ಒಂದು ಹಳೇ ಚಡ್ಡಿ

“ಇಲ್ಲಾ ಅವನು ಚಡ್ಡಿ ಹಾಕಲೇ ಬೇಕು. ತಿಕಾ ಬಿಟ್ಕಂಡು ಮದುವೇ ಮನೇಲಿ ಓಡಾಡಿದರೆ ನೋಡಿದವರು ಏನೆಂದಾರು?”

ಒಂದೇ ಸಮನೆ ನಾಗರಾಜ ಅವನ ಮಗನ ಹಠದ ಹಾಗೆಯೆ ಹಠ ಮಾಡ ತೊಡಗಿದ ಮಕ್ಕಳೆಲ್ಲ ಓಡಾಡಿಕೊಂಡು ಖಷಿಯಲ್ಲಿರುವಾಗ ನಾಗರಾಜನ ಮಗ ಸೀನಿ ಇವಾವನ್ನೂ ಗಮನಿಸದೆ ಹಿತ್ತಲಲ್ಲಿ ತುಂಬಿದ್ದ ಹಂಡೆಯ ನೀರಿಗೆ ಕೈ ಹಾಕಿ ಕಲಕುತ್ತ ಆಡುತ್ತಿದ್ದ.
“ ಲೇಯಿ ಲೋಪರ್ ಬಾಂಚೋತ್ ಬಾ ಚಡ್ಡಿ ಹಾಕ್ಕೋ ಮಾನವಾಗೆ ” ಎಂದು ನಾಗರಾಜ ಕೂಗಿಕೊಂಡ. ಮದುವೆ ಮನೆಯ ಸದ್ದಿನಲ್ಲೂ ಅದು ಗಟ್ಟಿಯಾಗಿ ಎಲ್ಲರಿಗೂ ಕೇಳಿಸುವಂತಿತ್ತು.
ಇದ್ದಕ್ಕಿದ್ದಂತೆ ನಾಗರಾಜನ ಹೆಂಡತಿ ಏನೋ ಆಗಿಹೋಯಿತು ಎನ್ನುವಂತೆ ” ಯೇಯ್ ಅದೇನು ಅಂಗಾಡ್ತೀಯಲ್ಲ ಎನಾಯ್ತೀಗ ” ಎಂದು ತನ್ನ ಗುಡ್ಡೆ ಕಣ್ಣುಗಳನ್ನು ಒಮ್ಮೆ ಎಲ್ಲರ ಸುತ್ತ ಹರಿಸಿ ಕೇಳಿದಳು. ನಾಗರಾಜ ಉದ್ವೇಗದಲ್ಲೇ “ ಎಲ್ಲಮ್ಮಿ ಅವುನ್ ಚಡ್ಡಿ , ಎತ್ತಾಗ್ ಬಿಸಾಕಿದ್ದಾನು ” ಎಂದು ಕೇಳಿದ. “ ಅಯ್ಯೋ ನನಗೇನ್ ಗೊತ್ತು ಅವುನ್ ಚಡ್ಡಿ ಕಾಣೆ ಕನಪ ” ಎಂದು ಉಸಿರು ಬಿಟ್ಟು ಕೋಣೆಯ ಕಡೆ ಹೊರಟು ಹೋದಳು . ನಾಗರಾಜನ ಕೋಪ ನೆತ್ತಿಗೇರಿ “ ಇನ್ನೇನ್ ಎರುಕ್ ಬಂದದೆ ನಿನ್ಗೆ ” ಎಂದು ಮದುವೆ ಮನೆಯ ಎಲ್ಲರ ಎಡಿರು ಬಾಯಿ ತಡೆಯದೆ ಹೇಳಿಬಿಟ್ಟ. ಅವಮಾನವಾದಂತಾಗಿ ಸಿದ್ಡಿ “ ಯೇಯ್ ಥೂ ಮಾನ್‌ಗೆಟ್ಟೋನೆ , ನಿನಗೇನು ಬರೀ ಹುಟ್ಟುಸುದಷ್ಟಿಯೇ ಬರೋದು ? ” ಎಂದು ಸವಾಲಿಗೆ ಸವಾಲಿನಂತೆ ಮಾತು ಎಸೆದಳು.
ಮದುವೆ ಮನೆಯ ಜನ ಈ ಘಟನೆಯನ್ನು ಹೆಚ್ಚಾಗಿ ತಲೆಗೆ ಹಚ್ಚಿಕೊಳ್ಳಾದೆ ಅವರವರ ಕೆಲಸದಲ್ಲಿ ತುಂಬ ಉತ್ಸಾಹದಿಂದ ಓಡಾಡುತ್ತಲೇ ಇದ್ದರು. ಅಂತೂ ನಾಗರಾಜನ ಮಗನ ಚಡ್ಡಿ ಏನಾಯಿತು ಎಂದು ಗೊತ್ತೇ ಆಗದೆ ‘ ಚಡ್ಡಿ ಹಾಕಬೇಕು ’ ಎಂಬುದೇ ಒಂದು ದೊಡ್ಡ ಕೆಲಸವಾಗಿ ಅವನ ಅಪ್ಪನಿಗೆ ಅಂಟಿಕೊಂಡಿತು. ಅಷ್ಟರಲ್ಲೇ ನಾಗರಾಜನ ಅಕ್ಕ ಚಿಕ್ಕತಾಯಿ “ ಲೋ ಇರೋನ ಐದುನ್‌ಗೆ ಒಂದು ಚಡ್ಡಿ ಇಕ್ಕಿ , ಗೊಣ್ಣೆ ತೆಗುದು ಇವತ್ತಾದ್ರು ಒಸಿ ಕಿಲೀನಗೆ ನೋಡ್ಕೋಕಿಲ್ಲುಲಾ , ಏನಪ್ಪಾ ಒಂದಲ್ಲ ಎರಡಲ್ಲ್ ಅಂತ ಮೂರು ಹೆಂಡ್ತೇರಾದ್ರು , ಇನ್ನೂ ಬುದ್ಧಿ ಕಲಿಲಿಲ್ಲವಲ್ಲಾ; ಹಾಳಾದ್ ಜನ್ಮುವೇ ಹೋಗು. ಇನ್ನ್ಯಾವ್ ಕಾಲುಕೆ ನೀವೆಲ್ಲ ಬುದ್ಧಿ ಕಲ್ತಿರೋ ನಾಕಾಣೆ ಹೋಗಪ್ಪಾ … ” ಎಂದು ತನಗೆ ಮದುವೆಯಲ್ಲಿ ಸೀರೆ ಉಡಿಸಲಿಲ್ಲಾ ಎಂಬ ದುಃಖ ಕೋಪ ಎಲ್ಲವನ್ನೂ ಅಲ್ಲಿ ಕಾರಿಕೊಂಡಳು.ಮದುವೆ ಮನೆಯಲ್ಲಿ ನೆಂಟರಿಷ್ಟರೆಲ್ಲ ತುಂಬಿದ್ದರು. ಹಳೆಯ ತಲೆಮಾರಿನ ಅಜ್ಜಿಯರೆಲ್ಲ ಮನೆಯ ಒಂದೆಡೆ ಕುಳಿತು ತಮ್ಮ ಕಾಲದಲ್ಲಿ ಆಗುತ್ತಿದ್ದ ಮದುವೆಯ ರೀತಿನೀತಿ ಸಂಪ್ರದಾಯ ಅಂದಿನ ಅದ್ಧೂರಿ ಶಾಸ್ತ ಊಟ ಬಳಗ ಎಲ್ಲವನ್ನೂ ಹಂಚಿಕೊಳ್ಳುತ್ತ … ಬೀಗರನ್ನು ಜರೆಯುವ ಹಾಡುಗಳು , ಶೋಬಾನಗಳ ಅಂದಚೆಂದ ಹಗೂ ವರದಕ್ಷಿಣೆ ಇಲ್ಲದೆ ಅಗುತ್ತಿದ್ದ ಮದುವೆಗಳ ಒಂದು ಸುಂದರ ಲೋಕವನ್ನು ನೆನೆದು ಒಂದು ರೀತಿಯ ದುಃಖಗಳ ಹಾಗೆ: ಇಂದಿನ ಮದುವೆ , ವರದಕ್ಷಿಣೆಹಾಗೂ ಪಲಿಸಬೇಕಾದ ಶಾಸ್ತಗಳ ಪಾಲಿಸದೆ ಮೀರುವ್ ಆಧುನಿಕ ಗಂಡು-ಹೆಣ್ಣುಗಳ ಬಗೆಗೆ ವಿಷಾದದ ಮಾತುಗಳಾಡುತ್ತಿದ್ದರು.

