ಮಣ್ಣು

ಮೊದಲ ಪಾದ

ಕೆರೆ ದಂಡೆಯ ಕಲ್ಲಮೇಲೆ ಕುಳಿತು ಮುಳುಗುತ್ತಿದ್ದ ಸೂರ್‍ಯನನ್ನೇ ದಿಟ್ಟಿಸುತ್ತ ಯಶವಂತನ ಕಣ್ಣೊಳಗೆ ಸೂರ್‍ಯ ಚೂರುಚೂರಾಗಿ ನೀರ ತೆರೆಗಳ ಮೂಲಕ ಪ್ರತಿಫಲಿಸುತ್ತಿದ್ದ. ಕತ್ತಲು ಪುರಾತನ ಹಾದಿಯಲ್ಲಿ ಸಾಗುತ್ತಿತ್ತು. ನೀರಕ್ಕಿಗಳು ಹಗಲಲ್ಲೆ ಹಾಡಿ ಹಾರಾಡಿ ಇನ್ನೂ ದಣಿಯದೆ ನೀರ ತಡಿಯಲ್ಲಿ ಕುಳಿತು ಏನೇನನ್ನೋ ವಟಗುಟ್ಟುತ್ತಿದ್ದವು. ದಿಗಂತವೆಲ್ಲ ದಿವ್ಯ ಮೌನವನ್ನು ಬಿತ್ತುತ್ತಿತ್ತು. ಕೆರೆ ಬಯಲ ಹಸಿರು ಮೇವನ್ನು ಮೇದು ಸಂತೃಪ್ತಿಯಲಿ ದನಕರುಗಳು ಕೊಟ್ಟಿಗೆಯ ಕಡೆಗೆ ಹೋಗುತ್ತಿದ್ದವು. ಕಟಾವು ಮುಗಿಸಿ ಬತ್ತದ ಹೊರೆಗಳನ್ನು ಎತ್ತಿನ ಗಾಡಿಗಳಿಗೆ ತುಂಬಿಕೊಂಡು ಹೋಗುತ್ತಿದ್ದ ರೈತರು ಉತ್ಸಾಹದಲ್ಲಿ ಆಡುತ್ತಿದ್ದ ಮಾತುಗಳು ತೇಲಿ ಬಂದು ಯಶವಂತನ ಕಿವಿ ಮುಟ್ಟಿ ಹೋಗುತ್ತಿದ್ದವು. ಆ ಎತ್ತುಗಳ ಕೊರಳ ಗಂಟೆಯ ಸದ್ದಂತು ಅನೂಹ್ಯವಾಗಿ ಅನುರಣಿಸುತ್ತಿತ್ತು. ಮಾಗಿಯ ಗಾಳಿ ಸಂಜೆಯ ಜೊತೆ ಪಿಸು ಮಾತಾಡುತ್ತ ಕೆರೆ ನೀರ ಥಂಡಿಯನ್ನು ಕರೆದುಕೊಳ್ಳುತ್ತಿತ್ತು.

ಯಶವಂತನಿಗೆ ಅದಾವುದೂ ಹಿತ ಎನಿಸುತ್ತಿರಲಿಲ್ಲ. ಅವನು ಮೈಸೂರಿನಿಂದ ಹಳ್ಳಿಗೆ ಬಂದದ್ದು ಹಳೆಯ ಗಾಯಗಳನ್ನು ಮರೆಯಲಿಕ್ಕೆ. ಬಹಳ ವರ್ಷಗಳಿಂದ ಆತ ಊರಿನ ಎಲ್ಲ ಸಂಬಂಧಗಳಿಂದ ದೂರವಿದ್ದ. ಹೆಚ್ಚು ಕಡಿಮೆ ಆತ ಬೇರು ಕಡಿದುಕೊಂಡಂತೆ ಪೇಟೆಯ ಬದುಕಿಗೆ ಒಗ್ಗಿಕೊಂಡಿದ್ದ. ಮೈಸೂರಿನ ನೀರು ಅವನ ವ್ಯಕ್ತಿತ್ವವನ್ನೇ ಬದಲಿಸಿಬಿಟ್ಟಿತ್ತು. ಗುಂಪಿನಲ್ಲಿ ಬದುಕುವುದೆಂದರೆ ಆತನಿಗೆ ಆಗುತ್ತಲೇ ಇರಲಿಲ್ಲ. ಸದಾ ವ್ಯಗ್ರನಾಗಿ ಒಂಟಿಯಾಗಿ ಅಶಾಂತ ಮುನಿಯಂತೆ ಸುತ್ತಾಡುವುದೆಂದರೆ ಆತನಿಗೆ ಪರಮಾನಂದ. ಎಂ.ಎ. ಮುಗಿಸಿ ತುಂಬಾ ಪ್ರತಿಭಾವಂತನೆಂದು ಚಿನ್ನದ ಪದಕ ಪಡೆದು ಉನ್ನತ ಅಧ್ಯಯನಕ್ಕೆ ಫೆಲೋಷಿಪ್ ಕೂಡ ಪಡೆದು ಸಂಶೋಧನೆಗೆ ಇಳಿದ ನಂತರವೇ ಯಶವಂತನ ದಿಕ್ಕು ದೆಸೆಗಳು ಬದಲಾದದ್ದು. ಆ ಮೊದಲು ಆತ ಪುಸ್ತಕದ ಹುಳುವೇ ಆಗಿಬಿಟ್ಟಿದ. ಯಾರೊಬ್ಬರ ಜೊತೆಯೂ ಅವನಿಗೆ ಸರಿಯಾದ ಸ್ನೇಹವೇ ಸಾಧ್ಯವಾಗಿರಲಿಲ್ಲ.

ಅಪ್ಪ ಕಳುಹಿಸುತ್ತಿದ್ದ ಇನ್ನೂರು ರೂಪಾಯಿಗಳಲ್ಲೇ ತಿಂಗಳು ತುಂಬಿಸಿ ಅಂಚೆಯವನ ಬಳಿ ಮಾತ್ರ ವಿಶ್ವಾಸ ಮಾಡಿ ಕೈ ಸಾಲ ಪಡೆದು ಎಂಒ ಬಂದ ಕ್ಷಣದಲ್ಲೇ ಹಿಂತಿರುಗಿಸಿ: ಆ ದಿನ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಸುತ್ತಾಡಿ ಕಿಕ್ಕಿರಿದ ಮಾರುಕಟ್ಟೆಯಲ್ಲಿ ಅಡ್ಡಾಡಿ ತರಕಾರಿ ಮಾಳಿಗೆಯ ಸಾಲುಗಳಲ್ಲಿ ವಿನಾಕಾರಣ ಅಲೆದಾಡಿ ಆ ಹಸಿರು ತರಕಾರಿಗಳ ಹಿತವಾದ ಕಂಪನ್ನು ಕುಡಿದು ಕೊನೆಗೆ ಯಾಕೋ ಮಂಡಿಪೇಟೆಯ ಕಿಷ್ಕಿಂದೆಯಲ್ಲಿ ಸುತ್ತಿ, ಅಲ್ಲೆಲ್ಲ ದಿನಗೂಲಿ ನೌಕರರು ಸಾರಾಯಿ ಅಂಗಡಿಗಳ ಮುಂದೆ ಕುಡಿದು ಬಿದ್ದಿರುವುದನ್ನು ನೋಡಿ ಅಲ್ಲಿನ ಗದ್ದಲದ ನೂರೆಂಟು ಮಾತುಗಳನ್ನು ಕಿವಿ ಮೇಲೆ ಹಾಕಿಕೊಂಡು ಗಂಗೋತ್ರಿ ತನಕ ನಡೆದುಕೊಂಡೇ ಬಂದು ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ರೂಮು ಸೇರಿಕೊಳ್ಳುತ್ತಿದ್ದ. ಹಾಗೆ ಬಂದವನು ದಣಿದ ಕಣ್ಣುಗಳ ಮುಚ್ಚಿ ತನಗೆ ಯಾವತ್ತೂ ಅತ್ಯಂತ ಪ್ರಿಯವಾದ ಕಿಶೋರಿ ಅಮೋಣ್‌ಕರ್‌ಳ ಹಿಂದೂಸ್ತಾನಿ ಗಾಯನವನ್ನು ಇಡೀ ದೇಹದ ನರನಾಡಿಗೆ ಉಸಿರಾಟದ ಮೂಲಕ ಎಳೆದುಕೊಳ್ಳುತ್ತಾ ಕನಸಿನ ಯಾವುದೊ ಲೋಕಕ್ಕೆ ತೇಲಿ ಹೋಗುವುದು ರೂಢಿಯಾಗಿ ಬಿಟ್ಟಿತು.

ಯಶವಂತನ ಅಪ್ಪ ಊರ ಪಟೇಲ ಎಂಬುದು ಖರೆ ಆಗಿದ್ದರೂ ಗತಕಾಲದ ವೈಭವವೆಲ್ಲ ಅಳಿದುಹೋಗಿತ್ತು. ಮಗನನ್ನು ಪ್ರಖ್ಯಾತ ಲಾಯರನನ್ನಾಗಿಸಬೇಕೆಂದು ಅವರು ಕನಸಿದ್ದು ಮಣ್ಣುಪಾಲಾಗಿತ್ತು. ಊರನ್ಯಾಯ ನೀತಿಯ ಆಳ್ವಿಕೆಯನ್ನು ಮಾಡಿದ್ದ ಅವರಿಗೆ ತನ್ನ ಮಗನೂ ನ್ಯಾಯಾಧೀಶನಾಗಬೇಕು ಎಂದು ಬಯಸಿದ್ದು ಸಹಜವಾಗಿತ್ತು. ಪಟೇಲರ ಅಳಿಯ ಯಾವುದೊ ವೈಶಮ್ಯಕ್ಕೆ ಒಳಗಾಗಿ ದಾಯಾದಿಗಳ ಜೊತೆ ಕಲಹಕ್ಕೆ ಬಿದ್ದು ಸೊಂಟ ಮುರಿದುಕೊಂಡು ಹಾಸಿಗೆ ಹಿಡಿದ ಮೇಲೆ ಅವರ ಮನೆತನದ ವೈಭೋಗವೆಲ್ಲ ಯಾರ್‍ಯಾರದೊ ಪಾಲಾಗಿ ಬಿಟ್ಟಿತು. ಆದರೂ ಲೆಕ್ಕಕ್ಕೆ ಅವರು ಸಾಯುವ ತನಕ ಜನರಿಂದ ಪಟೇಲರು ಎನಿಸಿಕೊಂಡೇ ಶಿವನ ಪಾದ ಸೇರಿಕೊಂಡರು. ಯಶವಂತ ಎಂ.ಎ. ಮುಗಿಸುವುದಕ್ಕೂ ಪಟೇಲರು ಈ ಲೋಕಕ್ಕೆ ವಿದಾಯ ಹೇಳುವುದಕ್ಕೂ ಸಮಯ ಒಂದೇ ಆಗಿತ್ತು.

ಸಯ್ಯಾಜಿರಾವ್ ರಸ್ತೆಯಲ್ಲಿ ಅವತ್ತು ಯಶವಂತ ರ್‍ಯಾಂಕ್ ಪಡೆದು ಸಿರಿಯಲ್ಲಿ ಅಲೆಯುವಾಗ ಆತನ ಅಪ್ಪ ಹದಿನಾರು ಕಂಬದ ಮನೆಯ ಪಡಸಾಲೆಯಲ್ಲಿ ಮಲಗಿ ಕೊನೆಯ ಉಸಿರು ಎಳೆಯುತ್ತ; ತನ್ನ ಮಗ ಯಶವಂತ ಇನ್ನೂ ಬಂದಿಲ್ಲವೇ, ಬಂದಿಲ್ಲವೇನೂ, ಆತನಿಗೆ ಸುದ್ದಿ ಕೊಟ್ಟಿದ್ದೀರೇನೂ, ಕರೆದುಕೊಂಡು ಬರಲು ಯಾರನ್ನು ಕಳುಹಿಸಿದ್ದೀರಿ, ಇನ್ನೂ ಎಷ್ಟೊತ್ತಿಗೆ ಬರಬಹುದು…. ಹೋಗಿ ಯಾರಾದ್ರೂ ಬೇಗ ಕರೆದುಕೊಂಡು ಬನ್ನಿ. ಆಗ್ಲೇ ಬಾಗಿಲ ಬಳಿ ಯಮಲೋಕದವರು ಬಂದು ನಿಂತಿದ್ದಾರೆ…. ಅಯ್ಯೋ ಮಗನೇ ನನ್ನ ಸಂಕಟ ನಿನಗೆ ಅರುವಾಗುತ್ತಲ್ಲವೇನೊ…. ಎನ್ನುತ್ತಲೇ ಪ್ರಾಣ ಕಳೆದುಕೊಂಡಿದ್ದರು ಯಶವಂತನಿಗೆ ಕಳುಹಿಸಿದ್ದ ತಂತಿ ಸಂದೇಶವೂ ಮುಟ್ಟಿರಲಿಲ್ಲ. ಕರೆದುಕೊಂಡು ಬರಲು ಹೋಗಿದ್ದವರು ಗಂಗೋತ್ರಿಯ ತುಂಬ ಹುಡುಕಾಡಿ ಹಿಂತಿರುಗಿದ್ದರು. ಪಟೇಲರು ಯಶವಂತನಿಗೆ ಹೇಳಬೇಕೆಂದಿದ್ದ ಮಾತುಗಳನ್ನು ತಮ್ಮ ಜೊತೆಗೇ ನುಂಗಿಕೊಂಡು ಹೋಗಿದ್ದರು. ಮರುದಿನ ಸುದ್ದಿ ತಲುಪಿ ಯಶವಂತ ಊರಿಗೆ ಬಂದಿದ್ದನಾದರೂ ತಂದೆಯ ಮುಖ ಸಿಕ್ಕಿರಲಿಲ್ಲ. ತಾಯಿ ಮಗನನ್ನು ಕಂಡು ತಬ್ಬಲಿಯಾದೆಯಾ ಮಗನೇ ಎಂದು ಅತ್ತು ಅಪ್ಪಿಕೊಂಡು ಸಂಕಟಪಟ್ಟಿದ್ದಳು. ಮನೆಯಲ್ಲಿ ಸೇರಿದ್ದ ಎಲ್ಲ ನೆಂಟರ ನೂರಾರು ಮಾತುಗಳಲ್ಲಿ ಯಶವಂತ ತತ್ತರಿಸಿ ಹೋಗಿದ್ದ. ಆತನ ಅಣ್ಣಂದಿರು ಮನೆತನದ ಜವಾಬ್ದಾರಿ ಹೊತ್ತುಕೊಂಡು ಪಟೇಲರ ಆತ್ಮಕ್ಕೆ ಶಾಂತಿ ಕೋರುವ ಆಚರಣೆಗಳನ್ನು ಮುಗಿಸಿದ್ದರು. ಯಶವಂತನಿಗೆ ಸಾವನ್ನು ಕಂಡರೆ ವಿಪರೀತ ದಿಗಿಲು. ಪಟೇಲರು ಹಾಗೆ ಆರ್ತವಾಗಿ ಕೊನೆಯುಸಿರೆಳೆಯುತ್ತ ಮಗನಿಗಾಗಿ ಹಂಬಲಿಸಿದ್ದ ಸಂಗತಿ ಮನೆಯವರನ್ನಷ್ಟೇ ಅಲ್ಲದೆ ಇಡೀ ಊರಿನವರ ಮನಸ್ಸನ್ನೇ ಕಲಕಿಬಿಟ್ಟಿತ್ತು. ಯಶವಂತ ಅಪ್ಪನ ಆ ಕರೆಯನ್ನು ಕಲ್ಪಿಸಿಕೊಂಡೇ ಕುಗ್ಗಿಹೋಗಿದ್ದ. ಸಾವಿನ ಸೂತಕ ಮುಗಿದ ಮೇಲೆ ಕೂಡಲೆ ಮೈಸೂರಿಗೆ ಬಂದು ಗಂಗೋತ್ರಿಯಲ್ಲಿ ಒಂಟಿಯಾಗಿ ತಿರುಗುತ್ತ; ಬಂದ ಎಲ್ಲ ದುಃಖವನ್ನು ಕದ್ದು ಮುಚ್ಚಿ ಕರಗಿಸುತ್ತ ಲೈಬ್ರರಿಗೆ ಹೋಗಿ ಮೂರನೇ ಮಹಡಿ ಪುಸ್ತಕಗಳ ರ್‍ಯಾಕಿನ ಮೂಲೆ ಮರೆಯಲ್ಲಿ ಸ್ಟೂಲಿನಮೇಲೆ ಕುಳಿತು ಪುಸ್ತಕಗಳ ಧೂಳು ಕುಡಿಯುತ್ತ, ಅಷ್ಟೊಂದು ಹಳೆಯ ಪುಟಗಳ ಗಮಲ ಆಗ್ರಣಿಸುತ್ತ ರಾಶಿಯಾಗಿ ಬೇಕಾದ ಪುಸ್ತಕಗಳನ್ನೆಲ್ಲ ಒಡ್ಡಿಕೊಂಡು ಮುಳುಗಿ ಹೋಗುತ್ತಿದ್ದ.

ಪಟೇಲರು ಮಾಡಿದ್ದ ಎಲ್ಲ ಸಾಲವನ್ನು ತೀರಿಸುವಲ್ಲಿ ತಗಾದೆ ಉಂಟಾಗಿ ಮನೆಯ ಒಳಗೆ ಅಡ್ಡಾದಿಡ್ಡಿ ಗೋಡೆಗಳೆದ್ದು ಜಗಳವಾಗಿತ್ತು. ಯಶವಂತನ ಹಿರಿಯಣ್ಣ ವೆಂಕೋಬಿಯು ತಂದೆಯ ಸಾಲಕ್ಕೂ ತನಗೂ ಯಾವ ಸಂಬಂಧವೂ ಇಲ್ಲವೆಂದು ಹಠ ಹಿಡಿದಿದ್ದ. ಅವನ ಬೆನ್ನಹಿಂದೆ ಹುಟ್ಟಿದ್ದ ಪ್ರಶಾಂತ ಕೂಡ ಅದೇ ವಾದ ಮಾಡಿದ್ದ. ಹಾಗಾದರೆ ಮಾಡಿದ್ದ ಸಾಲವನ್ನು ಯಾರ ತಲೆಮೇಲೆ ಹಾಕಬೇಕು ಎಂಬ ನ್ಯಾಯ ಪಂಚಾಯ್ತಿ ಆದಾಗ; ಅದು ಕಿರಿಯನಾದ ಯಶವಂತನ ಕಡೆ ತಿರುಗಿತ್ತು. ಆತನನ್ನು ಓದಿಸಲು ತಾವು ತುಂಬಾ ದುಡ್ಡು ಕಳೆದುಕೊಳ್ಳಬೇಕಾಯಿತು ಎಂದು ಅಣ್ಣಂದಿರಿಬ್ಬರೂ ಹೊಸಮಾತು ತೆಗೆದಿದ್ದರು. ಅತ್ತಿಗೆಯರಂತೂ ಲಕ್ಷಾಂತರ ರುಪಾಯಿಗಳನ್ನು ತಮ್ಮ ಗಂಡಂದಿರು ಈ ಮನೆಯ ವ್ಯವಹಾರಗಳಿಗೆ ಹಾಕಿ ಕೈ ಸುಟ್ಟುಕೊಂಡಿರುವುದೂ ಅಲ್ಲದೆ ಈಗ ಮಾವನವರು ಅವರಿಚ್ಛೆಗೆ ಬಂದಂತೆ ತಮಗೆ ತಿಳಿಸದೆ ಮಾಡಿದ ಸಾಲಕ್ಕೆ ಯಾಕೆ ಜವಾಬ್ದಾರರಾಗಬೇಕೆ ಎಂದು ಗಂಡಂದಿರನ್ನು ಬಿಗಿಮಾಡಿಕೊಂಡಿದ್ದರು. ಯಶವಂತನ ತಾಯಿ ಏನನ್ನೂ ಮಾಡಲಾಗದೆ ತನ್ನ ಮೈಮೇಲಿದ್ದ ತವರು ಮನೆಯ ಒಡವೆಗಳನ್ನೆಲ್ಲ ಬಿಚ್ಚಿ ಹಿರಿಮಕ್ಕಳಿಬ್ಬರ ಕೈಗೆ ಕೊಟ್ಟು; ಇವನ್ನು ಮಾರಿ ನಿಮ್ಮ ತಂದೆ ಮಾಡಿದ್ದಾರೆನ್ನಲಾದ ಸಾಲವನ್ನು ತೀರಿಸಿ ಅವರ ಆತ್ಮಕ್ಕೆ ಮುಕ್ತಿ ದೊರಕಿಸಿ ಎಂದು ಗಳಗಳನೆ ಅತ್ತುಬಿಟ್ಟಿದ್ದರು.

ವೆಂಕೋಬಿಯೂ ಪ್ರಶಾಂತನೂ ಅವತ್ತು ತಾಯಿ ಮುಂದೆ ನಟಿಸಿದ್ದರು. ಅದೂ ಅಲ್ಲದೆ ಸತತವಾಗಿ ಮೂರು ವರ್ಷಗಳಿಂದಲೂ ಮಳೆ ಬಾರದೆ ಬೆಳೆಯೂ ಸಿಗದೆ; ವ್ಯವಹಾರಕ್ಕೆ ಎಂದು ಮಾಡಿದ್ದ ಬ್ಯಾಂಕಿನ ಸಾಲವು ಹೆಬ್ಬಾವಿನಂತೆ ಸುತ್ತಿಕೊಂಡಿತ್ತು. ಅಪ್ಪ ಹೋಗಿ ಹೋಗಿ ಆ ಹೊಲೆಯರ ಮಾದೇವನಿಂದ ಬಡ್ಡಿಗೆ ಮೂವತ್ತು ಸಾವಿರ ಸಾಲ ತಂದು ಮಣ್ಣಿಗೆ ಸುರಿದು ಮಣ್ಣು ಸೇರಿಕೊಂಡುಬಿಟ್ಟ.ಈಗ ನೋಡಿದರೆ; ಅವನು ಕಂಡಲೆಲ್ಲ ‘ಎಲ್ಲಿ ಸ್ವಾಮೀ ದುಡ್ಡು ಕೊಡ್ತೀರೋ ಇಲ್ಲಾ ನಾವೇ ತಕೋಬೇಕೋ’ ಅಂತಾ ಊರ ಮುಂದೆ ಸಿಗರೇಟು ಸೇದುತ್ತಾ ತನ್ನ ಮುಖದ ಮೇಲೆ ಹೊಗೆ ಬಿಟ್ಟು ಕೇಳುತ್ತಾನೆ. ನಾನು ಇದನ್ನು ಸಹಿಸಿಕೊಳ್ಳಲಾರೆ. ಅಪ್ಪ ಪಟೇಲನಾಗಿದ್ದ ಕಾಲದಲ್ಲಿ ಆ ಮಾದೇವನ ಅಪ್ಪ ನಮ್ಮ ತೋಟದಲ್ಲಿ ಜೀತ ಮಾಡ್ತಾ ಇದ್ದ. ಇವತ್ತು ಅವನು ತೋಟ ಮಾರ್‍ತೀರಾ ಅಂತಾ ನನ್ನೇ ಕೇಳ್ತಾನೆ. ಮೊದ್ಲು ಅವನ ಸಾಲ ತೀರಿಸಬೇಕು. ಇಲ್ಲಾ ಅಂದ್ರೆ ಆ ನೀಚ ಮನೆ ಜಪ್ತಿ ಮಾಡಿಸಲೂ ಹೇಸದವನು ಎಂದು ಪ್ರಾಶಾಂತ ತಾಯಿ ಮುಂದೆ ತೀರಾ ಅಪಮಾನದಿಂದ ನಲುಗಿ ಹೋದವನಂತೆ ವಿನಂತಿಸುತ್ತಿದ್ದ.

