ಹಿತ್ತಲಮನಿ ಕಾಶೀಂಸಾಬ

ರಂಗರಾಯರದು ನಾಕೆತ್ತಿನ ಕಮತದ ಮನಿ. ಮನೆಯಲ್ಲಿ ಸಾಕಷ್ಟು ಆಕಳೂ ಇದ್ದವು. ಕಾಶೀಂಸಾಬ ಚಿಕ್ಕಂದಿನಿಂದಲೂ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ. ನಂಬಿಗಸ್ತನಾಗಿದ್ದರಿಂದ ರಾಯರ ಮನೆಯಲ್ಲಿ ಅವನು ಕೆಲಸದ ಆಳು ಎಂದಾಗಿರಲೇ ಇಲ್ಲ. ಅವರ ಮನೆಯವರಲ್ಲೇ ಒಬ್ಬನಾಗಿದ್ದ. ಹೊಲದಲ್ಲಿ ಕೆಲಸ ಮಾಡುವದು, ಮನೆಯಲ್ಲಿ ಆಕಳ ಹಿಂಡುವದು, ಸೆಗಣಿಕಸ ಮಾಡುವದು ಅವನ ಕೆಲಸವಾಗಿತ್ತು. ಕಟ್ಟಡ ಕಟ್ಟುವದು, ಬಾವಿ ತೋಡುವದು ಮೊದಲಾದ ಎಲ್ಲ ಕೆಲಸ ಅವನಿಗೆ ಗೊತ್ತಿತ್ತು. ತಾನು ಮಾಡಿದ ಕೆಲಸದ ಬಗ್ಗೆ ಅವನಿಗೆ ಬಹಳ ಹೆಮ್ಮೆ ಇರುತ್ತಿತ್ತು.

ರಂಗರಾಯರ ಹೆಂಡತಿ ಒಮ್ಮೆ ನೀರು ತರಲಿಕ್ಕೆ ಬಾವಿಗೆ ಹೋದಾಗ ಹಗ್ಗ ಹರಿದು ಕೊಡಪಾನ ಬಾವ್ಯಾಗ ಬಿತ್ತಂತೆ. ಅವರು ಹಿಂದೆ ನೆಲಕ್ಕೆ ಬಿದ್ದರು. ನೋಡಿದ ಜನ ನಕ್ಕರಂತೆ. ಅದನ್ನ ಕೇಳಿದ ರಾಯರಿಗೆ ವಿಪರೀತ ಸಿಟ್ಟು ಬಂತು.

‘ಕಾಶೀಮಾ, ನಿಂತ್ ಕಾಲ್ ಮ್ಯಾಲೆ ನಮ್ಮ ಮನೀ ಹಿತ್ತಲದಾಗ ಒಂದ್ ಬಾವಿ ತೋಡು. ನಮ್ಮ ಹೆಣ್ಣುಮಕ್ಕಳು ಹೊರಗ ಹೋಗೋದು ಬ್ಯಾಡ’ ಅಂದ್ರು.

‘ಆಯಿತೆಪ್ಪ’ ಅಂದು ಎಂಟು ದಿನದಾಗ ಕಾಶೀಮ ರಾಯರ ಹಿತ್ತಲದಾಗ ಬಾವೀ ತೋಡಿ, ಕಟ್ಟಡ ಕಟ್ಟಿದ.

ರ೦ಗರಾಯರಿಗೆ ಮಗ ಹುಟ್ಟಿದ. ಶಾಮಣ್ಣ ಅಂತ ಹೆಸರಿಟ್ಟರು. ಹೆಂಡತಿ ಮಗನೊಡನೆ ಸುಖವಾಗಿ ಕಾಲ ಕಳೆಯುತ್ತಿದ್ದರು. ಆದರೆ ದುರ್ದೈವದಿಂದ ರಾಯರ ಹೆಂಡತಿ ತೀರಿಕೊಂಡರು. ಆಗಿನಿಂದಲೂ ಶಾಮಣ್ಣನನ್ನು ಕಾಶೀಂಸಾಬ ಮತ್ತು ಅವನ ಹೆಂಡತಿ ಕಾಶೀಂಬಿಯೇ ನೋಡಿಕೊಳ್ಳುತ್ತಿದ್ದರು. ಮನೆಗೆ ಕರೆದುಕೊಂಡು ಹೋಗಿ ಬಿಸಿ ರೊಟ್ಟಿ ಬೆಣ್ಣಿ ತಿನ್ನಿಸುತ್ತಿದ್ದರು. ಅದನ್ನು ರಾಯರಾಗಲಿ ಕಾಶೀ೦ಸಾಬನಾಗಲಿ ಯಾರ ಮುಂದೂ ಹೇಳುವಂತಿರಲಿಲ್ಲ.

