ಸಂಕ್ರಾಂತಿ

ಒಂದನೆಯ ದೃಶ್ಯ

(ಹೊಲೆಯರ ಹಟ್ಟಿ. ಕೇರಿಗಳು ಕೂಡುವ ವಿಶಾಲ ಜಾಗ. ಒಂದು ಅರಳಿ ಕಟ್ಟೆ. ರಂಗದ ಎಡಭಾಗಕ್ಕೆ ಒಂದು ಮುರುಕಲು ಸೂರು ರಂಗದತ್ತ ಉಚಾಯಿಸಿದೆ. ಬಲ ಭಾಗದಲ್ಲಿ ಒಂದು ಬಿದಿರ ನೆರಕೆ. ಬೆಳಕು ಬಿದ್ದಾಗ ರಂಗದ ಮೇಲೆ ಉಜ್ಜ ಮಾತ್ರ ಇದ್ದಾನೆ; ಕುಡಿಯುತ್ತಾ ಹಾಡುತ್ತಿದ್ದಾನೆ)

ಉಜ್ಜ: ನೂರುತಲೆ ಮಾರವ್ವಂಗೆ ಕೊಟ್ಟೇ ಕೋಳಿ
ಹೊಲೇರುಜ್ಜ ನಾನ್ಕಣವ್ವ ಹೇಳಿಕೇಳಿ
ಹೆಂಡಕುಡದು ಹಾಡಬೇಕು ನನ್ನಾಕೂಡಬ್ಯಾಟೆಗೆ ಬಂದು ಹಿಡೀಬೇಕು ನನ್ನಾ ಜಾಡ
ಶರಣಾಗ್ಬಿಟ್ಟ ನಮ್ಮ ರುದ್ರ ಬಸ್ಯಾರಿನಾಗ
ನಾನು ಸಹಿತ ಮಾತು ಕೊಟ್ಟೆ ಬಸವಣ್ಣಾರಿಗ-
ಮಾತು ಕೊಟ್ಟ ಮೂರು ತಾಸು ತೆಪ್ಪಾಗಿದ್ದೆ
ಕ್ವಾಪ ಬ್ಯಾಡ ಅಂತ ಹೆಂಡಕ್ಕಡ್ಡಾ ಬಿದ್ದೆ….
ಕೆಂಚಾ! ಎಲ್ಲೋದನಲಾ ಆ ಗೂಬೆ ಕೆಂಚ (ಧ್ವನಿಯೆತ್ತರಿಸಿ) ಎಲಾ ಕೆಂಚ ಸೂಳೆ ಮಗನೆ! ಬ್ಯಾಡವಾದಾಗ ಕೊಳ್ಳಿ ದೆವ್ವದಂಗೆ ಕುಣಕಂತ ಬರ್ತಿ, ಬಾರಲಾ ಅಂದ್ರೆ — ಎಲ್ಲಿ ನೆಗದುಬಿದ್ದು ಹೋದ್ಯಲಾ ಕೆಂಚ?
(ಬುರುಡೆ ಎತ್ತಿಕೊಂಡು ಕುಡಿದು ತೋಳಿನಿಂದ ಒರಸಿಕೊಂಡು ಎದ್ದು ನಾಲ್ಕು ಹೆಜ್ಜೆ ಹಾಕುವನು. ಕೆಂಚ ಅವನ ಬೆನ್ನ ಹಿಂದೆ ಬಂದು ಮೆತ್ತಗೆ ಕೈ ಹಾಕಿ ಬುರುಡೆ ಕಿತ್ತುಕೊಳ್ಳುವನು)
ಕೊಡಲೇ ಕೊಡಲೇ — ಮುದುಕ ಗಂಟಲು ಹರಕಣೋ ಮುಟ್ಟ ಬಡಕೊಂಡ್ರೂ ಬರಾಕಿಲ್ಲ. ಬಂ….ದು ನನ್ನವ್ವನ್ನ ಕಿತ್ಕೊಂತೀಯಾ?
(ಎಂದು ಕೆಂಚನನ್ನು ಬೆನ್ನಟ್ಟಿ ಹೋಗುವನು. ಉಜ್ಜ ಪಕ್ಕದಿಂದ ಕೋಲೆಳೆದುಕೊಂಡಾಗ ಕೆಂಚ ನಕ್ಕು ಬುರುಡೆ ನೆಲಕ್ಕಿಟ್ಟು ನಿಲ್ಲುವನು. ಉಜ್ಜ ಅದನ್ನು ಎತ್ತಿಕೊಂಡು ಕೂತು ಮಾತನಾಡತೊಡಗುವನು)
ಏನಂತೋ ಕೆಂಚ ಕಲ್ಯಾಣಪಟ್ಟಣದ ಸಮಾಚಾರ?
ಕೆಂಚ : ಸುದ್ದಿ ಸಮಾಚಾರ ಯಾಕಪ್ಪಾ ನಿಂಗೆ? ನೀನಾತು ನಿನ್ನ ಹೆಂಡಾತು. ಕುಂತ್ರು ಹೆಂಡ, ನಿಂತ್ರು ಹೆಂಡ, ಮಗಳು ಮನೀಗೆ ಬಂದ್ಲು ಅಂತ ಹೆಂಡ, ಮನಿಂದ ಗಂಡನ ತಾವ ಹೋದ್ಲು ಅಂತ ಹೆಂಡ, ಹೊತ್ತು ಮೂಡ್ತಂತ ಹೆಂಡ, ಮುಣುಗ್ತು ಅಂತ ಹೆಂಡ, ನಿನ್ನ ಹೆಂಡದ ವಾಸ್ನಿಗೆ ಆಕಾಸದಾಗೆ ಹದ್ದು ಸೈತ ಬರಾಕಿಲ್ಲ-
ರುದ್ರ : ಹೌದೋ, ಹದ್ದು ಸೈತ ಬರಾಕಿಲ್ಲ ಅಂತಿ — ನೀನು ಬಂದ್ಯಲ್ಲೋ?
ಕೆಂಚ : (ವಿಷಯ ಬದಲಿಸಿ) ಅದಲ್ಲಪ್ಪ ಯಜಮಾನ; ಇದಕ್ಕೇನಂತಿ ಹೇಳು.
ಉಜ್ಜ : ಯಾದಕ್ಕಪ್ಪ, ಪಂಚಾತಿಗಿಲ್ಲದೆ ಹೇಳು.
ಕೆಂಚ : ನಿಂಗಿದನ್ನ ಹ್ಯಂಗಪ್ಪ ಹೇಳೋದು?
ಉಜ್ಜ : ಯಾಕಲಾ ಹಂಗೆ ಬೆದೆ ಎದ್ದ ಹುಡುಗಿ ಹಂಗೆ ಆಡ್ತಿ? ಮಗನೆ, ನಾನೋ ಕುಡಿದಿರೋನು, ನೀನೋ?-
ಕೆಂಚ : ನೋಡು ಯಜಮಾನಪ್ಪ, ಬಾಯಿಬಿಟ್ರೆ ಬಡ್ಡೀ ಸೂಳೇ ಬೆಂಡ್ಳಿ ಬೋಸುಡಿ ಬಿಟ್ಟು ಬ್ಯಾರೇ ಮಾತೇ ಹೊರಡಲ್ಲೆ ನಿನ್ನ ಬಾಯಿಂದ? ನಿನ್ನ ತಾವ ಯಾರಪ್ಪ ಮಾತಾಡೋದು? ಕಣ್ಣು ಮುಚ್ಚಿ ಕಣ್ಣು ತೆಗೆಯೋದ್ರಾಗೆ ಹೇಳಿದ್ದ ಮರೀತಿ. ಅಣ್ಣ ಕುಡೀಬ್ಯಾಡಂತ ಹೇಳಿ ನಾಕು ದಿನಾಗಿಲ್ಲ-
ಉಜ್ಜ : ಎಲಾ ನಿನ್ನವ್ವನ! ನನೀಗೆ ಬುದ್ಧಿ ಹೇಳಾಕೆ ಬಂದೇನಲಾ? ನಿನ್ನವ್ವ ಮೈನೆರೆತಾಗ ನಾನಾಗಲೆ ಹತ್ತು ಹುಡುಗ್ಯಾರಿಗೆ ಸೀರೆ ಉಡಸಿದ್ದೆ. ನಂಗೆ ಕಲಿಸ್ತೀಯಾ? ಎಲ್ಲಿ ಇನ್ನೊಂದು ಪಟ್ಟ ಹೇಳು, ಯಾರೋ ಅವನು ಅಣ್ಣ? ಯಾವನಲಾ ಅವನು?
ಕೆಂಚ : (ಗಟ್ಟಿಯಾಗಿ ನಕ್ಕು) ಬಸವಣ್ಣ ಕಣೋ ನಾನಂತಿರೋದ — ಬಸವಣ್ಣ!
(ಜನ ಸೇರತೊಡಗುವರು, ಮೊದಲನೆ ವ್ಯಕ್ತಿ ಬಂದಾಗ ಕೆಂಚ ಅವನನ್ನು ಉತ್ಸಾಹದಿಂದ ಕರೆಯುವನು)
ಕೆಂಚ : ಬರ್ಯಪ್ಪಾ ಬರ್ರಿ, ಉಜ್ಜಣ್ಣ ಕತಿ ಹೇಳ್ತಾನೆ ಬರ್ರಿ.
ವ್ಯಕ್ತಿ ೧ : ಹೌದ? ಎಂಥ ಕತೀನಪ್ಪ? ಹೌದೇನಪ್ಪ ಉಜ್ಜಣ್ಣ?
(ಉಜ್ಜ ಅವನ ಕಡೆ ಗಮನ ಹರಿಸಿದೊಡನೆ ಕೆಂಚ ಅವನಿಂದ ಬುರುಡೆ ಕಿತ್ತುಕೊಂಡು ಪಕ್ಕಕ್ಕೆ ತಿರುಗಿ ಕುಡಿಯುವನು)
ಉಜ್ಜ : ಕತಿ? ಕತಿ? ಎಂಥ ಕತಿಯೋ ಕೆಂಚ? ಎಲಾ ಹಡಾಣಿ ನನ ಮಗನೆ!
(ಎಂದು ಕೆಂಚನ ಕೈಯಿಂದ ಬುರುಡೆಯನ್ನು ಗಬಕ್ಕನೆ ಕಿತ್ತುಕೊಳ್ಳುವನು)
ಕೆಂಚ : ಅಂದ್ಯಲ್ಲೋ, ಮಗನ ಕತಿ ಹೇಳ್ತೀನೀ ಅಂತ! ಕೊಡೋ ಕೊಡೋ!
