಗಿ ತನ್ನ ಕೊನೆಯುಸಿರು ಕೊಳಲ ಮೂಲಕವೇ ಹೋಗಲೆಂದು ಗುರುಹಿರಿಯರ ಧ್ಯಾನಿಸಿ ಭೃಂಗೀಶನ ನೆನೆದು ಕೊಳಲು ತುಟಿಗಿಟ್ಟುಕೊಂಡ.
ಒಡೆದುಸಿರು ಬಿಗಿಹಿಡಿದು ಅಖಂಡವಾಗಿಸಿ, ಬಿರುಸಾದ ಉಸಿರ ನಿಯಂತ್ರಿಸಿ ನುಡಿಸಿದ. ನಾಭಿಯ ಕಮಲ ತೆರೆಕೊಂಡಂತಾಗಿ ಮರಳಿ ಯತ್ನವ ಮಾಡಿದಾಗ ಹದಗೊಂಡು ಮೂಡಿತು ರಾಗ. ಸರಾಗವಾಗಿ ಆಲಾಪವ ಸುರುಮಾಡಿದ. ಮ್ಯಾಲಿನ ಮಳೆಗಾಗಿ ಭೂಮಿಯ ಬಡ್ಡಿಬೇರಿನ ಅದಿಮಿ ಹಂಬಲವ ಆಲಾಪವಾಗಿ ನುಡಿಸಿ ಆಕಾಶದಲ್ಲಿ ವೀರಾಜಮಾನರಾಗಿದ್ದ ಮಳೆರಾಯನ ಪರಿವಾರವ ಜಾಗೃತಗೊಳಿಸಿದ. ಖಗಮೃಗಪ್ರಾಣಿ ತಿರ್ಯಕ್ ಜಂತುಜಾಲದ ಹೃದಯಪ್ರಾರ್ಥನೆಯನ್ನು ವಿಸ್ತರಿಸಿ, ಮಳೆರಾಯ ಸಮೇತ ದೇವಗಣ ಕರುಣೆಗೊಳ್ಳುವಂತೆ ಮಾಡಿದ. ಅವರವರ ಚಂದದ ನಡೆನುಡಿಗಳ ಅಲಂಕರಿಸಿ, ಅನುಕರಿಸಿ ಅವರು ಪ್ರಸನ್ನಗೊಳ್ಳುವಂತೆ ಮಾಡಿ, ಅವರೆಲ್ಲ ಮಳೆರಾಯನ ಸಂಕೇತಕ್ಕಾಗಿ ಕಾಯುವಂತೆ ಮಾಡಿದ. ಸಿದ್ಧರಾದ ಅವರೆಲ್ಲರಿಗೆ ನಮಿಸಿ ಮಳೆರಾಯನ ಪ್ರೌಢರಚನೆ ಸುರುಮಾಡಿದ.
ಕೊಳಲಿನ ಮೃದುಕಠಿಣ ಸ್ವಭಾವಂಗಳನರಿದು ಮಳೆರಾಯನ ನೂರೆಂಟು ಹೆಸರುಗಳಿಂದ ಮಧುರ ನಾದಂಗಳಲ್ಲಿ ಸ್ತುತಿಸಿದ. ಕ್ಷಿತಿಜದಗುಂಟ ರಾಗಮಂಡಳ ಬರೆದು ಗುಡಿಯ ನಡುನೆತ್ತಿಯ ಆಕಾಶದಲ್ಲಿ ಪೀಠವ ರಚಿಸಿ ಅನುಗ್ರಹಿಸು ತಂದೇ- ಎಂದು ಪ್ರಾರ್ಥಿಸಿದ್ದೇ ಆಯಿತು ಶಿವಾ,
ಬೀಸಿ ಬೀಸಿ ಬಂದವು ಕಾರ್ಗಾಳಿ
ಹುಯಿಲ್ಗಾಳಿ, ಹಿಂಡುಗಾಳಿಗಳು ಮುಗಿಲುತುಂಬ
ಮುಂಗಾರಮೋಡ ಕವಿದು
ಕಡುನೀಲಿ ಆಗಸ ಕಪ್ಪಿಟ್ಟಿತು.
ಯಾರೋ ಬಂಧಂಗಾಯ್ತು,
ನಾತಿದೂರ ನಾತಿಸಮೀಪ
ಸುಳಿದಾಡಿಧಂಗಾಯ್ತು,
ಸುತ್ತಲಿನ ಹವೆ ತಂಪಾಗಿ
ನೀರುಂಡ ನೆಲದ ಪರಿಮಳ ಸುತ್ತ ಪಸರಿಸಿತು.
ತಾನೀವರೆಗೆ ಕಾಣದ ನಾದರೂಪದ
ಭವ್ಯಸನ್ನಿಧಿಯಲ್ಲಿ ತಾನಿದ್ದಂತೆನಿಸಿ ರೋಮಾಂಚನಗೊಂಡು
ಕಂಪನಗೊಂಬ ಉಸಿರನ್ನ ಬಿಗಿಹಿಡಿದ.
ಭಯಭಕ್ತಿಯಿಂದ ಕುಂಚವನಾಡಿಸುವ ಕಲಾವಿದನಂತೆ
ನಾದವ ಎಳೆ ಎಳೆ ಬಿಡಿಸಿ ನುಡಿಸಿ
ಸುಳಿವ ದೇವತೆಯ ಮೂರ್ತಗೊಳಿಸಿದ.
ಆಕಾಶದ ನಾಲಿಗಿಲ್ಲದ ಗಂಟೆ ಢಣಿಲೆಂದು ಹೊಡೆದಾಡಿ
ಮಳೆರಾಯ ಪ್ರತ್ಯಕ್ಷನಾದ!
ಆನೆಗಾತ್ರ ಮತ್ತು ಬಣ್ಣಗಳಿಂದ ಮತ್ತು ಅಲೌಕಿಕ ಕಾಂತಿಯಿಂದ ಕೂಡಿದ ಆಜಾನುಬಾಹು, ಕಣ್ಣು ಮತ್ತು ನಗೆಗಳಲ್ಲಿ ಮಿಂಚಾಡಿಸುತ್ತ ಪ್ರಸನ್ನವಾಗಿ ಕಾಣಿಸಿಕೊಂಡ. ಕೈಯಲ್ಲಿ ವಜ್ರಾಯುಧ ಫಳ ಫಳ ಹೊಳೆದಾಡಿತು. “ಭಲೆ ಹುಡುಗಾ, ಮೆಚ್ಚಿದೆ ನಿನ್ನ ಕಲೆ ಮತ್ತು ಭಕ್ತಿಯ ಮೆಚ್ಚಿದೆ, ಇಗೋ” ಎಂದು ಡೊಳ್ಳುಬಾರಿಸಿದಂತೆ ಪ್ರಕಟದನಿಯಲ್ಲಿ ನಕ್ಕು ನುಡಿದು ಆಶೀರ್ವದಿಸಿ ಮಾಯವಾದ. ಆಮ್ಯಾಲೆ ಸುರುವಾಯಿತು. ಶಿವಾ, ಮೋಡಗಳ ಕಾಡಾನೆ ಹಿಂಡು ಆಕಾಶದಲ್ಲಿ ಘೀಳಿಟ್ಟವು.
ಗುಡುಗುಡು ಗುಡುಗಿತ್ತು
ಮಿಂಚು ಮಿಡುಕಾಡಿತ್ತು
ಸುರಿಮಳೆ ಸುರಿದಿತ್ತು ಸುತ್ತೂಕಡೆ.
ಕಾರೆಂಬ ಕಾರ್‍ಮಳೆ
ಭೋರೆಂಬ ಭೋರ್‍ಮಳೆ
ಗಿಂಡಿಗಾತ್ರದ ಹನಿಯ ಭಾರೀ ಮಳೆ.
ಆಕಾಶದಣೆಕಟ್ಟು
ಒಡೆಧಾಂಗ ಜಡಿದಾವು
ನೆಲಮುಗಿಲು ಬೆಸೆದಾವು ಸುರಿಮಳೆಗೆ.
ಚಂದಮುತ್ತನ ಹಾಡು
ಮುತ್ತಿನ ಮಳೆಯಾಗಿ
ಸುರಿದಾವು ತಂಪಾಗಿ ಭೂಮಿಯ ಧಗೆ.
ಇಂತೀ ರೀತಿ ಹೇಳಿ ಕಳಿಸಿದ ಹಾಗೆ ಮಳೆ ಬಂದು ಧೋ ಧೋ ಸುರಿದರೆ ಕನಸುಗಳಾದ ನಮ್ಮ ಗತಿಯೇನಾಗಬೇಡ ಶಿವಾ.
ಕೊಳಲಿನ ಉಲಿಗಳ ಹೊಳಿಗಳ ಹರಸಿದ
ನಾವು ಎಳೆಮೀನಾಗಿ ತೇಲಿ
ಸಿಕ್ಕೇವು ಸೆಳವೀಗೆ ಸುಳಿವೀಗೆ ತಿರುಗಣಿಗೆ
ಸಿಕ್ಕವು ನಮಗ್ಯಾವ ದಂಡಿ.
ಆಳ ತಿಳಿಯದು ಕೊಳಲ ಗಾಳ ತಳಿಕ್ಯಾಡುವವು
ಕರಿಯ ಗೂಢಗಳನ್ನ ತಟ್ಟಿ.
ಚಂದಮುತ್ತನ ಹಾಡಿನ್ನೂ ಮುಗಿದಿರಲಿಲ್ಲ; ಈ ತನಕ ಕುಲಗುರುವಿನ ಆದೇಶದಂತೆ ದೂರದಲ್ಲಿ ಕಾಯುತ್ತಿದ್ದ ಜನ ಭರ್ಜರಿ ಮಳೆಯಲ್ಲಿ ನೆಂದು ಈಗ ಆನಂದಂಗಳ ತಡಕೊಳ್ಳಲಾರದೆ ಇದ್ದಲ್ಲಿಂದ ಓಡಿಬಂದು ನಮ್ಮಪ್ಪಾ ಚಂದಮುತ್ತಾ ಎಂದು ಅವನನ್ನೆತ್ತಿಕೊಂಡು ಕೇಕೆ ಹಾಕಿ ಕುಣಿಯತೊಡಗಿದರು. ಇಡೀ ಹಟ್ಟಿಯ ಜನ, ಮಕ್ಕಳು, ಮುದುಕರು, ಗಂಡು ಹೆಣ್ಣೆನ್ನದೆ ಕುಲಗುರು ಮತ್ತು ಹೆಗಡೆ ಸೈತ ಆನಂದದ ಉನ್ಮಾದವೇರಿ ಚಂದಮುತ್ತನಿಗೆ ಚಾಂಗುಭಲಾ ಹೇಳುತ್ತ ತಕ್ಕತೈ ಕುಣಿದರು.
ಈ ತನಕ ಹ್ಯಾಗೆ ಹ್ಯಾಗೋ ಇದ್ದ ಲಕ್ಕಬ್ಬೆ ಈಗ ಮಗನ ಪವಾಡಕ್ಕೆ ಆನಂದದ ಬೆರಗೇರಿ ಓಡೋಡಿ ಹೊರಬಂದು ಅಂಗಳದಲ್ಲಿ ಎಡವಿ ಬಿದ್ದು ಕಾಲುಳುಕಿ ಕುಂಟುತ್ತ ಗೂಡು ಸೇರಿ, ಉದ್ರೇಕದಲ್ಲಿ ತಾನೊಬ್ಬಳೇ ಕಿರಿಚಿ ಕಿರಿಚಿ ಮಾತಾಡುತ್ತ ಮಗನ ದಾರಿ ಕಾದಳು.
ಜಡಿಮಳೆಯಲ್ಲಿ ಜನ ಮೂರು ತಾಸು ರಾತ್ರಿಯಾಗುವತನಕ ಕಿರಿಚಿ ಒದರಿ ಕೇಕೆ ಹಾಕಿ ಕುಣಿದು ಕುಪ್ಪಳಿಸಿ ಮಳೆಯ ಅಬ್ಬರ ಕಮ್ಮಿಯಾದ ಮ್ಯಾಲೆ ಸಕಲ ಗೌರವ ಮರ್ಯಾದೆಗಳೊಂದಿಗೆ ಚಂದಮುತ್ತನ್ನ ಅವನ ಗೂಡಿಗಿಳಿಸಿ ಲಕ್ಕಬ್ಬೆಯ ಕಾಲುಮುಟ್ಟಿ ನಮಸ್ಕರಿಸಿ ಹೋದರು. ಅಬ್ಬೆಗೆ ಮಾತೇ ಬರಲೊಲ್ಲದು. ಏನೇನೋ ಅಸಂಗತ ಕಿರಿಚುತ್ತ ಮಗನಿಗೆ ನೂರು ಸಲ ದೃಷ್ಟಿ ತೆಗೆದಳು. ನೂರು ಸಲ ತಬ್ಬಿ ತೂಪಿರಿದು ಮುದ್ದಾಡಿದಳು. ಮಗನ ಮುಖದ ಮ್ಯಾಲೆ ನೂರು ಕಪ್ಪಿನ ಬೊಟ್ಟಿಟ್ಟಳು. ಮಗನ ಕೀರ್ತಿಯ ಸುಖದಲ್ಲಿ ಪರವಶಳಾಗಿ ಹಾಗೇ ಮಲಗಿದಳು.
ಸಪ್ಪಟ ಸರಿರಾತ್ರಿ ಗೂಡೆಲ್ಲ ನೀರು ನೀರಾಡಿ ಅಬ್ಬೆಯನ್ನು ಹೊರಸಿನ ಮ್ಯಾಲೆ ಮಲಗಿಸಿದ ಚಂದಮುತ್ತ. ಯಕ್ಷಿಯ ಕೃಪೆಯಾಗಲಿಲ್ಲೆಂಬರಿವು ಇದ್ದುದರಿಂದ ಜನರ ಹೊಳೆವ ಮಾತುಗಳಿಂದ ಸಮಾಧಾನವಾಗಲಿಲ್ಲ. ಈಗ ಒಬ್ಬಂಟಿ
ಆಗಿದ್ದನಲ್ಲಾ, ನೆನಪಾಗಿ ಕಣ್ಣೀರು ಮುತ್ತು ಜಗುಳಿ,
ಇರಲಾರೆ ಆಕೆಯ ಹೊರತ
ಲೋಕ ಸುಂದರಿಯನ್ನ ಮರೆತಾ.
ಎಂದು ನಿಟ್ಟುಸಿರಿಟ್ಟ. ಕೊಟ್ಟಿಗೆಯಲ್ಲಿ ಕಪಿಲೆ ಚಡಪಡಿಸಿ ವಿಚಿತ್ರವಾಗಿ ಅರಚಿದ್ದ ಕೇಳಿ ಅವಸರವಸರವಾಗಿ ಹುಲಿ ಬಂದಿರಬೇಕೆಂದು ಹೊರಬಂದ. ಆಕಾಶ ಹಗುರವಾಗಿ ಮೋಡಗಳಲ್ಲಿ ಚಂದ್ರ ಮೂಡಿ ಮಂದ ಬೆಳ್ದಿಂಗಳಿತ್ತು.

