ಚಕೋರಿ – ೪

ಕೇಳಕೇಳುತ್ತ ಮೈಮರೆತಿದ್ದ ನಮ್ಮಿರವು
ಹಗುರವಾಗಿ ನಿಧಾನವಾಗಿ
ಲೋಕಾಂತರಕೆ ಸಂಯಮಿಸಿದಂತಾಗಿ
ಪರಿಚಯವಿಲ್ಲದ ಹೊಸಲೋಕದ ಹವಾಮಾನದಲ್ಲಿ
ತೇಲುತ್ತಿರುವಂತೆ,-
ಹಾಡಿನಿಂದಿಡೀ ಬಯಲು ಭರಿತವಾಗಿ
ಭರಿತವಾದದ್ದು ಬಿರಿತು
ತೂಬು ತೆಗೆದ ಕೆರೆಯಂತೆ
ಹಾಡಿನ ಮಹಾಪೂರ ನುಗ್ಗಿತು ನೋಡು
ಆಹಾಹಾ ಮುಳುಗಿದೆವೆಂದು ನೋಡಿದರೆ ತೇಲುತ್ತಿದ್ದೇವೆ! ಅರೆ‌ಅರೇ
ತೇಲುವವರು ನಾವಲ್ಲ
ಚಕೋರಿ ಎಂಬ ಯಕ್ಷಿ!
ಬಿಳಿಯ ಮೋಡದ ಹಾಗೆ ಹಗುರಾಗಿ
ಕಣ್ಣೆದುರು ಅವಳು ಬಿಳಿಯ ಪಕ್ಷಿಯಾಗಿ
ತೇಲುತ್ತಿದ್ದಾಳೆ! ಸಾವಳಗಿ ಶಿವ ಶಿವಾ,-
ಬೆಳಕಿನ ನಿಲುಮೆಗೆ ಗಾಳಿಯ ಸೆಲೆ ಸೇರಿ
ಶಾಶ್ವತ ಆಕಾಶ ನೀಲಿಮದಲ್ಲಿ
ತೂಗುವ ಚಂದ್ರನ ಕೆಳಗೆ
ನೆಲದ ತೇಜೋಮಯವೆ
ಮ್ಯಾಲೇರಿ ಹೊಳೆಹೊಳೆದು ಸುಳಿದಾಡಿದಂತೆ,
ಹಾಡಿನ ಕಾಮಿತದಿಂದ ಸಂಗೀತವೆ
ಕಾರಣ ಕಾಯವ ಧರಿಸಿ ಕೊಳಲ ಮೂಲಕ
ತಂತಾನು ನುಡಿಸಿಕೊಂಬಂತೆ,
ಸೂತ್ರ ಮಾತ್ರ ನೆಲಕ್ಕಂಟಿ
ಮ್ಯಾಲೆ ತೇಲುವ ಗಾಳಿ ಪಟದಂತೆ.
ಕಾಲವೆಷ್ಟು ಸಂದಾಯವಾಯಿತೊ ಹೀಗೆ
ಏಕ್‌ದಂ ನಮ್ಮ ಕಿವಿಗ್ಯಾರೊ ಸೀಸುಹುಯ್ದರು ಶಿವನೆ, ಕೊಳಲು ಕಿರಿಚಿ
ಫಕ್ಕನೆಚ್ಚರವಾಯ್ತು-
ಕೊಳಲು ಕಿರಿಚಿ
ಹೆಪ್ಪೊಡೆದ ಹಾಲು ಬೆಳ್ದಿಂಗಳು
ಮೋಡಗಳಲ್ಲಿ ಕೆಸರಾಗಿ ನಿಂತುಕೊಂಡಿತು
ಮಂತ್ರಭಿನ್ನವಾಗಿ
ಹುರಿಗೊಂಡ ಹಾಡು ತುಂಡು ತುಂಡಾಗಿ
ಹಾರುವ ಹಕ್ಕಿಯ ರೆಕ್ಕೆಗೆ ಶಕ್ತಿ ಸಾಲದೆ
ಮುರಿದ ರೆಕ್ಕೆಗಳ ಎತ್ತಿ ಬೀಸಲಾಗದೆ
ಬಾನಲ್ಲಿ ತೇಲಲಾಗದೆ
ಹಾ ಎಂದು ಕಿರಿಚಿ
ಆಕಾಶದುಲ್ಕೆ ಫಳ್ಳನೆ ಹೊಳೆದು
ಪತನವಾಗತೊಡಗಿತು.
ನಮ್ಮ ಕಣ್ಣಿಗೆ ಬೆಂಕಿ ಎರಚಿದಂತಾಗಿ ಶಿವ ಶಿವಾ
ಕಿಟಾರನೆ ಕಿರಿಚಿದೆವು.
ಇಗೊ ಇಗೋ ನಾವೇ ಬಿದ್ದೆವೆಂದು ಹೆದರಿ
ಬಿಗಿಯಾಗಿ ಎದೆ ಹಿಡಿದು, ಉಗುರಿನಿಂದ
ಹೃದಯ್ ಪರಚಿಕೊಂಡೆವು.
ಕರುಣಿ ಶಿವನಿಗಾದರು ಕೇಳಿಸಿ ಕಾಪಾಡಲೆಂದು
ಬಾಯಿ ಬಾಯಿ ಬಡಕೊಂಡತ್ತೆವು.
ಹಕ್ಕಿಯ ಹಿಡಿದಿಡಲಾರದ ಆಕಾಶದಂಗಳ ಕಂದಿ ಕರ್ರಗಾಯ್ತು.
ಚಂದ್ರ ಇದ್ದಿಲಾದ ಬೆಳ್ದಿಂಗಳು ಬೂದಿಯಾಯ್ತು.
ಹಾಡಿನ ಅಮಲಿನಲ್ಲಿ ತೇಲುತ್ತಿದ್ದ ಕಾಡು
ತಬ್ಬಿಬ್ಬಾಗಿ ಕಿರಿಚಿದ್ದಕ್ಕೆ ಗಾಬರಿಯಾಗಿ
ಗರಹೊಡೆದಂತೆ ಕಣ್‌ಕಣ್ಬಿಟ್ಟಿತು.
ಹಕ್ಕಿಯ ರೆಕ್ಕೆಗಳಿಗ್ಯಾರೊ ಆಯುಧ ಚುಚ್ಚಿದರೆ?
ಹನಿ ರಕ್ತ ಸುರಿವುದ ಕಂಡೆವು.
ಹಕ್ಕಿಯ ಬೀಸುವ ರೆಕ್ಕೆ ಕತ್ತಿನ ಕಳಸ ಮುರಿದು
ಶಿವಶಿವಾ ಚಂದಮುತ್ತನ ಆತ್ಮಪಕ್ಷಿ
ಚಕೋರಿ ಎಂಬ ಯಕ್ಷಿ
ಮುರಿದ ಮಹಿಮಳಾಗಿ ಬೀಳು ಬೀಳುತ್ತಿರುವಂತೆ
ಯಕ್ಷಿಯ ಮೂಲರೂಪ ಮೂಡಿ
ಧೊಪ್ಪನೆ ಬಿದ್ದಳು.

೩೮. ಬಳ್ಳಿಗೆ ನ್ಯಾಯ ಒದಗಿಸು ಶಿವನೆ

ನೆತ್ತಿಯಲ್ಲಿ ಚಂದ್ರನ ಮಡಗಿಕೊಂಡ
ಪಂಚಮುಖದ ಪರಮಾತ್ಮನ್ನ
ಕಿಂಚಿತ್ ಭಕ್ತಿಯಿಂದ ನೆನೆದು
ಇನ್ನು ಮುಂದಿನ ಕಥೆಯ ಹೇಳಬೇಕೆಂದರೆ :
ಗುಡಿ ಮುಂದೆ ನಳನಳಿಸಿ ಬೆಳೆದ
ಎಳೆಮಲ್ಲಿಗೆ ಬಳ್ಳಿಯ ಮ್ಯಾಲ್ಯಾರೋ ಅತ್ಯಾಚಾರ ಮಾಡಿ
ಬಾಸುಳು ಮೂಡುವಂತೆ
ಹಿಡಿದು ಎಳೆದಾಡಿದ್ದಾರೆ.
ಹಿಸುಕಿ ಘಾಸಿಮಾಡಿ
ಎಸೆದಿದ್ದಾರೆ ಮೂಲೆಗೆ
ಹ್ಯಾಗೆ ಬಿದ್ದಿದೆ ನೋಡು ಶಿವನೆ,
ಕಣ್ಣುಳ್ಳವರು ಮರುಗುವಂತೆ
ಕರುಳು ಕರಗುವಂತೆ.
ಸಾಕ್ಷಿಗಿದ್ದ ಚಂದ್ರ ಮೋಡಗಳಲ್ಲಿ
ಮುಖ ಮರೆಸಿಕೊಂಡಿದ್ದಾನೆ.
ಬೆದರಿವೆ ಹಕ್ಕಿ ಪಕ್ಕಿ
ಉಸಿರುಗಟ್ಟಿದೆ ಗಾಳಿ.
ಹಗಲು ರಾತ್ರಿ ಏಕಾ‌ಏಕಿ ಬದಲಾಗಿ
ಪಲ್ಲಟವಾಗಿದೆ ಬದುಕು.
ದೇವತೆಗಳ್ಯಾರೂ ಒದಗಿಲ್ಲ ಸಹಾಯಕ್ಕೆ
ಕುಲದೇವರು ಕೃಪೆಯಿಂದ ಹೊರಗಿಟ್ಟಿದ್ದಾರೆ.
ಸಾವಳಗಿ ಶಿವನೇ,
ನೀನಾದರೂ ಈ ಕಡೆ ನೋಡು.
ನಿನ್ನ ಬದಲು ಒಂದು ಗುಂಡಕಲ್ಲು ಬಳ್ಳಿಯ ನೋಡಿದ್ದರೆ
ಅದಾಗಲೇ ಹರಿಯುತ್ತಿತ್ತು ಕರಗಿ ನೀರಾಗಿ,
ನೀನಿನ್ನೂ ಸುಮ್ಮನಿದ್ದೀಯಲ್ಲಾ ಸ್ವಾಮಿ!
ಲೋಕಲೌಕಿಕದಲ್ಲಿ ಮಲ್ಲಿಗೆ ಬಳ್ಳಿಯಾಗಲಿ ಬಾಳು ಎಂದು,
ಅರಳಿದ ಮಲ್ಲಿಗೆ ನೋಡಿ ಚಂದ್ರನ ನೆನಪಾಗಲೆಂದು,
ಚಂದ್ರನ ಹೆಸರಿನಲ್ಲಿ ನಾವು ಮಾಡುವುದಿಷ್ಟೇ ಅಂತ
ಚಂದ್ರನಿಗೆ ತಿಳಿದಿರಲೆಂದು,
ನಾವು ಹಾರೈಸಿದ್ದು ಹುಸಿಯಾಯ್ತೆ ಶಿವನೆ!
ನಿನ್ನ ನೆನಪಿನಲ್ಲಿ ಈ ಬಳ್ಳಿ ದಾಖಲಾಗಿಲ್ಲವೆ?
ದಾಖಲಾದರು ಚಿಗುರಿಲ್ಲವೆ?
ಚಿಗುರಿದರು ಹೂವಾಗಿ ಅರಳಿಲ್ಲವೆ?
ಬಳ್ಳಿಗೆ ನ್ಯಾಯ ಒದಗಿಸಿ
ನೀನಿನ್ನೂ ಬದುಕಿದ್ದೀ ಅಂತ
ಪ್ರಮಾಣ ತೋರಿಸು ಶಿವನೇ!

೩೯. ನವಿಲೇ ನವಿಲೇ

ಲಕ್ಕಬ್ಬೆಯ ಕನಸಿನಲ್ಲಿ
ನಂದೀ ಕಳಸ ಧಗ ಧಗ ಉರಿದಂತಾಗಿ
ಆ ಉರಿಯ ನವಿಲುಗರಿಯ ಮ್ಯಾಲ್ಯಾರೋ ಸುರಿದು
ತುದಿಯಿಂದ ಬುಡತನಕ ಉರಿಯುತ್ತಿದೆ ಗರಿ.
ಅರೆ ಅರೇ
ಗರಿಯ ಬುಡದಲ್ಲಿ ನವಿಲಿದ್ದುದ
ಯಾರೂ ಅರಿಯರಲ್ಲಾ!
ನವಿಲಿಗೂ ಬೆಂಕಿ ತಗಲಿ
ನವಿಲೇ ನವಿಲೇ ಎಂದು ಒದರುತ್ತಗರ್ಭವ ಗಟ್ಟಿಯಾಗಿ ಹಿಡಿದುಕೊಂಡೇ
ಎದ್ದಳು ಮುದುಕಿ.
ಗಕ್ಕನೆ ನಿಂತು, ದಿಕ್ಕು ದಿಕ್ಕೆಲ್ಲ ನೋಡಿದರೆ
ನಖಶಿಖಾಂತ ಉರಿಯುತ್ತಿದೆ ಲೋಕ.
ಎಷ್ಟೊಂದು ಬೆಂಕಿ ಶಿವನೆ!
ಚಿಕ್ಕೆ ತಾರೆಗೆ ಬೆಂಕಿ, ಮುಗಿಲ ನೀಲಿಗೆ ಬೆಂಕಿ,
ಕನಸಿಗೂ ಬೆಂಕಿ!
ತಕ್ಷಣ ಮಗನ ನೆನಪಾಗಿ ಕುಲಗುರುವಿನ ಗೂಡಿಗೋಡಿದಳು ಅಬ್ಬೆ.

೪೦. ಅಬ್ಬೆಯ ಸಂತವಿಸಿದ

ಸಪ್ಪಟ ಸರಿರಾತ್ರಿ ಕಲ್ಲೂ ನೀರೂ ಕರಗುವಂಥ ಹೊತ್ತಿನಲ್ಲಿ ಚಂದಮುತ್ತನ ಕೊಳಲು ಅಪಸ್ವರ ಕಿರಿಚಿ ಸುಮ್ಮನಾದುದ ಕೇಳಿ ಕುಲಗುರು ವಿಸ್ಮಯಂಬಟ್ಟ. ಆಮೇಲಾಮೇಲೆ ಏನೋ ಅನಾಹುತ ಆಗಿರಬೇಕೆಂದು ಚಿತ್ತಸಂಶಯ ತಾಳಿ ನಾಲ್ಕಾರು ಬಾಲಕರ ಕರಕೊಂಡು ಆತಂಕದಿಂದ ಮಾತು ಮಾತಿಗೆ ಮಾದೇವನ ನೆನೆಯುತ್ತ ಯಕ್ಷಿಯ ಗುಡಿಗೋಡಿ ಹೋಗಿ ನೋಡಿದರೆ-ಚಂದಮುತ್ತ ಮೂರ್ಛಾಗತನಾಗಿ ಬಿದ್ದಿದ್ದಾನೆ! ಅವನನ್ನೆತ್ತಿಕೊಂಬಂದು ಗೂಡಿನಲ್ಲಿ ಮಲಗಿಸಿ ಮದ್ದರೆದು ಕುಡಿಸುವಲ್ಲಿ ನವಿಲೇ ನವಿಲೇ ಎಂದಳುತ್ತ ಬೀಳುತ್ತೇಳುತ್ತ ಬಂದ ಲಕ್ಕಬ್ಬೆಯ ಸಂತವಿಸಿದ.

೪೧. ಭಕ್ತಿ ಮಾಡಿದ್ದಕ್ಕೆ ನೀ ಕೊಟ್ಟ ಬದುಕು

ಆರುಮೂರೊಂಬತ್ತು ದಿನ ಬಾಯಿ ಬರಲೇ ಇಲ್ಲ ಚಂದಮುತ್ತನಿಗೆ. ಕಣ್ಣು ಪಿಳುಕಿಸದೆ ಶೂನ್ಯ ಹೃದಯನಾಗಿ ಬಿದ್ದಿರುತ್ತಿದ್ದ. ತಾಯಿ ಬಂದು ಪಕ್ಕದಲ್ಲಿ ಕುಂತರೂ ಗಮನಿಸುತ್ತಿರಲಿಲ್ಲ. ಪೆಟ್ಟು ಮಗನಿಗಾದರೆ ನೋವು ತಾಯಿಗಲ್ಲವೆ? ಏನಾಗಿದೆ ಮಗಂಗೆ? ದಿನಾ ಬೆಳೆಯುತ್ತಿದೆ ಗಂಟಲು ಹುಣ್ಣು. ಕತ್ತು ಕೆಂಪಗಿದೆ. ರಾಕ್ಷಸರ್‍ಯಾರಾದರು ಬಂದು ಹಿಸುಕಿದರೆ? ಮಗ ಮಾತಾಡಲಾರ. ಕುಲಗುರು ಹೇಳಲಾರ. ಮಗನಿಗೆ ಕೇಡು ಮಾಡಿದವರು ನಾಲಗೆ ಹಿರಿದು ಸಾಯಲೆಂದು ಶಪಿಸಿ, ಸತ್ಯ ಶಿವದೇವರ ನೆನೆದು-
ನನ್ನ ದೀವಟಿಗೆಗೆ
ಎಣ್ಣೆ ಎರೆಯೋ ಶಿವನೇ

-ಎಂದು ಬೇಡಿಕೊಂಡತ್ತಳು.
ಕುಲಗುರು ದಿನಾ ಮದ್ದರೆದು ಕುಡಿಸುತ್ತಿದ್ದ. ಆದರೆ ಕತ್ತಿನ ಹುಣ್ಣು ಯಾಕಾಯಿತೆಂದು, ಹೇಗಾಯಿತೆಂದು, ಆ ದಿನ ಕಾಡಿನಲ್ಲಿ ನಡೆದದ್ದೇನೆಂದು ಯಾರಿಗೂ ತಿಳಿಯಲಿಲ್ಲ.
ಶಿವ ಶಿವಾ, ಇಂತೀ ಪ್ರಕಾರವಾಗಿ ಚಂದಮುತ್ತನಂಥ ಸಂಪನ್ನನ ಕಥೆಯ ನಾವು ಹೇಳುವಂಥ ಪ್ರಸ್ತಾವದಲ್ಲಿ ಆ ದಿನ ತುಂಬಿದ ಸೋಮವಾರ ತುಂಬಿದ ಹುಣ್ಣಿವೆ ನಟ್ಟಿರುಳು ನಡುರಾತ್ರಿ ಕಾಡಿನಲ್ಲಿ ಏನು ನಡೆಯಿತೆಂದು ನಾವಾದರೂ ಹ್ಯಾಂಗೆ ಹೇಳೋಣ? ನಿಮಗೂ ತಿಳಿದಿರುವಂತೆ ಯಕ್ಷಿಯ ಗುಡಿಯಾಚೆ ದೂರದ ಮರಗಳ ಅಡರಿ ಕುಂತಿದ್ದೆವಾಗಿ ನಮಗೂ ತಿಳಿಯದು. ಆದರೆ ಶಿವನ ಜಡೆಯಂಥ ಶಿವರಾತ್ರಿಯಲ್ಲಿ ನಾವಿನ್ನೂ ಸಾವಿರ ವರ್ಷ ಚಂದಮುತ್ತನ ಕಥೆಯ ಹೇಳಬೇಕೆಂದಿರುವುದರಿಂದ ಈ ಕಥಾಕೊಂಡಿಯ ಪತ್ತೆ ಹಚ್ಚಲೇಬೇಕಲ್ಲವೆ? ಇಂತಪ್ಪ ಕಷ್ಟ ನಿಷ್ಟೂರದಲ್ಲಿ ಸಿಕ್ಕಿಕೊಂಡು ನಾವು ಸಾವಳಗಿ ಶಿವ ಶಿವಾ ಎಂದು ಕೈ ಹೊತ್ತು ಕುಂತಿರಬೇಕಾದರೆ- ಸುಳಿವು ಸಿಕ್ಕಿತು ಶಿವನೆ!
ಒಂಬತ್ತು ಹಗಲು ಒಂಬತ್ತು ರಾತ್ರಿ ಕಳೆದ ಮ್ಯಾಕೆ ಚಂದಮುತ್ತ ಬೋಧೆಗೊಂಡು ಕೂಸಿನ ಕನವರಿಕೆಯಂತೆ ಮಾತಾಡಿದ. ರಾತ್ರಿಯೆಲ್ಲಾ ಎವೆ ಮುಚ್ಚದೆ ಅಡ್ಡಗೋಡೆಯ ನೆಮ್ಮಿ ಮಗನ ಕಾಯುತ್ತಿದ್ದ ಲಕ್ಕಬ್ಬೆಯ ಕಣ್ಣಲ್ಲಿ ಬೆಳಕಾಡಿತು. ಆದರೆ ಆ ಬೆಳಕು ಬಹಳ ಹೊತ್ತು ಉಳಿಯಲಿಲ್ಲ. ಯಾಕೆಂದರೆ ಚಂದಮುತ್ತನಿಗೆ ಬಾಯಿ ಬಂತು, ಗ್ಯಾನ ಬರಲಿಲ್ಲ. ಏನೊ ಧ್ಯಾನಿಸಿದ. ದೂರದಿಂದಲಿ ಯಾರೊ ಕೂಗಿ ಕರೆಧಂಗೆ ಓ ಎಂದು ಎದ್ದ. ಯಾರೊಂದಿಗೋ ಮಾತಾಡಿದ. ನಾಯಿ ಬೊಗುಳಿದರೆ ಹೆದರಿ ಥರಾಥರ್‍ನೆ ನಡುಗಿದ. ಅಬ್ಬೆ ಹೇಳಿದಳು :
ಎಲೆ ಮಗಾ,
ಎದುರಿಗಿರೋಳು ನಿನ್ನ ಅಬ್ಬೆ.
ಇನ್ಯಾರದೋ ಎದುರಿಗಿದ್ದಂತೆ ನುಡಿದಾಡುವಿಯಲ್ಲಪ್ಪ.
ಗಾಳಿಯಲ್ಲಿ ಯಾರೋ ಕದ್ದು ನಿಂತವರಂತೆ
ಆ ಕಡೆ ನೋಡುವಿಯಲ್ಲ,
ಯಾರಿದ್ದಾರೆ ಅಲ್ಲಿ?
ಗಾಬರಿಯೆ?
ನಿನ್ನ ಹೆದರಿಸುವಂಥವರು ಯಾರಿದ್ದಾರೆ ಅಲ್ಲಿ?
ನಾನಿಲ್ಲವೆ ನಿನ್ನ ಜೊತೆಗೆ?
ನಾಯಿ ಬೊಗುಳಿದರ್‍ಯಾಕೆ ಬೆಚ್ಚಿ ಬೀಳುವಿಯಪ್ಪ?
ಅದು ನಿನ್ನದೆ ಅಲ್ಲವೆ ನಾಯಿ?
ನಾನಾಡಿದ್ದು ಕೇಳಿಸೋದಿಲ್ಲವೆ?
ಯಾಕೆ ಮಾತಾಡುವುದಿಲ್ಲ? ಗುರುತಿಲ್ಲದವರ
ಹಾಂಗೆ ನನ್ನ ಕಡೆ ನೋಡಿದರೆ ನನಗೆ
ಹೆದರಿಕೆಯಾಗೋದಿಲ್ಲವೆ?
ಇಲ್ಲಿದ್ದೂ ಇನ್ಯಾವ ಲೋಕದಲ್ಲಿರುವೆ?
ಯಾವ ಲೋಕದ ಮಾತು ಹೇಳುತ್ತಿರುವೆ ಕಂದಾ?
ಅಬ್ಬೆಯ ನೋಡುತ್ತ ಬಹಳ ಹೊತ್ತು ಕಣ್ಣೀರು ಸುರಿಸಿದ ಚಂದಮುತ್ತ. ಮಗನ ಕಂಡಷ್ಟೂ ಅಬ್ಬೆಯ ಕಡುದುಃಖ ಹೆಚ್ಚಾದವು. ಕಣ್ಣೀರು ಒರೆಸಿ, ಮಡಿಲಿನಲ್ಲಿ ಮಲಗಿಸಿಕೊಂಡಳು. ಮಗನ ಕಾದ ಮೈ ಸ್ಪರ್ಶವಾದದ್ದೇ ಹಡೆದೊಡಲಿಗೆ ಕೆಂಡ ಸುರಿದಂತಾಗಿ ಗರ್ಭವ ಹಿಡಿದುಕೊಂಡಳು ತಾಯಿ; ಶಿವನಿಗೆ ಹೇಳಿದಳು:
ಭಕ್ತಿ ಮಾಡಿದ್ದಕ್ಕೆ ನೀ ಕೊಟ್ಟ ಫಲ ಈ ಬದುಕು.
ಅದು ಕಣ್ಣೀರಲ್ಲಿ ಕರಗುತ್ತಿದೆ.
ಭೋಂ ಬೋಳೇಶಂಕರಾ
ತನ್ನೊಳಗೆ ತಾನೇ ಹರಾ- ಅಂತ
ಮಸಣದಲ್ಲಿ ಮೈಮರೆತು ಕುಂತರಾಯ್ತೆ ಶಿವನೆ?
ಹದಿನಾಕು ಲೋಕ ಎದೆಗವಚಿಕೊಂಡವನಿಗೆ
ನನ್ನ ಮಗನೊಂದು ಭಾರವೆ?
ಭಕ್ತರ ಜೀವಕ್ಕೆ ನೀನಲ್ಲವೆ ಜಾಮೀನು?
ನಿನ್ನ ಹೆಸರುಗೊಂಡ ಮ್ಯಾಕೆ
ಇನ್ಯಾರು ಸಲಿವ್ಯಾರು ಬಂದು?
ಹೋಗಲಿ, ಸಾಯುವ ಕಂದನ ನೋಡಿ ತೃಪ್ತಿಯಾಯಿತೆ ನಿನಗೆ?
ಅದನಾದರೂ ಹೇಳು ಹೇಳೆನುತ,
ಕಣ್ಣುಮುಚ್ಚಿ ಅರೆನಿದ್ದೆಗೆ ಸಂದಳು ಅಬ್ಬೆ. ಇಂತಪ್ಪ ವ್ಯಾಳ್ಯಾದಲ್ಲಿ ಮಂಚದ ಕಾಲಿನ ಗೊಂಬೆಗಳೆರಡು ಮುಂದೆ ಬಂದು ಮಾತಾಡಿಕೊಂಡವು ಶಿವಾ :
ಗೊಂಬೆ ೧: ಹಿಂಗಾದರೆ ಹೆಂಗಕ್ಕಾ?
ಹಗಲೊಂಬತ್ತು ಇರುಳೊಂಬತ್ತಾದರೂ
ಚಂದಮುತ್ತನ ಗಂಟಲ ಗಾಯ ಮಾಯಲಿಲ್ಲ.
ದಮ್ಮಯ್ಯಾ ದಕ್ಕಯ್ಯಾ ಎಂದು
ದಿನಾ ಹೊಸ ಹೊಸ ಕಣ್ಣೀರನಳುತ್ತಿದ್ದಾಳೆ ತಾಯಿ.
ಹಾಲು ಹೂವಿನಂಥಾ ಹುಡುಗನ್ನ ಕಂಡು
ನಮಗೇ ಹಿಂಗಾದರೆ
ಹೆತ್ತ ಕರುಳಿಗೆ ಹೆಂಗಾಗಬೇಡ!
ಚಂದಮುತ್ತನ್ನ ಗುಣಪಡಿಸಲು
ಉಪಾಯವೇನೂ ಇಲ್ಲೇನಕ್ಕಾ?
ಗೊಂಬೆ ೨ : ಇದೆ ತಂಗೀ; ಯಕ್ಷೀಗುಡಿಯ ಎಡಗಡೆ
ನಾತಿದೂರ ನಾತಿ ಸಮೀಪ ನೇರಳೆ ಮರದಡಿ
ಗೇಣುದ್ದದ ಗೊಂಬೆ ಬಿದ್ದಿದೆ.
ಗೊಂಬೆಯ ಕತ್ತಿನಲ್ಲಿ
ಕರಿಕೂದಲು ಪೋಣಿಸಿದ ಸೂಜಿಯಿದೆ.
ಅದನ್ನ ಕಿತ್ತೆಸೆದರೆ
ಚಂದಮುತ್ತನ ಗಾಯ ಮಾಯುತ್ತದೆ.
ಗೊಂಬೆ೧: ಗೊಂಬೆಗೂ ಚಂದಮುತ್ತನಿಗೂ ಏನಕ್ಕ ಸಂಬಂಧ?
ಗೊಂಬೆ೨: ಅಗೊ ಅಗೊ ಲಕ್ಕಬ್ಬೆಗೆ ಎಚ್ಚರವಾಯ್ತು!
ಎನ್ನುತ್ತ ಗೊಂಬೆಗಳೆರಡೂ ಹಿಂದೆ ಸರಿದವು. ಲಕ್ಕಬ್ಬೆ ಕನಸಿನಲ್ಲೆಂಬಂತೆ ಗೊಂಬೆಗಳ ಮಾತು ಕೇಳಿಸಿಕೊಂಡಿದ್ದವಳು ಅವಸರದಿಂದ ಎಚ್ಚತ್ತಳು. ಬೆಳ್ಳಿ ಮೂಡಿದ್ದೇ ತಡ ಯಕ್ಷಿಯ ಗುಡಿಗೋಡಿ ನೇರಳೆ ಮರದಡಿ ಹುಡುಕಿದಳು. ಗೊಂಬೆ ಸಿಕ್ಕಿತಿ! ನೋಡಿದರೆ ಗೊಂಬೆಯ ಕೈಯಲ್ಲಿ ಕೊಳಲಿದೆ! ತಲೆಯಲ್ಲಿ ನವಿಲುಗರಿಯಿದೆ! ಗೊಂಡೆಯ ಲಂಗೋಟಿ, ಹೆಗಲಿಗೆ ಕಂಬಳಿಯಿದೆ. ಕರುವಿಗಿರುವಂಥ ತೆರೆದ ಕಣ್ಣಲ್ಲಿ ನಿಚ್ಚಳ ಬೆಳಕಿದೆ! ಕರಿಕೂದಲು ಪೋಣಿಸಿದ ಸೂಜಿಯನ್ನ ಕತ್ತಿನಲ್ಲಿ ಚಿಚ್ಚಿದಿದೆ!
ಶಿವ ಶಿವಾ ಎಂದು ವಿಸ್ಮಯಂಬಡುವಲ್ಲಿ ಅಬ್ಬೆಗೆ ನಿಚ್ಚಳವಾಗಿ ಏನಪ್ಪಾ ಗೊತ್ತಾಯಿತು ಅಂದರೆ: ಇದ್ಯಾರೋ ನವತಂತ್ರಿ ನರಸಯ್ಯ ಮಾಡಿದ ಚಂದಮುತ್ತನ ಗೊಂಬೆ. ಮದ್ದು ಮಾಟ ಮಾಡಿದ್ದಾನೆ ಮಗಂಗೆ!
-ಎಂದು ಕೊತ ಕೊತ ಕುದಿವ ಕೋಪದಿಂದ ಗೊಂಬೆಯ ಕತ್ತಿನಲ್ಲಿ ನೆಟ್ಟ ಸೂಜಿಯ ಕಿತ್ತು ಥೂ ಎಂದುಗಿದು ದೂರಕ್ಕೆಸೆದರೆ ಅಲ್ಲಿ-

