ವಾಸುಮಾಣಿ ಮನೆ ಒಕ್ಕಲು ಹೇಳಿಕೆಗೆ ಬಂದಿದೆ. “ಈಗ ಹಿರೀಯವಳೆಂದು ನೀನೊಬ್ಬಳೆ ಮೂಕತ್ತೆ. ನಮಸ್ಕಾರಕ್ಕೆ ಬೇಕು. ಸ್ವಲ್ಪ ಮುಂಚೆಯೇ ಬಾ” ಅಂತು. “ಮನೆ ಕಟ್ಟುವ ತಾಪತ್ರಯ, ಮಗಳ ಬಾಣಂತನ, ಒಟ್ಟಾರೆ ಒಡ್ಡೋಲಗ ಹರಿದು ಬಿದ್ದಿದೆ. ನಮ್ಮನೆಯವಳಿಗಂತೂ ಮಾತ್ತಾಡಲಿಕ್ಕೆ ಪುರಸೊತ್ತಿಲ್ಲ…. ಸುಶೀಲ ಹೆತ್ತದ್ದು ಸುದ್ದಿ ಬಂತಲ್ಲ? ಮಗು ಹೇಗಿದೆ ಅಂತಿ! ಥೇಟಾ ಅವಳತ್ತೆ! ಅತ್ತೆ ಹೋದ ತಿಂಗಳಲ್ಲೇ ಹುಟ್ಟಿದ ಮುಗುವಲ್ಲವೆ? ಸತ್ತವರೇ ಮತ್ತೆ ಹುಟ್ಟಿ ಬಂದರು ಅಂತ ಅವಳ ಗಂಡನ ಮನೆಯವರಿಗೇನು, ಕೊಪ್ಪರಿಗೆ! ಬಾ. ಬಾರದಿರಬೇಡ. ಮಗುವನ್ನು ಕಂಡ ಹಾಗೂ ಆಯ್ತು. ಹ್ಞಾ ಹ್ಞಾ, ಈಗ ನಿನ್ನ ಆ ಮೂರು ಮಾಡಿನ ಮನೆ ಇಲ್ಲ ಮತ್ತೆ. ಚಾವಡಿ, ಕೋಣೆ, ಜಗಲಿ ಗಿಗಲಿ ಒಂದೂ. ಪೂರಾ ಅಳಿಸಿದೆ. ಅಳಿಸಿ ಎಂಥಾ ಮನೆ ಕಟ್ಟಿದ್ದೇನೆ, ಬಂದು ಕಾಣು ನೀನೇ. ಸರ್ಟಿಫಿಕೇಟು ಕೊಡದೆ ಇರೆ….”
“ಬಾರದೆ ಇರುತ್ತೇನ ಮಣಿ? ನೀನು ಮನೆ ಕಟ್ಟುವುದು ಹೆಚ್ಚ ನಾನು ಬರುವುದ?…”
ಹೇಳಿಕೆಗೆ ಬಂದ ಮಾಣಿಗೆ ಪಾಯಸದೂಟ ಬಡಿಸಿದಳು ಸೊಸೆ ಸರೋಜ. ಮೂಕತ್ತೆಯ ಮನಸ್ಸು ಹೇಗೆ ಮರ್ಯಾದೆ ಮಾಡಬೇಕು ಅಂತ ಬಯಸುತ್ತದೋ ಹಾಗೆಯೇ. ಅವಳು ಬಾಯಿಬಿಟ್ಟು ಹೇಳದಿದ್ದರೂ, ಗ್ರಹಿಸಿ ಮಾಡುವವಳು.
“ನಾಲ್ಕು ಬೆಡ್ರೂಮ್. ಒಂದು ನಡುವೊಳಗೆ. ನಡುವೊಳಗೆ ಅಂದರೆ ಸುಮಾರಿಗೆ ದೊಡ್ಡದೇ. ನಾಲ್ಕು ಪಂಕ್ತಿ ಎಲೆ ಹಾಕಬಹುದು. ಹೌದಾ ಮೂಕತ್ತೆ, ಒಂದು ಸಣ್ಣ ನಾಮಕರಣ ಮಾಡಲಿಕ್ಕೂ ನೆರೆಮನೆಯಲ್ಲಿ ಎಲೆ ಹಾಕುವ ಪ್ರಸಂಗ ಬರಬಾರದಲ್ಲ – ಅಂತ ನನ್ನ ಥಿಯರಿ. ಮನೆಯವಳು ಚಯ್ಞ ಚಯ್ಞ ಎಂದಳು. ಒರೆಸುವವರ್‍ಯಾರು, ಗುಡಿಸುವವರ್‍ಯಾರು, ಅಂತೆಲ್ಲ ಇರುತ್ತದಲ್ಲ ನಿಮ್ಮ ಹೆಂಗಸರದು. ಹೇಗೇ ಮಾಡಿದರೂ ಅದು ಹೀಗೆ ಆಗಬಹುದಿತ್ತು ಅಂತೆಲ್ಲ ವಾರೆ ಕುತ್ತಿಗೆ. ನನಗೇನೋ ನೋಡು, ಇಂಥದ್ದು ಆಗಬೇಕೆಂದರೆ ಇಂಥದ್ದೇ ಆಗಬೇಕು. ಯಾರ ಚಯ್ಞ ಚಯ್ಞಕ್ಕೂ ತಡೆಯುವವನಲ್ಲ. ಈಗ ನೋಡುತ್ತೀಯ, ಉಪ್ಪರಿಗೆ, ಮೇಲೆ ಕೆಳಗೆ ಅಂತ ಇಡೀ ಮನೆಯಲ್ಲಿ ಒಟ್ಟು ಇನ್ನೂರು ಇನ್ನೂರೈವತ್ತೆಡೆ ಬಡಿಸಬಹುದು. ಹಳೇ ಜಬ್ಬು ಮನೆಯಲ್ದನ? ಒಟ್ಟು, ನಾಸಾಂಸಿ ಜೀರ್ಣಾನಿ ಯಥಾ ವಿಹಾಯ! ಮುಟ್ಟಿದ್ದೇ ಸೈ, ಕೈಗೆ! ಬುರು ಬುರು! ಹಾಗಂತೆಳಿ ಮೋಪು ಎಷ್ಟಿತ್ತು ಅಂತಿ! ಬರೀ ಮೋಪು ಮಾರಿಯೇ ಅರ್ಧ ಮನೆ ಖರ್ಚು ಹುಟ್ಟಿತು ನೋಡು.” ಸರಿದು ಭರ ಭರ ಉಣ್ಣುತ್ತಾ, ತುತ್ತು ಎತ್ತುತ್ತ ಜಗಿಯುತ್ತ ನುಂಗುತ್ತ ವರ್ಣಿಸಿತು ವಾಸು ಮಾಣಿ.
ಮೂಕತ್ತೆ ನಡುನಡುವೆ ಹಾಕುತ್ತಿದ್ದ “ಮೋಪು ಎಲ್ಲ ಮಾರಿದೆಯ ಮಣಿ?!” – ಮುಂತಾದ ಪ್ರಶ್ನೆಗಳು ಅವನ ಮಾತಿನೆಡೆಯಲ್ಲಿ ಕೊಚ್ಚಿ ಹೋಗಿ ಆಕೆ ಆಲಿಸಿದದ್ದೊಂದೇ. ಅಂತೂ ಅಷ್ಟು ಮಾತು ಕೊಯ್ದು ಹೊರಟಿತು ಅವಳ ವಾಸುಮಾಣಿ. ತಲೆ ಮೇಲೆ, ಭುಜದ ಮೇಲೆ, ಕೈಯಲ್ಲಿ ಕಂಕುಳಲ್ಲಿ ಕಾಲಲ್ಲಿಯೂ ಕೆಲಸದ ತರಾತುರಿ ಸಿಕ್ಕಿಸಿಕೊಂಡ ಹಾಗೆ. ಬೀಸ ಬೀಸ. ಅಂವ ಹೋದದ್ದೇ “ಅತ್ತಿಗಿನ್ನು ರೀಲು ಬಿಚ್ಚಲು ಸುರುವಾಗುತ್ತದೆ. ಅಲ್ಲವ ಅತ್ತೆ?” ಎಂದು ನಕ್ಕಳು ಸರೋಜ.
“ಮೊದಲೇ ರಾತ್ರಿಯೆಲ್ಲ ನಿದ್ರೆ ಬರುವುದಿಲ್ಲ ಅಂತೀ. ಇನ್ನು ಬಹುಶಃ ಪೂರಾ ಸೊನ್ನೆ. ಪಾಯಸ ಕೂಡಾ ಮುಟ್ಟಲಿಲ್ಲವಲ್ಲ ಅಮ್ಮ ನೀನು!” — ಮಗ.
“ಅಂಥದ್ದೇನಿಲ್ಲ. ಹಾಗಾದರೆ ಮಾಣಿ ಮನೆ ಕಟ್ಟುವುದಲ್ಲವ? ಒಳ್ಳೆ ಕತೆ. ಪಾಯಸ ಕೊಡು, ಲೋಟೆಗೆ ಹಾಕಿ. ಆಗ ಸೇರಲಿಲ್ಲ ಅಷ್ಟೆ.”
ಎಷ್ಟು ಸಲ ವಾಸುಮಾಣಿಯ ಮನೆವೊಕ್ಕಲು ಯಾವಾಗ ಅಂತ ಕೇಳುವಳೋ. ಅದನ್ನೇ ಸರೋಜ ಎಷ್ಟು ಸಲ ಹೇಳುವಳೋ. ಅಷ್ಟು ಸಲ ಹೇಳಿದರೂ ಜಾಗರದ ಕಣ್ಣಲ್ಲಿ ಮತ್ತೆ ಅದನ್ನೇ ಕೇಳುವಳು ಮೂಕತ್ತೆ. ಹೇಳಿದೆನಲ್ಲ ಆಗಲೇ ಎಂದರೆ, ಹೌದೇ? ಹಾಗಾದರೆ ತನಗೇನಾಗಿದೆ ಎಂದು ಮುಜುಗರಪಟ್ಟುಕೊಳ್ಳುವ ಸೂಕ್ಷ್ಮದವಳು.
****
ಅಂತೂ ಹೊರಡುವ ದಿನ ಬಂತು. ಮರುದಿನ ರಾತ್ರಿ ವಾಸ್ತುಹೋಮ. ಅದರ ಮಾರನೇ ದಿನ ಗೃಹಪ್ರವೇಶ ಊಟ. ಬೆಳಿಗ್ಗೆ ಬೇಗ ಹೊರಟರೆ ಸರಿಯಾಗುತ್ತದೆ ಅಂತೆಲ್ಲ ಮಾತುಕತೆಯಾಗಿದೆ. ಅಮ್ಮ, ಉಡುಗೊರೆಗೆ ಈ ಜೋಡು ಬೆಳ್ಳಿಕಂಬ ತಂದಿದ್ದೇನೆ, ಹೇಗೆ – ಸಾಕಲ್ಲವೆ? ನಿನ್ನ ಮನಸ್ಸಿಗೆ ಬಂತೆ? — ಅಂತೆಲ್ಲ ಮಗ ರಮೇಶ ಕೇಳುತ್ತಿದ್ದಾನೆ. ಏನು – ಯಾವ್ಯಾವ ಸೀರೆ ಹಾಕಲಿ ಅತ್ತೆ? ಎಂದು ಮುಂತಾಗಿ ಸರೋಜ ಕೇಳಿ ತೆಗೆದಿಟ್ಟು ಬ್ಯಾಗಿಗೆ ಹಾಕುತ್ತಿದ್ದಾಳೆ. ಮದ್ದು ಮಾತ್ರೆ, ನಾಲ್ಕು ದಿನಕ್ಕೆ ಆಗುವಷ್ಟು ಹಾಕು ಎಂದಿದ್ದಾಳೆ ಮೂಕತ್ತೆ. ಎಲ್ಲ ಇಲ್ಲಿದೆ, ಇದು ಇಂಥಲ್ಲಿದೆ, ನೋಡಿ ಇದನ್ನು ಈ ಪೊಕೆಟಿನಲ್ಲಿಟ್ಟಿದ್ದೇನೆ, ಇದು ನೋಡಿ ನೀಲಿ ಮಾತ್ರೆ ರಾತ್ರಿ ತೆಗೆದುಕೊಳ್ಳುವುದು, ಇದು ಬೆಳಿಗ್ಗೆ ಮತ್ತು ಮಧ್ಯಾಹ್ನ. ಮತ್ತೆ ಒಂದಕ್ಕೊಂದು ತೆಗೆದುಕೊಳ್ಳಬೇಡಿ. ಮರೆಯಬೇಡಿ. ನಾನು ವಾಪಸು ಬರುವಲ್ಲಿವರೆಗೂ ಹೇಗೂ ನಾನೇ ಕೊಡುತ್ತೇನಲ್ಲ. ಆಮೇಲೆ ಕೊಡಲು ಮಂಜುಳಂಗೆ ತೋರಿಸಿಡುತ್ತೇನೆ….