ಆಕಾಶಲೋಕದ ಅಸಮಾನ ಹೂವು
ಭೂಮಿಯ ಮ್ಯಾಲರಳಿ
ಅತಿಶಯದ ಕುಸುಮದ ವಾಸನೆ
ಪಸರಿಸಿತ್ತು ಇಡೀ ಸೀಮೆ.
ಕೊಟ್ಟಿಗೆಯ ಸೂರಿನಡಿ ಯಾರೋ ನಿಂತಿದ್ದರು ತುಪ್ಪದ ದೀಪದ ಹಾಗೆ. ಎದೆ ಢವ ಢವ ಹೊಡೆದುಕೊಂಡು ‘ಎಲವೆಲವೊ ಹುಲುಮನವೆ ಥರಥರಗುಡಬ್ಯಾಡ. ನಡುಗಿ ನಲುಗಲಿ ಬ್ಯಾಡ’ ಎಂದು ತಂತಾನೆ ವಿವೇಕಿಸಿಕೊಂಡು ಒಂದೆರಡು ಹೆಜ್ಜೆ ಮುಂದೆ ಹೋದ. ಬಾಯ ಶಬ್ದ ನಿಶ್ಯಬ್ದವಾಗಿ ಕಣ್ಣು ದೊಡ್ಡದು ಮಾಡಿ ಲಿಖಿತ ಚಿತ್ರದ ಹಾಗೆ ನಿಂತ.
ಮೂಕತನದ ಮುಸುಕಿನಲ್ಲಿ
ನಿಂತುಕೊಂಡಿದ್ದಾಳೆ ಕಾಮನ ಚೂರು
ಚಕೋರಿ ಎಂಬ ಯಕ್ಷಿ!
ಸ್ಥಾವರವೆಲ್ಲವು ಜಂಗಮವಾದವು
ಯಕ್ಷಿಯ ನೋಟ ಮುಟ್ಟಿದರೆ.
ಮೈಯಂತ ಮೈಯೆಲ್ಲ ಜಗಜಗ ಹೊಳೆದಿದೆ
ಸ್ವಂತ ಬೆಳ್ದಿಂಗಳಿದೆ ಸುತ್ತ.
ಮೈತೊಯ್ದು ಇದ್ದೆಮುಖ
ತೊಯ್ದ ಮೈಗಂಟಿದ ದಟ್ಟಿಯಲ್ಲಿ
ಒಡೆದು ಕಂಡವು ಬೆಡಗಿನ ಹೊಂಗೊಡ ಕುಚ.
ತಡಮಾಡದೆ ನೆರಿಗೆಯ ಹಿಂಡಿ ಸರಿಪಡಿಸಿ
ಕಿರಿಗಂಟು ಕಟ್ಟಿ
ಬಡನಡುವ ಸಂವರಿಸಿಕೊಂಡಳು.
ಕಟ್ಟಿದ್ದ ಮುಡಿ ಸಡಲಿ ಬೆನ್ನಿಗಿಳಿದ
ಕಾಳನೀಳ ಕೇಶರಾಶಿಯಿಂದ ಹೂ ಜಗುಳಿ
ಎಳೆಯ ಕುಂತಳದಿಂದ ಮಳೆಯ ಹನಿ ಜಿನುಗಿ
ಕುಡುತೆಗಂಗಳ ದೊಡ್ಡದು ಮಾಡಿ
ಬೆದರಿದೆರಳೆಯ ಪರಿ ನಿಂತಿದ್ದಳು
ಮಾರಿ ಸಣ್ಣದು ಮಾಡಿ.
ಅಂಗನೆಯ ಅಂಗಾಲಿನಲ್ಲಿ ಕುಂಕುಮವಿತ್ತು.
ಮುಖದಲ್ಲಿ ಹಿಂಗದ ಬೆಳದಿಂಗಳು.
ಪದುಮದ ದಳದಂತೆ ಕೆಂಪಗಿದ್ದವು ಕೆನ್ನೆ
ಅದುರಿದವು ಹವಳದುಟಿ ಚಳಿಗೆ.
ನೆಲವನುಂಗುಟದಿಂದ ಬರೆದಳೊಮ್ಮೆ.
ನಮಗಿಷ್ಟೇ ಬೇಕಿತ್ತು, ಯಾವಾಗ ಇಬ್ಬರೂ ಜಗಳ ಮರೆತು
ಕೂಡಿಯಾರೆಂದು ಕಾತರಿಸುತ್ತಿದ್ದ ನಮಗೆ ಇದ್ದಕ್ಕಿದ್ದಂತೆ ಆನಂದದ
ಸಂಗತಿ ಏನಿದೆ? ತಕ್ಷಣವೆ ನುಗ್ಗಿ ಇಬ್ಬರ ಮಧ್ಯೆ ಮತ್ತೆ ಜಗಳ
ಬರದಿರಲೆಂದು- ಪೌರೋಹಿತ್ಯ ವಹಿಸಿದೆವು:
ಎದೆಯ ಬಾಗಿಲು ತೆರೆದು ಒಳಗ ಕರಕೊಳ್ಳಿರಿ
ಎಡವುದು ಬ್ಯಾಡ ಹೊಸ್ತಿಲೊಳಗ.
ಮೆಲ್ಲಗ ಮಾತಾಡಿ ಮೆಲ್ಲಗ ಕೈ ಇಡಿರಿ
ವಿಶ್ವಾಸ ಮೂಡಲಿ ಒಳಗೊಳಗ.
ನಮ್ಮ ಹಿತನುಡಿ ಕೇಳಿ
ಬೆದರಿದ ಕುರಂಗಾಕ್ಷಿ
ಮದನ ಕದನಾಪೇಕ್ಷಿ
ಕಿಡಿ ತಗಲಿದರೆ ಸಿಡಿವ ಮದ್ದಿನ ಕುಡಿಕೆಯಂಥ ಯಕ್ಷಿ
ಒಮ್ಮೆ ವಾರಿನೋಟ ಬೀರಿದಳು ನೋಡು ಹುಡುಗನ ಕಡೆಗೆ-
ಚಂದಮುತ್ತ ಥರಥರ್‍ನೆ ನಡುಗಿ
ನಿನ್ನ ಕರುಣೆಯ ಹರಣ ದೇವೀ ಎಂದು
ಓಡಿ ಹೋಗಿ ದಿಂಡುರುಳಿ
ಪುಳಕಜಲದಲಿ ಅವಳ ಪಾದ ತೊಳೆದ.
ಎಲ್ಲಿದ್ದನೋ ಮಾರಾಯ ಮಾರ,
ಸಕ್ಕರೆ ಬಿಲ್ಲಿನ ಹೆದೆಯ ಶಕ್ತಿಂದ ಕರ್ಣಕೆ ಸೆಳೆದು
ಪಂಚೈದು ಬಾಣಗಳ ಹೊಂಚಿ ಬಿಟ್ಟ ನೋಡು-
ತಬ್ಬಿಬ್ಬಾದರಿಬ್ಬರೂ.

ಠಿಚಿge ೫೧ sಣಡಿಚಿಣs heಡಿe
೮. ಮನಸಿನ ತುಂಬೆಲ್ಲ ನೆನಪುಗಳ ಗಾಯ

ಮಾರನೆ ಬೆಳಿಗ್ಗೆ ಕೂಡ ನಿನ್ನೆಯ ಆನಂದದ ಅಮಲಿನಿಂದ ಹೊರಬರಲಿಲ್ಲ ಅಬ್ಬೆ. ಕಪಿಲೆ ಚಡಪಡಿಸಿತ್ತು ಬೆಳ್ಳಂಬೆಳಗು. ಯಾರೊ ಸುಳಿಧಂಗಿತ್ತು ಕೊಟ್ಟಿಗೆಯ ಬಳಿಯಲ್ಲಿ. ಯಾರೆಂದು ತಿಳಿಯದೆ, ಯಾರೂ ಇರಲಿಲ್ಲವೆಂಬ ಭಾವ ಗಟ್ಟಿಯಾಗದೆ, ಇದ್ದರೆಂಬ ನಂಬಿಕೆ ಹೋಗದೆ – ಅಂತೂ ಭ್ರಾಂತುಭಾವದಲ್ಲಿ ಮಗನನ್ನೇ ಕೇಳಬೇಕೆಂದಳು. ಅವನಾಗಲೇ ಹೊರಗೆ ಹೋಗಿದ್ದರಿಂದ ಹ್ವಾರೆಗೆ ತೊಡಗಿದಳು.
ಬೆಳಗುವ ಪ್ರಾಯದ ಮಗನಿಗಿಂತ ಮುಂಚೆ ಅವನ ಪರಿಮಳದ ಗಾಳಿ ಬೀಸಿ ಗೂಡಿನ ತುಂಬ ಪಸರಿಸಿತು. ಲೋಕವ್ಯಾಪಾರ ಮರೆತವರಂತೆ, ಇನ್ಯಾವುದೋ ಲೋಕಾಂತರಕ್ಕೆ ಸಂಯಮಿಸಿ ಹೂವ ಹುಡದಿಯ ಒಳಗೆ ಹುಡದಿಯಾಡಿ ಬಂಧಂಗಿದ್ದ. ಅಬ್ಬೆಯ ನೋಡಿ ಹೆದರಿ ಬೆವರಿಳಿದು ತಬ್ಬಿಬ್ಬಾದ. ಹೌದೆಂಬ ನಡೆನುಡಿಯ ಮಗ ಇಂದ್ಯಾಕೆ ಹಿಂಗೆಂದು, ಕಣ್ಣಲಿನ್ನೂ ನೆನ್ನೆಯ ದಣಿವಿದೆಯೆಂದು –
‘ಮಿಂದೆಯಾ ಕಂದಾ?’
ಎಂದಳು.
‘ಇಗೋ ಮಿಂದು ಬಂದೆ’
ಎಂದು ತಾಮಸವ ನಿವೃತ್ತಿಯ ಮಾಡಿ ಲಂಗೋಟಿಯ ತಗೊಂಡು ದುಡುದುಡುನೆ ಹೊರಗೋಡಿದ. ಹಂಗಿದ್ದರೀವರೆಗೆಲ್ಲಿ ಹೋಗಿದ್ದನೆಂದು ಯೋಚಿಸಿ ಬಗೆಹರಿಯದೆ ಅಡಿಗೆಗಿಟ್ಟಳು.
ಮಗ ಬಂದು ಭಕ್ತಿಗೆ ವಿಭೂತಿ ಹಚ್ಚಿಕೊಂಡು ದೇವರ ಬಿಲದೆದುರು ನಿಂತು ಶಿವಪೂಜೆ ಶಿವಗ್ಯಾನವ ಮಾಡಿ ನೂರೆಂಟು ಸಲ ಶಿವನಾಮವ ಹೊಗಳಿ ಬಂದ. ಲಕ್ಕಬ್ಬೆ ಮಗನ ಚೆಲ್ವಿಕೆಯ ಚೋದ್ಯವ ನೋಡಿ ಅಭಿಮಾನದಲ್ಲಿ ಮೈಮರೆತು ನಿಂತಿದ್ದವಳು ಮಗನನ್ನ ಯಕ್ಷಿಗೆ ಗುಡ್ಡ ಬಿಟ್ಟ ವೃತ್ತಾಂತ ನೆನಪಾಗಿ ನಿಟ್ಟುಸಿರಿಟ್ಟು ಕೈ ಹಿಡಿದು ಮಗನ ಒಲೆಯ ಬಳಿಗೆ ಕರೆದೊಯ್ದಳು. ಹಾಲು, ಅನ್ನ, ಜೇನು, ಬೆಲ್ಲ, ಪಾಲು ಪಂಚಾಮೃತದ ಅಡಿಗೆಯ ನೀಡಿ ತಾನೇ ತುತ್ತು ಮಾಡಿ ತಿನ್ನಿಸುವಾಗ ನೋಡಿದರೆ- ಮುಖದ ತುಂಬ ಗಾಯಗಳಾಗಿವೆ ಮಗಂಗೆ! ಚಂದ್ರಾಮನಂಥ ತಿಳಿಯಾದ ಮೋರೆಯಲಿ ಕಲೆ ತೋರಿವೆ!
ಕೆನ್ನೆ ಕತ್ತಿನ ಮ್ಯಾಲೆ ಮುದ್ದಿನ ಗಾಯ
ಗಲ್ಲ ತುಟಿಗಳ ಮ್ಯಾಲೆ ಹಲ್ಲೂರಿದ ಗಾಯ
ಮೈತುಂಬ ಕಂಡಾವು ಚೆಳ್ಳುಗುರು ಗಾಯ
ಮಾದಕದ ನೋಟುಗಳು ನೆಟ್ಟ ಎದೆ ಗಾಯ!
ಅವ್ವಾ ಕಣ್ಣಿನ ತುಂಬಾ ಕನಸುಗಳ ಗಾಯ
ಕಿವಿಗಳ ತುಂಬ್ಯಾವು ಗಳರವದ ಗಾಯ
ಹೃದಯದ ತುಂಬೆಲ್ಲ ಆನಂದಗಳ ಗಾಯ
ಮನಸಿನ ತುಂಬೆಲ್ಲ ನೆನಪುಗಳ ಗಾಯ!
ಮಗಂಗೆ ಹೆಣ್ಣು ಗಾಳಿ ಬೀಸಿರಬಹುದೇ? ಹಾಂಗಿದ್ದರೆ ನನಗೆ ತಿಳಿಸದೆ ನನ್ನ ಉಡಿಯಿಂದ್ಯಾರು ಕದ್ದೊಯ್ದರು ಕಂದನ್ನ?-
ಯಕ್ಷಿಯ ನೆನಪಾಗಿ ಸಳಸಳ ಬೆವರು ಜಲವಿಳಿದು ನೆಲ ತೊಯ್ದವು. ಇಲ್ಲಿಲ್ಲ ಹಂಗಾಗಿರಲಾರದೆಂದು, ಆಮ್ಯಾಲೆ ಮಗನ ಕೇಳಿದರಾಯ್ತೆಂದು ತನ್ನ ತಾನು ವಿವೇಕಿಸಿಕೊಂಡು ಸುಮ್ಮನಾದಳು.

೨೯. ಜೇನು ತುಂಬಿದ ಹೂಗಳೆಲ್ಲಾ ಕಡೆ

ಬರಬಾರದ ಜಡಿ ಮಳೆ ಜಡಿದು ಕೊಚ್ಚಿಹೋದವು ನೋಡು ಧರೆಯ ಖಾಯಿಲೆಗಳು ಮಾತ್ತು ಶಾಪಂಗಳು,
ಹಳ್ಳಾಕೊಳ್ಳಾ ತುಂಬಿ ತುಳುಕಿ
ತೊಳೆದು ಹೋದವು ಎಲ್ಲ ಕಿಲುಬು.
ಕಾಡಿನಂಗಳದಲಿ ತಂಗಾಳಿಯಾಡಿ
ಮತ್ತೆ ಅಧಿಕಾರಕ್ಕೆ ಬಂತು ಹಸಿರು.
ಮೇಲು ಮಿರಿಲೋಕದ ಏಳುಪ್ಪರಿಗೆ ಮೋಡಗಳಲಿದ್ದ ನಾವು ಕನಸುಗಳು
ಮುತ್ತಾಗಿ ಸುರಿದು ಹೂವಾಗಿ ಅರಳಿ
ಏರಿದೆವು ಬೆಟ್ಟದ ಮುಡಿಗೆ.
ಕಂಡಲ್ಲಿ ಪಲ್ಲವಿಸಿ ಫಲ ಹೆರುವ ಮರಗಳು
ಜೇನು ತುಂಬಿದ ಹೂಗಳೆಲ್ಲಾ ಕಡೆ.
ದೀಪಗಳು ಉರಿದಾವು ಸಂಪಿಗೆಯ ಮರದಲ್ಲಿ
ತುಂಬಿಗಳ ತುಟಿಯಲ್ಲಿ ಹಾಡು ಜಿನುಗಿ.
ಕಾಡಿನ ಹೂಗಳಿಗೆ ರೆಕ್ಕೆ ಮೂಡಿದ ಹಾಗೆ
ಬಣ್ಣ ಬಣ್ಣದ ಚಿಟ್ಟೆ ಹಾರಾಡಿವೆ.
ಮರವ ಮತಾಡಿಸುವ ಸವಿಗೊರಳ ಹಕ್ಕಿಗಳು
ಆನಂದ ಹಾಡುಗಳ ಹಾಡುತ್ತಿವೆ.