ಈ ನಡುವೆ ನಾಗರಾಜ ಅಜ್ಜಿಯರು ಕುಳಿತಿದ್ದ ಕಡೆ ತನ್ನ ಮಗನ ಚಡ್ಡಿಯನ್ನು ಹುಡುಕುತ್ತಾ “ ಎಲ್ರವ್ವಾ, ನಮ್ಮೈದುನ್ ಚಡ್ಡಿ ಇಲ್ಲಿದುದಾ ” ಎಂದು ಕಣ್ಣು ಹಾಯಿಸಿದ. ಒಂದು ಅಜ್ಜಿ ಎಲೆ ಅಡಿಕೆ ಚೀಲವನ್ನು ಎತ್ತಿಕೊಳ್ಳುತ್ತ “ ಇದೇನ್ ಮೊಗಾ , ಮದುವೆ ಮನೇಲಿ ಚಡ್ಡಿ ಹುಡುಕ್ತಾ ಇದ್ದೀಯಲ್ಲಾ. ಸಿಕ್ತದೆ ಬಿಡು. ಯಾರೆತ್ಕ ಹೋದರು ಅದಾ ” ಎಂದಳು. ನಾಗರಾಜ ಆ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳದೆ ಹೊರಟು ಹೋದ.
ಮದುವೆ ಮುಗಿಸಿ ಗಂಡಿನ ಊರಿಂದ ಗಂಡಿನ ಸಮೇತ ಹೆಣ್ಣಿನ ಮನೆಗೆ ಎಲ್ಲರೂ ಬಂದು ಸೇರಿದ್ದರು. ಗಂಡು ಹಾಗು ಆತನ ಜೊತೆಯವರೆಲ್ಲ ಮನೆಯ ಒಂದು ಕೊಠಡಿಯಲ್ಲಿ ಬಾಗಿಲು ಮುಚ್ಚಿಕೊಂಡು ಸಂತೋಷದಲ್ಲಿದ್ದರು.
ಯಾರೋ “ ನಾಗರಾಜ …ನಾಗರಾಜ ” ಎಂದು ಕೂಗಿಕೊಂಡು ಬಂದು , “ ಏನಪ್ಪಾ ಎಲ್ಲೋದ ಅಂತಿದ್ರೆ ನೀನಿಲ್ಲೇ ಇದ್ದೀಯಲ್ಲ. ಹೋಗಿ ಸೈಕಲೆಲಿ ಎರಡು ದಮ್ಮು ನೀರು ತಂದು ಬುಡು ಬಾ ” ಎಂದರು.
“ ನೋಡ್ದಾ , ಈಗೋಗನೇನೋ ,ಹಗ್ಗ ಹಿಡ್ಕಂಡು ಕೈ ಬೀಸ್ಕಂಡು ಹೆಂಗ್ಸಂಗೆ. ಮನೇಲಿ ಇಷ್ಟೊಂದೆಂಗ್ಸಿದ್ದೀರಲಾ, ಯಾರಾರ ಹೋಗಿ ತನ್ನಿ ” ಎಂದು ಬೇಸರ ಕೋಪಗಳಿಂದ ಹೆಂಡತಿ ಸಿದ್ದಿಯನ್ನು ಕೂಗಿ , ಮೇಯ್ , ನಿನ್‌ಕೆಲ್ಸ ಅಲ್ಲಿರ್ಲಿ ಮೊದ್ಲು ಆ ವೊಯ್ಯಾನ್ ಚೆಡ್ಡಿ ಎಲ್ಲಿದ್ದಾದು ಎಂದು ಪತ್ತೆ ಮಾಡಿ ಇಕ್ಕು. ಇಲ್ದೇ ಹೋದ್ರೆ ಇದೇ ಮದುವೆ ಊಟ್ದೆಲಿ ನಿನಗೆ ಕುಲಾಚಾರ ಮಾಡಿಸಬೇಕಾಯ್ತದೆ ” ಎಂದು ಸಿಡಿಮಿಡಿಗೊಂಡ.
ಹಾಳ್ ಬಾಯ್ಲಿ ಯಾವಾಗ್ಲೂ ಅದೇ ಇದ್ದದೇನೋ. ಅದೆ: ನನಗೇನಾರು ಇಕ್ಕ್ಲಿಕ್ಕೇನಾದ್ರು ಆತ್‌ಕು … ಹೊಡ್ಕ ಹೋಗು ನೀನೆ … ಎಂದು ಗೊಣಗಿದಳು. ಆಗ ನಾಗರಾಜ ಕೋಪದಿಂದ ಹೆಂಡತಿಯ ತಲೆ ಮುಡಿ ಹಿಡಿದು ಎಳೆದು ಢಮಢಮನೆ ನಾಲ್ಕು ಗುದ್ದಿದ. ಸಿದ್ದಿಯು ‘ ಅಪಮಾನ ಹೊಸ ಗಂಡಿನ ತನಕ ಹೋಗದಿರಲಿ ’ ಎಂದು ಪಿಟಕ್ ಪಟಕ್ ಎನ್ನದೆ ನಾಗರಾಜನ ಮುಖಕ್ಕೆ ಉಗಿದು ನಟಿಕೆ ಮುರಿದಳು. ಅಷ್ಟರಲ್ಲಿ ನಾಗರಾಜನ ಅಪ್ಪ ಬಂದು ಒಮ್ಮೆ ವೀಕ್ಷಿಸಿ-
“ ಥೂ ನಪುಂಸಕ್ ನನ್ಮಗ್ನೆ , ಏನ್ ಯಂಡ ಗಿಂಡಾ ಕುಡ್ದಿದಿಲಾ ” ಎಂದು ಬೈಯ್ದ . “ ಏನ್ ತಪ್ಪು ಮಾಡುದ್ಲು ಅಂತೊಡ್ದ ” ಎಂದು ತನ್ನ ಹಿರಿ ಮೊಮ್ಮಗಳು ಗೌರಿಯನ್ನು ಕೇಳಿದ. “ ಅಯ್ಯೋ ಅಷ್ಟೊತ್ತಿದ್ಲು ನೆಡಿಸ್‌ತಾರಿಕನಪಾ ವಾಕಾ ಚಾವಾ, ಆವೊಯ್ದ ಚಡ್ಡಿ ಇಕ್ಕಲಿಲ್ಲ . ‘ ಇಕ್ಕಮ್ಮಿ ಇಕ್ಕಮ್ಮಿ ’ ಅಂತ ಅವುನು. ‘ ಅಯ್ಯೋ ಅದೆಲ್ಲಿದ್ದದೋ ಕಾಣೆಕನೋಗು . ‘ ಎಲ್ಲೋ ಹೇತ್‌ಬುಟ್ , ಹಿತ್ಲೆಲೆ ಬಿಸಾಕಿರಬೇಕು ’ ಎಂದು ಇವುಳು … ಹಿಂಗೇ ಈ ಮಾತ್ಗೆ ಕನಪಾ ” ಎಂದಳು.
“ ಇವತ್ತೂ ತಪ್ಪಲಿಲ್ವೆ ನಿಮ್ಮ ಜಗಳ. ಇಂಗೇ ಮಾಡಿಮಾಡಿಯೇ ಅಲ್ವೆ ನನ್ ಮನೇನೆಲ್ಲಾ ಹಾಳು ಮಾಡಿ ಗುಡ್ಸಿ ಗುಂಡಾಂತ್ರ ಮಾಡ್‌ಬುಟ್ಟಿದ್ದು. ” ಎಂದು ನಾಗರಾಜನ ಅಪ್ಪ ತನ್ನ ಎಂಬತ್ತನೇ ವಯಸ್ಸಿನಲ್ಲೂ ತನ್ನ ಮನೆಯ ಜನರ ಸ್ಥಿತಿಯನ್ನು ಕಂಡು ಎಂದಿನಂತೆಯೇ ಮರುಗಿದ. ತನ್ನ ಕೊನೆಯ ಮಗನ ಮಗ ಸೀನಿಯನ್ನು ಕೂಗಿಕೊಂಡ. ತನ್ನ ಮೊಮ್ಮಗಳು ಗೌರಿಗೆ , “ ಮೊಗಾ ಅವುನ್‌ಗೊಸಿ ಚಡ್ಡಿ ಇಕ್‌ಬುಡವಾ, ಅದೆಲ್ಲಿದ್ದದು ಅಂತಾ ನೋಡಿ ” ಎಂದ. ಆಕೆ “ ಹಾ … ನೋಡ್ದಾಮಂತೆ. ಇಕ್ಕದಿದ್ರೆ ಇಗೇನಾಗೋಗಿದ್ದದು ಬಿಡಪ ” ಎಂದಳು . ಕೋಣೆಯಿಂದ ಸಿದ್ದಿಯು “ ಅಯ್ಯೋ ಅವುನ್ ಚಡ್ಡಿನೆಲ್ಲ ನೀರ್ ಮಾಡಿ ಅಲ್ಲೆಲ್ಲೋ ಬಿಸಾಕಿರಬೇಕು ” ಎಂದಳು. ಗೌರಿಯು ಕೋಪದಲ್ಲೇ “ ಮಂತೆ ಇನ್ನೊಂದಿದ್ರೆ ಇಕ್ಕು. ಅದೇನ್ ಅದೇ ಚಡ್ಡಿ ಆಗಬೇಕೆ ? ” ಎಂದಳು. ಅಯ್ಯೋ ಎರಡೇ ಚಡ್ಡಿ ಇದ್ದೋ ಕನವಾ, ಇಂಗೇ ಮೊದ್ಲು ಒಂದು ಹಾಳು ಮಾಡ್ದ. ಈಗ ಚಡ್ಡಿ ಬಿಚ್ಚಾಕ್ದೋನು ಎಲ್ಲಾಕುದ್‌ನೋ ಅಂತ ಕಣವ್ವಾ ” ಎಂದು ಮುನಿಸಿನ ಸ್ವರದಲ್ಲಿ ಸಿದ್ದಿ ಹೇಳಿದಳು.

