ಸ್ವಾತಂತ್ರ್ಯ ಪೂರ್ವ ಕನ್ನಡ ಸಾಹಿತ್ಯ ಮತ್ತು ರಾಷ್ಟ್ರೀಯತೆ

ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟೀಯತೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳು ನಮ್ಮ ರಾಜಕೀಯ ವ್ಯವಸ್ಥೆ ಸೂತ್ರ ತಪ್ಪುತ್ತಿರುವ ಬಗೆಗಿನ ಕಳವಳವನ್ನು, ಸಮುದಾಯ ಪ್ರಜ್ಞೆ ಒಡೆದುಹೋಗುತ್ತಿರುವ ಬಗೆಗಿನ ತಬ್ಬಿಬ್ಬನ್ನೂ, ನಮ್ಮ ಸಂಸ್ಕೃತಿಯ ದ್ವಂದ್ವಗಳನ್ನು ಅರಗಿಸಿಕೊಳ್ಳಲಾಗದ ತಪ್ಪಿತಸ್ಥ ಮನೋಭಾವವನ್ನೂ ತೋರಿಸುತ್ತದೆ. ಇಂದಿನ ಈ ಎಲ್ಲ ಒತ್ತಡಗಳ ಪ್ರಭಾವದಲ್ಲಿ ಹಿಂದಿನ ಬದುಕನ್ನು ಮತ್ತು ಆ ಬದುಕು ಸೃಷ್ಟಿಸಿದ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವ ನಮ್ಮ ಪ್ರಯತ್ನ ಎಷ್ಟರಮಟ್ಟಿಗೆ ವಸ್ತುನಿಷ್ಠವಾಗಬಲ್ಲದು ಎನ್ನುವುದನ್ನು ಪ್ರಾಮಾಣಿಕವಾಗಿ ಶೋಧಿಸಬೇಕಾಗಿದೆ. ಅದರಲ್ಲೂ ಸ್ವಾತಂತ್ರ್ಯದ ನಂತರ ಹುಟ್ಟಿದ ನನ್ನ ತಲೆಮಾರಿನವರು ಸ್ವಾತಂತ್ರ್ಯಪೂರ್ವ ಸಾಹಿತ್ಯವನ್ನು ಅನಿವಾರ್ಯವಾಗಿಯೆ ನಮ್ಮ ಇಂದಿನ ತುರ್ತುಗಳಿಗೆ ತಕ್ಕಂತೆ ಹೊರಗಿನವರಾಗಿ ನೋಡುತ್ತೇವೆ. ನಮಗೆ ಈ ದೇಶ ಸ್ವಾತಂತ್ರ್ಯ ಪಡೆದುಕೊಂಡ ಘಟನೆ ಸಾಂಸ್ಕೃತಿಕವಾಗಿ ಒಂದು ದೊಡ್ಡ ಸೀಳಿನಂತೆ ತೋರುತ್ತದೆ. ನಮ್ಮ ಹಿಂದಿನ ತಲೆಮಾರಿನವರಿಗೆ ಹೋಲಿಸಿದರೆ ನಾವು ಸ್ವಾತಂತ್ರ್ಯಪೂರ್ವ ಯುಗದ ಜತೆಗಿನ ಭಾವನಾತ್ಮಕ ಸಂಬಂಧಗಳನ್ನು ಕಳೆದುಕೊಂಡಿದ್ದೇವೆ ಎನಿಸುತ್ತದೆ. ನಮ್ಮ ಹಿಂದಿನ ತಲೆಮಾರಿನವರಿಗೆ ಎರಡು ಜಗತ್ತುಗಳ ಮಧ್ಯೆ ಬದುಕಿದ ವಿಶಿಷ್ಟವಾದ ಸವಲತ್ತು ಇತ್ತು. ಅವರ ಮೌಲ್ಯ ಕಲ್ಪನೆಗಳು ಸ್ವಾತಂತ್ರ್ಯಪೂರ್ವ ಯುಗದಲ್ಲಿ ರೂಪುಗೊಂಡಿದ್ದರಿಂದ ಒಂದು ನಿಶ್ಚಿತವಾದ ಚೌಕಟ್ಟಿನಿಂದ ಅವರು ಸ್ವಾತಂತ್ರ್ಯ ನಂತರದ ಬದುಕನ್ನು ಬೆಲೆಗಟ್ಟಿ ನೋಡುತ್ತಾರೆ. ಅವರಿಗೆ ಸಂಸ್ಕೃತಿಯ ಅವನತಿ ಅಥವಾ ಮೌಲ್ಯಗಳ ಅಂಧಃಪತನ, ಆದರ್ಶಗಳ ಸೋಲು-ಇಂಥ ಒಂದು ಪ್ರಕ್ರಿಯೆ ಕಾಣುತ್ತದೆ. ಅಂದರೆ ಎಷ್ಟೇ ನೆಗೆಟಿವ್ ಆಗಿದ್ದರೂ ಒಂದುಬಗೆಯ ಸಾತತ್ಯತೆ(ಚೊನ್ತಿನು‌ಇತ್ಯ್) ಅವರಿಗೆ ಅನುಭವವಾಗಿದೆ. ಇಂಥ ಭಾವನಾತ್ಮಕ ಸಂಬಂಧಗಳನ್ನು ಕಳೆದುಕೊಂಡ ನಮಗೆ ಸ್ವಾತಂತ್ರ್ಯಪೂರ್ವ ಯುಗದ ಬದುಕು ಮತ್ತು ಸಾಹಿತ್ಯ ಕೇವಲ ಸಮೀಕ್ಷೆಯ ವಸ್ತುಗಳಾಗಿಬಿಡಬಹುದು. ಆದ್ದರಿಂದ ಅಂದಿನ ಸಾಹಿತ್ಯದ ಅನುಭವವನ್ನು ನಿಚ್ಚಳವಾಗಿ ಎದುರಿಗಿಟ್ಟುಕೊಂಡು ಅದರ ಹೊಳಹುಗಳನ್ನು ಪುನಃಸೃಷ್ಟಿಸುವ ಪ್ರಯತ್ನ ಮಾಡಬೇಕು.

ಸ್ವಾತಂತ್ರ್ಯಪೂರ್ವ ಕಥಾಸಾಹಿತ್ಯದ ಕೃತಿಗಳನ್ನು ನೋಡಿದಾಗ ಒಂದು ಮಾತು ಸ್ಪಷ್ಟವಾಗುತ್ತದೆ. ಆ ಯುಗದ ಗಟ್ಟಿಯಾದ ಕೃತಿಗಳು ರಾಷ್ಟ್ರೀಯತೆಯ ಆದರ್ಶವನ್ನು ತಮ್ಮ ವಸ್ತುವನ್ನಾಗಿ ಬಳಸಿಕೊಂಡಿಲ್ಲ. ಅಂಥ ವಸ್ತುವನ್ನು ನೇರವಾಗಿ ಬಳಸಿಕೊಂಡ ಕೃತಿಗಳು ಸಾಹಿತ್ಯ ಚರಿತ್ರೆಯ ಸಮೀಕ್ಷೆಯಲ್ಲಿ ಅನಿವಾರ್ಯವಾಗಿ ಹೆಸರಿಸಬೇಕಾದ ಸಾಮಾನ್ಯ ಕೃತಿಗಳೇ ಹೊರತು ಕನ್ನಡ ಪರಂಪರೆಯ ಮುಖ್ಯ ಪ್ರವಾಹಕ್ಕೆ ಸೇರಿದ ಕೃತಿಗಳಲ್ಲ. ಬದುಕಿನ ಬಗೆಗೆ ತಿಳುವಳಿಕೆಯನ್ನು ತಿದ್ದಬಲ್ಲ ಸತ್ವವಾಗಲಿ, ಕೃತಿಯ ರೂಪ-ಬಂಧದಲ್ಲಿಯ ಪ್ರಯೋಗಶೀಲತೆಯಿಂದ ಹೊಸದಾದ ನೈತಿಕ ಎಚ್ಚರವನ್ನು ಹುಟ್ಟಿಸಬಲ್ಲ ಗಟ್ಟಿತನವಾಗಲಿ ಈ ಕೃತಿಗಳಿಗಿಲ್ಲ. ತೀವ್ರವಾದ ಬದಲಾವಣೆಗಳ ಸಂಧಿಕಾಲವೊಂದರಲ್ಲಿ ಅಂದಿನ ಬದುಕಿನ ಮಹತ್ವಪೂರ್ಣ ರಾಜಕೀಯ ವಾಸ್ತವವೊಂದನ್ನು ಹೀಗೆ ಕನ್ನಡದ ಮುಖ್ಯ ಕೃತಿಗಳು ಗಮನಿಸದೇ ಇದ್ದುದರ ಕಾರಣಗಳನ್ನು ಹುಡುಕುವ ಪ್ರಯತ್ನ ಮಾಡಬೇಕಾಗಿದೆ. ಈ ಕೆಲಸದಲ್ಲಿ ಸಹಾಯವಾಗಬಲ್ಲ ಒಂದು ವಿರೋಧಾಭಾಸವನ್ನು ಇಲ್ಲಿ ಗುರುತಿಸಕೊಳ್ಳಬಹುದು. ರಾಷ್ಟ್ರೀಯಮಟ್ಟದ ರಾಜಕೀಯ ವಾಸ್ತವಗಳು ಕನ್ನಡದಲ್ಲಿ ಮುಖ್ಯ ಕೃತಿಗಳಲ್ಲಿ ಮೂರ್ತವಾಗಿ ಅಂದರೆ ಕೃತಿಗಳ ಶರೀರದ ಅಂಗಗಳಾಗಿ ಅಥವಾ ಬರಹಗಾರರ ಸಂವೇದನೆಯನ್ನು ಆವರಿಸಿಕೊಳ್ಳುವ ಫಲವತ್ತಾದ ಮಿಥ್‌ಗಳಾಗಿ ಪ್ರವೇಶಿಸಲಿಲ್ಲ. ಇಂಥ ಸಂಗತಿಗಳು ಕೃತಿಗಳಲ್ಲಿ ಪ್ರವೇಶಿಸಿದಾಗ ಅವು ಅಮೂರ್ತವಾಗಿವೆ. ಬದುಕಿನ ಸ್ಪರ್ಷಕ್ಕೆ ಎರವಾಗಿವೆ. ಕೇವಲ ಬರಹಗಾರರ ಸಂಕಲ್ಪಿತ ಉದ್ದೇಶಗಳ ದ್ಯೋತಕವಾಗಿವೆ. ಬರಹಗಾರರಿಗೆ ತೀರ ಹತ್ತಿರವಾದ ‘ಪ್ರಾದೇಶಿಕ’ವಾದ ವಾಸ್ತವ ದಟ್ಟವಾಗಿ, ಸಾಂದ್ರವಾಗಿ ಕೃತಿಗಳ ವಿನ್ಯಾಸ ಮತ್ತು ಸಂವೇದನೆಯ ಶರೀರವಾಗಿ ಕನ್ನಡದ ಮುಖ್ಯ ಕೃತಿಗಳಲ್ಲಿ ಚಿತ್ರಣವಾಗಿದೆ. ಆದರೆ ಈ ‘ಪ್ರಾದೇಶಿಕ’ ವಾಸ್ತವ ಸಮಕಾಲೀನ ಚರಿತ್ರೆ ಮತ್ತು ರಾಜಕೀಯದ ಹೊಳಹುಗಳನ್ನು ಸೂಚಿಸುವ ಸಾಮರ್ಥ್ಯ ಪಡೆದಿಲ್ಲ. ತೀರ ಪರೋಕ್ಷವಾಗಿ ಚರಿತ್ರೆ ಮತ್ತು ರಾಜಕೀಯ ಚೌಕಟ್ಟುಗಳ ಆಚೆಗೆ ಈ ಕೃತಿಗಳು ಸಮುದಾಯದ ಒಟ್ಟು ಬದುಕಿನಲ್ಲಾದ ಪಲ್ಲಟಗಳನ್ನು ಸೂಚಿಸುತ್ತವೆ. ಮೂರ್ತವಾದ ಪ್ರಾದೇಶಿಕ ವಾಸ್ತವ ಚರಿತ್ರೆ ಮತ್ತು ರಾಜಕೀಯದ ವಾಸ್ತವವನ್ನು ಧ್ವನಿಸುವ ಸಾಮರ್ಥ್ಯ ಪಡೆಯದೇ ಇದ್ದುದಕ್ಕೆ ಕಾರಣಗಳನ್ನು ಶೋಧಿಸಬೇಕಾಗಿದೆ.

ರಾಷ್ಟ್ರೀಯತೆಯ ಪರಿಕಲ್ಪನೆ ನಮ್ಮ ಸಂಸ್ಕೃತಿಯ ಮನಸ್ಸಿಗೆ ಯಾವಾಗಲೂ ಪರಕೀಯವಾಗಿಯೆ ಉಳಿದಿದೆ. ಮನುಷ್ಯನ ಬದುಕನ್ನು ಮನೆ, ಕುಟುಂಬ, ಜಾತಿ, ಒಳಜಾತಿ, ಹೀಗೆ ಅನೇಕ ಸ್ವಯಂಪೂರ್ಣವಾದ ಗೂಡುಗಳಲ್ಲಿ ತುರುಕುವಂಥ ಸಮಾಜ ವ್ಯವಸ್ಥೆ ನಮ್ಮದಾಗಿದ್ದರಿಂದ ಇವುಗಳನ್ನು ಮೀರಿದ ಯಾವುದೇ ಏಕಸೂತ್ರತೆಗೆ ವ್ಯಕ್ತಿ ನಿಷ್ಠವಾಗಿರುವುದು ಅಸಾಧ್ಯವಾಗಿದೆ. ಸಮಾಜದ ಒಟ್ಟು ರಚನೆ ವಿಘಟನೆಯನ್ನು ಬೆಂಬಲಿಸುವಂಥದ್ದಾಗಿದೆ. ದೇಶವನ್ನು ಆಳಿದ ಎಲ್ಲ ಪ್ರಭುತ್ವಗಳೂ ವಿಕೇಂದ್ರಿತವಾದ ಶೋಷಕ ವ್ಯವಸ್ಥೆಯನ್ನು ಬಳಸಿಕೊಂಡವು. ಆದ್ದರಿಂದ ಜನಸಾಮಾನ್ಯನಿಗೆ ಆಳ್ವಿಕೆಯ ಕೇಂದ್ರ ಎಲ್ಲೋ ದೂರದಲ್ಲಿ ಅಗೋಚರವಾಗಿದ್ದು ಶೋಷಣೆಯು ಸ್ಥಾನೀಯ ಪ್ರತಿನಿಧಿಗಳು ಮಾತ್ರ ಅವನಿಗೆ ಕಾಣುತ್ತಿದ್ದರು. ಆರ್ಥಿಕವಾಗಿಯೂ ಕೂಡ ಇಲ್ಲಿಯ ವ್ಯವಸ್ಥೆಯಲ್ಲಿ ಹೆಚ್ಚುವರಿ ಉತ್ಪಾದನೆ ಕಡಿಮೆಯಾದ್ದರಿಂದ ಅಥವಾ ಅದು ಕೆಲವರ ಸ್ವತ್ತಾಗಿದ್ದರಿಂದ ತೀವ್ರವಾದ ಬದಲಾವಣೆಗಳಿಲ್ಲದ ಸ್ವಯಂಪೂರ್ಣವಾದ ಸಮುದಾಯಗಳು ಹುಟ್ಟಿಕೊಂಡವು. ಹೊರಗಿನ ಜಗತ್ತಿಗೆ ಮುಚ್ಚಿಕೊಂಡ ಜಾತಿಯ ಘಟಕಗಳಿಂದಾಗಿ ಸಮಾಜದ ಒಟ್ಟು ಅನುಭವ ವ್ಯಕ್ತಿಗೆ ದೊರೆಯದಂತಾಗಿತ್ತು. ಹೀಗೆ ಸಮಾಜದ ವ್ಯವಸ್ಥೆ ವಿಘಟನೆಗೆ ಈಡುಮಾಡುವಂಥದ್ದಾಗಿದ್ದರಿಂದ ತೀರ ಹತ್ತಿರದ ಬದುಕನ್ನು ಬಿಟ್ಟರೆ ಉಳಿದ ಎಲ್ಲ ಸಾಮಾಜಿಕ ವಾಸ್ತವಗಳು ವ್ಯಕ್ತಿಯ ಅನುಭವದ ಆಚೆಗೆ ಉಳಿದುಕೊಳ್ಳುತ್ತವೆ. ಇದರ ಒಟ್ಟು ಪರಿಣಾಮವೆಂದರೆ ನಮ್ಮ ಚಿಂತನೆಗೆ ಸಮಾಜದ ಸಮಗ್ರವಾದ ಒಂದು ತಿಳುವಳಿಕೆ ಸಾಧ್ಯವಾಗುವುದಿಲ್ಲ. ನಮ್ಮ ಸಾಹಿತ್ಯ ಸುತ್ತಲಿನ ವಾಸ್ತವಕ್ಕೆ ತೀರ ಸೀಮಿತವಾದ ನಿಷ್ಠೆಯನ್ನು ಬೆಳೆಸಿಕೊಳ್ಳುತ್ತದೆ.

ನಮ್ಮ ಚರಿತ್ರೆಯ ಇನ್ನೊಂದು ವಾಸ್ತವವೆಂದರೆ ನಮ್ಮ ಪ್ರಾದೇಶಿಕ ಸಂವೇದನೆ ತನ್ನ ವಿಶಿಷ್ಟತೆಯನ್ನು ಉಳಿಸಿಕೊಳ್ಳಲು ಹಲವು ಉಪಾಯಗಳನ್ನು ಬಳಸುತ್ತ ಬಂದಿದೆ. ರಾಷ್ಟ್ರೀಯ ಅಥವಾ ಭಾರತೀಯ ಎನ್ನಬಹುದಾದ ಎಲ್ಲ ಚೌಕಟ್ಟುಗಳ ವಿರುದ್ಧ ತನ್ನ ಪ್ರಾದೇಶಿಕತೆಯನ್ನು ಒಡ್ಡುತ್ತ ಬಂದಿದೆ. ಸಂಸ್ಕೃತದ ಲಾಕ್ಷಣಿಕವಿಮರ್ಶೆಯ ಸೂತ್ರಗಳು, ಸಂಸ್ಕೃತಿಯ ಮೂಲದಲ್ಲಿರುವ ಪುರಾಣಕತೆಗಳು ಇವು ಭಾರತೀಯವೆನ್ನಬಹುದಾದ ಅಮೂರ್ತಗಳಾಗಿದ್ದವು. ಇವುಗಳನ್ನು ಪ್ರಾದೇಶಿಕ ಸಂವೇದನೆಗೆ ಅಳವಡಿಸಿಕೊಳ್ಳಬೇಕಾದಾಗ ದೇಸಿ ನುಡಿಗಟ್ಟುಗಳನ್ನು, ರಚನೆಗಳನ್ನು ಮತ್ತು ಪುರಾಣಕತೆಗಳಲ್ಲಿ ಮಾರ್ಪಾಟುಗಳನ್ನು ನಮ್ಮ ಬರಹಗಾರರು ಬಳಸಿಕೊಂಡರು. ಹೀಗೆ ಮಾಡುವಾಗ ಪ್ರಾದೇಶಿಕ ಅನುಭವದ ದಟ್ಟತೆಯನ್ನು, ಸಾಂದ್ರತೆಯನ್ನು ನಮ್ಮ ಬರಹಗಾರರು ಬಳಸಿಕೊಳ್ಳಬೇಕಾಯಿತು. ಅಂದರೆ ಉದ್ದೇಶಪೂರ್ವಕವಾಗಿ ತಮ್ಮ ದೃಷ್ಟಿಯನ್ನು ತೀರ ಹತ್ತಿರದ ವಾಸ್ತವದ ಮೇಲೆ ಕುದುರಿಸಿಕೊಂಡರು. ನಮ್ಮ ಗತ್ಟಿಯಾದ ಕೃತಿಗಳ ಯಶಸ್ಸು ಪ್ರಾದೇಶಿಕ ಬದುಕಿನ ವಿನ್ಯಾಸವನ್ನು, ಆ ವಿನ್ಯಾದಲ್ಲಿ ಹುಟ್ಟುವ ಮೌಲ್ಯಕಲ್ಪನೆಯನ್ನು ಬಳಸಿಕೊಳ್ಳುವುದರಲ್ಲಿದೆ. ಆದರೆ ಇದರ ಇನ್ನೊಂದು ಮಗ್ಗುಲೆಂದರೆ ಪ್ರಾದೇಶಿಕ ಅನುಭವವನ್ನು ಮೀರಿದ ಎಲ್ಲ ರಾಜಕೀಯ ಸಾಮಾಜಿಕ ವಾಸ್ತವಗಳು ನಮ್ಮ ಬರಹಗಾರರಿಗೆ ಅಮೂರ್ತಗಳಾಗಿ ಉಳಿದುಬಿಟ್ಟವು. ಇಂಥ ಸಂದರ್ಭದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ಅವರಿಗೆ ಅನುಭವದ ಅಂಶವಾಗಿ ಕಾಣದೇ ಇದ್ದುದು ಸಹಜವಾಗಿದೆ.