ಪಟೇಲರ ಹೆಂಡತಿ ರೇಣುಕವ್ವ ತಮಗೆ ಇಂತಹ ಗತಿ ಬಂತಲ್ಲ ಎಂದು ದೇವರಿಗೆ ಶಾಪ ಹಾಕಿದ್ದಳು. ಇನ್ನೂ ಮದುವೆ ಆಗದ ತ್ರಿವೇಣಿಯ ಬಗ್ಗೆಯೇ ತಾಯಿಗೆ ಚಿಂತೆ. ಆಕೆಯೊಬ್ಬಳನ್ನು ದಡ ಸೇರಿಸಿದರೆ ಚಿಂತೆ ಇರಲಿಲ್ಲವಾದರೂ ಹೆತ್ತ ಕರುಳು ಸುಮ್ಮನಿರಲಾರದೆ; ಆತ ಮೈಸೂರಲ್ಲಿ ಯಾವ ಪಾಡು ಪಟ್ಟುಕೊಂಡಿರುವನೋ ಎಂದು ರೇಣುಕವ್ವ ಆಗಾಗ ನೆನೆಸಿಕೊಳ್ಳುತ್ತಿದ್ದಳು. ವೆಂಕೋಬಿಯು ಅಪ್ಪ ಸತ್ತ ಆರೇ ತಿಂಗಳಿಗೆ ಗುಟ್ಟಾಗಿ ಕೆರೆ ಬಯಲ ಎರಡು ಎಕರೆ ಗದ್ದೆಯನ್ನು ಹೊಂಗಸೂರಿನ ಶೆಟ್ಟರಿಗೆ ಮಾರಿಬಿಟ್ಟಿದ್ದ. ತಡವಾಗಿ ಸುದ್ದಿ ಗೊತ್ತಾದ ಕೂಡಲೇ ಪ್ರಶಾಂತ ಕುಡಿದು ಬಂದು ಜಗಳಕ್ಕೆ ಬಿದ್ದು ಪಟೇಲರ ಮಕ್ಕಳು ಇಂತಹ ಹೀನ ಸ್ಥಿತಿಗೆ ಇಳಿದು ಹೀಗೆ ಬೀದಿಯಲ್ಲಿ ಕಚ್ಚಾಡುವರೇ ಎಂಬಂತೆ ರಂಪ ಮಾಡಿಕೊಂಡಿದ್ದರು. ವೆಂಕೋಬಿಯನ್ನು ಕಡಿದು ಹಾಕುವುದಾಗಿ ಮಚ್ಚನ್ನೇ ಹಿಡಿದುಕೊಂಡು ಪ್ರಶಾಂತ ನುಗ್ಗಿ ಬಂದಾಗ ರೇಣುಕವ್ವ ಬಾಯಿ ಬಡಿದುಕೊಂಡು ಅಡ್ಡ ನಿಂತು ಮೊದಲು ನನ್ನ ಕತ್ತು ಕಡಿದು ಹಾಕು ಆಮೇಲೆ ನೀವು ಕಡಿದುಕೊಳ್ಳಿ ಎಂದು ಇಡೀ ಕೇರಿಯೇ ಮೊಳಗುವಂತೆ ಕೂಗಿಕೊಂಡಳು.

‘ಈ ವೆಂಕೋಬಿ ಇದ್ದಾನಲ್ಲಾ, ಇವನು ಎಂಥವನು ಅಂತಾ ತಿಳಿದಿದ್ದೀಯವ್ವಾ, ಇವನು ಆಗಾಗ ಮೈಸೂರಿಗೆ ತಮ್ಮನನ್ನು ನೋಡಿಬರ್‍ತೇನೆ, ಅವನಿಗೆ ದುಡ್ಡಿನ ಅಗತ್ಯವಿದೆ ಅಂತಾ ಹೋಗ್ತಾ ಬರ್‍ತಾ ಇದ್ದನಲ್ಲಾ: ಯಾಕೆ ಅಂತ ಗೊತ್ತಾ?….ಅಲ್ಲಿ ಮೈಸೂರಲಿ ಕುದುರೆ ಬಾಲಕ್ಕೆ ದುಡ್ಡು ಕಟ್ಟಿ ಬರೋಕೆ ಹೋಗ್ತಾ ಇದ್ದ. ಅಲ್ಲಿ ಕುದುರೆ ಬಾಲಕ್ಕೆ ಲೆಕ್ಕವಿಲ್ಲದಂತೆ ದುಡ್ಡು ಕಟ್ಟಿದ್ದೂ ಅಲ್ಲದೆ ಸೂಳೆ ಜಯಮ್ಮನ ಮನೆಗೂ ಹೋಗಿ ಬರ್‍ತಿದ್ದ. ಒಳಗಿಮ್ದೊಳಗೇ ಬಿಲ ಕೊದಂಗೆ ಅಂತಾ ಗದ್ದೆಯ ಮಾರಿ ದುಡ್ಡೆಲ್ಲನು ಕಳ್ಕಂಡು ಇವತ್ತು ಯಾವ್ದಾವ್ದೋ ಲೆಕ್ಕ ಹೇಳಿದ್ರೆ ನಾನು ನಂಬ್ತೀನೇನೊ’ ಎಂದು ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿ ಬಚ್ಚಲಿಗೆ ಕೆಡವಿ ತುಳಿದು; ಬಿಡಿಸಿಕೊಳ್ಳಲು ಬಂದ ಅತ್ತಿಗೆಯ ಕಪಾಳಕ್ಕೆ ಸರಿಯಾಗಿ ಬೀಸಿ ಆಕ್ರೋಶದಿಂದ ಕುಣಿದಾಡಿದ್ದ. ಕೇರಿಯ ಜನ ಅವತ್ತು ಸಮಾಧಾನ ಮಾಡದಿದ್ದರೆ ವೆಂಕೋಬಿಯ ಗತಿ ಏನೇನೋ ಆಗಿಬಿಡುತ್ತಿತ್ತು ರೇಣುಕವ್ವ ಮಕ್ಕಲು ಕೈ ಮೀರಿ ಹೋಗಿದ್ದಾರೆಂದು ನರಳಿದಳು. ಸತ್ತಿರುವ ಗಂಡ ತನ್ನನ್ನು ಕರೆದುಕೊಳ್ಳಲಿ ಎಂದು ಪ್ರಾರ್ಥಿಸಿದಳು.

ಇದಾದ ನಂತರವೇ ಆಸ್ತಿ ಪಾಲಾದದ್ದು. ಯಶವಂತನನ್ನು ಕರೆದಿದ್ದರೂ ಆತ ಬಂದಿರಲಿಲ್ಲ. ಆಸ್ತಿಗೂ ತನಗೂ ಏನೇನೂ ಸಂಬಂಧವಿಲ್ಲ. ಅಪ್ಪನ ಸಂಪಾದನೆಯಲ್ಲಿ ತನಗೇನೂ ಬೇಡವೆಂದು ದೂರವೆ ಉಳಿದಿದ್ದ. ಪಂಚಾಯ್ತಿಯ ಧರ್ಮದಂತೆ ಯಶವಂತನಿಗೂ ಒಂದು ಪಾಲು ಆಸ್ತಿಯನ್ನು ಬಿಡಲಾಗಿತ್ತು. ಹಾಗೆಯೇ ತಂದೆಯ ಸಾಲವನ್ನು ತೀರಿಸುವಲ್ಲಿ ಯಶವಂತನೂ ಭಾಗಿಯಾಗಬೇಕಿತ್ತು. ದೂರದ ಮೈಸೂರಿನಲ್ಲಿ ಸಂಶೋಧನೆಯ ಸಿಕ್ಕಿನಲ್ಲಿ ಮುಳುಗಿ ಹೋಗಿದ್ದ. ಅವನಿಗೆ ಇದಾವುದೂ ತಟ್ಟಿರಲಿಲ್ಲ. ಫೆಲೋಷಿಪ್ ಸಿಕ್ಕಿದ್ದೇ ಅವನಿಗೆ ದೊಡ್ಡ ಆಸರೆ ಆಗಿಬಿಟ್ಟಿತ್ತು. ಆ ನಡುವೆ ಕ್ರಾಂತಿಕಾರಿ ಪ್ರಾಧ್ಯಾಪಕರೊಬ್ಬರು ಅವನನ್ನು ತಮ್ಮೆಡೆಗೆ ಸೆಳೆದಿದ್ದರು. ಮಹಿಳೆಯರ ಮೇಲಿನ ಮಾನಸಿಕ ಹಲ್ಲೆಗೆ ಪಿತೃ ಪ್ರಧಾನ ವ್ಯವಸ್ಥೆಯು ಆಸ್ತಿಯ ಪರಿಕಲ್ಪನೆಯ ಮೂಲಕವೇ ಸಂಚು ರೂಪಿಸಿ ಎಲ್ಲ ಬಗೆಯ ಮೌಲ್ಯಗಳನ್ನೂ ಹೇಗೆ ಅಪವ್ಯಾಖ್ಯಾನಕ್ಕೆ ಒಳಪಡಿಸಿ ಶೋಷಣೆಯ ಬಲೆಯನ್ನು ನೇಯ್ದಿದೆ ಎಂಬ ವಿಚಾರಗಳನ್ನು ಗಾಢವಾಗಿ ಪ್ರಭಾವಿಸಿ ಮನವರಿಕೆ ಮಾಡಿಸಿದ್ದರು. ನಿತ್ಯ ಸಂಜೆ ಅವರ ಮನಗೆ ಹೋಗಿ ಚಹಾ ಕುಡಿದು ಕ್ರಾಂತಿಯ ಮೋಹವನ್ನು ಮೈತುಂಬಿಕೊಂಡು ಬರುವುದು ಹಿತವೆನಿಸಿತ್ತು. ಯಶವಂತ ಎಂದೂ ಜನ ಸೇರದವನು ನಿಧಾನವಾಗಿ ಆಪ್ತರನ್ನು ಹುಡುಕಿಕೊಳ್ಳುವುದನ್ನು ಕಲಿಯತೊಡಗಿದ್ದ. ಕ್ರಾಂತಿ ಕನ್ನೆಯ ಮೋಗವಿಲ್ಲದವನು ಯಾವತ್ತೂ ಒಂದು ಘನತೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲಾರ ಎಂದು ಹೇಳುತ್ತಿದ್ದ ಪ್ರಾಧ್ಯಾಪಕರ ಮಾತು ಯಶವಂತನಿಗೆ ತುಂಬ ಪ್ರಿಯವಾಗಿತ್ತು. ಹಾಗಾಗಿಯೇ ಆತ ಸೋವಿಯತ್ ಒಕ್ಕೂಟದ ಕ್ರಾಂತಿಯ ಕಾವ್ಯವನ್ನು ವಿಶೇಷವಾಗಿ ಓದಿಕೊಳ್ಳುತ್ತಿದ್ದ. ಸಮಾಜವಾದಿ ಮಿತ್ರರ ಜೊತೆ ವಾಗ್ವಾದಕ್ಕೂ ಇಳಿಯುತ್ತಿದ್ದ. ಅಂತೂ ಹಳ್ಳಿಯ ಕಡೆಗಿದ್ದ ಒಂದಿಷ್ಟು ಸಂಬಂಧಗಳನ್ನು ತನಗೆ ತಾನೇ ನಿಷೇಧಿಸಿಕೊಂಡಿದ್ದ.

ಕೊನೆಯ ಉಸಿರೆಳೆಯುವ ಕ್ಷಣದಲ್ಲಿ ಯಶವಂತ ಬಂದಿದ್ದರೆ ಪಟೇಲರು ಮಗನಿಗೆ ಏನನ್ನು ಹೇಳುತ್ತಿದ್ದರೊ ಗೊತ್ತಿಲ್ಲ. ಕಾಲ ಕಳೆದಂತೆ ತಂದೆಯ ನೆನಪು ಯಶವಂತನಿಗೂ ಮಾಸಿತು. ಗಂಗೋತ್ರಿಯ ಹರೆಯದ ಚಂದದ ಹಕ್ಕಿಗಳು ಅವನ ಮನಸ್ಸಿನ ತುಂಬ ಹಾರಾಡತೊಡಗಿದವು. ಸಂಶೋಧವಾ ಕಮ್ಮಟದಲ್ಲಿ ಆತ ಮಂಡಿಸಿದ ಪ್ರಬಂಧ ಅದ್ಭುತವಾಗಿತ್ತು. ವಿದ್ಯಾವಂತರೆಲ್ಲ ಹೊಗಳಿ ಹೊನ್ನ ಶೂಲಕ್ಕೆ ಏರಿಸಿದ್ದರು. ಸಮಾಜ ವಿಜ್ಞಾನಗಳ ಯಾವುದೇ ಸಿದ್ಧಾಂತಗಳ ಪೈಕಿ ಮಾನಸಿಕ ಹಿಂಸೆಗೆ ಇಂತಹ ಗ್ರಹಿಕೆಗಳಿಲ್ಲ ಎಂದು ಅದೇ ಕ್ರಾಂತಿಕಾರಿ ಪ್ರಾಧ್ಯಾಪಕರು ಸಮಾರೋಪ ಭಾಷಣದಲ್ಲಿ ಯಶವಂತನ ತಿಳುವಳಿಕೆಯನ್ನು ಕೊಂಡಾಡಿದ್ದರು. ನಿಜಕ್ಕೂ ಯಶವಂತ ಹಿಂಸೆಗೆ ಸಂಬಂಧಿಸಿದಂತೆ ಹೊಸ ವ್ಯಾಖ್ಯಾನವನ್ನೇ ಮಾಡಿದ್ದ. ಹಿಂಸೆಯ ಪ್ರವೃತ್ತಿ ಹೇಗೆ ವಿಸ್ತರಿಸಿ ಜಗತ್ತಿನ ಉದ್ದಕ್ಕೂ ನೈತಿಕತೆಯನ್ನು ವಿಕಾರಗೊಳಿಸಿ ಸಾಮಾಜಿಕ ಸಂಬಂಧಗಳನ್ನು ನಾಶಪಡಿಸುತ್ತದೆ ಎಂದು ಹತ್ತಾರು ಆಧಾರಗಳನ್ನು ಹಿಡಿದು ವಿಶ್ಲೇಷಿಸಿದ್ದ. ಕಮ್ಮಟ ಮುಗಿಯುವ ನಾಲ್ಕನೇ ದಿನದ ವೇಳೆಗೆ ಯಶವಂತ ಕ್ಯಾಂಪಾಸ್ಸಿನ ತುಂಬ ಸುದ್ದಿಯಾಗಿದ್ದ. ಲೇಡಿಸು ಹಾಸ್ಟೆಲಿನ ಹುಡುಗಿಯರು ಆತನ ಬಗ್ಗೆ ಸ್ನಾನದ ಮನೆಗಳಲ್ಲೂ ಮಾತನಾಡಿಕೊಳ್ಳುವಂತೆ ಆಗಿತ್ತು.

ಊರಲ್ಲಿ ವೆಂಕೋಬಿಯು ಪಾಲು ಪಡೆದು ಬೇರೆ ಆದ ಮೇಲೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ತನ್ನ ಇಬ್ಬರು ಮಕ್ಕಳನ್ನೂ ಹೆಂಡತಿಯನ್ನೂ ಮರೆತು ಹಳ್ಳದ ತಂಪಿನಲ್ಲಿ ಜೂಜಿಗೆ ಕುಳಿತು ಹಗಲನ್ನೆಲ್ಲ ಅಲ್ಲೇ ಕಳೆದು ರಾತ್ರಿಯನ್ನು ಕೂಡ ಹೆಚ್ಚು ಕಡಿಮೆ ಅಲ್ಲೇ ಕರಗಿಸಿ ಒಂದು ದಿನ ಕೈ ತುಂಬ ಗೆದ್ದು ಮತ್ತೊಂದು ದಿನ ಬಿಡಿಗಾಸನ್ನೂ ಉಳಿಸಿಕೊಳ್ಳದಂತೆ ಸೋತು ಮತ್ತೆ ಸಾಲ ಪಡೆದು ಸಾಲದಲ್ಲೇ ಜೂಜಾಡಿ ಪವಾಡದಂತೆ ಸಾವಿರಾರು ರೂ.ಗಳನ್ನು ಗೆದ್ದು ಆದಷ್ಟು ದುಡ್ಡನ್ನು ಅಲ್ಲೇ ಸಾಲದವರಿಗೆ ವರ್ಗಾಯಿಸಿ ಕುಡಿದ ಅಮಲಿನಲ್ಲಿ ಯಾರ್‍ಯಾರ ಮೇಲೊ ಜಗಳಕ್ಕೆ ಬಿದ್ದು ಮನೆಗೆ ಬಂದು ಹೆಂಡತಿ ಮಕ್ಕಳ ಮೇಲೆ ಸಿಟ್ಟು ಕಾರಿಕೊಂಡು ಹೊಡೆದು ಬಡಿದು ಮನೆಯನ್ನೇ ನರಕ ಮಾಡಿಬಿಡುತ್ತಿದ್ದ. ತಂದೆಯು ಉಳಿಸಿದ್ದ ಒಂದಿಷ್ಟು ಜಮೀನಿನ ಮೇಲೂ ಜೂಜಾಡುವ ಆತ ಹಿಮ್ಜರಿಯಲಿಲ್ಲ. ಮಳೆ ಇಲ್ಲದೆ ಬೆಳೆ ಇಲ್ಲದೆ ಜನ ಸಾಯುತ್ತಿರುವಾಗ ಆ ಪಾಳು ಜಮೀನಿನಿಂದ ಹೀಗಾದರೂ ಸಾಲ ಪಡೆಯಬಹುದಲ್ಲಾ ಎಂದು ವೆಂಕೋಬಿ ಅಮಲಿನಲ್ಲಿ ನರ್ತಿಸುತ್ತಿದ್ದ.

ಪ್ರಶಾಂತ, ವೆಂಕೋಬಿಯ ಸಂಬಂಧ ಕಳೆದುಕೊಂಡಿದ್ದ. ಗಂಡನ ಕಾಟ ತಾಳಲಾರದೆ ಹಿರಿ ಸೊಸೆ ಮನೆ ಬಿಟ್ಟು ತವರಿಗೆ ಓಡಿ ಹೋಗುವುದನ್ನು ತಡೆದು ಸಾಕಾಗಿ ರೇಣುಕವ್ವ ಸುಮ್ಮನಾಗಿಬಿಟ್ಟಿದ್ದಳು. ವೆಂಕೋಬಿಯ ಮಾವ ಬಂದು ಎಷ್ಟೆಲ್ಲ ಯುಕ್ತಿ ಹೇಳಿದರೂ ಏನೂ ಬದಲಾಗಲಿಲ್ಲ. ಕೊನೆಗೆ ವೆಂಕೋಬಿಯ ಹೆಂಡತಿಯ ಅಣ್ಣ ಬಂದು ಸಹಿಸಲಾರದೆ ಜಗಳಕ್ಕೆ ಬಿದ್ದು ಮಾರಾಮಾರಿಯಾಗಿತ್ತು. ಈಕೆ ತನ್ನ ಮನೆಯಲ್ಲಿ ಇರಬೇಕಾದ್ದಿಲ್ಲ, ಇವಳ ಜೊತೆ ನನಗೆ ಸಂಸಾರ ಸಾಧ್ಯವಿಲ್ಲ ಎಂದು ವೆಂಕೋಬಿ ಮುನಿಸಿಕೊಂಡು ಹೆಚ್ಚು ಕಡಿಮೆ ಒಂದು ತಿಂಗಳ ತನಕ ಮನೆಗೆ ಬರದೆ ಹಳ್ಳದ ತಂಪಿನ ಜೂಜಿನಲ್ಲೇ ಮುಳುಗಿಬಿಟ್ಟಿದ್ದ. ಅವನ ಮಕ್ಕಳಿಗೆ ಹಿಟ್ಟು ಸೊಪ್ಪು ಮಾಡಿಕೊಂಡು ರೇಣುಕವ್ವ ವೆಂಕೋಬಿಗಾಗಿ ಸರೊತ್ತಿನ ತನಕ ದೀಪ ಹಚ್ಚಿಕೊಂಡು ಒಂದು ಕಣ್ಣಲ್ಲಿ ನಿದ್ರೆ ಮಾಡುತ್ತಾ ಇನ್ನೊಂದು ಕಣ್ಣನ್ನು ಮಗನಿಗಾಗಿ ತೆರೆದುಕೊಂಡು ಕಾಯುತ್ತಲೇ ಇದ್ದಳು. ಕಿರಿಯ ಮಗಳಾದ ತ್ರಿವೇಣಿ ಮನೆಯ ಎಲ್ಲ ಘಟನೆಗಳನ್ನು ಮೂಕವಾಗಿ ಸಹಿಸುತ್ತ ಕಣ್ಣಂಚಿಗೆ ಬಂದು ನಿಂತ ಕಣ್ಣೀರ ಸೆರಗಿನಿಂದ ಮರೆಯಲ್ಲಿ ಒರೆಸಿಕೊಳ್ಳುತ್ತ ತಾಯಿಯ ಹಿಂದಿಂದೆಯೇ ಸುತ್ತುತ್ತಿದ್ದಳು.

ಪ್ರಶಾಂತನ ಹೆಂಡತಿ ಅವರಾರ ಕಡೆಗೂ ತಿರುಗಿ ನೋಡುತ್ತಿರಲಿಲ್ಲ. ಆಕೆಯ ಪ್ರತಿಯೊಂದು ಮಾತಿಗೂ ಪ್ರಶಾಂತ ಸೊಪ್ಪು ಹಾಕುತ್ತಿದ್ದ. ಪಟೇಲರು ತೀರಿ ಹೋದ ದಿನಗಳಲ್ಲಿ ಹೊಲೆಯರ ಮಾದೇವನ ಬಳಿ ಅಪ್ಪ ಮೂವತ್ತು ಸಾವಿರ ರೂಪಾಯಿ ಸಾಲ ಮಾಡಿದ್ದಾರೆ. ಅದನ್ನು ತೀರಿಸಬೇಕು ಎಂದು ಕಣ್ಣೀರು ಹಾಕುತ್ತ ತಾಯಿಯ ಮುಂದೆ ನಿವೇದಿಸಿಕೊಂಡಿದ್ದೆಲ್ಲಾ ನಾಟಕವಾಗಿತ್ತು. ಪಟೇಲರು ತನ್ನ ಇಬ್ಬರೂ ಹಿರಿಯ ಗಂಡು ಮಕ್ಕಳನ್ನು ಬಹು ಮುದ್ದಾಗಿ ಬೆಳೆಸಿದ್ದರು. ಓದದೆ ಪೋಲಿ ಬಿದ್ದ ಮಕ್ಕಳನ್ನು ವ್ಯವಸಾಯಕ್ಕೆ ತೊಡಗಿಸಿಕೊಂಡಿದ್ದರು. ಇರುವ ಜಮೀನನ್ನು ನಿಷ್ಠೆಯಿಂದ ಮಾಡಿದರೆ ಸುಖವಾಗಿ ಇರಬಹುದು ಎಂದು ಭಾವಿಸಿ ಮಕ್ಕಳ ಮೇಲೆ ವಿಶ್ವಾಸವಿಟ್ಟಿದ್ದರು. ವೆಂಕೋಬಿಯೂ ಪ್ರಶಾಂತನೂ ತಂದೆಯಿದ್ದ ಕಾಲದಲ್ಲೇ ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದರು. ಬರಗಾಲವೂ ಅವರ ನಿರಾಸಕ್ತಿಯಲ್ಲಿ ಪಾಲುಗೊಂಡಿತ್ತು. ಅದಲ್ಲದೆ ಅಷ್ಟೊಂದು ಕಷ್ಟಪಟ್ಟು ಹಗಲು ರಾತ್ರಿ ಮಳೆ, ಚಳಿ, ಬಿಸಿಲು ಎನ್ನದೆ ಮೈ ಮೂಳೆ ಮುರಿದು ದುಡಿದರೂ ಫಸಲಿಗೆ ಗಿಟ್ಟುತ್ತಿದ್ದ ಬೆಲೆಯಂತೂ ಹೇಳತೀರದಾಗಿತ್ತು. ಸ್ವತಃ ವೆಂಕೋಬಿಯು ತಮ್ಮನ ಜೊತೆ ಎಕರೆಗಟ್ಟಲೆ ಬೆಳೆದಿದ್ದ ಹೂ ಕೋಸಿಗೆ ಬೆಲೆ ದಕ್ಕದೆ ಪಾತಾಳಕ್ಕೆ ಬಿದ್ದಂತಾಗಿ ಲಾರಿ ಬಾಡಿಗೆಗೂ ಕಾಸು ಕೊಡಲಾಗದೆ ತೀರಾ ಅಪಮಾನಿತನಾಗಿ ಬಂದು ತಾವಿನ್ನು ಯಾಕೆ ಇಷ್ಟು ಬೆವರು ಹರಿಸಿ ದುಡಿಯಬೇಕು ಎಂದು ಜಡ್ಡುಗಟ್ಟಿದ ವ್ಯವಸಾಯವನ್ನು ನಂಬಿ ಬದುಕಬಾರದು ಎಂದು ವೆಂಕೋಬಿ ಆಗಾಗ ಮನೆಯಲ್ಲಿ ಪರದಾಡುತ್ತಿದ್ದುದೂ ಉಂಟು. ಪಟೇಲರು ಎಲ್ಲೆಲ್ಲಿ ಸಾಲ ಮಾಡಿದ್ದರೆಂಬುದಕ್ಕೆ ಸೂಕ್ತವಾಗಿ ದಾಖಲೆಯೇ ಇರಲಿಲ್ಲ.

ಪಟೆಲರು ಸತ್ತದ್ದು ಕೂಡ ಭಯಾನಕ ಗುಪ್ತ ಖಾಯಿಲೆಯಿಂದ ಎಂದು ಜನ ಹೇಳುತ್ತಿದ್ದರು. ಆನೆಯಂತಿದ್ದ ಪಟೇಲರು ಹೇಗೆ ಮೂಳೆ ಚಕ್ಕಳವಾಗಿದ್ದರೆಂದು ನೋಡಿದ್ರಾ, ಅಬ್ಬಬ್ಬಾ ಅಂತಹ ಹೆಣವನ್ನು ನಾನು ಎಂದೂ ನೋಡೇ ಇರಲಿಲ್ಲ. ಮುಖದ ಮ್ಯಾಲೆ ಚಕಳ ಸುಮ್ನೆ ಅಂಟಿಕೊಂಡಿತ್ತು. ದುಪ್ಟಿಯಿಂದ ಎದ್ದು ಬಂದಂತೆ ಕಾಣ್ತಿದ್ರು ಎಂದು ಯಾವನೊ ತಲೆ ಮಾಸಿದವನು ಭಯಾನಕವಾಗಿ ಪಟೇಲರ ಕೃಶ ದೇಹವನ್ನು ವರ್ಣಿಸುತ್ತಿದ್ದರೆ: ಬಾಯಿ ಮುಚ್ಚಿಕೊಂಡು ಕೂತಿರಲಾಗದ ಇನ್ನಾವನೊ ಮೊದಲಿನವ ಮಾತಿನಿಂದ ಉತ್ಸಾಹಿತನಾಗಿ ‘ಅಯ್ಯೋ; ಪಟೇಲ್ರ ಮೈಯೆಲ್ಲ ಕೀವುಗತ್ಟಿ ಉಳಾ ಮಿಳ್ಯಾಡ್ತ ಇದ್ದೋ; ಅಂತಾ ವಾಸ್ನೆಯ ನಾನೆಂದೂ ಕಂಡಿರಲಿಲ್ಲ’ ಎಂದು ಮುಖವನ್ನು ಅಸಹ್ಯ ಮಾಡಿಕೊಳ್ಳುತ್ತಿದ್ದ.

