ವಿಷ್ಣು: ವಿಷ್ಣುಗೀಗ ಎಲ್ಲೆಡೆ ಡಿಮ್ಯಾಂಡಪ್ಪೊ ಡಿಮ್ಯಾಂಡು
ನಿರ್ಮಾಪಕರ ಪಾಲಿಗೆ ವಿಷ್ಣು ಹೈಕಮಾಂಡು
ವಿಷ್ಣು ಎಲ್ಲೇ ಹೋದರೂ ಈಗ
ಜನ ಜನ ಜನ
ನಿರ್ದೇಶಕರ ಕ್ಯೂ ಕೂಡಾ ಹೆಚ್ಚಿದೆ
ದಿನಾ ದಿನಾ ದಿನಾ
ಇತಿಹಾಸ: ಯಜಮಾನ ‘ವಾನತ್ತ ಪೋಲಾ’ ಚಿತ್ರದ ರೀಮೇಕ್ ಎಂಬುದು ನಿಜ. ತಮಿಳು ಹಾಡುಗಳ ಕನ್ನಡ ಅವತರಣಿಕೆ ನಿಜ. ಟ್ಯೂನ್ ಸಹಾ ಜೆರಾಕ್ಸ್ ಕಾಪಿ ನಿಜ. ಆದರೂ ವಿಕ್ರಮ್‌ನ ಅವರ ಒಟ್ಟು ಕುಟುಂಬದ ಕಥೆಯನ್ನು ಕನ್ನಡದ ಜನ ಬಹು ಇಷ್ಟಪಟ್ಟು ‘ವಿಷ್ಣು’ಗೆ ಜಯಕಾರ ಹಾಕಿದ್ದಾರೆ. ಚಿತ್ರ ನೂರೆಪ್ಪತ್ತೈದು ದಿನ ಓಡಿ ಚಿತ್ರ ಚರಿತ್ರೆಯಲ್ಲೇ ಒಂದು ಇತಿಹಾಸ ಸೃಷ್ಟಿಸಿದೆ.
ರೆಹಮಾನ್: ಈ ಯಶಸ್ಸಿನ ಅಮಲು ತಲೆಗೇರಿರುವುದು ವಿಷ್ಣುವರ್ಧನ್‌ಗಲ್ಲ ನಿರ್ಮಾಪಕ ರೆಹಮಾನ್‌ಗೆ. ಹುಚ್ಚನೂ ಹೀಗೆ ಗೆಲ್ಲುವನೆಂದು ಕನಸು ಕಾಣುತ್ತಿರುವ ರೆಹಮಾನ್ ಈಗ ತಾವೇನು ಮಾಡಿದರೂ ಜನ ಅದನ್ನು ಒಪ್ಪುತ್ತಾರೆ ಎಂಬ ಭ್ರಮೆಯಿಂದ ‘ಹಾಲಪ್ಪ’ ಈಗ ಬಿಡುಗಡೆ ಮಾಡಿ ‘ಮುಂದೇನಪ್ಪ’ ಎನ್ನುವ ಸ್ಥಿತಿ ತಂದುಕೊಂಡಿದ್ದಾರೆ.