ಸೊಸೆ ಅತ್ತೆಗೆ ತಯಾರು ಮಡಿಕೊಡುವುದನ್ನು ನೋಡುತ್ತ ಮುಗುಳು ನಗುತ್ತ ಇದ್ದಾನೆ ಮಗ. ಸಾಕಿನ್ನು ಮಲಗೋಣ. ಬೆಳಿಗ್ಗೆ ಬೇಗ ಏಳಬೇಕು ಎನ್ನುತ್ತಿದ್ದಾನೆ.
ಮಲಗಿದರೆ ನಿದ್ದೆ ಬರುತ್ತದೆಯೆ? ಹೊರಳಿದಳು ಮೂಕತ್ತೆ. ಇದೇನು ಹೊಸ ಪರಿಯಲ್ಲ. ಈಚೀಚೆಗೆ ಮೂರು ಮೂರುವರೆಗೆಲ್ಲ ಎಚ್ಚರಾಗಿಬಿಡುತ್ತದೆ. ಕಣ್ಣ ಮುಂದೆ ಹಾದುಹಾದು ಹೋಗುವ ಕಳೆದ ದಿನರಾತ್ರಿಗಳು. “ರಾತ್ರಿ ಇಡೀ ಸಿನೆಮಾ” — ಎಂದು ಮೂಕತ್ತೆ ತನಗೆ ತಾನೇ ತಮಾಷೆ ಮಾಡಿಕೊಳ್ಳುವುದೂ ಇದೆ. ಎಚ್ಚರದ ರಾತ್ರಿ ಕಳೆದ ಮೇಲೆ ಉಳಿಯುವುದು ಮಂಪರಿನ ಹಗಲು. ಕೇಳಿದ್ದನ್ನೇ ಮತ್ತೆ ಕೇಳುವುದು. ತಾನೇಕೆ ಮರೆತೆ ಅಂತ, ತನಗೆ ಮರವೆ ಕವಿಯಿತು ಅಂತೆಲ್ಲ ಕುಗ್ಗುವುದು ಮತ್ತೆ ರಾತ್ರಿ ಮರವೆಯ ಸುಳಿವೂ ಇಲ್ಲದಂತೆ ಭೂತ ಕಾಲದಲ್ಲಿ ತಿರುಗುವುದು. ಇವತ್ತಂತೂ ನಿದ್ದೆ ಒಂದು ಹುಂಡೂ ಇಲ್ಲ. ಆ ವಾಸುಮಾಣಿ ಯಾಕಾದರೂ ಬಂತು.
ಒಮ್ಮೆ ‘ಹೊರಗೆ’ ಹೋಗಿ ಬಂದರೆ ಸುಖವೆನಿಸುತ್ತದೆ. ಮೆಲ್ಲನೆದ್ದು ಹೋಗಿ ಬರುತ್ತಾಳೆ ಮೂಕತ್ತೆ. ಕತ್ತಲೆಯಲ್ಲೇ ನಿಲ್ಲುತ್ತಾಳೆ. ನಿಂತ ಮೇಲೆ ಯಾತಕ್ಕೆ ನಿಂತೆ ಯೋಚಿಸುತ್ತಾಳೆ. ಯಾವಾಗಂತೆ ಮನೆವೊಕ್ಕಲು? ಮರೆಯುತ್ತದೆ ನೆನಪಾಗುತ್ತದೆ. ಚೂರು ಚೂರೇ ಮರೆಯುತ್ತಾ ಮರುಕಳಿಸುತ್ತಾ ಕಡೆಗೆ ಪೂರ್ತಿ ಮರೆಯುವುದನ್ನೇ ಸಾವು ಎನ್ನುತ್ತಾರೆಯೆ? ಆದರೆ ಇದು ಯಾವ ಬಗೆಯ ಮರೆವು. ಇವತ್ತಂತೂ ದಿಂಬಿಗೆ ತಲೆ ಕೊಟ್ಟದ್ದೇ, ಸಾಲು ಸಾಲು ಜನರು. ಆ ಮನೆಯ ಒಳಗೆ, ಒಳಗೆ…. ಮತ್ತೂ ಒಳಗೆ… ತಳಿಕಂಡಿ ಜಗಲಿ…. ಕೋಣೆ… ಅಳು…ನಗು… ಮುನಿಸು. ಹಿಂದೆ ಹಿಂದೆ ಓಡುವ ಮನಸ್ಸು.
ಓಡುವ ಮನಸ್ಸನ್ನು ಎಳೆದು ನಿಲ್ಲಿಸಬೇಕು.
….
ಇದು ಆಗುವ ಮಾತಲ್ಲ. ಒಳಬರುತ್ತಾಳೆ. ಹಾಸಿಗೆ ಕೊಡವುತ್ತಾಳೆ. ಇರುವೆ ಸಿಕ್ಕಿದಂತಾಗುತ್ತದೆ. ನೋಡಿದರೆ ಇರುವೆ ಅಲ್ಲ ಸಣ್ಣ ಹೊಯಿಗೆ. ದಿಂಬೂ ಸರಿಯಿಲ್ಲ. ಬೇರೆ ಮಾಡಿಸಬೇಕು ಈ ಬೇಸಿಗೆಯಲ್ಲಿ. ಬೂರುಗನದು ಬೇಡ. ಉಷ್ಣ. ಒಳ್ಳೆ ಮೆದೂ ಹತ್ತಿ ಸಸೆಸಿ….
…..ಹಾಸಿಗೆ ಸರಿಮಾಡಿಕೊಂಡು ಮತ್ತೆ ಮಲಗುತ್ತಾಳೆ. ಹಲಸಿನ ಮರದ ಬುಡದಲ್ಲಿ ಹೆಜ್ಜೆ ಸಪ್ಪಳ ಕೇಳಿಸಿದಂತಾಗುತ್ತದೆ. ಬಂದಿರುವುದು ಫಣೀಯಮ್ಮಜ್ಜಿಯೇ ಖಂಡಿತ.
ಎಲ್ಲಿದೆ ಫಣಿಯಮ್ಮಜ್ಜಿ? ಹೋಗಿ ಆಯಿತಲ್ಲ. ಎದ್ದು ಕುಳಿತುಕೊಳ್ಳುತ್ತಾಳೆ ಮೂಕತ್ತೆ. ಹಸಕಾಗಿ ಶ್ರೀಹರೀ ರಾಮಾ ರಾಮಾ…. ಎನ್ನುತ್ತಾಳೆ. ಎಷ್ಟು ರಾಮ ಹೇಳಿದರೂ ತಲೆಯಲ್ಲಿನ ಗದ್ದಲ ನಿಲ್ಲುತ್ತಿಲ್ಲ.
ಮಾಣಿಯಾ, ಈ ಹಳೆಕಾಲದವರು ಇದ್ದಾರೆ ನೋಡು. ಅವರ ವ್ಯಾಪಾರ ಬಹಳ ಕಷ್ಟ. ನೀನೇನು ಈ ಮೂಕತ್ತೆ ಜೀವ ಇಲ್ಲದ ಕೊರಡು ಎಂಬ ಹಾಗೆ ಅದನ್ನ ಕೊಯ್ದೆ ಇದನ್ನು ಕತ್ತಿರಿಸಿದೆ ಅದನ್ನ ಅಳಿಸಿದೆ ಕೆಡವಿದೆ ಕೂಡಿಸಿದೆ ಅಂತೆಲ್ಲ ಹೇಳುತ್ತಾ ಇದ್ದೆ. ಹ್ಞಾಂ ಹ್ಞೂ ಸಮ ಅಂತ ಇದ್ದ ಮೂಕತ್ತೆಯೊಳಗೆ ಬೇರೆಯೇ ಒಬ್ಬ ಮೂಕತ್ತೆ ಇದ್ದಾಳೆ ಎಂಬ ಗೋಚರ ಬಂತಾ ನಿನಗೆ? ಅವಳು ಚೀರಿದ್ದು ಕೇಳಿಸಿತ?…. ಬೆಪ್ಪಣ್ಣ. ನಿನಗೆ ಹೇಗೆ ಕೇಳಿಸುತ್ತದೆ! ಕಿವಿ ಇದ್ದರೆ ಸೈಯಾ?….
ನಮಸ್ಕಾರ ಮಾಡಿದೆ ನೀನು! ಮಣಿ, ಮನುಷ್ಯ ಸೀದ ಇದ್ದಿದ್ದರೆ ಈ ನಮಸ್ಕಾರ ಗಿಮಸ್ಕಾರದ ವಿಧಿಯೇ ಹುಟ್ಟುತ್ತಿರಲಿಲ್ಲ. ಹೇಳಿಕೆ ಮಾಡಿದವನೇ ನಡೆದುಬಿಡಬಹುದಿತ್ತು. ನೀನು ನಮಸ್ಕಾರ ಮಾಡಿದೆ, ಒಳಗಿನ ಮೂಕತ್ತೆಗೋ, ಹೊರಗಿನ ಮೂಕತ್ತೆಗೋ. ಇಬ್ಬರು ಒಟ್ಟಾಗಿ ಅಡ್ಡ ಸೊಲ್ಲೆತ್ತದೆ ಒಳ್ಳೆಯದಾಗಲಿ ಎಂದು ಹೇಳಲೇಬೇಕು. ಹಾಗೆ ಆಶೀರ್ವಾದ ಗೆದ್ದುಹೊಡೆದೇ ಬಿಟ್ಟೆಯಲ್ಲ!
