ಬರಿಗೊಡಗಳು

ಕನಸಿನೊಳಗೆ ಬುಳು ಬುಳು ಸುರಿದದ್ದಾಗಲೀ ಬೆಳಕು ಹರಿದದ್ದಾಗಲೀ ತಡ ಆಗಲಿಲ್ಲ. ನಲ್ಲಿ ಗುಂಡಿಯೊಳಗೆ ಬಗ್ಗಿ ಕೊಡ ಎತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ವಡ್ದರ ತಿಮ್ಮಿಯ ಹುಂಜ ಊರು ಮಾಡೋ ಗೌಡನ ತಿಪ್ಪೆಯ ಬಂಗಾರದ ಶಿಖರದ ಮೇಲೆ ನಿಗುರಿ ನಿಂತು ಕೊಕ್ಕೋಕ್ಕೋ”” ಎಂದು ಕೂಗಿದ್ದೇ ಸೊಂಟ ಚಳಕ್ ಅಂದಂಗಾಯಿತು. ಅದಕ್ಕೆದ್ದು ಆಕೆ ಯವ್ವೋ”” ಎಂದು ನಳಿದೇಟಿಗೆ ಯ್ಯೋನಾತೆವ್ವಾ… ಯ್ಯೋನು ಬುಟ್ತವ್ವಾ ಅಂತ ಪರಾಂಬರಿಸುತ್ತ ಎಲ್ಲರೂ ಒಬ್ಬೊಬ್ಬರಾಗಿ ಎದ್ದರು. ದಿಕ್ಕುದಿಕ್ಕಿಗೊಂದರಂತೆ ಅಂಗಾಂಗ ಚೆಲ್ಲಿ ಅಂಡಾರವನ ಮಲಗಿಕೊಂಡಿದ್ದ ಏಳೆಂಟು ಮಂದಿ ಮಕ್ಕಳು ಮರಿ ಎದ್ದ ನಂತರವೇ ಆ ಮನೆಯು ಸರ್ವಾನ್ನೊಂದು ರೀತಿಯಲ್ಲಿ ಶಾಬ್ದಿಕ ಕಳೆಯಿಂದ ಹೊಳೆಯತೊಡಗಿತು. ಅದರದ್ದು ನೆಕ್ಕಬೇಕು ಇದರದ್ದು ನೆಕ್ಕಬೇಕೂಂತ ಶ್ವಾನಗಳು ಸಿಂಹಗಳೋಪಾದಿಯಲ್ಲಿ ಬಂದರೆ ಕಾಕರಾಜರುಗಳು ಕಾ”ಕಾ””” ಎಂದು ರಾಗಾಲಾಪನೆ ಮಾಡುತ್ತ ಎಲ್ಲಂದರಲ್ಲಿ ಕೂತುಕೊಂಡವು. ನನ್ದ್ಯಾವ್ರು ಸುಡುಗಾಘಿಗೋಯ್ತಾನೋ””” ವದಕನ ಬ್ವಗ್ಳಿ ಬ್ವಗ್ಳೀ ಮಯ್ಯೆಂಬೋದು ಸುಣ್ಣದ ಭಟ್ಟೀ ಆಗೈತೆ. ಯಿವತ್ತವರವ್ರ ಉಚ್ಚೇನ ಅವರವ್ರ ಕುಡಕಂಡ್ರು ಚಿಂತಿಲ್ಲ… ನಾನ್ಮಾತ್ರ ಸೀನೀರ್‌ತಲಾಕೋಗೋದಿಲ್ಲ…ದನಕ್ಕಿಂತ ಅತ್ತತ್ತ ಆದ್ನೆ…ಸಿವ್ ಸಿವಾ”” ಯ್ಯೋನು ಕರುಮಾ ಮಾಡಿದ್ನೇ ಈ ಮನೀಗ್ ಸ್ವಸಿ ಆಗಿ ಬರಲಾಕೋ ಎಂದು ಮುಂತಾಗಿ ಚಿನ್ನವ್ವ ಅರುಣೋಡಯವನ್ನೇ ತರಾಟೆ ತೆಗೆದುಕೊಂಡಳು. ಒಂದು ತಂಬಿಗೆ ಕುಡಿಯೋ ನೀರಿಗೆ ಸಂಬಂಧಿಸಿದಂತೆ ಗಂಡಗೂ ತನಗೂ ರಾತ್ರಿ ನದೆದು ಅರ್ಧಕ್ಕೆ ನಿಂತಿದ್ದ ಜಗಳವನ್ನು ಮುಂದುವರಿಸುವ ಉದ್ದೇಶದಿಂದ ಘನವಾದ ಪೀಠಿಕೆ ಹಾಕುವ ದೃಷ್ಟಿಯಿಂದ ಆಕೆ ವಲವಾದ ಮಾತೆತ್ತಿಕೊಂಡಳು. ಒಂದು ಕಡೆ ಮುದುಕಿ ‘ಅಲಲಾ ನಮ್ಮೋವ್ನೆ”” ನಾವ್ನೆಲಾ ಯಿಡಕಂಡಿರೋ ವತ್ತಿಗೆಲ್ಲಾ ನೀನೀಟರ ಮಟ್ಟಿಗೆ ಮಾತಾಡ್ತಿರೋದು…’ ಎಂದು ಕಲ್ಡಬತ್ತವನ್ನು ಎಂದಿಗಿಂತ ಗಟ್ಟಿಯಾಗಿ ಕುಟ್ಟ ತೊಡಗಿದರೆ ಇನ್ನೊಂದು ಮೂಲೆಯಲ್ಲಿ ಮುದುಕ ನಾನಿನ್ನೂಬೊದುಕದೀನಿ…ಕುಂಡ್ಯಾಗಿನ್ನೂ ಮಾವುಸ ಐತಿ…’ ಎಂದಷ್ಟೆ ಮಾತಾಡಿ ರವುಸದಿಂದ ಕೊಕ್‌ಕೊಕ್ಕಂತ ಕೆಮ್ಮತೊಡಗಿತು. ಗಂಡ ಬಸ್ಯ ಅಂಭೋನು ಈಗ ಮಾತೆತ್ತಿಕೊಳ್ಳಬಹುದು, ಆಗೆತ್ತಿಕೊಳ್ಳಾಬಹುದು ಅಂತ ಚಿನ್ನವ್ವ ಕಾದೇ ಕಾದಳು. ಎದ್ಹಾಸಿಗೇಲಿ ಎದ್ದು ಮೊಣಕಾಲ ಚಿಪ್ಪು ಎಂಬ ರತುನ ಸಿಮ್ಮಾಸನದ ಮೇಲೆ ತಲೆ ಅಂಬುದನ್ನಿಟ್ಟು ಕೊರೆ ಬೀಡಿ ಸುಡುತ್ತಲೂ ಡಬ್ಬಲ್ ಜೀರೋ ಬಂತೋ ಇಲ್ವೋ ಎಂದು ಯೋಚಿಸುತ್ತಲೂ ಕೂತಿದ್ದ ಅವನು ಹೆಂಡತಿಯ ಯಾವ ಮಾತನ್ನೂ ಕಿವಿಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಪಾಕೆಟ್ ಹಾಕಿದ್ದ ಕಾರಣಕ್ಕೆ ರಾತ್ರಿ ಇದ್ದ ರವುಸ ಈಗ ಇರಲಿಲ್ಲ. ತನ್ನದೇ ತನಗೆ ಮಸ್ತಾಗಿತ್ತು. ಗಂಡನತ್ತ ದುರುಗುಟ್ಟಿದಳು. ಯವ್ವೋ ಎಂದಳುತ್ತ ಮೊಲೆ ಜಿಬುರಲು ತೊಡೆ ಏರಿದ ಸೇಂದ್ರನನ್ನು ಅಯ್ ಮುದ್ಯೋನಾಗಿ…ಮಲಿ ಸೆಟ ಉಡುವಲ್ಲಿ…ಅಲ್ನೂಡ್ಯಾವಾ…ರಟ್ಟಿಸೆಟ್ನಿ ತಿಂಬಲಕ್ಯೋನ್ದಾಡಿ…ಎಂದು ಅಂದು ಝಾಡಿಸಿ ತಳ್ಳಲು ಅದು ಉರುಳೀಕೋತ ತನ್ನ ತಂದೆಯ ಕಾಲ ಬುಡಕ ಹೋಯಿತು. ಅದನ್ನಾತ ಎತ್ತಿಕೊಂಡು ರಮಿಸುತ್ತ ‘ಅಯ್ ಯಿದರ ಮ್ಯಾಕ್ಯಾಕ ತೋರುಸ್ತಿಯಬೇ, ನಿನ್ನ ಟೆಂಪರೂ”’ ಎಂದು ಮಾತಿಗೆ ಪುಟ ಕೊಟ್ಟನು. ಆಕೆಗೂ ಅಷ್ಟೇ ಬೇಕಾಗಿತ್ತು. ಕುಪ್ಪಳಿಸಿ ಎಗರಿ ಪತಿದೇವರ ಮುಂದೆ ನಿಂತು ಬಲಗೈಯನ್ನೇ ವಜ್ರಾಯುಧದಂತೆ ಝಳಪಿಸುತ್ತ ‘ಅಗಾ ಟೆಂಪರೂಗಿಂಪರಂತ ಮಾತಾಡ್ ಬ್ಯಾಡ್ನೋಡು…ಗೊಂಡುಸಾಗಿದ್ರೆ ನಿಸೂರಾಗಿ ಮಾತಾಡು…ಬ್ವಗ್ಳೀ ಬ್ವಗ್ಳೀ ನನ್ ಜೀವಾನೂ ರೋಸ್ಕಂಡೈತೆ.’ ಎಂದು ಬುಸುಗುಟ್ಟಿದಳು. ಮುದುಕಿ ಗಪ್ಪಂತ ತಂಬುಲದುಂಡೆಯನ್ನು ದವದೆಗ್ ಸೇರಿಸಿ‘ಯೋನ್ಯಾಲಾ ಬೊಂತಂತೀನಿ..’ ಎಂದಂದು ಒಂದಷ್ಟು ನಮಲಿ ‘ಗೊಂಡೆಂಬೋ ಕಬುರಿಲ್ದಂಗೆ ಮಾತಾಡಿದ್ರೆ ಆ ಸಿವಾ ಮೆಚ್ಚಾಕಿಲ್ಲವ್ವೋ’ ಅಂತ ಗೊಣಗಿತು.

