ಛೇದ – ೨

ಅಪ್ಪನ ಮಲಗುವ ಕೋಣೆಯ ಕಡೆಗೆ ಹೋಗುತ್ತಿರುವಾಗ ಅಪ್ಪ ಡ್ರೆಸ್ಸು ಬದಲಿಸಿ-ಪಜಾಮಾ, ಒಳ‌ಅಂಗಿಯ ಬದಲು ಪ್ಯಾಂಟು ಶರ್ಟು ಧರಿಸಿ-ಮತ್ತೆ ಹಾಲಿನ ಕಡೆಗೆ ಹೊರಟಿದ್ದ. ಅಪ್ಪನ ಗಂಭೀರ ಮೋರೆ ನೋಡಿ ಅವನನ್ನು ಮಾತನಾಡಿಸುವ ಧೈರ್ಯವಾಗಲಿಲ್ಲ, ಶಿರೀನಳಿಗೆ. “ಅವನೊಬ್ಬನನ್ನೇ ಆ ಠಕ್ಕರ ಜೊತೆಯಲ್ಲಿ ಬಿಟ್ಟುಬಂದೆಯಾ?” ಎಂದು, ಅಪ್ಪ ತೀರ ಕೆಳದನಿಯಲ್ಲಿ ಕೇಳಿದ ಪ್ರಶ್ನೆಯೊಳಗೆ ಮೂಡಿದ ಅಸಮಾಧಾನ ಅವಳನ್ನು ತಟ್ಟದೇ ಇರಲಿಲ್ಲ. ಅಪ್ಪನ ಕೋಣೆಯ ಹೊಸಲಲ್ಲಿ ಕಾಣಿಸಿಕೊಂಡ ಅವಳನ್ನು ಅಮ್ಮನೇ ಸನ್ನೆ ಮಾಡಿ ಒಳಗೇ ಕರೆಸಿಕೊಂಡು, “ಇದೆಂತಹ ಉತಾವಳಿಯ ಕೆಲಸ ಮಾಡಿ ಕೂತಿದ್ದೀ! ಈಗ ಬಂದವರು ಝೋಪಡಪಟ್ಟಿಗಳ ಒಡೆಯರಿಗೆ ಸಂಬಂಧಪಟ್ಟ ಜನವಿರಬಹುದಂತೆ. ಒಬ್ಬರೂ ಅಪ್ಪನ ಪರಿಚಯದವರಲ್ಲ. ನೀನೀಗ ಹೊರಗೆ ಹೋಗು. ಚಹ ಬೇಕಾದರೆ ಸೀತೆಗೆ ಹೇಳು,” ಎಂದಳು. ಬಂದವರು ಅಪ್ಪನ ಪರಿಚಯದವರಲ್ಲ ಎಂದು ತಿಳಿದಾಗ ಶಿರೀನಳಿಗೆ ಇದ್ದ ಬಿದ್ದ ಧೈರ್ಯವೂ ಉಡುಗಿಹೋಯಿತು. ಪಾರ್ವತಿಗೂ ಗೊತ್ತಿದ್ದ ಜನವಲ್ಲ ಎಂಬುದನ್ನು ಅಪ್ಪನಿಗೆ ಈಗ ತಿಳಿಸುವುದು ಸಾಧ್ಯವಿರಲಿಲ್ಲ. ಕ್ಷಣಗಳ ಮೊದಲು ಕರುಣಾಕರನ್ನನ ರಕ್ಷಣೆಯನ್ನು ಕುರಿತು ಪಣತೊಟ್ಟವಳಿಗೆ ಈಗ ಅವನ ಬಗೆಗೇ ಸಿಟ್ಟು ಮೊಳೆಯತೊಡಗಿದಾಗ-ಇವನೊಬ್ಬ ಎಲ್ಲಿಂದ ಬಂದು ಹಾಜರಾದನೋ ಎಂದುಕೊಂಡಳು.

ಶಿರೀನ್ ತಿರುಗಿ ದಿವಾಣಖಾನೆಗೆ ಬರುವಷ್ಟರಲ್ಲಿ ಕರುಣಾಕರನ್ ತಾನು ಕೂತ ಸೋಫಾ ಅನ್ನು ಬೆಹರಾಮನಿಗೆ ಬಿಟ್ಟುಕೊಟ್ಟು ತಾನು ಹೊಸತಾಗಿ ಹಾಕಿದ ಕುರ್ಚಿಯೊಂದರಲ್ಲಿ ಕುಳಿತಿದ್ದ. ಶಿರೀನಳನ್ನು ಕಂಡಕೂಡಲೇ ತಾನು ಕೂತ ಕುರ್ಚಿಯನ್ನು ಅವಳಿಗೆ ಕೂರಲು ಅನುಕೂಲವಾಗುವಂತೆ ಸರಿಸಿಟ್ಟು ಅವನು ಇನ್ನೊಂದರಲ್ಲಿ ಕೂರುತ್ತಿರುವಾಗ ಬಂದವರಲ್ಲೊಬ್ಬ ಬಾಯಿಬಿಟ್ಟ:
“ಹಾಗಾದರೆ ನಿಮ್ಮ ಮಾತೇ ಕೊನೆಯದು.”
ಹೌದು-ಇದು ನನ್ನ ಮನೆಯಾದ್ದರಿಂದ, ಈ ಮನೆಗೆ ನೀವು ನಮ್ಮಲ್ಲಿಯ ಯಾರೂ ಕರೆಯದೇ ಇರುವಾಗಲೂ ಸುಳ್ಳುನೆಪ ಹೇಳಿ ನುಗ್ಗಿದ್ದರಿಂದ, ಈಗಲೂ ನೀವು ನಿಮ್ಮ ಪರಿಚಯ ಹೇಳಲು ನಿರಾಕರಿಸಿದ್ದರಿಂದ.”
“ನಾವು ಬಂದದ್ದು ನಿಮ್ಮ ಒಳಿತಿಗಾಗಿಯೆ, ಮುದುಕಪ್ಪ. ನಾವು ಬಂದಂಥ ಕಾರ್ಯಕ್ಕೆ ನಮ್ಮ ಪರಿಚಯದ ಅಗತ್ಯವಿಲ್ಲ. ಪರಿಚಯ ಮಾಡಿಕೊಟ್ಟರೂ ಯಾವ ಕೆಲಸಕ್ಕೂ ಅದು ಬರಲಾರದು. ಯಾಕೆಂದರೆ ನೀವು ನಮ್ಮನ್ನು ಇನ್ನೊಮ್ಮೆ ಕಾಣಬಹುದೆಂಬ ಭರವಸೆಯಿಲ್ಲ.”
“ಧಮಕಿಯ ಮಾತು ಬೇಡ. ನೀವೀಗ ಹೊರಡಬಹುದು.”
“ಇವಳು ಜಮ್‌ಶೇದ್‌ಪೂರದಿಂದ ಬಂದ ನಿಮ್ಮ ಮಗಳೆಂದು ತೋರುತ್ತದೆ. ನಾವು ಹೇಳಿದ್ದು ಅವಳಿಗೂ ಗೊತ್ತಿರಲಿ ಎಂದು ಇನ್ನೊಮ್ಮೆ ಹೇಳುತ್ತೇವೆ; ನಿಮಗೂ ನಮ್ಮ ಮಾತಿನ ಅರ್ಥ ಹೆಚ್ಚು ಸ್ಪಷ್ಟವಾದೀತು.”
“ಗರಜು ಇಲ್ಲ. ನನಗೆ ಅರ್ಥವಾಗಿದೆ. ಅವಳಿಗೆ ಆಮೇಲೆ ನಾನೇ ಹೇಳುತ್ತೇನೆ, ನೀವು ಮಾಡುತ್ತಿರುವ ಒಳ್ಳೆಯ ಕೃತ್ಯಗಳ ಬಗ್ಗೆ. ಈಗ ಹೊರಡಿ.”

ಬಂದವರಿಗೆ ಹೊರಡುವ ಮನಸ್ಸು ಇದ್ದಹಾಗೆ ತೋರಲಿಲ್ಲ. ಶಿರೀನಳಿಗೆ ಬಂದವರು ಎಂಥ ಜನ ಎಂಬುದರ ಬಗೆಗೆ ಸಂಶಯವೇ ಉಳಿಯಲಿಲ್ಲ. ತಾನು ಮಲಗುವ ಕೋಣೆಯಿಂದ ಬರುವಷ್ಟರಲ್ಲಿ ತಾವು ಬಂದ ಉದ್ದೇಶವನ್ನು ಅಪ್ಪನಿಗೆ ಆಗಲೇ ತಿಳಿಸಿರಬೇಕು. ತಾನು ಅದನ್ನು ಕೇಳುವುದು ಅಪ್ಪನಿಗೆ ಬೇಡವಾಗಿರಬೇಕು. ಹಾಗೆಂದೇ ಅವರನ್ನು ಆದಷ್ಟು ಬೇಗ ಇಲ್ಲಿಂದ ಓಡಿಸಲು ಯೋಚಿಸಿರಬೇಕು ಎಂದುಕೊಂಡರೂ ಶಿರೀನಳಿಗೆ ಬಾಯಿ ತೆರೆಯುವ ಧೈರ್ಯವಾಗಲಿಲ್ಲ. ಕರುಣಾಕರನ್ ಕೂಡ ತುಟಿ ಎರಡು ಮಾಡದೇ ಕೂತಿದ್ದ. ಅಪ್ಪ ಹೊರಟುಹೋಗಲು ಇತ್ತ ಆಜ್ಞೆಯನ್ನು ಇವರು ಹೇಗೆ ಪಾಲಿಸುವರೋ ಎಂದು ಕಾತರಪಟ್ಟವಳು ಅವರ ಮುಂದಿನ ಕ್ರಮದ ಹಾದಿಯನ್ನು ಕಾಯುತ್ತ ಕುಳಿತಳು. ಕೋಣೆಯಲ್ಲಿಯ ವಾತಾವರಣ ಇದ್ದಕ್ಕಿದ್ದ ಹಾಗೆ ಬಿಗಿಗೊಳ್ಳತೊಡಗಿದ ರೀತಿ ಎಲ್ಲರಿಗಿಂತ ಹೆಚ್ಚಾಗಿ ಶಿರೀನಳನ್ನೇ ಕಾಡತೊಡಗಿತು. ಸಾಯ್ಕಾಲಜಿಯಲ್ಲಿ ಎಂ. ಎ. ಮಾಡಿದ ಅವಳಿಗೆ- ಅಪ್ಪ ‘ಹೊರಡಿ’ ಎಂದು ಹೇಳಿದಮೇಲೂ ಇತ್ತ ಹೊರಟೂಹೋಗದೇ ಅತ್ತ ಮಾತೂ ಆಡದೇ ಮೌನ ಧರಿಸಿ ಕುಳಿತುಬಿಟ್ಟವರ ಚತುರೋಪಾಯದ ಅರ್ಥ ಹೊಳೆಯದೇ ಇರಲಿಲ್ಲ. ಅಪ್ಪನ ಪ್ರತಿರೋಧವನ್ನು ಮುರಿಯುವ ಹಿಕ್ಮತಿಯಿದು. ಕೂರಲಿ. ನಾನೂ ಮಾತನಾಡಲಾರೆ ಎಂದು ಮನಸ್ಸನ್ನು ಗಟ್ಟಿಮಾಡಿಕೊಂಡು ಕುಳಿತುಬಿಟ್ಟಳು.

ಇದಾವುದನ್ನೂ ಅರಿಯದ ಕರುಣಾಕರನ್‌ಗೆ ಈ ಅನಪೇಕ್ಷಿತ ವಾತಾವರಣದ ಬಿಗಿತ ಅಸಹನೀಯವಾಗತೊಡಗಿತು: ಈಗಿನ ಸ್ಥಿತಿಯಲ್ಲಿ ಇನ್ನು ಕೆಲವು ನಿಮಿಷಗಳಷ್ಟು ಕಾಲ ಮುಂದುವರಿದರೂ ತಾನು ಕೂತಕೂತಲ್ಲೇ ಒಡೆದು ಪುಡಿಯಾಗುವುದು ನಿಶ್ಚಿತ ಎಂದುಕೊಳ್ಳುವಷ್ಟು ಬಿಗಿಗೊಂಡಿದ್ದ. ಅವನು ಕುರ್ಚಿಯಲ್ಲಿ ಚಡಪಡಿಸುವ ರೀತಿಯನ್ನು ಕಂಡು ಆಡಬಾರದ್ದನ್ನೆಲ್ಲಿ ಆಡಿಬಿಡುವನೋ ಎಂದು ಆತಂಕಪಟ್ಟ ಬೆಹರಾಮ್ ತಾನೇ ಬಾಯಿಬಿಟ್ಟ:
“ನೋಡಿ ಇವರೆ, ಈ ವಿಷಯದಲ್ಲಿನ ಜವಾಬ್ದಾರಿಯನ್ನು ನನಗೆ ಬಿಡಿ. ನೀವೇ ಹೇಳಿರದಿದ್ದರೂ ನಿಮ್ಮನ್ನು ಇಲ್ಲಿಗೆ ಯಾರು ಕಳಿಸಿರಬಹುದು, ಇಲ್ಲಿಗೇ ಯಾಕೆ ಕಳಿಸಿರಬಹುದು ಎಂಬುದನ್ನು ಸರಿಯಾಗಿ ಊಹಿಸಬಲ್ಲೆ. ಅವರ ಭಯವನ್ನೂ ಅರ್ಥಮಾಡಿಕೊಳ್ಳಬಲ್ಲೆ. ಅವರಿಗೆ ತಿಳಿಸಿರಿ: ಝೋಪಡಪಟ್ಟಿಗಳ ಬಗ್ಗೆ ಈ ಹುಡುಗ ಒಟ್ಟುಮಾಡಿರಬಹುದಾದ ಮಾಹಿತಿಯಿಂದ ಯಾರಿಗೂ ಹಾನಿ ತಟ್ಟದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನನ್ನದೆಂದು. ಹಾಗಲ್ಲದೇನೆ ಈ ಹುಡುಗ ನಿಮ್ಮ ಗ್ಯಾಂಗಿನವ, ಯಾರೋ ಹಚ್ಚಿದ ಆಮಿಷದಿಂದಾಗಿ ನಿಮಗೆ ಪಿತೂರಿಯಾಗಿದ್ದಾನೆ, ಅವನನ್ನು ಕೂಡಲೇ ಒಪ್ಪಿಸದಿದ್ದರೆ ಆ ಆಮಿಷ ಹಚ್ಚಿದವನು ನಾನೇ ಎಂಬ ಗುಮಾನಿಗೆ ನಾನು ಗುರಿಯಾಗುತ್ತೇನೆ ಎಂಬಂತಹ ಧಮಕಿಗೆ ನಾನು ಬಗ್ಗುವುದು ಹೆಡ್ಡತನವಾದೀತು. ಈ ಎಳೆಯ ಪ್ರಾಯದ ಹುಡುಗನನ್ನು ಹಾನಿ ತಟ್ಟದಂತೆ ಕಾಪಾಡುವ ಜವಾಬ್ದಾರಿ ಕೂಡ ನನ್ನದೆಂದು ತಿಳಿದಿದ್ದೇನೆ. ಹೇಗೂ ನೀವು ನನ್ನನ್ನು ನೋಡಿದ್ದೀರಿ, ನಾನಿರುವ ಜಾಗವನ್ನೂ ನೋಡಿಕೊಂಡಿದ್ದೀರಿ. ನಿಮ್ಮ ಯಜಮಾನನಿಗೆ ನನ್ನ ಮಾತುಗಳಿಂದ ಸಮಾಧಾನವಾಗದೇ ಇದ್ದರೆ ಮತ್ತೆ ಬಂದು ನನ್ನನ್ನು ಕಾಣಬಹುದು. ನಾವೇನು ಓಡಿ ಹೋಗುವ ಜನವಲ್ಲ.”
“ಪೋಲೀಸರ ಆಸರೆಯನ್ನು ಪಡೆಯುವಂಥ ಜನವೂ ನೀವಲ್ಲ. ಅಂದರೆ ಪಡೆಯುವ ಸಾಹಸ ಮಾಡಬೇಡಿ ಎಂದು ಸೂಚನೆ ಕೊಡುತ್ತಿದ್ದೇವೆ. ಯಾಕೆಂದರೆ ಯಾವಾಗಲಾದರೂ ಒಮ್ಮೆ ಪಡೆಯಬಹುದಾದ ಆಸರೆ ಅದು; ಕಾಯಮ್ ಆಗಿ ಅಲ್ಲ ತಾನೇ! ಹುಡುಗನನ್ನು ಸದ್ಯ ಇಟ್ಟುಕೊಳ್ಳಿ. ಆದರೆ ಬಹಳ ಕಾಲ ನಮ್ಮನ್ನು ತಪ್ಪಿಸಿಕೊಂಡಿರಲಾರ. ಬರ್ತೇವೆ.”

ನಾಲ್ವರು ಅಪರಿಚಿತರು ಅನಿರೀಕ್ಷಿತವಾಗಿ ಬಂದು ಮನೆ ಹೊಕ್ಕ ಬಗೆ, ಬಂದ ಮೇಲೆ ಮಾತನಾಡಿಸಿದ ಬಗೆ, ತಿರುಗಿ ಹೋಗುವಾಗಲೂ ನೆಲದ ಮೇಲೆ ಬೂಟುಗಳಿಂದ ಸದ್ದು ಎಬ್ಬಿಸಿದ ಬಗೆ ಮನೆಯೊಳಗಿನ ಪ್ರತಿಯೊಬ್ಬರ ಮನಸ್ಸಿನಲ್ಲೂ ಒಂದೇ ಹೊತ್ತಿಗೆ ಹಲವು ಚಿತ್ರಗಳನ್ನು ಮೂಡಿಸಲು ಕಾರಣವಾದರೂ, ಆ ಚಿತ್ರಗಳ ಪರಿಣಾಮ ಕರುಣಾಕರನ್‌ನ ಪಾಲಿಗೆ ಮಾತ್ರ ಒಂದೇ ಆಗಿತ್ತು: ಬಂದವರು ಮನೆಯ ಹೊರಗೆ ಬಿದ್ದಿದ್ದೇ ತಡ ಪಾರ್ವತಿ, ಶಿರೀನ್, ಅವಳ ತಾಯಿ-ಮೂವರು ಅವನನ್ನು ಸುತ್ತುವರಿದು ನಿಂತರು. ಬೆಹರಾಮ್ ಕಟ್ಟಡದ ಆರೂ ಮಜಲುಗಳು ಜನಕ್ಕೆ ಕೇಳಿಸುವಷ್ಟು ದೊಡ್ಡ ದನಿಯಲ್ಲಿ “ಬೇಡಾ,” ಎಂದು ಆಕ್ರೋಶ ಮಾಡುತ್ತಿರುವಾಗಲೂ ಅವನನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ, ‘ಇನ್ನು ನಾವು ಸುಮ್ಮಗುಳಿಯುವುದು ಶಕ್ಯವಿಲ್ಲ,’ ಎಂಬಂತೆಯೋ, ‘ಈವರೆಗೂ ಹೆಸರನ್ನೂ ಕೂಡ ಕೇಳಿ ಗೊತ್ತಿರದ ಹಾದಿಹೋಕ ಹುಡುಗನನ್ನು ಹೀಗೆ ಏಕಾ‌ಏಕಿ ಮನೆ ಹೊಗಲು ಬಿಟ್ಟು ನಮ್ಮ ಜೀವಕ್ಕೆ ಧಕ್ಕೆ ತಂದುಕೊಳ್ಳಲು ಸಿದ್ಧರಿಲ್ಲ,’ ಎಂಬಂತೆಯೋ ಗವಗವ ಮಾತನಾಡುತ್ತ ಕರುಣಾಕರನ್ ಮೇಲೆ ಮುಗಿಬಿದ್ದರು. ಕರುಣಾಕರನ್ ಕಂಗಾಲಾಗಿ ಅಲ್ಲಿಂದ ಓಟ ಕಿತ್ತ. ಜಿನ್ನೆಯ ಮೆಟ್ಟಿಲುಗಳ ಮೇಲೆ ಮುಗ್ಗುರಿಸಿ ಬೀಳಬಹುದೆಂಬುದರ ಪರಿವೆಯೆ ಇಲ್ಲದೆ ಬೆಹರಾಮ್-“ತಡೆ, ಕರುಣಾಕರನ್, ತಡೆ,” ಎನ್ನುತ್ತ ಕಾಲಲ್ಲಿ ಮೆಟ್ಟಿದ ಪ್ಲ್ಯಾಸ್ಟಿಕ್ ಸ್ಲಿಪ್ಪರ್ಸ್ಗಳಲ್ಲೇ ಅವನ ಹಿಂದೆಯೇ ರಸ್ತೆಯವರೆಗೂ ಓಡಿಹೋದ. ಅವನು ಕತ್ತಲಲ್ಲಿ ಸೇರಿ ಕಾಣದಾಗುವವರೆಗೂ ನೋಡುತ್ತ ನಿಂತವನು ಹಿಂತಿರುಗಿ ಮನೆ ಸೇರುವಷ್ಟರಲ್ಲಿ ಮಾತನಾಡುವ ಬಲವನ್ನೇ ಕಳಕೊಂಡಹಾಗೆ, ಯಾರೊಡನೆಯೂ ಮಾತನಾಡದೇ ನೇರವಾಗಿ ಬಾಲ್ಕನಿಗೆ ನಡೆದವನು ಅಲ್ಲಿಯ ಕುರ್ಚಿಯೊಂದರಲ್ಲಿ ಕುಸಿದು ಎರಡೂ ಕೈಗಳಿಂದ ಮೋರೆ ಮುಚ್ಚಿಕೊಂಡು ಕುಳಿತುಬಿಟ್ಟ.

ಅಧ್ಯಾಯ ಮೂರು

ಕರುಣಾಕರನ್ ಡೊಂಬಿವ್ಲಿಯ ತನ್ನ ಕೋಣೆಯನ್ನು ತಲುಪುವ ಹೊತ್ತಿಗೆ ಮಧ್ಯರಾತ್ರಿ ಮೀರಿತ್ತು. ಮನೆ ತಲುಪಲು ತನಗೆ ಎಂದಿಗಿಂತ ಬಹಳ ತಡವಾಗಿದೆ ಎಂಬುದರ ಬಗೆಗಾಗಲಿ, ತಡವಾಗಿದ್ದರೆ ಯಾಕೆ ತಡವಾಯಿತು ಎಂಬುದರ ಬಗೆಗಾಗಲಿ ವಿಚಾರ ಮಾಡುವ ಸ್ಥಿತಿಯಲ್ಲಿ ಅವನು ಇರಲಿಲ್ಲ. ರಸ್ತೆಗಳಲ್ಲಿ ಉರಿಯುವ ಮ್ಯುನಿಸಿಪಾಲಿಟಿಯ ಕುರುಡುದೀಪಗಳು, ಅವುಗಳ ದಾರುಣಸ್ಥಿತಿಯನ್ನು ಒತ್ತಿಹೇಳುವ ವಾತಾವರಣದೊಳಗಿನ ನಿಶ್ಶಬ್ದ-ಎರಡೂ ವಿಚಾರ ಮಾಡುವಂಥ ಮನೋವ್ಯಾಪಾರಕ್ಕೆ ಪುಟಕೊಡುವಂತಹವಾಗಿರಲಿಲ್ಲ. ತನ್ನ ಮನೆಯಿದ್ದ ಕೇರಿಯನ್ನು ಸೇರುವಾಗಿನ ಒಂದೇ ಒಂದು ಅನ್ನಿಸಿಕೆಯೆಂದರೆ: ಆದಷ್ಟು ಬೇಗ ಕೋಣೆ ಸೇರಬೇಕು, ಹಾಸಿಗೆಯಲ್ಲಿ ನಿಡಿದಾಗಿ ಮೈಚಾಚಿ ಗಡದ್ದಾಗಿ ಮಲಗಬೇಕು! ತನಗೆ ಅತೀವ ದಣಿವಾಗಿದೆ ಎಂದು ಸ್ಪಷ್ಟವಾಗಿ ಹೊಳೆಯುವ ಹೊತ್ತಿಗೆ, ತಾನು ಎಷ್ಟೋ ಗಂಟೆಗಳವರೆಗೆ ಓಡಿದ್ದು ಈ ದಣಿವಿಗೆ ಕಾರಣವಾಗಿದೆ ಎಂದೂ ಹೊಳೆಯಿತು. ಯಾಕೆ ಓಡಿದ್ದೆ? ಎಲ್ಲಿಂದ ಎಲ್ಲಿಗೆ ಓಡಿದ್ದೆ? ಕೂಡಲೇ ನೆನಪಾಗುವುದು ಶಕ್ಯವಿರಲಿಲ್ಲ. ಓಡಿದ್ದಂತೂ ಹೌದು. ಕೇವಲ ಮನೆ ತಲುಪುವ ತ್ವರೆಯಿಂದಾಗಿ ಓಡಿರಲಿಲ್ಲ ಎನ್ನುವುದೂ ನಿಜ, ಯಾಕೆಂದರೆ ಈಗಲೂ ಓಡಬೇಕು ಅನ್ನಿಸುತ್ತಿತ್ತು. ದಣಿವು ಹತ್ತಿದ್ದರಿಂದಲೇ ತಾನು ಮನೆಗೆ ಬಂದೆನೇ ಹೊರತು ಮನೆಗೆ ಬರುವ ಅವಸರದಿಂದಾಗಿ ಓಡಿಬಂದಿರಲಿಲ್ಲ. ಇಷ್ಟುಹೊತ್ತಿಗೆ ಕಟ್ಟಡದೊಳಗಿನ ಎಲ್ಲ ಮನೆಗಳ ಜನವೂ ನಿದ್ದೆಹೋಗಿರಬೇಕು. ಇದೀಗ ದಾಟಿಬಂದ ಹಲವು ಕಟ್ಟಡಗಳಲ್ಲಿಯ ದೀಪಗಳೆಲ್ಲ ಆರಿದ್ದುವು.