“ ನಿನ್ನ ಐದುನ್ ಚಡ್ಡಿ ಇಲ್ದೇ ಇದ್ರೆ ಕರೀನ್ ಚಡ್ಡೀನೆ ಇಕ್ಕಿಸು ” ಎಂದು ಗೌರಿ ಸಲಹಿಸಿದಳು.
“ ಹೂಂ , ಅವುನೂ ಕೊಟ್ಟ , ಅವರವ್ವನೂ ಇಸ್ಕೊಡ್ತಳ ಮಸ್ತನಗೆ. ಅಂಗೇ ಇದ್ರೂ ಬ್ಯಾಡ. ಹೋದ್ ಸಲ ಅವುಳ್ ಮಗನ ಚಡ್ಡಿ ಇಕ್ಕಂದಿದ್ದೆತ್ಕೆ ಎಷ್ಟು ಜಗಳ ಆಗದೆ ಗೊತ್ತೆ ” ಎಂದು ಸಿದ್ದಿ ಕಣ್ಣೀರ ಒರೆಸಿಕೊಂಡಳು. ನಾಗರಾಜ ಎಲ್ಲವನ್ನೂ ನೋಡುತ್ತ ಗಂಭೀರನಾದಂತೆ ನಿಂತೇ ಇದ್ದ.

ನಾಗರಾಜನ ಮೊದಲ ಹೆಂಡತಿ ಹೆರಿಗೆ ಕಾಲದಲ್ಲಿ ಸತ್ತವಳು , ಎರಡನೆಯ ಹೆಂಡತಿ ಬಾಳಲಾರದೆ ಓಡಿ ಹೋದವಳು. ಮೂರನೆಯವಳು ಸಿದ್ದಿ. ನಾಗರಾಜ ಆ ಹಳ್ಳಿಯಲ್ಲಿ ಗುರುತಿಸಲ್ಪಟ್ಟ ವ್ಯಕ್ತಿಯೇನೂ ಅಲ್ಲ . ತನ್ನ ಇಪ್ಪಂತೆಟನೆಯ ವಯಸ್ಸಿಗೇ ಮೂರನೇ ಹೆಂಡತಿ ಹೊಂದಿ ಒಂದೇ ಮಗು ಸೀನಿಯನ್ನು ಹೊಂದಿದ್ದವನು. ಅಷ್ಟು ವಯಸ್ಸಿಗೂ ಕೂಡ ಹಳ್ಲಿಯ ಗಂಡಸಿನ ಹಾಗೆ ಮೈ ಮುರಿದು ದುಡಿದು ಬೆವರಲ್ಲಿ ಕೈ ತೊಳೆಯುವಂತವನಲ್ಲ. ತನ್ನ ತಂದೆ ಹಿಂದಿನಿಂದ ಕಲಿಸಿಕೊಟ್ಟಿದ್ದ ಹೋಟೆಲ್ ಚಾಕರಿಯನ್ನೂ ಸರಿಯಾಗಿ ನಡೆಸಿಕೊಂಡು ಬಾರದೆ ಹಾಳೂ ಮೂಳು ರೇಡಿಯೋ ವಾಚುಗಳನ್ನು ರಿಪೇರಿ ಮಾಡಿಕೊಂಡು ಅವುಗಳಲ್ಲೇ ಹೆಚ್ಚು ಸಂತೋಶವನ್ನು ಕಾಣುತ್ತಿದ್ದವನು.ಬದುಕನ್ನು ಯಾವತ್ತೂ ಕೂಡ ಇಂಥ ವಿಶಿಷ್ಟ ಬಗೆಯ ಬೇಜವಬ್ದಾರಿಯಲ್ಲೇ ಕಳೆಯುತ್ತಿದ್ದವನು. ಹೀಗಾಗಿ ಅಂತಹ ಸ್ಥಿತಿಯಲ್ಲೇ ತನ್ನ ಒಂದು ಹೆಣ್ಣು ಮಗುವನ್ನು , ಮೊದಲ ಹಾಗೂ ಎರಡನೆಯ ಹೆಂಡತಿಯರನ್ನೂ ಕಳಕೊಂಡವನು.ನಾಗರಾಜನ ಮಗ ಸೀನಿಗೆ ಇದ್ದವು ಎರಡೇ ಚಡ್ಡಿ. ಈಗ ಕಣ್ಣಿಗೆ , ಕೈಗೆ ಸಿಗದೆ ಬರಿ ತಿಗದಲ್ಲೇ ಇರುವಂತೆ ಮಾಡಿರುವ ಚಡ್ಡಿ ಅವನ ಅತ್ತೆ ಸಂತೆಯಿಂದ ಕೊಂಡು ತಂದದ್ದು. ಮದುವೆ ಮನೆಯಲ್ಲಿ ತನ್ನ ಅಪ್ಪ – ‘ ನನ್ನ ಮಗನಿಗೆ ಚಡ್ಡಿ ಹೊಲಿಸಲಿಲ್ಲವಲ್ಲಾ ’ ಎಂದು ಕೋಪ ತಳೆಯಲು ಒಂದು ಹಿನ್ನೆಲೆಯಾಗಿಯೂ , ಸದ್ಯದ ಸಮಸ್ಯೆಯಾಗಿಯೂ ನಿಂತ ಚಡ್ಡಿಯನ್ನು ಸಿದ್ದಿಯು , “ ತನ್ನ ಬದುಕೆಲ್ಲಾ ಇಂಥಾ ಒಂದು ಗೋಳೇ ಆಗಿಹೋಯಿತಲ್ಲಾ ” ಎಂದುಕೊಂಡು ಹಿತ್ತಲಲ್ಲೆಲ್ಲ ಆ ಚಡ್ಡಿಯನ್ನು ಹುಡುಕಿಕೊಂಡು ಬಂದು , “ ಥೂ , ಈ ಹಾಳಾದ್ ಮನೇಲಿ ಒಂದಿನಾನಾರು ನೆಂದಿಯಾಗಿರುವಾ ಅಂದ್ರೆ ಆಗೊಲ್ದಲ್ಲಾ . ಯಾವ್ ಕರ್ಮ ಮಾಡಿ ಈ ಮನೆಗೆ ಬಂದ್ನೋ ” ಎಂದುಕೊಳ್ಳುತ್ತಿದ್ದಂತೆಯೇ ಮದುಮಗಳು ಶಾಂತಿ ತನ್ನ ಬದುಕಿನ ಅನಂತ ಸುಖದ ದಿನದಲ್ಲೂ ವಾಕಾಜ ಮಾಡ್ತಾ ಇದ್ದಾರಲ್ಲ ಎಂದು- “ ಅದೇನ್ ಚಿಕ್ಕಿ , ವತಾರಿಂದ ಇದೇ ಆಯ್ತಾಹಲ್ಲಾ, ಬಂದೋರು ಏನಂತ ಅನ್ನಬೇಕು. ನೋಡಪ್ಪಾ ಇವರ ಬಾಳಾ ಅಂತ ಆಡ್ಕೋದಿಲ್ವೆ ” “ ಅಯ್ಯೋ , ನಿನಗ್ಯಾಕವ್ವ ಅವೆಲ್ಲ , ಗಂಡನ್ ಮನೆಗೋಗೋಳು , ನೀನಾರ ಸುಖವಾಗಿರು … ”