ಇಲ್ಲಿ ಗುರುತಿಸಿಕೊಳ್ಳಬೇಕಾದ ಇನ್ನೊಂದು ವಿಶಿಷ್ಟತೆಯೆಂದರೆ ನಮ್ಮಲ್ಲಿ ಚಾರಿತ್ರಿಕ ಸಂವೇದನೆಯ ಬದಲು ಸ್ಥೂಲವಾಗಿ ‘ಧಾರ್ಮಿಕ’ವೆನ್ನಬಹುದಾದ ಸಂವೇದನೆ ಬೆಳೆಯುತ್ತಾ ಬಂದದ್ದು. ಚಾರಿತ್ರಿಕ ಸಂವೇದನೆ ಮನುಷ್ಯನ ಬದುಕು ಮತ್ತು ವ್ಯವಸ್ಥೆಯ ಮಧ್ಯದ ಸಂಬಂಧಗಳ ಬಗ್ಗೆ ಎಚ್ಚರವನ್ನು ಹುಟ್ಟಿಸುತ್ತದೆ. ಒಂದು ನಿಟ್ಟಿನಿಂದ ಇನ್ನೊಂದು ನಿಟ್ಟಿಗೆ ಸಮಾಜದ ಬದುಕು ಬದಲಾಗುತ್ತಾ ಹೋಗುವುದರ ಬಗ್ಗೆ ತಿಳುವಳಿಕೆಯನ್ನು ಬೆಳೆಸುತ್ತದೆ. ಮನುಷ್ಯನ ವೈಯಕ್ತಿಕ ಬದುಕನ್ನು ನಿಯಂತ್ರಿಸುವ ಸಾಮಾಜಿಕ ಶಕ್ತಿಗಳ ಬಗ್ಗೆ ಅರಿವನ್ನು ಸೂಕ್ಷ್ಮಗೊಳಿಸುತ್ತದೆ. ಧಾರ್ಮಿಕ ಸಂವೇದನೆ ಎಲ್ಲ ಮನುಷ್ಯರಲ್ಲಿ ಸಾಮಾನ್ಯವಾಗಿರುವ ಮನುಷ್ಯ ಸ್ವಭಾವದ ಅಂಶಗಳಿಗೆ ಹೆಚ್ಚಿನ ಮಹತ್ವ ಕೊಡುತ್ತದೆ.ಈ ಅಂಶಗಳು ಧಾರ್ಮಿಕ ಸಂವೇದನೆಯ ದೃಷ್ಟಿಯಲ್ಲಿ ನಿರಂತರವಾದ ಸತ್ಯಗಳು. ಈ ಅಂಶಗಳ ಮತ್ತು ನಿರಂತರವಾದ ಅಲೌಕಿಕ ಶಕ್ತಿಗಳ ಸಂಬಂಧಗಳನ್ನು ಧಾರ್ಮಿಕ ಸಂವೇದನೆ ವಿವೇಚಿಸುತ್ತದೆ. ಚಾರಿತ್ರಿಕ ಸಂವೇದನೆ ಬದಲಾವಣೆಯ ಮಹತ್ವವನ್ನು ಗ್ರಹಿಸಿದರೆ ಧಾರ್ಮಿಕ ಸಂವೇದನೆ ನಿರಂತರವಾದ ಅಂಶಗಳ ಮಹತ್ವವನ್ನು ಗ್ರಹಿಸುತ್ತದೆ. ಧಾರ್ಮಿಕ ಸಂವೇದನೆ ಪ್ರಭಲವಾಗಿದ್ದರಿಂದ ನಮ್ಮ ಕೃತಿಗಳು ಮನುಷ್ಯ ಸ್ವಾಭಾವದ ವೈವಿಧ್ಯಗಳನ್ನು, ಸೂಕ್ಷ್ಮಗಳನ್ನು ಪ್ರಬುದ್ಧವಾಗಿ ಚಿತ್ರಿಸುತ್ತವೆ. ಆದರೆ ಮನುಷ್ಯ ಸ್ವಾಭಾವದ ಹಿನ್ನೆಲೆಯಾಗಿರುವ ಚರಿತ್ರೆಯ ತುಡಿತಗಳನ್ನು ಅಲಕ್ಷ್ಯ ಮಾಡುತ್ತವೆ. ನಮ್ಮ ಕಥಾ ಸಾಹಿತ್ಯದ ಶ್ರೇಷ್ಠ ಪಾತ್ರಗಳು ಮನುಷ್ಯ ಸ್ವಭಾವದ ಮೂರ್ತ ಅಭಿವ್ಯಕ್ತಿಗಳಾಗಿವೆ. ಚರಿತ್ರೆಯ ಒಂದು ಯುಗದ ಸಂವೇದನೆಯ ಸಂಕೇತಗಳಾಗಿಲ್ಲ.

ರಾಷ್ಟ್ರೀಯತೆಯ ಪರಿಕಲ್ಪನೆ ಸ್ವಾತಂತ್ರ್ಯಪೂರ್ವ ಸಾಹಿತ್ಯದ ಒಳ್ಳೆಯ ಕೃತಿಗಳಲ್ಲಿ ಗೋಚರಿಸದೆ ಇದ್ದುದನ್ನು ಅರ್ಥಮಾಡಿಕೊಳ್ಳಲು ಈ ಕೆಲವು ಅಂಶಗಳು ಸಹಾಯವಾಗುತ್ತವೆಯೆಂದು ನಂಬಿದ್ದೇನೆ. ವಸ್ತು ಮತ್ತು ವಿನ್ಯಾಸದ ದೃಷ್ಟಿಯಿಂದ ಸ್ವಾತಂತ್ರ್ಯಪೂರ್ವಸಾಹಿತ್ಯ ವಾಸ್ತವವಾದಿ ಸಾಹಿತ್ಯವಾಗಿದ್ದರಿಂದ ವಾಸ್ತವದ ಸಮಗ್ರವಾದ ಅರಿವು ನಮ್ಮ ಚಿಂತನೆಯಲ್ಲಿ ಇಲ್ಲದಿರುವುದನ್ನು ಗಮನಿಸಲೇಬೇಕಾಗುತ್ತದೆ. ನಮ್ಮ ಬರಹಗಾರರಿಗೆ ಸಮಕಾಲೀನ ವಾಸ್ತವವೆಂದರೆ ಅವರಿಗೆ ತೀರ ಹತ್ತಿರದಲ್ಲಿದ್ದ ಪ್ರಾದೇಶಿಕ ವಾಸ್ತವವಾಗಿತ್ತು ಎನ್ನುವುದನ್ನು ನೆನಪಿನಲ್ಲಿಡಬೇಕಾಗುತ್ತದೆ.

ಸಂವೇದನೆಯಲ್ಲಾದ ಬದಲಾವಣೆಗಳ ದೃಷ್ಟಿಯಿಂದ ನಮ್ಮ ವಾಸ್ತವವಾದಿ ಕಥಾ ಸಾಹಿತ್ಯದಲ್ಲಿ ಎರಡು ಘಟ್ಟಗಳನ್ನು ಗುರುತಿಸಬಹುದು. ಕಥಾ ಸಾಹಿತ್ಯದ ಆರಂಭಕಾಲದ ವಾಸ್ತವವಾದ ಮತ್ತು ಅನಂತರದ ವಾಸ್ತವವಾದ. ಮೊದಲ ಹಂತದ ಕೃತಿಗಳ ಮುಖ್ಯ ಲಕ್ಷಣವೆಂದರೆ ಆ ಹಂತದ ಬರಹಗಾರರು ಸಮುದಾಯದ ಮೌಲ್ಯಕಲ್ಪನೆಗಳನ್ನು ಇಡಿಯಾಗಿ ಸ್ವೀಕರಿಸಿದ್ದರು. ಅವರ ವೈಯಕ್ತಿಕ ನಂಬುಗೆ ಮತ್ತು ಸಮುದಾಯದ ನಂಬುಗೆ ನಡವಳಿಕೆಗಳ ಮಧ್ಯೆ ಇನ್ನೂ ಬಿರುಕು ಉಂಟಾಗಿರಲಿಲ್ಲ. ಒಂದು ನಿಶ್ಚಿತವಾದ ಮೌಲ್ಯಕಲ್ಪನೆ ಬರಹಗಾರರಿಗಿದ್ದದ್ದರಿಂದ ಮತ್ತು ಅದು ಸಮಾಜಕ್ಕೆ ಸ್ವೀಕೃತವಾಗಿದೆ ಎನ್ನುವ ಶ್ರದ್ಧೆ ಇದ್ದದ್ದರಿಂದ ತಮ್ಮ ಕೃತಿಗಳಲ್ಲಿ ಆ ಮೌಲ್ಯಗಳನ್ನು ಪರೀಕ್ಷಿಸುವ ಅವಶ್ಯಕತೆ ಅವರಿಗೆ ತೋರಲಿಲ್ಲ. ಬದಲಾಗಿ ಆ ಮೌಲ್ಯಗಳ ಅಭಿವ್ಯಕ್ತಿಯಾಗಿರುವ ಪಾತ್ರಗಳನ್ನು ಸೃಷ್ಟಿಸುವುದಕ್ಕೆ ಮತ್ತು ಕತೆಯನ್ನು ಹೇಳುವುದಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟರು. ಮೊದಲ ಹಂತದ ಕಾದಂಬರಿಗಳಲ್ಲಿ ನೀತಿಪರವಾದ ದೃಷ್ಟಿಕೋನ ಸ್ಪಷ್ಟವಾಗಿದೆ. ಆದರೂ ನೀತಿಯ ಬೋಧನೆಗಿಂತ ಸುತ್ತಲಿನ ವಾಸ್ತವವನ್ನು ಅದು ಇದ್ದಹಾಗೆ ಹಿಡಿದುಕೊಡುವ ಕೆಲಸವೇ ಅವರಿಗೆ ಮುಖ್ಯವಾಗಿದ್ದಂತೆ ತೋರುತ್ತದೆ. ಎಂ.ಎಸ್. ಪುಟ್ಟಣ್ಣನವರ ‘ಮಾಡಿದ್ದುಣ್ಣೋ ಮಹಾರಾಯ’, ಬೊಳುವಾರು ಬಾಬುರಾಯರ ‘ವಾಗ್ದೇವಿ’ ಮತ್ತು ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ’ ಈ ಹಂತದ ಮುಖ್ಯ ಕೃತಿಗಳಾಗಿವೆ. ಈ ಕೃತಿಗಳು ನುಡಿಗಟ್ಟಿನಲ್ಲಿ, ಸನ್ನಿವೇಶ ನಿರ್ಮಾಣದಲ್ಲಿ ಪ್ರಾದೇಶಿಕ ಕೃತಿಗಳಾಗಿವೆ. ನಿಶ್ಚಿತವಾದ ಮೌಲ್ಯಕಲ್ಪನೆಯ ಬೆಂಬಲವಿರುವುದರಿಂದ ಈ ಬರಹಗಾರರು ನಿರ್ಭಿಡೆಯಾಗಿ ಕೆಡುಕಿನ ಬಗ್ಗೆ ಧಾರ್ಮಿಕ ಸಂಸ್ಥೆಗಳಲ್ಲಿ ಕಾಣುವ ಹೊಲಸಿನ ಬಗ್ಗೆ ಬರೆಯುತ್ತಾರೆ. ಅನನ್ಯವಾದ ಕುತೂಹಲದಿಂದ ಪಾತ್ರಗಳ ಶೀಲ ಮತ್ತು ನಡವಳಿಕೆಗಳನ್ನು ಗಮನಿಸುತ್ತಾರೆ. ವ್ಯಕ್ತಿನಿರಪೇಕ್ಷವಾದ ಸಂಪ್ರದಾಯವೊಂದರಲ್ಲಿ ಮನುಷ್ಯಸ್ವಭಾವದ ಮೂರ್ತವಾದ ಚಿತ್ರಣವನ್ನು ಕೊಡುವುದು ಅಂದಿನಮಟ್ಟಿಗೆ ಮಹತ್ವಪೂರ್ಣವಾದ ಬೆಳವಣಿಗೆಯಾಗಿತ್ತು ನಿಜ. ಆದರೆ ಮೂರ್ತವಾದ ವಾಸ್ತವಿಕತೆ ಹೆಚ್ಚಿನದನ್ನು ಧ್ವನಿಸುವಂತೆ ಮಾಡುವ ಸಾಮರ್ಥ್ಯ ಈ ಬರಹಗಾಗರಿಗಿಲ್ಲ. ‘ಮಾಡಿದ್ದುಣ್ಣೋ ಮಹಾರಾಯ’ ಕಾದಂಬರಿ ಒಳಿತು-ಕೆಡಕು ಸಂಘರ್ಷವನ್ನು, ಸಮುದಾಯದ ಏಕಸೂತ್ರತೆಗೆ ನೈತಿಕತೆಯ ಅವಶ್ಯಕತೆಯನ್ನು ಶಕ್ತಿಪೂರ್ಣವಾಗಿ ಚಿತ್ರಿಸುತ್ತದೆ. ಅಧಿಕಾರಶಾಹಿಯ ಭ್ರಷ್ಟತೆಯನ್ನು ವಿಶ್ಲೇಷಿಸುತ್ತದೆ. ಆದರೆ ಇದಾವುದೂ ಕಾದಂಬರಿಗೆ ತಾತ್ವಿಕ ಆಯಾಮವನ್ನು ಕೊಡುವಷ್ಟು ಸಮರ್ಥವಾಗಿಲ್ಲ. ವಾಸ್ತವ ಮತ್ತು ಭ್ರಮೆಗಳ ಮಧ್ಯೆ ಪಾತ್ರಗಳ ಬೆಳವಣಿಗೆಯನ್ನು ಶೋಧಿಸುವುದು ಯೂರೋಪಿನ ಸಂದರ್ಭದಲ್ಲಿ ಕಾದಂಬರಿಯ ಮುಖ್ಯ ಕೊಡುಗೆಯಾಗಿದೆ. ಆದರೆ ನಮ್ಮ ಕಾದಂಬರಿ ಈ ಹಂತದಲ್ಲಿ ವಾಸ್ತವದ ಸ್ಥಿರಚಿತ್ರಗಳನ್ನು ಕೊಡುವುದರಲ್ಲೇ ಕೃತಾರ್ಥವಾಗುತ್ತವೆ. ಮೊದಲ ಹಂತದ ಕಾದಂಬರಿಗಳು ‘ಸಾಮಾಜಿಕ’ವೆನ್ನುವ ಹಣೆಚೀಟಿಯನ್ನು ಪಡೆಯುತ್ತವೆಯಾದರೂ ಈ ಬರಹಗಾರರು ತಮ್ಮ ಸಂವೇದನೆಯನ್ನು ಸಡಿಲವಾದ ಧಾರ್ಮಿಕ ಚೌಕಟ್ಟಿನಲ್ಲಿ ದುಡಿಸಿಕೊಳ್ಳುತ್ತಾರೆ. ಅವರು ಮನುಷ್ಯನ ಸ್ವಭಾವದ ಒಳಿತು-ಕೆಡಕುಗಳ ನೈತಿಕ ಹಿನ್ನೆಲೆಯಲ್ಲಿ ನೋಡುತ್ತಾರೆಯೆ ಹೊರತು ಸಾಮಾಜಿಕ ವಾಸ್ತವದ ಹಿನ್ನೆಲೆಯಲ್ಲಿ ನೋಡುವುದಿಲ್ಲ.
ಕೆರೂರು ವಾಸುದೇವಾಚಾರ್ಯರ ಐತಿಹಾಸಿಕ ಕತೆಗಳು ವಸಾಹತುಶಾಹಿ ಅನುಭವದಿಂದ ಶುರುವಾದ ಇನ್ನೊಂದು ಪ್ರಕ್ರಿಯೆಯನ್ನು ತೋರಿಸುತ್ತವೆ. ಈ ಕತೆಗಳ ವಸ್ತು ಇತಿಹಾಸದ ವಾಸ್ತವವಾದರೂ ಶೈಲಿ ಮತ್ತು ಧಾಟಿಯಲ್ಲಿ ಪುರಾಣಕತೆಗಳನ್ನು ಹೋಲುತ್ತವೆ. ಆಡುಮಾತಿನ ನುಡಿಗಟ್ಟನ್ನು ಕೆಚ್ಚಿನಿಂದ ಬಳಸಬಲ್ಲ ಕೆರೂರರು ಈ ಕತೆಗಳಲ್ಲಿ ಕೃತ್ರಿಮವಾದ ಶೈಲಿಯನ್ನು ಬಳಸುತ್ತಾರೆ. ಶೈಲಿ ಮತ್ತು ಧೋರಣೆಗಳನ್ನು ಪರಿಶೀಲಿಸಿದರೆ ಕನ್ನಡದ ಐತಿಹಾಸಿಕ ಕತೆಗಳು ಇತಿಹಾಸವನ್ನು ಪುರಾಣವನ್ನಾಗಿಸುವ, ವೈಭವೀಕರಿಸುವ ಗೀಳಿನ ಅಪಾಯಗಳನ್ನು ತೋರಿಸುತ್ತವೆ. ಉದ್ದೇಶಪೂರ್ವಕವಾಗಿ ರೆಟರಿಕ್ಕನ್ನು ಬಳಸುವ ಮೂಲಕ ಗತಜೀವನದ ಬಗ್ಗೆ ತಮ್ಮ ಆರಾಧಕ ದೃಷ್ಟಿಕೋನವನ್ನು ಬರಹಗಾರರು ಓದುಗರ ಮೇಲೆ ಹೇರಲು ಪ್ರಯತ್ನಿಸುತ್ತಾರೆ. ವಸಾಹತುಸಾಹಿಯ ಅನುಭವದಿಂದ ಉಂಟಾದ ಮಾನಸಿಕ ಹಿಂಜರಿತದಿಂದ ಈ ಅಭಾಸ ಹುಟ್ಟಿಕೊಂಡಿತು. ಮಾಸ್ತಿಯವರು ತಮ್ಮ ಐತಿಹಾಸಿಕ ಕತೆಗಳಲ್ಲಿ ಇತಿಹಾಸ ರಮ್ಯವಾಗದಂತೆ ಪಾತ್ರಗಲ ನಡುವಳಿಕೆ ಮತ್ತು ದೃಶ್ಯಗಳ ವಾಸ್ತವಿಕತೆಯನ್ನು ದುಡಿಸಿಕೊಳ್ಳುತ್ತಾರೆ. ಆದರೆ ಸೂಕ್ಷ್ಮವಾಗಿ ನೋಡಿದಾಗ ವಾಸ್ತವಿಕತೆಯ ಪದರಿನ ಕೆಳಗೆ ಹಿಂದಿನ ಬದುಕಿನಲ್ಲಿ ಅವರು ಕಾಣುವ ಮೌಲ್ಯಗಳ ಬಗ್ಗೆ ಆರಾಧಕ ದೃಷ್ಟಿಯಿರುವುದು ಕಂಡುಬರುತ್ತದೆ. ‘ವಸುಮತ್ತಿ’ಯಂಥ ಕತೆಗಳಲ್ಲಿ ಗತಜೀವನದ ಬಗ್ಗೆ ಮರುಹಂಬಲವಿಲ್ಲದಿದ್ದರೂ ಆ ಬದುಕಿನ ಘನತೆಯ ಬಗ್ಗೆ ಗಾಢವಾದ ಶ್ರದ್ಧೆಯಿದೆ. ಇತರ ಬರಹಗಾರರು ಗತಕಾಲವನ್ನು ರಮ್ಯಗೊಳಿಸಿ ನೋಡಿದ್ದರಿಂದ ಆ ಬದುಕಿನ ಜತೆಗೆ ಅರ್ಥಪೂರ್ಣ ಸಂಬಂಧಗಳನ್ನು ಕಂಡುಕೊಳ್ಳಲಿಲ್ಲ.