ಎಲ್ಲರೂ ನಿದ್ದೆಹೋಗಿರುವ ಹೊತ್ತಿಗೇ ಕೋಣೆ ಸೇರುವುದರಲ್ಲಿ ಸಮಾಧಾನ ಕಂಡಂತಿದ್ದ ಕರುಣಾಕರನ್ ಅಂಥ ಭಾವನೆಯನ್ನು ಹೊತ್ತು ಮನೆಯ ಕಂಪೌಂಡಿನಲ್ಲಿ ಕಾಲಿಡುತ್ತಿರುವಾಗ ನಿದ್ದೆ ದಣಿವುಗಳನ್ನು ಸಂಪೂರ್ಣವಾಗಿ ಮರೆಸುವಮಟ್ಟಿಗೆ ದಂಗುಬಡೆಸುವಂಥ ಸನ್ನಿವೇಶವೊಂದು ಅವನ ಬರವನ್ನು ಕಾದು ನಿಂತಂತಿತ್ತು: ಏನೋ ಕೋಲಾಹಲ-ಅದುವೂ ನೇರವಾಗಿ ಅವನಿಗೇ ಸಂಬಂಧಪಟ್ಟದ್ದು. ಅವನ ಮನೆಯೊಡತಿಯ ಮನೆಯಲ್ಲಿ ಮಾತ್ರವೇ ಅಲ್ಲ, ಕಟ್ಟಡದ ಉಳಿದ ಐದೂ ಮನೆಗಳ ಜನ ಕೂಡ ಎಚ್ಚರವಾಗಿದ್ದು ಕರುಣಾಕರನ್ನನ ಹಾದಿಯನ್ನೇ ಕಾಯುತ್ತಿದ್ದಹಾಗಿತ್ತು. ಅವನು ತಳಮಜಲೆಯ ತನ್ನ ಮನೆಯ ಅಂಗಳದಲ್ಲಿ ಕಾಲಿರಿಸುವ ಪುರಸತ್ತಿಲ್ಲ, ನೆರೆದ ಜನವೆಲ್ಲ ಅವನ ಮೇಲೆ ಎರಗಿದ ರೀತಿಗೆ ಸಂಜೆಯಿಂದಲೂ ತನ್ನನ್ನು ಓಡಿಸಲು ಕಾರಣವಾದ ಸನ್ನಿವೇಶದಂತಹದೇ ಸನ್ನಿವೇಶ ಮತ್ತೆ ಇಲ್ಲಿಯೂ ಉದ್ಭವಿಸಿದೆ ಎಂಬುದು ಹೊಳೆದು ಹೋದರೂ ತಾನು ಒಂದು ಮುಗ್ಧ ಹುಚ್ಚಿನ ಭರದಲ್ಲಿ ತೊಡಗಿಸಿಕೊಂಡ ಉಪದ್ವ್ಯಾಪ ಈ ಒಂದು ರಾತ್ರಿಯಲ್ಲಿ ತನ್ನ ಶಿಖರಾವಸ್ಥೆಯನ್ನು ಮುಟ್ಟುತ್ತಿದ್ದ ಬಗೆಯ ಸರಿಯಾದ ಅರ್ಥವನ್ನು ಗ್ರಹಿಸುವ ಸ್ಥಿತಿಯಲ್ಲಿ ಅವನು ಇರಲಿಲ್ಲ. ತನ್ನನ್ನು ಸುತ್ತುವರಿದು ನಿಂತ ಜನ ಎಬ್ಬಿಸುತ್ತಿದ್ದ ಕೋಲಾಹಲ ರಾತ್ರಿಯ ಊಟವನ್ನು ಮಾಡಿರದ ಹೊಟ್ಟೆಯೊಳಗಿನಿಂದಲೇ-ಕುಲುಕುಲು ನಡುಗುತ್ತಿದ್ದ ಕರುಳುಗಳೊಳಗಿಂದಲೇ-ಎದ್ದುಬಂದು, ಭಗಭಗ ಉರಿಯುವ ಪಂಜು, ಹಿಲಾಲುಗಳು, ಕಿವಿಗಡಚಿಕ್ಕುವಂತೆ ಬಡೆದುಕೊಳ್ಳುತ್ತಿದ್ದ ಸಂಬಾಳ, ತಮ್ಮಟೆ, ಜಾಗಂಟೆಗಳು ಒಂದನ್ನೇ ಒದರಿ ಹೇಳುತ್ತಿದ್ದುವು: ಹೊರಡು ಎನ್ನುವ ಹಾಗೆ, ಈಗಿಂದೀಗ ನಿನ್ನ ಗಂಟುಮೂಟೆ ಕಟ್ಟಿಕೊಂಡು ಓಡು ಎನ್ನುವ ಹಾಗೆ, ತಡ ಮಾಡಬೇಡ ಎನ್ನುವ ಹಾಗೆ.

ಯಾರೋ ಬೀಗ ಮುರಿದು ಬಾಗಿಲು ತೆರೆದಂತಿದ್ದ ತನ್ನ ಕೋಣೆಯೊಳಗಿನ ಅಸ್ತವ್ಯಸ್ತ ಸ್ಥಿತಿಯನ್ನು ಕಂಡಮೇಲೆ ಮಾತ್ರ ಸುತ್ತಲಿನ ಜನಕ್ಕೆ ಬಂದ ಸಿಟ್ಟಿನ ಕಾರಣ ಹೊಳೆಯದಿರಲಿಲ್ಲ. ಬೆಹರಾಮನ ಮನೆಯಲ್ಲಿ ಅವನು ಕಂಡ ಜನ ಇಲ್ಲಿಗೂ ಬಂದಿದ್ದರು. ಬೆಹರಾಮನ ಇದಿರು ಅವನ ಬಗ್ಗೆ ಆಡಿದ ಮಾತನ್ನು ಇಲ್ಲಿಯೂ ಆಡಿದ್ದರು. ತಮ್ಮ ಗ್ಯಾಂಗಿನಿಂದ ಪಿತೂರಿಯಾದವನನ್ನು ಇಲ್ಲಿ ನಿಲ್ಲಿಸಿಕೊಂಡರೆ ಕಟ್ಟಡದ ಜನಕ್ಕೆ ಓಳಿತಾಗಲಿಕ್ಕಿಲ್ಲ ಎಂಬಂತಹ ಆಕ್ರೋಶ ತುಂಬಿದ ಮಾತುಗಳಲ್ಲಿ ಬೆದರಿಸುತ್ತ ಧಿಮಿಧಿಮಿ ಹಾರಾಡಿದ್ದರು. ಕೋಣೆಗೆ ಹಾಕಿದ ಬೀಗ ಮುರಿದು ಒಳನುಗ್ಗಿ ಯಾತಕ್ಕಾಗಿಯೋ ಹುಡುಕಾಡಿ, ಕೊನೆಗೊಮ್ಮೆ ಅದು ಸಿಕ್ಕಿತೆಂಬ ಸಂಭ್ರಮದಲ್ಲಿ ಹೊರಟುಹೋಗಿದ್ದರು. ಕಳ್ಳಭಟ್ಟಿಯವರೋ! ಕಳ್ಳಸಾಗಣೆದಾರರೋ! ಇಂಥವರೊಂದಿಗೆ ಸೇರಿಕೊಂಡ, ಸರಿಯಾದ ಪರಿಚಯವೂ ಇಲ್ಲದ, ಈ ಲಫಂಗ ಹುಡುಗನನ್ನು ಬರಿಯ ಬಾಡಿಗೆಯ ಹಣದ ಆಸೆಗಾಗಿ ತಮ್ಮ ಮನೆಯಲ್ಲಿ ಆಶ್ರಯವಿತ್ತವರ ಮೇಲೆಯೂ ಜನ ಸಿಟ್ಟಾಗಿದ್ದರು. ಈಗ ಬಂದ ಜನಕ್ಕೂ ತನಗೂ ಯಾವ ಸಂಬಂಧವೂ ಇಲ್ಲ ಎನ್ನಬೇಕು ಅನ್ನಿಸಿತು, ಕರುಣಾಕರನ್‌ಗೆ. ಆದರೆ ಇಂತಹದೇನೋ ಇದೆಯೆಂದೇ ಹೀಗೆ ಮಧ್ಯರಾತ್ರಿ ಕಳೆದಮೇಲೆ ಕಳ್ಳಹೆಜ್ಜೆಯಲ್ಲಿ ತಾನುಕೋಣೆ ಸೇರುತ್ತಿದ್ದೇನೆ ಎಂದು ಇವರೆಲ್ಲ ತಪ್ಪು ತಿಳಿಯಲು ಕಾರಣವಾದ ಸನ್ನಿವೇಶದಲ್ಲಿ ಬಾಯಿ ತೆರೆಯುವ ಧೈರ್ಯವಾಗದಾಯಿತು. ಹಸಿದ ಹೊಟ್ಟೆ, ಎಲ್ಲಿಂದ ಎಲ್ಲಿಗೋ ಓಡಿಹೋದದ್ದರಿಂದ ಹತ್ತಿದ ದಣಿವು, ಅಪರಾತ್ರಿಯಲ್ಲಿ ತನ್ನ ಬಗ್ಗೆ ಪ್ರಕ್ಷುಬ್ಧಗೊಂಡ ಜನ: ಕರುಣಾಕರನ್ ಮತ್ತೆ ಓಡಲು ಶುರುಮಾಡಿದ್ದ. ಇಲ್ಲಿಗೆ ಬರುವಾಗ ತಂದ, ರೆಕ್ಸಿನ್ ಹೊದಿಕೆಯುಳ್ಳ, ಫಾಯ್ಬರ್ ರಟ್ಟಿನಲ್ಲಿ ಸಣ್ಣ ಸೂಟ್ ಕೇಸಿನಲ್ಲಿ ರೂಮಿನೊಳಗಿನ ತನ್ನ ಸಾಮಾನು ಎಲ್ಲವನ್ನೂ ಕೈಗೆ ಬಂದ ಕ್ರಮದಲ್ಲಿ ತುರುಕಿ ಮನೆ ಬಿಟ್ಟಿದ್ದ. ಒಳಗಿಂದ ಎದ್ದುಬರುತ್ತಿದ್ದ ಭಯ ಸಾವಿರ ಪ್ರತಿಮೆಗಳಾಗುವ ಪ್ರಕ್ರಿಯೆಯೇ ಓಡಲುಬೇಕಾದ ಶಕ್ತಿ ಒದಗಿಸುತ್ತಿತ್ತು ಎನ್ನುವ ಹಾಗೆ ಓಡುತ್ತಿದ್ದ. ಆ ಪ್ರಕ್ರಿಯೆಯೇ ಹೆಜ್ಜೆಗಳ ದಿಕ್ಕನ್ನು ನಿರ್ಧರಿಸುತ್ತಿತ್ತು ಎನ್ನುವ ಹಾಗೆ ಡೊಂಬಿವ್ಲಿ ಸ್ಟೇಶನ್ನಿನ ಕಡೆಗೇ ಬೀಳುತ್ತಿದ್ದುವು. ವೀಟೀ ಕಡೆಗೆ ಮೋರೆ ಮಾಡಿದ ಟ್ರೇನ್ ಒಂದು ಸ್ಟೇಶನ್ನಿಗೆ ಬರುತ್ತಿದ್ದುದು ಲಕ್ಷ್ಯಕ್ಕೆ ಬಂದಕೂಡಲೇ ತನ್ನ ಶಕ್ತಿಯ ಸರ್ವಸ್ವವನ್ನೂ ಸ್ಟೇಶ್ನ್ನಿಗೆ ತಲುಪುವ ಕ್ರಿಯೆಯಲ್ಲಿ ತೊಡಗಿಸಿದವನ ಹಾಗೆ ಹತ್ತಿದ ದಣಿವಿನದಾಗಲಿ, ಕೈಯಲ್ಲಿ ಹೊತ್ತ ಸೂಟ್‌ಕೇಸಿನ ಭಾರದ್ದಾಗಲಿ ಪರಿವೆ ಮಾಡದೆ. ಓಟದ ವೇಗವನ್ನು ಅದರ ಪರಕಾಷ್ಠೆಗೆ ಒಯ್ದಿದ್ದ.

ಪ್ಲ್ಯಾಟ್‌ಫಾರ್ಮ ಸೇರುವ ಹೊತ್ತಿಗೆ ಟ್ರೇನ್ ಹೊರಟುಹೋಗಿ ಕೆಲವು ನಿಮಿಷಗಳೇ ಕಳೆದುಹೋಗಿದ್ದುವು. ತನ್ನ ಕಡೆದೆ ಕುಂಡೆ ತಿರುಗಿಸಿ ನಡೆದವನ ಹಾಗೆ ದೂರ ಸರಿಯುತ್ತಿದ್ದ ಟ್ರೇನಿನ ಹಿಂಭಾಗವನ್ನು ನೋಡುತ್ತಿದ್ದ ಹಾಗೆ ತನ್ನ ಆಗಿನ ಕಂಗಾಲ ಸ್ಥಿತಿಯಲ್ಲೂ ನಕ್ಕುಬಿಡಬೇಕು ಅನ್ನಿಸಿತು. ಆದರೆ ಹತ್ತಿದ ದಣಿವಿನಿಂದಲೋ ಎಂಬಂತೆ ನಕ್ಕುಬಿಡಬೇಕು ಎಂದುಕೊಂಡದ್ದು ಬಿಕ್ಕಳಿಕೆಯಾಗಿ ರೂಪಾಂತರಗೊಳ್ಳುತ್ತ ಮುಂದಿನ ಕೆಲಹೊತ್ತಿನಲ್ಲೇ ಕೋಡಿವರಿದ ಅಳುವಾಗಿತ್ತು. ಆ ಹೊತ್ತಿಗೆ ಕರುಣಾಕರನ್ ನಿರ್ಜನವಾದ ಪ್ಲ್ಯಾಟ್‌ಫಾರ್ಮಿನ ಬೆಂಚೊಂದರ ಮೇಲೆ ಕುಸಿದಿದ್ದ. ಕುಸಿದಲ್ಲೇ ಒರಗಿದ್ದ. ಒರಗಿದಲ್ಲೇ ಇದೀಗ ಹೊರಟುಹೋದದ್ದು ರಾತ್ರಿಯ ಕೊನೆಯ ಗಾಡಿ ವೀಟೀಗೆ ಹೋಗುವುದಾದರೆ ಬೆಳಗಿನವರೆಗೂ ಹಾದಿ ಕಾಯುವುದನ್ನು ಬಿಟ್ಟು ಬೇರೆ ಉಪಾಯವಿಲ್ಲ ಎಂಬುದನ್ನು ಅರಿವಿಗೆ ತಂದುಕೊಳ್ಳುತ್ತಿರುವಷ್ಟರಲ್ಲಿ ನಿದ್ದೆಗೆ ತಿರುಗುವುದರಲ್ಲಿದ್ದ ದಣಿವು ಬಗೆಬಗೆಯ ಬಣ್ಣಗಳುಳ್ಳ, ವಾಸನೆಯುಳ್ಳ, ಸದ್ದು ಮಾಡುವ ಆಕೃತಿಗಳಾಗುತ್ತ ಸಂಜೆಯಿಂದಲೂ, ಅಷ್ಟೇಕೆ, ಕೇರಳ ಬಿಟ್ಟಂದಿನಿಂದಲೂ ತಾನು ಅನುಭವಿಸುತ್ತ ಬಂದುದೆಲ್ಲದರ ಅರ್ಥವನ್ನು ಹೊಳೆಯಿಸಿಬಿಟ್ಟಿತ್ತು. ತನ್ನ ಅಣ್ಣನ ಕೊಲೆಯಾದದ್ದು ಕೊನೆಗೂ ನಿಜ! ಮೂರು ವರ್ಷಗಳ ಹಿಂದೆ ಅಪ್ಪನಿಗೆ ಬಂದ ಈ ಮೂಕಪತ್ರ ಬಣ್ಣಿಸಿದ ಭೀಕರ ಘಟನೆ ನಿಜಕ್ಕೂ ನಡೆದು ಹೋದದ್ದಾಗಿತ್ತು.

ಬೆಹರಾಮನ ಮನೆಯಲ್ಲಿ ಕಂಡ ಆ ನಾಲ್ವರು ಅಪರಿಚಿತರು ಕೆಲವೊಮ್ಮೆ ಗುಜರಾಥಿಯಲ್ಲಿ, ಕೆಲವೊಮ್ಮೆ ಹಿಂದಿಯಲ್ಲಿ ಮಾತನಾಡಿದ್ದರು. ಗುಜರಾಥಿ ಕರುಣಾಕರನ್‌ಗೆ ಎಳ್ಳಷ್ಟೂ ತಿಳಿಯದ ಭಾಷೆ. ಹಿಂದಿಯ ಒಂದೆರಡು ಶಬ್ದಗಳು ಅರ್ಥ ಹೊಳೆಯಿತು ಎನ್ನುವಂಥ ಭಾವನೆ ಹುಟ್ಟಿಸುವಮಟ್ಟಿಗೆ ಕೇಳಿಗೊತ್ತಿದ್ದುವು. ಯಾರು ಯಾವ ಭಾಷೆಯಲ್ಲಿ ಮಾತನಾಡಿದ್ದರೆನ್ನುವುದು ನೆನಪಿರುವುದು ಶಕ್ಯವಿರಲಿಲ್ಲ. ನಾಲ್ಕು ಬೇರೆಬೇರೆ ಜನ ಮಾತನಾಡುತ್ತಿದ್ದಾರೆ ಎಂದು ಅನ್ನಿಸಿರಲೇ ಇಲ್ಲ! ಆಡಿದ್ದು ಕಿವಿಯ ಮೇಲೆ ಬೀಳುವ ಶಬ್ದಗಳಾಗುವ ಬದಲು ಗಾಳಿಯಲ್ಲಿ ಅಲ್ಲಾಡುವ ಅಚ್ಚಬಿಳಿಯ ಬಟ್ಟೆಯಂತಹದೇನೋ ಆಗುತ್ತ ಕಣ್ಣು ತುಂಬಿ ನಿಂತಂತಹ ಭಾಸ, ಆ ‘ಅದು’ ಮಾಡುತ್ತಿದ್ದ ಸದ್ದೇ ಭೀಕರವಾದ ಸುದ್ದಿಯನ್ನು ಮುಟ್ಟಿಸಿತು ಎನ್ನುವಂತಹ ಭ್ರಮೆ; ಬೆಹರಾಮನ ಮನೆಯಿಂದ ಅವನು ಓಟ ಕಿತ್ತಿದ್ದು ಅರ್ಥವಾಗದ ಭಾಷೆಯಲ್ಲಿ ಮಾತನಾಡುತ್ತಿದ್ದ ಆ ನಾಲ್ವರಿಗೆ ಹೆದರಿ ಅಲ್ಲವೇ ಅಲ್ಲವಾಗಿತ್ತು. ಅವನ ಮನೆಯ ಹೆಂಗಸರು ತನ್ನ ಮೇಲೆ ಮುಗಿಬಿದ್ದ ಕ್ರೂರ ರೀತಿಗೆ ಅಂಜಿಯೂ ಅಲ್ಲವಾಗಿತ್ತು. ಬೆಳ್ಳಗಿನದೇನೋ ಕಿವಿಯಲ್ಲಿ ಅಣ್ಣನ ಕೊಲೆಯ ಸುದ್ದಿಯನ್ನು ಉಸುರಿಸಿದ ಹಾಗೆ ಕೇಳಿಸಿದಾಗ ಕುರ್ಚಿ ಬಿಟ್ಟು ಭಡಕ್ಕನೆ ಎದ್ದು ನಿಂತಿದ್ದ.