ಏನೇ ಆದರೂ, ಎಷ್ಟೇ ಆದರೂ ಗಟ್ಟಿವಾಣೀ ಚೆನ್ನವ್ವನನ್ನು ತಡವುವ ಶಕ್ತಿ ಅವರಾರಿಗೂ ಇರಲಿಲ್ಲ. ಸುಮಾರು ಕಾಲದಲ್ಲಿ ಅವರು ತಿಪ್ಪೇ ಮೇಲೆ ಸಾರಿಸಿದಂತೆ ಮಾತಾಡ ಬಹುದಿತ್ತು. ಅದೇ ರಸ್ತೆಯ ಕೊನೀಕೆ ನಾಲ್ಕಾರು ಹಾರಿಕೆಯಲ್ಲಿ ಸಿಗುವ ಕುಸ್ತಿ ಕಾಳಪ್ಪನ ಹತ್ತಂಕಣದ ಮನೆಯೇ ಈಕೆಯ ತವರು. ಕನಸಲ್ಲಿ ಕೇಳಿದರೂ ಸಾವ್ರ ಕಿತ್ತುಕೊಡುವಂಥ ಶಕ್ತಿಯನ್ನು ಅವರು ಸಂಪಾದಿಸಿರುವರು. ಎಂಥ ಹೇಮಾಹೇಮಿಗಳನ್ನು ಮಣ್ಣುಪಾಲು ಮಾಡಿ ಇಡೀ ಊರಲ್ಲಿ ಪ್ರಚಂಡ ಜಗಳಗಂಟರೆಂದು ಹೆಸರು ಗಳಿಸಿರುವ ತಂದೆ ತಾಯಿಗಳು, ಬಾಳೆಗೊನೆಯಂಥ ತೋಳುಗಳ ಅಣ್ಣಾತಮ್ಮಂದಿರು, ವಾರಕ್ಕೊಂದೆರಡಾವರ್ತಿಯಾದರೂ ಕುರಿ ಮಾವುಸ ಬೇಯಿಸುವ ಎರಡು ಜೊತೆ ಒಲೆಗಳು, ಒಂದೇ ಎರಡೇ ತನ್ನ ತವರು ಮನೆಯ ಸೌಭಾಗ್ಯ. ಆದರೂ ಚೆನ್ನವ್ವ ತವರು ಕಣ್ಣಾಳತೆ ದೂರದಲ್ಲಿದೆ ಅಂತ ಮಾತು ಮಾತಿಗೆ ಹೋಗುವ ಪೈಕಿ ಅಲ್ಲ. ತವರಮನೆಯವರ್ಯಾರಾದರೂ ಎದುರಾದರೆ ಗಂಡನ ಮನೇನ ಮೇಲುಗಟ್ಟಿ ಮಾತಾಡುವುದುಂಟು. ಈ ಬಂಗಾರದಂತ ಗುಣದಿಂದಾಗಿಯೇ ಗಂಡನ ಮನೆಯವರಿಗೆ ಆಕೆಯ ಮೇಲೆ ತುಂಬ ಜೀವ. ಯಾರೊಬರೂ ಕೊಸರಿ ಮಾತಾಡುವುದಿಲ್ಲ. ಯಾವುದೋ ನೆಪದಲ್ಲಿ ಜಗಳ ಆಡೋದಾಡಿ ಅದರ ಪರಿಣಾಮವನ್ನು ಸಿಹಿ ನೀರಿನ ಮೇಲೆ ಹಾಕಿಬಿಡುವುದು ವಾಡಿಕೆ. ಆ ದಿನ ಹಾಗೇ ಆಯಿತು. ಚೆನ್ನವ್ವ ಆರೋಹಣದಲ್ಲೇ ಬಾಯಿ ಮಾಡಿದಳು. ಅಕಸ್ಮಾತ್ ಮಾತಿಗೆ ಬಿದ್ದು ತವರು ಮನೆಗೆ ಹೊಂಟೋಯ್ತೀನಿ ಎಂದಳು. ಅಷ್ಟೇ ಆಕಸ್ಮಿಕವಾಗಿ ಬಸ್ಯನೂ ‘ಯಿಲ್ಲಾರ್ನ ಯದುರುಸ್ತಿ, ಹೊಂಟೋಗು.’ ಎಂದು ತುಟಿ ಕಚ್ಚಿದಳು. ಅಲಾ”” ತನ್ನ ಗಂಡ ಹಿಂಗಂದನಲ್ಲಾ….ತಾನಿನ್ನೊಂದು ಚಣ ಈ ಮನೆಯಲ್ಲಿರಬಾರದು ಎಂದು ಯೋಚಿಸಿದ ಆ ಛಲದಂಕಮಲ್ಲಿಯು ಹೊಸ್ತಿಲು ದಾಟಬೇಕೆನ್ನುವಷ್ಟರಲ್ಲಿ ಮುದೇತನಿಗೆ ಬಿಕ್ಕಳಿಕೆ ಹತ್ತಿಕೊಂಡಿತು. ತನ್ನ ಹೊಟ್ಟೇಲಿ ಹುಟ್ಟಿದ ಮಾನಿಕದ ಹರಳೇ ಕೂಗಿಟೆನೋ ಎಂದು ಭಾವಿಸಿದವಳಾದ ಆಕೆಯು ‘ಹೊಂಟೋಗಂತಿಯ್ಯೋನೋ”” ವಂಟೋಯ್ತೀನಿ ನ್ವಾಡ್ತಿರು…ಕಯ್ಯಿಗೂ ಬಾಯಿಗೂ ನ್ಯಕ್ಕೋಳ್ವರಂತೀ””’ ಎದ್ಮು ಮುಂತಾಗಿ ಅಕ್ರೈತ್ ಉದುರಿಸುತ್ತ ಸರ್ರನೆ ಆಡುಗೆ ಮನೆಗೆ ಹೋಗಿ ಒಂದೊಂದು ಗಡಿಗೆಯನ್ನು ಒಂದೊಂದು ರೀತಿ ಎತ್ತೆತ್ತಿ ನೋಡುತ್ತಾಳೇ. ಯಾವುದರಲ್ಲೂ ಒಂದು ಕಾಳು ನೀರಿಲ್ಲ…ಅಯ್ಯೋ ನನಕರುಮವೇ”” ಮುದೇತಗೆ ಬಿಕ್ಕತ್‌ಕಂಡೈತೆ…ಯ್ಯೋನು ಮಾಡೋದೆಪ್ಪ ಸಿವ್ನೇ…ಎಂದನಕೋತ ಅಡಕಲ ಗಡಿಗೆಯಿಂದ ಒಂದ್ತಟಗು ಹುಣುಸೇ ಹಣ್ಣನ್ನು ತಂದು ಮುದೇತನಿಗೆ ಕೊಡುತ್ತ ‘ಮಾವೋ””ಯಿದ್ನ ಬಾಯಾಗಿಡ್ಕಂಡು ಜಮಡ್ತಿರು…ಜತ್ನವ್ವಾಗಿ ಸಾಂತವ್ವನತ್ರ ಒಂದ್ನಾಕ್ಕಾಳು ನೀರ್ತರ್ತೀನಿ’ ಎಂದಂದು ತಂಬಿಗೆಯೊಂದನ್ನು ಸೆರಗಿನಲ್ಲಿ ಮರೆಮಾಚಿ ಬಾಗಿಲು ದಾಟಲು ಅಲ್ಲಿ ಸಿದ್ದ ಕೊಟ್ರಿ ಎಂಬ ಹೆಸರಿನ ಕಂದಮ್ಮಗಳು ತಂತಮ್ಮ ತಿಕಗಳನ್ನು ಅರ್ಜುನ, ಭೀಮರುಗಳ ಜಿಹ್ವಾಗ್ರಗಳಿಗೆ ಬಿಟ್ಟುಕೊಟ್ಟು ಆನಂದಾತಿರೇಕವನ್ನನುಭವಿಸುತ್ತ ನಿಂತಿದ್ದವು. ತನ್ನ ಬಹುದಿನದ ಕನಸಾದ ಸಿಹಿ ನೀರಿನಿಂದ ತನ್ನ ಯಾವತ್ತೂ ಮಕ್ಕಳ ತಿಕಗಳನ್ನು ತೊಳೆಯುವುದರ ಬಗ್ಗೆ ನೆನೆಸಿಕೊಳ್ಳುತ್ತ ತನಗೆ ತಾನೇ ನಗುತ್ತ ತನ್ನನ್ನು ತಾನೇ ಸಂತೈಸುತ್ತ ಸರಿಯಾಗಿ ವಂದೆಂಟು ದಿನ ತಪ್ಪದೆ ಸಿಹಿ ನೀರು ಕುಡಿದನೆಂದರೆ ತನ್ನ ಗಂಡನೂ ಎಲ್ಲರಂತೆ ಮೈ ಬಿಟ್ಟು ಬಾಳುವಸ್ಥನಾಗಬಹುದೆಂದುಕೊಳ್ಳುತ್ತ ಲಗು ಬಗೆಯಿಂದ ನಡೆಯುತ್ತಿದ್ದ ಚೆನ್ನವ್ವ ಕುಡಿಯೋ ನೀರಿನ ಕೊಳ್ಳುವಿಕೆ ಕುರಿತು ವ್ಯವಹಾರಿಕವಾಗಿ ಯೋಚಿಸದೆ ಇರಲಿಲ್ಲ. ತಾನು ಅವರಿವರಿಂದ ಕಡ ಪ್ದೆದಿರುವುದಕ್ಕಿಂತ ಅವರಿವರು ತನ್ನ ಮನ್ಯಿಂದ ಒಯ್ದಿರುವುದೇ ಹೆಚ್ಚೆಂದುಕೊಂಡಳು. ಒಂದು ಮಾತು ಹೇಳಬೇಕೆಂದರೆ ತನ್ನ ತವರುಮನೆ ಹೊರತುಪಡಿಸಿ ಕೇರಿಯ ಯಾವ ಮನೆಯಲ್ಲೂ ಒಂದು ಬೊಗಸೆ ಸಿಹಿನೀರಿಲ್ಲವೆಂಬುದು ಪರಮ ಸತ್ಯ. ತಾನು ಅಂಗಲಾಚಿದರೆ ಸಾಕು ತನ್ನ ತವರು ಮನೆಯವರು ಒಂದು ತಂಬಿಕೆಯಾಕೆ ಒಂದು ಕೊಡ ನೀರು ಕೊಡದೆ ಇರುವುದಿಲ್ಲ. ಆದರೆ ದೇಹಿ ಎಂದು ಕೇಳುವ ಸ್ವಭಾವದವಳಲ್ಲ ಚೆನ್ನವ್ವ.

ದ್ವಾದಶ ಸ್ಥಾನದಲ್ಲಿ ಮಕ್ಕಳು ಮರಿ ಮಾಡಿದ್ದ ಇಸಿ..ವಸಿ ಬಳಿಯು‌ಉದರಲ್ಲಿ ಮಗ್ನಳಾಗಿದ್ದ ಸಾಂತವ್ವ ಯಂಕೋಬಿ ಹೋ ಅಂತ ಬೊಗಳಲು ಕಣ್ಣೆತ್ತಿ ನೋದುತ್ತಾಳೆ ತನ್ನ ಜೀವದ ಸಂಗಾತಿ. ಕಯ್ಯಿಗಳನ್ನು ಸೀರೆಗೊರಸಿಕೊಳ್ಳುತ್ತ ಚೆನ್ನವ್ವನನ್ನು ಆಶ್ಚರ್ಯ ಸಂಭ್ರಮದಿಂದ ಬರಮಾಡಿಕೊಂಡಳು. ಒಬ್ಬರನ್ನೊಬ್ಬರು ಸಾಮಾನ್ಯವಾಗಿ ಮಾತನಾಡಿಸುವುದೇ ಸಿಹಿನೀರಿಗೆ ಸಂಬಂಧಿಸಿದಂತೆಯೇ. ಗೆಳತಿಯ ಈಗಿನ ಸೆರಗಿನ ಮರೆಯಲ್ಲಿ ಖಾಲಿ ತಂಬಿಗೆಯೊಂದು ಥಳಥಳ ಹೊಳೆಯುತ್ತಿರುವುದನ್ನು ಆಕೆ ಗುರುತಿಸದೆ ಇರಲಿಲ್ಲ. ‘ಸೂರ್ಯ ಹುಟ್ಟೋಕೇ ಗತಿ ಇಲ್ಲ, ದ್ಯಮವ್ವ, ಮಲ್ಲವ್ವನಂಥೋರು ವ್ಯಾರದಿಂದ ಬಳುಕುತ್ತ ನೀರಿಗೆ ಬಂದದ್ದುಂಟು. ‘ ಅಗಾ ವಟ್ಟೆ ಅಸಗಂಡೀವಂದ್ರ ಉಂಬಾಕಿಟ್ಟೇನು…ಅದ್ರೆ ನೀರ್ನ ಮಾತ್ರ ಕ್ಯೋಳಬ್ಯಾಡ್ರೀನ್ವಾಡು..ನಿನ್ನೆ ರಾತ್ರಿ ಉಂಡ್ಕೂಳು ಇನ್ನು ಹಂಗೆ ಗಂಟ್ಲಾಗೈತಿ’ ಎಂದು ಹೇಳಿ ಕಳುಹಿಸಿದ್ದಳು. ಸೈ ಬುಡವ್ವ ಅಂತ ಅವರು ಹೋಗಿದ್ದರೂ ಯಲಾ ಚಿನಾಲಿ ವಂದ್ಕಯ್ಯಿ ನ್ವಾಡ್ಕಂತೀವಿ ಎಂದು ಮನದಲ್ಲಿ ಹಲ್ಲು ಮಸೆಯುತ್ತ ಹೋಗಿದ್ದರು. ಅವರು ತಮ್ಮ ಮನೆಯ ವಿದ್ಯಾಮಾನಗಳ ಕಡೆ ಒಂದು ಕಣ್ಣು ಇಟ್ಟಿರದೆ ಇರಲಾರರು.

ಸಾಂತವ್ವ ಗೆಳತಿಯನ್ನು ತಡಿಕೆ ಮರೆಗೆ ಕರೆದೊಯ್ದು ವಂಚೂರು ನಶ್ಯಪಡಿ ತಿಕ್ಕಂತಿ ಇರು…ದಡ್ದಿಗೋಗಿದ್ಯೋನು? ನಂದಿನ್ನು ಕಸಮುಸುರೆ ಮನಾರ ಬುದ್ದೈತಿ. ಈ ಸಣಿಗಳು ವಂದೇ ಸುಂಕೆ ಉಚ್ಚೆಗೆಂಬಾಕತ್ಯಾವ…ಎಂದು ಸುರುವು ಮಾಡಿದಳು. ಅದಕ್ಕಿದ್ದು ಚೆನ್ನವ್ವ ‘ಎಂಥ ಕಾಲ ಬಂತೇ ಸಾಂತೀ”” ಯ್ಯೋನು ಕರುಮ ಮಾಡಿದ್ದೋ ಈ ಬತಗೇಡಿ ಊರಾಗುಟ್ಲಿಕ್ಕೆ ನಮೆಪ್ಪಂಥೋನು ವಳೀ ಸಾಲ್ಕಡೀಕಾರ ಕ್ವಟ್ನ… ದಡ್ಡಿಗ್ಯಾದ್ರೆ ಸುಂಕೆ ಆತತೇನವ್ವ ಸೀಸೋಡೈತಿ ನೀಸೋಣ…ಎಂದೊಂದು ವಾಕ್ಯವನ್ನು ಪೂರ್ಣ ಮಾಡಲು ಬಿಡದೆ ಸಾಂತವ್ವ ‘ಸೀನೀರ್ನೊಂದ್ನ ಬುಟ್ಟು…ಯಿಗಾ ವಂದೈತೊಲಿ ಬಂಗಾರ ಕ್ಯೋಳು ಕ್ವಟ್ಟೇನು…’ ಎಂಬ ನಗೆಚಾಟಿಕೆ ವಾಕ್ಯದಿಂದ ತುಂಡರಿಸಿದಳು. ‘ಹಂಗನಬ್ಯಾಡೇ ನನ್ಮಗನ್ಯೂಳೆ…ವಂದೆಳ್ಡು ಕಾಳು ನೀರು ಗಂಟಲಾಕ ಬೂಳ್ಳಿಲ್ಲಾಂದ್ರೆ ಮುದೇದು ವಂಟೋಯ್ತದೇ””…ಅದ್ಕ ವಂಚೆರಗಿ ಕ್ವಟ್ ಪುಣ್ಣೇವ್ಕಟ್ಟಿಕ್ಯಾ”” ಎಂದು ಚಿನ್ನವ್ವ ಮಾಮೂಲಿ ಶೈಲಿಯಲ್ಲಿ ಮಾತಾಡಿದಳು. ಪಡಸಾಲೆಯ ಮೂಲೆಯ ವರಸಿನ ಮೇಲೆ ಲಕ್ವಾ ಹೊಡೆದು ದೇಹದ ಎಡಭಾಗವನು ಪೂರ್ಣ ಕಳೆದುಕೊಂಡಿದ್ದ ಹಣ್ಣು ಹಣ್ಣು ಮುದುಕಿ ಒಂದು ಕಾಳು ನೀರು ಕೊಡಬೇದ ಎಂಬಂತೆ ಸಂಜ್ಞೆ ಮಾಡಿತು. ಸೀನೀರಿನಲ್ಲಿ ಯಾವತ್ತೂ ಜಳಕ ಮಾಡಿಸುವಿರೋ ಅವತ್ತೇ ಪ್ರಾಣ ಬಿಡುವುದಾಗಿ ಮಾತುಕೊಟ್ಟು ಮಾತು ಪಡೆದಿರುವಂಥ ಅಮೋಘ ಮುದುಕಿಯೇ ಅದಾಗಿತ್ತು. ಅದರ ಇಹಲೋಕ ಯಾತ್ರೆ ಮುಗಿಸಲು ಇವತ್ತು ನೀರು ಸಿಕ್ಕಾವು ನಾಳೆ ನೀರು ಸಿಕ್ಕಾವು ಎದ್ಮು ಎರಡು ಮೂರು ತಿಂಗಳಿಂದ ಬರೀ ಕಾಯುವುದೇ ಆಗಿರುವುದು. ಈ ಕಾರಣದಿಂದಾಗಿಯೇ ಅವರ ಮನೆಯಲ್ಲಿ ಏನಿಲ್ಲಾಂದರೂ ಎರಡು ಮೂರು ತಂಬಿಗೆ ನೀರು ಸದಾ ಇರುತ್ತದೆ ಎಂಬ ಖಾತ್ರಿ ಎಲ್ಲರಿಗೂ.‘ಗೊಣಮಕ್ಳು ವಂದೆಲ್ಡೆಜ್ಜೆ ಮುಂದಕ (ನಾಲ್ಕಾರು ಗಾವುದ ಎಂದರ್ಥ) ನಾದ್ರೆ ವಂದ್ಕೊಡ ಯಾಕವ್ವ ಎಲ್ಡುಕೊಡ ತರಬೋದು’ ಎಂದು ಚನ್ನವ್ವ ಅಂದರೆ ಸಾಂತವ್ವ ‘ವೊಲೋತ್ನಂಗ್ಯೋಳ್ದಿ ಬುಡು…ವತ್ತೇರಿದ್ರು ನಂದೆಂಗ ಮಕ್ಕಂಡೈತ್ನೋಡು, ಮನ್ಯಾಗ.’ ಎಂದಳು. ‘ಮದ್ಲು ಕ್ವಡೆವ್ವಾ”..ಮುದೇತ್ಗೆ ಬಿಕ್ಕತ್ಯಾವ. ಅದೆಲ್ಯಾನು ವಂಟೋಯ್ತ ಹೆಂಗೆ ಅಂತ’ ಎಂದು ಚನ್ನವ್ವ ಒಂದೇ ಸವನೆ ಅವಸರ ಮಾಡಿದಳು. ತಮ್ಮ ಮನೆಯ ಸೀನೀರಿನ ಬ್ಯಾಲೆನ್ಸು ಕೀಟನ್ನು ವಿವರಿಸುತ್ತ ಸಾಂತವ್ವ ಯಾರ್ಯೇನೊತ್ಕೊಂಡೊಗೋಗ್ತೀವವ್ವಾ… ಅದರಾಗೊಂದ್ನಾಕಾಳ್ನ ಕ್ವಟ್ತೀನ್ತಗ’ ಎಂದು ಹೇಳಿ ಗುಟ್ಟಾಗಿ ಒಳ ಒಳ ಒಯ್ದು, ಯಾರೂ ನೋಡ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಅಟ್ಟ ಏರಿ ಬಗ್ಗಿಸಿಕೊಂಡು ಕೆಳಕ್ಕಿಳಿದಳು. ಯಾರಿಗೂ ಕಾಣಿಸಿದಂತೆ ತಂದು ಗೆಳತಿಯ ಸೆರಗಿನ ಮರೆಯಲ್ಲಿ, ಅಂದರೆ ಬಲಮೊಲೆಯ ಕೆಳಗಿನ ತಪ್ಪಲಲ್ಲಿ ಇರಿಸಿ ಸಮಾಧಾನದ ಉಸಿರು ಬಿಟ್ಟಾಳು. ‘ ಬೊರ್ತೀನಭೆ… ಮುದೇತೇನಾತ್ಯೋನೋ”””…’ ಎಂದು ಚೆನ್ನವ್ವ ತಲ ಬಾಗಿಲು ದಾಟುತ್ತಿರಲು ಸಾಂತಿಯು ‘ನೀರ್ಬುಡಾತ ಬಂದಾನಂತ್ಯೋಳು””..ಗಡಾನ ಕಸಮುಸ್ರೀ ಮುಗ್ಸೀ ವಂಡೂ ಮಂಡ್ರಪ್ನೋರ ಮನೀ ಕಡೀಕೆ’ ಎಂದು ಹೇಳಿದಳು. ದಾರೀಲಿ ದೊಡ್ಡಿಗೆ ಹೊರಟಿದ್ದ ಗಂಗವ್ವ ‘ಆ ಬಾಡ್ಯವನ ಬಾಯಾಗ ನನ”” ಆಟಾಕ. ಅವನ್ ಸುಡು ಸುಡ್ಗಾಡ್ಗಿಕ್ಲೀ ಅವನ್ಮೂರ್ಮಂದಿ ಯಂಡ್ರೂ ರಂಡೇರಾಗ್ಲೀ”””. ಅವನೊಂದೇ ಸಿಕ್ಲಿ ಕ್ಯರ್ದೀಲೊಡೀತೀನಿ””” ಹ್ಹಾ..’ ಎಂದು ಲಸ್ಕರು ( ಸರಕಾರವು ಸದರಿ ಊರಿಗೆ ಕುಡೀಯೋ ನೀರು ಸರಬರಾಜು ಮಾಡಲೆಂದೇ ಇಟ್ಟಿರುವ ಪುಣ್ಯಾತ್ಮನೀತನು. ಲಸ್ಕರು ಎಂಬುದಾತನ ಮನೆತನದ ಹೆಸರಿರುತ್ತದೆ.) ಸಾಪಳಿಸುತ್ತ ಹೋದಳು. ಸ್ಪೀಡಿಗಿಟ್ಟುಕೊಂಡಿರುವ ಕಾರಣದಿಂದ.