೪೨. ಹಾಂಗಿದ್ದರಿದು ಹಂಗಲ್ಲ ನಿಲ್ಲು

-ಇಲ್ಲಿ ಗೂಡಿನಲ್ಲಿ ಮಲಗಿದ್ದ ಚಂದಮುತ್ತನ ಕತ್ತಿನ ನೋವು ಹಗುರವಾಗಿ ಬಿಗಿಯಾದ ಗಾಯ ಸಡಿಲಗೊಂಡವು.
ಆಮೇಲಾಮೇಲೆ ಚಂದಮುತ್ತನಿಗೆ ಗುಣವಾಯಿತು ಶಿವನೇ!
ಒಂದು ದಿನ ಅಬ್ಬೆ ಕಾಡಿನ ಕಡೆಗೆ ಹೋಗಿದ್ದಾಗ ಕುಲಗುರು ಒಬ್ಬನೇ ಚಂದಮುತ್ತನ ನಾಡಿ ನುಡಿತವ ಆಲಿಸುತ್ತಿದ್ದಾಗ ಶಿಷ್ಯ ಹೇಳಿದ:
“ನಿನ್ನೊಂದಿಗೆ ಏಕಾಂತವ ನುಡಿದಾಡುವುದಿದೆ ಶಿವನೇ”
“ಹೇಳು ಮಗನೆ. ಈಗ ಯಾರೂ ಇಲ್ಲವಲ್ಲ’
“ಹುಣ್ಣಿವೆ ದಿನ ನನ್ನ ಕೊಳಲು ಆಲಿಸಿದೆಯ ತಂದೆ?”
“ಆಲಿಸಿದೆನಪ್ಪ, ಅಮೋಘವಾಗಿತ್ತು. ಇಂತಪ್ಪ ಸಂಗೀತವ ನಾನು ಜನ್ಮಾಪಿ ಕೇಳಿರಲಿಲ್ಲ.”
ಚಂದಮುತ್ತ ತಕ್ಷಣ ಗುರುವುನ ಕಾಲುಮುಟ್ಟಿ,
“ಅದೆಲ್ಲ ನಿನ್ನ ದಯೆ ಶಿವಪಾದವೇ”
-ಎಂದು ನಮಸ್ಕರಿಸಿದ.
“ನನ್ನ ದಯೆ ಹೌದೋ ಅಲ್ಲವೋ, ನಿನ್ನ ಭಕ್ತಿಯಿಂದ ಸಂತೋಷವಂತೂ ಆಯಿತಪ್ಪ. ಅದು ಯಾವ ರಾಗ ಮಗನೆ?”
“ಅದು ತಿಂಗಳ ರಾಗ ಶಿವನೆ! ವ್ರತಾಚರಣೆ ಮಾಡಿ ಕಲಿತೆ”
“ನಿನ್ನ ವ್ರತಾಚರಣೆಗೆ ಭಂಗವಾಗದಿದ್ದರೆ ಹೇಳು: ಆ ರಾಗದ ಅಂತಿಮದಲ್ಲಿ ನಿಂತಿರುವ ಸಿದ್ಧಿ ಯಾವುದು ಕಂದ?”
“ಶಿವ ಪಾದವೇ, ತಿಂಗಳು ರಾಗವ ಭಕ್ತಿಯಿಂದ ನುಡಿಸುತ್ತಿದ್ದರೆ ಯಕ್ಷಿಗೆ ರೆಕ್ಕೆ ಮೂಡಿ ಪಕ್ಷಿಯಾಗಿ ಆಕಾಶದಲ್ಲಿ ಹಾರಾಡುತ್ತಾಳೆ. ಅದೇ ಸಿದ್ಧಿ ಶಿವನೆ”
“ಇದಿಷ್ಟೇ ಆದಲ್ಲಿ ಅದೊಂದು ಕ್ಷುದ್ರ ಕೀರ್ತಿಯ ವ್ಯಸನವಲ್ಲವೆ ಕಂದಾ?”
“ಅದು ಆಕಾಶದಂತುಪಾರವನರಿವ ಹವಣಿಕೆ ತಂದೆ! ಬೆಳ್ದಿಂಗಳಲ್ಲಿ ಈಜುತ್ತೀಜುತ್ತ ಚಂದ್ರನೆಂಬ ಕನ್ನಡಿಯ ಮೂಲಕ ಶಿವನ ನೋಡುವುದೆ ಅಂತಿಮ ಗುರಿ-ಗುರುಪಾದವೇ”
ಕುಲಗುರುವಿನ ಹೃದಯ ಆನಂದದಿಂದ ಭಗ್ಗನೆ ಹೊತ್ತಿಕೊಂಡಿತು. ತಕ್ಷಣ ಅಭಿಮಾನದಿಂದ ಚಂದಮುತ್ತನ್ನ ಬಾಚಿ ತಬ್ಬಿಕೊಂಡು “ಭೇಶ್ ಭೇಶ್! ನಿನಗೆ ಅಕ್ಷಯವಾಗ್ಲಿ ನನ್ನಪ್ಪ. ಅಂಥ ಅನುಭವದ ಹೊಸ್ತಿಲಲ್ಲಿ ನಿಂತ ಹಂಗಾಯ್ತು ಆ ದಿನ ನನಗೆ. ಆದರೆ ಹಾಡಿನಲ್ಲಿ ಏನೋ ಕೊರತೆ ಕಂಡು ಬಂತಲ್ಲವೆ?”
“ಹೌದು ಶಿವನೆ, ಸಕಾಲದಲ್ಲಿ ಓಂಕಾರದ ಅಂಕುರವಾಗಬೇಕಿತ್ತು. ಅದು ನನ್ನ ಮೊದಲ ಯತ್ನವಾದ್ದರಿಂದ ಹಂತ ಹಂತವಾಗಿ ನುಡಿಸುತ್ತ ಮತ್ತು ಅರಿಯುತ್ತ ಇರುವಾಗ ಯಾರೋ ನನ್ನ ಕತ್ತಿಗೆ ಸೂಜಿ ಚುಚ್ಚಿ ಸೊಲ್ಲಡಗಿಸಿದರು ಶಿವನೆ…..”
“ಯಾರು?”
“ಚುಚ್ಚುವ ಹಸ್ತ ಮತ್ತು ವ್ಯಕ್ತಿ ಎರಡೂ ಅದೃಶ್ಯವಾಗಿದ್ದವು ತಂದೇ”
“ಅಧೆಂಗಾದೀತು ಮಗ? ವ್ರತಾಚರಣೆಗೆ ಕೂತಾಗ ನಿನ್ನ ಸುತ್ತ ರಾಗದಿಂದ ಮಂತ್ರಮಂಡಳ ಕೊರೆಯಲಿಲ್ಲವೆ?”
“ಕೊರೆದೆ ಶಿವನೆ!”
“ಕಾಯುವ ದೇವರನ್ನ ಅವರವರ ದಿಕ್ಕಿನಲ್ಲಿ ಪ್ರತಿಷ್ಥಾಪಿಸಿ ಬಂದೋಬಸ್ತ್ ಮಾಡಲಿಲ್ಲವೆ?”
“ಮಾಡಿದ್ದೆ ಶಿವನೆ, ಅಲ್ಲೇ ಏನೋ ಊನವಾದ ನೆನಪು.”
“ಹಾಂಗೆ ಸೈ. ಯಕ್ಷಿಯ ಪಕ್ಷಿಯ ಮಾಡಿ ಹಾರಿಸುವ ತಿಂಗಳು ರಾಗದ ತಂತ್ರ ಇನ್ಯಾರಿಗೋ ಬೇಕಾಗಿದೆ . ಅದಕ್ಕೇ ಅವರು ನೀ ಮಾಡಿದ ತಪ್ಪಿನೊಳಗೆ ತೂರಿ, ಮಂತ್ರ ತಂತ್ರದ ಗೊಂಬೆಯ ಮಾಡಿ, ನಿನ್ನ ಹಾಡು ನಿಲ್ಲಿಸಿ, ಹಾರುವ ಯಕ್ಷಿಯ ಕೆಳಕ್ಕೆ ಬೀಳಿಸಿ ವಶವರ್ತಿ ಮಾಡಿಕೊಂಡು ಹೋಗಿದ್ದಾರೆ. ಇಗೋ ಇಲ್ಲಿದೆ ನಿನ್ನ ಗೊಂಬೆ.”
-ಎಂದು ಅಬ್ಬೆ ಕೊಟ್ಟ ಗೊಂಬೆಯ ತೋರಿಸಿದ. ಚಂದಮುತ್ತನಿಗೆ ನಿಚ್ಚಳವಾಗಿ ಕಾರ್‍ಯಕಾರಣ ಹೊಳೆದವು. ಆದರೆ ಇಂತಪ್ಪ ಗೊಂಬೆಯನ್ಯಾರು ಮಾಡಿರಬಹುದೆಂದು ಇಬ್ಬರಿಗೂ ಬಗೆಹರಿಯಲಿಲ್ಲ.