ಸಿಲ್ವರ್ ಜ್ಯುಬಿಲಿ: ಯಜಮಾನದ ಸಂಭ್ರಮ ಉಣಬಡಿಸಲು ಕಂಠೀರವ ಸ್ಟೇಡಿಯಮ್ ಒಳಾಂಗಣದಲ್ಲಿ ವೈಬವೋಪೇತ ಕಾರ್ಯಕ್ರಮವೊಂದು ರೂಪಿಸಿದ್ದರು ರೆಹಮಾನ್, ಆ ಕಾರ್ಯಕ್ರಮ ‘ನಭೂತೋ’ ಎನುವಂತಿರಬೇಕು ಎಂಬುದು ವಿಷ್ಣು ಆಶಯವಾಗಿತ್ತು. ಅದಕ್ಕೆ ನಾಯಕ ಅತೀವ ಕಾಳಜಿವಹಿಸಿದ್ದು ನಿಜ. ಅದನ್ನೊಂದು ಅಭೂತಪೂರ್ವ ಈವೆಂಟ್ ಆಗಿಸಲು ಮಧು ಬಂಗಾರಪ್ಪ ಸಹಾ ತಮ್ಮ ಕ್ರಿಯೇಟಿವಿಟಿಗೆ ಇದೊಂದು ಚಾಲೆಂಜ್’ ಎಂದು ಸ್ವೀಕರಿಸಿ ವೇದಿಕೆ, ಬೆಳಕು ವಿನ್ಯಾಸ ‘ಆಹಾ’ ಎನ್ನುವಂತೆ ಮಾಡಿದ್ದರು. ರೆಹಮಾನರ ಬೇಜವಾಬ್ದಾರಿತನದಿಂದಾಗಿ ಇಡೀ ಕಾರ್ಯಕ್ರಮ ಹೊಳೆಯಲ್ಲಿ ಹುಣಸೇಹಣ್ಣು ಕಿವಿಚಿದಂತಾಗಿ ಇಡೀ ಕಾರ್ಯಕ್ರಮ ವ್ಯವಸ್ಥೆ ಒಂದು ಕಪ್ಪು ಚುಕ್ಕೆಯಾಯಿತು.
ಪತ್ರಕರ್ತರಿಗೆ ಪೆಟ್ಟು: ಪೊಲೀಸರ ದಬ್ಬಾಳಿಕೆಗೆ ಪತ್ರಕರ್ತರು ಬಲಿಯಾದರು ಲಾಠಿ ಏಟು ತಿಂದರು.
‘ಹೋಗಾಚೆ’ ಎಂದು ಗದರಿಸಿಕೊಳ್ಳಬೇಕಾದ ಪ್ರಸಂಗ ಬಂತು. ಪ್ರಕರ್ತರಿಗೆ ಮೀಸಲಾದ ಕುರ್ಚಿಗಳಲ್ಲಿ ಮೀಸೆ ಬಂದವರು, ಮೀಸೆ ಇನ್ನೂ ಚಿಗುರಿಲ್ಲದಿದ್ದವರು, ರಫ್ ಅಂಡ್ ಟಫ್ ಗಡ್ಡ ಬಿಟ್ಟ ರೌಡಿ ಗ್ಯಾಂಗಿನ ಪಡ್ಡೆ ಹುಡುಗರು, ಹೆಂಗಸರು ಮಕ್ಕಳು ಮಧ್ಯಾಹ್ನವೇ ಬಂದು ಕುರ್ಚಿಗಳನ್ನು ಆಕ್ರಮಿಸಿದ್ದರು.
ನಾವು ಪತ್ರಕರ್ತರು ಎಂದವರಿಗೆ ಪೊಲೀಸರು ‘ನಿಮ್ಮ ಕೆಲಸ ಬರೆಯೋದು. ನಮ್ಮ ಕೆಲಸ ಲಾಠಿ ತಿರುಗಿಸುವುದು’ ಎಂದು ಮೀಸೆ ತಿರುವಿದರು.
‘ಇದೇನ್ರಿ ರೆಹಮಾನ್ ಇಂಥ ದರಿದ್ರ ಏರ್ಪಾಡು ಮಾಡಿದೀರಿ ಹೇಳಿ ಬನ್ನಿ ಪೊಲೀಸರಿಗೆ’ ಎಂದವರಿಗೆ ‘ಹಹಹ, ನಾನೇನ್ರೀ ಮಾಡ್ಲಿ-ನನ್ನ ಒಳಕ್ಕೆ ಬಿಟ್ಟಿದ್ದೇ ಹೆಚ್ಚು-ನನ್ನೇ ತಡೆದರು. ನಾನೇನು ಮಾಡ್ಲಿ’ ಎಂದು ರಿಂಗಾದ ಮೊಬೈಲ್‌ನಲ್ಲಿ ಆರಾಮವಾಗಿ ಮಾತನಾಡುತ್ತ’ ಏನು ಬಂದೇ ಇಲ್ಲ. ಭರ್ಜರಿ ಫಂಕ್ಷನ್ ಬನ್ನಿ ಬನ್ನಿ’ ಎಂದು ಆಹ್ವಾನಿಸುತ್ತಿದ್ದರು.