(ಕೊಂಚ ಗದ್ದಲ ಆಗುವುದು, ಐದಾರು ಜನ ಬರುವರು. ಮುಂದೆ ಕೊಂಚಕಾಲ ಕೆಂಚ ಉಜ್ಜ ಹೆಂಡಕ್ಕೆ ಹೊಂಚು ಹಾಕುತ್ತಲೇ ಇದ್ದಾರೆ. ಅದರಿಂದಾಗಿ ಬುರುಡೆ ಕೈನಿಂದ ಕೈಗೆ ಹೋಗುತ್ತಾ ಒಬ್ಬರನೊಬ್ಬರು ಹಿಂಬಾಲಿಸುತ್ತಾ ‘ಕತೆ’ ಬೇರೆಬೇರೆ ಜಾಗದಲ್ಲಿ ಸಾಗುತ್ತದೆ. ನಿರ್ದೇಶಕರು ‘ವ್ಯಕ್ತಿ’ಗಳ ಮಾತುಗಳನ್ನು ಯಥಾವತ್ತಾಗಿ ವಿಂಗಡಿಸಿಕೊಳ್ಳಬಹುದು- ಒಂದು ರೀತಿಯ ಗುಂಪು ಗೊಂದಲದ ವಾತಾವರಣ ಕಲ್ಪಿಸುವುದಕ್ಕಾಗಿ)
ಉಜ್ಜ : ನಾನಾ? ಯಾವಾಗಂದೆ?
ಕೆಂಚ : ಇದೇ ಈಗಂದೆ ಅಂತೀನಿ. ಹೇಳಪ್ಪ.
ವ್ಯಕ್ತಿ ೧ : ಹೇಳಪ್ಪ ಅತೀ ಕೇಳಿಸ್ಕೋಬ್ಯಾಡ, ಹೇಳು.
ವ್ಯಕ್ತಿ ೨ : ಯಾಕ್ಹಿಂಗೆ ಮಾಡ್ತಾನಲೆ ಇವನು?
ವ್ಯಕ್ತಿ ೩ : ಹೇಳ್ತಾನೆ ಸುಮ್ನಿರು.
ಉಜ್ಜ : (ಹಾಡುವನು)
ನನ್ಮಗಾ ಯಾಕಪ್ಪ ಹಿಂಗ್ಮಾಡಿದ
ಹಡದಪ್ಪ ನನ್ನನ್ನೆ ದಂಗ್ಮಾಡಿದ
ಹೋಳೀತಾವ ಕೂತ್ಗಂಡು ನಕ್ಕಾಡಿದ‌ಉ ಮಗ
ಮಾತೀನ ಸುಗ್ಗೀನೆ ಒಕ್ಯಾಡಿದ….
ಒಕ್ಯಾಡಿದ, ಮಗ ಒಕ್ಯಾಡಿದ,
ಎಲ್ಲಾರ ಜೊತೆಗಾರ ನಕ್ಕಾಡಿದ;
ಹಲವು ಹನ್ನೊಂದು ತಾವ ಹೊಕ್ಕಾಡಿದ‌ಉ ಮಗ
ಯಾಕಪ್ಪ ಹೇಳೀರಿ ಹಿಂಗ್ಮಾಡಿದ…..
(ಹಾಡು ಕೇಳಿ ಇನ್ನೊಂದೆರಡು ಜನ ಬಂದು ಗದ್ದಲವಾಗುವುದು. ಅಲ್ಲಿದ್ದವರು ಆಗಲೇ ಉಜ್ಜನ ಹಾಡಿನೊಂದಿಗೆ ಸೇರಿಕೊಂಡು ಹಾಡುತ್ತಾ, ಮೇಳವಾಗಿ ಕುಣಿಯುತ್ತಿರುವರು. ಹೊಸತಾಗಿ ಬಂದವರು ಹಾಡಿನ ಕೊನೆಯಲ್ಲಿ ‘ಯಾಕಪ್ಪ? ಈ ಮುದಿಯಾಗೆ ಬುದ್ಧಿ ಕೆಡ್ತ?’ ‘ಶರಣಾದ ಮ್ಯಾಲೆ ಹುಚ್ಚು ಹೆಚ್ಚಾತು’ ಇತ್ಯಾದಿ ಮಾತಾಡಿಕೊಳ್ಳುವರು. ಜನ ಹಾಡು, ನಗೆ ಮತ್ತು ಟೀಕೆಯ ಸಂಭ್ರಮದಲ್ಲಿ ಉಜ್ಜನ ಮಾತು ಕೇಳಿಸಿಕೊಳ್ಳುವುದಿಲ್ಲ. ಆದ್ದರಿಂದ ಉಜ್ಜ ಕಟ್ಟೆ ಹತ್ತಿ ಭಾಷಣದ ದಾಟಿಯಲ್ಲಿ ಮಾತಾಡುವನು.)
ವ್ಯಕ್ತಿ ೧ : ಹ್ಯಂಗೈತಲ್ಲಲಾ ಪದ!
ವ್ಯಕ್ತಿ ೪ : ಮುದುಕನ ಮೈಯ್ಯಾಗೆ ನೆಣ ಜೋರೈತಿ ಇನ್ನ!
(ನಗುವರು)
ವ್ಯಕ್ತಿ೨ : ಅದೆಂಥದೋ ವದರ್ತಾನೆ, ಇರ್ರೋ.
ವ್ಯಕ್ತಿ ೬ : ವದರಲಿ, ವದರ್ಲಿ.
ಉಜ್ಜ : ಏನ್ರಪ್ಪಾ, ನಾನನ್ನೋದು ಕೇಳ್ರಿ (ಗದ್ದಲ) ಏನ್ರಲೇ ಕತ್ತೇ ಬಡ್ಡೀ ಮಕ್ಕಳಾ, ನನ್ನ ಕತೆ ಕೇಳ್ರಿ (ಮತ್ತೂ ಗದ್ದಲ, ನಗೆ) ಎಲೆ ನಾಯಿಗುಟ್ಟಿದ ಸೂಳೆ ಮಕ್ಕಳ್ರಾ, ಮುಚ್ಕಂಡ್ ನಾ ಹೇಳೋದು ಕೇಳ್ರಿ (ಜನ ಕೊಂಚ ಸುಮ್ಮನಾಗುವರು) ಏನ್ರಪಾ, ಕತೀ ಬೊಗಳಂತ ಹೇಳಿ ಯಾಕಿಂಗೆ ವದರತೀರಿ (ಗಾದೆ ಹೇಳುತ್ತಾ) ಕತೀ ಕೇಳಿದ ಮ್ಯಾಲೆ ಮತಿ ಹ್ಯಂಗೆ ಬಂದಾತು ನಿಮಗೆ.
ವ್ಯಕ್ತಿ ೩ : ಬೈತಾನಲ್ಲಲೇ-
ವ್ಯಕ್ತಿ ೨ : ಇವನ ಕತಿಂದಾನೇ ಊರು ಹಾಳಾತು.
ವ್ಯಕ್ತಿ ೧ : ಕೇಳ್ತದವಿ ಹೇಳಪ್ಪೋ.
ಕೆಂಚ : ನೋಡ್ರಪ್ಪ, ಕೇಳ್ತವಿ ಅಂದಮ್ಯಾಲೆ ಕೇಳ್ಬಕು. ಕೇಳ್ರಿ, ಎಲ್ರೂ ಕೇಳ್ರಿ, ನೋಡಪ ಉಜ್ಜಣ್ಣ, ಆ ಬಂಡೇ ಇತ್ತ ತತ್ತ-
ಉಜ್ಜ : ಸುಂಕಿರಲೇ ಹುಚ್ಚನನ ಮಗನೇ-
ಕೆಂಚ : (ಬುರುಡೆ ಇಸಿದುಕೊಂಡು) ಯಜಮಾನ್ರು ಹೇಳೋದನ್ನ ಎಲ್ರೂ ಕೇಳಬಕು. ನಮ್ಮೂರ ಶರಣ ಉಜ್ಜಪ್ಪ ಹೇಳೋದ್ನ ಕೇಳಬಕ್ರಪೋ-
ಉಜ್ಜ : (ಕತೆ ಹೇಳುವ ಧಾಟಿಯಲ್ಲಿ) ಬಸಣ್ಣ ಬಂದ್ರು, ಬಸಣ್ಣ ಹ್ವಾದ್ರು- ನಿಮಗೆ ಬಂದದ್ದಾರಾ ಏನಪ್ಪ? ‘ಬಸಣ್ಣ’‘ಬಸಣ್ಣ’ ಅಂತ ಬಾಯಿಬಡಕಂಡದ್ದೆ ನಿಮಗೆ ಬಂದದ್ದು.
ವ್ಯಕ್ತಿ ೨ : ಅದು ಹ್ಯಂಗಪ್ಪ? ಎಲ್ರೂ ಶರಣಾಗಲಿಲ್ಲವಾ?
ಉಜ್ಜ : ಸುಂಕಿರಲೆ ಹೇಳೋತಂಕ. ಬಂದ್ರಾಪಾ ಬಸಣ್ಣ; ದೇವರ ಮಗ ಬಂದಂಗ್ಬಂದ್ರು. ನನ್ನ ಮಗ ರುದ್ರ ಅವರ ಸಂಗ್ತೀಗಿದ್ದ, ನೆಳ್ಳಿದ್ದಂಗೆ, ಮಗನ ಹೆಗಲ ಮ್ಯಾಲೆ ಕೈ ಹಾಕಿ ಬಸಣ್ಣ, “ರುದ್ರಾ ನೀ ಶರಣಾಗು” ಅಂದ್ರು. ಅಲ್ಲೋ ಕರಿಬಸ್ಯ, ನಿನ್ನ ಹೆಗಲ ಮ್ಯಾಲೆ ಬಸಣ್ಣಾರ ಗಾಳಿ ತಾಕೇತೇನಲ? ಅದಕೂ ಪಡಕೊಂಡು ಬರಬೇಕು ಕಣಲಾ. (ಇನ್ನೊಬ್ಬನಿಗೆ) ಏನ್ಲಾ ಚನಬಸ್ಯ ನಿನ್ನ ಹೆಗಲ ಹತ್ರಾನಾದ್ರೂ ಬಂದ್ರ ಬಸಣ್ಣ?
ವ್ಯಕ್ತಿಗಳು: ಇಲ್ಲಪ್ಪ ಇಲ್ಲ, ಮುಂದ್ಕೇಳು.