ದೇಶೀಯ ಮತ್ತು ವಿದೇಶೀಯ ಸಂಸ್ಕೃತಿಗಳ ಸಬಂಧಗಳನ್ನು ಕುರಿತ ಮಾಸ್ತಿಯವರ ಕತೆಗಳು ಪರೋಕ್ಷವಾಗಿ ರಾಷ್ಟ್ರೀಯತೆಯ ಪರಿಕಲ್ಪನೆಯ ಬಗ್ಗೆ ಮುಖ್ಯವಾದ ವಿಷಯವನ್ನು ಗಮನಕ್ಕೆ ತರುತ್ತವೆ. ಎರಡು ಸಂಸ್ಕೃತಿಗಳ ವೈಷಮ್ಯಗಳನ್ನು ವಿಶ್ಲೇಷಿಸುವ ಈ ಕತೆಗಳಲ್ಲಿ ದೇಶೀಯ ಸಂಸ್ಕೃತಿ ನಿರಂತರವಾದ ಕೆಲವು ಮಾನವೀಯ ಮೌಲ್ಯಗಳ ಆಕರವಾಗಿ ಚಿತ್ರಿತವಾಗುತ್ತವೆ. ಎಲ್ಲಿಯೂ ಒಂದು ರಾಜಕೀಯ ವ್ಯವಸ್ಥೆಯ ಆಂತರಿಕ ರಚನೆಯಾಗಿ ಕಂಡುಬರುವುದಿಲ್ಲ. ಸ್ವಾತಂತ್ರ್ಯಪೂರ್ವ ಬರಹಗಾರರಿಗೆ ರಾಷ್ಟ್ರವೆಂದರೆ ಒಂದು ಸಾಂಸ್ಕೃತಿಕ ಸಮುದಾಯವಾಗಿತ್ತು. ಆದ್ದರಿಂದಲೇ ರಾಜಕೀಯ ಬದಲಾವಣೆಗಳಿಗಿಂತ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳ ಪ್ರಶ್ನೆ ಕೆರೂರರಿಂದ ಹಿಡಿದು ಎಲ್ಲ ಬರಹಗಾರರಿಗೂ ಮುಖ್ಯವಾದಂತೆ ತೋರುತ್ತದೆ. ನಮ್ಮ ಅಂದಿನ ಬರಹಗಾರರ ಕಲ್ಪನೆಯ ರಾಷ್ಟ್ರ ಮಾನವೀಯ ಮೌಲ್ಯಗಳ ಒಂದು ಆದರ್ಶ ವ್ಯವಸ್ಥೆ ಮಾತ್ರವಾಗಿತ್ತು. ರಾಜಕೀಯದ ಆಯಾಮ ಅವರಿಗೆ ಗೌಣವಾಗಿಯೇ ಉಳಿಯಿತು.

ರಾಷ್ಟ್ರದ ಪರಿಕಲ್ಪನೆ ನಮ್ಮ ಬರಹಗಾರರಿಗೆ ಮೌಲ್ಯಗಳ ಒಂದು ಆದರ್ಶ ವ್ಯವಸ್ಥೆಯಾಗಿ ಕಂಡದ್ದು ಅವರು ಸಮಕಾಲೀನ ವಾಸ್ತವವನ್ನು ಗ್ರಹಿಸುವುದರ ಮೇಲೆ ತೀರ ವಿಶಿಷ್ಟವಾದ ಪರಿಣಾಮ ಉಂಟುಮಾಡಿತು. ಅವರ ದೃಷ್ಟಿ ಮೌಲ್ಯಗಳ ಜಗತ್ತಿನ ಮೇಲೆ ಕುದುರಿದ್ದರಿಂದ ಮೌಲ್ಯ ವ್ಯವಸ್ಥೆಯಲ್ಲಾದ ಸೂಕ್ಷ್ಮವಾದ ಪಲ್ಲಟಗಳನ್ನು ಅವರು ಗುರುತಿಸುತ್ತಾರೆ. ವ್ಯವಸ್ಥೆಯ ರಚನೆಯಲ್ಲಾದ ಪಲ್ಲಟಗಳ ಬದಲು ಆ ಬದಲಾವಣೆಗಳ ಪರೋಕ್ಷವಾದ ಪ್ರತಿಫಲನಗಳಾದ ಮೌಲ್ಯಗಳ ಬದಲಾವಣೆಯನ್ನು ಗ್ರಹಿಸುವ ನಮ್ಮ ಬರಹಗಾರರ ಕೆಲಸ ಕುತೂಹಲಕಾರಿಯಾಗಿದೆ. ಇದನ್ನು ಕನ್ನಡದ ವಾಸ್ತವವಾದಿ ಸಂಪ್ರದಾಯದ ಎರಡನೇ ಹಂತದ ಬರಹಗಾರರಲ್ಲಿ ಕಾಣಬಹುದು. ಸಮುದಾಯದಲ್ಲಿ ಹುಟ್ಟಿಕೊಂಡಿದ್ದ ಬಿರುಕುಗಳಿಂದಾಗಿ ಈ ಬರಹಗಾರರಿಗೆ ಸಮಾಜದ ಮೌಲ್ಯಕಲ್ಪನೆಗಳ ಜತೆಗೆ ಪೂರ್ತಿ ತಾದ್ಯಾತ್ಮ್ಯ ಹೊಂದುವುದು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಸಮಾಜದ ನಂಬಿಕೆ ನಡವಳಿಕೆಗಳನ್ನು ಇವರು ಹೆಚ್ಚು ವಿಮರ್ಶಾತ್ಮಕವಾಗಿ ನೋಡಬಲ್ಲರು. ಪರಂಪರಾನುಗತವಾದ ಸಮುದಾಯವೊಂದು ಒಡೆದುಹೋಗುತ್ತಿರುವ ಮತ್ತು ಮೌಲ್ಯಗಳು ಶಿಥಿಲಗೊಳ್ಳುತ್ತಿರುವುದರ ಬಗ್ಗೆ ಇವರು ಎಚ್ಚರವನ್ನು ತೋರಿಸುತ್ತಾರೆ. ಇವರ ಕೃತಿಗಳು ಯುಗದ ಸಂವೇದನೆಯ ಅಭಿವ್ಯಕ್ತಿಗಳಾಗಿರದೇ ಇರಬಹುದು. ಆದರೆ ದೇಶದಲ್ಲಿ ನಡೆದಿದ್ದ ಸಮಗ್ರ ಮಂಥನದ ಪರೋಕ್ಷವಾದ ಅಭಿವ್ಯಕ್ತಿಗಳಾಗಿ ಮುಖ್ಯವಾಗಿವೆ.

ಅನುಭವದ ಒರೆಗಲ್ಲಿನಿಂದ ಜೀವನದ ಟೊಳ್ಳುಗಟ್ಟಿಗಳನ್ನು ಪರೀಕ್ಷಿಸಬೇಕೆನ್ನುವ ವೈಚಾರಿಕ ನಿಲುವಿನಿಂದ ಬರೆಯುವ ಶಿವರಾಮ ಕಾರಂತರು ಕನ್ನಡ ಸಂಪ್ರದಾಯದ ಸಂದರ್ಭದಲ್ಲಿ ವಿಶಿಷ್ಟವಾಗಿ ಕಾಣುತ್ತಾರೆ. ಮರುಹಂಬಲದ ಭಾವುಕತೆಯಾಗಲಿ, ಸ್ವಾತಂತ್ರ್ಯಪೂರ್ವಯುಗದ ಆದರ್ಶಪ್ರಿಯತೆಯಾಗಲಿ ಅವರಲ್ಲಿ ಕಾಣುವುದಿಲ್ಲ. ಇಂಥ ಸುಲಭವಾದ ಅಪಾಯಕಾರಿ ನಿಲುವುಗಳಿಂದ ಪಾರಾಗಲು ಅವರು ಅನುಭವವನ್ನು ಪ್ರಮಾಣವೆಂದು ನೋಡುವ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡರು. ಪಶ್ಚಿಮದ ಚಿಂತನೆ ಮತ್ತು ಗಾಂಧೀಯುಗದ ಆದರ್ಶವಾದದ ಅತ್ಯುತ್ತಮ ಅಂಶಗಳು ಅವರಲ್ಲಿ ಹರಳುಗಟ್ಟಿ ನೈತಿಕ ಮಾನವತಾವಾದೀ ಜೀವನದೃಷ್ಟಿಯನ್ನು ಕೂಡಿಸಿದವು. ಮನುಷ್ಯಸ್ವಭಾವದ ಒಳಿತು-ಕೆಡಕುಗಳ ಸಾಧ್ಯತೆಯನ್ನು ಅನುಭವದ ಸತ್ಯದ ಹಿನ್ನೆಲೆಯಲ್ಲಿ ಅವರು ಪರಿಶೀಲಿಸುತ್ತಾರೆ.

ಗಾಂಧೀಯುಗದ ಆದರ್ಶವಾದ ಅವರ ಬರಹಗಳಲ್ಲಿ ಮನುಷ್ಯನ ಉತ್ತಮಿಕೆಯ ಸಾಧ್ಯತೆಯಾಗಿ ಕಂಡುಬರುತ್ತದೆ. ವಿಚಾರವಾದದ ಬೆಂಬಲದಿಂದ ಅವರು ಸುಲಭವಾದ ಆದರ್ಶೀಕರಣ, ಭಾವುಕತೆಯಿಂದ ಪಾರಾಗುತ್ತಾರೆ. ಆದರೆ ಮನುಷ್ಯನ ಸ್ವಭಾವದಲ್ಲಿ ಹುದುಗಿರುವ ಒಳ್ಳೆಯತನದಲ್ಲಿ ಅವರು ತೋರುವ ನಂಬಿಕೆ ಗಾಂಧೀವಾದಿ ಮಾನವತಾವಾದದಿಂದ ಬೇರೆಯಾಗಿಲ್ಲ. ಹೀಗೆ ಎರದು ತಲೆಮಾರುಗಳಲ್ಲಿ ಬದುಕಿದ ಬರಹಗಾರರಿಗೆ ಒಂದು ಜಗತ್ತಿನ ಮೌಲ್ಯಕಲ್ಪನೆಯ ಚೌಕತ್ಟಿನಲ್ಲಿ ಇನ್ನೊಂದು ಜಗತ್ತಿನ ವಾಸ್ತವವನ್ನು ಬೆಲೆಗಟ್ಟಿ ನೋಡುವುದು ಸಾಧ್ಯವಾಯಿತು. ಆದರೆ ನನ್ನ ತಲೆಮಾರಿನವರಿಗೆ ಇಂಥ ಸವಲತ್ತು ಇಲ್ಲದ್ದರಿಂದ ಮತ್ತು ಹಿಂದಿನ ಬದುಕಿನ ಜತೆಗೆ ಅರ್ಥಪೂರ್ಣ ಸಂಬಂಧಗಳಿಲ್ಲದ್ದರಿಂದ ನಾವು ಆ ಬದುಕನ್ನು ಹೊರಗಿನವರಂತೆ, ನಮ್ಮ ತುರ್ತುಗಳಿಗೆ ತಕ್ಕಂತೆ ಪುನಃಸೃಷ್ಟಿಸಿ ನೋಡುತ್ತೇವೆ. ಸ್ವಾತಂತ್ರ್ಯಪೂರ್ವ ಸಾಹುತ್ಯದಲ್ಲಿನ ಆದರ್ಶ ಮತ್ತು ಸಮಕಾಲೀನ ವಾಸ್ತವಗಳೆರಡೂ ನಮ್ಮ ಮಟ್ಟಿಗೆ ಹೀಗೆ ಸಾಹಿತ್ಯದ ಓದಿನ ಮೂಲಕ ಪುನಃಸೃಷ್ಟಿಯಾಗಲೇಬೇಕಾದಂಥವು. ಅಂದಿನ ಬರಹಗಾರರು ತಮ್ಮ ಆದರ್ಶದ ನೆಲೆಗಳನ್ನು ಎಲ್ಲಿ ಗುರುತಿಸಿಕೊಂಡರು ಮತ್ತು ಎಂಥ ವಾಸ್ತವವನ್ನು ತಮ್ಮ ಬರಹದ ವಿನ್ಯಾಸವಾಗಿ ಬಳಸಿಕೊಂಡರು ಎನ್ನುವುದು ಅವರ ಬರಹಗಳಿಂದಲೇ ನಿರ್ಧರಿತವಾಗಬೇಕೇ ಹೊರತು ಚರಿತ್ರೆ ಅಥವಾ ಸಮಾಜಶಾಸ್ತ್ರದ ಪುಸ್ತಕಗಳು ಕೊಡುವ ಮಾಹಿತಿಯಿಂದಲ್ಲ. ಅಂದಿನ ಬರಹಗಾರರ ಸೃಷ್ಟಿಶೀಲ ಬರಹದ ರುಜುತ್ವ(ಔಥೆನ್ತಿಚಿತ್ಯ್) ಆ ಬರಹದ ಯಶಸ್ಸಿನಿಂದ ನಿರ್ಧರಿತವಾಗಬೇಕು, ಇತರ ಮಾನದಂಡಗಳಿಂದಲ್ಲ. ಈ ಅಂಶವನ್ನು ಇಷ್ಟು ವಿಶದವಾಗಿ ಹೇಳಲು ಕಾರಣವಿದೆ. ಸ್ವಾತಂತ್ರ್ಯಪೂರ್ವ ಸಾಹಿತ್ಯದ ಬಗ್ಗೆ ಮಾತನಾಡುವಾಗ ನಾವು ಅಂದಿನ ಬದುಕಿನ ಬಗ್ಗೆ ಇಟ್ಟುಕೊಂಡ ಪೂರ್ವಗ್ರಹಗಳಿಂದ ಹೊರಡುತ್ತೇವೆ. ಅಂದಿನ ಕೃತಿಗಳ ಅನುಭವದಿಂದಲ್ಲ ಎನ್ನುವ ಗುಮಾನಿ ತಪ್ಪಲ್ಲವೆಂದು ಅಂದುಕೊಳ್ಳುತ್ತೇನೆ.

ನಮ್ಮ ಸಂಸ್ಕೃತಿಯ ಮನಸ್ಸನ್ನು ಚಾರಿತ್ರಿಕ ಪ್ರಜ್ಞೆಯ ಬದಲು ಧಾರ್ಮಿಕ ಪ್ರಜ್ಞೆ ಆವರಿಸಿದ್ದರಿಂದ ರಾಷ್ಟ್ರೀಯತೆಯ ಆದರ್ಶ ಇದರಿಂದಾಗಿ ಅಮೂರ್ತವಾಗಿಯೇ ಉಳಿಯಿತು. ಈ ಆದರ್ಶ ನಮ್ಮ ಬರಹಗಾರರ ಪ್ರಜ್ಞೆಯನ್ನು ಪ್ರವೇಶಿಸಿದಾಗಲೂ ಅವರು ಆ ಆದರ್ಶವನ್ನು ಅನಿವಾರ್ಯವಾಗಿಯೇ ಧಾರ್ಮಿಕ ಅಥವಾ ಸಾಂಸ್ಕೃತಿಕ ಪರಿಕರಗಳೊಂದಿಗೆ ಬೆರೆಸಬೇಕಾಯಿತು. ಹಾಗೆ ಬೆರೆಸುವುದು ಸಾಧ್ಯವಿಲ್ಲದಿದ್ದಾಗ ಆ ಆದರ್ಶ ರಕ್ತಮಾಂಸವಿಲ್ಲದ ಆಶಯಮಾತ್ರವಾಗಿ ಉಳಿಯಿತು. ಸ್ವಾತಂತ್ರ್ಯಪೂರ್ವ ಕಥಾಸಾಹಿತ್ಯದಲ್ಲಿ ಇದನ್ನು ನಿಚ್ಚಳವಾಗಿ ನೋಡುತ್ತೇವೆ. ರಾಶ್ಟ್ರೀಯತೆಯ ರಾಜಕೀಯ ಮಗ್ಗುಲುಗಳನ್ನು ನೇರವಾಗಿ ವಿಷ್ಲೇಶಿಸುವ ಅಥವಾ ಸ್ವಾತಂತ್ರ್ಯ ಹೋರಾಟದ ಬಗೆಗಿರುವ ಸಾಹಿತ್ಯ ಸಾಮಾನ್ಯವಾಗಿ ಸತ್ವಹೀನವಾಗಿದೆ. ಬದುಕಿನ ವಾಸನೆಯಿಲ್ಲದಂತಿದೆ. ಇಂಥ ಕೃತಿಗಳಲ್ಲಿ ಪಾತ್ರಗಳು, ಸನ್ನಿವೇಶಗಳು ದಟ್ಟವಾದ ಜೀವಂತಿಕೆಯನ್ನಾಗಲಿ, ಒಂದು ಸ್ಥಳ-ಕಾಲಕ್ಕೆ ಸೇರಿದ್ದನ್ನು ಸಾಬೀತು ಮಾಡುವ ವಿವರಗಳ ಸಾಂದ್ರತೆಯನ್ನು ಪಡೆದಿಲ್ಲ. ಅಷ್ಟೇ ಏಕೆ ಬರಹಗಾರರು ಅಲ್ಲಿ ಬಳಸುವ ವರ್ಣನೆ ಸಂಭಾಷಣೆಗಳ ಭಾಷೆ ಜೀವಂತ ಭಾಷೆಯ ನುಡಿಗಟ್ಟನ್ನು ಮರೆತುಬಿಡುತ್ತದೆ. ರಾಷ್ಟ್ರೀಯತೆ ಒಂದು ವೈಚಾರಿಕ ಆಶಯ ಮಾತ್ರವಾಗಿ ಉಳಿದುಕೊಳ್ಳುತ್ತದೆ. ಬರಹಗಾರರ ಸೃಷ್ಟಿಶೀಲ ಪ್ರಜ್ಞೆಯ ಆಳಕ್ಕೆ ಹೋಗುವುದಿಲ್ಲ. ಸ್ವಾತಂತ್ರ್ಯಪೂರ್ವ ಕಥಾಸಾಹಿತ್ಯದ ಮುಖ್ಯ ಕೃತಿಗಳು ಸಮಕಾಲೀನ ರಾಷ್ಟ್ರಮಟ್ಟದ ರಾಜಕೀಯವನ್ನು ಪೂರ್ತಿಯಾಗಿ ತೊರೆದು ಸುತ್ತಲಿನ ಪ್ರಾದೇಶಿಕ ಅನುಭವಕ್ಕೆ ಬದ್ಧವಾಗಿರುವ ಕೃತಿಗಳಾಗಿವೆ. ಈ ಪ್ರಾದೇಶಿಕ ಅನುಭವಕ್ಕೆ ನಮ್ಮ ಬರಹಗಾರರು ನಿಷ್ಠರಾಗಿರುವುದರ ಮಹತ್ವವನ್ನು ಇಲ್ಲಿ ಗುರುತಿಸಲು ಪ್ರಯತ್ನಿಸುತ್ತೇನೆ.