ಎರಡನೆ ಪಾದ:

ಅಂತೂ ಪಟೇಲರು ಸತ್ತ ಮೇಲೂ ತರಾವರಿ ಮಾತುಗಳಿಗೆ ಈಡಾಗಿದ್ದರು. ಯಶವಂತನಿಗೆ ಆ ಯಾವ ಆರೋಪಗಳು ಕೇಳಿಸಿರಲಿಲ್ಲ. ಅವನ ಪಾಡಿಗೆ ಅವನು ಪ್ರೊಫೆಸರ್ ದಾರಿಯಲ್ಲಿ ಕ್ರಾಂತಿಯ ಕನ್ನೆಯರನ್ನು ಮೋಹಿಸುತ್ತಿದ್ದ. ಪ್ರಶಾಂತ ಆಗಾಗ ತಾಯಿ ಮುಂದೆ ದೈನ್ಯತೆ ಪ್ರದರ್ಶಿಸಿ ತಂದೆಯವರು ನಿಧಿಯನ್ನು ಮನೆಯ ಯಾವುದೊ ಮೂಲೆಯಲ್ಲಿ ಬಚ್ಚಿಟ್ಟಿದ್ದಾರಂತೆ, ಅದೂ ಹಳೇ ಕಾಲದ ನಾಣ್ಯಗಳಂತೆ ಬ್ರಿಟಿಷರು ಮೈಸೂರಿನ ಹುಲಿ ಟಿಪ್ಪುವಿನ ಮೇಲೆ ದಾಳಿ ಮಾಡಿದ್ದಾಗ ತಪ್ಪಿಸಿಕೊಂಡು ಬಂದಿದ್ದ ಸೈನಿಕರ ಬಳಿ ಇದ್ದ ಅಪ್ಪಟ ಚಿನ್ನದ ನಾಣ್ಯಗಳನ್ನು ಹೇಗೋ ಲಪಟಾಯಿಸಿ ಪಡೆದುಕೊಂಡರಂತೆ. ಟಿಪ್ಪು ಸತ್ತ ಸುದ್ದಿ ತಿಳಿದ ಕೂಡಲೆ ಯುದ್ಧ ಭೂಮಿಯಲ್ಲಿದ್ದ ಕೆಲ ಸೈನಿಕರು ಅರಮನೆಗೆ ತೆರಳಿ ಕೈಗೆ ಸಿಕ್ಕಿದ್ದಷ್ಟನ್ನು ಬಾಚಿಕೊಂಡು ತಲೆಮರೆಸಿಕೊಂಡು ದಾರಿ ತಪ್ಪಿ ಬಂದಾಗ ಆಗ ಪಟೇಲರ ತಂದೆಯಾಗಿದ್ದ ಪರ್ವತಪ್ಪನವರ ಕೈಗೆ ಸಿಕ್ಕಿಬಿದ್ದು ಹೆದರಿ ಅಷ್ಟೂ ಚಿನ್ನವನ್ನು ಕೊಟ್ಟು ಮಾಯಾವಾಗಿದ್ದರಂತೆ ಎಂಬ ಕತೆಯನ್ನು ಯಾರಿಂದಲೋ ಕೇಳಿಸಿಕೊಂಡ ಪ್ರಶಾಂತ ಹಗಲು ರಾತ್ರಿ ಮನೆಯ ಯಾವ ಮೂಲೆಯಲ್ಲಿ ಚಿನ್ನವನ್ನು ಬಚ್ಚಿಟ್ಟಿರಬಹುದೆಂದು ತಾಯಿ ರೇಣುಕವ್ವನನ್ನು ಪೀಡಿಸುತ್ತಿದ್ದ. ಆತನ ಹೆಂಡತಿ ವನಜಳಂತೂ ಪ್ರತಿ ರಾತ್ರಿಯೂ ಮನೆಯ ಮೂಲೆ ಸಂದಿಗಳ ನೆಲವನ್ನೆಲ್ಲ ಬೆರಳುಗಳನ್ನು ಮಡಿಚಿಕೊಂಡು ಕುಟ್ಟಿಕುಟ್ಟಿ ಎಲ್ಲಿ ಡೊರಗು ಬಿದ್ದಂತೆ ಶಬ್ದ ಕೇಳಿಸುವುದೊ ಎಂದು ಹುಡುಕಾಡಿ ಹುಚ್ಚಾಗುತ್ತಿದ್ದಳು.

ಪರ್ವತಪ್ಪನವರು ಟಿಪ್ಪುವಿನ ಕಾಲದಲ್ಲಿ ಪಾಳೆಯಗಾರರೇ ಆಗಿದ್ದವರು. ಜನರನ್ನು ಹೆದರಿಸಿ ಸಂಪತ್ತನ್ನು ಲೂಟಿ ಮಾಡಿ ಯಾರಿಗೂ ಗೊತ್ತಿಲ್ಲದಂತೆ; ಆದರೆ ಮಗನಾಗಿದ್ದ ಪಟೇಲರಿಗೆ ಮಾತ್ರ ಒಂದಿಷ್ಟು ಗೊತ್ತಿರುವಂತೆ ನೆಲವನ್ನು ಅಗೆದು ಚಿನ್ನವನ್ನು ಹುಗಿದಿದ್ದಾರೆ ಎಂಬ ಪ್ರತೀತಿ ಇತ್ತು. ರೇಣುಕವ್ವನೂ ತಾನು ಮದುವೆ ಆದ ಕಾಲದಲ್ಲಿ ಇಂತಹ ಮಾತುಗಳನ್ನು ಕೇಳಿಸಿಕೊಂಡಿದ್ದಳು. ‘ಅಯ್ಯೋ ಮನೆ ಮೂಲೆ ಮೂಲೆಯಲ್ಲೂ ಚಿನ್ನ ಬಚ್ಚಿಟ್ಟಿರುವ ಮನೆಗೆ ಸೊಸೆಯಾಗಿ ಹೋಗಬೇಕಾದರೆ ಏಳೇಳು ಜನ್ಮಗಳ ಪುಣ್ಯ ಮಾಡಿರಬೇಕು’ ಎಂದು ಜನರು ಐಸಿರಿಯ ಮಾತನಾಡಿದ್ದರು. ಪಟೇಲರು ಆ ಎಲ್ಲ ಮಾತುಗಳನ್ನು ಪ್ರತಿಷ್ಠೆಗಾಗಿ ಹೌದೆಂದು ಒಪ್ಪಿಕೊಂಡಿದ್ದು ನಿಜವಿತ್ತು. ವೆಂಕೋಬಿಯು ತಂದೆಯ ಮಾತೆಲ್ಲ ಸುಳ್ಳು ಎಂದು ಹೇಳುತ್ತಿದ್ದ. ಪ್ರಶಾಂತ ಮಾತ್ರ ತಮ್ಮ ಮನೆಯ ನೆಲದ ಕೆಳಗೆ ನಿಸ್ಸಂದೇಹವಾಗಿ ಚಿನ್ನದ ನಿಧಿ ಇದೆ ಎಂದು ನಂಬಿ; ತಾಯಿಗೆ ಮಾತ್ರವೇ ಆ ಗುಪ್ತ ನಿಧಿಯ ತಾವು ಗೊತ್ತಿದೆ ಎಂದು ಗುಟ್ಟಾಗಿ ದುಂಬಾಲು ಬೀಳುತ್ತಿದ್ದ. ಆತನ ಹೆಂಡತಿಯ ಕನಸಿನ ತುಂಬ ಚಿನ್ನದ ನಿಧಿಯೇ ಕುಣಿಯುತ್ತಿತ್ತು.

ಪಟೆಲರು ಬದುಕಿದ್ದಾಗ ಕೇವಲ ಕತೆಗಳಂತೆ ಕೇಳಿಸುತ್ತಿದ್ದ ಆ ಮಾತುಗಳೆಲ್ಲ ಅವರು ಸತ್ತ ಮೇಲೆ ಸತ್ಯದಂತೆ ಕಾಣುತ್ತಿದ್ದವು. ಹಾಗೆ ಮೂರು ದಿನವೂ ಪ್ರಾಣ ಬಿಡದೆ ನರಳಾಡುತ್ತಾ ತಾವೆಲ್ಲ ಏನು ಹೇಳಿದರೂ ಕೇಳಿದರೂ ಬಾಯಿ ಬಿಡದೆ ಎಲ್ಲ ಗುಟ್ಟನ್ನು ಕಿರಿ ಮಗನಾದ ಯಶವಂತನ ಕಿವಿಗೆ ಮಾತ್ರ ಉಸುರುವೆ ಎಂಬಂತೆ ವಿಲಿವಿಲಿ ಸಂಕಟಪಡುತ್ತಿದ್ದುದು ಚಿನ್ನವನ್ನು ಎಲ್ಲಿ ಬಚ್ಚಿಡಲಾಗಿದೆ ಎಂಬುದನ್ನು ತಿಳಿಸಲಿಲ್ಲಾಗಿಯೇ ಇರಬೇಕೆಂದು ಪ್ರಶಾಂತ ಲೆಕ್ಕಿಸಿದ್ದ. ತಂದೆಯಾಗಿ ನಮಗೆ ಗುಟ್ಟೂ ತಿಳಿಸದೆ ಮೋಸ ಮಾಡಿದನಲ್ಲ ಎಂಬ ಭಾವನೆಯೂ ಪ್ರಶಾಂತ ಮತ್ತು ವೆಂಕೋಬಿಯರ ಮನಸ್ಸಿನಲ್ಲಿ ದಟ್ಟವಾಗಿತ್ತು. ಕೊನೆ ಪಕ್ಷ ಕೈಹಿಡಿದು ಬಾಳಿ ಬದುಕಿ ಕೊನೆಗೆ ಬಾಯಿಗೆ ಬೀರು ಬಿಟ್ಟ ತನ್ನ ಹೆಂಡತಿಗಾದರೂ ರವಷ್ಟು ಗುಟ್ಟು ಬಿಟ್ಟು ಕೊಡದೆ ಹೋದನಲ್ಲ ಎಂದು ಜನ ಆಡಿಕೊಂಡಿದ್ದರು. ಸಾಯುವ ಕೊನೆಗಾಲದಲ್ಲಿ ಅರಳು ಮರಳಾಗಿ ಆಡುತ್ತಿದ್ದ ಪಟೇಲರು ಹೆಚ್ಚು ಕಡಿಮೆ ಎಲ್ಲ ನೆನಪನ್ನೂ ಕಳೆದುಕೊಂಡಿದ್ದರು. ಚಿನ್ನದ ವಿಷಯ ತೆಗೆದಾಗಲೆಲ್ಲ ಮಕ್ಕಳಂತೆ ಬೊಚ್ಚುಬಾಯಿ ಬಿಟ್ಟುಕೊಂಡು ಕೇಳಿಸದ ಕಿವಿಯ ತೆರೆದುಕೊಂಡು ನಡುಗುವ ತಲೆಯನ್ನು ಸಾವರಿಸಿಕೊಂಡು ಏನು ಎಂಬಂತೆ ಕತ್ತು ಎತ್ತುವ ವೇಳೆಗೆ ಮತ್ತೆ ಎಲ್ಲವನ್ನೂ ಮರೆತುಬಿಡುತ್ತಿದ್ದರು.

ರೇಣುಕವ್ವ ಮಗ ಪ್ರಶಾಂತನ ಮೇಲೆ ಎಷ್ಟೇ ರೇಗಾಡಿದರೂ ಆತನ ಆಸೆ ಸುಮ್ಮನಿರುತ್ತಿರಲಿಲ್ಲ. ಅದು ಅವನನ್ನೇ ಆಟ ಆಡಿಸುತ್ತಿತ್ತು. ಬೆಳೆ ಕೈಕೊಟ್ಟು ಸಾಲಗಳು ಮೈಮೇಲೆ ಬರುವಾಗ ಪದೇ ಪದೇ ಚಿನ್ನದ ನಾಣ್ಯಗಳ ಯಾವ ಲವ ಲೇಶದ ಆಸೆಯನ್ನೂ ಇಟ್ಟುಕೊಂಡಿರಲಿಲ್ಲ. ಒಮ್ಮೆ ಮದುವೆ ಆದ ಹೊಸದರಲ್ಲಿ ತೊಟ್ಟಿ ಮನೆಯ ನೀರೊಲೆಯ ಪಕ್ಕದ ಗೋಡೆಯನ್ನು ಕೆಡವಿ ಅಲ್ಲಿ ನೀರಿನ ತೊಟ್ಟಿಯನ್ನು ಕಟ್ಟುವಾಗ ಕುಡಿಕೆಯೊಂದರಲ್ಲಿ ಒಂದಿಷ್ಟು ಬೆಳ್ಳಿಯ ನಾಣ್ಯಗಳು ಸಿಕ್ಕಿದ್ದವು. ಆಗ ಪ್ರಶಾಂತ ಕೈಗೂಸಾಗಿದ್ದ. ಆ ಬೆಳ್ಳಿ ನಾಣ್ಯಗಳನ್ನು ಕೆಚ್ಚಿಸಿ ಆತನಿಗೆ ಉಡುದಾರ ಮಾಡಿಸಿದ್ದರು. ಅದಷ್ತನ್ನು ಬಿಟ್ಟರೆ ಭಾಗಶಃ ಆ ಮನೆಯ ಯಾವ ಮೂಲೆಯಲ್ಲೂ ಎಂದೂ ಚಿನ್ನದ ಸುಳಿವು ಕಂಡಿರಲಿಲ್ಲ. ಸ್ವತಹ್ ಪಟೇಲರು ತಮ್ಮ ಕಷ್ಟಕಾಲದಲ್ಲಿ ಕೂಡ ತಂದೆ; ಪರ್ವತಪ್ಪಬವರು ಟಿಪ್ಪು ಕಾಲದ ಚಿನ್ನದ ನಾಣ್ಯಗಳನ್ನು ತಮಗಾಗಿ ಎಲ್ಲೋ ಬಚ್ಚಿಟ್ಟಿರುವರೆಂದು ಭಾವಿಸಿ ಹುಡುಕಿ ಹತಾಶೆಯಿಂದ ಅಮ್ತಹ ಯಾವ ಆಸೆಯೂ ತಕ್ಕುದಲ್ಲವೆಂದು ಕೈಬಿಟ್ಟಿದ್ದರು. ರಾಮಾಜೋಯಿಸರನ್ನು ಕರೆಸಿ ಬಚ್ಚಿಟ್ಟಿರುವ ಚಿನ್ನವನ್ನು ತೆಗೆಸಲು ಏನು ಕ್ರಮ ಅನುಸರಿಸಬೇಕು ಎಂದು ಶಾಸ್ತ್ರ ಕೇಳಿದ್ದರು.

ಮೇಲುಕೋಟೆಯ ಕಡೆಯಿಂದ ಬಂದು ಊರಲ್ಲಿದ್ದ ಆ ರಾಮಾಜೋಯಿಸರು ಪಟೇಲರಿಗೆ ಆಪ್ತರು. ಅವರು ಏನೇನೊ ಹೇಳಿದ್ದರು. ಚಿನ್ನವನ್ನು ಬಚ್ಚಿಟ್ಟು ಇಂತಿಷ್ಟೆ ಕಾಲ ಕಳೆಯಿತೆಂದರೆ ಅದು ಭೂಮಿ ತಾಯಿಯ ಚಿನ್ನವಾಗಿಬಿಡುತ್ತದೆ. ಅಮ್ತಹ ಚಿನ್ನವನ್ನು ಕಾಯಲು ಆಕೆ ಏಳು ತಲೆಗಳ ಸರ್ಪವನ್ನು ಕಾವಲಿಗೆ ಬಿಟ್ಟಿರುತ್ತಾಳೆ. ಏಳು ಹೆಡೆಯ ನಡುವಿನ ಹಳದಿಯ ಜ್ವಾಲೆಯ ಮಣಿಯು ಸದಾ ಎಚ್ಚರವಾಗಿರುತ್ತದೆ. ಶಾಸ್ತ್ರಾಚಾರದ ವಿಧಿಗಳನ್ನು ಅನುಸರಿದೆ ಹೋಗಿ ಅಗೆದರೆ ಅದು ತಮ್ಮನ್ನೇ ಬಲಿ ತೆಗೆದುಕೊಂಡುಬಿಡುತ್ತದೆ. ಚಿನ್ನ ಅಂದರೆ ಏನೆಂದು ತಿಳಿದಿದ್ದೀರಿ ಪಟೇಲರೇ. ಅದು ಸಾವಿದ್ದಂತೆ. ಅದನ್ನು ದಕ್ಕಿಸಿಕೊಳ್ಳುವುದು ಅಂದರೆ ಸಾವನ್ನು ಗೆದ್ದಂತೆ. ಚಿನ್ನದ ಆಸೆಯನ್ನು ಹಿಂಬಾಲಿಸುವುದು ತರವಲ್ಲ. ನಿಮಗೆ ಆಪ್ತರಾಗಿರುವ ಕಾರಣಕ್ಕೆ ಈ ಮಾತು ಹೇಳುತ್ತಿರುವೆ. ಅದರ ಭ್ರಮೆಯನ್ನು ಬಿಟ್ಟುಬಿಡಿ. ವಿಧಿಯು ಯಾವ ರೀತಿ ವೇಷ ಧರಿಸಿ ಬರುತ್ತೋ ಯಾರಿಗೆ ತಾನೆ ಗೊತ್ತು. ನೀವು ಚಿನ್ನದ ಸಹವಾಸವನ್ನು ಬಿಟ್ಟುಬಿಡಿ. ಶಾಸ್ತ್ರಮಾಡಿ ಒಂದು ವೇಳೆ ಚಿನ್ನ ಪತ್ತೆ ಮಾಡಿದರೂ ಅದು ನ್ಯಾಯವಲ್ಲ. ನಿಮ್ಮ ಮಕ್ಕಳು ಗಟ್ಟಿಗರು, ಭೂಮಿತಾಯಿಯ ಜೊತೆ ಬದುಕು ಮಾಡಿದರೆ ಅದಕ್ಕಿಂತ ಚಿನ್ನ ಇನ್ಯಾವುದೂ ಇಲ್ಲ ಎಂದು ಹೇಳಿ ಸುಮ್ಮನಿರಿಸಿದ್ದರು. ಪಟೇಲರು ಅವತ್ತೇ ಚಿನ್ನದ ಮೋಹವನ್ನು ಕಳೆದುಕೊಂಡಿದ್ದರು. ರೇಣುಕವ್ವನಿಗೆ ಮೊದಲೇ ಅಮ್ತಹ ಭಾವನೆಗಳು ಕರಗಿಹೋಗಿದ್ದವು.

ಆದರೆ ಜನರ ಮನಸ್ಸಿನಲ್ಲಿ ಯಾವುದೂ ಸಾಯುವುದಿಲ್ಲ. ಇಲ್ಲದ್ದನ್ನು ಅಪಾರವಾಗಿ ಕಲ್ಪಿಸಿಕೊಳ್ಳುವ ಗುಣ ಅನುವಂಶಿಕವಾಗಿ ಬಂದಿರುತ್ತದೆ. ಪ್ರಶಾಂತ ಮನೆಯನ್ನು ಪಾಲು ಮಡಿಕೊಳ್ಳುವಾಗಲೂ ಚಿನ್ನ ಇಟ್ಟಿರುವ ಜಾಗವು ತನ್ನ ಕಡೆಗೇ ಬಂದಿರುತ್ತದೆ ಎಂದು ತಿಳಿದಿದ್ದ. ತಂದೆ ತೀರಿಕೊಂಡ ನಾಲ್ಕೇ ತಿಂಗಳಿಗೆ ಆತ ಇಲಿ ಬಿಲಕ್ಕೆ ಹಾವು ಬಂದು ಸೇರಿಕೊಂಡಿದೆ ಎಂಬನೆಪ ಮಾಡಿಕೊಂಡು ಗುಟ್ಟಾಗಿ ಮನೆಯ ಮೂಲೆ ನೆಲಗಳನ್ನೆಲ್ಲ ಅಗೆದು ಏನೂ ಸಿಗದೆ ಪೆಚ್ಹ್ಚಾಗಿದ್ದ. ಆದರೂ ಬಿಡದೆ ಕೊಳ್ಳೆಗಾಲದ ಮಾಟ ಮಂತ್ರದ ರಾಮಯ್ಯ ಊರು ಸುತ್ತಿಕೊಂಡು ಬಂದಾಗ ಗುಪ್ತ ನಿಧಿಯನ್ನು ಪತ್ತೆ ಹಚ್ಚಲು ಇರುವ ವಾಮ ಮಾರ್ಗಗಳನ್ನು ಕೇಳಿದ್ದ. ಆ ಭಯಾನಕ ರಾಮಯ್ಯನೋ ಯಾಕೋ ಏನೋ ವಿಚಿತ್ರವಾದ ಭೀಭತ್ಸ ಕ್ರಮವೊಂದನ್ನು ತಿಳಿಸಿದ್ದ. ತೀರ ಬಂಧು ಬಳಗದವರ ಮಕ್ಕಳ ಪೈಕಿ ಒಬ್ಬನನ್ನು ಬಲಿ ಕೊಟ್ಟರೆ ಆ ನಿಧಿಯನ್ನು ಆ ನಿಧಿಯನ್ನು ಪತ್ತೆ ಮಾಡಿಕೊಡುವುದಾಗಿಯೂ; ಆ ಮೇಲೆ ಆ ಚಿನ್ನದಲ್ಲಿ ತನಗೆ ಅರ್ಧ ಪಾಲು ಬರಬೇಕು ಎಂದು ಷರತ್ತು ಮಂಡಿಸಿದ್ದ.

ರೇಣುಕವ್ವ ನುಸಿ ಪೀಡೆಯಿಂದ ಒಣಗಿ ನಿಂತ ತೆಂಗಿನ ತೋಟದಲ್ಲಿ ಗಂಡನ ಸಮಾಧಿಯ ಮುಂದೆ ಚಿಂತೆಯಲ್ಲಿ ಉರಿಯುತ್ತ ಕೂತಿರುವಾಗ ಬಲಿಯ ಸಂಗತಿಯೇ ತಿಳಿಯದೆಂದು ತರ್ಕಿಸಿದ್ದರು. ರಾಮಯ್ಯ ಇಂತಹ ನಿಧಿ ಶೋಧದ ಬಲಿ ಆಚರಣೆಗಳನ್ನು ಮಾಡುವುದರಲ್ಲಿ ಪಳಗಿದ್ದಾತ. ವೆಂಕೋಬಿಯು ಜೀವನದಲ್ಲಿ ಕಂಡುಕೊಂಡಿದ್ದ ಒಂದೇ ಒಂದು ನೆಮ್ಮದಿಯ ತಾಣವೆಂದರೆ ಹಳ್ಳದ ಹೊಂಗೆ ಮರಗಳ ತಂಪಿನ ಜೂಜಾಟವೇ. ಆತನಿಗೆ ಸಾಲ ಕೊಡಲು ಜನರಿದ್ದರು ಪಕ್ಕದ ಸಾದಾರಹಳ್ಳಿಯ ವಕ್ಕಲಿಗರು ಪಟೇಲರ ಮನೆಯಲ್ಲಿ ಚಿನ್ನದ ನಿಧಿ ಇದೆ ಎಂದು ಕೇಳಿ ಆಸೆಪಟ್ಟಿದ್ದರು. ತನ್ನ ಮನೆಯ ಮೇಲೆ ಸಾಲ ತೆಗೆಯಲು ವೆಂಕೋಬಿಯು ಹಿಂಜದಿರಲಿಲ್ಲ. ಮನೆ ಮೇಲೆ ಸಾಲ ಕೊಡಲು ತಯಾರಿದ್ದವರಿಗೂ ಚಿನ್ನದ ಮೋಹವಿತ್ತು ಯಶವಂತನ ತಂಗಿ ತ್ರಿವೇಣಿ ತಾಯಿಯ ಜೊತೆ ತೋಟದ ಸಣ್ಣ ಪುಟ್ಟ ಕೆಲಸಗಳಲ್ಲಿ ದುಃಖ ಮರೆಯುತ್ತಿದ್ದಳು. ಬಲಿ ಕೊಡಲು ನಿರ್ಧಿಷ್ಟವಾದ ಅಮಾಸ್ಯೆಯ ರಾತ್ರಿಯೇ ಬೇಕಿದ್ದರಿಂದ ರಾಮಯ್ಯ ಊರಿಗೆ ಹೋಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಬರುವುದಾಗಿ ಹೊರಟು ಹೋಗಿದ್ದ. ಪ್ರಶಾಂತ ಚಡಪಡಿಸುತ್ತ ದಿನ ಕಾಯುತ್ತಿದ್ದ.