೪೩. ದಾರಿಯಿದೆ ಶಿವನೆ

ಚಂದಮುತ್ತನ ಕತ್ತಿನ ನೋವು ಕಮ್ಮಿಯಾಗಿ
ಅಧಿಕವಾದವು ಯಕ್ಷಿಯ ವಿರಹದ ನೋವು.
ಅವಳ ಗ್ಯಾನದಲ್ಲಿ ನೂರೊಂದು ನೆನೆದ,
ನೂರೊಂದು ಪರಿತಪಿಸಿದ.
ಯಕ್ಷಿ ವಿರಹಿತ ಲೋಕ ನಾಯಿ ನರಕವೆಂದು
ಕಣ್ಣೀರುಗರೆದ.
ಹಾಳು ಸುರಿವ ಯಕ್ಷಿಯ ಗುಡಿಯ ನೋಡಿ
‘ನನ್ನ ಯಕ್ಷಿಗೇನಾಯಿತು ಶಿವನೆ?’ ಎಂದು ಯಾರಿಲ್ಲದಾಗ
ಕರುಳು ಬಾಯಿಗೆ ಬರುವಂತೆ
ಬಾಯಿ ಬಡಕೊಂಡತ್ತ, ತಲೆ ಹೊಡಕೊಂಡತ್ತ.
ಕಾಡು ನೆನಪಿನ ಸ್ಮಶಾನವಾಗಿ, ಬೆಳ್ದಿಂಗಳು ಬೂದಿಯಾಗಿ
ತೇಲುವ ಹೆಣ ಚಂದ್ರನ ಕಂಡು ಕರುಳು ಹಿಂಡಿಕೊಂಡತ್ತ
ನಿದ್ದೆ ನೀರಡಿಕೆ ಇಲ್ಲದೆ
ಹಾರಿತೆಲ್ಲಿಗೆ ನನ್ನ ಬೆಳ್ಳಾನೆ ಬಿಳಿ ಹಕ್ಕಿ ಎಂದು
ಹಾಡಿಕೊಂಡತ್ತ.
ಕೊನೆಗೆ ಅವಳಿಲ್ಲದೆ ಈ ನಾಯಿಜಲ್ಮ ಯಾಕಿರಬೇಕೆಂದು
ದುಃಖಶೋಕವ ಮಾಡುತ್ತ
ಅಬ್ಬೆಗೂ ಕುಲಗುರುವಿಗೂ ಹೇಳದೆ ಕೇಳದೆ
ಹಟ್ಟಿಯ ಬಿಟ್ಟು ಏಕಾಂಗಿ ಹೊರಟ.
ಅಡವೀಲಿ ನಡೆದು ಬಂಡೆ ಹತ್ತ್ಳಿದು
ಕಲ್ಲುನೆಲ ತುಳಿದ.
ಹಗಲು ರಾತ್ರಿ ಅನ್ನದೆ, ಹಾವು ಹುಲಿ ಮೃಗ ಜಾತಿ ಅನ್ನದೆ
ಕಾಲಿಗೆ ಮುಳ್ಳು ಚುಚ್ಚಿ ರಕ್ತ ಸುರಿಸುತ್ತಾ
ಕಾಲೆಳೆಯುತ್ತಾ, ಕೈ ಊರುತ್ತಾ
ಬೀಳುತ್ತಾ, ಏಳುತ್ತಾ, ನೀರೂ ನೆರಳೂ ಇಲ್ಲದಲ್ಲಿ ನಡೆದ.
ಇದ್ದಲ್ಲಿ ನಡೆದ.
ಹಕ್ಕಿ ಪಕ್ಷಿ ಇಲ್ಲದಲ್ಲಿ ನಡೆದ, ಇದ್ದಲ್ಲಿ ನಡೆದ.
ಯಕ್ಷಿಯ ಕೂಗಿ ಹುಡುಕಿದ, ಕಾಕು ಹೊಡೆದು ಹುಡುಕಿದ.
ಮ್ಯಾಲೂ ನೋಡಿದ, ಕೆಳಗೂ ನೋಡಿದ,
ಅಕ್ಕಪಕ್ಕ ಆಸುಪಾಸು ನೋಡುತ
ಯಕ್ಷಿ ಯಕ್ಷೀ ಎಂದು
ಬಿದ್ದೂ ಕೆಡೆದೂ ಒದ್ದಾಡಿಕೊಂಡು ನಡೆದ.
ದಾರಿಯಲ್ಲಿ ಹಿರಿಯ ಜಾಲಿ, ಕಿರಿಯ ಜಾಲಿ
ಮರಕ್ಕೆ ಮರ ಕೂಡಿಕೊಂಡು ಚಂದಮುತ್ತನ
ಜಡೆ ಗಡ್ಡ ಕಿತ್ತವು. ಆ ಮರಕ್ಕೂ ತಾಗಿ
ಈ ಮರಕ್ಕೂ ತಾಗಿ ಮೂರ್ಛೆ ಬಿದ್ದಿರುವಲ್ಲಿ-
ಮರದಲ್ಲಿದ್ದ ಮರಿ ಹಕ್ಕಿ ತಾಯಿಗೆ ಹೇಳಿತು:
ಯಾರವ್ವಾ ಇವನು?
ಇವನ ಕಂಡರೆ ಮರಮರ ಮರುಗುತ್ತಾವೆ ತರುಮರ.
ಎಲೆಗಳ ಉದುರಿಸುತಾವೆ,
ಹೂ ಹೂ ಬಾಡಿ ಕತ್ತು ಚೆಲ್ಲುತ್ತಾವೆ.
ಹರಿವ ತೊರೆ ಗೋಗರೆಯುತಾವೆ.
ಕೊಳಲು ನುಡಿಸಿ ಮಳೆ ತರಿಸಿದ ಮಹಾರಾಯ ಇವನಲ್ಲವೆ?
ಎಷ್ಟೊಂದು ಹಾಡು ಕಲಿತೆವು ಇವನಿಂದ.
ಇವನಿಲ್ಲದೆ ಹಾಡುಂಟೆ?
ನಾವೆಷ್ಟು ಹಾಡಬೇಕೆಂದರೂ ಅತ್ತಹಾಗಿದೆಯಲ್ಲ ಇವತ್ತು!
ನೀನ್ಯಾಕೆ ಅಳುತಿರುವೆ ತಾಯಿ?
ಬಹಳ ಹೊತ್ತಾಗಿ ತಂಗಾಳಿಗೆಚ್ಚೆತ್ತು ಕಿರಿಗಣ್ ತೆರೆದಾಗ ಎದುರಿಗೆ ಬ್ರಹ್ಮರಾಕ್ಷಸ ಕಳಚಿಬೀಳುವಂತೆ ಕಣ್ ತೆರೆದುಕೊಂಡು, ಅಡಿಯಿಂದ ಮುಡಿತನಕ ಇಡಿಯಾಗಿ ನುಂಗುವಂತೆ ನೋಡುತ್ತ ಕುಂತಿತ್ತು! ‘ಸತ್ತನೋ ಶಿವನೇ’ ಎಂದು ಗಾಬರಿಯಿಂದೇಳಬೇಕೆಂಬಲ್ಲಿ ಗಪ್ಪನೆ ಅವನ ಕಾಲು ಬಿಗಿಯಾಗಿ ಹಿಡಿದು “ಗುರುತಾಗಲಿಲ್ಲೇನೋ ನನ್ನಪ್ಪಾ?” ಎಂದಿತು. ಹೊಯ್ಕಿನಿಂದರ್ಧಾ ನೋಡಿದ. ಮೈಮುಖದ ತುಂಬ ಹೆಂಗೆಂದರೆ ಹಂಗೆ ಹುಲುಸು ಬೆಳೆದ ಕೂದಲು ಜಡೆಗಟ್ಟಿ ಅಂಗಾಂಗ ಸಾಂಗೋಪಾಂಗ ಯಾವುದೆಂದು ತಿಳಿಯದಂತಿತ್ತು. ಕಳಚಿಬೀಳುವಂತಿದ್ದು ಕೆಂಡಗಣ್ಣು.
ಕೋರೆಹಲ್ಲಿಳಿದು ತುಟಿಯ ಹೊರಗೆ ಕಾಣುತ್ತಿದ್ದವಾಗಿ ಸದಾ ಕೋಪಗೊಂಡ ರಾಕ್ಷಸನ ಹಾಗೆ ಕಾಣುತ್ತಿದ್ದ. ಸೊಂಟದಲ್ಲಿ ಮನುಷ್ಯರು ನೇಯ್ದ ಬಟ್ಟೆಯಿದ್ದುದರಿಂದ ದೈರ್ಯ ಬಂತು. ಅಷ್ಟರಲ್ಲಿ ಮತ್ತದೇ ಹೇಳಿತು. “ನಿನ್ನ ಪಾಪಿಗುರು ಮಹಾನುಭಾವನ ಮರೆತೆಯೇನಪ್ಪ?” ಗುರುತಾಯಿತು. ಆದರೆ ತನ್ನ ಗುರುಪಾದವೆಲ್ಲಿ? ಈ ವಿಕಾರವೆಲ್ಲಿ? ಎಂದು ಆಶ್ಚರ್ಯದಿಂದ ನೋಡುತ್ತಿರುವಂತೆ ಮಹಾನುಭಾವ “ಕಾಪಾಡೊ ನನ್ನಪ್ಪಾ” ಎಂದು ಚಂದಮುತ್ತನ ಪಾದಂಗಳ ಹಣೆಗೆ ಗಿಟ್ಟಿಸಿಕೊಂಡು ಬಿಕ್ಕಿಬಿಕ್ಕಿ ಅಳತೊಡಗಿದ. “ಅಯ್ಯಾಯ್ಯೋ ಶಿವಪಾದವೇ”- ಎನ್ನುತ್ತ ಕಾಲು ಬಿಡಿಸಿಕೊಂಡು ಚಂದಮುತ್ತ ಗುರುವಿನ ಪಾದ ಹಿಡಿಯಲು ಹೋದಾಗ ಅವನೊಪ್ಪದೆ ಇಬ್ಬರೂ ಪರಸ್ಪರ ಕೈ ಹಿಡಿದುಕೊಂಡರು. “ಇದೇನು ಗುರುಪಾದವೇ?” ಅಂದ ಚಂದಮುತ್ತ. ಮಹಾನುಭಾವ ಪಶ್ಚಾತ್ತಾಪದಲ್ಲಿ ಬೆದ ಬೆದ ಬೆಂದುಹೋಗಿದ್ದ;
“ನಿನ್ನ ಘಾತಿಸಿದ ಕಥೆ ಹ್ಯಾಗೆ ಹೇಳಲಿ? ಆದರೂ ನೀನು ಈ ಕಪಟವಿದ್ಯನ ತೆಪ್ಪು ಹೊಟ್ಟೆಗೆ ಹಾಕಿಕೊಳ್ಳುತ್ತೀ ಅಂತಾದರೆ ಮಾತ್ರ ಹೇಳುತ್ತೇನಪ್ಪ”
“ನಾತಿ ವಿಸ್ತಾರ ನಾತಿ ಹೃಸ್ವ ಅದೇನು ಹೇಳು ಶಿವಪಾದವೇ”
ಆಮೇಲೆ ದಮ್ಮಯ್ಯಾ ದಕ್ಕಯ್ಯಾ ಎಂದು ಸತ್ಯಸಂಗತಿಯನ್ನೊಪ್ಪಿಕ್ಪ್ಳ್ಳುತ್ತಾ ಮಹಾನುಭಾವ ಹೀಂಗಂದ:
ನೀನು ಕೊಳಲು ನುಡಿಸಿ ಮಳೆ ತರಿಸಿದ್ದೇ ಆಯ್ತು ನೋಡು
ಸಮೂಹ ಸನ್ನಿಯಂತೆ ನಿನ್ನ ಕೀರ್ತಿ
ನಾಕು ರಾಜ್ಯ ಎಂಟು ದಿಕ್ಕಿಗೆ ಹಬ್ಬುವದ ನೋಡಿ ಕೇಳಿ
ಅಸೂಯೆ ಅಧಿಕವಾಗಿ
ಹೊಟ್ಟೆಯ ಕಿಚ್ಚು ತಳಮಳಿಸಿತು.
ಮಳೆರಾಯನ ಪಳಗಿಸಿದೆಯೆಂದು, ಶಿವನ ಒಲಿಸಿದೆಯೆಂದು
ದಿನಾ ಬಂದ ಥರಾವರಿ ಕತೆ ಪುರಾಣ ಕೇಳಿ ಕೇಳಿ
ತಾಮಸಕ್ಕೊಳಗಾದೆ.
ನಿಜ ಹೇಳುತ್ತೇನೆ ಮಾರಾಯ: ಆಮೇಲಾಮೇಲೆ
ಲೋಕ ಲೌಕಿಕದಲ್ಲಿ ನಾನು ಬದುಕಲೇ ಇಲ್ಲ.
ನೋವನ್ನ ಹ್ಯಾಗೆ ಸಹಿಸಿದೆನೆಂದು ಕೇಳಬೇಡ-
ಇದ್ದಲ್ಲಿ ಇರಲಾಗದೆ, ಬಿದ್ದಲ್ಲಿ ಬಿದ್ದಿರಲಾಗದೆ
ಕೊನೆಗೆ ನಿನ್ನ ಹಟ್ಟಿಗೆ ಬಂದೆ, ನಿನ್ನ ನೋಡುವುದಕ್ಕೆ.
ಸೇಡಿನ ಸೆರೆಮನೆಯಲ್ಲಿ ಸಿಕ್ಕ ಹಂಗಾಯ್ತು.
ಕೆಟ್ಟ ಪಿಶಾಚಿ ಚಿನ್ನಮುತ್ತ ಬಂದ ನನ್ನ ಸಹಾಯಕ್ಕೆ,
ಅಥವಾ ನಾನು ಅವನ ಸಹಾಯಕ್ಕೆ.
ಅವನ ದೇಹಂತ ದೇಹ ಸೇಡಿನಿಂದ ಕೊಳೆಯುತ್ತಿತ್ತು.
ನಿನ್ನ ದುರ್ಗುಣಗಳ ಸಾವಿರ ಬಾರಿ ಜಪಿಸಿದ.
ನಿನ್ನ ಗುಣಗಳ ನೇತಿಗಳೆದು ಮಾತಾಡಿದ.
ಸುಳ್ಳು ಹೇಳಿ ಕಪಟವೊಡ್ಡಿದ.
ಶಿಷ್ಯನಾಗುವೆನೆಂದ. ತನ್ನ ಗುರುಭಕ್ತಿಗೆ
ಶಿವನೇ ಜಾಮೀನು ಎಂದ.
ಸುಖ ಸವಲತ್ತುಗಳ ಆಮಿಷ ತೋರಿದ.
ಕಾಲಾನುಕಾಲದಲಿ ಇದಕೂ ಬೆಲೆ ತೆರಬೇಕೆಂದು
ತಿಳಿದಿದ್ದರೂ ನಾನ್ಯಾಕೆ ಅವನ ಮೋಡಿಗೆ ಸೋತೆನೋ,
ಶಿವನನ್ನ ಕಡೆಗಣಿಸಿ ಒಪ್ಪಿಕೊಂಡೆ.
ನಿನ್ನ ದನಗಳಿಗೆ ಹಸಿರು ವಿದ್ಯೆ ಗಿಡಮೂಲಿಕೆ ಮಾಡಿದೆವು.
ತೊಣಚಿರೋಗ ತಂದಿಕ್ಕಿದೆವು.
ನಿನ್ನ ಹಟ್ಟಿ ಬಾಯಲಾಗುವಂತೆ ಮಾಟ ಮಾಡಿದೆವು;
ನಮ್ಮ ಆಟ ನಡೆಯಲಿಲ್ಲ.
ಆಮೇಲೆ ತಿಳಿಯಿತು: ಯಕ್ಷಿಯ ರಕ್ಷೆಯಿದೆಯೆಂದು.
ನಿನ್ನ ಹಾಡು ಕದಿಯುವುದು ಸಾಧ್ಯವಿರಲಿಲ್ಲ.
ಯಕ್ಷಿಯ ಕದ್ದು ವಶವರ್ತಿ ಮಾಡಿಕೊ ಶಿವನೇ,
ಹಂಗಾದಲ್ಲಿ ಚಂದಮುತ್ತನ ಕೀರ್ತಿ ಕುಂದಿ
ನಿನ್ನ ಕೀರ್ತಿ ಹಬ್ಬುವುದೆಂದು ಪ್ರಚೋದನೆ ಕೊಟ್ಟ.
ಅಂದೇ ನವತಂತ್ರಿ ನರಸಯ್ಯನ ಮೊರೆಹೊಕ್ಕೆವು.
ಯಂತ್ರ ತಂತ್ರ ಮಂತ್ರಾದಿಗಳ ಕರಿವಿದ್ಯೆ ಮಾಡಿ
ಹಸುವಿನ ಕರುವಿನ ಬಲಿ ಕೊಟ್ಟೆವು.
ಬಲಿ ಕೊಟ್ಟ ಕರು
ಮನುಷ್ಯರ ಥರ ಒದರಿ ಸತ್ತಿತಪ್ಪ!
ಭೈರವನೆದುರಿಟ್ಟ ನಮ್ಮ ನೈವೇದ್ಯ
ಕಪ್ಪೇರಿ ನೋಡ ನೋಡುವುದರೊಳಗೆ
ನರಿ ನಾಯಿಗಳ ಪಾಲಾಯಿತು. ಆದರೂ ನಾವು ಹಿಂದಿರುಗುವ ಸ್ಥಿತಿಯಲ್ಲಿರಲಿಲ್ಲ,
ಆಗಲೇ ಕತ್ತಿನ ತನಕ ಮುಳುಗಿದ್ದೆವು.
ನವ ತಂತ್ರಿ ನರಸಯ್ಯನಿಂದ ಕರಿವಿದ್ಯೆಯಲ್ಲಿ
ನಿನ್ನ ಗೊಂಬೆಯ ಮಾಡಿಸಿ
ಗೊಂಬೆಗೆ ಮಲೆಯಾಳ ಮಾಟವ ಮಾಡಿಸಿ ತಂದೆ.
ಆ ದಿನ ನಿನ್ನ ಹಾಡಿಗೆ ಒಲಿದು ಹಾರಾಡುವ ಯಕ್ಷಿಯ ಕಂಡು
ಚಿತ್ತ ವಿಭ್ರಮವಾಯಿತಯ್ಯಾ –
ಮಾಡಬಾರದ್ದನ್ನು ಮಾಡಿಬಿಟ್ಟೆ –
ನಿನ್ನ ಹಾಡು ನಿಂತಿತು ನೋಡು: ಸುಖನಿದ್ದೆಯಲ್ಲಿ ಯಾ
ಕನಸಿನಲ್ಲಿದ್ದ ಚಿಲಿಪಿಲಿ ಜಗತ್ತು
ಒಮ್ಮಿಗಿಲೆ ಎಚ್ಚೆತ್ತು, ಕಿಟಾರನೆ ಕಿರಿಚಿ
ಸದ್ದು ಗದ್ದಲ ಮಾಡಿದುವು ಬಹಳ.
ಆಕಾಶದಿಂದ ಕಳಚಿ ಬೀಳುವ ಮುನ್ನ
ಯಕ್ಷಿಯ ಹೊತ್ತುಕೊಂಡೋಡಿ ಬಂದೆ.
ಆಗ ಮೂರ್ಛೆ ಹೋದವಳಿಗೆ ಇನ್ನೂ ಗ್ಯಾನ ಬಂದಿಲ್ಲ.
ಇಂತೆಂಬ ನುಡಿಕೇಳಿ ಏಳೇಳು ಲೋಕದ ರವರುದ್ರಗೋಪ ತಾಳಿದ ಚಂದಮುತ್ತ ತಂತಾನೇ ವಿವೇಕಿಸಿಕೊಂಡು ಹೀಗೆಂದು ಕೇಳಿದ:
“ನಿನ್ನಂಥವರು ಇಂತಪ್ಪ ಕಾರ್‍ಯವನೆಸಗಬಹುದೇ?”
“ನೀನೇನು ಶಿಕ್ಷೆ ಕೊಟ್ಟರೂ ಅನುಭವಿಸುತ್ತೇನೆ, ದಯವಾಗು ನನ್ನಪ್ಪಾ. ಅಸಹಾಯಕ ಯಕ್ಷಿಯ ದಿನಾ ನೋಡಿಕೊಂಡು ಬಿದ್ದಿರೋದೇ ಘನವಾದ ಶಿಕ್ಷೆ. ಉಪಚರಿಸೋಣವೆಂದರೆ ಆಕೆಯ ಸಮೀಪ ಸುಳಿಯುವುದಕ್ಕೆ ಖಗಮೃಗಜಾತಿ ಬಿಡುವುದಿಲ್ಲ. ಬಿಗಿದ ಮುಷ್ಠಿಯ ದೈವಂಗಳೆಷ್ಟೋ ನನ್ನ ಕತ್ತಿನ ಕಡೆಗೆ ಕ್ರೂರ ದೃಷ್ಟಿ ಬೀರುತ್ತಿದ್ದಾವೆ. ಮನುಷ್ಯರಿಗೆ ಬರುವ ಭಯಂಕರ ರೋಗಗಳು ನನ್ನನ್ನಾಗಲೇ ಆಕ್ರಮಿಸಿಕೊಂಡಿವೆ. ಕಣ್ಣುಮುಚ್ಚಿದರೆ ಒಳಗೆ ಹಿಂಸೆ, ತೆರೆದರೆ ಹೊರಗೆ ಹಿಂಸೆ. ಬ್ರಹ್ಮರಾಕ್ಷಸನೆಂದು ನನ್ನ ಬಳಿಗ್ಯಾರೂ ಸುಳಿಯುತ್ತಿಲ್ಲ. ಬದುಕಿದ್ದಾಗಲೇ ಬ್ರಹ್ಮರಾಕ್ಷಸನಾಗೋದೆಂದರೆ ಅದೊಂದು ಸಿದ್ಧಿಯೇ ನನ್ನಪ್ಪ?
ಪಾಪಿ ಎನ್ನು, ನೀಚ ಎನ್ನು, ಗಂಜಳ ತಿಂದು ಬದುಕುವವ ಅನ್ನು. ನಿರ್ಲಜ್ಜನೆನ್ನು, ಅಧಮನೆನ್ನು. ಮನಸಾರೆ ಬೈದು ನನ್ನ ಆತ್ಮಕ್ಕೆ ತುಸು ಶಾಂತಿ ಕೊಡಪ್ಪಾ.

  • ಎಂದು ಸೋತು ಮಾತಾಡಿದ.
    “ಈಗ ಆ ಯಕ್ಷಿ ದೇವತೆ ಎಲ್ಲಿದ್ದಾಳೆ ಗುರುಪಾದವೆ?”

ಗಂಟೆ ಮತ್ತು ಅದರ ನಾಲಗೆಯಲ್ಲಿ ಅಡಗಿ ಕುಂತ ನಾದದ ಹಾಂಗಿರುವ ಶಿವನ ನೆನೆದು ಚಕೋರಿ ಎಂಬ ನಮ್ಮ ಕಥಾನಾಯಕಿಯ ಧರ್ಮಸೆರೆ ಬಿಡಿಸುತ್ತೇವೆ ಮಲಗಿದವರು ಎಚ್ಚರವಾಗಿರಯ್ಯಾ,
ಇದು ಜಗದ ಖಾಲಿಗಳನ್ನು ಹಾಡುಗಳಿಂದ
ತುಂಬಿದವನ ಕಥೆ,
ಸ್ಮಶಾನದಲ್ಲಿ ಮೈಮರೆತು ಕುಂತಿದ್ದ ಶಿವ
ಮರೆತ ಹೆಜ್ಜೆಯ ಹಾಕಿ ಮತ್ತೆ ಕುಣಿಯುವಂತೆ
ಮಾಡಿದವನ ಕಥೆ,
ಕಿವಿಗಳ ಕಿಲುಬು ತೊಳೆದು
ಹೃದಯದ ಕೊಳೆ ಕಳೆದು
ಕಥೆಯ ಕೇಳುವುದಕ್ಕೆ ಸಿದ್ಧವಾಗಿರಯ್ಯಾ.
ಹೃದಯದ ಯಾವುದಾದರೂ ಮೂಲೆಯಲ್ಲಿ
ಒಂದೆರಡು ಕನಸು ಮಲಗಿದ್ದರೆ ಎಚ್ಚರಿಸಿರಯ್ಯಾ
ನಮ್ಮ ಹಾಡು ಕೇಳುವುದಕ್ಕೆ.
ಸ್ವಯಂ ಸಾವಳಗಿ ಶಿವಲಿಂಗ ಸ್ವಾಮಿ
ಪ್ರತ್ಯಕ್ಷ ಕಿವಿ ತೆರೆದುಕೊಂಡು ಕುಂತಿದ್ದಾರೆ,
ಶರಣೆಂದು ಬಾಗಿ ಮುಂದಿನ ಕಥಾ ಸಾರಾಂಶವ
ಹೇಳಬೇಕೆಂದರೆ –
ನೆರಳಿನ ಜೊತೆ ಎಂದಾದರೂ ಗುದ್ದಾಡಿದ್ದೀರಾ ಶಿವ?
ಬಲು ಬಲು ಸುಲಭ.
ಬೆಳಕಿನ ಬಳಿ ನೀವು ನಿಂತುಕೊಂಡು
ಗೋಡೆಯ ಕಡೆಗೊಮ್ಮೆ ನೋಡಿರಿ.
ನೋಡಿದಿರಾ; ಅಕೋ ಮೂಡಿದ್ದಾನೆ ನಿಮ್ಮ ಶ್ರೀ ನೆರಳು!
ಎರಡೂ ಹಸ್ತಗಳನ್ನು ಕಿವಿಮ್ಯಾಲಿಟಗೊಂಡು ಬಾಯಿ ತೆರೆಯಿರಿ.
ತೆರೆದಿರಾ?: ಅಗೋ ಕೊಂಬು ಕೋರೆಹಲ್ಲಿನ ಬ್ರಹ್ಮರಾಕ್ಷಸ!
ನೀವು ಗುದ್ದಿದರೆ ತಿರುಗಾ ಗುದ್ದಿ
ನೆಗೆದರೆ ನೆಗೆದು
ಕುಣಿದರೆ ಕುಣಿದಾಡಿ ಕುಪ್ಪಳಿಸುವನಲ್ಲವೆ?
ಅನುಮಾನ ಬಂತಾ?
ನಿಮ್ಮಿಬ್ಬರಲ್ಲಿ ಯಾರು ನಿಜ ಅಂತ?
ಅದೇನೇ ಇರಲಿ ಶಿವನೆ,
ಗೋಡೆಯ ಮ್ಯಾಲೆ ಮೂಡಿದಷ್ಟು ಕತ್ತಲೆಗೆ
ಯಜಮಾನರು ನೀವೆ!
ಇಷ್ಟಕ್ಕೆಲ್ಲ ಬೆರಗಾಗಬೇಡಿರಯ್ಯಾ
ಅಮಾವಾಸ್ಯೆಯ ಅಂಧಂತಮಸ್ಸಿಗೆಶಿವನು ಯಜಮಾನನಾದಂತೆ
ಈ ಸಣ್ಣ ಕತ್ತಲೆಗೆ ನಾವು ನೀವು!
ನೋಡಿದಿರಲ್ಲ ಮಹಾನುಭಾವನ?
ಕನ್ನಡಿಯಲ್ಲಿ ಮೂಡಿದ ಅವನ ಬ್ರಹ್ಮರಾಕ್ಷಸನ?
ಇನ್ನು ಮ್ಯಾಲೆ ನಮ್ಮ ಕಥಾನಾಯಕ ಚಂದಮುತ್ತ
ಚಂದ್ರನೆಂಬ ಕನ್ನಡಿಯಲ್ಲಿ ನೋಡಿಕೊಂಡಾಗ
ಏನು ಕಂಡಿತೆಂದು ಕೇಳಿರಯ್ಯಾ-