ಆ ಹೊತ್ತಿಗೆ ಎಲ್ಲ ಬಾಗಿಲಿಗೂ ಬೀಗ ಹಾಕಿಯಾಗಿತ್ತು.
ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರೆಸಬೇಕಿತ್ತು ಎಂಬ ಸಾಮಾನ್ಯ ಜ್ಞಾನವೂ ರೆಹಮಾನರಿಗೆ ಇಲ್ಲದೆ ಹೋದದ್ದು ದುರಂತ. ‘ಅಯ್ಯೋ ಹೀಗಾಯಿತೆ ಪಾಪ’ ಎನ್ನುವ ಸೌಜನ್ಯವೂ ಅವರಿಗಿರಲಿಲ್ಲ.
ಪ್ರಶಸ್ತಿ ವಿಜೇತರ ಜಾಗದಲ್ಲಿ ಕುಳಿತ ವಿಷ್ಣು ಅಭಿಮಾನಿಗಳು ಆ ಕುರ್ಚಿಗಳು ಅವರಪ್ಪನ ಜಹಗೀರು ಎಂಬ ಧೋರಣೆಯಲ್ಲಿ ಮಾತನಾಡುತ್ತಿದ್ದರು.
ಎಲ್ಲ ನೆಲದ ಮೇಲೆ: ಚಿತ್ರದ ತಂತ್ರಜ್ಞರು ವಿಧಿಯಿಲ್ಲದೆ ನೆಲದ ಮೇಲೆ ಕುಳಿತರು. ಪ್ರೇಮಾ, ಅಭಿಜಿತ್, ರಮೇಶ್ ಭಟ್, ಶಿವರಾಂ, ಅವಿನಾಶ್, ಮಾಳವಿಕ ಮುಂತಾದವರೆಲ್ಲ ಸೈಡ್‌ವಿಂಗ್‌ನಲ್ಲಿ ನಿಲ್ಲಬೇಕಾದದ್ದು ಅನಿವಾರ್ಯವಾಯಿತು. ಚಿತ್ರಶ್ರೀ, ದೇವಿಕಾ ಹಾಗೂ ಶಂಕರ್‌ಪ್ರಕಾಶ ನಿರೂಪಣೆಯ ಹೊಣೆ ಹೊತ್ತಿದ್ದರು.
ನಿರೂಪಕರು: ತುಂಬ ಸೊಗಸಾಗಿ ವಿಷ್ಣುವರ್ಧನ್ ಪರಿಚಯಿಸಿದ ಚಿತ್ರಶ್ರೀ ಮಾತೇ ಅಂದಿನ ಹೈಲೈಟ್. ದೇವಿಕಾ ಎಲ್ಲ ‘ಹಾಸನದಲ್ಲಿ ಕುಳಿತುಕೊಳ್ಳಬೇಕು’ ಎಂದಾಗಲಂತೂ ಎಲ್ಲ ಅಂಡು ಬಡಿದುಕೊಂಡು ಮುಸಿಮುಸಿ ನಕ್ಕರು. ಶಂಕರ್ ಪ್ರಕಾಶ್ ಧ್ವನಿ ತುಂಬಿಕೊಂಡಿತ್ತು ಎನ್ನುವುದು ನಿಜ. ಆದರೆ ಆ ವ್ಯಕ್ತಿಗೆ ಫಲಕ ಸ್ವೀಕರಿಸಿ ಕಲಾವಿದರು ತಾಂತ್ರಿಕ ತಜ್ಞರ ಬಗ್ಗೆ ಗೌರವವೇ ಇದ್ದಂತಿರಲಿಲ್ಲ. ಅವರೆಲ್ಲರನ್ನೂ ಅವರು ಸಂಬೋಧಿಸುತ್ತಿದ್ದ ರೀತಿ ಗದರಿದ ಕ್ರಮ ಹೇಸಿಗೆ ಹುಟ್ಟಿಸಿತು.