ವೆಂಕೋಬಿಯ ಹೆಂಡತಿಯು ರೋಸಿ ಹೋಗಿದ್ದಳು. ಆಕೆಯ ಅಣ್ಣ ಗಜಾನನ ವೆಂಕೋಬಿಯಂತಹ ನೀಚನಿಗೆ ತಂಗಿಯನ್ನು ಕೊಟ್ಟು ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಯಿತಲ್ಲಾ ಎಂದು ತನ್ನ ಕಣ್ಣ ಎದುರಲ್ಲೇ ತಂಗಿ ಬದುಕಿರಲಿ ಎಂದು ತವರಿನಲ್ಲೇ ಆಕೆಯನ್ನು ಇರಿಸಿಕೊಂಡಿದ್ದ. ಮುಂದಿನ ವಾರ ತಾನೇ ಹೋಗಿ ಇಬ್ಬರು ಮಕ್ಕಳನ್ನೂ ಕರೆದುಕೊಂಡು ಬರುವುದಾಗಿ ತಂಗಿಗೆ ಹೇಳಿ ಸಮಾಧಾನ ಮಾಡಿದ್ದ. ಪಟೇಲರ ಮನೆ ಹಾಳಾಯಿತೆಂದು ಮಾರಿ ಗುಡಿಯ ಪಡಸಾಲೆಗಳಲ್ಲಿ ಆಡಿಕೊಳ್ಳುವುದು ನಡೆದೇ ಇತ್ತು. ತ್ರಿವೇಣಿಗೆ ಮದುವೆಯನ್ನೂ ಅಣ್ಣಂದಿರು ಮಾಡಲಾರರು ಎಂದು ಭವಿಷ್ಯ ನುಡಿಯುತ್ತಿದ್ದರು. ಬದುಕಿದ್ದಾಗ ರೇಣುಕವ್ವ ಗಂಡನ ಕೈಯಿಂದ ಭಾಷೆ ತೆಗೆದುಕೊಂಡು ನಿಧಿ ಇರುವುದು ನಿಜವೇ ಎಂದು ಕೇಳಿದ್ದಳು. ಪಟೇಲರು ಏನನ್ನೂ ಖಚಿತವಾಗಿ ಹೇಳಲಾರದೆ ಗೊಂದಲಗೊಂಡಿದ್ದರು ತಂದೆ ಪರ್ವತಪ್ಪನವರೂ ಕೂಡ ಮಗನಾಗಿದ್ದ ಪಟೇಲರಿಗೆ ನಿರ್ಧಿಷ್ಟವಾಗಿ ಏನನ್ನೂ ಹೇಳಿರಲಿಲ್ಲ. ಆದರೆ ಅವರು ಸಾಯುವಾಗ ಒಂದು ಒಡಪು ಮಾದರಿಯ ಮಾತೊಂದನ್ನು ಹೇಳಿ ಉಸಿರು ಬಿಟ್ಟಿದ್ದರು.

‘ಮಣ್ಣು ಅಂದ್ರೆ ಚಿನ್ನ ಕಣಪ್ಪಾ, ನಿನ್ನೊಳಗೆ, ನೀ ನಿಂತರೂ ನೆಲದೊಳಗೆ ನಿನ್ನ ಕರ್ಮದೊಳಗೆ ಚಿನ್ನದ ಭಂಡಾರವೇ ಇದೆ. ಅದನ್ನು ಯಾವತ್ತೂ ಮರೀಬ್ಯಾಡ. ಅದ ಮಸೀ ಮಾಡ್ಕೋ ಬ್ಯಾಡ. ನಿನ್ನ ಕಷ್ಟಕಾಲದಲ್ಲಿ ಅದೇ ನಿನ್ನ ತಲೇ ಕಾಯೋದು ಮಗನೇ’ ಎಂದು ಪ್ರಾಣ ಬಿಟ್ಟಿದ್ದರು. ಅವತ್ತು ಪಟೇಲರಿಗೆ ಅಮ್ತಹ ದುಃಖದ ಕಿಡಿಯೊಳಗೆ ಏನೂ ಅರ್ಥವಾಗಿರಲಿಲ್ಲ. ಮುಂದೆ ಜನ ಅದನ್ನು ತರಾವರಿಯಾಗಿ ಅರ್ಥೈಸಿದ್ದರು. ಪಟೇಲರೂ ಅದನ್ನು ನಂಬಿದ್ದರು.

ಯಶವಂತ ತಮ್ಮ ಮನೆತನಕ್ಕೆ ಚಿನ್ನದ ಆಸರೆ ಇದೆ ಎಂದು ಕೇಳಿಸಿಕೊಂಡು ಮರೆಯುತ್ತಿದ್ದ. ಮೈಸೂರಿನ ಸುಂದರ ಪರಿಸರದಲ್ಲಿ ಆತ ಯಾವುದೋ ಲೋಕಕ್ಕೆ ಹಕ್ಕಿಯಂತೆ ಹಾರಿ ಹೋಗಲು ತವಕಿಸುವ ಹಕ್ಕಿಯಂತೆ ಊರನ್ನು ಮರೆತುಬಿಟ್ಟಿದ್ದ. ತನ್ನ ಅಣ್ಣಂದಿರು ಬಡಿದಾಡಿಕೊಂಡು ಅಪ್ಪನ ಸಾಲದ ಹೊರೆಯ ನೆಪದಲ್ಲಿ ಮನೆಯನ್ನೂ ಮಾರಿಕೊಳ್ಳುವ ಸ್ಥಿತಿಗೆ ಇಳಿದಿದ್ದಾರೆ ಎಂಬುದೇ ಆತನಿಗೆ ತಿಳಿಯುತ್ತಿರಲಿಲ್ಲ. ಇತ್ತೀಚೆಗೆ ಯಶವಂತ ಚೆಲುವೆಯರ ಮೋಹಕ್ಕೆ ಒಳಗಾಗಿ ಹಂಬಲಿಸುತ್ತಿದ್ದ. ಕ್ರಾಂತಿಕಾರಿ ಪ್ರೊಫೆಸರ್ ಪ್ರತಿಪಾದಿಸುತ್ತಿದ್ದ ಅಂತರ್ ಜಾತಿಯ ಪ್ರೇಮವಿವಾಹವನ್ನು ಮೈದುಂಬಿಕೊಳ್ಳುತ್ತಿದ್ದ.

ಯಶವಂತನಿಗಾಗಿ ಕಾತರಿಸುತ್ತಿದ್ದ ವತ್ಸಲ ಮುದ್ದಾದ ಹುಡುಗಿ. ಪ್ರಾಯದ ಸೆಳೆತಕ್ಕೆ ಸಿಕ್ಕಿ ಬಾಯಾರಿ ಯಶವಂತನ ಒಂದೇ ಒಂದು ನಗುವಿಗಾಗಿ ಹಂಬಲಿಸುತ್ತಿದ್ದಳು. ಯಶವಂತ ಅದೇ ವೇಳೆಗೆ ಯಮುನ ಎಂಬ ಹುಡುಗಿಯ ಬಗ್ಗೆ ಮೋಹಗೊಂಡಿದ್ದ. ಬಳ್ಳಾರಿ ಸೀಮೆಯಿಂದ ಬಂದಿದ್ದ ಆ ಹುಡುಗಿ ಯಮುನ; ತುಂಬಾ ಮುಗ್ದೆ. ಅಪ್ಪಟ ಹಳ್ಳಿಗಾಡಿನ ಬೇರಿನ ನಾರಿನ ಸೊಬಗಿನ ಕನ್ಯೆ. ತಿರಸ್ಕಾರಕ್ಕೆ ಒಳಪಟ್ಟ ಜಾತಿಯಿಂದ ಬಂದ ಯಮುನಳ ಪೂರ್ವಿಕರು ದೇವದಾಸಿಯರು ಆಗಿದ್ದರಂತೆ. ಅಂತಹವಳ ಪ್ರೇಮಕ್ಕಾಗಿ ಯಶವಂತ ತಲೆಕೆಡಿಸಿಕೊಂಡಿದ್ದು ಸಹಜವಾಗಿತ್ತು. ಅವನ ಬೌದ್ಧಿಕ ಪರಿಸರ ಅಂತದಕ್ಕೆಲ್ಲ ಒತ್ತಾಸೆಯಾಗಿತ್ತು. ವತ್ಸಲ ಬೇಡಿಕೊಂಡಿದ್ದರೂ ಯಶವಂತ ಒಪ್ಪಿರಲಿಲ್ಲ. ಆತನ ಮುಂಗೈ ಹಿಡಿದು ಲೇಡಿಸು ಹಾಸ್ಟೆಲಿನ ಪಾರ್ಕೊಳಗೆ ಕತ್ತಲೆಯಲ್ಲಿ ಕುಳಿತು ವಿನಂತಿಸಿಕೊಳ್ಳುತ್ತಾ ಮುತ್ತಿಕ್ಕಿದರೂ ಯಶವಂತ ಕರಗಿರಲಿಲ್ಲ. ಆಕೆಯ ಕೈಯನ್ನು ಮೆಲ್ಲಗೆ ಬಿಡಿಸಿಕೊಂಡು ಬಂದುಬಿಟ್ಟಿದ್ದ. ಆವತ್ತು ಅವನ ಆ ಪ್ರೇಮ ನಿಷ್ಠೆಯು ತುಂಬ ಉತ್ಕಟವಾಗಿತ್ತು. ಪವಿತ್ರವಾಗಿತ್ತು. ನಿರ್ಮಲವಾಗಿತ್ತು. ನ್ಯಾಯಯೋಚಿತವಾಗಿತ್ತು.

ಯಮುನ ಅಂತಹ ಬೆಡಗಿನ ಗಂಗೋತ್ರಿಯಲ್ಲಿ ಹೊಸ ಕಾಲದಲ್ಲೂ ಲಮ್ಗ ದಾವಣಿಯನ್ನು ತೊಡುತ್ತಿದ್ದಳೆಂದರೆ ಅವಳ ಮುಗ್ಧತೆ ಮತ್ತು ಸೊಬಗು ಎಂತಹದೆಂಬುದನ್ನು ಯಾರಿಗಾದರೂ ತಿಳಿಯುತ್ತದೆ. ಆಕೆ ಆಗಾಗ ಕ್ರಾಂತಿಕಾರಿ ಪ್ರೊಫೆಸರ್ ಬಳಿ ಬರುತ್ತಿದ್ದಳು. ಆಕೆ ಬಾಯನ್ನೇ ಬಿಡುತ್ತಿರಲಿಲ್ಲ. ನೋಡಿದವರು ಆಕೆ ಮೂಕಿಯೇ ಇರಬೇಕು ಎಂದು ಭಾವಿಸುವಂತಿತ್ತು. ಪ್ರೊಫೆಸರ್ ಯಾವತ್ತೂ ಕೂಡ ಹೋರಾಟದ ಅಮಲಲ್ಲೇ ಇರುತ್ತಿದರು. ಕೆಲವರು ಅವರನ್ನು ನಕ್ಸಲೇಟ್ ಎಂದು ಅನುಮಾನಿಸಿ ಕಿರುಕುಳವನ್ನೂ ಕೊಡುತ್ತಿದ್ದರು. ಯಶವಂತನಿಗೆ ಯಮುನಳನ್ನು ಪರಿಚಯಿಸಿದ್ದು ಅವರೇ. ಆಕೆಯ ಬಗೆಗಿನ ಮಾಹಿತಿಯನ್ನು ಕೊಟ್ಟು ಒಬ್ಬರಿಗೊಬ್ಬರು ಹತ್ತಿರವಾಗಲು ಮಾರ್ಗ ಕಲ್ಪಿಸಿದ್ದೂ ಅವರೇ. ಆ ಮೆಲೆ ಒಂದು ದಿನ ಅವರಿಬ್ಬರೂ ಅಂತರಂಗದಲ್ಲಿ ಸಂಗಮಿಸಿದರು. ಗಾಢವಾಗಿ ಒಬ್ಬರನ್ನೊಬ್ಬರು ಲೀನವಾಗಿಸಿಕೊಂಡರು. ಪ್ರೊಫೆಸರ್ ಅವರಿಬ್ಬರನ್ನೂ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಪಂಚತಾರಾ ಹೋಟೆಲಲ್ಲಿ ಪಾರ್ಟಿ ಕೊಟ್ಟು ವಿಸ್ಕಿ ಕುಡಿಸಿ, ಕ್ರಾಂತಿಯ ಅಮಲನ್ನು ತುಂಬಿದ್ದರು ಎಲ್ಲ ಆದ ಮೇಲೆ ತಡವೇಕೆ; ಸರಳ ವಿವಾಹ ಆಗಿ ಬಿಡಿ ಎಂದು ಒಪ್ಪಿಸಿಯೂ ಬಿಟ್ಟರು.

ಕಣ್ಣು ಮುಚ್ಚಿ ಕಣ್ಣು ಬಿಡುವುದರಲ್ಲಿ ಯಶವಂತನ ಬಾಳಲ್ಲಿ ಯಮುನ ನಿಂತಿದ್ದಳು. ಎಂ.ಎ. ಮುಗಿಸಿ ಸಂಶೋಧನೆ ಮಾಡುತ್ತಿದ್ದ ಯಶವಂತನಿಗೆ ಧೈರ್‍ಯ ಇತ್ತಾದರೂ ಯಮುನಳಿಗೆ ಆತಂಕವಿತ್ತು. ಇಲ್ಲೇ ಯೂನಿವರ್ಸಿಟಿಯಲ್ಲೇ ಕೆಲಸ ಕೊಡಿಸುವುದಾಗಿ ಪ್ರೊಫೆಸರ್ ಆಶ್ವಾಸನೆಯನ್ನೂ ನೀಡಿದ್ದರು. ಪಟೆಲರು ಬದುಕಿದ್ದರೆ ಆಗುತ್ತಿದ್ದ ಕತೆಯೇ ಬೇರೆ. ಮಗಳು ತ್ರಿವೇಣಿಯನ್ನು ಅಕ್ಕನ ಮಗನಿಗೆ ಕೊಟ್ಟು ತನ್ನ ಮಗನಿಗೆ ತಂಗಿಯ ಮಗಳನ್ನು ತಂದುಕೊಳ್ಳಲು ಬಯಸಿದ್ದರು. ಕರಳುಬಳ್ಳಿಯಲ್ಲೇ ಸಂಬಂಧಗಳು ಬೆಸೆದುಕೊಳ್ಳಬೇಕು ಎಂಬುದನ್ನು ರೇಣುಕವ್ವನೂ ಒಪ್ಪಿದ್ದವಳೇ ಆದರೂ ಗಂಡ ಸತ್ತ ಮೇಲೆ ಹಳೆಯ ಸಂಬಂಧಗಳು ಸಡಿಲಗೊಂಡು ಪಟೇಲರ ಅಕ್ಕನ ಮಗನಿಗೆ ಕೈತುಂಬ ವರೋಪಚಾರ ಮಾಡುವಂತಹ ಹೆಣ್ಣು ಸಿಕ್ಕಿ ಅವರ ಮದುವೆಯೂ ಮುಗಿದುಹೋಗಿತ್ತು.

ಯಶವಂತ ತನ್ನ ನಿರ್ಧಾರವನ್ನು ತಾಯಿಗೂ ತಿಳಿಸಿರಲಿಲ್ಲ. ವಯಸ್ಸಿಗೆ ಬಂದ ಮಗ ಏನು ಮಡಿಕೊಂಡನೊ ಎಂಬ ನೆನಪು ಅವರಿಗೂ ಬಂದಿರಲಿಲ್ಲ. ಅವರು ತಮ್ಮ ಚಿಂತೆಯಲ್ಲೇ ಮಗಳು ತ್ರಿವೇಣಿಯನ್ನು ಕಾಯುವುದರಲ್ಲೇ ಮುಳುಗಿದ್ದರು. ಕಾಲ ಕೆಟ್ಟು ವಿಧಿಯೂ ಕೈ ಕೊಟ್ಟು ಹೀಗೆ ಹಿರೀ ಮಕ್ಕಳಿಬ್ಬರೂ ದಿಕ್ಕು ತಪ್ಪಿರುವಾಗ ತ್ರಿವೇಣಿ ಎಲ್ಲಿ ಕಾಲು ಜಾರುವಳೋ ಎಂಬ ಗುಪ್ತವಾದ ಅಳುಕು ರೇಣುಕವ್ವನ ಪ್ರಾಣದ ಜೊತೆ ಸೇರಿಕೊಂಡಿತ್ತು. ಆಗೊಮ್ಮೆ ವೆಂಕೋಬಿಗೂ ಪ್ರಶಾಂತನಿಗೂ ಯೋಗ್ಯವಾದ ಗಂಡನ್ನು ಹುಡುಕಿ ಎಂದು ರೇಣುಕವ್ವ ವಿನಂತಿಸಿಕೊಂಡಿದ್ದರೂ ಅವರಿಬ್ಬರೂ ತಲೆ ಕೆಡಿಸಿಕೊಂಡಿರಲಿಲ್ಲ. ಬೆಳೆದ ಮಗಳು ಹೀಗೆ ಲಗ್ನವಿಲ್ಲದೆ ಮನೆಯಲ್ಲೇ ಉಳಿದಿರುತ್ತಾಳೆ ಎಂದರೆ ಅದು ಸೆರಗಿನ ಒಳಗೆ ಕೆಂಡವನ್ನು ಕಟ್ಟಿಕೊಂಡಂತೆ ಎಂದು ರೇಣುಕವ್ವ ಯೋಚಿಸುತ್ತಿದ್ದಳು. ಪ್ರಾಯದ ಮೋಹಕ ರಾಗಗಳು ತ್ರಿವೇಣಿಯ ನಾಭಿಯಲ್ಲಿ ತಿವಿಯುತ್ತಿದ್ದರೂ ಅವಳು ಎಲ್ಲವನ್ನೂ ಬಚ್ಚಿಟ್ಟುಕೊಂಡಿದ್ದಳು. ಕನಸಿನಲ್ಲಿ ಬಂದ ರಮ್ಯ ಲೋಕದ ಪುರುಷನೊಬ್ಬ ತನ್ನ ದೇಹವನ್ನು ನುಂಗುತ್ತಿದ್ದಾನೆಂದು ಆಗಾಗ ಬೆವರುತ್ತ, ಆ ಭಯದಲ್ಲೂ ಮಾಯದ ರೋಮಾಂಚನಕ್ಕೆ ಒಳಗಾಗಿ ಕಂಪಿಸುತ್ತಾ; ತೋಟದ ಬೇಲಿಯನ್ನು ಭದ್ರಪಡಿಸುತ್ತಾ ಕಳ್ಳಕಾಕರು, ದನಕರುಗಳು ಒಳಗೆ ಬಾರದಿರಲಿ ಎಂದು ಮತ್ತೆ ಮತ್ತೆ ಬೇಲಿಯನ್ನು ಮುಚ್ಚಿತ್ತಿದ್ದಳು. ವಿಶ್ವಾಸವಿದ್ದ ಕೆಲವರ ಬಳಿ ರೇಣುಕವ್ವನೇ ಮಗಳಿಗೆ ಗಂಡು ತೋರಿಸಲು ಕೇಳಿಕೊಂಡರೂ ಮುಂದಿನ ಮದುವೆ ಸುಗ್ಗಿಯಲ್ಲಿ ನೋಡೋಣ ಎಂದು ಕೈ ತೊಳೆದುಕೊಂಡಿದ್ದರು.

ಈ ನಡುವೆ ವೆಂಕೋಬಿಯು ಜೂಜಾಟದಲ್ಲಿ ಜಗಳಕ್ಕೆ ಬಿದ್ದು ಕಾಲು ಮುರಿದುಕೊಂಡಿದ್ದ. ಸಾಲ ಕೊಟ್ಟವರು ಮನೆ ಬಿಟ್ಟು ಕೊಡು ಎಂದು ಧಮಕಿ ಹಾಕಿದ್ದರು. ತಾನು ಸಾಲ ತೀರಿಸಿದ್ದೇನೆ ಎಂದು ವೆಂಕೋಬಿಯೂ ರಂಪ ಮಾಡಿದ. ಕುಡಿದ ಅಮಲಿನಲ್ಲಿ ಆತ ಯಾವುದೋ ಪತ್ರಕ್ಕೆ ಸಹಿ ಕೂಡ ಮಾಡಿಬಿಟ್ಟಿದ್ದ. ಇನ್ನೂ ಶಾಲೆಗೆ ಸೇರದ, ಯಾವತ್ತೂ ಹಿತ್ತಿಲ ಮರದ ನೆರಳಲ್ಲೇ ತನ್ನ ಸೊತ್ತು ಕಾಲುಗಳನ್ನು ತಿರುವುಕೊಳ್ಳುತ್ತಾ ಮಣ್ಣಿನಲ್ಲಿ ಆಟವಾಡಿಕೊಳ್ಳುತ್ತಿದ್ದ ಸಂಪತ್ತನ್ನು ತನ್ನ ತಾಯಿ ನಾಳೆಯೊ ನಾಳಿದ್ದೊ ಅಥವಾ ಈ ಸಂಜೆಯೊ ಇಲ್ಲವೇ ಈಗಲೇ ಇನ್ನೊಂದಿಷ್ಟು ಹೊತ್ತಾದ ಮೇಲೆ ಬರಬಹುದು ಎಂದು ಆಗಾಗ ದಾರಿ ನೋಡುತ್ತಿದ್ದವನು; ಆಹಿತ್ತಲಿನ ಯಾವುದೋ ಒಂದು ಹುಳದಂತೆ ಅಲ್ಲೇ ಬಿದ್ದಿರುತ್ತಿದ್ದ. ಹುಟ್ಟಿದ ನಂತರ ಆತ ಪೋಲಿಯೋದಿಂದಾಗಿ ಎರಡೂ ಕಾಲುಗಳನ್ನು ವಿಕಲಗೊಳಿಸಿಕೊಂಡೇ ಬಂದಿದ್ದ. ಯಾವ ಕೈಮದ್ದಿಗೂ ಸಂಪತ್ತನ ಕಾಲುಗಳು ಸರಿಯಾಗಿರಲಿಲ್ಲ. ಇದು ವೆಂಕೋಬಿಯ ಕರ್ಮವೆಂದು ಪ್ರಶಾಂತನೇ ಹಿಂದೆ ಜರಿಯುವುದಿತ್ತು. ಯಶವಂತನ ಬಗ್ಗೆ ಈಗ ಯಾರೂ ಯೋಚಿಸುತ್ತಿರಲಿಲ್ಲ. ಆತನೂ ಅದೇ ಹಾದಿಯಲ್ಲಿದ್ದ. ಅವನ ಸುಖವೇ ಅವನಿಗೆ ಮುಖ್ಯವಾಗಿತ್ತು. ತ್ರಿವೇಣಿಯು ರಾತ್ರಿ ವೇಳೆ ರಮ್ಯವಾದ ಕನಸುಗಳು ಬಾರದಿರಲಿ ಎಂದು ಎಷ್ಟೇ ಪ್ರಾರ್ಥಿಸಿ ಮಲಗಿದರೂ ಅವು ಅವಳನ್ನು ಬಿಡದೆ ದಟ್ಟವಾದ ಕತ್ತಲ ಬೆಟ್ಟಗಳ ಮರೆಯಿಂದ ಅಟ್ಟಿಸಿಕೊಂಡು ಬರುತ್ತಿದ್ದವು. ಆಕೆ ಒಬ್ಬಂಟಿಯಾಗಿ ಆ ಬೆಟ್ಟದ ಕಣಿವೆಯೊಳಕ್ಕೆ ಧುಮುಕಿ ತಪ್ಪಿಸಿಕೊಳ್ಳಲು ಓಡಿದರೂ ಆ ರಮ್ಯ ಪುರುಷ ಬಿಡುತ್ತಿರಲಿಲ್ಲ. ಹಾರಿ ಬಂದು ಬಿಗಿದಪ್ಪಿಕೊಳ್ಳುತ್ತಿದ್ದ. ಅವಳ ಮೈ ತುಂಬ ಬೆವರ ಹೊಳೆ ಹರಿಸುತ್ತ ಅದರಲ್ಲಿ ಮೀಯುತ್ತಿದ್ದ. ಬೇಡ….ಬೇಡ….ಬಿಟ್ಟು ಬಿಡೆಂದು ಬೇಡಿದರೂ ರಮ್ಯ ಪುರುಷ ತನ್ನ ರೆಕ್ಕೆ ಮೇಲೆ ಕೂರಿಸಿಕೊಂಡು ಆಕಾಶಕ್ಕೆ ಹಾರಿ ಹೋಗುತ್ತಿದ್ದ. ಬೆಳಗಾಗಿ ಎದ್ದಾಗ ತ್ರಿವೇಣಿಯ ಮೈಯೆಲ್ಲಾ ಭಾರವಾಗಿರುತ್ತಿತ್ತು. ಯಾರೋ ತನ್ನ ಮೈಯೊಳಗೆ ಕದ್ದು ಕುಳಿತಿದ್ದಾರೆ ಎಂಬ ಭಯ ಸುಳಿಯುತ್ತಿತ್ತು.