ಶಿವಶವಾ, ಈ ಪ್ರಕಾರವಾಗಿ ಚಂದಮುತ್ತ ತನ್ನ ವಿದ್ಯಾಗುರುವಾದಂಥ ಮಹಾನುಭಾವನ ಶ್ರೀಪಾದಂಗಳ ಹಿಡಿದು,
“ಈಗ ಆ ಯಕ್ಷಿದೇವತೆ ಎಲ್ಲಿರುವಳು ಗುರುಪಾದವೆ?”
ಎಂದು ಕೇಳುವ ಪ್ರಸ್ತಾವದಲ್ಲಿ ಮಹಾನುಭಾವ ‘ಬಾ’ ಎಂದು ಚಂದಮುತ್ತನ್ನ ಕಾಡುಜಂಗಲ್‌ದಲ್ಲಿದ್ದಂಥಾ ಒಂದು ಹಾಳು ಗುಡಿಗೆ ಕರೆದು ತಂದ. ಗರ್ಭಗುಡಿ ವಿನಾ ಹೊರಗೆಲ್ಲ ಹಾಳು ಬಿದ್ದಿತ್ತು. ಒಳಗೆಲ್ಲ ಅಂಧತಮಸ್ಸು ಕಗ್ಗತ್ತಲಿತ್ತು. ತೋರಿಸಿದನೇ ವಿನಾ ಮಹಾನುಭಾವ ಒಳಕ್ಕೆ ಬರಲಿಲ್ಲ. ಚಂದಮುತ್ತ ಕಾಲಿನೆಕ್ಕಡ ಕಳಚಿ ಕಗ್ಗತ್ತಲಲ್ಲಿ ಕಾಲಾಡಿಸುತ್ತ ಒಳಕ್ಕೆ ನಡೆದ. ತುಸು ಹೊತ್ತಿನಲ್ಲಿ ತಡಕಾಡುವ ಕಾಲಿಗೆ ಯಕ್ಷಿಯ ಕಾಲುತಾಗಿ ‘ದೇವೀ’ ಅಂದ. ಮಲಗಿದ್ದ ಚಕೋರಿ ಎಂಬ ಯಕ್ಷಿ ಮೆಲ್ಲಗೆ ಕಣ್ಣು ತೆರೆದಳು. ಎಳೆಹಸಿರು ಬಣ್ಣದ ಜ್ಯೋತಿಗಳೆರಡು ಸಣ್ಣಗೆ ಹೊತ್ತಿಕೊಂಡವು. ಕಣ್ಣಿಗೆ ಪ್ರಿಯವೂ ಹಿತಕರವೂ ಆಗಿತ್ತು ಬೆಳಕು. ಆ ಬೆಳಕಿನಲ್ಲಿ ನೋಡಿದಾಗ ಕರುಳು ಕಿತ್ತು ಕಣ್ಣಿಗೆ ಬಂತು. ದೇವಿಯ ಕಣ್ಣು ವಿನಾ ಉಳಿದೆಲ್ಲ ದೇಹ ಸೆಟೆದುಕೊಂಡಿತ್ತು. ಧೂಳು ಕೆಸರಂಟಿ ಕೊಳೆಯಾಗಿದ್ದವು ಬಿಳಿರೆಕ್ಕೆ, ಅಲುಗಾಡುತ್ತಿರಲಿಲ್ಲ ಕೈಕಾಲು. ಇವನ ನೋಡಿ ಮೂಗಿನ ಪವನ ಬಿರುಸಾದವು. ನಿಟ್ಟುಸಿರ ಹೊಯ್ಲಿನಿಂದ ತುಟಿ ಒಣಗಿದ್ದವು. ಮಾತಾಡಲು ಯತ್ನಿಸಿದಳು. ಬಾಯಿ ಬರಲಿಲ್ಲ. ಪಣತಿಯ ಕೊನೆಯಿಂದ ತೈಲ ಸೋರುವ ಹಾಗೆ ಧಾರಾವತಿ ಕಣ್ಣೀರು ಜಲ ತುಳುಕಿದಳು ಯಕ್ಷಿ. ನೋಡಲಾರದೆ “ಗೋನು ಕುಯ್ದೆಯೋ ಶಿವನೇ” ಎಂದು ತನ್ನಿಂದಾಗಿ ಈ ಅವಸ್ಥೆಗೆ ಬಂದ ಯಕ್ಷಿ ಸಾಯುವ ಮುನ್ನ ತಾನು ಸಾಯುವುದೆ ಮೇಲೆಂದು ಕುಂತಿರಲಾರದೆ ಎದ್ದು ಹೊರಬಂದ.
ಗುಡಿಯ ಹೊರಗೆ ತಪ್ಪಿತಸ್ಥ ಮಹಾನುಭಾವ ನಿಂತಿದ್ದ. ಇವನ ಕಂಡು ಇನ್ನೇನೋ ಅನಾಹುತವಾಯಿತೆಂದು ಹೌಹಾರಿದ. ಚಂದಮುತ್ತ ನೇರ ಇವನ ಬಳಿಗೆ ಹೋಗಿ
“ದೇವಿಯ ಉಳಿಸುವ ಉಪಾಯ ಯಾವುದೂ ಇಲ್ಲವೇ ಗುರುಪಾದವೇ?”-ಅಂದ.
“ಇದೆ ಆದರೆ ಹೇಳಲಾರೆನಪ್ಪ, ಪಾಪಿ ನಾನು. ಈ ಬಗ್ಗೆ ಒತ್ತಾಯ ಮಾಡಬೇಡ”ಎಂದ ಅಳುತ್ತ.
“ಅದೇನಿದ್ದರೂ ಹೇಳು ಗುರುಪಾದವೇ”
-ಎಂದು ಕಾಲು ಹಿಡಿದು ಕೇಳಿದ ಚಂದಮುತ್ತ.
“ಹ್ಯಾಗೆ ಹೇಳಲಿ ನನ್ನಪ್ಪಾ; ತಪ್ಪು ಮಾಡಿದವ ನಾನು. ಜೀವಾ ಕೊಟ್ಟರೂ ಕಡಿಮೆ. ಆದರೆ ನನ್ನ ಜೀವದಿಂದ ಅವಳು ಉಳಿಯಲಾರಳು. ನನ್ನ ತಪ್ಪಿಗಾಗಿ ಇನ್ನೊಬ್ಬರ ಬಲಿ ಹ್ಯಾಗೆ ಕೊಡಲಿ?”
“ಅದೇನಿದ್ದರೂ ಹೇಳು ಗುರುಪಾದವೇ.”
“ಕರ್ತವ್ಯವೆಂದು ಹೇಳುತ್ತೇನೆ ಕೇಳು. ಶಿವರಾತ್ರಿಯ ದಿನ ಮಹಾನ್ ಕಲಾವಿದನೊಬ್ಬ ತಿಂಗಳು ರಾಗ ಹಾಡಬೇಕು ಇಲ್ಲವೆ ನುಡಿಸಬೇಕು. ತಿಂಗಳು ರಾಗಕ್ಕೆ ಶಿವ ಒಲಿಯಬೇಕು. ಶಿವ ಒಲಿದಿದ್ದರ ಗುರುತೆಂದರೆ ಅಮಾವಾಸ್ಯೆಯ ದನ ಚಂದ್ರ ಕಾಣಿಸಬೇಕು. ಆವಾಗ ಇವಳಿಗೆ ಮೂಲ ದೈವತ್ವ ಒದಗಿ ಬಂದು ಹಾರುತ್ತಾಳೆ. ಆದರೆ ತಿಂಗಳು ರಾಗ ಬಲ್ಲವರು ಯಾರಿದ್ದಾರೆ, ಎಲ್ಲಿದ್ದಾರೆ?”
“ನಾನಿದ್ದೇನೆ ಹೇಳು ಗುರುಪಾದವೇ”
“ಹಾಗಿದ್ದರೆ ಮುಂದಿನ ಮಾತು ಹೇಳಲಾರೆ”
-ಎಂದು ಹೇಳಿ ಮಹಾನುಭಾವ ಸಾವನ್ನ ಕಂಡವರಂತೆ ಓಡತೊಡಗಿದ. ತಕ್ಷಣ ಚಂದಮುತ್ತನೂ ಬೆಂಬತ್ತಿ ಓಡಿ ಹೋಗಿ ಮತ್ತೆ ಕಾಲು ಹಿಡಿದು, “ಹೇಳದಿದ್ದರೆ ಶಿವನಾಣೆ ನಿನಗೆ” ಎಂದ.
ಮಹಾನುಭಾವ ಹತಾಶನಾಗಿ ಕುಸಿದು –
“ಎಷ್ಟಂತ ಪಾಪ ಮಾಡಲಿ? ಈಗ ಮಾಡಿದ್ದು ಸಾಲದೆ ನನ್ನಪ್ಪ?”
“ಹೇಳುವುದನ್ನು ಪೂರ್ತಿ ಮಾಡು ಶಿವನೇ”
“ತಿಂಗಳು ರಾಗ ಹಾಡಿದವನು ಅವಳಿಗೆ ದೈವತ್ವ ಒದಗಿ ಹಾರಿದೊಡನೆ ಶಿಲೆಯಾಗುತ್ತಾನೆ ನನ್ನಪ್ಪ”
ಆನಂದದಿಂದ ಚಂದಮುತ್ತನ ಕಣ್ಣು ಭಗ್ಗನೆ ಹೊತ್ತಿಕೊಂಡವು.
“ಇದು ನಿಜವೆ ಶಿವಪಾದವೆ? ನಿನಗಿದನ್ನ ಯಾರು ಹೇಳಿದರು?”
“ಮಾತು ತಪ್ಪಿದರೆ ನನ್ನ ಕಿವಿ ಹರಿದು ಕಿರಿಬೆರಳಿಗೆ ಉಂಗುರ ಮಾಡಿಕೊ ನನ್ನಪ್ಪ. ಇಂಥಾ ಪ್ರಸ್ತಾವದಲ್ಲಿ ಶ್ರೋತೃಸುಖ ನುಡಿಯಲಾರೆ, ಇದು ನಿಜ.”
ಅವಳ ಸಖಿಯರಿಬ್ಬರು ಮಾತಾಡಿಕೊಂಡುದನ್ನ ನಾನು ಕದ್ದು ಕೇಳಿಸಿಕೊಂಡೆ. ಇಲ್ಲಿಯವರೆಗೆ ಸತ್ತಿದ್ದೆನೆಂದು ಭಾವಿಸಿದ್ದೆ. ಈಗ ಬದುಕೋ ಸಮಯ ಬಂದಿದೆ ಅಂದ್ಕೊತೇನೆ. ದಯಮಾಡಿ ಕ್ಷಮಿಸು ನನ್ನಪ್ಪ.”
-ಎಂದ ಮಹಾನುಭಾವ.
“ಉಪಕಾರವಾಯ್ತು ಶಿವನೆ, ಯಕ್ಷಿಯ ಬಿಡುಗಡೆ ಮಾಡದಿದ್ದರೆ ಚಂದಮುತ್ತನೆಂಬೋ ಛಲ ನನಗ್ಯಾಕೆ?”
-ಎಂದು ಮಹಾನುಭಾವನ ಕಾಲುಮುಟ್ಟಿ ನಮಸ್ಕರಿಸಿ ಮತ್ತೆ ಗುಡಿಯೊಳಗೋಡಿದ ಚಂದಮುತ್ತ. ಹೆಗಲ ಕಂಬಳಿ ಹಾಸಿ ಅದರಲ್ಲಿ ಯಕ್ಷಿಯ ಮಲಗಿಸಿ ಕೂಸಿನ ಹಾಗೆ ಸುತ್ತಿ ಘಾಸಿ ಮಾಡದ ಹಾಗೆ ಎತ್ತಿಕೊಂಡು ತನ್ನ ಹಟ್ಟಿಗೆ ನಡೆದ.
ಭಾರ ಇಳಿವಿದ ಹಾಗೆ ಹಗುರವಾದ ಮಹಾನುಭಾವ.
ಯಕ್ಷಿಯ ಪಾದ ಬಿದ್ದಲ್ಲಿಯ ಧೂಳನ್ನ
ತಲೆಗೆ ಹಚ್ಚಿಕೊಳ್ಳಬೇಕೆಂದು
ಹಾಳು ಗುಡಿಯೊಳಕ್ಕೆ ಹೋದ.

೪೪. ಬಿಸಿಲಗುದುರೆಯನೇರಿ ಹೋದಾ

ಇದ್ದಕ್ಕಿದ್ದಂತೆ ಹೇಳಕೇಳದೆ ದಿಕ್ಕು ದೇಶಾಂತರ ಹೋದ ಮಗನ ಬೇಲಿಯಿಲ್ಲದ ಬದುಕಿನ ಬಗ್ಗೆ ಶಿವನಲ್ಲಿ ಬೇಕಾದಷ್ಟು
ತಕರಾರೆತ್ತಿದಳು ಅಬ್ಬೆ.
ಪಳಗಿಸಲಾರೆ ಮಗನ್ನ,
ಅವನಿಗಮರಿಯ ವ್ಯಸನ
ಮ್ಯಾಲೆ ಚಂದ್ರನ ಗ್ಯಾನ.
ನೀವಾದರೂ ಹಿಂದಿರುಗಿ ಕಳುಸಿರೇ ಮಗನ್ನ
ಎಂದು ಅಬ್ಬೆ ಸುತ್ತಿನ ದೇವರಿಗೆ ಸೆರಗೊಡ್ಡಿ ಹಾಡಿ ಬೇಡಿಕೊಂಡಳು:
ಬಿಸಿಲುಗುದುರೆಯನೇರಿ ಹೋದಾ
ಕೈಮೀರಿದ ಚಂದಿರನ ಬೇಟೆಗೆ ಹೋದಾ || ಪ ||
ಬೆಳ್ಳಿಯ ಮೀನಾಗಿ
ಬೆಳದಿಂಗುಳಲೀಜುವ
ಚಂದ್ರನ ಹಿಡಿಯುವೆನೆಂದಾ | ಅಪ |
ಹಾರುವ ಧ್ವಜದಂಥಾ ಪೊಗರಿನ ಬಾಲಕ
ಮುಗಿಲಿಗೆ ಎರಗುವೆನೆಂದಾ |
ಆಕಾಶದಂಗಳಕೆ ನುಗ್ಗಿ ಲಗ್ಗೆಯ ಹಾಕಿ
ಸೂರೆ ಮಾಡುವೆ ಸಿರಿಯನೆಂದಾ |
ಕಣ್ಣಿಗೆ ಬಣ್ಣವ ಮೆತ್ತುವ ಕನಸಿನಲಿ
ನಿಮ್ಮ ಮುಳುಗಿಸುತೇನೆ ಅಂದಾ || ಹೋದಾ ||
ಅಂಬಾರದಾಚೆಯ ರಂಭೇರ ನಾಡಿಂದ
ಬಾಡದ ನಗೆ ತರುವೆನೆಂದಾ |
ಚಕ್ಕಂದವಾಡುವ ಚಿಕ್ಕೆ ತಾರೆಗಳನ್ನ
ಉಡಿತುಂಬ ತರುತೇನೆ ಅಂದ |
ಸೊಕ್ಕಿದ ಚಂದ್ರನ ಸಭ್ಯನ ಮಾಡುವೆ
ಪಳಗಿಸುವೆ ದೇವರನೆಂದಾ || ಹೋದಾ ||
ಹೋದವ ಬಾರದೆ ಕಾತರ ತಾಳದೆ
ಕಣ್ಣ ಹಡದಿಯ ಹಾಸಿ ಕಾದೆ |
ಬಂದೇ ಬರುತಾನಂತ ಆಕಾಶದಂಗಳದ
ಒಂದಾರೆ ಹೂ ತರುತಾನಂತ | ಭ್ರಾಂತ
ಯಾವೇರುಪೇರಿನಲಿ ದಾರಿ ತಪ್ಪಿದನೇನೋ
ಕಂಡರೆ ಕಳಿಸಿರಿ ತಿರುಗಿ | ಆ ಬಾಲನ ||
ಹಾಡುತ್ತ ಹಾಡುತ್ತಾ ದನದ ಶಕುನವ ಕೇಳಬೇಕೆನಿಸಿತು ಅಬ್ಬೆಗೆ. ಅವಸರದಿಂದ ಕೊಟ್ಟಿಗೆಗೆ ಹೋಗಿ ಕಪಿಲೆಯ ಮುಂದೆ ಕುಂತಳು.
“ದಿಕ್ಕು ದೇಶಾಂತರ ಹೋದ ಮಗ ಮತ್ತೆ ಬರುತಾನೆಂದರೆ ಬಲಗಾಲೆತ್ತು ಇಲ್ಲದಿದ್ದಲ್ಲಿ ಎಡಗಾಲೆತ್ತು”-ಎಂದಳು.
ಕಪಿಲೆ ಬಲಗಾಲೆತ್ತಿತು. ಅಬ್ಬೆಯ ಪ್ರೋತ್ಸಾಹ ಉಕ್ಕಿ ಬಂತು.
“ಈ ವಾರ ಬರುತಾನೆಂದರೆ ಬಲಗಾಲೆತ್ತು. ಇಲ್ಲದಿದ್ದಲ್ಲಿ ಎಡಗಾಲೆತ್ತು”ಎಂದಳು.
ಕಪಿಲೆ ಬಲಗಾಲೆತ್ತಿತು. ಆನಂದದ ಅಮಲೇರಿತು ಮುದುಕಿಗೆ.
“ಇವತ್ತೇ ಬರುತ್ತಾನೆಂದರೆ ಬಲಗಾಲೆತ್ತು; ಇಲ್ಲದಿದ್ದರೆ ಎಡಗಾಲೆತ್ತು”-ಎಂದಳು.
ಕಪಿಲೆ ಈಗಲೂ ಬಲಗಾಲೆತ್ತಿದ್ದೇ- ಅಬ್ಬೆಗೆ ಮುದದ ಹುಚ್ಚಡರಿ ಮಕ್ಕಳ ಹಾಗೆ ನಲಿದಾಡಿದಳು. ಕೊಟ್ಟಿಗೆಯಲ್ಲಿ ಕಾಲೂರಲೊಲ್ಲಳು. ಕರುಮರಿಗಳಿಗೆ ಕಲ್ಗಚ್ಚು ಬೆರೆಸಿ ನೀರು ಕುಡಿಸಿ ದನ ಹಿಂಡಿಕೊಂಡಳು. ಗೂಡಿನ ಮೂಲೆಮೂಲೆ ಗುಡಿಸಿ ಸೆಗಣಿ ಸಾರಣೆ ಮಾಡಿ ಅಂಗಳದಲ್ಲಿ ಬಣ್ಣದ ರಂಗೋಲಿ ಹುಯ್ದಳು. ಮೊಸರು ಕಡೆದು ಬೆಣ್ಣೆ ಮಾಡಿ ದೈವದ ಮುಂದೆ ತುಪ್ಪದಲ್ಲಿ ಜಗ ಜಗ ಬೆಳಕಿಟ್ಟಳು. ಪರಿಮಳ ನಾರುವ ಬಗೆ ಬಗೆ ಭಕ್ಷ್ಯಗಳ ಮಾಡಿ ಹೊಟ್ಟೆಗೆ ಬೊಗಸೆ ನೀರು ಕೂಡಾ ಕುಡಿಯದೆ ಮುಖದ ಮುತ್ತು ಬೆವರೊರೆಸಿಕೊಂಡು ಮಗನ ದಾರಿ ಕಾಯುತ್ತ ಕುಂತಳು. ಸೂರ್ಯನಾರಾಯಣ ದೇವರು ಅಸ್ತಂಗತನಾಗಿ ಕತ್ತಲಾದರೂ ಮಗ ಬರಲಿಲ್ಲ. ಬರುವನೆಂಬ ನಂಬಿಕೆ ಕಂದಲಿಲ್ಲ. ಕಾಯುತ್ತ ಕುಂತವಳು ಹಾಗೇ ಸಪನಿದ್ದೆಗೆ ಸಂದಳು. ಸ್ವಪ್ನದಲ್ಲಿ –
ಯಾರೋ ಗೂಡಿನ ಮುಂದೆ ಓಡಿ ಬಂಧಂಗಾಯ್ತು.
ಕದ ಬ್ಯಾಗ ತೇಗೀರೆಂದು ಕೂಗಿಧಂಗಾಯ್ತು.
ಅಬ್ಬೆ ಕದ ತೆರೆದರೆ
ಕದ ತಳ್ಳಿ ಒಳನುಗ್ಗಿ
ಬೆನ್ನ ಹಿಂದಿಲೆ ಕದಮುಚ್ಚಿ ನಿಟ್ಟುಸಿರಿಟ್ಟ,
ಗುರುತಿಲ್ಲ ಯಾರೋ ಪರ ಊರಿನವ.
ಬೆಂದ ಹೂವಿನ ಹಾಗೆ ಎಳೆಯ ಮುಖ ಬಾಡಿತ್ತು.
ಮೈಮುಖ ಧೂಳಿನಲಿ ಉರುಳಾಡಿಧಂಗಿತ್ತು.
ಓರೆಗೂದಲು ಕಟ್ಟಿ ನವಿಲುಗರಿ ಸಿಗಿಸಿದ್ದ.
ಮುರಿದ ಕೈದುಗಳ ಕೈಯಲ್ಲಿ ಹಿಡಿದಿದ್ದ.
ಮೊನಚಾದ ನಕ್ಷತ್ರ ಎದೆಯೊಳಗೆ ನಾಟಿತ್ತು
ಹನಿ ಹನಿ ನೆತ್ತರು ನೆಲಕೆ ಸೋರಿತ್ತು.
ಬೇಟೆಯಲಿ ನೊಂದ ಮಿಗ ನರಳಿಧಂಗಿತ್ತು.
ಹಿಂದಿನಿಂದ್ಯಾರೊ ಬಂದಾರೆಂಬ ಭಯವಿತ್ತು.
ಕದಕೆ ಅಗಳಿಯ ಹಾಕಿ
ಹಡೆದವ್ವಾ ರಕ್ಷಿಸೆಂದ.
ಒಳಗಿದ್ದ ಕತ್ತಲ ಕಂಡು ಬದುಕಿದೆನೆಂದ.
ಅಂಬೆಗಾಲಿಡುತ ಅಬ್ಬೆಯ ಬಳಿ ಬಂದ.
ಬೆಂಬತ್ತಿ ಬರುವವರು ಯಾರು ಕಂದಾ?
ಎಂದಳು ಅಬ್ಬೆ. ಅವನಂದ :
ಚಂದ್ರ ಬರುತ್ತಿದ್ದಾನೆ ಹಿಂದಿನಿಂದ!
ಯಾ ರೂಪದಿಂದಲೋ ಯಾ ಮಾಯೆಯಿಂದಲೋ
ಬೇಟೆಯಾಡುತ ಚಂದ್ರ ಬಂದೇ ಬರುವ,
ಈ ನಿನ್ನ ಕಂದನ್ನ ಕಾಪಾಡೆ ಎವ್ವ.
ಅವ್ವಾ ಅಂದನೆ ಕಂದ, ಅಬ್ಬೆಯ ಮೊಲೆ ತುಂಬಿ
ಚಿಲ್ಲಂತ ಚಿಮ್ಮಿದವು ಹಾಲು.
ಹಾಲು ಕಂಡದ್ದೇ ಹೋ ಹಾಲು ಬೆಳ್ದಿಂಗಳೆಂದು,
ಚಂದ್ರ ಬಂದನು ಎಂದು ಸೆಟೆದು ಬಿದ್ದ!
ಫಕ್ಕನೆಚ್ಚರವಾಯ್ತು ಲಕ್ಕಬ್ಬೆಗೆ. ಜಲಜಲ ಬೆವರಿ ಕುಂತ ನೆಲ ಒದ್ದೆಯಾದವು. ಅಷ್ಟರಲ್ಲಿ ಕದ ಬಡಿದ ಸದ್ದು ಕೇಳಿಸಿ, ಮೈ ಕೊಡಹಿ ಎದ್ದು ಬೀಳುತೇಳುತ ಪಣತಿ ಸಮೇತ ಬಂದು ಕದ ತೆಗೆದು- ಹೊರಗಿಣಿಕಿದರೆ ನಿಂತಿದ್ದಾನೆ ಮಗರಾಯ! ಯಕ್ಷಿಯ ಹೊತ್ತುಕೊಂಬಂದ ಚಂದಮುತ್ತ ಅಬ್ಬೆಯ ಕಿವಿಯಲ್ಲಿ ‘ಯಕ್ಷಿ’ ಎಂದುಸುರಿದ. ಮಗನಿಗಿಂತ ಮುಂಚೆ ಮಂಚದ ಬಳಿಗೋಡಿ ಕಂಬಳಿ ಹಾಸಿ, ದಿಂಬಿಟ್ಟು ಅದರ ಮ್ಯಾಲೆ ಯಕ್ಷಿಯ ಮಲಗಿಸಲು ನೆರವಾದಳು. ಇವಳೂ ನವತಂತ್ರಿ ನರಸಯ್ಯನ ಮಾಟಕ್ಕೆ ಬಲಿಯಾದಳೆಂಬುದು ಕೂಡಲೇ ಹೊಳೆದುಬಿಟ್ಟಿತು ಅಬ್ಬೆಗೆ. ಮೆಲ್ಲಗೆ ಕಂಬಳಿ ಓಸರಿಸಿ ನೋಡಿದಳು : ಸವೆದ ಶಕ್ತಿಯಿಂದ ಸೀದ ಚೆಲುವಿನ ಆಕಾಶ ದೇವತೆಯ ಅಸಹಾಯಕ ಸ್ಥಿತಿಗೆ ಆಘಾತವಾಯಿತು. ನರಮಾನವರಿಗೆ ವರಕೊಡುವ ಖೇಚರಿ ಈಗ ಭೂಚರರ ಕರುಣೆಯ ಕೈಗೂಸಾಗಿ ಬಿದ್ದುಕೊಂಡಿದ್ದಾಳೆ! ನೋಡಿದ್ದೇ ಮೊಟ್ಟೆಯಂತೆ ಅಖಂಡವಾಗಿದ್ದ ಅಬ್ಬೆಯ ಬ್ರಹ್ಮಾಂಡದಲ್ಲಿ ಬಿರುಕುಂಟಾಯಿತು. ದೇವರು, ಜಗತ್ತು ಮತ್ತು ನರಮಾನವರ ಸಂಬಂಧದ ಸಮತೋಲ ತಪ್ಪಿ ಏನೇನೋ ಧ್ಯಾನಿಸಿದಳು.

