ಮುಖದ ಎಡಬಲಕ್ಕೆರಡು ಚೂಪಾದ ಚಿಮುಟ
ಬಾಲಕ್ಕೆ ವಿಷದ ಮುತ್ತನ್ನೆತ್ತಿ ಮೆರೆಯುವ ಕೊಂಡಿ.
ಮೆಲ್ಲಗೆ ಗೋಡೆ ಬದಿ ಹಿಡಿದು ಹೊರಟಾಗ
ತಟ್ಟನೆ ಕಂಡು ಮೆಟ್ಟಿ ಬೀಳುತ್ತೇವೆ.
ಈ ಭಯೋತ್ಪಾದಕನೆಲ್ಲಿ ಅಡಗಿದ್ದ?
(ಶಿಲಾಬಾಲಿಕೆಯ ಸೀರೆಯ ನಿರಿಗೆಯಲ್ಲೀ ಇದ್ದ.)
ಜಂತಿಯಿಂದ ಲೊಟ್ಟನೆ ಬಿದ್ದಾಗ, ಅವ್ವ
ದೀಪಹಚ್ಚಿ ಹುಡುಕಿ, ಪಟ್ಟನೆ ಹಿಡಿದು ಗತಿಗಾಣಿಸಿದ್ದು
ನೆನಪಿನ ಕೊಂಡಿಯಲ್ಲಿ ಜೀವಂತವಿದೆ.
ಸುತ್ತಿಟ್ಟ ಗಾದಿ, ಬಿಚ್ಚಿ ಹಾಸಿರುವ ಜಮಖಾನೆ
ಮಾಡಿನಲ್ಲಿ ಬಿಟ್ಟ ಚಪ್ಪಲಿ, ಬೂಟಿನೊಳಗೆ
ಕಲ್ಲು, ದಿಮ್ಮಿಗಳ ಬುಡದಲ್ಲಿ, ಇಲ್ಲ ಗುದ್ದಿನೊಳಗೆ.
ಇರುಳು ಹೊರಬಿದ್ದು ಮೆಲ್ಲಗೆ ನುಸುಳಿ
ಹುಳು-ಹುಪ್ಪಡಿಯ ಬೇಟೆ.
ಸಂದಿಗೊಂದಿಗಳೆ ತಂಗುದಾಣ.
ತುಳಿದರೆ ಇರುವೆಯೂ ಕಚ್ಚುವುದು, ಚೇಳು
ಬಿಡುವುದೆ ಹೇಳು?
ಗುರಿಯಿಟ್ಟು ಹೊರಟಿರದಿದ್ದರೂ
ತಡವಿದರೆ, ಅಡ್ಡದಾರಿಗೆ ಬಿದ್ದು ಎಡವಿದರೆ
ಆತ್ಮರಕ್ಷಣೆಯ ಗಡಿಯಲ್ಲಿ
ಹಿಂಸೆಗೆ ಪ್ರಚೋದನೆ.
ವಂಶ ಬೆಳೆಸುವ ಇಚ್ಛೆಗಾವ ಪ್ರಾಣಿಯೂ ಹೊರತಲ್ಲ.
ಗಂಡು-ಹೆಣ್ಣು ಕೈ ಹಿಡಿದು ಕುಣಿದು
ಕೊಂಡಿ ಕೊಂಡಿಗೆ ಹೆಣೆದು
ತಿರುಗಿ ತಿರುಗಣಿಯಂತೆ, ಕೊನೆಗೊಂದು ತಿರುವಿನಲಿ
ಗಂಡು,ಹೆಣ್ಣಿಗೆ ಭಕ್ಷ್ಯವಾಗುವುದಕ್ಕೆ
ಸಾಕ್ಷಿಯುಂಟು.
ಪ್ರಣಯ ನೃತ್ಯದ ಕ್ರೂರಕೃತ್ಯಕ್ಕೆ ಮುಂದೆ
ತಾಯ್ತನದ ಸಂಭ್ರಮ.
ಮಿದುವಾದ ಮರಿಗಳನ್ನೆಲ್ಲ ಬೆನ್ನಿನ ಮೇಲೆ ಹೊತ್ತು
ಹೊರೆಯುವದು, ಇಳಿದು ಓಡಾಡುವರೆಗೆ
‘ಚೇಳಿಗೊಂದೇ ಬಸಿರು’ ಇರಬಹುದು-
‘ಊರದ ಚೇಳು, ಏರದ ಬೇನೆಯಲ್ಲಿ
ಮೂರು ಲೋಕ ನರಳುವುದು’ ಬರಿಯ ಬೆಡಗೆ?
*****