೩೦. ಹಬ್ಬಿತು ಕೀರ್ತಿ ಪರಿಮಳದ ಪವನದಂತೆ

ಹಟ್ಟಿಯ ಕಾಡಿನಲ್ಲಿ ಇಂತಪ್ಪ ಹಸಿರಿನ ಪವಾಡಂಗಳು ನಡೆವ ಕಾಲದಲ್ಲಿ ತನ್ನ ಕೊಳಲ ಹಾಡಿನಿಂದ ಮಳೆ ಸುರಿಸಿದ ಚಂದಮುತ್ತನ ಕೀರ್ತಿ ಸುತ್ತೂ ಸೀಮೆಗೆ ಹಬ್ಬಿತು ನೋಡು ಹರಿಶ್ಚಂದ್ರನ ಗಾಳಿಯಂತೆ.
ಹಟ್ಟಿಯಲ್ಲಿ, ಹಟ್ಟಿಯವರ ಮನದಲ್ಲಿ
ಇನ್ನಿಲ್ಲ ಇವನ ಸಮನೆಂದು ಪೂರಾ ತುಂಬಿ
ಸಕಲರಿಗೆ ಬೇಕಾದವನಾದ ಚಂದಮುತ್ತ.
ಇಂಥ ಮಗನ ಪಡೆಯಲು ಲಕ್ಕಬ್ಬೆ
ಯಾ ಪುಣ್ಯ ಮಾಡಿದಳೋ ಯಾ ನೋಂಪಿ ನೋಂತಳೊ
ಎಂದು ಹೊಳಪುಳ್ಳ ಶಬ್ದಗಳಲ್ಲಿ ಹೊಗಳಿದರು ಜನ.
ಕೇರಿಗೆ ದೊಡ್ಡವನಾದ ಊರಿಗೆ ದೊಡ್ಡವನಾದ
ದಿಕ್ಕಿಗೆ ದೊಡ್ಡವನಾದ ನಾಡಿಗೆ ದೊಡ್ಡವನಾದ
ನಾಕು ರಾಜ್ಯ ಎಂಟು ದಿಕ್ಕಿನಾಗಿಲ್ಲ ಇವನ ಸಮ
ಎಂದು ಒಂದೆ ನುಡಿ ಸಾಕರಲು
ನೂರೊಂದು ಹೊಗಳಿದರು ಜನ.
ಮಳೆರಾಯನ ಪಳಗಿಸಿದನೆಂದು
ಸಿಡಿಲು ಮಿಂಚುಗಳ ಹಾದಿಗೆ ತಂದನೆಂದು
ರಂಯ ವಚನಂಗಳಿಂದ ಹಾಡಿ
ಮಕ್ಕಳಿಗವನ ಹೆಸರಿಟ್ಟರು ಜನ.

೩೧. ಸೂರ್ಯಮುತ್ತ ಹೆಗಡೆ ಕನವರಿಸಿದ್ದು

ದಿನಾ ಬೆಳೆಯುವ ಚಂದ್ರನ್ನ
ಹೊಳೆಯುವ ಚಂದ್ರನ್ನ
ಹ್ಯಾಗೆ ಸಹಿಸುತ್ತೀಯೋ ಕಂದಾ?
ಬೆಳ್ದಿಂಗಳು ಹಬ್ಬುವುದನ್ನ
ಲೋಕವ ಬೆಳಗುವುದನ್ನ
ಹ್ಯಾಗೆ ಕಣ್ಣಾರೆ ನೋಡುವಿಯಾ ಕಂದಾ?
ಬೆಂಕಿಯಿಡು ಅವನ ಮಸಡಿಗೆ.
ಆದಿಮದ ಸೇಡು ಮರೆಯಬೇಡವೊ.

೩೨. ಹೇಳಿ ಕಳಿಸಿದ ಹಾಗೆ ಇಳಿದು ಬಂದ

ಚಂದಮುತ್ತನ ಕೀರ್ತಿ ಪುರಕ್ಕೆ ತಲುಪಿದೇಟ್ಗೆ
ಭೂಮಂಡಳ ಗಿರ್ರನೆ ತಿರುಗಿ ಸೂರ್ಯ ದೇವರು ಕಳಚಿ ಬಿದ್ದಂಗಾಯ್ತು
ಮಹಾನುಭಾವನಿಗೆ.
ಇಂತಪ್ಪ ಕಲೆಗಾರ ಕೊಳಲೆಂತು ನುಡಿಸುವನೆಂಬುದ ಅರಿಯಬೇಕೆಂದು
ಒಡೆಯನ ವಾಕ್ಯವಾದದ್ದೇ
ಹಾವು ಮೆಟ್ಟಿದ ಹಾಗೆ ನೆಗೆದು ನಿಂತ.
“ಸೈ ಬಿಡು ಒಡೆಯಾ, ಅವ ನನ್ನ ಶಿಷ್ಯ
ಹೇಳಿ ಕಳಿಸಿದರೆ ಓಡೋಡಿ ಬರುವ”
-ಎಂದು ಆಶ್ವಾಸನೆಯ ನೀಡಿ-
ಎಲ ಎಲಾ ಮಳೆತರಿಸುವಂತಾದನೆ ಗೊಲ್ಲರ ಬಾಲಕ !
-ಎಂದು ವಿಸ್ಮಯಂಬಟ್ಟು
ನಿರನುಭವಿ ಹೈದ ಏನೆಲ್ಲ ಆದ ನನ್ನ ದಯದಿಂದ;
ಹಿಂದಿರುಗಿ ಬಂದು ಸಿದ್ಧಿ ಸಾಧನೆಗಳ ಸುದ್ದಿಯ
ಹೇಳಬಾರದೆ?
ಮಳೆರಾಗ ನನಗರಿದು, ಹಾಗಿದ್ದರಿವನೆಲ್ಲಿ ಕಲಿತ?
ಮುದಿ ಜೋಗ್ತಿಯ ಯೋಗವಾಯಿತೆ?
-ಎಂದು ಅನುಮಾನ ಮೂಡಿ
ಆನಂದಗೆಟ್ಟು ನೆಲದ ಮ್ಯಾಲೆ ನಿಲ್ಲದಾದ.
ಹೇಳಿ ಕಳಿಸಿದರೆ-
ಅರಿತವನು ತಾನೆಂಬ,
ನುರಿತವನು ತಾನೆಂಬ,
ಮಳೆ ತರಿಸಿದವನು ತಾನೆಂಬ ಹಮ್ಮಿನಲಿ
ಬಾರದೆ ಇದ್ದಾನೆಂದು,
ಖುದ್ದಾಗಿ ಹೋಗಿ ಕರೆತರಬೇಕೆಂದು
ಹೇಳಿಕಳಿಸಿದ ಹಾಗೆ
ಚಂದಮುತ್ತನ ಹಟ್ಟಿಗಿಳಿದು ಬಂದ.

ಠಿಚಿge ೧೦೫ sಣಚಿಡಿಣs heಡಿe
-ಟಚಿಟಿg|-size>

೩೩. ಮುರಿಯಿತಭಿಮಾನ

ನಾವು ಲೋಕದ ಕನಸುಗಳೆಲ್ಲ ಈಗ ಚಂದಮುತ್ತನ ಹಟ್ಟಿಯ ಕಾಡಿನಲ್ಲೇ ಬೀಡು ಬಿಟ್ಟಿದ್ದೆವು. ಎಲ್ಲೆಂದರಲ್ಲಿ ಹಸಿರೆಲೆಗಳಿಗೆ, ಹೂ ಚಿಗುರಿಗೆ, ದುನ್ಬಿ ಪಾತರಗಿತ್ತಿಗಳಿಗೆ, ಮನು ಮುನಿ ಮಾನವ ಖಗಮೃಗ ಜಾತಿಯ ಮನಸ್ಸುಗಳಿಗೆ ಅಂಟಿಕೊಂಡು ಚಂದಮುತ್ತ ಕೊಳಲು ತುಟಿಗಿಡುವುದನ್ನೇ ಕಾಯುತ್ತಿದ್ದೆವು. ಇಲ್ಲವೆ ಮೋಡಗಳಲ್ಲಿ ನವಿಲಾಟವಾಡುತ್ತ ಕಾಯುತ್ತಿದ್ದೆವು. ಕೊಳಲು ನುಡಿಸಿದನೇ, ಸುಖದ ಅಲೆಗಳಾಗಿ ತೇಲುವುದೊಂದೇ ಕೆಲಸ. ಇಂತಿರುವಲ್ಲಿ ಆ ದಿನ ಸಂಜೆ ಚಂದಮುತ್ತ ಹಿಂಡು ದನ ಮೇಯಿಸ್ಕೊಂಡು ಅಟ್ಟಿಸಿಕೊಂಡು, ಹಟ್ಟಿಗೆ ಬಂದು ಕೊಟ್ಟಿಗೆಗೆ ಬಿಟ್ಟು ಅಕ್ಕಚ್ಚು ಎರೆವಾಗ ಕೋಲಕಾರ ಬಂದು ಗೂಡಿನ ಕಟ್ಟೆಗೆ ಕೋಲುಕುಟ್ಟಿ ‘ಚಂದೂ ಚಂದಣ್ಣಾ ಚಂದಮುತ್ತಾ’- ಹೆಂಗಿದ್ದರೆ ಹಂಗೇ ಎಲ್ಲಿದ್ದರಲ್ಲಿಂದ ಬರಬೇಕೆಂದು ಹೆಗಡೆ ಹೇಳಿದನಪ್ಪೋ- ಎಂದು ಒದರಿದ್ದರಿಂದ ತುರ್ತಿನ ಕಾರ್ಯವೆಂದು ಅಬ್ಬೆಗೂ ಹೇಳದೆ ಓಡಿದ.
ಹೋಗಿ ನೋಡಿದರೆ ಹೆಗಡೆ ಮನೆಯ ಚಿತ್ರದ ಚಾವಡಿಯಲ್ಲಿ ಮುಕ್ಕಾಲು ಮಂಚದ ಮ್ಯಾಲೆ ನೂರೆಂಟು ಬಿರುದು, ಬೆಳ್ಳಿ ಬೆತ್ತದ ದಂಡಸಮೇತ ಒರಗಿ, ಎಲಡಿಕೆ ಮೆಲ್ಲುತ್ತ ಎಡ ಅಂಗೈಯಲ್ಲಿ ಬಲ ಹೆಬ್ಬೆರಳೂರಿ ಸುಣ್ಣದಲಿ ಸೊಪ್ಪಿನ ತುಂಡು ತೀಡುತ್ತ ಕುಂತಿದ್ದಾನೆ ಮಹಾನುಭಾವ! ನೋಡಿದ್ದೇ ಚಂದಮುತ್ತನ ಹೃದಯ ಹೂವಿನಂತರಳಿ ದಡುಬಡನೋಡಿ ದಿಂಡುರುಳಿ ಪಾದ ಪಡಕೊಂಡು “ಯಾವಾಗ ಬಿಜು ಮಾಡಿದೆ ಶಿವನೆ?” ಎಂದು ಗುರುಪಾದವ ಮತ್ತೆ ಮತ್ತೆ ಹಣೆಗೊತ್ತಿಕೊಂಡ. ಮಾರ್ಗಾಯಾಸವೆಂದು ಕಾಲೊತ್ತಿ ಪರಿಪರಿ ರೀತಿಯಲ್ಲಿ ಉಪಚರಿಸಿದ. ಇಷ್ಟಾದರೂ ಮಹಾನುಭಾವ ಏನೊಂದೂ ನುಡಿದಾಡದೆ ಕುಂತ ಹೆಗಡೆಯ ಕಡೆ ಮತ್ತವನ ಮಗನ ಕಡೆ ಕುಲಗುರುವಿನ ಕಡೆ, ನಿಂತ ಮಂದಿಯ ಕಡೆಗೆ ನೋಡುತ್ತ ಚಂದಮುತ್ತನ ಭಕ್ತಿಯ ತೋರಿಸಿ ಬೀಗುತ್ತ ಕುಂತ. ಪುರದಿಂದ, ನೇರ ಇಡೆಯನ ಕಡೆಯಿಂದ ಬಂದವನಾಗಿ ಹೆಗಡೆ ಸೈತ ಎಲ್ಲರನ್ನೂ ಹೆದರಿಸಿದ್ದ. ಈಗ ಈ ಕಾಡಿನ ಹೈದರಿಗೆ ತಾನು ಚಂದಮುತ್ತನ ಗುರುವೆಂಬುದು ತಿಳಿದಿರಲೆಂದು ಪ್ರಕಟದನಿಯಲ್ಲಿ ‘ಆಹಾ ಚೆಲುವಾಯ್ತು ನನ್ನಾಸೆ ಗೆಲುವಾಯ್ತೆಂ’ದು ಕಿಲಕಿಲ ನಗುತ್ತ “ಭೇಶ್ ಮಗನೆ, ನನ್ನ ಅಭಿಮಾನ ಕಾದ ಶಿಷ್ಯ ನೀನೊಬ್ಬನೇ ನೋಡು” ಎಂದು ಹೇಳಿ ಚಂದಮುತ್ತನ ಭಕ್ತಿಯ ದಯಮಾಡಿ ಸ್ವೀಕರಿಸಿ,
“ಗುರುವಿಗೆ ಸಣ್ಣವನಾಗಿ
ಹಟ್ಟಿಗೆ ದೊಡ್ಡವನಾಗಿ ಬಾಳು”
-ಎಂದು ಆಶೀರ್ವದಿಸಿದ. ಇದನ್ನೇ ಕಾಯುತ್ತಿದ್ದ ಹೆಗಡೆ ಚಿನ್ನಮುತ್ತನನ್ನ ಮಹಾನುಭಾವನ ಪಾದಂಗಳ ಮ್ಯಾಲೆ ಚೆಲ್ಲಿ “ಇದಕ್ಕೂ ಒಂದಿಷ್ಟು ವಿದ್ಯಾಬೋಧನೆಯಾದರೆ ಧನ್ಯನಾದೇನು ಶಿವನೆ” ಎಂದು ಕೈಮುಗಿದ ಮಹಾನುಭಾವ ಸಂತೋಷದಿಂದ
“ಹಂಗೇ ಆಗಲೇಳು.”
-ಎಂದು ಕೃಪೆ ಮಾಡಿದ. ಆದರೂ ಬೆಂಕಿಯಂತೆ ಉರಿವ ಕಣ್ಣಿನ ಮಹಾನುಭಾವನ ನೋಡಿ ಹೆಗಡೆ ಮತ್ತು ಚಿನ್ನ ಮುತ್ತನ ಹೊರತು ಮತ್ಯಾರಿಗೂ ಸಂತೋಷವಾಗಲಿಲ್ಲ.
ಯಾವ ಕಜ್ಜ ಕಾರ್ಯಕೆ ಬರೋಣವಾದಿರೆಂದು ಚಂದಮುತ್ತ ಕೇಳಿ, ಅವನು ಉತ್ತರವ ಮರೆಮಾಚಿ ಗುರುಶಿಷ್ಯರಿಬ್ಬರೇ ವೇಳೆ ಮೀರುವತನಕ ಏಕಾಂತ ಮಾತಾಡಿಕೊಂಡರು. ಅಕ್ಕಪಕ್ಕದ ಸುದ್ದು, ಕಾಡು ನಾಡಿನ ಸುದ್ದಿ, ಮಹಾ ಶಿವರಾತ್ರಿಯ ಸುದ್ದಿಯ ಮಾತಾಡುತ್ತ ಮುದುಜೋಗ್ತಿಯ ಪ್ರಸ್ತಾಪವಾದ ತಕ್ಷಣ ಮಿರಿಲೋಕದಲ್ಲಿ ಯಕ್ಷಿ ಹಾಕಿದ ಆಣೆ ನೆನಪಾಗಿ ಚಂದಮುತ್ತ-
“ಇಲ್ಲಿಂದ ಮುಂದೆ ಕೇಳಿದರೆ ನಿನಗೂ ಕೇಡು
ಹೇಳಿದರೆ ನನಗೂ ಕೇಡು ಗುರುಪಾದವೇ”
-ಎಂದು ಗಪ್ಪನೆ ಗುರುವಿನ ಕಾಲು ಗಟ್ಟಿಯಾಗಿ ಹಿಡಿದುಕೊಂಡ. ಮಾತಿನಲ್ಲಿ ಹೆಚ್ಚು ಕಡಿಮೆ ಬಂದದ್ದನ್ನು ಗಮನಿಸಿ ಮಹಾನುಭಾವನ ಅಭಿಮಾನ ಮುರಿಯಿತು. ಅಯಿತಾಯಿತು ಎಂದು ಕಾವಿ ಬಣ್ಣದ ಹಲ್ಲು ತೋರಿಸಿ ನಗಾಡಿ ಸುಮ್ಮನಾದ.
ಹರನ ಸಮ ಗುರು ಬಂದನೆಂಬ ವಾರ್ತೆಯ ಕೇಳಿ ಲಕ್ಕಬ್ಬೆ ಕರಿಕಂಬಳಿ ಮ್ಯಾಲೆ ಸೇಸಕ್ಕಿ ಹುಯ್ದು ಗದ್ದಿಗೆ ಮಾಡಿ ಆಸರೆಗೆ ಹಣ್ಣು ಹಾಲು ಜೇನುಗಳ ಸಜ್ಜು ಮಾಡಿ ವೀಳ್ಯೆದೆಲೆಯ ಸಣ್ಣಬುಟ್ಟಿ ಇಟ್ಟು ದಾರಿ ಕಾದಳು. ಕಾಲ ತಡವಾಗಿ ಮಗ ಬಂದನೇ ಹೊರತು ಗುರು ಬರಲಿಲ್ಲ.