ಶಾಂತಿಗೆ ಅಂಥಾ ವಾತಾವರಣದಲ್ಲಿ ತಲೆ ಕೆಡಿಸಿಕೊಳ್ಳಾಲು ಇಷ್ಟವಾಗದಿದ್ದರೂ ಒಂದು ರೀತಿಯ ಖಿನ್ನತೆ ಅವಳಿಗೂ ಹಿಡಿದುಕೊಂಡಿತು. ನನ್ನ ಮದುವೆಯಲ್ಲಿ ಅವರಾರೂ ಸಂತೋಷವಾಗಿ ಇಲ್ಲವಲ್ಲಾ, ನಮ್ಮ ಅವ್ವಾ ಇದ್ದಿದ್ರೆ ಇವೆಲ್ಲಾ ಅಯ್ತಿರ್ಲಿಲ್‌ವೇನೋ, ಅದೂ ಅಲ್ಲದೆ ಈ ಹಾಳಾದ ನಮ್ಮಪ್ಪ ಯಂಡ ಕುಡುದು ಬಂಡೆ ಉರುಳಿಸಿಕೊಂಡು ಎಲ್ಲೆಲ್ಲಿ ಯಂಡದ ಪೆಂಟೆ ಹಾಕ್ತಾರೋ ಅಲ್ಲಲ್ಲೇ ಬಿಡಾರ ಹೂಡ್ಕೊಂಡು , ಯಾವಾಳಾರ ಜತೆ ಸಿಕ್ರೆ ಮತ್ತೆ ಒಂದು ಮದುವೆ ಆಗಬಹುದಲ್ಲಾ ಎಂದು ಇರೋದು. ಅವನ ಹುಚ್ಚಾಪಟ್ಟೆ ರೀತಿನೀತಿಗಳು , ಎಂದೂ ದುಡಿಯದೆ ಇರೋ ಕಚ್ಚೆ ಪಂಚೆಯಷ್ಟಗಲದ ಜಮೀನ ಹಡ ಇಟ್ಟುಕೊಂಡು ಒಂದು ಪೈಸೇನೂ ಯಾರಿಗೂ ಕೊಡದೆ ಹೆಣ್ಣು ನೋಡುತ್ತೇನೆಂದು ಉ‌ೠರು ಅಲೆಯೋದು, ತನ್ನ ಐವತ್ತನೇ ವಯಸ್ಸಿನಲ್ಲೂ , ಮೂರು ಹೆಂಡಂದಿರು ಆದ ಮೇಲೂ ನಾಲ್ಕನೇ ಮದುವೆಗೆ ಓಡಾಡೋದರಿಂದ ಮನೆ ಜನರೆಲ್ಲ ನಮ್ಮ ಅಪ್ಪನ ಬಗೆಗೆ ಇರುವ ಬೇಸರ , ಕೋಪಗಳಿಂದ ನನ್ನ ಮದುವೆಯಲ್ಲೂ ಸರಿಯಾಗಿ ಭಾಗಾಹಿಸುತ್ತಿಲ್ಲವೇನೋ ಎಂದುಕೊಂಡು ದೊಡ್ಡದಾಗಿ ಒಂದು ನಿಟ್ಟುಸಿರು ಬಿಟ್ಟಳು.

ಇಂಥಾ ಅಪ್ಪನಿಗ್ ಯಾಕಾದರೂ ಹುಟ್ಟಿದೆನೋ, ಆ ಚಿಕ್ಕಪ್ಪ ನಾಗರಾಜನಿಗೆ ಮೂರು ಹೆಂಡಿರಾದರೂ , ಈ ನಮ್ಮಪ್ಪನಿಗೆ ಮೂರು ಹೆಂಡರೂ ಒಂದೊಂದು ಕಾರಣಕ್ಕೆ, ಅವನ ಒಂದೊಂದು ಹಿಂಸೆಗೂ ನೀರೋ , ನೇಣೋ ನೋಡಿಕೊಂಡು ಹೋದರು. ಈಗ ನಾಲ್ಕನೆ ಮದುವೆ ಆಗುತ್ತೇನೆಂದು ಕುಂತವನೆ. ಅದೂ ಅಲ್ಲದೆ ಈ ವಯಸ್ಸಲ್ಲಿ ಹೆಣ್ಣು ನೋಡಲು ತರಲು , ಅವನ ಅಪ್ಪನನ್ನೇ ಬಲವಂತಪಡಿಸುತ್ತಾನೆ. ಅಯ್ಯೋ ಸಿವನೇ , ಇವನಿಗೆ ಮಗಳಾಗಿ ಹುಟ್ಟಿ ನಾನು ಇನ್ನೂ ಏನೇನು ಈ ಕಣ್ಣಿಂದ ನೋಡಬೇಕಾಗಿದೆಯೋ ಎಂದುಕೊಂಡು ದುಃಖವನ್ನು ಎದೆಗೆ ತುಂಬಿಕೊಂಡಲಾದರೂ ಗಂಡಿನ ಕಡೆಯವರು ನೋಡಿದರೆ ಏನಂತಾರೋ ಎಂದು ಹೆದರಿ ಒಂದು ಕಡೆ ಸುಮ್ಮನೇ ಕುಳಿತೇ ಇದ್ದಳು. ಕೊನೆಗೂ ಆ ಚಡ್ಡಿ ಸಿಗದೇ ಹೋಯಿತು.