ಲಸ್ಕರಿ ರಾಜನನ್ನು ಸದರೀ ಗ್ರಾಮದ ಹೆಂಗಸರು ಬಯ್ದಿರುವ ಬಯ್ಗಳನ್ನು ಗುಡ್ಡೇ ಹಾಕಿದರೆ ಹಿಮಾಲಯ ಪರ್ವತಕ್ಕಿಂತ ಮಿಗಿಲಾದ ಪರುವತ ಏರ್ಪಡಬಹುದು. ಓಸಿ (ಮಟಕಾ) ನಂಬರು ಕಂಡು ಹಿಡಿಯುವುದರಲ್ಲಿ ಪ್ರವೀಣನಾಗಿರುವ ಆ ಮಹಾಮಹಿಮನನ್ನು ಸದರೀಗ್ರಾಮದ ಗಂಡಸರಾರೂ ಬಯ್ಯುವುದಿಲ್ಲ. ಹುಟ್ಟಿಸಿದ ದೇವರು ಯಾವ ತೆರನಾಗಿ ಹುಲ್ಲು ಮೇಯಿಸುವುದಿಲ್ಲವೋ ಅದೇ ತೆರನಾಗಿ ರಾಜನು ಒಂದಲ್ಲಾ ಒಂದು ದಿನ ನೀರು ಬಿಡದೆ ಇರರಲಾರನು.

ಚೆನ್ನವ್ವ ಎಷ್ಟೇ ಸೀಕ್ರೆಟ್ಟಾಗಿ ತಲಬಾಗಿಲು ದಾಟಿದರೂ ಮಕ್ಕಳು ಮರಿಯಾವತ್ತು ಸೀನೀರಿನ ವಾಸನೆ ಕಂಡು ಹಿಡಿಯದಿರಲಿಲ್ಲ. ಯವ್ವೋ ನಂಗೊಂದ್ಕಾಳೂ ನಂಗೊಂದ್ಕಾಳೂಂತ ಮುಗಿ ಬೀಳಲು ಆಕೆಯು ನಿಮಗ್ಯೋನುದಾಡಿ…. ಉಪ್ನೀರ್ಕುಡೀರಿ…. ನಿಮ್ಮೆಜ್ಗ ಬಿಕ್ಕತ್ತ್ಯಾವ ಎಂದು ಗದರಿಸಿ ದೂರ ಕೊಸರಲು ಅವು ತಲಾ ಒಂದೊಂದು ಹಿಂದೂಸುತಾನೀ ಗಾಯಕರಾದವು. ‘ಅವನ್ಯಾಕುಗದರಿಸ್ತೀಯವ್ವಾ….
ಚುಡುಗಾಡಿಗೊಂಡಾಕ ಸೆಜ್ಜಾಗಿ ನಿಂತ್ಗಂಡಿರಾತ ನಾನೂ…. ಮದಲವಕ್ಕೊಡು ಎಂದು ಸಿಫಾರಸು ಮಾಡಿದ ಮಾವನ ಕೈಗೆ ತಂಬಿಗೆ ವರ್ಗಾಯಿಸುತ್ತ ಸೊಸ್ತಿಯು ‘ಮದ್ಲು ನೀನ್ಕುಡೀ…. ನೀರ್ ಬೊಂದ್ರೆ ಅವೂ ಕುಡಿದಾವು’ ಎಂದಳು. ಎಷ್ಟು ಸಾಧ್ಯವೋ ಅಷ್ಟು ಸೊಲುಪ ಕುಡಿದು ಮುದೇತನು ತಂಬಿಗೆಯನ್ನು ಮರಳಿಸಿದನು. ಮತ್ತೆ ಅತ ಕಾಯಿಸಿದ ಮಕ್ಕಳನ್ನು ಆಚೆಗದುಮಿ ಸೊಸ್ತಿಯು ನೆಲ ಹಿಡಿದಿದ್ದ ಮುದುಕಿಗೆ ಒಂದ್ನಾಕ್ಕಾಳು ನೀರು ಕುಡಿಸಿದಳು. ಜೊಲ್ಲು ಸುರಿಸುತ್ತ ಬಂದ ಗಂಡಗೂ ‘ನಾಚ್ಕೆಂಭೋದೊಂದ್ಕಾಳಾದ್ರಿಲ್ನೋಡ್ನಿಂಗೆ’ ಎಂದನ್ನೋದು ಅಂದು ಕೊಟ್ಟಳು. ಪೂರ್ತಿ ಕುಡಿಯಲು ಮನಸ್ಸಾಗದೆ ಆತ ಮಕ್ಕಳ ಬಾಯಿಗೆ ತಲಾ ಒಂದೊಂದು ಕಾಳು ಹಾಕಿದನು. ಕುಡಿದು ಆನೆಬಲ ಪಡೆದು ಅವು ನಕ್ಕೋತ ನಕ್ಕೋತ ಹೋಗಲು ‘ವತ್ತೆ ತುಂಬನೀರ್ ಸಿಕ್ಕಿದ್ರೆ ನನ್ ಮೊಕ್ಳೀವತ್ಗೆ ಸಿಮ್ಮದ್ ಮರಿಯಿದ್ದಂಗಿರುತ್ತಿದ್ವು’ ಎಂದು ನಿಟ್ಟುಸಿರು ಬಿಟ್ಟಳು ಆ ಸೊಸ್ತಿಯು.
ಸದರೀ ಗ್ರಾಮದ ಎಲ್ಲ ಹೆಂಗಸರಂತೆ ತಾನೂ ರಾಜನನ್ನು ಸಾಪಳಿಸುತ್ತಲೇ ಕಸ ಮುದುರಿ ವದಕನಕ್ಕೆ ತೊಡಗಿದಳು. ಆದರೆ ಗಂಡ ಬಸ್ಯ ಅದಕ್ಕೆ ತದ್ವಿರುದ್ದ. ಅವನಿಗೆ ಮೊದಲಿನಿಂದಲೂ ಸರ್ಕಾರಿ ಸಂಬಳ ತಿಂಬುವವರೆಂದರೆ ಹೊಟ್ಟೆ‌ಉರಿ ಮಿಶ್ರಿತ ಪ್ರೀತಿ. ಸರಕಾರದ ಹಣವನ್ನು ಎಲ್ಲಾದರೂ ಎಷ್ಟಾದರೂ ತಿಂಬಬೇಕೆಂದು ಎಲ್ಲರಂತೆ ತಾನೂ ಹಪಹಪಿಸುತ್ತಿರುವವನೆ. ಪರಿಹಾರ ಎಂಬ ಪದದ ಬೆನ್ನ ಮೇಲೆ ಸದಾ ಸವಾರಿ ಮಾಡುತ್ತಿರುವ ಬಸ್ಯನಂಥವರು ಸದರಿ ಗ್ರಾಮದ ಪ್ರತಿಯೊಂದು ಮನೆಯಲ್ಲಿ ಇಲ್ಲದಿಲ್ಲ. ಇಂಥ ಸೋಮಾರಿ ಸಿದ್ರಾಮಣ್ಣಗಳು ಚನ್ನಮ್ಮನಂಥ ವೀರವನಿತೆಯರ ಲೆಕ್ಕ ಬುಕ್ಕದಲ್ಲಿಲ್ಲ. ಅವು ಇರಬೇಕೆಂದರೆ ಇರಬೇಕು, ಹೊಟ್ಟೆ ಬಟ್ಟೆ ಕಟ್ಟಿ, ರೆಟ್ಟೆ ಮುರಿದು ದುಡಿದು ಹಾಕುತ್ತಿರುವುದೆಲ್ಲ ಹೆಂಗಸರೇ. ಕುದಿಯೋನಿರೊಂದೆ ಸರಿಯಾಗಿ ಬರುತ್ತಿದ್ದರೆ ತಮ್ಮನ್ನು ಹಿಡಿಯುವವರು ಯಾರೂ ಇಲ್ಲವೆಂದೇ ಅವರ ಲೆಕ್ಕ. ಅರ್ಧ ಆಯುಷ್ಯ ಬರೀ ನೀರು ನೀಡಿ ಜೋಡಿಸಲು ಮೀಸಲಾದರೆ ಕಾಳುಕಡಿ ಜೋಡಿಸಲು ಏನು ಮಾದುವುದು?
ಸದರಿ ಗ್ರಾಮದ ಪ್ರತಿಯೊಬ್ಬ ಮಹಿಳೆ ತಾನ್ಯಾವ ಸ್ಥಿತಿಯಲ್ಲೇ ಇರಲಿ ಪಂಚೇಂದ್ರಿಯಗಳ ಪೈಕಿ ಒಂದೆರಡನ್ನಾದರೂ ನಲ್ಲಿ ಕಡೆ ಮೀಸಲಿಟ್ಟಿರುತ್ತಾಳೆ. ಲಸ್ಕರು ರಾಜನ ಬಗ್ಗೆ, ಮಂಡ್ರಪ್ಪನವರ ಗಂಗಾಧರಪ್ಪನ ಮನೆ ಅಂಗಳದಲ್ಲಿರೋ ನಲ್ಲಿ ಬಗ್ಗೆ ಯಾರೇನೇನು ಮಾತಾಡುತ್ತಾರೆಂಬುದನ್ನೆಲ್ಲ ಇಂದ್ರಿಯಗಳ ಮೂಲಕ ಸದಾ ಗಮನಿಸುತ್ತಿರುತ್ತಾರೆ. ಆದರೆ ಚೆನ್ನವ್ವನಂಥೋರು ತಮ್ಮ ಯಾವತ್ತೂ ಇಂದ್ರಿಯಗಳನ್ನು ಸೀನೀರಿಗಾಗಿ ಮೀಸಲಿಟ್ಟಿರುತ್ತಾರೆಂಬುದು ಕುಚೋದ್ಯದ ಸಂಗತಿಯಲ್ಲ. ಅಷ್ಟೇ ಅಲ್ಲದೆ ‘ಲೋ’ ಎಂದು ತನ್ನೈದು ಮಂದಿ ಮಕ್ಕಳನ್ನು ಕರೆದು ನಲ್ಲಿ ಕಡೆ ಛೂ ಬಿಟ್ಟು ಮಾಹಿತಿ ಸಂಗ್ರಹಿಸುವುದುಂಟು. ನೀರಿನ ಬಗ್ಗೆ ಖಚಿತ ಮಾಹಿತಿ ತಂದವರಿಗೆ ಬೆಲ್ಲ, ಕೊಬ್ಬರಿ, ಕಡಲೆಯಂಥ ನೋಬಲ್ ಬಹುಮಾನಗಳನ್ನು ಆಕೆ ನೀಡುತ್ತಿದ್ದುದುಂಟು. ಒಂದೆರಡು ಬಹುಮಾನದ ಆಸೆಗೆ ಸುಳ್ಳು ಮಾಹಿತಿ ನೀಡಿ ಒದೆತಿಂದು ಕುಯ್ಯೊಮರ್ರೋ ಅಂದದ್ದೂ ಉಂಟು. ಇತ್ತೀಚೆಗಂತೂ ಗ್ರಾಮದ ಯಾವತ್ತೂ ಮಕ್ಕಳು ಮರಿ ಪ್ರತಿಫಲ ಬಯಸದೆ ನೀರು ಎಂಬ ಶಬ್ದದ ಜೇಡರ ಬಲೆಯೊಳಗೆ ಸಿಲುಕಿರುತ್ತವೆ ಎಂಬುದು ಸತ್ಯ. ಅದರಂತೆ ನೀರು ಬರಬಹುದೆಂಬ ಸುದ್ದಿ ಮುಂಜಾವಿನ ಬೆನ್ನ ಮೇಲೆ ಸವಾರಿ ಮಾಡಿತು. ನಲ್ಲಿ ಕುಯ್ಯೋಮರ್ರೋ ಅಂತ ಪ್ರಸವ ವೇದನೆ ಮಾಡಲಾರಂಭಿಸಿದೆ ಎಂಬ ಸುದ್ದಿಯೂ ಹರಡದೆ ಇರಲಿಲ್ಲ. ಆ ಕೂಡಲೆ ಚೆನ್ನವ್ವಗೆ ತಾನು ನಿನ್ನೆಯೇ ನಲ್ಲಿಯಬಳಿ ಸರತಿ ಸಾಲಿನಲ್ಲಿರಿಸಿದ್ದ ಗುರುತುಗಳು ಅದಲುಬದಲಾಗಿದ್ದಾರೆ ಎಂಬ ಸಂದೇಹ ಕಾಡದೆ ಇರಲಿಲ್ಲ. ಆದ್ದರಿಂದ ಯಾಕಿದ್ದೀತು ಅಂತ ಆಕೆಯು ಮೂಲೆ ಮುರುಕಟ್ಟಿನಲ್ಲಿದ್ದ ಪಿಲಾಸ್ಟಿಕ್ ಕೊಡಪಾನಗಳನ್ನು ಹೊರ ತೆಗೆದು ತನ್ನ ದೇಹದಾದ್ಯಂತ ಅಲಂಕರಿಸಿಕೊಂಡಳು. ಮುದೇರಿಗೆ, ಗಂಡಗೆ, ಮಕ್ಕಳು ಮರಿಗೆ ಹೇಳೋದನ್ನೆಲ್ಲ ಹೇಳಿ, ಕೇಳುವುದನ್ನೆಲ್ಲ ಕೇಳಿ, ರಣರಂಗಕ್ಕೆ ಹೊರಟಿರುವಳೋ ಎಂಬಂತೆ ಆಕೆಯು ಮಣ್ಣಿನ ಮನೆ ಎಂಬ ಜೀವಕೋಶದಿಂದ ಮಹಾಕಾಳಿ ಎಂಬಂತೆ ಹೊರಬಂದು ಮಂಡ್ರಪ್ಪನವರ ಮನೆ ಕಡೆ ಪಾದ ಬೆಳೆಸಿದಳು.

