ಹರಿಕಾಂತರರ ಸಣ್ಣಿ

ಮಹಾಬಲೇಶ್ವರ ದೇವಸ್ಥಾನದ ಹಿಂಬದಿಯಲ್ಲೇ ಸಮುದ್ರ, ಸಮುದ್ರಕ್ಕೂ ದೇವಸ್ಥಾನಕ್ಕೂ ನಡುವೆ ಮರಳ ದಂಡೆ. ಊರಿನಿಂದ ಸಮುದ್ರಕ್ಕೆ ಹೋಗುವ ಕಾಲುದಾರಿ; ದೇವಸ್ಥಾನದ ಮಗ್ಗುಲಲ್ಲೇ ಇರುವುದರಿಂದ, ಈ ದಾರಿಯಲ್ಲಿ ಓಡಿಯಾಡುವ ಜನ ಬಹಳ. ದೇವಸ್ಥಾನಕ್ಕೆ ಬರುವ ಭಕ್ತರಂತೂ ಸಮುದ್ರ ಸ್ನಾನಕ್ಕೆ, ಮರಳ ದಂಡೆಯ ಮೇಲೆ ಹೋಗಿ ಕೂರಲಿಕ್ಕೆ ಈ ದಾರಿಯಲ್ಲಿ ಗುಂಪುಕಟ್ಟಿಕೊಂಡು ಹೋಗಿ ಬರುತ್ತಿರುತ್ತಾರೆ. ಊರಿನ ಖಾರ್ವಿ ಜನ, ಮೊಗೇರರು, ಹರಿಕಾಂತರರು ತಮ್ಮ ದಿನನಿತ್ಯದ ಕೆಲಸಕ್ಕಾಗಿ ಓಡಿಯಾಡುವುದು ಕೂಡ ಈ ರಸ್ತೆಯಲ್ಲೇ. ದೇವಸ್ಥಾನದ ಹಿಂಬದಿಯ ಮರಳದಂಡೆಯ ಮೇಲೆ ಸಾಲಾಗಿ ಜೋಡಿಸಿರುವ ದೋಣಿಗಳನ್ನು ನೀರಿಗೆ ತಳ್ಳಿ ಹುಟ್ಟು, ಬಲೆಗಳೊಡನೆ ಅವರು ಸಮುದ್ರಕ್ಕೆ ಇಳಿದು ಆ ವಿಶಾಲವಾದ ಕಡಲಲ್ಲಿ ಕಿರಿದಾಗಿ ಎಲ್ಲೋ ಮಾಯವಾಗಿಬಿಡುತ್ತಾರೆ. ಇವರು ತಿರುಗಿ ಬರುವುದು ಸಂಜೆಯಾದಾಗ. ಆಗ ಅವರು ದೋಣಿಯಲ್ಲಿ ಮೀನಿರುತ್ತದೆ. ಅದನ್ನು ಕೊಳ್ಳಲು ಮರಳದಂಡೆಯ ಮೇಲೆ ಜನ ಸಾಲುಗಟ್ಟಿ ನಿಂತಿರುತ್ತಾರೆ.

ಇದೆಲ್ಲವನ್ನೂ ನಾನು ವಿಶೇಷವಾಗಿ ಗಮನಿಸಲು ಒಂದು ಕಾರಣವಿದೆ. ಮಹಾಬಲೇಶ್ವರನ ದೇವಸ್ಥಾನದ ಬಲಬದಿಯಲ್ಲಿ ಒಂದು ಶಾಸನಕಲ್ಲಿದೆ. ನನ್ನಷ್ಟೇ ಎತ್ತರದ ಅಗಲವಾದ ಕಲ್ಲು. ಅದರ ಮೇಲೆ ಯುದ್ಧದಲ್ಲಿ ಸತ್ತ ವೀರನನ್ನು ಸ್ವರ್ಗಕ್ಕೆ ಕರೆದೊಯ್ಯುವ ಒಂದು ಸಾಲು. ಸೂರ್ಯ ಚಂದ್ರರು ಇತ್ಯಾದಿ ಕೆತ್ತಿದ್ದಾರೆ. ಮೇಲೆ ಶಿವಲಿಂಗದ ಚಿತ್ರ. ಕಲ್ಲಿಗೆ ಎಣ್ಣೆ ಕುಂಕುಮ ಬಳಿದಿರುವುದರಿಂದ ಸಾಕಷ್ಟು ಮಣ್ಣು ಅದರ ಮೇಲೆ ಕೂತಿರುವುದರಿಂದ ಇದೇನೂ ಈಗ ಕಾಣಿಸುವುದಿಲ್ಲ. ಅಪ್ಪ ಈ ಕಲ್ಲನ್ನು ಮಹಾಬಲೇಶ್ವರನ ಪೀಠದ ಕಲ್ಲು ಎಂದು ಕರೆಯುತ್ತಾರೆ. ಈ ಕಲ್ಲಿಗೆ ಒರಗಿ ಕುಳಿತ ಮಹಾಬಲೇಶ್ವರ ಇಲ್ಲಿಂದ ಕಡಲನ್ನು ನೋಡುತ್ತಿದ್ದನಂತೆ. ಸಿಂಹಾಸನದ ಹಿಂಬದಿಯ ಒರಗುಹಲಗೆಯಂತೆ ಭಾಸವಾಗುವ ಈ ಕಲ್ಲಿನ ಕೆತ್ತನೆಯಿಂದಾಗಿ ಅಪ್ಪ ಹೇಳುವುದು ನಿಜವೇನೋ ಅನಿಸುತ್ತದೆ. ಈ ಕಲ್ಲಿನ ಬಳಿ ಉದ್ಧರಣೆ ಪಂಚಪಾತ್ರೆ ಹಿಡಿದು ಬೆಳಗಿನಿಂದ ಸಂಜೆಯವರೆಗೆ ನಿಂತಿರಬೇಕು. ದೇವಸ್ಥಾನದಲ್ಲಿ ಪೂಜೆ ಮುಗಿಸಿ, ದೇವಸ್ಥಾನದ ಸುತ್ತಲೂ ಇರುವ ಶಿಲ್ಪಗಳನ್ನು ನೋಡುತ್ತಾ ಬರುವ ಭಕ್ತಾದಿಗಳು ಈ ಪೀಠದ ಕಲ್ಲಿನ ಬಳಿ ಬಂದಾಗ ಅವರನ್ನು ಸ್ವಾಗತಿಸಿ, ಈ ಪೀಠದ ಕಲ್ಲಿನ ಮಹಿಮೆಯನ್ನು ಬಣ್ಣಿಸಿ ಎಲ್ಲರಿಗೂ ತೀರ್ಥ ಕೊಡಬೇಕು. ಅವರಿಂದ ದಕ್ಷಿಣೆ ಪಡೆದು ಸೊಂಟಕ್ಕೆ ಸಿಕ್ಕಿಸಿಕೊಳ್ಳಬೇಕು. ಈ ಕೆಲಸದಲ್ಲಿ ನಾನು ನಿರತನಾಗಿರುವಾಗ ಪಕ್ಕದ ಕಾಲುದಾರಿಯಲ್ಲಿ ಖಾರ್ವಿಗಳು, ಮೊಗೇರರು ಹೋಗುತ್ತಾರೆ. ದೋಣಿಗಳು ಸಮುದ್ರದಲ್ಲಿ ಸಾಗುತ್ತದೆ. ನನಗೆ ಪ್ರಿಯವಾದ ಚಟುವಟಿಕೆಗಳು ಮರಳ ದಂಡೆಯ ಮೇಲೆ ನಡೆಯುತ್ತಿರುತ್ತದೆ.