ನಮ್ಮ ಸಂಸ್ಕೃತಿಯ ಜೀವಾಳವಿರುವುದು ಅದರ ಬಹುಮುಖತ್ವದಲ್ಲಿ. ಸಮುದಾಯದ ಒಂದೊಂದು ಗುಂಪೂ ತನ್ನದೇ ಆದ ವಿಶಿಷ್ಟವಾದ ಜೀವನಕ್ರಮವನ್ನು, ಯೋಚನೆ ಮಾಡುವ-ಚಿಂತಿಸುವ ಬಗೆಯನ್ನು ಮತ್ತು ತನ್ನದೇ ಆದ ನುಡಿಗಟ್ಟನ್ನು ಹೊಂದಿದೆ. ವಿವಿಧ ಪ್ರದೇಶಗಳನ್ನು ಒಂದೇ ಅಧಿಕಾರಸೂತ್ರದ ಕೆಳಗೆ ತರಲು ಪ್ರಯತ್ನಿಸುವುದು ಸಾಮ್ಯಾಜ್ಯಶಾಹಿಯ ಕೆಲಸ. ತನ್ನ ಎಲ್ಲ ವಸಾಹತುಗಳಲ್ಲಿ ಏಕರೂಪತೆಯನ್ನು ಅಂದರೆ ತನ್ನದೇ ಸ್ವರೂಪವನ್ನು ಹೇರುವುದು ವಸಾಹತುಶಾಹಿಯ ಕೆಲಸ. ಇವೆರಡೂ ಸಂಸ್ಕೃತಿಯ ಬಹುಮುಖತ್ವವನ್ನು ನಾಶಮಾದಬಯಸುತ್ತದೆ. ಆದರೆ ಇಂಥ ಪ್ರಯತ್ನಗಳನ್ನು ವಿರೋಧಿಸಿ ತನ್ನ ಬಹುಮುಖತ್ವವನ್ನು ಉಳಿಸಿಕೊಳ್ಳಲು ಸಂಸ್ಕೃತಿ ತನ್ನದೇ ಉಪಾಯಗಳನ್ನು ಹುಡುಕುತ್ತಿರುತ್ತದೆ. ಕನ್ನಡದ ಸೃಷ್ಟಿಶೀಲ ಮನಸ್ಸು ಕೂಡ ಮೊದಲಿನಿಂದಲೂ ತನ್ನ ಸ್ವಾಯತ್ತತೆಯ ರಕ್ಷಣೆಗೆ ಒಂದು ಉಪಾಯವನ್ನು ಬಳಸುತ್ತ ಬಂದಿದೆ. ಇದೇ ಪ್ರಾದೇಶಿಕತೆ ಅಥವಾ ಮೊಕಾಶಿಯವರ ಮಾತಿನಲ್ಲಿ ಹೇಳುವುದಾದರೆ ಏತದ್ದೇಶಿಯತೆ. ಸ್ಥೂಲವಾಗಿ ಹೇಳುವುದಾದರೆ, ಇದರ ಲಕ್ಷಣವೆಂದರೆ ರಾಷ್ಟ್ರಮಟ್ಟದ ಅಮೂರ್ತಗಳ ವಿರುದ್ಧ ಪ್ರಾದೇಶಿಕ ಅನುಭವದ ಸಾಂದ್ರತೆಯನ್ನು, ವಿಶಿಷ್ಟತೆಯನ್ನು ಒಡ್ಡುವುದು. ಸಂಸ್ಕೃತದ ಲಾಕ್ಷಣಿಕ ಮೀಮಾಂಸೆಯ ಸೂತ್ರಗಳ ವಿರುದ್ಧ ಪ್ರಾದೇಶಿಕ ರಚನೆಗಳನ್ನು ಕನ್ನಡ ಕಾವ್ಯದಲ್ಲಿ ಒಳಗಿದ್ದು, ಸಾಹಿತ್ಯದ ವಸ್ತು ರಾಷ್ಟ್ರಮಟ್ಟದ ಪುರಾಣಕತೆಗಳದ್ದಾಗಿದ್ದರೂ ಭಾಷೆ ಮತ್ತು ನುಡಿಗಟ್ಟಿನ ಮೂಲಕ ವಿಶಿಷ್ಟವಾದ ಪ್ರಾದೇಶಿಕ ಸೊಗಡನ್ನು ಕೊಟ್ಟಿದ್ದು ಇವು ಇಂಥ ಉಪಾಯಗಳೇ. ರಾಜಕೀಯವಾಗಿ ಪ್ರಾದೇಶಿಕತೆ ವಿಘಟನೆಗೆ ದಾರಿ ಮಾಡಿಕೊಡುವಂಥದ್ದಾಗಿದ್ದರೂ ಸಾಂಸ್ಕೃತಿಕವಾಗಿ ಅದು ಅನಿವಾರ್ಯವಾಗಿದೆ. ಈ ದ್ವಂದ್ವಕ್ಕೆ ಸಮಾಧಾನಕರವಾದ ಪರಿಹಾರ ಇನ್ನೂ ದೊರೆತಿಲ್ಲ. ಸದ್ಯದ ವಿಷಯಕ್ಕೆ ಸಂಬಂಧಿಸಿದಂತೆ ಈ ಪ್ರಕ್ರಿಯೆಯ ಎರಡು ಮಗ್ಗುಲುಗಳನ್ನು ಗುರುತಿಸಬಹುದು. ಸ್ವಾತಂತ್ರ್ಯಪೂರ್ವ ಕಥಾಸಾಹಿತ್ಯದ ಶಕ್ತಿಪೂರ್ಣತೆ ನೇರವಾಗಿ ಪ್ರಾದೇಶಿಕತೆಯಿಂದ ಹುಟ್ಟಿರುವಂಥದ್ದು. ಈ ಸಾಹಿತ್ಯದ ಮುಖ್ಯ ಕೃತಿಗಳು ವಾಸ್ತವವಾದಿ ಸಂಪ್ರದಾಯಕ್ಕೆ ಸೇರಿವೆ. ಈ ಕೃತಿಗಳ ಯಶಸ್ಸಿರುವುದು ಸುತ್ತಲಿನ ಬದುಕಿನ ವಿನ್ಯಾಸವನ್ನು ಮತ್ತು ಆ ವಿನ್ಯಾಸದಲ್ಲಿಯೆ ಹುಟ್ಟುವ ಮೌಲ್ಯಕಲ್ಪನೆಗಳನ್ನು ಬಳಸಿಕೊಳ್ಳುವುದರಲ್ಲಿ. ಈ ಬದುಕಿನ ವಿನ್ಯಾಸದಲ್ಲಿ ಚರಿತ್ರೆಯ ಮುಖ್ಯ ಘಟನೆಗಳು ನೇರವಾಗಿ ಪ್ರವೇಶಿಸುವುದಿಲ್ಲ. ಸ್ವಾತಂತ್ರ್ಯಪೂರ್ವ ಯುಗದ ಕೃತಿಗಳು ಆ ಯುಗದ ದಾಖಲೆಗಳಂತು ಅಲ್ಲವೆ ಅಲ್ಲ. ಆದರೆ ತೀರ ಪರೋಕ್ಷವಾಗಿ ಆ ಯುಗದಲ್ಲಿ ನಡೆದ ಮೌಲ್ಯಪಲ್ಲಟಗಳನ್ನು ಈ ಕೃತಿಗಳು ಧ್ವನಿಸುತ್ತವೆ. ಸಂಪ್ರದಾಯದ ತಾಳಿಕೆಯ ಶಕ್ತಿಯನ್ನು ಪರೀಕ್ಷಿಸುವುದರ ಮೂಲಕ ಅಥವಾ ಸಂಕ್ರಮಣ ಸ್ಥಿತಿಯೊಂದರ ತಬ್ಬಿಬ್ಬುಗಳನ್ನು, ಗೊಂದಲಗಳನ್ನು ಸೂಚಿಸುವುದರ ಮೂಲಕ-ಹೀಗೆ ಪರೋಕ್ಷವಾಗಿ, ನಿಧಾನವಾಗಿ ಯುಗದ ಸಂವೇದನೆಯ ಹೊಳಹುಗಳನ್ನು ಧ್ವನಿಸುತ್ತವೆ. (ತಮ್ಮ ಕಾದಂಬರಿಯಲ್ಲಿ ಮಲೆನಾಡಿನ ಜೀವನವನ್ನು ವರ್ಣಿಸುತ್ತಾ ಕುವೆಂಪು ಅವರು ‘ಅಲ್ಲೊಂದು ಇಲ್ಲೊಂದು ಗಾಂಧೀ ಟೋಪಿಗಳು ಓಡಾಡಿದ್ದವು’ ಎಂದು ಆ ಪ್ರಸ್ತಾಪ ಮುಗಿಸುತ್ತಾರೆ. ಕನ್ನಡದ ಗಟ್ಟಿಯಾದ ಕಥಾಸಾಹಿತ್ಯದಲ್ಲಿ ರಾಜಕೀಯದ ನೇರವಾದ ಪ್ರಸ್ತಾಪ ಈ ಮಟ್ಟಕ್ಕೆ ಉಳಿಯುತ್ತದೆಯೆಂದರೆ ಅತಿಶಯೋಕ್ತಿಯಾಗಲಾರದು. ಆದರೆ ಅದೇ ಹೊತ್ತಿಗೆ ಕುವೆಂಪು ಅವರ ಹೂವಯ್ಯ ತನ್ನ ಪರಿಸರದಿಂದ ಬೇರ್ಪಡೆಯಾದ ಮೊದಲ ಅಲಿ‌ಎನತೆದ್ ಹೆರೊ ಎನ್ನುವುದನ್ನು ಮರೆಯಲಾಗದು) ಹೀಗೆ ನೇರವಾಗಿ ರಾಜಕೀಯ ವಾಸ್ತವಗಳಿಗೆ ಅಸಡ್ಡೆ ತೋರಿಸುತ್ತಲೆ ಬದುಕಿನ ಆಳದಲ್ಲಿ ನಡೆಯುವ ಬದಲಾವಣೆಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುವುದು ಸ್ವಾತಂತ್ರ್ಯಪೂರ್ವ ಕೃತಿಗಳ ಲಕ್ಷಣವಾಗಿದೆ. ಇದೇ ಪ್ರಕ್ರಿಯೆಯ ಇನ್ನೊಂದು ಮಗ್ಗುಲು ಅದರ ದೋಷವನ್ನು ತೋರಿಸುತ್ತದೆ. ಚರಿತ್ರೆ ಮತ್ತು ರಾಜಕೀಯಕ್ಕೆ ವಿಮುಖವಾಗುವ ಪ್ರಾದೇಶಿಕತೆಯಿಂದಾಗಿ ಈ ಸಾಹಿತ್ಯ ಒಂದು ಮುಖ್ಯ ಆಯಾಮವನ್ನೇ ಕಳೆದುಕೊಳ್ಳುತ್ತದೆ. ಸೃಷ್ಟಿಶೀಲ ಪ್ರಜ್ಞೆಯ ಆಳಕ್ಕೆ ಇಳಿಯುವ ಅಮೂರ್ತ ರಾಷ್ಟ್ರೀಯತೆಯನ್ನು ತೆಳುವಾಗಿ ಚಿತ್ರಿಸುವುದು ಒಂದು ಬಗೆಯಾದರೆ, ಪ್ರಾದೇಶಿಕ ಅನುಭವದ ರುಜುತ್ವವನ್ನು ಸಾಧಿಸುವುದು ಇನ್ನೊಂದು ಬಗೆ. ಆದರೆ ಪ್ರಾದೇಶಿಕ ಅನುಭವಕ್ಕೆ ನಿಷ್ಠವಾಗಿರುವುದು ಒಂದು ರೀತಿಯ ನ್ಯೂನ್ಯತೆಯನ್ನು, ಸೀಮಿತತೆಯನ್ನು ತರುತ್ತದೆ. ಪ್ರಾದೇಶಿಕ ಮೂರ್ತ ಅನುಭವಕ್ಕೆ ಬದ್ಧವಾಗಿದ್ದುಕೊಂಡೇ ಆ ಅನುಭವಕ್ಕೆ ಚಾರಿತ್ರಿಕ ಪ್ರಸ್ತುತತೆಯನ್ನು ಕೊಡುವ ಉನ್ನತ ಮಟ್ಟದ ಕತೆಗಾರಿಕೆಯನ್ನು ನಮ್ಮ ಬರಹಗಾರರು ಸಾಧಿಸಲಿಲ್ಲ. ವೈಯಕ್ತಿಕ ಸಂಬಂಧಗಳ ಕಥೆಯಾದ ‘ಅನ್ನಾ ಕರೇನೀನಾ’ ರಶಿಯಾದ ಜೀವಂತ ಚರಿತ್ರೆಯಾಗುವಂತೆ ಅಥವಾ ಸ್ತೆನ್ಧಲ್ ನ ‘ಸ್ಚರ್ಲೆತ್ ಅನ್ದ್ ಬ್ಲಚ್ಕ್’ ಫ್ರಾನ್ಸ್ ದೇಶದ ಯುಗವೊಂದರ ದಾಖಲೆಯಾದಂತೆ ನಮ್ಮ ವಾಸ್ತವವಾದಿ ಕೃತಿಗಳು ಪ್ರಾದೇಶಿಕತೆಯನ್ನು ಮೀರಿದ ಆಯಾಮಗಳನ್ನು ಪಡೆದುಕೊಳ್ಳುವುದಿಲ್ಲ. ಕೊನೇ ಪಕ್ಷ ಡಿಕನ್ಸನ್ ಕೃತಿಗಳು ಅವನ ಪರಿಸರವನ್ನು ಲವಲವಿಕೆಯಿಂದ ಚಿತ್ರಿಸುವಂತೆ ಚಿತ್ರಿಸುವುದಿಲ್ಲ. ಈ ಕೊರತೆಯನ್ನು ಬರಹಗಾರರ ಪ್ರತಿಭೆಯ ಕೊರತೆಗೆ ಆರೋಪಿಸುವುದಕ್ಕಿಂತ ಸಮಗ್ರವಾದ ಚಿಂತನೆಯನ್ನು ಬೆಳೆಸಲಾರದ ನಮ್ಮ ಸಂಸ್ಕೃತಿಯ ಹಿಂಜರಿತಗಳಿಗೆ ಆರೋಪಿಸುವುದು ಸೂಕ್ತವೆನಿಸುತ್ತದೆ. ಸ್ವಾತಂತ್ರ್ಯಪೂರ್ವ ಕಥಾಸಾಹಿತ್ಯದ ಮುಖ್ಯ ಕೃತಿಗಳನ್ನು ಒಟ್ಟಿಗೆ ಓದಿದಾಗ ಅವು ಚರಿತ್ರೆಯ ಒಂದು ತಿರುವುನಲ್ಲಿ ಹುಟ್ಟಿದ ಕೃತಿಗಳು ಎಂದು ಅನಿಸದ್ದರಿಂದ ಈ ಮಾತನ್ನು ಹೇಳಬೇಕಾಗಿದೆ.