ಒಮ್ಮೆ ಸಣ್ಣ ರಾಯರು ಏನೋ ಕಾರಣಕ್ಕೆ ಸಿಟ್ಟು ಬಂದು ಸೆಟಗೊಂಡು ಹೋಗಿ ಹನಮ೦ತದೇವರ ಗುಡಿಯ ಹತ್ತಿರಿದ್ದ ಬೇವಿನ ಗಿಡದ ಕಟ್ಟೆಯ ಮೇಲೆ ಮಲಗಿದರಂತೆ. ಅದನ್ನು ನೋಡಿದ ದೊಡ್ಡ ರಾಯರು

‘ಕಾಶೀಮಾ, ಅವಗ ಸಿಟ್ಟು ಬಂದಾಗ ಅಲ್ಲಿ ಇಲ್ಲಿ ಹೋಗಿ ಮಲಗೋದು ಬ್ಯಾಡ. ನಮ್ಮ ಹಿತ್ತಲದಾಗಿನ ಜಾಲೀಗಿಡಾನೆಲ್ಲಾ ಕಡದು ಒಂದು ಸಣ್ಣ ಮನೀ ಕಟ್ಟು. ಸಿಟ್ಟು ಸೆಡವು ಬಂದಾಗ ಅಂವ ಅಲ್ಲೇ ಹೋಗಿ ಮಲಕೊಳ್ಳಲಿ’ ಅಂದರು.

ಕಾಶೀಂಸಾಬನಿಗೆ ಹಿತ್ತಲಲ್ಲಿಯ ಜಾಲಿಗಿಡಗಳ ಮೇಲೆ ಅಪಾರ ಪ್ರೀತಿ. ಜಾಲೀಗಿಡಗಳ ಕಪ್ಪನೆಯ ಬೊಡ್ಡೆಗಳ ಮೇಲಿನ ಬಿಳಿ ಬುಳುಸು, ಹಳದಿ ಅಂಟು ಸೇರಿ ಒಳ್ಳೆ ಕುಸುರಿ ಕೆಲಸ ಮಾಡಿದಂತೆ ಕಾಣುತ್ತಿತ್ತು. ಮೆತ್ತನ್ನ ರೇಶಿಮೆಯಂಥ ಹಳದಿ ಹೂವು, ಮೈತುಂಬ ಬಿಟ್ಟ ಬೂದು ಬಣ್ಣದ ಕಾಯಿ ಇವುಗಳಿಂದ ಸೂಸುವ ಒಂದು ರೀತಿಯ ಪರಿಮಳ ಕಾಶೀ೦ಸಾಬನಿಗೆ ಬಹಳೇ ಇಷ್ಟವಾಗುತ್ತಿತ್ತು. ಅವುಗಳ ಮೇಲೆ ಎಷ್ಟೋ ಗುಬ್ಬಿ ಬಚ್ಚುಗಳು ಕಾಗೆ ಗೂಡುಗಳು ಇದ್ದವು. ಅವು ತಮ್ಮ ತಮ್ಮ ಮರಿಗಳಿಗೆ ಗುಟುಕು ಕೊಡುವ ದೃಶ್ಯ ಕಾಶೀಂಸಾಬನಿಗೆ ತುಂಬಾ ಹಿಡಿಸುತ್ತಿತ್ತು. ಮಧ್ಯಾಹ್ನ ಉಂಡು ಆ ಗಿಡಗಳ ನಡುವೆ ಸುತ್ತಾಡುತ್ತಿದ್ದ. ಅಲ್ಲೇ ಸ್ವಲ್ಪ ಹೊತ್ತು ನಿದ್ದೆ ಮಾಡುತ್ತಿದ್ದ.

ದೊಡ್ಡ ರಾಯರು ಜಾಲೀಗಿಡಗಳನ್ನೆಲ್ಲ ಕಡಿ ಅಂತ ಹೇಳಿದರೂ ಕಾಶೀ೦ಸಾಬನಿಗೆ ಅವನ್ನು ಕಡಿಯಲು ಮನಸ್ಸು ಬಾರದೆ, ಮುಂದೆ ಇದ್ದ ಸ್ವಲ್ಪ ಬಯಲು ಜಾಗದಲ್ಲೇ ಒಂದು ಸಣ್ಣ ಮನೆ ಕಟ್ಟಿದ. ಜಾಲೀಗಿಡದ ಹಿತ್ತಲಕ್ಕೂ, ಅವನೇ ಕಟ್ಟಿದ ಆ ಮನೆಗೂ ಇದ್ದ ನಂಟಿನಿಂದಾಗಿ ಎಲ್ಲರೂ ಅವನನ್ನು ಹಿತ್ತಲಮನಿ ಕಾಶೀ೦ಸಾಬ ಎಂದೇ ಕರೆಯುತ್ತಿದ್ದರು.

ಮುಂದೆ ಕೆಲವು ದಿನಗಳಲ್ಲಿ ಶಾಮಣ್ಣನಿಗೆ ಮದುವೆಯಾಯಿತು. ರಂಗರಾಯರು ತೀರಿಕೊಂಡದ್ದರಿಂದ ಮನೆಯಲ್ಲಿ ಹಿರಿಯರು ಇಲ್ಲದಂತಾಯಿತಲ್ಲ ಅಂತ ಶಾಮಣ್ಣ ಮತ್ತು ಶಾಂತಾಬಾಯಿಗೆ ಬಹಳ ದುಃಖವಾಯಿತು. ಕಾಶೀಂಸಾಬನೇ ಅವರಿಗೆ ಸಮಾಧಾನ ಹೇಳಿದ.

