ಬತ್ತಲಾರದ ಗಂಗೆಗೆಂಥ ಕುತ್ತಿದು, ನೋಡು;
ಅದೇ ಪಾತ್ರ, ಧಾಟಿ, ವಸ್ತುಗಳ ಪಾಳಿ;
ಹೊಸ ನೀರು ಬಂದರೂ ಅದೇ ಪುರಾತನದಮಲು,
ರಂಗಮಂದಿರ ಅದೇ, ನಾಟಕವೂ ಅದೇ.
ಹಿಮಾಲಯವೆ ಕರಗಿ ಕೆಳಗಿಳಿವ ವರ್ಷದ ತೊಡಕು,
ಅಮೃತಜಲ ಮೃತ್ತಿಕೆಗಳಸಮ ಜೋಡಿ;
ನಿಂತು ಹೊಳೆಯುವ ಮಡುಗಳಲ್ಲಿ ಮಡಗಿಯೆ ಇದೆ
ಹಳೆಕೊಳೆಯ ದುರ್ನಾತ ಕೆಸರು ರಾಡಿ.
ಗಂಗಾಳ ತುಂಬ ಗಂಜಿಯನಿಟ್ಟು ಕುಳಿತಿದ್ದಾಳೆ
ಗಂಗಜ್ಜಿ ಅಂಗಾಂಗ ಸುಕ್ಕಿ ಸೊರಗಿ; ೧೦
ಮುಟ್ಟಲಾರಳು ತೊಟ್ಟು, ಕಣ್ಣ ಮುಂದೆ ಕಟ್ಟಿದೆ ಅಲ್ಲಿ
ಕುರಿಕ್ಷೇತ್ರಗಳ ರುಂಡ ರಕ್ತವೇಣಿ.
ಕುರುಕ್ಷೇತ್ರ ಚಾಚುತ್ತಲಿದೆ ದೇಶದುದ್ದಕ್ಕು; ಪಾತ್ರಗಳೇನೊ
ಅವೇ;ಪಾತ್ರಧಾರಿಗಳು ಬೇರೆ, ಬೇರೆ;
ದುರ್ಯೋಧನನಿಗೆ ಯುಧಿಷ್ಠಿರವೇಷ, ಶಕುನಿಯೇ
ಶ್ರೀಕೃಷ್ಣ; ಪಾರ್ಥನ ವೇಷ ಉತ್ತರನಿಗೆ.
ಆಕಾಶಗಂಗೆಯಿಂದನಾಮತ್ತಾಗಿಲ್ಲಿ ಬಿದ್ದವರು,
ಈ ಕಾಶಕ್ಕೆ ಸಿಕ್ಕಿದರೂ ಕಾಸೆಗಟ್ಟಿ
ಕೊಳ್ಳಿದೆವ್ವಗಳಂತೆ ಮಿಂಚಿ ಮರೆಯಾದವರು,
ರಾಮಕೃಷ್ಣರು, ಬುದ್ಧ ಮಹಾವೀರರು. ೨೦
ಕರ್ಪೂರನುಡಿ ಹೊತ್ತಿ ಉರಿದು ಹಿಂದೆಗರಿದರು
ಚಪ್ಪಾಳೆ ಬಿರುಗಾಳಿಯಲೆಗೆ ಸಿಕ್ಕಿ;
ಬದ್ಧರಾದರು ಪುಸ್ತಕಗಳಲ್ಲಿ, ಜಯಂತಿ ಭಜಂತ್ರಿಗಳಲ್ಲಿ
ಅಮೂರ್ತರಾಗಿಯು ಮೂರ್ತಿಯಾಗುಳಿದರು.
ಹೃದಯ ಹೃದಯಗಳಲ್ಲಿ ಹುದುಗಿದಂತರ್ಗಂಗೆ
ತಳಬಿರಿದು ಬಿರುಕು ಬಿಟ್ಟಿರುವ ಧೂಳು;
ದಡದ ಮೇಲಡರಿ ನಿಂತಿದ್ದ ವಿದ್ಯಾರಣ್ಯ
ಬೆಂಗಾಡಾಗಿ ತೋಳ ಭೇತಾಳದೂಳು.
ಬತ್ತಿ ಹೋಗಲಿ ಗಂಗೆಯೊಂದು ಸಲ ತಳ ಬಿರಿದು,
ಕುರುಕ್ಷೇತ್ರ ಜಪಮಾಲೆ ನುಚ್ಚುನೂರು; ೩೦
ಕತ್ತು ಕತ್ತರಿಸಲಿಕ್ಕಲ್ಲ ಆ ಇನ್ನೊಬ್ಬನಿರುವುದು, ಎರಡು
ನದಿಗಳೊಂದಾಗಿ ಮುಂದಕೆ ಸಾಗಲು.
ಗಂಗೆಯಿಲ್ಲದ ಕಾಲದಲ್ಲಿ ತಡೆದುಡುಕಿದ ಭಗೀರಥನ
ಸಂಕಲ್ಪಬಲದ ಅಸಂಖ್ಯಾತರಿಲ್ಲಿ
ಬಂದೆ ಬರುವರು; ದೇವಗಂಗೆಯೆ ನೇರ
ಹೃದಯದಂತರ್ಗಂಗೆ ತುಂಬಿ ಚೆಲ್ಲಿ,
ದಡದಲ್ಲಿ ಮತ್ತೆ ವಿದ್ಯಾರಣ್ಯ ಧರ್ಮಕ್ಷೇತ್ರ
ಚಿಗುರುವುವು ಚಿಗಿಯುವುವು ಮುಗಿಲ ಕಡೆಗೆ;
ಕನಸೆ? ಕಲ್ಪನೆಯೆ? ಇಲ್ಲವಾದರೇನಿದೆ ಇಲ್ಲಿ;
ಕಣ್ಣು ಕೀಳುವ ಸೂಜಿ, ಕೊಲುವ ಬಡಿಗೆ. ೪೦
*****