-೨-
ಸೀನೀರಿನ ಅಭಾವದಿಂದಾಗಿ ಬಾಯಾರಿದ ಪಕ್ಷಿಯಂತಾಗಿರುವ ರಿಜರುಜಾಲಿ ಪ್ರಾಂತದ ಸದರೀ ಗ್ರಾಮವನ್ನು ಒಂದೊಂದು ಸೀಮೆಯವರು ಒಂದೊಂದು ರೀತಿಯಲ್ಲಿ ಗುರುತಿಸುತ್ತ ಬಂದಿರುವರು. ಸಿಂಧವಾಡಿ ಪ್ರಾಂತದವರು ಮನರೋನಳ್ಳಿ ಅಂತಲೂ; ಮೇಲು ಸೀಮೆ ಮಂದಿ ಸಿನ್ನೇರ್ನಳ್ಳಿ ಅಂತಲೂ, ಎರೆಸೀಮೆ ಮಂದಿ ತರಲಳ್ಳಿ ಅಂತಲೂ ಕರೆಯುತ್ತಿರುವರು. ಈ ಎಲ್ಲ ಹೆಸರುಗಳ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ಸಪ್ತಪದಿ ತುಳಿಯೋಣ.

ಮನರೋನಳ್ಳಿ: ಒಂದು ಕೊಡ ನೀರು ಹಿಡಿಯಲು ಹೋಗಿ ತಲೆಗೂದಲನ್ನು ಕಳೆದುಕೊಂಡಿರುವ ವೀರಮಹಿಳೆ ಮನ್ರಮ್ಮನ ಹೆಸರು ಇದಲ್ಲ. ಪತ್ತಿಕೊಂಡದ ಸರಕಾರೀ ದಫ್ತರುಗಳಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ದತ್ತಮಂಡಲಗಳ ಕಲೆಕ್ಟರಾಗಿದ್ದ (ಕ್ರಿ. ಶ. ೧೮೧೯ – ೧೮೨೭) ಗಾಸರ್ ಥಾಮಸ್ ಮನ್ರೋ ಸಾಹೇಬ ೨೨ – ೯ – ೨೮೨೭ ರಂದು ಸದರೀ ಗ್ರಾಮಕ್ಕೆ ಭೆಟ್ಟಿಕೊಟ್ಟಿದ್ದನು. ಗ್ರಾಮದ ರೈತರ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿದನು. ಆಗ್ಗೆ ಸದರೀ ಗ್ರಾಮವನ್ನು ಕೇಂದ್ರವಾಗಿಸಿಕೊಂಡು ಬಡೇಲಡಕು, ದೇವಲಾಪುರ, ನಾಗಾಲ, ಚಕ್ರಲವೇ ಮೊದಲಾದ ಹತ್ತಿಪ್ಪತ್ತು ಹಳ್ಳಿಗಳನ್ನು ನಿರಂಕುಶವಾಗಿ ಆಳುತ್ತಿದ್ದ ಸ್ವಯಂಘೋಶಿತ ಪಾಳ್ಳೇಗಾರ ಕಾಟಸಾನಿ ವೆಂಕಟಪ್ಪ ನಾಯಕನ ಉದ್ದಗಲವನ್ನು ಸೈನ್ಯದ ಸಹಾಯದಿಂದ ಕಡಿಮೆ ಮಾಡಿದನಲ್ಲದೆ ಆತನ ಕಚ್ಚಾಟದಲ್ಲಿದ್ದ ಸಾವಿರಾರೆಕರೆ ಭೂಮಿಯನ್ನು ನೂರಾರು ಮಂದಿ ನಿರ್ಗತಿಕರಿಗೆ ಸಮನಾಗಿ ಹಂಚಿದನು. ಗ್ರಾಮದ ನಾಲ್ಕು ಮೂಲೆಗಳಲ್ಲಿ ನಾಲ್ಕು ಭಾವಿಗಳನ್ನು ತೋಡಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿದನು. ಶಾಲೆ, ಆಸುಪ್ರತಿಗಳನ್ನು ತೆರೆದನು. ಬರಡು ಪ್ರದೇಶಗಳನ್ನು ಗುರುತಿಸಿ ಅಲ್ಲೆಲ್ಲ ಹುಣುಸೆ ತೋಪುಗಳನ್ನು ಬೆಳೆಸಿದನು.

ಅವಿಶ್ರಾಂತವಾಗಿ ಜನರ ಸೇವೆ ಮಾಡುತ್ತಿರುವಾಗಲೇ ಪತ್ತಿಕೊಂಡ ಸಮೀಪ ಕಾಲರಾ ರೋಗಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ (೬ – ೭ – ೧೮೨೭) ಮನ್ರೋ ಸಾಹೇಬನ ಹೆಸರಿನಿಂದಲೇ ಸದರಿ ಗ್ರಾಮವನ್ನು ಗುರುತಿಸುವ ಪ್ರೀತಿಯನ್ನು ಸಿಂಧವಾಡಿ ಪ್ರಾಂತದವರು ತೋರಿಸಿದರು. ಅಷ್ಟೇ ಏಕೆ ಗ್ರಾಮದ ಹನುಮಂತದೇವರ ಗುಡಿ ಎದುರಿಗಿರುವ ಗುಡಿಯ ಹೆಣ್ ದೇವರಾದ ಮಂಡ್ರಮ್ಮ ಉರುಫ್ ಮನರೊಮ್ಮ ಪ್ರತಿವರ್ಷ ಬನದ ಹುಣ್ಣುಮೆಯಂದು ನಡೆಯುವ ಜಾತ್ರೆಯಲ್ಲಿ ಅಂಜನಿ ಎಂಬಾತನ ಮೈಯಲ್ಲಿ ಕಾಣಿಸಿಕೊಂಡು ರೇನು, ಏರೂ ಅಂತ ಬಟ್ಲರ್ ಇಂಗ್ಲೀಷಿನಲ್ಲಿ ಮಾತಾಡುವುದುಂಟು. ಈ ಐನಾತಿ ದೇವರಿಗೆ ಹೆಚ್ಚಾಗಿ ನಡೆದುಕೊಳ್ಳುತ್ತಿರುವುಧು ಸಿಂಧವಾಡಿ ಪ್ರಾಂತದವರೆಂದು ಹೇಳಬಹುದು.

ಸಿನ್ನೇರ್ನಳ್ಳಿ : ಈ ಹೆಸರು ಕುರಿತಂತೆ ಉತ್ತರಾತ್ಯ ಮತ್ತು ದಕ್ಷಿಣಾತ್ಯ ಸಂಶೋಧಕರಲ್ಲಿ ಕೈ ಕೈ ಮಿಲಾಯಿಸುವಂಥ ಬಿನ್ನಾಭಿಪ್ರಾಯವುಂಟು. ಮೀಸೆನಳ್ಳಿ ಉಮಾಪತಿ ಶಾಸ್ತ್ರಿಯೆಂಬ ಸಂಶೋಧಕ ಅನಂತಪುರ ಸಂಸ್ಥಾಪಕ ಹಂಡೇ ಹನುಮಪ್ಪನಾಯಕನ ಸಹೋದರ ಸಂಬಂಧಿ ಚನ್ನ ಈರಪ್ಪನು ಸದರಿ ಗ್ರಾಮ ಆಳುತ್ತಿದ್ದನೆಂದೂ ; ಈ ಸಂಗತಿ ಮೇಲೆ ದುರುಗಮ್ಮನ ಗುಡಿಯ ಬೆನ್ನ ಗೋಡೆಯಲ್ಲಿರುವ ಶಾಸನ ಸಾಕಷ್ಟು ಬೆಳಕು ಚೆಲ್ಲುತ್ತದೆ ಎಂದೂ ; ಚಿನ್ನ ಈರಪ್ಪನಹಳ್ಳಿ ಎಂಬ ಹೆಸರೇ ಸಿನ್ನೇರ್ನಳ್ಳಿ ಆಗಿರುವುದೆಂದೂ ವಾದ ಮಾಡಿ ಗೆದ್ದಿರುವನು. ಆದರೆ ಹವ್ಯಾಸಿ ಸಂಶೋಧಕರಾದ ಗುಡೇಕೋಟೆಯ ಉರುಕುಂದಿ, ಕಕ್ಕುಪ್ಪಿಯ ನಾಗಪ್ಪ ಎಂಬೀರ್ವರು ಹಿಂದೆ ಸದರಿ ಗ್ರಾಮ ಸಿಹಿನೀರಿಗೆ ಹೆಸರಾಗಿತ್ತೆಂದೂ ಈ ಕಾರಣದಿಂದಾಗಿಯೇ ಇದಕ್ಕೆ ಸಿಹಿನೀರಿನಹಳ್ಳಿ ಉರುಫ್ ಸಿನ್ನೇರ್ನಳ್ಳಿ ಎಂದು ಕರೆಯಲಾಯಿತೆಂದೂ ನಾಕು ಮಂದಿ ಅಹುದಹುದೆನ್ನುವಂತೆ ವಾದಿಸುತ್ತಿರುವರು. ಕೆಲವು ಐತಿಹ್ಯಗಳ ಪ್ರಕಾರ ಇದು ಸರಿ ಎಂದು ಕಂಡುಬರುತ್ತದೆ.

“ಸಿನ್ನೇರ್ನಳ್ಳಿಗೋಯ್ತಿನಿ ಸೀನೀರ್ನ ತಂದ್ನಿನ್ನ ದಾಹ ತೀರಿಸ್ತೀನಿ” ಎಂಬ ಸುಪ್ರಸಿದ್ದ ಖಂದ ಕಾವ್ಯ ಮೋರಾ ಪ್ರಾಂತದಲ್ಲಿ ಜನಜನಿತವಾಗಿದೆ. ಗದವಾಲ ನವಾಬರು ಕುಡಿಯಲು ಸದರಿ ಗ್ರಾಮದಿಂದ ನೀರು ತರಿಸಿಕೊಳ್ಳುತ್ತಿದ್ದರಂತೆ. ಜರುಮಲಿಯ ರಾಜಕುಮಾರಿ ತ್ರಿಲೋಕ ಸುಂದರಿ ದಿನಂಪ್ರತಿ ಸ್ನಾನ ಮಾಡಲು ಇಲ್ಲಿಂದ ನೀರು ತರಿಸಿಕೊಳ್ಳುತ್ತಿದ್ದಳಂತೆ, ವೆಂಕಟಾಪುರದ ವೆಂಕಟೇಶ, ದೇವಲಾಪುರದ ಕುರಿಕ್ಕಿಲಿಂಗ, ಮುರಡಿಯ ಹನುಮಂದೇವ ಇವೇ ಮೊದಲಾದ ದೇವರುಗಳ ಅರ್ಚನೆಗೆ ಉದಕವನ್ನು ಇಲ್ಲಿಂದಲೇ ತರಿಸಿಕೊಳ್ಳಲಾಗುತ್ತಿತ್ತಂತೆ. ಮೊನ್ನೆ ಮೊನ್ನೆಯವರೆಗೆ ಗುಂಡುಮುಣುಗಿನ ಆಯುರ್ವೇದ ಮಾರ್ತಾಂಡರಾದ ನರಸಿಂಹ ಜೋಯಿಸರು ಔಷಧಿ ತಯಾರಿಸಲು ಬಳಸುತ್ತಿದ್ದುದು ಇದೇ ಗ್ರಾಮದಿಂದ ಒಯ್ದ ನೀರನ್ನಂತೆ, ಇಂಥ ಅನೇಕ ಐತಿಹ್ಯ ಮತ್ತು ವಾಸ್ತವಾಂಶಗಳ ಆಧಾರದಿಂದ ಸಿಹಿನೀರಿನಹಳ್ಳಿ ಎಂಬ ಅರ್ಥಪೂರ್ಣ ನಾಮವಾಚಕವೇ ಸ್ವಾತಂತ್ರ್ಯೋತ್ತರವಾಗಿ ಸೀನೇರ್ನಳ್ಳಿ ಎಂದು ಬದಲಾಗಿರುವುದಾಗಿರುವುದಂತೆ.