ಬೆಹರಾಮನ ಮನೆಯಿಂದ ಹೊರಗೆ ಬೀಳುತ್ತಲೇ ಕರುಣಾಕರನ್ ನೇರವಾಗಿ, ಅವನು ಈವರೆಗೂ ಕಂಡಿರದ ‘ಲ್ಯಾಂಡ್ಸ್ ಎಂಡ್’ ಕಡೆಗೆ-ಅಂದರೆ, ಸಂಜೆ ಅವನು ಇಳಿದ ಬಸ್‌ಸ್ಟಾಪಿನ ವಿರುದ್ಧ ದಿಕ್ಕಿನಲ್ಲಿ-ಓಡಿದ್ದ. ಹೊತ್ತು ಮುಳುಗಿ ಬಹಳ ಹೊತ್ತಾಗಿದ್ದರಿಂದ ರಸ್ತೆಯಲ್ಲಿ ಓಡಾಡುವ ಜನರ ಮೋರೆಗಳ ಗುರುತು ಹಿಡಿಯುವುದು ಕಠಿಣವಾಗಿತ್ತು. ಆದರೆ ಹಾಗೆ ತನ್ನ ಗುರುತು ಹಿಡಿದಾರೆಂಬ ಅರಿವು ಅವನಿಗಿರಲಿಲ್ಲ; ಅಚಾನಕವಾಗಿ ಮನೆ ಹೊಕ್ಕು ಅಣ್ಣನ ಕೊಲೆಯ ಬಗ್ಗೆ, ಅದರ ತನಿಖೆ ನಡೆಸುತ್ತಿದ್ದ ತನ್ನ ಬಗ್ಗೆ, ಗಾಳಿಯಲ್ಲಿ ಅಲ್ಲಾಡುವ ಬಿಳಿಯ ಬಟ್ಟೆಯಂಥ ಮಾತನ್ನಾಡಿ ಹೊರಟುಹೋದವರು ಇಲ್ಲೆಲ್ಲೋ ಹಾದಿಯ ಬದಿಯಲ್ಲಿ, ಬಸ್‌ಸ್ಟಾಪಿನಲ್ಲಿ ತನ್ನ ಹಾದಿ ಕಾಯುತ್ತಿರಬಹುದೆಂಬುದರ ಬಗ್ಗೆ ವಿಚಾರ ಮಾಡಿದವನೇ ಅಲ್ಲ. ಆದರೆ ಅವನು ಆ ಕ್ಷಣಕ್ಕೆ ಹಿಡಿದ ದಿಕ್ಕನ್ನು ನೋಡಿದರೆ ಅವನ ಪ್ರಜ್ಞೆಯ ಆಚೆಯದೇನೋ ಅವರಿಂದ ದೂರವಾಗುವ ದಿಕ್ಕಿನಲ್ಲೇ ಅವನನ್ನು ಓಡಲು ಹಚ್ಚಿದಂತಿತ್ತು. ‘ಲ್ಯಾಂಡ್ಸ್ ಎಂಡ್’ನವರೆಗೂ ಓಡಿಹೋದವನು, ಅಪಾರ ಜಲರಾಶಿಯ ಅಂಚಿನಲ್ಲಿ ಎದ್ದು ನಿಂತ ಕಪ್ಪು ಶಿಲೆಗಳ ಶಿಖರದಲ್ಲಿ ಕಟ್ಟಿಸಿದ ಅರ್ಧಗೋಲಾಕಾರದ ಕಟ್ಟೆಯ ಗಿಡ್ಡ ಗೋಡೆಯ ಮೇಲೆ ಹತ್ತಿ ಏದುಸಿರು ಬಿಡುತ್ತ ಒಬ್ಬನೇ ಕುಳಿತುಕೊಂಡ. ಕಟ್ಟೆ ಇಷ್ಟು ಹೊತ್ತಿಗಾಗಲೇ ನಿರ್ಜನವಾದದ್ದನ್ನು ಕಂಡು ಬಹುಶಃ ಕತ್ತಲೆಯಾದಮೇಲೆ ಈ ಜಾಗ ಕೂರಲು ಸುರಕ್ಷಿತವಾದುದಲ್ಲವೇನೋ ಎಂಬ ವಿಚಾರ ಬಂದರೂ ಕೂತಲ್ಲಿಂದ ಏಳಬೇಕು ಅನ್ನಿಸಲಿಲ್ಲ; ತಾನು ಸದ್ಯ ಸಿಲುಕಿಕೊಂಡ ಅನಿರೀಕ್ಷಿತ ಸನ್ನಿವೇಶದಿಂದ ರಕ್ಷಿಸಿಕೊಳ್ಳಲು ಈ ಜಾಗಕ್ಕಿಂತ ಭದ್ರವಾದ ಜಾಗವಿಲ್ಲ ಎಂದುಕೊಂಡವನಹಾಗೆ ಗೋಡೆಯ ಕಲ್ಲೊಂದಕ್ಕೆ ಗಟ್ಟಿಯಾಗಿ ಹಿಡಿದು ಕೂತೇ ಉಳಿದ. ಕರುಳೊಳಗೆ ಸೇರಿಕೊಳ್ಳತೊಡಗಿದ ನಡುಕಕ್ಕೆ ಗಾಳಿಯಲ್ಲಿ ಮೂಡಹತ್ತಿದ ತಂಪು ಒಂದೇ ಕಾರಣವೆಂದು ತೋರಲಿಲ್ಲ. ಮುಂಬಯಿಗೆ ಬಂದು ಆರು ತಿಂಗಳಾಗುತ್ತ ಬಂದರೂ ಹೀಗೆ ಒಬ್ಬಂಟಿಯಾಗಿ ಸಮುದ್ರದ ಅಂಚಿನಲ್ಲಿ ಕೂತಿರಲಿಲ್ಲ. ಅರ್ಧವೃತ್ತಾಕಾರದ ಅದರ ದಂಡೆಯಲ್ಲಿ ಬಹು ದೂರದವರೆಗೂ ಹೊಳೆಯುತ್ತಿದ್ದ ದೀಪಗಳು; ಕಣ್ಣು ಹಾಯಿಸಿದ ಕಡೆಗಳಲ್ಲೆಲ್ಲ ಉಬ್ಬಸಪಡುವ ನೊರೆ ಕಾರದ ಕಪ್ಪು ನೀರು; ಚುಕ್ಕೆಗಳು ಮಿಂಚತೊಡಗಿದ ನಿರಭ್ರ ಆಕಾಶದ ಹಿನ್ನೆಲೆಯಲ್ಲಿ ಕಪ್ಪಿನ ರಾಶಿಯಾಗಿ ಕಾಣುತ್ತಿದ್ದ ಗುಡ್ಡದ ನೆತ್ತಿಯಲ್ಲಿ ಹಳೆಯ ಕೋಟೆಯೊಂದರ ಅವಶೇಷಗಳು. ಅವುಗಳೊಳಗಿಂದಲೇ ಎದ್ದುಬಂದು ಆಕಾಶದತ್ತ ನೆಗೆದಂತೆ ತೋರುವ ತಾಳೆ ಮರಗಳ ಕಪ್ಪು ಹಿಂಡು; ತುಸು ದೂರದಲ್ಲಿ ಈ ಗುಡ್ಡದಷ್ಟೇ ಎತ್ತರವಾದ, ಹಲವು ಮಜಲುಗಳುಳ್ಳ ಹೊಟೆಲ್ಲಿನ ಹಾಗೆ ತೋರುವ, ದೊಡ್ಡ ಕಟ್ಟಡವೊಂದರ ನೂರು ಕಿಡಕಿಗಳಿಂದ ಹೊರಬಿದ್ದ ವಿಚಿತ್ರ ಬೆಳಕು. ತೀರ ಪರಿಚಿತವಾದ ಪರಿಸರವಿಶೇಷಗಳೇ ಸೃಷ್ಟಿಸಿದ ಅಪರಿಚಿತ ವಿಶ್ವವೊಂದು ತನ್ನ ಸುತ್ತಲೂ ಎದ್ದು ನಿಂತುದನ್ನು ಕಂಡು ಮಾತಿಗೆ ನಿಲುಕದ್ದೇನೋ ಅಂತಃಕರಣವೆಲ್ಲವನ್ನೂ ವ್ಯಾಪಿಸಿಕೊಂಡುಬಿಟ್ಟಂತಾಗಿ ಜಿಗಿದಾಡಹತ್ತಿದ ಹೃದಯ ಬಾಯಿಗೇ ಬರುತ್ತದೆಯೇನೋ ಎಂದು ದಿಗಿಲಾಯಿತು. ಆಗ ಮಾತಿನಲ್ಲಿ ಹಿಡಿಯಲಾಗದ್ದನ್ನು ಓಟದಲ್ಲಿ ಹಿಡಿದಿಡುವೆನೆಂಬಂತೆ ಕೂತಲ್ಲಿಂದ ಮತ್ತೆ ಓಡತೊಡಗಿದ್ದ.

‘ಲ್ಯಾಂಡ್ಸ್ ಎಂಡ್’ನ ಆ ಕಟ್ಟೆಯನ್ನು ಇಳಿದವನೇ ಬ್ಯಾಂಡ್ ಸ್ಟ್ಯಾಂಡ್ ಇದಿರಿನ ಮೌಂಟ್ ಮೇರಿ ಚರ್ಚಿಗೆ ಹೋಗುವ-ತಾನು ಈವರೆಗೆ ಹತ್ತಿ ಗೊತ್ತಿರದ-ಸಾಲುಪಾವಟಿಗೆಗಳನ್ನು ಭರಭರನೆ ಹತ್ತಿ ಗುಡ್ಡದ ತುದಿ ಸೇರಿ ಎಡಕ್ಕೆ ಹೊರಳಿ, ಸರ್ಪಾಕಾರದಲ್ಲಿ ಗುಡ್ಡವನ್ನು ಬಳಸಿದ ದಾರಿಯಿಂದ ಇಳಿದು, ಗುಡ್ಡದ ಪೂರ್ವದಿಕ್ಕಿನ ಹಿಲ್‌ರೋಡ್ ಬಸ್‌ಸ್ಟಾಪನ್ನು ತಲುಪಿ, ಅಲ್ಲಿಂದ ಕ್ರಿಶ್ಚಿಯನ್ನರ ಹಲವು ಕೇರಿಗಳೊಳಗಿಂದ ಹಾದು, ತಾನು ಕಳೆದ ಮೂರು ತಿಂಗಳಿಂದಲೂ ಸುತ್ತಾಡುತ್ತಿದ್ದ ಝೋಪಡಪಟ್ಟಿಗೇ ಬಂದು ಮುಟ್ಟಿದ್ದ. ಇಲ್ಲಿಯ ಯಾವುದೋ ಗುಡಿಸಿಲೊಂದರಲ್ಲಿ ಅವನ ಅಣ್ಣ ವಾಸಿಸುತ್ತಿದ್ದಿರಬೇಕು. ಎಂಥ ಕೆಲಸ ಮಾಡಿ ಬುದುಕಿದ್ದನೋ ಅವನಿಗೆ ತಿಳಿಯುವುದು ಶಕ್ಯವಿರಲಿಲ್ಲ. ಅಪ್ಪನಿಗೆ ಮಾತ್ರ ತಪ್ಪದೇ ತಿಂಗಳಿಗೆ ಐವತ್ತು ರೂಪಾಯಿ ಕಳುಹಿಸುತ್ತಿದ್ದುದು ಗೊತ್ತಿತ್ತು. ಝೋಪಡಪಟ್ಟಿಯನ್ನು ನೋಡಿದ್ದೇ ಕರುಣಾಕರನಿಗೆ ಅದೇನಾಯಿತೋ-ಅಡ್ಡತಿಡ್ಡವಾಗಿ ಹಬ್ಬಿಕೊಂಡ ಝೋಪಡಿಗಳ ಸುತ್ತಲೂ ಏನನ್ನೋ ಹುಡುಕುವವನ ಹಾಗೆ ಓಡುತ್ತಿದ್ದ. ತನ್ನ ಅಣ್ಣನನ್ನು ಕೊಂದ ಈ ಮುಂಬಯಿ ಮನಸ್ಸಿನಲ್ಲಿ ಮೂಡಿಸಿದ್ದ ಭಯದ ಆಕೃತಿಯನ್ನು ಓಟದ ಮುಖಾಂತರ ಗ್ರಹಿಸುವ ಪ್ರಯತ್ನದಲ್ಲಿ ತೊಡಗಿದವನಹಾಗೆ ಓಡುತ್ತಿದ್ದ. ಓಡಿ ಓಡಿ ದಣಿದ ಮೇಲೆಯೇ ಎನ್ನುವುದಕ್ಕಿಂತ ಹೆಚ್ಚಾಗಿ ತನ್ನನ್ನು ಗಾಸಿಗೊಳಿಸುತ್ತಿದ್ದುದರ ಆಕಾರವನ್ನು ಓದಿ ಅನುಭವಿಸಿದ ಮೇಲೆಯೇ ಅನ್ನುವ ಹಾಗೆ ರಾಜರಸ್ತೆಗಳ ಕೂಟಸ್ಥಾನದಲ್ಲೊಮ್ಮೆ ನಿಂತ. ಝೋಪಡಪಟ್ಟಿಯಿದ್ದ ಈ ಕೇರಿಗೆ ಕೊನೆಯ ವಿದಾಯ ಹೇಳುವ ಮೊದಲೊಮ್ಮೆ ಎಲ್ಲವನ್ನೂ ಕಣ್ಣಿನಲ್ಲಿ ತುಂಬಿಕೊಳ್ಳುವ ಹಾಗೆ ಮತ್ತೆ ನೋಡಿ ಅಲ್ಲಿಂದ ಮತ್ತೆ ಓಟ ಕಿತ್ತ, ಸಾವಕಾಶ ಹೆಜ್ಜೆ ಹಾಕುವುದು ಸಾಧ್ಯವೇ ಇಲ್ಲ ಎನ್ನುವ ರೀತಿ. ಈಗ ಓಡಿದ್ದು ವೆಸ್ಟರ್ನ್ ಎಕ್ಸ್‌ಪ್ರೆಸ್ ಹೈವೇ ಗುಂಟ. ಮೊದಲ ಕೂಟಸ್ಥಾನದಲ್ಲಿ ಬಲಕ್ಕೆ ಹೊರಳಿ ‘ಡ್ರೈವ್ ಇನ್ ಥಿಯೇಟರ್’ ಇದಿರಿನ ದುರ್ಗಂಧ ಸೂಸುವ ಖಾಡಿಯಗುಂಟ ಸಾಗಿದ ರಸ್ತೆ ಸೇರಿ, ಧಾರಾವಿಯ-ಏಶಿಯಾ ಖಂಡದಲ್ಲಿಯೇ ದೊಡ್ಡದೆನಿಸಿಕೊಂಡ-ಝೋಪಡಪಟ್ಟಿಯನ್ನು ಹಾದುಹೋಗುವ ರಸ್ತೆಗೆ ಹೊರಳಿ ಓಡಾಡುತ್ತಿದ್ದಾಗ ಸುತ್ತಲಿನದೆಲ್ಲ ಕೇವಲ ಓಟವಾಗಿ ಪ್ರಜ್ಞೆಗೆ ಬರುತ್ತಿದ್ದ ಹಾಗಿತ್ತು. ಸಾಯನ್ ರೇಲ್ವೇ ಸ್ಟೇಶನ್ ತಲುಪಿದ ಮೇಲೆ ಇದು ಸಾಯನ್ ಸ್ಟೇಶನ್ ಎಂಬುದನ್ನು ಗ್ರಹಿಸಲು ಹೊತ್ತು ಹಿಡಿಯಿತು. ಹಾಗೆ ಗ್ರಹಿಸಿದ ಮೇಲೆಯೇ ತನ್ನ ಓಟ ತನ್ನನ್ನು ಇಲ್ಲಿಗೆ ತಂದು ಮುಟ್ಟಿಸಿದ್ದು ಡೊಂಬಿವ್ಲಿಗೆ ಹೋಗುವ ಟ್ರೇನ್ ಹತ್ತಿಸಲು ಎಂಬುದು ಹೊಳೆಯಿತು. ಆಗ ರಾತ್ರಿಯ ಹೊತ್ತು ದಾಟಿತ್ತು. ಹೊಟ್ಟೆಯೂ ಅತೀವ ಹಸಿದಿತ್ತು. ಆದರೆ ಊಟ ಮಾಡುವ ಮನಸ್ಸಿರಲಿಲ್ಲ. ಅನ್ಯ ಮನಸ್ಕನಾಗಿ ಟ್ರೇನು ಹತ್ತಿಕುಳಿತ ಕೂಡಲೇ ಕೋಣೆ ತಲುಪಿದ ಮೇಲೆ ತಾನು ಮಾಡಬೇಕಾದ ಮೊಟ್ಟ ಮೊದಲಿನ ಕೆಲಸವೆಂದರೆ ದಿನವೂ ಬರೆಯುತ್ತಿದ್ದ ಡಾಯರಿಯಲ್ಲಿ ಅಣ್ಣನ ಕೊಲೆಯ ಬಗ್ಗೆ ಬರೆಯುವುದು ಎಂದುಕೊಂಡು ಯೋಚಿಸುತ್ತಿದ್ದ: ಈ ಝೋಪಡಪಟ್ಟಿಗಳು, ಅವುಗಳ ಸುತ್ತಲಿನ ಆಕಾಶದೆತ್ತರದ ಕಟ್ಟಡಗಳು-ಇವು ಒಂದರೊಳಗೊಂದು ಹೆಣೆದುಕೊಂಡು ಸೃಷ್ಟಿಸಿರುವ ನಿಗೂಢ ಭಯಾನಕತೆಗೆ ಅಣ್ಣ ಬಲಿಯಾದ ದಾರುಣ ರೀತಿ ತನ್ನ ಡಾಯರಿಯ ಕೊನೆಯ ಅಧ್ಯಾಯವಾಗಬೇಕು; ತಾನು ಕಳೆದ ಮೂರು ತಿಂಗಳಿಂದಲೂ ತೊಡಗಿಸಿಕೊಂಡ ಚಟುವಟಿಕೆಯ ನಿಜವಾದ ಅರ್ಥವನ್ನು ವಿವರಿಸಿ ಲಲಿತಳಿಗೂ ಪತ್ರ ಬರೆಯಬೇಕು.

ಭಡಕ್ಕನೆ, ಹತ್ತಿದ ನಿದ್ದೆಯಿಂದ ಎಚ್ಚರವಾದವನಿಗೆ ತಾನಿನ್ನೂ ಡೊಂಬಿವ್ಲಿ ಸ್ಟೇಶನ್ನಿನ ಪ್ಲ್ಯಾಟ್‌ಫಾರ್ಮಿನ ಮೇಲಿನ ಬೆಂಚೊಂದರ ಮೇಲೆ ಅಡ್ಡವಾದಲ್ಲೇ ಇದ್ದೇನೆ ಎನ್ನುವ ಅರಿವು ಮೂಡಿತು. ಅದರ ಹಿಂದೆಯೇ ಹೊಳೆದು ಹೋದ ಇನ್ನೊಂದು ಸಂಗತಿಯನ್ನು ಒಪ್ಪಿಕೊಳ್ಳಲು ಅವನಿಗೆ ಕೂಡಲೇ ಸಾಧ್ಯವಾಗಲಿಲ್ಲ. ಅಣ್ಣನ ಹುಡುಕಾಟದಲ್ಲಿದ್ದವನ ಭಾವನೆಗಳಲ್ಲಿ ಮೂಡಿಬರುತ್ತಿದ್ದ ಮುಂಬಯಿ ನಗರದ ಬಗ್ಗೆ ಬರೆದ ಡಾಯರಿ ತಾನು ಬ್ಯಾಗಿನಲ್ಲಿ ತುರುಕಿದ ವಸ್ತುಗಳಲ್ಲಿ ಇದ್ದ ನೆನಪಿಲ್ಲ. ಮೇಜಿನ ಡ್ರಾವರಿಯಿಂದ ತೆಗೆದು ಬ್ಯಾಗಿನಲ್ಲಿ ತುರುಕಿದ ಪ್ರತಿಯೊಂದು ವಸ್ತು ನೆನಪಿಗೆ ಬಂತು. ಆದರೆ ಡಾಯರಿ ಕೈಗೆತ್ತಿಕೊಂಡದ್ದು ನೆನಪಾಗಲಿಲ್ಲ. ನೆನಪಾಗದೆ ಉಳಿದಷ್ಟೂ ಅದು ಡ್ರಾವರಿನಲ್ಲಿ ಇರಲಿಲ್ಲ ಎಂಬುದರ ಬಗೆಗೆ ಖಾತ್ರಿಯಾಗ ಹತ್ತಿತು. ಕೋಣೆಯ ಬೀಗ ಮುರಿದು ಒಳನುಗ್ಗಿದವರು ಅದಕ್ಕಾಗಿಯೇ ಬಂದಿರಬಹುದೆ? ಟಿಪ್ಪಣಿಗಳು ಮಲೆಯಾಳಮ್ ಭಾಷೆಯಲ್ಲಿದ್ದುವು. ಬೇಕಾದ ಮಾಹಿತಿ ಒಟ್ಟು ಮಾಡಿದ ಮೇಲೆ ಈ ಟಿಪ್ಪಣಿಗಳಿಂದಲೇ ಆಫೀಸಿನಲ್ಲಿ ಕೂತು ಇಂಗ್ಲೀಷಿನಲ್ಲಿ ತನ್ನ ರಿಪೋರ್ಟನ್ನು ಸಿದ್ಧಗೊಳಿಸುವವನಿದ್ದ. ವೃತ್ತಪತ್ರಿಕೆಯ ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ತನ್ನ ಯೋಗ್ಯತೆಯನ್ನು ಪರೀಕ್ಷೆ ಮಾಡಲು ತನಗೆ ಒಪ್ಪಿಸಿದ ಈ ಕೆಲಸ- ಮುಂಬಯಿ ಝೋಪಡಪಟ್ಟಿಗಳ ಮೇಲೆ ಬೆಳಕು ಚೆಲ್ಲ ಬಹುದಾದ ರಿಪೋರ್ಟ್-ಅಣ್ಣನ ಹುಡುಕಾಟಕ್ಕೆ ತಳಕು ಹಾಕಿಕೊಂಡದ್ದು ಬಾಂದ್ರಾಕ್ಕೆ ಬಂದ ಒಂದು ಆಕಸ್ಮಿಕ ಗಳಿಗೆಯಲ್ಲಿ. ತಾನು ಬೆಳಗ್ಗೆ ತಂಗಲಿದ್ದ ಜಾಗಕ್ಕೆ ಹೋದಕೂಡಲೇ ಬ್ಯಾಗಿನಲ್ಲಿ ಡಾಯರಿಯನ್ನು ಹುಡುಕಿ ನೋಡಬೇಕು ಎಂದು ಕೊಂಡರೂ ಅದು ಸಿಗುವ ಭರವಸೆ ತೋರಲಿಲ್ಲ. ಆದರೆ ಅದುವೇ ಒಂದು ಹೊಸ ನಿರ್ಧಾರಕ್ಕೆ ಆಹ್ವಾನವಾಯಿತು ‘ನೇರವಾಗಿ ಇಂಗ್ಲೀಷಿನಲ್ಲೇ ಬರೆಯುವೆ-ಈವರೆಗೆ ಇಂಥ ಕೊಲೆಗಳ ಬಗ್ಗೆ, ಝೋಪಡಿಪಟ್ಟಿಗಳ ಬಗ್ಗೆ, ಅಣ್ಣನ ಹುಡುಕಾಟದಲ್ಲಿದ್ದವನ ಮೇಲೇ ಮುಗಿಬೀಳುವ ನಮ್ಮೆಲ್ಲರ ಬಗ್ಗೆ ಯಾರೂ ಬರೆದಿರದ ರೀತಿಯಲ್ಲಿ ಬರೆಯುವೆ. ವಾಸ್ತವವನ್ನು ಕೇವಲ ಸುದ್ದಿಯನ್ನಾಗಿ ಸವಿಯುವ ಚಟವನ್ನು ಪೂರೈಸುವ ಮಸಾಲೇದಾರ ವರದಿಯನ್ನಾಗಲ್ಲ; ನಮ್ಮ ಹಾಗೆಯೇ ಇದ್ದ ಇನ್ನೊಬ್ಬನನ್ನು ಹಾಗೆ ಇದ್ದ ಕಾರಣಕ್ಕಾಗಿಯೇ ಕೊಲ್ಲಲು ಕಾರಣವಾಗುವ ವಾಸ್ತವವನ್ನು ಅದರ ಎಲ್ಲ ಬಣ್ಣ, ವಾಸನೆ, ಸದ್ದುಗಳೊಂದಿಗೆ ಎಲ್ಲರ ಮೋರೆಗೆ ಹಿಡಿಯುವೆ.’

ಪ್ಲ್ಯಾಟ್‌ಫಾರ್ಮಿನ ಗಡಿಯಾರದಲ್ಲಿ ಐದು ಹೊಡೆಯಲು ಬಂದಿತ್ತು. ವೀಟೀಗೆ ಹೋಗುವ ಮೊದಲ ಗಾಡಿ ಬರುವ ಹೊತ್ತಿಗಾಗಿರಬೇಕು. ಆಗಲೇ ಪ್ಲ್ಯಾಟ್‌ಫಾರ್ಮಿನ ಮೇಲೆ ಐದಾರು ಜನ ಕಾಣಿಸಿಕೊಂಡಿದ್ದರು. ತಾನೂ ಹೋಗುವ ಸಿದ್ಧತೆ ಮಾಡಬೇಕೆಂದುಕೊಂಡು ಎದ್ದು ನಿಲ್ಲುವ ಪ್ರಯತ್ನ ಮಾಡಿದರೆ ಮುಗ್ಗರಿಸಿ ಬೀಳುವಂತಾಯಿತು. ಬೆಂಚಿನ ಮೇಲೆ ಮಲಗಿ ಮಾಡಿದ ನಿದ್ದೆಯ ಸ್ವರೂಪ ಆಗ ಅರಿವಿಗೆ ಬಂದಿತು.ತಂಪು ನೀರಿನಿಂದ ಮೋರೆಯನ್ನು ಸ್ವಚ್ಛವಾಗಿ ತೊಳೆದುಕೊಳ್ಳೋಣವೆಂದರೆ ಹತ್ತಿರವೆಲ್ಲೂ ನೀರಿನ ನಲ್ಲಿಯಿದ್ದಂತೆ ತೋರಲಿಲ್ಲ. ಎದ್ದು ನಿಂತಲ್ಲೇ ಕೈಕಾಲುಗಳನ್ನು ಅಲ್ಲಾಡಿಸಿ ಸಡಿಲಗೊಳಿಸಿ ಕೊಳ್ಳುವಷ್ಟರಲ್ಲಿ ದೂರ, ಬೆಳಗುಜಾವದ ಮಬ್ಬುಗತ್ತಲನ್ನು ಸೀಳಿಬರುತ್ತಿದ್ದ ಟ್ರೇನು ಕಾಣಿಸಿತು. ತಾನು ಹತ್ತಲಿದ್ದ, ಬಹುಶಃ ಡೊಂಬಿವ್ಲಿಯಿಂದ ಖಾಯಮ್ ಆಗಿ ಬೇರ್ಪಡಿಸಲಿದ್ದ ಆ ಟ್ರೇನಿನ ಮುಂಭಾಗವನ್ನು ಕಂಡೊಡನೆ ಅತ್ತು ಬಿಡಬೇಕು ಎನ್ನುವಷ್ಟು ಭಾವುಕನಾದ ತಾನು ನಿಂತ ಬೆಂಚಿನ ಇದಿರೇ ಬಂದು ತಲುಪಿದ ಡಬ್ಬಿಯಲ್ಲಿ, ಜೊತೆಗೆ ತಂದ ಬ್ಯಾಗಿನೊಂದಿಗೆ ಹತ್ತಿದ. ಡಬ್ಬಿಯಲ್ಲಿ ಆ ಹೊತ್ತಿಗೆ ಯಾರೂ ಇರಲಿಲ್ಲ. ಪ್ಲ್ಯಾಟ್‌ಫಾರ್ಮ್ ಮೇಲೆ ಇಡೀ ರಾತ್ರಿ ಕಳೆದವನಿಗೆ ಏಕೋ ವಿಚಿತ್ರ ರೀತಿಯಿಂದ ಭಯವಾಗತೊಡಗಿತು. ಮುಂದಿನ ಸ್ಟೇಶನ್ನುಗಳಲ್ಲಿ ಜನ ಬರಬಹುದೆಂದು ಸಮಾಧಾನ ತಂದುಕೊಂಡ.