ನಾಗರಾಜನ ಪರದಾಟ , ಒಂದು ನಿಲುಗಡೆಗೆ ಬಾರದಾಗಿ ಯಾವ ಯಾವುದೋ ಕೋಪಗಳು ಒಂದು ನಿರ್ದಿಷ್ಟ ಕಾರಣ ಬೇಕಾಗಿಲ್ಲದೆಯೂ ಹುಚ್ಚನಂತೆ ವರ್ತಿಸತೊಡಗಿದ ನಾಗರಾಜ. ಹಿತಲಲ್ಲಿ ತನ್ನ ಪಾಡಿಗೆ ತಾನು ಮಣ್ಣು ಕಲಸಿಕೊಂಡು ಆಡುತ್ತಿದ್ದ ಸೀನಿಯನ್ನು ಒಂದೇ ಬಾರಿಗೆ ನೆಗೆದು ಹೋಗಿ ಪಟೀರೆಂದು ಬೆನ್ನ ಮೇಲೆ ಕೈತುಂಬಿದ ಬಾಸುಂಡೆ ಬರುವಂತೆ ಹೊಡೆದು ಎಳೆದುಕೊಂಡು ಬರುತ್ತಿರುವಂತೆಯೇ ಇಡೀ ಮದುವೇ ಮನೆಯೇ ಕಿತ್ತು ಹೋಗುವಂತೆ ಕಿಟಾರೆಂದು ಕಿರುಚಿಕೊಂಡದ್ದು ಎಲ್ಲರಿಗೂ ಬೆಚ್ಚುವಂತೆ ಮಾಡಿತು. ಸೀನಿ ಒಂದೇ ಸಲಕ್ಕೆ ಹುಚ್ಚೆಯನ್ನು ಉಯ್ದುಕೊಳ್ಳುತ್ತ ನನಗೆ ಯಾಕಾದರೂ ಹೊಡೆಯುತ್ತಾರೆಂದು ಗೊತ್ತೇ ಆಗದೆ ಭೀಕರ ಭಯದಿಂದ ಮತ್ತೂ ಅಳಲಾರಂಬಿಸಿದ. ಸಿದ್ದಿ ಕೋಣೆಯಿಂದ ಓಡಿ ಬಂದವಳೆ , “ ಅಯ್ಯೋ ಇರೋ ಒಬ್ಬ ಮಗನ್ನೂವೆ ಸಾಯ್ಸಿ ಬುಟ್ಟಿಯೇನಪ್ಪ ಹಾಳಾಗೋದೋನೆ, ನಿನಗೇನು ರೋಗ ಬಂದಿದ್ದದು. ಬಿಡು ಅವನ, ಇದ್ಯಾಕೆ ಹಿಂಗೆ ಹೊಟ್ಟೆ ಉರಿಸ್ಕಂದೀಯೆ ” ಎಂದು ಬಿಡಿಸಿಕೊಳ್ಳಲು ಹೋದವಳನ್ನು ತಳ್ಳಿದಾಕ್ಷಣ ಗೋಡೆಗೆ ನೂಕಿ ಅವಳ ಕೈ ತುಂಬಾ ಇದ್ದ ಬಣ್ಣದ ಬಳೆಗಳು ಫಳಾಫಳನೆ ಹೊಡೆದು ಉದುರಿ ಗಾಜು ಚುಚ್ಚಿಕೊಂಡು ರಕ್ತ ಜಿನುಗಲಾರಂಭಿಸಿತು.

ಮದುವೆ ಮನೆಯ ಹೆಂಗಸರೆಲ್ಲ ಮುತ್ತಿಕೊಂಡು ಸೀನಿಯನ್ನು ಬಿಡಿಸಿಕೊಂಡರು. ಆ ನಿಷ್ಪಾಪಿ ಮಗು ಈ ಎಲ್ಲ ಕದನ ದೃಶ್ಯವನ್ನು ನೋಡನೋಡುತ್ತಿದ್ದಂತೆಯೇ ಬೆದರಿ ನಾನು ಮತ್ತೆ ಬಾಯಿ ತೆಗೆದರೆ ನನ್ನನ್ನು ಸಾಯಿಸಿಯೇ ಬಿಟ್ಟಾರೇನೋ ಎನ್ನುವಂತೆ ದುಕ್ಕುದುಕ್ಕುಳಿಸಿ ಬರುತ್ತಿದ್ದ ಅಲ್ಲ ನೋವನ್ನು , ಹೆದರಿಕೆಯನ್ನು ಅಳವನ್ನು ಬಾಯಿಡಿದುಕೊಂಡು , ಒಂದು ಕೈಯನ್ನು ಬೆನ್ನ ಮೇಲಿದ್ದ ಅಷ್ಟಗಲದ ಬರೆಯನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತ , ಬೆಂಕಿಯ ಕೆಂಡವೇ ತುಳಿದು ಕೊಂಡಂತಾದ ಕಣ್ಣುಗಳ ತುಂಬ ನೀರು ತುಂಬಿಕೊಂಡು ಅಲ್ಲೇ ಇದ್ದ ಒಂದು ಅಜ್ಜಿಯ ಕಿಬ್ಸರಿಯೊಳಗೆ ಅವಿತುಕೊಂಡು ಕುಳಿತ.

ನಾಗರಾಜನ ಸಿಟ್ಟು ತಗ್ಗದಾಗಿ , ಸಿದ್ದಿಯನ್ನು ಹೊಡೆಯಲು ಹೋಗುತ್ತಿದ್ದಂತೆಯೇ , ಆ ಮನೆಯ ದೊಡ್ಡ ಹಜಾರವನ್ನು ದಾಟಿ ಹಿತ್ತಲ ಬಾಗಿಲಿನಿಂದ ಓಡಿಹೊದಳು. ಇಷ್ಟಾದರೂ ಅಂತಾ ಇಂತಾ ಸಣ್ಣ ಗಲಾಟೆಗಳಿರಬಹುದೇನೋ ಎಂತಲೋ , ಸಂಕೋಚ , ನಾಚಿಕೆ ಇತ್ಯಾದಿಗಳಿಂದಲೋ ಗಂಡು ಆ ಕೊಠಡಿಯಿಂದ ಹೊರಕ್ಕೆ ಬರದೆ ಮುಚ್ಚಿದ ಬಾಗಿಲ ತೆರೆಯದೆ ಊಟ ಮಾಡುತ್ತಿದ್ದ. ಶಾಂತಿ ಏನೋ ಅನಾಹುತ ಕಾದಿದೆಯೋ , ಯಾವತ್ತಾದರೂ ಇಂಥಾ ಸಮಯದಲ್ಲಿ ಒಂದಲ್ಲಾ ಒಂದು ಇಂಥದ್ದು ಈ ಮನೆಯಲ್ಲಿ ಇದ್ದೇ ಇರುತ್ತವಲ್ಲಾ ಎಂದು ದುಗುಡದಿಂದ ಹೊರಕ್ಕೆ ಬಂದು ಓಡಿಹೋಗಿ ಆಚೆ ಬೀದಿಯಲ್ಲಿದ್ದ ತಾತನಿಗೆ ನಾಗರಾಜನ ಅವತಾರಗಳನ್ನು ಹೇಳಿ ಕರೆದುಕೊಂಡು ಬಂದಳು.

ಅಷ್ಟರಲ್ಲಿ “ ಈ ಸೀನ ಇಲ್ಲಿರುದೇ ಬೇಡ, ಪಾಪ ಅಂಗಡಿಗಾದರೂ ಹೋಗಿ ಏನಾರ ಕಾಸಿಗೆ ತೆಗೆದುಕೊಂಡು ತಿನ್ನಲಿ ” ಎಂದು ಆ ಅಜ್ಜಿ ತನ್ನ ಎಲೆ‌ಅಡಿಕೆ ಚೀಲದಿಂದ ನಾಲ್ಕಾಣೆಯ ಬಂದವನ್ನು ಕೊಟ್ಟು ಕಳಿಸಿಬಿಟ್ಟಳು. ಸೀನಿಗೆ ಭಯ ಹಾಗೂ ಹೊಡೆತಗಳ ಹಿಂಸೆಯಲ್ಲಿ ಕಾಸು ಬೇಕಿಲ್ಲದಿದ್ದರೂ , ಈ ವಾತಾವರಣದಿಂದ ಹೊರಗಡೆ ಹೋಗುವುದೇ ಸರಿ ಎನಿಸಿದಂತೆ ನಾಲ್ಕಾಣೆ ಹಿಡಿಹುಕೊಂಡು ಅಂಗಡಿ ಕಡೆ ನಡೆದುಬಿಟ್ಟ.