ಇತ್ತ ಉದ್ಧರಣೆಯಿಂದ ತೀರ್ಥವನ್ನು ಭಕ್ತರ ಕೈಬೊಗಸೆಗೆ ಹಾಕುತ್ತ, ಅವರಿಂದ ದಕ್ಷಿಣೆ ಪಡೆಯುತ್ತ, ನಾನು ಕಡಲಿನತ್ತ ನೋಡುತ್ತಿರುತ್ತೇನೆ. ಮಧ್ಯಾಹ್ನ ಹನ್ನೆರಡು ಗಂಟೆಗೇನೆ ದೇವಾಲಯ ಬಾಗಿಲು ಮುಚ್ಚಿಕೊಳ್ಳುತ್ತದೆ. ಅದು ಮತ್ತೆ ತೆರೆದುಕೊಳ್ಳುವುದು ನಾಲ್ಕು ಗಂಟೆಗೆ. ಅಲ್ಲಿಯತನಕ ನನ್ಗೆ ಬಿಡುವು, ಆಗ ನಾನು ಕಾಲುದಾರಿ ಹಿಡಿದು ಕಡಲಿನತ್ತ ಓಡುತ್ತೇನೆ. ಮರಳದಂಡೆಯ ಮೇಲೆ ಪ್ರವಾಸಿಗಳುಕಾಲು ಕೈ ಚಾಚಿಕೊಂಡು ಮಲಗಿರುತ್ತಾರೆ. ಕೆಲವರು ಸಮುದ್ರದಲ್ಲಿ ಬಿದ್ದುಕೊಂಡು ತೇಲುತ್ತಿರುತ್ತಾರೆ. ಕೆಲವರು ಮೇಲೆ ನುಗ್ಗಿ ಬರುವ ಅಲೆಗಳೊಂದಿಗೆ ಆಟವಾಡುತ್ತಿರುತ್ತಾರೆ. ಇದಾವುದರ ಕಡೆಯೂ ಗಮನ ಹರಿಸದೆ ಖಾರ್ವಿಗಳು, ಮೊಗೇರರು ದೋಣಿಗಳ ಮಗ್ಗುಲಲ್ಲಿ ಕುಳಿತು ಬಲೆ ಹೆಣೆಯುತ್ತಲೋ, ಮೀನು ಒಣಗಿಸುತ್ತಲೋ ಇರುತ್ತಾರೆ. ಮುಖ್ಯವಾಗಿ ಇಲ್ಲಿ ಇನ್ನೊಂದು ಆಟ ನಡೆದಿರುತ್ತದೆ.
ಐದಾರು ಮೀನುಗಾರ ಹುಡುಗರು ಲಂಗೋಟಿ ಕಟ್ಟಿಕೊಂಡು ಪ್ರವಾಸಿಗರ ಬಳಿ ನಿಂತಿರುತ್ತಾರೆ. ಪ್ರವಾಸಿಗರು ಎಂಟಾಣೆ ಒಂದು ರೂಪಾಯಿ ನಾಣ್ಯವನ್ನು ಕೈಯಲ್ಲಿ ಹಿಡಿದು ಬೀಸಿ ಸಮುದ್ರಕ್ಕೆ ಎಸೆಯುತ್ತಾರೆ. ಅದು ಅಲೆಗಳನ್ನೂ ದಾಟಿಕೊಂಡು ಹೋಗಿ ಅಷ್ಟು ದೂರದಲ್ಲಿ ಸಮುದ್ರಕ್ಕೆ ಬೀಳುತ್ತದೆ. ಹುಡುಗರು ಆ ನಾಣ್ಯಗಳ ಹಿಂದೆಯೇ ಬಾಣದಂತೆ ಚಿಮ್ಮಿ ನುಗ್ಗಿ ಓಡುತ್ತಾರೆ. ಅಲೆಗಳನ್ನು ಹಾರಿಕೊಂಡು ದಾಟಿ ನೀರಿಗೆ ಬಿದ್ದು ಮಾಯವಾಗುತ್ತಾರೆ. ಮರುಕ್ಷಣದಲ್ಲಿ ಆ ನಾಣ್ಯಗಳನ್ನು ಹಿಡಿದು ನೀರಿನಿಂದ ಪುಟಿದು ಹೊರಬರುತ್ತಾರೆ. ಇದು ದಿನನಿತ್ಯ ನಡೆಯುತ್ತದೆ. ನಾನು ನೋಡುತ್ತಾ ನಿಲ್ಲುತ್ತೇನೆ. ಲಂಗೋಟಿ ಕಟ್ಟಿಕೊಂಡ ಆ ಕಪ್ಪು ಬಣ್ಣದ ಹುಡುಗರ ಉತ್ಸಾಹ, ಸಾಹಸ ನನ್ನಲ್ಲಿ ರೋಮಾಂಚನ ಉಂಟುಮಾಡುತ್ತದೆ. ನನ್ನ ಮೈ ಹುರುಪಿನಿಂದ ಸೆಟೆದುಕೊಳ್ಳುತ್ತದೆ. ನಾನೂ ಸಮುದ್ರದಲ್ಲಿ ಈಜಬಲ್ಲೆ. ಅಲೆಗಳ ಮೇಲೆ ತೇಲಬಲ್ಲೆ. ಆದರೆ ಈ ಹುಡುಗರೊಡನೆ ನಾನು ಬೆರೆಯುವಂತಿಲ್ಲ. ಇಂತಹ ಸಾಹಸಗಳನ್ನು ಮಾಡುವಂತಿಲ್ಲ. ನನಗೆ ಅಲ್ಲಿ ಬೇರೆಯದೇ ಆದ ಒಂದು ಕೆಲಸ ಕಾದಿದೆಯಲ್ಲ. ಈ ನಿರಾಶೆಯಿಂದಲೋ ಏನೋ ಈ ಗುಂಪಿನಲ್ಲಿ ತುಂಬಾ ಚೂಟಿಯಾಗಿರುವ ಓರ್ವ ಹುಡುಗನನ್ನು ನಾನು ಪರಿಚಯ ಮಾಡಿಕೊಂಡಿದ್ದೇನೆ. ಅವನೇ ಹರಿಕಾಂತರರ ಸಣ್ಣಿ. ನನ್ನಷ್ಟೇ ವಯಸ್ಸು ಹುಡುಗನಿಗೆ, ನನ್ನ ಹಾಗೆಯೇ ಉದ್ದ ಜಡೆ ಬಿಟ್ಟಿದ್ದಾನೆ. ಅದು ತಿರುಪತಿ ದೇವರಿಗೆ ಮುಡಿಪಂತೆ. ನಾನು ತುಂಡುಪಂಚೆ ಸುತ್ತಿಕೊಂಡರೆ ಅವನು ಬರೀ ಲಂಗೋಟಿ ಸುತ್ತಿಕೊಂಡು ಉದ್ದಕ್ಕೆ ಅದರ ಚುಂಗನ್ನು ಮುಂದೆ ಬಿಟ್ಟುಕೊಳ್ಳುತ್ತಾನೆ. ಸೊಂಟಕ್ಕೆ ನಾನು ಬೆಳ್ಳಿಯ ಮೌಂಜಿ ಹಾಕಿಕೊಂಡಿದ್ದರೆ ಅವನು ಕಪ್ಪು ದಾರ ಕಟ್ಟಿಕೊಂಡಿದ್ದಾನೆ. ನನ್ನ ಬಣ್ಣ ಬಿಳಿ, ಅವನೋ ಕಪ್ಪುಕಲ್ಲು ಮಹಾಬಲೇಶ್ವರನ ಹಾಗೆ. ಅಷ್ಟೇ ಗಟ್ಟಿ ಅವನ ಮೈ. ಆ ಹುಡುಗರ ಗುಂಪಿನಲ್ಲೇ ಬಲಾಢ್ಯ ಸಣ್ಣಿ. ಅವನು ಮರಳಿನಲ್ಲಿ ನೆಗೆಯುತ್ತ ಕಡಲಿನತ್ತ ಓಡುವುದನ್ನು ನೋಡಬೇಕು. ಆಗ ಅವನ ಕಾಲಿನ ತೊಡೆಯ ನರಗಳು ಸೆಟೆದುಕೊಂಡು ಹಿಗ್ಗಿ ಸಡಿಲವಾಗುತ್ತವೆ. ಅವನು ಅಲೆಗಳ ಮೇಲೆ ತೇಲುತ್ತಾನೆ. ಬಿಳಿಯ ನೊರೆಯಲ್ಲಿ ಅವನ ಕಪ್ಪು ಮೈ ಮಿಂಚುತ್ತದೆ. ಮೀನಿನಂತೆ ಅವನು ಸಮುದ್ರದ ನೀಲಿನೀರಿಗೆ ಹಾರುತ್ತಾನೆ. ಮರುಕ್ಷಣದಲ್ಲಿ ಮೇಲೆದ್ದು ಬರುತ್ತಾನೆ. ಮರಳಿನಲ್ಲಿ ಮೈಯಿಂದ ನೀರು ಜಿನುಗುತ್ತಿರಲು ಪ್ರವಾಸಿಗರು ಎಸೆದ ನಾಣ್ಯವನ್ನು ಕೈಮುಷ್ಟಿಯಲ್ಲಿ ಹಿಡಿದು ಬಂದು ಅವರ ಎದಿರು ನಿಂತು ‘ಇಕಾ ಒಡೆಯ’ ಎನ್ನುತ್ತಾನೆ ಅವನು. ಅವನ ಈ ಪ್ರವೃತ್ತಿಯಿಂದಾಗಿಯೇ ಅವನು ನನಗೆ ಪ್ರಿಯವಾದ ಗೆಳೆಯನಾದ.
*
*
*
ಎಂದಿನಂತೆ ಬೆಳಕು ಹರಿಯುತ್ತದೆ. ಸ್ನಾನ ಮುಗಿಸಿ ಮಡಿಯುಟ್ಟು ಅವಲಕ್ಕಿ ತಿಂದು ಪಂಚಪಾತ್ರೆ ಉದ್ಧರಣೆ ಹಿಡಿದು ನಾನು ನನ್ನ ಮೂವರು ಅಣ್ಣಂದಿರು ಹೊರಡುತ್ತೇವೆ. ಅಪ್ಪ ಹೋಗಿ ಆಗಲೇ ಕೊಂಚ ಹೊತ್ತಾಗಿದೆ. ಅಪ್ಪನಿಗೆ ಮಹಾಬಲೇಶ್ವರನ ಪೂಜೆ. ನಮಗೆ ತೀರ್ಥಪ್ರಸಾದ ನೀಡುವ ಕೆಲಸ. ಹಿರಿಯಣ್ಣ, ಗುಡಿಯ ಬಾಗಿಲ ಬಳಿ ಒಂದು ಕಂಬವಿದೆ, ಅಲ್ಲಿ ನಿಲ್ಲುತ್ತಾನೆ. ಆ ಕಂಬದಲ್ಲಿ ಗಣಪತಿಯ ಆಕಾರ ಮೂಡುತ್ತಿದೆ ಎಂದು ಅಪ್ಪ ಹೇಳುತ್ತಾನೆ. ಹಾಗೊಂದು ಆಕಾರ ಅಲ್ಲಿ ಅಸ್ಪಷ್ಟವಾಗಿ ಕಾಣುತ್ತದೆ. ಸೊಂಡಿಲು, ಹೊಟ್ಟೆ, ಕೈ ಹೀಗೆ.
“…. ಬನ್ನಿ …. ಇದು ನೋಡಿ ಮೂರು ಗಣಪತಿ …. ಕಂಬದಲ್ಲಿ ವಿಘ್ನೇಶ್ವರ ಮೂಡುತ್ತಿದ್ದಾನೆ….”
ಹಿರಿಯಣ್ಣ ಅಲ್ಲಿ ಸುಳಿದ ಭಕ್ತರ ಗಮನ ಸೆಳೆಯುತ್ತಾನೆ. ಪ್ರಸಾದ, ತೀರ್ಥ ನೀಡುತ್ತಾನೆ. ಗಣಪತಿಯ ಬಗ್ಗೆ ಇನ್ನೇನೋ ಹೇಳಿ ದಕ್ಷಿಣೆಗಾಗಿ ಕೈ ಚಾಚುತ್ತಾನೆ.