ಕಾಶೀ೦ಸಾಬ ಯಾವಾಗಲೂ ನಗುನಗುತ್ತ ಎಲ್ಲರಿಗೂ ಕೈಲಾದ ಸಹಾಯ ಮಾಡುತ್ತ ಊರಿಗೇ ಬೇಕಾದವನಾಗಿದ್ದ. ಯಾರಿಗೆ ಏನೇ ಕಷ್ಟ ಬಂದರೂ ಆತನ ಮುಂದೆ ಹೇಳಿಕೊಂಡು ತಮ್ಮ ದುಃಖ ಕಡಿಮೆ ಮಾಡಿಕೊಳ್ಳುತ್ತಿದ್ದರು. ಆತನ ಹೆಂಡತಿ ಕಾಶೀಂಬಿಯೂ ಅಂಥ ಸ್ವಭಾವದವಳೇ ಆಗಿದ್ದಳು.

ಅವರಿಗೆ ಮಕ್ಕಳೇ ಇರಲಿಲ್ಲ. ಆದರೂ ಊರಿನ ಮಕ್ಕಳೆಲ್ಲ ಅವರವೇ ಆಗಿದ್ದವು. ಮಕ್ಕಳು ಬಿಡದೇ ಅಳುತ್ತಿದ್ದರೆ ‘ಕಾಶಿಂಬಿ ಹಂತ್ಯಾಕ ಕೊಡ್ರಿಬೆ. ಆಕೀ ಕೈಯಾಗ ಅಂತಾದ್ದೇನೈತೋ ಏನೋ, ಮಕ್ಕಳು ಸುಮ್ಕಾಗಿ ನಿದ್ದಿ ಮಾಡಿಬಿಡತಾವು’ ಅಂತ ಓಣ್ಯಾಗಿನ ಹೆಣ್ಣುಮಕ್ಕಳು ಅನ್ನುತ್ತಿದ್ದರು.

ಇಂಥಾ ಕಾಶೀಂಬಿ ಮುಂದೆ ಬಹಳ ದಿನ ಬದುಕಿ ಉಳಿಯಲಿಲ್ಲ. ಕಾಶೀಂಸಾಬನಿಗೆ ಬಹಳೇ ದುಃಖವಾಯಿತು. ಹೆಂಡತಿ ಇಲ್ಲದ ಮನೆಯಲ್ಲಿ ಇರಲಾಗದೇ ಕಾಶೀಂಸಾಬ ರಾಯರ ಜಾಲೀಗಿಡದ ಹಿತ್ತಲಲ್ಲಿಯೇ ಒಂದು ಗುಡಿಸಿಲನ್ನು ಹಾಕಿಕೊಂಡ. ಲೆಕ್ಕಿಗಿಡಗಳನ್ನು ಸುತ್ತಲೂ ನೆಟ್ಟು ನೆರಿಕಿ ಕಟ್ಟಿದ. ಮೇಲೆ ಇಳಿಜಾರಿನ ಚಪ್ಪರ ಹಾಕಿ ಅದರ ಮೇಲೆ ಬಂದರಿಕಿ ಸೊಪ್ಪು ಹೊದಿಸಿ, ಬಾದೀ ಹುಲ್ಲು ಹರಡಿ, ಮೇಲೆ ಹಗುರವಾಗಿ ಮೇಲ್ಮುದ್ದಿ ಹಾಕಿ ‘ಗಾಳಿಗೆ ಹಾರದ್ಹಾಂಗ, ಮಳೀಗೆ ಸೋರದ್ಹಾಂಗ’ ಚಾಟು ಮಾಡಿಕೊಂಡು ಅಲ್ಲೆ ಇರತೊಡಗಿದ.

ಶಾಂತಾಬಾಯಿಗೆ ಸಾಲಾಗಿ ನಾಲ್ಕು ಹೆಣ್ಣುಮಕ್ಕಳು ಹುಟ್ಟಿದ್ದರಿಂದ ಗಂಡು ಮಗು ಆಗಲಿಲ್ಲವಲ್ಲ ಅಂತ ಶಾಮಣ್ಣ ‘ನಾ ಇನ್ನೊಂದು ಲಗ್ನ ಮಾಡಿಕೋತೀನಿ’ ಅಂತ ಹೇಳಿದರು. ಇದನ್ನು ಕೇಳಿ ಶಾಂತಾಬಾಯಿಗೆ ಚಿಂತೆ ಶುರುವಾಯಿತು.

ತಮ್ಮ ಮನೆಯ ಪಡಸಾಲೆಯಲ್ಲಿ ಕಂಬಕ್ಕೆ ಒರಗಿ ಕುಳಿತು ಯೋಚಿಸುತ್ತಿದ್ದಾಗ ಮನೆಯ ಆಳು ಕಾಶೀಂಸಾಬ ಹೊಲದಿಂದ ಬಂದು

‘ಯಾಕ್ ಅಳಾಕ ಹತ್ತೀರಿ, ಅವ್ವಾರ’ ಅಂತ ಕೇಳಿದ.