ಯಶವಂತನಿಗೆ ತ್ರಿವೇಣಿಯ ನೆನಪಾದರೂ ಎಲ್ಲಿಂದ ಬರಬೇಕು? ಅವನೊ ಯಮುನಳ ಲಂಗ ದಾವಣಿಯ ತೊಡೆ ಮೇಲೆ ತಲೆ ಇಟ್ಟು ಕ್ರಾಂತಿಯ ಕವಿತೆಗಳನ್ನು ವಾಚಿಸುತ್ತಾ ನವ ನಿರ್ಮಾಣದ ಸಮಾಜದಲ್ಲಿ ತಮ್ಮ ಪಾತ್ರವೇನು ಎಂದು ಭಾಷಣ ಬಿಗಿಯುತ್ತಿದ್ದ. ಮುಗ್ಧೆಯಾದ ಯಮುನೆ ಬಟ್ಟಲುಗಣ್ಣಲ್ಲಿ ಅವನ ಮಾತು, ರೂಪ, ಲಾಲಿತ್ಯವನ್ನೆಲ್ಲ ತುಂಬಿಕೊಂಡು ಎದೆಗೆ ಒತ್ತಿಕೊಳ್ಳುತ್ತಿದ್ದಳು. ಯಶವಂತ ದಿನ ಕಳೆದಂತೆಲ್ಲ ತಾನು ಉಳಿದವರೆಲ್ಲರಿಗಿಂತ ಭಿನ್ನ ಎಂದು ಭಾವಿಸಿದ. ಮೇಲರಿಮೆ ಅವನೊಳಗೆ ಮನೆ ಮಾಡಿಕೊಂಡಿತು. ಆಯ ತಪ್ಪಿದ ಮನೆಯ ದುರಂತಗಳಿಂದಲೂ ಆತ ತಪ್ಪಿಸಿಕೊಳ್ಳಬೇಕಿತ್ತು. ಮೈಸೂರಿನಲ್ಲೇ ಕುಂಬಾರ ಕೊಪ್ಪಲಿನಲ್ಲಿ ಪುಟ್ಟದಾದ ಮನೆಯನ್ನು ಬಾಡಿಗೆಗೆ ಪಡೆದು ಸಂಸಾರ ಹೂಡಿಬಿಡೋಣವೇ ಎಂದು ಆತ ಆತುರ ಮಾಡಿದ.

ಕ್ರಾಂತಿಕಾರಿ ಪ್ರೊಫೆಸರ್ ಈ ನಡುವೆ ಅಮೆರಿಕಾದ ಅಯೋವಾ ಯೂನಿವರ್ಸಿಟಿಗೆ ವಿಸಿಟಿಂಗ್ ಫೆಲೊ ಆಗಿ ಹೋಗಬೇಕಾಗಿ ಬಂತು. ಸಸ್ಯ ವಿಜ್ಞಾನದಲ್ಲಿ ಅವರದು ಅದ್ವಿತೀಯ ತಿಳುವಳಿಕೆ. ಅದರಲ್ಲೂ ಸಸ್ಯ ಸಂಕುಲದ ದೇಶೀಯ ವೈದ್ಯ ಪದ್ಧತಿಯ ಬಗೆಗೂ ಅವರು ಅಪಾರವಾಗಿ ತಿಳಿದುಕೊಂಡಿದ್ದರು. ಕ್ರಾಂತಿಕಾರಿ ಆಗಿದ್ದರೂ ಅವರ ಸಂಶೋಶನಾ ತಿಳುವಳಿಕೆಯು ಪ್ರಶ್ನಾತೀತವಾಗಿತ್ತು. ಹಾಗಾಗಿಯೇ ಅವರು ಅಯೋವಾ ಯೂನಿವರ್ಸಿಟಿಗೆ ಬೇಕಾಗಿದ್ದರು. ಪ್ರೊಫೆಸರ್ ಎಂದಿನಂತೆ ಯಶವಂತನನ್ನೂ ಯಮುನಳನ್ನೂ ಕಾವೇರಿ ನದಿಯ ಬಲಮುರಿ ತೀರಕ್ಕೆ ಕರೆದುಕೊಂಡು ಹೋಗಿ ಸಂಜೆ ಕಳೆದು ಯುಕ್ತಿಯನ್ನು ತುಂಬಿದ್ದರು. ಅಂತೆಯೇ ಅಮೆರಿಕಾಕ್ಕೆ ಹೊರಟು ಅಲ್ಲಿನ ಲೋಕದಲ್ಲಿ ಮುಳುಗಿದರು. ಯಶವಂತ ತಾನೂ ಕೂದ ನಾಳೆ ಅಮೆರಿಕಾದ ಯಾವುದಾದರೊಂದು ಯೂನಿವರ್ಸಿಟಿಯಲ್ಲಿ ನೆಲೆ ಕಂಡುಕೊಳ್ಳಬೇಕೆಂದು ಆಸೆಪಟ್ಟ, ಅಂತಹ ಕಲ್ಪನೆಯನ್ನು ಯಮುನಳಿಗೆ ಮುತ್ತಿನ ಮಣಿಯಂತೆ ಪೋಣಿಸಿದ.

ತನ್ನ ತಮ್ಮ ಯಶವಂತ ಈ ಮಟ್ಟ ಮುಟ್ಟಿದ್ದಾನೆಂದು ಗೊತ್ತು ಮಾಡಿಕೊಳ್ಳುವುದಕ್ಕಾದರೂ ಅವರಿಗೆ ಸಮಯ ಎಲ್ಲಿತ್ತು. ಅಸ್ತಿತ್ವದ ಹುಡುಕಾಟದಲ್ಲಿ‌ಅಣ್ಣಂದಿರು ಸಂಬಂಧಗಳನ್ನೇ ಕಳೆದುಕೊಂಡಿದ್ದರು. ರೇಣುಕವ್ವ ಕುಗ್ಗಿಹೋಗಿದ್ದರು. ಮಗ ಪ್ರಶಾಂತ ಚಿನ್ನದ ಹುಚ್ಚಿಗೆ ಸಿಲುಕಿರುವನೆಂದು ಅನಿಸಿದರೂ ಆಕೆ ಏನನ್ನೂ ಮಾಡಲಾರದವಳಾಗಿದ್ದಳು. ಹೆತ್ತ ತಾಯಿಯಾಗಿ ನಿನಗೆ ನಾನು ಸುಳ್ಳು ಹೇಳುವುದುಂಟೇ ಮಗನೇ, ನಾನು ಮಾತ್ರ ಚಿನ್ನ ಬಚ್ಚಿಟ್ಟಿರುವ ಗುರುತು ಕಾಣೆ ಎಂದು ತಾಳಿಯ ಮೇಲೆ ಆಣೆ ಮಾಡಿದರೂ ಪ್ರಶಾಂತ ನಂಬುತ್ತಿರಲಿಲ್ಲ. ಎಲ್ಲೋ ಈಕೆ ಕಿವಿ ಕಿತ್ತರೂ ಕಿರಿ ಮಗ ಲೇಸು ಎಂಬಂತೆ ಯಶವಂತನ ಭವಿಷ್ಯಕ್ಕಾಗಿ ಇಲ್ಲವೆ ತ್ರಿವೇಣಿಯ ಮದುವೆಗಾಗಿ ಗುಟ್ಟನ್ನು ಬಿಡುತ್ತಿಲ್ಲವೆಂದು; ಎಷ್ಟೋ ಬಾರಿ ಪೀಡಿಸಿ ಸಾಕಾಗಿ ಕೊನೆಗೆ ವಾಮ ಮಾರ್ಗ ಹಿಡಿದಿದ್ದ. ವೆಂಕೋಬನ ಹೆಂಡತಿ ಹುಚ್ಚಿ ಆಗುವುದೊಂದು ಬಾಕಿ ಇತ್ತು. ಆದದ್ದು ಆಗಿ ಹೋಯಿತು, ಮಕ್ಕಳಿಗಾಗಿಯಾದರೂ ಆ ಮನೆಯಲ್ಲೇ ಹೋಗಿ ನೆಲೆಸುವೆ ಎಂದು ವೆಂಕೋಬನ ಹೆಂಡತಿ ತನ್ನ ಅಣ್ಣ ಗಜಾನನನ್ನು ವಿನಂತಿಸಿಕೊಂಡಿದ್ದರೂ ಆತ ಅಕೆಯ ಮೇಲೇ ರೇಗಾಡಿ ಬಾಯಿ ಮುಚ್ಚಿಸಿದ. ರೇಣುಕವ್ವನ ಬೆನ್ನು ಕಚ್ಚಿಕೊಂಡು ವೆಂಕೋಬಿಯ ಮಕ್ಕಳು ಉಳಿದಿದ್ದರು. ಈಗ ಯಶವಂತ ಹಿಂದಿನಂತೆ ಮೈಸೂರಿನ ಬೀದಿಗಳಲ್ಲಿ ವಿಕ್ಷಿಪ್ತವಾಗಿ ಅಲೆಯುವುದು ತಪ್ಪಿ; ಯಮುನಳ ಜೊತೆ ಕಾವೇರಿ ನದಿಯ ದಂಡೆಯ ದಟ್ಟ ಹಸಿರ ಮರೆಯಲ್ಲಿ ವಿವರಿಸುವುದು ಹೆಚ್ಚಾಗಿತ್ತು. ಪರಿಣಾಮ ಸಹಜವಾಗಿಯೇ ಆಗಿತ್ತು. ಯಮುನ ಗರ್ಭಿಣಿಯಾಗಿದ್ದಳು. ಯಶವಂತ ವಿಷಯ ತಿಳಿದು ಬೇಸರಗೊಂಡಿದ್ದ. ಪ್ರೊಫೆಸರ್ ಹಿಂತಿರುಗುವ ತನಕ ತಾವು ಮುಂದುವರಿಯಬಾರದು ಎಂದು ತೀರ್ಮಾನಿಸಿಕೊಂಡಿದ್ದರು. ಪ್ರಕ್ರಿತಿ ಅವರ ನಿರ್ಧಾರವನ್ನು ಬದಲಿಸಿತ್ತು. ಯಮುನಳ ಎಂ.ಎ ಪರಿಕ್ಷೆಗಳು ಮುಗಿದು ಆಕೆ ಊರಿಗೆ ಹೇಗೆ ಹೋಗುವುದೆಂದು ಇಕ್ಕಟ್ಟಿನಲ್ಲಿ ನಿಂತಿದ್ದಳು. ತಾನೆಲ್ಲೊ ದುಡುಕಿದೆನೇ ಎಂದು ಯಾವುದೋ ಪಾಪ ಪ್ರಜ್ಞೆ ಕಾಡತೊಡಗಿತು. ಆದರೂ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಕಂದನ ಬಗ್ಗೆ ಮಮಕಾರದಲ್ಲಿ ಕಲ್ಪಿಸುತ್ತಾ ಒಂದು ಕ್ಷಣ ವಿಸ್ಮಯ ಒಂದು ಕ್ಷಣ ಭಯ ಇನ್ನೊಂದು ಕ್ಷಣ ಎಂತದೋ ಜೀವ ಸಂಭ್ರಮದ ಕಂಪನ ಮತ್ತೊಂದು ಕ್ಷಣ ತಾಯಿ ಆಗುತ್ತಿರುವ ದಿವ್ಯತೆಯಲ್ಲಿ ಪ್ರತಿಯೊಂದು ಕ್ಷಣವನ್ನೂ ಹೊತ್ತುಕೊಂಡು ಯಶವಂತನ ಹಿಂದೇ ಸುತ್ತುತ್ತಿದ್ದಳು.

ಯಮುನಳ ಹೊಟ್ಟೆಯಲ್ಲಿ ಮೊಳಕೆಯೊಡೆಯುತ್ತಿರುವ ಕೂಸಿನ ಬಗ್ಗೆ ಯಶವಂತನ ಕ್ರಾಂತಿಕಾರಿ ಮನಸ್ಸು ವಾತ್ಸಲ್ಯಕ್ಕೆ ಒಳಗಾದದ್ದು ಕಡಿಮೆಯೇ. ಪ್ರೊಫೆಸರ್ ಬಂದು ಯೂನಿವರ್ಸಿಟಿಯಲ್ಲಿ ಕೆಲಸ ಕೊಡಿಸಿ ಆದ ಮೇಲೆಯೇ ಮಕ್ಕಳು ಪಡೆಯಬೇಕೆಂದು ಆತ ಲೆಕ್ಕ ಹಾಕಿದ್ದ. ಊರವರ ಉಸಾಬರಿ ಅವನಿಗೆ ಇರಲಿಲ್ಲವಾದ್ದರಿಂದ ಈಗ ಯಮುನಳು ಗರ್ಭಿಣಿ ಆಗಿರುವುದು ತಲೆ ತಿನ್ನತೊಡಗಿತು. ಹಾಸ್ಟೆಲ್‌ನಲ್ಲಿ ಯಮುನ ಉಳಿಯುವಂತಿರಲಿಲ್ಲ. ಕ್ಯಾಂಪಸ್ಸಿನ ತುಂಬ ಅವರ ಸಂಬಂಧ ಬಯಲಾಗಿತ್ತು. ಅವರು ಸಧ್ಯದಲ್ಲೇ ಸರಳ ವಿವಾಹವನ್ನು ಗಾಂಧಿ ಭವನದಲ್ಲೇ ತಮ್ಮೆಲ್ಲರ ಮುಂದೆ ಆಗುವರೆಂಬ ಮಾತುಗಳು ಗಾಳಿಯಲ್ಲಿ ಬೀಸಾಡಿ ಆ ವಿಷಯವೇ ಯಾವುದೊ ಸುಳಿಗೆ ಸಿಕ್ಕಿಕೊಳ್ಳುತ್ತಿತ್ತು. ಪ್ರೊಫೆಸರ್ ಬರುವುದಕ್ಕೆ ಇನ್ನೂ ಕಾಲ ಸಾಕಷ್ಟು ಉಳಿದಿತ್ತು. ಯಶವಂತ ತನ್ನ ಸಂಶೋಧನೆಯಲ್ಲಿ ಹಿಂದೆ ಬಿದ್ದಿದ್ದ. ಮಾರ್ಗದರ್ಶಕರಾಗಿದ್ದ ಪ್ರೊ ಶುಭಚಂದ್ರ ಆತನಿಗೆ ಐದಾರು ಬಾರಿ ಎಚ್ಚರಿಸಿದ್ದರು. ಬೇಗ ಥೀಸಸ್ ಬರೆದು ಮುಗಿಸಿದರೆ ಅನುಕೂಲ ಎಂದು ಹೇಳಿದ್ದೆಲ್ಲ ಗಾಳಿಯಲ್ಲಿ ತೂರಿಹೋಗಿತ್ತು.

ಆಗಾಗ ಪ್ರಗತಿಪರ ಸಂಘಟನೆಗಳ ಚಳವಳಿಯಲ್ಲಿ ತೊಡಗಿ ಮಾಧ್ಯಮಗಳಲ್ಲೀ ಕಾಣಿಸಿಕೊಂಡ. ಸಂಶೋಧನೆಯ ಜಡ ಲೋಕಕ್ಕಿಂತ ಕ್ರಾಂತಿಯ ಜೀವಂತ ಸಮಾಜವೇ ಮುಖ್ಯ ಎಂದು ವಾದಿಸತೊಡಗಿದ. ಶುಭಚಂದ್ರ ಅವರು ಯಶವಂತನ ಮೇಲಿಟ್ಟ ವಿಶ್ವಾಸವನ್ನು ಕಳೆದುಕೊಂಡರು. ಅಯೋವಾ ಯೂನಿವರ್ಸಿಟಿಯನ್ನು ಸೇರಿಕೊಂಡಿದ್ದ ಕ್ರಾಂತಿಕಾರಿ ಪ್ರೊಫೆಸರ್ ಕಡೆಯಿಂದ ಯಾವ ಸುದ್ದಿಯೂ ಬಂದಿರಲಿಲ್ಲ. ಯಶವಂತ ಬರೆದಿದ್ದ ಒಂದೆರಡು ಪತ್ರಗಳು ಹಿಂತಿರುಗಿ ಬಂದಿದ್ದವು.

ಒಂದೊಂದು ದಿನವೂ ಬೆಟ್ತದಂತೆ ಯಶವಂತನಿಗೆ ಭಾರವಾಗತೊಡಗಿದವು. ಅನಿವಾರ್‍ಯವಾಗಿ ಆತ ಕುಂಬಾರ ಕೊಪ್ಪಲಿನಲ್ಲಿ ಕಿರಿದಾದ ಮನೆಯೊಂದನ್ನು ಬಾಡಿಗೆಗೆ ಹಿಡಿದಿದ್ದ. ಯಮುನಳ ಕೈಕಾಲು ಮುಖ ಮೈಯೆಲ್ಲವೂ ಊದಿಕೊಳ್ಳುತ್ತಿದ್ದವು. ಸಮಾಜಕ್ಕೆ ಹೆದರಿಯೋ ಏನೋ ಅವರು ರಿಜಿಸ್ಟರ್ ಕಛೇರಿಗೆ ಹೋಗಿ ಮದುವೆ ಮಾಡಿಕೊಂಡಿದ್ದರು. ಇಲ್ಲದಿದ್ದರೆ ಅವರಿಗೆ ಅಷ್ಟು ಸುಲಭವಾಗಿ ಬಾಡಿಗೆಗೆ ಮನೆ ಸಿಗುತ್ತಿರಲಿಲ್ಲ. ಯಶವಂತ ತಾಳ್ಮೆಗೆಟ್ಟು ಯಮುನಳ ಮೇಲೆ ರೇಗಾಡುವುದು ಜಾಸ್ತಿಯಾಗಿತ್ತು. ಅಬಾರ್ಶನ್ ಮಾಡಿಸಲು ಯಶವಂತ ಎಷ್ಟೇ ಕೇಳಿಕೊಂಡರೂ ಯಮುನ ಒಪ್ಪಿರಲಿಲ್ಲ. ಪ್ರೇಮ ವಿವಾಹಕ್ಕೆ ಎಂದೊ ಒಂದಾಗಿ ಕೂಡಿದ ಮೇಲೆ ಅದಕ್ಕೆ ಹುಟ್ಟಿದ ಕೂಸಿನ ಕುತ್ತಿಗೆಯನ್ನು ಹೆತ್ತವರೇ ಕತ್ತರಿಸಿದರೆ ಅದಕ್ಕಿಂತ ಘೋರವಾದ ಮಾನಸಿಕ ಹಲ್ಲೆ ಇನ್ನೊಂದಿಲ್ಲ ಎಂದು ಯಮುನ ವ್ಯಂಗ್ಯವಾಗಿ ಯಶವಂತನ ಥೀಸಸೀನ ವಿಷಯದ ಜಾಡಿಗೆ ಪ್ರತಿಕ್ರಿಯಿಸುವಂತೆ ಹೇಳಿದಾಗ ಆತ ಮರುಮಾತಾಡಲು ಸಾಧ್ಯವಾಗಿರಲಿಲ್ಲ. ಯಮುನ ಬಳ್ಳಾರಿಯ ಕುಗ್ರಾಮದಲ್ಲಿದ್ದ ತನ್ನ ತಾಯಿಗೆ ಸುಳ್ಳು ಪತ್ರ ಬರೆದು ತಾನು ಸಂಶೋಧನೆಗೆ ಸೇರಿಕೊಂಡಿರುವೆ ಎಂದು ಏನೇನೋ ಕತೆ ಕಟ್ಟಿ ನಂಬಿಸಿದ್ದಳು. ಯಮುನಳ ತಾಯಿ ಹೂಮಾರುವ ವೃತ್ತಿಯವಳು. ಅದರಲ್ಲೇ ಬದುಕಿನ ಅರ್ಧ ಪಯಣವನ್ನು ಮುಗಿಸಿದ್ದಳು.

ಗಂಡ ಎಂಬ ಅನಾಮಧೇಯ ಎಂದೊ ಕೂಡಿ ಯಮುನಳ ಜನ್ಮಕ್ಕೆ ಕಾರಣವಾಗಿ ನಿಗೂಢವಾಗಿದ್ದು ಯಾವ್ಯಾವಾಗಲೋ ಬಂದು ಹೋಗುತ್ತಿದ್ದವನು; ಇದ್ದಕ್ಕಿದ್ದ ಹಾಗೆ ಒಂದು ಮಧ್ಯರಾತ್ರಿ ಎದ್ದು; ಯಾರೋ ಕರೆಯುತ್ತಿದ್ದಾರೆಂದು ಕತ್ತಲಿನಲ್ಲಿ ಕರಗಿಹೋಗಿದ್ದ. ಯಮುನಳ ತಾಯಿ ಹುಲಿಗೆವ್ವ ಅಮ್ತಹ ಗಂಡನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಹೂ ಮಾರುವ ವೃತ್ತಿಯಲ್ಲೇ ಮಗಳನ್ನು ಸಾಕಿದ್ದಳು. ಎಷ್ಟೋ ರಾತ್ರಿ ಅವಳ ಮಲ್ಲಿಗೆ ದಂಡೆಗಾಗಿ ಜನ ಬಂದು ಹೋಗುವುದೂ ಇತ್ತು. ಅದರ ಬಗ್ಗೆ ಯಮುನಳಿಗೆ ಅಸಾಧ್ಯ ಅಸಹನೆ ಇತ್ತು. ಹುಲಿಗೆವ್ವನ ಬಾಳು ಮಾನ ಅಪಮಾನಗಳನ್ನು ದಾಟಿತ್ತು. ದೂರದ ಅಂತಹ ಮಹರಾಜರ ದರ್ಬಾರಾದ ಮೈಸೂರಿನಲ್ಲಿ ತನ್ನ ಮಗಳು ಉನ್ನತ ಶಿಕ್ಷಣದಲ್ಲಿ ಸುರಕ್ಷಿತವಾಗಿದ್ದಾಳೆ ಎಂದು ಹುಲಿಗೆವ್ವ ನಂಬಿ ನಿರಾಳವಾಗಿದ್ದಳು.

ಯಮುನೆ ದಿನಗಳು ಹತ್ತಿರವಾದಂತೆಲ್ಲ ಉದ್ವಿಗ್ನಗೊಂಡಿದ್ದಳು. ವೈದ್ಯರು ಪರೀಕ್ಷಿಸಿ ಏನೇನೋ ಹೆದರಿಸಿದ್ದರು. ವಿಪರೀತ ರಕ್ತದ ಒತ್ತಡವಾಗಿ ಯಮುನಳ ಮೈಯೆಲ್ಲ ಕಂಪಿಸುವಂತಾಗಿತ್ತು. ಅದಕ್ಕೆಂದೇ ಹತ್ತಾರು ಬಗೆಯ ಔಷಧಿಗಳನ್ನು ವೈದ್ಯರು ನೀಡಿದ್ದರು. ಒತ್ತಡದ ತೀವ್ರತೆಯಿಂದಾಗಿ ಯಮುನಳ ಕಣ್ಣುಗಳು ಉಬ್ಬಿಕೊಂಡು ರಕ್ತ ಕಾರುವಂತಾಗಿದ್ದವು. ಮೈಯಲ್ಲಿ ನೀರು ತುಂಬಿಕೊಂಡು ನೋಡಲು ಭಯ ತರಿಸುವಂತಾಗಿದ್ದಳು. ಕ್ಯಾಂಪಸ್ಸಿನ ಹಳೆಯ ಗೆಳೆಯರು ಆಕೆಯನ್ನು ಕಂಡು ದಿಗಿಲಾಗಿದ್ದರು. ಅಂತಹ ಹಳ್ಳಿಯ ಚೆಲುವೆಯ ಕೋಮಲ ರೂಪ ಏನಾಯಿತು ಎಂದು ವಿಷಾದ ವ್ಯಕ್ತಪಡಿಸಿದ್ದರು. ಯಶವಂತನಿಗೂ ತಾನು ಅಷ್ಟೊಂದು ಮೋಹಿಸಿದ್ದು ಈಕೆಯನ್ನಲ್ಲವೇನೋ ಎನಿಸಿ ಹತಾಶೆ ಮತ್ತು ಅಧೀನತೆಯಿಂದ ನರಳತೊಡಗಿದ. ಹೆರಿಗೆ ತೊಂದರೆಯಾಗಿ ತಾನೇನಾದರೂ ಸತ್ತು ಹೋದರೆ ತನ್ನ ಹೆಣವನ್ನು ಊರಿಗೆ ಕೊಂಡೊಯ್ಯಬೇಡ ಎಂದು ಯಮುನ ಕಣ್ಣೀರು ಹರಿಸುತ್ತ ಯಶವಂತನ ಕೈ ಹಿಡಿದು ಏದುಸಿರು ಬಿಡುತ್ತಾ ಉದ್ವೇಗದಲ್ಲಿ ತತ್ತರಿಸುತ್ತಾ ದುಃಖಿಸುವಾಗ ಆತನಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು.