ದೇವಾಲಯದ ಎಡಭಾಗದಲ್ಲಿ ಒಂದು ಗಣಪತಿಯ ವಿಗ್ರಹವಿದೆ. ಇದು ಸರಿಯಾಗಿ ಅರ್ಧಭಾಗವಾಗಿ ಉಳಿದರ್ಧ ಕಾಣೆಯಾಗಿದೆ. ಅಲ್ಲಿ ಎರಡನೇ ಅಣ್ಣ ನಿಂತಿರುತ್ತಾನೆ. ಅತ್ತ ಬಂದ ಭಕ್ತಾದಿಗಳನ್ನು ಕರೆಯುತ್ತಾನೆ. ಗಣಪತಿಯ ಅರ್ಧವಿಗ್ರಹ ಕಾಶಿಯಲ್ಲಿದೆ ಎಂದು ಹೇಳುತ್ತಾನೆ. ಇದಕ್ಕೆ ಕೈ ಮುಗಿದರೆ ಕಾಶಿಗೆ ಕಾಶಿಗೆ ಹೋಗಿಬಂದಷ್ಟು ಪುಣ್ಯ ದೊರೆಯುತ್ತದೆ ಎನ್ನುತ್ತಾನೆ. ಅಲ್ಲೂ ಪ್ರಸಾದ ವಿನಿಯೋಗವಾಗುತ್ತದೆ. ದಕ್ಷಿಣೆ ಜಮಾ ಆಗುತ್ತದೆ.

