“ಹಿಂದಿನಳಲ ಮರೆತುಬಿಡು
ಇಂದು ಅಡಿಯ ಮುಂದಕಿಡು
ಇಡು, ಇಡು ಇಟ್ಟು ಬಿಡೂ”
ಎನುತ ಗಾಡಿ ಓಡುತಿಹುದು ಓಡುತಿಹುದು ಮುಂದಕ
ಮುಂದಕಿಟ್ಟ ಹೆಜ್ಜೆಯಿನಿತು ಸರಿಸದಂತೆ ಹಿಂದಕೆ!
ತಂತಿ ಕಂಬ
ಗಿಡದ ಸಾಲು
ದಾಟಿ ನುಗ್ಗುತಿಹುದು ರೈಲು
ದಾರಿ ಸವೆಯೆ ಮೈಲು ಮೈಲು
ಕಣ್ಗೆ ತಂಪನೀಯುತಿಹುದು ಹಸುರು ಹುಲ್ಲುಗಾವಲು
ಮೋಹವೆರಚಿ ಬಿಸಿಲ್ಗುದುರೆ ಕುಣಿಯುತಿರಲು ಸುತ್ತಲು,
ಅಲ್ಲಿ ಮೇವ ದನದ ಹಿಂಡು
ಓಡಿ ಬರುವ ಗಾಡಿ ಕಂಡು
ಮೃತ್ಯು ಕುಣಿದು ಬಂದಿತೆಂದು ಚಂಗನೆದ್ದು ನಗೆದಿವೆ!
ದೂರದಲ್ಲಿ ಶೈಲ ಶಿಖರ
ಬುಗುರಿಯಂತೆ ತಿರುಗಿದೆ;
ಅದರ ಮೇಲೆ ನೆಳಲು ಬಿಸಿಲ ಕೈಯ ಹಿಡಿದು ಸಾಗಿದೆ.
ಕವಿಯ ಭಾವ ಕಾವುಗೊಂಡು
ಕವಿತೆಯಲ್ಲಿ ಮುಕ್ತಿ ಪಡೆದು
ಶಾಂತ ನಿದ್ರೆಗೈಯುವಂತೆ ಮೋಡ ಹಾಗೆ ತೇಲಿದೆ.
ದುಡುಂ ದುಡುಂ
ಬೀಳ್ದೊಡಂ
ಗಾಳಿ ಮಳೆಯು ಪೊಯ್ದೊಡಂ
ನೆಲವನಗಿದು ಬಗಿಯುವಂತೆ
ಬೃಹದ್ ಬಯಲು ಬಿರಿಯುವಂತೆ
ಕ್ಷಿತಿಜದಂಚನಿರಿಯುವಂತೆ
ಬಿಡುಗಡೆಗೆದೆ ತುಡಿಯುವಂತೆ
ಕಿಡಿ ಕಿಡಿ ಕಿಡಿ ಕಾರುತ!
ಸಿಡಿ ಸಿಡಿ ಸಿಡಿದೇಳುತ!
ರೈಲು ಯಂತ್ರ ಕ್ರಾಂತಿ ಮಂತ್ರ ಘೋಷಿಸುತ್ತ ಸಾಗಿದೆ!
ತನ್ನ ಬೆನ್ನು ಬಿದ್ದ ಜನಕೆ ಅಭಯ ಹಸ್ತ ನೀಡಿದೆ.
ಲೋಹದೆರಡು ಹಳಿಗಳುದ್ದ
ಗಾಲಿಯುರುಳಿ ಉರುಳುತಿರಲು
ನೆಲದ ಎದೆಯು ನಡುಗುತಿರಲು
ನಿಮಿಷಕೊಂದು ನೂರು ಹೆಜ್ಜೆ
ಇಡುವಕಾಂಡ ತಾಂಡವ!
ಮೂರ್ತಿವೆತ್ತ ಭೈರವ!
ದಿಕ್ತಟಗಳ ಬಿರಿಸುತಿಹುದು ಇದರ ರೌದ್ರ ಆರವ!
ಗುರಿಯ ನೇರ ದಾರಿಗುಂಟ
ನುಗ್ಗುತಿಹನು ರೈಲು ಬಂಟ
ದುಡಿಮೆ ದುಡಿಮೆ ದುಡಿಮೆಯೆಂದು
ಹೊಟ್ಟೆ ಹೊಟ್ಟೆ ಬಡಿದುಕೊಂಡು
ಕಲ್ಲಿದ್ದಲಿ ನುಂಗಿಕೊಂಡು
ನಿಟ್ಟುಸಿರಿನ ಕರ್ಬೊಗೆಯದು ಕಾಳೋರಗವಾಗಿರೆ
ತಿದಿಯೊತ್ತುತ ಪೂತ್ಕರಿಸುತ ಗಾಳಿಯ ಮೇಲ್ವಾಯ್ದಿರೆ
ಸಿಡಿಗುಂಡಿನ ಸೇಡಿನಂತೆ
ಬಿಲ್ಜಾಣನ ಬಾಣದಂತೆ
ರೈಲುಬಂಟನೋಡುತಿಹನು ಓಡುತಿಹನು ಮುಂದಕೆ
ಕರ್ತವ್ಯದ ಭಾರವಿಳಿಸೆ ನಿಲ್ದಾಣದ ಸನಿಹಕೆ
ನಾವು ನೀವು ಅಗಲಿ ಕೂಡಿ ಅತ್ತು ನಗುವ ತಾಣಕ್ಕೆ!
*****