‘ಏನ್ ಹೇಳ್ಲೆಪ್ಪ, ಎಲ್ಲಾ ನನ್ನ ಹಣೇಬರಾ. ಬರೇ ನಾಕು ಹೆಣ್ಣು ಹುಟ್ಟಿದವು ಅಂತ ರಾಯರು ಇನ್ನೊಂದ್ ಲಗ್ನ ಮಾಡಿಕೋತೀನಿ ಅಂತಾರ. ಕನ್ಯಾನೂ ನೋಡ್ಲಿಕ್ಕೆ ಹತ್ತ್ಯಾರ. ಅಂದ ಮ್ಯಾಲೆ ನಾ ಅಳದ ಇನ್ನೇನು ಮಾಡ್ಲಿ, ಹೇಳು. ನನಗಂತೂ ಯಾರದೂ ಬಲ ಇಲ್ಲ. ಅವರು ಇನ್ನೊ೦ದ್ ಲಗ್ನ ಮಾಡಿಕೊಂಡ್ ಬಿಟ್ರ ನನ್ನ ಗತಿ ಅಧೋಗತಿ!’ ಅಂತ ತಂದೆಯ ವಯಸ್ಸಿನ ಕಾಶೀಂಸಾಬನನ್ನು ನೋಡಿ ಹೇಳಿದರು.

ಈ ಮಾತು ಕೇಳಿ ಕಾಶೀಂಸಾಬನಿಗೆ ದುಃಖವಾಯಿತು.

‘ಅವ್ವಾರ, ನೀವು ಅಳಬ್ಯಾಡ್ರಿ. ನಾ ಅದೀನಿ. ಸಣ್ಣ ರಾಯರಿಗೆ ಹೇಳ್ತೀನಿ.’ ಅಂತ ಧೈರ್ಯ ಹೇಳಿದ.

‘ನೀ ನನ್ನ್ ಪಾಲಿನ ದೇವರಿದ್ಹಾಂಗ ಇದ್ದೀ ನೋಡಪಾ. ಎಷ್ಟ”ಕಷ್ಟ ಬರ್ಲಿ ಧೈರ್ಯ ಹೇಳ್ತೀ. ಹೇಳಿದ ಹಾಂಗ ಮಾಡಿಯೂ ಮಾಡ್ತೀ. ನಿನ್ನ”ನಂಬೀನಿ. ಇನ್ನೊಂದ್ ಲಗ್ನ ಬ್ಯಾಡ ಅಂತ ಅವರಿಗೆ ಹೇಳು.’

ಒಂದು ದಿನ ಕಾಶೀಂಸಾಬ ಶಾಮಣ್ಣನ ಹತ್ತಿರ ಮಾತಾಡುತ್ತ

‘ರಾಯರ”ನಂದೊಂದು ಮಾತು ನಡಸಿ ಕೊಡ್ತೀರಾ’ ಅಂತ ಕೇಳಿದ.

‘ಹೇಳಪಾ, ನಿನ್ ಮಾತು ಕೇಳದ ನಾ ಇನ್ಯಾರ ಮಾತು ಕೇಳಬೇಕು’ ಅಂತ ರಾಯರು ಅಂದ ಕೂಡಲೇ

‘ಆಮ್ಯಾಕ ನೀವು ಇಲ್ಲ ಅನಬಾರದು!’

‘ಇಲ್ಲಪಾ, ಹೇಳು’

‘ನೀವು ಇನ್ನೊಂದು ಮದಿವಿ ಮಾಡಿಕೊಂತೀರಿ ಅಂತ ಅವ್ವಾರು ಹೇಳಿದ್ರು. ಯಾಕ?’

‘ಗಂಡು ಮಗ ಬೇಕಂತ ನನಗ ಆಶಾ ಇಲ್ಲೇನು? ನೀನೇ ಹೇಳು ಕಾಶೀಂಸಾಬ’

‘ನೋಡೆರ”ನೋಡ್ರಿ, ರಾಯರ. ಈ ಬಾರಿ ಅವ್ವಾರ ಹೊಟ್ಟ್ಯಾಗ ಗಂಡು ಮಗ ಆಕ್ಕಾನ. ಈ ಮನಿಗಾಗಿ ನಾ ಈಟೆಲ್ಲ ಮಾಡೀನಿ. ಇದೊಂದು ನನ್ನ ಮಾತು ನಡೀತೈತೋ ಇಲ್ಲೋ ನೋಡೇ ಬಿಡ್ತೀನಿ. ಪ್ರಾಣಾನಾದ್ರು ಕೊಟ್ಟು ನನ್ ಮಾತು ಉಳಿಸಿಕೊಂತೀನಿ. ನೀವು ಇನ್ನೊಂದ್ ಮದಿವಿ ಮಾಡಿಕೊಣ್ಣಾಂಗಿಲ್ಲಾಂತ ನನಗ ವಚನಾ ಕೊಡಬೇಕು.’