ಮೂರನೆಯವ ಗುಡಿಯಿಂದ ಕೊಂಚ ದೂರದಲ್ಲಿರುವ ತೀರ್ಥದ ಬಳಿ ಇದ್ದಾನೆ. ಅಲ್ಲಿ ಬಸವನ ವಿಗ್ರಹದ ಬಾಯಿಂದ ಸದಾ ಬೆರಳು ಗಾತ್ರದ ನೀರು ಹರಿಯುತ್ತಿರುತ್ತದೆ. ಅದು ಬಸವನ ತೀರ್ಥ. ಮಹಾಬಲೇಶ್ವರನ ಅಭಿಷೇಕಕ್ಕಾಗಿ ಗಂಗೆ ಇಲ್ಲಿ ಈ ರೂಪದಲ್ಲಿ ಅವತರಿಸಿದ್ದಾಳೆ ಎನ್ನುತ್ತಾನೆ ಮೂರನೆ ಅಣ್ಣ. ಅಲ್ಲೂ ಭಕ್ತಾದಿಗಳು ಕಾಸು ನೀಡಿ ತೀರ್ಥ ಪಡೆಯುತ್ತಾರೆ.
ಇನ್ನು ನಾಲ್ಕನೆಯ ನಾನು – ಪೀಠದ ಕಲ್ಲಿನ ಕಾವಲುಗಾರ.

ಇದೆಲ್ಲಾ ಸುಳ್ಳು ಎಂದು ಹೇಳುತ್ತಾರೆ ಪ್ರೌಢಶಾಲೆಯ ಸಂಸ್ಕೃತ ಪಂಡಿತರು. ಭಟ್ರು ಕಲ್ಲಿಗೊಂದು ಕತೆ ಕಟ್ಟಿ, ಮಕ್ಕಳನ್ನೆಲ್ಲ ಸಾಲಾಗಿ ನಿಲ್ಸಿ ಭಕ್ತಾದಿಗಳನ್ನು ಸುಲಿಗೆ ಮಾಡ್ತಾರೆ ಎಂದು ಅವರು ಊರಿನಲ್ಲೆಲ್ಲ ಹೇಳಿಕೊಂಡು ತಿರುಗುತ್ತಾರೆ. ಆದರೆ ಅಪ್ಪ ಇದನ್ನೆಲ್ಲಾ ಕಿವಿಗೇ ಹಾಕಿಕೊಳ್ಳುವುದಿಲ್ಲ. ಅವನಿಗೆ ಏನು ಗೊತ್ತು ಮಹಾ ಎಂದವರು ಅವರ ಬಗ್ಗೆ ಮೂಗು ಮುರಿಯುತ್ತಾರೆ.
ಯಾರು ಏನೇ ಹೇಳಲಿ ದೇವಾಲಯಕ್ಕೆ ಬರುವ ಭಕ್ತರು ನಮ್ಮನ್ನು ನಂಬುತ್ತಾರೆ. ಅಪ್ಪನಿಗೆ ಬೇಕಾದ ದಕ್ಷಿಣೆ ಸಾಕಷ್ಟು ದೊರೆಯುತ್ತದೆ. ನನ್ನ ಅಪ್ಪ ಅಣ್ಣಂದಿರು ಭಯ – ಭಕ್ತಿಯಿಂದ ಈ ಕಾರ್ಯಮಾಡಿಕೊಂಡು ಬಂದಿದ್ದಾರೆ. ಆದರೆ ನನಗೆ ಮಾತ್ರ ಬೇಸರ. ಆ ಕಲ್ಲುಪೀಠದ ಬಳಿ ನಿಂತು ಬಂದವರಿಗೆಲ್ಲ ತೀರ್ಥನೀಡಿ, ಕತೆ ಹೇಳಿ ದಕ್ಷಿಣೆ ಪಡೆಯುವುದೆಂದರೆ ಬೇಜಾರು. ಬೇಡಪ್ಪ ಈ ಕೆಲಸ ಎನಿಸಿಬಿಡುತ್ತದೆ. ಹರಿಕಾಂತರರ ಸಣ್ಣಿಯೇ ಅದೃಷ್ಟವಂತ ಎನಿಸುತ್ತದೆ.