ಆ ಹಳೇಹಪ್ಪಟೆ ಅಡುಗೆಮನೆ ಅಳಿಯುವಾಗ ಅಕ್ಕಳೆಪಿಷ್ಟೆ ಎಷ್ಟು ಹೆಡಿಗೆ ಸಿಕ್ಕಿತು ಮಣಿ? ಕಡೆಗೋಲು ಕಂಬ ಏನಂತು. ಮಜ್ಜಿಗೆ ಕಡೆಯುವ ರಾಧಚಿಕ್ಕಿ ರ್‍ಞುಂಯ್ಯ ಮೂಗಲ್ಲಿ ಪದ್ಯ ಒರಳಿ ಒರಳಿ ಬೆಣ್ಣೆ ಬಂದು ಬೆಣ್ಣೆ ಕರಗಿದರೂ ನಿಲ್ಲಿಸದೆ ಧಾರ್‍ಬೂರ್ ಅಂತ ಕಡೆಯುತ್ತಿದ್ದದ್ದು…. ಕಿವಿಯೆಲ್ಲಾ ತೂತುಬಿತ್ತು ಅಂತ ಹೇಳಿತ? ಆಗ! ಅಡುಗೆಮನೆ ಸುದ್ದಿ ಎತ್ತಿದ್ದೇ ಯಾರೋ ಠಂಯ್ಯ ಎಣ್ಣೆಕಂಚು ಹೊತ್ತು ಹಾಕಿದ ಶಬ್ದ ನೋಡು! ಊರೆಲ್ಲಾ ಎಣ್ಣೆ….. ಈಗ? ಗೋರುವವರು ಯಾರು? “ನನ್ನಿಂದಾಗದು, ನನ್ನಿಂದಾಗದು!”
ಎಲ್ಲಿ ಆ ಮಜ್ಜಿಗೆ ಕಡೆಯುವ ಹಗ್ಗ ದೊಡು. ಮಿದುಳೆಲ್ಲ ಮಾಸಿ ಈಗ ಕೇಳಿದ್ದು ಇನ್ನೊಂದು ಘಳಿಗೆಗೆ ಮತ್ತೆ ಅದೇ ಅಂತ ಆಗಿದೆ. ಕಟ್ಟಿ ಹಾಕುತ್ತೇನೆ. ಇನ್ನೂ ಅತ್ತತ್ತಾದರೆ ಎಲ್ಲರಿಗಿಂತ ಮೊದಲು ನೀನೇ ಮೂಕತ್ತೆಗೆ ಅರಳು ಮರಳು ಅಂತ ಕೈತಟ್ಟಿ ನಗಾಡುತ್ತಿ.
…. ಎದ್ದು ಬಂದಳು ಮೂಕತ್ತೆ. ಚಿಲ್ಲರೆ ಡಬ್ಬಿ ತೆಗೆದು ಮೆಲ್ಲ ಹಾಸಿಗೆ ಮೇಲೆ ಇಟ್ಟುಕೊಂಡಳೂ. ಮೊನ್ನೆ ತಾನೇ ಲೆಕ್ಕ ಮಾಡಿದ ಡಬ್ಬಿ ಇವತ್ತು ಸುಳಿವೇ ಕೊಡದೆ ಜಾಸ್ತಿ ಹೇಳುತ್ತಿದೆ. ಮತ್ತೊಮ್ಮೆ ಕಡಿಮೆ ಹೇಳುತ್ತಿದೆ. ಅಂತೂ ಸಮ ಬಂತು ಅಂತಾಯಿತು. ನಿನ್ನೆ ಇದ್ದದ್ದೂ ಇಷ್ಟೇ. ನಾಳೆಗೆ ಸ್ವಲ್ಪ ಚಿಲ್ಲರೆ ಇಟ್ಟುಕೊಳ್ಳಬೇಕು. ತೀರ್ಥಪ್ರಸಾದ ಅದೂ ಇದೂ ಅಂತ ಚಿಲ್ಲರೆ ಎಷ್ಟಿದ್ದರೂ ಹೆಚ್ಚಲ್ಲ…. ಆ ಮೀನಾಕ್ಷಿ ಮಕ್ಕಳು ಹಿಟ್ಟೆಗಿಲ್ಲದವು ಪಾಪ. ಏನು ಕಂಡರೂ ಬಕಪಕ್ಷಿಗಳ ಹಾಗೆ ಆಂಕರು ಬಿಡುತ್ತವೆ. ಹೋದ ಕೂಡಲೆ ಕೈ ನೋಡುತ್ತವೆ…..
“ಅತ್ತೆ ಎದ್ದಿದ್ದಾರೆ. ದುಡ್ಡಿನ ಶಬ್ದ ಕೇಳುತ್ತಿದೆ.”
“ಹ್ಞೂಂ… ಏನೂ ಮಾಡುವಂತಿಲ್ಲವಲ್ಲ. ಮಲಕೊ. ಬೆಳಿಗ್ಗೆ ಬೇಗ ಏಳಬೇಕು.”
ಏಳಬೇಕೆಂದುಕೊಂಡ ಸರೋಜ ಅಲ್ಲಿಯೇ ಕಣ್ಣು ಮುಚ್ಚಿದಳು.
ಮೂಕತ್ತೆ ನೋಟಿನ ಗಂಟು ಬಿಚ್ಚಿದಳು. ಲೆಕ್ಕ ಮಾಡಿಸಿಕೊಂಡು ಮಾಡಿಸಿಕೊಂಡು ದಣಿದು ಮುಖ ಮುದುರಿ ಕುಳಿತ ನೋಡುಗಳು.
…. ಪಡಸಾಲೆ ಕಪಾಟನ್ನೂ ಅಳೆದೆಯಾ ಮಣೀ? ಅಲ್ಲಿ ನಾಗಮ್ಮಜ್ಜಿ ಚಿನ್ನ ಏನಾದರೂ ಸಿಕ್ಕಿತಾ? ಪಾಪ ಅಷ್ಟಪ್ಪ ಚಿನ್ನ ಮಾಡಿಸಿಯೂ ಹಾಕಿಕೊಳ್ಳುವ ಯೋಗವೇ ಇಲ್ಲದ ನಾಗಮ್ಮಜ್ಜಿ. ಎಲ್ಲಿಂದ ಆ ನವೆ ಖಾಯಿಲೆ ಬಂತೊ. ಸ್ವಲ್ಪ ಮದ್ದು ಮಾಡಿದಳಾ? ಕಡೆಗೆ ಡಾಕ್ಟರು “ನೀವು ಚಿನ್ನ ಹಾಕುವುದು ಬಿಡಿ ಸರಿಯಾಗಬಹುದು” ಎಂದರು ಅಂತ ಸಾಯುವವರೆಗೂ ಅವಳಿಗೆ ನೂಲಲ್ಲಿ ಸುರಿದ ಕರಿಮಣಿ. ಮಣ್ಣಿನ ಬಳೆ. ಹಾಗೆಂತ ಒಬ್ಬರಿಗೆ ಒಂದು ಚೂರು, ಸ್ವಂತಕ್ಕೆ ಇರಲಿ, ಹಾಕಿ ವಾಪಾಸು ಕೊಡಲಿಕ್ಕಾದರೂ, ಕೊಟ್ಟಳಾ? ಚಿನ್ನ ಇದ್ದದ್ದೆಂದರೆ ಒಂದಿತ್ತು ಒಂದಿಲ್ಲ ಅಂಬ ಹಾಗಿಲ್ಲ ಅಷ್ಟು! ಕಪಾಟಿನೊಳಗೆ ಬೀಗ ಹಾಕಿ ಇಟ್ಟುಕೊಂಡವಳು ಮಲಗುವುದೂ ಅಲ್ಲೇ ಏಳುವುದೂ ಅಲ್ಲೇ. ಸರ್ಪನಹಾವು ಕಾದ ಹಾಗೆ ಅದರ ಬುಡದಲ್ಲೇ. ಕಡೆಗೆ ಜೀವ ಬಿಟ್ಟದ್ದೂ ಅಲ್ಲೇ! ಜೀವ ಹೋದ ಮೇಲೆ ಕಪಾಟು ತೆಗೆದು ನೋಡಿದರೆ ಏನಿತ್ತು? ವರಳೆ! ಚಿನ್ನ ಏನಾಯಿತು ಚಿನ್ನ ಏನಾಯಿತು ಗೋಡೆ ತಿಂತಾ ಕಪಾಟು ತಿಂತಾ ಅಥವಾ ವರಳೆಯೇ ತಿಂತಾ? ಬೊಬ್ಬೆ ಬಿದ್ದದ್ದೆಂದರೆ!
ತನ್ನಷ್ಟಕ್ಕೇ ನಕ್ಕಳು ಮೂಕತ್ತೆ. ದುಡ್ಡನ್ನೆಲ್ಲ ಕಟ್ಟಿ ಒಳಗಿಟ್ಟು ಮತ್ತೆ ಬೀಗ ಹಾಕಿದಳು; ಇಲ್ಲವಾದರೆ ನಾಗಮಜ್ಜಿಯ ನೆನಪು ನಿಲ್ಲದು ಎಂಬಂತೆ. ಅಡುಗೆ ಮನೆಗೆ ಹೋಗಿ ಚೊಂಬು ನೀರನ್ನೆತ್ತಿ ಗಟಗಟ ಕುಡಿದಳು. ಮತ್ತೆ ಬಚ್ಚಲಿಗೆ ಹೋಗಬೇಕೆನ್ನಿಸಿತು.
ಸಾಯಂಕಾಲವಾಗಿದೆ. ಜಗಲಿಯಲ್ಲಿ ಅಪ್ಪಯ್ಯ ಕುಳಿತಿದ್ದಾರೆ; ತೆಂಗಿನಮರಗಳು ತೂಗಿಕೊಳ್ಳುತ್ತಾ ಆಡಿಕೊಳ್ಳುತ್ತಾ ಇರುವುದನ್ನು ನೋಡುತ್ತಾ. ಅಮ್ಮ ಅಲ್ಲೇ ಆಚೆಗೆ ಲೋಟೆನೀರಲ್ಲಿ ಗೊರಟೆಮಿಟೆ ಇಟ್ಟುಕೊಂಡು ಮೂರೆಳೆಯಲ್ಲಿ ಕಟ್ಟುತ್ತಿದ್ದಾಳೆ. ಎಲ್ಲ ಸತ್ಯ ನಿತ್ಯ ಎಂಬಂತೆ ಇದ್ದರಲ್ಲ. ಇದ್ದರೂ ಆಗ ಬೀಸುತ್ತಿದ್ದ ಗಾಳಿ ಕೂಡ ನೋಯುತ್ತಿದೆ ಅಂತ ತನಗೆ ಅನಿಸಿತೇಕೆ?…. ಆ ನೋವು ಇದಾ? ಮುಂದೊಂದು ದಿನ ಈ ವಾಸುಮಾಣಿ ಎಂಬವ ಹುಟ್ಟಿ ಬಂದು ಈ ದೃಶ್ಯದ ರೂಹು ಸಮೇತ ಅಳಿಸುತ್ತಾನೆ ಅಂತವಾ?….. ಛೆ ಛೆ ಹಾಗಲ್ಲ…. ಮತ್ತೆಂತದು?
ನನ್ನ ನಿಶ್ಚಯ ತಾಂಬೂಲದ ದಿನ ನೆನಪುಂಟ? ಅಪ್ಪಯ್ಯ…..
ಬೇಡ. ಮನಸ್ಸೆಂಬುದು ಬೊಚ್ಚುಬಾಯಿಯ ಮೆಲುಕು ಮುದುಕಿ. ಚೂರು ಬಿಗಿ ಸಡಿಲಿಸಿದರೂ ಮೆಲುಕಲು ಸುರುಮಾಡುತ್ತದೆ. ದೇಹ ಮುದಿಯಾಗುವುದು ಬಿಡುವುದು ನಮ್ಮ ಕೈಯಲ್ಲಿಲ್ಲವಾದರೂ ಮನಸ್ಸಿನ ಕಡಿವಾಣ….
ಅಂತೆಲ್ಲ ಹೇಳಲಿಕ್ಕೆ ಸುಲಭ. ಮುಂದೋಡುವ ಮನಸ್ಸಿಗೇನೋ ಕಡಿವಾಣ ಹಾಕಬಹುದು. ಹಿಂಡೋಡುವ ಮನಸ್ಸಿಗಲ್ಲ. ಅದೂ ಮುದುಕರಾದ ಮೇಲೆ ಅಲ್ಲವೇ ಅಲ್ಲ.
