ನನ್ನ ಮದುವೆಗೆ ಮುಂಚೆ
ಹತ್ತಾರು ಹೆಣ್ಣುಗಳ ನೋಡಿ ನಮ್ಮಮ್ಮ
ಒಬ್ಬೊಬ್ಬರನೂ ತನ್ನ ಒಪ್ಪಿಗೆಯಲ್ಲಿ ಒರೆಯಲ್ಲಿ ಅರೆದು
ಅವಳು ಹಾಗೆ ಅವಳು ಹೀಗೆ
ಆಕೆಗಿಂತ ವಾಸಿ ಕಾಗೆ
ಈಕೆ ಎಲ್ಲ ಸರಿ ಆದರೆ ಉದ್ದ ನಾಲಗೆ
ಒಬ್ಬಾಕೆ ಲಂಕಿಣಿ
ಇನ್ನೊಬ್ಬಾಕೆ ಜಿರಾಫಿಣಿ
ಒಬ್ಬಳು ನಿಂತರೆ ಬೆದರು ಬೊಂಬೆಯ ತರಹ
ಇನ್ನೊಬ್ಬಳ ಹಲ್ಲು ಮಕ್ಕಳ ಬರಹ
ಎಂದೆಲ್ಲರಿಗೂ ಹಚ್ಚಿ ಬಿರುದು
ಬಹಳ ದಿನ ಅವಿವಾಹಿತನಾಗಿಯೇ ಉಳಿದೆ;
ಅಮ್ಮನನ್ನು ಮನಸಾರೆ ಹಳಿದೆ.
ಅಮ್ಮ ಕಟ್ಟಾ ಸಂಪ್ರದಾಯಸ್ಥೆ
ಖುರಾನು ನಮಾಜು ರಂಜಾನಿನ ಉಪವಾಸ
ಧಾರ್ಮಿಕಾಚಾರಗಳಲ್ಲಿ ಹೇಳತೀರದ ಆಸೆ.
ಬುರ್ಖಾ ತೊಡದೆ ಬೀದಿಯಲಿ ಹಾದು ಹೋಗುವ ನಮ್ಮವರ
ಹೆಣ್ಣುಗಳ ಕಂಡು ಕಿಡಿಕಿಡಿಯಾಗಿ-
ಹೆಚ್ಚು ಕಲಿತ ಬಜಾರಿಗಳ ಹಣೆಬರಹವೇ ಇಷ್ಟು
ದೇವರು ಧರ್ಮಗಳ ಭಯವಿರದೆ ಎಳ್ಳಷ್ಟೂ
ಗಂಡಸರೆದುರು ಮೈ ಪ್ರದರ್ಶಿಸುವ ಗಂಡು
ಬೀರಿಗಳು ಗಂದಂದಿರ ಜೊತೆ ಬಾಳಿಯಾರೇ?
ಇಂಥವರನ್ನ ನನ್ನ ಮಗನಿಗೆಂದೂ ತಾರೆ
ನೆಂದು ಪ್ರತಿಜ್ಞಿ-
ಸದಾ ಬುರ್ಖಾ ತೊಡುವ ಕರಡಿಯನ್ನ
ಆಧುನಿಕ ವಿದ್ಯಮಾನಗಳ ಕಂಡರಿಯದ ಕುರುಡಿಯನ್ನ
ಹಳ್ಳಿ ಮೊದ್ದನ್ನ ಮೆಚ್ಚಿ
ನನ್ನ ಕೇಳಿದಾಗ , ನಾನೋ ಬೆಚ್ಚಿ
ಖುದ್ದಾಗಿ ನೋಡಿ ಒಪ್ಪಿದ ವಿದ್ಯಾವಂತೆಯ
ಕೈ ಹಿಡಿವೆನೆಂದಾಗ
“ಓದಿದವರು ಹಾಳಾಗ
ನಾನೇನು ಓದಿದ್ದೆನೊ ಪೆದ್ದ?
ಮದುವೆಗೆ ಮುಂಚೆ ಹುಡುಗ
ಹೆಣ್ಣ ನೋಡುವುದು ಧರ್ಮ ನಿಷಿದ್ಧ
ನಾವೆಲ್ಲ ಕಣ್ಣು ಮುಚ್ಚಿ ಹೆಣ್ಣ ಮೆಚ್ಚಿ ಗಂಟು ಹಾಕುವೆವೆ?”
ಎಂದು ಬಾಯಿ ಮುಚ್ಚಿಸಿದಳು.
