ಉಲೂಪಿ ನೀ ಕೊಟ್ಟ ಗುಲಾಬಿ ಬತ್ತಿ ಎಷ್ಟೋ ದಿವಸ-
ಕೈಗಿನ್ನೂ ಹತ್ತಿದಂತಿರುವ ನಿನ್ನ ಮೈ ಬಿಸಿ ಮೃದುತ್ವ
ರೇಶಿಮೆಯ ನುಣುಪನ್ನು
ಉಲೂಪಿ, ನಿನ್ನ ತರಿತರಿ ಮೈಯ ಸದಾಪು ವಾಸನೆಯನ್ನು
ಮರೆಯಲಾರೆ.
ಮಲಗಿದ್ದಾರೆ ಸುಭದ್ರೆ ಅಭಿಮನ್ಯು. ಅವನಿಗೆ ಐದು ತುಂಬಿತು
ಮೊನ್ನೆ, ಬೆಳಕಿಂಡಿಯಿಂದಿಣುಕಿ ಸಪ್ತಮಿ ಚಂದ್ರ
ನೆನಪು ಬೆಳದಿಂಗಳನು ಸುರಿಸಿ ನಗುತ್ತುದ್ದಾನೆ, ನಿನ್ನ ಕಾಗಗದಂತೆ-
“ನಿನಗೇನು ಕಡಿಮೆ, ದ್ರೌಪತಿಯ, ಪ್ರಮೀಳೆಯ, ಚಿತ್ರಾಂಗದೆಯ
ಸುಭದ್ರೆಯ, ಊರ್ವಶಿಯ ಪ್ರೀತಿಯಿದೆ”ಯೆಂದು ಕೆಣಕಿದ್ದಾನೆ.
ನಿನಗೆ ಗೊತ್ತಿಲ್ಲ ಉಲೂಪಿ-
ಸುಭದ್ರೆ ಜೊತೆಗಿದ್ದಾಗ ಪಕ್ಕದಲ್ಲಿದ್ದುದು ಕೃಷ್ಣನೆಂದೇ ಅನಿಸಿ
ದ್ರೌಪತಿಯ ಜೊತೆಗಿದ್ದಾಗ ಅಣ್ಣಂದಿರೊಂದು ಕಡೆಯಿಂದ
ತಮ್ಮಂದಿರಿನ್ನೊಂದು ಕಡೆಯಿಂದ ಅವಳ ಮೈಯಿಂದ ಹೊರಬಂದಂತೆ
ಕಸಿವಿಸಿಯಾಗಿ, ಚಿತ್ರಾಂಗದೆಯ ಸೆರಗು ಬಭ್ರುವಾಹನನಾಗಿ ಇನ್ನು
ಪ್ರಮೀಳೆಯೇ ಗಂಡಸಿನಂತೆ ಮೈಮೇಲೆ ಬೀಳುವಳು.
ಬಾರೆ ಉಲೂಪಿ ಕಾಗದದಲ್ಲೆ ಮೂದಲಿಸಿ
ಕೃಷ್ಣ ಪಕ್ಷಕ್ಕಿನ್ನು ನೂಕಬೇಡ. ನಿನ್ನ ದಪ್ಪನೆಯ
ಕೆಂಪು ಕೆಳದುಟಿಗಿಂತ ಸ್ವರ್ಗಲೋಕದ ಯಾವ ಅಪ್ಸರೆಯು ಬೇಡ
ನಿನ್ನಂತೆ ಮೈಮರೆಸುವವರನ್ನು-ನನ್ನಾಣೆ ಕಂಡಿಲ್ಲ
ಬಾರೆ, ಉಲೂಪಿ
ನಿನ್ನ ತರಿತರಿ ಮೈಯ ಸದಾಪು ವಾಸನೆಯನ್ನು ಮರೆಯಲಾರೆ.
*****
(ಕಪ್ಪುದೇವತೆ-೧೯೭೧)