ನಾನು ಎಳೆಬಿಸಿಲಲ್ಲಿ ಪಂಚಪಾತ್ರೆ ಉದ್ಧರಣೆ ಕಲ್ಲಿನ ಬಳಿ ನಿಂತಾಗ ಪಕ್ಕದ ದಾರಿಯಲ್ಲಿ ಸಣ್ಣಿ ಕಾಣಿಸಿಕೊಳ್ಳುತ್ತಾನೆ. ಹುಟ್ಟನ್ನೋ, ಬಲೆಯನ್ನೋ, ಬುಟ್ಟಿಯನ್ನೋ, ಮೀನು ಪೋಣಿಸಲು ಬೇಕಾಗುವ ತೆಂಗಿನ ಗರಿಗಳನ್ನೋ ಹಿಡಿದು ಅವನು ಅವನ ತಂದೆಯ ಹಿಂದೆ ಹೊರಟಿರುತ್ತಾನೆ. ಅತೀ ಸಂಭ್ರಮದಿಂದ ಅವರ ಮುಖ ಅರಳಿರುತ್ತದೆ. ಕಣ್ಣುಗಳಲ್ಲಿ ಬೆಳಕು ಕುಣಿಯುತ್ತಿರುತ್ತದೆ. ಅವನ ಕಪ್ಪು ಮೈ ಎಳೆಬಿಸಿಲಿಗೆ ಮಿಂಚುತ್ತಿರುತ್ತದೆ; ಬಿಳಿ ಉಸುಕಿನ ದಾರಿಯ ಮೇಲೆ ಕುಣಿಕುಣಿಯುತ್ತ ಹೊರಟ ಅವನು ನಿಲ್ಲುತ್ತಾನೆ. ನನ್ನತ್ತ ತಿರುಗುತ್ತಾನೆ.
“ಒಡೆಯಾ….” ಎನ್ನುತ್ತಾನೆ.
“ನಾನು ಸಮುದ್ರಕ್ಕೆ ಹೋಗ್ತೆ”
– ಎನ್ನುತ್ತಾನೆ. ನಾನು ಅವರಿಬ್ಬರೂ ಕಡಲ ದಂಡೆ ಮುಟ್ಟುವವರೆಗೂ ನಿಂತು ನೋಡುತ್ತೇನೆ. ತಮ್ಮ ದೋಣಿಯ ಬಳಿ ಹೋಗಿ ಅದನ್ನು ಅವರು ಮರಳಿನಲ್ಲಿ ತಳ್ಳಿಕೊಂಡು ಕಡಲಿನತ್ತ ಹೋಗುತ್ತಾರೆ. ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿರಲು, ಈ ಅಲೆಗಳನ್ನು ಸೀಳಿಕೊಂಡು ಅವರು ದೋಣಿಯನ್ನು ಕಡಲಿಗೆ ನೂಕುತ್ತಾರೆ. ನಂತರ ದೋಣಿಯ ಮೇಲೆ ಹಾರಿ ಕುಳಿತುಕೊಳ್ಳುತ್ತಾರೆ. ದೋಣಿ ನಿಧಾನವಾಗಿ ಕಡಲಲ್ಲಿ ತೇಲತೊಡಗುತ್ತದೆ. ಅಲೆಗಳ ನಡುವೆ ಒಮ್ಮೊಮ್ಮೆ ಕಾಣೆಯಾಗುತ್ತ ದೂರ ಹೊರಟುಹೋಗುತ್ತದೆ. ಕೆಲ ಭಕ್ತಾದಿಗಳು ನನ್ನನ್ನು ದಾಟಿ ಮುಂದೆ ಹೋದರೂ ಅತ್ತ ಗಮನಕೊಡದೆ ನಾನು ಸಣ್ಣಿಯ ದೋಣಿ ನೀರಿನ ಮೇಲೆ ಸಾಗುತ್ತಿರುವುದನ್ನು ನೋಡುತ್ತ ನಿಂತುಬಿಡುತ್ತೇನೆ. ಇದನ್ನು ಗಮನಿಸಿ ಅಪ್ಪ ಓಡಿ ಬರುತ್ತಾನೆ –
“ಇಲ್ಲಿ ಬನ್ನಿ…. ಇಲ್ಲಿ ಬನ್ನಿ…. ಇದು ನೋಡಿ, ಮಹಾಬಲೇಶ್ವರನ ಪೀಠದ ಕಲ್ಲು. ಮಹಾಬಲೇಶ್ವರ ಇಲ್ಲಿ ಕುಳಿತು ಈ ಮಹಾ ಸಮುದ್ರವನ್ನು….”
ಅಪ್ಪ ಬಡಬಡಿಸುತ್ತ ನನ್ನನ್ನು ಕೆಂಗಣ್ಣಿನಿಂದ ದಿಟ್ಟಿಸುತ್ತಾನೆ. ಭಕ್ತಾದಿಗಳು ಅತ್ತ ಹೋದ ಮೇಲೆ ನನ್ನ ಬೆನ್ನ ಮೇಲೆ ಎರಡು ಗುಮ್ಮೆಗಳು ಬಿಡುತ್ತವೆ.
“….ಅಲ್ಲಿ…. ಏನಿದೆ ನಿನಗೆ ನೋಡಾಕೆ?” ಎಂದು ಅಪ್ಪ ಕೂಗುತ್ತಾನೆ.