ಅಪ್ಪ ಉದಾರಿ
“ಮಗ ತಾನೇ ಆರಿಸಿಕೊಳ್ಳಲಿ ಭವಿಷ್ಯದ ದಾರಿ
ಹೆತ್ತವರು ನಾವೇಕೆ ಆಗುವುದು ತಡೆ
ಆ ಯೋಚನೆಯ ಬಿಟ್ಟುಬಿಡೆ”
ಎಂದು ಎಚ್ಚರಿಸಿದಾಗ
ಅಮ್ಮ ಅನ್ನ ನೀರು ಬಿಟ್ಟು ಗಳ ಗಳ ಅತ್ತು
ಉರಲು ಬೆಂಕಿ ಬಾವಿಗಳ ಉಚ್ಚರಿಸಿದಾಗ
ತೆಪ್ಪಗಾದೆ.
ಅಪ್ಪ ಲೋಕ ಕಂಡವರು-ಹಾಗೇ ಅಮ್ಮನ
ಕೋಪ ಹಟ ಕಂಡವರು
ವಿಪರೀತಕ್ಕೆ ಬಂತು ತಗಾದೆ
ಎನಿಸಿ ಮುಂದೆನೂ ತೋಚದೆ “ನಿನ್ನಿಷ್ಟ”ವೆಂದರು,
ರಾತ್ರಿಯೆಲ್ಲ ಕೋಣೆಯ ದೀಪವುರಿಸಿ ಸಿಗರೇಟು ಹಚ್ಚಿ
ಶತಪಥಿಸಿ ಒಳಗೊಳಗೇ ನೊಂದರು.
ಒಂದು ದಿನ ಅಮ್ಮನಿಗೆ ಜ್ಞಾನೋದಯ
ವಾಯಿತೆಂದೆನ್ನಿಸಿ, ಊಟಕ್ಕೆ ಕುಳಿತಿದ್ದಾಗ
“ನಿನ್ನಿಷ್ಟದಂತೆ ಓದಿದವಳನೇ ಮದುವೆಯಾಗಪ್ಪ”
ಎಂದಾಗ ಅಪನಂಬಿಕೆಯೊಂದಿಗೆ ಅಚ್ಚರಿ
ಯೊಂದಿಗೆ ಖುಷಿಯೊಂದಿಗೆ ಭಯ
ಬೆಳೆದು ಕೈತೊಳೆದು ಎದ್ದೆ ಬೇಗ.
ಆ ಡಬಲ್ ಪದವೀಧರೆಯ ಭಾವಚಿತ್ರವನ್ನ
ಇಡೀ ದಿನ ನೆಟ್ಟು ಕಣ್ಣ
ತೂಗಿ ಅಳೆದು
ವಿಳಾಸ ತಿಳಿದು ಹತ್ತಿರದಲ್ಲೇ ಕಂಡು ಮೆಚ್ಚಿ
ನಿಶ್ಚಿತಾರ್ಥ ಶಾಸ್ತ್ರ ಮದುವೆ ಎಲ್ಲ ಮುಗಿಯಿತು;
ಮನಸ್ಸು ಅಮ್ಮನಿಗೆ ಮೌನದಲ್ಲೇ ಕೈ ಮುಗಿಯಿತು.
ಮೊದಲ ಸಲ ತಿರುಗಾಡಲು ಹೊರಟಾಗ
ನನ್ನಾಕೆ ತೋಳಿಲ್ಲದ ರವಿಕೆಯುಟ್ಟು
ಭಾರೀ ಸೀರೆಯನ್ನ ಸೊಂಟದ ಕೆಳಗೆ ನಾಜೂಕಾಗಿ ಕಟ್ಟಿ
ಕಾಲಿಗೆ ಹೈಹೀಲ್ಡು ಕೆರ
ಕೊರಳಿಗೆ ಚಿನ್ನದ ಸರ
ಕಿವಿಗೆ ಬೆರಳಿಗೆ ಉಂಗುರ ತೊಟ್ಟು
ಲಿಪ್‌ಸ್ಟಿಕ್ಕು ಪೌಡರು ರೂಜು ಬಳಿದು ದೃಷ್ಟಿ ಬೊಟ್ಟಿಟ್ಟು
ಹೆರಳ ಗೋಪುರದಲ್ಲಿ ಕೂದಲು ಬಿಗಿದು
ಎಡ ಬೈತೆಲೆ ತೆಗೆದು
ಇವೆಲ್ಲವನ್ನೂ ಮೀರಿಸುವ ಮುಗುಳ್ನಗೆ ತೀಡಿ
ಹೊಸಿಲ ಇನ್ನೇನು ದಾಟಬೇಕು-ಆಗ
“ಬಂದೆ ತಡೆಯಿರಿ”-ಎಂದು ಒಳಗೋಡಿ
ಬಂದು”ನಡೆಯಿರಿ”ಎಂದಾಗ
ತಲೆ ಸುತ್ತಿ ನಾಲಿಗೆ ಬತ್ತಿ ನಾನಾದೆ ಮೂಕ;
ನೋಡಿದರೆ
ಉಟ್ಟಿದ್ದಳು ನಮ್ಮಮ್ಮನ ಬುರ್ಖಾ.
*****
(ಸಂಜೆ ಐದರ ಮಳೆ-೧೯೭೦)