…. ತಾನು ತಪ್ಪಿಸಿಕೊಳ್ಳುತ್ತಿದ್ದೇನೆಯೇ? ಮನಸ್ಸನ್ನು ಬಿಗಿ ಹಿಡಿಯಬೇಕು ಎಂದರೆ ಬಿಗಿ ಹಿಡಿಯುವುದೇ. ಮುದುಕರಾದೆವು ಎಂಬ ಪ್ರಶ್ನೆಯೇ ಇಲ್ಲ. ಹಳೆಯದನ್ನೆಲ್ಲ ಅಲ್ಲಿಗೇ ಬಿಟ್ಟುಬಿಡಬೇಕು. ಹೊಕ್ಕಳಬಳ್ಳಿ ಕತ್ತಿರಿಸಿಕೊಂಡಂತೆ.
….ಆಗ, ಅಲ್ಲಿ ನೋಡು ಮಣಿಯ ನಿನ್ನ ಅಜ್ಜಯ್ಯ, ಜಗಲಿಯ ಮೇಲೆ! ನಿನಗೆ ಕಾಣ. ನನ್ನಷ್ಟು ವರ್ಷ ಆಗಲಿ. ಕಾಣದ್ದೆಲ್ಲ ಕಾಣುವುದು ಆವಾಗಲೇ. ನೀನು ಜಗಲಿ ಅಳಿಸಿದೆ ಎಂದೆ ಎಲ್ಲಿ ಅಳಿಸಿದೆ? ಇರುವುದು ಎಷ್ಟು ಭ್ರಮೆಯೋ ಅಳಿಸುವುದೂ ಅಷ್ಟೇ ಭ್ರಮೆ ತಿಳಕೊ. ಅಳಿಯಿತು ಅಂತ ನನಗೆ ನೋವು. ಅಳಿಸಿದೆ ಅಂತ ನಿನಗೆ ಹಮ್ಮು. ಏನೋ ಪೂಜೆ ಮಂತ್ರ ಇದೆಯಲ್ಲ. ಧರ್ಮಾಯ ನಮಃ ಜ್ಞಾನಾಯ ನಮಃ ಅಂತಲೂ. ನಾನೀಗ ಅಜ್ಞಾನಾಯ ನಮಃ ಅಂತ ಸುಮ್ಮನಿರಬೇಕು. ….ಯಾರದು ಅಜ್ಞಾನ? ನಿನ್ನದೊ ನನ್ನದೊ? ಒಬ್ಬರ ಅಜ್ಙಾನ ಇನ್ನೊಬ್ಬರ ಜ್ಞಾನ. ಅಥವಾ ಜ್ಞಾನವೂ ಇಲ್ಲ ಅಜ್ಞಾನವೂ. ಎಲ್ಲ ಭ್ರಾಂತು ಏನಂತಿ?
ಹರಿಕಥೆ ಅಂತಿಯ ಮಣಿ? ಭ್ರಾಂತೇ ಇಲವಾದಲ್ಲಿ ಆ ಇಡೀ ಮನೆ ಸಾರಿಸಿ ಒರೆಸಿ ಹಬ್ಬ ಹರಿದಿನಗಳಲ್ಲಿ ಆ ನಮೂನೆ ಒಪ್ಪ ಮಾಡುತ್ತಿತ್ತಲ್ಲ ನಾವು ಹೆಣ್ಣುಮಕ್ಕಳೆಲ್ಲ. ಅಂಥ ಚುರುಕು ಹುರುಪು ಎಲ್ಲ ಎಲ್ಲಿಂದ ಬರುತ್ತದೆ ಎಂದುಕೊಂಡೆ, ಅದೆಲ್ಲ ಆಚಂದ್ರಾರ್ಕವೆಂಬ ಅಂತ ನಂಬಿಕೆ ಇಲ್ಲದೆ ಹೋದಲ್ಲಿ? ಇದು ನಮ್ಮದಲ್ಲ ನಾವಿಲ್ಲಿ ಏನೂ ಅಲ್ಲ; ಎಲ್ಲ ಒಂದು ದಿನ ಸುದ್ದಿ ಸುಳಿವೂ ಕೊಡದೆ ಅಳಿದು ಹೋಗಬಹುದು ಎಂಬ ಅರಿವು, ಗೊತ್ತೇ ಆಗದಂತೆ ಅಡಗಿರುವ, ನಂಬಿಕೆಯದು, ಸದರಮಾತುವಂತಿಲ್ಲ.
ಬಾಗಿಲು ಹಾಕಿಕೊಂಡು ಒಳಗೆ ಬಂದಳು ಮೂಕತ್ತೆ. ತರಕಾರಿ ಇಡುವಲ್ಲಿಗೆ ಹೋದಳು. ಬುಟ್ಟಿಯಿಂದ ಎಲ್ಲ ತೆಗೆದು ಮೆಲ್ಲ ಸದ್ದಾಗದಂತೆ ಬುಟ್ಟಿ ಕೊಡವಿ ಮತ್ತೆ ಜೋಡಿಸಿದಳು. ಮೆಣಸಿನಕಾಯಿ ತಂದದ್ದು ಹಾಗೇ ಇದೆ ಎನ್ನುತ್ತ ಚೊಟ್ಟು ತೆಗೆದಳು. ಕೊತ್ತಂಬರಿಸೊಪ್ಪನ್ನು ಬಿಡಿಸಿ ಶೋಧಿಸಿಟ್ಟಳು…. ಸುಬ್ಬಿ ಹೀಗೇ. ಮದುವೆಯಾಗಿ ಬಂದ ಮುರದಿನ ಏನೂ ತೋರದೆ ಉಗ್ರಾಣಕೋಣೆಗೆ ಹೋಗಿ ನೆಲದ ಮೇಲೆ ಹರವಿದ ಮೆಣಸಿನ ಚೊಟ್ಟು ತೆಗೆಯುತ್ತ ಅದೇ ಕೈಯಲ್ಲಿ ಕಣ್ಣು ಮುಟ್ಟಿಕೊಂಡು…. ಪಾಪದವಳು. ಅಬ್ಬೆ ಮನೆಯಲ್ಲಿ ಕೆಲಸ ಮಾಡಿದವಳಲ್ಲ. ಮರಕಲು ಕೂಡಾ ಹೆದರಿ! ಉಗ್ರಾಣಕೋಣೆಯ ಯಜಮಾನ ಬಾಬಣ್ಣಯ್ಯ – ಹೋಕಿಲ್ಲದ ಹಡೆ ಬಾಬನ್ನಯ್ಯ….ಯಂತ ಮಾಡಿದಾ….ಥಽಽ.
ತೊಟ್ಟು ಕಸ ಎಲ್ಲ ಒಟ್ಟುಗೂಡಿಸಿ ಎದ್ದ ಮೂಕತ್ತೆ ಅದನ್ನಲ್ಲೇ ಕಸದ ಮೂಲೆಗೊತ್ತದೆ ಮತ್ತೆ ಬಾಗಿಲು ತೆರೆದು ಹೊರಬಂದು ತೆಂಗಿನಕಟ್ಟಿಗೆ ಬಿಸಾಡಿದಳು.
ನೆನಪಿನ ಹತ್ತಿರ ಸುಳಿದರೆ ಸಾಕು. ಛಪಕ್ಕೆಂತ ಒಳಗೆಳೆದುಕೊಳ್ಳುತ್ತದೆ. ಹತ್ತಿರ ಸುಳಿಯಲೇಬಾರದು.
ಹೊಟ್ಟೆ ಗುಡುಗುಡುತ್ತಿದೆ ಅನಿಸಿತು.
ಇಡೀ ಜಗತ್ತು ಮಲಗಿರುವಾಗ ಅನಿವಾರ್ಯವಾಗಿ ಎಚ್ಚರವಾಗಿರುವಷ್ಟು ಹಿಂಸೆ ಇನ್ಯಾವುದೂ ಇಲ್ಲ. ಜಗಲಿಯ ಮೇಲೆ ಕುಳಿತವಳಿಗೆ ತಾನೇ ಕಳ್ಳ ಕುಳಿತಂತೆನಿಸಿ ವಿಚಿತ್ರ ಭೀತಿಯಾಗಿ ಮತ್ತೆ ಒಳಗೆ ಬಂದು ಬಾಗಿಲು ಹಾಕಿಕೊಂಡಳು.
ನಾನಾದರೂ ಯಾಕೆ ಕೇಳಬೇಕು, ಮೋಪನ್ನು ಮಾರಿದೆಯಾ ಮಣೀ ಅಂತ? ಯಾರಿಗೇ ಕೊಟ್ಟುಕೊಳ್ಳಲಿ. ಅವನ ಸೊತ್ತು. ಅವ ಕಂಡಂತೆ ವಿತರಿಸಲಿ. ನಾನೇಕೆ ಬಾಯಿ ಕಳೆಯಬೇಕು? ಇಕ್ಕೇರಿ ಸಂಸ್ಥಾನ ಕಾಲದ ಹಳೆಯ ಮೆನ ಕೆಡವಿ ಹೊಸ ಮನೆ ಕಟ್ಟಿಸಿದ ಅಜ್ಜಯ್ಯನೇ ಸತ್ತು ಎಲ್ಲಿದ್ದಾರೋ. ತಿಂಗಳಿಡೀ ಅಂಗಳದಲ್ಲಿ ಬೀಡುಬಿಟ್ಟ ಮಾಲಿಂಗ ಬಡಗಿ ಎಲ್ಲಿದ್ದಾನೋ. ನಾಳೆ ಎಂದರೆ ನನ್ನ ಕಥೆ ಏನೋ. ಅಂಥಲ್ಲಿ ನನ್ನದೊಂದು ಆಸೆ! ಎಲ್ಲ ಬಿಟ್ಟು ಮೋಪು! ಸದ್ಯ ಅವನಿಗೆ ಕೇಳಿಸಲಿಲ್ಲ. ಏನೆಲ್ಲ ಬಂತು ತಾನು ಕಾಣುತ್ತಿದ್ದಂತೆಯೇ. ಇದೊಂದು ಯಂತ್ರ ಬರಲಿಲ್ಲ ಇನ್ನೂ, ಒಳಗಿನ ಎಲ್ಲ ಮಾತು, ಪ್ರಶ್ನೆ, ಬೈಗಳ ಸಕಲುವೂ ಹೊರಗಿದ್ದವರಿಗೆ ಕೇಳುಸುವಂತೆ ಮಾಡುವ ಯಂತ್ರ. ಅದನ್ನು ಕಂಡುಹಿಡಿದ ದಿನ ಭೂಲೋಕವೆಂಬುದು ಧಡಾರನೆ ಜರಿದು ಎಲ್ಲ ಉದುರಿ ಹೋಗಿ ಒಟ್ಟೆ ಬುರುಡೆ ಮಾತ್ರವಾಗಿ ಉಳಿಯುತ್ತದೋ ಅಥವಾ ಅದೂ ಚೂರು ಚೂರಾಗಿ ದಿಕ್ಕುದೆಸೆಗೆ ಹಾರಿಹೋಗುತ್ತದೋ.