ಕ್ರಾಂತಿಕಾರಿ ಪ್ರೊಫೆಸರ್‌ಗೆ ಕಷ್ಟವನ್ನು ತಿಳಿಸೋಣ ಎಂದು ಯತ್ನಿಸಿದ್ದೆಲ್ಲ ವಿಫಲವಾಗಿತ್ತು. ಪ್ರೊ. ಶುಭಚಂದ್ರರೂ ಜಾರಿಕೊಂಡಿದ್ದರು. ಆ ನಡುವೆ ವತ್ಸಲ ಸಿಕ್ಕಿ ಆಕೆಯೇ ಯಶವಂತನನ್ನು ಸಮಾಧಾನ ಮಾಡಿ ಹೆರಿಗೆಯ ವೇಳೆ ತಾನೇ ಬಂದು ನಿಂತು ಎಲ್ಲ ಆರೈಕೆ ಮಾಡುವುದಾಗಿ ತಿಳಿಸಿದ್ದಳು. ಯಶವಂತನ ತಲೆಯಲ್ಲಿ ಆಗೊಮ್ಮೆ ಸಣ್ಣಗೆ ಆಸೆಯೊಂದು ತೇಲಿ ಬಂದಿತ್ತು. ಈ ವತ್ಸಲಳನ್ನೇ ಮದುವೆ ಮಾಡಿಕೊಂಡಿದ್ದರೆ ಯಾವ ತರಲೆ ತಾಪತ್ರಯ ಇರುತ್ತಿರಲಿಲ್ಲವೇನೋ. ಒಂದೇ ಜಾತಿಯವರಾಗಿದ್ದರಿಂದ ಮನೆಯವರೂ ಒಪ್ಪಿಕೊಳ್ಳುತ್ತಿದ್ದರೇನೋ ಎಂಬ ಆಲೋಚನೆಯೂ ಬಂದು ಅದರೊಳಗೆ ಯಮುನ ಬೇಡವಾದ ಬಸುರಿನಂತೆ ಕಂಡಳು. ಕಟ್ಟಿಕೊಂಡ ತಪ್ಪಿಗೆ ಅನುಭವಿಸಬೇಕೆಂದು ತನಗೆ ತಾನೇ ಹೇಳಿಕೊಂಡು ಯಶವಂತ ನಾಳಿನ ಖರ್ಚಿಗೆಂದು ಹಣ ಹೊಂದಿಸುತ್ತಿದ್ದ.

ಮೂರನೆ ಪಾದ:

ಅಲ್ಲಿ ದೂರದ ಅಯೋವಾ ಯೂನಿವರ್ಸಿಟಿಯಲ್ಲಿ ಸಂಶೋಧನೆಯ ತಪಸ್ಸಿನಲ್ಲಿ ಮುಳುಗಿದ್ದ ಕ್ರಾಂತಿಕಾರಿ ಪ್ರೊಫೆಸರ್ ಅವರ ಮೇಲೆ ಆಪತ್ತು ಅಪ್ಪಳಿಸಿತ್ತೂ ಕೂಡ. ಕ್ರಾಂತಿಕಾರಿ ಪ್ರೊಫೆಸರ್ ವಿರುದ್ಧ ಕತ್ತಿ ಮಸೆಯುತ್ತಿದ್ದ ನಾಮ-ದಾರಗಳು ಕೇಂದ್ರ ಸರ್ಕಾರಕ್ಕೆ ಗುಪ್ತ ವರದಿ ಕಳುಹಿಸಿ; ಆ ಕ್ರಾಂತಿಕಾರಿ ಪ್ರೊಫೆಸರ್ ನಕ್ಸಲಿಯ ಚಳುವಳಿಯ ನೇತಾರರಲ್ಲಿ ಒಬ್ಬನೆಂದು ತಿಳಿಸಿ. ಮುಂದುವರಿದು; ಆತ ಭಯೋತ್ಪಾದನೆ ಅಂತಹ ಹತ್ತಾರು ಚಟುವಟಿಕೆಗಳಿಗೆ ಮೆದುಳಾಗಿ ಕೆಲಸ ಮಾಡಿದ್ದಾನೆಂದು ದಾಖಲೆಗಳನ್ನು ಸೃಷ್ಟಿಸಿ ಆತನನ್ನು ತತ್‌ಕ್ಷಣವೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಜಾಲ ರೂಪಿಸಲಾಗಿತ್ತು. ರಾತ್ರೋರಾತ್ರಿ ಕ್ರಾಂತಿಕಾರಿ ಪ್ರೊಫೆಸರ್ ಅವರನ್ನು ಅಂತರರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಅಮೇರಿಕದ ಪೋಲೀಸರು ಕ್ರಾಂತಿಕಾರಿ ಪ್ರೊಫೆಸರ್ ಅವರನ್ನು ಹಿಡಿದಿ ವಿಚಾರಣೆಗೆ ಒಳಪಡಿಸಿ ನಿಗೂಢ ಮಾರ್ಗಗಳಲ್ಲಿ ಅವರನ್ನು ಕೆಡವಿ ಹಾಕಿ ಭಾರತ ಸರ್ಕಾರದ ಜೊತೆ ಮಾತನಾಡಿ ಊಹೆಗೂ ನಿಲುಕದ ರೀತಿಯಲ್ಲಿ ಮಾಹಿತಿ ರೂಪಿಸಿಕೊಂಡು ಭಾರತಕ್ಕೆ ಕಳುಹಿಸಿದ್ದರು. ಭಯೋತ್ಪಾದಕ ವಿಜ್ಞಾನಿ ಎಂದು ಪತ್ರಿಕೆಗಳು ಅವರ ಬಗ್ಗೆ ಬರೆದಿದ್ದವು. ವಿಮಾನದಿಂದ ಇಳಿಯುತ್ತಿದ್ದಂತೆಯೇ ಪ್ರೊಫೆಸರ್ ಅವರನ್ನು ಬಂಧಿಸಲಾಗಿತ್ತು.

ಹಾಗೆಯೇ ಯೂನಿವರ್ಸಿಟಿಯಲ್ಲಿ ಅವರಿಗೆ ಆಪ್ತವಾಗಿದ್ದವರು ಯಾರ್‍ಯಾರು ಎಂದು ಪಟ್ಟಿ ತಯಾರಿಸಿ ಅದರಲ್ಲಿ ಯಶವಂತನನ್ನು ಪ್ರಮುಖವಾಗಿ ಗುರುತಿಸಲಾಗಿತ್ತು. ಸ್ಥಳೀಯ ಪತ್ರಿಕೆಗಳು ದೊಡ್ಡ ರಹಸ್ಯವನ್ನು ಬಯಲು ಮಾಡುವವರಂತೆ ಪುಟಗಟ್ಟಲೆ ಏನೇನೋ ಬರೆದು ಯಶವಂತನ ಫೋಟೋ ಕೂಡ ಮುದ್ರಿಸಿದ್ದವು. ಅದರ ಬೆನ್ನ ಹಿಂದೆಯೇ ಪೋಲೀಸರು ಯಶವಂತನನ್ನು ಹಿಡಿದುಕೊಂಡಿದ್ದರು. ಅವನ ಪರವಾಗಿ ಚಳುವಳಿ ಮಾಡಿ ಬಿಡಿಸಿಕೊಳ್ಳಲು ಈಗ ಯಾರೂ ಇರಲಿಲ್ಲ. ಸ್ವತಃ ಕ್ರಾಂತಿಕಾರಿ ಪ್ರೊಫೆಸರ್ ಅವರೇ ನಿಗುಢವಾದ ರೀತಿಯಲ್ಲಿ ಪೋಲೀಸರಿಂದ ಬಚ್ಚಿಟ್ಟಲ್ಪಟ್ಟಿದ್ದರು. ಅದೇ ವೇಳೆಗೆ ಯಮುನ ಏಳನೇ ತಿಂಗಳಿಗೆ ಪ್ರವೇಶಿಸುತ್ತಿದ್ದವಳು ಮಧ್ಯರಾತ್ರಿಯಲ್ಲಿ ಹೊಟ್ಟೆ ನೋವೆಂದು ನರಳಾಡಿ ಕೂಗಿಕೊಂಡಿದ್ದಳು. ಯಶವಂತನನ್ನು ವಿಚಾರಣೆಗೆಂದು ಪೋಲೀಸರು ಕರೆದುಕೊಂಡಿದ್ದರು. ನಿಮ್ಮ ದಮ್ಮಯ್ಯ ಇದೊಂದು ರಾತ್ರಿ ಕಳೆಯಲು ಬಿಡಿ. ನನ್ನ ಹೆಂಡತಿ ಕಷ್ಟದಲ್ಲಿದ್ದಾಳೆ ಎಂದು ಎಷ್ಟೇ ಆರ್ತನಾಗಿ ವಿನಂತಿಸಿಕೊಂಡಿದ್ದರೂ ಪೋಲೀಸರು ಕರಗಿರಲಿಲ್ಲ. ಹೆಚ್ಚಿಗೆ ಮಾತನಾಡಿದರೆ ಇವಳನ್ನೂ ಸ್ಟೇಷನ್ನಿಗೆ ಎಳೆದುಕೊಂಡು ಹೋಗಬೇಕಾಗುತ್ತದೆ ನಡೆಯೋ ಸೂ…..ಮಗನೇ ಎಂದು ಕುತ್ತಿಗೆ ಹಿಡಿದು ಗುದುಮಿ ಎಳೆದ ಮೇಲೆ ಯಶವಂತನ ಆಕ್ರೋಶವೆಲ್ಲ ತಣ್ಣಗಾಗಿತ್ತು.

ಅಂತಹ ಅವೇಳೆಯಲ್ಲಿ ಪಕ್ಕದ ಮನೆಯ ವಿಧವೆಯೊಬ್ಬಳು ಬಂದು ಕಾಪಾಡಿದ್ದಳು. ಆ ಬಡವೆ ವಿಧವೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದೂ ಸಾಧ್ಯವಿರಲಿಲ್ಲ. ಕುಂಬಾರ ಕೊಪ್ಪಲಿನ ಒಂದೆರಡು ಹೆಂಗಸರೇ ಸೇರಿಕೊಂಡು ಯಮುನಳ ಗರ್ಭದ ಹೊರೆಯನ್ನು ಇಳಿಸಿದ್ದರು. ಅವರ ಅದೃಷ್ಟವೊ ದುರಾದೃಷ್ಟವೊ ಹುಟ್ಟುವ ಮೊದಲೇ ಹೊಟ್ಟೆಯಲ್ಲಿ ಮಗು ಸತ್ತು ಹೋಗಿತ್ತು. ಯಮುನ ಗೋಳುಗರೆಯುತ್ತ ಪಕ್ಕದ ಮನೆಯ ವಿಧವೆಯ ಜೊತೆ ಅಂತಹ ಹೆರಿಗೆಯ ಸಾವಿನಂತಹ ಸ್ಥಿತಿಯಲ್ಲಿ ತನ್ನ ಸಂಕಟವನ್ನೆಲ್ಲ ತೋಡಿಕೊಂಡಿದ್ದಳು. ಹೆರಿಗೆ ಮಾಡಿಸಿದ ಆ ವಿಧವೆಯ ಸತ್ತ ಮಗುವಿನ ಮುಖವನ್ನು ಯಮುನಳಿಗೆ ತೋರಿಸಿ;
‘ಎಲ್ಲ ನಿನ್ನಂತೆಯೇ ಇತ್ತು. ಅದೃಷ್ಟವಿಲ್ಲ. ಹೋಗಲಿ ಬಿಡು. ಇನ್ನೊಂದು ಸಲ ಹುಟ್ಟಿ ಬರ್‍ತದೆ’
ಎಂದು ಹೇಳಿ ಸ್ಮಶಾನದಲ್ಲಿ ಹುಗಿದು ಬಂದಿದ್ದಳು.

ಒಂದು ವಾರವಾದರೂ ತಿಂಗಳಾದರೂ ಮೂರು ತಿಂಗಳಾದರೂ ಯಶವಂತ ಹಿಂದಿರುಗಿ ಬಂದಿರಲಿಲ್ಲ. ಅವನನ್ನು ಪೋಲೀಸರು ಕೊಂದು ಹಾಕಿರುತ್ತಾರೆ ಎಂದೇ ಯಮುನ ದಿನನಿತ್ಯ ಯೋಚಿಸಿ ಹುಚ್ಚಿಯಂತಾಗಿದ್ದಳು. ಅವಳ ಮೇಲೂ ಪೋಲೀಸರು ಒಂದು ಕಣ್ಣು ಇಟ್ಟಿದ್ದರು. ಯಾವ ಪುಣ್ಯವೊ ಏನೊ ಆಕೆಯನ್ನು ಅವರಿನ್ನೂ ತಮ್ಮ ವ್ಯಾಪ್ತಿಗೆ ತೆಗೆದುಕೊಂಡಿರಲಿಲ್ಲ. ಆದರೂ ಮೂರ್‍ನಾಲ್ಕು ಬಾರಿ ಮನೆಗೆ ಬಂದು ಏನೇನೋ ಹುಡುಕಿ ವಿಚಾರಿಸಿಕೊಂಡಿದ್ದರು.

ಅಲ್ಲಿ ಊರಲ್ಲಿ ಏನೇನೋ ಘಟಿಸುತ್ತಿದ್ದವು. ವೆಂಕೋಬಿಯು ಕುಡಿದು ಕುಡಿದು ಸತ್ತೇ ಹೋಗುವನೆಂದು ಜನ ಆಡಿಕೊಳ್ಳುತ್ತಿದ್ದರು. ಆತನ ಹೆಂಡತಿ ರೇವತಿಯು ಅಣ್ಣನಾದ ಗಜಾನನ ಮುಂದೆ ದೈನೇಸಿಯಾಗಿ ವಿನಂತಿಸಿಕೊಳ್ಳುವುದು ನಡೆದೇ ಇತ್ತು. ನನ್ನ ಕರುಳು ಕರೆಯುತ್ತಿದೆ ಅಣ್ಣಾ. ಆ ಮನೆಗೇ ನಾನು ಸೇರಬೇಕಾದವಳು. ಸಂಪತ್ತನನ್ನು ಬಿಟ್ಟು ಬದುಕಿರಲಾರೆ. ಅವನು ಗಂಡನಾದವನು ಹಾಳಾಗಲಿ, ಆದರೆ ನಾನು ನನ್ನ ಮಕ್ಕಳನ್ನಾದರೂ ಉಳಿಸಿಕೊಳ್ಳುವೆ. ಗಂಡನ ಮನೆಗೆ ಕಳಿಸಣ್ಣ ಎಂದರೂ ಗಜಾನನ ಜಗ್ಗಿರಲಿಲ್ಲ. ವೆಂಕೋಬನ ಪಾಪಗಳಿಂದಲೇ ನಿನಗೆ ಅಂತಹ ಅಂಗವಿಕಲ ಮಗು ಹುಟ್ಟಿರುವುದು ಎಂದು ಗಜಾನನ ರೇಗಾಡಿ; ಮುಂದಿನ ವಾರ ತಾನೇ ಹೋಗಿ ಮಕ್ಕಳನ್ನು ಕರೆದುಕೊಂಡು ಬಂದುಬಿಡಿವೆ ಎಂದು ಹೇಳಿದ್ದವನು ತಿಂಗಳನ್ನೇ ಕಳೆದಿದ್ದ. ಪ್ರಶಾಂತನ ಹೆಂಡತಿ ತುಂಬ ಸಡಗರದಲ್ಲಿ ಇದ್ದಳು. ತನ್ನ ಗಂಡ ಹೇಗಾದರೂ ಮಾಡಿ ಪೂರ್ವಿಕರು ಬಿಟ್ಟಿರುವ ಚಿನ್ನವನ್ನು ಮೋಡಿ ರಾಮಯ್ಯನಿಂದ ಪತ್ತೆ ಮಾಡಿಸಿಯೇ ಬಿಡುವನೆಂದು ಹಿಗ್ಗುತ್ತಿದ್ದಳು. ರೇಣುಕವ್ವ ಎಲ್ಲಾ ದೇವರಿಗೂ ಹರಕೆ ಕಟ್ಟಿಕೊಂಡು ಸುಸ್ತಾಗಿದ್ದಳು.

ತ್ರಿವೇಣಿಯ ರಮ್ಯ ಪುರುಷನ ಕನಸು ರೂಪಾಂತರಗೊಳ್ಳುತ್ತಿತ್ತು. ಅವಳ ದೇಹದ ತುಂಬ ಏನೊ ಪುಳಕ ಕಿಲಕಿಲ ನಗಾಡುತ್ತಿತ್ತು. ರಾತ್ರಿ ಆಯಿತೆಂದರೆ ಸಾಕು; ಅವಳ ಕೋಮಲ ರಾಗಗಳು ಗಾಳಿಯಲ್ಲಿ ತೇಲಿ ಬರುವ ಪುರುಷ ವಾಸನೆಯನ್ನು ಕುಡಿಯುತ್ತಿದ್ದವು. ಆ ಹಳೆಯ ಮನೆಯಲ್ಲಿ ಎಲ್ಲರೂ ಮಲಗಿರುವಾಗ ಸದ್ದಿಲ್ಲದೆ ಮಾಯಾಮೃಗ ಒಂದು ಬಂದು ಅವಳನ್ನು ಎತ್ತಿಕೊಂಡು ಹೋಗುತ್ತಿತ್ತು. ಮೊದಮೊದಲು ವಿಪರೀತ ಅಂಜುತ್ತಿದ್ದ ತ್ರಿವೇಣಿಯು ಆ ನಂತರಕ್ಕೆ ಆ ಮಾಯಾಮೃಗವಿನ್ನೂ ನಡುರಾತ್ರಿಯಾದರೂ ಯಾಕೆ ಬಂದಿಲ್ಲವೊ ಎಂದು ವಿರಹಪಡುತ್ತಿದ್ದಳು. ಆ ರಮ್ಯ ಮಾಯಾಮೃಗದ ಸುಳಿವಾದರೂ ಆ ಮನೆಯ ಅವರವರ ಹಾಡಿನಲ್ಲಿ ಯಾರಿಗೂ ತಿಳಿಯುತ್ತಿರಲಿಲ್ಲ.

ಆ ಒಂದು ರಾತ್ರಿ ಮುಟ್ಟಾಗದ ದಿನ ರಮ್ಯ ಪುರುಷ ತನ್ನೊಳಗೇ ಬೇರುಬಿಟ್ಟಿದ್ದಾನೆಂದು ತ್ರಿವೇಣಿಯ ಅರಿವಿಗೆ ಬಂತು. ಅಂತಹ ಎಲ್ಲ ಹೆಣ್ಣುಮಕ್ಕಳಂತೆಯೇ ಅವಳು ವಿಲವಿಲ ಒದ್ದಾಡಿ ಸಂಕಟದಿಂದ ಕಂಬನಿಗೆರೆಯುತ್ತಾ ಮೂಲೆ ಸೇರಿಕೊಂಡಳು. ರೇಣುಕವ್ವ ತೋಟಕ್ಕೆ ಹೋಗೋಣ ಬಾ; ಅಲ್ಲಿ ವಿಪರೀತವಾಗಿ ಬೇಲಿಯೆಲ್ಲ ಹಾಳಾಗಿ ಹೋಗಿದೆ. ಕಳ್ಳಕಾಕರು ನಾಯಿ ನರಿಗಳು, ದನಕುರಿಗಳು ಬೇಕಾಬಿಟ್ಟಿ ನುಗ್ಗುತ್ತಿವೆ ಎಂದು ಒತ್ತಾಯಿಸಿದರೂ ತ್ರಿವೇಣಿ ತಲೆ ನೋವೆಂದು ಮಲಗಿಬಿಡುತ್ತಿದ್ದಳು. ಎಂದೂ ಆಗದ ವಾಂತಿ ಬಂದು ತಲೆ ಸುತ್ತಿ ಹಿತ್ತಿಲಲ್ಲಿ ಕುಳಿತುಬಿಟ್ಟಿದ್ದಳು. ಹೊಂಗೆ ಮರದ ಕೂಸಿನಂತೆ ತನ್ನ ಸೊಟ್ಟ ಕಾಲುಗಳ ನುಲಿದುಕೊಂಡು ಆಕಾಶವನ್ನೂ ದಾರಿಯನ್ನೂ ನೋಡುತ್ತ ಪಿಳಿಪಿಳಿ ಕಣ್ಣು ಬಿಡುತ್ತಿದ್ದ ವೆಂಕೋಬಿಯ ಮಗ ಸಂಪತ್ತನು ತ್ರಿವೇಣಿಯ ಸ್ಥಿತಿಯನ್ನು ತಿಳಿಯಲಾಗದೆ ಸುಮ್ಮನೆ ನೋಡುತ್ತಿದ್ದ.

ತಾಯಿ ರೇಣುಕವ್ವನಿಗೆ ಹೇಳಿಕೊಳ್ಳಲು ಆಗದೆ ತ್ರಿವೇಣಿಯು ನರಳುತ್ತ ಆ ರಮ್ಯ ಮಾಯಾ ಪುರುಷ ಈ ರಾತ್ರಿಗೆ ಬರಬಹುದೆಂದು ಕಾದೇ ಕಾದರೂ ಅವನ ಸುಳಿವಿಲ್ಲದೆ ನೆರಳುಗಳು ಬಂದು ಅವಳ ಕಣ್ಣುಗಳನ್ನು ಕುಕ್ಕುತ್ತಿದ್ದವು. ಕತ್ತಲೆಯಲ್ಲೇ ಮುಳುಗಿ ಹೋಗುವುದಕ್ಕಾಗಿ ಆಕೆ ಕಾತರಿಸುತ್ತಿದ್ದಳು. ಏಳು ರಾತ್ರಿಗಳು ಕಳೆದರೂ ರಮ್ಯ ಪುರುಷ ಕನಸಿಗೂ ಬರಲಿಲ್ಲ ಆದರೆ ಎಂತೆಂತದೊ ಕನಸುಗಳು ಅವಳ ಗರ್ಭದ ಒಳಗೇ ನರ್ತಿಸಿ ನಗಾಡಿದಂತೆ ಆಗಿ ಆಕೆ ದಿಕ್ಕೆಟ್ಟಿದ್ದಳು. ಭೀತಿಯ ಕನಸಿನಿಂದ ಎಚ್ಚೆತ್ತ ಮಗು ತನ್ನೊಳಗಿನ ಕನಸನ್ನು ಹೇಳಿಕೊಳ್ಳಲಾಗದೆ ದುಃಖಳಿಸುವಂತೆ; ತ್ರಿವೇಣಿಯು ಅತ್ತು ಅತ್ತು ಕಣ್ಣುಗಳು ಕೆಂಪಾಗಿ ಕೆನ್ನೆ ತುದಿಗಳು ಕನ್ಣೀರಿನಿಂದ ತೋಯ್ದು ಮೂಗಿನ ಹೊಳ್ಳೆಗಳೆಲ್ಲ ಕೆಂಪಾಗಿ ನಡುಗುತ್ತಿದ್ದಳು. ಹೆತ್ತ ಕರುಳಿಗೆ ಎಲ್ಲವೂ ಅರ್ಥವಾಗಿಬಿಡುತ್ತದೆ. ರೇಣುಕವ್ವ ಮಗಳ ಸಂಕಟದ ಮೂಲವನ್ನು ಪತ್ತೆ ಮಾಡಿದ್ದಳು.

ತನ್ನ ಮಗಳು ಇಂಥಹ ಕೆಲಸ ಮಾಡಿಕೊಂಡಳೇ; ಯಾವ ಪಾಪಿ ಅವಳ ಮುಟ್ಟಿಬಿಟ್ಟನೊ, ಯಾವ ಮಾಯದಲ್ಲಿ ಅದೆಲ್ಲ ಆಯಿತೊ ಎಂದು ಕುಸಿದು, ಕೊನೆಗೆ ಎದ್ದು ನಿಂತು ತಡ ಮಾಡಿದರೆ ಎಲ್ಲವೂ ಮುಳುಗಿ ಹೋಗುತ್ತದೆ ಎಂದು ಸಾದಾರಳ್ಳಿಯ ಸಿದ್ದವ್ವನನ್ನು ಮನೆಗೆ ಕರೆಸಿಕೊಂಡು ಗುಟ್ಟಾಗಿ ಕೈ ಮದ್ದು ಪಡೆದು ತ್ರಿವೇಣಿಗೆ ಕುಡಿಸಿ ಹೊಟ್ಟೆಯಲ್ಲಿ ಬೇರು ಬಿಡುತ್ತಿದ್ದ ರಮ್ಯ ಪುರುಷನ ಕುಡಿಯನ್ನು ಕತ್ತರಿಸಿ ಹಾಕಿಸಿದಳು. ತ್ರಿವೇಣಿ ಬಾಯಿ ಬಿಡದೆ ಸತಾಯಿಸಿದ್ದಳು. ಆಚೆ ಕೇರಿಯ ಹೊಲೆಯರ ಸುಂದರ ತ್ರಿವೇಣಿಯ ಮೋಹ ಪಾಶಕ್ಕೆ ಸಿಲುಕಿಸಿಕೊಂಡಿದ್ದ. ಬೆಂಗಳೂರಿನಲ್ಲಿ ಓದನ್ನು ಅರ್ಧಕ್ಕೆ ನಿಲ್ಲಿಸಿ ಆತ ಊರಿಗೆ ಬಂದು ಸೇರಿಕೊಂಡಿದ್ದವನು ತ್ರಿವೇಣಿಯನ್ನು ವಶಪಡಿಸಿಕೊಂಡಿದ್ದ. ಕತ್ತಲೆಯಲ್ಲೇ ಎಲ್ಲವೂ ನಡೆದು ಹೋಗಿತ್ತು. ಆ ಹೊಲೆಯರ ಸುಂದರನನ್ನು ಹಿಡಿದು ಹೀಗೆ ಮಾಡಿರುವೆಯಲ್ಲಾ ಸರಿ ಏನಯ್ಯಾ; ನೀನೇ ಈಗ ಈಕೆಯನ್ನು ಲಗ್ನವಾಗು ಎಂದು ಕೇಳುವಂತೆಯೂ ಇರಲಿಲ್ಲ. ಅವನು ಬೆಂಗಳೂರಿಗೆ ಓಡಿ ಹೋಗಿ ಯಾವುದೋ ಗಲ್ಲಿಯಲ್ಲಿ ಸೇರಿಕೊಂಡಿದ್ದ.