ಕಾರ್ಯಕ್ರಮ ನಡೆದ ಬಗೆ: ಚಿತ್ರದ ಬಗ್ಗೆ ಗಂಭೀರವಾಗಿ ವಿಶ್ಲೇಷಿಸುವ ಒಂದು ಸಾಲುಮಾತನಾಡುವವರೂ ಅಲ್ಲಿರಲಿಲ್ಲ. ಹಾರ-ತುರಾಯಿಗಳ ಸಂಭ್ರಮ ಅತಿಯಾಗಿ ‘ಬೇಕಿತ್ತೆ ಇಷ್ಟು ಅವಾಂತರ ಎನ್ನವಂತಾದದ್ದು ದುರ್ದೈವ. ಗುಜರಾತಿ ನೃತ್ಯವೊಂದು ಸಾಕಿತ್ತು. ಯಜಮಾನ ಚಿತ್ರದ ಹಾಡುಗಳ ಕುಣಿತ, ರಾಜೇಶ್ ರಾಮನಾಥ್ ನೃತ್ಯ ಮುಗಿದರೆ ಸಾಕೆ ಎನ್ನುವಂತಾಯಿತು.
ವಿಷ್ಣು ಎಂಟ್ರಿ ಗ್ರಾಂಡ್ ಎಂದು ಒಪ್ಪಲೇಬೇಕು.
ಫಲಕ ವಿತರಣೆಗೆ ಅತಿಥಿಗಳನ್ನು ಆಹ್ವಾನಿಸಿದ ನಂತರ ವೇದಿಕೆ ಸಿಟಿ ಮಾರ್ಕೆಟ್ ಕೊಂಪೆಯಾಯಿತು. ನಾನು ಎಷ್ಟೋ ಕಾರ್ಯಕ್ರಮಗಳನ್ನ, ಶತದಿನೋತ್ಸವಗಳನ್ನು ಕಂಡಿದ್ದೇನೆ ನಿರೂಪಿಸಿದ್ದೇನೆ. ಆದರೆ ಇಂಥ ಗೊಂದಲ ನಾನೆಲ್ಲೂ ಕಂಡಿರಲಿಲ್ಲ. ಕಡೆ ಕಡೆಗೆ ಯಾರು ಬೇಕಾದರೂ ಹೋಗಿ ಫಲಕ ಪಡೆದು ಬರಬಹುದಾದ ಸ್ಥಿತಿ ಉದ್ಭವವಾಗಿ ಅದೊಂದು ಗೊಂದಲಾಪುರವಾಯಿತು. ವಿಷ್ಣು ಹಾಡಿದ್ದೊಂದೇ ಅಂದಿನ ಹೈಲೈಟ್. ಅಂಥ ಸಭೆಗೆ ಗಾಂಭೀರ್ಯ ತರುವಂತಿರಲಿಲ್ಲ ಅಂಬರೀಶ್ ಮಾತುಗಳು. ಅಲ್ಲಿ ಬಂದ ಮಂದಿಗೆ ರಾಜಕಾರಣಿಗಳು ಬೇಕಿರಲಿಲ್ಲ. ಅಂಥವರನ್ನೆಲ್ಲ ಕೂರಿಸಿ ಆರಂಭಕ್ಕೆ ಮಾತನಾಡಿದ ರೆಹಮಾನ್‌ಗೆ ಸ್ವಾಗತಕ್ಕೂ, ವಂದನಾರ್ಪಣೆಗೂ, ಪರಾಕು ಪಂಪಿಗೂ ವ್ಯತ್ಯಾಸವೇ ತಿಳಿದಂತಿರಲಿಲ್ಲ.
ನೆನಪು: ಈ ಸಂಪತ್ತಿಗೆ ಈ ಕಾರ್ಯಕ್ರಮ ಹೇಗೆ ಮಾಡಬೇಕೆಂದು ತಿಳಿಯಲೆಂದೇ ಒಂದು ಪ್ರಸ್‌ಮೀಟ್ ರೆಹಮಾನ್ ಅವರು ಮಾಡಿದ್ದದ್ದೂ ಆಗ ನೆನಪಾಯಿತು. ‘ವಂಡರ್‌ಫುಲ್’ ಎನಿಸಿಕೊಳ್ಳಬಹುದಾಗಿದ್ದ ಕಾರ್ಯಕ್ರಮ ‘ಹಾರಿಬಲ್’ ಎನಿಸಿಕೊಳ್ಳಲು ರೆಹಮಾನ್ ಮುಖ್ಯ ಕಾರಣರಾದರು.