ಹೀಗೆಂದ ಮಾತ್ರಕ್ಕೆ ಮನುಷ್ಯ ಬದುಕಿನ ಮೂರ್ತವಾದ ಚಿತ್ರಣ, ಮನುಷ್ಯ ಸ್ವಭಾವದ ಹಲವಾರು ಮೂಲೆಗಳ ಚಿತ್ರಣ ಇವುಗಳು ವ್ಯಕ್ತಿನಿರಪೇಕ್ಷವಾದ ಸಂಪ್ರದಾಯವೊಂದರಲ್ಲಿ ನಡೆದ ಮಹತ್ವಪೂರ್ಣವಾದ ಒಳಬಂಡಾಯದ ಫಲಗಳು ಎನ್ನುವುದನ್ನು ಅಲ್ಲಗಳೆದಂತಾಗುವುದಿಲ್ಲ. ಇಂಗ್ಲಿಷ್ ಶಿಕ್ಷಣ ಹಾಗೂ ಸಾಹಿತ್ಯದ ಮೂಲಕ ನಮ್ಮ ಚಿಂತನೆಯನ್ನು ಸೇರಿಕೊಂಡ ಮಾನವತಾವಾದಿ ಜೀವನದೃಷ್ಟಿಯ ಪರಿಣಾಮವೆಂದರೆ ನಮ್ಮ ಬರಹಗಾರರ ದೃಷ್ಟಿ ಮನುಷ್ಯನ ಈ ನೆಲದ ಬದುಕಿನ ಮೇಲೆ ಕುದುರಿದ್ದು. ಅದೇ ಹೊತ್ತಿಗೆ ‘ಲೌಕಿಕ ಮಹಾಕಾವ್ಯ’ವೆಂದು ಕರೆಸಿಕೊಳ್ಳುವ ಕಾದಂಬರಿ ಪ್ರಕಾರ ನಮ್ಮ ಸಾಹಿತ್ಯಕ್ಕೆ ಆಮದಾಗಿದ್ದು ಸಹಜವಾಗಿದೆ. ಕಾದಂಬರಿ ಪ್ರಕಾರ ಬಹುಬೇಗನೆ ತನ್ನ ಸಾಹಸಕತೆ (ರೊಮನ್ಚೆ)ಪುರಾಣಕತೆಯ ಪೊರೆಯನ್ನು ಕಳಚಿ ಸಾಮಾಜಿಕತೆಯ ರೂಪದಲ್ಲಿ ಗೋಚರವಾದದ್ದು ಮಹತ್ವಪೂರ್ಣವಾಗಿದೆ. ಸಮಕಾಲೀನ ವಾಸ್ತವವನ್ನು ಕಲೆಯು ವಸ್ತುವನ್ನಾಗಿಸುವ ಪ್ರತಿಭೆ ಕನ್ನಡದ ಮೊದಲ ಕಾದಂಬರಿಗಳಲ್ಲಿಯೇ ಕಂಡುಬರುತ್ತದೆ. ಬೊಳುವಾರ ಬಾಬುರಾವ್ ಅವರ ಕಾದಂಬರಿ ‘ವಾಗ್ದೇವಿ’ ಯಾವುದೇ ನೀತಿಪರವಾದ ರೆಟರಿಕ್ಕನ್ನು ಬಳಸದೆ ಪಾತ್ರಗಳ ಸ್ವಭಾವದಿಂದ ಹುಟ್ಟುವ ಕ್ರಿಯೆಯ ತಿರುವುಗಳನ್ನು ಹಿಂಬಾಲಿಸುವುದರಲ್ಲಿ ಮಗ್ನವಾಗುತ್ತದೆ. ಎಷ್ಟರಮಟ್ಟಿಗೆ ಎಂದರೆ ಬರಹಗಾರರು ನೀತಿಯ ಪ್ರಶ್ನೆಗಳ ಬಗ್ಗೆ ತೀರ ಸಾಪೇಕ್ಷವಾದ ಧೋರಣೆ ತಾಳುತ್ತಾರೆಯೋ ಎನ್ನುವ ಗುಮಾನಿ ಬರುತ್ತದೆ. ಕಾದಂಬರಿಯ ಕೊನೆಯ ಭಾಗದಲ್ಲಿ ಕೂಡ ದುಷ್ಟಪಾತ್ರಗಳಿಗೆ ಶಿಕ್ಷೆಯಾಗುವುದು ಬಾಹ್ಯ ಕ್ರಿಯೆಗಳ ನೀತಿಯಿಂದಲೇ ಹೊರತು ಅವರಲ್ಲಾಗುವ ಯಾವುದೇ ಮಾರ್ಪಾಟುಗಳಿಂದಲ್ಲ. ಧಾರ್ಮಿಕ ಸಂಸ್ಥೆಯೊಂದರಲ್ಲಿ ನಡೆಯುವ ಹೀನಕೆಲಸಗಳ ವರ್ಣನೆ ಮತ್ತು ಹೆಚ್ಚಿನ ಪಾತ್ರಗಳು ಸಹಜವಾಗಿ ಕೆಡುಕಿಗೆ ಈಡಾಗುವುದರ ಚಿತ್ರಣ ಯಾವುದೇ ಮಾನದಂಡದಿಂದಲೂ ಆಘಾತವನ್ನುಂಟುಮಾಡಬಲ್ಲವು. ಆದರೆ ಕತೆಯ ತಿರುವುಗಳಿಗೆ ಅಂಟಿಕೊಂಡು ಬರುವ ಬರಹಗಾರರು ಕಾದಂಬರಿಯ ಮೂಲಕ ಹೆಚ್ಚಿನದನ್ನು ಧ್ವನಿಸುವುದಿಲ್ಲ. ಎಂ.ಎಸ್. ಪುಟ್ಟಣ್ಣನವರ ‘ಮಾಡಿದ್ದುಣ್ಣೋ ಮಹಾರಾಯ’ ಪಾತ್ರಗಳ ನಡವಳಿಕೆಗೆ ಕತೆಯ ತುರ್ತುಗಳಿಗಿಂತ ಹೆಚ್ಚಿನ ಅರ್ಥವಂತಿಕೆ ಕೊಡುವುದರಿಂದ ಹೆಚ್ಚು ಪ್ರಬುದ್ಧವಾದ ಕೃತಿಯಾಗಿದೆ. ಹಳ್ಳಿಯ ಬ್ರಾಹ್ಮಣ ಕುಟುಂಬದ ಮುಖ್ಯ ಪಾತ್ರಗಳು ಎದುರಿಸುವ ಸಂಗ್ಧಗಳು ಎನ್ನುವುದು ಸ್ಪಷ್ಟವಾಗಿದೆ. ಈ ದೃಷ್ಟಿಯಲ್ಲಿ ಬ್ರಾಹ್ಮಣಕುಟುಂಬ ನೈತಿಕ ಕೇಂದ್ರವೆನ್ನುವ ಎಂಜಿಕೆಯವರ ಮಾತನ್ನು ಒಪ್ಪಬಹುದು. ಆದರೆ ಅವರು ಹೇಳುವಂತೆ ಮೈಸೂರಿನ ಅರಮನೆ ಈ ನೈತಿಕ ಕೇಂದ್ರದ ಹಿಂದಿರುವ ವ್ಯವಸ್ಥೆಯ ಕೇಂದ್ರವೆಂದು ಪರಿಗಣಿಸುವುದು ಕತೆಯ ವಿನ್ಯಾಸವನ್ನು ಗುರುತಿಸಲು ಅನುಕೂಲಕರವಾದರೂ ಅದಕ್ಕೆ ಹೆಚ್ಚಿನ ಆಧಾರಗಳಿಲ್ಲ. (ನೋಡಿ:ಎಂಜಿಕೆ ‘ಅಧುನಿಕ ಭಾರತೀಯ ಸಾಹಿತ್ಯ ಮತ್ತು ಇತರ ಲೇಖನಗಳು’ ಪುಟ: ೨೬೮-೨೭೦.) ಮೊದಲಿಂದ ಕೊನೆಯವರೆಗೆ ಬರಹಗಾರರಿಗೆ ನಿಶ್ಚಿತವಾದ ಮೌಲ್ಯಕಲ್ಪನೆಗಳಲ್ಲಿ ನಂಬಿಕೆ ಇರುವುದರಿಂದ ಪಾತ್ರಗಳ ಸಂಗ್ಧಗಳ ಹಿಂದೆ ಯಾವುದೇ ಆಂತರಿಕ ಘರ್ಷಣೆಗೆ ಅನುವಿಲ್ಲದಂತಾಗಿದೆ. ಕಾದಂಬರಿಯ ಮಹತ್ವವಿರುವುದು ಸಶಕ್ತವಾದ ನುಡಿಗತ್ಟಿನಲ್ಲಿ ಒಂದು ಪ್ರದೇಶದ ವಾಸ್ತವವನ್ನು ಅದು ಹಿಡಿದುಕೊಳ್ಳುವುದರಲ್ಲಿ ಸ್ವೀಕೃತವಾದ ಮೌಲ್ಯಕಲ್ಪನೆಗಳನ್ನು ನಿರಾಯಾಸವಾಗಿ ಬಳಸಿಕೊಳ್ಳುವ ಈ ಕೃತಿ ಅಭಿಜಾತ ಮಾರ್ಗದ್ದಾಗಿದೆ.

ಈ ಕೃತಿಗಳಿಗೆ ಹೋಲಿಸಿದರೆ ಕೆರೂರು ವಾಸುದೇವಾಚಾರ್ಯರ ‘ಇಂದಿರೆ’ ಕೃತಿಯ ಆವರಣವಾಗಿರುವ ವಾಸ್ತವದ ಚಿತ್ರಣದಲ್ಲಿ ಹೆಚ್ಚಿನ ಸಮಕಾಲೀನತೆಯನ್ನು ತೋರುತ್ತದೆ. ಮುನ್ನುಡಿಯಲ್ಲಿ ಬರಹಗಾರರು ಸೂಚಿಸಿರುವಂತೆ ಸುಧಾರಣವಾದ ಒಂದು ಹಂತವನ್ನು ತಲುಪಿದ ನಂತರವೆ ಸಮಾಜದ ಬಗ್ಗೆ ಅವರು ಬರೆದಿದ್ದಾರೆ. ಈ ಹಿಂದೆ ಸೂಚಿಸಿದ ಮ್ತೆ ರಾಷ್ಟ್ರೀಯತೆಯ ಪ್ರಜ್ಞೆ ಸಾಂಸ್ಕೃತಿಕ ಪರಿಸರದ ಅಂಶವಾಗಿ ಬಂದಾಗ ನಮ್ಮ ಬರಹಗಾರರು ಅದಕ್ಕೆ ಪ್ರತಿಕ್ರಿಯಿಸುವುದನ್ನು ಈ ಕೃತಿ ತೋರಿಸುತ್ತದೆ. ರಾಜಕೀಯವಾಗಿ ರಾಷ್ಟ್ರೀಯತೆಯ ಪರಿಕಲ್ಪನೆ ಅವರಿಗೆ ಮುಖ್ಯವೆನಿಸದಿದ್ದರೂ ಹೊಸ ಸಮಾಜ ಮತ್ತು ಧರ್ಮದ ಪರಿಕಲ್ಪನೆಯಾಗಿ ಅದು ಪ್ರಭಾವಶಾಲಿಯಾಗಿತ್ತು. ಆಳದಲ್ಲಿ ನಮ್ಮ ಬರಹಗಾರರಿಗೆ ಹೊಸ ರಾಷ್ಟ್ರದ ಕಲ್ಪನೆ ಸುಧಾರಣೆಗಳ ಮೂಲಕ ಸೃಷ್ಟಿಯಾಗುವ ಹೊಸ ಸಮಾಜ – ಧರ್ಮದ ಕಲ್ಪನೆಯೂ ಆಗಿತ್ತು. ಆದ್ದರಿಂದಲೇ ಈ ಬದಲಾವಣೆಗಳನ್ನು ಚರ್ಚಿಸುವುದು ಕೆರೂರರಂಥ ಬರಹಗಾರರಿಗೆ ಮುಖ್ಯವಾಗಿತ್ತು. ನನಗೆ ಮುಖ್ಯವೆನಿಸುವ ವಿಷಯವೆಂದರೆ ಕನ್ನಡದ ಎಲ್ಲ ಮುಖ್ಯ ಬರಹಗಾರರಂತೆ ಕೆರೂರರು ಕೂಡ ಸಮಾಜದ ಬದಲಾವಣೆಗಳ ಬಗ್ಗೆ ಸಂಕೀರ್ಣವಾದ ಧೋರಣೆಯನ್ನು ತಾಳುತ್ತಾರೆ ಎನ್ನುವುದು. ಅಧುನಿಕ ಸುಧಾರಣಾವಾದಿ ಧೋರಣೆಗಳನ್ನು ಜೀವನವೃತ್ತಿಯಾಗಿ ಮಾಡಿಕೊಂಡ ಕಮಲೆ, ಪಂಡಿತ, ನಟೇಶರಂಥವರು ಈ ಕಾದಂಬರಿಯಲ್ಲಿ ವ್ಯಂಗ್ಯಚಿತ್ರಗಳಾಗಿ ಬಂದಿದ್ದಾರೆ. ಜಯರಾಂ ಮುಂತಾದವರು ಮತ್ತು ಈ ಧೋರಣೆಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವ ಸ್ವಾರ್ಥಿಗಳಾಗಿದ್ದಾರೆ. ಆದರೆ ಬರಹಗಾರರ ವ್ಯಂಗ್ಯ ಸುಧಾರಣವಾದದ ಹೆಸರಿನಲ್ಲಿ ಜೊಳ್ಳಾಗಿರುವವರ ಮೇಲಾಗಿದೆಯೇ ಹೊರತು ಆ ಧೋರಣೆಗಳ ಮೇಲಲ್ಲ. ಸುಧಾರಣವಾದದ ಬಗ್ಗೆ ಸಂಶಯದ ಧೋರಣೆಯನ್ನು ತೋರುವ ಇಂದಿರೆ ಮತ್ತು ರಮಾಕಾಂತರು ಅಂಥ ಸುಧಾರಣೆಗಳು ಹುಟ್ಟಿಸಬಹುದಾದ ಪ್ರಬುದ್ಧವ್ಯಕ್ತಿಗಳಾಗಿದ್ದಾರೆ. ಅಂದರೆ ಬದುಕಿನಲ್ಲಿ ಅನುಭವದಿಂದ ಮಾಗಿ ಸಂಪ್ರದಾಯವನ್ನು ಮುರಿಯುವ ಪ್ರಬುದ್ಧತೆ ಕೆರೂರರಿಗೆ ಒಪ್ಪಿಗೆಯಾಗಿದೆ. ಕೇವಲ ಧೋರಣೆಯಾಗಿ ಉಳಿಯುವ ಪ್ರಗತಿಪರತೆ ಒಪ್ಪಿಗೆಯಾಗಿಲ್ಲ. ಬಹುಶಃ ನಮ್ಮ ಹೆಚ್ಚಿನ ಬರಹಗಾರರಂತೆ ಕೆರೂರರಿಗೂ ಸುಧಾರಣೆಗಳನ್ನು ಅರಗಿಸಿಕೊಂಡು ಬೆಳೆಯಬಲ್ಲ ಸಂಸ್ಕೃತಿಯಲ್ಲಿ ನಂಬಿಕೆ ಇದ್ದದ್ದರಿಂದ ಹೀಗೆ ಆಗುತ್ತದೆ. ಕೆರೂರರ ಐತಿಹಾಸಿಕ ಕತೆಗಳನ್ನು ಓದಿದಾಗ ಈ ಮಾತು ಮನದಟ್ಟಾಗುತ್ತದೆ. ಅವರೂ ಕೂಡ ಹಿಂದೂ ಸಂಸ್ಕೃತಿಯನ್ನು ಆರಾಧಕ ದೃಷ್ಟಿಯಲ್ಲಿ ನೋಡುತ್ತಾರೆ. ಅನ್ಯದೇಶೀಯ ಆಳ್ವಿಕೆಯ ವಿರುದ್ಧ ಹುಟ್ಟಿಕೊಂಡ ರಾಷ್ಟ್ರೀಯತೆಯ ಪರಿಕಲ್ಪನೆ ದೇಶೀಯ ಸಂಸ್ಕೃತಿಯ ವೈಭವೀಕರಣಕ್ಕೆ ಈಡುಮಾಡಿತು ಎನ್ನುವುದನ್ನು ಮರೆಯಲಾಗದು. ವಸಾಹತುಶಾಹಿ ಅನುಭವದ ಒಟ್ಟು ಪರಿಣಾಮವೆಂದರೆ ಹಿಂದೂ ಸಂಸ್ಕೃತಿಯ ಪುನರುಜ್ಜೀವನದ ಬಗ್ಗೆ ತೀರ ಭಾವುಕವಾದ ನಿಲುವು. ಸಾಮಾನ್ಯ ಕೃತಿಗಳಲ್ಲಿ ಇದು ತೀರಾ ಢಾಳಾಗಿ ಕಂಡಾಗ ಅದನ್ನು ಸುಲಭವಾಗಿ ಗುರುತಿಸುತ್ತೇವೆ. ಆದರೆ ಹೆಚ್ಚು ಪ್ರಬುದ್ಧವೆಂದು ತೋರುವ ಕೃತಿಗಳಲ್ಲಿ ಕೂಡ ನಮ್ಮ ಬರಹಗಾರರ ಮೌಲ್ಯಕಲ್ಪನೆ ಸಾಂಸ್ಕೃತಿಕ ಪುನರುಜ್ಜೀವನದ ಆಶಯಗಳನ್ನು ಆಧರಿಸಿದೆ ಎನ್ನುವುದನ್ನು ಗಮನಿಸಬೇಕು. ನಮ್ಮ ಬರಹಗಾರರಿಗೆ ಒಂದು ರಾಷ್ಟ್ರದ ಕಲ್ಪನೆ ಮೂಲತಃ ಒಂದು ಸಂಸ್ಕೃತಿ-ಧರ್ಮವಾಗಿ ಕಂಡದ್ದರಿಂದ ಸಾಂಸ್ಕೃತಿಕ ಪುನರುಜ್ಜೀವನದ ಕಲ್ಪನೆಗಳು ಅವರ ಸಾಹಿತ್ಯವನ್ನು ಬೆಲೆಗಟ್ಟುವುದರಲ್ಲಿ ಮುಖ್ಯವಾಗುತ್ತವೆ. ವಾಸ್ತವವಾದಿ ಸಂಪ್ರದಾಯದ ಕೃತಿಗಳಲ್ಲಿ ನುಡಿಗಟ್ಟು ಮತ್ತು ಸನ್ನಿವೇಶ ಚಿತ್ರಣಗಳ ರುಜುತ್ವದಿಂದಾಗಿ ಈ ಕೃತಿಗಳು ಸಮಕಾಲೀನ ವಾಸ್ತವದ ಸಮಗ್ರ ಚಿತ್ರಣವನ್ನು ಕೊಡುತ್ತವೆ ಎನ್ನುವ ಭಾವನೆ ಬರುತ್ತದೆ. ಆದರೆ ಸೂಕ್ಷ್ಮವಾಗಿ ನೋಡಿದಲ್ಲಿ ಸಾಂಸ್ಕೃತಿಕ ಪುನರುಜ್ಜೀವನ ಆದರ್ಶದಿಂದಾಗಿ ಸಮಾಜದ ಬದುಕಿನ ಹಲವಾರು ಅಂಶಗಳಿಗೆ ಬರಹಗಾರರು ಎರವಾದದ್ದು ಸ್ಪಷ್ಟವಾಗುತ್ತದೆ. ಮುಖ್ಯವಾಗಿ ಸಾಮಾಜಿಕ ಅಸಮಾನತೆಗೂ ಸಂಸ್ಕೃತಿಗೂ ಇರುವ ಸಂಬಂಧಗಳನ್ನು ನಮ್ಮ ಬರಹಗಾರರು ಅರ್ಥಮಾಡಿಕೊಳ್ಳದೇ ಇದ್ದದ್ದರಿಂದ ಸಮಾಜದ ಎಲ್ಲ ಕೆಡಕುಗಳನ್ನು ಎದುರಿಸಿ ಉಳಿಯಬಲ್ಲ ಆರೋಗ್ಯವಂತಿಕೆ ನಮ್ಮ ಸಂಸ್ಕೃತಿಗೆ ಇದೆ ಎಂದು ಭ್ರಮಿಸಿದರು.

ಮಾಸ್ತಿಯವರ ಕಥಾಸಾಹಿತ್ಯ ಹಲವಾರು ವಿಮರ್ಶಕರಲ್ಲಿ ಇಂಥ ಪ್ರಶ್ನೆಗಳನ್ನು ಕೆದಕಿದೆ. ಇಲ್ಲಿ ಅವರು ಬರೆದ ಎರದು ಬಗೆಯ ಕತೆಗಳ ಬಗ್ಗೆ ಒಂದೆರಡು ಪ್ರಶ್ನೆಗಳನ್ನು ಎತ್ತುತ್ತೇನೆ. ಒಂದು -ಐತಿಹಾಸಿಕವೆನ್ನಬಹುದಾದ ಕತೆಗಳು. ಇನ್ನೊಂದು – ದೇಶೀಯ ಸಂಸ್ಕೃತಿ ಮತ್ತು ವಿದೇಶೀಯ ಸಂಸ್ಕೃತಿಗಳ ಮಧ್ಯದ ಸಂಕೀರ್ಣ ಸಂಬಂಧಗಳನ್ನು ಪರಿಶೀಲಿಸುವ ಕತೆಗಳು. ಈ ಎರಡು ಬಗೆಯ ಕತೆಗಳು ಸ್ವಾತಂತ್ರ್ಯಪೂರ್ವಯುಗದ ಎರಡು ಸಾಂಸ್ಕೃತಿಕ ಪ್ರಕ್ರಿಯೆಗಳನ್ನು ಪ್ರತಿನಿಧಿಸುತ್ತವೆ. ವಸಾಹತುಶಾಹಿ ಅನುಭವದ ಹಿನ್ನೆಲೆಯಲ್ಲಿ ಶುರುವಾದ ಸಾಂಸ್ಕೃತಿಕ ಪುನರುಜ್ಜೀವನದ ಹಂಬಲ ನಮ್ಮ ಬರಹಗಾರರನ್ನು ಐತಿಹಾಸಿಕ ಆದರ್ಶೀಕರಣದತ್ತ ತಳ್ಳಿತು. ಇಂಥ ಭಾವುಕ ಅಪ್ರಬುದ್ಧತೆಯನ್ನು ಕೆರೂರ ವಾಸುದೇವಾಚಾರ್ಯರ ಐತಿಹಾಸಿಕ ಕತೆಗಳಲ್ಲಿ ಕಾಣಬಹುದು. ಮುಖ್ಯವಾಗಿ ಇದು ನಿರೂಪಣಾಶೈಲಿಯ ರೂಕ್ಷತೆಯಲ್ಲಿ ಮತ್ತು ಸಂಭಾಷಣೆಗಳ ಕೃತ್ರಿಮತೆಯಲ್ಲಿ ಒಡೆದು ಕಾಣುತ್ತದೆ. ಕೆರೂರರ ಕತೆಗಳನ್ನು ಮಾಸ್ತಿಯವರ ಐತಿಹಾಸಿಕ ಕತೆಗಳಿಗೆ ಹೋಲಿಸಿದರೆ ಒಂದು ಕುತೂಹಲಕರವಾದ ಅಂಶ ಹೊರಬರುತ್ತದೆ. ಕೆರೂರರ ಐತಿಹಾಸಿಕತೆಯನ್ನು ರಂಯಗೊಳಿಸುವಂಥ ಕೃತ್ರಿಮಗೊಳಿಸುವಂಥ ಭಾಷೆ ಬಳಸಿದರೆ ಮಾಸ್ತಿಯವರು ತಮ್ಮ ವಾಸ್ತವವಾದಿ ನುಡಿಗಟ್ಟಿನಿಂದ ಐತಿಹಾಸಿಕವಾದದ್ದನ್ನು ಬೇಕಂತಲೆ ಸಾಮಾನ್ಯಗೊಳಿಸುತ್ತಾರೆ. ಆದರೆ ಮಾಸ್ತಿಯವರೂ ಐತಿಹಾಸಿಕ ಪಾತ್ರಗಳನ್ನು ಆದರ್ಶೀಕೃತಗೊಳಿಸುವ ರೆಟರಿಕ್ಕನ್ನು ಸೂಕ್ಷ್ಮವಾಗಿ ಬಳಸುತ್ತಾರೆ. ಅಲ್ಲದೆ ಕತೆಯ ವಿನ್ಯಾಸಗಳು ಕೂಡ ದೇಶೀಯ ಸಂಸ್ಕೃತಿಯ ಹಿರಿಮೆಯನ್ನು, ಶ್ರೇಷ್ಠತೆಯ ಎತ್ತಿ ಹಿಡಿಯುವ ರೀತಿಯದ್ದಾಗಿರುತ್ತವೆ. ಮನುಷ್ಯನ ಒಳ್ಳೆಯತನದಲ್ಲಿ ಒಂದು ಬಗೆಯ ಧಾರ್ಮಿಕ ನಂಬುಗೆ ಮಾಸ್ತಿಯವರ ಸಾಹಿತ್ಯ ಮುಖ್ಯ ಪ್ರೇರಣೆಯಾಗಿದೆ. ಅವರ ಸಾಮಾಜಿಕತೆಗಳು ಈ ನಂಬುಗೆಯನ್ನು ಜೀವನಾನುಭವದ, ಪ್ರತ್ಯಕ್ಷದ ನಿಕಶಕ್ಕೆ ಒಡ್ಡುತ್ತವೆ. ಮಾಸ್ತಿಯವರ ಪಾತ್ರಗಳು ಜೀವನದ ನಿರ್ಧಾರಕ ಕ್ಷಣಗಳಲ್ಲಿ ತಮ್ಮ ಶೀಲ ಮತ್ತು ಭಾವನೆಗಳ ಒತ್ತಡಗಳಲ್ಲಿ ಸ್ವತಂತ್ರವಾಗಿ ವರ್ತಿಸುತ್ತವೆ. ಆದರೆ ಇಂಥ ನಿರ್ಧಾರಕ ಕ್ಶಣಗಳಲ್ಲಿ ತಮಗೆ ಗೊತ್ತಿಲ್ಲದ ಈ ಪಾತ್ರಗಳು ಸಂಪ್ರದಾಯದಿಂದ ಬಂದ ತಿಳುವಳಿಕೆಯನ್ನು ಪರೀಕ್ಷೆಗೊಡ್ಡುತ್ತವೆ. ಮಾಸ್ತಿಯವರ ಸಾಹಿತ್ಯದಲ್ಲಿ ಮುಖ್ಯವೆನ್ನಿಸುವ ಈ ಸಂಗತಿ ಅವರ ಐತಿಹಾಸಿಕ ಕತೆಗಳಲ್ಲಿ ಕಂಡುಬರುವುದಿಲ್ಲ. ಆದ್ದರಿಂದ ಈ ಕತೆಗಳು ಕೇವಲ ಎಪಿಸೊದೆಸ್ ಎನ್ನುವ ಭಾವನೆ ಬರುತ್ತದೆ. ಮಾಸ್ತಿಯವರ ‘ಪೆನಗೊಂಡೆಯ ಕೃಷ್ಣಮೂರ್ತಿ’ ‘ಪಂಡಿತರ ಮರಣಶಾಸನ’ ಮುಂತಾದ ಯಾವುದೇ ಕತೆಗಳನ್ನು ಪರಿಶೀಲಿಸಬಹುದು. ಐತಿಹಾಸಿಕ ಪಾತ್ರಗಳು ಪ್ರತಿನಿಧಿಸುವ ಮೌಲ್ಯಗಳು ನಮ್ಮ ಸಂಸ್ಕೃತಿಯಲ್ಲಿ ಅನುಸೂತ್ಯವಾಗಿ ಉಳಿದುಕೊಂಡಿವೆ ಎನ್ನುವ ನಂಬುಗೆಯನ್ನು ಮಾಸ್ತಿ ಸೂಕ್ಷ್ಮವಾಗಿ ಓದುಗರ ಮೇಲೆ ಒತ್ತಾಯಿಸುತ್ತಾರೆ ಎನಿಸುತ್ತದೆ.