ತರಲಳ್ಳಿ : ಈಗ್ಗೆ ಹತ್ತಿಪ್ಪತ್ತು ವರ್ಷಗಳ ಹಿಂದಿನ ಮಾತು. ಕಾರುಹುಣ್ಣುಮೆಯಂದು ಕರಿ ಹರಿಯುವ ವಿಷಯದಲ್ಲಿ ಸದರೀ ಗ್ರಾಮದವರಿಗೂ ಎರೆಸೀಮೆಯ ಪ್ರಮುಖ ಕೇಂದ್ರವಾದ ಬಡೇಲಡಕು ಗ್ರಾಮದವರಿಗೂ ನಡುವೆ ವಾರಗಟ್ಟಲೆ ಘನ ಘೋರ ವಾಗ್‌ಯುದ್ದ ನಡೆಯಿತು. ಆ ವಾಗ್ಯುದ್ದದಲ್ಲಿ ಬಡೇಲಡಕು ಗ್ರಾಮದವರು ಜಯಗಳಿಸಿ ಕರಿಯೊದಿಗೆ ಹೋದರು. ಆದರೆ ಮಾತಾಡುವ ; ಟೋಪಿಗಳನ್ನು ಅದಲು ಬದಲು ಮಾಡುವ ಕಲೆಯಲ್ಲಿ ಪರಿಣತರಾದದ್ದು ಮಾತ್ರ ಸದರಿ ಗ್ರಾಮದವರೆಂಬುದು ನಿರ್ವಿವಾದ ಸಂಗತಿ. ಒಂದು ವಿಶೇಷವೆಂದರೆ ಸದರಿ ಗ್ರಾಮದಲ್ಲಿ ಎಳೆ ಕಂದಮ್ಮಗಳು ಭೂಮಿಗುದುರಿದ ಒಂದೆರಡು ತಿಂಗಳಲ್ಲಿಯೇ ಮಾತಾಡಲಾರಂಭಿಸುತ್ತವೆ. ಇಲ್ಲಿನ ಜನ ಓತೋಪ್ರೋತವಾಗಿ ಬೈಯ್ಯಬಲ್ಲ ಭಾಷಾತಜ್ಞರು. ದಿಗ್ಗಜಗಳೂ ಹೆದರಿ ಓಡುವಂತೆ ಇವರು ಜಗಳವಾಡಬಲ್ಲರು. ಇವರು ಎಲ್ಲೇ ಇರಲಿ, ಹೇಗೇ ಇರಲಿ ತಮ್ಮ ನಾಲಗೆಯಿಂದಾಗಿ ಇಂಥ ಊರವರೆಂದು ಗುರುತಿಸಲ್ಪಡುತ್ತಾರೆ. ಇಂಥ ಹತ್ತು ಹಲವು ಕಾರಣಗಳಿಂದ ತರಲಳ್ಳಿ ಎಂಬ ಉಪನಾಮವಾಚಕ ಸದರಿ ಗ್ರಾಮದ ಮುಡಿ ಅಲಂಕರಿಸಿರುವುದು. ಆದರೆ ಒಂದು ಮಾತಂತು ಸತ್ಯ; ವಿಷ್ಣು ಪರಮಾತ್ನನನ್ನು ಭಕ್ತಾದಿಗಳು ಯಾವ ಪ್ರಕಾರವಾಗಿ ಸಹಸ್ರ ನಾಮಗಳಿಂದ ಅರ್ಚಿಸುವರೋ; ಹಾಗೆಯೇ ಸದರಿ ಗ್ರಾಮವನ್ನು ಅದರ ಅಭಿಮಾನಿಗಳು ಹತ್ತಾರು ನಾಮೋಪನಾಮಗಳಿಂದ ಶ್ಲಾಘಿಸುವರು.

ಸದರಿ ಗ್ರಾಮದ ನೀರಿನ ಮುಂದೆ ತೆಂಗಿನ ತಿಳಿಜಲವನ್ನು ನೀವಳಿಸಿ ತೆಗೆಯಬೇಕು ಹಂಗಿತ್ತಾ ಊರಿನ ನೀರಂತ ಹೇಳಿದೆನಲ್ಲ. “ನೀವಿಲ್ಲೇ ಜೀವ ಸಮಾಧಿ ಆಗೋದಾದ್ರೆ ನಿಮ್ಗೆ ನೂರೆಕರೆ ಜಮೀನನ್ನು ಕೊಡ್ತೀನಿ” ಎಂದು ಬಾಗಳಿ ಪಾಳ್ಳೇಗಾರ ಬಸವಂತಪ್ಪ ನಾಯಕ ಮಾಡಿದ ಮನವಿಯನ್ನು ತಿರಸ್ಕರಿಸಿದ ವೈರಾಗ್ಯಮೂರ್ತಿ ಶಿವಲಿಂಗಾವರೂಢರು ದೂರದೀ ಊರಿಗೆ ಬಿಜಯಂಗೈದು ನೀರಿನ ಸ್ವಾದಿಷ್ಟ ಗುಣಕ್ಕೆ ಮನಸೋತು ಕೈವಲ್ಯ ಪದವಿ ಹೊಂದಿದರು ಎಂಬ ಸಂಗತಿ ಮಲ್ಹಾಕನಹಳ್ಳಿಯ ಮರಿಲಿಂಗದೇವರು ಕವಿ ಬರೆದ ಶಿವಲಿಂಗಾರೂಢ ಮಹಾತ್ಮೆಯಲ್ಲಿ ಉಲ್ಲೇಖವಾಗಿದೆ. ಅವರ ಸಮಾಧಿಯ ದರ್ಶನಾಕಾಂಕ್ಷಿಗಳಾಗಿ ದೂರದೂರುಗಳಿಂದ ಬರುವ ಭಕ್ತಾದಿಗಳು ಊರಿನ ನೀರನ್ನು ತೀರ್ಥವೆಂದು ಭಾವಿಸಿ ಒಯ್ಯುತ್ತಿದ್ದರು. ಸದರಿ ಗ್ರಾಮದ ಒಂದು ತಂಬಿಗೆ ನೀರು ಮೃಷ್ಟಾನ್ನ ಭೋಜನಕ್ಕೆ ಸಮವೆಂಬ ನಾಣ್ನುಡಿಯೂ ಉಂಟು. ಅಂಥ ಲೋಕವಿಖ್ಯಾತ ಸಿಹಿನೀರೊಳಗೆ ಏಳು ಕೋಟಿ ಕಹಿ ಹೇಗೆ ತುಂಬಿಕೊಂಡಿತೆಂಬುದರ ಬಗ್ಗೆ ಹತ್ತಾರು ಕಪೋಲಕಲ್ಪಿತ ಕಥೆಗಳುಂಟು. ಅವುಗಳ ಪೈಕಿ ಒಂದು ಮಾತ್ರ ಬಹು ಜನಪ್ರಿಯ; ಅದೆಂದರೆ……
ಹಲವು ವರುಷಗಳ ಹಿಂದಿನ ಮಾತು, ಸಿಹಿನೀರಿನ ಪ್ರಭಾವದಿಂದಾಗಿಯೋ ಏನೋ! ಸುಖದ ಸುಪ್ಪತ್ತಿಗೆಯಲ್ಲಿ ವಾಲಾಡುತ್ತಿದ್ದ ಸದರಿ ಗ್ರಾಮಕ್ಕೆ ವಿಚಿತ್ರ ವೇಷ ಭೂಷಣದ ಸಾಧು ಓರ್ವ ದೂರದ ತೆಲುಗು ಸೀಮೆಯಿಂದ ಬಂದನು. ಚಿತಾ ಭಸ್ಮವನ್ನು ಮಂತ್ರೋದಕದಲ್ಲಿ ಕಲೆಸಿ ಮೈತುಂಬ ಬಡಿದುಕೊಂಡಿರುತ್ತಿದ್ದ. ಅವನ ಮರ್ಮಾಂಗ ತ್ರಿಶೂಲವನ್ನು. ಆತ ಏನು ತಿನ್ನುತ್ತಿದ್ದನೇನೋ! ಆದರೆ ಒಂದು ದಿನವಂತೂ ಆತ ವಿಪರೀತ ಬಾಯಾರಿದ. ಬಾಯಾರಿಕೆ ತೀರಿಸುವ ಹೊಣೆಯನ್ನು ಗ್ರಾಮದ ಮೇಲೇರಿದ. ಒಂದು ತಂಬಿಗೆ ನೀರು ಕೊಟ್ಟು ಆತನ ದಾಹ ತೀರಿಸಲು ಯಾರೂ ಮುಂದೆ ಬರಲಿಲ್ಲ. ಕಿಡಿಗೇಡಿಯೋರ್ವನು ನೀರಿನಲ್ಲಿ ಸಾಕಷ್ಟು ಉಪ್ಪು ಬೆರೆಸಿ ಕುಡಿಯಲು ಕೊಟ್ಟ. ಸಾಧು ಒಂದು ಹನಿ ಬಿಡದೆ ಹಾಗೆ ಕುಡಿದುಬಿಟ್ಟ. ಆ ಕ್ಷಣದಿಂದ ಸದರಿ ಗ್ರಾಮದ ನೀರು ದಾಹ ಹಿಂಗಿಸುವ ಶಕ್ತಿಯನ್ನು ಕಳೆದುಕೊಂಡಿತು. ಅಂದಿನಿಂದ ಅದು ನಾಯಿಮೊಲೆ ಹಾಲಿಗೆ ಸಮವಾಯಿತು.
ಶಾಪಗ್ರಸ್ತ ನೀರು ತನ್ನ ಮಟ್ಟವನ್ನು ತಾನು ಕಾಯ್ದುಕೊಳ್ಳುವ ಗುಣವನ್ನು ಮಾತ್ರ ಕಳೆದುಕೊಳ್ಳಲಿಲ್ಲ ಎಂಬುದೇ ಸಮಾಧಾನದ ಸಂಗತಿ. ಕಾಡಿರದಿದ್ದಲ್ಲಿ ವ್ಯಾಘ್ರವೂ; ವ್ಯಾಘ್ರವಿರದಿದ್ದಲ್ಲಿ ಯಾವ ರೀತಿ ಪರಸ್ಪರ ಅವನತಿ ಹೊಂದುವವೋ ಹಾಗೆಯೆ ನೀರು ಮತ್ತು ಗ್ರಾಮವುಪರಸ್ಪರ ಬೆನ್ನು ಮಾಡಿದವು.

-೩-
ಗ್ರಾಮದ ಬಗ್ಗೆ ನೀರು ತಳೆದ ಕಠೋರ ನಿಲುವನ್ನು ಕುರಿತು ಗ್ರಾಮದ ದೈವಸ್ಥರು ಪಕ್ಷಬೇದ ಮರೆತು ಚರ್ಚಿಸಿದರು. ಒದ್ದೋ ಬಡಿದೋ ಕಠೋರ ನಿಲುವಿನ ಹೆಂಗಸರನ್ನು ದಾರಿಗೆ ತರುವ ರೀತಿಯಲ್ಲೆ ನೀರನ್ನು ದಾರಿಗೆ ತರುವುದು ಸಾಧ್ಯವಿರಲಿಲ್ಲ. ಗ್ರಾಮದಿಂದ ಎಷ್ಟೇ ಅಪಚಾರವಾಗಿದ್ದರೂ ಅದು ಸೇದಿದರೆ ಬಾವಿಯಿಂದ ಮೇಲೆ ಬರುವುದು, ಸುರಿದರೆ ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಸುಲಭವಾಗಿ ವರ್ಗವಾಗುತ್ತದೆ. ಅದು ಉಂಡ ತಟ್ಟೆಯನ್ನು ತೊಳೆಯುವಷ್ಟೆ ಸುಲಭವಾಗಿ ಮಲ ವಿಸರ್ಜಿಸಿದ ತಿಕವನ್ನು ತೊಳೆಯುತ್ತದೆ. ಕುಡಿಯಲಿಕ್ಕೆ ಯೋಗ್ಯವಲ್ಲ ಎಂಬಪವಾದ ಬಿಟ್ಟರೆ ಬಾಕಿಯಂತೆ ಅದರಲ್ಲಿ ಎಲ್ಲ ದೊಡ್ಡ ಗುಣಗಳಿವೆ, ಆದ್ದರಿಂದ ಕೇವಲ ಕಾಠಿಣ್ಯ ಎಂಬ ಕಾರಣದಿಂದ ತಮ್ಮ ಊರಿನ ನೀರಿಗೆ ಸುತ್ತಮುತ್ತಲ ಗ್ರಾಮಗಳಿಂದ ಅಪಮಾನವಾಗದಂತೆ ನೋಡಿಕೊಳ್ಳಬೇಕೆಂದು ದೈವಸ್ಥರು ನಿರ್ಧರಿಸಿದರಾದರೂ ಸಾಧ್ಯವಾಗಲಿಲ್ಲ. ಕಾಲರಾ ರೋಗ ಹರಡಲು ಹೇಗೆ ನೊಣಗಳ ಸಹಾಯ ಪಡೆಯುವುದೋ ಹಾಗೆಯೇ ನೀರಿನ ಕಾಠಿಣ್ಯ ಸ್ವಭಾವ ಜಗಜ್ಜಾಹಿರಾಗಲು ಸದರೀ ಗ್ರಾಮದ ಐತಿಹಾಸಿಕ ಸ್ಮಾರಕಗಳ; ಆರೂಢರ ಸಮಾಧಿಯನ್ನು ಬಳಸಿಕೊಂಡಿತು. ಕ್ರಮೇಣ ಸಿನ್ನೇರ್ನಳ್ಳಿ ಗ್ರಾಮದ ಜನರ ಸ್ವಭಾವವೂ ಗಣನೀಯವಾಗಿ ಬದಲಾಯಿತು. ಹಾಗೆಯೇ ಸೋಮಾರಿಗಳಾದ ಗಂದಸರು ಪ್ರತಿಯೊಂದು ಕೆಲಸ ಕಾರ್ಯಗಳಿಗೂ ತಂತಮ್ಮ ಮನೆಯ ಹೆಂಗಸರನ್ನು ಅವಲಂಬಿಸಲಾರಂಭಿಸಿದರು. ಕಷ್ತಸಹಿಷ್ಣುಗಳಾದ ಹೆಂಗಸರಾದರೋ ಮೂರು ನಾಲ್ಕು ಹರದಾರಿ ದೂರದ ಹಳ್ಳದಿಂದ ಕುಡಿಯೋ ನೀರನ್ನು ಹೊತ್ತುತರಲಾರಂಭಿಸಿದರು. ಕೆಲವು ತರುಣಿಯರ ಜಘನದ ಪರಿಮಾಣ ಗಣನೀಯವಾಗಿ ಹೆಚ್ಚಳವಾಗಿದ್ದನ್ನು ಗ್ರಾಮ ಸೂಕ್ಷ್ಮವಾಗಿ ಗಮನಿಸದೆ ಇರಲಿಲ್ಲ. ಹೆಣ್ಣು ತರುವ ಕೊಡುವ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಂದಿನಿಂದ ಸದರಿ ಗ್ರಾಮವು ಒಂಟಿಯಾಯಿತು. ಸಂಬಂಧಗಳು ಅದೇ ಊರೊಳಗೆ ಗಿರಕಿ ಹೊಡೆಯಲಾರಂಭಿಸಿದವು.