ವಿಷ್ಣು ಕಾರ್ಯಕ್ರಮ ಹೀಗಾಗದಂತೆ ನೋಡಿಕೊಳ್ಳುವ ಹೊಣೆ ಅಭಿಮಾನಿ ಸಂಘದ ಪ್ರಸನ್ನ ಅವರದೂ ಆಗಿತ್ತು ಎಂಬುದನ್ನು ಮರೆಯುವಂತಿಲ್ಲ.
ನಾಗೇಶ್ ಕುಮಾರ್ ತ್ಯಾಗರಾಜ್ ಎಲ್ಲ ತೆಪ್ಪಗಿದ್ದರು ಅಂದು.
ನಾಟಕ ಅಕಾಡಮಿ ಪ್ರಶಸ್ತಿ ಕಾರ್ಯಕ್ರಮ ಹೂವಿನ ಹಡಗಲಿಯಲ್ಲಿ:
ಅಲ್ಲಿಗೆ ಬರುವ ಹಿಂದಿನ ದಿನ ನಾಟಕ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆಂದು ಹೂವಿನ ಹಡಗಲಿಗೆ ಹೋಗಿ ಬಂದಿದ್ದೆ. ಅಲ್ಲಿ ಹತ್ತು ಕಲಾಕ್ಷೇತ್ರಕ್ಕಾಗುವ ಗ್ರಾಮೀಣ ಮಂದಿ ಇದ್ದರು. ಹತ್ತುಸಾವಿರಕ್ಕೂ ಹೆಚ್ಚು ಜನರ ಪಿನ್ ಡ್ರಾಪ್ ಸೈಲೆನ್ಸ್ ಇತ್ತು ಅಲ್ಲಿ. ಶಿಸ್ತು ಸಂಭ್ರಮ ಆ ಮಂದಿಯಿಂದ ಕಲಿಯಬೇಕು ಎನಿಸಿತು. ಅಲ್ಲೂ ಯಥಾಪ್ರಕಾರ ತೋಪಾದದ್ದು ಕನ್ನಡ ಓದಲೂ ಬಾರದವರನ್ನು ನಿರೂಪಣೆಗೆ ಬಿಟ್ಟಿದ್ದದ್ದು. ‘ಹ್ಯಾಮ್ಲೆಟ್ ನಾಟಕವನ್ನು ಹೆಲ್ಮೆಟ್’ ಎನ್ನುವಂತಹ ಮಹಿಳಾಮಣಿ ನಾಟಕ ಅಕಾಡೆಮಿ ಸದಸ್ಯೆ. ಹೊಸ ಅಕಾಡೆಮಿಯಲ್ಲಿ ಎಂಥವರಿರಬಾರದು ಎಂಬುದಕ್ಕೆ ಅದೊಂದು ಸಾಕ್ಷಿ ಎನ್ನುವಂತಿತ್ತು.