‘ಆಗಲೆಪಾ, ನಿನ್ ಮಾತಿನ್ಹಾಂಗ ನನಗೊಬ್ಬ ಮಗ ಹುಟ್ಟಿದರ ಸಾಕು. ಇನ್ನೊಂದ್ ಲಗ್ನ ಯಾರಿಗೆ ಬೇಕು?’ ಎಂದ ರಾಯರ ಮಾತು ಕೇಳಿ ಕಾಶೀಂಸಾಬನಿಗೆ ಹಿಡಿಸಲಾರದಷ್ಟು ಸಂತೋಷವಾಯಿತು.

‘ರಾಯರ, ಇದರಾಗ ನಂದೂ ಒಂದ್ ಸ್ವಾರ್ತ್ ಐತಿ. ನನ್ ಮಾತು ಕೇಳಿ ನೀವು ನಗಬ್ಯಾಡ್ರಿ ಮತ್ತ!’ ಅಂದ.

‘ಇಲ್ಲ. ಅದೇನ್ ಹೇಳಪಾ’ ಶಾಮಣ್ಣ ಕೇಳಿದ.

‘ನನಗಂತೂ ಹಿ೦ದಿಲ್ಲ ಮುಂದಿಲ್ಲ. ಮಕ್ಕಳಿಲ್ಲ ಮರಿಯಿಲ್ಲ. ಆದ್ರ ನನ್ ಹೆಸರು ಉಳೀಬೇಕು ಅಂತ ಬಾಳ ಆಶಾ ಐತಿ. ನಿಮಗ ಈಗ ಹುಟ್ಟೋ ಗಂಡು ಮಗ್ಗ ನನ್ನ ಹೆಸರ”ಇಡಬೇಕು. ತೊಟ್ಟಲದಾಗ”ನನ್ ಹೆಸರಿಟ್ಟು ಅಮ್ಯಾಕ ನೀವು ಬ್ಯಾರೆ ಹೆಸರು ಕರಕೊಳ್ರಿ. ಇದೊಂದ್ ಮಾತು ನೀವು ನಡಸಿಕೊಡಾಕ”ಬೇಕು.’ ಅಂತ ಕಾಶೀಂಸಾಬ ಕೈಮುಗಿದು ಕೇಳಿಕೊಂಡ.

‘ಈಗ”ಯಾಕ ನೀ ಸಾಯೋ ಮಾತು ಆಡ್ತೀ? ನೀ ಇನ್ನೂ ಒಂದಿಷ್ಟು ದಿವಸ ಬದಕಬೇಕು. ನಾ ಸಣ್ಣಾಂವಿದ್ದಾಗಿಂದ ನೀ ಜ್ವಾಕಿ ಮಾಡೀದಿ. ನನ್ ಹೊಟ್ಟ್ಯಾಗ”ನೀ ಹುಟ್ಟಿ ಬರತೀದಿ ಅಂದರ ಇದಕಿಂತ ಸಂತೋಷ ಬ್ಯಾರೆ ಏನದ? ನನ್ ಮಗ್ಗ ನಿನ್ ಹೆಸರು ಇಟ್ಟ”ಇಡ್ತೀನಿ.’ ಎಂದು ರಾಯರು ಮಾತು ಕೊಟ್ಟರು.

ಕಾಶೀಂಸಾಬ ಖುಶಿಯಿಂದ ಓಡುತ್ತ ಮನೆಗೆ ಬಂದು ಶಾ೦ತಾಬಾಯಿಯನ್ನು ನೋಡಿ

‘ಅವ್ವಾರ, ರಾಯರು ನನಗ ವಚನಾ ಕೊಟ್ಟಾರ. ನಿಮ್ಮ ಚಿಂತಿ ದೂರಾತು. ಇನ್ನ ಆರಾಂ ಇರ್ರಿ.’ ಅಂತ ಧೈರ್ಯ ಹೇಳಿ ‘ಗಡಾನ ಒಂದ್ ಕಪ್ ಚಾ ಕಾಶಿ ಕೊಡ್ರಿ.’ ಅಂದ.

‘ಎಂಥಾ ಛೊಲೋ ಸುದ್ದೀ ಹೇಳೀದಿ. ನಿನಗ ಬರೇ ಛಾ ಏನು? ಹೋಳಿಗೀ” ಮಾಡಿ ಕೊಡಬೇಕು.’ ಅಂತ ಖುಶಿಯಿಂದ ಶಾಂತಾಬಾಯಿ ಹೇಳಿದರು.

ಮುಂದೆ ಕೆಲವು ದಿನಗಳಲ್ಲಿ ಕಾಶೀಂಸಾಬ ಅರಾಮು ಇಲ್ಲದೆ ಹಾಸಿಗೆ ಹಿಡಿದ. ಅಂಥ ಪರಿಸ್ಥಿತಿಯಲ್ಲೂ

‘ಈ ಮನಿ ಉಳಸಾಕ” ಬೇಕು. ಈ ಮನೀಗೊಂದು ಗಂಡು ಮಗ ಹುಟ್ಟಾಕ” ಬೇಕು. ನನ್ನ ಪ್ರಾಣ ಕೊಟ್ಟರೂ ಸೈ.’ ಅಂತ ಕನವರಿಸುತ್ತಿದ್ದ.