ಓಡೋಡಿ ಬಂದ ನಾಗರಾಜನ ಅಪ್ಪ ಅತ್ಯಂತ ವಿಷಾದದ ರೀತಿಯಲ್ಲಿ “ ಏನಪ್ಪಾ , ಏನಂತಾ ನನಗೆ ನೀವೆಲ್ಲ ಮಕ್ಳು ಅಂತ ಹುಟ್ಟಿದ್ರೋ , ಸಾಯು ಕಾಲ್‌ದೆಲಾದ್ರು ನನ್ನ ನೆಮ್ಮದಿಯಾಗಿರುಕೆ ಬಿಡ್ತಿಲ್ಲವಲ್ಲಾ. ಸಾವುರಾರು ಕಷ್ಟಪಟ್ಟು ವಲ ಮನೆ ಹಡಾ ಇಟ್ಟು , ಹುಟ್ಟಿಸುದೋನ್ ಮಾಡಬೇಕಾದ ಮದುವೇನೂ ನಾನೆ ನಿಂತ್ಕಂಡು ಮಾಡಿಸ್‌ತಿದ್ರೂ , ಒಂದ್ ಜವಾಬ್‌ದಾರಿ ತಕದೆ , ಈಗ್ಲೂ , ಇಂಥಾ ಟೇಮೆಲಿ , ಇಂಗಾಡ್ತಾರಲ್ಲ , ಆ ದೇವ್ರು ನಿಮ್ಮ ಏನಂತಾ ಹುಟ್ಟಿಸ್‌ಬುಟ್ನೋ , ರಾಮಾ ರಾಮಾ, ಇವೆಲ್ಲ ನೋಡ್ಕಂದಿರುಕಿಂದ ಎಲ್ಲಾರೂ ದೂರಸ ಹೊಂಟ್ಹೋಗ್ ಬೇಕನಿಸ್ತದೆ … ” ಎಂದು ಹೇಳುತ್ತಿರುವಷ್ಟರಲ್ಲೇ-
“ ಹೋಗೋ ಸೂಳೆ ಮಗನೆ , ಭಾಗ ಕೊಡು ಭಾಗ ಕೊಡು ಅಂದ್ರೆ ಒಂದು ಪೈಸಾನು ಕೊಡ್ದೆ , ಆ ನಿನ್ ಹಿರಿ ಮಗ ಚಿಕ್ಕೈದುನ್‌ಗೇ ಎಲ್ಲನು ಬುಟ್ಟುಬುಟ್ಟು , ಅದ ಮಾಡ್ದೆ ಅಂತ ಹೇಳ್‌ಬ್ಯಾಡ , ನಾನು ಕಂಡಿವಿನಿಕನಾ, ಮದುವೆಗೆ ಅಂತ ಹತ್ತು ಸಾವ್ರ ಮಾಡ್ತಿದೀಯಲ್ಲಾ ಏನಾರ ಒಂದು ಪೈಸೆ ಕೊಟ್ಟಿದ್ದೀಯ ನನಗೆ, ಹೋಕಲಿ ನನ್ ಮಗುನ್‌ಗೆ ಒಂದು ಚಡ್ಡಿ ಬಟ್ಟೆ ವಲ್ಸಿದ್ದೀಯ , ಆ ಹಿರಿ ಮಗ ಐವತ್ತೊರ್ಸ ಆಗಿದ್ರೆ ಮಮ್ಮಕ್ಳು , ಮುಮ್ಮಕ್ಳು ಬಂದಿದ್ರೂ , ನಾಕ್ನೆ ಮದ್ವೆ ಮಾಡಬೇಕು ಅಂತ ಅವುನ್ ಕೇಳುದ್ರೆ ಏನೂ ಕಾಣದೋನಂಗೆ ಅವುನ್ ಮಾತ್ಗೆ ಸೈ ಅನ್‌ಕಂಡಿದ್ದೀಯ.”

“ ಅಯ್ಯೋ … ಅಯ್ಯೋ … ನಿನ್ನ ಕೈಮುಗೀತೀನಿ , ಮೆತ್ತುಗ್ ಮಾತಾಡೋ ನಾಗರಾಜಾ, ಗಂಡು ಆಚೆ ಮನೆಲದೆ ಅಂತ ಗೊತ್ತಿಲ್ವೆ. ಹೆಣ್ಣೋರಪ್ಪನ್‌ಗೆ ನಾಕ್ ಮದ್ವೆ ಅಂದ್ರೆ ಏನಾಯ್ತದೆ ಅಂತ ಯೋಚ್ನೆ ಮಾಡಿದ್ದೀಯ , ಹೆಂಗೋ ತಾಯಿಯಿಲ್ಲದ ಮಗಳು , ಅವರಪ್ಪುನ್ ನೋಡುದ್ರೆ ಇಂಗೆ, ಅಂತ ನಾನು ವಲಮನೆ ಹಡ ಇಟ್ಟು ಮಾಡಿದ್ದೇನೇ ವರ್ತು , ನಾನ್ ಯಾವ ಸುಖಕ್ಕೂ ಮಾಡ್ಕತಾ ಇಲ್‌ಕನಪ್ಪ. ಮದ್ವೆ ಕೆಲ್ಸ ಎಲ್ಲ ಮುಗುದೋಗ್ಲೆ , ನಿನ್ನ ದಮ್ಮಯ್ಯ ವಸಿ ಸುಂಕಿರೋ …” ಎಂದು ದೈನ್ಯದಿಂದ ಮಗನನ್ನು ಬೇಡಿಕೊಳ್ಳುತ್ತಿರುವಷ್ಟರಲ್ಲಿ , ಗಂಡಿನ ಮನೆಯ ಒಂದಿಬ್ಬರು ಬಂದು ಆಗುತ್ತಿದ್ದ ಸ್ಥಿತಿಯನ್ನು ಗಮನಿಸಿ ನಾಗರಾಜನ ಬಳಿ ಬಂದು “ ಬನ್ನಿ ನಾಗರಾಜಪ್ಪಾ , ಆಮೇಲೆ ಮಾತಾಡುವಾ ಈಗವೆಲ್ಲ ಯಾಕೆ, ಬನ್ನಿ ಬನ್ನಿ ” ಎಂದು ಕೈ ಹಿಡಿಹು ಎಳೆದರೂ ಬಿಡದೆ-“ ರ್ರೀ ಬಿಡ್ರಿ . ಇದು ನನ್ ಮನೆ ಯವಾರ. ಹೆಣ್ಣು ಕೊಟ್ಟಿದ್ದೀವಿ. ಹೆಣ್ ಕರ್ಕೊಂದೋಗ್ತೀರಿ. ಇದ್ರೆಲಿ ನಿಮುದು ಇನ್ನೇನು ಇಲ್ಲ ಹೋಗ್ರಿ ” ಎಂದ ಕೂಡಲೇ ಮದುಮಗಳು ಶಾಂತಿ ಓಡಿ ಬಂದು “ ಚಿಕ್ಕಪ್ಪ ಚಿಕ್ಕಪ್ಪ ನಿನ ದಮ್ಮಯ್ಯ ಏನೂ ಇವತ್ತು ಮಾತಾಡಬ್ಯಾಡಕನಪ್ಪಾ, ನನ್ ಮದ್ವೆಗೆ ಮಾಡಿರೋ ಹತ್ತು ಸಾವುರಾನು ನಮ್ಮ ಓದ್ತಾವನಲ್ಲ . ಅವುನ್ ಕೆಲ್ಸುಕ್ ಸೇರುದ್ ಮ್ಯಾಲೆ ನಿನಗೆ ಕೊಡುಸ್‌ಬುಡ್ತೀನಿ, ಸುಮ್ಮನಿರಪ್ಪಾ , ಈ ಬಾಳ ನೋಡಿ ಗಂಡೇನಾರ ಬೇಜಾರ್ ಮಾಡ್ಕಂಡು ಸುಮ್ಮನೆ ಸ್ವಾಸನೆ ಬ್ಯಾಡ ಅಂತ ಎದ್ದೊಂಟೋದ್ರೆ ತಿರ್ಗ ಯಾರ್ನಪ್ಪಾ ನಾನು ಮದ್ವೆಯಗೂದು… ” ಎಂದು ಕಾಲು ಹಿಡಿದುಕೊಂಡಿದ್ದರೂ ನಾಗರಾಜ ಲೆಕ್ಕಿಸದೆ – “ ಬಿಡು ಶಾಂತಿ , ನನಗೆ ಗೊತ್ತುಕನ , ಏನ್ ಮಾಡ್ಬೇಕು ಅಂತಾ . ನಿಮ್ಮಪ್ಪ ಲೋಫರ್ ಸರಿಯಾಗಿದ್ದಿದ್ರೆ ಅದೊಂತರಾ ಇತ್ತು. ಬರ್ಲಿ ಇವತ್ತು . ಈ ಮದ್ವೆ ಮನೇಲಿ ತೀರ್ಮಾನ ಆಗೋಗ್ಲಿ . ನಿಮ್ಮಯ್ಯ ಅನ್ನಿಸ್ಕೊಳ್ಳೋ ಈ ಬೋಳಿಮಗ ಹತ್ ಸಾವ್ರವ ಹೊಲುದ್ ಮ್ಯಾಲ್ ತಂದಿದ್ರೆ , ಅವುನ್ ಕಾಣದಂಗೆ ನಿಮ್ಮಪ್ಪ ಗೌಡ್ರುತಾವು ಹಿತ್ಲು ಮೇಲೆ ಎರಡ್ ಸಾವ್ರ ತಂದು ಯಾರ್ಗೂ ಗೊತ್ತಾಗ್‌ದಂಗ್ ದಿಲ್ ಮಾಡ್ಕಂಡು ಯಂಡ ಸರಾಪ್ ಕುಡ್ಕಂಡವನಲ್ಲಾ , ಬರ್ಲಿ ನನಗೆ ಬರಬೇಕಾದ್ ಜಮೀನ್ ಮಡುಗುಬುಟ್ ಮನೆ ವಸುಲು ದಾಟು ಅಂತ ಹೇಳ್‌ತೀನಿ ” ಎನ್ನುತ್ತಾ ಹಲ್ಲುಮುಡಿ ಕಟ್ಟಿಕೊಂಡು ಪಡಶಾಲೆಗೆ ಬಂದ.