ಆದರೆ ಅಲ್ಲಿ ಏನಿದೆ ಎಂಬುದನ್ನು ಸಣ್ಣಿ ಸಾಯಂಕಾಲ ಅಂಗಡಿ ಸಾಲಿನಲ್ಲಿ ಸಿಕ್ಕಾಗ ಇಲ್ಲ ಕಡಲ ದಂಡೆಯ ಮೇಲೆ ಅಪ್ಪನೊಡನೆ ಕಡಲಿಗೆ ಹೋಗದೆ ಇದ್ದಾಗ ಸಿಕ್ಕವ ಹೇಳುತ್ತಾನೆ. ನೆಲ ದೂರವಾದ ಹಾಗೆ ಸುತ್ತಲೂ ನೀಲಿ ನೀರು ತುಂಬಿಕೊಳ್ಳುವುದು. ದೊಡ್ಡ ದೊಡ್ಡ ಮೀನುಗಳು ಅಲ್ಲಲ್ಲಿ ಕಡಲಿಂದ ಹೊರಗೆ ಚಿಮ್ಮುತ್ತ ಆಟವಾಡುವುದು. ದೇವರ ಮೀನು ಸಣ್ಣಿ ಮೀನಿನ ಹಿಂಡುಗಳ ಹಿಂದೆ ಹೊರಟಿದ್ದು, ಒಂದೇ ಜಾತಿಯ ಮೀನುಗಳು ಹಿಂಡು ಹಿಂಡಾಗಿ ಕಡಲ ಮೇಲೆ ಹೊರಡುವುದು, ಸಮುದ್ರದಲ್ಲಿ ದೂರದಲ್ಲಿ ಕಾಣುವ ಸುಳಿಗಳು, ಎದುರಾಗುವ ಹಡಗುಗಳು, ಮೀನಿಗಾಗಿ ಬಲೆ ಬೀಸುವುದು, ಬಲೆಗಳಲ್ಲಿ ಮೀನಿನೊಡನೆ ಸಮುದ್ರದ ಹಾವುಗಳೂ ಬರುವುದು. ಅವುಗಳನ್ನು ಹಿಡಿದು ಮತ್ತೆ ಸಮುದ್ರಕ್ಕೆ ಎಸೆಯುವುದು, ಆಗಾಗ್ಗೆ ನೀರನಾಯಿಗಳು ಎದಿರಾಗುವುದು…. ಹೀಗೆ ಇನ್ನೆಷ್ಟೋ ವಿಷಯಗಳನ್ನು ಹೇಳುತ್ತಾನೆ ಸಣ್ಣಿ. ಅವನು ಹೇಳುತ್ತಿದ್ದ ಈ ವರ್ಣನೆಗಳನ್ನು ಕೇಳುತ್ತಿದ್ದಂತೆ ನಾನು ಸಣ್ಣಿಯೊಡನೆ ಕಡಲಿಗೆ ಹೊರಟುಬಿಡಬೇಕು ಎನಿಸುತ್ತದೆ.
*
*
*
ಪಂಚಪಾತ್ರೆ ಉದ್ಧರಣೆ ಹಿಡಿದು ಹೊರಟಾಗ ಅಪ್ಪ ಕರೆದ.
“ಮಾಣಿ…. ನೀನು ಮೀನು ಹಿಡೀಲಿಕ್ಕೆ ಹೋಗ್ತಿಯೇನ-?”
ಎಂದು ವ್ಯಂಗ್ಯವಾಗಿ ಕೇಳಿದ. ಮೀನು ಹಿಡಿಯಲಿಕ್ಕೆ ಅಲ್ಲವಾದರೂ ಸಮುದ್ರದ ಮೇಲೆ ದೋಣಿಯಲ್ಲಿ ಹೋಗಬೇಕು ಎಂಬ ಆಸೆ ನನಗಿದೆ. ಆದರೆ ಹೋಗುವ ಅವಕಾಶ ಬೇಕಲ್ಲ. ಅಪ್ಪ ಮಾತು ಮುಂದುವರಿಸಿದ-
“ಅಲ್ಲ…. ನಾನು ಸಾವಿರ ಬಾರಿ ಆಯ್ತು ನೋಡಿದ್ದು. ನಿನಗೆ ಮೊಗೇರ ಮಕ್ಳ ಸ್ನೇಹ;…. ಸಮುದ್ರದ ಹುಚ್ಚು. ನಿನ್ನ ಕೆಲಸ ನೀನು ಸರಿಯಾಗಿ ಮಾಡದಿದ್ದ ಮ್ಯಾಲೆ ಪೀಠದಕಲ್ಲಿನ ಹತ್ರ ತೀರ್ಥಪ್ರಸಾದ ಕೊಡಾಕೆ ಬೇರೆ ಮಾಣೀನ ನಾನು ನೇಮಿಸ್ತೀನಿ – ಏನು….”
ಅಂದರೆ ಅಲ್ಲಿ ನಿಂತು ತೀರ್ಥ ಪ್ರಸಾದ ಕೊಡುವ ಕೆಲಸವನ್ನು ಸರಿಯಾಗು ಮಾಡು ಎಂಬ ಆಜ್ಞೆ ಈ ಮಾತಿನಲ್ಲಿ ಅಡಗಿತ್ತು. ತಲೆಯಾಡಿಸಿ ಹೊರಟೆ. ಹತ್ತು ಗಂಟೆಯವರೆಗೂ ಇದೇ ಕೆಲಸವಾಯಿತು. ಹುಬ್ಬಳ್ಳಿಯವರಂತೆ ಜನ. ಬಸ್ಸುಮಾಡಿಕೊಂಡು ಬಂದಿದ್ದರು. ಅಪ್ಪ ಪೂಜೆ ಮಾಡುವಾಗಲೇ ಇಂಥಲ್ಲಿ ಹೀಗೆ ಹೀಗೆ ಇದೆ ನೋಡಿ ಹೋಗಿ, ಪುಣ್ಯ ಸಿಗುವುದಿಲ್ಲ ನೋಡದಿದ್ದರೆ ಎಂದು ಹೇಳುವುದು ಪದ್ಧತಿ. ಅವರು ದೇವಸ್ಥಾನಕ್ಕೆ ಒಂದು ಸುತ್ತು ಬಂದವರು ಪೀಠದಕಲ್ಲಿನ ಬಳಿ ನಿಂತರು. ಕೆಲವರು ಹಣೆ ನೆಲಕ್ಕೆ ಹಚ್ಚಿ ನಮಸ್ಕಾರ ಮಾಡಿದರು. ತೀರ್ಥ ಕೊಟ್ಟೆ. ಒಂದಿಷ್ಟು ಹೆಚ್ಚಿಗೆ ಹಣವೇ ಸಿಕ್ಕಿತು. ಕಲ್ಲಿನ ಹಿಂದೆ ಒಂದು ಗೋಲಕ ಇರಿಸಿದ್ದೆ. ಅದರಲ್ಲಿ ಹಾಕಿದೆ. ಅಷ್ಟರಲ್ಲಿ ಹರಿಕಾಂತರರ ಸಣ್ಣಿ ರಸ್ತೆಯ ಮೇಲೆ ಕಾಣಿಸಿಕೊಂಡ. ಅವನ ಕೈಯಲ್ಲಿ ಹುಟ್ಟು, ಬಲೆ, ಮೀನು ಹಿಡಿಯುವವರೆಲ್ಲ ಬೆಳಕು ಹರಿದ ಕೊಂಚ ಹೊತ್ತಿಗೆಲ್ಲಾ ಹೊರಟುಹೋಗಿರುತ್ತಾರೆ. ಈತ ಈಗ ಹೊರಟಿದ್ದಾನಲ್ಲ. ಸಣ್ಣಿ ನಿಂತ.
“ಒಡೆಯಾ….” ಎಂದ.
ನಾಲ್ಕು ಹೆಜ್ಜೆ ಮುಂದೆ ಹೋದೆ.
“ನಾನೊಬ್ಬನೇ ಸಮುದ್ರಕ್ಕೆ ಹೋಗ್ತೆ ಒಡೆಯಾ….” ಎಂದ.
“ಅಪ್ಪ ಎಲ್ಲೋ” ಎಂದು ಕೇಳಿದೆ.
“ಮೂರು ದಿನ ಆತು ಒಡೆಯ…. ಕಾಲಿಗೆ ಮೀನಿನ ಮುಳ್ಳು ಹೆಟ್ಟಿ…. ಕಾಲು ಬಾತಿದೆ…. ಮನೆಯಾಗ ಗಂಜಿ ಅಂಬಲಿಗೂ ದಾರಿಯಿಲ್ಲ…. ಅದಕ್ಕೆ…. ನಾನು….”
“ಸಣ್ಣಿ…. ಒಬ್ನೇ ಹೋಗ್ತೀಯೇನೋ….”
“ಓ! ಅದಕ್ಕೇನಂತೆ ಒಡೆಯಾ…. ಅಲ್ಲ…. ಅಲ್ಲ…. ಅವ್ವ ಏನಾರ ಈ ಕಡೆ ಬಂದು ನನ್ನ ಹುಡುಕಿದ್ರೆ…. ಹೀಗೆ ಹೋದ ಅಂತ ಹೇಳಿ ಒಡೆಯ…. ಕಾಳಜಿ ಮಾಡೋದು ಬೇಡ ಅಂತ ಹೇಳಿ….”