ವೀಟೀ ತಲುಪಿದೊಡನೆ ‘ಜೀಪೀ‌ಓ’ನ ಇದಿರುಗಡೆಯಲ್ಲಿದ್ದ ‘ಸಮ್ರಾಟ್’ ಹೋಟೆಲಿನಲ್ಲಿ ರೂಮು ಹಿಡಿಯುವುದು ಅವನ ಯೊಚನೆಯಾಗಿತ್ತು. ಕೇರಳದಿಂದ ಬಂದ ಮೊದಲಲ್ಲಿ ಡೊಂಬಿವ್ಲಿಯಲ್ಲಿ ಕೋಣೆ ಸಿಗುವ ತನಕ ಅವನು ಈ ಹೋಟೆಲಿನಲ್ಲೇ ರೂಮು ಹಿಡಿದಿದ್ದ. ಅಲ್ಲಿದ್ದ ಹತ್ತು ದಿನಗಳಲ್ಲಿ ಹಲವರ ಪರಿಚಯವಾಗಿತ್ತು. ರೂಮು ಸಿಗದೆ ಇರಲಾರದು ಎಂಬ ಭರವಸೆಯೇ ಸಿಗದೇ ಇದ್ದರೆ ಎಲ್ಲಿಗೆ ಹೋಗುವುದು ಎನ್ನುವ ಪ್ರಶ್ನೆಯನ್ನೇ ಅಪ್ರಸ್ತುತಗೊಳಿಸಿದಂತಿತ್ತು. ಹಾಗೆ ನೋಡಿದರೆ ಕರುಣಾಕರನ್‌ಗೆ ಗೆಳೆಯರಿಲ್ಲದಿರಲಿಲ್ಲ. ಠಾಣಾದಲ್ಲೇ ಕೇರಳದವರೇ ಆದ ಇಬ್ಬರು ಗೆಳೆಯರಿದ್ದರು. ಹೋದರೆ ಬೇಡವೆನ್ನುತ್ತಿರಲಿಲ್ಲ. ಆದರೆ ಇಂದಿನ ಮನಃಸ್ಥಿತಿಯಲ್ಲಿ ಯಾರಲ್ಲೂ ಹೋಗಬೇಕೆಂದು ತೋರಲಿಲ್ಲ. ಹೊಟೆಲ್ಲು ಸೇರಿದ ಮೇಲೆ ಮಾಡಬೇಕೆಂದುಕೊಂಡ ಕೆಲಸಕ್ಕಂತೂ ಹೊಟೆಲ್ಲಿನಂಥ ಜಾಗ ಬೇರೆ ಇರಲಿಲ್ಲ. ಮೇಲಾಗಿ ಯಾವುದರ ಬಗ್ಗೆ ಕೂಲಂಕಷವಾಗಿ ವಿಚಾರ ಮಾಡುವ ಸ್ಥಿತಿಯಲ್ಲಿ ಅವನಾಗ ಇರಲಿಲ್ಲ. ಹಸಿವು ದಣಿವು ನಿದ್ದೆಗಳನ್ನು ಮೀರಿ ನಿಂತಂತಿದ್ದ ದೇಹ ಮನಸ್ಸುಗಳೆರಡೂ ಧೇನಿಸುತ್ತಿದ್ದುದೆಂದರೆ ಆದಷ್ಟು ಬೇಗ ವೀಟೀ ತಲುಪಬೇಕು. ಹೊಟೆಲ್ಲಿನಲ್ಲಿ ರೂಮು ಹಿಡಿಯಬೇಕು.

ಸೀಟಿನ ಮೇಲೆ ಕಿಡಕಿಗೆ ತಾಗಿ ಕೂತಲ್ಲಿಂದ ಮುಂದಿನ ಸೀಟಿನ ಮೇಲೆ ಕಾಲುಗಳೆರಡನ್ನೂ ಚಾಚಿದ. ನಿನ್ನೆ ಬೆಹರಾಮನ ಮನೆಗೆ ಹೋಗುವಾಗಿನಿಂದಲೂ ಹಾಕಿಕೊಂಡಿದ್ದ ಬೂಟುಗಳನ್ನು ಕಳಚಿಯೇ ಇರಲಿಲ್ಲ ಎಂಬುದು ಈಗ ನೆನಪಾದವನ ಹಾಗೆ ಭಡಭಡನೆ ಬೂಟು ಸಾಕ್ಸ್‌ಗಳನ್ನು ತೆಗೆದು ಸೀಟಿನ ಕೆಳಗಿಟ್ಟ. ಸೂಟ್‌ಕೇಸನ್ನು ತೆರೆದು ಡಾಯರಿಯನ್ನು ಹುಡುಕುವ ಮನಸ್ಸಾಯಿತು. ಮರುಗಳಿಗೆ ಈಗ ಬೇಡವೆನ್ನಿಸಿ ದೃಷ್ಟಿಯನ್ನು, ಅದಾಗಲೇ ಸ್ಟೇಶನ್ ಬಿಟ್ಟು ವೇಗ ಪಡೆಯ ಹತ್ತಿದ, ಟ್ರೇನಿನ ಕಿಡಕಿಯ ಹೊರಗೆ ಚಾಚಿದ. ಹಲವು ಸಾರೆ ಕಂಡು ಹೆಸರು ಗೊತ್ತಿರದ ಇಬ್ಬದಿಯ ಜನವಸತಿಗಳು, ಕಾರ್ಖಾನೆಗಳು ಬೆಳಗಿನ ನಸುಗತ್ತಲಲ್ಲಿ ಕಣ್ಣ ಪರದೆಯ ಮೇಲೆ ಆಕೃತಿಯಾಗುವ ಬಲವಿಲ್ಲದೆಯೂ ತಮ್ಮ ಅಸ್ತಿತ್ವವನ್ನು ತಪ್ಪದೇ ಪ್ರಕಟಿಸುತ್ತಿದ್ದುವು. ನಿನ್ನೆ ತಾನು ತನಗೆ ದಿಗ್ಭ್ರಮೆಯಿಡಿಸುವ ಹಾಗೆ ಓಡುವಾಗ ಗ್ರಹಿಸಿದ ಮುಂಬಯಿಯ ಅಕರಾಳವಿಕರಾಳ ಆಕಾರದಲ್ಲಿ ಒಂದಾಗಿ ಹೋದ ಈ ಪರಿಸರವಿಶೇಷಗಳಿಗೆ ಬಿಡಿಯಾಗಿ ಅರ್ಥವಿದ್ದಂತೆ ಅನ್ನಿಸಲಿಲ್ಲ. ಬೆಳಗಿನ ತಂಪಿಗೋ, ಬೆಳಕಾಗುವ ಹವಣಿಕೆಯಲ್ಲಿದ್ದ ಮಬ್ಬುಗತ್ತಲೆಗೋ ಅಥವಾ ಏಕ ಸ್ವರದ ಸಪ್ಪಳ ಮಾಡುತ್ತ ಓಡುತ್ತಿದ್ದ ಟ್ರೇನಿನ ವೇಗಕ್ಕೋ, ತನ್ನ ತಂಗಿಯಾಗಲಿ, ಬೆಹರಾಮನಾಗಲಿ ಸದ್ಯ ನೆನಪಿನಲ್ಲಿ ಮೂಡುತ್ತಲಿರಲೇ ಇಲ್ಲ. ಆ ಕ್ಷಣಕ್ಕೆ ಮನಸ್ಸು ತುಂಬಿದ್ದು ಮೂಡಿ ಮೂಡಿ ಮುಳುಗುವ, ಮುಳುಗುವಷ್ಟರಲ್ಲಿ ಮತ್ತೆ ಮೂಡುವ ಹಲವು ಪ್ರತಿಮೆಗಳು. ‘ಖೋ’ ಆಟವನ್ನು ಆಡುವವರ ಹಾಗೆ ಒಂದು ಇನ್ನೊಂದನ್ನು ಬೆನ್ನಟ್ಟುತ್ತ ಇನ್ನೊಂದರ ಜಾಗದಲ್ಲಿ ತಾನೇ ಕೂರುತ್ತ ಹೊಸಹೊಸ ವಿನ್ಯಾಸಗಳಿಗೆ ಎಡೆಮಾಡಿಕೊಡುತ್ತಿದ್ದುವು: ಝೋಪಡಿಪಟ್ಟಿಯ ಗುಡಿಸಲುಗಳು; ಆಕಾಶದೆತ್ತರಕ್ಕೆ ತಲೆ ಚಾಚಿದ ಸಿಮೆಂಟ್ ಕಟ್ಟಡಗಳು; ಕದದ ಹಿಂದೆ ಕದಗಳುಳ್ಳ ಸುಭದ್ರ ಬಾಗಿಲುಗಳು; ಒಳಗೆ ಬರಮಾಡಿಕೊಂಡು ಏನೋ ನೆನಪಾದವರ ಹಾಗೆ, ಏನೂ ಗೊತ್ತಿಲ್ಲದವರ ಹಾಗೆ ಹೆದರುತ್ತ ಮಾತನಾಡಿದವರು; ಮಾತನಾಡುತ್ತ ಆಡುತ್ತ ಹೆದರಿದವರು, ಹೆದರಿ ಓಡಿಸಿದವರು; ಕದ ತೆರೆಯಲೂ ನಿರಾಕರಿಸಿದವರು; ಸಮುದ್ರ ಕಾಣುವ ಬಾಲ್ಕನಿಗಳಲ್ಲಿ ಹಗ್ಗಗಳ ಬುಟ್ಟಿಗಳಲ್ಲಿ ತೂಗುವ ಕುಂಡಗಳಲ್ಲಿ ನೀರು ಹನಿಸಿ ಬೆಳೆಯಿಸಿದ ಗಿಡಗಳು; ಬಿದಿರಿನ ತಟ್ಟೆಗಳು, ತಗಡಿನ ಮಾಡುಗಳು, ಹೊಲಸು ನೀರು ಹರಿಯುವ ತೋಡುಗಳು; ಚಾರಪಾಯಿಗಳು; ಕೆದರಿದ ಕೂದಲಿನ ಹೆಣ್ಣುಗಳು, ಬಿಕ್ಕೆ ಬೇಡುವ ಮುದುಕರು; ಮಣ್ಣಿನ ಮಡಕೆಗಳು, ಅಲ್ಯುಮಿನಿಯಮ್ ತಟ್ಟೆಗಳು; ಬೊಗಳುವ ನಾಯಿಗಳು; ಬೈದಾಡುವ, ಕೈಕೈ ಎನ್ನುವ, ಬರೀ ಕೈಗಳಾಗುವ, ಕಣ್ಣುಬಾಯಿಗಳಾಗುವ ಪಟ್ಟೆಪಟ್ಟೆಯ ಲುಂಗಿ ಉಟ್ಟವರು; ಬಣ್ಣದ ಬನಿಯನ್ ತೊಟ್ಟವರು; ಹಣ ಮಾಡುವವರು, ಹಣ ಮಾತಾಡುವವರು, ಬರೀ ಹಣವಾಗುವವರು. ಅಣ್ಣನ ಕೊಲೆ ಈಗಿನ ಈ ಓಟಕ್ಕೆ ಪ್ರೇರಣೆಯಾಗಿರುವಾಗಲೂ ಅದೊಂದು ಮಾತ್ರ ನೆನಪಿಗೆ ಬರದಿರಲಿ ಎಂಬಂತೆ ಕೈಮುಷ್ಟಿಗಳನ್ನು ಬಿಗಿಮಾಡುತ್ತ ಕೂತಲ್ಲೇ ಚಡಪಡಿಸಿದ. ಸರಕ್ಕನೆ ಎದ್ದು ನಿಂತು ಸರಕ್ಕನೆ ಕೂತ.

ಠಾಣಾ ಸ್ಟೇಶನ್ನಿನಲ್ಲಿ ಜನರ ದೊಡ್ಡ ಗುಂಪೊಂದು ಡಬ್ಬಿ ಹತ್ತಿದ್ದನ್ನು ನೋಡಿ ಪುಲಕಿತನಾದ. ಬಂದವರಲ್ಲೊಬ್ಬ ತನ್ನ ಮುಂದಿನ ಸೀಟಿನಲ್ಲಿ ಕೂರುತ್ತಿದ್ದಾಗ ಅವನನ್ನು ನೋಡಿ ಮುಗುಳುನಗೆ ನಕ್ಕ. ಕೆಲಸಕ್ಕೆ ಹೊರಟಿರುವ ಕಾರ್ಮಿಕರಿರಬೇಕು ಎಂದುಕೊಳ್ಳುತ್ತಿರುವಾಗ ಇದಿರು ಕೂತವನು ಇವನು ನಕ್ಕದ್ದನ್ನು ಕಂಡು ತಾನೂ ಮುಗುಳುನಕ್ಕ: ಮನಸ್ಸಿಗೆ ಗೆಲುವು ಆಯಿತು. ಮಾತನಾಡಿಸುವ ಮನಸ್ಸಾದರೂ ತನ್ನ ಹಿಂದೀ ಸಾಲದೆನಿಸಿತು. ಇಂಗ್ಲಿಷ್ ತಿಳಿದವನಂತೆ ಕಾಣಲಿಲ್ಲ. ಅವನೇ ಇವನ ಮನಸ್ಸನ್ನು ಓದಿಕೊಂಡವನ ಹಾಗೆ ತಾನು ಹೋಗುತ್ತಿದ್ದುದು ಭಾಂಡೂಪ್‌ಗೆ ಸಮೀಪವಾದ ಕಾಂಜೂರ್ ಸ್ಟೇಶನ್ನಿಗೆ ಎಂದೂ ಅಲ್ಲಿಯ ಕ್ರಾಂಪ್ಟನ್ಸ್ ಫ್ಯಾಕ್ಟರಿಯಲ್ಲಿ ಮೊದಲ ಪಾಳಿಯ ಕೆಲಸಗಾರನೆಂದೂ ಹಿಂದಿಯಲ್ಲಿ ತಿಳಿಸಿದ. ಕರುಣಾಕರನ್‌ಗೆ ಅರ್ಥವಾದಂತೆ ಅನ್ನಿಸಿ ಇನ್ನೊಮ್ಮೆ ನಕ್ಕನೇ ಹೊರತು ತನ್ನ ಬಗ್ಗೆ ಹೇಳಲು ಹೋಗಲಿಲ್ಲ. ಅವನೇ ಊಹಿಸಿದ: “ನೀವು ಮುಂಬಯಿಗೆ ಹೊಸಬರೇನೋ. ಕೆಲಸದ ಶೋಧದಲ್ಲಿ ಇದ್ದೀರೇನೋ. ಸಿಕ್ಕೇ ಸಿಗುತ್ತದೆ. ಇಷ್ಟು ದೊಡ್ಡ ಮುಂಬಯಿಯಲ್ಲಿ ಯಾರಿಗೂ ಕೆಲಸ ಸಿಗುವುದು ಕಷ್ಟವಲ್ಲ.” ಅವನು ಇದೇ ಧಾಟಿಯಲ್ಲಿ ಇನ್ನೂ ಕೆಲಹೊತ್ತು ಮಾತನಾಡಿಸಿದರೆ ತಾನು ಅತ್ತುಬಿಡುವುದು ಖಾತ್ರಿಯೆನಿಸಿತು. ಪುಣ್ಯಕ್ಕೆ ಅವನು ಹಾಗೆ ಮಾತನಾಡಿಸಲಿಲ್ಲ. ಅವನ ಲಕ್ಷ್ಯವನ್ನು ಅಷ್ಟರೊಳಗೆ ಅವನ ಜೊತೆಗಾರನೊಬ್ಬನು ಸೆಳೆದುಕೊಂಡಿದ್ದ. ಮಾತನಾಡದೆಯೂ ಇದಿರು ಕುಳಿತವನ ಸಾನ್ನಿಧ್ಯ ತನ್ನ ಖುಶಿಗೆ ಕಾರಣವಾಗುತ್ತಿದೆ ಎಂಬ ಅರಿವಿನಿಂದ ಕೃತಜ್ಞತೆಯಿಂದ ಎದೆ ತುಂಬಿಬಂತು. ಹೆಸರು ಗೊತ್ತಿಲ್ಲದ ಆ ಕಾರ್ಮಿಕ ಕಾಂಜೂರ್ ಸ್ಟೇಶನ್ನಿನಲ್ಲಿ ಇಳಿಯುವ ಸಿದ್ಧತೆ ಮಾಡುತ್ತಿದ್ದಾಗ ಎದ್ದುನಿಂತು ಕೈಕುಲುಕಿ ಅವನನ್ನು ಬೀಳ್ಕೊಟ್ಟ. ತಾನು ಬರೆಯಲಿದ್ದ ರಿಪೋರ್ಟಿನಲ್ಲಿ ಕತ್ತಲಲ್ಲಿ ಮಿಂಚಿದ ಬೆಳಕಿನ ಕಿಡಿಯ ಹಾಗೆ ಈ ಭೇಟಿ ಸೇರಿಕೊಳ್ಳಬಹುದೇನೋ ಎಂಬ ಕಲ್ಪನೆಯಿಂದಲೇ ಖುಶಿಪಟ್ಟ.

ಹಾಗೆ ಖುಶಿಯಿಂದ ಮನಃಸ್ಥಿತಿಯಲ್ಲೇ ಕರುಣಾಕರನ್ ವೀಟೀ ತಲುಪಿದ್ದ. ‘ಸಾಮ್ರಾಟ್’ ಹೊಟೆಲ್ಲಿನಲ್ಲಿ ರೂಮು ಹಿಡಿದಿದ್ದ. ಕೋಣೆಯ ಕದ ಮುಚ್ಚುವ ಪುರಸೊತ್ತಿಲ್ಲ, ಕಾಲಿಗೆ ಹಾಕಿದ ಬೂಟುಗಳನ್ನು ತೆಗೆದು ಮಂಚದ ಮೇಲೆ ಒರಗಿದವನಿಗೆ ನಿದ್ದೆಹತ್ತಿದ್ದೇ ಗೊತ್ತಾಗಲಿಲ್ಲ. ಎಚ್ಚರವಾದಾಗ ಮಧ್ಯಾಹ್ನದ ಮೂರು ಗಂಟೆ. ಗಡಿಯಾರ ನೋಡಿಕೊಂಡಾಗ ನಂಬುವುದು ಕಷ್ಟವಾಯಿತು. ಬದಿಯ ಇರಾನೀ ರೆಸ್ಟೊರೆಂಟಿಗೆ ಹೋಗಿ ಆಮ್ಲೆಟ್-ಬ್ರೆಡ್ ತಿಂದು, ಚಹ ಕುಡಿದು ಅದೇ ರೆಸ್ಟೊರೆಂಟಿನಿಂದ ಆಫೀಸಿಗೆ ಫೋನ್ ಮಾಡಿದ. ಕೋಣೆಗೆ ಹಿಂದಿರುಗಿ, ಸ್ನಾನಮಾಡಿ, ಲುಂಗಿ ಬನಿಯನ್ ತೊಟ್ಟು ಮತ್ತೆ ಹಾಸಿಗೆ ಸೇರಿದವನಿಗೆ ಎಚ್ಚರವಾದದ್ದು ಮರುದಿನ ಬೆಳಿಗ್ಗೆ, ಪರದೆ ಬಿಚ್ಚಿರದ ಕಿಡಕಿಯಿಂದ ತೂರಿಬಂದ ಸೂರ್ಯನ ಕಿರಣ ಕಣ್ಣುಗಳ ಮೇಲೆಯೇ ಬಿದ್ದಾಗ. ಎರಡು ದಿನಗಳಿಂದ ಹತ್ತಿದ ದಣಿವು ಎಲ್ಲಿಂದೆಲ್ಲಿಗೋ ಹಾರಿಹೋಗಿತ್ತು; ಮಾತ್ರವಲ್ಲ, ಬರೆಯಬೇಕೆಂದು ಯೋಜಿಸಿಕೊಂಡ ಇಡಿಯ ರಿಪೋರ್ಟು ಕಾಗದ ಪೆನ್ನುಗಳನ್ನು ಕೈಗೆತ್ತಿಕೊಳ್ಳುವುದೇ ತಡ ತಂತಾನೆ ಆಕೃತಿ ಪಡೆಯಲು ಸಿದ್ಧವಾಗಿರುವಂತೆ ತೋರಿತು. ಪ್ರಾತರ್ವಿಧಿ, ಸ್ನಾನಗಳನ್ನು ಮುಗಿಸಿ, ನಾಸ್ತಾ ಮಾಡಿ ಬಂದವನೇ, ಹಾಸಿಗೆಯ ಮೇಲೆ ಕುಳಿತೇ ಬರೆಯಲು ತೊಡಗಿದ.