ಯಶವಂತನಿಗೆ ಇದು ಗೊತ್ತಾಗುವುದಾದರೂ ಹೇಗೆ? ಆತ ಯಮುನಳು ಏನಾದಳೆಂಬುದನ್ನೇ ತಿಳಿಯದಾಗಿದ್ದಾಗ ಊರಿನ ಸ್ಥಿತಿಯನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗಿರಲಿಲ್ಲ. ಆತನಿಗೆ ಕೊಡಲಾಗಿದ್ದ ಫೆಲೋಷಿಪನ್ನು ಯೂನಿವರ್ಸಿಟಿ ಹಿಂತೆಗೆದುಕೊಂಡಿತ್ತು. ಯಮುನ ಆತ್ಮಹತ್ಯೆಗೆ ಯತ್ನಿಸಿದ್ದರೆ ಅಚ್ಚರಿ ಏನಿಲ್ಲ. ಪಕ್ಕದ ಮನೆಯ ವಿಧವೆ ಯಮುನಳ ಮೇಲೆ ತೋರಬಹುದಾದಷ್ಟು ಮಾನವೀಯತೆಯನ್ನು ತೋರಿ ಸಾಕಾಗಿ ಸುಮ್ಮನಾಗಿದ್ದಳು. ಕ್ರಾಂತಿಕಾರಿ ಪ್ರೊಫೆಸರ್ ಏನಾದರೆಂಬುದು ನಿಗೂಢವಾಗಿ ಯಶವಂತ ಕಂಗೆಟ್ಟು ಅವರ ಸಹವಾಸದಿಂದಲೇ ಹೀಗಾಯಿತು ಎಂದು ತಾಳ್ಮೆ ಕಳೆದುಕೊಂಡು ಅಸಹಾಯಕತೆಯಲ್ಲಿ ಮನದಲ್ಲೇ ಅವರಿಗೆ ಹಿಡಿ ಶಾಪ ಹಾಕಿದ. ರೇಣುಕವ್ವ ಮಗಳನ್ನು ಮತ್ತೂ ಜೋಪಾನ ಮಾಡಬೇಕಿತ್ತು. ತಾನು ಬದುಕಿದ್ದು ಮಾಡಬೇಕಾದ್ದೇನಿದೆ ಎನ್ನುತ್ತಾ ಸಾಯುವುದೇ ಲೇಸೆನ್ನುತ್ತಿದ್ದಳು.

ಇತ್ತೀಚೆಗೆ ಊರಿಗೆ ಗುಡ್ಡದಿಂದ ತೋಳಗಳು ನುಗ್ಗುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಅದು ನಿಜವೂ ಇತ್ತು. ರಾತ್ರಿ ವೇಳೆ ತೋಳಗಳು ಊರ ಮುಂದಿನ ಕಟ್ಟೆಯ ಬಳಿಯೇ ಹಸಿದು ಊಳಿಡುವುದು ಅನೇಕರ ನಿದ್ದೆಯಲ್ಲಿ ಬಂದು ಹೋಗುತ್ತಿತ್ತು. ತೋಳಗಳು ಹಾಗೆ ಕೂಗುವುದನ್ನು ಸಹಿಸಲಾರದೆ ರೇಣುಕವ್ವ ಯಾವ ಕೇಡಿಗೆ ಈ ತೋಳಗಳು ಹೀಗೆ ಕೂಗುತ್ತಿವೆಯೋ ಎಂದು ಮಗಳನ್ನು ಹತ್ತಿರಕ್ಕೆ ಎಳೆದುಕೊಳ್ಳುತ್ತಿದ್ದಳು. ರೇಣುಕವ್ವನ ನಿದ್ದೆಯನ್ನು ಅವು ತಿಂದಿದ್ದವು. ಒಂದೆರಡು ಬಾರಿ ಕನಸಿಗೆ ಬಂದು ತನ್ನ ಮಗಳಾದ ತ್ರಿವೇಣಿಯನ್ನೇ ಗುಡ್ಡದ ಬಯಲಲ್ಲಿ ಓಡಾಡಿಸಿ ಹಿಡಿದು ಗವಿಯ ಒಳಕ್ಕೆ ಕಚ್ಚಿ ಎಳೆದುಕೊಂಡು ಹೋದಂತಾಗಿತ್ತು. ತೆಂಗಿನ ತೋಟಗಳಲ್ಲಿ ಕಳ್ಳತನ ಮಾಡುವ ಕಳ್ಳಪೀರನು ಖುದ್ದಾಗಿ ಆ ತೋಳಗಳನ್ನು ನೋಡಿದ್ದಾಗಿ ವರ್ಣಿಸಿದ್ದನ್ನು ಕೇಳಿಸಿಕೊಂಡಿದ್ದ ತ್ರಿವೇಣಿಯು ನಡುಗಿಹೋಗಿದ್ದಳು.

ಕೊಬ್ಬಿದ್ದ ಆ ತೋಳಗಳು ಗರಗಸದ ಹಲ್ಲುಗಳಲ್ಲಿ ಅಷ್ಟುದ್ದ ಕೆನ್ನಾಲಿಗೆಯ ಜೋತಾಡಿಸಿಕೊಂಡು ಬೇಟೆಯ ದಾಹದಲ್ಲಿ ಜೊಲ್ಲು ಸುರಿಸುತ್ತಿದ್ದವು ಎಂದು ಹೇಳಿದ್ದ. ವೆಂಕೋಬಿ ಮಾತ್ರ ಹಳ್ಳದ ತಂಪಿನಲ್ಲೇ ಕುಡಿದು ಬಿದ್ದಿರುತ್ತಿದ್ದ. ಪ್ರಶಾಂತ ನಿಂತಲ್ಲಿ ನಿಲ್ಲಲಾರದೆ ಮೋಡಿ ರಾಮಯ್ಯ ನಾಳೆ ನಾಡಿದ್ದು ಬರಬಹುದೆಂದು ಉದ್ವಿಗ್ನಗೊಳ್ಳುತ್ತಿದ್ದ. ಗಜಾನನ ಹಠವೂ ವಿಪರೀತವಾಗಿತ್ತು. ಆ ವೆಂಕೋಬಿಯೇ ಬಂದು ತಪ್ಪಾಯಿತು ಎಂದು ಬಪ್ಪಿ ಕುಡಿತ ಮತ್ತು ಇಸ್ಪೀಟಾಟಗಳನ್ನು ಬಿಟ್ಟು ಇನ್ನು ಮುಂದೆ ಸರಿಯಾಗಿ ಇರುತ್ತೇನೆ ಎಂದು ಪಂಚಾಯ್ತಿಯಲ್ಲಿ ಮಾತು ಕೊಟ್ಟರೆ ಮಾತ್ರ ತಂಗಿಯನ್ನು ಆತನೊಡನೆ ಕಳಿಸಿ ಕೊಡುವುದಾಗಿ ಶರತ್ತು ಹಾಕಿದ್ದ. ರೇಣುಕವ್ವ ವೆಂಕೋಬಿಯನ್ನು ವಿನಂತಿಸಿಕೊಂಡಿದ್ದರೂ ಆತ ಹಳ್ಳದ ಬದಿಯಲ್ಲಿ ಮುಳುಗಿ ಹೋಗುತ್ತಿದ್ದ. ಆತನನ್ನು ಗರ್ಭದಿಂದ ಹೆತ್ತು ಕೊಂಡಷ್ಟು ಸುಲಭವಾಗಿ ಆ ಹಳ್ಳದ ಬದಿಯೊಳಗಿಂದ ಎತ್ತಿಕೊಳ್ಳಲು ರೇಣುಕವ್ವನಿಗೆ ಸಾಧ್ಯವಿರಲಿಲ್ಲ.

ಯಶವಂತನ ಪಾಡು ಹೇಳತೀರದಾಗಿತ್ತು. ಯಾವ ಕ್ರಾಂತಿಯೂ ಸಂಶೋಧನೆಯೂ ಆದರ್ಶವೂ ಆತನಿಗೆ ಈಗ ಬೇಕಿರಲಿಲ್ಲ. ಭಗ್ನಗೊಂಡು ಹತ್ತಿ ಉರಿವ ಹೂದೋಟದಂತೆ ಅವನ ಮನಸ್ಸು ನಲುಗಿ ಹೋಗಿತ್ತು. ಇದ್ದಕ್ಕಿದ್ದಂತೆ ಯಮುನಳ ಅವ್ವ ಹುಲಿಗೆವ್ವ ಮೈಸೂರಿಗೆ ಬಂದುಬಿಟ್ಟಿದ್ದಳು. ಹುಲಿಗೆವ್ವನ ಸಿರಿಗೆ ಪಾರವೇ ಇರಲಿಲ್ಲ. ಯಮುನ ಆಕಸ್ಮಿಕವಾಗಿ ಸುಧಾರಿಸಿಕೊಂಡಿದ್ದಳು. ಹುಲಿಗೆವ್ವನನ್ನು ಮೈಸೂರು ಸುತ್ತಿಸಿದಳು. ಮಗಳು ಸ್ವರ್ಗದಲ್ಲೇ ಇದ್ದಾಳೆಂದು ಹುಲಿಗೆವ್ವ ನಂಬಿದಳು. ಆದರೂ ಏನೊ ವ್ಯತ್ಯಾಸವಾಗಿದೆ ಎಂದು ಬಂದ ಅನುಮಾನವನ್ನು ನುಂಗಿಕೊಂಡು ಇನ್ನು ಯಾವಾಗ ನಿನ್ನ ಓದೆಲ್ಲವೂ ಮುಗಿಯುವುದೆಂದು ವಿಚಾರಿಸಿ ಮದುವೆಯ ಪ್ರಸ್ತಾಪ ಮಾಡಿ ತನ್ನ ದೂರದ ಸಂಬಂಧಿಕರ ಹುಡುಗನ ಬಗ್ಗೆ ತಿಳಿಸಿ. ಆತ ನಿನ್ನನ್ನು ಲಗ್ನವಾಗಲು ಒಪ್ಪಿದ್ದಾನೆಂದು ಹುಲಿಗೆವ್ವ ಸಂಭ್ರಮದಿಂದ ಮಾತನಾಡುತ್ತಿದ್ದಳು.

ಯಮುನ ಬಾಯಿ ತೆರೆಯಲಾರದೆ ಎಲ್ಲವನ್ನೂ ಬಚ್ಚಿಟ್ಟುಕೊಳ್ಳುತ್ತಿದ್ದಳು. ತಾಯಿ ಬಂದ ಕೂಡಲೇ ಪಕ್ಕದ ಮನೆಯ ವಿಧವೆಯನ್ನು ಕಂಡು ಯಾವ ಕಾರಣಕ್ಕೂ ಬಂದಿರುವ ತನ್ನ ತಾಯಿಯ ಜೊತೆ ಹೆರಿಗೆ ವಿಷಯವನ್ನು ತಿಳಿಸಬಾರದು ಎಂದು ಕೈಹಿಡಿದು ವಿನಂತಿಸಿಕೊಂಡಿದ್ದಳು. ದಿಕ್ಕೆಟ್ಟವರ ಪಾಡನ್ನು ಉಂಡಿದ್ದ ಆ ವಿಧವೆಯು ಹುಲಿಗೆವ್ವನಿಗೆ ಏನನ್ನೂ ತಿಳಿಸಿರಲಿಲ್ಲ. ಯಮುನ ಆ ರಾತ್ರಿಯೆಲ್ಲಾ ಯೋಚಿಸಿದ್ದಳು. ಯಶವಂತ ಇನ್ನು ಜೀವಂತವಾಗಿ ಹಿಂತಿರುಗಲಾರ ಎಂದೇ ಲೆಕ್ಕಿಸುತ್ತಿದ್ದಳು. ನಕ್ಸಲೈಟ್ ಆದವರನ್ನು ಪೋಲೀಸರು ಕ್ರೂರವಾಗಿ ಕೊಂದೇ ಬಿಡುತ್ತಾರೆ ಎಂಬ ಕತೆಗಳು ಕ್ಯಾಂಪಸ್ಸಿನ ತುಂಬ ಹರಿದಾಡಿ ಇಷ್ಟು ತಿಂಗಳಾದರೂ ಯಶವಂತ ಪತ್ತೆಯೇ ಇಲ್ಲವೆಂದರೆ ಅವನನ್ನು ಮುಗಿಸಿರಬೇಕು ಎಂದು ಗಾಳಿ ಸುದ್ದಿ ಹಬ್ಬಿತ್ತು. ಅಂತಹ ಯಶವಂತನಿಗಾಗಿ ತಾನು ಅಷ್ಟೊಂದು ಹಂಬಲಿಸಿ ತಲೆ ಕೆಡಿಸಿಕೊಂಡಿದ್ದೆನಲ್ಲಾ ಎಂದು ಆ ವತ್ಸಲ ಹಿಂದಿನದನ್ನು ನೆನೆದು ಬೆವೆತುಹೋಗಿದ್ದಳು. ಅಂತೂ ಹುಲಿಗೆವ್ವ ಮಗಳ ಓದು ಸಾಕು ಎಂದು ತೀರ್ಮಾನಿಸಿ ಊರಿಗೆ ಕರೆದುಕೊಂಡು ಹೋಗಿ ಲಗ್ನ ಮಾಡುವುದೇ ಸರಿ ಎಂದುಕೊಳ್ಳುತ್ತಿದ್ದಳು. ಸದ್ಯ ಈ ಎಲ್ಲಾ ಹಿಂಸೆಯಿಂದ ತಪ್ಪಿಸಿಕೊಂಡರೆ ಸಾಕೆಂದು ಯಮುನಳೂ ಕೂಡ ಊರಿಗೆ ಹೋಗಲು ಒಪ್ಪಿದ್ದಳು. ಮದುವೆ, ಯಶವಂತ, ನಾಳಿನ ಬದುಕು ಇವನ್ನೆಲ್ಲ ಮುಂದೆ ಯೋಚಿಸಿದರೆ ಆಯಿತು ಎಂದು ಹುಲಿಗೆವ್ವನನ್ನು ಹಿಂಬಾಲಿಸಿದ್ದಳು.

ಅತ್ತ ಯಶವಂತ ತಂಗಿ ತ್ರಿವೇಣಿ ಗರ ಬಡಿದವರಂತೆ ಕತ್ತಲೆಯ ಮರೆಯಲ್ಲಿ ಜೋಮು ಹಿಡಿದ ಮನದಲ್ಲಿ ಬಿದ್ದುಕೊಂಡಿದ್ದಳು. ತೋಳಗಳು ಊರ ಸುತ್ತ ಸುತ್ತುತ್ತಿವೆ ಎಂದು ಯಾರೋ ಹೇಳುವುದು ಅವಳ ನಾಭಿಯ ತಳವನ್ನು ಚುಚ್ಚಿದಂತಾಗಿ ದಿಗಿಲುಗೊಳ್ಳುತ್ತಿದ್ದಳು. ದಟ್ಟವಾದ ಅಮಾವಾಸ್ಯೆಯ ಕಾರ್ಗತ್ತಲು ಹೂಂಕರಿಸಿಕೊಂಡು ಬರುತ್ತಿತ್ತು. ಅದರ ಜೊತೆ ಸೊಕ್ಕಿನಿಂದ ಕುಣಿಯಲು ರಾತ್ರಿಯು ಉದ್ರೇಕಗೊಳ್ಳುತ್ತಿತ್ತು. ಪ್ರಶಾಂತ ಮನಸ್ಸನ್ನು ಹದ ಮಾಡಿಕೊಂಡಿದ್ದ. ಬಚ್ಚಿಟ್ಟಿರುವ ಚಿನ್ನದ ನಿಧಿಯನ್ನು ಪತ್ತೆ ಮಾಡುವ ಎಲ್ಲಾ ವಾಮಾಚರಣೆಗಳನ್ನು ಕೈಗೊಳ್ಳುತ್ತಿದ್ದ. ಆಗಲೇ ಮೋಡಿ ರಾಮಯ್ಯ ಬಂದು ಮಾರಿ ಗುಡಿಯಲ್ಲಿ ಬೀಡು ಬಿಟ್ಟಿದ್ದ. ಆಕಾಶವೆಲ್ಲ ಕತ್ತಲೆಯ ಮಹಾ ಮಳೆಯನ್ನು ಸುರಿಸುತ್ತಿತ್ತು. ಹಿತ್ತಲ ಹೊಂಗೆ ಮರವು ವೆಂಕೋಬಿಯ ಮಗ ಸಂಪತ್ತನ ಮುರುಕು ಆಟಿಕೆಗಳನ್ನು ಕಾಯುತ್ತ ನಿಂತಿತ್ತು. ಕತ್ತಲ ಕದಿಯುತ್ತ ಪ್ರಶಾಂತನ ಮನಸ್ಸು ಚಿನ್ನದ ಅಮಲಿನಲ್ಲಿ ಬೇಯುತ್ತ ನಡುರಾತ್ರಿಯು ಬೇಗ ಬಂದುಬಿಡಲಿ ಎಂದು ತುದಿ ಗಾಲದಲ್ಲಿ ನಿಂತಿದ್ದ. ಮೋಡಿ ರಾಮಯ್ಯ ಗುಡ್ಡದ ಗವಿಯಲ್ಲಿ ಕುಳಿತು ಬಲಿಯ ಆಚರಣೆಗಳನ್ನು ರೂಪಿಸುತ್ತಿದ್ದ. ವಾಮಾಚಾರದ ಪರಿಕರಗಳನ್ನೆಲ್ಲ ಕಾಳಿಕಾ ಮಾತೆಯ ವಿಗ್ರಹದ ಮುಂದೆ ಒಡ್ಡಿಕೊಂಡು ಪ್ರಶಾಂತ ಬರುವುದನ್ನೇ ಕಾಯುತ್ತಿದ್ದ.

ರೇಣುಕವ್ವನಿಗೆ ತ್ರಿವೇಣಿಯದೇ ಚಿಂತೆ. ಮಗಳ ಸೀರೆ ಸೆರಗನ್ನು ತನ್ನ ಸೀರೆಯ ಸೆರಗಿನ ತುದಿಗೆ ಕಟ್ಟಿಕೊಂಡು ಮಲಗಿದ್ದಳು. ಮಾಯದ ನಿದ್ದೆಯು ಅವಳನ್ನು ನುಂಗಿತ್ತು. ದಟ್ಟವಾದ ಆ ಕ್ರೂರ ಕತ್ತಲೆಯಲ್ಲಿ ಎದ್ದ ಪ್ರಶಾಂತನು ಹಜಾರಕ್ಕೆ ಬಂದು ಅಲ್ಲಿ ಯಾವತ್ತೂ ಅನಾಥನಂತೆ ಬಿದ್ದಿರುತ್ತಿದ್ದ ಸಂಪತ್ತನನ್ನು ಎತ್ತಿಕೊಂಡ. ಆ ಸಂಜೆಯೇ ಊಟಕ್ಕೆ ಮೊದಲು ವೈನ ಮಾಡಿ ಸಂಪತ್ತನ ತಲೆ ಸವರಿ ಪೆಪ್ಪರಮೆಂಟು ತಿನ್ನು ಎಂದು ಏನನ್ನೋ ಸಿಹಿಯಾದ್ದನ್ನು ತಿನ್ನಿಸಿದ್ದ. ಮೋಡಿ ರಾಮಯ್ಯನೇ ಅದನ್ನು ತಿನಿಸಲು ಕೊಟ್ಟದ್ದು. ಅದನ್ನು ತಿಂದ ಸ್ವಲ್ಪ ಹೊತ್ತಾದ ಮೇಲೆ ವಿಪರೀತ ನಿದ್ದೆ ಬಂದು ಬಿಡುತ್ತಿತ್ತು. ಪ್ರಶಾಂತ ಎತ್ತಿ ಹೆಗಲ ಮೇಲೆ ಹಾಕಿಕೊಂಡು ಹಿತ್ತಲ ದಾರಿಯಲ್ಲಿ ಗುಡ್ಡದ ಕಡೆಗೆ ಹೊರಡುವಾಗ ಅವನನ್ನು ಆ ಹೊಂಗೆ ಮರವು ಎಷ್ಟೋ ಜೋರಾಗಿ ಕೂಗಿಕೊಂಡರೂ ಸಂಪತ್ತನಿಗೆ ಎಚ್ಚರವೇ ಇರಲಿಲ್ಲ.

ಊರ ದಾರಿ ದಾಟಿ ಗುಡ್ಡದ ಕಾಲು ದಾರಿಗೆ ಬಮ್ದಂತೆ ಪ್ರಶಾಂತ ಬೆವೆತು ಹೋಗಿದ್ದ. ನಡುರಾತ್ರಿ ಕತ್ತಲಿನ ಜೊತೆ ಆತ ಹೆಜ್ಜೆ ಹಾಕುತ್ತಿದ್ದ. ಸಂಪತ್ತನಿಗೆ ಎಚ್ಚರವಾಯಿತು. ಕೂಗಿಕೊಳ್ಳದಿರಲಿ ಎಂದು ಆತನ ಬಾಯಿ ಮುಚ್ಚಿದ. ಮಗನನ್ನು ಬಿಟ್ಟು ಬದುಕಲಾರೆ; ನನ್ನ ಮಗನನ್ನು ನೀನಾದರೂ ಹೊತ್ತುಕೊಂಡು ಬಂದು ಕೊಟ್ಟು ಬಿಡಪ್ಪಾ ಎಂದು ಸ್ವತಃ ನಿನ್ನ ತಾಯಿಯೇ ನನಗೆ ಹೇಳಿದ್ದಾಳೆಂದು ಪ್ರಶಾಂತ ಆ ಮುಗ್ಧ ಸಂಪತ್ತನ ಮನಸ್ಸಿನಲ್ಲಿ ತಾಯಿ ಆಸೆ ಹುಟ್ಟಿಸಿದ. ಅಂತಹ ಭಯಾನಕ ಕತ್ತಲೆಯಲ್ಲೂ ಸಂಪತ್ತನು ಚಿಕ್ಕಪ್ಪನು ಎಷ್ಟು ಒಳ್ಳೆಯವನೆಂದು ಮುದ್ದಿನಿಂದ ಪ್ರಶಾಂತನ ತಲೆಯನ್ನು ಮುತ್ತಿಕ್ಕಿಕೊಂಡ. ಕತ್ತಲೆ ಎಂಬ ಭಾವಲಿಯ ಹಿಂಡು ಸಂಪತ್ತನ ತಲೆ ಮೇಲೇ ಸುತ್ತುತ್ತ ಎಷ್ಟು ಬೇಗನೆ ಇವನ ಕೊರಳ ಕುಕ್ಕಿ ನೆತ್ತರ ಹೀರಬೇಕೆಂದು ಪ್ರಶಾಂತನ ಮನಸ್ಸನ್ನು ಕೇಳುತ್ತಿತ್ತು.

‘ಇನ್ನು ಸ್ವಲ್ಪ ಹೊತ್ತಾದ ಮೇಲೆ ಅಮ್ಮನ ಊರು ಸಿಕ್ಕಿಬಿಡುತ್ತದಾ ಚಿಕ್ಕಪ್ಪಾ’ ಎಂದು ಸಂಪತ್ತನು ಕೇಳುತ್ತಿದ್ದ. ದುರ್ಗಮವಾದ ಗುಡ್ದವು ಅಮಾವಾಸ್ಯೆಯ ಆ ಕತ್ತಲಿನಲ್ಲಿ ತಾಯಿಯನ್ನು ನೋಡುವ ಹಂಬಲದಲ್ಲಿ ಸಂಪತ್ತನಿಗೆ ಭಯವನ್ನೇ ಹುಟ್ಟಿಸುತ್ತಿರಲಿಲ್ಲ. ‘ಬೇಗ ಬೇಗ ನಡೀ ಚಿಕ್ಕಪ್ಪ ನಮ್ಮಮ್ಮ ಕಾಯ್ತಾನೇ ಇರ್‍ತಾರೆ’ ಎನ್ನುತ್ತ ಸಂಪತ್ತನು ಪ್ರಶಾಂತನ ಹೆಗಲ ಮೇಲೆ ತನ್ನ ಸೊಟ್ಟ ಕೈಕಾಲುಗಳನ್ನು ಇಳಿಬಿಟ್ಟಿದ್ದ. ಪ್ರಶಾಂತ ಗುಡ್ಡದ ಗವಿಯ ಬಾಗಿಲು ಬಡಿದ. ಮೋಡಿ ರಾಮಯ್ಯ ಪೂರ್ಣ ಬೆತ್ತಲಾಗಿ ಮೈತುಂಬಾ ಬೂದಿ ಬಳಿದುಕ್ಕೊಂಡು ಮುಖಕ್ಕೆ ಅರಿಶಿನ ಕುಂಕುಮ ಮೆತ್ತಿಕೊಂಡು ಕಾಳಿಕಾದೇವಿಯ ಮುಂದೆ ಮಂತ್ರ ಹಾಕುತ್ತಿದ್ದ. ಭೀಕರವಾಗಿದ್ದ ಅವನನ್ನು ಕಂಡ ಕೂಡಲೇ ಕಿಟಾರನೆ ಸಂಪತ್ತು ಕಿರುಚಿಕೊಂಡಿದ್ದ. ಪ್ರಶಾಂತ ಆತನ ಬಾಯಿ ಅಮುಕಿ ಹಿಡಿದು ಒಳಕ್ಕೆ ಕರೆದುಕೊಂಡು ಹೋಗಿದ್ದ.