ಮನೆಯಲ್ಲಿ ಹೇಳದೆ ಕದ್ದು ಮುಚ್ಚಿ ಹೊರಟಿದ್ದಾನೆ ಹಾಗಾದರೆ ಸಣ್ಣಿ ಅಬ್ಬ ಇವನ ಧೈರ್ಯವೆ? ನೋಡುತ್ತ ನಿಂತೆ. ಕಾಲುದಾರಿ ಬಿಟ್ಟು ಮರಳ ದಂಡೆಗೆ ಇಳಿದ. ಅವರ ದೋಣಿಯನ್ನು ಬಲು ಪ್ರಯಾಸದಿಂದ ಸಮುದ್ರದತ್ತ ಎಳೆದೊಯ್ದ. ಅಲೆಗಳು ನುಗ್ಗಿ ನುಗ್ಗಿ ಬರುತ್ತಿರಲು, ದೋಣಿಯನ್ನು ಶತಪ್ರಯತ್ನ ಮಾಡಿ ಕಡಲಿಗೆ ನೂಕಿದ. ಒಂದೆರಡು ಭಾರಿ ಭಾರೀ ಅಲೆಗಳು ಅವನನ್ನೂ, ದೋಣಿಯನ್ನು ದಡದವರೆಗೂ ನೂಕಿಕೊಂಡು ಬಂದವು. ಸಣ್ಣಿ ಸೋಲೊಪ್ಪಿಕೊಳ್ಳಲಿಲ್ಲ. ತಾಯಿಯ ಮಡಿಲಲ್ಲಿ ಆಟವಾಡುವ ಮಗುವಿನಂತೆ ಆತ ಕೈ ಕಾಲು ಬಡಿದು ದೋಣಿಯನ್ನು ಕಡಲಿಗೆ ನೂಕಿ ಹಾರಿ ಅದರ ಮೇಲೆ ಕುಳಿತು ಹುಟ್ಟನ್ನು ಕೈಗೆತ್ತಿಕೊಂಡ. ಬಿಳಿ ನೊರೆಯ ಗೆರೆದಾಟಿ ದೋಣಿ ನೀಲಿ ನೀರಿನೊಳಗೆ ಹೊರಟಿತು. ಕ್ರಮೇಣ ಆಕಾಶ – ಸಮುದ್ರ ಸೇರಿದತ್ತ ದೋಣಿ ಹೋಗಲಾರಂಭಿಸಿತು. ಸಮುದ್ರ ಬರಿದಾಗಿತ್ತು. ಕಡಲ ತಡಿಯಲ್ಲಿ ಯಾರೂ ಇರಲಿಲ್ಲ. ಸಣ್ಣಿ ದೂರವಾದಂತೆ ನನಗೆ ಹೆದರಿಕೆ ಆರಂಭವಾಯಿತು. ಯಾರೋ ಒಬ್ಬರು ಬಂದರು. ಪೀಠದಕಲ್ಲಿನ ಬಳಿ ನಿಂತು ನನ್ನ ಮುಖ ನೋಡಿದರು.
“ಬನ್ನಿ…. ಇದು ಮಹಾಬಲೇಶ್ವರ ಪೀಠ…. ಇಲ್ಲಿ ಕುಳಿತು ಆತ ಸಮುದ್ರವನ್ನು ನೋಡುತ್ತಿದ್ದ….”
ನಾನೂ ನೋಡಿದೆ. ಸಣ್ಣಿ ಬಹಳ ದೂರ ಹೋಗಿದ್ದ. ಅಯ್ಯೊ! ಎಂದು ಚೀರಿತು ಜೀವ. ಅವರು ಕೊಟ್ಟ ಹಣವನ್ನು ಕೈಚಾಚಿ ತೆಗೆದುಕೊಂಡು ಸೊಂಟಕ್ಕೆ ಸಿಕ್ಕಿಸಿಕೊಂಡೆ.
ನಾಲ್ಕು ಗಂಟೆಯ ನಂತರ ಮತ್ತೆ ಪೀಠದಕಲ್ಲಿನ ಬಳಿ ಬಂದಾಗ ಸಣ್ಣಿಯ ತಾಯಿ ಆ ದಾರಿ ಹಿಡಿದು ಕಡಲಿನತ್ತ ಹೊರಟಿದ್ದಳು.
“ಸಣ್ಣಿಯಾ?”
“ಹೌದು ಒಡೆಯಾ….”
ವಿಷಯ ತಿಳಿಸಿದೆ. ದ್ಯಾವರೆ ಎಂದು ಅವಳು ಚೀರಿದಳು. ಕಾಳಜಿ ಬೇಡ ಎಂದು ನಾನೇ ಧೈರ್ಯ ಹೇಳಿದೆ. ಅವಳಿಗೆ ಏನು ಧೈರ್ಯ ಬಂತೋ ಸಮಾಧಾನದಿಂದೆಂಬಂತೆ ಮನೆಯ ಕಡೆ ತಿರುಗಿದಳು.

ಗಂಟೆ ಐದಾಯಿತು. ಆರಾಯಿತು. ಸೂರ್ಯ ಕೆಳಗಿಳಿದು ಕೆಂಪು ಉಂಡೆಯಾಗಿ ಕಡಲ ಮೇಲೆ ತೇಲತೊಡಗಿದ. ಮೀನು ದೋಣಿಗಳೆಲ್ಲ ಹಿಂತಿರುಗಿ ಬಂದವು. ಊರ ಜನ ಹಸಿ ಮೀನಿನ ಕೋವೆಗಳನ್ನು ಹಿಡಿದು ದೇವಾಲಯದ ಮಗ್ಗುಲಿನಿಂದ ಮನೆಗಳಿಗೆ ಹೋದರು. ಕ್ರಮೇಣ ಕೆಲವರು ಆತಂಕಗೊಂಡರು. ಸಣ್ಣಿಯ ತಾಯಿ ಮರಳದಂಡೆಯ ಮೇಲೆ ಹೋಗಿ ಕುಸಿದು ಕುಳಿತಳು. ಸಣ್ಣಿಯ ತಂದೆ ಕೂಡ ಕಾಲೆಳೆದುಕೊಂಡು ಬಂದ. ಖಾರ್ವಿಗಳು, ಮೊಗೇರರು, ಹರಿಕಾಂತರರು ಒಬ್ಬೊಬ್ಬರೇ ಕಡಲತಡಿಯತ್ತ ಹೋಗಲಾರಂಭಿಸಿದರು. ಪಂಚಪಾತ್ರೆ ಉದ್ಧರಣೆಯನ್ನು ಕಲ್ಲಿನ ಮೇಲೆ ಕುಟ್ಟಿ ನಾನೂ ಓಡಿದೆ.

ಸಣ್ಣಿ ಎಲ್ಲಿ ಹೋದ? ಸಣ್ಣ ಹುಡುಗನಿಗೆ ಏಕೆ ಬೇಕಿತ್ತು ಈ ಕೆಲಸ? ಸಮುದ್ರದಲ್ಲಿ ದೋಣಿ ಮುಳುಗಿದರೆ? ಬಲೆ ಬೀಸುವಾಗ, ಬೀಸಿದ ಬಲೆ ಮೇಲೆಳೆದುಕೊಳ್ಳುವಾಗ ಇವನೇ ನೀರಿಗೆ ಬಿದ್ದರೆ? ಸಮುದ್ರದಲ್ಲಿ ಅಲ್ಲಲ್ಲಿ ಸುಳಿಗಳು ಕಾಣಿಸಿಕೊಳ್ಳುತ್ತವೆ. ಕೆಲವೆಡೆ ಬಂಡೆಗಳಿರುತ್ತವೆ. ಕೆಲವು ಕೆಟ್ಟ ಜಾಗಗಳಿರುತ್ತವೆ. ಕೆಟ್ಟ ಗಾಳಿಯು ಅಲ್ಲಲ್ಲಿ ಸುಳಿಯಬಾರದೆಂದಿಲ್ಲ. ಸಣ್ಣಿಗೆ ಏನಾದರೂ ಆದರೆ? ಕತ್ತಲಾಗುವಷ್ಟರಲ್ಲಿ ಆತ ಬಂದರಾಯಿತು. ಇಲ್ಲವಾದರೆ ಏನು ಗತಿ? ದಿಕ್ಕುಗಾಣದೆ ಆತ ಬೇರೆತ್ತಲೋ ಹುಟ್ಟು ಹಾಕಿಕೊಂಡು ಹೊರಟರೆ? ದಡದ ಮೇಲಿನ ಜನ ಎಲ್ಲಾ ಸಾಧ್ಯತೆಗಳ ಬಗ್ಗೆಯೂ ಮಾತನಾಡಿಕೊಳ್ಳಲಾರಂಭಿಸಿದರು. ನೇತ್ರಾಣಿ ಜಟಕನಿಗೆ ಹರಕೆ ಹೇಳಿಕೊಂಡದ್ದಾಯ್ತು. ತಿರುಪತಿ ದೇವರಿಗೆ, ಮಹಾಬಲೇಶ್ವರನಿಗೆ ಮುಡಿಪು ತೆಗೆದಿಟ್ಟಿದ್ದಾಯ್ತು. ಯಾರೋ ಒಂದಿಬ್ಬರು ದೋಣಿ ಏರಿ ಅಷ್ಟು ದೂರ ಹೋಗಿ ಬರುವುದಾಗಿ ಹೇಳಿ ಹೊರಡಲು ಸಿದ್ಧರಾಗತೊಡಗಿದರು. ಆಗ ಇನ್ನಾರೋ ಕೂಗಿಕೊಂಡರು-
“….ಅಕಾ….ಅದು ದೋಣಿ ಅಲ್ವಾ….”