ಉಜ್ಜ : ಅದಕ್ಕಂತಾನೆ ಮಗ ರುದ್ರ “ನೀವಂಬೋದು ಹೆಚ್ಚೋ ನಾ ಆಗೋದು ಹೆಚ್ಚೋ ಬಸಣ್ಣ? ನಾನಿವತ್ತಿನಿಂದ ಶರಣಾದೆ.” ಅದಕ್ಕೆ ಬಸಣ್ಣ “ಭಲೇ” ಅಂತಾರೆ. ಆಮ್ಯಾಲೆ ಬಸಣ್ಣ ನಂತಾವ ಬರ್ತಾರೆ. ನನ್ನ ಕಣ್ಣಾಗೆ ಕಣ್ಣು ಹಾಕಿ “ಉಜ್ಜಣ್ಣ” ಅಂತಾರೆ. ನಾನು “ಬಸಣ್ಣಾರೆ” ಅಂತೀನಿ…..
ವ್ಯಕ್ತಿ ೪ : ಹಂಗಂದ್ರೇನಪ್ಪ. ನಿಂದೊಳ್ಳೇ ಮಾತಾತಲ್ಲ!
ಉಜ್ಜ : “ಹೆಂಡ ತಕಾಬಾರದು ಉಜ್ಜಣ್ಣ” ಅಂತಾರೆ. ಮಗ ಸಹಿತ ಬಂದು “ಬ್ಯಾಡಪ್ಪ ಇನ್ನ ಹೆಂಡ, ಕಂಡ” ಅಂತಾನೆ.
“ಯಾಕ್ಲಾ ಮಗನೆ, ಯಾಕ್ಲಾ?” ಅಂತೀನಿ. “ಶರಣ್ರು ಹೆಂಡ ಕಂಡ ತಕ್ಕಳ್ಳಾಕಿಲ್ಲ” ಅಂತಾನೆ. “ಹಂಗಾರ ಶರಣ್ರು ಹ್ಯಂಗಪ್ಪ ಬದುಕ್ತಾರೆ?” ಅಂತ ನಾನು ಅಂತೀನಿ. “ಹ್ಯಂಗಂದ್ರೆ- ಬಸಣಾರಂಗೆ” ಅಂತಾನೆ ಮಗ. ನಾನದ್ಕೆ “ಹಂಗಾದ್ರೆ ಸೈ ಬಿಡು- ತಕ್ಕಳ್ಳಾಕಿಲ್ಲ” ಅಂತೇನಿ.
ಕೆಂಚ : ಆಮೇಲೇನಾತು ಹೇಳು. ಕೇಳ್ರಪೋ-
ಉಜ್ಜ : ಅಲ್ಲ ಬಸಣಾರು ಬಂದು ಹೋದ ಎಲ್ಡು ದಿನದಾಗೆ ನನಮಗ ಹ್ಯಂಗಾದ! ಅಂವ ದೊರೆ ಮಗನಂಗೆ ಓಡಾಡದೇನು, ಬ್ರಾಂಬರ ಥರ ತಿದ್ದಿ ತಿದ್ದಿ ಮಾತಾಡದೇನು, ನನ್ನ ತಾವ ಬಂದು ಬಾಯಿಗೆ ಮೂಗಿಟ್ಟು ವಾಸನೆ ನೋಡಾದೇನು? ಅಪ್ಪ ಕುಡದನೋ ಬಿಟ್ಟನೋ ಅಂತ ಬಾಯಿಗೆ ಮೂಗಿಡ್ತಾನೆ ಮಗ! ಅದಕ್ಕಂದೆ, “ಮಗಾ, ಹಿಂಗ್ಯಲ್ಲ ಅಪ್ಪನ ಮ್ಯಾಲೆ ಮಗ ಕಣ್ಣಿಡಬಾರದು” ಅಂದೆ. ‘ಹಂಗಾರೆ ನೋಡಪ್ಪ ಈ ಸಂಕ್ರಾಂತಿ ತಂಕ ಕುಡಕ-ಆಮೇಲೆ ಒಂದು ತೊಟ್ಟೂ ಹೆಂಡ ಮುಟ್ಟಬ್ಯಾಡ” ಅಂದ. (ಜನರಿಗೆ) ಆಮೇಲೇನಾತು ಅನ್ರಲೇ.
ಜನ : ಸರಿಯಪ್ಪ, ಹೇಳು. ಆಮೇಲೇನಾತು?
ಉಜ್ಜ : ಮನಸಿಗೆ ಬಲೆ ಪಿಚ್ ಅನ್ನುಸ್ತು. ತಲೆ ಕೆರಕಂಡೆ. ಹೊತ್ತರೆ ಎದ್ದವನೆ ಪಾರಿತಾವ ಹೋಗಿ, ಏನವ್ವ ಪಾರಿ-
ವ್ಯಕ್ತಿ ೪ : ಪಾತರಗಿತ್ತಿಪಾರಕ್ಕ ! ಆಕೀನ ಬಿಡಂಗಿಲ್ಲ ನೀನು?
ವ್ಯಕ್ತಿ ೫ : ಆಕೀನ ಯಾಕೆ ಬಿಟ್ಟಾನು?
ಉಜ್ಜ : ಹ್ಯಂಗಲಾ ಬಿಡ್ತಿ? ಬಿಟ್ಟೇನಲಾ ಮಾಡ್ತಿ? ಹೆಂಡ ಬಿಡು, ಕಂಡ ಬಿಡು, ಹೆಂಗಸು ಬಿಡು- ಏನೇನಲಾ ಬಿಡೋದು? ಆ? ನಿನ್ನ ತಲೀಗೆ ಆಕೀದೊಂದು ಮೊಲಿ ಬೆಲಿಲ್ಲವೋ? ಕೇಳು. ಆಕೀನ ಕೇಳಿದೆ, “ನೋಡೇ ಪಾರಿ, ನಂಜೀವ ಕಣೆ ನೀ. ಹುಟ್ಟಿಸಿದ ಮಗ ಹಿಂಗಾದನಲ್ಲ ಏನ್ಮಾಡ್ಲಿ ಹೇಳೀಗ” ಎಂದೆ. ಬೆರಕೀ ಹೆಂಗಸಾಕೆ. ಅಂದ್ಲು. “ಹುಚ್ಚ ನನ ಗಂಡ್ಸೇ, ಹುಚ್ಚು ನನ ಗಂಡಸೇ ನಿನ್ನ ಮಗನೇನು ಗಂಡಸಲ್ಲವಾ, ಹೋಗು, ಅಂವ ಹೋದ ಹೋದ ತಾವ ಹೋಗು, ಅವಂದೂ ಹುಳುಕು ತಿಳೀತತಿ”. ಪಾರೀಗೆ ಲೊಚಕ್ ಅಂತ ಮುದ್ದು ಕೊಟ್ಟು ಬಂದೆ. ಮಗ ಹೋದಕಡೆ ಹೋದೆ. ಗದ್ದೀಗೆ ಹೋದ, ಅಲ್ಲಿಗೆ ಹೋದೆ. ಕೆರೀಗೆ ಹೋದ, ಅಲ್ಲಿಗೆ ಹೋದೆ. ಪ್ಯಾಟೀಗೆ ಹೋದ, ಅಲ್ಲಿಗೆ ಹೋದೆ-ಗಿಡ ಗೆಂಟಿತಾವ ಹೆಗ್ಗಣದಂಗೆ ಹೊಕ್ಕಂಡು ಹೋದೆ…. ಒಂದಿನ ಹೊಳೀ ದಂಡೆಮ್ಯಾಲೆ ಸಿಕ್ಕ ಕೈಗೆ….
ಜನರು : ಏನು ಮಾಡ್ತಿದ್ದಿ ? ಏನು ಮಾಡ್ತಿದ್ದಿ?
ಉಜ್ಜ : ಹೇಳಲಾ? ಏನು ಮಾಡ್ತಿದ್ದ ಹೇಳಲಾ?
ಜನರು : ಹೇಳಪ್ಪಾ ಅಂದ್ರೆ.
ವ್ಯಕ್ತಿ ೨ : ಹೇಳೋ ಮಂಜಾಳಾಗ…
ಉಜ್ಜ : ಏನ ಮಾಡ್ತಿದ್ದ…. ಆ ಗೊಂಬಿ ಥರದ ಬ್ರಾಂಬ್ರ ಹುಡುಗಿ ತಾವ ನಗ್ಯಾಡ್ತಿದ್ದ. ಬ್ರಾಂಬ್ರ ಆಕೀ ಮಕ ಕೆಂಪಗೆ ಬಿಂದಿಲಿ ಹೂವಾಗಂಗೆ ಕಿಲಕಿಲ ನಗಿಸ್ತಿದ್ದ! (ನಕ್ಕು ಹೆಮ್ಮೆಯಿಂದ) ಅಲ್ಲ, ಕುಡಿಬ್ಯಾಡಂತ ನಂಗಂದು ಆ ಹೆಂಗಸರ ತಾವ ಹೋಗ್ತಾನಲ್ಲ ಮಗ! ‘ಎಲಾ ಮಗನೆ, ಬ್ರಾಂಬ್ರ ಹುಡುಗೀ ತಾವ ಮಾತಾಡಂಗಾದ್ಯ?’ ಅಂದಕಂಡೆ. ನನ್ಯಾಕಲ ಹೆಂಡ ಬಿಡಲಿ ಅಂತ-
(ಜನ ಕುತೂಹಲದಿಂದ ‘ಯಾರಲಾ ಹುಡುಗಿ?’ ‘ಯಾತ್ಕಲಾ ಮಾತಾಡ್ತಿದ್ದಿ?’‘ಬಾಂಬ್ರು ಸುಮ್ಕೇ ಬಿಟ್ಟಾರ?’ ಮುಂತಾದ ಮಾತು; ಗದ್ದಲ. ಉಜ್ಜನ ಮಗ ರುದ್ರ ಬರುವನು. ಈಚೆಗೆ ಶರಣನಾದವ; ಬಟ್ಟೆ ಕೊಂಚ ಶುಭ್ರವಾಗಿವೆ.)
ಕೆಂಚ : ನಿನ್ನ ಮಗನೇ ಬಂದ ಬಿಡು ಮಾರಾಯ! ಜಾಗಬಿಡು, ಜಾಗಬಿಡು; ಬಾರಪ್ಪ ಇತ್ತಕಡೆ ಬಾ.
ರುದ್ರ : ಏನು? ಏನು ಬೇಕು ನಿಮಗೆ?
ವ್ಯಕ್ತಿಗಳು: ನಿನ್ನಪ್ಪ ಕತಿ ಹೇಳ್ತಿದ್ದ ಕಣೋ.