ನಾಗರಾಜನ ಅಪ್ಪ ಏನನ್ನೂ ಮಾಡದಂತಾಗಿ , ತನ್ನ ಎಂಬತ್ತನೇ ವಯಸ್ಸಿನಲ್ಲೂ ಇಲ್ಲೀ ತನಕ ಎಲ್ಲ ಮಕ್ಕಳ ಮದುವೆ ಮಾಡದೆ , ಸತ್ತವರು , ಹುಟ್ಟಿದವರು ಅವರು ಇವರು ಅಂತಾ ಎಲ್ರುಗು ತ್ಥಿ ಪಥಿ ಹಬ್ಬ ಎಲ್ಲಾನೂ ಮಾಡ್ಕ ಬಂದೆ. ಪಾಳೆಗಾರ್ ನಂಗೆ‌ಇದ್ದ ನನ್ನ ಮನೆತನವನ್ನೆಲ್ಲ ಹುಟ್ಟಿದ ಈ ಮಕ್ಕಳು ಹಾಳು ಮಾಡಿದರು. ಎತ್ತಾಗಾದ್ರೂ ಹೋಗಾಣ ಅಂದ್ರೆ ಕೈಲಿ ಬಲಾ ಸಾಲದು. ಇಲ್ಲೇ ಇರ್‌ವಾ , ಈ ಮನೇಲೆ ಬದುಕುವಾ ಅಂದ್ರೆ ಈ ಮಕ್ಕಳ ಕಾಟ, ಆ ಚಿಕ್ಕೈದ ಬಂದ್ ಮ್ಯಾಲೆ ಅದೇನಾದದೋ , ಆ ಹಾಳಾದ ಒಂದು ಚಡ್ಡಿ ಮಾತ್ಗೆ ಹಿಂಗೆಲ್ಲಾ ಆಡೋದು ಉಂಟೆ. ಭಾಗ ಕೊಟ್ರು ಒಂದೇ ದಿನಕ್ಕೆ ಯಾರಾರ ಗೌಡ್ರುಗೆ ಮಾರ್ಕಂಡು ತಿನ್ನೋ ಇವರಿಗೆ ಯಾವ ರೀತೀಲಿ ಬುದ್ಧಿ ಹೇಳ್ಳಿ. ನನ್ನ ಮನೆ ಮಾನ ಮರ್ಯಾದೇನೆಲ್ಲಾ ಹೀಗೆ ಬೀದಿ ಪಾಲ್ ಮಾಡ್ತಾ ಬಂದ್ರಲ್ಲಾ. ವಯಸ್ಸಾಗಿ ನಿಂತ ಮೊಮ್ಮಗಳ ಮನೇಲಿ ಇಟಗೊಂಡು ಇದ್ರೆ ಜನ ತಾನೆ ಏನಂತಾರೆ. ಹೋಗಲಿ ಅವರಪ್ಪ ಏನಾದ್ರು ಮದುವೆ ಮಾಡ್ತಿದ್ನೆ . ಯಾರೂ ನನ್ನ ಅರ್ಥ ಮಾಡಿಕೊಳ್ಳದೆ ಈ ಚಡ್ಡಿ ನೆಪ ಹಿಡ್ಕೊಂಡು ಮದುವೆ ಮನೇನೆಲ್ಲ ರಣರಂಗ ಮಾಡ್ತಾ ಇದ್ದಾರಲ್ಲಾ ” ಎನ್ನುತ್ತ ಗೋಡೆಗೊರಗಿಕೊಂಡು

“ ಮೊಗಾ, ಶಾಂತಿ ವಸಿ ನೀರ್‌ತಗಬವ್ವಾ..” ಎಂದ

ಶಾಂತಿಯ ಮುಖ ಕಪ್ಪಿಟ್ಟಿತ್ತು. ಸಿದ್ದಿ ಹಿತ್ತಿಲ ಬಾಗಿಲಿಂದ ಓಡಿಹೋದವಳು ಇನ್ನೂ ಬಂದಿಲ್ಲ ಎಂದು ತಾತನ ಕಿವಿಯಲ್ಲಿ ಮೆತ್ತಗೆ ಹೇಳಿ ನೀರು ಕೊಟ್ಟಳು. ಆಗಲೀಗ ತನ್ನ ಸಾವು ಮೂರೇಗೇಣಳತೆಯಲ್ಲಿದೆ ಎನಿಸಿ , ಏನಾದದೋ , ಏನ್‌ಕತೆಯೋ ಎಲ್ಲಾರ ಬಾವಿಗೀವಿ ಬಿದ್ದು ಪ್ರಾಣ ಕಳಕಂಡ್ರೆ ಏನಪ್ಪಾ ಗತಿ ನನ್ನ ಮನೆ ಜನರೆಲ್ಲ ಹಿಂಗೇ ಆಗೊದ್ರಲ್ಲಾ … ಎಂದು ದುಗುಡದಲ್ಲಿ ನೀರು ಕುಡಿದು , ಚಾಮಪ್ಪನ ಮಗ ಕರಿಯನನ್ನು ಸೈಕಲ್ ಕೊಟ್ಟು “ ನಿನ್ ದಮ್ಮಯ್ಯ ಅಂತೀನಿ , ಎಲ್ಲಾರ ನಮ್ಮ ಸಿದ್ದಿ ಇದ್ರೆ ನೋಡ್ಕೊಬರೋಗಪ್ಪಾ ” ಎಂದು ಕಳಿಸಿದ.