೪೫. ಹೇಳಬೇಕಾದ್ದನ್ನು ಹೇಳಿದೆನು ಮಗನೆ

ಬೆಳಗಿನ ಕನಸಿನಲ್ಲಿ ಮಗ ಬರುವ ಸೂಚನೆ ಕೊಡುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಆದರೆ ಅಬ್ಬೆಯ ಆತ್ಮಶಕ್ತಿ ನಮಗೇ ಗೊತ್ತಿಲ್ಲದೆ ಕಾಲ ಮೀರಿದ ಮಾನವ ಕುಲದ ಭಯಾನಕ ಸತ್ಯಗಳನ್ನು ಅಭಿನಯಿಸುವಂತೆ ನಿರ್ದೇಶನ ನೀಡಿತು. ಕನಸಿನಲ್ಲಿ ಬಂದವನು ಚಂದಮುತ್ತನಲ್ಲವೇ?- ಎಂದೆನಿಸಿ ಪ್ರಶ್ನೆಯ ಎದುರಿಸಲಾರದೆ ದೂರದಿಂದ ಯಾರೋ ಕರೆದಂತೆನಿಸಿ ಓ ಎಂದು ಒಲೆಯ ಬಳಿಗೋಡಿದಳು. ಅಬ್ಬೆಯ ಸಮಯ ನೋಡಿಕೊಂಡು ಚಂದಮುತ್ತ ಅಲ್ಲಿಗೇ ಬಂದು ಹೇಳಿದ :
“ನಾನು ಇಷ್ಟು ದಿನ ಅಗಲಿದ್ದಕ್ಕೆ ತುಂಬ ನೊಂದಿರುವೆ ಅಬ್ಬೆ”
“ಇಲ್ಲವಲ್ಲ. ನೀನು ಸದಾ ನನ್ನ ಹೃದಯದಲ್ಲಿ ಬೆರಳು ಸೀಪುತ್ತ ಚಂದ್ರನ ಕನಸು ಕಾಣುತ್ತ ಮಲಗಿದ್ದೆ”
-ಎಂದಳು. ಸೂತ್ರ ಹರಿದ ಅಬ್ಬೆಯ ಮಾತಿಗೆ ಬೆರಗಾದ.
“ಅಬ್ಬೆ ನಿನ್ನೊಂದಿಗೆ ಹೇಳಬೇಕಾದ ಸಂಗತಿಗಳಿವೆ”- ಎಂದು ಚಂದಮುತ್ತ ಹೇಳಿದಾಗ ಮಗ ಯಾವುದೋ ಅಪಾಯಕ್ಕೆ ಆಶೀರ್ವಾದ ಕೇಳುವನೆಂದು ಖಾತ್ರಿಯಾಗಿಬಿಟ್ಟಿತು ಮುದುಕಿಗೆ. ಈಗ ರಕ್ಷಿಸಿಕೊಳ್ಳಬೇಕು ಮಗನನ್ನ ಮತ್ತು ತನ್ನನ್ನ-
ನನಗೆ ವಯಸ್ಸಾಯ್ತು.
ಸೋಜಿಗಗಳೆಲ್ಲ ಸತ್ತಿವೆ ನನ್ನಪ್ಪ.
ಈಗೊ ಇನ್ಯಾವಗೊ ಶಿವನ ಕರೆ ಬಂದರೆ
ಮುಗಿಯಿತು ನನ್ನ ಆಟ,
ಬದುಕಿನ ಆಟಿಗೆ ಚೆಲ್ಲಿ ಹೊರಡೋದೇ.
ಆಮ್ಯಾಕೆ ಬಿದ್ದಿರುತಾವೆ ಆಟಿಗೆ,-
ಈ ಗೂಡು, ಈ ಹಟ್ಟಿ, ದನ ಕರ ಈ ಕಾಡು
ಬೆಳುದಿಂಗಳು, ನೀನು ಕೂಡ.
ಅಬ್ಬೆಯ ಗಲಿಬಿಲಿ ನೋಟ ಮತ್ತು ಮಾತುಗಳಿಂದ ಗೊಂದಲಗೊಂಡ ಚಂದಮುತ್ತ ಉಪಾಯವಾಗಿ ಹೇಳಿದ :
“ಅಬ್ಬೆ ಹಸಿವಾಗಿದೆ.”
“ಅಯ್ಯೋ ನನ್ನಪ್ಪಾ”
-ಎಂದು ಮುದುಕಿ ನಿನ್ನೆ ಮಾಡಿಟ್ಟ ಅನ್ನ ಅಂಬಲಿಯನ್ನೇ ಹರಿವಾಣಕ್ಕೆ ಬಡಿಸಿ ತುತ್ತು ಮಾಡಿ ಮಗನ ಬಾಯಿಗಿಡುತ್ತ ಕೇಳಿದಳು:
“ನಿನ್ನ ಯಕ್ಷಿ ನಮ್ಮ ಕೂಳು ತಿನ್ನುವಳೇನಪ್ಪ?”
“ಇಲ್ಲ ಅಬ್ಬೆ. ಆಕೆ ಉಂಬುವುದು ಬೆಳ್ದಿಂಗಳು ಮಾತ್ರ.”
“ಈ ದುರವಸ್ಥೆಯಿಂದ ಅವಳಿಗೆ ಯಾವಾಗ ಮುಕ್ತಿ ನನ್ನಪ್ಪ?”
“ಶಿವರಾತ್ರಿಯ ದನ ತಿಂಗಳು ರಾಗ ನುಡಿಸಬೇಕು.
ತಿಂಗಳು ರಾಗಕ್ಕೆ ಕೆರಳಿ,
ಚಂದ್ರಾಮಸ್ವಾಮಿ ಉದಯವಾಗಿ
ಅವಳ ಮೈಗೆ ಬೆಳ್ದಿಂಗಳು ತಾಗಿದಲ್ಲಿ
ದೈವತ್ವ ಒದಗಿ ಮುಕ್ತಿಯಾಗಬೇಕು.”
ಶಿವರಾತ್ರಿಯ ಅಮಾವಾಸ್ಯೆಯ ದಿನ ಚಂದ್ರಾಮಸ್ವಾಮಿ ಉದಯವಾಗಬೇಕೆ? ಶಿವ ಶಿವಾ! ಎಂದು ಹೊಯ್ಕಿನಿಂದ ಅಬ್ಬೆ ಕುಂತಳು. ಆದರೆ ಚಂದಮುತ್ತ ಯಕ್ಷಿಗೆ ದೈವತ್ವ ಒದಗಿದಾಗ ತಾನು ಶಿಲೆಯಾಗಲಿರುವ ವಿಚಾರ ಹೇಳಲಿಲ್ಲವಾಗಿ ಇದರಲ್ಲಿ ಅಪಾಯವಿಲ್ಲೆಂದು ಅಬ್ಬೆ ಅರಿತಳು. ಆದರೂ ಕನಸಿನ ನೆನಪಾಗಿ,
“ಹೇಳಬೇಕಾದ್ದನ್ನು ಹೇಳಿದೆನು ಮಗನೆ.
ಹಿತಕರದ ಮಾತಲ್ಲವೆಂದು ತೋರಿತೆ?
ಅದುಬಿಟ್ಟು ಹಿಡಿ ನಿನ್ನ ದಾರಿ.

ನಿನ್ನ ಬೆನ್ನಿನ ಹಿಂದೆ ನಾನಂತು ಇದ್ದೇನೆ.”
-ಎಂದಳು.

೪೬. ಇಷ್ಟೇ ತಾಯಿ ನನ್ನ ಭಕ್ತಿ

ರಾತ್ರಿ ಆಕಾಶ ಮಂಡಲದ ಉಲ್ಕೆಯೊಂದು ಉರಿದುರಿದು ಯಕ್ಷಿಯ ಗುಡಿಯ ಮ್ಯಾಲೆ ಉದುರಿದ ಹಾಗೆ ಕನಸಾಗಿತ್ತು. ಭೀತನಾಗಿದ್ದ ಕುಲಗುರು ಕರಿಕಂಬಳಿಯ ಗದ್ದಿಗೆಯ ಮ್ಯಾಲೆ ಕುಂತು ಕವಡೆ ಶಾಸ್ತ ಗುಣಿಸುತ್ತಿರಬೇಕಾದರೆ ಮುಗಿದ ಕೈ ಹೊತ್ತು ದಯವಾಗು ಶಿವನೇ ಎಂದು ಚಂದಮುತ್ತ ಬಂದು ಮೈ ಹಾಸಿ ಅಡ್ಡಬಿದ್ದ. ಕುಲಗುರು ಬಗಲ ಚೀಲದಿಂದ ಬಂಡಾರವ ತೆಗೆದು ಹಣೆ ತುಂಬ ಹಚ್ಚಿ ಜಯದಿಂದ ಬದುಕು ನನ್ನಪ್ಪಾ ಎಂದು ಬಾಗಿದ ಚಂದಮುತ್ತನ ನೆತ್ತಿಯ ಮ್ಯಾಲೆ ಎರಡೂ ಕೈಯಿಟ್ಟು ಆಶೀರ್ವದಿಸಿದ. ಚಂದಮುತ್ತ ಮಹಾನುಭಾವನ ಭೇಟಿಯಿಂದ ಹಿಡಿದು ಮುರಿದ ಮಹಿಮೆಯ ಯಕ್ಷಿ ಪುನಃ ತನಗೆ ದೊರೆತವರೆಗಿನ ಕಥಂತರವ ನಿರೂಪಿಸಿ, ಅವಳ ಧರ್ಮಸೆರೆ ಬಿಡಿಸಿ ಪುನಃ ಹಾರಾಡುವಂತೆ ಮಾಡಬೇಕಾದರೆ ಯಾವ್ಯಾವ ವ್ರತ ನಿಯಮ ಉಪಾಯಂಗಳ ಪಾಲಿಸಬೇಕೆಂದು ತಿಳಿಸಿ, ತಾನು ಶಿಲೆಯಾಗಲಿರುವ ಅನಿವಾರ್ಯವ ಹೇಳಿ, ಅಬ್ಬೆಯ ಕಾಪಾಡಿ ನನ್ನ ಸತ್ಯಕ್ಕೆ ಒದಗು ಶಿವಪಾದವೇ ಎಂದು ಕಾಲು ಹಿಡಿದ. ಕುಲಗುರುವಿಗೆ ತನ್ನ ಕನಸಿನ ಸತ್ಯ ನಿಚ್ಚಳವಾಗಿ ಹೊಳೆದು ಅಯ್ಯೋ ನನ್ನಪ್ಪ ಎಂದು ಗಾಬರಿಯಾಗಿ ಗಪ್ಪನೆ ಶಿಷ್ಯನ ತಬ್ಬಿಕೊಂಡ. ಮಳೆಗಾಲದ ಗುಡುಗಿನಂತೆ ಬಡಕೊಂಬ ಎದೆಯ ಗಟ್ಟಿಯಾಗಿ ಶಿಷ್ಯನ ತಲೆಗೊತ್ತಿ ಹಿಡಿದವನು ಗಳಿಗೆ ಹೊತ್ತಾದರೂ ಬಿಡಲಿಲ್ಲ. ಹೊತ್ತು ಬಹಳ ಹಿಂಗೇ ಕುಂತಿರುವಲ್ಲಿ ತನ್ನ ಮೈಮ್ಯಾಲೆ ಗುರುವಿನ ಕೆಂಡದಂಥ ಕಣ್ಣೀರು ಬಿದ್ದ ಅರಿವಾಗಿ ತಲೆ ಬಿಡಿಸಿಕೊಂಡು ಚಂದಮುತ್ತ ಮ್ಯಾಲೆ ನೋಡಿದ.
ಕುಲಗುರು ಕಣ್ಣೀರು ಜಲವ ಸುರಿಸುತ್ತ ಕೇಳಿದ,-
“ಯಕ್ಷಿಯ ಧರ್ಮಸೆರೆ ಬಿಡಿಸೋದಕ್ಕೆ ಬೇರೆ ದಾರಿ ಇಲ್ಲವೆ ನನ್ನಪ್ಪ?”
“ಇಲ್ಲ ಶಿವನೆ”
ಯಕ್ಷಿಯ ಬಿಡುಗಡೆ ಇಲ್ಲವೆಂದಾದರೆ ಲೋಕಕ್ಕೆ ಸಂಗೀತವಿಲ್ಲ. ಬಿಡುಗಡೆ ಇದೆಯೆಂದಾದರೆ ಅಬ್ಬೆಗೆ ಮಗನಿಲ್ಲ, ನನಗೆ ಶಿಷ್ಯನಿಲ್ಲ, ಹಟ್ಟಿಗೆ ಚಂದಮುತ್ತನಿಲ್ಲ. ಅಯ್ಯೋ ನರಮಾನವನ ನಶೀಬವೇ ಎಂದು ಮಂಡೆಯ ಮ್ಯಾಲೆ ಕೈ ಹೊತ್ತು ಕುಂತ.
-ಅದನ್ನು ನೋಡಲಾರದೆ ಚಂದಮುತ್ತ ಯಾವಾಗಲೋ ಹೋಗಿಬಿಟ್ಟಿದ್ದ, ಗುರುಪಾದಕ್ಕೆ ಅರಿಕೆ ಮಾಡದೆ. ಚಂದಮುತ್ತ ಹೋದ ಕಡೆಗೆ ಆಶೀರ್ವದಿಸುವ ಎರಡೂ ಕೈ ಎತ್ತಿ ಕುಲಗುರು ಹೇಳಿದ :
ನಮ್ಮ ಕುಲದೈವಂಗಳು, ನಮ್ಮ ಸುತ್ತಿನ ದೇವತೆಗಳೆಲ್ಲಾ
ನಿನ್ನ ಬೆಂಗಾವಲಿಗಿರಲಿ,
ದುಷ್ಟರ ಕೆಟ್ಟ ಕಣ್ಣು ಮತ್ತು ಕೈ
ನಿನ್ನ ಮುಟ್ಟದಿರಲಿ,
ಜಡೆಯಲ್ಲಿ ಪರಂಜ್ಯೋತಿ ಚಂದ್ರಾಮನ ಇಟ್ಟುಕೊಂಡ ಶಿವ
ನಿನ್ನ ಮರೆಯದಿರಲಿ ನನ್ನಪ್ಪಾ.
ಚಂದಮುತ್ತ ಹೋದದ್ದೇ ಆಯ್ತು ಆ ಗಳಿಗೆಯೇ ಮುದುಕನ ಎದೆ ಆರಿತು. ಕನಸುಗಳಾದ ನಮಗೆ ಮುದುಕರನ್ನ ಕಂಡರಾಗುವುದಿಲ್ಲ. ಆದರೆ ಈ ದಿನ ಕುಲಗುರುವಿನ ನೋಡಿ ಹಳಹಳಿಯಾಯಿತು ಬಹಳ. ಅಂದೇ ಇಳಿಹೊತ್ತಿನಲ್ಲಿ ಅಬ್ಬೆಯ ಗೂಡಿಗೆ ಹೊರಟ. ಶಕ್ತಿಯಿರಲ್ಲಿಲ್ಲ ಕಾಲಲ್ಲಿ. ಕೋಲೂರುತ್ತ ಮೆಲ್ಲಗೆ ನಡೆದ.
ಎಂದಿನಂತೆ ಲಕ್ಕಬ್ಬೆ ಧೂಳಿಗೆ ನೀರು ಕೊಡಲಿಲ್ಲ. ಬಾಯಾಸರೆಗೆ ಜೇನು ಹಾಲು ಕೊಡಲಿಲ್ಲ. ಅವಳಿಗಾಗಲೇ ತಿಳಿದು ಹೋಗಿದೆಯಾ? ತಿಳಿದರೆ ಒಳ್ಳೆಯದೇ ಆಯಿತು, ಬಾಯಿ ಬಿಟ್ಟು ಹೇಳುವ ಸೂತಕ ತಪ್ಪಿತು,- ಎಂದು ನೇರ ಮಂಚದ ಬಳಿಗೆ ಹೋದ. ಅಸಹಾಯಕ ಯಕ್ಷಿ ಯಃಕಶ್ಚಿತ್ ನರಮಾನವರ ಹಾಗೆ ಮಲಗಿದ್ದುದ ನೋಡಿ, ತೊಡೆಯ ಶಕ್ತಿ ಉಡುಗಿ ಶಿವನೇ ಎಂದು ಕುಸಿದ. ನೆರವಿಗೆ ಬಂದಾಳೆಂದು ಲಕ್ಕಬ್ಬೆಯ ನೋಡಿದ. ಅವಳು ಬಾರದೆ ನೆಲಕ್ಕೆ ಕುಕ್ಕರಿಸಿದ. ಯಕ್ಷಿಯ ಕರುಣಾಜನಕ ಚಿತ್ರ ಕಣ್ಣಿಗೆ ಭಾರವಾಗುವಂತೆ ಅಚ್ಚೊತ್ತಿಬಿಟ್ಟಿತು.
ಯಕ್ಷಿ ವಿಕಾರವಾಗಿ ನರಳಿದಳು. ಭಯದಿಂದ ಮುದುಕ ಅಯ್ಯೋ ಶಿವನೇ ಎಂದು ಕೋಲೂರಿ ಎದ್ದ. ಸಂಗೀತ ದೇವತೆ ಅಪಸ್ವರದಲ್ಲಿ ನರಳಬೇಕಾದರೆ ಎಷ್ಟೊಂದು ಕಷ್ಟವಾಗಿರಬೇಕು ಶಿವನೆ, ಎಂದು ಮರಮರ ಮರುಗಿದ. ತನ್ನಿಂದೇನೂ ಆಗದೆಂದು ಪರಿತಪಿಸಿ, ಮಾನವ ಜಲ್ಮವ ಶಪಿಸಿ, ಬೆಟ್ಟದ ಮಾಯಿಯ ನೆನೆದು ಬಗಲ ಚೀಲದ ಬಂಡಾರ ತೆಗೆದು ನಡುಗುವ ಕೈಗಳಿಂದ ಯಕ್ಷಿಯ ಪಾದಕ್ಕಂಟಿಸಿ “ಇಷ್ಟೇ ತಾಯೀ ನನ್ನ ಭಕ್ತಿ” ಎಂದು ಕೈಮುಗಿದು ಅಲ್ಲಿ ನಿಲ್ಲದೆ ಹೊರಟ.

೪೭. ಮಹಾ ಶಿವರಾತ್ರಿ

ಬೆಳ್ಳಿ ಮೂಡಿ ನಾವೆದ್ದು ಒಡಮುರಿದೇಳುವಷ್ಟರಲ್ಲಿ
ಮುಂಗೋಳಿ ಕೂಗಿ ಮೂಡು ಕೆಂಪಾಗಿ
ತುಂಬಿದ ಸೋಮವಾರ ಮಹಾ ಶಿವರಾತ್ರಿಯ
ಹಗಲು ಸೂರ್ಯ ಉದಯವಾದರು.
ಲಕ್ಕಬ್ಬೆ ಶಿವನೇ ಎಂದು ಎದ್ದು
ಮಲೆಯ ಮ್ಯಾಲಿರೋ ಕೈಲಾಸದ ಕಡೆ ಮುಖ ಮಾಡಿ
ಕೈಮುಗಿದು ಗಲ್ಲ ಗಲ್ಲ ಬಡಿದುಕೊಂಡಳು.
ಅಷ್ಟರಲ್ಲಿ, ಮರೆವಿನ ತೆರೆ ಹರಿದು
ಎದುರೆದುರು ಬಂದುಬಿಟ್ಟ
ಎದೆಯಲ್ಲಿ ನಕ್ಷತ್ರ ನೆಟ್ಟ ಬಾಲಕ.
ಅವನ ಮರೆಯುವುದಕ್ಕಾಗಿ
ನೆಲ ಒಲೆ ಸಾರಿಸಿ ರಂಗೋಲಿ ಹುಯ್ದು
ಮಡುವಿನಲ್ಲಿ ಮಿಂದು ಬಂದಳು.
ಶಿವನಾಮವ ನಾಲಿಗೆಯ ಮ್ಯಾಲೆ ತೇಯುತ್ತ
ಬುಟ್ಟಿತುಂಬ ದವನದ ಹೂ ಮಲ್ಲಿಗೆ ಮರುಗ
ಬಿಲ್ವಪತ್ರಿಯ ತಂದು
ಬಿಲದಲ್ಲಿಯ ದೇವರ ಮ್ಯಾಲೆ ಸುರಿದಳು.
ಯಾರೂ ಸಾರದಿದ್ದರೂ ಈ ದಿನ ಆಕಾಶದಲ್ಲಿ ಈದಿನ ಯಕ್ಷಿಯ ಸಂಚರಣೆಯಿದೆಯೆಂದು, ಚಂದಮುತ್ತನ ಕೊಳಲ ಸಂಗೀತವಿದೆಯೆಂದು ಪಶುಪಕ್ಷಿ ತರುಮರಾದಿ ಜೀವರಾಶಿಗೆ ತಿಳಿದುಬಿಟ್ಟಿತ್ತು.
ಅವೆಲ್ಲ ತನ್ನನ್ನು ಕದ್ದು ನೋಡುತ್ತಿವೆಯೆನ್ನಿಸಿ ಅಬ್ಬೆಯ ಅಂತರಂಗಕ್ಕೆ ಜ್ವರ ಬಂದವು. ಮುರಿದ ಮಾತುಗಳಲ್ಲಿ ಏನೇನೋ ಕನವರಿಸಿ ಕೊನೆಗೆ ತನ್ನ ಕಂಕುಳದ ಕೂಸನ್ನು ಶಿವ ಕಸಿದನೆಂದು ಶಪಿಸಿ ಜಲ ಜಲ ಕಣ್ಣಿರು ಸುರಿಸಿ ಕಣ್ಣೀರಲ್ಲಿ ತೆಪ್ಪದ ಹಾಗೆ ತೇಲಿದಳು ತಾಯಿ.
ಅದಕ್ಕೇ ಅಬ್ಬೆಗೆ ವಿಸ್ಮೃತಿ ಮಾಡುವುದೆಂದು ನಾವು ಆಲೋಚಿಸುತ್ತಿದ್ದೆವು. ಯಾಕಂತೀರೊ? ಒದಗಲಿರುವ ಘೋರದ ಅರಿವಾಗಿ ಚಂದಮುತ್ತನ್ನ ಹೊರಗೆ ಹೋಗಗೊಟ್ಟಾಳೆಂಬ ಬಗ್ಗೆಯೇ ನಮಗೆ ಅನುಮಾನವಿತ್ತು. ಎದೆಯಲ್ಲಿ ನಕ್ಷತ್ರ ನೆಟ್ಟ ಬಾಲಕನ ಕನಸು ಮರೆಯಲೆಂದು ರಾತ್ರಿಯಿಡೀ ಅಬ್ಬೆಯ ಕಣ್ಣಿಗೆ ಹಿತಕರವಾದ ಹಳವಂಡಗಳ ತೋರಿದೆವು.
ಯಕ್ಷಿಯ ಗುಡಿಮ್ಯಾಲೆ ಚಂದಮುತ್ತ
ಚಂದ್ರಮಂಡಳದಷ್ಟು ಎತ್ತರವಾದ ಧ್ವಜ ಹಾರಿಸಿದಂತೆ,
ಕಲ್ಲಿನ ರಥವೇರಿ
ಕೈಲಾಸಕ್ಕೆ ಲಗ್ಗೆಯಿಟ್ಟಂತೆ,
ಚಂದ್ರನೊಳಗಿನ ಜಿಂಕೆಯ ಬೆನ್ನೇರಿ
ಬೆಳಕಿನ ಮಿರಿಲೋಕದಲ್ಲಿ ತೇಲಾಡಿದಂತೆ….
ಹೀಗೆ ಒಂದಾದ ಮೇಲೊಂದು ಅರೆಬೆಂದ ಹಳವಂಡಗಳ ತೋರಿದರೂ ಅಬ್ಬೆಯ ಹೃದಯ ತಂಪಾಗಲಿಲ್ಲ. ನೆನಪಿನ ಕುಣಿಕೆ ಮತ್ತೆ ಮತ್ತೆ ಬಿಗಿದು ಎದೆಯಲ್ಲಿ ಮೂಡಿದ ಕನಸಿನ ಬಾಲಕನ ಚಿತ್ರವ ಮರೆಯಲಾಗಲೇ ಇಲ್ಲ.
ಬೆಳಗಾನೆದ್ದು ಅಬ್ಬೆ ಮಗನನ್ನ ಎಬ್ಬಿಸುವುದು ರೂಢಿ. ಆಕೆ ಬರಲಿಲ್ಲವಾಗಿ ಚಂದಮುತ್ತನೇ ಎದ್ದು ಮಡುವಿನಲ್ಲಿ ಮಿಂದೇಳಬೇಕೆಂಬಲ್ಲಿ ಕಾಡು ಮರ ನಡೆದು ಬಂದ ಹಾಗೆ ಅಲ್ಲಿಗೇ ಬಂದಳು ಅಬ್ಬೆ. ಮಾತಿಲ್ಲದ ದಂಡೆಯ ಕೊಂಬುಗಲ್ಲಿನ ಮ್ಯಾಲೆ ಮಗನ ಕೂರಿಸಿ ಹಿಡಿ ಕಲ್ಲು ತಗೊಂಡು ಚೆನ್ನಾಗಿ ಬೆನ್ನುಜ್ಜಿದಳು. ಅನ್ಯೋನ್ಯ ಮಾತಾಡಿ ಅಬ್ಬೆಯ ಸಂತವಿಸಬೇಕೆಂಬಲ್ಲಿ ಬೆನ್ನಿನ ಮ್ಯಾಲೆ ಬಿಸಿ ಹನಿ ಬಿದ್ದ ಅರಿವಾಗಿ “ಯಾಕಬ್ಬೆ?” ಎಂದು ಮ್ಯಾಲೆ ನೋಡಿದ. ಒಡಲೊಳಗಿನ ನುಡಿಯ ಹೊರಕ್ಕೆ ಹಾಕುವುದಕ್ಕೆ ಹೊತ್ತು ಹಿಡಿಯಿತು ಬಹಳ-
“ಎಷ್ಟು ಅತ್ತರೂ ನನ್ನ ಕಣ್ಣೇರು ಕೈಲಾಸಕ್ಕೆ
ಅರಿವಾಗಲಿಲ್ಲ ಬಿಡಪ್ಪ”
-ಎಂದುಸುರಿ ಯಕ್ಷಿಯ ಬಳಿಗೆ ಹೋದಳು.
ಆಮೇಲೆ ಚಂದಮುತ್ತ ಶಿವಪೂಜೆ ಶಿವಗ್ಯಾನವ ಮಾಡಿ ಕೊಟ್ಟಿಗೆಗೆ ಹೋಗಿ ಕರುಗಳ ಬಿಟ್ಟ. ಒಂದು ಕರುವೂ ತಾಯ ಮೊಲೆಗಂಟಲಿಲ್ಲ. ದನಕರುಗಳೆಲ್ಲ ಚಂದಮುತ್ತನ ಸುತ್ತಾಮುತ್ತಾ. ಗೇರಾಯಿಸ್ಕೊಂಡು ಮೌನವಾಗಿ ಅವನನ್ನೇ ನೋಡುತ್ತಾ ನಿಂತವು. ಕಪಿಲೆ ಕಡೆಗಣ್ಣಲ್ಲಿ ಕಣ್ಣೀರು ಕೆಡಿಕ್ಕಂಡು ಚಂದಮುತ್ತನ ಭುಜದ ಮ್ಯಾಲೆ ಗದ್ದ ಊರಿ ನಿಂತಿತು.
ಈ ಕಡೆ ಅಬ್ಬೆ ಚಿತ್ರಚರಿತ್ರಳಾದ ಯಕ್ಷಿಯ ಬಾಡಿದ ಲಲಿತವದನ ನೋಡಿದ್ದೇ ಕರುಳು ಹಿಂಡಿ ಬಂತು. ಉಟ್ಟ ದಟ್ಟಿಯ ಸೆರಗು ಒದ್ದೆ ಮಾಡಿಕೊಂಬಂದು ಕೊಳೆಯಾಗಿದ್ದ ಯಕ್ಷಿಯ ಮುಖ ಒರೆಸಿ, ಮೈಯಂತ ಮೈಯೆಲ್ಲ ಉಜ್ಜಿ ತೊಳೆದಳು. ಜಡೆಗಟ್ಟಿದ ಇರುಳಿನ ಹಾಗಿದ್ದ ಕಾಳನೀಳವಾದ ಸುರುಳಿಗೂದಲನ್ನು ಕಾಳಜಿಯಿಂದ ಇರೆಸಿ ತೊಳೆದು ಮೆಲ್ಲಗೆ ಬಾಚಿ ಹೆರಳು ಹೆಣೆದಳು. ಒಂದೆರಡು ಮಲ್ಲಿಗೆ ತಂದು ತುರುಬಿ, ಹಣೆಗೆ ಕುಂಕುಮವಿಟ್ಟು, ದಟ್ಟಿಯ ಸರಿಪಡಿಸಿ ಗಾಳಿ ಬೀಸಿದಳು. ಯಕ್ಷಿಯ ಅಂತಃಕರಣ ಕರಗಿ ಕಣ್ಣೀರು ಜಲವುಕ್ಕಿ ನೀರಲ್ಲಿ ತೇಲಿಬಿಟ್ಟ ದೀಪದ ದೊನ್ನೆಯಂಥ ಕಣ್ಣಿಂದ ಅಬ್ಬೆಯ ನೋಡಿದಳು. ಅಬ್ಬೆಯೂ ಅತ್ತಳು.
ಈ ಮಧ್ಯೆ ಹಟ್ಟಿಗೊಂದು ಭಯಾನಕ ಸುದ್ದಿ ಬಂತು. ಯಕ್ಷಿಯ ಹುಡುಕಿಕೊಂಡು ಹೋದ ಚಿನ್ನಮುತ್ತ ಮಹಾನುಭಾವನ ಕಂಡದ್ದೇ ಯಕ್ಷಿಯೆಲ್ಲಿ ಎಂದು ಪೀಡಿಸಿದನಂತೆ. ಎಷ್ಟು ಒತ್ತಾಯ ಮಾಡಿದರೂ ಇವನು ಹೇಳಲಿಲ್ಲವಾಗಿ ಹೆದರಿಸಲು ಕಕ್ಕೆ ದೊಣ್ಣೆಯಿಂದ ಒಂದೇಟು ಹಾಕಿದರೆ ಅಷ್ಟಕ್ಕೇ ಮಹಾನುಭಾವನ ಒಂದು ಕಣ್ಣುದುರಿ ನೆಲಕ್ಕೆ ಬಿದ್ದಾಗ ಅದನ್ನು ನೋಡಲಾಗದೆ- ಕಾಡಿನಲ್ಲಿ ಓಡಿದ ಚಿನ್ನಮುತ್ತ ಕಮರಿಗೆ ಬಿದ್ದು ಸತ್ತನೆಂದು ತಿಳಿಯಿತು. ಪಾಪ, ಒಬ್ಬನೇ ಮಗನ ವಿಯೋಗ ಸಹಿಸದೆ ಸೂರ್ಯಮುತ್ತನೆಂಬ ದೊಡ್ಡ ಹೆಗಡೆ ನಿನ್ನೆಯಷ್ಟೇ ಬೆಳ್ಳಿಬೆತ್ತವ ಸಿರಿಲಕ್ಕಿಗೆ ಕೊಡಲು ಹೇಳಿ ಕಾಡಿನಲ್ಲಿ ಕಣ್ಮರೆಯಾದನಂತೆ. ಈ ಘಟನೆಗಳು ಹಟ್ಟಿಯ ಮೇಲೆ ಪರಿಣಾಮ ಬೀರಿದವು. ಜನ ಹೆಗಡೆ ಮನೆಯಲ್ಲಿ ಗುಂಪುಗೂಡಿದ್ದರಿಂದ ಈ ಕಡೆ ಬರಲಿಲ್ಲ. ಚಂದಮುತ್ತ, ಅಬ್ಬೆಯರಿಗೆ ಈ ಸುದ್ದಿ ನಾವು ಹೇಳಲೂ ಇಲ್ಲ. ಕುಲಗುರು ಹೇಳುತ್ತಿದ್ದನೇನೋ ಯಕ್ಷಿಯ ಸ್ಥಿತಿ ನೋಡಿ, ಇದಲ್ಲ ಸಂದರ್ಭವೆಂದು ಬಾಯಿ ಬಿಡಲಿಲ್ಲ.