ರುದ್ರ : ಕತಿ? ಅವನ ಕತಿ ಗೊತ್ತಿಲ್ಲವಾ ನಂಗೆ?
ಉಜ್ಜ : (ಉತ್ಸಾಹದಿಂದ) ನೋಡ್ರೋ, ನೋಡ್ರೋ ಎಷ್ಟು ವೈನಾಗಿ ಮಾತಾಡ್ತದೆ, ಬ್ರಾಂಬ್ರಂಗೆ ನೋಡ್ರೋ!
ರುದ್ರ : ವೈನಾಗಿ ಮಾತಾಡೋದು ಖರೆ. ಏನಿದೆಲ್ಲ ರಂಪ? ನಿಮಗೆ ಮಾಡಾಕೆ ಕೆಲಸವಿಲ್ಲವಾ? ಬಸವಣ್ಣ ಬಂದು ವಾರ ಆಗಿಲ್ಲ? ಜಂಗುಳಿ ದನದಂಗೆ ವದರಾಡ್ತೀರಿ. (ತನ್ನ ಅಪ್ಪನಿಗೆ) ನೀನು-
ಉಜ್ಜ : ಏನ್ಲಾ ಮಗ? ನನಮ್ಯಾಲೆ ಯಾಕಲಾ ಕಣ್ಣು? ನಾ ಕುಡಿದಿಲ್ಲಪೋ-
ರುದ್ರ : ಮಾತು ಬೇರೆ ದಂಡ. ಬಸವಣ್ಣ ಗಿಣೀಗೆ ಹೇಳಿದಂಗೆ ಹೇಳಿದ್ರು (ಕೆಂಚನನ್ನು ನೋಡಿ) ಏನ್ಲಾ ಏ ಗೂಬೆ ಕೆಂಚ, ಕೋತಿ ಹಂಗೆ ಮೂತಿ ಮಾಡಬ್ಯಾಡ. ನಿಂಗೆ ಮರ್ವಾದಿ ಮಾನ ಇಲ್ಲ?
ಕೆಂಚ : ನೋಡಪ್ಪ ಶರಣ ರುದ್ರಪ್ಪ, ನೀನಾನು ನಿನ್ನ ಬಸವಣಾರು ಆತು- ನನ್ನ ಹ್ವಾರೇವಕೆ ಬರಬ್ಯಾಡ. ಬಸಣಾರಲ್ಲ, ಜವರಾಯನೇ ಬಂದ್ರೂ ಕೋಳಿ ತಿಂಬೋದು ಬಿಡಕಾಗಲ್ಲ, ಗೊತ್ತಾತ?
ರುದ್ರ : ಹಂಗಾದರೆ ಆತು. ನಾನ್ಯಾಕೆ ಈ ಊರಾಗಿರ್ಲಿ? ನಾನ್ಯಾಕೆ ಅಣ್ಣಂಗೆ ಮಾತುಕೊಟ್ಟು ಮೋಸ ಮಾಡ್ಳಿ? ನಿಮ್ಮನ್ನ ಕಟ್ಕೊಂಡು ಯಾಕೆ ಹೊಳೀಗೆ ಹಾರ್ಲಿ?
ವ್ಯಕ್ತಿಗಳಿಬ್ಬರು: (ಹೊಡೆದು) ಕೆಂಚ ನನಮಗನೆ, ಬಸಣಾರಿಗಿಂತ ನಿನ್ನ ಕೋಳೀನೆ ದೊಡ್ಡದಾತಾ ನಿಂಗೆ?
ವ್ಯಕ್ತಿ ೫ : ನಿನ್ನ ಕೋಳಿ ಕಾಲು ಮುರಿತೇವಿ ನೋಡು.
ವ್ಯಕ್ತಿ ೧ : ನೋಡಪ್ಪ ರುದ್ರ, ಅವನ್ನ ದಾರೀಗೆ ತರ್ತೇವಿ ಬಿಡು.
ವ್ಯಕ್ತಿ ೬ : ನೀ ಹೇಳಿದಂಗೇ ನಾವು ಮಾಡೋರು.
ಉಜ್ಜ : (ಗಟ್ಟಿಯಾಗಿ) ಮಗನೇ, ಆ ಬ್ರಾಂಬ್ರ ಹೆಣ್ಣಿನ ತಾವ ಏನು ನಕ್ಕಾಡತಿದ್ದೆ, ಹೇಳು.
ಎಲ್ಲರೂ: ಹೇಳಪ್ಪ, ಅದು ಹೇಳು.
ವ್ಯಕ್ತಿ ೧ : ಹೇಳಾಕೇ ಬೇಕು.
ವ್ಯಕ್ತಿ ೨ : ಬಿಂಕಿಲ್ಲದೆ ಹೇಳಪ್ಪ.
ವ್ಯಕ್ತಿ ೫ : (ರುದ್ರ ಹೇಳುವುದರಲ್ಲಿದ್ದಾಗ) ಅದು ಸರ್ರೆ ರುದ್ರಪ್ಪ, ನಂದೊಂದು ಅನುಮಾನೈತಿ ನೋಡು-
ವ್ಯಕ್ತಿಗಳು/ಉಜ್ಜ : ಇವನೇನೋ ಹಾಕಿದ್ನಲ್ಲಪ್ಪ ಕೊಕ್ಕೆ.
ವ್ಯಕ್ತಿ ೪ : ಬಡಬಡ ವದರಲೇ.
ವ್ಯಕ್ತಿ ೧ : ಮೊಲ ಎದ್ದೋಡುವಾಗ ನಾಯಿ ಉಚ್ಚೆಗೆ-
ರುದ್ರ : ಇರ್ರಿ. ಸುಮ್ನಿರಿ. ಹೇಳ್ಳಿ.
ವ್ಯಕ್ತಿ ೬ : ಬಸಣಾರನಕ ಚಲೋ ಮನುಷ್ಯ. ಬಂದ್ರು, ನಮ್ಮನ್ನೆಲ್ಲ ಶರಣ್ರ ಮಾಡಿದ್ರು, ನೋಡಪ್ಪ ನಂದೊಂದು ಮಾತೈತಿ-
ವ್ಯಕ್ತಿ ೩ : ಇವನಾಪನಾ. ಹೇಳಲೇ.
ವ್ಯಕ್ತಿ ೬ : ಶರಣಾಗ್ತೇನಿ ಸರಿ. ಶೆಟ್ರ ಹತ್ರ ನಾನೂರು ವರ ಸಾಲೈತಿ ನಂದು- ಸಾಲ ಇಟ್ಟಗಂಡು ಹ್ಯಂಗಪ್ಪ ನಾ-
ವ್ಯಕ್ತಿಗಳು: ಹೋಗಲೇ ದನ ಕಾಯೋನೇ-
ನಿನ್ನ ಯಾವನಲೇ ಶರಣ ಅಂತಾರೇ-
ಶೆಟ್ರ ಮನ್ಯಾಗೆ ದೇಕು ಹೋಗು-
ವ್ಯಕ್ತಿ ೧ : ನಿನ್ನ ಹುಡುಗಿ ಸುದ್ದಿ ಹೇಳಪಾ ರುದ್ರು-
ವ್ಯಕ್ತಿ ೨ : ಆಕಿ ಹ್ಯಂಗದಾಳೆ?
ವ್ಯಕ್ತಿ ೧ : ಕ್ಯಂಪಗದಾಳ, ತೊಂಡೇಹಣ್ಣಿನಂಗೆ?
ವ್ಯಕ್ತಿ ೩ : ಪಾರಿ ಹಂಗದಾಳ, ಹಲಸಿನ ಮರದಂಗೆ?
ವ್ಯಕ್ತಿ೪ : ಈರಭದ್ರಿ ಹಂಗ? ಗೊಜಮಟ್ಟೆ ಹಂಗ?
ವ್ಯಕ್ತಿ ೫ : ಸಿದ್ದಲಿಂಗೀ ಹಂಗ? ತೆಳ್ಳಗೆ? ನಾಯಿ ಹೊಡಿಯೋ ಕೋಲಿನಂಗ?
ಉಜ್ಜ : ಲೇ ಮಕ್ಕಳಾ ಒಸಿ ನಾಲಿಗೆ ಕಚಿಗಳ್ರೋ-ಯಾಕ್ರೋ ಪರ ಪರ ಪರಕಳ್ತೀರಾ? ಆ?
ವ್ಯಕ್ತಿ ೬ : ನನ್ನ ಶೆಟ್ರ ಹತ್ರದ ಸಾಲ-
ವ್ಯಕ್ತಿ ೨ : (ಅವನ ತಲೆಗೆ ತಟ್ಟಿ) ಮುಚ್ಚಗಳಲೇ.
ವ್ಯಕ್ತಿ ೧ : ಬೋಸುಡಿಕೆ, ನಿಂಗೊಬ್ಬನಿಗೇ ಏನೋ ಕಷ್ಟ?
ವ್ಯಕ್ತಿ ೭ : ನನ್ನ ಮಗಳು ಮೈ ನೆರೆದು ನಿಂತಾಳೆ, ಅದಕ್ಕೇನಂತಿ?
ವ್ಯಕ್ತಿ ೩ : ನನ್ನ ಆಕಳಿಗೆ ಹುಲಿ ಹಿಡದೈತಿ, ಅದಕ್ಕೇನಂತಿ?
ವ್ಯಕ್ತಿ ೪ : ನನ್ನ ಜ್ವಾಳದ ಹಗೇವಿಗೆ ಹುಳ ಬಿದ್ದಾವೆ, ಅದಕ್ಕೇನಂತಿ?
ವ್ಯಕ್ತಿ ೫ : ನನ್ನ ಹೆಣತೀಗೆ-
ಕೆಂಚ : ನಿನ್ನ ಹೆಣತಿ, ನಿನ್ನ ಜ್ವಾಳ, ನಿನ್ನ ಆಕಳು, ನಿನ್ನ ಮಗಳು- ನಿಮ್ಮ ಗೋಳಿಗೆ ಬೆಂಕಿ ಬೀಳ್ತು- ಹೇಳಪ್ಪ ರುದ್ರಣ್ಣ.
ವ್ಯಕ್ತಿಗಳು: ಅದನ್ನೇ ನಾ ಹೇಳಾದು.
ಹೇಳಲಿ ಬಿಡ್ರಪ್ಪ ಅಂತೀನಿ
ಸುಮ್ಮನಿರ್ರೋ ಸುಮ್ಮನಿರ್ರೋ.