…. ಅಲ್ಲ. ಇಡೀ ಮನೆ ಅಳಿಸಿದೆ ಎಂದೆಯಲ್ಲ ಮಣಿ, ಮನಸ್ಸಾದರೂ ಹೇಗೆ ಬಂತು ನಿಂಗೆ? ಅಂಥಾ ದಪ್ಪದ ಗೋಡೆ, ಅಂಥಾ ಮುಚ್ಚಿಗೆ. ಎಲ್ಲ ‘ಬುರುಬುರು’ ಉದುರಿತಂತೆ, ಬುರುಬುರು! ಯಾರ ಹತ್ತಿರ ಹೇಳುತ್ತಿ? ಈ ಮೂಕತ್ತೆ ಹತ್ತಿರವ? ನಿನಗೆ ಸಿಮೆಂಟೆನ ಮನೆ ಬೇಕಾಗಿತ್ತು ಎನ್ನು ಧೈರ್ಯವಾಗಿ. ಹಾಗೆ ಹೇಳಲು ಕೈಲಾಗಲಿಲ್ಲ! ನಗೆ ನೋಡು ಮತ್ತೆ. ಅಜ್ಞಾನಾಯ ನಮಃ ಅಂತ ನನ್ನ ಮಾತು ನನಗೇ ತಿರುಗಿಸಿ! ಹಾಗಾದರೆ ಆ ನಡುಕೋಣೆಯನ್ನೂ ಅಳಿಸಿಬಿಟ್ಟೆ ಹೋಽಽಲ್ಲ? ಅದು ಹೆಣ್ಣುಮಕ್ಕಳನ್ನು ‘ನೋಡಲು’ ಬರುತ್ತಿದ್ದ ಕೋಣೆ ಮಣೀ. ಬಂದವರು ನಮಗೆ ಕಾಣುವ, ನಾವು ಅವರಿಗೆ ಕಾಣದ ಅದರಾಚೆ ಕೋಣೆಯಲ್ಲಿ ನಾವೆಲ್ಲ ಕುಳಿತುಕೊಳ್ಳುವುದು; ನೋಡಲಿಕ್ಕೆ ಬಂದವನಿಗೆ ಊನ ಕಟ್ಟುವುದು. ಹುಡುಗಾಟ ಮಾಡಿ ಮಾಡಿ ಒಂದು ಸಲ ತಿಮ್ಮಕ್ಕನ್ನ ನೋಡಲಿಕ್ಕೆ ಬಂದವನ ಕಿವಿ ಮಡಚು ಕಿವಿ ಅಂತ ಹೇಳಿ ಆ ಮೇಲೆ ಅದು ತಮಾಷೆ ಅಂತ ಎಷ್ಟು ಹೇಳಿದರೂ ಆಕೆ ನಂಬದೆ ಈ ಮದುವೆ ಆಗೆ ಎಂದು ಅತ್ತೂ ಕರೆದೂ…. ಯಾರು ಮಡಚು ಕಿವಿಯೆಂದವರು ಅಂತ ಅಜ್ಜಯ್ಯನ ತನಿಖೆಯೇ ತನಿಖೆ…. ಅಲ್ಲೇ ಆ ಕೋಣೆಯಲ್ಲಿ ದೊಡ್ಡ ಕನ್ನಡಿ ಇತ್ತು ನೋಡು, ಅದರ ಹತ್ತಿರವೇ. …ಅಂದ ಹಾಗೆ ಆ ಕನ್ನಡಿಯನ್ನ ಏನು ಮಾಡಿದೆ? ಮನೆ ಅಳಿಸುವ ರಭಸದಲ್ಲಿ ಒಡೆದುಗಿಡೆದು ಹಾಕಿದೆಯ? ಅದರ ನೆನಪೇ ಹೋಗಿತ್ತು ನೋಡು.
….ಅದರ ಹತ್ತಿರವೇ ತನಿಖೆ ನಡೆಸಿದರೆ ತಿಮ್ಮಕ್ಕ ಚಕಾರ ಬಾಯಿ ಬಿಡಬೇಕ? ನಮ್ಮ ಅದೃಷ್ಟ. ಇಲ್ಲವಾದರೆ ಅವತ್ತೊಂದು ‘ಸಮಾರಾಧನೆ’ ಆಗಿಬಿಡುತ್ತಿತು. ಅಂತೂ ಆಕೆ ಮದುವೆಗೆ ಒಪ್ಪಿ ಮರಕುತ್ತ ಮರಕುತ್ತ ಮಾಲೆ ಹಾಕಿ ಪರದೆ ತೆಗೆದರೆ ಎದುರು ನಿಂತಿದ್ದಾನೆ, ಮನ್ಮಥ! ಆಮೇಲೆ ನೋಡಬೇಕು ಅವಳನ್ನು. ನಗೆಯೇ ನಗೆ. ಅವಳ ಬದುಕೂ ಹಾಗೇ ನಡೆಯಿತು…. ನಡೆಯಿತು ಅಂತ ಅಂದುಕೊಳ್ಳುತ್ತಿದ್ದಂತೆ ಒಂದು ದಿನ ಅನಾಮತ್ತಾಗಿ ಕೌಚಿಯೂಬಿತ್ತು!
………….
………….
ಕ್ಷೌರದವ ಬಂದ. ಆ ಹಲಸಿನಮರದ ಬುಡದಲ್ಲೇ, ಗಂಡಸರೆಲ್ಲ ಕ್ಷೌರಕ್ಕೆ ಕುಳಿತುಕೊಳ್ಳುವಲ್ಲೇ ತಿಮ್ಮಕ್ಕನನ್ನು ಎಳೆದೆಳೆದು ಕೂಡಿಸುವುದು, ಅವಳು ಎದ್ದೆದು ಓಡಿ ಬರುವುದು….. ಅಯ್ಯೋ ಬೇಡಾ ಎಂಬ ಅವಳ ಬೊಬ್ಬೆ ನೆನೆದರೆ ಕೆಮಿಹೂಗು ಈಗಲೂ ನಡುಗುತ್ತದೆ. ಕಡೆಗೆ ಅದೇ ಅಜ್ಜಯ್ಯ ಕೋಲು ಹಿಡಿದು ಎದುರು ನಿಂತು ಎದ್ದರೆ ಕೊಂದು ಬಿಡುತ್ತೇನೆ ಅಂತ ಹೆದರಿಸಿ ಕ್ಷೌರದವನೂ ಹೆದರಿ ಹೆದರಿ ನಿಮಿಷದೊಳಗೇ ಅವಳ ತಲೆ ಬೋಳು ಮಾಡಿ….. ಅಜ್ಜಯ್ಯನಿಗಲ್ಲದಿದ್ದರೂ ಆ ಕೋಲಿಗೇ ಹೆದರಬೇಕಿತ್ತು, ಹಾಗಿತ್ತು ಅದು. ವಿಚಿತ್ರ ನೋಡು. ಬೋಳುಮಂಡೆ ತಿಮ್ಮಕ್ಕನನ್ನು ಕಾಣುತ್ತ ಕಾಣುತ್ತ ಆ ಮುಂಚಿನ ತಿಮ್ಮಕ್ಕ ಕಣ್ಮರೆಯಾಗಿಯೇ ಬಿಟ್ಟಳು! ಇದೇ ಸತ್ಯವಾಯಿತು. ಕೂದಲು ಇತ್ತು ಎಂಬುದೇ ಸುಳ್ಳೆಂಬಷ್ಟು.
….ತಿಮ್ಮಕ್ಕಂಗೆ ಅಷ್ಟೆಲ್ಲ ಜಬರ್ದಸ್ತು ಮಾಡಿದ ಅಜ್ಜಯ್ಯ ಸತ್ತಾಗ ಅಜ್ಜಿ ಕೂದಲು ತೆಗೆಸಿಕೊಳ್ಳಲೇ ಇಲ್ಲವಲ್ಲ! “ನಾನು ತೆಗೆಸಿಕೊಳ್ಳುವುದಿಲ್ಲ. ಏನಾಗುತ್ತದೆ ನೋಡಿಯೇ ಬಿಡುವ. ಅವರು ನರಕಕ್ಕೆ ಹೋದರೆ ಹೋಗಲಿ. ಅದನ್ನೆಲ್ಲ ಯಾರಿಂದ ತಪ್ಪಿಸಲಿಕ್ಕಾಗುತ್ತದೆ” ಎಂದುಬಿಟ್ಟಳು. ಯಾರಾದರೂ ಅಡ್ಡ ಮಾತಾಡಿದರೆಂದಾದರೆ ಕಚ್ಚಿ ಸುರುದಿಬಿಡುವಂಥವಳು. ಅಜ್ಜಯ್ಯಂಗೆ ಹಾಗೇ ಆಗಬೇಕು!
ಅದೆಲ್ಲ ಸಮ. ಆದರೆ ಅಂಥವಳು ತಿಮ್ಮಕ್ಕಂಗೆ ಕೂದಲು ತೆಗೆಸುವಾಗ ಮಾತ್ರ ಯಾಕೆ ಒಳಗೇ ಇದ್ದಳು; ತನಗೆ ಸಂಬಂಧವೇ ಇಲ್ಲದ ಹಾಗೆ? ಅಥವಾ ಆಗಲೇ ಅವಳು ಅಜ್ಜಯ್ಯನ ಮೇಲೆ ಇಂಥ ಲೆಕ್ಕಾಚಾರ ಹಾಕುತ್ತ ಇದ್ದಳೋ? ಏನೂ ಮಾಡಲಿಕ್ಕಾಗದೆ ನೋಡುತ್ತ ನಿಂತ ನಾವಾದರೂ ಎಂಥವರು, ಅದು ಹೇಳು.
…. ಉಗ್ರಾಣಕ್ಕೆ ಹೋದಳು ಮೂಕತ್ತೆ. ನೀರು ಒಸರುವ ಕಣ್ಣನ್ನೊಮ್ಮೆ ಒರೆಸಿ ಝಳಕು ಮಾಡಿಕೊಂಡಳು. ಡಬ್ಬಿ ಲೇಬಲುಗಳನ್ನೆಲ್ಲ ಗುಣುಗುಣು ಓದುತ್ತ ನಿಂತಳು.
ಈ ಮೂಕತ್ತೆ ಏನು ಹೋಕಿಲ್ಲದ ಪುರಾಣ ಎತ್ತಿಕೊಂಡಳು ಅಂತ ಕಂಡಿತ ಮಣಿ? ಏನು ಮಾಡಲಿ ಹೇಳು. ನೀನೊಬ್ಬ ಮನೆ ಅಳಿಸದಿದ್ದರೆ ಇವೆಲ್ಲ ಏಳುತ್ತಲೇ ಇರಲಿಲ್ಲ. ಎಲ್ಲ ಮರೆತೇ ಹೋಗಿದೆ ಅಂದುಕೊಂಡಿದ್ದೆನಲ್ಲ. ಈಗ ತಿಳಿಯಿತು ನನಗೂ. ಹಳತಾದ ಹಾಗೂ ನೆನಪೆಂಬುದು ತಿರುಗ ಮುರುಗವಾಗಿ ಕುಳಿತುಕೊಳ್ಳುತ್ತದೆ. ಇವತ್ತಿನ ಕಡೆಗೆ ಕಾಲುಹಾಕಿ ಎಂದೋ ಆಗಿಹೋಗಿದ್ದಕ್ಕೆ ತಲೆ ಹಾಕುತ್ತದೆ. ಯಾರಿಗೆ ಬೇಕಾಗಿದೆ, ನಿನಗಾದರೂ ಬೇಕಾ ಇದೆಲ್ಲ? ಆದರೆ ಬೇಕು ಬೇಡದ ಹಂಗು ಅವಕ್ಕೆ ಇದ್ದರಲ್ಲವೆ?