ಭಾಗ : ಎರಡು
ಅಧ್ಯಾಯ ನಾಲ್ಕು

ಕರುಣಾಕರನ್ನನ ಬೆನ್ನಹಿಂದೆಯೇ ಓಡಿಹೋದ ಬೆಹರಾಮ್ ಅವನು ಹೋಗಿರಬಹುದೆಂದು ಬಗೆದ ಬಸ್‌ಸ್ಟಾಪಿನವರೆಗೂ ಓಡಿಹೋಗಿ ಅವನು ಅಲ್ಲಿ ಕಾಣದಾದಾಗ ಅದರ ಮೊದಲಿನ ‘ಬ್ಯಾಂಡ್‌ಸ್ಟ್ಯಾಂಡ್’ ಸ್ಟಾಪಿಗೆ ಹೋಗಿರಬಹುದೆಂದು ಅತ್ತಕಡೆಗೆ ಓಡಿಹೋಗುತ್ತಿರುವಷ್ಟರಲ್ಲಿ ಬಸ್ ಒಂದು ಸ್ಟಾಪನ್ನು ಅದೇ ಬಿಡುತ್ತಿರುವುದು ಕಂಡುಬಂದಿತು. ಕರುಣಾಕರನ್ ಆ ಬಸ್ಸನ್ನು ಹತ್ತಿರುವುದರಲ್ಲಿ ಸಂಶಯವೇ ಇಲ್ಲದವನ ಹಾಗೆ ಬೆಹರಾಮ್ ಸಮಾಧಾನದ ನಿಟ್ಟುಸಿರು ಬಿಟ್ಟ. ಆದರೂ ಬಸ್‌ಸ್ಟಾಪಿನವರೆಗೂ ಹೋಗಿಯೇ ಮನೆಗೆ ಹಿಂತಿರುಗಿದ. ಯಾರೊಡನೆಯೂ ಮಾತನಾಡುವ ಮನಸ್ಸೇ ಇಲ್ಲದವನ ಹಾಗೆ ಸೀದಾ ಬಾಲ್ಕನಿಗೆ ಹೋಗಿ ಆರಾಮಕುರ್ಚಿಯಲ್ಲಿ ಮೈಚೆಲ್ಲಿ ಕಣ್ಣು ಮುಚ್ಚಿದ. ಕರುಣಾಕರನ್ನನನ್ನು ಮನೆಯಿಂದ ಓಡಿಸಿದ ಶಿರೀನ್-ಪಾರ್ವತಿಯರ ಮೇಲೆ ಅವನಿಗೆ ಸಿಟ್ಟುಬಂದಿತ್ತು. ಕರುಣಾಮಯಿಯಾದ ಹೆಂಡತಿಯೂ ಅವರೊಡನೆ ಸಾಮೀಲಾದದ್ದು ಆಶ್ಚರ್ಯದಂತೆ ನೋವಿಗೂ ಕಾರಣವಾಗಿತ್ತು. ಅಪ್ಪನ ಮೂಡು ಅರಿತ ಶಿರೀನಳಿಗೆ ಅವನನ್ನು ಮಾತನಾಡಿಸುವ ಧೈರ್ಯ ಇರಲಿಲ್ಲ. ಆದರೂ ತನ್ನ ಕೃತ್ಯವನ್ನು ಕೂಡಲೇ ಸಮರ್ಥಿಸಿಕೊಳ್ಳುವ ಹುಕ್ಕಿ ಬಂದವಳ ಹಾಗೆ, “ಅಪ್ಪಾ” ಎಂದು ಕರೆದದ್ದೇ ತಡ, “ಪ್ಲೀಜ್, ನನ್ನನ್ನು ನನ್ನಷ್ಟಕ್ಕೇ ಬಿಟ್ಟುಬಿಡು,” ಎಂದು ಅಪ್ಪ ಚೀರಾಡಿದ ರೀತಿಗೆ ಥಕ್ಕಾಗಿ ನಿಂತಲ್ಲೇ ನಿಂತು ಬಿಟ್ಟಳು. ಅಡುಗೆಮನೆಯಲ್ಲಿದ್ದ ಶಿರೀನಳ ತಾಯಿಯೂ ಹೊರಗೆ ಬಂದಳು.
“ನಿಮಗೆ ಏನು ಹೇಳಬೇಕಾಗಿದೆ ಎನ್ನುವುದು ನನಗೆ ಗೊತ್ತಿದೆ. ಅದಾವುದರ ಬಿಸಾತೂ ಇಲ್ಲ ನನಗೆ. ಅಷ್ಟು ಸಣ್ಣ ಪ್ರಾಯದ, ವ್ಯವಹಾರಜ್ಞಾನವಿಲ್ಲದ ಹುಡುಗನನ್ನು ಹಿಂದುಮುಂದಿನ ವಿಚಾರ ಮಾಡದೇನೆ ಈ ಮುಂಬಯಿಯ ಕ್ರೌರ್ಯಕ್ಕೆ ಒಡ್ಡಿದ ನಮ್ಮ ನಡತೆಯ ಬಗ್ಗೆ ನಮಗೆಲ್ಲ ನಾಚಿಕೆಯಾಗಬೇಕು. ಬಂದವರು ಯಾರೆಂಬುದು ನಿನಗೇ ಗೊತ್ತಿಲ್ಲ. ಫೋನ್ ಮೇಲೆ ಮಾತನಾಡಿದವರು ಯಾರೋ, ಬಂದವರು ಯಾರೋ. ಅವರು ಹೇಳಿದ್ದನ್ನೇ ನಂಬಿ ನಿಷ್ಪಾಪ ಎಳೆಯನನ್ನು ಅವರ ವಶಕ್ಕೆ ಒಪ್ಪಿಸಲು ಸಿದ್ಧರಾದಿರಿ. ಈ ಹುಡುಗನನ್ನು ಕುರಿತು ನನಗೆ ಈ ಮೊದಲೇ ಒಂದೆರಡು ಫೋನ್ ಕರೆಗಳು ಬಂದಿದ್ದುವು. ಯಾರಿಗೂ ಹೇಳಿರಲಿಲ್ಲ, ಅಷ್ಟೆ. ಅವನು ಒಂದು ದಿನ ನಮ್ಮ ಮನೆಗೂ ಬಂದಾನು ಎಂದು ನಿರೀಕ್ಷಿಸಿಯೂ ಇದ್ದೆ. ಯಾಕೆಂದರೆ ಅವನು ಹುಡುಕುತ್ತಿದ್ದುದು ನನ್ನನ್ನೇ ಆಗಿತ್ತು. ಅವನ ತತ್‌ಕ್ಷಣದ ಪ್ರಶ್ನೆ ರದ್ದೀವಾಲಾನ ಖೂನಿಯನ್ನು ಕುರಿತಂತೆ ತೋರಿದರೂ ಅವನು ನಿಜಕ್ಕೂ ಬಂದದ್ದು ಮೂರು ವರ್ಷಗಳ ಹಿಂದೆ ನಡೆದ ಕೊಲೆಯ ಬಗ್ಗೆ ತಿಳಿಯಲು. ನಾನೇ ನೇರವಾಗಿ ಕೇಳುವ ಹಾಗಿರಲಿಲ್ಲ. ಹಾಗೆಂದೇ ಈ ಖೂನಿಯಲ್ಲಿ ಅವನಿಗಿದ್ದ ಆಸ್ಥೆಯನ್ನು ಕುರಿತು ಮತ್ತೆ ಮತ್ತೆ ಪ್ರಶ್ನೆ ಕೇಳಿದ್ದೆ. ಅಮ್ಮ, ನಿನಗೆ ಅಣ್ಣತಮ್ಮಂದಿರೆಷ್ಟು ಎಂದು ಕೇಳಿದಾಗ ದಡಬಡಿಸಿದ್ದು ನೆನಪಿದೆಯೆ? ನನಗೆ ಬಲವಾದ ಸಂಶಯ ಶಿರೀನ್. ಅವನು ಠಕ್ಕನಲ್ಲ. ಕೊಲೆಯಾದವನ ಹತ್ತಿರದ ಸಂಬಂಧಿಯಾಗಿರಬಹುದು. ತಮ್ಮನೇ ಆಗಿರಬಹುದು.” ಪ್ರತ್ಯಕ್ಷವಾಗಿ ಆಡಿತೋರಿಸುವ ಮೊದಲು ಎಳ್ಳಷ್ಟೂ ಸಂಶಯವಿಲ್ಲವೆಂದು ಬಗೆದ ತನ್ನ ಊಹೆಯ ಬಗ್ಗೆ ಆಡಿ ಮುಗಿಸಿದ ಕೂಡಲೇ ಬೆಹರಾಮನಿಗೆ ಸಂಶಯ ಮೂಡಹತ್ತಿತು. ಬೆಕ್ಕಸಬೆರಗಾಗಿ ತನ್ನನ್ನೇ ನೋಡುತ್ತ ನಿಂತ ಹೆಂಡತಿ, ಶಿರೀನರ ಮೋರೆಗಳನ್ನು ನೋಡಿದ ಮೇಲಂತೂ ತನ್ನ ಕಲ್ಪನೆ ವಾಸ್ತವದ ಸ್ಪರ್ಶವಿಲ್ಲದ್ದೇನೋ ಅನ್ನಿಸತೊಡಗಿದಾಗ ಮಾತನಾಡುವುದನ್ನು ಗಪಕ್ಕನೆ ನಿಲ್ಲಿಸಿಬಿಟ್ಟ. ಆದರೂ, ಮೂರುಸಂಜೆಯ ಹೊತ್ತಿಗೆ ಬಂದ ಆ ನಾಲ್ವರು ಠಕ್ಕರಿಂದಾಗಿ ಕರುಣಾಕರನ್ ಅಪಾಯಕ್ಕೆ ಬರದಿದ್ದರೆ ಸಾಕು ಎಂದು ಮನಸ್ಸಿನಲ್ಲೇ ಪ್ರಾರ್ಥಿಸಹತ್ತಿದ.

ಅವನ ಮನಸ್ಸು ಹಾಗೆ ಮಿದುವಾಗುತ್ತಿರುವ ಹೊತ್ತಿಗೇ, ಶಿರೀನ್ ಅಷ್ಟೇ ಗಟ್ಟಿಯಾದ ಆತ್ಮವಿಶ್ವಾಸದಿಂದ-“ಕರುಣಾಕರನ್ ತುಂಬ ಸ್ಮಾರ್ಟ್ ಆದ ಹುಡುಗ, ಸಂಶಯವಿಲ್ಲ. ಸರಿಯಾದ ಸಹವಾಸ, ಮಾರ್ಗದರ್ಶನ ಸಿಕ್ಕರೆ ತೀರ ಬೇರೆ ಬಗೆಯ ಜೀವನ ನಡೆಸಬಹುದಾಗಿತ್ತೇನೋ. ಆದರೆ ಸದ್ಯ ಅವನು ಈ ಠಕ್ಕರ ಗ್ಯಾಂಗಿಗೆ ಸೇರಿದವನು ಎಂಬುದರಲ್ಲಿ ನನಗಂತೂ ಅನುಮಾನವಿಲ್ಲ. ನಾಳೆ ಪಾರ್ವತಿಯಿಂದಲೇ ಕೇಳಿ ತಿಳಿಯುವಿರಂತೆ. ನಾವೇನು ಅಂತಃಕರಣವಿಲ್ಲದವರೆ? ಇಷ್ಟಕ್ಕೂ, ಅವನು ತಾನು ಬಂದ ಉದ್ದೇಶವನ್ನು ಕೊನೆಯವರೆಗೂ ಸ್ಪಷ್ಟಪಡಿಸಲಿಲ್ಲ. ಬಳಸಂಬಳಸಾಗಿ ನಮಗೇ ಪ್ರಶ್ನೆ ಕೇಳಿದನೇ ಹೊರತು ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಲಿಲ್ಲ.”

ಶಿರೀನಳ ಈ ಮಾತು ಮುಗಿಯುವುದರೊಳಗೆ ಕದದ ಕರೆಗಂಟೆ ದೀರ್ಘವಾಗಿ ಕಿರುಚಿತು. ಕಿರುಚಿದ ರೀತಿಯಿಂದ ಬಂದವರು ಒಳಗೆ ಬರುವ ತರಾತುರಿಯಲ್ಲಿದ್ದಂತೆ ತೋರಿತು. ಕದ ತೆರೆಯಲು ಮುಂದಾದ ಸೀತೆಯನ್ನು ತಡೆದು ಶಿರೀನ್ ತಾನೇ ಕದದ ಕಡೆಗೆ ಧಾವಿಸಿದಳು. ಕದಕ್ಕೆ ಹಚ್ಚಿದ ಗಾಜುಗಣ್ಣಿಗೆ ಕಣ್ಣುಹಚ್ಚಿ ಹೊರಗೆ ನಿಂತವನನ್ನು ನೋಡುತ್ತಿದ್ದಹಾಗೆ ಸರಕ್ಕನೆ ಕದದಿಂದ ದೂರ ಸರಿದು, “ಅಪ್ಪಾ” ಎಂದಳು. ತನ್ನಿಂದತಾನೆ ಅವಳ ಬಾಯಿಂದ ಹೊರಟಂತಿದ್ದ ಆ ಉದ್ಗಾರವೇ ಹೊರಗೆ ಹಾಜರಾದವನು ಅನಪೇಕ್ಷಿತ ಆಗಂತುಕನೆಂಬ ಸುದ್ದಿ ಮುಟ್ಟಿಸುವಲ್ಲಿ ತಪ್ಪಲಿಲ್ಲ. ಕರುಣಾಕರನ್ ಹಾಗೂ ಆಗ ಬಂದ ನಾಲ್ವರ ನಿರ್ಗಮನದಿಂದ ಎಲ್ಲವೂ ಮುಗಿಯಲಿಲ್ಲವೇನೋ ಅನ್ನಿಸಿ ಮೊದಲ ಬಾರಿಗೇ ಎನ್ನುವಂತೆ ಪ್ರಜ್ಞೆಗೆ ಮೀರಿದ ಕಳವಳದಿಂದ ಬೆಹರಾಮನ ಕೈಕಾಲುಗಳಲ್ಲಿ ನಡುಕ ಸೇರಿಕೊಂಡಿತು. ಈಗ ಬಂದವನು ಸಂಜೆ ನಡೆದದ್ದಕ್ಕೆ ಸಂಬಂಧವುಳ್ಳವನು ಎಂಬುದರಲ್ಲಿ ಅವನಿಗೆ ಸಂಶಯವಿರಲಿಲ್ಲ. ಮುಂದೆ ಬಂದು ನಿಂತ ಗಾಬರಿಗೊಂಡ ಮಗಳ ಕಡೆಗೆ ‘ಯಾರು?’ ಎಂದು ಪ್ರಶ್ನಾರ್ಥಕ ದೃಷ್ಟಿಯಿಂದ ನೋಡುತ್ತ ಕುರ್ಚಿಯಿಂದ ಏಳುತ್ತಿದ್ದಾಗ, “ನಿನಗೆ ಪರಿಚಯ ಇಲ್ಲದವರಾದರೆ ಕದ ತೆರೆಯಲೇಬೇಡ, ಕದದ ಮರೆಯಿಂದಲೇ ಮಾತನಾಡಿಸು,” ಎಂದು ಪಿಸುಗುಟ್ಟಿದ ಬೆಹರಾಮನ ಹೆಂಡತಿಗೆ ಕರುಣಾಕರನ್ ಬಗ್ಗೆ ಇದ್ದಬಿದ್ದ ಸಹಾನುಭೂತಿಯೂ ಈಗ ಹೊರಟುಹೋಯಿತು. ಇವನೊಬ್ಬ ಎಲ್ಲಿಂದ ಬಂದು ಗಂಟುಬಿದ್ದುನೋ, ಸಾಡೇಸಾತಿಯ ಹಾಗೆ ಎಂದುಕೊಂಡಳು. ಕುರ್ಚಿಯಿಂದ ಏಳುವಾಗ ಕೈಕಾಲುಗಳಲ್ಲಿ ಸೇರಿಕೊಂಡಿದ್ದ ನಡುಕ, ಹೆಂಡತಿಯ ಮಾತು ಕೇಳುತ್ತಲೇ ಇದ್ದಕ್ಕಿದ್ದಹಾಗೆ ಇಲ್ಲವಾಯಿತು ಎನ್ನುವಹಾಗೆ ಧೈರ್ಯದಿಂದ ಹೆಜ್ಜೆಹಾಕಿದ. ಹೊರಗೆ ನಿಂತವನು ಯಾರೆಂಬುದನ್ನು ತಾನು ಚೆನ್ನಾಗಿ ಬಲ್ಲೆನೆಂಬ ಧರ್ತಿಯಲ್ಲಿ ಕದ ತೆರೆದಾಗ ಕಣ್ಣಮುಂದೆ ಪ್ರಕಟಗೊಂಡ ಆಕೃತಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದವನ ಹಾಗೆ ಕಣ್ಣರಳಿಸಿ ನೋಡುತ್ತ ನಿಂತುಬಿಟ್ಟ. ಕೆದರಿದ ತಲೆಗೂದಲು, ಸದ್ಯವೇ ಬಿಟ್ಟಂತಿದ್ದ ದಾಡಿ, ತುಟಿಗಳಿಂದ ಕೆಳಗೆ ಬಾಗಿದ ಮೀಸೆ, ಅಂತಃಕರಣದ ಆಳದಿಂದ ನೋಡುವಂತೆ ತೋರುವ ಬೆದರಿದ ಕಣ್ಣುಗಳು, ಅರೆತೆರೆದ ತುಟಿಗಳಿಂದ ಬೆಳ್ಳಗೆ ಹಣಿಕಿಕ್ಕಿದ ಒಂದೆರಡು ಹಲ್ಲುಗಳು: ಬೆಹರಾಮನ ದೃಷ್ಟಿಯೆಲ್ಲ ಆ ಮೋರೆಯ ಮೇಲೆಯೆ ನೆಲೆಸಿತ್ತು. ಬಂದವನು ಉಟ್ಟ ಖಾಕಿಯ ಯೂನಿಫಾರ್ಮು ಅರಿವಿನ ಅಂಚಿನಲ್ಲಿ ಸುಳಿದು ಹೋಯಿತೇ ಹೊರತು ಕಣ್ಣುತುಂಬಲಿಲ್ಲ. ಅವನ ಹಿಂದೆ ನಿಂತ ಶಿರೀನ್ ಹಾಗೂ ಅವಳ ತಾಯಿಗೆ ಬಾಗಿಲ ಹೊರಗಿನ ಮಂದ ಬೆಳಕಿನಲ್ಲಿ ನಿಂತವನ ಹೊಳಹು ಪಡೆಯುವುದಷ್ಟೇ ಸಾಧ್ಯವಾಯಿತು. ಆದರೂ ಬಂದ ಹೊತ್ತು, ಬಂದ ರೀತಿ ಇವುಗಳಿಂದಾಗಿ ಈ ಭೇಟಿ ಕರುಣಾಕರನ್‌ಗೆ ಸಂಬಂಧಿಸಿದ್ದೆನ್ನುವುದರಲ್ಲಿ ಸಂಶಯವಿರಲಿಲ್ಲ. ಆದರೆ ಇಷ್ಟೆಲ್ಲ ವಿದ್ಯಮಾನಗಳು ಈ ಒಂದು ಸಂಜೆಯಲ್ಲಿ, ಅದೂ ತಮ್ಮ ಮನೆಯಲ್ಲೇ ನಡೆಯಲು ಕಾರಣವೇನು? ತಾಯಿ ಮಗಳು ಇಬ್ಬರೂ ಕಳವಳಕ್ಕೆ ಒಳಗಾದರು. ಉಸಿರು ಬಿಗಿಹಿಡಿದು, ತಮಗೆ ಮುಖಾಮುಖಿಯಾಗಿ ನಿಂತವನ ಬಾಯಿಂದ ಹೊರಡುವ ಮಾತಿಗಾಗಿ ಕಾದು ನಿಂತರು: “ಸರ್, ನಾನು ನಿಮ್ಮ ವಾಸು-ವಾಸುದೇವನ್.” ಕೇಳಿದಂತಿದ್ದ ಹೆಸರು, ಪರಿಚಯವುಳ್ಳಂತಿದ್ದ ದನಿ. ಬೆಹರಾಮನ ಮೈಮೇಲೆ ಮುಳ್ಳು ನಿಂತರೂ ಆ ಗಳಿಗೆಯಲ್ಲಿ ಮನಸ್ಸಿನಲ್ಲಿ ಮೂಡಿನಿಂತ ಆಕೃತಿ ನೆನಪಿನಲ್ಲಿ ಯಾವುದರೊಡನೆಯೂ ಹೊಂದಿಕೊಳ್ಳದಾಯಿತು. ಹಿಂದೆ ನಿಂತ ಹೆಂಡತಿ ಮಾತ್ರ ಕಿವಿಯ ಮೇಲೆ ಬಿದ್ದ ಧ್ವನಿಯನ್ನು ಗುರುತಿಸಲು ತಪ್ಪಲಿಲ್ಲ. ತನ್ನಷ್ಟಕ್ಕೇ ಆಡಿಕೊಂಡ ಮಾತುಗಳ ಧಾಟಿಯಲ್ಲಿ-“ಓ! ಮೂರು ವರ್ಷಗಳ ಹಿಂದೆ ನಮ್ಮಲ್ಲಿ ಕೆಲಸಕ್ಕಿದ್ದ ಹುಡುಗ,” ಎಂದಳು, ಕೆಳದನಿಯಲ್ಲಿ. ತೀರ ಅಸ್ಪಷ್ಟವಾಗಿ ಕೇಳಿಸಿದ ಮಾತಾದರೂ, ಮುಂದೆ ನಿಂತವನು ಮನಸ್ಸಿನಲ್ಲಿ ಅದೇ ಆಗ ಎಬ್ಬಿಸುತ್ತಿದ್ದ ಭಾವನೆಯ ಅಲೆಗಳಿಗೆ ಅಷ್ಟೇ ಸಾಕಾಯಿತು ಎನ್ನುವಂತೆ-“ಅರೆ! ನಮ್ಮ ವಾಸೂ! ಬಾಬಾಬಾ,” ಎಂದವನೇ ಭಾವುಕನಾಗಿ, ಬಂದವನ ಕೈಕುಲುಕಿ ಅವನನ್ನು ಒಳಗಡೆ ಬರಮಾಡಿಕೊಂಡ.

ಇದಾವುದರ ತುದಿಬುಡ ಗೊತ್ತಿಲ್ಲದ ಶಿರೀನ್ ಮಾತ್ರ ಈ ಭೇಟಿ ಆಕಸ್ಮಿಕವಾದುದಲ್ಲ ಎಂದು ಆತಂಕಕ್ಕೆ ಒಳಗಾಗುತ್ತಿರುವಾಗ ಮಲಗುವ ಕೋಣೆಯ ಬಾಗಿಲಲ್ಲಿ ನಿಂತ ಅವಳ ತಾಯಿ ಸಮಾಧಾನ ಹೇಳಿದಳು: “ಹೆದರಬೇಡ. ಬಹಳ ಒಳ್ಳೆಯ ಹುಡುಗ, ಕೆಲವುಕಾಲ ನಮ್ಮಲ್ಲೇ ಕೆಲಸಕ್ಕಿದ್ದ. ದುಬಾಯಿಗೋ, ಅಂತಹದೇ ಇನ್ನಾವ ಊರಿಗೋ ಹೋಗಿದ್ದವನು ಈಗ ಬಂದಿರಬೇಕು, ಆಗ ಬಂದ ಹುಡುಗನ ಪ್ರಾಂತದವನೇ. ಅವನ ಬಗ್ಗೆ ಗೊತ್ತಿದ್ದವನಿರಬೇಕು.” ಶಿರೀನಳಿಗೆ ಸಮಾಧಾನವಾಗಲಿಲ್ಲ. ಈ ಎಲ್ಲ ಸಂಗತಿಗಳು ಈ ಒಂದು ಸಂಜೆಯಲ್ಲಿ ತಮ್ಮ ಮನೆಯಲ್ಲೇ ನಡೆಯಲು ಕಾರಣವೇನೆಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಅಪ್ಪ ತನ್ನ ಭೋಳೇತನದಿಂದ ಇಲ್ಲದ ಉಪದ್ವ್ಯಾಪದಲ್ಲಿ ಸಿಕ್ಕಿಕೊಳ್ಳುತ್ತಾನೆ. ಮಾತನಾಡಲು ಹೋದರೆ ಬರಿಯ ಪತ್ರಿಕೆಗಳನ್ನು ಓದಿ ಹುಟ್ಟಿಸಿಕೊಂಡ ಭಯ ನಿನ್ನದು ಎಂದು ಅವಳನ್ನೇ ಹಂಗಿಸುತ್ತಾನೆ. ದಿನಪತ್ರಿಕೆಗಳ ಬಗ್ಗೆ ಅಪ್ಪನಿಗಿದ್ದ ತಿರಸ್ಕಾರ ಅವಳಿಗೆ ಅರ್ಥವಾಗದ್ದು.
ವಾಸುದೇವನ್‌ನನ್ನು ದಿವಾಣಖಾನೆಗೆ ಕರೆದೊಯ್ಯುತ್ತಿದ್ದ ಅಪ್ಪನನ್ನು ತಾಯಿಯೂ