೪೮. ನಿನಗೆ ಜಯವಾಗ್ಲಿ ನನ್ನಪ್ಪ

ಮಗ ಯಕ್ಷಿಯ ಬೆನ್ನು ಬಿದ್ದಾಗಿಂದ ಶಿವಗೋಳು ತಪ್ಪಿರಲಿಲ್ಲ ಲಕ್ಕಬ್ಬೆಗೆ. ಆಗಲೇ ಅವಳಿಗೆ ಕೈಖಾಲಿ, ಉಡಿ ಖಾಲಿ, ಗರ್ಭ ಖಾಲಿಯಾದಂತೆನಿಸಿತ್ತು. ಆಮೇಲಾಮೇಲಿನ ಮಗನ ನಡಾವಳಿಯಿಂದ ಆಶೆಯ ಬೇರು ಕಿತ್ತು ಹೋಗಿ,
ಮಗನ ಹಾಡು ಹೂವಾಗಿ ಅರಳಲೆಂದು
ಅರಳಿ ಪರಿಮಳವಾಗಿ ಹರಡಲೆಂದು
ಮಲ್ಲಿಗೆ ಬಳ್ಳಿಯ ನೆಟ್ಟು ಕಾದನೊ ಶಿವನೆ.
ಸುಳಿದು ಬರಲೇ ಇಲ್ಲ ನಿನ್ನ ಗಾಳಿ
ಎಲೆ ಉದುರಿ ನಿಂತಾವು ಬರಲುಬಳ್ಳಿ.
-ಎಂದು ಅವಳೇ ರಾಗಿ ಬೀಸುತ್ತಾ ಕಾಳು ಕುಟ್ಟುತ್ತಾ ಹಾಡಿಕೊಂಡಂತಿದ್ದಳು. ಈಚೀಚೆಗಂತೂ,
ನಾವಿಕನಿಲ್ಲದ ಗಾಳಿ ಒಯ್ದತ್ತ ಹೋಗುವ
ಹರಿಗೋಲು ನನ್ನ ಬಾಳು, ಸೋರುತ್ತಿದೆ.
ಮುಳುಗುವುದಿನ್ನು ಹೆಚ್ಚು ವ್ಯಾಳ್ಯ
ತಕ್ಕೊಳ್ಳಲಾರದು ಶಿವನೇ-
ಎಂದು ಶಿವದುಃಖ ಮಾಡುತ್ತಿದ್ದಳು. ಎದೆಯಲ್ಲಿ ನಕ್ಷತ್ರ ನೆಟ್ಟ ಬಾಲಕನ ಕನಸು ಕಂಡಾಗಿಂದ ಹೊತ್ತಿಕೊಂಡುರಿದಳು ತಾಯಿ ಪಂಜಿನಂತೆ. ಕಥೆಗೆ ಹ್ಯಾಗೋ ಹಾಗೆ ಅವಳ ಆರೋಗ್ಯಕ್ಕೂ ಅಗತ್ಯವೆನ್ನಿಸಿ ಎದೆಯಲ್ಲಿ ನಕ್ಷತ್ರ ನೆಟ್ಟ ಬಾಲಕನ ಬದಲು ಚಂದಮುತ್ತನ್ನ ತೋರಿಸಿದೆವು. ಅಬ್ಬೆ ಅರೆಗಳಿಗೆಯಲ್ಲಿ- ನೀರು ತುಂಬಿದ ಕಣ್ಣಿಗೆ ತಾನಿದ್ದ ಗೂಡು ಸರಿಯಾಗಿ ಕಾಣದೆ ವಿಸ್ಮೃತಿಗೆ ಸಂದಳು. ಏನೇನೋ ಆಡಿಕೊಂಡಳು. ಯಾರೊಂದಿಗೋ ವಾದಿಸಿದಳು.ತಂತಾನೇ ಸಮಾಧಾನ ಮಾಡಿಕೊಂದುದನ್ನು ನೋಡಿ ನಮಗೆ ನೆಮ್ಮದಿಯಾಗಿ ಮುಂದಿನ ಕಥೆ ಸುರು ಮಾಡಿದೆವು.
ವಿಸ್ಮೃತಿಯ ಪರಿಣಾಮ ನಮಗೆ ಆಗಲೇ ಗೋಚರಿಸಿಬಿಟ್ಟಿತು. ದುಃಖ ದುಗುಡಂಗಳ ಮರೆತು ಹೊರಗೆ ಬಂದು ಪುನಃ ನೆಲ ಸಾರಿಸಿದಳು. ಅಂಗಳ ಗುಡಿಸಿ ಸೆಗಣಿ ಸಾರಣೆ ಮಾಡಿದಳು. ಇವತ್ತು ಶಿವರಾತ್ರಿ ಅಮಾವಾಸ್ಯೆಯೆಂದು ಗೊತ್ತಿದ್ದರೂ ತಿಂಗಳ ಮಾವನ ಪೂಜೆಯಲ್ಲಿ ಮಾಡುವಂತೆ ಸೀಮೆಸುಣ್ಣದಲ್ಲಿ ಅಂಗಳದ ತುಂಬ ಚಂದಪ್ಪನ ಹುಯ್ದಳು. ಅವನ ಸುತ್ತ ಚಿಕ್ಕೆಯ ಬಳಗವ ಹುಯ್ದು ಚಂದವಾಯಿತೇ ಎಂದು ನಿಂತುನೋಡಿ ತೃಪ್ತಿಯಾದ ಮ್ಯಾಲೆ ಒಳಕ್ಕೆ ಹೋದಳು. ಒಲೆ ಸಾರಿಸಿ ರಂಗೋಲಿ ಹುಯ್ದಳು. ಮನೆದೇವರು ಚಂದಪ್ಪನ ಬಿಲದ ಸುತ್ತ ಸುಣ್ಣದಲ್ಲಿ ಬಳ್ಳಿ ಎಲೆ ಹೂ ಬರೆದಳು. ಆಮ್ಯಾಲೆ ರಾಗಿ ಹಿಟ್ಟಿನ ಆಧಾರದಲ್ಲಿ ಕಪಿಲೆಯ ಹಾಲು ಸೇರಿಸಿ ಮನೆದೇವರ ಬಿಲದ ಮ್ಯಾಲೆ ಚಂದ್ರನ ಆಕಾರದ ಬೆರಣಿಯ ತಟ್ಟಿದಳು. ಅದರ ಮುಂದೆ ಕೋಲು ದೀಪ ಇಟ್ಟು ಪೂಜೆ ಮಾಡಿ ಮೈ ಹಾಸಿ ನಮಸ್ಕಾರ ಮಾಡಿದಳು.
ಸಂಜೆ ಸಾಯಂಕಾಲವಾದೇಟಿಗೆ ಚಂದಮುತ್ತ ಓರೆಯಾಗಿ ಜುಟ್ಟು ಕಟ್ಟಿಕೊಂಡು, ನವಿಲುಗರಿ ಸಿಕ್ಕಿಸಿಕೊಂಡು ಸೊಂಟದ ಲಂಗೋಟಿಯಲ್ಲಿ ಗೆಜ್ಜೆ ಕೊಳಲು ಸಿಕ್ಕಿಸಿಕೊಂಡು, ಹೆಗಲ ಮ್ಯಾಲೆ ಕರಿಕಂಬಳಿ ಹಾಕಿಕೊಂಡು ಎದ್ದ. ಹೆತ್ತಯ್ಯ ಮುತ್ತಯ್ಯರ ನೆನೆದು ಕುಲದೇವರು ಮನೆದೇವರ ನೆನೆದು ಸತ್ಯದ ಸಾವಳಗಿ ಶಿವನ ನೆನೆದು ಆಶೀರ್ವಾದ ಪಡೆಯಲು ಅಬ್ಬೆಯ ಬಳಿಗೆ ಬಂದಾಗ, ಅಬ್ಬೆ ವಿಸ್ಮೃತಿಗೆ ಸಂದಿದ್ದಳಾಗಿ ತೊಂದರೆ ಎಂಬುದಾಗಲಿಲ್ಲ. ಮಗ ಕಾಲಿಗೆ ಹಣೆ ತಾಗಿಸಿದಾಗ ತಲೆ ಹಿಡಿದೆತ್ತಿ ನೆತ್ತಿಯ ಮೂಸಿ ಕರುವನಪ್ಪಿಕೊಳ್ಳುವಂತೆ ಹಿಡಿದುಕೊಂಡು ಹೇಳಿದಳು:
ನಿಜವಾದ ಗೊಲ್ಲ ನೀನು
ಕೊಳಲಿನಿಂದ ಗೆದ್ದಿರುವೆ ದನಕರು ಮಾನವರ ಹೃದಯ,
ಬೆಟ್ಟದ ಮಾಯಿಯ ಹಸಿರು ಸೀಮೆಯ.
ಈ ಕಾಡಿನ ಚರಾಚರಕೆ
ನಿನ್ನ ಹಾಡಿನ ನೆಪ್ಪಿದೆಯಣ್ಣ.
ಈಗ ಸೀಮೋಲ್ಲಂಘಿಸಿ
ಬೆಲೆ ಬಾಳುವ ಬೆಳ್ದಿಂಗಳ ಸೀಮೆಗಳಲ್ಲಿ
ಹಾಡುಗಳ ಬಿತ್ತುವುದಕ್ಕೆ
ನೀಲಿಮದ ಚಂದ್ರನ್ನ ಕೇಳುತ್ತೀ ನೀನು.
ಚಂದ್ರನ್ನ ಹಿಡಿದುಕೋ ಎಂದು
ನಿನ್ನನ್ನ ಆಕಾಶಕ್ಕೆ ಹಾರಿಸಿ ತೋಳು ತೆರೆದು ಕಾಯುವುದು
ನೀ ಬಂದು ನನ್ನ ಮಡಿಲಿಗೆ ಬೀಳುವುದು.
ಮತ್ತೆ ಹಾರಿಸುವುದು ಮತ್ತೆ ಬೀಳುವುದು-
ಎಷ್ಟೆಷ್ಟು ಎತ್ತರ ಹಾರಿದರೆ ಅಷ್ಟಷ್ಟು ಭಾರ
ಬಂದು ಬೀಳುತ್ತೀ ಮಡಿಲಿಗೆ, ನನ್ನ ಒಡಲಿಗೆ.
ಈಗ ಸಿದ್ಧಳಾಗಿದ್ದೇನೆ
ಆಕಾಶಕ್ಕೆ ನಿನ್ನ ತೂರುವುದಕ್ಕೆ.
ನೆಪ್ಪಿರಲಿ ಕಂದಾ,
ನೀನು ಬಿತ್ತಲಿರುವ ಹಾಡುಗಳಿಗಾಗಿ
ಕಾದವಳು ನಾನು ಹಾರೈಸಿದವಳು,
ಹಿಂಗ್ಯಾಕೆಂದರೆ ಉತ್ತರ ಗೊತ್ತಿರದವಳು
ಮತ್ತು ಈಗಲೂ ನಿನ್ನ ತಾಯಾದವಳು.
ತಗೋ ನನ್ನ ಹರಕೆಯ, ಶಿವನ ಕೃಪೆಯ,
ನಿನಗೆ ಜಯವಾಗ್ಲಿ ನನ್ನಪ್ಪ, ಶುಭಮಕ್ಕೆ ಶುಭವಾಗಲೆಂದಳು.
ಅಬ್ಬೆಯ ಅನುಗ್ರಹದ ಶುಭ ವಾಕ್ಯ ಕೇಳಿ ಆಘಾತವಾಯಿತು ಮಗನಿಗೆ! ತಲೆಯೆತ್ತಿ ನೋಡಿದ, ಅವಳ ನೀಲಾಂಜನದಂಥ ಕಣ್ಣಲ್ಲಿ ಅಪರಿಚಿತವಾದ ಆದಿಮ ಬೆಳಕಿದ್ದುದು ನೋಡಿ ಚಕಿತನಾದೆ. ತಾಯಿಗೆ ಇನ್ನೊಮ್ಮೆ ನಮಿಸಿ ಹೊರಟ.
ಪೂಜೆಯ ಸಾಮಾನು ತಗೊಂಡು ಜೋಕೆಯಿಂದ ಯಕ್ಷಿಯ ಎತ್ತಿಕೊಂಡು ಸುತ್ತಿನ ದೇವರಿಗೆ ನಮಿಸಿ ಕೊಟ್ಟಿಗೆಗೆ ಹೋದರೆ ಇಡೀ ದಿನ ಒಂದು ದನಕರುವೂ ನೀರು ಕುಡಿದಿರಲಿಲ್ಲ., ಮೇವು ಮುಟ್ಟಿರಲಿಲ್ಲ. ಇವನ ಕಂಡದ್ದೇ ನಂದಿನಿ ಓಡಿ ಬಂದು ಚಂದಮುತ್ತನ ತೆಕ್ಕೆಯಲ್ಲಿ ಮುಖ ಹುದುಗಿ ನಿಂತುಕೊಂಡಿತು. ಕಣ್ಣು ಕೆಂಪಗಾಗಿ ಗುಟ್ಟಾಗಿ ಅತ್ತಹಾಂಗಿತ್ತು. ತಿಂಗಳು ಮಡುಗಟ್ಟಿದ ಹಾಗೆ ಕಣ್ಣು ತುಂಬಿ ಕಣ್ಣೀರು ತುಳುಕಿತು. ಗಂಗೆ ಗೌರಿಗೆ ಚೆಂಡುಹೂ ದುಂಡುಮಲ್ಲಿಗೆಗೆ ಅಬ್ಬೆಯ ನೋಡಿಕೊಳ್ಳಿರೆಂದು ಹೇಳಿ ಹೊರಡುತ್ತಲೂ ಒಂದೊಂದೇ ಕರು ಬಂದು ಚಂದಮುತ್ತನ ಸುತ್ತ ಘೇರಾಯಿಸ್ಕೊಂಡು ತುಂತುರು ಹನಿಯುವ ಕಣ್ಣುಗಳಿಂದ ನೋಡುತ್ತ ಹೋಗಬ್ಯಾಡಯ್ಯಾ ಎಂದು ಮೂಕವಾಗಿ ಮೊರೆಯಿಡುತ್ತ ನಿಂತವು. ಲಂಗೋಟಿಯ ತುದಿಯಿಂದ ಅವುಗಳ ಕಣ್ಣೀರೊರೆಸಿ ಹೊರಡುವುದಕ್ಕೆ ಸಾಕುಬೇಕಾಯಿತು. ಕೊಟ್ಟಿಗೆಯ ಕಪಿಲೆಗೆ ಅಬ್ಬೆಯ ನೋಡಿಕೋ ಎಂದು ಹೇಳಿ ಹೊರಟ. ಕಂಬದ ಗೌಳಿ ಬೆಸ ನುಡಿದವು. ಕಾಳ್ನಾಯಿ ಬೆಳ್ನಾಯಿ ಪಟ ಪಟ ಕಿವಿ ಬಡಿದು ಬೆಂಬತ್ತಿದವು. ಚಿತ್ತ ಮಿಡಿದು ಕಣ್ಣಿರು ಬಂತು. ತೆಕ್ಕೆಯಲ್ಲಿ ಯಕ್ಷಿಯ ನೆನಪಾಗಿ ನಿರ್ಧಾರದಿಂದ ನಡೆದ.
ಮುಂದೆ ನಡೆದಾಗ ದಾರಿಯ ಅಕ್ಕಪಕ್ಕ ಇಬ್ಬರು ಸೇಡುಮಾರಿ ಬಡ್ಡಿಯರು ನಿಂತುಕೊಂಡಿದ್ದಾರೆ ಶಿವನೆ! ಮುಖದ ತುಂಬ ಅಂಗೈ ಗಾತ್ರದ ಕೊಳೆ ಮೆತ್ತಿಕೊಂಡಿದೆ. ಮೂಗಿನ ತುಂಬ ಮುಸುರೆ, ಕಣ್ಣುಗಳು ಇಂಗಿ ಹೋಗಿ ಮೈಯಂತ ಮೈಯೆಲ್ಲ ಕಜ್ಜಿ ಹುರುಕಾಗಿ ಗೊಮ್ಮಂತ ಗೊಬ್ಬು ನಾತ ಹೊಡೆವುತ್ತಿದೆ ಇಬ್ಬರಿಗೂ. ಇಬ್ಬರೂ ಮಾತಾಡಿಕೊಳ್ಳುತ್ತಿದ್ದಾರೆ ಏನಂತ?
ಸೇಡುಮಾರಿ ೧ : ಅಕಾ ಬಂದ ನೋಡು.
ಸೇಡುಮಾರ್ ೨ : ಹಾಂಗೆಲ್ಲ ಹೆದರಿಸಬೇಡ, ಬಾಯಿ ಮುಚ್ಚಿಕೊ.
ಸೇಡುಮಾರಿ ೧ : ಅವನಾಗಲೇ ಹೆದರಿದ್ದಾನೆ. ಆಗಲೇ ಕಣೆಗಣ್ಣಲ್ಲಿ ಕಣ್ಣಿರುದುರಿಸಿದ.
ನೋಡಲಿಲ್ಲವೆ? ತೆಕ್ಕೆಯಲ್ಲಿ ಯಕ್ಷಿ ಇಲ್ಲದಿದ್ದಲ್ಲಿ ಓಡಿ ಹೋಗುತ್ತಿದ್ದ.
ತನ್ನ ಒಡಲೊಳಗಿನ ನುಡಿಯಾಡುವ ಇವರ್‍ಯಾರೆಂದು ದಿಗಿಲಾಯಿತು; ಚಂದಮುತ್ತನಿಗೆ

“ಯಾರು ನೀವು?” ಅಂದ.
ಇಬ್ಬರೂ: ಸೇಡುಮಾರಿಯರು.
ಚಂದಮುತ್ತ : ಇಲ್ಲಿ ಯಾಕೆ ನಿಂತಿದ್ದೀರಿ?
ಇಬ್ಬರೂ : ಸೂರ್ಯ ಮುಳುಗಲಿ ಅಂತ.
ಚಂದಮುತ್ತ : ಯಾಕೆ?
ಇಬ್ಬರೂ : ಸೂರ್ಯ ಮುಳುಗಿದ ಮ್ಯಾಲೆ ಪಡುಬಟ್ಟದಲ್ಲಿ ಚಂದ್ರ ಮೂಡುತ್ತಾನಲ್ಲಾ, ಅವನೊಳಗಿನ ಜಿಂಕೆ ತಿನ್ನೋಣ ಅಂತ.
ಚಂದಮುತ್ತ : ಇವತ್ತು ಮಹಾಶಿವರಾತ್ರಿ ಅಮವಾಸ್ಯೆ. ಚಂದ್ರ ಮೂಡುವುದಿಲ್ಲ
ಅಂತ ಗೊತ್ತಿಲ್ಲವೆ?
ಸೇಡುಮಾರಿ ೧ : ನಿನಗೂ ಗೊತ್ತಿಲ್ಲವೆ? ಯಾವ ಧೈರ್ಯದ ಮ್ಯಾಲೆ ಯಕ್ಷಿಗೆ ದೈವತ್ವ
ಕೊಡ್ತೀಯಪ್ಪ, ಚಂದ್ರನೇ ಮೂಡದಿದ್ದರೆ?
ಸೇಡುಮಾರಿ ೨ : ಇರು ಇರು. ನೀನು ಕೊಳಲು ನುಡಿಸುವಾಗ ಚಂದ್ರ ಮೂಡುವವ ನಿದ್ದಾನೆ. ನಿನ್ನ ಅಬ್ಬೆಯಾಗಲೇ ಚಂದ್ರನ ಹೆರಲು ಬೇನೆ ತಿನ್ನುತ್ತಿದ್ದಾಳೆ! ಹೋ ಹೋ …..
-ಎಂದು ಎರಡೂ ಕೈ ತಟ್ಟಿ ನಗಾಡುತ್ತ ಓಡಿ ಹೋದವು!