ಡಬ್ಬಿಗಳನ್ನು ಓದುತ್ತ ಇದ್ದಂತೆ ಎಡೆಯಲ್ಲಿ ಸಿಗಿಸಟ್ಟ ಹಾಳೆಕಟ್ಟು ಕಾಣಿಸುತ್ತದೆ. ಈಗೇನೂ ಇದನ್ನು ಉಪಯೋಗಿಸುವುದಿಲ್ಲ. ಸುಮ್ಮನೆ, ಒಂದು ಕಟ್ಟು ಇರಲಿ ಅಂತ ಇಟ್ಟಂತಿದೆ. ಮೆಲ್ಲ ಅದರ ಮೇಲೆ ಕೈಯಾಡಿಸುತ್ತಾಳೆ. ಕೆಲ ವಸ್ತುಗಳು ಕೇವಲ ನೋಟದಲ್ಲಿ ಕೇವಲ ಸ್ಪರ್ಶದಲ್ಲಿ ನೆನಪಿನುಗ್ರಾಣವನ್ನೇ ತೆರೆಯುತ್ತವೆಯೇ? ಕಕ್ಕಾಬಿಕ್ಕಿಯಾದಳು ಮೂಕತ್ತೆ. …. ಕೋಣೆ ಕೋಣೆ ಬಳಿಯುವ ಸದ್ದು ಬಳೆಯ ಸದ್ದು, ಸೆಗಣಿಯ ಕಂಪು ವಾಸನೆ ಒಮ್ಮೆ ಚಕ್ರಕ್ಕೆ ಸಲುಕಿತೆಂದರೆ ಗರಗರ ತಿರುಗುತ್ತಲೇ ಇರುವ ಮನಸ್ಸು. ಇದೆಲ್ಲಿಯ ಹಾಳೆ? ಸಂತೆಯದಿರಬೇಕು. ಗಟ್ಟಿಯಿಲ್ಲ, ಬಳಕುತ್ತದೆ. ಆ ಶಂಕರ ಚಿಕ್ಕಪ್ಪನ ತೋಟದಿಂದ ಬರುತ್ತಿತ್ತಲ್ಲ. ಅಷ್ಟು ದೊಡ್ಡ ಮನೆ ಇಡೀ ಬಳಿದರೂ ಹೇಗೆ ಇರುತ್ತಿತು ಒಳ್ಳೆ ತಗಡಿನ ಹಾಗೆ! ಸ್ವಲ್ಪ ಹೊತ್ತು ಹೀಗೆ ಮುಟ್ಟುತ್ತಿದ್ದರೆ ತಾನು ಸೀದ ಅದರಲ್ಲೊಂದನ್ನೆಳೆದು ನೀರಲ್ಲಿ ನೆನೆಸಿ ಊಟದ ಕೋಣೆಯನ್ನ ಬಳಿಯಲಿಕ್ಕೆ ಹೊರಟುಬಿಡುತ್ತೇನ, ಅ ಮನೆಯ ನಡುವೊಳಗೆ ಬಳಿಯುತ್ತಿದೇನೆ ಅಂತಂದುಕೊಳ್ಳುತ್ತು? ಭಯವಾಯಿತು.
ಉಗ್ರಾಣದಿಂದ ಹೊರಗೆ ಬಂದು ಧಡಾರನೆ ಬಾಗಿಲು ಹಾಕಿದಳು ಮೂಕತ್ತೆ. ಬಾಗಿಲು ಶಬ್ದಕ್ಕೆ ಮಗ ಸೊಸೆ ಇಬ್ಬರೂ ಎದ್ದು ಬಂದು ನೋಡಿದರೆ ಉಗ್ರಾಣದ ಹೊಸ್ತಿಲ ಮೇಲೆ ಮೌನ ಕುಳಿತಿದ್ದಾಳೆ. “ಅಮ್ಮ! ಇದೇನು, ಗಂಟೆ ಇನ್ನೂ ಮೂರು. ಹೋಗು ಮಲಕೊ. ಆದಷ್ಟು ಬೇಗ ಹೊರಡಬೇಕಲ್ಲ.”
“ಹ್ಞೂಂ ಮಲಗುತ್ತೇನೆ. ಬಚ್ಚಲಿಗೆ ಹೋದವಳು ನಿದ್ದೆ ಬಾರದೆ ಇಲ್ಲಿ ಬಂದು ಕುಳಿತೆ. ನೀವು ಹೋಗಿ. ಎದ್ದೆ ನಾನು.”
ಮೂಕತ್ತೆಗೆ ಮತ್ತೆ ಹೊಟ್ಟೆ ಗುಡುಗುಡು ಎನ್ನತ್ತಿದೆ ಅನ್ನಿಸಿತು. ಸರೋಜನನ್ನು ಕರೆದು ಮಾತ್ರೆ ಕೇಳಲೇ ಎಂದುಕೊಂಡವಳು ಎದ್ದು ಬಂದು ಶುಂಠಿಚೂರು ಮತ್ತು ಉಪ್ಪು ಬಾಯಿಗೆ ಹಾಕಿಕೊಂಡು ಕರಕರ ಜಗಿದು ರಸ ನುಂಗುತ್ತ ಮತ್ತೆ ಕೋಣೆಗೆ ಬಂದಳು. ಖಾರದ ಬಿಸಿ ಮೈಯೆಲ್ಲ ಹರಡಿಕೊಂಡು ಬೆವರಿತು. ಮಲಗಲು ಹೋದರೆ ಮನಸ್ಸು ಬಾರದೆ ಸೀದಾ ಕಪಾಟಿನ ಬಾಗಿಲು ತೆರೆದು ಕುಳಿತಳು.
…..ಹಿಂದೆ ಹೋಗುವ ಮನಸ್ಸಿಗೆ ಕಡಿವಾಣ ಹಾಕುವುದು ಹೇಗೆಂತ ಮಾಡಿದೆ ಮಣಿ, ಹೀಗೇ. ಕಾಣಿಲ್ಲಿ, ಈ ಅಪರಾತ್ರಿಯಲ್ಲಿ ಸೀರೆಕಪಾಟಿನ ಬಾಗಿಲು ತೆರೆದು ಕುಳಿತಿರುವುದು. ಸರೋಜನ ಕೆಲಸದ ವೈನವೇ ವೈನ. ಎಲ್ಲ ಸೀರೆಗೆ ಇಸ್ತ್ರಿ ಹಾಕಿ ಲಾವಂಚ ಕರ್ಪೂರಗಳನ್ನು ಇಟ್ಟು ಮಲ್ಲಿನಲ್ಲಿ ಕಟ್ಟಿ…. ಬಾಗಿಲು ತೆರೆಯುವುದೇ ತಡ ಪರಿಮಳ. ಇಗ. ಇದು ನೀನು ನಿನ್ನ ಮಗನ ಉಪನಯನಕ್ಕೆ ಕೊಟ್ಟ ಸೀರೆ. ಉಡುವ ಕಾಲದಲ್ಲಿ ಒಂದೂ ಇರಲಿಲ್ಲ. ಮದುವೆಗೆ ಹೋಗಲು ಬಂತೆಂದರೆ ಯಾವುದು ಉಡಲಪ್ಪ ಅಂತ ಎಷ್ಟು ಜಾನಿಸುತ್ತಿದ್ದೆ. ತಾಪತ್ರಯಗಳೆಲ್ಲ ಕಳೆಯಲಿ, ತೆಗೆಸಿಕೊಡುತ್ತೇನೆ ಎಂಬರು ನಿನ್ನ ಮಾವಯ್ಯ. ಅವು ಕಳೆಯುವುದರೊಳಗೆ ಅವರೇ ನಡೆದಾಯಿತು. ಈಗೇನು, ಬೇಕಾದಷ್ಟು ಸೀರೆ. ಆ ಮಗಳ ಮದುವೆ, ಈ ಮಗಳ ಬಾಣಂತನ ನಾಮಕರಣ ಅದೂ ಇದೂ…. ಹೌದ ಮಣಿ. ಆ ತೊಟ್ಟಿಲು ಕೋಣೆ ಮುಚ್ಚಿಗೆಯಲ್ಲಿ ಎರಡು ಕಬ್ಬಿಣದ ರಿಂಗು ಇತ್ತಲ್ಲ. ನಿಮ್ಮನ್ನೆಲ್ಲ ತೊಟ್ಟಿಲಲ್ಲಿಟ್ಟು ಎತ್ತಿ ತೂಗಿದ ರಿಂಗು. ರಾತ್ರಿಗಟ್ಟಿ ಮಗು ಅತ್ತರೆ ಮೌನದ ಇಡೀ ಮನೆಯಲ್ಲಿ. ಅದರದ್ದೇ ಟ್ರುಂಯ್ಽಽ ಟ್ರುಂಯ್ಽಽ ರಾಗ. ಮಗುವಿಗೆ ಬೇರೆ ಜೋಗುಳ ಬೇಡ; ಬಾಣಂತಿಗೇ ಕಣ್ಣು ಕೂರಬೇಕು ಹಾಗೆ. ನಾನಾದರೂ ಎಷ್ಟು ಸಲ ಅದನ್ನೇ ಆಲಿಸುತ್ತ ಮಲಗಿದ್ದೆನೊ. ಕಳಚಿದೆಯ ಅದನ್ನೂ? ಒಂದು ಸಲ ನೋಡಬೇಕು ನಾನು. ಮೇಲಿದ್ದದ್ದನ್ನು ಈಗ ಅಂಗೈಯಲ್ಲಿಟ್ಟುಕೊಂಡು ಮಾತಾಡಬೆಕು. ಯಾಕೆ ನಗುತ್ತಿ?…. ಅಲ್ಲಿಗೇ ಬಿಟ್ಟೆ ಮಾರಾಯಾ ಬಿಟ್ಟೆ.
ಕೃಷ್ಣಾ ಎನಬಾರದೆ ಶ್ರೀ ಕೃಷ್ಣಾ ಎನಬಾರದೆ ಮಣಗುಟ್ಟಿದಳು ಮೂಕತ್ತೆ. ಓಡುವ ತಲೆಯನ್ನು ಬಿಗಿದು ಕಟ್ಟುವಂತೆ ಕೂದಲ ಗಂಟನ್ನೊಮ್ಮೆ ಬಿಚ್ಚಿ ಬಿಗಿದು ಸುತ್ತಿಕೊಂಡಳು. ಮನೆವೊಕ್ಕಲಿಗೆ ವಿಮಲಹೆಣ್ಣು ಬರುತ್ತದೆ. ಅದಕ್ಕೊಂದು ಸರಿಯಾದ ಸೀರೆ ಸಹ ಇಲ್ಲ. ಕಂಡರೆ ಕರುಳು ಸುಡುತ್ತದೆ. ಹೋದ ಸಲ ಅಪ್ಪಯ್ಯನ ತಿಥಿಗೆ ಹೋದಾಗ ಆ ಅಡಿಗೆಯ ಮಣಿಯಕ್ಕ ಸಿಕ್ಕಿತ್ತಲ್ಲ. ಒಂದು ಸೀರೆ ಕೇಳಿತ್ತು. “ನಿಮ್ಮ ಸೀರೆ ಗಟ್ಟಿಯಿರುತ್ತದೆ. ಸಧ್ಯಕ್ಕೆ ಹರಿಯುವುದಿಲ್ಲ. ಇದು ನೋಡಿ ನೀವೇ ಕೊಟ್ಟದ್ದು ಹೋದ ಕಾಲ. ಇನ್ನೂ ಹೇಗುಂಟು!” ಅಂತೆಲ್ಲ ಹೇಳಿತ್ತು ಪಾಪ. ಸುಮಾರಿಂದೆಲ್ಲ ತೆಗೆದು ಚೀಲಕ್ಕೆ ಹಾಕಲು ಹೇಳಬೇಕು ಸರೋಜನಿಗೆ. ಇಲ್ಲದ್ದಕ್ಕೆ ಕೇಳುತ್ತವೆ. ಇದ್ದರೆ ಕೇಳುತ್ತವ?