ಎರಡು ಸಂಸ್ಕೃತಿಗಳ ಸಂಬಂಧಗಳ ಬಗೆಗಿನ ಮಾಸ್ತಿಯವರ ಕತೆಗಳು ಪ್ರಬುದ್ಧವಾಗಿವೆ. ಸಮಕಾಲೀನ ರಾಜಕೀಯ ವಾಸ್ತವಗಳ ಬಗ್ಗೆ ನಿರ್ಲಕ್ಷ್ಯ ತೋರಿಸಿದ ಮಾಸ್ತಿ ಈ ಸಂಬಂಧಗಳ ಸೂಕ್ಷ್ಮ ಹೊಳಹುಗಳನ್ನು ಪರಿಶೀಲಿಸುತ್ತಾರೆ. ‘ಮಸುಮತ್ತಿ’ ‘ಇಲ್ಲಿಯ ತೀರ್ಪು’ ‘ದೂಬಾಯಿ ಪಾದ್ರಿಯ ಒಂದು ಪತ್ರ’ ಮುಂತಾದ ಕತೆಗಳಲ್ಲಿ ಮತ್ತು ‘ಸೋರಲಿ ಪ್ರಸಂಗ’ದಂಥ ವಿಶಿಷ್ಟ ಕತೆಗಳಲ್ಲಿ ಮಾಸ್ತಿ ಎರದು ಸಂಸ್ಕೃತಿಗಳಿಗೆ ಸೇರಿದ ಪಾತ್ರಗಳ ದೃಷ್ಟಿಕೋನದಿಂದ ಈ ಸಂಬಂಧಗಳನ್ನು ಶೋಧಿಸುತ್ತಾರೆ. ಈ ಕತೆಗಳಿಗೆ ಸಾಮಾನ್ಯವಾಗಿರುವ ವಿಷಯವೆಂದರೆ ಈ ದೃಷ್ಟಿಕೋನವು ಪಾತ್ರಗಳು ಮಾಡುವಂತಹವೂ ಆಗಿರುತ್ತದೆ. ಇಂಥ ಪಾತ್ರಗಳನ್ನು ಬಳಸುವ ಮೂಲಕ ಮಾಸ್ತಿಯವರು ಎರಡು ಸಂಸ್ಕೃತಿಗಳ ಉತ್ತಮ ಅಂಶಗಳನ್ನು ಎತ್ತಿಹಿಡಿಯುತ್ತಾರೆ. ಅದೇ ಹೊತ್ತಿಗೆ ಇಂಥ ಯಾವುದೇ ಕತೆಗಳಲ್ಲೂ ದೇಶೀಯ ಸಂಸ್ಕೃತಿಯ ದೌರ್ಬಲ್ಯಗಳ ಬಗ್ಗೆ ಮೂಲಭೂತವಾದ ವಿವೇಚನೆಯಿಲ್ಲ. ‘ಮಸುಮತ್ತಿ’ ಕತೆಯಲ್ಲಿ ಅವರು ಸೂಚಿಸುವಂತೆ ಇಲ್ಲಿಯ ಸಂಸ್ಕೃತಿ ಜಡಗಟ್ಟಿದಂತೆ ಕಂಡರೂ ಮತ್ತೊಮ್ಮೆ ಜೀವಸಂಚಾರವಾಗುವುದಕ್ಕೆ ಕಾಯ್ದು ನಿಂತಿದೆಯೆಂದು ಅವರು ನಂಬುತ್ತಾರೆ. ವಿದೇಶೀ ಸಂಸ್ಕೃತಿ ದೇಶೀಯ ಸಂಸ್ಕೃತಿಯ ಮೇಲೆ ಆಕ್ರಮಣ ಮಾಡುವ ಸಂದರ್ಭಗಳ ವಿಷಾದವನ್ನು ಅವರ ಕತೆಗಳು ಸೂಚಿಸುತ್ತವೆ. ಇಷ್ಟೆಲ್ಲ ಹೇಳಿದರೂ ಸಂಸ್ಕೃತಿಯೊಂದಿಗೆ ಮಾಸ್ತಿಯವರ ಸಂಬಂಧ ಏಕಮುಖವಾದುದು, ತಿಕ್ಕಾಟವಿಲ್ಲದ ಸ್ವೀಕರಣ ಮನೋಭಾವದ್ದು ಎನ್ನುವುದನ್ನು ಅಲ್ಲಗಳೆಯಲಾಗದು. ಸಂಸ್ಕೃತಿಯಲ್ಲಿ ಗಟ್ಟಿಯಾದ ಶ್ರದ್ಧೆಯುಳ್ಳ ಬರಹಗಾರ ಒಂದು ಮಿತಿಯಲ್ಲಿ ಪರಿಪೂರ್ಣವಾದ ಕೃತಿಗಳನ್ನು ಕೊಡಬಹುದು. ಆದರೆ ಸಂಸ್ಕೃತಿಯೊಂದಿಗೆ ತಿಕ್ಕಾಟದ, ಘರ್ಷಣೆಯ ಸಂಬಂಧವಿಟ್ಟುಕೊಂಡ ಬರಹಗಾರ ಹೆಚ್ಚು ಪ್ರಸ್ತುತವೆನಿಸುತ್ತಾನೆ.

ಅನುಭವದ ಒರೆಗಲ್ಲಿನಿಂದ ಜೀವನದ ಟೊಳ್ಳು-ಗಟ್ಟಿಗಳನ್ನು ಪರೀಕ್ಷಿಸಬೇಕೆನ್ನುವ ವೈಚಾರಿಕ ನಿಲುವಿನಿಂದ ಬರೆಯುವ ಶಿವರಾಮ ಕಾರಂತರು ಕನ್ನಡ ಸಂಪ್ರದಾಯದ ಸಂದರ್ಭದಲ್ಲಿ ಅತ್ಯಂತ ವಿಶಿಷ್ಟರಾಗಿ ಕಾಣುತ್ತಾರೆ. ಅವರ ಸಮಕಾಲೀನ ಬರಹಗಾರರಲ್ಲಿ ಕಾಣುವ ಯಾವುದೇ ಸಾಂಸ್ಕೃತಿಕ ಹಿಂಜರಿತಗಳನ್ನು ಅವರಲ್ಲಿ ನಾವು ಕಾಣುವುದಿಲ್ಲ. ಇತಿಹಾಸದ ಬಗ್ಗೆ ಮರುಹಂಬಲದ ಭಾವುಕತೆಯಾಗಲಿ, ಸ್ವಾತಂತ್ರ್ಯಪೂರ್ವಯುಗದ ಆದರ್ಶಪ್ರಿಯತೆಯಾಗಲಿ ಅವರಲ್ಲಿ ಕಂಡುಬರುವುದಿಲ್ಲ. ಇಂಥ ಪರಿಣಾಮಕಾರಿ ನಿಲುವುಗಳು ಸುಲಭಸಾಧ್ಯವಾದ್ದರಿಂದಲೇ ಬಹುಶಃ ಅವರು ಅನುಭವವನ್ನು ಪ್ರಮಾಣವೆಂದು ನೋಡುವ ವೈಜ್ಞಾನಿಕಮನೋಭಾವವನ್ನು ಬೆಳೆಸಿಕೊಂದರು. ಪಶ್ಚಿಮದ ಚಿಂತನೆ ಮತ್ತು ಗಾಂಧೀಯುಗದ ಆದರ್ಶವಾದಗಳ ಅತ್ಯುತ್ತಮ ಅಂಶಗಳು ಅವರಲ್ಲಿ ಹರಳುಗಟ್ಟಿ ನೈತಿಕ ಮಾನವತಾವಾದೀ ಜೀವನದೃಷ್ಟಿಯನ್ನು ರೂಪಿಸಿದವು. ಮನುಷ್ಯ ಸ್ವಭಾವದ ಒಳಿತು ಕೆಡುಕಿನ ಸಾಧ್ಯತೆಗಳನ್ನು ಅನುಭವದ, ಸತ್ಯದ ಹಿನ್ನೆಲೆಯಲ್ಲಿ ಅವರು ಪರಿಶೀಲಿಸುತ್ತಾರೆ. ವ್ಯಕ್ತಿ ತಾನು ನಂಬಿಕೊಂಡ ಮೌಲ್ಯಗಳಿಗೆ ಎಷ್ಟು ಪ್ರಾಮಾಣಿಕವಾಗಿ ಬದುಕುತ್ತಾನೆ ಎನ್ನುವುದು ಮಾತ್ರ ಅವರ ನಿಷ್ಕರ್ಷೆಗೆ ಒಳಗಾಗುತ್ತದೆ. ಈ ಮೌಲ್ಯಗಳ ಸಮರ್ಪಕತೆಯನ್ನು ಅವರು ಆಳವಾಗಿ ಕೆದಕುವಂತೆ ತೋರುವುದಿಲ್ಲ. ಕಾರಂತರು ಸಮಕಾಲೀನ ವಾಸ್ತವದ ಬಗ್ಗೆ ಬರೆದ ಕೃತಿಗಳು ಗಾಂಧೀಯುಗದ ಚಳುವಳಿಗಿಂತಲೂ ಹೆಚ್ಚಾಗಿ ಮಹಾಯುದ್ಧದ ಸನ್ನಿವೇಶದಲ್ಲಿ ಶುರುವಾದ ಭ್ರಷ್ಟತೆ, ಅಧಃಪತನದ ಬಗೆಗಿರುವುದು ಕುತೂಹಲಕಾರಿಯಾಗಿದೆ. ಅವರ ‘ಮುಗಿದ ಯುದ್ಧ’ ‘ಜಾರುವ ದಾರಿಯಲ್ಲಿ’ ‘ಔದಾರ್ಯದ ಉರುಳಲ್ಲಿ’ ಮುಂತಾದ ಕಾದಂಬರಿಗಳನ್ನು ಒಟ್ಟಿಗೆ ಓದಿದಾಗ ಅವು ಸಮಕಾಲೀನ ಇತಿಹಾಸದ ಶಕ್ತಿಪೂರ್ಣವಾದ ದಾಖಲೆಗಳಾಗಿರುವುದು ಸ್ಪಷ್ಟವಾಗುತ್ತದೆ. ಒಂದು ಮೌಲ್ಯವ್ಯವಸ್ಥೆ ಕ್ರಮೇಣವಾಗಿ ಶಿಥಿಲಗೊಂಡು ಚಿತ್ರಣ ಈ ಕೃತಿಗಳಲ್ಲಿ ಸಿಕ್ಕುತ್ತದೆ. ನೈತಿಕ ಮತ್ತು ರಾಜಕೀಯ ಭ್ರಷ್ಟತೆಯ ಶುರುವಾತನ್ನು ಕಾರಂತರು ಸ್ವಾತಂತ್ರ್ಯದ ಮೊದಲೇ ಗುರುತಿಸಿದ್ದು ಗಮನಿಸಬೇಕಾದ ವಿಷಯ. (ಈ ಹಿಂದೆ ಹೇಳಿದಂತೆ) ಕಾರಂತರು ಎರಡು ಜಗತ್ತುಗಳ ಮಧ್ಯೆ ತಮ್ಮ ಜೀವನ ದೃಷ್ಟಿಯನ್ನು ರೂಪಿಸಿಕೊಂಡವರು. ಗಾಂಧೀ ಯುಗದ ಆದರ್ಶಗಳ ಒರೆಗಲ್ಲಿನಿಂದ ಅವರು ಸಮಕಾಲೀನ ಸಮಾಜದ ಅದಃಪತನವನ್ನು ವಿವೇಚಿಸುತ್ತಾರೆ. ಕನ್ನಡದ ಪ್ರಮುಖ ವಾಸ್ತವವಾದಿ ಕಾದಂಬರಿಕಾರರಾದ ಕಾರಂತರು ತಮ್ಮ ಈ ಕೃತಿಗಳಲ್ಲಿ ಪ್ರಾದೇಶಿಕ ಜೀವನದ ವಾಸ್ತವಕ್ಕೆ ಬದ್ಧರಾಗಿ ಸಮಕಾಲೀನ ರಾಜಕೀಯ ಘಟನೆಗಳನ್ನು ಬಳಸದಿರುವುದು ಕುತೂಹಲಕಾರಿಯಾಗಿದೆ. ಇಂಥ ಘಟನೆಗಳು ವ್ಯಕ್ತಿಯ ಜೀವನದ ಬವಣೆಗಳ ಮಧ್ಯೆ ಸುಳಿದು ಹೋಗುವ ದೃಶ್ಯಗಳಾಗಿ ಬರುತ್ತವೆ. ಬರಹಗಾರರ ಗಮನ ಒಂದು ಪ್ರದೇಶದ ಸೀಮಿತ ಬದುಕಿನಲ್ಲಿ ಒಬ್ಬ ವ್ಯಕ್ತಿಗೆ ದಕ್ಕುವ ಅನುಭವದ ಮೇಲಿದೆ. (ಹೀಗೆ ದೃಷ್ಟಿಯ ಹರಹನ್ನು ಚಿಕ್ಕದಾಗಿಸಿಕೊಂಡು ಸುತ್ತಲಿನ ಸಮೀಪದ (ಇಮ್ಮೆದಿ‌ಅತೆ)ವಾಸ್ತವವನ್ನು ಬಗೆಯುವ ಈ ಪ್ರಕ್ರಿಯೆ ನಮ್ಮ ಬರಹಗಾರರಿಗೆ ಸಹಜವಾಗಿದೆಯೆನ್ನುವುದು ಈ ಮೊದಲೇ ಸೂಚಿಸಿದ್ದೇನೆ). ಆದರೆ ಕಾರಂತರ ಸಮಕಾಲೀನರಿಗೆ ಹೋಲಿಸಿದರೆ ಕಾರಂತರ ಸಾಹಿತ್ಯ ಪ್ರಾದೇಶಿಕ ಸತ್ಯದ ಮೂಲಕ ದೇಶದ ಒಟ್ಟು ಬದುಕಿನ ಸೂಕ್ಷ್ಮಗಳನ್ನು ಸೂಚಿಸುವಷ್ಟು ಶಕ್ತಿಶಾಲಿಯಾಗಿದೆ. ಸಮಷ್ಟಿಯ ಬದುಕಿನಲ್ಲಿ ಉಂಟಾಗುತ್ತಿದ್ದ ಅಧಃಪತನವನ್ನು ಒಂದು ಕಡೆ ಅಭ್ಯಸಿಸಿದರೆ ಇನ್ನೊಂದು ಕಡೆ ಗಾಂಧೀಯುಗದ ಆದರ್ಶಗಳನ್ನು ವ್ಯಕ್ತಿಯ ಅನುಭವದ ಪ್ರಾಮಾಣ್ಯದಿಂದ ಪರೀಕ್ಷಿಸಿ ಒಂದು ಯುಗದ ಮೌಲ್ಯಗಳ ನಿಷ್ಕರ್ಷೆಯನ್ನು ಮಾಡುತ್ತಾರೆ. ನೇರವಾಗಿ ಸ್ವಾತಂತ್ರ್ಯಪೂರ್ವ ಕಾಲದ ರಾಜಕೀಯ ಘಟನೆಗಳ ಪ್ರಸ್ತಾಪ ಮಾಡುವ ಅನೇಕ ಸಾಮಾನ್ಯ ಕೃತಿಗಳು ಸಿಕ್ಕುತ್ತವೆ. ಕಾರಂತರ ಪ್ರಬುದ್ಧ ಕೃತಿಗಳಿಗೆ ಹೋಲಿಸಿದರೆ ಅವು ಪತ್ರಿಕಾ ವರದಿಗಳಂತೆ ಕಾಣುತ್ತದೆ.