ರಾಯರು, ಅವ್ವಾರು ಅವನ ಗುಡಿಸಲಿನಲ್ಲಿಯೇ ಅವನಿಗೆ ಚಹಾ, ಗಂಜಿ ಒಯ್ದು ಕೊಡುತ್ತಿದ್ದರು. ಆದರೆ ಕಾಶೀಂಸಾಬನ ಆಯುಷ್ಯ ತೀರಿತ್ತು. ಒಂದು ದಿನ ಕಾಶೀಂಸಾಬ ತೀರಿಕೊಂಡು ಬಿಟ್ಟ.

‘ಈ ಮನೀ ಸಲುವಾಗಿ ಕಾಶೀಂಸಾಬ ಅದೆಷ್ಟು ಕಳಕಳಿಯಿಂದ ಸೇವಾ ಮಾಡಿದ! ಸಾಯೋ ತನಕ ಈ ಮನೀ ಉಳಸಬೇಕು ಅಂದುಕೋತಾ” ಪ್ರಾಣಾ ಬಿಟ್ಟ.’ ಅಂತ ರಾಯರಿಗೆ ಬಹಳ ದುಃಖವಾಯಿತು. ಶಾಂತಾಬಾಯಿಯೂ

‘ನನಗ ತಂದೀ ಹಾಂಗ ಕಾಳಜೀ ಮಾಡ್ತಿದ್ದ. ಅಂಥಾವನ್ನ ಕಳಕೊಂಡುಬಿಟ್ಟೆವಲ್ಲ’ ಅಂತ ದುಃಖಿಸಿದಳು.

‘ಈ ಮುದುಕ ನನ್ನ ಕೈಲೆ ವಚನಾ ತೊಗೊಂಡು ಒಳ್ಳೇ ಇಕ್ಕಟ್ಟಿನ್ಯಾಗ ಸಿಗಿಸಿ ಬಿಟ್ಟ. ಅವನ ಮಾತು ಮೀರಿ ಒಂದು ವೇಳೆ ಲಗ್ನ ಮಾಡಿಕೊಂಡರೂ ಗಂಡ” ಹುಟ್ಟತದ ಅಂತ ಏನು ಗ್ಯಾರಂಟಿ? ನನ್ನ ಬಂಗಾರದಂಥಾ ಹೇಣ್ತೀಗೆ ಅನ್ಯಾಯ ಮಾಡಿದ್ಹಾಂಗ ಆಗ್ತದ. ಹೋಗಲಿ ಬಿಡು. ಕಾಶೀಂಸಾಬನ ಮಾತೂ ನಡಸಿ ಕೊಟ್ಟಾಂಗಾಗ್ತದ; ಹೇಣ್ತಿಗೂ ನನ್ ಮ್ಯಾಲೆ ಪ್ರೀತಿ ಉಳೀತದ’ ಅಂತ ಶಾಮಣ್ಣ ಸುಮ್ಮನಾಗಿ ಬಿಟ್ಟ.

ಮುಂದೆ ವರ್ಷ ತು೦ಬುವಷ್ಟರಲ್ಲಿ ಗಂಡಸು ಮಗ ಹುಟ್ಟಿದ. ಇದು ಕಾಶೀಂಸಾಬನ ಆಶೀರ್ವಾದ ಅಂತ ಗಂಡ ಹೆಂಡತಿ ಇಬ್ಬರೂ ತಿಳಿದುಕೊಂಡರು. ಹೆಸರಿಡುವ ಹೊತ್ತಿಗೆ ರಾಯರಿಗೆ ಧರ್ಮ ಸಂಕಟಕ್ಕೆ ಇಟ್ಟುಕೊಂಡಿತು. ವಚನ ಕೊಟ್ಟಂತೆ ಮಗನಿಗೆ ಕಾಶೀಂಸಾಬ ಅಂತ ಹೆಸರು ಇಡೋದು ಹ್ಯಾಂಗ? ‘ಈಗಂತೂ ರಂಗಣ್ಣ ಅಂತ ನಮ್ಮ ಅಪ್ಪನ ಹೆಸರನ್ನಿಡೋಣ’ ಎಂದು ಸಮಾಧಾನ ಹಚ್ಚಿಕೊಂಡರು.

ಆದರೆ ಕಾಶೀ೦ಸಾಬ ರಾಯರ ಮತ್ತು ಅವ್ವಾರ ಕನಸಿನಲ್ಲಿ ಬಂದು ‘ನನ್ ಹೆಸರಿಡೋದು ಮರತ” ಬಿಟ್ರಿ’ ಅ೦ತ ನೆನಪಿಸುತ್ತಿದ್ದ. ರಾಯರು ಅದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ.