ಹಿಂಬಾಲಿಸುತ್ತಿದ್ದುದನ್ನು ನೋಡಿ ಶಿರೀನ್ ಇನ್ನೊಂದು ಬೆಡ್‌ರೂಮ್‌ನಲ್ಲಿಂದ ಕೇಳಿಸುತ್ತಿದ್ದ ಮಕ್ಕಳ ಕೋಲಾಹಲ ಲಕ್ಷ್ಯಕ್ಕೆ ಬಂದವಳ ಹಾಗೆ ದುಡುದುಡು ಹೆಜ್ಜೆಹಾಕಿ ಅತ್ತಸಾಗಿ ಕದ ತೆರೆದು ನೋಡಿದಳು. ಸೀತೆಯ ಜೊತೆಗೆ ಆಡುತ್ತಿದ್ದವರನ್ನು ಕಂಡು-ಇಲ್ಲ, ಅಂಥ ಅನಾಹುತವೇನೂ ನಡೆಯುವ ಸಂಭವ ಕಾಣುತ್ತಿಲ್ಲ ಎಂದು ಮನಗಂಡು-“ಹೀಗೆಯೇ ಆಡುತ್ತಿರಿ” ಎಂದು ಹೇಳಿ ಕದ ಮುಚ್ಚಿಕೊಂಡು, ತಾನೂ ದಿವಾಣಖಾನೆಗೆ ಬಂದಳು. ವಾಸುದೇವನ್ ಸೋಫಾದಲ್ಲಿ ಕೂರದೆ ಕೆಲಹೊತ್ತಿನ ಮೊದಲು ಬಂದವರ ಸಲುವಾಗಿ ಹಾಕಿಸಿದ ಕುರ್ಚಿಯೊಂದರಲ್ಲಿ ಕೂತಿದ್ದ. ಅಮ್ಮ ಆಗಲೇ ಒಂದು ಗ್ಲಾಸು ನೀರನ್ನು ತಂದು ಟೀಪಾಯಿಯ ಮೇಲೆ ಇರಿಸಿದ್ದಳು. ಚಹದ ಬಗೆಗೂ ಕೇಳಿರಬೇಕು “ಈ ಹೊತ್ತು ಬೇಡ, ಇನ್ನೊಮ್ಮೆ ಬರುತ್ತೇನೆ” ಎಂದದ್ದು ಇಲ್ಲಿ ಬರುತ್ತಿರುವಾಗಲೇ ಕೇಳಿಸಿತ್ತು. ಏನೋ ತುರ್ತಾದುದನ್ನು ಹೇಳಿ ಹೋಗುವ ಅವಸರದಲ್ಲಿ ಇದ್ದಂತೆ ಇದ್ದವನು, ಈಗ ದಿವಾಣಖಾನೆಯ ಬೆಳಕಿನಲ್ಲಿ, ಕದದ ಗಾಜುಕಣ್ಣಿನೊಳಗಿಂದ ನೋಡಿದಾಗ ಹೆದರಿಸಿದವನಿಗಿಂತ ಬೇರೆಯಾಗಿ ಕಂಡ. ಮಾತುನಾಡುವಾಗ ಅವನ ಮುಖದ ಮೇಲೆ ಮೂಡಿದ ಅಪ್ಪ-ಅಮ್ಮರ ಬಗೆಗಿನ ಆದರ ಪ್ರೀತಿ, ಹೇಳಲು ಬಂದುದರ ಬಗೆಗಿನ ಕಾಳಜಿ, ತನ್ನನ್ನು ನೋಡಿದ ಪ್ರತಿಸಾರೆ ನಾಚಿಕೊಳ್ಳುತ್ತಿದ್ದ ರೀತಿ-ಇವೆಲ್ಲವುಗಳಿಂದಾಗಿ ಅವನು ಆತ್ಮೀಯನಾಗತೊಡಗಿದ್ದು, ಮನುಷ್ಯ ತನ್ನನ್ನು ಪ್ರಕಟಿಸುವುದು ಕೊನೆಗೂ ತನ್ನ ಮೋರೆಯ ಮುಖಾಂತರ ಅನ್ನಿಸಿತು. ಅವಳ ಮೋರೆಯ ಮೇಲೆ ಅವಳಿಗೆ ಅರಿವಿಲ್ಲದೇನೆ ಮಂದವಾದ ಮುಗುಳುನಗೆ ಮೂಡಿತ್ತು. ಅದನ್ನು ಕಂಡ ವಾಸುದೇವನ್ನನ ಮೋರೆಯ ಮೇಲೂ ಮುಗುಳುನಗೆ ಪಸರಿಸಿತು. ಹುಡುಗ ತುಂಬ ಸ್ಮಾರ್ಟಾಗಿ ಕಂಡ. ಕೇರಳದಿಂದ ಬಂದ ಎಲ್ಲ ಹುಡುಗರೂ ಹೀಗಿರಬೇಕು ಎಂದುಕೊಂಡಳು. ಜೀವನದ ಬಗೆಗಿನ ಅವರ ಆರೋಗ್ಯಪೂರ್ಣ ಲವಲವಿಕೆ ಯಾರನ್ನೂ ತಟ್ಟುವಂಥದ್ದು. ಹೆಚ್ಚು ಕಲಿತಿರಲಿಕ್ಕಿಲ್ಲ. ಆದರೂ ಇಂಗ್ಲಿಷ್‌ನಲ್ಲಿ, ಹಿಂದಿಯಲ್ಲಿ ಮಾತನಾಡುತ್ತಿದ್ದ. ಅವನು ಹಾಕಿಕೊಂಡ ಖಾಕಿ ಯೂನಿಫಾರ್ಮು ಕೂಡ ಈಗ ಲಕ್ಷ್ಯಕ್ಕೆ ಬಂದವಳ ಹಾಗೆ, ಎಲ್ಲೋ ಕಟ್ಟಡವೊಂದರ ‘ವಾಚ್‌ಮನ್’ನಾಗಿ ಕೆಲಸ ಮಾಡುತ್ತಿರಬೇಕೆಂದು ಬಗೆದಳು. ಉಪಜೀವಿಕೆಗಾಗಿ ಎಂಥ ಕೆಲಸವನ್ನೂ ಮಾಡಲು ಸಿದ್ಧರಿವರು. ಕೆಲವು ವರ್ಷಗಳ ಹಿಂದೆ ತಮ್ಮ ಮನೆಯಲ್ಲೇ ಮನೆಗೆಲಸಕ್ಕೆ ಇದ್ದನಂತೆ…
“ಇಲ್ಲ, ಇಲ್ಲಿಯ ಕೆಲಸ ಬಿಟ್ಟ ನಂತರ ನಾಲ್ಕು ಕಾಸು ಮಾಡುವ ಉದ್ದೇಶದಿಂದ ಮಸ್ಕತ್ತಿಗೆ ಹೋಗಿಬಂದೆ. ಒಂದು ಗರಾಜಿನಲ್ಲಿ ಮಿಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದೆ. ಕಾಸೇನೋ ಮಾಡುತ್ತಿದ್ದೆ. ಆದರೆ ಅಲ್ಲಿ ಯಾವುದೂ ಮನಸ್ಸಿಗೆ ಒಗ್ಗಲಿಲ್ಲ. ಈಗ ಒಂದು ವರ್ಷದಿಂದ ಮುಂಬಯಿಯಲ್ಲೇ ಚೌಕೀದಾರನಾಗಿ ಕೆಲಸ ಮಾಡುತ್ತಿದ್ದೇನೆ. ಸದ್ಯವೇ ಮದುವೆಯಾಗುವವನಿದ್ದೇನೆ. ಇಲ್ಲೇ ಧಾರಾವಿಯ ಝೋಪಡಪಟ್ಟಿಯ ಗುಡಿಸಲೊಂದರಲ್ಲಿ ಮನೆ ಮಾಡಿದ್ದೇನೆ. ಈ ಮೊದಲೇ ಬಂದು ಕಾಣುವವನಿದ್ದೆ…”

ಪೀಠಿಕೆ ಉದ್ದವಾಯಿತೇನೋ ಅನ್ನಿಸಿ ಮುಂದುವರಿಯಲು ಸಂಕೋಚವಾಯಿತು. ಮಾತನ್ನು ಸರಕ್ಕನೆ ತಾನು ಬಂದಂಥ ಉದ್ದೇಶದ ಕಡೆಗೆ ಹೊರಳಿಸುವಷ್ಟರಲ್ಲಿ ತುಂಬ ಆತಂಕಕ್ಕೆ ಕಳವಳಕ್ಕೆ ಒಳಗಾಗುತ್ತಿದ್ದುದು ವಾಸುದೇವನ್‌ನ ಮೋರೆಯ ಮೇಲೆ ಸ್ಪಷ್ಟವಾಗಿ ಪ್ರಕಟವಾಗತೊಡಗಿತ್ತು. ತಾನು ಹೇಳಲು ಬಂದದ್ದು ಹೇಗೆ ಗೊತ್ತಾಯಿತು ಎಂಬುದನ್ನೆಲ್ಲ ವಿವರಿಸಲು ಈಗ ಹೊತ್ತೇ ಇಲ್ಲವಾದ್ದರಿಂದ ನೇರವಾಗಿ ವಿಷಯಕ್ಕೇ ಬರುತ್ತೇನೆ ಎನ್ನುವವನ ಹಾಗೆ ಹೇಳತೊಡಗಿದ:
“ಸರ್, ನಿಮ್ಮ ಮನೆಗೆ ಈ ಹೊತ್ತು ಒಬ್ಬ ಹುಡುಗ ಬಂದಿದ್ದನಲ್ಲ, ಅವನನ್ನೊಮ್ಮೆ ನೋಡಬೇಕಾಗಿತ್ತು. ಹಾಗೆಂದೇ ಬಂದೆ. ನಾನು ಬರುವುದರೊಳಗೇ ಅವನು ಹೊರಟುಹೋದಂತಿದೆ. ಕೆಲವು ತಿಂಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ‘ಸೀ ನೆಸ್ಟ್’ ಕಟ್ಟಡಕ್ಕೂ ಬಂದಿರಬೇಕು. ಅಲ್ಲಿಯ ಜನ ಮಾತನಾಡಿಕೊಳ್ಳುತ್ತಿದ್ದ ರೀತಿ ನೋಡಿದರೆ ಅವನು ನಿಜಕ್ಕೂ ಮೂರು ವರ್ಷಗಳ ಹಿಂದಿನ ಖೂನಿಯ ಬಗ್ಗೆ ತಿಳಿಯಲು ಬಂದಿರಬೇಕು ಅನ್ನಿಸುತ್ತದೆ. ಹುಡುಗ ತನ್ನ ಭೋಳೇತನದಲ್ಲಿ ಮೊನ್ನೆ ಮೊನ್ನೆ ನಡೆದ ರದ್ದೀವಾಲಾನ ಖೂನಿಗೂ ಮೂರು ವರ್ಷಗಳ ಹಿಂದಿನದಕ್ಕೂ ಸಂಬಂಧವಿದ್ದಂತೆ ಮಾತನಾಡಿ ಇಲ್ಲಿಯ ಪಾತಾಳಲೋಕದ ವ್ಯವಹಾರಗಳಿಗೆ ಸಂಬಂಧಪಟ್ಟ ಹಲವರ ಸಂಶಯ ಕೆರಳಿಸಿದ್ದಾನೆ. ಪಾಪ, ಅಂದು ಸತ್ತವನು ಹುಡುಗನ ಹತ್ತಿರದ ಸಂಬಂಧಿಯಾಗಿರಬೇಕು. ಯಾರುಯಾರಿಂದಲೋ ಸುದ್ದಿ ತಿಳಿದು ಖಾತ್ರಿಮಾಡಿಕೊಳ್ಳಲು ಈಗ ಬಂದಿರಬೇಕು. ಇಂದಿನ ದಿನಗಳಲ್ಲಿ ಈ ಮುಂಬಯಿಯಲ್ಲಿ ಖುದ್ದು ಅಣ್ಣನ ಕೊಲೆಯಬಗೆಗೂ ಹೀಗೆ ಮಾತಾಡಿಕೊಳ್ಳುವುದು ಎಷ್ಟೊಂದು ಗಂಡಾಂತರದ್ದು ಎಂದು ಅರಿಯದ ಹುಡುಗ ತನ್ನ ಜೀವಕ್ಕೇ ಅಪಾಯ ತಂದುಕೊಂಡಿದ್ದಾನೆ.”

ಇದು ಬೆಹರಾಮನ ಭಯವೂ ಆಗಿತ್ತು. ಆದರೆ ಅದನ್ನು ಇನ್ನೊಬ್ಬನ ಬಾಯಿಂದ ಕೇಳುತ್ತಿದ್ದಂತೆ ಭಯ ಕೇವಲ ಭಯವಾಗಿಯೇ ಉಳಿಯದೆ ಕರುಣಾಕರನ್ನನ ಸಂರಕ್ಷಣೆಗಾಗಿ ತಾನು ತೆಗೆದುಕೊಳ್ಳಬಹುದಾದ ಕ್ರಮವಾಗಿ ಮನಸ್ಸಿನಲ್ಲಿ ಆಕಾರ ಪಡೆಯಹತ್ತಿತು. ಆದರೂ ಈ ಆಗಂತುಕ ತನ್ನಿಂದ ಖಚಿತವಾಗಿ ಬಯಸುತ್ತಿದ್ದುದಾದರೂ ಏನೆಂಬುದನ್ನು ತಿಳಿಯಲಿಲ್ಲ. ಸುಮ್ಮನೆ ಬಾಯಿಮುಚ್ಚಿ ಕುಳಿತ. ವಾಸುದೇವನ್‌ನೇ ಮುಂದರಿಸಿದ:
“ಸರ್, ಮಾಹಿತಿ ಒಟ್ಟುಮಾಡುವುದಕ್ಕೆ ಹುಡುಗ ಒಂದೊಂದು ಕಡೆಯಲ್ಲಿ ಒಂದೊಂದು ಕಾರಣ ಕೊಟ್ಟಿದ್ದಾನಂತೆ. ಒಂದೆರಡು ಕಡೆಗಳಲ್ಲಿ ಒಂದು ಪೇಪರಿಗಾಗಿ ಝೋಪಡಿಪಟ್ಟಿಗಳ ಮೇಲೆ ಬರೆಯುತ್ತಿದ್ದ ರಿಪೋರ್ಟಿಗೆಂದು ಹೇಳಿದ್ದಾನಂತೆ. ಮೂರು ವರ್ಷಗಳ ಹಿಂದಿನ ಕೊಲೆ ಈ ರಿಪೋರ್ಟಿನ ವಿಷಯವೆಂದು ಈ ದುಷ್ಟರ ಗುಮಾನಿ. ಅವನು ಬರೆದಿಟ್ಟಿರಬಹುದಾದ ಟಿಪ್ಪಣಿಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನ ನಡೆದಂತಿದೆ. ಕಳೆದ ಹಲವು ದಿನಗಳಿಂದ ಆಫೀಸಿಗೇ ಹೋಗುತ್ತಿಲ್ಲವಂತೆ. ಮನೆಯಲ್ಲಿ ಕುಳಿತೇ ರಿಪೋರ್ಟು ಬರೆಯುತ್ತಿರಬೇಕಂತೆ.”
ವಾಸುದೇವನ್ ಧ್ವನಿಯಲ್ಲಿ ಮೂಡಿದ್ದ ಆತಂಕ ಪ್ರಾಮಾಣಿಕವಾದದ್ದು ಎನ್ನುವುದರ ಬಗ್ಗೆ ಬೆಹರಾಮನಿಗೆ ಸಂಶಯವಿರಲಿಲ್ಲ. ಆದರೂ, ಈ ಅಕಸ್ಮಾತ್ತು ಭೇಟಿಯ ಪ್ರೇರಣೆಯನ್ನು ಕುರಿತು ಸಣ್ಣ ಗುಮಾನಿ ಮನಸ್ಸಿನಲ್ಲಿ ಏಳದೇ ಇರಲಿಲ್ಲ. ಮೂರು ವರ್ಷಗಳ ಹಿಂದಿನ ಈ ಭೀಕರ ಕೊಲೆಯ ಬಗೆಗೆ ನನಗೆ ತಿಳಿಸಿದವನು ಇದೇ ವಾಸುದೇವನ್. ಮುಂದೆ ನಡೆದ ವಿದ್ಯಮಾನಗಳಿಂದಾಗಿ, ನನಗೆ ತಿಳಿದ ಸಂಗತಿಗಳನ್ನೆಲ್ಲ ನನ್ನೊಳಗೇ ಇಟ್ಟುಕೊಂಡು ಬಾಯಿ ಮುಚ್ಚಿಕೊಂಡದ್ದು ಇವನ ರಕ್ಷಣೆಗಾಗಿಯೆ. ನನ್ನ ಸಲಹೆಯ ಮೇರೆಗೇ ಇವನು ಮಸ್ಕತ್ತಿಗೆ ಪರಾರಿಯಾದದ್ದು. ಈಗ ಕೊಲೆಯಾದವನ ತಮ್ಮನೋ ಇನ್ನಾರೋ ಬಂದು ಆ ಕೊಲೆಯ ತನಿಖೆ ಮಾಡುತ್ತಿರುವ ಹೊತ್ತಿಗೆ ಮಸ್ಕತ್ತಿನಿಂದ ಹಿಂತಿರುಗಿ ಬಂದಿರುವ ಇವನಿಗೆ ನನ್ನಿಂದಾಗಿ ತನ್ನ ಹೆಸರು ಈ ಹುಡುಗ ಒಟ್ಟು ಮಾಡುತ್ತಿದ್ದ ಮಾಹಿತಿಯಲ್ಲಿ ಸೇರಿಕೊಳ್ಳಬಹುದೆಂಬ ಭಯವಾಗಿರಬಹುದೆ? ‘ನೀನು ಕೊಟ್ಟ ಮಾಹಿತಿಯನ್ನು ನಾನು ಇನ್ನಾರಿಗೂ ತಿಳಿಸಿಲ್ಲ’ ಎಂದು ಹೇಳಬೇಕೆನ್ನಿಸಿತು. ಆದರೆ ಅವನಾಗಿಯೇ ಅದರ ಬಗ್ಗೆ ಮಾತೆತ್ತಿರದಾಗ ಹಾಗೆ ಗ್ರಹೀತ ಹಿಡಿದು ಮಾತನಾಡುವ ಮನಸ್ಸಾಗಲಿಲ್ಲ. ಮೇಲಾಗಿ ಕರುಣಾಕರನ್ನನನ್ನು ಕಾಣಲು, ಇವರೆಲ್ಲ ತಮ್ಮ ಮನೆಗೇ ಬಂದದ್ದು ಹೇಗೆ ಎಂದು ಆಶ್ಚರ್ಯವೂ ಅಗತೊಡಗಿತ್ತು. ಈ ಬಗ್ಗೆ ನೇರವಾಗಿ ಕೇಳಿದಾಗ ವಾಸುದೇವನ್ ಹೇಳಿದ:
“ಹುಡುಗ ಈ ಒಂದು ವಿಷಯದಲ್ಲಿ ತುಸು ದಕ್ಷತೆ ವಹಿಸಿದಂತೆ ತೋರುತ್ತದೆ, ಸರ್! ಅವನ ಭೇಟಿಗಳಲ್ಲಿ ಒಂದು ನಿಶ್ಚಿತವಾದ ಯೋಜನೆ ಇದ್ದ ಹಾಗಿದೆ. ಒಂದು ಮನೆಗೆ ಭೇಟಿಯಿತ್ತನಂತರ ಅವನು ಭೇಟಿ ಮಾಡಬಹುದಾದ ಮುಂದಿನ ಮನೆಯನ್ನು ಊಹಿಸುವುದು ಶಕ್ಯವೇ ಇರಲಿಲ್ಲ. ಒಂದು ಮನೆಗೆ, ಅಷ್ಟೇಕೆ, ಒಂದೇ ಕಟ್ಟಡಕ್ಕೆ ಎರಡು ಸಾರೆ ಭೇಟಿ ಇತ್ತದ್ದಿಲ್ಲ. ನಿಮ್ಮ ಮನೆಗಷ್ಟೇ ಹೀಗೆ ಎರಡನೇ ಸಾರೆ ಬಂದದ್ದು. ನಿಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪಾರ್ವತಿ ನಾನು ಚೌಕೀದಾರನಾಗಿರುವ ಕಟ್ಟಡದಲ್ಲೇ ಇಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವಳು ನನ್ನನ್ನು ಬಲ್ಲಳು. ಮೊನ್ನೆ ಮೊನ್ನೆ ನಡೆದ ರದ್ದೀವಾಲಾನ ಖೂನಿಯ ಬಗ್ಗೆ ಅವಳಿಗೆ ಬಹಳಷ್ಟು ಗೊತ್ತಿದ್ದಂತಿದೆ-ಅವಳೇ ಹೇಳಿದಳು. ಈಗ ಹುಡುಗನ ಬಗೆಗೂ ಅವನನ್ನು ನಾನು ನೋಡಬೇಕಾಗಿದೆ, ಸರ್! ಅವನು ನಾನು ತಿಳಕೊಂಡ ಹುಡುಗನು ಹೌದೋ ಅಲ್ಲವೋ ಎಂಬುದನ್ನು ಅರಿಯಬೇಕಾಗಿದೆ. ಅದಕ್ಕಿಂತ ಹೆಚ್ಚಾಗಿ ಈ ಝೋಪಡಪಟ್ಟಿಗಳಿಗೆ, ಪಾತಾಳಲೋಕದ ವ್ಯವಹಾರಗಳಿಗೆ ಸಂಬಂಧಪಟ್ಟವರಿಂದಾಗಿ ಅವನ ಜೀವಕ್ಕೆ ಇರುವ ಅಪಾಯ ಅವನಿಗೆ ತಿಳಿಸಬೇಕಾಗಿದೆ. ಮಧ್ಯಾಹ್ನದ ಪಾಳಿಯನ್ನು ಮುಗಿಸುತ್ತಲೇ ಓಡೋಡಿಬಂದರೂ ತಪ್ಪುಗಂಟಾದ. ಅವನನ್ನು ಕೂಡಲೇ ಕಾಣಬೇಕಾಗಿದೆ, ಸರ್…” ವಾಸುದೇವನ್ ಮಾತಿನಲ್ಲಿ ದಮ್ಮಯ್ಯ ಹಾಕುವ ಧಾಟಿ ಸೇರಿಕೊಂಡಿತ್ತು.

