– ೧ –
ಬಹಳ ದಿನಗಳ ಬಳಿಕ ಅಚಾನಕ ಸಿಕ್ಕಿದರು ಎಚ್ಚೆನ್
ಸಂಜೆ ಕೆಂಪು ತೋಟದಲ್ಲಿಂದು;
ಮಳೆ ಬಂದು ಇಳೆ ಮಿಂದು
ಮಡಿಯಾಗಿ ಮೈ ಮೆರೆಸಿತ್ತು
ಸುತ್ತಮುತ್ತಲಿನಚ್ಚ ಹಸಿರು ದುಂದು.
ಲಾಗಾಯ್ತಿನಂದವರಿಗೆ ನನ್ನ ಬಗೆಗೆ ಅಮಿತ ಕಕ್ಕುಲತೆ:
“ಬೆಳಿಗ್ಗೆಯಷ್ಟೇ ಭಾಷಣದಲ್ಲಿ ಉದ್ಧರಿಸಿದೆ ನಿಮ್ಮ ಕವಿತೆ”
ಎಂದರು. ಏನೊ ಹೊಳೆದಂತೆ ಗಹಗಹಿಸಿ ಮಾತು ಮುಂದುವರಿಸಿದರು:
“ಇಲ್ಲಿನೊಂದೊಂದು ಮರ ಗಿಡ ಬಳ್ಳಿ ನನಗೆ ಪರಿಚಯವುಂಟು,
ಇವಕು ನನಗು ಮೂವತ್ತೆಂಟು ವರ್ಷಗಳ ದೀರ್ಘ ನಂಟು.
ಮುಂಜಾನೆ ಪ್ರತಿನಿತ್ಯ ಇಲ್ಲಿ ವಾಕಿಂಗ್ ಬರುತ್ತಿದ್ದ ರೂಢಿ
ಅಸ್ವಸ್ಥತೆಯ ನಿಮಿತ್ತ ಕೆಲ ಸಮಯದಿಂದ ತಪ್ಪಿತ್ತು ನೋಡಿ,
ಅದರಿಂದ: ‘ಈಚೆಗೇಕೋ ಮುದುಕ ಪಾದ ಬೆಳಸಿಲ್ಲವೀ ಎಡೆಗೆ,
ಗೊಟಕ್ಕೆಂದು ಪಯಣಿಸಿದನೋ ಹೇಗೆ ಮೇಲುಗಡೆಗೆ?’
ಎನುವ ಈ ತರು ಲತೆಗಳನುಮಾನ ನೀಗಲಿಕೆಂದೇ,
ಮಳೆಯಿದ್ದರೂ ಈ ಸಂಜೆ ಇಲ್ಲಿಗೆ ಬಂದೆ”
ಎನ್ನುತ್ತ, ನೆನಪುಗಳ ತೋಳ್ತೆಕ್ಕೆಗೆ ಸಂದರು;
ಹೌದೆಂಬಂತೆ ತೆಳ್ಳನೆಯ ಸುಯ್ಗಾಳಿ ಬೀಸಿ,
ಬದಿಯ ವೃಕ್ಷದಿಂದುದುರಿದಾಕಾಶ ಮಲ್ಲಿಗೆ ಬೆಳ್ನಗೆ ಸೂಸಿ,
ಅಡಿಯ ನೆಲ ಪೂರ್ತಿ ಕಣ್ಸೊಗದ ಬಂದರು.
– ೨ –
ಪಾಠ ಹೇಳದಿದ್ದರೂ ನನಗಿವರು ಕಾಲೇಜಿನಲ್ಲಿ
ಎಲ್ಲರ ಹಾಗೆ ನನ್ನ ಪಾಲಿಗು ಮೇಷ್ಟ್ರೆ.
(ಇವರು ಬರುವುದ ಕಂಡು ಹಿಂದೆ ಸಿಗರೇಟನಾರಿಸಿ,
ದೂರ ಸರಿಸಿದ್ದುಂಟು ಆಷ್ ಟ್ರೆ.)
ಮಾನಾಭಿಮಾನಗಳ ಪ್ರಶ್ನೆಯೆದುರಾದಾಗ
ಮಾಡಿಕೊಂಡಿದ್ದಿಲ್ಲ ಬಿಲ್‌ಕುಲ್ ರಾಜಿ,
ಹಲವು ಪೊಗದಸ್ತು ಹುದ್ದೆಗಳ ಈ ಮಾಜಿ.
ಹಗೆಯೇ, ಹಿರಿಯರೊ ಕಿರಿಯರೊ ಭೇದವೆಣಿಸದೆ,
ಅಂತಸ್ತು ಕುಲ ಆಚಾರ ಕಿಂಚಿತ್ತು ಗಣಿಸದೆ-
ಕಂಡಿತೇ ಅವರಲ್ಲಿ ಕನದಷ್ಟು ಗುಣ,
ಹೊಗಳಿಕೆಯ ಹತ್ತು ಮಣ
ಹೊರಿಸಿದಲ್ಲದೆ ತಣಿವ ಕುಳವಲ್ಲ ಈ ಪರ ಹಿತೈಷಿ;
ಅದಕಿಲ್ಲವೇ ನಾನೆ ಜ್ವಲಂತ ಸಾಕ್ಷಿ?
– ೩ –
ಇದೆಲ್ಲ ಒತ್ತಟ್ಟಿಗಿರಲಿ,
ಲಾಲ್‌ಬಾಗಿಗೆ ಬರೋಣ ಮರಳಿ.
ಗಾದಿಗೆಂದೂ ತಾನೆ ಮುಂದಗಿ ಚಿತಾವಣಿಸಿದ ಗಾಂಧಿಯನುಮೋದಿ,
ಷಾದಿಯಾಗದ ಈ ವಿಚಾರಪೂಜಕ ‘ನಿರೀಶ್ವರವಾದಿ’,
ದೈವಸೃಷ್ಟಿಯ ವಿವಿಧ ತರು ಸಂತತಿಯ ಚೆಲ್ವಿಕೆಗೆ
ಮನ ಸೋತು ಮೋಹಗೊಂಡಿರುವಮೋಘ ಪರಿ
ಬರಿಸುವುದು ಸಂಸಾರಿ ಆಸ್ತಿಕರಿಗೂ ಮಹದಚ್ಚರಿ.
ಜಂಗುಳಿಯಲ್ಲಿ ಗುರುತಿಸದಷ್ಟು ಸರಳ ಖಾದಿವ್ರತಸ್ಥ ಎಚ್ಚೆನ್
ಮತ್ತವರ ಬದುಕು ಸದಾ ಕಾಲಕ್ಕು ದೊಡ್ಡ ಕ್ವೆಷ್ಚನ್.
*****
ಕೀಲಿಕರಣ: ಶ್ರೀನಿವಾಸ