ಸಂಘಟನೆಗೆ ಹೆಸರಾದ ನಾಟಕ ಅಕಾಡಮಿ ಅಧ್ಯಕ್ಷ ಸಿ.ಜಿ.ಕೆ. ವೇದಿಕೆ ಕಲಾತ್ಮಕವಾಗಲು, ಊರವರಲ್ಲಿ ಸಂಭ್ರಮ ತುಂಬಲು-ರಂಗಾಸಕ್ತರನ್ನು ಕಲೆಹಾಕಿ ಅದ್ಭುತ ಸಮಾವೇಶ ಮಾಡಲು ಕಾರಣರಾಗಿದ್ದರು ಎಂಬುದು ಸಂತೋಷ. ಆದರೆ ಜೀವಮಾನದಲ್ಲಿ ಒಮ್ಮೆ ಬರುವ ಪ್ರಶಸ್ತಿ ಸ್ವೀಕಾರದ ಸಮಯದಲ್ಲಿ ಪ್ರಶಸ್ತಿ ವಿಜೇತರ ಹೆಸರುಗಳನ್ನು ಸರಿಯಾಗಿ ಹೇಳಲು ಬಾರದವರನ್ನು ಸದಸ್ಯರು ಎಂಬ ಒಂದೆ ಕಾರಣಕ್ಕೆ ವೇದಿಕೆಯ ಮೇಲೆ ಶೋಭಿಸಿ ಟಿ.ವಿ. ಕ್ಯಾಮರಾ ಎದುರು ಮಿಂಚಲು ಅವಕಾಶ ಮಾಡಿದ್ದದ್ದು ಘನಘೋರ ಅಪರಾಧವೆನಿಸಿತ್ತು.
ಅಂಥ ದೂರದೂರಿನ ಗ್ರಾಮೀಣ ಪ್ರದೇಶಗಳಲ್ಲಿ ಶಕ್ತಿ ಮೀರಿ ಸೊಗಸಾಗಿ ಏರ್ಪಾಟು ಮಾಡಲು ಕಾರಣರಾಗಿದ್ದ ಎಂ.ಪಿ.ಪ್ರಕಾಶರನ್ನು ಹೊಗಳಲೇಬೇಕೆನಿಸಿದ್ದು ನಿಜ.
ರವಿಚಂದ್ರನ್: ಆಗಲೇ ರವಿಚಂದ್ರನ್ ನನಗೆ ನೆನಪಾದದ್ದು. ತೆರೆ ಏಳುವ ಮುನ್ನವೇ ತಮ್ಮ ಸಿನಿಮಾದ ನಟ-ನಟಿಯರನ್ನು ತಾಂತ್ರಿಕ ತಜ್ಞರನ್ನು ಅವರವರ ಕುರ್ಚಿಯಲ್ಲಿ ಕುಳ್ಳಿರಿಸಿ ಎಲ್ಲರ ಕೈಗೂ ಅವರವರ ಫಲಕ ನೀಡಿ ತೆರೆ ಸರಿಸಿದಾಗ ಸಂಭ್ರಮ ತಾಂಡವಾಡಿತ್ತು.
ಒಂದೇ ಕ್ಷಣದಲ್ಲಿ ಫಲಕ ವಿತರಣೆ ಮುಗಿದ ಖುಶಿ ಎಲ್ಲರಿಗೂ. ಆ ಚಿತ್ರ ‘ರಣಧೀರ’ ಎಂದು ನೆನಪು. ಚೌಡಯ್ಯ ಮೊಮೋರಿಯಲ್ ಹಾಲ್‌ನಲ್ಲಿ ನಡೆದ ಸೊಗಸಾದ ಕಾರ್ಯಕ್ರಮವದು.
ಆ ಕಾಲ: ಸಿಲ್ವರ್ ಜ್ಯೂಬಿಲಿ ಕಾರ್ಯಕ್ರಮಗಳು ಶತದಿನೋತ್ಸವಗಳು, ಪ್ಲಾಟಿನಂ ಜ್ಯೂಬಿಲಿಗಳು ಹಿಂದ ಸಾಕಷ್ಟಾಗಿವೆ. ಅಲ್ಲಿ ಚಿತ್ರದ ಬಗ್ಗೆ ಗಂಭೀರವಾಗಿ ಮಾತನಾಡುವ ಜನರೂ ಇರುತ್ತಿದ್ದರು. ಫಲಕ ಸ್ವೀಕಾರ ಒಂದು ಹಬ್ಬದ ವಾತಾವರಣ ಸೃಷ್ಟಿಸುತ್ತಿತ್ತು. ಪರಿಚಯದ ಸಿಹಿ ನುಡಿಗಳಿಂದ ಕಲಾವಿದರು ತಾಂತ್ರಿಕ ತಜ್ಞರು ಹಿರಿಹಿರಿ ಹಿಗ್ಗಲು ಕಾರಣವಾಗಿರುತ್ತಿತ್ತು.