ಉಜ್ಜ : ಈ ಮುಂಡೇಗಂಡ್ರ ತಾವ ಯಾಕೆ ಹೇಳ್ತಿ ಬಿಡಲೇ ಮಗ-
ರುದ್ರ : (ಗಟ್ಟಿಯಾಗಿ) ಕೇಳಂಗಿದ್ರ ಕೇಳಿ… ಶಾಸ್ತ್ರಿ ಅಂತ ಪಂಡಿತರಿದಾರೆ-ಆಕಿ ಅವರ ಮಗಳು. ಊರ ನಾಕು ಮಂದಿಗೆ ತಿಳಿದಿರ್ಲಿ ಅಂತ ಹೇಳಿದಿನಿ.
ವ್ಯಕ್ತಿಗಳು: ಹ್ಯಂಗದಾಳಪ್ಪ?
ಮದುವ್ಯವಾಗಪ್ಪ?
ರುದ್ರ : ನೀವೆಲ್ಲ ಶರಣರಾದ ಮ್ಯಾಲೆ ಮದುವೆ. ನೀವು ಕುಡಿಯೋದು ಬಿಟ್ಟು, ತಿನ್ನೊದು ಬಿಟ್ಟು, ಸುಳ್ಳು ಬಿಟ್ಟು, ಹಾದರ ಬಿಟ್ಟು-
ಉಜ್ಜ : ಮಗಾ, ಹಂಗಾದರೆ ಯಲ್ಲ ಬಿಟ್ಟು-ಏನಪ ಮಾಡಬೇಕು?
(ನಗುವರು. ರುದ್ರ ಸಿಟ್ಟಿನಿಂದ ಹೊರಡುವನು)
ವ್ಯಕ್ತಿಗಳು: ನೋಡು ರುದ್ರ, ನೀ ಹಾಕಿದ ಗೆರೆ ದಾಟಾಕಿಲ್ಲ-
ನಿನ್ನ ಬಿಟ್ರೆ ನಮಗ್ಯಾರು, ಹೇಳು-
ಕೋಪ ಮಾಡಬ್ಯಾಡ-
(ಅಂದರೆ ರುದ್ರ ಸುಮ್ಮನೆ ಹೋಗುವನು)
ಉಜ್ಜ : (ಮತ್ತೆ ಹೆಂಡ ದೊರಕಿಸಿಕೊಂಡು ಕುಡಿಯುತ್ತಾ) ಗೊತ್ತಾತೇನ್ರೋ! ನೀವಿನ್ನು ಕುಡಿಯಾಂಗಿಲ್ಲ! ಸೂರು ಮ್ಯಾಲಿನ ಹಲ್ಲಿ ಹಂಗೆ ಲಚಲಚ ನೀರು ಕುಡಿದು ಬಿದ್ದಿರಬೇಕು! ಒಂದ್ ತೊಟ್ ಮುಟ್ಟಂಗಿಲ್ಲ! ಶರಣ್ರು ನೀವೆಲ್ಲ! ಸಿವಶರಣ್ರು! ಹಾಲು ಕುಡಕೋ, ಔಸ್ತಿ ಕುಡಕೋ, ಗಂಜಿ ಕುಡಕೋ- ಒಂದು ಹನಿ ಹ್ಯಂಡ ಮುಟ್ಟಬ್ಯಾಡ!
ಕೆಂಚ : ಸಾಕಪ್ಪ ನಿನ್ನ ಕತೆ. ಬಾ, ಮನೀಗೆ ಹೋಗಿ ಮಲಕ್ಕೊ.
ಉಜ್ಜ : ಮಲಗ್ತಾನಂತೆ ಮಗ! ಹೋಗಲೇ ಗೂಬೆ ಕೆಂಚ! ಹೋಗ್ತನಿ. ಕಾರೆಕಂಟಿ ತಾವ ಮಗನ ಮಜಾ ನೋಡ್ತಿನಿ! ಹರಿಯೋ ಹೊಳೀತಾವ ಮಗ ನಗಾದು ಕೇಳ್ತಿನಿ! ನನ್ನ ಮಗ ನಗೋದು ಕೇಳ್ತಿನಿ!
ವ್ಯಕ್ತಿಗಳು: ಅಲ್ಲೋ ಹುಚ್ಚು ಮುದುಕ…
ಮಗ ಮಾಡಿದ್ರೆ ಇವನಿಗೇನಪ್ಪ-
(ಉಜ್ಜ ಹೋಗುವನು. ಜೊತೆಗೆ ಕೆಂಚ ಕೂಡ)
ವ್ಯಕ್ತಿ ೨ : ಹೋಗಲಿ ಬಿಡಪ್ಪ, ಇದು ನಿಜಾನ?
ವ್ಯಕ್ತಿ ೧ : ಯಾವುದು?
ವ್ಯಕ್ತಿ ೨ : ಸಂಕ್ರಾಂತಿ ತಂಕ ಕುಡಕೋಬೈದಂತೆ, ಹೌದ? ಬಸಣ್ಣಾರೆ ಹೇಳಿದಾರಂತೆ-
ವ್ಯಕ್ತಿ ೪ : ನಾಳೆಯೇ ಸಂಕ್ರಾಂತಿ ಅಲ್ಲವೇನೋ?
(ಅಷ್ಟರಲ್ಲಿ ಕೆಂಚ ಹೊಸತೊಂದು ಬುಂಡೆ ಎತ್ತಿಕೊಂಡು ಬರುವನು)
ಕೆಂಚ : ಕೇಳ್ರಪೋ ಕೇಳಿ. ಬಸಣ್ಣ ಬರಲಿ, ಬಸಪ್ಪ ಬರಲಿ, ನಾ ಮಾತ್ರ ಬಿಡಾಕಿಲ್ಲ. ಅಲ್ಲ, ಸೂರ್ಯ ಹುಟ್ಯಾನು ಹ್ಯಂಗ? ಚಂದ್ರಪ್ಪ ಬೆಳಗ್ಯಾನು ಹ್ಯಂಗ? ಹೊಳೆ ಹರಿದಾತು ಹ್ಯಂಗ? ಈ ಮುದಿಯ ಸಂಕ್ರಾತಿ ತಂಕ ಕುಡಿದು ಬಿಟ್ಟು ಬಿಡ್ತಾನಂತೆ! ಕಾರೆಕಂಟಿ ತಾವ ಜಾಗ ಇರಾಕಿಲ್ವ ಅವಗೆ? ಬಣವೆ ಸಂದ್ಯಾಗೆ ಜಾಗ ಇರಾಕಿಲ್ಲವಾ? (ವ್ಯಕ್ತಿಯೊಬ್ಬನಿಗೆ) ಏನಂತಿಯೋ ಕರಿಯಾ? ಮಾತಾಡಲೇ-
ವ್ಯಕ್ತಿ ೫ : ಎಲಾ ಗೂಬೆ ಕೆಂಚ, ಗೂಸ ಬೀಳ್ತವೆ!
ವ್ಯಕ್ತಿ ೨ : ಊರಿಂದ ಹೊರಕ್ಕೆ ಗದುಮಿಬಿಡ್ತೇವಿ ನೋಡು, ಮೈ ಮರಿಬ್ಯಾಡ.
ಕೆಂಚ : (ಮತ್ತು ಏರುತ್ತಿದೆ) ನಿಮ್ಮಪ್ಪಂದೇನ್ಲಾ ಹಟ್ಟೀ, ನಿನ್ನಜ್ಜಂದ? (ಅವರು ಸ್ವಲ್ಪ ಅಂಜಿದ್ದು ಕಂಡು ಹೆಚ್ಚು ಧೈರ್ಯದಿಂದ) ಕೇಳ್ರೋ ಕಕವ ನನಮಕ್ಕಳಾ, ಬಸಣ್ಣ ಜ್ವಾಳಾನ ಮುತ್ತು ಮಾಡಿದ್ದು ಸುಳ್ಳಂತೆ! ಮಳೆ ಬರಸಿದ್ದು ಸುಳ್ಳಂತೆ! ಸತ್ತ ಎತ್ತಿಗೆ ಜೀವ ಬರಸಿದ್ದು ಸುಳ್ಳಂತೆ! ಎಲ್ಲ ಸುಳ್ಳಂತೆ! ಬರೇ ಸುಳ್ಳಂತೆ!
ವ್ಯಕ್ತಿಗಳು: ನಿಂಗ್ಯಾರಲಾ ಹೇಳಿದ್ರು?
ಬಸಣ್ಣ ನಿಂಗೆ ವಲ್ಲದಿದ್ರೆ ಬ್ಯಾಡ- ಮುಚ್ಚಿಕಂಡಿರು!
ನಿಂಗಿವತ್ತು ಗಾಚಾರ ಕಾಡೇತಿ.
ಹಡಾಣಿ ನನಮಗನೆ, ನಿನ್ನ ಚರಗ ಚಲ್ತೇವಿ ನೋಡು!
ಲೇ ಬೆಪ್ಪ, ಮುಚ್ಚೋ-
ಕೆಂಚ : (ಕುಡಿಯುತ್ತಾ ಮತ್ತನಾಗಿ) ಬಸಣ್ಣ ಬರ್ಲಿ, ಕಸಣ್ಣ ಬರ್ಲಿ, ಮೂಡೋ ಹೊತ್ತು ಮೂಡೇ ಮೂಡ್ತತಿ, ರಾಗಿ ಬೀಸೋ ಕೈ ಬೀಸ್ತಾನೇ ಇರತತಿ; ತಪ್ಪಾಕಿಲ್ಲ ಗಿಣಿರಾಯ, ತಪ್ಪಾಕಿಲ್ಲ! ಕಲ್ಲೂ ನೀರೂ ಕರಗೋ ಸರಿಹೊತ್ತಿನಾಗೆ ಹೆಂಗಸಿನ ತಾವ ಅಡ್ಡಾಗಿ ಬಾಯ್‌ಬಾಯಿ ಬಿಡೋದು ತಪ್ಪಾಕಿಲ್ಲ; ಬನದಾಗೆ ಹುಲಿ ವದರೋದು ತಪ್ಪಾಕಿಲ್ಲ; ಕಡವ ಬಂದು ಬಣವೇನ ಗುಮ್ಮೋದು ತಪ್ಪಾಕಿಲ್ಲ; ನಾನು ನೀನು ಚಮಡ ಸುಲಿಯೋದು ತಪ್ಪಾಕಿಲ್ಲ; ಹೇಳ್ರಪಾ! ಹಂದಿ ಬಂತು, ಗದ್ದೆ ಹೊಗತು ಅಂತ ಇಟ್ಕೋ- ಏನಪ್ಪಾ ಮಾಡ್ತಿ ಆವಾಗ? ಬಂದು ಗಢರ್ ಅಂದ್ರೆ ಏನು ಮಾಡ್ತಿ ಅಂತೇನಿ?