ಇವನು ಬಂದದ್ದು ಕರುಣಾಕರನ್ನನ ಮನೆಯ ವಿಳಾಸ ಪಡೆಯಲು ಎನ್ನುವುದು ಬೆಹರಾಮನಿಗೆ ಹೊಳೆಯದೆ ಇರಲಿಲ್ಲ. ಅವನ ಹತ್ತಿರ ಕರುಣಾಕರನ್ನನ ಮನೆಯ ವಿಳಾಸವೇ ಮೊದಲು ಇರಲಿಲ್ಲ. ಅವನಿತ್ತ ತೀರ ಅಲ್ಪಕಾಲದ ಎರಡು ಭೇಟಿಗಳಲ್ಲಿ ಮಾತುಕತೆ ಅಂಥ ಆತ್ಮೀಯ ವಿಷಯಗಳತ್ತ ಸಾಗಿರಲೇ ಇಲ್ಲ. ಆದರೆ ತನಗೆಗೊತ್ತಿದ್ದರೂ ಈಗಬಂದವನಿಗೆ ಅದನ್ನು ಕೊಡುತ್ತಿರಲಿಲ್ಲವೇನೋ ಎಂಬ ಅನ್ನಿಸಿಕೆಯಿಂದ ಮಾತ್ರ ಬೆಹರಾಮನಿಗೆ ತನ್ನ ಬಗೆಗೇ ಮುಜುಗರವಾಗದೇ ಇರಲಿಲ್ಲ. ಇದ್ದಕ್ಕಿದ್ದಂತೆ ಹಾಗೆ ಮುಂದೆ ಕುಳಿತವನಲ್ಲಿ ತನಗಿರಬೇಕಾದ ವಿಶ್ವಾಸ ಕುಸಿಯುತ್ತಿದೆ. ಆತ್ಮರಕ್ಷಣೆಗಾಗಿ ದೇಶವನ್ನೇ ಬಿಟ್ಟು ಓಡಿಹೋಗಿದ್ದ ಈತ ಈಗ ಕೊಲೆಯಾದವನ ಸಂಬಂಧಿಯಿರಬಹುದೆಂಬ ಗುಮಾನಿಗೆ ಕಾರಣನಾದವನ ರಕ್ಷಣೆಗೆ ಹಾತೊರೆಯುವುದು ಸಾಧ್ಯವೆಂದು ಈ ಗಳಿಗೆಯಲ್ಲಂತೂ ತೋರಲಿಲ್ಲ. ಈ ಎಲ್ಲ ಉಪದ್ವ್ಯಾಪಗಳಿಂದ ದೂರ ಉಳಿಯುವ ಅವಶ್ಯಕತೆ ಇವನಿಗೆ ಎಂದಿಗಿಂತ ಈಗ ಹೆಚ್ಚಿದೆ ಅನ್ನಿಸಿತು. ಅಷ್ಟೇ ಅಲ್ಲ, ನಿನ್ನೆ ಕರುಣಾಕರನ್ ಬಂದದ್ದು ಕೇವಲ ರದ್ದೀವಾಲಾನ ಕೊಲೆಯ ಬಗ್ಗೆ ಮಾಹಿತಿ ದೊರಕಿಸಲು ಅಲ್ಲವೇನೋ ಎಂಬ ಅನುಮಾನ ಮೂಡಿದ ಕ್ಷಣದಲ್ಲಿ ಅವನನ್ನು ತನ್ನ ಬಳಿಗೆ ಕಳಿಸಿರಬಹುದಾದವರನ್ನು ನೆನೆಯುವಾಗ ವಾಸುದೇವನ್‌ನ ಹೆಸರೂ ಮನಸ್ಸನ್ನು ಹಾಯ್ದುಹೋದಂತಹ ಅನ್ನಿಸಿಕೆ. ‘ಈ ಕೊಲೆಯ ಬಗ್ಗೆ ನನ್ನ ಮಾಹಿತಿ ಇದೆಯೆಂದು ಯಾರು ಹೇಳಿದರು?’-ನಿನ್ನೆ ತಾನು ಕರುಣಾಕರನ್‌ನಿಗೆ ಕೇಳಿದ ಈ ಪ್ರಶ್ನೆಯ ಹಿಂದೆ ಇಂಥ ಗುಮಾನಿ ಇತ್ತೆ? ಮಸ್ಕತ್ತಿನಿಂದ ಬಂದು ಒಂದು ವರ್ಷವಾಗುತ್ತ ಬಂತಂತೆ. ನಮ್ಮ ಕಡೆಗೆ ಯಾಕೆ ಇಷ್ಟು ದಿನ ಬರಲಿಲ್ಲ? ಬೆಹರಾಮ್ ಇಂಥ ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಒಳಗಿನ ಗುಮಾನಿ ಇಂಥ ಶಬ್ದಗಳಲ್ಲಿ ಆಕಾರ ಪಡೆದಿರದೆ ಕೇವಲ ಬಾಯಿ ಕಟ್ಟಿಹಿಡಿದ ಶಕ್ತಿಯಾಗಿತ್ತು. ಮುದುಕ ಬಾಯಿ ಬಿಡಲು ಅನುಮಾನಿಸುತ್ತಿದ್ದುದನ್ನು ನೋಡಿ ಮುಂದೆ ಕೂತವನ ಧೈರ್ಯ ಕುಗ್ಗಹತ್ತಿತು. ಅದಾಗ ಶಿರೀನಳೇ ಬಾಯಿಬಿಟ್ಟಳು:
“ನೋಡಿ, ಅಪ್ಪ ಈಗ ತುಂಬ ದಣಿದಿದ್ದಾರೆ. ಕರುಣಾಕರನ್ನನೇನು ಮಳ್ಳನಲ್ಲ. ಇಂದು ಸಂಜೆ ಇಲ್ಲಿ ನಡೆದದ್ದರ ಅರ್ಥವನ್ನು ಗ್ರಹಿಸದೇ ಇರಲಾರ. ಮೇಲಾಗಿ, ನಮ್ಮಲ್ಲಿ ಯಾರಿಗೂ ಅವನ ವಿಳಾಸ ಗೊತ್ತಿಲ್ಲ. ಈಗ ನೀವು ಇಲ್ಲಿ ಹೆಚ್ಚು ಹೊತ್ತು ಕೂರುವುದು ಸರಿಯಲ್ಲ. ನಾವೇ ನಮ್ಮ ನಡತೆಯಿಂದಾಗಿ ಈ ಜನರಲ್ಲಿ ಸಲ್ಲದ ಸಂಶಯ ಹುಟ್ಟಿಸಿ ಕರುಣಾಕರನ್ನನಿಗಿದ್ದ ಅಪಾಯವನ್ನು ಹೆಚ್ಚಿಸಬಹುದು” ಎಂದು ಹೇಳಿ ಸಂಜೆ ನಡೆದದ್ದನ್ನು ಯಾವುದೇ ಬಗೆಯ ನಾಟಕೀಯತೆಗೆ ಎಡೆಕೊಡದೆ ಸಂಕ್ಷಿಪ್ತವಾಗಿ ತಿಳಿಸಿದಳು.

ಶಿರೀನಳ ಮಾತಿನಲ್ಲಿಯ ದಣಿವಿನ ಉಲ್ಲೇಖವೇ ತನಗಾದ ದಣಿವನ್ನು ಅರಿವಿಗೆ ತಂದುಕೊಟ್ಟಿತೆನ್ನುವಂತೆ ಬೆಹರಾಮ್ ಒಮ್ಮೆಲೇ ತನ್ನ ಬಾಯನ್ನು ಆವರಿಸತೊಡಗಿದ ಆಕಳಿಕೆಯನ್ನು ನಿಗ್ರಹಿಸುವ ಪ್ರಯತ್ನ ಮಾಡುತ್ತ, “ಇನ್ನೊಮ್ಮೆ ಬಾ. ಸದ್ಯ, ನಾನೇ ಈ ಬಗ್ಗೆ ಏನು ಮಾಡಲಾಗುತ್ತದೆಯೋ ನೋಡುತ್ತೇನೆ” ಎಂದ. ಏನೋ ಹೇಳಲು ಹೊರಟು ಹೇಳಲು ಆಗದವನ ಹಾಗೆ ಕೂತಲ್ಲಿಂದ ಎದ್ದು ವಾಸುದೇವನ್ ಬಾಗಿಲ ಕಡೆಗೆ ಹೊರಟ. ಕಾರಿಡಾರಿನಲ್ಲಿ ಇದುರಾದ ಮುದುಕಿಯನ್ನು ನೋಡಿ “ಇನ್ನೊಮ್ಮೆ ಬರುತ್ತೇನಮ್ಮಾ,” ಎಂದು ಚುಟುಕಾಗಿ ಹೇಳಿ ಮುಗುಳುನಗುವ ಪ್ರಯತ್ನ ಮಾಡಿದ. ಶಿರೀನಳೇ ಅವನನ್ನು ಬಾಗಿಲವರೆಗೆ ಮುಟ್ಟಿಸಿ, ಅವನು ಹೊರಗೆ ಹೋದಮೇಲೆ ಕದ ಮುಚ್ಚಿಕೊಂಡಳು.

ಅಧ್ಯಾಯ ಐದು

ಬೆಹರಾಮ್ ನೇರವಾಗಿ ಮಲಗುವ ಕೋಣೆಗೆ ಹೋದವನೇ ಹಾಸಿಗೆಯಲ್ಲಿ ಅಡ್ದವಾದ. ಕೋಣೆಯ ಬಾಗಿಲಲ್ಲಿ ಬಂದು ನಿಂತ ಮಗಳಿಗೆ, “ಕೆಲಹೊತ್ತು ಹೀಗೆಯೇ ಬಿದ್ದಿರುತ್ತೇನೆ, ಊಟಕ್ಕೆ ಎಬ್ಬಿಸು” ಎಂದವನು ಇನ್ನೊಮ್ಮೆ ಆಕಳಿಸಿದ. “ಈ ವಾಸುದೇವನ್ ಒಳ್ಳೆಯ ಹುಡುಗ. ಆದರೂ ಈ ಹೊತ್ತು ಅವನಲ್ಲಿ ಕೊನೆತನಕವೂ ವಿಶ್ವಾಸವೇ ಮೂಡದೇಹೋಯಿತು. ಬರುತ್ತಬರುತ್ತ ನಾವು ಯಾವ ಸ್ಥಿತಿಗೆ ಬಂದು ಮುಟ್ಟುತ್ತಿದ್ದೇವೆ ನೋಡು. ಇನ್ನೊಬ್ಬನ ಜೊತೆ ಸಹಜಸ್ಪೂರ್ತಿಯಿಂದ ಮಾತನಾಡುವುದನ್ನು ಅಸಾಧ್ಯ ಮಾಡಿಕೊಂಡುಬಿಟ್ಟಿದ್ದೇವೆ. ಇನ್ನೊಬ್ಬನ ಒಳಹೇತುಗಳನ್ನು ಅರಿಯುವುದರಲ್ಲಿಯೇ ಅರ್ಧ ಆಯುಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ಈಗ ಯಾಕೆ ಬಂದೆ? ಈಗಲೇ ಯಾಕೆ? ಇಷ್ಟು ದಿನ ಯಾಕಲ್ಲ? ನಾಳೆ ಯಾಕಲ್ಲ? ಈ ಝೋಪಡಪಟ್ಟಿಗಳು ಕೇವಲ ಒಂದು ಭೌತಿಕ ಅಸ್ತಿತ್ವವುಳ್ಳ ಬಾಬಲ್ಲವೇನೋ-ಕೇವಲ ಭೌಗೋಲಿಕ ಸತ್ಯಗಳಾಗಿರದೆ, ನಮ್ಮ ಅಂತಃಕರಣದ ಸ್ಥಿತಿಯ ದ್ಯೋತಕವೂ ಆಗಿವೆಯೇನೋ. ನಮಗೆ ನಮ್ಮ ಭಯದ ಆಕಾರವೇ ತಿಳಿದಿಲ್ಲ. ಹಾಗೆಂದೇ ಮನೆಮನೆಗೆ ಹಾಕಿಸಿಕೊಂಡ ಸುಭದ್ರ ಬಾಗಿಲುಗಳೇ ಉತ್ತರವೆಂದು ತಿಳಿದಿದ್ದೇವೆ. ಇಂದಿನ ಮನುಷ್ಯ ತನ್ನನ್ನು ರಕ್ಷಿಸಿಕೊಳ್ಳಲು ಬಯಸುತ್ತಿದ್ದುದು ಕೊನೆಗೂ ಒಬ್ಬ ಮನುಷ್ಯನಿಂದ! ಮನುಷ್ಯ ಮನುಷ್ಯನಿಗೇ ಹೆದರಿಕೊಂಡಿದ್ದಾನೆ! ಸಣ್ಣ ನಿದ್ದೆ ಮಾಡುತ್ತೇನೆ”-ಎಂದವನು ಮಗಳನ್ನೇ ಪಿಳಿಪಿಳಿ ಕಣ್ಣುಬಿಟ್ಟು ನೋಡುತ್ತ ಉಳಿದುಬಿಟ್ಟನು. ಹೇಳಬೇಕೆಂದುಕೊಂಡದ್ದೆಲ್ಲ ಕಣ್ಣ ನೋಟದಲ್ಲೆದ್ದ ಅಲೆಗಳಾಗುತ್ತಿದ್ದುವು. ಅವುಗಳನ್ನು ನೇರವಾಗಿ ಗ್ರಹಿಸುವ ಶಕ್ತಿ ಕೂಡ ಪರಸ್ಪರರ ಕಣ್ಣುಗಳಿಗಿದ್ದುದಾದರೆ! ಬೆಹರಾಮ್ ಇನ್ನೊಮ್ಮೆ ಆಕಳಿಸಿದ. ಶಿರೀನ್ ಹತ್ತಿರ ಹೋಗಿ ಹಾಸಿಗೆಯ ಅಂಚಿನಲ್ಲಿ ಕುಳಿತಳು. ಈ ಆಕಳಿಕೆಯಲ್ಲಿ ದಣಿವಿಗಿಂತ ಬೇಸರವೇ ಹೆಚ್ಚಾಗಿದ್ದಂತೆ ತೋರಿತು ಶಿರೀನಳಿಗೆ. ಎಲ್ಲದರ ಬಗೆಗೆ ಒಂದು ಬಗೆಯ ಉದಾಸೀನ ಹುಟ್ಟುತ್ತಿದ್ದುದರ ಕುರುಹೆ ಇದು? ಅಲ್ಲಗಳೆಯುವವನ ಹಾಗೆ ಬೆಹರಾಮ್-“ವಾಸುದೇವನ್ ಬಂದ ಉದ್ದೇಶ ಕೊನೆಗೆ ಏನೂ ಆಗಿರಲಿ, ಕರುಣಾಕರನ್ನನಿಗೆ ಅಪಾಯ ತಟ್ಟದ ಹಾಗೆ ನೋಡಿಕೊಳ್ಳಬೇಕು,” ಎಂದ. ಶಿರೀನ್ ಕೂಡಲೇ ಅನುಮೋದಿಸುವ ರೀತಿ ತಲೆದೂಗಿದಳು. “ಈಗ ಸ್ವಲ್ಪ ಹೊತ್ತು ಮಲಗಿಕೋ, ಊಟಕ್ಕೆ ಎಬ್ಬಿಸುತ್ತೇನೆ. ಊಟದ ಹೊತ್ತಿಗೆ ಮಾತನಾಡೋಣ” ಎನ್ನುತ್ತಿರುವಾಗ ಒಪ್ಪಿಕೊಂಡವನಹಾಗೆ ಕಣ್ಣು ಮುಚ್ಚಿದ. ತುಸು ಹೊತ್ತಿನಲ್ಲೇ ಗಾಢನಿದ್ದೆ ಸೇರಿ ಗೊರಕೆ ಹೊಡೆಯಹತ್ತಿದ. ಅಪ್ಪನ ನಿಷ್ಪಾಪ ಮೋರೆಯನ್ನು ನೋಡುತ್ತಿದ್ದಹಾಗೆ ಶಿರೀನ್‌ಗೆ ಅನ್ನಿಸಿತು: ಈ ವಿದ್ಯಮಾನಗಳೆಲ್ಲ ಆಕಸ್ಮಿಕವಾದವುಗಳೆಂದು ತೋರುವುದಿಲ್ಲ. ಮುಂಬಯಿ ಈಗ ಮುಂಚಿನ ಮುಂಬಯಿಯಾಗಿ ಉಳಿದಿಲ್ಲ. ಅಪ್ಪ-ಅಮ್ಮರನ್ನು ನಾವಿದ್ದಲ್ಲಿಗೇ ಕಾಯಮ್ ಆಗಿ ಕರೆದೊಯ್ದರೆ ಹೇಗೆ ಎಂಬ ವಿಚಾರ ಮನಸ್ಸಿನಲ್ಲಿ ಹಾಯ್ದುಹೋದರೂ ಅದು ಕೆಲಸಕ್ಕೆ ಬರುವಂತಹದಾಗಿ ತೋರಲಿಲ್ಲ. ಕಳ್ಳಹೆಜ್ಜೆಯಿಂದ ಅಪ್ಪನ ಕೋಣೆ ಬಿಟ್ಟು ಅಡುಗೆಯ ಮನೆಯಲ್ಲಿದ್ದ ತಾಯಿಯನ್ನು ಕೂಡುವಷ್ಟರಲ್ಲಿ ಈ ವಿಚಾರ ಬೇರೆ ರೂಪವನ್ನು ಧರಿಸಿದಂತಿತ್ತು. “ಅಮ್ಮಾ, ನಾವೆಲ್ಲ ಈ ವಾರವೇ ಜಮ್‌ಶೇದ್‌ಪೂರಕ್ಕೆ ಹೋದರೆ ಹೇಗೆ?” ಎಂದು ಕೇಳಿದಳು. ಮಗಳು ಹೆದರಿಕೊಂಡಿದ್ದಾಳೆಂಬುದು ಸ್ಪಷ್ಟವಿತ್ತು. ಇಷ್ಟಕ್ಕೆ ಹೆದರಿಕೊಳ್ಳುವ ಗರಜಿಲ್ಲ ಎಂಬಂತೆ ಮುಗುಳುನಕ್ಕು-“ಇದೇನು ಹೊಸತಲ್ಲ. ಈ ಝೋಪಡಪಟ್ಟಿಗಳು, ಸುತ್ತಲಿನ ಕಟ್ಟಡಗಳು ಇವುಗಳ ನಡುವೆ ನಡೆದದ್ದೇ ಇದು. ಮೂರು ವರ್ಷಗಳ ಹಿಂದೆ ಇದೇ ವಾಸುದೇವನ್‌ನಿಂದಾಗಿ ಅಪ್ಪನಿಗೆ ಧಮಕಿ ಕೊಡುವ ಫೋನ್ ಕರೆಗಳೆಷ್ಟು!”
“ಅದೇ! ಯಾರುಯಾರೆಲ್ಲರ ಸಲುವಾಗಿ ನಿಮ್ಮ ಜೀವಕ್ಕೇ ಅಪಾಯ!”
“ಅಂಥ ಧೈರ್ಯ ಈ ಜನಕ್ಕಿಲ್ಲ ಬಿಡು. ನಿನ್ನ ಅಪ್ಪನ ವಜನು ಇಲ್ಲಿಯ ಜನರಲ್ಲಿ ಸಾಕಷ್ಟು ಇದೆ. ನೀನು ಚಿಂತೆ ಮಾಡಬೇಡ. ನನಗೀಗ ಕೆಡುಕೆನಿಸುತ್ತಿದ್ದುದು ಆ ಹುಡುಗನ ಬಗೆಗೇ. ನಾವು ಅವನನ್ನು ಹಾಗೆ ಓಡಿಸಬಾರದಿತ್ತು.”

ಹೊರಗೆ ಆಗಲೇ ಗಾಢಕತ್ತಲೆ ಕವಿದಿತ್ತು. ಸಮುದ್ರದ ಎಡೆಬಿಡದ ಸದ್ದನ್ನು ಮೀರಿದ ಸದ್ದೊಂದು ಕೇಳಿಸಿಯೂ ಕೇಳಿಸದಹಾಗಿತ್ತು. ಸುತ್ತುಮುತ್ತಲಿನ ಜನವಸತಿಗಳೆಲ್ಲ ಒಂದರೊಳಗೊಂದು ಕರಗಿ, ತಮ್ಮ ಘನತ್ವವನ್ನು ಕಳೆದುಕೊಂಡು ಬರಿಯ ಭಯದಂತಹ ಅಸ್ಪಷ್ಟ ಭಾವನೆಯ ರೂಪದಲ್ಲಿ ಹೆಪ್ಪುಗಟ್ಟಿ ಹೀಗೆ ಸದ್ದು ಮಾಡುತ್ತಿದೆ ಎನ್ನುವಂತಹ ವಿಚಿತ್ರ ಕಲ್ಪನೆಗೆ ಶಿರೀನಳ ಮೈಮೇಲೆ ತೆಳುವಾಗಿ ಮುಳ್ಳುನಿಂತವು. ಮಕ್ಕಳ ಕೋಣೆಯಿಂದ ಹೊರಗೆ ಬಂದ ಸೀತೆ ಅಡುಗೆಯ ಮನೆಯ ಬಾಗಿಲಲ್ಲಿ ನಿಂತದ್ದನ್ನು ನೋಡಿದ ಕೂಡಲೇ ಸರಕ್ಕನೆ ಅವಳ ಗಲ್ಲ ಚಿವುಟಿದಳು-ಎಲ್ಲವೂ ಕರಗಿ ಬರೀ ಬಯಲು ಆಗಿಲ್ಲ ಎಂಬುದನ್ನು ಖಾತ್ರಿಮಾಡಿಕೊಳ್ಳುವ ಹಾಗೆ!

ಗಾಢನಿದ್ದೆಯಲ್ಲೂ ಗಟ್ಟಿಯಾದ ನಿರ್ಧಾರಕ್ಕೆ ಬಂದವನಹಾಗೆ ಹಾಸಿಗೆ ಬಿಟ್ಟೆದ್ದ ಬೆಹರಾಮ್ ನೇರವಾಗಿ ಬಚ್ಚಲುಮನೆಗೆ ಹೋಗಿ ತಂಪು ನೀರಿನಿಂದ ಮೋರೆ ತೊಳೆದುಕೊಂಡು, ಹಾಲಿಗೆ ಬಂದು ಟೆಲಿಫೋನ್ ರಿಸೀವರ್ ಕೈಗೆತ್ತಿಕೊಂಡು ಬಾಯಿಪಾಠವಿದ್ದಂತಿದ್ದ ನಂಬರನ್ನು ತಿರುಗಿಸಿದ ತನಗೆ ಬೇಕಾದ ವ್ಯಕ್ತಿಯೇ ನೇರವಾಗಿ ಫೋನ್ ಎತ್ತಿಕೊಂಡದ್ದನ್ನು ಅವನ ಧ್ವನಿಯಿಂದಲೇ ಗುರುತಿಸಿ, “ಹಲ್ಲೋ ಗೌರೀ, ನಾನು ಬೆಹರಾಮ್. ನಿನ್ನಿಂದ ಒಂದು ಕೆಲಸ ಆಗಬೇಕಾಗಿದೆ. ನಿಮ್ಮಲ್ಲಿ ಸದ್ಯವೇ ರಿಪೋರ್ಟರ್ ಆಗಿ ಕೆಲಸಕ್ಕೆ ಸೇರಿದ ಕರುಣಾಕರನ್ ಎಂಬವನ ಮನೆಯ ವಿಳಾಸ ಸಿಗಬಹುದೆ?”