ಆದರೆ ಶಾಂತಾಬಾಯಿಗೆ ಮಾತ್ರ ‘ನಾವು ತಪ್ಪು ಮಾಡಿದಿವಿ’ ಅನ್ನಿಸುತ್ತಿತ್ತು. ‘ಇನ್ನೊಂದು ಗಂಡು ಮಗ ಹುಟ್ಟಲಿ. ಅದಕ್ಕ ತಪ್ಪದ ನಿನ್ನ ಹೆಸರ್ನ”ಇಡತೀವಿ.’ ಅಂತ ಮನಸ್ಸಿನಲ್ಲೆ ಕೇಳಿಕೊಳ್ಳುತ್ತಿದ್ದರು.

ಮಗ ಬೆಳೆಯುತ್ತಿದ್ದ, ಆದರೆ ಆರೋಗ್ಯದಿಂದಲ್ಲ. ಯಾವಾಗಲೂ ಜಡ್ಡಿನಿಂದ ನೆರಳುತ್ತಿದ್ದ.

‘ಯಾಕ ಹಿಂಗಾಗ್ತಿದ್ದೀತು? ಕಾಶೀಂಸಾಬ ಏನಾದರೂ ಕಾಡ್ತಿದ್ದಾ”?’ ಅಂತ ಶಾಂತಾಬಾಯಿ ಅಂದಾಗ ರಾಯರಿಗೆ ಸಿಟ್ಟು ಬ೦ತು.

‘ಅಂವ ಯಾಕ ಕಾಡ್ತಾನ? ಅಂಥಾ ಮನಶ್ಯಾ ಅಲ್ಲ. ಅಂವ ದೇವರಾಗಿ ಹೋಗ್ಯಾನ.’ ಅಂತ ಸಮಾಧಾನ ಹೇಳಿದರಾದರೂ ಶಾಂತಾಬಾಯಿಯ ಮನಸ್ಸಿನಲ್ಲಿ ಅಳುಕು ಇದ್ದೇ ಇತ್ತು.

ಮುಂದೆರಡು ವರ್ಷ ಕಳೆಯುವಷ್ಟರಲ್ಲಿ ಶಾಂತಾಬಾಯಿ ಮತ್ತೆ ಬಸಿರಿ ಆದರು.

‘ಈ ಸರ್ತೇ ಗಂಡು ಹುಟ್ಟಿದರ ತಪ್ಪದ”” ಕಾಶೀಂಸಾಬನ ಹೆಸರು ಇಡಲಿಕ್ಕೇ ಬೇಕು. ಅಂವ ಪ್ರಾಣಾ ಕೊಟ್ಟು ತನ್ನ ಮಾತು ಉಳಿಸಿಕೊಂಡಾನ. ನಾವು ನಮ್ಮ ಮಾತು ಉಳಿಸಿಕೊಳ್ಳದಿದ್ದರ ಹ್ಯಾಂಗ? ಇಲ್ಲಾಂದ್ರ ಅವನ ಆಶಾ ತೀರೂದುಲ್ಲ.’ ಅಂತ ಶಾಂತಾಬಾಯಿ ಅಂದಾಗ ರಾಯರು

‘ಹೌದು, ಹೌದು. ಈ ಸರ್ತೀ ಮರೆಯೋ ಹಾಂಗಿಲ್ಲ.’ ಅಂದರು.

ಶಾಂತಾಬಾಯಿಗೆ ದಿನದಾಗ ಬಿತ್ತು. ರಾಯರು ಏನೋ ಅರ್ಜೆಂಟ್ ಕೆಲಸದ ನಿಮಿತ್ತ ಊರಿಗೆ ಹೋಗಬೇಕಾಗಿ ಬಂತು. ‘ದಿನ ತುಂಬಿದ ಬಸಿರಿಯನ್ನ ಬಿಟ್ಟು ಹ್ಯಾಂಗ ಹೋಗೋದು?’ ಅಂತ ಚಿಟಬರಿಸುತ್ತಲೇ ಹೊರಟರು. ಹೋಗುವಾಗ ಸೂಲಗಿತ್ತಿ ಎಲ್ಲವ್ವನಿಗೂ ಹೇಳಿ ಹೋದರು.

ಆದರೆ ಅವತ್ತೇ ರಾತ್ರಿ ಶಾಂತಾಬಾಯಿಗೆ ಹೊಟ್ಟೆನೋವು ಶುರುವಾಯಿತು. ‘ರಾಯರು ಬ್ಯಾರೆ ಊರಾಗಿಲ್ಲ. ಹ್ಯಾಂಗ ಮಾಡ್ಲೆಪ್ಪಾ ದೇವರ”’ ಅಂತ ಸೂಲಗಿತ್ತಿಯನ್ನು ಕರೆತರಲು ಆಳುಮಗನನ್ನು ಕಳಿಸಿದರು.