(ಇಷ್ಟರಲ್ಲಿ ಜನ ಗದ್ದಲ ಮಾಡುವರು. ಗೊಣಗುವರು. ರೇಗುವರು)
‘ಎಲಾ ಹಂದ್ಯಪ್ಪ, ಬಸವಣ್ಣ ಕೊಲಬ್ಯಾಡ ಅಂದಾರೆ, ಅಂತೀಯ’? ‘ನನ್ನ ಬೇಕಾದ್ರೆ ಕೊಲ್ಲು’ ಅಂತೀಯಾ? ಹೇಳ್ರಲೇ-
ವ್ಯಕ್ತಿ ೪ : ಹುಚ್ಚಿಡದ ಹಂದಿ ಹಂಗೆ ವದರತಾನಲೇ-
ಕೆಂಚ : ಯಾಕೋ ವದರಬ್ಯಾಡದು? ನೀನು ಮಾತ್ರ ವದರಬಕ?
ವ್ಯಕ್ತಿ ೫ : ತಕೋಳೋ ಮಗನೇ ಖರ್ಚಿಗೆ! (ಹೊಡೆಯುವನು)
ಕೆಂಚ : (ಹೆದರಿದ್ದರೂ ಮೊಂಡುತನದಿಂದ) ಬಸಣ್ಣಗೆ ಇಬ್ಬರು ಹೆಂಡ್ರಲ್ಲವಾ? ಅವರನ್ನೇನು ಪೂಜೆ ಮಾಡ್ತಾನಾ?
(ಕೆಂಚನನ್ನು ‘ಮುಚ್ಚು’‘ಬೋಸುಡಿಕೆ’‘ಹೊಲೆಯ’ ಇತ್ಯಾದಿಯಾಗಿ ಬೈಯುತ್ತ ಎಳೆದಾಡುವರು. ಆದರೂ ಆತ ಮಾತಾಡುತ್ತ ಹೆದರುತ್ತ ಇರುವನು)
ಹೊಡಕಳ್ರೋ- ನನ್ನ ಮೈಯಾಗಿನ ಹೆಂಡ ಕಾಪಾಡ್ತತಿ, ನನ್ನ! ನನ್ನವ್ವ ಕಾಪಾಡ್ತಾಳೆ ನನ್ನ! ಹೊಡದು ಹೊಡದು ಹಾಳಾಗ್ರಿ ನನ್ನ ಮಕ್ಕಳಾ! ಬ್ರಾಂಬ್ರ ಹುಡುಗ್ಯಾರ ಮ್ಯಾಲೆ ಕಣ್ಣು ನನ್ನ ಮಕ್ಕಳಿಗೆ! ಬ್ರಾಂಬ್ರು ಯಾಕ್ರಪ್ಪ ಬಂದಾರು ಹಟ್ಟಿಗೆ! ಯಾಕಪ್ಪ ಬಂದಾರು! ಹೋಡೀಬ್ಯಾಡ್ರೋ! ಹೋಡೀಬ್ಯಾಡ್ರೋ! ಯಾರನ್ನಾರಾ ಮದುವ್ಯಾಗ್ರೋ, ಹೋಡೀಬ್ಯಾಡ್ರೋ.
(ಇತ್ಯಾದಿಯಾಗಿ ಚೀರಾಡುತ್ತ ರಂಗದ ಮೇಲೆ ವೃತ್ತ ತಿರುಗಿ ಓಡುವನು. ಕೆಂಚನ ಕೈಯಿನ ಹೆಂಡದ ಬುರುಡೆ ಬಿದ್ದಿರುವುದು. ಕೆಂಚನನ್ನು ಅಟ್ಟುವ ಅವಸರದಲ್ಲಿದ್ದಾಗ ‘ವ್ಯಕ್ತಿ ೫’ ಮಾತ್ರ ಹಿಂದಕ್ಕುಳಿದು ಅದನ್ನೆತ್ತಿಕೊಂಡು ಅದರ ಹನಿ ಬಸಿದುಕೊಳ್ಳುತ್ತಿದ್ದಾಗ- ಜನ ಇತ್ತ ಗಮನ ಹರಿಸಿರುವರು-)
ವ್ಯಕ್ತಿಗಳು- ಇಲಾ ಇವನ-ಇವನೂ ಕೆಂಚನಂಗಾದನಲೇ-
ನಾಯಿ ನನಮಗನೆ-
(ಇತ್ಯಾದಿ ಬೈಯುತ್ತಾ ಬೆನ್ನಟ್ಟುವರು. ಕತ್ತಲು)

ಎರಡನೆಯ ದೃಶ್ಯ

(ನದಿಯ ದಂಡೆ- ಹಿಂದಿನ ದೃಶ್ಯದ ಗುಡಿಸಲು, ನೆರಕೆ ತೆಗೆದು ಒಂದೆರಡು ಮರ, ಗಿಡ ತೋರಿದರೆ ಸಾಕು. ಮೊದಲು ಮೂರು ಜನ ಹುಡುಗಿಯರು ಕೊಡಗಳೊಂದಿಗೆ ಪ್ರವೇಶಿಸುವರು. ಸುಸಂಸ್ಕೃತ ಬ್ರಾಹ್ಮಣರ ಉಡುಪು ಧರಿಸಿದ ಚೆಲುವೆಯರು. ಅವರು ಮಾತನಾಡುತ್ತಾ ಬರುತ್ತಿರುವಾಗ ಎದುರಿಂದ ಉಜ್ಜ ಪ್ರವೇಶಿಸುವುದನ್ನು ಅವರು ಗಮನಿಸುವುದಿಲ್ಲ. ನಕ್ಕು, ಅವರ ಗಮನ ಸೆಳೆಯದೆ, ರಂಗದ ಹಿಂಭಾಗದ ಮರದ ಪಕ್ಕದಲ್ಲಿ ಕೂತು ಕಾಣಿಸುವನು. ಹುಡುಗಿಯರು ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ದರೂ ಹಿಂದೆ ಬರುತ್ತಿರುವ ಉಷಾಳನ್ನು ಚುಡಾಯಿಸುತ್ತಿದ್ದಾರೆ; ಹಿಂದೆ ತಿರುತಿರುಗಿ ನೋಡುತ್ತ ನಗುತ್ತ ಮಾತಾಡುತ್ತಾರೆ)
ಉಮಾ : (ಹರಟೆಯಲ್ಲಿ ಈಕೆ) ಯಾಕೆ ರಮಾ ಹೀಗೆ ಆಮೆ ಹಾಗೆ ಬರ್ತಿದ್ದೀ. ಬೇಗಬೇಗ ಬಾರೇ.
ರಮಾ : ಸುತ್ತ ನೋಡ್ತಾ ಬರ್ತಿದ್ದೀನಮ್ಮ.
ಸುಮಾ : ಯಾಕಮ್ಮ ಸುತ್ತ ನೋಡ್ತಿದ್ದೀ?
ರಮಾ : ಹದ್ದಿಗೆ ವಯಸ್ಸಾದ ಹಾಗೆ ಆಗಿದೆ- ಅಷ್ಟೂ ತಿಳಿಯಲ್ಲವೇನೇ ನಿನಗೆ?
(ನಗುವರು)
ಉಮಾ : ಇವತ್ತು ಬರಲಿಕ್ಕಿಲ್ಲ ಕಣೇ. ಬೇಗ ಬೇಗ ಕಾಲು ಹಾಕೇ.
ರಮಾ : ಬರೋದು ಬಿಡೋದು ನನಗಲ್ಲವಾ ಗೊತ್ತಿರಬೇಕಾದ್ದು? ತೆಪ್ಪಗಿರು.
ಸುಮಾ : ಹಾಗಾದ್ರೆ ಬರ್ತಾನೆ, ಅಲ್ಲವಾ?
ರಮಾ : ಬರ್ತಾನೆ? ಯಾರೇ ಅವನು?
ಸುಮಾ : ಮೀಸೆ ಬಿಟ್ಟುಕೊಂಡು, ಗಿರಿಕಿ ಚಡಾವು ಹಾಕ್ಕೊಂಡು-
ಉಮಾ : ಕಿವಿಯಲ್ಲಿ ಹತ್ತೊಂಟಿ ಇಟ್ಟುಕೊಂಡು-
ಸುಮಾ : ಕೈಯಲ್ಲಿ ಉಂಗುರ ಹಾಕ್ಕೊಂಡು-
(ನಗುವರು. ಅವರು ನಾಲ್ಕು ಹೆಜ್ಜೆ ಹೋದಾಗ ಹಿಂದೆ ನಿಧಾನಕ್ಕೆ ಉಷಾ ಪ್ರವೇಶ. ಅವರು ಆಕೆಯತ್ತ ನೋಡುತ್ತ ಅವಳಿಗೆ ಕೇಳಿಸುವಂತೆ ಮಾತಾಡುತ್ತಲೇ ಇರುವರು)
ಉಮಾ : ನನಗೇನೋ ಇದು ಸರಿಹೋಗಲ್ಲಮ್ಮ.
ರಮಾ : ಯಾಕಮ್ಮ ಸರಿಹೋಗಲ್ಲ? ನಾನು ಪಂಡಿತರ ಮಗಳಲ್ಲವ?
ಉಮಾ : ಅದಲ್ಲ, ಹಳ್ಳಿ ಮುಕ್ಕನಿಗಾಗಿ ನೀನು ಪರದಾಡೋದು.
ರಮಾ : ಕಗ್ಗಲ್ಲು, ಕಗ್ಗಲ್ಲು ಕಣೇ ಅವನು.
ಸುಮಾ : ಶ್ಶೀ! ಗಂಜಳದ ವಾಸನೆ!
ಉಮಾ : ಯಾಕ್ಲಾ, ಬಾರ್ಲಾ, ಹೋಗ್ಲಾ -ಅನ್ನೋ ಭಾಷೆ.
ಸುಮಾ : ಗಬ್ಬು ಬೆವರ ವಾಸನೆ.
ಉಮಾ : ಕೆಸರಲ್ಲಿ ಮುಳುಗಿ ಗೊಜಮೊಟ್ಟೆ ಹಿಡೀತಾನೆ!
ಸುಮಾ : ಎಲೆಯಡಿಕೆ ಹಾಕ್ಕೊಂಡು ಪಿಚಕ್ಕಂತ ಉಗೀತಾನೆ.
ಉಷಾ : ಉಮಾ! ನನ್ನ ತಂಟೆಗೆ ಬರಬೇಡ!