ಬೆಹರಾಮನಿಗೆ ತಾನು ಸರಿಯಾದ ವ್ಯಕ್ತಿಯೊಡನೆ ಮಾತನಾಡುತ್ತಿರುವ ಬಗೆಗೇ ಸಂಶಯ ಬರಹತ್ತಿತು: ಆ ಬದಿಯ ಮನುಷ್ಯ ಮಾತನಾಡುತ್ತಿರಲಿಲ್ಲ, ಬರಿದೆ ನಗುತ್ತಿದ್ದ-ಸಾದಾ ರೀತಿಯಲ್ಲಲ್ಲ, ಹಿಸ್ಟೀರಿಯಾ ಬಡಿದವನ ಹಾಗೆ. “ಇದು ವಿನೋದಕ್ಕೆ ಸಮಯವಲ್ಲ, ಗೌರೀ. ಪ್ಲೀಜ್ ಬೀ ಸೀರಿಯಸ್. ಕರುಣಾಕರನ್‌ನ ಜೀವಕ್ಕೆ ಅಪಾಯವುಂಟಾಗಿದೆ,” ಎನ್ನುವಷ್ಟರಲ್ಲಿ ಆ ಬದಿಯಿಂದ ಬಂದ ಉತ್ತರದಿಂದ ದಂಗುಬಡೆದವನ ಹಾಗೆ ಬೆಹರಾಮ್-“ನೋ! ಇದು ಸಾಧ್ಯವಿಲ್ಲ,” ಎಂದು ಚೀರಿದ. ಅದಾಗಲೇ ತನ್ನ ಸುತಲೂ ನೆರೆದ ಹೆಂಡತಿ ಹಾಗೂ ಮಗಳಿಗೆ “ಈ ಹುಚ್ಚ ಹೇಳ್ತಾ ಇದಾನೆ-ದೇ ಹ್ಯಾವ್ ಆಲ್‌ರೆಡಿ ಕಿಲ್ಡ್ ಯುವರ್ ಕರುಣಾಕರನ್. ಹೀ ಈಜ್ ಡೆಡ್-ನನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ ಭೆಂಛೋದ್,” ಎಂದು ಹೇಳಿ, ಟೆಲಿಫೋನ್ ರಿಸೀವರ್ ಅನ್ನು ಮತ್ತೆ ಬಾಯಿಗೆ ಎತ್ತಿದ-“ನೋಡು ಗೌರೀಪ್ರಸಾದ್, ನಂಬು ಬಿಡು. ಇಂಥ ಮಾತನ್ನು ನೀನು ಆಡಕೂಡದು.” ಬೆಹರಾಮನಿಗೆ ಮುಂದುವರಿಯುವುದು ಸಾಧ್ಯವಾಗಲಿಲ್ಲ. ಸಿಟ್ಟಿನ ಭರದಲ್ಲಿ ಆಡಿದ ಮಾತುಗಳೆಂದು ತೋರುವಾಗಲೂ ಆ ಕ್ಷಣಕ್ಕೆ ಅವು ಮಾಡಿದ ಪರಿಣಾಮದಿಂದ ಚೇತರಿಸಿಕೊಳ್ಳುವುದು ಶಕ್ಯವಿರಲಿಲ್ಲ. ಆ ಬದಿಯ ವ್ಯಕ್ತಿಗೆ ತಿಳಿಸುವ ಮನಸ್ಸಾಗಿತ್ತು, ‘ನೋಡಪ್ಪಾ ಗೌರೀಪ್ರಸಾದ್ ಅಗರವಾಲ್ , ಕೊನೆಗೂ ನಿನಗೆ ನಿನ್ನ ವೃತ್ತಪತ್ರಿಕೆಯೇ ದೊಡ್ಡದಾಗಿಬಿಟ್ಟಿತು ಮನುಷ್ಯನೊಬ್ಬನ ಕೊಲೆಯಂಥ ಕೊಲೆಯನ್ನು ಕೂಡ ಹಣ ಮಾಡುವ, ಹೆಸರು ಗಳಿಸುವ ಸರಕನ್ನಾಗಿಸುವುದರಲ್ಲೆ ನಿನ್ನ ಜನ್ಮ ಹಾಳಾಯಿತು. ಮೂರು ವರ್ಷಗಳ ಹಿಂದೆ ಕೊಲೆಯಾದವನ ತಮ್ಮ ಈ ಕರುಣಾಕರನ್ ಎಂಬುದನ್ನು ಬಲ್ಲೆಯಾ? ಅಥವಾ ಬಲ್ಲೆಯೆಂದೇ ಅವನನ್ನು ಈ ಕೆಲಸಕ್ಕೆ ಹಚ್ಚಿದಿಯಾ?’ ತನ್ನ ಕಲ್ಪನೆಯಲ್ಲೇ ಹುಟ್ಟಿದ ವಿಚಾರವೇ ಆದರೂ ಅದರಿಂದಾಗಿ ಬೆನ್ನುಹುರಿಯಲ್ಲಿ ಬರ್ಫ್ ಅಂತಹದೇನೋ ಹರಿಯಹತ್ತಿದ ಅನುಭವವಾದಾಗ ಬೆಹರಾಮ್ ತನ್ನ ವಿಚಾರಸರಣಿಯನ್ನು ಬಿಟ್ಟುಕೊಡುವ ಪ್ರಯತ್ನದಲ್ಲಿ ತಲೆಯನ್ನೊಮ್ಮೆ ಗಲಗಲ ಅಲ್ಲಾಡಿಸಿದ. ಭೆಂಛೋದ್ ಎಂದು ಬಾಯಲ್ಲಿ ಬಂದ ಬೈಗುಳವನ್ನು ಪ್ರಯತ್ನಪೂರ್ವಕವಾಗಿ ತಡೆದುಕೊಂಡು-“ನನ್ನದೇ ಹುಚ್ಚುತನವಾಯಿತು. ಮೊನ್ನೆಮೊನ್ನೆ ಕೆಲಸಕ್ಕೆ ಹತ್ತಿದವನ ಗುರುತು ಸಹ ಇವನಿಗೆ ಇದೆಯೋ ಇಲ್ಲವೋ. ಸುಳ್ಳೇ ಹೆದರಿಸಿದ. ಆಯಿತು,” ಎಂದ. ಮುಂದೆನಿಂತ ಹೆಂಡತಿ-ಮಗಳನ್ನು ಸಂಬೋಧಿಸಿ ಮಾತನಾಡಿದ ಮಾತುಗಳಲ್ಲಿ ತನ್ನಷ್ಟಕ್ಕೆ ಆಡಿಕೊಂಡ ಮಾತುಗಳ ಧ್ವನಿಯಿತ್ತು. ಸಮಾಧಾನವಾಗುವ ಬದಲು ಮನಸ್ಸಿನ ಕಿರಿಕಿರಿ ಹೆಚ್ಚೇ ಆಯಿತು: ಈ ವಾಸುದೇವನ್‌ನನ್ನು ನಂಬಬಹುದೇ? ಕರುಣಾಕರನ್ನನ ಮನೆಯ ವಿಳಾಸ ಗೊತ್ತಿಲ್ಲದಿದ್ದರೂ ಆಫೀಸಿನ ವಿಳಾಸ ಗೊತ್ತಿತ್ತು. ಆದರೆ ಅದನ್ನು ಕೊಡುವ ಮನಸ್ಸಾಗಲಿಲ್ಲ. ಐನ್ ಗಳಿಗೆಯಲ್ಲಿ ಮನಸ್ಸು ಸಂದೇಹಗ್ರಸ್ತವಾಗಿತ್ತು-ಮುಖ್ಯವಾಗಿ ಅವನು ಬಂದ ರೀತಿಯಿಂದಾಗಿ, ಬರಲು ಆರಿಸಿಕೊಂಡ ಮುಹೂರ್ತದಿಂದಾಗಿ. ನಮ್ಮ ಪಾರ್ವತಿಯನ್ನು ಬಲ್ಲೆನೆಂದನಲ್ಲ, ನಾಳೆ ಅವಳನ್ನೇ ಕೇಳಿನೋಡಬೇಕು. ನಾನೇ ಕರುಣಾಕರನ್ನನ ಆಫೀಸಿಗೆ ಹೋಗಿ ವಿಚಾರಿಸಬೇಕು.’ ಈ ನಿರ್ಧಾರದ ಆಳದಲ್ಲೇ ಎಲ್ಲೋ ‘ಆ ಹುಚ್ಚ ಮನುಷ್ಯ’ ಕರುಣಾಕರನ್ನನ ಸಾವಿನ ಬಗೆಗೆ ಮಾಡಿದ ಕ್ರೂರ ವಿನೋದ ಮತ್ತೆ ಅರಿವನ್ನು ತಟ್ಟುವ ಪ್ರಯತ್ನ ಮಾಡುತ್ತಿರುವ ಭಯವಾದಾಗ-‘ಆಗ ಪಾರ್ವತಿ ಕರುಣಾಕರನ್ನನ ಬಗ್ಗೆ ಹೇಳಿದ್ದನ್ನು ನಾಳೆ ತಿಳಿಸುತ್ತೇನೆ ಎಂದಿದ್ದೆಯಲ್ಲ, ಈಗಲೇ ಹೇಳು,’ ಎಂದು ಶಿರೀನಳನ್ನು ಕೇಳುವ ಮನಸ್ಸಾಯಿತು. ಮರುಗಳಿಗೆ, ಅವನ ಬಗ್ಗೆ ಕೆಟ್ಟದ್ದೇನೂ ಕೇಳುವ ಮನಸ್ಸಿಲ್ಲದವನ ಹಾಗೆ, ಟೆಲಿಫೋನ್ ಮೇಲೆ ಮಾತನಾಡುವಾಗ ಕುಳಿತುಕೊಂಡ ಸೀಟನ್ನು ಬಿಟ್ಟು ಬಾಲ್ಕನಿಗೆ ನಡೆದ. ಸಮುದ್ರದ ನೀರು ಮೆಲ್ಲಗೆ ಏರುತ್ತ ರಸ್ತೆಗೆ ಹತ್ತಿರವಾಗತೊಡಗಿತ್ತು. ನಕ್ಷತ್ರಗಳು ಮೆರೆಯುತ್ತಿದ್ದ ಮೋಡಗಳಿಲ್ಲದ ಆಕಾಶದ ಕೆಳಗೆ ಹೊರಳಾಡುವ ಸಮುದ್ರದ ನೀರು ಸ್ಪಷ್ಟವಾಗಿ ಕಾಣಿಸಿಕೊಳ್ಳದೆಯೂ ದಣಿದ ಮನಸ್ಸಿಗೆ ಶಾಂತಿ ಒದಗಿಸುವಂತಹದೇನನ್ನೋ ಹೇಳಲು ಹೊರಟಂತೆ ಪಿಸುಗುಡುತ್ತಿತ್ತು. ಜುಹೂ, ವರ್ಸೋವಾ, ಮಾರ್ವ, ಮಡ್ ಆಯ್ಲಂಡ್ಸ್‌ಗಳ ಮೈಲುಗಟ್ಟಲೆ ಉದ್ದವಾದ ಮರಳುದಂಡೆಗಳಲ್ಲಿ ಬೆಳಗಿದ ವಿದ್ಯುದ್ದೀಪಗಳು ಕೂಡ ಗೂಢವಾದದ್ದು ಏನನ್ನೋ ತಿಳಿಸಲು ಹೊರಟ ರೀತಿ ಕಣ್ಣುಮಿಟುಕಿಸುತ್ತಿದ್ದುವು. ಬಾಲ್ಕನಿಯ ಕಟಕಟೆಯ ಮರದ ದಡಿಯ ಮೇಲೆ ಕೈಯೂರಿ ದೂರದವರೆಗೆ ಕಣ್ಣುಚಾಚಿ ನಿಂತಲ್ಲೇ ನಿನ್ನೆ, ಇಂದು ಎರಡು ದಿನ ತನ್ನನ್ನು ಕಂಡು ಮಾತನಾಡಿಸಿದ ಈ ಕರುಣಾಕರನ್ ತನಗೆ ಯಾರು? ತನಗೆ ಯಾವ ರೀತಿಯಿಂದಲೂ ಸಂಬಧವಿಲ್ಲದ ಉದ್ಯೋಗದಲ್ಲಿ ತೊಡಗಿಸಿಕೊಂಡವನ ಬಗ್ಗೆ ತಾನೇಕೆ ಹೀಗೆ ತಲೆ ಕೆಡಿಸಿಕೊಳ್ಳಬೇಕು? ಸಂಜೆ, ಹೆಂಡತಿ-ಮಗಳು ಆಡಿದ ಮಾತುಗಳ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಪ್ರಶ್ನೆಗಳು ಈ ಅಪಾರ ಜಲರಾಶಿಯ ಇದಿರು ನಿರರ್ಥಕವಾಗಿ ಕಂಡವು. ಪ್ರಶ್ನೆ ಕೇಳಿ ಉತ್ತರ ಕಂಡುಕೊಂಡು ಬದುಕುತ್ತ ಬಂದವನಲ್ಲವೇ ಅಲ್ಲ ಅವನು. ಕರುಣಾಕರನ್ನನಿಗೆ ಅಪಾಯ ತಟ್ಟಕೂಡದು. ತನ್ನಿಂದೇನಾಗುತ್ತದೆಯೋ ಅದನ್ನು ಮಾಡಬೇಕು ಅನ್ನಿಸುತ್ತದೆ. ಮಾಡಿಯೇ ಮಾಡುತ್ತೇನೆ, ಬಸ್! ಉಳಿದದ್ದೆಲ್ಲ ಗೌಣ. ಯಾಕೆ ಎಂಬ ಪ್ರಶ್ನೆಯೇ ಮೊದಲು ಅರ್ಥವಿಲ್ಲದ್ದು ಎಂದುಕೊಳ್ಳುತ್ತ ಊಟಕ್ಕೆ ನಡೆದ.

ಊಟ ಮುಗಿಸಿ, ಕಾಂಪೋಜಿನ ಇಡೀ ಗುಳಿಗೆಯನ್ನು ನುಂಗಿ ನಿದ್ದೆಹೋದ ಬೆಹರಾಮನನ್ನು ಎಚ್ಚರಿಸಿದ್ದು ಕರ್ಣಕರ್ಕಶವಾಗಿ ಕಿರಿಚಿದ ಟೆಲಿಫೋನ್ ಗಂಟೆಯಾಗಿತ್ತು. ಆಗ ರಾತ್ರಿ ಹನ್ನೊಂದು ದಾಟಿತ್ತು. ಟೆಲಿಫೋನ್ ಮೇಲೆ ಕೇಳಿದ ಮಾತುಗಳಿಂದಾಗಿಯೋ, ಕಾಂಪೋಜ್ ಗುಳಿಗೆಯ ಗುಂಗಿನಿಂದಾಗಿಯೋ ಬೆಹರಾಮನಿಗೆ ತನಗೇನಾಗುತ್ತಿದೆ? ತಾನು ಎಲ್ಲಿ ಇದ್ದೇನೆ? ಏನು ಮಾಡುತ್ತಿದ್ದೇನೆ? -ಯಾವುದೂ ತಿಳಿಯಲಿಲ್ಲ. ಹತ್ತಿರ ನಿಂತವಳು ಹೆಂಡತಿಯೆ? ಪ್ರಶ್ನೆ ಕೇಳಿದವಳು ಶಿರೀನಳೆ? ಯಾವುದೂ ಸ್ಪಷ್ಟವಾಗುತ್ತಿರಲಿಲ್ಲ. ನಿದ್ದೆಗಣ್ಣಿನಲ್ಲಿ ಟೆಲಿಫೋನ್ ಎತ್ತಿಕೊಂಡವನು ನಿದ್ದೆಗಣ್ಣಿನಲ್ಲಿಯೇ ತಿರುಗಿ ಹಾಸಿಗೆ ಸೇರಿದ್ದನು. ಟೇಲಿಫೋನ್ ಮೇಲೆ ಆ ಬದಿಯಿಂದ ಬಂದ ಮಾತುಗಳು ನೆನಪಿಗೆ ಬಂದದ್ದು ಬೆಳಿಗ್ಗೆ ಐದು ಗಂಟೆಗೆ! ರಾತ್ರಿ ಆಡಿದವುಗಳು ಆಡಿದಹಾಗೆಯೆ ಹೆಪ್ಪುಗಟ್ಟಿ ಬೆಳಗಾಗುತ್ತಲೇ ಬಿಡಿಸಿಕೊಂಡವೋ ಎನ್ನುವಂತೆ ಸ್ಪಷ್ಟವಾಗಿ ಕಿವಿಯ ಮೇಲೆ ಬೀಳತೊಡಗಿದ್ದುವು: ‘ಮುದುಕಪ್ಪಾ, ನಿನ್ನ ಪೇಪರ್‌ವಾಲಾ ಹುಡುಗನ ಕೋಣೆಗೆ ಹೋಗಿಬಂದೆವು, ಇದೇ ಈಗ. ಇನ್ನೂ ಮನೆ ತಲುಪಿಲ್ಲ ಎಂದಮೇಲೆ ಅವನು ನಿನ್ನ ಮನೆಯಲ್ಲೇ ಅಡಗಿಕೊಂಡಿರಬೇಕು. ಬೆಳಿಗ್ಗೆ ಬಂದು ಒಮ್ಮೆ ಫೇರಿ ಹಾಕಿ ಹೋಗುತ್ತೇವೆ.’

ಬೆಹರಾಮ್ ಹಾಸಿಗೆಯಲ್ಲಿ ಎದ್ದು ಕುಳಿತ. ಇನ್ನೂ ಗಾಢನಿದ್ದೆಯಲ್ಲಿದ್ದ ಹೆಂಡತಿಗೆ ಎಚ್ಚರವಾಗದಿರಲಿ ಎಂದುಕೊಂಡು ಮತ್ತೆ ಹಾಸಿಗೆಯಲ್ಲಿ ಅಡ್ಡವಾದ. ಅವನಿಗೆ ತಾನು ಉತ್ತರ ಕೊಟ್ಟಿದ್ದೆನೆ? ಇಲ್ಲವೆಂದೇ ತೋರಿತು. ಆದರೆ ಉತ್ತರ ಕೊಡಲು ಸಿದ್ಧನಾದವನ ಹಾಗೆ-‘ಬಾ, ನಿನ್ನ ಹಾದಿ ಕಾಯುತ್ತೇನೆ,’ ಎಂದು ತನ್ನಷ್ಟಕ್ಕೇ ಆಡಿಕೊಂಡ. ಮುಂದಿನ ಕೆಲಹೊತ್ತಿನಲ್ಲೇ ಬೆಹರಾಮ್ ಮತ್ತೆ ನಿದ್ದೆಸೇರಿ ಗೊರಕೆ ಹೊಡೆಯತೊಡಗಿದ್ದ.

ಬೆಳಿಗ್ಗೆ ಎಚ್ಚರವಾಗುವ ಹೊತ್ತಿಗೆ ಬಿಸಿಲು ಚಲೋ ಬೆಚ್ಚಗಾಗಿತ್ತು. ಈ ಹೊತ್ತು ಸೋಮವಾರ. ಆಫೀಸು ಇದೆ. ಆದರೆ ಹೋಗಲಾರೆ ಎಂದುಕೊಂಡು ಬೆಡ್ ಟೀದ ಹಾದಿ ಕಾಯುತ್ತಿರುವಾಗ ಕರೆಗಂಟೆ ಬಾರಿಸಿದ್ದು ಕೇಳಿಸಿತು. ‘ಅವನು ಬಂದಿರಬೇಕು,’ ಎಂದುಕೊಳ್ಳುತ್ತ ಹಾಸಿಗೆಯಿಂದ ಎದ್ದು ಹೊರಗೆ ನಡೆದ. ಒಳಗೆ ಬಂದವಳು ಪಾರ್ವತಿಯೆಂದು ತಿಳಿದಾಗ ತುಸು ನಿರಾಸೆಪಟ್ಟು ಬಚ್ಚಲುಮನೆಗೆ ಹೋಗಿ ಪ್ರಾತರ್ವಿಧಿಗಳನ್ನು ಮುಗಿಸಿ ಬಾಲ್ಕನಿಯಲ್ಲಿ ಕೂತು ಚಹ ಕುಡಿಯಹತ್ತಿದ. ಬೆಳಗಿನ ಹೂಬಿಸಿಲಲ್ಲಿ ನೊರೆ ಕಾರುತ್ತ ಭೋರ್ಗರೆಯುತ್ತಿದ್ದ ಸಮುದ್ರವನ್ನು ನೋಡುತ್ತಿದ್ದಹಾಗೆ ರಾತ್ರಿ ಬಂದ ಟೆಲಿಫೋನ್ ಕರೆಯ ಒಂದು ಮುಖ್ಯ ಸಂದೇಶ ಈಗ ನೆನಪಾದವನ ಹಾಗೆ ತನ್ನಷ್ಟಕ್ಕೇ ಮುಗುಳುನಕ್ಕ. ಕರುಣಾಕರನ್ ಇವರ ಕೈಗೆ ಸಿಕ್ಕಿರಲಿಲ್ಲ! ಹಾಸಿಗೆಯಿಂದ ಏಳುವಾಗಿನ ಅವನ ಗಂಭೀರ ಮುಖ ನೋಡಿ ಅವನನ್ನು ಮಾತನಾಡಿಸಲೂ ಹೆದರಿದ ಹೆಂಡತಿ ಹಾಗೂ ಮಗಳು ಈಗ ಹತ್ತಿರ ಬಂದು ಮಾತನಾಡಿಸಿದಾಗ-“ಕರುಣಾಕರನ್ ಈ ಲಫಂಗರ ಕೈಗೆ ಸಿಕ್ಕಿಲ್ಲ. ಹುಡುಗ ನಿನ್ನೆ ರಾತ್ರಿ ಕೋಣೆಗೇ ಹೋದಂತಿಲ್ಲ,” ಎನ್ನುತ್ತಿರುವಾಗಲೇ, ರಾತ್ರಿ ಆ ಲಫಂಗರು ಟೆಲಿಫೋನ್ ಕೆಳಗಿಡುವ ಮೊದಲಷ್ಟೇ ಹೇಳಿದ ಇನ್ನೊಂದು ಮಾತು ಈಗ ಮೊದಲ ಬಾರಿಗೇ ನೆನಪಿಗೆ ಬಂದಿತು-‘ಇನ್ನೊಂದು ಸಣ್ಣ ಮಾತು ಮುದುಕಪ್ಪಾ, ಸದ್ಯ ಅವನು ಟಿಪ್ಪಣಿ ಬರೆಯುತ್ತಿದ್ದ ಡಾಯರಿ ನಮಗೆ ಸಿಕ್ಕಿದೆಯೆಂದು ಅವನಿಗೆ ತಿಳಿಸಿಬಿಡು!’ “ಅರೆ! ಇವರಿಗೆ ಅವನ ವಿಳಾಸ ಯಾರು ಕೊಟ್ಟರೋ-” ತನ್ನಷ್ಟಕ್ಕೇ ಆಡಿಕೊಂಡಂತಿದ್ದ ಮಾತುಗಳಲ್ಲಿ ಒಮ್ಮೆಗೆಲೇ ಸೇರಿಕೊಂಡ ದುಗುಡವನ್ನು ದೂರ ಮಾಡುವ ಬಲ ಹೊರಗಿನ ಸಮುದ್ರದ ತೆರೆಗಳ ಉಲ್ಲಾಸಕ್ಕೂ ಇರಲಿಲ್ಲ. ಆ ದುಗುಡದಲ್ಲಿ ಸ್ಪಷ್ಟವಾದ ಆಕೃತಿ ಪಡೆಯಲು ದೃಢಪಡಿಸುವ ಮೂರು ಸಂಗತಿಗಳು ಪಾಲುಗೊಂಡಂತಿತ್ತು: ತಮ್ಮ ಕೈಗೆ ಸಿಕ್ಕಿದೆಯೆಂದು ಹೇಳಿದ ಕರುಣಾಕರನ್ನನ ಡಾಯರಿ; ಈ ಹುಡುಗನ ಬಗ್ಗೆ ಬಹಳಷ್ಟು ಗೊತ್ತಿದ್ದವಳು ಎನ್ನಲಾದ ಪಾರ್ವತಿ; ನಿನ್ನೆ ರಾತ್ರಿ ಅಲ್ಪಕಾಲದ ಪ್ರವೇಶದಲ್ಲೇ ಹಲವು ಕುತೂಹಲಕಾರಿಯಾದ ಸಂಗತಿಗಳನ್ನು ತಿಳಿಸಿಹೋದ ವಾಸು.

ರಾತ್ರಿ ತೆಗೆದುಕೊಂಡ ಕಾಂಪೋಜ್ ಗುಳಿಗೆಯ ಪ್ರಭಾವ ಇನ್ನೂ ಸಂಪೂರ್ಣವಾಗಿ ಕಳೆದಿರಲಿಲ್ಲ. ಮೌಂಟ್ ಮೇರಿ ಗುಡ್ಡದ ಸುತ್ತಲ ಕೇರಿಯ ಹಲವು ಎತ್ತರದ ಕಟ್ಟಡಗಳ ಸಂದಿಗಳೊಳಗಿಂದ ಹಾದುಬಂದ ಎಳೆಬಿಸಿಲು ಸಮುದ್ರದ ನೀರ ಮೇಲೆ ಮೂಡಿಸಿದ ಕಟ್ಟಡಗಳ ನೆಳಲುಗಳ ವಿಚಿತ್ರವಿನ್ಯಾಸ ಸ್ಪಷ್ಟವಾಗಿ ವಿಚಾರ ಮಾಡುವ ಶಕ್ತಿಯನ್ನು ಕುಗ್ಗಿಸಿಬಿಟ್ಟಂತೆ ತೋರಿತು. ಇಡಿಯ ದಿನ ಹೀಗೆ ಈ ಕರುಣಾಕರನ್ನನನ್ನು ತಲೆಯಲ್ಲಿ ತುಂಬಿಕೊಂಡಿರುವುದು ತನ್ನ ಇಂದಿನ ಆರೋಗ್ಯದ ಸ್ಥಿತಿಗೆ ಸಾಧ್ಯವಾದ ಸಂಗತಿಯಲ್ಲ. ಆಫೀಸಿಗೆ ಹೋಗುವುದೇ ಒಳ್ಳೆಯದೇನೊ. ಹೆಂಡತಿಯಿಂದಾಗಲಿ ಶಿರೀನಳಿಂದಾಗಲಿ ಆಫೀಸಿಗೆ ಹೋಗುವುದು ಬೇಡವೆನ್ನುವ ಸೂಚನೆ ಬರುವ ಮೊದಲೇ ಹೊರಡುವ ಸಿದ್ಧತೆಗೆ ತೊಡಗುವ ಮನಸ್ಸಾದವನ ಹಾಗೆ ಹೆಂಡತಿಗೆ, “ಆಫೀಸಿಗೆ ಹೋಗಬೇಕು. ಸೀತೆಗೆ ಸ್ನಾನದ ಮನೆಯಲ್ಲಿ ಬಟ್ಟೆಗಳನ್ನು ಇರಿಸಲು ಹೇಳು” ಎಂದು ಹೇಳಿದ.
*****
ಮುಂದುವರೆಯುವುದು