ದಾಹ ತಾಳಲಾರದೆ ಸರಾಯಿಯನ್ನು ಕಂಠಮತ ಕುಡಿದು ಸತ್ತ ಮಲ್ಲಯ್ಯನ ಕಳೇಬರವನ್ನು ಹೊತ್ತೊಯ್ದ ವಿಧವೆಯರು ಸರಾಯಿ ಅಂಗಡಿ ಎದುರು ಲಬೋ ಲಬೋ ಬಾಯಿ ಬಡಿದುಕೊಂಡರು.

ಇದಕ್ಕೆ ಅಪಾರ ಜನಬೆಂಬಲ ದೊರೆತು ಸರಾಯಿ ಅಂಗಡಿಯನ್ನು ಎತ್ತಂಗಡಿ ಮಾಡಿದ ಬೆನ್ನ ಹಿಂದೆಯೇ ಕುಡಿಯೋ ನೀರಿನ ಹೋರಾಟದ ವೇದಿಕೆ ರೂಪಗೊಂಡಿತು. ಈ ಹೋರಾಟ ಸಿನ್ನೇರ್ನಳ್ಳಿಯಿಂದ ಹೋಬಳಿಗೆ; ಹೋಬಳಿಯಿಂದ ಜಿಲ್ಲಾಮಟ್ಟಕ್ಕೆ; ಜಿಲ್ಲಾ ಕೇಂದ್ರದಿಂದ ರಾಜಧಾನಿವರೆಗೆ ಕ್ಷೀಪ್ರಗತಿಯಲ್ಲಿ ವ್ಯಾಪಿಸಿತು. ವಿವಿಧ ವರ್ಷಗಳ, ವಿವಿಧ ಜಾಯಮಾನಗಳ ಸಂಘತನೆಗಳ ಅಪಾರ ಬೆಂಬಲ ಗಳಿಸಿಕೊಂಡಿತು. ನೀರು ಮಾಧ್ಯಮಗಳಲ್ಲಿ ವಿವಿಧ ಆಯಾಮ ಪಡೆಯಿತು. ಎಲ್ಲಾ ಪ್ರಾಕಾರಗಳಿಗೆ ವಸ್ತುವಾಗಿ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿತು. ಸತತ ಎರದೂ ಚುನಾವಣೆಗಳನ್ನು ಬಹಿಷ್ಕರಿಸಿದ ನಂತರವೇ ಸರಕಾರ ಕಣ್ಣು ತೆರೆದದ್ದು.
ಕುಡಿಯುವ ನೀರಿನ ಯೋಜನೆಯನ್ನು ಜಾರಿ ತರಲೋಸುಗ ಸರ್ಕಾರ ಅಧಿಕಾರಿಗಳ ತಂಡವೊಂದನ್ನು ಸದರಿ ಗ್ರಾಮಕ್ಕೆ ಕಳಿಸಿತು. ನಡೆಯಲಿರುವ ಲಾಭದಾಯಕ ಕಾಮಗಾರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲವರು ಅಧಿಕಾರಿಗಳನ್ನು ಸ್ವಾಗತಿಸಿ ಉಪಚರಿಸಲು ಪ್ರಯತ್ನಿಸಿ ವಿಫಲರಾದರು. ಕಾರಣ ಅಧಿಕಾರಿಗಳು ನೀರಾವರಿ ಮಂತ್ರಿಯ ದೂರದ ಸಂಬಂಧಿಯಾದ ಮಂಡ್ರಪ್ಪನವರ ಗಂಗಾಧರಪ್ಪನ ಮನೆಯ ಆತಿಥ್ಯ ಸ್ವೀಕರಿಸಿಧರು. ತಿಂಗಳೊಪ್ಪತ್ತಿನಲ್ಲಿ ಭಾಗೀರಥಿ ಯೋಜನೆಯಡಿ ಕಾಮಗಾರಿ ಆರಂಭವಾಯಿತು. ಸಮಸ್ಯೆಗಳ ಅನ್ವೇಷಣೆಯಲ್ಲಿದ್ದ ಹೋರಾಟಗಾರರು ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಪತ್ತೆಹಚ್ಚಿ ಹುಯಿಲೆಬ್ಬಿಸಿದರು. ಅದರ ಹಿಂದೆಯೇ ಹೋರಾಟದ ಮುಂಚೂಣಿಯಲ್ಲಿದ್ದ ಕಾಮ್ರೇಡ್ ನಾಗರಾಜ ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವನೆಂಬ ಸುದ್ದಿ ಹರಡಿದ್ದೂ ತದ ಆಗಲಿಲ್ಲ, ನಡೆದ ಮಾರಾಮಾರಿಯಲ್ಲಿ ಹಲವರು ಅಂಗವಿಕಲರಾಗಿದ್ದರೂ ತಡ ಆಗಲಿಲ್ಲ. ಇಂಥ ಹತ್ತು ಹಲವು ಕಂಟಕಗಳ ನಡುವೆಯೂ ಕುಡಿಯೋ ನೀರಿನ ಯೋಜನೆಯ ಕಾಮಗಾರಿ ಮುಗಿಯಿತು.

ಆದರೆ ಅಷ್ಟೊತ್ತಿಗಾಗಲೇ ಸ್ಥಳೀಯವಾಗಿ ರೂಪುಗೊಂಡಿದ್ದ ಪುಡಾರಿಗಳಿಗೂ; ಆಳುವ ಪಕ್ಷದ ನಾಯಕರಿಗೂ ನಡುವೆ ಅತಿಥಿ, ಅಧ್ಯಕ್ಷರ ಆಯ್ಕೆ ವಿಷಯದಲ್ಲಿ ಭಿನ್ನಾಭಿಪ್ರಾಯ ತಲೆದೋರಿ ಉದ್ಘಾಟನಾ ಸಮಾರಂಭ ವಿಳಂಬಗೊಂಡಿತು. ಬಾಯಾರಿದವರು ದಂಗೆ ಎದ್ದರು, ಒಂದೆರಡು ಕೊಳವೆ ಮಾರ್ಗಗಳು ಜಖಂ ಆದವು. ಮಾಜಿ ಸ್ವಾತಂತ್ರ್ಯ ಹೋರಾಟಗಾರ ಮೂಲಿಮನಿ ಚಂಡ್ರಜ್ಜ ವಾರೊಪ್ಪತ್ತಿನಲ್ಲಿ ನೀರು ಬಿಡದಿದ್ದಲ್ಲಿ ಎಂಬತ್ತೆರದರ ಯುವಕನಾದ ತಾನು ಅಸೆಂಬ್ಲಿ ಎದುರಿಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದನಲ್ಲದೆ ರಾಜಕಾರಣಿಯೋರ್ವನ ಕೈಯಿಂದ ಬಿಸಲೇರಿ ಬಾಟಲಿ ಕಿತ್ತುಕೊಂಡು ಆತನ ಕಪಾಳಕ್ಕೆರಡು ಬಿಗಿದು ಎಚ್ಚರಿಸಿದನು. ಕೂಡಲೇ ಅಲ್ಪಸಂಖ್ಯಾತ ಸರಕಾರ ಇಂಥ ದಿನ ಇಂಥವರ ಕೈಯಿಂದ ಕುಡಿಯೋ ನೀರಿನ ಸರಬರಾಜು ಉದ್ಘಾಟನೆ ಮಾಡಿಸುವುದಾಗಿ ಪ್ರಕಟಿಸಿತು.
ಅದು ತಿಳಿದದ್ದೇ ತಡ ಬಣ್ಣ ಬಣ್ಣದ ವಿವಿಧ ಗಾತ್ರದ ಪ್ಲಾಸ್ಟಿಕ್ ಕೊಡಪಾನಗಳು ಸದರಿ ಗ್ರಾಮಕ್ಕೆ ಪ್ರವಾಹೋಪಾದಿಯಲ್ಲಿ ಹರಿದುಬಂದವು. ಹೆಂಗಸರು ತಂತಮ್ಮ ಸೊಂಟಗಳ ಬಣ್ಣದ ಮ್ಯಾಚಿಂಗ್ ಕೊಡಗಳನ್ನು ಖರೀದಿಸಿದರು. ಸ್ಥಳೀಯ ಪತ್ರಿಕೆಗಳು ಸಿನ್ನೇರ್ನಳ್ಳಿಯ ಬಗ್ಗೆ ವಿಶೇಷ ಪುರವಣಿಗಳನ್ನು ಪ್ರಕಟಿಸಿದವು. ನಾಳೆ ನೀರು ಬಿಡುವ ಸಮಾರಂಭ ಅಂದರೆ ಇವತ್ತಿನಂತೆ ಇದ್ದ ಮೂರು ನಲ್ಲಿಗಳ ಸುತ್ತ ನೂರಾರು ಸಂಖ್ಯೆಯಲ್ಲಿ ಕೊಡಪಾನಗಳನ್ನು ಜಮಾ ಮಾಡಲಾಯಿತು.

ಆ ದಿನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವ್ಯಕ್ತಿ ಗ್ರಾಮದ ಕಣ್ಮಣಿಯೂ ಆಗಿದ್ದ. ಜಲಭಯರೋಗದಿಂದ ಮೂರು ತಿಂಗಳ ಕಾಲ ನರಳಿ ಮೊನ್ನೆಯಷ್ಟೇ ಗುಣಮುಖನಾಗಿ ಬಂದಿದ್ದ ದಯಾನಂದ ಗೌಡ ಅತ್ತ ಭಾಷಣ ಮಾಡುತ್ತಿರಲು ಇತ್ತ ಮೂರು ಜಾಗಗಳಲ್ಲಿದ್ದ ಮೂರು ನಲ್ಲಿಗಳ ಕೊರಳಿಗೆ ಪೂಮಾಲೆಗಳನ್ನು ಹಾಕಿ ಪೂಜಿಸುತ್ತಿರುವ, ಒಂದೊಂದು ನಲ್ಲಿಗೂ ಒಂದೊಂದು ಹೆಸರನ್ನು ಇಡುತ್ತಿರುವ, ವಿಶೇಷ ಗೆಟಪ್‌ಗಳಿಂದ ಬೀಗುತ್ತಿರುವ ಮಹಿಳೆಯರು ಎದುರಾಳಿಗಳ ಕೈಗೆ ಸಿಕ್ಕದ ಹಾಗೆ ತಲೆಗೂದಲನ್ನು ಹಿಂದಕ್ಕೆ ಬಿಗಿದು ಕಟ್ಟಿದರು. ಸೀರೆಗಳನ್ನು ತುಸು ಮೇಲಕ್ಕೆತ್ತಿ ಕಟ್ಟಿ ತೊಡೆಗಳನ್ನು ಆಯುಧಗಳೋಪಾದಿಯಲ್ಲಿ ಝಳಪಿಸುತ್ತಿದ್ದರಲ್ಲದೆ ಹುಬ್ಬುಗಳನ್ನು ಮೇಲಕ್ಕೇರಿಸಿ ದೃಷ್ಟಿಯುದ್ದ ನಿರತರಾಗಿದ್ದರು. ಅದೇತಾನೆ ದೈವತ್ವ ಲಭಿಸಿದ್ದ ನಲ್ಲಿ ನಾಚಿ ತಲೆತಗ್ಗಿಸಿತ್ತು.

ಅತ್ತ ಅತಿಥಿ ಗೌಡ ಹಸಿರು ಗುಂದಿ ಒತ್ತಿದ ಎಂಬುದನ್ನು ಸಾರಿ ಹೇಳಲೋಸುಗ ಢಂಢಮಾರಂತ ಬಾಂಬುಗಳನ್ನು ಎಗರಿಸಲಾಯಿತು. ಇತ್ತ ಹೆಂಗಸರು ಹೋ ಎಂದು ಹರ್ಷೋದ್ಗಾರ ಮಾಡಿ ನಾಮುಂದು ತಾಮುಂದು ಅಂತ ಮುನ್ನುಗ್ಗಿದರು. ಬಂದೋಬಸ್ತಿಗೆಂದು ಪೋಲಿಸರು ಬಂದಿದ್ದರಿಂದ ಗಲಾತೆ ನಡೆಯಲಿಲ್ಲ. ನಲ್ಲಿ ಎಂದು ನೀರು ಸುರಿದೀತೋ! ತಮ್ಮ ಕೊಡಗಳೆಂದು ತುಂಬುವವೋ! ಎಂಬ ನಿರೀಕ್ಷೆ, ಆಶ್ಚರ್ಯ, ಆತಂಕ, ಉದ್ವಿಗ್ನತೆ…….

ಆಗ ಇದ್ದಕ್ಕಿದ್ದಂತೆ ಸರ್ರರ್ ಬುಸ್ಸಸ್ ಅಂತ ಶಬ್ದ ಮಾಡಲಾರಂಭಿಸಿದ್ದೇ ಹೆಂಗಸರೆಲ್ಲ ಹೆದರಿ “ಓಹ್ ಓಹ್ ದೆವ್ವ…… ನಲ್ಲ್ಯಾಗ ದೆವ್ವ” ಎಂದು ಕೂಗುತ್ತ ದಿಕ್ಕು ದಿಕ್ಕಿಗೆ ಓಡಲಾರಂಭಿಸಿದರು. ನಂತರ ತಮ್ಮನ್ನು ತಾವೇ ನಿಂದಿಸಿಕೊಳ್ಳುತ್ತ ಮುಂದೆ ಬಂದರು. ನಲ್ಲಿಗಳಿಗೆ ಹೊಂದಿಕೊಂಡರು.