ಎಲ್ಲರೂ ಕಣ್ಣದೃಷ್ಟಿಯನ್ನು ಮಸೆದು ದಿಗಂತಕ್ಕೆ ಅಂಟಿಕೊಂಡಂತ್ತಿದ್ದ ಕಪ್ಪುಚುಕ್ಕೆಯೊಂದನ್ನು ನೋಡಿಯೇ ನೋಡಿದರು. ಕಪ್ಪು ಚುಕ್ಕೆ ಹತ್ತಿರ ಬಂದಂತೆ ಒಂದು ಆಕಾರ ಪಡೆಯಿತು. ಅಲೆಗಳ ಮೇಲೆ ಎದ್ದು ಬಿದ್ದು ಅದು ದಡದತ್ತ ಬರತೊಡಗಿತು. ಹತ್ತಿರ ಬಂತೆನ್ನುವಾಗ ಯಾರೋ ಹೋಗಿ ದೋಣಿಯನ್ನು ಎಳೆದು ತಂದರು. ಸಣ್ಣಿ ಹೊರಲಾರದಷ್ಟು ಮೀನನ್ನು ಹೊತ್ತು ದಡಕ್ಕೆ ಬಂದ. ಅವನು ತುಂಬಾ ದಣಿದಿದ್ದ. ಆದರೆ ಅಷ್ಟೇ ಸಂತೋಷದಿಂದಿದ್ದ. ಅವನ ತಾಯಿ ಹೋಗಿ ಮಗನ ಮೈದಡವಿದಳು. ಅವನ ತಂದೆ – ಕುಲಕ್ಕೆ ಹೆಸರು ತಂದೆ ನೀನು ಅಂದ. ಖಾರ್ವಿಗಳು, ಮೊಗೇರರು, ಹರಿಕಾಂತರರು ಸಣ್ಣಿಯನ್ನು ಹೆಗಲ ಮೇಲೆ ಹೊತ್ತುಕೊಂಡು ತಮ್ಮ ಕೇರಿಗೆ ಹೋದರು. ಏಳು – ಎಂಟು ವರ್ಷದ ಓರ್ವ ಹುಡುಗ ಒಂಟಿಯಾಗಿ ಸಮುದ್ರಕ್ಕೆ ಹೋಗಿ ಮೀನು ಹಿಡಿದದ್ದು ಇದೇ ಪ್ರಥಮ ಎಂದು ಅವರು ಮಾತಾಡಿಕೊಂಡರು. ಸಣ್ಣಿ ಯಾರದ್ದೋ ಹೆಗಲ ಮೇಲೆ ಕುಳಿತು ನನ್ನನ್ನು ನೋಡಿ ಕೈಬೀಸಿದ.

ಮಹಾಬಲೇಶ್ವರನ ಪೀಠದ ಕಲ್ಲಿನ ಮೇಲೆ ಪಂಚಪಾತ್ರೆ ಉದ್ಧರಣೆ ಇರಲಿಲ್ಲ. ದಿನನಿತ್ಯ ದಕ್ಷಿಣೆಯ ರೂಪದಲ್ಲಿ ಬಂದ ಹಣವನ್ನು ಆಗಾಗ ಹಾಕಿ ಸಂಜೆಯಾದಾಗ ಮನೆಗೊಯ್ಯುತ್ತಿದ್ದ ಗೋಲಕವೂ ಅದರ ಸ್ಥಾನದಲ್ಲಿರಲಿಲ್ಲ. ಎಂದೂ ಯಾರೂ ಮುಟ್ಟಿರಲಿಲ್ಲ ಅದನ್ನು. ಇಂದು ಯಾರು ತೆಗೆದರು. ಓ! ಅಪ್ಪ ವಯ್ದಿರಬೇಕು.
ಮನೆಗೆ ಬಂದಾಗ ಅಪ್ಪ ಬಾಗಿಲಲ್ಲೇ ನಿಂತಿದ್ದ. ಅವನ ಕಣ್ಣು ಕೆಂಪಗಾಗಿತ್ತು.
“….ನಾನು ಬೆಳಿಗ್ಗೆ ಏನು ಹೇಳಿದ್ದೆ…. ನಿನಗೆ ನಮ್ಮ ಕುಲಕಸಬಿನಲ್ಲಿ ಆಸಕ್ತಿ ಇಲ್ಲ…. ಬೇಡ…. ನಾಳೆಯಿಂದ ನಾನು ನಾನು ಬೇರೆ ಏರ್ಪಾಟು ಮಾಡ್ತೀನಿ…. ಆಯ್ತ….”
ತುಂಬಾ ಸಂತೋಷವಾದಂತೆನಿಸಿ ತಲೆದೂಗಿದೆ. ಅಪ್ಪ ಮುಂದೆ ನುಗ್ಗಿ ಉದ್ದ ಕೂದಲು ಹಿಡಿದು ಬೆನ್ನಿನ ಮೇಲೆ ಗುದ್ದಿದ.
“…. ಬಿಡಿ…. ಬಿಡಿ…. ಮಾಣಿ ಸಣ್ಣದು. ನಾಳೆಯಿಂದ ಅವನು ಹೀಗೆಲ್ಲ ಮಾಡಲ್ಲ ಬಿಡಿ….”

ಅಮ್ಮ ನಡುವೆ ಬಂದಳು. ನಾನು ಕೂಗಿದೆ –
“ಕೇಳಿದ್ಯ ನಮ್ಮ ಕುಲಕ್ಕೆ ಇವನಿಂದ ಹೆಸರು ಬಂದೀತೆ?”
ಮತ್ತೂ ನಾಲ್ಕು ಏಟುಗಳು ಬಿದ್ದವು.
*****
(೧೯೭೯)

ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.