ಭೂತಕಾಲದ ಗರ್ಭದಲ್ಲಡಗಿ, ಮೈಯುಡುಗಿ,
ಗಹಗಹಿಸಿ ನಗುವ ಕಾಲನತ್ಯದ್ಭುತ ದವಡೆ-
ಯೊಲು ತೋರುತಿದೆ ಕಿತ್ತೂರ ಬಲ್‌ಕೋಟೆ ಗೋಡೆ!
ಅಲ್ಲಲ್ಲಿ ಬೆಳಕಳಿದ ಬೆಳಕಿಂಡಿಯಲಿ ನುಗ್ಗಿ,
ಗೋಳಿಡುವ ಅಪಸ್ವರದಂತೆ ಬಿಸುಸುಯ್ಯುತಿದೆ
ಗಾಳಿ, ವೈತಾಳಿ! ಗಿಡಗಂಟಿ ಕೊನ್ನಾರದಲಿ
ಗೂಡು ಕಟ್ಟಿಹ ಹಕ್ಕಿ ರಣಗುಡುವ ಬಿಸಿಲಿನಲಿ
ಗತಕಾಲವನು ಕುರಿತು ಬಿಕ್ಕಿ ಬಡಬಡಿಸುತಿವೆ!
ಕಾರ್ಮೋಡದೊಲು ನುಗ್ಗಿ ಬೇಟೆಯಾಡಿದ ವೈರಿ
ಸೈನ್ಯದಲಿ ಮುಂಗಾರ ಮಿಂಚಿನೊಲು ರಣತೇಜಿ-
ಯನ್ನೇರಿ, ಕಾವೇರಿ, ಆಮಮ! ಚೆನ್ನಮ್ಮಾಜಿ
ತುಡುಕುತಿರಲರರೆ! ಏನಾಯಿತಾಯಿತು ಪಿತೂರಿ!
ಪುಟ್ಟದಿರಲಿನ್ನುಮೀ ನಾಡಿನಲಿ ವಂಚಕರ್,
ನರಕುನ್ನಿ ಪಾತಕರ್, ವಿಶ್ವಾಸ ಘಾತಕರ್!
*****