ಈಗೇಕೆ ಹೀಗೆ: ಯಾರೋ ಒಬ್ಬ ನಟನನ್ನು-ನಟಿಯನ್ನು ವಿಜೃಂಭಿಸುವುದೇ ಮುಖ್ಯವಾಗಿ ಮುಂದೆ ಅವರ ಕಾಲ್‌ಷೀಟ್ ಪಡೆಯುವುದೇ ಗುರಿ ಎನಿಸಿದಾಗ ಜನರನ್ನು ತಾತ್ಸಾರ ಮಾಡಿ ನಟರನ್ನು ಓಲೈಸುವುದೇ ಮುಖ್ಯವಾಗಿ ಮಿಕ್ಕವರೆಲ್ಲ ನಗಣ್ಯರಾಗುತ್ತಾರೆ.
ಇಂಥ ಅದ್ಧೂರಿ ಕಾರ್ಯಕ್ರಮಗಳು ಎಡವಟ್ಟಿನ ಸರಮಾಲೆಯಾದಾಗ ವಿಷ್ಣುವರ್ಧನ್ ಅಂತಹ ನಟರೂ ಕಾರ್ಯಕ್ರಮ ರೂಪಿಸುವಾಗ ಸೂಕ್ತ ಸಲಹೆ-ಸೂಚನೆ ನೀಡುವುದು ಅಗತ್ಯ.
ಒಂದು ವಿನಂತಿ: ಪ್ರಿಯ ವಿಷ್ಣು, ನೀವೀಗ ಎತ್ತರೆತ್ತರ ಬೆಳೆದಿದ್ದೀರಿ. ಕಾಲ್‌ಷೀಟ್ ಕೊಡುವ ಮುನ್ನ ಕಥೆಯ ಬಗ್ಗೆ ತುಂಬ ಎಚ್ಚರ ವಹಿಸುತ್ತೀರಿ-ಗ್ರಾಮದೇವತೆ, ಕೆರೆಗೆ ಹಾರ ಎಂದಾಗ ‘ನೋ’ ಎಂದು ಖಂಡಿತವಾಗಿ ಹೇಳುತ್ತೀರಿ.
ಪ್ರತಿಭಾವಂತ ನಟರನ್ನು, ಸಹಕಲಾವಿದರನ್ನು ಮುಕ್ತಕಂಠದಿಂದ ಮೆಚ್ಚಿ ಧಾರಾಳವಾಗಿ ಹೊಗಳುತ್ತೀರಿ. ಈಗ ನಿಮ್ಮ ಹಿಂದೆ ಮುಂದೆ ಓಡಾಡುತ್ತ ‘ಜೈ’ ಎನ್ನುವವರು ಏಕೆ ಪರಾಕು ಪಂಪು ಒತ್ತುತ್ತಾರೆ ಎಂಬುದು ನಿಮಗೆ ಚೆನ್ನಾಗಿ ಗೊತ್ತು. ಕುಮಾರ್, ವಿಷ್ಣುವರ್ಧನ್ ಆಗುವುದಕ್ಕಿಂತ ಮುಂಚಿನ ಮಿತ್ರರನ್ನು ಅದೇ ಪ್ರೀತಿಯಿಂದ ಮಾತನಾಡಿಸುತ್ತೀರಿ.
ಹಾಗೆ ಮುಂದೆ ಇಂಥ ಕಾರ್ಯಕ್ರಮಗಳನ್ನು ರೂಪಿಸುವ ದಿನ ಬಂದಾಗ ಅದರ ಯಶಸ್ಸಿಗೂ ಎಚ್ಚರವಹಿಸಬೇಕೆಂಬ ಮಾತನ್ನು ನೀವು ನಿರ್ಮಾಪಕರಿಗೆ ಮಾತ್ರವಲ್ಲ, ಪ್ರಸನ್ನರಿಗೂ ತಿಳಿಸುವುದು ಅಗತ್ಯವಲ್ಲವೆ?
*****
(೨೫-೫-೨೦೦೧)