೪೯ ಶಿವರಾತ್ರಿಯ ಶಿವಾನಂದ

ಇತ್ತ ಚಂದಮುತ್ತ ಗುಡಿಯಲ್ಲಿ ಯಕ್ಷಿಯ ಜೋಪಾನ ಮಲಗಿಸಿ ಗುಡಿ ಮುಂದಿನ ಅಂಗಲ ಸಾರಿಸಿ, ಸಾರಣೆ ಮಾಡಿ, ರಂಗೋಲಿ ಎಳೆದು ಮರುಗ ಮಲ್ಲಿಗೆ ಪತ್ರಿ‌ಎಲೆ ತಂದು ಸಂಜೆಯ ಶಾತಿ ಪೂಜೆ ಮಾಡಿದೇಟ್ಗೆ ಹಗಲ ಬೆಲಕಾರಿ ಕತ್ತಲಾದವು. ಪಂಜು ಹೊತ್ತಿಸಿ ಕರಿ ಬಿಳಿ ಸುಣ್ನ ಬಣ್ಣ ಅರಿಷಿಣ ಕುಂಕುಮಗಳಲ್ಲಿ ಮಂಡಳ ಬರೆದು ಮಂಡಳದ ಎಡಬದಿಯಲ್ಲಿ ಮೂರುಕಾಲಿನ ಮೂಳೆ ರೂಪದ ಭೃಂಗೀಶನ ವಿರಚಿಸಿದ. ಅವನ ಮುಗಿದ ಕೈ ತಲುಪುವಲ್ಲಿ ಸತ್ಯಶಿವನ ಶ್ರೀಪಾದಂಗಳ ಸ್ಥಾಪನೆ ಮಾಡಿ ಮಂಡಲ ಮಧ್ಯೆ ಬೂದಿಬಡಕ ಶಿವನ ಮತ್ತವನ ತಲೆಯಲ್ಲಿ ಮಿಡಿನಾಗರ ಜಡೆಯ ಬರೆದು ಜಡೆಯಲ್ಲಿ ಚಂದ್ರನ ಬರೆವುದನ್ನ ಮರೆತ. ಯಂತ್ರ ಮಂತ್ರ ತಂತ್ರಂಗಳ ಸುತ್ತೂ ಬರೆದು ಮಂತ್ರಭಾವಿತ ರಚನೆಗಳೊಂದಿಗೆ ಸಾವಿರದೊಂದು ಗಣಂಗಳ ಆವಾಹಿಸಿ ರಕ್ಷಣೆಗಿಟ್ಟ. ಮಂಡಳದ ಕೆಳಭಾಗದ ಆಯಕಟ್ಟಿನ ಸ್ಥಳದಲ್ಲಿ ಇನ್ನೊಂದು ಮಂಡಳ ಬರೆದು ಗುಡಿಯಲ್ಲಿಯ ಯಕ್ಷಿಯ ಅದರೊಳಗಿಟ್ಟು ಸುತ್ತ ರಕ್ಷೆಯ ರಚಿಸಿ ದೈವಂಗಳ ಆವಾಹಿಸಿ ಕಾವಲಿಗಿಟ್ಟು ಬಂದೋಬಸ್ತ್ ಮಾಡಿದ. ಇಷ್ಟೆಲ್ಲಾ ಆಗಿ ಏನೊಂದೂ ಊನವಾಗಿಲ್ಲವೆಂದು ಭಾವಿಸಿ ತುಟಿಗಿಡುವಲ್ಲಿ ನಟ್ಟಿರುಳು ನಡುರಾತ್ರಿಯಾಗಿ ಸರ್ವರೂ :
ಸುವ್ವಿ ಸಾವಿರ ಬಾರಿ, ಸುವ್ವಾಲಿ ಸಾವಿರ ಬಾರಿ
ಪಾರ್ವತೀಸಮೇತ ಪರಮೇಶ್ವರನಿಗೆ ಸಾವಿರದೆಂಟು ಬಾರಿ ಶರಣೆಂದೆವು.
ನಾವಿಂತು ಸಾಂಬಶಿವನ ನೆನೆಯುತ್ತಿರಬೇಕಾದರೆ ಚಂದಮುತ್ತ ನಾಭಿಕುಹರದ ಉಸಿರಿನಿಂದ ಹದವಾದ ನಾದಂಗಳ ತೆಗೆದು ಆಲಾಪವ ಸುರು ಮಾಡಿದ. ಸುತ್ತಲಿನ ಸಚರಾಚರದಲ್ಲಿ ಜೀವಸಂಚಾರವಾಗಿ ಮಹಾಶಿವರಾತ್ರಿಯ ಮಹಾಪೂಜೆಯಲ್ಲಿ ಭಾಗಿಯಾಗಲು ಚಡಪಡಿಸಿದವು. ಮಧುರಾಲಾಪವ ಮಾಡಿ ಮಂಡಳದ ಸುತ್ತಲಿನ ಮಲ್ಲಿಗೆ ಬಳ್ಳಿ ಅರಳಿ ನಲುಗುವ ಹಾಗೆ ಮಾಡಿದ. ಆನಂದ ನಾದವ ಹೊರಡಿಸಿ ಗಾಳಿ ಪರಿಮಳವಾಗಿ ಸುಳಿದು ಮಂಡಳದ ಒಳಹೊರಗಿನ ದೇವತೆಗಳೆಲ್ಲ ಪ್ರಸನ್ನರಾಗುವಂತೆ ನುಡಿಸಿದ. ಸುತ್ತಲಿನ ಚರಾಚರವು ಮಹಾಶಿವರಾತ್ರಿಯ ಶಿವಾನಂದವ ಸವಿವ ಕಿವಿಯಾಗುವಂತೆ ನುಡಿಸಿದ.
ಇದಾದ ಮ್ಯಾಲೆ ಭೃಂಗೀಶನ ಶ್ರೀಪಾದಂಗಳ ನುತಿಸುವ ರಾಗರ ಚನೆಯ ಪದಕಟ್ಟಿ ಅಮೋಘವಾಗಿ ನುಡಿಸಿ ಸೂಕ್ಷ್ಮ ಲೋಕದ ದೇವರು ಸ್ಥೂಲಕ್ಕೆ ಬರಬೇಕೆಂದು ಭಕ್ತಿಯಿಂದ ಪ್ರಾರ್ಥಿಸಿದ. ಮಂಡಲದ ಆಸುಪಾಸು ಸಾವಿರದೆಂಟು ಜಂಗುಜಂಗಿನ ಅನಾಹತನಾದ ವಿಜೃಂಭಿಸಿ ಭೃಂಗೀಶನ ಅವತಾರದ ಮುನ್ಸೂಚನೆಯಾಯಿತು. ಅವನ ಕರೆತಂದು ಸೂಕ್ಷ್ಮ ಮತ್ತು ಸ್ಥೂಲಗಳ ನಡುವಿನ ಹೊಸ್ತಿಲಲ್ಲಿ ನಿಲ್ಲಿಸಿ ಶಿವಗನದ ರೀತಿರಿವಾಜಿನಲ್ಲಿ ಶಿವಾಚಾರ ಶಿವಭಕ್ತಿಯ ಅರ್ಪಿತ ಮಾಡಿ, ತೃಪ್ತಿಗೊಳಿಸಿ ತಿಂಗಳು ರಾಗವ ಸುರುಮಾಡಿದ ಚಂದಮುತ್ತ.
ಕನಸುಗಳಾದ ನಮಗಿನ್ನೂ ಏಕಾಗ್ರತೆ ಬಂದಿರಲಿಲ್ಲ. ಅದು ಇದು ನುಡಿದಾಡುತ್ತಿದ್ದಾಗ ಚಂದಮುತ್ತ ಹೊತ್ತಿಸಿದ ಇದ್ದೊಂದು ಪಂಜು ಆರಿ ಕಗ್ಗತ್ತಲಾವರಿಸಿತು. ಇದ್ದಕ್ಕಿದ್ದಂತೆ ಹಾಳುಗುಡಿಯ ಕರೀ ಶಿವಲಿಂಗ ಎದ್ದು ಬಂದು ನಮ್ಮನ್ನು ಗದರಿದಂತಾಯ್ತು. ಏನೆಂದು ನೋಡಿದರೆ ಶಿವ ಶಿವಾ!-
ಚಂದಮುತ್ತನ ತಿಂಗಳು ರಾಗದ ಮಾಯೆ ಹಬ್ಬಿಬಿಟ್ಟಿದೆ!
ಮಹಾಶಿವರಾತ್ರಿಯ ಕಗ್ಗತ್ತಲೆಯ ಆವರಿಸಿಬಿಟ್ಟಿದೆ ಅಂಧಂತಮಸ್ಸನ್ನು
ಮೀರಿ ಬೆಲೆಯುತ್ತಿದೆ
ಮ್ಯಾಲಿನ ಮಿರಿಲೋಕದ ತಾರಾಲೋಕದವರೆಗೆ;
ನಾವ್ಯಾರೆಂದು, ಎಲ್ಲಿದ್ದೇವೆಂದು,
ಏನಾಯಿತೆಂದು, ಯಾಕಾಯಿತೆಂದು ತಿಳಿಯದೆ
ನಮ್ಮ ನಾಮರೂಪ ಕ್ರಿಯೆಗಳೆಲ್ಲ ಕರಗಿ,
ಸುತ್ತಲಿನ ಸಚರಾಚರದ ಎಲ್ಲ ಎಲ್ಲವುಗಳಲ್ಲಿ
ಶಿವವು ಎಚ್ಚರವಾಗಿ
ತನ್ನ ತಾನು ಕಂಡುಕೊಂಬ ಸಡಗರದಲ್ಲಿದೆ.
ನಮ್ಮ ದೇಹಂತ ದೇಹ ಪುಳಕಗೊಂಡು ವಿವಶರಾಗಿ
ಹೊತ್ತು ಬಹಳ ಹಾಗೇ ಇದ್ದೆವು.
ಇಂತೀಪರಿ ಚಂದಮುತ್ತನ ಕೊಳಲ ಸಂಗೀತ ನಡೆದಿರಲಾಗಿ ಎಲ್ಲೋ ಏನೋ ಸೂತ್ರ ತಪ್ಪಿದೆಯೆನಿಸಿ ನೋಡಿದರೆ-
ಹೆಂಗಿತ್ತೊ ಹಂಗೆ ಇದೆ ಸರ್ವ ಲೋಕ!
ಕರ್ಮಂಗಳು ನಡೆಯದೆ
ಘಟಿತಂಗಳು ಘಟಿಸದೆ
ಎಲ್ಲೆಂದರಲ್ಲಿ ಹೆಂಗೆಂದರೆ ಹಂಗೆ
ಕಿಂಚಿತ್ತೂ ವ್ಯತ್ಯಾಸವಾಗದೆ
ನಮ್ಮ ಕಥೆ ಇದ್ದಲ್ಲೇ ಇದೆ.
ಏನೋ ಆಗಬಾರದ ಅನಾಹುತ
ಆಗಿ ಹೋಗಿದೆಯೆನಿಸಿ ಮುಂದೆ