ಇಡೀ ಮದುವೆ ಮನೆ ಒಂದು ಸ್ಮಶಾನದಂತೆ ಆಯಿತು. ಬಂದಿದ್ದ ಎಲ್ಲ ನೆಂಟರೂ, ಒಂದೊಂದು ರೀತಿಯಲ್ಲಿ ಎಲ್ಲರ ಬಗೆಗೆ ಮಾತನಾಡಿಕೊಂಡರು. ಹೆಂಗೋ , ಆಯ್ತು ಹೋಯ್ತು ಬಿಡ್ರಪ್ಪಾ , ನಾಳೆ ಒಂದಿನಾ ಕಳುದ್ರೆ ಆ ಶಾಂತಿ ಅವಳ ಮನೆಗೆ ಅವಳೋಯ್ತಳೆ . ಆಮೆಕೆಂಗಾರು ಇವರು ಕಚ್ಚಾಡ್ಲಿ ಎಂಬ ನಿರ್ಣಯದಿಂದ ಕುಳಿತರು. ನಾಗರಾಜ ಪಡಸಾಲೆ ತುದಿಯಲ್ಲಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಬೀಡಿ ಹಚ್ಚಿ ದಿರ್ಘವಾಗಿ ಹೊಗೆ ಎಳೆದು ಹೊರಕ್ಕೆ ಬಿಟ್ಟ. ಅಲ್ಲಿ ಕು/ಲಿತಿದ್ದ ಹಲವರ ಮುಖವನು ಹಾಯ್ದು ಹೊಗೆ ಹರಿಯಿತು. ಒಂದೊಂದು ಬಾರಿಗೂ ಉಗುಳಿದ್ ಅಹೊಗೆ ಅಲ್ಲೆಲ್ಲಾ ಆವರಿಸಿದಂತೆ … ಯಾರೋ ಆರ್ತ ಸ್ವರದಲ್ಲಿ ನಡುಗುತ್ತಾ ಓಡಿಬಂದು ಕುಳಿತಿದ್ದ ಜನರನ್ನು ಉದ್ದೇಶಿಸಿ –
“ ಅಯ್ಯೋ , ನಿಮ್ಮ ಸೀನಿ ಸರ್ಕಲ್ ತಾವು ಲಾರಿಗೆ ಸಿಕ್ಕೋಗವ್ನೆ. ಬನ್ರಪೋ .” ಎಂದು ಗೋಳು ಹಾಕೊಕೊಂಡ. ಕುಳಿತಿದ್ದ ಇಡೀ ಸಮೂಹಕ್ಕೆ ಸೀನಿಯ ಈ ಅಚಾನಕ್ ಆದ ಅನಿರೀಕ್ಷಿತ ಸುದ್ದಿ ಕೇಳಿ ಅವರವರ ಎದೆಗಳು ಹೊಡೆದು ಹೋದಂತಾಗಿ , ಎದ್ದೆದ್ದು ಸರ್ಕಲ್ಲಿನ ಕಡೆ ಓಡಿದರು.

ನಾಗರಾಜ ಒಂದೇ ಬಾರಿ ‘ ಹಾ ’ ಎಂದವನೇ ಇಡೀ ದೇಹವೇ ನಜ್ಜಿ ಹೋದಂತವನಾಗಿ ಓಡಿ ಬಂದ. ಸರ್ಕಲ್ಲಿನ ತುಂಬ ಜನ ಸಂತೆಯಂತೆ ನೆರೆದರು. ಹತ್ತಾರು ಜನರ ಲೊಚಗುಟ್ಟುವ ಸದ್ದನ್ನು ಉಳಿದು ಇನ್ನೇನೂ ಕೇಳಿಸುತ್ತಿರಲಿಲ್ಲ. ನಾಗರಾಜ ಮಗನ ಜಜ್ಜಿಹೋದ ಅರ್ಧ ದೇಹವನ್ನು ನೋಡಿ ಮೂರ್ಛೆ ಹೋದ. ಸಿದ್ದಿಯ ಪತ್ತ್ಯೇ ಇರಲಿಲ್ಲ. ನಾಗರಾಜನ ಅಪ್ಪ ಕಣ್ಣಿನ ತುಂಬಾ ನೀರು ಹೊತ್ತುಕೊಂಡು “ ಅಯ್ಯೋ ಮಗನೆ ಎಂಥಾ ಸಾವು ಬಂತಪ್ಪಾ ” ಎಂದು ರಕ್ತಸಿಕ್ತವಾದ ದೇಹವನ್ನು ಬಾಚಿಕೊಳ್ಳಲು ಹೋದ. ಯಾರು ಯಾರೋ ತಡೆದರು. ಚಡ್ಡಿ ಇರದಿದ್ದ ಸೊಟದ ತನಕ ಜಜ್ಜಿ ಹೋಗಿದ್ದ ಆ ಎಳೇ ಕಾಲುಗಳು , ಸೊಂಟ ಇನ್ನಿಲ್ಲದ ದುಃಖವನ್ನು ಎಲ್ಲರೆದೆಯಲ್ಲೂ ಉಂಟು ಮಾಡಿತು. ನಾಲ್ಕಾಣೆ ಬಂದವನ್ನೂ ಕೊಟ್ಟು ‘ ತಿಂಡಿ ತಿನ್ನೋಗು ’ ಎಂದು ಕಳಿಸಿಕೊಟ್ಟಿದ್ದ ಅಜ್ಜಿ ಪಾಪಭೀತಿಯಿಂದ ‘ ಅಯ್ಯೋ ಕಂದಾ ’ ಎಂದು ಆ ಸೀನಿಯ ಮುಖದ ಮೇಲೆ ಬಿದ್ದು ಗೋಳಾಡ ಹತ್ತಿದಳು. ಅರ್ಧ ಹೊಟ್ಟೆಯ ಮೇಲಿನ ಭಾಗ ಹಾಗೇ ಉಳಿದಿದ್ದು , ನಾಲ್ಕಾಣೆಗೆ ತೆಗೆದುಕೊಂಡಿದ್ದ ಹಸಿರು ಬಣ್ಣದ ಗಿಳಿಗಳ ಬಿಸ್ಕೇಟುಗಳು ಮೂರು ನೆಲದ ಮೇಲೆ ಬಿದ್ದು ಇನ್ನೂ ಎರಡು ಕೈಯಲ್ಲೇ ಉಳಿದಿದ್ದವು. ಸೀನಿಯ ಅರೆತೆರೆದ ನೀಲವಾದ ವಿಶಾಲವಾದ ಕಣ್ಣುಗಳು ಮೆಲ್ಲಗೆ ಅಪ್ಪನನ್ನೇ ಭೀತಿಯಿಂದ ಸೋಡುವ ಹಾಗೆ ತೆರೆದುಕೊಂಡಿದ್ದವು.

ನಿಂತಿದ್ದವರಲ್ಲಿ ಯಾರೋ ಹೇಳಿದರು “ ಅಷ್ಟೊತ್ತಿಂದ್ಲೂ ಇಲ್ಲೇ ನಿಂತಿದ್ದ . ‘ ನಾನು ಹೋಗ್ಲಾ ಸೀನಿ ’ ಮದುವೆ ಮನೇಲಿ ಓಡಾಡು ಎಂದರೂ ‘ ನಮ್ಮಪ್ಪ ವಡಿತನೆ ’ ಎನ್ನುತ್ತಾ ಬಿಕ್ಕಳಿಸುತ್ತಾ ಎತ್ತೆತ್ತಗೋ ನೋಡ್ಕ ನಿಂತಿದ್ದ. ಅಷ್ಟೇಲಿ ಆ ಲಾರಿ ಬರ್ರಂತ ಬಂದದ್ದೇ ನುಗ್ಗಿಬಿಡ್ತು. ” ಎಂದು ಮೌನದ ಜೊತೆಗೆ ಮೌನವಾದ.

ಶಾಂತಿಯ ಅಪ್ಪ ಚಿಕ್ಕ ಹೈದ ಎಲ್ಲಿಂದಲೋ ಸುದ್ದಿ ಕೇಳಿ ಓಡಿಬಂದು “ ಇದಕ್ಕೆಲ್ಲ ಕಾರಣ ಆ ನಾಗರಾಜನೇ ಹೊರ್ತು ಯಾರೂ ಅಲ್ಲ ” ಎನ್ನುತ್ತಾ ಯಂಡದ ಅಮಲಿನಲ್ಲಿ ಮೂರ್ಛೆ ಹೋಗಿದ್ದ ನಾಗರಾಜನ ಕಡೆ ಕಣ್ಣು ಹೊರಳಿಸಿದ. ಮದುವೆ ಮನೆಯ ಎಲ್ಲರೂ ಈಗಂತೂ ದಿಕ್ಕು ತೋಚದಾಗಿ ನಿಂತರು. ಶಾಂತಿಯ ಗಂಡ ಕರ್ಚೀಫಿನಿಂದ ಕಣ್ಣು ವರೆಸಿಕೊಳ್ಳತೊಡಗಿದ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.