೩೪. ಎದುರುಬದುರಾದರು ಗುರುಶಿಷ್ಯರು

ಮಾರನೆ ದಿನ ಚಂದಮುತ್ತ ಕೋಳಿಯಕೂಗಿನಲ್ಲಿ ಮಿಂದು ಮಡಿಯುಟ್ಟು ಯಕ್ಷಿಯ ಗುಡಿಗೈದಿ ಎಂದಿನಂತೆ ನೈವೇದ್ಯ ಬಾಗಿನಗಳ ಅರ್ಪಿತ ಮಾಡಿ ಹೊರಬಂದು ಬಾಗಿಲಿಕ್ಕಿಕೊಂಡು ಕಾದುನಿಂತ. ಗಳಿಗೆ ಎಷ್ಟಾದರೂ ಬಾಗಿಲು ತೆರೆಯಲಿಲ್ಲ. ಕಾದು ಕಂಗಾಲಾಗಿ ಮೆಲ್ಲಗೆ ಕದ ತೆರೆದು ಹಣಿಕಿ ಹಾಕಿದ. ವಿಗ್ರಹದ ಮುಂದಿನ ಮಡಿಬಟ್ಟೆ ಹಾಂಗೇ ಇದ್ದ ಚೋದ್ಯವ ನೋಡಿ ದುಃಖ ಗಾಬರಿಯಾಗಿ ಅಂಗಜಲ, ನೇತ್ರಜಲ, ಜಗುಳಿ, ನೆಲ ಒದ್ದೆಯಾದವು. ನನ್ನ ಭಕ್ತಿ ಬಿನ್ನವಾಯಿತೇ! ಎಂದು ಗಡ ಗಡ ನಡುಗಿ ಯಕ್ಷಿಯ ಪಾದದ ಮ್ಯಾಲೆ ಮೈ ಚೆಲ್ಲಿ ಅಡ್ಡಬಿದ್ದ.
ಅಡಗಿಸಿಟ್ಟ ಕಪಟ ತಂತಾನೆ ಪ್ರಕಟವಾಗುವ ಹಾಂಗೆ ಯಾರೋ ನಕ್ಕಿದ್ದು ಕೇಳಿಸಿ ಚಂದಮುತ್ತ ಆಸುಪಾಸು ನೋಡಿದ. ಅಕ್ಕ ಪಕ್ಕ ನೋಡಿದ. ಮ್ಯಾಲೂ ಕೆಳಗೂ ನೋಡುತ ಪರಿಶೋಧನೆ ಮಾಡಿದ. ವಿಗ್ರಹದ ಹಿಂದೆ ಅಡಗಿ ಕುಂತಿದ್ದ ಮಹಾನುಭಾವ ಫಳಾರನೆ ಹಲ್ಲು ತೋರಿಸಿ ನಂಜಿನ ನಗಾಡುತ್ತ ಈಚೆ ಬಂದ. ಘನಘೋರ ಆಘಾತವಾಯ್ತು ಚಂದಮುತ್ತನಿಗೆ.
ಚಂದಮುತ್ತ : ನಾನು ಬಾಗಿನವಿಟ್ಟು ಬಾಗಿಲಿಕ್ಕಿಕೊಂಡಾಗ ನೀನು ಒಳಗೇ
ಇದ್ದೆಯಾ ಗುರುಪಾದವೇ?
ಮಹಾನುಭಾವ: ಹೌದು.
ಚಂದಮುತ್ತ : ಯಾಕಾಗಿ?
ಮಹಾನುಭಾವ: ನಿನ್ನ ಸತ್ಯ ಕಾಂಬುದಕ್ಕೆ.
ಚಂದಮುತ್ತ: ಕಂಡೆಯಾ?
ಮಹಾನುಭಾವ: ಆಹಾ ಕಂಡೆನಯ್ಯಾ ಕಂಡೆನು!
ಗೊಲ್ಲಕುಲದ ಸೋಜಿಗವ ಕಂಡೆನು!
ಹಟ್ಟಿಯ ಕೀರ್ತಿಶಿಖರದ ಬೆಳಕ ಕಂಡೆನು!
ಲೀಲೆಗಳ ಮೆರೆವ ಮಹಾಲೀಲೆಗಾರ ನೀನು,
ನಿನ್ನ ಭಕ್ತಿಗೆ ಕಪ್ಪು ಬಿಳಿಯಾದದ್ದು,
ಬಿಳಿ ಬೆಳಕಿನಲ್ಲಿ ಕಲ್ಲಿನ ಯಕ್ಷಿ
ಹೆಣ್ಣು ದೇವತೆಯಾಗಿ ನಿನಗೊಲಿದಿದ್ದು ಕಂಡೆನು!
ಕಂಡೆನಯ್ಯಾ ಕಂಡೆನು
ಯಕ್ಷಿ ದಯಮಾಡಿ ನಕ್ಕದ್ದು
ಮೈಲಿಗೆ ಕಳೆದು ಮಡಿಯುಟ್ಟದ್ದು
ಚಂದ್ರಲೋಕದ ಗಾಳಿ ಬೀಸಿದ್ದು ಕಂಡೆನು!
ಚಂದಮುತ್ತ : ವ್ಯಂಗ್ಯದ ನುಡಿ ನಿನಗೆ ಶೋಭಿಸಲೊಲ್ಲದು ಶಿವನೆ.
ಮಹಾನುಭಾವ : ನಿನಗೆ ಸುಳ್ಳು ಕೂಡ.
ಚಂದಮುತ್ತ : ನಾನೇನು ಸುಳ್ಳು ಹೇಳಿದೆ?
ಮಹಾನುಭಾವ : ಹಾಂಗಿದ್ದರೆ ವಿಗ್ರಹ ತಂತಾನೆ ಕೈಯಾರೆ
ಯಾಕೆ ಮಡಿ ಉಡಲಿಲ್ಲ?
ಚಂದಮುತ್ತ: ಹಾಗೆಂದು ನಾನು ಕೊಚ್ಚಿಕೊಂಡಿಲ್ಲ.
ಮಹಾನುಭಾವ ಮಾತಿನಲ್ಲಿ ಸಣ್ಣವನಾದ. ವಿಗ್ರಹ ಮಡಿಯುಡುವ ವಿಚಾರ ಹೇಳಿದವನು ಚಿನ್ನಮುತ್ತ. ತನ್ನ ತಪ್ಪಿನ ಅರಿವಾಗಿ ಅದನ್ನು ಬಚ್ಚಿಟ್ಟುಕೊಂಡು ಎಡಗೈ ಕಿರು ಉಂಗುರ ಕಚ್ಚಿ ಮುಗುಳ್ನಕ್ಕು ಹೇಳಿದ.
ಮಹಾನುಭಾವ : ಆಯಿತಯ್ಯ,
ರಚನೆಯ ಮಾತು ಬಿಟ್ಟು
ಮುದಿಜೋಗ್ತಿಯ ವೃತ್ತಾಂತ ಹೇಲಯ್ಯ.
ನೀನವಳ ಗೆದ್ದ ಬಗೆ
ಅವಳಿಂದ ಹ್ಯಾಗೆ ವಿದ್ಯವ ಪಡೆದೆ?
ಎಂಬಿತ್ಯಾದಿ ಒಂದೂ ಬಿಡದೆ ಹೇಳು.
ಚಂದಮುತ್ತ : ಶಿವಪಾದವೇ,
ಬಲಗೈ ಭಾಷೆ, ಎಡಗೈ ನಂಬಿಕೆ ಕೊಟ್ಟು
ಹೇಳುತ್ತೇನೆ, ನನ್ನ ಮಾತು ನಂಬು.
ಜುಲುಮೆಯ ನಿಲ್ಲಿಸಿದರೆ ಇಲ್ಲಿಗೆ
ಇಬ್ಬರಿಗೂ ಹಿತ.
ಮಹಾನುಭಾವ: ಹೆಚ್ಚಳ ಪಡಬೇಡವೋ ಗೊಲ್ಲಗೋಕುಲದ ಹೊಸಕುಡಿಯೇ,
: ಈಗಷ್ಟೇ ಕುಡಿ ಬಿಟ್ಟದ್ದೀಯಾ, ನೆತ್ತಿಯ ಸುಳಿ ಬಲಿಯುವ
: ತನಕ ನಿಧಾನಿಸು. ಗುರುವಿಗೂ ಮಿಗಿಲೇನು ಆ ನಿನ್ನ ಮುದಿ
ಜೋಗ್ತಿ? ಗುರುದ್ರೋಹ ದೋಷಕ್ಕೆ ಈಡಾಗಬಾರದೆಂಬಲ್ಲಿ
ನುಡಿಗಳಿಗೆ ವೇಷ ತೊಡಿಸದೆ ನಿಜವಾರ್ತೆಯ ಹೇಳು.
ಚಂದಮುತ್ತ : ಕಿವಿಯ ಸುಖವ ನಾನು ನುಡಿಯಲಾರೆ ಶಿವನೇ.
ಮಹಾನುಭಾವ: ಹಾಂಗಿದ್ದರೆ ನೀನೇ ತೂಕ ಮಾಡಿ ಹೇಳಯ್ಯಾ. ತಂದೆಗಿಂತ
ನೂರು ಮಡಿ ಹೆಚ್ಚಿನ ಗುರುವಾಗಿ ಭೋಧನೆ ಮಾಡಿದ ನಾನು
ಕಮ್ಮಿ; ಆ ಮುದಿಜೋಗ್ತಿ ಹೆಚ್ಚಲ್ಲವೆ ನಿನಗೆ?
ಚಂದಮುತ್ತ : ಪೂರ್ವಾಪರವರಿಯದೆ ಮಾತಾಡುತ್ತಿರುವಿ ಗುರುವೆ.
ಈ ಮೂಲಕ ರಿಪೇರಿಯಾಗದ ಅಪಾಯಗಳ
ಇಬ್ಬರಿಗೂ ತಂದೊಡ್ಡುವಿ ಅಂತ ಗೊತ್ತೇನು?
ಮಹಾನುಭಾವ: (ಪಾಯ ನೋಡಿ ಪಟ್ಟು ಹಾಕುವಂತೆ)ಆಯಿತಯ್ಯ. ದಕ್ಷಿಣೆ
ತೆರಬೇಕಲ್ಲವೆ ಗುರುವಿಗೆ ನೀನು? ಗುರುವಿಗೆ, ಗುರು ಕಲಿಸಿದ
ಕಲೆಗೆ, ಕಲೆಯೊಂದಿಗೇ ಬರುವ ಅದರ ಪರಿವಾರಕ್ಕೆ.
ಕೃತಜ್ಞತೆ ಅಂಬೋದಿದ್ದಲ್ಲಿ ಮುದಿಜೋಗ್ತಿಯ ವೃತ್ತಾಂತ
ವನ್ನೇ ಕೊಡು.
ಚಂದಮುತ್ತ : ಕೇಳಿದ ತಪ್ಪಿಗೆ ದುಬಾರಿ ದಂಡ ತೆರಬೇಕಾಗುತ್ತದೆ ನೀನು.
ಮಹಾನುಭಾವ: ಹೇಳದದ್ದರೆ ನೀನು ಕೂಡ.
ಚಂದಮುತ್ತ : (ಭಾವೋದ್ರೇಕದಿಂದ)ಹಾಂಗಿದ್ದರೆ ಕೇಳು.
: ಒಡೆಯಬಾರದ ಮಾತು ಒಡೆದಲ್ಲಿ
ಹೇಳಕೇಳುವ ನಾವಿಬ್ಬರೂ
ಪ್ರಾಣ ಬಿಡುವುದು ಖಚಿತ.
ಗುಟ್ಟು ಹೇಳಿದ್ದಕ್ಕೆ ನನ್ನೊಬ್ಬನ ಪ್ರಾಣ ಮಾತ್ರ
ಹೋಗುವಂತಿದ್ದರೆ ಆಗಲೆಂದು ಅರ್ಪಿತ ಮಾಡುತ್ತಿದ್ದೆ.
ಆದರೆ ಕೇಳಿದ ನೀನೂ
ನನ್ನ ಜೊತೆಗೇ ನಾಲಗೆ ಹಿರಿದು
ಪ್ರಾಣ ಬಿಡುತ್ತಿ.
ಹೇಳಲೇನು?
ಮಹಾನುಭಾವ: ಅದೇನೆಂಬುದ ಕೇಳಿಯೇ ಸಾಯುತ್ತೇನೆ, ಹೇಳಯ್ಯಾ-
ಎಂದು ಘಟ ಹೋದರೂ ಹಟ ಬಿಡಬಾರದೆಂದು, ಆದರೂ ಜೀವಭಯದಲ್ಲಿ ಅಳ್ಳೆಯ ಅರಳಿಸಿಕೊಂಡು ಕೆಂಡಗಣ್ಣಾಗಿ ನಿಂತುಕೊಂಡ ಮಹಾನುಭಾವ.
“ಹಾಂಗಿದ್ದರಿಗೋ ಕೇಳು”
-ಎಂದು ನಿರ್ಧಾರವಾಗಿ ನಿಂತಿದ್ದ ಚಂದಮುತ್ತ ಒಂದು ಕ್ಷಣ ಧ್ಯಾನ ತಪ್ಪಿ ಚಿತ್ತ ಮಿಡಿದು ಸುಮ್ಮನಾದ. ಸುಮ್ಮನಾಗುವ ಅಗತ್ಯವಿತ್ತು ಅವನಿಗೆ. ಸಾವಿನ ಭಯದಿಂದಲ್ಲ. ಹೇಳುವ ಮುನ್ನ ಸಾವಿರಾರು ಕನಸುಗಳನ್ನ ಬಲಿಕೊಡಬೇಕಾಗಿತ್ತು. ಒಂದೊಂದು ಕನಸೂ ಕರುಳಿಗಂಟಿಕೊಂಡು ಬೆಳೆದಿತ್ತು.
ಸಿದ್ಧಿ ಒಂದು ಶಾಪ, ಪ್ರಸಿದ್ಧಿ ಇನ್ನೊಂದು ಶಾಪ. ಪ್ರಸಿದ್ಧಿಯಾಸೆ ಅಸೂಯೆ ಹುಟ್ಟಿಸಿ ಮಹಾನುಭಾವನ ಎದೆಯಲ್ಲಿ ನಾಟಿ ಗಾಯ ಮಾಡಿತ್ತು. ಗುಣ ಹೊಂದುವ ಲಕ್ಷಣಗಳಿರಲಿಲ್ಲ. ಕೀಳುಗೀಳಿಗೆ ಗಂಟುಬಿದ್ದು ಚಂದಮುತ್ತನ್ನ ಗೋಳು ಗೋಳೆಂದು ಕಾಡಿಸಿ ಪೀಡಿಸಿ ಅವನು ತನ್ನ ಸತ್ಯಗಳನ್ನು ವ್ಯರ್ಥ ತೇಯುವ ಹಾಗೆ ಮಾಡಿದ. ಆದರೆ ಕೊನೆಯಲ್ಲಿ ಇಬ್ಬರ ವಾದ ಈ ಘಟ್ಟ ತಲುಪೀತೆಂದು, ಆತ್ಮಹತ್ಯೆಗಿಬ್ಬರೂ ಸಿದ್ಧರಾದಾರೆಂದು ನಮಗ್ಯಾರಿಗೂ ಅಂದಾಜಾಗಿರಲಿಲ್ಲ.
ಅಷ್ಟೂ ಕನಸುಗಳನ್ನು ಬಲಿಕೊಟ್ಟು ಚಂದಮುತ್ತ ಕಣ್ಣುಮುಚ್ಚಿ ಹೆತ್ತಯ್ಯ ಮುತ್ತಯ್ಯರ ನ್ನೆದು, ಲಕ್ಕಬ್ಬೆ, ಕಪಿಲೆ, ಚಕೋರಿ ಎಂಬ ಯಕ್ಷಿಯ ನೆನೆದು, ಹಂಕಾರ ಪಡುವವರ ಬೆಂಕೀಲಿ ಸುಡುವ ಕೆಂಡಗಣ್ಣ ಸ್ವಾಮಿ ಶಿವನ ನೆನೆದು ಹೇಳುವುದಕ್ಕೆ ಬಾಯಿ ತೆಗೆದ ನೋಡು-
ಅಷ್ಟರಲ್ಲಿ ಯಕ್ಷಿ ಗುಡಿಯ ದ್ವಾರಬಾಗಿಲು ಧಡಾರನೆ ಮುಚ್ಚಿಕೊಂಡಿತು. ಇಬ್ಬರೂ ಆ ಕಡೆ ನೋಡಿದರು. ಮಹಾನುಭಾವ ಹೇಳಬೇಡವೆಂದು ಕೈಸನ್ನೆ ಮಾಡಿ ಸೂಚಿಸಿ ಆಗಲೇ ತನ್ನನಗಲಿದ್ದ ಉಸಿರನ್ನ ದೀರ್ಘವಾಗಿ ತಗೊಂಡು ಮೈಯಂತ ಮೈಯೆಲ್ಲ ಜಲ ಜಲ ಬೆವರಿ ಕುಸಿದ. ಸುಧಾರಿಸಲು ಸಮಯವೇ ಹಿಡಿಯಿತು. ಅಷ್ಟರಲ್ಲಿ ಗುಡಿಯ ದ್ವಾರ ಬಾಗಿಲು ತೆರೆಯಿತು. ಮೈಲಿಗೆ ಬಟ್ಟೆ ಹೊರಕ್ಕೆ ಬಿತ್ತು. ಹೋಗಿ ನೋಡಿದರೆ ಯಕ್ಷಿಯ ಮೈಮ್ಯಾಲೆ ಮಡಿಬಟ್ಟೆಯಿತ್ತು. ಅರ್ಥವಾಗಿ ನಕ್ಕು ಮಹಾನುಭಾವ
“ಇಷ್ಟಾದ ಮ್ಯಾಕೆ ನನ್ನವರ್‍ಯಾಕೆ ತನ್ನವರ್‍ಯಾಕೆ?”
ಎಂದುಕೊಳ್ಳುತ್ತ ಹೇಳಕೇಳದೆ ಹಟ್ಟಿಯ ಕಡೆಗೆ ನಡೆದ. ನಾನು ಕಾರಣವಾಗಿ ಮಾನಕ್ಕೆ ಹೀನಾಯವಾದರೂ ಇಂತೆಂಬ ಕಷ್ಟನಿಷ್ಠುರದಿಂದ ಪಾರು ಮಾಡಿದೆಯಲ್ಲ ದೇವೀ-ಎಂದು ಚಂದಮುತ್ತ ಯಕ್ಷಿಯ ಪಾದಕ್ಕೆ ಹಣೆ ಗಟ್ಟಿಸುತ್ತಿರಬೇಕಾದರೆ-