ಹೌದ ಮಣಿ, ಜವುಳಿ ಹೇಗೆ, ಜೋರಾ? ಮನೆ ಕಟ್ಟುವುದೇ ಯಜ್ಞ. ಅದರಲ್ಲಿ ಜವುಳಿ ಗಿವುಳಿ ಅಂತ ಇಟ್ಟುಕೊಳ್ಳಬೇಡ. ಕೈ ನಡೆದರೆ ಕ್ರಮ. ಇಲ್ಲವಾದರೆ ಆದದ್ದೇ ಕ್ರಮ ಅಂತ ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು. ಆ ಜನ್ನಚಿಕ್ಕಪ್ಪನ ಹಾಗೆ ಹ್ಞಾ ಇಗಣೀ ಹ್ಞೂಂ ಇಗಣೀ ಅಂತೆಲ್ಲ ಹಂಚಿ ಮದುವೆಯ ಹುಡಿ ಹಾರಿಸಿ ಕಡೆಗೆ ಗೊತ್ತಿದೆಯಲ್ಲ, ಜಂತಿಗೆ….. ಒಹೋ ನೀನು ಆ ಜಂತಿಗೂ ಮೋಕ್ಷ ಕೊಟ್ಟೆ ಎನ್ನು.
…. ಹೊಟ್ಟೆ ಗುಡುಗುಡು ಜಾಸ್ತಿಯಾದ ಹಾಗೆನಿಸಿತು. ಮತ್ತೆ ಹೊರಗೆ ಹೋಗಿ ಬಂದಳು ಮೂಕತ್ತೆ. ನಿನ್ನೆ ತಾನು ಏನು ಅಂಥದ್ದು ತಿಂದೆ ಎಂದು ನೆನಪು ಕೆದಕಿಕೊಳ್ಳುತ್ತ. ಪಾಯಸ ಕುಡಿದೆ, ಅದೂ ರಮೇಶ ಕುಶಾಲು ಮಾಡಿದ ಎಂಬ ಗರ್ವಕ್ಕೆ. ಆ ದೀವಿಹಲಸಿನ ಪೋಡಿ ಹೇಗುಂಟು ಸಿಹಿಯಾ ಕಹಿಯಾ ಎಂತಲೂ ನೋಡಲಿಲ್ಲ. ಅಂಥಾದ್ದರಲ್ಲಿ ಯಾಕೆ ಹೊಟ್ಟೆ ಗುಡುಗುಡು. ನಾಳೆ ಹೋಗಲಿಕ್ಕಿದೆ ಬೇರೆ. ಕಥೆಯೇನು ಕಡೆಗೆ, ಬೆಳಗಾಗುವುದರೊಳಗೆ ಸತ್ತೇ ಬಿಡುತ್ತೇನ? ಈಗೆಲ್ಲ ಸಾಯಲಿಕ್ಕೆ ಹೆಚ್ಚು ಬೇಡ. ಆ ಸತ್ಯತ್ತೆ ಹೋದಳಲ್ಲ ಹಾಗೆ, ಎರಡು ಸಲ ಹೊರಗೆ ಹೋಗಿ ಬಂದಳು ಕಣ್ಣು ಮುಚ್ಚಿದಳು. ಅಲ್ಲೇ ಪಡ್ಚ. ಸತ್ತರೆ ನಾನು ಗೆದ್ದೆ.
“ಅಬ್ಬೆ ಮನೆಗೆ ಹೋದಾಗ ನಿನ್ನ ಚರ್ಯೆಯೇ ಬೇರೆ” ಎಂಬರು ನಿನ್ನ ಮಾವಯ್ಯ. ಅಷ್ಟು ಹೆಣ್ಣುಮಕ್ಕಳು ಇರುವ ಮನೆಯಲ್ಲಿ ಒಂದು ಸರಿಕಟ್ಟಾದ ಕೋಣೆಯಿಲ್ಲ ಎಂದು ಕುಶಾಲು ಮಾಡಿದವರು. ಕೋಣೆಯಿಲ್ಲದ್ದೇ ಒಳ್ಳೆಯದಾಯಿತು ಅಂತ ನಾನು. ಅಜ್ಜಯ್ಯ ಅಪ್ಪಯ್ಯ ಅಣ್ಣಂದಿರು ಅಮ್ಮ ಅಜ್ಜಿ ಎಲ್ಲ ಎದುರೆದುರಿಗೇ ಕೋಣೆ ಬಾಗಿಲು ಹಾಕಿಕೊಳ್ಳುವುದು…. ಶಿ ಶಿ…. ನಾವು ಅಕ್ಕ ತಂಗಿಯರೆಲ್ಲ ಆ ಉದ್ದಾನುದ್ದ ನಡೆಯೊಳಗೆ ಸಾಲು ಸಾಲಾಗಿ ದುಢುಂ ದುಢುಂ ಅಂತ ಹಾಸಿಗೆ ಹೊತ್ತು ಹಾಕಿ ಊರಲ್ಲಿಲ್ಲದ ಪುರಾಣವನ್ನೆಲ್ಲ ಬಿಡಿಸಿಕೊಂಡು ರಾತ್ರಿ ಸಂದದ್ದೇ ತಿಳಿಯದ ಹಾಗೆ ಸಂಸಾರದ ಕತೆಗಳನ್ನೂ ಹೇಳಿಕೊಳ್ಳುತ್ತ ತ್ರಾಣ ಪಡೆಯುತ್ತಿದ್ದೆವಲ್ಲ…. ಅವರಿಗದೆಲ್ಲ ಏನು ತಿಳಿಯುತ್ತದೆ? ಸುಳ್ಳಲ್ಲ, ಆ ಉದ್ದ ನಡೆಯೊಂದನ್ನು ಉಳಿಸಬಹುದಿತ್ತು ನೀನು….
ಫಣಿಯಮ್ಮಜ್ಜಿ! ಅವಳೇ ಮಣೀ, ಕಣ್ಣಲ್ಲಿ ನೀರಿಲ್ಲದ ಮರಕಣಕ್ಕೆ ‘ಫಣಿಯಮ್ಮಜ್ಜಿ ಮರಕಣ’ ಅಂತ ಹೆಸರು ಬಿದ್ದಿದೆ ನೋಡು, ಅವಳು. ಆಗಲೇ ನನಗೆ ಗೊತ್ತಾಯಿತು. ಹಲಸಿನ ಮರದಡಿ ಶಬ್ದವಾದಾಗಲೇ. ಬಂದವಳು ಹಾಗೇ ವಾಪಾಸು ನಡೆದುಬಿಟ್ಟಳಲ್ಲ. ಸೀದಾ ದೇವಸ್ಥಾನದ ಪೌಳಿಗೆ ಒರಗಿ ಕೂತು ಮರಕಲಿಕ್ಕೆ, ಮತ್ತೆಲ್ಲಿಗೆ? ಜಗಲಿಯೇ ಹೋದ ಮೇಲೆ ಇನ್ನೇನು ಮಾಡುತ್ತಾಳೆ? ಆಗಿಂದಲೂ ಅಷ್ಟೆ. ದಿನಾ ಬರುವುದು. ಜಗಲಿ ಕಂಬಕ್ಕೆ ಒರಗುವುದು, ರೊಂಯ್ಯ ಮರಕಣ ಸುರುಮಾಡುವುದು, ಕಣ್ಣು ಒರೆಸಿಕೊಳ್ಳುವುದು. ಎಂತದೇ ಫಣಿಯಮ್ಮಜ್ಜಿ ಎಂದು ಅಮ್ಮ ದಿನವೂ (ಕೇಳಿದಿದ್ದರೆ ಕೇಳಲಿಲ್ಲ ಅಂತ ಮತ್ತಷ್ಟು ಮರಕುತ್ತದೆ ಅಂತ ಹೆದರಿ) ಕೇಳುವುದು. ಅಷ್ಟು ಕೇಳಿದ್ದೇ ಸೈ. ಸೆರಗನ್ನು ಮೂಗಿಗೆ ಕಣ್ಣಿಗೆ ಒಟ್ಟಾಗಿಯೇ ಒತ್ತಿ ಹಿಡಿದು ಒಂದು ಬೊಟ್ಟೂ ಕಣ್ಣೀರಿಲ್ಲದೆ ನೋಡುವವರಿಗೇನು ಚಿಮ್ಮಿ ಉಕ್ಕುತ್ತಿದೆಯ ಎಂದು ಅನಿಸುವ ಹಾಗೆ, ಮಗ ಸೊಸೆಯರನ್ನು ದೂರಿ ದೂರಿ ಮರಕುವುದು. ದುರೇಲಜ್ಜಿ, ಕಾಸನಕಾಯಿ. ಅರ್ಧ ಗಂಟೆ ಹಾಗೇ ಇದ್ದು ಕಾಪಿ ತಿಂಡಿ ತಿಂದು ಸೀದಾ ಕುಂದೇಶ್ವರ ದೇವಸ್ಥಾನದ ಪೌಳಿ ಬಿಸಿ ಮಾಡಲಿಕ್ಕೆ ಹೊರಡುವುದು. ಅದೆಲ್ಲ ದಿನಚರಿ ತಪ್ಪುವ ಹಾಗಿಲ್ಲ. ಫಣಿಯಮ್ಮಜ್ಜಿ ಸತ್ತಾವಾಗ ಈ ಜಗಲಿಯನ್ನ ಅವಳ ಸ್ಮಾರಕ ಮಾಡಬೇಕು ಅಂತ ನಗಾಡಿದ ನಿನ್ನ ಕಿಟ್ಟಮಾವಯ್ಯ. ….ಆದರೆ ಸ್ಮಾರಕ ಆದ್ದು ಕಡೆಗೆ, ಅವನಿಗೇ. ಆಶ್ಚರ್ಯ ನೋಡು. ಅವನೇನು ಸಾಧಾರಣದವನಲ್ಲ. ಕೆಲಸ ಸಿಕ್ಕಿ ಬೊಂಬಾಯಿಗೆ ಹೋಗುವವರೆಗೂ ಚಾವಡಿಬದಿಯ ಕೋಣೆಯನ್ನು ಯಾರೊಬ್ಬರಿಗೆ ಬಿಟ್ಟುಕೊಟ್ಟಿದ್ದರೆ ಹೇಳು. ನಾವು ಹೆಣ್ಣುಮಕ್ಕಳಂತೂ ಅದರ ಹತ್ತಿರ ಕೂಡ ಸುಳಿಯುವ ಹಾಗಿರಲಿಲ್ಲ. ಹ್ಞಂ! ಹಾಗಾದರೆ ನಮಗೂ ಕೋಣೆ ಬೇಕು ಅಂತಂದೆವು ನಾವೆಲ್ಲ. ಆಗ ಅವ ಏನೆಂದ? “ಎಂತಕ್ಕೆ ಕೋಣೆ, ಹೆಣ್ಣುಮಕ್ಕಳಿಗೆಲ್ಲ? ಬಾಗಿಲು ಹಾಕಿಕೊಂಡು ಕನ್ನಡಿಯೆದುರು ಎಲ್ಲ ನೋಡಿಕೊಳ್ಳುತ್ತ ಗಂಟೆಗಟ್ಟಲೆ ನಿಲ್ಲಲಿಕ್ಕಾ?” ಎಂದ, ಬರೀ ಹೀಗಿಂದೇ ಮಾತು ಅವಂಗೆ. ನಮಗೆಲ್ಲ ಒಂದು ನಾಚಿಕೆ ಆದದ್ದೆಂದರೆ!