(ನಿಂತು ಕೇಳುತ್ತಿದ್ದವಳು. ಎತ್ತರದ ಧ್ವನಿಯಲ್ಲಿ)
ಉಮಾ : (ಗೆಳತೀಯರಿಗೆ)
ತಂಟೆ ಪಂಟೆ,
ಕಾರೆ ಕಂಟೆ,
ಕೂತುಕೊಂಡು
ತಿಂದೂ ಉಂಡು
ರಮಾ : ಹ್ಯಾಗಿತ್ತವ್ವ?
ಸುಮಾ : ಹೇಳು ಹ್ಯಾಗಿತ್ತವ್ವ?
(ನಗುವರು)
ರಮಾ : ನಂಗ್ಯಾಕೋ ಕಾಲುನೋವು ಕಣೆ.
(ಎಂದು ನಟಿಸುತ್ತಾ ಕೂರುವಳು. ಉಷಾ ಮುನಿಸಿನಿಂದ ನಿಂತಿರುವಳು. ಮುಂದಿನ ಅವರ ಮಾತಿನ ಸಮಯದಲ್ಲಿ ‘ರುದ್ರ’ ಅನ್ನುವವರೆಗೆ ಅವಳ ಗಮನ ಬೇರೆ ಕಡೆಗೆ)
ಉಮಾ : ಹೌದೇನೆ? ಕೂತುಬಿಟ್ಟೆಯಾ? ಅಯ್ಯೋ ಪಾಪ, ನಾವೀಗ ಹೊರಟು ಹೋದ್ರೆ ಏನವ್ವ ನಿನ್ನ ಗತಿ?
ಸುಮಾ : ಹುಲಿ ಬರುತ್ತೆ ಕಣೇ ಹುಲಿ!
ರಮಾ : ಬಾಯಿಗೆ ಬಂದದ್ದು ಬೊಗಳಬ್ಯಾಡ. ಎಂಥ ಹುಲಿಯೇ?
ಉಷಾ : (ಮುನಿಸಿನಿಂದ) ನಿನ್ನ ತಲೇಲಿದೆ ಹುಲಿ!
ರಮಾ : (ಗಮನಿಸದೆ, ಸುಮಾಗೆ) ಅದರ ಹೆಸರೇನೇ?
ಸುಮಾ : ರುದ್ರ ಅಂತ, (ಉಮಾಗೆ) ಅಲ್ಲವೇನೆ?
(ನಗುವರು)
ಉಮಾ : ಅದರ ಹೆಸರು ರುದ್ರ ಅಂತ.
ಉಷಾ : (ಉಮಾ ಕಡೆಗೆ ಹೆಜ್ಜೆ ಹಾಕಿ) ತೆಪ್ಪಗೆ ಬಾಯಿ ಮುಚ್ಚಿರ್ತೀಯಾ-
ಉಮಾ : (ದೂರ ಹೋಗುತ್ತಾ) ರುದ್ರ ಅಂತ… ಹುಲಿ ಇತ್ತಂತೆ. ತುಂಬಾ ತಮಾಷೆ ಹುಲಿ ಗೊತ್ತ? ಮೆಲ್ಲ ಮೆಲ್ಲಗೆ, ಕಳ್ಳನ ಹಾಗೆ ನಡೀತಿತ್ತಂತೆ. ಇದ್ದಕ್ಕಿದ್ದಂತೆ ಛಂಗನೆ ನೆಗೀತಿತ್ತಂತೆ (ಉಷಾ ಹೆಜ್ಜೆ ಇಡುವಳು. ಉಮಾ ದೂರ ಸರಿಯುವಳು) ಗುರ್ ಗುರ್ ಅಂತ ಸದ್ದು ಮಾಡ್ತಾ ಹೀ…ಗೆ… ಬಂತಂತೆ (ರಮಾ ತೋರಿಸಿ ಸುಮಾಗೆ) ಈಕೇನ್ನ ನೋಡ್ತಾ ಹೀ…ಗೆ ನಾಲಗೇನ ತುಟಿಗೆ ಸವರಿ ‘ಹ್ಯಾಂಗಿದ್ದೀಯಾ?’ ಅಂತಂತೆ. ಅದಕ್ಕವಳು. ‘ಹೀಗೆ ಇದ್ದೀನಿ ಹುಲಿರಾಯ. ಸಾಯ್ಲಿಲ್ಲ. ಬದುಕ್ಲಿಲ್ಲ’ ಅಂತಾಳಂತೆ.
ಸುಮಾ : ಆಗ? ಆಮೇಲೆ? ಹುಲಿರಾಯ ಏನಂದ?
ಉಮಾ : ಯಾಕೇ ಹುಡುಗಿ ಹಿಂಗೆ ಬ್ಯಾಸರಾಪಡ್ತಿ -ಹೊಳೆ ಹಾರಲಾ ನಿಂಗಾಗಿ? ಬೆಟ್ಟ ದಾಟಲಾ ನಿಂಗಾಗಿ? ಶಿವನ ನೆತ್ತಿಯ ಚಂದ್ರ ಬೇಕಾ? ಲಕ್ಷ್ಮೀಯ ಕತ್ತಿನ ಮುತ್ತು ಬೇಕಾ?-ಅಂತಂತೆ.
ಉಷಾ : (ಕೋಪದಿಂದ ಹೆಜ್ಜೆ ಹಾಕಿ) ಉಮಾ! ಉಮಾ!
ರಮಾ : (ಎದ್ದು) ಯಾವಾಗ ಬಂದೆಯೆ?
ಉಷಾ : ನಿಮ್ಮ ಕತೆ ಕೇಳಿ ಕೇಳಿ ಹುಚ್ಚು ಹಿಡಿಯುತ್ತೆ-
(ರಮಾ, ಸುಮಾ, ಉಮಾ ದೂರ ದೂರಕ್ಕೆ ಹೋಗಿ ಉಷಾಳಿಗೇ ಹಾಡುವರು)
ಉಮಾ : ಹುಚ್ಚಲ್ಲವ್ವ, ನಮಗೆ ಹುಚ್ಚಲ್ಲವ್ವ,
ರಮಾ : ನಿನಗಂತು ಹುಚ್ಚಲ್ಲ, ಹುಚ್ಚಲ್ಲವ್ವ
ಸುಮಾ : ಮಾತಾಡೋ ಹುಲಿರಾಯ ಗೊತ್ತೇನವ್ವ,
ಉಮಾ : ನಿಮಗೆ-ಹಾಡುವ ಹುಲಿರಾಯ ಗೊತ್ತೇನವ್ವ?
ರಮಾ : ಭರಣೀಯ ಮಳೆಯಲ್ಲಿ
ಧರಣೀಯ ಉಳುವಂಥ-
ಸುಮಾ : ಮಾತಾಡೋ ಹುಲಿರಾಯ ಗೊತ್ತೇನವ್ವ,
ಉಮಾ : ನಿಮಗೆ- ಹಾಡೂವ ಹುಲಿರಾಯ ಗೊತ್ತೇನವ್ವ?
ರಮಾ : ಹೊಲೆಬೆವರ ಘಮಘಮಾ
ತಮಟೆಯ ಢಮಢಮಾ
ಸುಮಾ : ಹಟ್ಟೀಯ ಹುಲಿರಾಯ
ಉಮಾ : ಮಟ್ಟೀಯ ಹುಲಿರಾಯ
ರಮಾ : ಮಾತಾಡೋ ಹುಲಿರಾಯ ಗೊತ್ತೇನವ್ವಾ
ಸುಮಾ, ಉಮಾ : ನಿಮಗೆ-ಹಾಡೂವ ಹುಲಿರಾಯ ಗೊತ್ತೇನವ್ವ?

(ಈ ಹಾಡು ಕೇಳಿ ಸಿಟ್ಟಿನಿಂದ ಉಷಾ ಉಮಾ ಹತ್ತಿರ ಬಂದು)
ಉಷಾ : ಏನದು ನೀನು ಹೇಳ್ತಿರೋದು.
ಉಮಾ : (ಮುಂಚಿನಂತೆಯೇ) ಎಲ್ಲರಿಗೂ ಗೊತ್ತಿರೋದು.
ಉಷಾ : ನಿನ್ನ ಕಣ್ಣು ಕಿತ್ತುಬಿಡ್ತೇನೆ.
ಉಮಾ : ಕಣ್ಣು ಕಿತ್ತರೆ ಏನು ಬರುತ್ತೆ. ಬೇಕಾದರೆ ಸುಳ್ಳು ಹೇಳ್ತೇನೆ. ಹೇಳ್ಲಾ? ಅವನ ಕಂಡ್ರೆ ಒಂಚೂರು ಇಷ್ಟ ಇಲ್ಲಮ್ಮ ಉಷಾಗೆ-
ಉಷಾ : ನಾಚಿಕೆಗೆಟ್ಟು ಮಾತಾಡಬೇಡ.
ಉಮಾ : (ನಾಚಿಕೆ ಸಂಪೂರ್ಣ ಬಿಟ್ಟು) ಹ್ಯಾಗೆ ಕೋಪ ಬರುತ್ತೆ! ಈ ಒಳಗೊಂದು ಹೊರಗೊಂದು ಎಷ್ಟು ದಿನ ನಡಿದೀತು! ಕೊನೆಗೊಂದು ದಿನ ಎಲ್ಲವನ್ನೂ ಒಪ್ಪಿಕೊಂಡು ತೆಪ್ಪಗೆ ಬದುಕಬೇಕಾಗುತ್ತೆ. ನನಗ್ಗೊತ್ತಿಲ್ಲವಾ-
ಉಷಾ : ಏನೇ, ಏನೇ ನಿನಗ್ಗೊತ್ತಿರೋದು?