೩೫. ಏನೆಂದು ಚಿಂತಿಯ ಮಾಡಿದಳು?

ಈ ಕಡೆ ಹಾಡಿಯಲ್ಲಿ ಏನು ಕಥೆ ನಡೆಯಿತೆಂದರೆ, ಪುಣ್ಯಕೋಟಿ ಲಕ್ಕಬ್ಬೆಗೆ ಚಂದಮುತ್ತನ ಚಿತ್ರ ಚರಿತ್ರದ ಬಗ್ಗೆ ಚೋದ್ಯದ ಸುದ್ಧಿ ತಲುಪಿ ಆಘಾತವಾಗಿತ್ತು. ಮಗನಿಲ್ಲದಾಗ ಮಗನ ಗುರುದೇವ, ಅದೇ ಆ ಮಹಾನುಭಾವ ಬಂದು “ಯಕ್ಷಿಯ ಸಂಗವಾಗಿದೆ ಮಗಂಗೆ; ಕಾಪಾಡಿಕೊ” ಎಂದು ಅವನು ಹೇಳಿ, ಇವಳು ಕೇಳಿದ್ದೇ ಆಯ್ತು ನೋಡು ಬೋಧೆ ತಪ್ಪಿ ಬಿದ್ದಳು. ಸ್ಮೃತಿ ಬಂದಾಗ ಮಹಾನುಭಾವ ಇರಲಿಲ್ಲ. ಕಣ್ಣಿಂದ ಜಲಬಿಂದು ಜಗುಳಿ ಮುದುಕಿಯ ಆನಂದಗಳು ಇದ್ದಿಲಾದವು. ನೆಲಮುಗಿಲುಗಳಿಗೆ ತನ್ನ ದುಃಖವ ತೋಡಿಕೊಂಬಂತೆ ಮ್ಯಾಲೂ, ಕೆಳಗೂ ನೋಡಿ,
ಶಿವನೇ ಸಲವಬೇಕು ನೀ ನಮಗ
ಎತ್ತು ಬಗಲಾಗ
ಎಂದು ಶಿವದುಃಖ ಮಾಡುತ್ತ,
ಹೂವಿನ ವಿನ್ಯಾಸದ
ಮೂರ್‍ಕಾಲಿನ ಮಂಚವನೊರಗಿ
ಮುಂಗೈ ಮ್ಯಾಲೆ ಗದ್ದವ ಹೇರಿ ಗುಮಾನಿ ಬಂದು
ಚಿಂತಿಯ ಮಾಡಿದಳು.
ಏನೆಂದು ಚಿಂತಿಯ ಮಾಡಿದಳು?
ಎಲ ಎಲಾ, ಹೌಂದಲ್ಲ!
ಮಂದಮತಿಗೆ ಹೊಳೆದಿರಲಿಲ್ಲ.
ರಾತ್ರಿಯಿಡೀ ಎಲ್ಲೆಲ್ಲೋ ಅಲೆದಾಡಿ ಬರುವ
ಸುಖ ಸುರತದಲ್ಲಿ ಅದ್ದಿ ಬಂಧಂಗಿರುವ
ಮುರಿದ ಶಬ್ದಗಳಲ್ಲಿ ಏನೇನೋ ಕನವರಿಸುವ
ಆಡುತಾಡುತ ಶಬ್ದಗಳ ಮರೆವ
ನೋಡಿ ನೋಡದ ಹಾಗೆ ನುಡಿಸದೆ ಹೋಗುವ
ಹತ್ತಿರ ಬಂದರು ತಾತ್ಸಾರ ಮಾಡುವ
ಎಲೆ ಮರೆಯ ಪರಾಗ ಭರಿತ ಹೂವಿಗಾಗಿ
ದುಂಬಿಯಂತೆ ಅಂಬಲಿಸುತ್ತ
ಸದಾ ಪರಗ್ಯಾನ ಪರಚಿತ್ತದಲ್ಲಿರುವ!
ಇದೆಲ್ಲ ಹೆಣ್ಣಿನ ಸಂಗದೋಷವಲ್ಲವೆ?
ಹೆಣ್ಣೆಂದರೆ ಇವನಿಗೆ ಯಕ್ಷಿಯ ವಿನಾ
ಇನ್ಯಾರು?
ಈಗೊ ಇನ್ಯಾವಗೊ ಹರಣ ಹಾರ್‍ಯಾವೆಂದು
ಹಾಗೂ ಹೀಗೂ ಕಾದು ಹ್ಯಾಗೋ ಬದುಕಿದ್ದೇನೆ.
ಹ್ಯಾಗಿರುವಿ ಎಂದೊಮ್ಮೆ ಕೇಳಿದನ?
ಇವನಿಗೆ ಹತ್ತಿದೆ ಅಮರಿಯ ವ್ಯಸನ.
ತಂದೆಯಿಲ್ಲದ ಕಂದನೆಂದು ಕೊಂಡಾಟದಲಿ ಬೆಳೆಸಿದರೆ
ಬೇಲಿಯಿಲ್ಲದ ಬದುಕಾಯಿತಲ್ಲ ಮಗಂದು!
ಇದನು ಅನ್ಯರಿಗೆ ಹೇಳಲಮ್ಮೆ ಶಿವನ ಕೇಳಲಮ್ಮೆ.
ಈಗಿವನಿಗೆ ನೀತಿನುಡಿ ಹೇಳಬಲ್ಲವನು ಕುಲಗುರುವೆ ಸೈ ಎಂದು
ಬುದಿಂಗನೆದ್ದು ಕುಲಗುರುವಿನಲ್ಲಿಗೆ ಓಡಿದಳು. ನಮಸ್ಕಾರವ
ಮಾಡಿ, ಏನ್ಹೇಳ್ಲಿ ನನ್ನಪ್ಪ, ಚಂದಮುತ್ತ,
ಒಂದರಿತು ಇನ್ನೊಂದನರಿಯದ ಕಂದನ
ನಡೆ ಚೋದ್ಯವೋ ಶಿವನೆ ನುಡಿ ಚೋದ್ಯ | ನೀನಾರೆ
ಹೇಳಬಾರದೆ ನೀತಿ ನುಡಿಯ ||
ಕ್ಷಣ ನಕ್ಕು ದಿನವೆಲ್ಲ ಹುಬ್ಬುಗಂಟಾಗುವನು
ಹೃದಯಕ್ಕೆ ಬಾಹಿರಳ ಮಾಡಿ| ನೋಡುವನು
ಮುಳ್ಳಿರುವ ನೋಟಗಳ ಬೀರಿ ||
ಚಂದ್ರನ ಕಲೆಯಂಥ ಕಲೆಗಳು ಮೂಡ್ಯಾವು
ಕಂದನ ಕೆನ್ನೆಯಲಿ ದಿನವು | ಕಣ್ಣಲ್ಲಿ
ದಣಿದ ಸುಖ ಆಕಳಿಸುತಾವು ||
-ಎಂದು ಹಾಡಿಕೊಂಡತ್ತಳು. ಯಕ್ಷಿಯ ಸಂಗವಾಗಿದೆಯಂತೆ ಮಗಂಗೆ ಕವಡೆ ಚೆಲ್ಲಿ ಶಾಸ್ತ ನೋಡು ನನ್ನಪ್ಪಾ ಎಂದು ಜಲಜಲ ಕಣ್ಣೀರು ಸುರಿಸಿದಳು.
ತಾಯಿ ನುಡಿ ಸಾದ್ಯಾಂತ ಕೇಳಿ ಕಳವಳ ವೇದ್ಯವಾಗಿ ಕುಲಗುರು ಶಿಷ್ಯನ ಬಗ್ಗೆ ಚಿಂತಿಸುತ್ತ ಚೌಕಚಿತ್ತಾರದ ಮಣೆ ಮ್ಯಾಲೆ ಕಂತೆ ಹಾಸಿ ಕವಡೆಗಳ ತಂದು ಬೆಟ್ಟದ ಕಡೆ ಮುಖ ಮಾಡಿ ಸಿರಿಮಾಯಿಯ ಧ್ಯಾನಿಸಿದ. ಆಮ್ಯಾಲೆ ಭಕ್ತಿಯಿಂದ ಕವಡೆ ಚೆಲ್ಲಿ ಬೆರಳೆಣಿಸಿ, ಗಣಿತ ಗುಣಿಸಿ ಲೆಕ್ಕಾಚಾರ ಹಾಕಿ ಗಂಭಿರವಾಗಿ ಹೇಳಿದ.
ಕುಲಗುರು: ಹೌದು ಅಬ್ಬೆ.
ಮಗಂಗೆ ಯಕ್ಷಿಯ ಸಂಗವಾಗಿದೆಯೆಂದು
ಶಾಸ್ತ ಹೇಳುತ್ತದೆ.
ಲಕ್ಕಬ್ಬೆ: ಅಯ್ಯೊ ಅಯ್ಯೊ ನಾನು ಕೇಳಿದ್ದು
ನಿಜವಾಗಿದೆಯಲ್ಲಪ್ಪ.
ಕುಲಗುರು: ಆದರವಳು ನೀನಂದುಕೊಂಡಂತೆ
ಸೇಡುಮಾರಿ ಯಕ್ಷಿಯಲ್ಲ ಅಬ್ಬೆ.
ಲಕ್ಕಬ್ಬೆ: ಅವಳು ಆಕಾಶದ ತುದಿಯಲ್ಲಿರುವವಳು
ನಮಗೆ ದೇವರೊಂದಿಗೆ ಒಗೆತನ
ಅಥವಾ ವೈರ ಸಾಧ್ಯವೆ ಶಿವನೆ?
ಕುಲಗುರು: ಸಮಾಧಾನ ಮಾಡಿಕೊ ಅಬ್ಬೆ.
ಚಂದಮುತ್ತ ನಿನಗೆ ಮಗನಾದರೆ ನನಗೆ ಶಿಷ್ಯ.
ಶಾಸ್ತ ರೀತ್ಯಾ ಲಾಭಾಂಶಗಳೇ ಜಾಸ್ತಿಯಿವೆ
ಈ ಒಗೆತನದಲ್ಲಿ.
ಲಕ್ಕಬ್ಬೆ: ಅವಳು ಎಷ್ಟೆಂದರೂ ಬ್ಯಾರೆ ಸೀಮೆಯವಳು.
ಹಸಿರು ಕಣ್ಣವಳು, ಕರಾಳ ವಿದ್ಯೆ ಬಲ್ಲವಳು.
ಅವಳ ಕಟ್ಟಳೆ ಹ್ಯಾಂಗಿದೆಯೊ!
ಅವಳ ಜೊತೆ ವ್ಯವಹರಿಸಲಿಕ್ಕೆ
ನಿನ್ನ ಜಾಣ್ಮೆ ಸಾಲದೇ ಬರಬಹುದು ಅಂತ
ತಿಳಿ ಹೇಳಿ ಮಗನ ಪಳಗಿಸು ಶಿವನೇ.
ಲಕ್ಕಬ್ಬೆ: ನಮ್ಮಳವು ಮೀರಿದ ಸತ್ಯಗಳು ಬೇಕಾದಷ್ಟಿವೆ ಅಬ್ಬೆ;
ಅವುಗಳನ್ನು ಶಿವ ನೋಡಿಕೊಳ್ಳುತ್ತಾನೆ. ಮಗನನ್ನ
ಹ್ಯಾಂಗೂ ಯಕ್ಷಿಗೆ ಗುಡ್ಡ ಬಿಟ್ಟಿರುವಿ. ಇನ್ನವನ
ಆಗುಹೋಗು ಅವಳದಲ್ಲವ? ನೀನು ಯಕ್ಷಿಯ
ಮೀಯಿಸಿದ ದಿನ ಕಾರಣಿಕದಲ್ಲಿ ನಿನ್ನನ್ನವಳು ಅತ್ತೆ‌ಅಂದದ್ದು
ನೆನಪಿದೆಯ ಅಬ್ಬೆ?
ಲಕ್ಕಬ್ಬೆ: ಆಹಾ ಹೌದು ಶಿವನೆ!
ಎಂದು ನೆನಪಾಗಿ ತಾಯಿ
ಸಳಸಳ ಪುಳಕ ಜಲದಲ್ಲಿ ಅದ್ದಿಹೋದಳು.
ಕುಲಗುರು : ಅಂದಿನಿಂದ ಚಂದಮುತ್ತನ ಕೀರ್ತಿ ಹಬ್ಬಿದೆ.
ನಮ್ಮ ಕಾಡು ಹಚ್ಚ ಹಸಿರಾಗಿದೆ.
ಕೊಟ್ಟಿಗೆಯಲ್ಲಿ ದನಕರು, ಕಾಡಿನಲ್ಲಿ ಜೇನು,
ಹಣ್ಣು ಹೆಚ್ಚಿಲ್ಲವೆ?
ನಮ್ಮ ಕೂಸುಗಳು ಹೆಚ್ಚು ಹೆಚ್ಚು ಹಡೆಯುತ್ತಿಲ್ಲವೆ?
ಹೆರಿಗೆಯಾಗಿ ಒಂದು ಮಗುವೂ ಸತ್ತಿಲ್ಲ; ಸಾಕಲ್ಲವೆ?
ಚಂದಮುತ್ತ ಸಣ್ಣ ಹರೆಯದಲ್ಲಿ
ದೊಡ್ಡದನ್ನ ಸಾಧಿಸಲು ತಪಿಸುತ್ತಿದ್ದಾನೆ.
ಯೋಗ ಭಾಗ್ಯ ಹಾಂಗಿದ್ದರೆ ಹಂಗೇ ಆಗಲೇಳು.
ನಿನ್ನ ಗೋಳುಗಳಿಂದವನ ವ್ರತ ಭಂಗ ಮಾಡಬೇಡ.
ಯಕ್ಷಿಯನ್ನ ಸೊಸೆಯಾಗಿ ಪಡೆದುದಕ್ಕೆ
ಕುಲದೇವರ ಹಬ್ಬ ಮಾಡಬೇಕು ನೀನು
ಹೋಗು ಹೋಗು.
-ಎಂದು ತಿಳಿ ಹೇಳಿ ಕಳಿಸಿದ. ಮಗನನ್ನ ಇನ್ನೊಮ್ಮೆ ಕಳಕೊಂಡವಳಂತೆ ಗೋಳಾಡಿದಳು ಮುದುಕಿ. ಆಮೇಲಾಮೇಲೆ ತಾಯಿಗೆ ವಿಚಿತ್ರ ಅನುಭವಗಳಾದವು. ಒಮ್ಮೊಮ್ಮೆ ಹೊಸಲೋಕದ ಹೆಸರಿಸಲಾಗದ ಸುಖದ ಸನ್ನಿಧಿಯಲಿದ್ದಂತೆ ಆಕಾರಣ ಆನಂದಂಗಳ ಅನುಭವಿಸಿದಳು. ರಾತ್ರಿ ಹೊಳಹುದೋರದ ಶಾಂತ ಬೆಳಕು ಗೂಡಿನ ತುಂಬ ಸುಳಿದಾಡಿದ್ದ ಕಂಡಳು. ಮಗನೊಂದಿಗೆ ತನ್ನ ಗೂಡಿಗೆ ಯಾರೋ ಅತಿಥಿ ಬಂದ ಹಾಗೆ, ಗಾಳಿಯಲ್ಲಿ ಗಾಳಿಯಾಗಿ ಸಂಚರಿಸಿದ ಹಾಗೆ ಅನಿಸಿಕೊಂಡಳು. ದನಕರು ಅನೇಕ ಬಾರಿ ಇದ್ದಕ್ಕಿದ್ದಂತೆ ಕಿವಿ ನಿಮಿರಿ ಕಣ್ಣುಗಳು ಅಗಲವಾಗಿ ತೆರೆದು, ರೆಪ್ಪೆ ತುಳುಕದೆ , ನಿಶ್ಯಬ್ದವಾಗಿ ತನ್ನ ಅಥವಾ ಮಗನ ಹಿಂದೆ ಅಥವಾ ಮುಂದೆ ಅಥವಾ ಅಕ್ಕಪಕ್ಕ ನೋಡುತ್ತ ಮೈಮರೆಯುತ್ತಿದ್ದವು.
ಎನೇ ಆದರೂ ಯಕ್ಷಿ ನೆತ್ತರಲ್ಲಿ ಹುಟ್ಟಿದವಳಲ್ಲ, ನೀರಲ್ಲಿ ಬೆಳೆದವಳಲ್ಲ. ಅವಳೇನು ಉಂಡುಟ್ಟು ಬಾಳುವ ಹೆಣ್ಣೆ? ಇಲ್ಲಿಗೆ ತನ್ನ ಸಂತಾನ ಸಮಾಪ್ತಿಯಾಯಿತೆಂದು ನೆನಪಾದೊಡನೆ ಬೆಲ್ಲದಂಥಾ ಮನಸ್ಸು ಬೇವಾಗಿ ಹಡೆದ ಒಡಲಿಗೆ ಕೆಂಡ ತುಂಬಿದೆಯೇ ಮಾಯಿ- ಎಂದು ಏಳೇಳು ಲೋಕದ ಶಿವದುಃಖ ಮಾಡುತ್ತ ಕೂರುತ್ತಿದ್ದಳು. ಮಗನ ಪಳಗಿಸಲಾರೆನೆಂಬ, ಆಗುವ ಅನಾಹುತ ತಪ್ಪಿಸಲು ತನ್ನಿಂದಾಗದೆಂಬ ನಿರ್ಧಾರಕ್ಕೆ ಬಂದಂತಿದ್ದಳು ಮುದುಕಿ. ನಾವೇನು ಹೇಳಿದರೂ ಅದಕ್ಕೆ ಕಲ್ಲಿನಂತೆ, ಇಲ್ಲವೆ ಕಾಡಿನಂತಿರುತ್ತಿದ್ದಳು. ದಿನಾ ಕ್ಷೀಣಿಸುತ್ತಾ ಯಾವಾಗ ನೋಡಿದರೂ ಗುಟ್ಟಾಗಿ ಅತ್ತಹಾಗಿರುತ್ತಿದ್ದಳು. ತನ್ನಷ್ಟಕ್ಕೆ ತಾನು ಮಾತಾಡಿಕೊಳ್ಳುತ್ತಿದ್ದಳು. ನಮಗೆ ಆ ಮಾತು ಕೇಳಿಸುತ್ತಿರಲಿಲ್ಲ. ಕೇಳಿದರೂ ತಿಳಿಯುತ್ತಿರಲಿಲ್ಲ.