ಕುವೆಂಪು ಅವರ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ (೧೯೩೦) ಒಂದು ಪ್ರಾದೆಶಿಕ ಕಾದಂಬರಿ ಎಂದು ಪ್ರಸಿದ್ಧವಾಗಿದ್ದರೂ ಸಮಾಜದಲ್ಲಿ ನಡೆದ ಆಂತರಿಕ ಪಲ್ಲಟಗಳ ಅಪ್ರಜ್ಞಾಪೂರ್ವಕವಾದ ದಾಖಲೆಯೂ ಆಗಿದೆ. ತನ್ನ ಸಮಾಜದ ನಂಬುಗೆ, ನಡವಳಿಕೆಗಳಿಗೆ ತನ್ನ ವಿದ್ಯಾಭ್ಯಾಸದಿಂದ ಪರಕೀಯನಾದ ಹೂವಯ್ಯನಂಥ ಒಬ್ಬ ಅಲಿ‌ಎನತೆದ್ ನಾಯಕನನ್ನು ಈ ಕಾದಂಬರಿಯಲ್ಲಿ ಕಾಣುತ್ತೇವೆ. ಹೂವಯ್ಯನ ಆದರ್ಶ, ಧ್ಯೇಯಗಳು ಅವಾಸ್ತವವಾಗಿರಬಹುದು. ಕಾದಂಬರಿಕಾರರ ನಿರೂಪಣಾ ಶೈಲಿಯ ಆರ್ಭಟದ ಮಧ್ಯೆ ಕೃತ್ರಿಮವಾಗಿ ಕಾಣಬಹುದು. ಸಮಾಜದ ಆಂತರಿಕ ಪಲ್ಲಟಗಳಿಂದ ವಿದ್ಯಾವಂತ ವರ್ಗವೊಂದು ಸಮಾಜದಿಂದ ಪರಕೀಯವಾಗುತ್ತಿರುವುದನ್ನು ಹೂವಯ್ಯ ಸಂಕೇತಿಸುತ್ತಾನೆ. ಅಲ್ಲದೆ ಕಾದಂಬರಿಯ ಒಟ್ಟು ವಿನ್ಯಾಸ ಕೂಡ ವಿವಿಧ ಮಟ್ಟದ ಪ್ರಜ್ಞೆಯುಳ್ಳ ವಿವಿಧ ಸಮಾಜಿಕ ಸ್ತರಗಳಿಗೆ ಸೇರಿದ ಪಾತ್ರಗಳು ಎಲ್ಲವೂ ನೈತಿಕ ವಿಕಾಸದ ಪ್ರಕ್ರಿಯೆಯಲ್ಲಿ ತೊಡಗಿರುವುದನ್ನು ಸೂಚಿಸುತ್ತದೆ. ಸ್ವಾತಂತ್ರ್ಯಪೂರ್ವಯುಗದ ಚಿಂತನೆಯಲ್ಲಿ ಸೇರಿಕೊಂಡ ಮಾನವತಾವಾದಿ ದೃಷ್ಟಿಕೋನ ಕಾದಂಬರಿಯ ಕಥಾವಿನ್ಯಾಸದಲ್ಲಿ ಮೂರ್ತಗೊಂಡಿದೆಯೆನ್ನಬಹುದು. ಸಮಾಜಿಕ ಅಸಮಾನತೆಯ ಬಗ್ಗೆ ಬರಹಗಾರರ ರೋಷ ಹಬೆಯಾಡುತ್ತಿರುವುದು ಅಲ್ಲಲ್ಲಿ ಗೋಚರಿಸುತ್ತದೆ. ಕುವೆಂಪು ಅವರ ಕಾದಂಬರಿಯಲ್ಲಿ ಶೂದ್ರ ಮತ್ತು ದಲಿತ ಅನುಭವ ಕನ್ನಡ ಸಂವೇದನೆಯನ್ನು ಪ್ರವೇಶಿಸುವುದಕ್ಕೂ ಅವರ ಸಮಕಾಲೀನ ಚಿಂತನೆಗೂ ಇರುವ ಸಂಬಂಧಗಳನ್ನು ಗುರುತಿಸಬೇಕು. ಜಾತಿವ್ಯವಸ್ಥೆಯ ವಿರೋಧ ಮತ್ತು ಅಸ್ಪೃಶ್ಯತೆಯ ವಿರೊಧಗಳು ಅಂದು ಚಲಾವಣೆಯಲ್ಲಿದ್ದ ತತ್ವಗಳಾಗಿದ್ದರಿಂದ ಅನೇಕ ಬರಹಗಾರರು ಆ ಬಗ್ಗೆ ಭಾವುಕವಾಗಿ ಬರೆದಿದ್ದಾರೆ. ಪ್ರಗತಿಶೀಲರು ಇಂಥ ಸಮಾಜಿಕ ಅನ್ಯಾಯಗಳ ಬಗ್ಗೆ ರೋಷದಿಂದ ಬರೆದಿದ್ದಾರೆ. ಆದರೆ ಕುವೆಂಪು ಅವರಂಥ ಬರಹಗಾರರ ಮೂಲಕ ಸಮಾಜದ ಕೆಳಸ್ತರಗಳ ಅನುಭವ ನೈಜವಾಗಿ ಮೂಡಿಬಂದಾಗ ಅಮೂರ್ತವಾದ ಆಶಯಗಳು ಸೃಷ್ಟಿಶೀಲ ಚಿಂತನೆಯನ್ನು ಪ್ರವೇಶಿಸಿದಂತಾಗುತ್ತದೆ. ಪ್ರಗತಿಪರ ಧೋರಣೆಗಳುಳ್ಳ ಬರಹಗಾರರಲ್ಲಿ ಕಂಡುಬರುವ ರಟ್ಟಿನ ಆಕೃತಿಯಂಥ ಕೆಳವರ್ಗದ ಪಾತ್ರಗಳಿಗೂ ಕುವೆಂಪು ಅವರ ಜೀವಂತ ಪಾತ್ರಗಳಿಗೂ ಇರುವ ವ್ಯತ್ಯಾಸಗಳನ್ನು ಗಮನಿಸಬೇಕು. ಎಷ್ಟರಮಟ್ಟಿಗೆ ಸಮಾಜಿಕ ಆಶಯಗಳು ಕನ್ನಡದ ಸೃಷ್ಟಿಶೀಲತೆಯನ್ನು ಪ್ರವೇಶಿಸಿದವು ಎನ್ನುವುದರ ದ್ಯೋತಕವಾಗಿದೆ ಈ ವ್ಯತ್ಯಾಸ.

ಸ್ವಾತಂತ್ರ್ಯಪೂರ್ವಯುಗದ ಕಥಾ ಸಾಹಿತ್ಯದ ವರದಿ ಮಾಡುವುದು ನನ್ನ ಉದ್ದೇಶವಾಗಿಲ್ಲ. ಅಥವಾ ರಾಷ್ಟ್ರೀಯತೆ ಬಗ್ಗೆ ಮಾತನಾಡಲು ಅನುಕೂಲವಾಗುವಂಥ ಸಾಮಾನ್ಯ ಕೃತಿಗಳು ಪ್ರಸ್ತಾಪಮಾದುವ ಅವಶ್ಯಕತೆಯೂ ನನಗೆ ಅನಿಸಲಿಲ್ಲ. ಆ ಯುಗದ ಮುಖ್ಯಕೃತಿಗಳನ್ನು ಎದುರಿಗಿಟ್ಟುಕೊಂಡು ಕೆಲವು ಸ್ಥೂಲವಾದ ಅಂಶಗಳನ್ನು ಸೂಚಿಸಿದ್ದೇನೆ. ಒಂದು ಯುಗದ ಚಾರಿತ್ರಿಕ ಅನುಭವದ ಅಭಿವ್ಯಕ್ತಿಯಾಗಿ ಈಜ್ ಸಾಹಿತ್ಯವನ್ನು ವಿವೇಚಿಸಿದರೆ ನಿರಾಸೆಯಾಗುತ್ತದೆ. ರಾಜಕೀಯವಾಗಿ ಸಂಕ್ರಮಣ ಸ್ಥಿತಿಯಲ್ಲಿದ್ದ ದೇಶವೊಂದರಲ್ಲಿ ಕಾಣಬೇಕಾಗಿದ್ದ ಚಿಂತನೆಯ ಲವಲವಿಕೆಯಾಗಲಿ ಸಮಕಾಲೀನತೆಯ ಸೊಗಸಾಗಲಿ ಅಲ್ಲಿ ಕಾಣುವುದಿಲ್ಲ. ಒಟ್ಟು ಸಂದರ್ಭದ ಪರಿಣಾಮದಿಂದ ಪ್ರಾದೇಶಿಕ ಸಂಸ್ಕೃತಿಯೊಂದರಲ್ಲಿ ಆದ ಪರೋಕ್ಷವಾದ ಬದಲಾವಣೆಗಳನ್ನು ಸೂಚ್ಯವಾಗಿ ಅದು ಹಿಡುದುಕೊಡುತ್ತದೆ. ಆದರೆ ಪ್ರದೇಶಿಕ ಅನುಭವದ- ಸತ್ಯದ ಮೂಲಕವೇ ಚಾರಿತ್ರಿಕ ಸಂವೇದನೆಯನ್ನು ಅಭಿವ್ಯಕ್ತಿಸುವುದರಲ್ಲಿ ನಮ್ಮ ಬರಹಗಾರರು ಸೋತರೆ ಎನ್ನುವ ಆತಂಕ ಮಾತ್ರ ಮನಸ್ಸಿನಲ್ಲುಳಿಯುತ್ತದೆ. ನಾಶವಾಗುತ್ತಿರುವ ಮತ್ತು ಬದುಕಿನ ಗುಣಮಟ್ಟ ಹಾಳಾಗುತ್ತಿರುವ ಬಗ್ಗೆ ವಿಷಾದವನ್ನು ದಾಖಲಿಸುತ್ತದೆ. ‘ಮುಗಿದ ಯುದ್ಧ’ ‘ಔದಾರ್ಯದ ಉರುಳಲ್ಲಿ’ ‘ಜಾರುವ ದಾರಿಯಲ್ಲಿ’ ಈ ಕಾದಂಬರಿಗಳು ಕಳೆದು ಹೋಗುತ್ತಿರುವ ಜಗತ್ತಿನ ಬಗ್ಗೆ ಹಳವಂಡವನ್ನಲ್ಲದಿದ್ದರೂ ತೀವ್ರವಾದ ವಿಷಾದವನ್ನು ತೋರಿಸುತ್ತವೆ. ಮುಖ್ಯವಾದ ವಿಷಯವೆಂದರೆ ಕಾರಂತರು ಬದುಕಿನ ಅವನತಿಯನ್ನು ಮಹಾಯುದ್ಧದ ಹೊತ್ತಿಗೆ ಶುರುವಾದ ಭ್ರಷ್ಟತೆಯಲ್ಲಿ ಗುರುತಿಸುತ್ತಾರೆಯೇ ಹೊರತು ಸ್ವಾತಂತ್ರ್ಯ ನಂತರದ ಭ್ರಮನಿರಸನದಲ್ಲಿ ಅಲ್ಲ. ಅವರ ಈ ಕಾದಂಬರಿಗಳು ಸಮಕಾಲೀನ ಬದುಕಿನ ನಿಷ್ಠುರವಾದ ಸತ್ಯಗಳನ್ನು ಹಿಡುದುಕೊಡುತ್ತವೆ. ಆದರೆ ಸ್ವಾತಂತ್ರ್ಯ ಚಳುವಳಿಯ ಸನ್ನಿವೇಶವನ್ನು ಅವರು ತಮ್ಮ ಕಾದಂಬರಿಗಳ ಭಿತ್ತಿಯನ್ನಾಗಿ ಬಳಸದಿದ್ದುದು ಕುತೂಹಲಕರವಾಗಿದೆ. ಅವರ ಪಾತ್ರಗಳ ಬದುಕಿನಲ್ಲಿ ಆ ಚಳುವಳಿಯೂ ಕೂಡ ವೈಯಕ್ತಿಕ ಬದುಕಿನ ಬವಣೆಯನ್ನು ದೂರದಿಂದ ತಟ್ಟುವ ಒಂದು ಅನುಭವ ಮಾತ್ರವಾಗಿ ಬಿಡುತ್ತದೆ. ವೈಯಕ್ತಿಕ ಅನುಭವವನ್ನು ಪ್ರಮಾಣವೆಂದು ನಂಬುವ ಕಾರಂತರು ತಮ್ಮ ಪ್ರಾದೇಶಿಕ ಪಾತ್ರಗಳ ಜೀವನದಲ್ಲಿ ರಾಜಕೀಯ ಸನ್ನಿವೇಶಗಳು ಅನುಭವದ ಹರಹಿಗೆ ಬರಲಿಲ್ಲವೆಂದು ಹೀಗೆ ಮಾಡಿರಬಹುದು. ಆದರೆ ಕನ್ನಡದ ಶ್ರೇಷ್ಠ ಬರಹಗಾರರ ಸಮಗ್ರ ಸಾಹಿತ್ಯ ಸಮಕಾಲೀನ ರಾಜಕೀಯದ ವಾಸ್ತವಗಳಿಗೆ ವಿಮುಖವಾದದ್ದು ಗಂಭೀರವಾಗಿ ಆಲೋಚಿಸಬೇಕಾದ ವಿಷಯವಾಗಿದೆ. ಜೊತೆಗೆ ಸ್ವಾತಂತ್ರ್ಯದ ನಂತರದ ಅವರ ಕೃತಿಗಳಲ್ಲಿ ರಾಜಕೀಯದ ಬಗ್ಗೆ ವಿಡಂಬನೆ ಮತ್ತು ಆಕ್ರೋಶಗಳ ಹೊರತು ಇನ್ನಾವ ಪ್ರತಿಕ್ರಿಯೆಯನ್ನು ತೋರದಿದ್ದುದನ್ನು ಗಮನಿಸಿದರೆ ಅವರ ಸೃಷ್ಟಿಶೀಲ ಚಿಂತನೆಯ ಮಿತಿಗಳ ಸ್ಪಷ್ಟವಾಗಿ ಗೋಚರಿಸುತ್ತವೆ.

ಕುವೆಂಪು ಅವರ ಕಾದಂಬರಿಗಳ ಕಲಾತ್ಮಕ ಕೊರತೆಗಳೇನೆ ಇರಲಿ ಸಾಂಸ್ಕೃತಿಕವಾಗಿ ಅವರು ಅತ್ಯಂತ ಮಹತ್ವಪೂರ್ಣ ಬರಹಗಾರರಾಗಿದ್ದಾರೆ. ಕನ್ನಡದ ಇನ್ನೆಲ್ಲ ಗದ್ಯ ಬರಹಗಾರರು ತಮ್ಮ ಸೃಷ್ಟಿಶೀಲತೆಯನ್ನು ಬೌದ್ಧಿಕ ಹಿಡಿತದಿಂದ ನಿಶ್ಚಿತವಾದ ಉದ್ದೇಶಗಾರಿಕೆಯಿಂದ ಮುಕ್ತಗೊಳಿಸಿಕೊಂಡು ಬರೆದಿಲ್ಲ. ಆದ್ದರಿಂದ ಜನಾಂಗದ ಸುಪ್ತಪ್ರಜ್ಞೆಗೆ ಮಾತ್ರ ಅನುಭವವಾಗಬಲ್ಲ ಆಳದ ಅನುಭವಗಳು ಅವರ ಕೃತಿಗಳಲ್ಲಿ ಕಾಣುವುದಿಲ್ಲ. ಕುವೆಂಪುರವರ ಕಾದಂಬರಿಗಳಲ್ಲಿ ಬರಹಗಾರರ ಉದ್ದೇಶಗಳನ್ನು ಮೀರಿದ ಸಂಗತಿಗಳು, ಜನಾಂಗದ ಸುಪ್ತ ಅನುಭವಗಳು ಸುಳಿಯುವುದರಿಂದ ಅವು ನಿಜವಾದ ಅರ್ಥದಲ್ಲಿ ಸಾಂಸ್ಕೃತಿಕ ದಾಖಲೆಗಳಾಗಿವೆ. ಶಿಕ್ಷಣದಿಂದಾಗಿ ಪರಿಸರದಿಂದ ದೂರಸರಿದ ಕುವೆಂಪು ಅವರ ಶಿಕ್ಷಿತಪಾತ್ರಗಳು ಸಮುದಾಯವು ಒಡೆದುಹೋದ ಸತ್ಯವನ್ನು ಸಂಕೇತಿಸುತ್ತವೆ. ಈ ದೃಷ್ಟಿಯಲ್ಲಿ ಹೂವಯ್ಯ ಒಂದು ಆದಿಪ್ರತಿಮೆ (ಅರ್ಚೆತ್ಯ್ಪೆ)ಯಾಗಿ ಕಾಣುತ್ತಾನೆ. ಸಂಸ್ಕೃತಿಯ ಬಗೆಗಿನ ಕುವೆಂಪು ಅವರ ಹುಸಿಧೋರಣೆಗಳು ಅವರ ಕಾದಂಬರಿಗಳಲ್ಲಿ ಎಷ್ಟು ನಿಚ್ಚಳವಾಗಿವೆಯೋ ಶೂದ್ರ ಮತ್ತು ದಲಿತ ಬದುಕಿನ ಚಿತ್ರಣ ಅಷ್ಟೇ ದಟ್ಟವಾಗಿದೆ. ಮೊದಲ ಬಾರಿಗೆ ಕುವೆಂಪು ಅವರ ಕೃತಿಗಳಲ್ಲಿ ಒಂದು ಹೊಸ ಅನುಭವವಲಯ ಸಶರೀರವಾಗಿ ಪ್ರವೇಶಿಸುವುದರಿಂದ ಸಂಸ್ಕೃತಿಯಲ್ಲಾದ ಬಹುಮುಖ್ಯ ಪಲ್ಲಟವೊಂದು ಸಾಹಿತ್ಯದಲ್ಲಿ ಮೈದಾಳಿದಂತಾಗುತ್ತದೆ. ಇಂಗ್ಲಿಷ್ ಶಿಕ್ಷಣದಿಂದ ನಮ್ಮ ಚಿಂತನೆಯನ್ನು ಪ್ರವೇಶಿಸಿದ ಮಾನವತಾವಾದ ಕುವೆಂಪು ಕಾದಂಬರಿಗಳಲ್ಲಿ ಮೂರ್ತವಾದ ಕೆಳವರ್ಗದ ಪಾತ್ರಗಳ ಸೃಷ್ಟಿಯೊಂದಿಗೆ ಪರಿಪೂರ್ಣತೆಯನ್ನು ಪಡೆಯುತ್ತದೆ. ಗಾಂಧಿವಾದದ ಬಗ್ಗೆ ಕೇವಲ ಹೇಳಿಕೆಗಳನ್ನು ಕೊಡುವ ಕೃತಿಗಳ ಬದಲು ಕುವೆಂಪು ಕೃತಿಗಳಲ್ಲಿ ನಮ್ಮ ಸಂಸ್ಕೃತಿ ಮೂರ್ತಮಾನವತಾವಾದವನ್ನು ಅರಗಿಸಿಕೊಳ್ಳುವ ಪ್ರಕ್ರೀಯೆ ನಮ್ಮ ಗಮನ ಸೆಳೆಯುತ್ತದೆ. ಅವರ ಕಾದಂಬರಿಗಳು ‘ಸಮಕಾಲೀನ’ವಲ್ಲದಿರಬಹುದು, ಆದರೆ ಸಂಸ್ಕೃತಿಯ ಮನಸ್ಸಿನ ಸೂಕ್ಷ್ಮವಾದ ತಿರುವುಗಳ ದಾಖಲೆಗಳಾಗಿವೆ. ಸ್ವಾತಂತ್ರ್ಯಪೂರ್ವಯುಗದ ಸಾಹಿತ್ಯ ಸಮಕಾಲೀನ ರಾಜಕೀಯ ವಾಸ್ತವಗಳಿಗೆ ವಿಮುಖವಾಗಿರುವುದರಿಂದ ಆ ಸಾಹಿತ್ಯ ಬದುಕಿನ ಆಂತರ್ಯದಲ್ಲಾದ ಬದಲಾವಣೆಗಳಿಗೆ ಪ್ರತಿಕ್ರಿಯಿಸುವುದನ್ನು ಇನ್ನೊಂದು ಚೌಕಟ್ಟಿನಲ್ಲಿ ನೋಡಬೇಕಾದ ಅವಶ್ಯಕತೆಯಿದೆ. ವ್ಯಕ್ತಿ ನಿರಪೇಕ್ಷವಾದ ಸಂಸ್ಕೃತಿಯೊಂದರಲ್ಲಿ ಮಾನವತಾವಾದ ಪ್ರವೇಶಿಸಿ ಹರಳುಗಟ್ಟುವ ಪ್ರಕ್ರಿಯೆಯನ್ನು ಇಂಥ ಚೌಕಟ್ಟಾಗಿ ಬಳಸಿದರೆ ನಮ್ಮ ಪರಂಪರೆಯ ಸರಿಯಾದ ಅಧ್ಯಯನ ಸಾಧ್ಯವಾಗಬಹುದು.