ಹೊಸದಾಗಿ ನನಗಂಡ ಎಲ್ಲಿ ಕುಂಡ್ರುಗೊಡಸುವಲ್ಲ ಎಂಬಂತೆ ಮೊದ ಮೊದಲು ನಲ್ಲಿಗಳು ಸರಿಯಾಗಿ ಕೆಲಸ ಮಾಡಿದವು. ನಂತರ ಎರಡು ಕೆಟ್ಟು ಮಂಡ್ರಪ್ಪನವರಂಗಳದ ನಲ್ಲಿ ಮಾತ್ರ ಉಳಿದುಕೊಂಡಿತು. ಆದರೆ ಅದರಲ್ಲೂ ಅಷ್ಟೇನೆ…… ನೀರು ಬಂದರೆ ಬಂತು, ಇಲ್ಲಾಂದರೆ ವಾರಗಟ್ಟಲೆ ಇಲ್ಲ. ಯಾರೋ ಬೈದರೆಂಬ ಕಾರಣಕ್ಕೆ ಊರು ಬಿಟ್ಟಿರುವ ಮೂರು ಮಂದಿ ಹೆಂಡರಿಗೆ ಗಂಡನಾದ ರಾಜನು ಹತ್ತನ್ನೆರಡು ದಿನಗಳ ನಂತರ ನೀರು ಬಿಡಲಿರುವನೆಂಬ ಸುದ್ದಿ…… ಇದರಲ್ಲಿ ಎಷ್ಟು ನಿಜವೋ! ಎಷ್ಟು ಸುಳ್ಳೋ? ಆದರೆ ನಲ್ಲಿ ಇಂದು ಮುಂಜಾನೆ ಸರ್ರರ್ ಎಂದು ಸದ್ದು ಮಾಡಿ ನೀರು ಬರುವ ಮುನ್ಸೂಚನೆ ನೀಡಿರುವುದಂತು ನಿಜ. ಆದ್ದರಿಂದ ಎಲ್ಲರಲ್ಲಿ ಸಮರೋತ್ಸಾಹ……

-೪-

ಐತುಂಬ ಕೊಡಗಳನ್ನು ಮುಡಿದು ಮಾರಿಗೊಂದರಂತೆ ಹೆಜ್ಜೆ ಇಡುತ್ತ ಮಹಿಳಾ ಕರಾಟೆ ಪಟುವಿನಂತೆ ಆಗಮಿಸಿದ ಚೆನ್ನವ್ವನನ್ನು ನೋಡಿದೊಡನೆ ಗೊಲ್ತೆಲ್ಲವ್ವ ತನ್ನ ಬೊಂಬಾಯಗಲದ ಬಾಯಿ ತೆರೆದು “ಬಾರೇ ಬಾ…. ನಮ್ಮುಡ್ರುಚ್ನೆ ವಯ್ತಾವ…. ಅವ್ನೆ ಯಿಡುಕೊಂಡೋಗ್ವಂತಿ ಬಾ” ಎಂದು ಕೊಕ ಕೊಕ ನಗುತ್ತ ಸ್ವಾಗತ ಕೋರಲು ಅಲ್ಲಿದ್ದ ಹೆಂಗಸರು ಹೋಗಗ ಎಂದು ನಗಾಡಿದರು. ಅದಕ್ಕೆದ್ದು ಚೆನ್ನವ್ವ “ಉಪ್ಪಾಟಿ ಉಪ್ನೀರ್ಕುಡ್ದು ಅದ್ಯಾವ್ ಪಾತಿ ಉಚ್ಚೆ ವಯ್ದಾರಭೇ ನಿನ್ನುಡ್ರು, ಎಲ್ಲಾದಾವ್ ತೋರ್ಸು….” ಎಂದೊಂದು ರವಂಡು ಕಣ್ಣು ತಿರುಗಿಸಲು ಅಲ್ಲೆ ಅರಿವೆ ಜಮಡುತ್ತ ನಿಂತಿದ್ದ ಬಾಲಗೊಮ್ಮಟಗಳು ಚಟಕ್ಕನೆ ತಂತಮ್ಮ ನಲ್ಲಿ ಮರಿಗಳನ್ನು ಮರೆಮಾಚಿಕೊಂಡವು.

ಈ ಪ್ರಕಾರವಾಗಿ ನಗೆ ಚಟಾಕಿ ಮಾತಾಡುತ್ತಲೇ ಸರತಿ ಸಾಲಲ್ಲಿ ಯಾರ್ಯಾರ ಗುರುತುಗಳು ಎಲ್ಲೆಲ್ಲಿವೆ ಎಂಬುದನ್ನು ಸಿಂಹಾವಲೋಕನದಿಂದ ಪರಿಶೀಲಿಸಿದಳು. ಮುಂದಿದ್ದೋವು ಅದೆಂಗೆ ಹಿಂದಕೋದವು…. ಅವ್ಕೇನು ಕಾಲು ಬಂದವೇನು ಎಂದು ಯೋಚಿಸಿ “ಅದ್ಯಾವಾಕಿ ನನ್ನೋವ್ನಯಿಂದಕ್ಕಿಟ್ಟಾಕಿ” ಎಂದು ಬದ್ದ ಬ್ರುಕುಟಿಯಾಗಿ ಎಲ್ಲ ಘನಸ್ತಿಯರ ಕಡೆ ನೋಡಿದಳು. ಆಕೆಯ ಮಾತಿಗೆ ಪ್ರತಿ ನುಡಿಯುವ ತಾಕತ್ತು ಇದ್ದದ್ದು ಎಲ್ಲವ್ವ ಮತ್ತು ಮೆಳ್ಳಗಣ್ಣಿನ ಕರಿಬಸವಿಯರಿಗೆ ಮಾತ್ರ. “ಯಾರ್ಗುರ್ತೋ ಯ್ಯೋನ್ಕಥಿಯೋ…. ಯೀ ಸುಮಾರದ್ನೆಲದ ಮ್ಯಾಲಯಿಂದ್ಕಿದ್ದೋವು ಮುಂದಕ ಬೊರ್ತಾವ…. ಮುಂದಕ್ಕಿದ್ದೋವು ಯಿಂದಕೋತಾವೆಯೇ ನನ್ ಸೊಸಿಯೇ…. ಯಿಂದ್ಯೋನು ಮುಂದ್ಯೋನು ಬುಡು ಮದ್ಲು ನೀರೊಂದುದುರ್ಲಿ…. ಬಾ…. ಕುಂತ್ಗೆಂಡು ವಂದ್ನಾಕ್ಮಾತಾಡ್ವಂತಿ” ಎಂದು ಅಲೌಕಿಕತೆಯ ಗಾಳ ಹಾಕಿ ಆಕೆಯನ್ನು ಸೆಳೆಯಲು ಎಲ್ಲವ್ವ ಮಾಡಿದ ಪ್ರಯತ್ನ ವ್ಯರ್ಥವಾಯಿತು. “ಯೇದಾಂತ ಯ್ಯೋಳಾಕೆ ಕ್ಯೋಳಾಕಿದು ಸೆರಿಯಾದ ಟೇಮಲ್ಲವೋ ಯೆಲ್ಲಮ್ಮತ್ತೇಯ್…. ಮನ್ಯಾಗ ಮಂದಿ ಬಾಯಾಗೆಲ್ಡು ಕಾಳು ನೀರಾಕ್ಕೊಳ್ದೆ ಯಲ್ಡು ದಿನಾಯ್ತು. ಉಪ್ನೀರು ಕುಡ್ದೂ ಕುಡ್ದು ಬಾಯೆಂಭೋವು ಕ್ಯೆಟ್ ಕೆರ ಆಗ್ಯಾವ…. ಯಾವಾಕಿತ್ತಾಕೆಂಬೋದ್ನ ಮದ್ಲೇಳು….” ಎಂದು ಚೆನ್ನವ್ವ ರವುಸದಿಂದ ನುಡಿದಳು.

ಅದಕ್ಕಿದ್ದು ಹುಟ್ಟಾ ಜಗಳಗಂಟಿಯಾದ ಕರುಬಸುವಿಯು “ವುಪ್ನೀರು ಕುಡ್ದೂ ಕುಡ್ದು ಯಲ್ಲಾರ ಬಾಯಿನೂ ಯ್ಯೋಲ್ಗುಂಡ್ಯಾಗವವ್ವಾ…. ನನ್ನಾಟಗೊಳ್ಳ ರಾಜೆಂಭೋನು ಸರ್ಯಾಗ್ನೀರು ಬುತ್ತಿದ್ದರ್ಯಾಕ ನಾವ್ ವಬ್ರು ಥೆಲೀನೊಬ್ರು ಯಿಡುಕಂತಿದ್ವೆವ್ವಾ…. ಯಿನ್ನೇನೇನೀಸೋದೈತೋ” ಎಂದೊಂದುಸುರು ಬಿಡಲು ಎದುರಿಗಿದ್ದ ಬರಿಗೊಡಗಳು ಅಲ್ಲಾಡಿದವು. ಲಕ್ಷೋಪಲಕ್ಷ ಬಯ್ಗಳ ಸೃಷ್ಟಿಕರ್ತೆಯೂ : ಅದ್ವಿತೀಯ ಜಗಳಗಂಟಿಯೂ ಆದ ಆಕೆ ಮಾಹಾಮಳ್ಳಿಯಂತೆ ಮಾತಾಡಿದ್ದು ಚವುಡಿ, ಗವುರಿ, ಮಾಂಕಾಳಿಯರೇ ಮೊದಲಾದ ಅತಿರಥೆ ಮಹಾರಥೆಯರಿಗೆ ಹಿಡಿಸಲಿಲ್ಲ. ಗವುರಿ ತಲೇಲಿ ಹೇನಾಯುವ ಕೈಂಕರ್ಯದಲ್ಲಿ ಮಗ್ನಳಾಗಿದ್ದ ಲಸುಮಿಯು “ಅಲಲಲಾ ಯಂಥಾ ಕಾಲ ಬೊಂತಂತೀನಿ…. ಕರುಬೊಸವತ್ತೆ ಯಾಕಿವತ್ತು ವಡ್ಲಾಗೊಂದು ನಾಲ್ಗೆ ಮ್ಯಾಲೊಂದಿಟ್ಕೊಂಡು ಯ್ಯೋಳಾಕತ್ಯಾಳಂತೀವ್ನಿ…. ಯಲ್ಲಾ ವುಪ್ನೀರ್ಮಯಿಮೆ….” ಎಂದು ಕಟುಗು ಮುಳ್ಳಾಡಿಸಿದಳು.

ಆಕೆಯ ಮಾತಿನ ಮರ್ಮ ಅರಿತ ಕರುಬೊಸುವಿ “ಯ್ಯೋನ್ಲೇ ಗಿಡ್ಡಿ…. ನಾನ್ನನ್ನೊಡ್ಲಗಿವನು ಸೆಂಟೈತಗೊಂಡೀನಲೇ….” ಎಂದಾಕೆ ಮುಂದೆ ಏನೋ ಅನ್ನಲಿದ್ದ ಮಾತನ್ನು ಅರ್ಧಕ್ಕೆ ತುಂಡರಿಸುತ್ತ ತಂಬೂರಿ ಸಿದ್ದವ್ವ “ಯ್ಯೋನ್ರೋಯ್…. ಕುಡಿಯಾಕೊಂದ್ಗುಟ್ಕು ನೀರಿಲ್ದಿದ್ರೂ ಯೀಟೊಂದು ಮಾತಡ್ತೀರಲ್ಲ ಯಿಂದಿನಾಲು ಕುಡುದಿದ್ರಿನ್ನೇಟೊಂದು ಮಾತಾಡ್ತಿದ್ರೆಭೇ…. ಮೈನೆಣ ಅರಗ್ಲಿಲ್ಲಾ…. ವಬ್ಳಿಗಾರ ನೀರಿನ ಬೊಗ್ಗೆ ಚಿಂತೈತೇನ್ರಲೇ ಭೋಸುಡೇರ….” ಎಂದು ವಿಚಾರಣೆ ಆರಂಭಿಸಿದಳು. ಆಕೆ ಯಜಮಾನ ಮನುಷ್ಯಳಾಗಿದ್ದುದರಿಂದ ಯಾರೊಬ್ಬರೂ ತೊಡೆಕೆರೆದುಕೊಳ್ಳಲಿಲ್ಲ. ಮುಖ ಮುಖ ನೋಡಿಕೊಂಡು ತೆಪ್ಪಗಾದರು.

ಮುದುಕಿ ಸಿದ್ದೆವ್ವ ಎಲ್ಲರತ್ತ ಸಿಂಹಿಣಿಯಂತೆ ನೋಡಲು ಎಲ್ಲರೂ ಒಂದು ಚಣ ಗಪ್‌ಚಿಪ್ ಆಗಿಬಿಟ್ಟರು. ಮುದುಕಿ ಇಮ್ಮಡಿ ಪುಲಕೇಶಿಯಂತೆ ಹೆಜ್ಜೆ ಹಾಕುತ್ತ ತನ್ನ ಕಡೆಗೇ ಬರಲು ಜಂಘಾಬಲ ವುಡುಗಿದ ಚೆನ್ನವ್ವ ಯ್ಯೋನೆವ್ವೋ ನೀನೊಂದೆ ಬೊಂದೀಯಂದ್ರ ಯಲ್ಲಾರ್ಬಾಯಿ ಬೊಂದಾಗ್ತಾವ್ನೋಡು ಎಂದು ಪೂಸಿ ಹೊಡೆದಳು. ಮುದುಕಿ ಅದಕ್ಕಾಕ್ಷಣ ಪ್ರಸನ್ನಚಿತ್ತಳಾದೊಡನೆ ತುಟಿ ಬಿರಿದದ್ದೂ ತಡಾಗಲಿಲ್ಲ. ತುಟಿ ಕೊರಕಲಿಂದ ತೊಂಬಲದ ರಸ ಅದರ ಬತ್ತಿದೆದೆ ಮೇಲಿಳಿಯಿತು. “ಯ್ಯೋನೇಯ್…. ಸ್ಚೆನ್ನೆವ್ವೋ ಮೊತ್ತೇ ಬಸುರಾದ್ಯೋ ಯೆಂಗ್ಯೋ” ಎಂದು ಆಕೆಯ ಹೊಟ್ಟೆ ಕಡೆ ನೋಡಿತು. ಯಿನ್ನು ನೀರ್ ಬೊರ್ಲಿಲ್ಲಾಪ್ಪ ಸಿವ್ನೆ ಬೊರ್ಲಿಲ್ಲಾಂದ್ರೆ ಮೊಕ್ಳು ಮೊರೀನೆಂಗಪ್ಪ ಸಂಬಾಳ್ಸೋದಂತ ನಮ್ ಚಿಂತೇ ನಮ್ಗೆ…. ಆದ್ರೀ ಮುದೇದ್ಕೆ ಯಲ್ರೂ ಬೊಸುರಾಗಿ ದಿನ್ಕೊಂದೊಂದು ಅಡಕಂತ ಕೂಕಂಡಿದ್ರ್ಯೋನೆ ಸೆಂತೋಸ” ಎಂದೊಂದು ಚಣ ಮನಸ್ಸಿನಲ್ಲಿ ಅಂದುಕೊಂಡು ಚಿನ್ನವ್ವ ಹೊರಗಡೆ ಕೇಳಿಸುವಂತೆ “ಒಳ್ಳೆ ಕಥಿ ಸುದ್ದಿ ಆತೆವ್ವಾ ನಿಂದು…. ಈ ಗಡ ಕಂಡಿರೋವ್ಕೆ ನೀರು ನಿಡಿ ಕೂಳು ಬೋನ ಜೊಡ್ಸೋದ್ರಾಗ ಸಾಕ್‌ಸಾಕಾಗತೈತೆ ಯೀಗ್ಲೇ ಯಣ್ ಜೆನುಮಕ್ಕೆ ಸುಡ್ಗಾಡೇ ವಾಸಿ ಅನಸತೈತೆ” ಎಂದು ಉದ್ದಾನ ಈರಭೋದ್ರ ದೇವರ ಗಾತ್ರದಂಥ ನಿಟ್ಟುಸಿರುಬಿಟ್ಟಳು. ಆಕೆ ಮಾತು ಕೇಳಿ ಮುದುಕಿ ಸಿದ್ದವ್ವಗೆ ನಗು ಮತ್ತು ಸಿಟ್ಟು ಒಟ್ಟಿಗೆ ಬಂದವು. “ಈಗೀನ್ಕಾಲ್ದ ವುಡ್ರೇಯಿಂಗ್ ಬುಡ್ರೇ…. ನಾಕಾರಡಕಂಡ್ರೇ ಅಳ್ಳಾಡಿ ವ್ವಾಗ್ತವೆ…. ಅದ್ನೋಳದ್ನೆಂಟದಕಂಡ್ರೂ ನಾನಿನ್ನೆಂಗದೀನ್ನೋಡೇಸ್ವನ್ನೀ ಯಲ್ಲಾದಾನೇ ಆ ನಿನ್ಗೊಂಡಾಯೆಂಭ ನನಾಟಗಳ್ಳ” ಎಂದು ಬಾಯಲ್ಲಿ ಗೋಟಡಕಿ ಹಾಕಿಕೊಂಡು ಕಡಿಯಲು ಕಟುಮ್ ಎಂಬ ಸೆವುಂಡು ಬಂದಿತು. ಅದಕ್ಕೆದ್ದು ಚೆನ್ನವ್ವ “ಅದಾನೆವ್ವೋ ಅದಾನೆ” ಎಂದು ಇನ್ನೊಂದು ಉಸುರು ಬಿಟ್ಟಳು. ಹೊಳಿಸಾಲ ದೇವರಿಗೆ ತನ್ನನ್ನು ತಾನರ್ಪಿಸಿಕೊಂಡವಳಾದ ಗಂಗಿ ಕುಪ್ಪಳಿಸಿ ಮುಂದೆ ಬಂದು “ಅಲ್ಲೆಭೇ ಈಟೆಕ್ಕ ಕ್ಯೋಳ್ತೀಯಲ್ಲಾ…. ನಿಂದು ಮುಟ್ ನಿಂತೈತಾಯಿಲ್ಲಾ ಆಟೇಳು” ಎಂದು ನಗೆಚಾಟಿಕೆ ಮಾಡಲು ಸಿದ್ದವ್ವ ನಿನ ಬಾಯಾಗ ನನ್ನ…. ಎಂದು ಅಟ್ಟಿಸಿಕೊಂಡಾಟು ದೂರ ಹೋದಳು.