೩೬. ನಖಶಿಖಾಂತ ಉರಿದೆವು

ನಮ್ಮ ಕಥೆಗೆ ಒಂದಿನಿತೂ ಒದಗದ ಮಹಾನುಭಾವ ಮರೆವಿಗೆ ಸಂದು ಆರೆಂಟು, ಚಂದ್ರರು ಕಳೆದರು. ಈ ಮಧ್ಯೆ ಚಂದಮುತ್ತ ತಿಂಗಳುರಾಗದ ಕಠಿಣ ವ್ರತಾಚರಣೆಯಲ್ಲಿದ್ದನಾಗಿ ಘಟಿತಂಗಳೇನೂ ನಡೆಯಲಿಲ್ಲ.
ಅದೇನು ವ್ರತಾಚರಣೆಯೋ, ಚಂದಮುತ್ತ ದಿನಾ ತಾರೆ ಅಡಗಿ ತಾವರೆ ಅರಳುವ ಹೊತ್ತಿಗೆದ್ದು ಜಳಕವ ಮಾಡಿ ಜಡೆಕಟ್ಟಿ ಲಂಗೋಟಿ ಹಾಕಿಕೊಂಡು, ಮುಂಜಾನೆಯ ಹಾಲುಗಂಜಿ ಉಂಡು ಒಡಲ ತಂಪೇರಿಸಿಕೊಂಡು ಕಾಡು ಹೊಕ್ಕನೆಂದರೆ ಹೊರಬರುವುದು ಯಾವಾಗಲೊ. ವ್ರತಾಚರಣೆಯ ವಿಧಿಗಳು ಬೋರು ಬೋರೆಂದು ನಾವ್ಯಾರೂ ಆ ಕಡೆ ಸುಳಿಯಲಿಲ್ಲ. ಆ ದಟ್ಟ ಕಾಡಿನಲ್ಲಿ ಗಿಡಬಳ್ಳಿಗಳ ಅಡಿ ಪೊದರು ಕಡಿದು, ಮೇಲು ಪದರು ಸವರಿ ದಾರಿಮಾಡಿಕೊಂಡು ಚಂದಮುತ್ತನಿದ್ದಲ್ಲಿಗೆ ಹೋಗುವಷ್ಟು ಆಸಕ್ತಿ ನಮ್ಮಲ್ಲಿರಲಿಲ್ಲ.
ಚಂದಮುತ್ತ ಯಕ್ಷಿಯ ಸ್ನೇಹವ
ಚಪ್ಪರಿಸಿ ಸವಿದನೆಂದು
ಪರಾಗಭರಿತ ಹೂವಿನಲ್ಲಿ ದುಂಬಿ
ಹುದುಗಿ ಹೋಯಿತೆಂದು
ಪ್ರಿಯವಾದ ಚಾಡಿಗಳ ಹಾಡುಮಾಡಿ ಚಂಡಿನ ಹಾಗೆ ಅವುಗಳನ್ನು ನಮ್ಮ ಮಧ್ಯೆ ಎಸೆದಾಡುತ್ತ ಪರಸ್ಪರ ಚುಡಾಯಿಸುತ್ತ ಯಕ್ಷಿಯ ಗುಡಿಯ ಮ್ಯಾಲಿನ ಮೋಡಗಳಲ್ಲಿ ನವಿಲಾಟವಾಡುತ್ತ ಕಾಲ ಕಳೆಯುತ್ತಿದ್ದೆವು.
ಆದರೆ ಯಾವಾಗಂದರೆ ಆವಾಗ ಕೊಳಲ ತಾಲೀಮಿನ ದನಿ ಕೇಳಿಸಿ ಕಿವಿ ನಿಮಿರಿ ನಿಲ್ಲುತ್ತಿದ್ದೆವು. ನಾವು ಹಿಂದೆಂದೂ ಕೇಳರಿಯದ ನಾದಂಗಳು, ಹಾಡಿನ ತುಂಡುಗಳು ಪರಿಮಳದಂತೆ ತೇಲಿ ಬಂದು ಪರವಶಗೊಳಿಸುತ್ತಿದ್ದವು. ಜನ್ಮಜನ್ಮಾಂತರದ ಆಳದ ಸುಖ ಅಥವಾ ನೋವಿನ ಮ್ಯಾಲೆ ಯಾರೋ ಬೆರಳಾಡಿಸಿದಂತೆ ತನ್ಮಯರಾಗುತ್ತಿದ್ದೆವು.
ಚಂದಮುತ್ತನ ನಡೆನುಡಿಗಳಿಗೆ ಈಗ ಅಸಮಾನ್ಯ ಘನತೆ ಒದಗಿತ್ತು. ಅವನೊಂದು ಹೆಜ್ಜೆಯಿಟ್ಟರೂ ಅದರಲ್ಲಿ ನಿರ್ಧಾರ ಮತ್ತು ಛಲಗಳಿದ್ದುವಾಗಿ ನಡೆಯುವಾಗ ನಾವರಿಯದ ಯಾವುದೋ ಲೋಕದ ಜಬರ್‍ದಸ್ತ್ ಸಾಮ್ರಾಟನಂತೆ ಕಾಣುತ್ತಿದ್ದ. ಜೋಡಿ ಚಂದ್ರಾಮರಂಥ ಅವನ ಕಣ್ಣುಗಳಿಗೆ ಕ್ಷಿತಿಜದಾಚೆಗಿನ ದನಕರುಗಳೇನು, ಚಂದ್ರನಲ್ಲಿಯ ಜಿಂಕೆ ಕೂಡ ಕಾಣುತ್ತಿತ್ತು. ಬೀಜ ಬಿರಿಯುವ ಶಬ್ದ, ಚಿಕ್ಕೆ ತಾರೆಯರ ರೆಪ್ಪೆ ದನಿ ಕೂಡ ಕೇಳಿಸುತ್ತಿತ್ತು ಅವನ ಕಿವಿಗಳಿಗೆ. ಅವನ ಮೈಯಂತ ಮೈಯೆಲ್ಲ ಜಗ ಜಗ ಹೊಳೆಯುತ್ತಿತ್ತು. ಕೊಳಲು ನುಡಿಸುತ್ತಿದ್ದ ನೇರ ಶಿವನಿಗೇ ಕೇಳಿಸುವಂತೆ, ಕೇಳಿ ಶಿವ ಕೂತಲ್ಲೆ ಮೈಮರೆಯುವಂತೆ. ಸಣ್ಣವನಾದರೂ ಧರೆಗೆ ದೊಡ್ಡ ಸಾಧನೆಯಲ್ಲಿ ತೊಡಗಿದ್ದಾನೆಂದು ನಮಗೆ ಖಾತ್ರಿಯಾಗಿತ್ತು. ಆ ಸಾಧನೆ ಸೋಮವಾರ ಹುಣ್ಣಿವೆಯಂದು ಮಂಗಳವಾಗಲಿದೆಯೆಂದು, ಅವನ ಸಾಧನೆಯ ಸಿದ್ಧಿ ಫಲಂಗಳು ಅಂದೇ ಸಿಕ್ಕಲಿವೆಯೆಂದು ಸುದ್ಧಿ ಕೇಳಿದ್ದೇ ನಾವೆಲ್ಲ ಭಾವಪರವಶರಾದೆವು. ಕಲಾವಿದರೆಲ್ಲ ಕನಸುಗಾರರೇ. ಆದರೆ ಚಂದಮುತ್ತನ ಹಾಗೆ ನಮ್ಮನ್ನು ಕರುಳಿಗಂಟಿಸಿಕೊಂಡವರಿಲ್ಲ. ಸುದ್ಧಿ ಕೇಳಿ ನಮ್ಮಲ್ಲಿಯ ಕೆಲವರು ಬುಟ್ಟಿ ತುಂಬ ಬಣ್ಣದ ಹೂ ಹರಿದು ಆಕಾಶಕ್ಕೆ ಎರಚಿ ಹೂಮಳೆಯಲ್ಲಿ ನಿಂತು ಆನಂದವ ಆಚರಿಸಿದರು. ಇನ್ನೊಬ್ಬ ನೂರೊಂದು ಕಿರಣಗಳ ಪಂಚೈದು ಬಣ್ಣದ ಹೂಗಳಿಂದ ಮಳೆಬಿಲ್ಲು ಮಾಡಿ ಆಕಾಶವ ಸಿಂಗರಿಸಿದ. ಒಬ್ಬ ಯಕ್ಷಿಯ ಬಗ್ಗೆ ರಾಗ ರಚನೆಯ ಕಟ್ಟಿ ಕವಿ ಮಾಡಿ ಹೀಗೆ ಪದ ಹಾಡಿದ:
ತಿಂಗಳ ನಗೆಯವಳೊ
ನಮ್ಮ ಯಕ್ಷಿ | ಚಿಕ್ಕೆಗಳ ಮುಡಿಯುವವಳೊ
ಎದ್ದು ನೋಡೋ ಮುದ್ದು ಚಂದ್ರಾಮ | ಕಾಡಿನಲಿ
ಕೈಲಾಸ ತೂಗಿರುವಳೊ ||
ಗಿಂಡಿಯ ಮೊಲೆಯವಳೊ
ಚಿನ್ನದ ಚೊಂಬಿನ ಮೊಲೆಯವಳೊ
ಚಿನ್ನದ ಚೊಂಬಿನ ಮೊಲೆಯಿಂದ | ಬೆಳಕಿನ
ನೊರೆಹಾಲ ಸುರಿವವಳೊ ||
ಹಾಡಿಗೆ ಒಲಿಯುವಳೊ
ಹುರಿಗೊಂಡ | ನಾದದಲಿ ಅಡಗಿರುವಳೊ
ಗುಂಗುಗುಂಗಿನ ನಾದ ಗುಂಭದ | ಒಳಗಿಂದ
ಹಾಡಾಗಿ ಹೊಮ್ಮುವವಳೊ ||
ಚಂದಮುತ್ತನ ವ್ರತಾಚರಣೆಯ ಸಿದ್ಧಿಗೆ ಯಾವ ಕಂಟಕಗಳೂ ಬಾರದಿರಲೆಂದು ಎಳೆಯ ಸರಳನೊಬ್ಬ ಕೆಸರು ಮಣ್ಣಿನಲ್ಲಿ ಕಂಟಕ ನಿವಾರಕ ಬೆನಕನ ಮೂರ್ತಿಯ ಮಾಡಿ ಅಡ್ಡಬಿದ್ದ. ಇಲ್ಲಿಯೇ ಬಿಕ್ಕಟ್ಟಾಯಿತು ನೋಡು. ಇನ್ನೊಬ್ಬ ಮುಂದೆ ಬಂದು ಬೆನಕನಿಗೆ ಮಜ್ಜನ ಮಾಡಿಸೋಣವೆಂದು ಮೂರ್ತಿಯ ಮ್ಯಾಲೆ ನೀರು ಸುರಿದ.
ಅಯ್ಯಯ್ಯೋ ಪಾಪವೇ! ಅಕಟಕಟಾ ಕರ್ಮವೇ!
ಕೆಸರಿನ ಬೆನಕ ಭಿನ್ನವಾಗಿ
ಕೈಕಾಲೊಂದು ಕಡೆ, ಸೊಂಡಿಲೊಂದು ಕಡೆ ಬಿದ್ದು
ಮೂರ್ತಿಯ ಮಾಡಿದಾತ ದೊಡ್ಡ ದನಿ ತೆಗೆದು
ಬಾಯಿ ಬಡಕೊಂಡತ್ತ.
ಸುರುವಾಯಿತು ವಿರಸ.
ಉರಿದೆವು ನಖಶಿಕಾಂತ.
ಕನಸುಗಳು ಇತ್ತಂಡಗಳಾಗಿ
ಸುಡುಸುಡುವ ಮಾತು ಸುರಿದೆವು
ಪರಸ್ಪರರ ಮ್ಯಾಲೆ.
ರಾತ್ರಿ ಸುಮ್ಮನಿರದೆ ಅಬ್ಬೆಯ ನಿದ್ದೆಗೂ ನುಗ್ಗಿ
ಬೆಳ್ಳಂಬೆಳಗು ಜಗಳವಾಡಿ
ಹುಡದಿಯಾಡಿದೆವು
ಕಠಿಣೋಕ್ತಿಗಳಿಂದ ಹೀಂಕಾರವಾಗಿ ಜರಿದು
ಪಂಥವ ಮಾಡಿ ಅಗಲಿದೆವು.
ಹಿಂಗಾಗಿ ಹುಣ್ಣಿಮೆ ದಿನದ ಯಕ್ಷಿಯ ಬೆಳಗಿನ ಪೂಜೆಗೆ
ನಾವ್ಯಾರೂ ಸಿದ್ಧರಿರಲಿಲ್ಲ.
ಹಕ್ಕಿಯ ಚಿಲಿಪಿಲಿಗೆ ಎಚ್ಚೆತ್ತು ನಾವಿನ್ನೂ ಆಕಳಿಸುತ್ತಿರಬೇಕಾದರೆ-