ಸಮಕಾಲೀನ ರಾಜಕೀಯ ಮತ್ತು ವಾಸ್ತವದ ಬಗ್ಗೆ ಆರ್ಭಟ ಘೋಷಣೆಗಲನ್ನು ಮಾಡಿದ ಪ್ರಗತಿಶೀಲರ ಸಮಕಾಲೀನತೆ ಪತ್ರಿಕೆಗಳ ಸಂಪಾದಕೀಯದ ಮಟ್ಟದ್ದಾಗಿತ್ತು. ಕನ್ನಡದ ವಾಸ್ತವವಾದಿ ಸಂಪ್ರದಾಯದ ಕೊರತೆಗಳೇನೇ ಇರಲಿ ನುಡಿಗಟ್ಟು ಮತ್ತು ಪರಿಸರ ಸೃಷ್ಟಿಯಲ್ಲಿ ಅವು ಇಲ್ಲಿನ ಬದುಕಿಗೆ ತೆರೆದುಕೊಂಡಿದ್ದವು. ಪ್ರಗತಿಶೀಲರಲ್ಲಿ ಮಾತ್ರ ಪಾತ್ರಗಳು ಸನ್ನಿವೇಶಗಳು ಅನಿರ್ಧಿಷ್ಟವಾದ ಒಂದು ನಿರ್ವಾತದಲ್ಲಿ ಹುಟ್ಟಿದಂತೆ ಕಾಣುತ್ತದೆ. ಮೂರ್ತವಾದ ಸೃಷ್ಟಿಯ ಜಾಗವನ್ನು ಅಶಯಗಳು ಆಕ್ರಮಿಸಿಕೊಳ್ಳುತ್ತವೆ. ಪ್ರಗತಿಶೀಲರ ಅನೇಕ ಕಥೆಗಳು ನೇರವಾಗಿ ಸ್ವಾತಂತ್ರ್ಯದ ಚಳುವಳಿಯ ಬಗೆಗಿವೆ. ಈ ಕಥೆಗಳಲ್ಲಿ ಓದುಗನ ಭಾವನೆಗಳನ್ನು ಉದ್ರೇಕಿಸಲು ಬರಹಗಾರರು ಬಳಸುವ ರೆಟರಿಕ್ ವಸ್ತುವಿನ ಸತ್ವವನ್ನು ಕಬಳಿಸಿಬಿಡುತ್ತವೆ. ರಾಷ್ಟ್ರದ ಬಗ್ಗೆ; ಸ್ವಾತಂತ್ರ್ಯದ ಬಗ್ಗೆ ಸುಲಭವಾದ ಭಾವುಕವಾದ ಪ್ರತಿಕ್ರಿಯೆಗಳನ್ನು ಈ ಕೃತಿಗಳು ನಮ್ಮ ಮೇಲೆ ಹೇರುತ್ತವೆ. ಇದರಿಂದಾಗಿ ಸಮಕಾಲೀನ ವಾಸ್ತವದ ಬಗ್ಗೆ ಅಪ್ರಬುದ್ಧವಾದ ತಿಳುವಳಿಕೆಯನ್ನು ಕೊಡುತ್ತವೆ. ಸಮಕಾಲೀನ ವಾಸ್ತವವನ್ನು ಪುರಾಣ, ದಂತಕತೆಯ ಮಟ್ಟಕ್ಕೆ ತರುವ ಈ ಕೃತಿಗಳು ಓದುಗ ಮತ್ತು ಅವನ ಸದ್ಯದ ಬದುಕಿನ ಮಧ್ಯೆ ಇರಬೇಕಾದ ಜೀವಂತ ಸಂಬಂಧಗಳನ್ನು ನಾಶಮಾಡುತ್ತವೆ.

ಸಾಮಾಜಿಕ ಶೋಷಣೆಯ ಹಲವಾರು ಮುಖಗಳ ಬಗ್ಗೆ ಪ್ರಗತಿಶೀಲರು ಬರೆದಿದ್ದಾರೆ. ಅವರ ಸಾಮಾಜಿಕ ಕಳಕಳಿಯಲ್ಲಿ ಮಧ್ಯಮವರ್ಗದ ಶುಷ್ಕವಾದ ನೀತಿಕಲ್ಪನೆಯ ಬಗ್ಗೆ ಆಕ್ರೋಶವಿದೆ. ಕೆಳವರ್ಗಗಳ ಬಗ್ಗೆ ಭಾವುಕವಾದ ಅನುಕಂಪವಿದೆ. ಆದರೆ ಧಾರಾಳವಾದ ಅನುಕಂಪಕ್ಕೂ ವ್ಯವಸ್ಥೆಯ ಸಮಗ್ರ ರೂಪದ ತಿಳುವಳಿಕೆಗೂ ಇರುವ ವ್ಯತ್ಯಾಸ ಪ್ರಗತಿಶೀಲರಿಗೆ ಅರಿವಾದಂತೆ ತೋರುವುದಿಲ್ಲ. ನಿರಂಜನ ಮತ್ತು ಚದುರಂಗರ ಕೆಲವು ಕತೆಗಳು ಸಾಧಿಸುವ ಯಶಸ್ಸು ಅವರ ಪ್ರಗತಿಪರ ಧೋರಣೆಗಳಿಗಿಂತ ವಸ್ತುವಿನ ಗಟ್ಟಿತನದಿಂದ ದೊರೆಯುತ್ತದೆ.

ಒಂದು ರಾಷ್ಟ್ರದ ಕಲ್ಪನೆ ಸಮಕಾಲೀನ ವ್ಯವಸ್ಥೆಯನ್ನು ಬದಲಾಯಿಸುವ ರಾಜಕೀಯವನ್ನು ಹುಟ್ಟುಹಾಕುವಂತೆ ದೇಶದ ಗತಕಾಲದ ಬಗೆಗಿನ ಒಂದು ಪರಿಕಲ್ಪನೆಯನ್ನೂ ಹುಟ್ಟುಹಾಕುತ್ತದೆ. ರಾಷ್ಟ್ರದ ಪರಿಕಲ್ಪನೆ ಒಂದು ಕಡೆಗೆ ಭವಿಷ್ಯದಲ್ಲಿ ನಿಜವಾಗಬೇಕಾದ ಅದರ್ಶವಾಗಿದ್ದರೆ ಇನ್ನೊಂದು ಕಡೆಗೆ ದೇಶದ ಗತಕಾಲದ ಬಗ್ಗೆ ಒಂದು ಮಿಥ್-(ಮ್ಯ್ಥ್)ಬದುಕಿನ ಜತೆಗೆ ಅರ್ಥಪೂರ್ಣವಾದ ಸಂಬಂಧಗಳನ್ನು ರೂಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ರಾಷ್ಟ್ರೀಯತೆಯ ಆದರ್ಶವನ್ನು ಇತಿಹಾಸದ ಮೂಲಕ ನೋಡುವ ಪ್ರಕ್ರಿಯೆ ಸ್ವಾತಂತ್ರ್ಯಪೂರ್ವಯುಗದಲ್ಲಿ ಸಹಜವಾಗಿತ್ತು. ಐತಿಹಾಸಿಕ ಕತೆ ಕಾದಂಬರಿಗಳು ರಾಷ್ಟ್ರೀಯತೆಯ ಭಾವನೆಯ ಪರಿಣಾಮವಾಗಿದ್ದವು. ಆದರೆ ವಸಾಹತುಶಾಹಿಯ ಅನುಭವದಿಂದಾಗಿ ದೇಶದ ಗತಕಾಲವನ್ನು ಆದರ್ಶೀಕರಿಸಿ ನೋಡುವ ಒಲವು ನಮ್ಮಲ್ಲಿ ಬೆಳೆದುಬಂದಿತು. ಸಂಸ್ಕೃತಿಯ ಹಿಂದಿನ ಬದುಕಿನ ಬಗ್ಗೆ ಮರುಹಂಬಲದ ಧೋರಣೆ ಬೆವ್ಳೆದುಬಂದಿತು. ಇದರಿಂದಾಗಿ ಇತಿಹಾಸವನ್ನು ಪುರಾಣವನ್ನಾಗಿ ಪರಿವರ್ತಿಸುವ ಕೆಲಸದಲ್ಲಿ ನಮ್ಮ ಬರಹಗಾರರು ತೊಡಗಿಕೊಂಡರು. ಈ ದೇಶದ ಹಿಂದಿನ ಬದುಕು ಉದಾತ್ತವಾಗಿತ್ತು, ಶ್ರೇಷ್ಠವಾಗಿತ್ತು ಎನ್ನುವ ಆಶಯವನ್ನು ಓದುಗರ ಮೇಲೆ ಒತ್ತಾಯಿಸಲು ನಮ್ಮ ಬರಹಗಾರರು ಕೃತ್ರಿಮವಾದ ರೆಟರಿಕ್ಕನ್ನು ಬಳಸುತ್ತಾರೆ. ಸಂಭಾಷಣೆಯ ಸೈಲಿಯಂತೂ ಅವಾಸ್ತವಿಕವಾಗಿತ್ತು. ಹೀಗೆ ಆದರ್ಶೀಕರಿಸಿದ್ದರಿಂದಾಗಿ ಆ ಬದುಕಿನ ಜತೆಗೆ ಉದಾತ್ತ ಮೌಲ್ಯಗಳು ಕೊಡುವಂತಾಯಿತು. ಈ ಬಗೆಯ ಐತಿಹಾಸಿಕ ಸಾಹಿತ್ಯ ಇತಿಹಾಸದ ತಿರಸ್ಕರಣವಾಗುತ್ತದೆ. ಮಾಸ್ತಿಯವರ ಐತಿಹಾಸಿಕ ಕತೆಗಳು ನಮ್ಮ ನುಡಿಗಟ್ಟಿನ ವಾಸ್ತವಿಕತೆಯಿಂದ ಸನ್ನಿವೇಶಗಳ ನೈಜತೆಯಿಂದ ಭಿನ್ನವೆನಿಸುತ್ತದೆ. ಆದರೆ ಅವರೂ ಕೂಡ ಹಿಂದಿನ ಬದುಕನ್ನು ಆರಾಧಕ ದೃಷ್ಟಿಯಿಂದ ನೋಡುತ್ತಾರೆ. ಅದರಲ್ಲಿ ಉದಾತ್ತತೆಯನ್ನು ಹುಡುಕಬಯಸುತ್ತಾರೆ. ‘ನಿಜಗಲ್ಲಿನ ರಾಣಿ’ ‘ಪೆನಗೊಂಡೆಯ ಕೃಷ್ಣಮೂರ್ತಿ’ ಇತ್ಯಾದಿ ಕತೆಗಳು ಈ ಬಗೆಯವು. ಮಾಸ್ತಿಯವರ ವಿಶಿಷ್ಟತೆಯೆಂದರೆ ಅವರು ದೇಶೀಯ ಮತ್ತು ವಿದೇಶೀಯ ಸಂಸ್ಕೃತಿಗಳ ಸಂಬಂಧಗಳನ್ನು ಕುರಿತು ಪ್ರಬುದ್ಧವಾದ ಕೆಲವು ಕತೆಗಳನ್ನು ಬರೆದಿದ್ದಾರೆ ಎನ್ನುವುದು. ಈ ಕತೆಗಳಿಗೆ ಮೂಲ ಮಾದರಿಯಂತಿರುವುದು ಅವರ ‘ಮಸುಮತ್ತಿ’ ಎನ್ನುವ ಕತೆ. ಉದಾರ ಮನೋಭಾವದ ವಿದೇಶಿಯರ ದೃಷ್ಟಿಕೋನದಿಂದ ಬರೆಯಲಾದ ಈ ಕತೆಯಲ್ಲಿ ದೇಶೀಯ ಸಂಸ್ಕೃತಿಯ ಸತ್ವಶೀಲತೆಯ ಬಗ್ಗೆ ಹಂಬಲದ ಭಾವನೆಯನ್ನು ಕಾಣುತ್ತೇವೆ. ದೇಶೀಯ ಸಂಸ್ಕೃತಿಯನ್ನು ಪುನರುಜ್ಜೀವನಕ್ಕಾಗಿ ಕಾಯುತ್ತಿರುವ ಸಂಸ್ಕೃತಿಯನ್ನಾಗಿ ಅವರು ಕಾಣುತ್ತಾರೆ. ದೇಶೀಯ ಮತ್ತು ವಿದೇಶೀಯ ಸಂಸ್ಕೃತಿಗಳ ಮಧ್ಯದ ತಪ್ಪು ಬರೆದಿದ್ದಾರೆ. ಈ ಕತೆಗಳನ್ನು ದೇಶೀಯ ಸಂಸ್ಕೃತಿಯ ಮಿತಿಗಳ ಬಗ್ಗೆ ಅಮೂಲಾಗ್ರವಾದ ಪರಿಶೀಲನೆ ನಡೆದಂತೆ ತೋರುವುದಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಆ ಕತೆಗಳಲ್ಲಿ ಎರಡು ಸಂಸ್ಕೃತಿಗಳು ಬೇರೆಯಾಗಿ ನಿಲ್ಲುತ್ತವೆಯೆ ಹೊರತು ವಿದೇಶಿಸಂಸ್ಕೃತಿಯ ಪ್ರಭಾವದಲ್ಲಿ ದೇಶೀಸಂಸ್ಕೃತಿ ತನ್ನ ಚರ್ಚೆಯನ್ನು ಬದಲಾಯಿಸಿಕೊಂಡ ಪ್ರಕ್ರಿಯೆಯ ಚಿತ್ರ ದೊರೆಯುವುದಿಲ್ಲ. ಮಾಸ್ತಿಯವರಲ್ಲಿ ಸಂಸ್ಕೃತಿಯ ಪರಿಕಲ್ಪನೆ ಶಾಶ್ವತವಾದ ಮೌಲ್ಯಗಳುಳ್ಳ ಸಮುದಾಯದ ಪರಿಕಲ್ಪನೆಯಾಗಿದ್ದರಿಂದ ಇಂಥ ಬದಲಾವಣೆಗಳನ್ನು ಅವರು ಗ್ರಹಿಸುವುದಿಲ್ಲ. ಅವರ ‘ಚಿಕವೀರರಾಜೇಂದ್ರ’ ಕಾದಂಬರಿ ಕೂಡ ಇಲ್ಲಿಯ ಸಮಾಜದ ಅವನತಿ ಮತ್ತು ವಸಾಹತಿಶಾಹಿಯ ಅನುಷ್ಠಾನದ ಬಗ್ಗೆ ತೀರ ಸಾಂಪ್ರದಾಯಿಕವಾದ ಚಿತ್ರವನ್ನು ಕೊಡುತ್ತದೆ.

ಕನ್ನಡದ ಐತಿಹಾಸಿಕ ಕಥಾಸಾಹಿತ್ಯದ ಮುಖ್ಯ ದೋಷವೆಂದರೆ ಅದು ನೆನ್ನೆಯ ಬದುಕಿನ ಜತೆಗೆ ಇಂದಿನ ಬದುಕನ್ನು ಜೋಡಿಸಲು ಸಹಾಯವಾಗುವ ‘ಉಸಬ್ಲೆ ಪಸ್ತ್’ ಅನ್ನು ಶೋಧಿಸಲಿಲ್ಲ. ಹಿಂದಿನ ಬದುಕು ರಮ್ಯವೂ ಆದರ್ಶೀಕೃತವೂ ಆದಂತೆ ಇಂದಿಗೆ ನಿಷ್ಪ್ರಯೋಜಕವೂ ಆಗುತ್ತದೆ. ಐತಿಹಾಸಿಕ ಕಥಾ ಸಾಹಿತ್ಯ ಇಂದಿನವರೆಗೂ ಸಹಜ ಮತ್ತು ಶಕ್ತಿಪೂರ್ಣವಾದ ನುಡುಗಟ್ಟನ್ನು ರೂಪಿಸಿಕೊಂಡಿಲ್ಲ. ಗಳಗನಾಥರಲ್ಲಿ, ಕೆರೂರು ವಾಸುದೇವಾಚಾರ್ಯರಲ್ಲಿದ್ದ ರೆಟರಿಕ್ಕಿನ ಗೊಂದಲಗಳಿಗೆ ಕೊನೆಗೂ ಪರಿಹಾರ ದೊರೆಯಲಿಲ್ಲ.
ಸಾಕಷ್ಟು ವಿಫಲವಾದ ಸ್ವಾತಂತ್ರ್ಯಪೂರ್ವ ಸಾಹಿತ್ಯದ ಬಗ್ಗೆ ಆಖೈರಾದ ತೀರ್ಮಾನಗಳನ್ನು ಮಾಡುವುದು ಕಷ್ಟಸಾಧ್ಯವೆನಿಸುತ್ತದೆ. ರಾಷ್ಟ್ರೀಯತೆಯ ಬಗೆಗಿರುವ ಸಾಮಾನ್ಯ ಕೃತಿಗಳ ಪಟ್ಟಿಯನ್ನು ಒದಗಿಸುವ ಬದಲು ಸ್ವಾತಂತ್ರ್ಯಪೂರ್ವ ಸಾಹಿತ್ಯದ ಮುಖ್ಯ ಕೃತಿಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಅಂಶಗಳನ್ನು ಗುರುತಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. ನಮ್ಮ ಚರಿತ್ರೆಯ ಸಂಕ್ರಮಣ ಕಾಲವೊಂದರಲ್ಲಿ ಸೃಷ್ಟಿಯಾದ ಸಾಹಿತ್ಯ ಅಂದಿನ ಸಮಕಾಲೀನ ರಾಜಕೀಯ ಸಾಮಾಜಿಕ ವಾಸ್ತವಗಳಿಗೆ ಸ್ಪಂದಿಸಲಿಲ್ಲವೆನ್ನುವ ಭಾವನೆ ಬಂದಿದ್ದರಿಂದ ಅದಕ್ಕೆ ಕಾರಣಗಳನ್ನು ಹುಡುಕುವ ಪ್ರಯತ್ನ ಮಾಡಿದ್ದೇನೆ. ಸ್ವಾತಂತ್ರ್ಯಪೂರ್ವ ಸಾಹಿತ್ಯದ ಕೊರತೆಗಳು ಇಂದಿನ ಸಾಹಿತ್ಯದಲ್ಲೂ ಕಾಣುತ್ತವೆ. ಈ ಕೊರತೆಗಳಿಗೂ ನಮ್ಮ ಸಾಂಸ್ಕೃತಿಕ ಪರಿಸರಕ್ಕೂ ಇರುವ ಸಂಬಂಧಗಳನ್ನು ವಿವೇಚಿಸುವುದು ಅವಶ್ಯಕವಾಗಿದೆ.
*****
(ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಚಾರ ಸಂಕಿರಣದಲ್ಲಿ ಮಾಡಿದ ಭಾಷಣ.೧೯೮೮)

ಕೀಲಿಕರಣ: ಸೀತಾಶೇಖರ, ನಂದಿನಿ ಮತ್ತು ಪೃಥ್ವಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.