ಮಣಿಯ, ಅ ಕನ್ನಡಿ ಏನು ಮಾಡಿದೆ ಎಂದೆ? ಒಡೆದು ಹೋಗಿಲ್ಲವಷ್ಟೆ. ತೆಗೆದಿಡು. …… ಎಂದೆನಲ್ಲ, ಬಾಯಿ ತೆರೆದರೆ ಹಾಗಿಂದೇ ಮಾತು. ಬೊಂಬಾಯಿಗೆ ಅವ ಹೋದ ದಿವಸ ನಾವೆಲ್ಲ ಏನು ಮಾಡಿದೋ, ಅವನ ಕೋಣೆ ಸೇರಿಕೊಂಡು ಹಾರ್ಮನಿ ಬಾರಿಸಿದೊ, ಪದ್ಯ ಹೇಳಿದೊ. ರಾತ್ರಿ ಹತ್ತು ಗಂಟೆವರೆಗೂ ಪದ್ಯ ಹೇಳಿದ ಹೊಡೆತವೇ ಹೊಡೆತ. ಹೇಗಂತೆ, ಆ ಮಾವಯ್ಯನ ತಿವಿದು ತಿವಿದು ಜಗಳ ಮಾಡಿದ ಹಾಗೆ. ಇದನ್ನ ಕೆಲಸ ಇಲ್ಲದ ಯಾವುದೋ ಪಿಟ್ಟೆ ಅವನಿಗೆ ಕಾಗದ ಬರೆದು ತಿಳಿಸೀ, ಅವ ಬೊಂಬಾಯಿಯಿಂದ ಲಾಯರು ನೋಟಿಸಿನಂತಹ ಕಾಗದ ಬರೆದೂ…. ಅದರ ಮೇಲೆ ಅಜ್ಜಯ್ಯ ನಮಗೆ ಆ ಕೋಣೆ ಹೊಗ್ಗಲಿಕ್ಕೆ ಬಿಟ್ಟಿದ್ದರೆ ಹೇಳು. ಅಂಥಾ ಮಾವಯ್ಯ ಮತ್ತೆ ಏನಾದ ಅಂತಿಲ್ಲ! ಕಣ್ಣಲ್ಲಿ ಕಂಡವರಿಲ್ಲ. ಆ ಕೋಣೆಗೆ ಹೋಗಿ ಎಂದರೂ ಅದರ ನಂತರ ನಾವೂ ಕಾಲು ಹಾಕಿದವರಲ್ಲ. ದುಃಖದ ಕೋಣೆಯಾಗಿಯೇ ಉಳಿದು ಹೋದ ಅದನ್ನೂ…. ಕೆಡೆದೆ ಅಂದೆಯ?…. ಉಶ್… ರಾಮಾ… ಶ್ರೀರಾಮಾ…. ಶ್ರೀಹರೀ….
ಮೂಕತ್ತೆ ಎದ್ದು ಮತ್ತೆ ಹೊರಗೆ ಹೋಗಿ ಬಂದಳು. ಬೆಟ್ಟಿನಿಂದೊಮ್ಮೆ ಹೊಟ್ಟೆಯ ಮೇಲೆ ಮೆಲ್ಲ ಬಡಿದುಕೊಂಡಳು. ಕೊಟಕೊಟ ಸದ್ದಾಯಿತು. ಉಬ್ಬರಿಸಿದ್ದೇ ಹೌದು. ಏನೋ, ಹಾಗೆಂದರಾಗುವುದಿಲ್ಲ ಎಂಬಷ್ಟು ಸೂಕ್ಷ್ಮವಾಗಿದೆ ದೇಹ. ವಾಸುಮಾಣಿ ಗೀತೆ ಎಳಕೊಂಡು ಹೇಳಿದ ಹಾಗೆ ಹಳೇ ಜಬ್ಬು, ಜೀರ್ಣ. ಉಗ್ರಾಣಕ್ಕೆ ಹೋಗಿ ಒಣಗಿಸಿದೆ ನೆಲ್ಲಿಬಿಲ್ಲೆಯನ್ನು ತಂದು ನೀರಲ್ಲಿ ನೆನೆಸಿಟ್ಟಳು. ಬೆಳಿಗ್ಗೆ ಏಳುತ್ತಲೇ ಕದಡಿ ಒಂಚೂರು ಹುಳಿ ಮಜ್ಜಿಗೆ ಬೆರೆಸಿ ಕುಡಿದು ನೋಡುವುದು. ಮತ್ತೂ ನಿಲ್ಲದಿದ್ದರೆ ಮಾತ್ರೆ ತೆಗೆದುಕೊಂಡರಾಯಿತು. ಸರೋಜ ಮಲಗಿರಲಿ. ಈಗ ಎಬ್ಬಿಸುವುದು ಬೇಡ…. ಉಶ್….. ಎದ್ದು ಇನ್ನೊಮ್ಮೆ ಹೊರಗೆ ಹೋಗಿ ಬಂದಳು. ಹೊರಬಾಗಿಲ ಬುಡದಲ್ಲೇ ಕುಳಿತಳು. ಮಣಿ, ನೀನೇನೋ ನಿನ್ನ ಹೊಸ ಮನೆ ಬಣ್ಣನೆ ಮಾಡಿದೆ. ಈ ಮೂಕತ್ತೆ ಅದಕ್ಕೆ ಸರಿಯಾಗಿ ಚಿತ್ರ ಕಟ್ಟಿಕೊಳ್ಳುತ್ತಾಳೆ ಅಂತ ಭಾವಿಸಿದೆ. ನೋಡಿದೆಯಲ್ಲ ಪರಿ!
ಎಲ್ಲ ಬಿಟ್ಟು ನಿನ್ನ ಹತ್ತಿರ ಹೇಳಿಕೊಳ್ಳತ್ತೇನಲ್ಲ! ಹೆಂಡತಿ ‘ಚಂಯ್ಞ ಚಂಯ್ಞ ಮಾಡಿದಳು ಎಂದ ಭೂಪತಿಯ ಹತ್ತಿರ! ಅದು ಹೇಗೆ ಶಾಮಜ್ಜಯ್ಯನ ಸಾಜ ಬಂದುಬಿಟ್ಟಿತು ನಿನಗೆ! ಅವರು ಹೋದರು, ನೀನು ಹುಟ್ಟಿ ಬಂದೆ. ಅವರಿಗೂ ಹಾಗೆಯೇ. ಹೆಂಗಸರೂ ಮಾತಾಡಿದ್ದೆಲ್ಲ ಚಂಯ್ಞ ಚಂಯ್ಞ. ಯಾಕೆ? ನೀವು ಮುಖಯೆತ್ತಿ ಮೀಸೆ ತಿರುಪಿ ‘ಅಳಿಸಿದೆ’ ಎಂದದ್ದನೆಲ್ಲ ಹೆಕ್ಕಿ ಯಾರೂ ಕಾಣದಂತೆ ಮುಚ್ಚಿ ಉಳಿಸಿಕೊಳ್ಳುತ್ತೇವಲ್ಲ — ಅದಕ್ಕೆ! ದೊಡ್ಡ ಸಂಗತಿ ನೀನು, ಅಳಿಸುವವ! ಒಹೊಹೊ! ಯಾವುದನ್ನು ಅಳಿಸಲಿಕ್ಕಾಯಿತು ನಿನಗೆ? ಆಯಿತಾ ಏನಾದರೂ? ಅಹಂಕಾರ! ಮೊದಲು ಅದನ್ನು ಅಳಿಸಿಕೊ.
ಬಿಡು, ಉಳಿಸಿಕೊಳ್ಳುವ ಮಾತೂ ಮತ್ತೇನು, ಅಹಂಕಾರವೇ. ಹೇಳಿದೆನಲ್ಲ ಆಗಲೇ, ಅಜ್ಞಾನಾಯ ನಮಃ, ನನ್ನದೂ ನಿನ್ನದೂ ಒಟ್ಟೇ….. ಕೃಷ್ಣಾ….. ವಾಸುದೇವಾ….. ಶ್ರೀಹರೀ….. ಹೀಗೇ ಹೊಟ್ಟೆ ಗುಡುಗುಡೆಂದರೆ ನಾಳೆ ಹೇಗೆ ಹೋಗುವುದು ಮಣೀ ನಿನ್ನ ಅರಮನೆ ನೋಡಲಿಕ್ಕೆ?
ನೆಲಕ್ಕೆ ಕೈಯೂರಿ ಆಧರಿಸಿ ಎದ್ದು ಮತ್ತೆ ‘ಹೊರಗೆ’ ಹೋಗಿ ಬಂದಳು ಮೂಕತ್ತೆ. ಹೋಗಿ ಬಂದು ಹೋಗಿ ಬಂದು ಕೈ ಕಾಲು ನಡುಗ ಹತ್ತಿತು…. ಏನು, ಸತ್ತೇಬಿಡುತ್ತೇನ? ಸರೋಜ ರಮೇಶ ಬೆಳಗೆದ್ದು ನೋಡಿದರೆ ನಾನು ಸತ್ತಿದ್ದೇನೆ. ಅಯ್ಯ, ನಿನ್ನೆ ರಾತ್ರಿ ಸಮ ಇದ್ದಳಲ್ಲ ಅಂತೆಲ್ಲ ಮಾತಾಡಿಕೊಳ್ಳುತ್ತಾರೆ. ಸಣ್ಣದೊಂದು ನಗೆ ಬಂತು ಮೂಕತ್ತೆಗೆ. ಯಾರು ಸಾಯುತ್ತಾರೆ ಮಗ? ನಿನಗೆ ಉದ್ಯೋಗವಿಲ್ಲ. “ಮಗು ಹೇಗಿದೆ ಅಂತಿ? ಥೇಟಾ ಅವಳತ್ತೆ.” ಎಂದನಲ್ಲ ವಾಸು, ನೆನಪು ಹೋಯಿತ? ನಾನು ಸಾಯಬೇಕಾದರೆ ನನ್ನ ನಂತರದ ಎರಡು ಪೀಳಿಗೆ ಸಾಯಬೇಕು. ಮತ್ತೆಂಟು ಪೀಳಿಗೆ ಸಾಯಬೇಕು. ಅಷ್ಟರವರೆಗೆ ಎಲ್ಲವೂ ಇಲ್ಲಿಯೇ ಇರುತ್ತದೆ… ಇಲ್ಲೇ…. ಈ ಎದೆಯಲ್ಲೇ…..
****
ಬೆಳಗಾಯಿತು.
ಸರೋಜ ಎದ್ದು ಬಂದಳು. ಅತ್ತೆ ಇನ್ನೂ ಮಲಗಿದ್ದಾರೆ. ಎಬ್ಬಿಸಲೇ? ಬೇಡ ಎಂದುಕೊಂಡಳು. ರಮೇಶನೂ ಕೋಣೆ ಬಾಗಿಲಲ್ಲೇ ನಿಂತು ಅಮ್ಮ ಅಮ್ಮ ಎಂದು ಮೆಲ್ಲ ಎರಡು ಬಾರಿ ಕರೆದವ “ಮಲಗಿಕೊಳ್ಳಲಿ ರಾತ್ರಿಯಿಡೀ ನಿದ್ದೆ ಬಂದಿರಲಿಕ್ಕಿಲ್ಲ. ಸ್ವಲ್ಪ ತಡೆದೇ ಹೋದರಾಯಿತು, ಏನೀಗ” ಎಂದ.
ಸದ್ದಾಗದಂತೆ ಕೋಣೆ ಬಾಗಿಲು ಸಾಂಚಿ ಈಚೆ ಬಂದರು ಇಬ್ಬರೂ.
*****