ಯಕ್ಷಿಯ ಗುಡಿಗೆ ಚಂದಮುತ್ತನ ಬದಲು ಲಕ್ಕಬ್ಬೆ ಸಾಮಾಗ್ರಿ ಸಮೇತ ಬಂದುದ ಕಂಡು ಬೆರಗಾದೆವು. ಅವಳೊಂದಿಗೆ ಕಪಿಲೆಯ ಕರು ನಂದಿನಿ ಬಂದಿತ್ತು. ಇದೇ ಮೊದಲ ಬಾರಿ ಇಷ್ಟು ದೂರ ಬಂದುದರಿಂದ ಗುಡಿ, ಕಾಡು ಘಮಘಮ ಮಾಡಿಸುವ ಮಲ್ಲಿಗೆ ಇವನ್ನೆಲ್ಲ ಕಂಡು ಕರುವುನ ಕಿವಿಯಲ್ಲಿ ಗಾಳಿ ತುಂಬಿ ವಿನಾಕಾರಣ ಓಡಾಡಿ ಆನಂದವನ್ನಾಚರಿಸಿತು. ನಾವು ಮುದುಕಿಯ ಉತ್ಸಾಹ ಕಂಡು ಆಶ್ಚರ್ಯವ ಆಚರಿಸುತ್ತಿರಬೇಕಾದರೆ ಎಲ್ಲಿಗೋ ಹೋಗಿದ್ದ ಯಕ್ಷಿ ಅವಸರದಲ್ಲಿ ಬಂದು ವಿಗ್ರಹದಲ್ಲಿ ಅಡಕಗೊಂಡಳು. ಅಬ್ಬೆಗಿದು ಕಾಣಲಿಲ್ಲವಾದರೂ ನಂದಿನಿಗೆ ಗೋಚರವಾಗಿ ಮೈ ಅದುರಿ ಹೆದರುತ್ತ ಕಿವಿ ನಿಮಿರಿ ಕಣ್ಣಗಲಿಸಿ ಒಂದೇ ಸಮನೆ ನಿಟ್ಟಿಸಿತು. ಹೊತ್ತು ಬಹಳ ಹೀಗೇ ನಿಂತು ನೋಡಿ ವಿಗ್ರಹದ ಬಳಿ ಬಂದು ಮೈತುಂಬ ಮೂಸಿ ಅಪಾಯವಿಲ್ಲವೆಂದು ಖಾತ್ರಿಯಾದಾಗ ಆಶೀರ್ವದಿಸುವ ಅವಳ ಕೈ ನೆಕ್ಕಿತು.
ಚಂದಮುತ್ತ ಅವಸರದಲ್ಲಿ ಗುಡಿಗೆ ಬಂದಾಗ ಲಕ್ಕಬ್ಬೆ ಆಗಲೇ ಹಸಿರು ಗಂಜಳದಲ್ಲಿ ಗುಡಿ ಸಾರಿಸಿ, ಗಂಧದ ನೀರು ಸಿಂಪಡಿಸಿ, ಹೊರಗಡೆ ಬಣ್ಣದ ರಂಗೋಲಿ ಹುಯ್ಯುತ್ತಿದ್ದಳು. ಮಗನ ನೋಡಿ “ಮಲ್ಲಿಗೆ ಮೊಗ್ಗಿನಿಂದ ದಂಡೆ ಮಾಡು” ಎಂದು ಹೇಳಿ ಒಳಗೆ ಬಂದು ನಂದಾದೀಪ ಏರಿಸಿದಳು. ಯಕ್ಷಿಗೆ ಎಣ್ಣೆತುಪ್ಪದಲ್ಲಿ ಮಜ್ಜನ ಮಾಡಿಸಿದಳು. ಆಮ್ಯಾಲೆ ಸೀಗೆ ಕಾಯಿಂದೊಮ್ಮೆ, ಸಾಬೂನಿನಿಂದೊಮ್ಮೆ ಮೈಯ್ಯುಜ್ಜಿ ಪಾತಾಳಗಂಗೆಯ ತಿಳಿನೀರೆರೆದು ತಂಪು ಮಾಡಿದಳು. ಅಡಿಯಿಂದ ಮುಡಿತನಕ ಸೀರೆ ಸೆರಗಿನಿಂದೊರೆಸಿ ಮೈ ಆರಿಸಿದಳು. ನಮ್ಮಲ್ಲಿಯ ಕೆಲವರಾಗಲೇ ಮೋಜು ಮಜ ಮಾಡುತ್ತ ಮುದುಕಿಯ ಕಣ್ಣಿಗೆ ಮಾಯ ಮಾಡಿಯೇ ಬಿಟ್ಟರು. ವಿಗ್ರಹದ ಬದಲು ಅಬ್ಬೆಗೆ ತನ್ನ ಸೊಸೆ ಚಕೋರಿ ಎಂಬ ಯಕ್ಷಿಯೇ ಕಾಣತೊಡಗಿದಳು. ಅವಳ ಮೂರು ಮಾರಿನ ಕಾಳನೀಳ ಕೂದಲು ಕೊಡವಿ ಜಾಡಿಸಿ, ಎಳೆಬಿಸಿಲಲ್ಲಿ ಸೊಂಪಾಗಿ ಬೆನ್ನಿಗಿಳಿಸಿ, ಬಂಗಾರ ಬಾಚಣಿಕೆಯಿಂದ ಹಿಕ್ಕಿ, ಹೇನುಗಳ ಹೆಕ್ಕಿ ತೆಗೆದು ಕೊಡದಂಥಾ ತುರುಬು ಕಟ್ಟಿದ ಕನಸು ಕಂಡಳು. ಉಡುಸೀರೆಯಲ್ಲಿ ಮೇಲಾದ, ಸೆರಗಿನಲ್ಲಿ ಹಾರುವ ಗಿಣಿ ನೂರು ಬರೆದ ಇಳಕಲ್ ಸೀರೆಯನುಡಿಸಿ, ಬುಗುರಿ ಕುಚದೆದೆಗೆ ಕುಣಿವ ನವಿಲು ಬರೆದ, ನವಿಲುಗುಂದದ ಕುಬಸ ತೊಡಿಸಿದಳು.
ಲಕ್ಕಬ್ಬೆಗೆ ಹ್ಯಾಗೇನೋ ನಮಗೆ ಮಾತ್ರ ವಿಗ್ರಹದಲ್ಲಿ ಅಡಕಗೊಂಡಿದ್ದ ಯಕ್ಷಿಯೂ ಕಾಣಿಸುತ್ತಿದ್ದಳಾಗಿ ಉತ್ಸಾಹದಲ್ಲಿ ಅಬ್ಬೆ ಸೇವೆ ಮಾಡುವುದು, ಯಕ್ಷಿ ಸಂಕೋಚದಿಂದ ಮುಟ್ಟಿದಲ್ಲಿ ಮುದುಡುವುದು ನೋಡಿ ನಮಗೆ ಬಹಳ ಮೋಜೆನಿಸಿತು. ಅಬ್ಬೆಯ ಅಕ್ಕರೆಗೆ ಚಕೋರಿ ಕರಗಿ ವಿಗ್ರಹದಲ್ಲೂ ಬೆವರಿದ್ದಳು. ಲಕ್ಕಬ್ಬೆ ಯಕ್ಷಿಯ ಸುಳಿಗುರುಳ ನ್ಯಾವರಿಸಿ, ಎಳೆಯ ಕುಂತಳ ತಿದ್ದಿ ಕೆನ್ನೆ ಕದಪುಗಳ ತಿಳಿ ಬೆವರೊರೆಸಿದಳು. ತಿದ್ದಿ ತೀಡಿದಳು ನೀಟಾದ ಬೈತಲೆಯ. ಕಣ್ಣಿಗೆ ಕಾಡಿಗೆ, ನೊಸಲಿಗೆ ಚಂದ್ರನ ತಿಲಕವನ್ನಿಟ್ಟಳು. ಸಂಪಿಗೆಯೆಸಳು ಮೂಗಿನಲ್ಲಿ ತೂಗುವ ಮುತ್ತಿನ ಮೂಗುತಿಯಿಟ್ಟಳು. ಕರಗಳ ಮ್ಯಾಲೆ ಗೀರು ಗಂಧವ ಬರೆದಳು. ಟೊಂಕಕ್ಕೆ ಒಡ್ಯಾಣ ಬಿಗಿದು ಕೊರಳಿಗೆ ಚಂದ್ರಹಾರಗಳನ್ನಿಟ್ಟು ಬಂಗಾರದಲ್ಲಿ ಶೃಂಗಾರ ಮಾಡಿದಳು. ಎಡಬಲ ಹೂ ಹಿಂಗಾರುಗಳನ್ನಿಟ್ಟು ಯಕ್ಷಿಯ ದುಂಡುದುರುಬಿನ ತುಂಬ ಹೂದಂಡೆ ಮುಡಿಸಿದಳು. ಎಂತೆಂತು ಸಿಂಗರಿಸಿದರು ಸಾಲದು ಸಾಲದಾಯಿತು ಮುದುಕಿಗೆ. ಸೊಸೆಯ ಕಣ್ಣು ಕೋರೈಸುವ ದಿವ್ಯ ಚೆಲ್ವಿಕೆ ಕಂಡು ಅಬ್ಬೆಯ ಸಂಭ್ರಮ ಅಂಬಾರಕಡರಿತು. ಕಣ್ಣಗಲಿಸಿ ಬೆರಗಿನಲ್ಲಿ ನೋಡುತ್ತ ಮೈಮರೆತು ತಾನೂ ವಿಗ್ರಹವಾಗಿ ನಿಂತುಬಿಟ್ಟಳು. ಹೊತ್ತು ಬಹಳ ಹೀಗೇ ನಿಂತು ಆನಂದಬಾಷ್ಪಗಳ ಒರೆಸಿಕೊಂಡು-
ನನ್ನ ಗಗನಮಲ್ಲಿಗೆ ಹೂವೇ
ಆಕಾಶದ ಹೊಂಬೆಳಕೇ
ತಾವರೆಯ ಮುಖದವಳೇ
ತೊಂಡೆ ತುಟಿಯವಳೇ
ಮೊಳಕೆ ನಗೆಯವಳೇ
ತೆಳ್ಳಾನೆ ಹೊಟ್ಟೆವಳೇ
ತಂಬೀಗೆಯಂಥ ತುಂಬಿದ ಕುಚದವಳೆ
ಮೈತುಂಬ ಪರಿಮಳವ ನಾರುವವಳೆ
ನಿನಗ್ಯಾರೂ ಸರಿಯಾಗದ ಸೊಸೆಮುದ್ದೇ-
ಬಳಗವೆಲ್ಲವ ತೊರೆದು ಮಗನ ಬಳಿ ಬಂದೆ,
ನರಲೋಕದ ನಡಾವಳಿ ನಿನಗರಿದೆ?
ಮಗ ಬೇಕು, ಮಗನ ತಾಯಿ ಬ್ಯಾಡೆಂದರೆ ಹ್ಯಾಂಗವ್ವ?
ಅವನ ಜೊತೆ ಮಾತಾಡುತ್ತಿ, ನನ್ನೊಂದಿಗ್ಯಾಕಿಲ್ಲ?
ಅಕ್ಕಪಕ್ಕ ನರಮನುಷ್ಯರಾರಿಲ್ಲ
ಈಗಲೇ ಎರಡು ನುಡಿ ನುಡಿದಾಡು.
ನನಗೊಮ್ಮೆ ಬಾಯ್ತುಂಬ ಅತ್ತೇ ಅನಬಾರದೆ ನನ್ನವ್ವ?
ಗೊಲ್ಲ ಗೋಕುಲರ ನಡತೆ ಸೇರದೆ ನಿನಗೆ?
-ಎಂದು ನಿಟ್ಟುಸಿರಿಟ್ಟಳು ಮುದುಕಿ. ಇಂತೆಂಬ ನುಡಿ ಕೇಳಿ ಚಕೋರಿ ಎಂಬ ಯಕ್ಷಿ ಉಕ್ಕಿಬಂದ ಆನಂದವ ಹತ್ತಿಕ್ಕಲಾರದೆ ಹೊರಗೂ ತುಳುಕಲಾರದೆ ಚಡಪಡಿಸಿ ಥೈ ಥೈ ಕುಣಿಯಬೇಕೆಂದಳು. ಅತ್ತೇ ಎಂದು ಅಬ್ಬೆಯ ತಬ್ಬಿಕೊಂಡು ಮುದ್ದಿಸೋಣ ಎಂದಳು. ತನ್ನ ಘನಾನಂದವ ತಾನೆ ನಿಯಂತ್ರಿಸಿಕೊಂಡು ಮೆಲ್ಲಗೆ ‘ಅತ್ತೇ’ ಎಂದು ಹೇಳಿ ಭಕ್ತಿಯಿಂದ ಲಕ್ಕಬ್ಬೆಯ ಕಾಲುಮುಟ್ಟಿ ನಮಸ್ಕಾರ ಮಾಡಿಯೇ ಬಿಟ್ಟಳು. ಕಿವಿಗೆ ಶಬ್ದ ಕೇಳಿಸಿ ಪಾದಗಳಿಗೆ ಕೈ ಸ್ಪರ್ಶವಾಗಿ ಆನಂದದ ಉನ್ಮಾದದಲ್ಲಿ ಮುದುಕಿ ಹುಚ್ಚಡರಿದ ದನದ ಹಾಗೆ ಒದರಿ ಎದ್ದು ಗುಡಿತುಂಬ ಓಡಾಡಿದಳು. ಸಳ ಸಳ ಪುಳಕಂಗಳೆದ್ದು ಬೆವರು ಜಲದಲ್ಲಿ ಒದ್ದೆಯಾದಳು. ಕಣ್ತುಂಬ ನೋಡಿ ದೃಷ್ಟಿಯಾದೀತೆಂದು ವಿಗ್ರಹಕ್ಕೆ ಲಟಿಕೆ ಮುರಿದಳು. ಸೀರೆ ಸೆರಗಿನಿಂದ ಸೊಸೆಯ ತಿಳಿಬೆವರೊರೆಸಿದಳು. ಮತ್ತೆ ಎದ್ದಳು. ಕೂತಳು, ಹೊರಗೋಡಿ ಇನ್ನೆರಡು ಹೂ ತಂದು ಯಕ್ಷಿಯ ಮುಡಿಗಿರಿಸಿದಳು. ನಿಜ ಹೇಳಬೇಕೆಂದರೆ ಮುದುಕಿಯ ಬಗ್ಗೆ ನಾವು ಗಾಬರಿಯಾದೆವು.