ಬ್ಯಾನಿ ತಡೆಯಲಾರದೆ ಮನೆಯಲ್ಲೇ ಅತ್ತಿಂದಿತ್ತ ಅಡ್ಡಾಡುತ್ತಿದ್ದರು. ನೋವು ಹೆಚ್ಚಾದಂತೆ ಮನೆಯಲ್ಲಿ ನಿಲ್ಲಲಿಕ್ಕೆ ಆಗಲಿಲ್ಲ. ಬ್ಯಾನಿ ತಿನ್ನುತ್ತಲೇ ಹಿತ್ತಲಕ್ಕೆ ಹೋದರು. ಯಾರೋ ಬಂದು ಅವರನ್ನು ಕೈಹಿಡಿದು ಕರೆದುಕೊಂಡು ಹೋದಂತಾಯಿತು. ಹುಣ್ಣಿವೆ ಮುಂದಿನ ಬೆಳದಿ೦ಗಳು ಹಿತ್ತಲ ತುಂಬೆಲ್ಲ ಹಾಲು ಚೆಲ್ಲಿದಂತೆ ಹರಡಿತ್ತು. ತಣ್ಣನ್ನ ಗಾಳಿ ಬೀಸುತ್ತಿತ್ತು. ಇದೆಲ್ಲ ಆಕೆಗೆ ಹಿತವೆನಿಸಿತು. ‘ಎಲ್ಲಾ ಸುಕವಾಗಿ ಆಗ್ತೈತಿ. ದೈರ್ಯವಾಗಿರಿ’ ಅಂತ ಕಾಶೀಂಸಾಬನ ಧ್ವನಿ ಕೇಳಿಸಿದಂತಾಯಿತು. ಶಾಂತಾಬಾಯಿ ಸುತ್ತಲೂ ನೋಡಿದಳು. ಯಾರೂ ಇರಲಿಲ್ಲ.

ನೋವು ಹೆಚ್ಚಾಗಿ ನಿಲ್ಲಲಿಕ್ಕೂ ಆಗದೆ ಜಾಲಿಯ ಗಿಡದ ಕೆಳಗೆ ಕುಳಿತುಕೊಂಡು ಬಿಟ್ಟಳು.

ಸೂಲಗಿತ್ತಿ ಅಡಬರಿಸಿಕೊಂಡು ಬಂದು ‘ಅವ್ವಾರು ಎಲ್ಲದಾರ?’ ಅಂತ ಮಕ್ಕಳನ್ನು ಕೇಳಿದಳು.

‘ಅವ್ವ ಹಿತ್ತಲಕ್ಕ ಹೋಗ್ಯಾಳ.’ ಎಂದು ಮಕ್ಕಳು ಹೇಳಿದ ಕೂಡಲೇ

‘ಅಯ್ಯ ಶಿವನೇ, ಹಿಂತಾ ಹೊತ್ನ್ಯಾಗ ಅಲ್ಲ್ಯಾಕ ಹೋದರ”” ಯವ್ವ?’ ಎಂದು ಓಡುತ್ತ ಹಿತ್ತಲಕ್ಕೆ ಬಂದು ನೋಡುವ ಹೊತ್ತಿಗೆ ಶಾಂತಾಬಾಯಿಗೆ ಸುಖವಾಗಿ ಹೆರಿಗೆ ಆಗಿಯೇ ಹೋಗಿತ್ತು. ಜಾಲಿ ಗಿಡದ ಕೆಳಗೆ ಗಂಡು ಕೂಸು ಹುಟ್ಟಿಯೇ ಬಿಟ್ಟಿತ್ತು. ಸೂಲಗಿತ್ತಿ ಕೂಸು ಬಾಣ೦ತಿಯನ್ನು ಮನೆಯೊಳಗೆ ಕರೆದುಕೊಂಡು ಬಂದಳು.

ಮರುದಿನ ರಾಯರು ಊರಿಂದ ಬಂದು ಕೂಸು ಬಾಣಂತಿಯನ್ನು ನೋಡಿ ನಗುತ್ತ

‘ಅಂತೂ ಕಾಶೀಂಸಾಬ ತನ್ನ ಪ್ರೀತಿಯ ಹಿತ್ತಲದಾಗ”ಹುಟ್ಟಿ ತನ್ನ ಆಶಾ ತೀರಿಸಿಕೊಂಡ ಅನ್ನು.’ ಅಂದರು.

‘ಇನ್ನೂ ಆತನ ಆಶಾ ತೀರಿಲ್ಲ. ತೊಟ್ಟಲದಾಗ ಆತನ ಹೆಸರಿಟ್ಟ ಮ್ಯಾಲ” ಆತನ ಆತ್ಮಕ್ಕ ಶಾಂತಿ ಸಿಗೋದು’ ಶಾಂತಾಬಾಯಿ ಹೇಳಿದರು.

ಕೂಸಿಗೆ ತೊಟ್ಟಿಲದಾಗ ‘ಹಿತ್ತಲಮನಿ ಕಾಶೀಂಸಾಬ’ ಅಂತನ”” ಹೆಸರಿಟ್ಟರು. ಕರೆಯುವದಕ್ಕೆ ಕೃಷ್ಣ ಎಂದು ಇನ್ನೊಂದು ಹೆಸರಿಟ್ಟರು.

ಕಾಶೀಂಸಾಬನ ಆಶೆ ತೀರಿತು. ಅಂದಿನಿಂದ ಮುಂದೆ ಅವನು ಯಾರ ಕನಸಿನಲ್ಲಿಯೂ ಬರಲಿಲ್ಲ.
*****
೦೮-೧೨-೨೦೦೫

ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.