ಗವಿಯ ಹೊರಗೆ ಅಮಾವಾಸ್ಯೆಯು ರುದ್ರ ನರ್ತನ ಮಾಡುತ್ತಿತ್ತು. ಚಿನ್ನದ ನಿಧಿ ಎಲ್ಲಿದೆ ಎಂದು ಪತ್ತೆ ಮಾಡಲು ನಡೆಸುವ ವಾಮ ಮಾರ್ಗಗಳಲ್ಲಿ ಸಂಪತ್ತನನ್ನು ಬಲಿ ಕೊಡಲು ಹಾಗೆ ಅಂತಹ ವೇಳೆಯಲ್ಲಿ ಪ್ರಶಾಂತನು ಮುದ್ದಿನಿಂದ ಹೊತ್ತುಕೊಂಡು ಬಂದು ಈಗ ಮೋಡಿ ರಾಮಯ್ಯನ ಕೈಗೆ ಕೊಟ್ಟು ಉದ್ವೇಗದಲ್ಲಿ ನಡುಗುತ್ತಿದ್ದ. ಮೋಡಿರಾಮಯ್ಯ ನಿರ್ದಯವಾಗಿ ಸಂಪತ್ತನ ಕುತ್ತಿಗೆಯನ್ನೇ ದಿಟ್ಟಿಸಿ ಮಂತ್ರ ಹಾಕುತ್ತಿದ್ದ. ಸಂಪತ್ತ ತರತರ ತತ್ತರಿಸುತ್ತ ಅಷ್ಟಗಲ ಕಣ್ಣು ಬಿಟ್ಟುಕೊಂಡು ಆಕ್ರಂದಿಸುತ್ತಿದ್ದ. ಸದ್ದು ಹೊರಬರದಿರಲಿ ಎಂದು ಆತನ ಬಾಯಿಗೆ ಬಟ್ಟೆ ತುರುಕಿ ಕೈಕಾಲು ಕಟ್ಟಿ ಕಾಳಿಕಾದೇವಿಯ ಮುಂದೆ ಕೆಡವಿಕೊಂಡಿದ್ದರು. ತನ್ನ ಸೊಟ್ಟಕಾಲುಗಳನ್ನು ಎಳೆದಾಡುತ್ತಾ ಆಸರೆಗಾಗಿ ಅಂಗಲಾಚುತ್ತಾ ‘ಚಿಕ್ಕಪ್ಪಾ ಚಿಕ್ಕಪ್ಪಾ ಚಿಕ್ಕಪ್ಪಾ’ ಎಂದು ಧ್ವನಿ ಸ್ಪೋಟಿಸಿದರೂ ಯಾವ ಸದ್ದೂ ಬಾರದಾಗಿ ಪ್ರಶಾಂತನ ಮನಸ್ಸು ಕರಗದಾಗಿ ಆತ ಸುಮ್ಮನಿರೆಂದು ಕಣ್ಣು ಮೆಡರಿಸುತ್ತಿದ್ದ. ತೆವಳಿಕೊಂಡೇ ಆತ ಪ್ರಶಾಂತನ ಕಡೆಗೆ ಚಲಿಸುತ್ತಿದ್ದರೆ ಮೋಡಿ ರಾಮಯ್ಯ ನಿಶ್ಪಾಪಿ ಸಂಪತ್ತನನ್ನು ಒಂದು ಹುಳು ಎಂಬಂತೆ ಹತ್ತಿರಕ್ಕೆ ಎಳೆದುಕೊಳ್ಳುತ್ತಿದ್ದ.

ಗುಡ್ಡದ ಯಾವುದೋ ಮೂಲೆಯಲ್ಲಿ ತೋಳಗಳು ಭಯಂಕರವಾಗಿ ರಕ್ತ ದಾಹದಲ್ಲಿ ಅರಚಾಡುತ್ತಿದ್ದವು. ಆ ತೋಳಗಳು ಊರೊಳಗಿಂದ ಏನನ್ನೋ ಹಿಡಿದುಕೊಂಡು ಬಂದು ರಕ್ತ ಕುಡಿಯುತ್ತ ಅದರ ದೇಹವನ್ನು ಕೋರೆ ಹಲ್ಲುಗಳಿಂದ ಬಗೆಯುತ್ತ ತಿನ್ನುತ್ತಿದ್ದವು. ಕತ್ತಲೆಯ ಕೇಕೆ ಹಾಕುತ್ತ ತೋಳಗಳ ಜೊತೆ ಕುಣಿಯುತ್ತಿತ್ತು. ಸಂಪತ್ತನು ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಕಟ್ಟಿದ್ದ ಕೈಕಟ್ಟನ್ನು ಕಿತ್ತುಕೊಂಡು ಬಾಯಿಗೆ ತುಂಬಿದ್ದ ಬಟ್ಟೆಯನ್ನು ಕಿತ್ತೆಸೆದು ‘ಅಮ್ಮಾ ಅಮ್ಮಾ ಅಮ್ಮಾ’ ಎಂದು ಗವಿಯೇ ಮೊಳಗುವಂತೆ ಕೂಗಿಕೊಂಡದ್ದಕ್ಕೂ ಅವನ ಗೋಣನ್ನು ಮುರಿಯುವುದಕ್ಕೂ ಒಂದೇ ಕ್ಷಣವಾಗಿತ್ತು. ಹೊರಗೆ ತೋಳಗಳ ಆರ್ಭಟಕ್ಕೆ ಕತ್ತಲು ತಾಳ ಹಾಕುತ್ತಿತ್ತು. ಗವಿಯ ಒಳಗೆ ನೆತ್ತರು ತಣ್ಣಗೆ ಹೆಪ್ಪುಗಟ್ಟುತ್ತಿತ್ತು. ‘ಉಳಿದದ್ದನ್ನೆಲ್ಲ ನಾನು ನೋಡಿಕೊಳ್ಳುವೆ; ಇನ್ನು ನೀನು ಹೊರಡು’ ಎಂದು ಮೋಡಿ ರಾಮಯ್ಯ ಪ್ರಶಾಂತನನ್ನು ಕಳಿಸಿಬಿಟ್ಟ. ತುಂಡಾಗಿ ಬಿದ್ದಿದ್ದ ಸಂಪತ್ತನ ದೇಹವನ್ನು ನೋಡುತ್ತ ತನಗಿನ್ನು ಚಿನ್ನದ ನಿಧಿ ಸಿಕ್ಕಿಯೇ ಬಿಟ್ಟಿತೆಂದು ಉದ್ವೇಗದ ಆನಂದದಲ್ಲಿ ಹುಚ್ಚಾಗುತ್ತ ಮನೆಗೆ ಬಂದುಬಿಟ್ಟ.

ಪ್ರಚ್ಛನ್ನ ಹುಣ್ಣಿಮೆಯಂದು ನಿಧಿಯೇ ಮನೆಗೆ ಬಂದು ಕಾಣಿಸಿಕೊಳ್ಳುತ್ತದೆ ಎಂದು ಹೇಳಿ ಹಣ ಪಡೆದು ಮೋಡಿ ರಾಮಯ್ಯ ನಾಪತ್ತೆ ಆಗಿದ್ದ. ಸೂರ್ಯನು ತನಗೇನೂ ಗೊತ್ತಿಲ್ಲ ಎಂಬಂತೆ ಬೀದಿಯಲ್ಲಿ ಬೆಳಕನ್ನು ಚೆಲ್ಲುತ್ತಿದ್ದ. ಹಿತ್ತಲ ಹೊಂಗೆ ಮರ ಅಳುತ್ತ ಹಾಗೇ ನಿಂತಿತ್ತು. ಅದರ ರೆಂಬೆ ಕೊಂಬೆ ಹೂ ಎಲೆ ಚಿಗುರು ಎಲ್ಲವೂ ಸೂತಕದಲ್ಲಿ ತೊಯ್ದು ಹೋಗಿದ್ದವು. ತನ್ನೊಳಗೆ ಕೂತಿದ್ದ ಸಣ್ಣ ಪುಟ್ಟ ಹಕ್ಕಿಗಳಿಗೂ ಹೊಂಗೆ ಮರವು ಕಳೆದ ರಾತ್ರಿ ಏನಾಯಿತು ಎಂದು ಹೇಳಿಕೊಳ್ಳುತ್ತಿತ್ತು. ರೇಣುಕವ್ವ ಸಂಪತ್ತ ಎಲ್ಲಿ ಹೋದನೆಂದು ಹುಡುಕಾಡುತ್ತಿದ್ದಳು. ತ್ರಿವೇಣಿಯು ಹೊಟ್ಟೆ ನೋವೆಂದು ಮೂಲೆಯಲ್ಲಿ ಕುಳಿತಿದ್ದಳು. ಪ್ರಶಾಂತ ಕಾಣಿಸಿಕೊಂಡಿರಲಿಲ್ಲ. ಆತನ ಹೆಂಡತಿ ಮುಗುಮ್ಮಾಗಿದ್ದಳು. ಸಂಜೆವರೆಗೂ ಸಂಪತ್ತನಿಗಾಗಿ ಹುಡುಕಾಡಿ ಸಾಕಾಯಿತು. ಊರವರು ಏನೇನೋ ಹೇಳತೊಡಗಿದರು. ಕಳ್ಳಪೀರ ತೋಳಗಳ ಬಗ್ಗೆ ಹೇಳುತ್ತಿದ್ದ. ರಾತ್ರಿ ಊರ ಮುಂದಲ ಕಟ್ಟೆಯ ಬಳಿ ಕೊಬ್ಬಿದ್ದ ಎರಡು ಗಂಡು ತೋಳಗಳು ಸುತ್ತಾಡುತ್ತಿದ್ದವೆಂದು ತಿಳಿಸಿ, ಅವು ಊರೊಳಕ್ಕೆ ಬಂದುದನ್ನು ತಾನು ನೋಡಿದೆ ಎಂದು ವಿವರಿಸುತ್ತಿದ್ದ. ನಿಶಾಚರಿಯಂತಿದ್ದ ಕಳ್ಳಪೀರನ ಮಾತನ್ನು ಜನ ನಂಬಿದರು. ಎಲ್ಲೋ ರಾತ್ರಿ ಉಚ್ಚೆ ಹುಯ್ಯಲು ಹಿತ್ತಲ ಬಾಗಿಲಿನಿಂದ ಬಂದಿರುವಾಗ ಸಂಪತ್ತನನ್ನು ಆ ತೋಳಗಳು ಕಚ್ಚಿಕೊಂಡು ಹೋಗಿರಬಹುದು ಎಂದು ಊಹೆ ಮಾಡುತ್ತಿದ್ದರು. ಪ್ರಶಾಂತನ ಹೆಂಡತಿ ಸಮ್ಮತಿಸುವಂತೆ ಬಾಯಿ ತೆಗೆದು ‘ಹೌದೂ ಸರೋತ್ತಿನಲ್ಲಿ ಹಿತ್ತಲ ಬಾಗಿಲು ಕಡೆ ಏನೋ ಸದ್ದಾದುದನ್ನು ನಾನು ನಿದ್ದೆಗಣ್ಣಲ್ಲಿ ಕೇಳಿಸಿಕೊಂಡೆ’ ಎನ್ನುತ್ತಿದ್ದಳು.

ರೇಣುಕವ್ವ ಬಾಯಿ ಬಡಿದುಕೊಳ್ಳುತ್ತ ವೆಂಕೋಬಿಗೆ ಹಿಡಿ ಶಾಪ ಹಾಕುತ್ತ ಮಗನನ್ನು ತೋಳಕ್ಕೆ ಬಲಿ ಕೊಟ್ಟನಲ್ಲ ಎಂದು ರೋಧಿಸುತ್ತಿದ್ದಳು. ಪ್ರಶಾಂತ ಪ್ರತಿ ಕ್ಷಣವೂ ಗಲಿಬಿಲಿಗೊಳ್ಳುತ್ತಿದ್ದ. ಅವನ ಮನದೊಳಗೆ ನೆತ್ತರು ಚಿನ್ನದ ನಿಧಿಯಿಂದ ಚಿಮ್ಮುತ್ತಿತ್ತು. ಹುಣ್ಣಿಮೆಯು ಯಾವಾಗ ಬರುವುದೋ ಎಂದು ಚಡಪಡಿಸುತ್ತಿದ್ದ. ಸುದ್ದಿ ತಿಳಿದು; ವೆಂಕೋಬಿಯು ಮುರಿದುಕೊಂಡಿರುವ ಕಾಲನ್ನು ಎಳೆದುಕೊಂಡು ಬಂದು ಹಜಾರದಲ್ಲಿ ಬಿದ್ದುಕೊಂಡು ತನ್ನ ಹೆಂಡತಿ ಮನೆ ಬಿಟ್ಟು ಹೋಗಿದ್ದರಿಂದಲೇ ಆತ ತೋಳದ ಬಾಯಿಗೆ ತುತ್ತಾದುದು ಎಂದು ಆರೋಪಿಸುತ್ತಿದ್ದ. ತ್ರಿವೇಣಿಯು ತೋಳಗಳನ್ನು ಕಲ್ಪಿಸಿಕೊಂಡೇ ಇನ್ನೆಂದೂ ರಾತ್ರಿ ವೇಳೆ ಹಿತ್ತಲಿಗೆ ಕಲಿಡಬಾರದು ಎಂದು ಹೆದರುತ್ತಿದ್ದಳು. ಐದಾರು ದಿನಗಳ ತನಕ ತರಾವರಿಯಾಗಿ ಜನ ಕಲ್ಪಿಸಿಕೊಳ್ಳುತ್ತಿದ್ದರು. ಗಜಾನನ ಸುದ್ದಿ ತಿಳಿದ ಕೂದಲೇ ತಂಗಿಯ ಜೊತೆ ಬಂದು ಅಂಗಳದಲ್ಲಿ ಅಳುತ್ತ ಕೂತುಬಿಟ್ಟಿದ್ದ. ವೆಂಕೋಬನ ಹೆಂಡತಿಯನ್ನು ಯಾರೂ ಸಮಾಧಾನ ಮಾಡಲು ಸಾಧ್ಯವಾಗಿರಲಿಲ್ಲ. ಪ್ರಶಾಂತ ಗುಡ್ಡದ ಕಡೆ ಗುಟ್ಟಾಗಿ ಹೋಗಿ ಗವಿಯನ್ನು ಪರೀಕ್ಷಿಸಿದ್ದ. ಮೋಡಿ ರಾಮಯ್ಯ ಬಲಿಯ ಯಾವ ಸುಳಿವೂ ಇಲ್ಲದಂತೆ ಮಾಯ ಮಾಡಿಬಿಟ್ಟಿದ್ದ. ಸೂತಕವೂ ಕಳೆದು ಹೋಗಿತ್ತು.

ವೆಂಕೋಬಿ ಬೆಳಿಗ್ಗೆ ಎದ್ದ ಕೂಡಲೆ ಒಂದಿಷ್ಟು ಸಾರಾಯನ್ನು ಕುಡಿದರೆ ಮಾತ್ರ ಒಂದಿಷ್ಟು ಲವಲವಿಕೆ ಆಗುತ್ತಿದ್ದ. ಕುಡಿಯದೆ ಸುಮ್ಮನೆ ಇರಲು ಇವನಿಂದ ಆಗುತ್ತಿರಲಿಲ್ಲ ಅವನ ದೇಹ ಸ್ಥಿತಿಯು ಅಮಲಿನಲ್ಲಿದ್ದಾಗ ಮಾತ್ರವೇ ಕ್ರಿಯಾಶೀಲ ಆಗಿರುತ್ತಿತ್ತು. ಗಜಾನನ ತಂಗಿಯ ಉಳಿದಿಬ್ಬರು ಮಕ್ಕಳನ್ನು ಜೊತೆಗೂಡಿಸಿಕೊಂಡು ತನ್ನ ಊರಿಗೆ ಹೊರಟೇ ಬಿಟ್ಟ. ರೇಣುಕವ್ವ ದಿಕ್ಕೆಟ್ಟು ಒಂಟಿ ಮರದಂತೆ ಅಂಗಳದಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದಳು. ಪ್ರಶಾಂತನ ಹೆಂಡತಿ ಎಂದಿನಂತೆ ಮರೆಗೆ ಸರಿದುಕೊಂಡು ಗಂಡನ ಜೊತೆ ಗುಪ್ತ ನಿಧಿಯ ಕತೆಗಳನ್ನು ಹೇಳುತ್ತಿದ್ದಳು. ಸಂಪತ್ತು ಹೇಗೆ ಸತ್ತನೆಂದು ಪತ್ತೆ ಹಚ್ಚಲು ಯಾರಿಗೂ ಆಸಕ್ತಿ ಇರಲಿಲ್ಲ. ಮೋಡಿ ರಾಮಯ್ಯ ಯಾವ ಮಾಯ ಮಾಡಿರುವನೊ ಎಂದು ಪ್ರಶಾಂತ ರಾತ್ರಿ ವೇಳೆ ಸುತ್ತಾಡುವುದೂ ಹೆಚ್ಚಾಗಿತ್ತು.

ಹುಣ್ಣಿಮೆಯ ದಿನ ಹತ್ತಿರವಾಯಿತು. ಆ ದಿನ ಬಂದೇ ಬಿಟ್ಟಿತು. ಮನೆಯನ್ನೆಲ್ಲ ಸಾರಿಸಿ ಪೂಜೆ ಮಾಡಿ ಪ್ರಶಾಂತನ ಹೆಂಡತಿ ಲಕ್ಷ್ಮಿ ಪೂಜೆ ಮಾಡುತ್ತಿದ್ದಳು. ಪ್ರಶಾಂತನ ತಲೆ ತುಂಬ ಸಂಪತ್ತನ ಕೊರಳ ನೆತ್ತರು ಚಿಮ್ಮಿದಂತಾಗಿ ತನ್ನ ತಲೆಯೇ ಸಿಡಿದು ಹೋಯಿತೇನೋ ಎನಿಸುತ್ತಿತ್ತು. ಪುಚ್ಛನ್ನವಾದ ಹುಣ್ಣಿಮೆಯು ಆಕಾಶದಲ್ಲಿ ಹಾರಾಡುತ್ತಿತ್ತು. ಮಧ್ಯರಾತ್ರಿ ಕಳೆದರೂ ಯಾವ ನಿಧಿಯ ಕುರುಹು ಕಾಣಲಿಲ್ಲ. ಸಂಪತ್ತನು ಚಿಕ್ಕಪ್ಪಾ ಚಿಕ್ಕಪ್ಪಾ ಚಿಕ್ಕಪ್ಪಾ ಎಂದು ಧ್ವನಿ ಬದಲಿಸಿ ತರಾವರಿಯಾಗಿ ಕರೆದು ನಡುನಡುವೆ ನಗಾಡುತ್ತಾ ಕೇಕೆ ಹಾಕುತ್ತಾ ಮತ್ತದೇ ದನಿಯಲ್ಲಿ ಚಿಕ್ಕಪ್ಪಾ ಎಂದು ಆರ್ತನಾಗಿ ಕೂಗುವುದು ಪ್ರಶಾಂತನ ಮೈ ತುಂಬ ಮೊಳಗಿ ಹುಚ್ಚೆದ್ದು ಗುಡ್ಡದ ಕಡೆಗೆ ಓಡಿ ಹೋಗಿದ್ದ. ಇಡೀ ಗುಡ್ಡವೇ ಚಿಕ್ಕಪ್ಪಾ ಎಂದು ಕೂಗುತ್ತಿತ್ತು. ಆ ಕರೆಯನ್ನು ಪ್ರಶಾಂತನ ಕಿವಿಗಳು ಸಹಿಸದಾದವು. ಪ್ರಜ್ಞೆಯ ಆಳದಲ್ಲಿ ಆ ಕೂಗು ಭರ್ಜಿಯಂತೆ ತಿವಿಯತೊಡಗಿತು. ಕುಂತಲ್ಲಿ ನಿಂತಲ್ಲಿ ಪ್ರಶಾಂತನಿಗೆ ಏನೇನೋ ಭ್ರಮೆಗಳು ಮುತ್ತಿಕೊಂಡವು. ಹುಣ್ಣಿಮೆ ಕಳೆದು ಅಮಾವಾಸ್ಯೆಯೂ ಬಂದು ಮತ್ತೊಂದು ಹುಣ್ಣಿಮೆಯೂ ಜಾರಿದರೂ ನಿಧಿ ಕಾಣದೆ ಪ್ರಶಾಂತ ನಿಜಕ್ಕೂ ಹುಚ್ಚಾಗಿ ಗುಡ್ಡದಲ್ಲಿ ಓಡಾಡತೊಡಗಿದ. ಆತನ ಹೆಂಡತಿ ಬೇಸ್ತುಬಿದ್ದಳು.

ರೇಣುಕವ್ವ ತನ್ನ ಮನೆತನ ಮುಗಿಯಿತು ಎಂದುಕೊಂಡಳು. ಯಶವಂತ ಹೇಗೋ ಬಚಾವಾಗಿ ಬಂದು ಯಮುನಳನ್ನು ಹುಡುಕಾಡಿದ. ಆಕೆ ಹುಲಿಗೆವ್ವನ ಜೊತೆ ಹೊರಟು ಹೋಗಿದ್ದಳು. ಮೈಸೂರಿನ ತುಂಬ ಬಿಕಾರಿಯಂತೆ ಅಲೆದಾಡಿದ ಯಶವಂತ ಕೊನೆಗೆ ಹಳ್ಳಿಗೆ ಬಂದಿದ್ದ. ಹಾಗೆ ಬಂದು ಮನೆಯ ಸ್ಥಿತಿಯನ್ನು ತಿಳಿದು ದಂಗಾಗಿ ಹೋದ. ಪ್ರಶಾಂತ ಊರ ಮಾರಿ ಗುಡಿ ಮುಂದೆ ಹುಚ್ಚನಾಗಿ ಓಡಾಡುತ್ತಾ ಬಗೆಬಗೆಯಾದ ಯಾವುದೊ ಗಂಟುಗಳನ್ನು ಬಟ್ಟೆಯಲ್ಲಿ ಕಟ್ಟಿಕೊಂಡು ಜಗತ್ತಿನ ಸಂಬಂಧಗಳನ್ನು ಕಳೆದುಕೊಂಡಿದ್ದ. ಯಶವಂತನ ಮುಂದೆ ರೇಣುಕವ್ವ ಎಲ್ಲವನ್ನೂ ಒಪ್ಪಿಸಿ, ಈಗ ನೀನೇ ಎಲ್ಲವನ್ನೂ ಕಾಪಾಡಬೇಕು ಎಂದು ವಿನಂತಿಸುತ್ತಿದ್ದಳು. ಕ್ರಾಂತಿಕಾರಿ ಪ್ರೊಫೆಸರ್ ಯಶವಂತನ ಭಾವನೆಯಲ್ಲಿ ಸುಮ್ಮನೆ ಸುಳಿದುಹೋದರು. ಯಮುನಳ ಮತ್ತು ತನ್ನ ಜೊತೆಗಿನ ಮುಂದಿನ ಸಂಬಂಧ ಏನು ಎಂದು ಅದೇ ಯಶವಂತ ಅದೇ ಕೆರೆ ದಂಡೆಯ ಕಲ್ಲು ಬೆಂಚಿನ ಮೇಲೆ ಕುಳಿತು ದೀರ್ಘವಾಗಿ ಆಲೋಚಿಸುತ್ತಿದ್ದ. ಗುಡ್ಡದ ಗವಿಯ ಸಂಧಿಯಿಂದ ಏನೋ ವಾಸನೆ ತುರಿ ಬಂದು ಕೆರೆಯ ನೀರ ಮೇಲೆ ಹಾಯ್ದು ಯಶವಂತನ ಮೂಗನ್ನು ಸವರಿಕೊಂಡು ಹೋಗುತ್ತಿತ್ತು. ಏನನ್ನಾದರೂ ಇಲ್ಲೇ ಈ ಮಣ್ಣೊಳಗೇ ಮಾಡಬೇಕೆಂದು ಯಶವಂತ ಕತ್ತಲೆಯನ್ನು ಬಿಡಿಸಿಕೊಳ್ಳುತ್ತಾ ಮನೆಯ ಕಡೆಗೆ ಹೆಜ್ಜೆ ಕಿತ್ತ. ಹಿತ್ತಿಲಲ್ಲಿ ಹೊಂಗೆ ಮರದ ಕೆಳಗೆ ಅನಾಥವಾಗಿ ಬಿದ್ದಿದ್ದ ಸಂಪತ್ತನ ಮುರುಕು ಆಟಿಕೆಗಳು ಆತ ಎಂದಾದರೂ ಬರಬಹುದೆಂದು ಮುಗ್ಧವಾಗಿ ಅಲ್ಲೇ ಕಾಯುತ್ತ ಕಾಲದಲ್ಲಿ ಕರಗುತ್ತಿದ್ದವು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.