ಹ್ಯಾಂಗ ಮಾಡುವುದೆಂಬ ಮಾತಿಗೆ ಈ ಹೀಂಗೆ ಹೊಳೆಯಿತು:
ಚಂದಮುತ್ತ ನುಡಿಸುತ್ತಿರುವುದು ತಿಂಗಳ ರಾಗ. ಹುಣ್ಣಿಮೆಯ ರಾತ್ರಿ ಅದನ್ನು ನುಡಿಸಬೇಕಾದ್ದು ನಿಯಮ. ಆದರೆ ಶಿವರಾತ್ರಿಯ ಅಮಾವಾಸ್ಯೆ ಚಂದ್ರಾಮಸ್ವಾಮಿ ಮೂಡುವುದಿಲ್ಲವೆಂಬುದು ನಮಗೆ ಅರಿದಿಲ್ಲ. ಆದರೆ ಚಂದಮುತ್ತನ ತಿಂಗಳು ರಾಗ ಕಾರಣವಾಗಿ ಪವಾಡ ಜರುಗಿ ಚಂದ್ರಾಮನ ಅವತಾರವಾಗಿ ಬೆಳದಿಂಗಳು ಸುರಿಯಬಹುದೆಂದು; ಆ ಬೆಳಕಿನಲ್ಲಿ ಸತ್ಯಶಿವದೇವರು ಭೃಂಗೀಶನೇ ಮುಂತಾದ ಗಣಂಗಳ ಸಮೇತ ದರ್ಶನ ಕೊಟ್ಟು, ಯಕ್ಷಿಗೆ ದೈವತ್ವ ಅನುಗ್ರಹಿಸಿ, ಚಂದಮುತ್ತನ ಉದ್ಧರಿಸುವರೆಂದು ನಮ್ಮ ನಂಬಿಕೆಯಾಗಿತ್ತು. ಆದರೆ ಅದ್ಯಾವುದೂ ನಡೆಯದೆ ಚಂದಮುತ್ತನ ಕೊಳಲು ಮತ್ತು ನಮ್ಮ ಕಥೆ ಎಡವಿದಲ್ಲೇ ಎಡವುತ್ತ ನಿಂತವು. ಮುಂದೇನು ಮಾಡುವುದೆಂಬ ಗೊಂದಲದಲ್ಲಿ ನಾವೆಲ್ಲ ಮುಳುಗಿರುವ ಪ್ರಸ್ತಾವದಲ್ಲಿ ಚಂದಮುತ್ತನೇನು ಮಾಡಿದ?-
ಅವನಿಗೂ ಏನೂ ಹೊಳೆಯದೆ ಗಾಬರಿಯಾಗಿ, ಆದರೂ ಧೈರ್ಯ ಕಳಕೊಳ್ಳದೆ ರಾಗರಚನೆಯಲ್ಲಿ ಓಂಕಾರವಂಕುರಿಸುವಂತೆ ಮಾಡಿ ಈಗ ಕಾಪಾಡಿದರೆ ಅವನೇ ಸೈ ಎಂದು ತಾರಕದಲ್ಲಿ ಭೃಂಗೀಶನ ಪ್ರಾರ್ಥನೆಯ ನುಡಿಸುತ್ತ- ಪ್ರಸನ್ನವಾಗು ಶಿವಪಾದವೇ ಎಂದು ಹಾರೈಸುತ್ತಿದ್ದರೆ ಇಲ್ಲಿ-
ಅಲ್ಲಿ ಆ ಕಡೆ ಶಿವಾಪುರವೆಂಬ ಘನವಾದ ಹಟ್ಟಿಯ ಲಕ್ಕಬ್ಬೆಯ ಗೂಡಿನಲ್ಲಿ ಏನು ನಡೆಯಿತೆಂದರೆ:
ಭೃಂಗೀಶನಿಗೆ ಚಂದಮುತ್ತ ಮರವೆಯಿಂದ ಮಂಡಳದ ಶಿವನ ಜಡೆಯಲ್ಲಿ ಚಂದ್ರನ ಬರೆದಿಲ್ಲವೆಂಬ ಸಂಕಟದ ಅರಿವಾಗಿ, ಬಾಲಕನ ಕಾಪಾಡಲೇಬೇಕೆಂದು ನಿಶ್ಚಯವ ಮಾಡಿ , ಸ್ಥೂಲದ ಹೊಸ್ತಿಲಲ್ಲಿ ನಿಂತಿದ್ದ ಭೃಂಗೀಶ ದೇವರು ಠಳಾರನೆ ಸ್ಥೂಲದ ಬಾಗಿಲನ್ನೊದ್ದು ಬೆಳಕಿನ ರೇಖೆಯಾಗಿ, ಮುಂಗಾರಿನ ಮುಕ್ಕೋಟಿ ಮಿರಿಮಿಂಚು ಮಿಂಚಿಧಂಗೆ ಲಕ್ಕಬ್ಬೆಯ ಗೂಡಿನಲ್ಲಿ ಪ್ರತ್ಯಕ್ಷರಾದರು!
ಇದೇನು ಹೊಯ್ಕೆಂದು, ಇದೆಲ್ಲಿಯ ಜಂಗಿನ ಗೌಜು ಗದ್ದಲವೆಂದು, ಗೂಡಿನ ದನಕರು, ಲಕ್ಕಬ್ಬೆ ದೇಹಾಂತ ದೇಹವೆಲ್ಲ ಗಾಬರಿ ಪುಳಕಂಗಳಲ್ಲಿ ನೋಡುತ್ತಿರಲು ಮಿಂಚಿನ ಮೂಳೆರೂಪದ ಭೃಂಗೀಶ ದೇವರು ಮೂರು ಕಾಲಿನ ಆರುಮೂರೊಂಬತ್ತು ಪೆಟ್ಟಿನ ಬೆಸಸಂಖ್ಯೆಯ ತಾಳಲಯದಲ್ಲಿ ಗಲಿರು ಗಲಿರು ಅಂತ ಜಂಗು ನುಡಿಸುತ್ತ ಕುಣಿಯುತೈದಾರೆ! ಮುಂದಲ ಕಾಲಿಗೆ ಮುನ್ನೂರು ಜಂಗ, ಹಿಂದಲ ಕಾಲಿಗೆ ಆರುನೂರು ಜಂಗ, ಮೂರನೇ ಕಾಲಿಗೆ ನೂರೆಂಟು ಜಂಗುಗಳ ಪುಟ್ಟ ಪುಟ್ಟ ಪಾದಂಗಳ ಜಂಗೀನ ಶಬುದಕ್ಕೆ ಕಗ್ಗತ್ತಲ ರಾತ್ರಿ ಮಾತಾಡುವಂತೆ ಹೆಜ್ಜೆಯ ಹಾಕಿ ನಾಂಟ್ಯವಾಡುತೈದಾರೆ! ಆವಾಗ ನೋಡು ಶಿವಾ, ಎಲ್ಲೆಲ್ಲಿದ್ದರೋ ಹಿಂಡು ಹಿಂಡು ಶಿವಗಣಂಗಳು ಹುಡುಹುಡು ಎಂದು ಗುಡುಗುಡುನೋಡಿ ಬಂದು ಗೂಡಿನ ಮೂಲೆ ಮೂಲೆಯಲ್ಲಿ ಪ್ರತ್ಯಕ್ಷರಾಗಿ, ಕೆಲವರು ತಲೆಮ್ಯಾಲೆ ಮುಗಿದ ಕೈ ಹೊತ್ತುಕೊಂಡು ಬಗೆಬಗೆಯ ನಾದ ಶಬ್ದಂಗಳ ಮಾಡುತ್ತ, ಕೆಲವರು ತಾವು ಕಲ್ಪಿಸಿದ ಹುಯಿಲ್ಗೊಂಬು, ಹುಯಿಲ್‌ತಮ್ಟೆ, ಹುಯಿಲ್‌ತಾಳ ವಾದ್ಯಂಗಳ ಮಂತ್ರ ಭಾವಿತದಿಂದ ಸೃಷ್ಟಿಸಿಕೊಂಡು ಬಾರಿಸುತ್ತ, ಶಿವಾನಂದದ ಅವೇಶವಡರಿ ಕಣ್ಣರಳಿ, ಮುಖ ಹಿಗ್ಗಿ, ಕಿವಿಗಳತನಕ ನಗುತ್ತ ಮೈಮರೆತು ಕುಣಿಯತೊಡಗಿದರು! ಇಂತೀರೀತಿ ಹೆಜ್ಜೆ ಹೆಜ್ಜೆಯ ಜಂಗಿನ ಶಬ್ದ ಗೂಡು ತುಂಬಿರಲು, ದನಕರು ಕಣ್ಣಗಲ ತೆರೆದು ಬರೆದ ಚಿತ್ರವಾಗಿರಲು ನೋಡುನೋಡುತ್ತಿರುವಂತೆ ಬೆಳಗಿನ ಸಮಯ ಲಕ್ಕಬ್ಬೆ ರಾಗಿಹಿಟ್ಟಿನಲ್ಲಿ ಮಾಡಿ ಬೆರಣಿ ತಟ್ಟಿದ್ದ ಮನೆದೇವರು ಚಂದಪ್ಪನಲ್ಲಿ ಸಾಕ್ಷಾತ್ ಚಂದ್ರಾಮಸ್ವಾಮಿ ಅವತಾರ ಆವೇಶವಾಗಿ ಹುಣ್ಣಿವೆ ಚಂದ್ರನಂತೆ ಫಳಫಳ ಹೊಳೆಯತೊಡಗಿತು! ತಡಮಾಡದೆ ಭ್ರುಂಗೀಶದೇವರು ದೂರದಿಂದಲೆ ಲಕ್ಕಬ್ಬೆಗೆ ನಮಸ್ಕರಿಸಿ ಸತ್ಯದೇವರಿದ್ದಲ್ಲಿಗೆ ಸಾಗಲಿ ಮೆರವಣಿಗೆಯೆಂದು ಮುಂದೆ ಮುಂದೆ ನಡೆದರೆ ಬೆರಣಿಯ ಚಂದ್ರಾಮಸ್ವಾಮಿ ಹಿಂಡು ಹಿಂಡು ಶಿವಗಣಂಗಳೊಡನೆ ಹಿಂದೆ ಹಿಂದೆ ತೇಲುತ್ತ ನಡೆದರು. ಭೃಂಗೀಶನ ಜಂಗಿನ ಗಲಿರು ಗಲಿರು ನಾದ, ತಮ್ಮಟೆ ವಾದ್ಯಗಳ ಒರಟು ನಾದಗಳಲ್ಲಿ ಕಂಚು ಕಹಳೆಗಳ ಮೊಳಗಿನಲ್ಲಿ ಕಗ್ಗತ್ತಲ ಕಾಡು ಗೀಳಿಟ್ಟು ಪ್ರತಿಧ್ವನಿಸಿ ನಿನದಿಸಿತು. ಇಂತೀಪರಿ ಹೊಸ ಬೆರಣಿಯ ಚಂದ್ರನ ಉದಯವಾಗಿ ಭಯಾಂಕರ ಸದ್ದು ಸಡಗರದಲ್ಲಿ ನಡೆದ ಮೆರವಣಿಗೆಯ ಕಂಡು ಮ್ಯಾಲಿನ ಚಿಕ್ಕೆ ಬಳಗ ಗಾಬರಿಯಾಗಿ ಕಣ್ಣು ಪಿಳಕಿಸದೆ ನಿಂತಲ್ಲಿ ನಿಂತುಕೊಂಡರೆ ಗಲಾಟೆಗೆ ಹಟ್ಟಿಯ ಜನ ಎಚ್ಚರಾದರೂ ಅಮಾವಾಸ್ಯೆಯ ದಿನ ಹುಣ್ಣಿವೆ ಬೆಳಕು ಮೂಡಿದ್ದಕ್ಕೆ ಬೆದರಿ ಗಾಬರಿಯಾಗಿ ಬಾಗಿಲು ಭದ್ರ ಮಾಡಿಕೊಂಡು ನಡುಗುತ್ತ ಒಳಗೇ ಕುಂತರು. ಮೆರವಣಿಗೆ ಯಕ್ಷಿ ಗುಡಿಗೆ ಬಂದು ಮಂಡಳದ ಶ್ವನ ನೋಡಿದ್ದೇ ತೇಲುತ್ತ ಹೋಗಿ ಶಿವನ ಜಡೆಯಲ್ಲಿ ಬೆರಣಿಯ ಚಂದಪ್ಪಸ್ವಾಮಿ ಸ್ಥಾಪನೆಗೊಂಡರು.
ಬೆರಣಿ ಚಂದ್ರನ ಎಳೆಯ ಬೆಳ್ದಿಂಗಳು
ಅರಳಿ ಅರಲಿ ಸುರಿಯಿತು!
ಉಕ್ಕುವ ನೊರೆ ಹಾಲಿನಂತೆ
ತುಂಬಿ ಸುರಿವ ತಿಂಗಳು!
ತುಂಬಿ ಬಂದ ಚಂದ್ರನ ಕೊಡ
ತುಳುಕಿತು ಬೆಳ್ದಿಂಗಳು!
ಬೆರಣಿ ಚಂದ್ರನ ಎಳೆಯ ಬೆಳ್ದಿಂಗಳಿಗೆ ಬಲಿತ ಕತ್ತಲ ರಾಜ್ಯ ಕರಗಿ ಹೋಯಿತೆಂಬಲ್ಲಿ ಲೋಕದ ಮೈಲಿಗೆ ತೊಳೆದು ಬೆಳಕು ಮೂಡಿಸಿದ ಚಂದ್ರಶೇಖರ ಸ್ವಾಮಿಯ ನೆನೆನೆನೆದು ಮುಂದಿನ ಪದ ನುಡಿಯುತ್ತೇವೆ ಕೇಳುವಂಥವರಾಗಬೇಕು.
ಭ್ರುಂಗೀಶದೇವರ ಆವೇಶದ ನರ್ತನ ನೋಡಿ ಪ್ರೋತ್ಸಾಹವುಂಟಾಗಿ ಆರುಮೂರು ಪೆಟ್ಟಿನ ಹೆಜ್ಜೆಯ ಹಾಕಲಾರದೆ ಕರುಬಿ ಸುಮ್ಮನೆ ನಿಂತ ಚಂದ್ರಶೇಖರ ಸ್ವಾಮಿಯ ಶ್ರೀಪಾದಂಗಳಿಗೆ ಚಂದಮುತ್ತನ ಹಂಬಲದ ಅರಿವಾಗಿ ಅನುಗ್ರಹದ ಕೈ ಮಿಡುಕಿತು. ಹಾಗಂದೇಟ್ಗೆ ಯಕ್ಷಿಗೆ ದೈವತ್ವದ ಆವೇಶವಾಗತೊಡಗಿತು ನೋಡು,-
ಮುಖವು ಕಳೆಕಳೆಯಾಗಿ
ನೀಲಾಂಜನದಂತೆ ಹೊತ್ತಿಕೊಂಡವು ಕಣ್ಣು.
ಹೊರಡುವ ಸಮಯದ ಅರಿವಾಗಿ
ಬಟ್ಟೆಯ ಸರಿಪಡಿಸಿಕೊಂಡಳು.
ಮನಸ್ಸು ಹಗುರವಾಯಿತು. ಅದಕ್ಕೂ ಮುನ್ನ ದೇಹವೂ ಕೂಡ. ಮೆಲ್ಲಗೆ ಎದ್ದು ಕುಂತು, ಅಂಗೈಯ ಕನ್ನಡಿ ಮಾಡಿ ನೋಡುತ್ತ ಕುರುಳು ಸರಿಸಿ ಕುಂಕುಮದ ಬೊಟ್ಟು ತಿದ್ದಿಕೊಂಡಳು.
ಆಮ್ಯಾಲೆ ಮೆಲ್ಲಗೆ ಎದ್ದು
ಶಕ್ತಿ ಸಾಲದೆ ಎರಡೂ ಕಡೆಗೊಲಿದು
ಸಮತೋಲ ಸರಿಪಡಿಸಿಕೊಂಡು
ಬೀಳದಿರುವಂತೆ ಕೈ ಚಾಚಿದಾಗ
ಚಂದಮುತ್ತನ ಹಾಡಿಗೇ ರೆಕ್ಕೆ ಮೂಡಿದಂತೆ
ಕೈಗಳು ರೆಕ್ಕೆಗಳಾಗಿ
ಮೆಲ್ಲಮೆಲ್ಲನೆ ಗಾಳಿಪಟದಂತೆ ತೇಲಿ ನಲಿದಳು.
ತಿಂಗಳು ರಾಗದ ಮಹಾಪೂರ ಬಂದು ಬಯಲು ತುಂಬಿತು ನೋಡು;
ರಾಗದ ಲಹರಿ ಲಹರಿಗಳಲ್ಲಿ ಈಜುತ್ತ
ಕಣ್ಣುಗಳಲ್ಲಿ ಚಂದ್ರನ ಸೆರೆಹಿಡಿದುಕೊಂಡಳು.
ತನ್ನ ತೇಜಸ್ಸನ್ನು ತಾನೆ ಹೊರಚೆಲ್ಲುತ್ತ
ಚಿಮ್ಮುವ ಬೆಳಕಿನ ಸೆಲೆಯಂತೆ ಕಂಡಳು, ಚಕೋರಿ ಎಂಬ ಯಕ್ಷಿ.
ರಾಗಕ್ಕೆ ಕಾವೇರಿದಂತೆ
ಆಕಾಶಕ್ಕೆ ಬೆಳೆವ ಶಿವನಿಗೆ ಶಿರಬಾಗಿ
ಭೃಂಗೀಶನ ಜಂಗು ಜಂಗಿನ ಮೂಳೆ ಪಾದಂಗಳಿಗೆ ವಂದಿಸಿ,
ಗಣಂಗಳ ನೆನೆದು
ಪ್ರೀತಿ ಮತ್ತು ಅಭಿಮಾನದ ಕಡೆಗಣ್ಣು ಕುಡಿನೋಟದಲ್ಲಿ
ಚಂದಮುತ್ತನ ನೋಡಿ,
ಮೋಹದಲಿ ಅವನ ಹಾಡಿಗೆ ತಾಳ ಬಾರಿಸಿದಂತೆ
ರೆಕ್ಕೆ ಬಡಿಯುತ್ತ
ಎಳೆಯ ಬೆಳ್ದಿಂಗಳಲ್ಲಿ ಮೇಲುಮೇಲಕ್ಕೆ ಈಗುತ್ತ
ಹಾರಿದಳು.
ಕೊಳಲು ನುಡಿಸುತ್ತ ಚಂದಮುತ್ತ ದಿವ್ಯೋನ್ಮಾದದಲ್ಲಿ- ಚಂದ್ರಶೇಖರಸ್ವಾಮಿಯ ಶ್ರೀಪಾದಂಗಳ ಕಡೆ ನೋಡಿದ:
ಶಿವಪಾದದಲ್ಲೊಂದು ಕೆರೆಯ ಕಂಡೆ
ಕೆರೆಯಲ್ಲಿ ಮೂರೆಸಳಿನ ತಾವರೆಯ ಕುಸುಮವ ಕಂಡೆ!
ಕುಸುಮದಲ್ಲಿ ಧಗಧಗನೆ ಉರಿವ
ಉರಿಯ ಗದ್ದುಗೆ ಮ್ಯಾಲೆ ನಿಂತ್ಕೊಂಡು
ಧ್ಯಾನವ ಮಾಡುವ ಶಿವದೇವರ ಕಂಡ!
ಸ್ವಾಮಿ ರೂಪಾಂತರಚರಿಸಿ ಲೋಕಾಂತರ ಬೆಳೆದುದ ಕಂಡ!
ನಿಂತ ಹೆಜ್ಜೆ ಭೂಲೋಕದ ಸೀಮೆ ತುಂಬಿದವು.
ಬೆರಣಿ ಚಂದ್ರನ್ನ ಜಡೆಯಲ್ಲಿ ಧರಿಸಿದ ಮುಖವು-
ಆಹಾ ತೇಜೋಮಯವು
ಮ್ಯಾಲೆ ಮಿರಿಲೋಕದೀಚೆಯ
ಅವಕಾಶ ತುಂಬಿದುದ ಕಂಡ!
ಈ ನಡುವೆ ದೇವದೈವ ಭೂತ ಪಿಶಾಚಿ
ರಾಹು ರಕ್ಷಸ ಇರಿವೆಂಬತ್ತು ಕೋಟಿ ಜೀವರಾಶಿ
ಸ್ವಾಮಿಯಲ್ಲಿ ಅಡಕಗೊಂಡುದ ಕಂಡ!
ಘನವೇ ಶರಣು
ಗಂಭಿರವೇ ಶರಣು
ಸಾವಳಗಿ ಶಿವಲಿಂಗವೇ ಶರಣು ಶರಣು
ತಂದೇ ಧನ್ಯನಾದೆನೆಂದು.
ಅಂದುಕೊಳ್ಳುತ್ತಿರುವಂತೆ ಕಾಲುಗಳಿಗೆ ಛಳಿ ತಾಗಿ ನೋಡಿಕೊಂಡಾಗ ತಾನು ಶಿಲೆಯಾಗುತ್ತಿರುವ ತಿಳುವಳಿಕೆ ಬಂತು. ಕಷ್ಟಪಟ್ಟು ರಾಗಕ್ಕೆ ಮುಕ್ತಾಯ ಕೊಡಲು ಪ್ರಯತ್ನಿಸತೊಡಗಿದ. ತಕ್ಷಣ ಇದು ಹಾರುತ್ತಿರುವ ಯಕ್ಷಿಗೆ ತಿಳಿದು ಎದೆ ಧಸ್ಸೆಂದಿತು. “ಅಯ್ಯೋ ನನ್ನ ಚಂದಮುತ್ತಾ” ಎಂದು ಕುಸಿದು ಮತ್ತೆ ಎಚ್ಚರವಾಗಿ ಸಾವರಿಸಿಕೊಂಡಳು. ಕಳಕಳೆಯಯಾಗಿದ್ದ ಮುಖ ಕತ್ತಲಂತೆ ಕಪ್ಪಿಟ್ಟಿತು. ಭಯ ಮತ್ತು ಅಂಗಲಾಚುವ ಆರ್ದ್ರ ನೋಟಗಳಿಂದ ಶಿವನ ಕಡೆ ನೋಡಿದಳು. ತನ್ನ ಪ್ರಾಣ ತಗೊಂಡಾದರೂ ತನ್ನ ಚಂದಮುತ್ತನ ಜೀವ ಉಳಿಸೆಂಬ ಭಾವದಲ್ಲಿ ಶಿವನ ಶ್ರೀಪಾದಂಗಳ ಕಣ್ಣಿಂದ ತೊಳೆದಳು. ಹತಾಶಳಾಗಿ ದುರ್ಬಲ ದೃಷ್ಟಿಗಳಿಂದ ಹೃದಯ ಪರಚಿಕೊಂಡಳು. ಚಂದಮುತ್ತನಿಗಾಗಿ ಶಿವನಲ್ಲಿ ಮೊರೆಯಿಟ್ಟಳು:
ಶಿವ ಶಿವಾ,
ನಂಬಿ ಕರೆದರೆ ಓ ಎಂಬ ಶಿವನೇ
ಮೃತ್ಯುಂಜಯನೇ,
ಮಾರ್ಕಂಡೇಯನ ಪೊರೆದವನೇ,
ಕಿಡಿಗಣ್ಣ ಬೀರು ತಂದೇ,
ಚಂದಮುತ್ತನ ನುಂಗುವ ಶಿಲೆಯ ಮ್ಯಾಲೆ.
ಒದಗಿ ಬಾ ಶಿವನೇ
ನಮ್ಮ ಸತ್ಯಕ್ಕೆ ನಮ್ಮ ಪ್ರೀತಿಗೆ
ನಮ್ಮ ಭಕ್ತಿಗೆ.
ಕರುಣಾಳು ಭೃಂಗೀಶ ದೇವರೇ,
ಶಿಲೆಯಿಂದ ರಕ್ಷಿಸಿರಯ್ಯಾ ಚಂದಮುತ್ತನ್ನ.
ನನಗಾಗಿ, ಲೋಕಕ್ಕಾಗಿ,
ಜೀವತ್ಯಾಗ ಮಾಡುವವನ,
ನನ್ನ ಚಂದಮುತ್ತನ್ನ ಕಾಪಾಡಿ ಕಾಪಾಡಿರಯ್ಯಾ
ಆಕಾಶದೇವರಲ್ಲಿ ಸಿಡಿಲಿಲ್ಲವೆ?
ಸುತ್ತಲಿನ ದೇವರಲ್ಲಿ ನ್ಯಾಯವಿಲ್ಲವೆ?
ಶಿವನೆ, ನನ್ನನ್ನೂ ಅವನೊಂದಿಗೆ ಶಿಲೆಯಾಗಿಸು ತಂದೇ,
-ಎಂದು ಅಂಗಲಾಚುತ್ತ ನೀವಾದರೂ ಸ್ವಾಮಿಗೆ ಹೇಳಿರಯ್ಯಾ ಎಂದು ನಮಗೆ ಮೊರೆಯಿಟ್ಟಳು. ನನ್ನ ಚಂದಮುತ್ತನ್ನ ಕಾಪಾಡಿ ಕಾಪಾಡಿರಯ್ಯಾ ಎಂದು ಅಂಗಲಾಚುತ್ತ ಮೈಮರೆಸಿ ತನ್ನ ಜೀವವ ಅಪಹರಿಸುತ್ತಿದ್ದೀರಿ- ಎಂದು ಎಲ್ಲರ ನೋಡಿದಳು. ಇವಳ ಕಣ್ಣಿರ ಪ್ರವಾಹದಲ್ಲಿ ಎದುರೀಜುವುದು ಯಾರಿಗೂ ಸಾಧ್ಯವಾಗದೆ ಕಲ್ಲಿನಂತೆ ಸುಮ್ಮನೆ ನಿಂತಿರಲು ಕೆಳಗಿಳಿದು ಬಂದಳು. ಚಂದಮುತ್ತನ ಮುಖ ವಿನಾ ಉಳಿದೆಲ್ಲ ದೇಹ ಆಗಲೇ ಶಿಲೆಯಾಗಿತ್ತು.
ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಏನಿತ್ತು?
ಕಣ್ಣು ಕನ್ನಡಿಯ ಹಾಂಗಿತ್ತು.
ಆಕಾಶವೆಂಬ ಕನ್ನಡಿಯಲ್ಲಿ ತನ್ನ ತಾ
ನೋಡಿಕೊಂಬ ಬಯಲು ಮೂಡಿತ್ತು.
ನಾವೆಲ್ಲ ದುಃಖ ಭಾವೈಕ್ಯರಾಗಿ ನಿಂತಿರಬೇಕಾದರೆ ಯಕ್ಷಿ ಕೃತಜ್ಞತೆಯಿಂದ ಅಥವಾ ಕೊನೆಯ ಬಾರಿ ಎಂಬಂತೆ ಚಂದಮುತ್ತನ ತುಟಿಗಳ ಮ್ಯಾಲೆ ತುಟಿ ಊರಿ ಬಹಳ ಹೊತ್ತಿನ ತನಕ ಮುದ್ದಿಸಿದಳು. ನಿಜ ಹೇಳಬೇಕೆಂದರೆ ಸ್ಮಶಾನವಾಸಿ ಶಿವನಂಥ ಕಣ್ಣಲ್ಲೂ ಕಣ್ಣೀರುಕ್ಕಿತು. ಅವರೂ ಕೈ ಕೈ ಹಿಸುಕಿಕೊಂಡು ಸುಮ್ಮನಿದ್ದರು. ಚಂದಮುತ್ತನ ತುಟಿ ಶಿಲೆಯಾದುದು ಅವಳ ತುಟಿಗರಿವಾಗಿ ಒತ್ತಾಯದಿಂದ ಬಿಟ್ಟಳು. ಈಗ ಅವನಾತ್ಮವ ಪೂರ್ತಿ ಹೀರಿಕೊಂಡ ತೃಪ್ತಿ ಅವಳ ಮುಖದಲ್ಲಿತ್ತು. ಮಂದಹಾಸದಿಂದ ಆಕಾಶವ ಕುರಿತು ಮ್ಯಾಲೆ ಹಾರತೊಡಗಿದಳು. ಹಾರ ಹಾರುತ್ತ ಆ ಯಕ್ಷಿ ಚಕೋರ ಪಕ್ಷಿಯಾಗಿ ಆನಂದಗಳು ಬೆಳೆವ ಸೀಮೆ ಶಿವನ ಜಡೆಯ ಚಂದ್ರನ ಗುರಿಯಾಗಿ ಹರಿದಳು. ಈಗ ಚಕೋರಿಯ ಮ್ಯಾಲೆ ಚಂದ್ರ ಮಾತ್ರ ಹೊಳೆಯುತ್ತಿದ್ದ.
ಚಂದ್ರನ ಸಮೀಪಿಸಿ ಕನ್ನಡಿಯಂತೆ ಅವನ ನೋಡಿದಾಗ
ಚಂದ್ರನೇ ಹಾರುತ್ತಿದ್ದ

ತನ್ನ ಬೆಳ್ದಿಂಗಳಲ್ಲಿ ತಾನೇ ಈಜುತ್ತಿದ್ದ.
ಚಕೋರಿ ಚಂದ್ರನ ನುಂಗಿ
ಚಂದ್ರ ಚಕೋರಿ ಎರಡೂ ಬಯಲು ನಿರ್ವಯಲಾಗಿ
ಬೆಳಗಾಯಿತು.
ತಿಂಗಳು ರಾಗದಿಂದ ಚಂದಮುತ್ತ ಕಟ್ಟಿದ್ದ ಶಿವಲೋಕ ಮಂಡಳದಲ್ಲಿ ಮಾಯವಾಯಿತು. ಬೆರಣಿ ಚಂದ್ರ ಭಸ್ಮವಾಗಿದ್ದ.
ಎಲ್ಲ ಮುಗಿಯಿತೆಂದಾಗ ಮಲ್ಲಿಗೆ ಬಳ್ಳಿಯ ಬುಡದಲ್ಲಿ ತೂಕಡಿಸುವ ಕರಡಿ ಕಂಡಿತು. ತಲೆಯಲ್ಲಿ ಬೆಳ್ಳಿ ಕೂದಲು ಬೋಳು ಬಾಯಿ, ಕೋಲು ಕೈಕಾಲು, ಕಣ್ಣು ಗುಳಿ ಸೇರಿ ಚರ್ಮ ಜೋತಾಡಿ, ಹೊಳೆಯ ಮಹಾಪೂರ ಹಾದು ವಾಲಿದ ಮರದಂತೆ ಮ್ಯಾಲೆ ಮುಖ ಮಾಡಿ ಕುಂತಿದ್ದಳು. ಅದ್ಯಾರಪ್ಪ ಅಂದರೆ ಲಕ್ಕಬ್ಬೆ! ಅಬ್ಬೆ ಇನ್ನೂ ವಿಸ್ಮೃತಿಯಲ್ಲಿದ್ದಾಳೆ. ಹಾಗೇ ಇರಲೆಂದು, ಮಗ ಶಿಲೆಯಾದ ವಿಚಾರ ಅವಳಿಗೆ ತಿಳಿಯದಿರಲೆಂದು ನಾವು ಮಂಗಳ ಹಾಡುವ ಅವಸರದಲ್ಲಿದ್ದಾಗ ನಮ್ಮಲ್ಲೊಬ್ಬ ಕೇಳಿಯೇ ಬಿಟ್ಟ-
ಅಬ್ಬೆ ಅಬ್ಬೆ,
ಮಡಿಲೊಳಗೆ ಬಚ್ಚಿಟ್ಟುಕೊಂಡಿದ್ದಿಯಲ್ಲ
ನಿನ್ನ ಹಕ್ಕಿಯ,
ಪುಟ್ಟ ಕಾಲು ಇಷ್ಟೆ ಕೊಕ್ಕು
ಬಣ್ಣ ಎಲ್ಲ ಚೆನ್ನು.
ಸವಿಗೊರಳಿನ ಬಿಳಿ ಹಕ್ಕಿಯ
ದನಿಯೆಂದರೆ ಜೇನು.
ಅದೆಲ್ಲಿದೆ ಈಗ?
-ಇದಕ್ಕೆ ಅಬ್ಬೆ ಹೀಗೆಂದಳು :
ಹೌದು ನನ್ನಪ್ಪ
ನನ್ನ ಒಡಲಿಗೆ
ನನ್ನ ಮಡಿಲಿಗೆ
ಅದನ್ನು ಹೊಂದುವ ಭಾಗ್ಯವಿರಲಿಲ್ಲ.
ಆ ದಿನ
ಹಸಿವೆಗೆ ಹಾಲೂಡೆಂದು ಹಟ ಮಾಡಿತು
ಜೋತ ಮೊಲೆಯಲ್ಲೇನು ಹಾಲೊಡೆದೀತು ಕಂದಾ?-ಎಂದೆ,
ಚಂದ್ರಾಮನೆಂಬೂವ ಬೆಳ್ಳಿಗಿಂಡಿಯೊಳಗ
ಹೆಪ್ಪು ಹಾಕಿದ ಅಮೃತ ಕುಡಿವೆನೆಂದ
ಆಕಾಶವೆನ್ಬೂವ ಅರಿಯಬಾರದ ಬಯಲು
ಅದರಂತುಪಾರವನು ಅರಿವೆನೆಂದು
ಭರ್ರನೆ ಹಾರಿ ಹೋಯಿತು ಹಕ್ಕಿ
ನನ್ನ ಮತ್ತು ಕಾಲನ ಮೈ ಪರಚಿ.
ಹಕ್ಕಿಯ ಭಾರವಿನ್ನೂ ಹಂಗೇ ಇದೆ
ಒಡಲಿನ ಮ್ಯಾಲೆ.
ಇನ್ನೇನು ಜೋಗುಳ ಹಾಡುತ್ತದೆ
ನನ್ನ ಮಲಗಿಸಲಿಕ್ಕೆ.
ಮಗುವೇ ಜೋಗುಳ ಪಾಡಿ
ತಾಯಿಯ ಮಲಗಿಸಿದ್ದನ್ನ
ಎಲ್ಲಾದರೂ ಕೇಳಿದ್ದೀರೇನ್ರಪ?
ಜೋ ಜೋ ಎನ್ನ
ಬೆಳ್ಳಾನೆ ಹಕ್ಕಿ ಜೋ ಜೋ …….
ಚಂದ್ರಾಮನೆಂಬೂವ ಕನ್ನಡಿ ಮಾಡಿ
ನನ್ನ ಕನ್ನಡಿ ಮಾಡಿ ಅದರ ಎದುರಿಟ್ಟಿ
ಪ್ರತಿಬಿಂಬ ನೆರೆದಾವು ಬಿಂಬದ ಜೋಡಿ ||ಬಯಲು||
ಬಯಲಾಗ ಸೇರ್‍ಯಾವು ನಿರ್ವಯಲಾಗಿ
ಜೋ ಜೋ ಎನ್ನ ಜ್ಯೋತಿಯ ಕಂದಾ ಜೋ ಜೋ ||
-ಎಂದು ಹೇಳಿ ಕಣ್ಣೀರಲ್ಲಿ ತೆಪ್ಪದ ಹಾಗೆ ತೇಲುವ ತಾಯಿಯ ಕಂಡು ನಮ್ಮ ಕರುಳು ಕಿತ್ತು ಕಣ್ಣಿಗೆ ಬಂದಂತಾಗಿ ಅತ್ತೆವು. ಅವಳು ವಿಸ್ಮೃತಿಯಲ್ಲಿದ್ದರೇ ಒಳ್ಳೆಯದೆಂದು ಮಂಗಳ ಹಾಡಲು ಸಿದ್ಧರಾದೆವು.
ಚಂದಮುತ್ತನ ದೇಹ ಈಗ ಪೂರಾ ಶಿಲೆಯಾಗಿ,
ಕಲ್ಲುಗಳಲ್ಲಿ ಕಲ್ಲಾಗಿ ಬಿದ್ದಿದೆ.
ಕಣ್ಣು ಮಾತ್ರ ಗಾಜಿನ ಕಣ್ಣಿನಂತೆ ಕಾಣುತ್ತಿದ್ದವು.
ಕಣ್ಣುಗಳಲ್ಲಿ ಹೆಪ್ಪುಗಟ್ಟಿದ ಚಂದ್ರನಿದ್ದ,
ಎರಡೂ ಕಣ್ಣಲ್ಲಿ ಸೋರಿದ್ದ ಕಣ್ಣಿರು ಮಾತ್ರ
ಹಾಗೇ ನೀರು ನೀರಾಗೇ ಇತ್ತು.
ಬೆಳಕಿನ ಅವಧೂತ, ಚಂದಮುತ್ತ
ಸತ್ತನೆನಬ್ಯಾಡಿರಯ್ಯಾ
ಅವನ ತುಟಿಯ ಮ್ಯಾಲಿನ ಹಾಡನ್ನ
ಹಕ್ಕಿಗಳಿಗೆ ಕೊಡಿರಯ್ಯಾ.
ಕಣ್ಣಂಚಿನಲ್ಲಿರೋ ಕನ್ನೀರನ್ನ
ತರುಮರಗಳ ಬೇರಿಗೆ ಹನಿಸಿರಯ್ಯಾ.
ಆತ್ಮದ ತುಂಬ ಚಂದಮುತ್ತನ ಬೆಳ್ದಿಂಗಳ
ತುಂಬಿಕೊಂಡು ಹೋಗಿರಯ್ಯಾ.
ಬೆಚ್ಚಗಿನ ಬೆಳಕಿನ ಭರವಸೆ ಕೊಡುತ್ತ
ಮುಂಗೋಳಿ ಕೂಗಿದೆ.
ಮಂಡಳದಲ್ಲಿ ಬೆರಣಿ ಚಂದ್ರನ ಬೂದಿ ಬಿದ್ದಿದೆ
ಭಕ್ತಿಗೆ ಭಸ್ಮ ಧರಿಸಿಕೊಂಡು ಹೋಗಿರಯ್ಯಾ.
ಇಲ್ಲೀಗಿ ಹರಹರ
ಇಲ್ಲೀಗಿ ಶಿವಶಿವ
ಇಲ್ಲೀಗಿ ನಮ್ಮ ಹಾಡು ಮಂಗಳವಯ್ಯಾ |


ಮುಗಿಯಿತು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.