೩೭. ನೆಲದ ತೇಜೋಮಯವೆ

ಸಂಜೆ ಸಾಯಂಕಾಲವಾಗಿ ಸೂರ್ಯನಾರಾಯಣದೇವರು
ಪಡುವಣದಲ್ಲಿ ಅಸ್ತಂಗತವಾಗಿ
ಮೂಡುಮಲೆ ಬಿರಿದು ಉದಯವಾದರು ಚಂದ್ರಾಮಸ್ವಾಮಿ.
ಶಿವನ ಸೋಮವಾರ, ತುಂಬಿದ ಹುಣ್ಣಿಮೆಯ
ಕಲ್ಯಾಣದ ಬೆಳಕು ಬೆಳ್ದಿಂಗಳು
ಕ್ಷಿತಿಜವ ತುಂಬಿ ತುಳುಕಿತು ಶಿವನೆ.
ನಿಶ್ಚಯಿಸಿದ ಗಳಿಗೆ ಮುಹೂರ್ತದಲ್ಲಿ
ಚಂದಮುತ್ತ ಜಳಕವ ಮಾಡಿ
ವಾರೆ ಜಡೆಕಟ್ಟಿ ನವಿಲಗರಿ ಜಡೆಗೇರಿಸಿಕೊಂಡು
ಒದ್ದೆ ಲಂಗೋಟಿಯಲ್ಲಿ, ಹೆಚ್ಚಿನ ಕರಿಕಂಬಳಿಯ
ಹೆಗಲಿಗೇರಿಸಿಕೊಂಡು ಗೂಡಿನ ಬಿಲಕ್ಕೆ ಹೋಗಿ
ಹೆತ್ತಯ್ಯ ಮುತ್ತಯ್ಯರ ನೆನೆದ.
ಸುತ್ತಲಿನ ದೇವರ ನೆನೆದ.
ಆದರದಿಂದ ಆದಿಯ ಶಿವನ ನೆನೆದು
ತಾಯಿ ಪಾರ್ವತಿಯ ನೆನೆದು
ದಾಸೋಹಂ ಭಕ್ತನ ಕಾಪಾಡಬೇಕೆಂದು ಕೈಮುಗಿದು
ಭಕ್ತಿಗೆ ಬೂದಿ ಹಚ್ಚಿಕೊಂಡು
ಗೆಜ್ಜೆ ಕೊಳಲು ಸೊಂಟದಲ್ಲಿ ಸಿಕ್ಕಿಕೊಂಡು ನಡೆದ.
ಒಂದು ಹೆಜ್ಜೆ ಮುಂದೆ ಹೋಗಿ ಹಿಂದೆ ನೋಡಿದ,
ಎರಡು ಹೆಜ್ಜೆ ಹಿಂದೆ ಹೋಗಿ ಹಿಂದೆ ನೋಡಿದ
ಮೂರಡಿ ಮುಂದೆ ಹೋಗಿ ಹಾ ಮರೆತಿದ್ದೆ ಎಂದು
ಹಿಂದಿರುಗಿ ಬಂದು,
ಅಬ್ಬೆಯ ಪಾದಮುಟ್ಟಿ ನಮಸ್ಕಾರ ಮಾಡಿ ಜಯ ಒದಗುವಂತೆ
ಶುಭನುಡಿ ಅಬ್ಬೆ ಅಂದ.
ವ್ರತಾಚರಣೆಯ ವಿಚಾರ ಅಬ್ಬೆಗೆ ಗೊತ್ತಿದ್ದದ್ದು ಅಲ್ವ. ರಾತ್ರಿಯಿಡೀ ಕೆಟ್ಟ ಕನಸಾಗಿತ್ತು. ಬಲಭುಜ ಬಲಗಣ್ಣು ಹಾರಿತ್ತು. ಇದನ್ನು ಒಡೆದಾಡುವ ಮುನ್ನವೇ,
“ನಿನಗೆ ಅಕ್ಷಯವಾಗ್ಲಿ ನನ ಕಂದಾ,
ಜಯವುಳ್ಳವನಾಗಿ ಬಾ”
-ಎಂದು ಬಾಯಿಂದ ಮಾತು ಬಂದೇ ಬಿಟ್ಟಿತು. ಮಗನ ನೆತ್ತಿಯ ಮುಟ್ಟಿ ಮೂಸಿ ಆಶೀರ್ವದಿಸಿ ಮಗ ಹೋಗುವ ಚಂದವ ತಾಯಿ ಕಣ್ತುಂಬ ನೋಡಿದಳು. ಆಮ್ಯಾಲೆ, ಕುಲಗುರುವಿನ ಬಳಿ ಬಂದು ಇಡಲು ಹಾಸಿ ಪಾದ ಪಡಕೊಂಡು ಪಾದಧೂಳಿ ಹಣೆಗೊತ್ತಿಕೊಂಡ. ಕುಲಗುರುವಿಗೆ ವ್ರತಾಚರಣೆಯ ವಿಚಾರ ಸಾದ್ಯಂತ ಗೊತ್ತಿದ್ದುದರಿಂದ “ದೇವಲೋಕದ ಸಿರಿಯ ದೋಚಿಕೊಂಡು ಬಾ ಮಗನೇ” ಎಂದು ಹಣೆ ತುಂಬ ಬಂಡಾರ ಹಚ್ಚಿ ಹರಸಿ ಕಳಿಸಿದ.
ಯಕ್ಷಿಯ ಗುಡಿಗೆ ಬಂದು ರಾತ್ರಿಯ ಶಾಂತಿ ಪೂಜೆ ಮಾಡಿ ಮೂರು ಬಾರಿ ಪ್ರದಕ್ಷಿಣೆ ಬಂದು ಚಂದ್ರಜಪ ಮಾಡಲು ಪಡುದಿಕ್ಕಿಗೆ ಮುಖ ಮಾಡಿದ. ನಾವಲ್ಲೆ ಬಾಯಿಮುಚ್ಚಿಕೊಂಡು ಅವನನ್ನೇ ನೋಡುತ್ತಿದ್ದೆವು. ನಮ್ಮ ಕಡೆಗೊಮ್ಮೆ ನೋಡಿದ. ಅವನ ನೋಟಗಳಿಂದಲೇ ನಮಗಲ್ಲಿರಲು ಅವಕಾಶವಿಲ್ಲೆಂದರಿತು ಹೆಚ್ಚು ಕಡಿಮೆ ಆಡದೆ ಕಣ್ಣಿಗೆ ದೂರ, ಕಿವಿಗೆ ಸಮೀಪವಾಗುವಂತೆ ಹೋಗಿ ಗಿಡಮರ ಅಡರಿ ಕೂತೆವು. ಆಗಲೇ ಬೆಳ್ದಿಂಗಳು ಬಲಿತು ಚದುರಿದ ಮೋಡಗಳಲ್ಲಿ ಮುತ್ತಿನ ಅರಮನೆ, ಗಾಜು ವಜ್ರಗಳ ಅರಮನೆಗಳು ಮೂಡಿ ಹೊಳೆಯುತ್ತಿದ್ದವು. ತರುಮರಗಳಲ್ಲಿ ಅಲ್ಲಲ್ಲಿ ಕತ್ತಲೆ ಜೋತು ಬಿದ್ದಿತ್ತು. ದೂರ ಕುಂತಿದ್ದೆವಾಗಿ ಚಂದಮುತ್ತ ಚಕೋರಿಯರ ವ್ರತಾಚರಣೆಯ ವಿವರಗಳು ನಮಗೆ ಕಾಣಲಿಲ್ಲ.
ಮಧ್ಯರಾತ್ರಿಯವರೆಗೆ ನಮಗೇನೂ ಕೇಳಿಸಲಿಲ್ಲ. ಶಿವನ ನಗೆಯಂಥ ಬೆಳ್ದಿಂಗಳು ಮಾತ್ರ ಹುಚ್ಚು ಹತ್ತಿಸುವಷ್ಟು ಮಾದಕವಾಗಿದ್ದುದರಿಂದ ಕೆಲವರಾಗಲೇ ತೂಕಡಿಸುತ್ತಿದ್ದೆವು. ಇಡೀ ಕಾಡು ಶೀತಲ ಶಿವಶಾಂತಿಯಲ್ಲಿ ಅದ್ದಿಬಿಟ್ಟಿತ್ತು. ಆವಾಗ ನೋಡು ಶಿವಾ-
ನಿಗೂಢವಾಗಿ ನಿನದಿಸುವ ಚಂದಮುತ್ತನ ಕೊಳಲನಾದ
ಮೆಲ್ಲಮೆಲ್ಲನೆ ಸುರುವಾಯಿತು ನೋಡು
ಕಟ್ಟಿದ ಗೂಡಿಂದ ಜೇನು ತೊಟ್ಟಿಕ್ಕುವ ಹಾಗೆ
ಚಂದಮುತ್ತನ ಕೊಳಲ ದನಿ ಕೇಳಿಸಿತು.
ಹಿಂದೆಷ್ಟೋ ಬಾರಿ ಚಂದಮುತ್ತನ ಕೊಳಲ
ಕೇಳಿಲ್ಲವೆ ನಾವು?
ಆದರಿದೇ ಬೇರೆ ಎನ್ನಿಸಿ ಸೊಲ್ಲಿಲ್ಲದ ಸೊಮ್ಮಿಲ್ಲದೆ
ಪರವಶರಾದೆವು.
ನಾಮರೂಪಕ್ರೀಗಳೆಲ್ಲ ನಿಷ್ಕ್ರಿಯಗಳಾಗಿ,
ಶಬ್ದಮುಗ್ಧರಾಗಿ, ಕಾಲವಿರಹಿತರಾಗಿ
ಬರೀ ಕಿವಿಗಳಾದೆವು.
ನಮ್ಮೆಲ್ಲರ ಮೂಲಾಧಾರದಿಂದ ಯಾವುದೋ ಆದಿಮ
ನಾದವೊಂದು ಹೊರಟು
ಬಯಲು ತುಂಬಿ ಬಯಲು ನಾದಮಯವಾಗಿ
ಒಳಗೂ ನಾದ ಹೊರಗೂ ನಾದ
ಒಳಹೊರಗೆ ಏಕಾಗಿ
ತಿಳಿವಿಂಗೆ ನಿಲುಕದ ನಿಜವೊಂದು
ನಾದದಲ್ಲಿ ಹುರಿಗೊಳ್ಳುತ್ತಿರುವಂತೆ
ಅರಿವಿಗೆ ಬಂತು.


ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.