ಇಲ್ಲೆ ಎದ್ದವರು, ಉದ್ಬುದ್ಧವಾಗಿದ್ದವರು,
ಶಖೆ ಮಳೆಗೆ ಬೆಂದು ಮಿಂದೀಸಿದವರು;
ಆಸ್ಫೋಟಿಸಿತ್ತಿಲ್ಲೆ ಆಕಾಶ ಬಾಣ, ಆ
ಕಾಶಗಂಗೆಯನಿಳಿಸಿ ಜಯಿಸಿದವರು.
ಹೆಬ್ಬಂಡೆಗಳನೆತ್ತಿ ತಂದ ಮುಖ್ಯ ಪ್ರಾಣ,
ಅಲ್ಲಿಗಿಲ್ಲಿಗು ಸೇತು ಕಟ್ಟಿದವರು;
ಚಾಣಕ್ಕೆ ಪ್ರಾಣರಸ ಹರಿಸಿ ಕಲ್ಲುಗಳಲ್ಲಿ
ವಾಸುದೇವನ ವಾಸ ಬಿಚ್ಚಿದವರು.
ಪ್ರಜ್ಞೆಯುರಿ ಬೆಳಕಿಗಜ್ಞಾತ ಸುಪ್ತಪ್ರಜ್ಞೆ
ಯೊಳರಸದ ಚಿಲುಮೆಯಳವಡಿಸಿದವರು; ೧೦
ಆನಂದತೀರ್ಥ ಮಡುಗಟ್ಟಿ ಕಾರಂಜಿಗಳ
ಪುಟಿಸಿ ಗಾರಲ್ಲಿ ಕುಡಿಯೊಡಸಿದವರು.
ಪಾಜಕದಿಂದ ಬದರಿಕೆಯ ವರೆಗೆ ಕಿಚ್ಚಿನ ಕರಗ
ಹೊತ್ತು ನಡೆದಿರಿ, ಹೊತ್ತಿ ಗುಂಭಗಹನ;
ಪುಟಕ್ಕಿಟ್ಟು ಸುಟ್ಟುಸುರಿದವು ವಿಷ್ಣು ಟಂಕೆಗಳು,
ನಿರಾತಂಕವಾಗಿ ವೈಕುಂಠ ಸಂಕ.
ಕೇಳಿದ್ದೆ; ಕಂಡದ್ದು ನೀವು ಕಂಡರಿಸಿದ್ದ
ಕೃಷ್ಣಮಠದಷ್ಟಮಠದಗ್ನಿ ದಿವ್ಯ:
ಒಂಟಿಯಿದ್ದೂ ಎಂಟು ನಂಟಿರುವ ಗ್ಯಾರಂಟಿ
ಗಡು ಮೀರಿ ಕಿರಗುಡುವ ಗೂಢ ಯಂತ್ರ. ೨೦
ಇಲ್ಲಿ ಕಟ್ಟಿಗೆತೇರು ವರ್ಷವರ್ಷಕ್ಕೇರು,
ಅಕ್ಕಿ ಮುಡಿ ಮುಡಿ, ವಾದಿರಾಜಗುಳ್ಳ;
ಪ್ರಾಣಮುಖ್ಯರ ಮುಟ್ಟುಚಟ್ಟು ತೊಟ್ಟಿಗಳಲ್ಲಿ
ನಿಂತ ನೀರಿನ ವಾಸ ಸುತ್ತಲೆಲ್ಲ.
ಅಗ್ನಿಕುಂಡಕ್ಕೆ ಬಿದ್ದೆದ್ದು ಬರುವಪರಂಜಿ
ಗುಂಜಿ; ಹೊಗೆ ಕಷ್ಟಕ್ಕೆ ಸುಗಿವ ಕಿಟ್ಟ;
ಹೂ ಹಸುರು ಮಿಡಿ ಮೊಗ್ಗೆ ಸುಟ್ಟು ಸೀಯುವ ಸೊನೆಗೆ
ಸರೋವರದ ತುಂಬೆಲ್ಲ ಹಸುರು ದಟ್ಟ,
ಧನಕನಕವಸ್ತುವಾಹನದ ಭೋಗದ ಮೇಲೆ
ವಿಷಪೂರಿ ಮಲಗಿರುವ ವಿಕೃತ ಮುದ್ರೆ; ೩೦
ಇಲ್ಲಿ ಸಲ್ಲದ, ಅಲ್ಲು ಕೂಡ ಸಲ್ಲದ ಚಿನ್ನ
ಸವರಿ ಇಟ್ಟಿರುವ ಹಿತ್ತಾಳೆ ಟಂಕೆ.
ವರ್ಣಾಶ್ರಾಮದ ಸ್ಥಿರೆಯ ಮೇಲೆ ಕಟ್ಟಿದ್ದ ಮಠ
ದ್ವೀಪವಾಗಿದೆ; ಮಣ್ಣು ಕುಸಿಯುತ್ತಿದೆ;
ಉಲ್ಲೋಲ ಕಲ್ಲೋಲ ಕಡಲ ಕೊರೆತಕ್ಕೆ ಯಾವ
ತಡೆ? ಗಳಿಗೆಬಟ್ಟಲೋ ಮುಳುಗುತ್ತಿದೆ.
ನಿಮ್ಮ, ನಿಮ್ಮಂಥವರ ಕಾದು ಕುಳಿತಿದೆ ತೀರ
ದಾಸೆ, ಲಾಂಚುಗಳಲ್ಲಿ ತುಯ್ಯುತ್ತಿದೆ.
ಬನ್ನಿ; ಕಾಲತಾಳಕ್ಕೆ ಸರಿದೊರೆ ಕಟ್ಟಿ.
ತನ್ನಿ ಕಮ್ಮಟ, ಚಾಣ, ಟಂಕಸಾಲೆ ೪೦
*****
ಜನವರಿ ೧೯೬೯