೧
ಹೇಳಿ ಕೇಳಿ ಕುಚೇಲನಲ್ಲವೆ ನಾನು?
ಅವಳಿಗಿವೆ ಎರಡು ಜಡೆ
ತೊಡುತಾಳವಳು ಮಸ್ಲಿನ್
ತೊಟ್ಟಿದ್ದಾಳೆ ಎತ್ತರದಟ್ಟೆ ದಿಮಾಕು ಚಪ್ಪಲಿ
ಅವರು ಹಾಗೆ
ಇವರು ಹೀಗೆ
ಸರಿಯೆ, ನಮಗೇಕೆ, ಅದು?
ತಿಂಗಳ ಮೊದಲದಿನವೇ ಏಕೆ ಹಗರಣ?
ತಗೊ, ದುಡ್ಡೆಲ್ಲ ನೀನೆ.
ಹಾಲಿನವನಿಗೆ,
ಮೊಸರಿನವನಿಗೆ,
ಅಗಸನಿಗೆ-
ಇನ್ನೂ ಬರುವವರಿಗೆ ನೀನೆ ಉತ್ತರಿಸು.
ಸಂಬಳವೇನು ಅಲ್ಲಾವುದ್ದೀನನದ್ಭುತ ದೀಪವೇ?
ಉಂಗುರವನೇಕೆ ಮಿಕಿಮಿಕಿ ನೋಡುತ್ತಿ,
ಬೆಪ್ಪೇ,
ನಿಮ್ಮಪ್ಪ ಕೊಟ್ಟುದಿದು,
ಮಂತ್ರದುಂಗುರವಲ್ಲ.
ನಾಳೆಯಿಂದಲೆ ನಕ್ಷತ್ರಕರ ಪರಿವಾರ ವಕ್ಕರಿಸಲಿದೆ,
ಇಗೋ ಕೈಮುಗಿದೆ, ನಿನಗೆ;
ನೀನೇ ಆಗು ಮನೆಗೆ ಯಜಮಾನಿ.
೨
ಸುಂಟರಗಾಳಿಯೇಕೆ ಎಬ್ಬಿಸುವೆ
ಮನೆಯೊಳಗೆ ಹೊರಗೆ?
ಹುಬ್ಬ ಕತ್ತಿವರಸೆ ಬೇಡ
ಕಣ್ಣ ಚಾವಟಿಯೇಟು ನಿಲ್ಲಿಸು.
ಸತ್ತ ವಾತಾವರಣ ಇದು ಬೇಡ
ನಾನೇನು ಶತ್ರುವೇ?
ಮನೆಯಾಗುವುದು ಬೇಡ ಕುರುಕ್ಷೇತ್ರ.
೩
ಬೇಸರಿಯ ಮುತ್ತು ಬೆಂಡೋಲೆ ಉಂಗುರಕೆಲ್ಲ
ಮಾತು ಕಲಿಸಿದ್ದೀಯೆ.
ನನ್ನೊಡನಿವರ ರಾಯಭಾರವೆ?
ಬೇಡ, ನೀನೆ ಮಾತಾಡು.
ಕೈ ಹಿಡಿದವಳೆ, ಮನಮುರಿಯದಿರು, ಮಾತಾಡು.
ಕೂದಲು ಕೆದರಿದೆ
ಹಣೆ ಬಿಕೋ ಎನ್ನುತಿದೆ
(ನಾ ಬದುಕಿಲ್ಲವೇನು?)
ಹೂವ ಹೊಸಕಿರುವೆ
( ನಾ ಕೈಗೆ ಸಿಕ್ಕಿದ್ದರೆ?)
ಅಡಿಕೆ ಚೆಲ್ಲಿದೆ ಯಾಕೆ?
ಗಾರೆ ನೆಲದಲ್ಲಡಿಕೆ ಮೊಳೆಯುವುದಿಲ್ಲ.
ವೀಳ್ಯದೆಲೆ ಇವ ಕೋಣೆಯೊಳಗೆಲ್ಲ
ಏಕೆ ಹಾಸಿದ್ದೀಯೆ?
ಅಡುಗೆಮನೆ ತಟ್ಟೆ
ನಡುಮನೆಯಲ್ಲಿ ವಿಷ್ಣುಚಕ್ರವಾಗಿದೆ.
ಇನ್ನು ಆ ಲೋಟ ಚಮಚಗಳ ಪಾಡು ದೇವರಿಗೆ ಪ್ರೀತಿ.
ಸಭ್ಯತೆಯ ವೇಷ ಈ ಮೌನ.
ಆಡು, ಮಾತಾಡು
ಬೇಡ ಈ ಮೌನದ ಯುದ್ಧ.
ಒಲವೆಲ್ಲವನು ಹೂತು ಗೋರಿ ಕಟ್ಟಿರುವೆ ನಗೆಗೆ
ಒಲವ ಹೆಣ ಮಾಡದಿರು.
ಈ ಕೋಣೆ-ಮನೆಯಲ್ಲಿ ಕೋಪಗೃಹ ಸಾಧ್ಯವೆ?
ಆಡು, ಮಾತಾಡು
ನಾನು ದಶರಥನಲ್ಲ,
ಬೇದವೇ ಕೈಮುಗಿವೆ ರಾಮಾಯಣ.
ಅವಳಿಗಾದರೂ ಇತ್ತು ಮಗನ, ರಾಜ್ಯದ ಲೋಭ.
ಸಣ್ಣ ಬಯಕೆಗೆ ನೀನು ಕೈಕೆಯಾಗುವುದೆ?
(ಇದ್ದುದರಲ್ಲಿ ಸರಿ, ಬದುಕೋಣ)
ಬೇಡವೇ, ಕೈಮುಗಿವೆ,
ರಾಮಾಯಣ.
*****
(ಚಿತ್ರ-ವಿಚಿತ್ರ ೧೯೬೯)