“ಯಲ್ಗೋ ಯ್ಯೋನೋ ಯಂತದೋ ಸೆವಂಡು ಬೊಂದಂಗಾತೈತೆ…. ಯಲ್ಲಾ ಸೊಲಪೊತ್ತು ಮುಕ್ಳಿ ಬಾಯಿ ಮುಚ್ಕಳ್ರೀ” ಎಂದು ಎಲ್ಲವ ಫರಮಾನು ಹೊಂಡಿಸಿದೊಡನೆ ಅಲುಗಾಡುತ್ತಿದ್ದ ಮರವೂ ಒಂದು ಕ್ಷಣ ತೆಪ್ಪಗಾಯಿತು. ಸ್ನೋಮೂಷನ್ನಿನಲ್ಲಿ ಎಲ್ಲರೂ ಮುಂದೆ ಬಂದು ನಲ್ಲಿಯ ಬಾಯಿಯ ಕಡೆ ಉಸಿರು ಬಿಗಿ ಹಿಡಿದು ನೋಡುತ್ತಿರುವಾಗ್ಗೆ ಕಪ್ಪಾನೆಯ ಕಪ್ಪನೆಯ ಗೊದ್ದಿಗವೊಂದು ಮೆಲ್ಲಗೆ ಹೊರಬಂದು ತಲೆ ನಿಗುರಿಸಿ ಎಲ್ಲರತ್ತ ಹದಿನಾರು ಸಾವಿರೆಂಡರಿಗೊಡೆಯನಾದ ಶ್ರೀ ಕೃಷ್ಣ ಪರಮಾತ್ಮನಂತೆ ನೋಡಿತು. ನೋಡು ನೋಡುತ್ತಿದ್ದಂತೆ ನಲ್ಲಿ ಒಳಗಿಂದ ಗೊದ್ದಿಗೆಗಳು ಲೈನುಲನಾಗಿ ಪ್ರವಾಹಪೀಡಿತ ನಿರಾಶ್ರೀತರಂತೆ ಬರತೊಡಗಿದ್ದು ಶುಭ ಸೂಚನೆ ಎಂಬಂತೆ ಗೋಚರಿಸಿತು. ಗಂಗಿ “ನೀರಲ್ಲಿ ವಂಟಿರಬೋದು ಅದ್ಕೆ ಇವು ಜೆಗೇವು ಕಾಲಿ ಮಾಡ್ಲಿಕ್ಕತ್ಯಾವ” ಎಂದು ಗೊಣಗಿದ್ದು ಸರಿ ಅನ್ನಿಸಿತು ಎಲ್ಲರಿಗೆ. ಎಲ್ಲರು ತಂತಮ್ಮ ಕೊಡಪಾನಗಳನ್ನು ಕೈಗೆತ್ತಿಕೊಂಡರು. ಅವರ ಪೈಕಿ ಒಬ್ಬಳಾದ ಸಂಗ್ಲಿ ಪರಾವರ್ತಿತ ಪ್ರತಿಕ್ರಿಯೆಗೊಳಪಟ್ಟು “ಓಹೋಯ್…. ನ್ನೀರು ಭೊಂದ್ವೋ….” ಎಂದು ಕಿರ್ಧಬಲ ಕೂಗು ಹಾಕಲು ಅಲ್ಲೇ ಬೇವು, ಬಿಲ್ವ, ಹುಣಸೆ ಮರಗಳ ಮೇಲೆ ವಿಶ್ರಯಿಸಿಕೊಂಡಿದ್ದ ಪಕ್ಷಿಗಳು ಬೆದರಿ ಪವ್ವನೆ ಪಾರಿದವು…. ಆ ಧ್ವನಿಯ ಸರ್ಪಾಸ್ತ್ರದೊಲು ಅಲ್ಲಿಗೊಂದು ನೂರು ಮಾರು ದೂರದಲ್ಲಿ…. ಅಂದರೆ ಹತ್ತಂಕಣದ ಮಣ್ಣಿನ ಮನೆಯ ಹಿಂದೆ ನೆರಕೆಯ ಮರೆಯಲ್ಲಿ ಹುಟ್ಟುಮಾರ್ಗದೆಸೀಲೆ ಕೂತುಕೊಂಡು ನಖಶಿಖಾಂತ ಜಳಕ ಮಾಡುತ್ತಿದ್ದ ಉಳ್ಳಾಗಡ್ಡೆ ದುಬ್ಬೇರವ್ವನ ಕಿವಿಗೆ ಬೀಳಲು ಆಕೆಯ ಹ್ಹಾಂ…. ನೀರು ಬೊಂದ್ವಾ ಎಂದುದ್ಗರಿಸಿದ್ದಾಗಲೀ; ಆ ಅನುಭಾವ ಸ್ಥಿತಿಯಲ್ಲಿ ನೀರು ನೀರು ಎಂದು ಕೂಗುತ್ತ ಬೀದಿಗೆ ಬಂದದ್ದಾಗಲೀ; ಯಕ್ಷ, ಕಿನ್ನರ, ಕಿಂಪುರುಷರಿಗೆ ಸಮಾನರಾದ ಕೊಟ್ರ, ಯಂಕಟಿ, ಗೋಣಿ, ಪೀರಬಾಯಿ ಕಣ್ಣುಗಳನ್ನು ಏಕಕಾಲಕ್ಕೆ ತೆರೆದು ನೋಡುತ್ತಿದ್ದುದಾಗಲೀ; ಆಕೆ ಹಂಗೆ ಓಡೋಡುತ್ತ ಮಂಡ್ರಪ್ಪನವರಂಗಳ ತಲುಪಿದ್ದಾಗಲೀ; ಅಲ್ಲಿದ್ದ ನಾವೆಂಭೋ ಹೆಂಗಸರು ಆವಾಕ್ಕಾಗಿದ್ದಾಗಲೀ; ತಲಬಾಗಿಲಿಗೆ ಪುಷ್ಪವೇರಿಸುತ್ತಿದ್ದ ಗಂಗಾಧರಪ್ಪ ‘ಸ್ತ್ರೀ ರೂಪಮೇ ರೂಪಂ’ ಎಂದು ಉದ್ಗರಿಸಿದ್ದಾಗಲೀ; ಬೆನ್ನ ಹಿಂದೆಯೇ ಓಡಿಬಂದ ಗಂಡ ಮಾಲಿಂಗನು ದೋತರ ಬಿಚ್ಚಿ ಆ ತನ್ನೆಂಡತಿಯ ಮಯ್ಯಿ ಮೇಲೆ ಹಾಕಿ ತಾನು ಬೆತ್ತಲಾಗಿದ್ದಾಗಲೀ ಈ ಎಲ್ಲ ರೋಚಕ ಘಟನೆಗಳು ಕಣ್ಮುಚ್ಚಿ ಕಣ್ ತೆರೆಯೋದರೊಳಗೆ ನಡೆದುಬಿಟ್ಟವು. ಮುದುಕಿ ಸಿದ್ದವ್ವ ಕೂಡಲೇ ಮುಂದೆ ಬಂದು “ಲೋ ಮಾಲಿಂಗ…. ಯಲ್ಲಾ ಸೀನೀರ್ನ ಮೈಮೆ…. ಗಂಗಮ್ತಾಯಿ ಅಂಗ್ಯಾಡಿಸಿದ್ಲಂದ್ಕೋ ….ಮನೀಗ್ವಾದ ಮ್ಯಾಲ ವದ್‌ಗಿದ್ದೀಯಾ…. ಮದ್ಲು ಸ್ವಂಟಕ್ಕೊಂದು ಸೆಲ್ಲೇವ್ ಸುತ್ತಿಗ್ಯಾ” ಎಂದು ಹೇಳಲು ಅವನು ಕೂಡಲೆ ಹಂಗೇ ಮಾಡಿದನು. ಬೊಂಬಾಯಿ ಬಾಯ ದುಬ್ಬೀರವ್ವ ಅದ್ಯಾಕ ವಡೀತಾನ ಬುಡಭೇ…. ಯಾ ನನ್ನಾಟಗಳ್ಳ ನಂದ್ನೋಡಿ ಕಿಸಿಯೋದು ಆಟರಾಗೈತೆ…. ಎಂದು ಗಂಡನ ಕಯ್ಯಿಯಿಂದ ಕೊಸರಿ ಮನೆಗೋಡಿ ಸೀರೆ ಕುಬುಸ ಹುಟ್ಟುಕೊಂಡು, ಸೊಂಟದ ಬಾಳೇಕಾಯಿ ಸರಿಪಡಿಸಿಕೊಳ್ಳುತ್ತ ನಲ್ಲಿಯ ಶ್ರೀಕ್ಷೇತ್ರಕ್ಕೆ ಬರಲು ಎಲ್ಲರೂ ಕೊಕ್ಕೋಕೋ ನಕ್ಕೋತ ಸ್ವಾಗತಿಸಿದರು. ಹುಟ್ಟಾಕಾವ್ಯ ಪ್ರಯೋಗ ಪರಿಣತ ಮತಿಗಳೂ: ರಿಕೆಯರೂ ಆದಂಥ ಎಲ್ಲವ್ವ: ಕರು ಬೊಸವಿಯರು ದುಬ್ಬೀರವ್ವನ ದೇಹ ಸಿರಿಯ ಉಬ್ಬುತಗ್ಗುಗಳನ್ನು ಕಾವ್ಯಮಯವಾಗಿ ವರ್ಣಿಸಲಾರಂಭಿಸಿದರು. ಗವುರಿಯಂತೂ ಈ ರಾತ್ರಿ ಅನಾಹುತ ಸಂಭವಿಸಬಹುದೆಂತಲೂ: ಚವಿಡಿಯು ನಾಳೆಯೊಳಗೆ ಕೆಲವರಾದರೂ ಅವಧೂತ ಪದವಿ ಪಡೆಯಬಹುದೆಂತಲೂ: ರುದ್ರಿಯು ಮಾಲಿಂಗೆ ದೇಶಾಂತರ ಹೋಗಬಹುದೆಂತಲೂ ಮಾತಾಡಿಕೊಂಡರು. ಯಾರು ಏನೇ ಮಾತಾಡಿಕೊಂಡರೂದುಬ್ಬೀರವ್ವ ಮಾತ್ರ “ಬಾಯ್ಮುಚ್ಗೆಳ್ರೇ ಬೋಸೂಡೇರಾ…. ನಿಮ್ದು ವಬ್ಬೊಬ್ರುದ್ದು ಕೆತ್ತಿ ಬೊಡೀಲೇನು….” ಎಂದಾಕೆ ಇನ್ನೂ ಏನೋ ಹೇಳಬೇಕೆನ್ನುವಷ್ಟರಲ್ಲಿ ನಲ್ಲಿಯು ಸುಸಸ್ ರ್‌ರ್‌ರ್ ಎಂದು ಮುಂತಾಗಿ ನಾದಾಲಪನೆ ಮಾಡತೊಡಗಲು ಕೊಡರ್ಧಾರಿಯಾಗಿದ್ದ ಚನ್ನವ್ವ ಕುಪ್ಪಳಿಸಿ ಗುಂಡ್ಯೊಳಕ್ಕೆಗರಿದಳು. ಆ ಕೂಡಲೇ ದುಬ್ಬೀರವ್ವ “ಆ ದ್ಯಾವಾಕಿಯೇ ನೀರಿನ್ಯಾಲಾಗ ಬರೀಬತ್ಲಾಗಿ ಮರುವಾದಿ ಕಳ್ಕೊಂಡಿರೋಳು ನಾನ್, ನಾನ್ಮೊದ್ಲಿಡೀಬೇಕು….” ಎಂದಬ್ಬರಿಸಿ ಎದುರಾಳಿಯ ಜುಟ್ಟಿಗೆ ಕೈಹಾಕಿದಳು. “ನಿನ್ನ್ಯಾವೋಳೆ ಸೀರಿ ಬುಚ್ಗೆಂಡ್ ಬಾ ಅಂದದ್ದು….” ಚೆನ್ನವ್ವ ಪ್ರತಿಯಾಗಿ ಆಕೆಯ ತುರುಬಿಗೆ ಕೈ ಹಾಕಿದಳು. ಇವರಿಬ್ಬರು ಜಗಳಕ್ಕೆ ನಾಂದಿ ಹಾಡಿದೊಡನೆ ಎಲ್ಲವ್ವ, ಕರುಬಸವಿ, ಗವುರಿ, ಗಂಗಿ, ಚವುಡಿ, ದುರುಗಿಯೇ ಫ್ರೆಂಡ್‌ಶಿಪ್ ಮರೆತುಬಿಟ್ಟು ನಾಮೊದ್ಲು ನಾಮೊದ್ಲು ಅಂತ ಪರಸ್ಪರ ಹಿಡಿದೆಳೆದಾಡತೊಡಗಿದರು.

ಆ ಕ್ಷಣ ಧರೆಗುದುರಿದ ತಲೆಗೂದಲೆಷ್ಟೋ: ಹರಿದು ಚಿಂದಿ ಚಿಂದಿಯಾದ ಕುಬುಸ, ಸೀರೆಗಳೆಷ್ಟೋ. ಆದರೆ ನಲ್ಲಿ ಮಾತ್ರ ಸ್ಸಸ್ಸಂತ ಶಬ್ದ ಮಾಡುತ್ತಲೇ ಇತ್ತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.