ರಮಾ : ಜಗಳ ಕಾಯಬೇಡ್ರೇ-
ಉಮಾ : (ಲೆಕ್ಕಿಸದೆ) ನಿನ್ನ ತಂದೆ ಬೇಡ. ನಿನ್ನ ತಾಯಿ ಬೇಡ! ಅಪ್ಪನ ಜುಟ್ಟು, ಅಮ್ಮನ ಮಡಿ ಕಂಡ್ರೆ ಫಕಫಕ ನಗೆ ಬರುತ್ತೆ ನಿಂಗೆ! ರುದ್ರ, ರುದ್ರ, ಹಗಲೂ ರಾತ್ರಿ ರುದ್ರ! ರುದ್ರ, ಕೊಟ್ಟಿಗೆ ಹ್ಯಾಗಿರುತ್ತೆ, ಹಬ್ಬ ಹ್ಯಾಗಿರುತ್ತೆ, ಹಸು ಹ್ಯಾಗಿರುತ್ತೆ, ಬೆವರು ಹ್ಯಾಗಿರುತ್ತೆ- ಗಂಗಾಳ, ಗಂಜಳ, ಹುಲ್ಲು; ಮೂರ್ಹೊತ್ತೂ ಅದೇ-
ಉಷಾ : (ಮತ್ತಷ್ಟು ಸಿಟ್ಟಿನಿಂದ) ದರಿದ್ರವೇ,
(ಎಂದು ಛಂಗನೆ ಹಾರಿ ಉಮಾ ಜಡೆ ಹಿಡಿದುಕೊಂಡು ಎಳೆದು ಎರಡು ಏಟು ಕೊಡುವಳು. ಹಿಂದುಗಡೆ ಉಜ್ಜ ಮುಂದೆ ಬರಲು ಯೋಚಿಸಿ ಹಿಂಜರಿಯುವನು. ಇನ್ನಿಬ್ಬರು ಹುಡುಗಿಯರು ಬಿಡಿಸಿಕೊಳ್ಳಲು ಹೋದರೂ ಬಿಡದೆ ಕಿತ್ತಾಡುತ್ತಿರುವರು. ಒಬ್ಬಳ ಕುಪ್ಪಸ ಹರಿದಿದೆ; ಇನ್ನೊಬ್ಬಳ ಸೆರಗು ನೆಲಕ್ಕೆ ಬಿದ್ದಿದೆ. ಅವರ ಸದ್ದು ಕೇಳಿ ಬಂದವನಂತೆ ರುದ್ರ ಬಂದು ನಿಂತು ನೋಡುತ್ತಿದ್ದಾನೆ. ಅವರ ಜಗಳ ನಿರ್ದೇಶಿಸುತ್ತಿದ್ದಾನೆ)
ರುದ್ರ : ಹಂಗಲ್ಲ, ಹಂಗಲ್ಲ, ಎಡಗೈ ಇತ್ಲಾ ಕಡೆ ಹಾಕು- ಛೇ, ಹಂಗಲ್ಲ-
(ಉಷಾ ಹೊರತು ಮಿಕ್ಕವರು ಕೊಡ ಎತ್ತಿಕೊಂಡು ಓಡುವರು. ಉಷಾ ಮುನಿಸಿನಿಂದ ಸೀರೆ ಕೊಡವಿಕೊಂಡು)
ಉಷಾ : ನಿನ್ನನ್ನೇನು ಕರೆಸಲಿಲ್ಲ ಇಲ್ಲಿಗೆ.
ರುದ್ರ : ನೀನು ಕರೆದೆ ಅಂತ ನಾನು ಹೇಳ್ಳಿಲ್ಲ. ಅಲ್ಲಿ, ಅತ್ಲಾಕಡೆ ಹುಲ್ಲು ಹತ್ತೇತಿ- ಕೊಡವಲಾ?
ಉಷಾ : ಕೊಡುವುತೀಯಾ? ಹ್ಞೂ?
ರುದ್ರ : (ಕೈ ನೋಡಿಕೊಂಡು) ಕೈ ಚೊಕ್ಕ ಇಲ್ಲ-
(ಅವನ ಹಿಂಜರಿಕೆಗೆ ಉಷಾ ಗಟ್ಟಿಯಾಗಿ ನಗುವಳು)
ರುದ್ರ : (ಅವಮಾನಿತನಾಗಿ) ಉಸಾ… ನಾಳ್ಳಲ್ಲ ನಾಳಿದ್ದು… ಸಂಕ್ರಾಂತಿ….
ಉಷಾ : (ಇನ್ನೂ ನಕ್ಕು) ಏನದು ಉಸಾ… ಉಸ್-ಉಸ್…. ಉಸಾ…..
ರುದ್ರ : (ಅವಮಾನದಿಂದಲೇ) ನಿನ್ನ ಹೆಸರು -ಉಸಾ.
ಉಷಾ : (ನಗೆ ತಡೆದುಕೊಂಡು) ನನ್ನ ತಂದೆ ಹೇಳ್ತಿದ್ದರು- ಶೂದ್ರ ಮುಂಡೇವಕ್ಕೆ ಮಾತು ಬರಲ್ಲ ಅಂತ.
ರುದ್ರ : ಈಗ ಮಗಳೂ ಅದನ್ನೇ ಹೇಳ್ತಿದಿ.
ಉಷಾ : ಅಪ್ಪ ಹೇಳಿದ್ದು ಸರಿ. ಆದರೆ ಮಾತು ಬೇಕೇ ಬೇಕು ಅಂತ ನನಗೆ ಅನ್ನಿಸೋಲ್ಲ, ಕೋಪ ಬೇಡ.
ರುದ್ರ : ನಾಳಿದ್ದು ಸಂಕ್ರಾಂತಿ… ದೊ…ಡ್ಡ ಹಬ್ಬ.
ಉಷಾ : (ಅದನ್ನೇ ಹೇಳುತ್ತ, ಅಣಕಿಸಿ) ನಾಳಿದ್ದು ಸಂಕ್ರಾಂತಿ, ದೊ…ಡ್ಡ ಹಬ್ಬ. ಅದಕ್ಕೆ ನಾನೇನು ಮಾಡಬೇಕು?
ರುದ್ರ : ಹಿಂಡ್ ಹಿಂಡು ಜನ ಸೇರ್ತಾರೆ. ನಮ್ಮೂರು ಕುರಿ ರೊಪ್ಪದಂಗಿರ್ತತಿ. ಜನ ಪರಮಾಣ ಮಾಡ್ತಾರೆ; ಕೆಟ್ಟ ಚಾಳೀನೆಲ್ಲ ಬಿಡ್ತಾರೆ; ಭಜನೆ ಮಾಡ್ತಾರೆ. ಆಚೆ ನಾಳಿದ್ದಿನಿಂದ ಒಳ್ಳೆರಾಗ್ತಾರೆ! ಬಸವಣ್ಣ ಬರ್ತಾರೆ- ಉಸಾ….
ಉಷಾ : ನನ್ನ ಹೆಸರು ಉಷಾ.
(ಇಲ್ಲಿಂದ ಅವರು ದೈಹಿಕವಾಗಿ ಪ್ರೇಮಿಸುವ ತನಕ ಉಷಾ ರುದ್ರನನ್ನು ಅಣಕಿಸುವ ಮೂಲಕ, ಹೀಯಾಳಿಸುವ ಮೂಲಕ, ಅವನ ಕತೆಗಳಲ್ಲಿ ಕುತೂಹಲ ತೋರುವ ಮೂಲಕ ಅವಳಿಗೆ ಇಷ್ಟವಾದ ರುದ್ರನ ಮೂಲಭೂತ ಗುಣ ಹೊರಗೆಳೆಯಲು ಯತ್ನಿಸುತ್ತಾಳೆ. ಅವನ ಸನಾತನ ಹಿನ್ನೆಲೆಯನ್ನು ಕೆಂಪು ಕಂಬಳಿಯಾಗಿ ಬಳಸುತ್ತಾಳೆ; ತನ್ನ ಪ್ರಯತ್ನದಲ್ಲಿ ಯಶಸ್ಸು ದೊರೆತಾಗ ಸಂತೋಷಿಸುತ್ತಾಳೆ. ಆದರೆ ಅದು ಕ್ಷಣಿಕವೆಂಬುದು ರುದ್ರ ಬಸವಣ್ಣನವರ ಪ್ರಭಾವದಲ್ಲಿ ಬೆಳೆಯುವುದರಲ್ಲಿ ಗೊತ್ತಾಗುತ್ತದೆ)
ರುದ್ರ : (ಹೇಳಲು ಪ್ರಯತ್ನಿಸುತ್ತಾ) ಉಷಾ….
ಉಷಾ : ಉ…ಷಾ.
ರುದ್ರ : ಉ….ಷಾ ಈ ಹಿರ್ದಾತಾ?
(ನಗುವರು)
ಉಷಾ : ಹಿದ್? ಹಿರ್ದ್? ಹಿರ್ದಾತು! (ನಗುವಳು) ಹಂದಿ ಕೂಗಿದಂಗೆ ಕೂಗ್ತಿ-
ರುದ್ರ : ಕೂಗಿದಂಗಿಲ್ಲ- ವದರಿದಂಗೆ
(ನಗುವರು)
(ಗಂಭೀರವಾಗಿ) ನೀ ಬರಾಕೇಬೇಕು ಬಿಡು. ನಮ್ಮೂರ ಮಂದಿ ನೋಡಬೇಕು; ಕೊಳಕು ಮಂದೀನ, ಹುಳುಕು ಮಂದೀನ ನೋಡೇ ತೀರಬೇಕು.
ಉಷಾ : ಬಂದೇನಪ್ಪ ನಾ ಮಾಡೋದು ? ಹುಲಿ ಇದಾವ ಅಲ್ಲಿ?
ರುದ್ರ : ಹ್ಞೂ, ಮನಾಮನಿ! ಎಷ್ಟು ಬೇಕು ನಿಂಗೆ?
ಉಷಾ : ಒಂದು ಸಾಕು! ಕರಡಿ?
ರುದ್ರ : (ಅವಳ ಆಸಕ್ತಿಗೆ ಅನುಸಾರ) ಅದಾವೆ ಮರಾಯತಿ, ಆದಾವೆ. ಎಷ್ಟು ಕಲ್ಡಿ ಬೇಕು ನಿಂಗೆ? ನಾಕ? ಹತ್ತ? ಸಾವರವ? ನೀನು ಕಲ್ಡಿ ಹಿಡಕಂಡು ಆಡಿ ಆಡಿ ಸುಸ್ತಾಗಿ ಉಪ್ಪಿನಕಾಯಿ ಹಾಕೊಂಡು ತಿನ್ನಬೈದು. ಆನೆ ಅದಾವೆ: ಹಂದಿ, ಕಿರುಬ, ಸಾರಗ: ನಮ್ಮ ಹಿತ್ತಲದಾಗೇ ಕಚ್ ಬುಸ್ ಕಚ್ ಬುಸ್ ಅಂತ ಕಿತ್ತಾಡ್ತವೆ. ಗದ್ದೈತಿ, ಹೊಲೈತಿ, ಹೆಂಡೈತಿ, ಕೆರೆ ತುಂಬ ನೀರೈತಿ; ಮೊಸಳೆ, ಮೀನು ಅದರ ತುಂಬ ತುಂಬಿದಾವೆ- ಆತ? ಸಾಕಾದೀತ? (ಕುತೂಹಲ ಕೆರಳಿಸುತ್ತ) ಮತ್ತೊಂದು ಜಾನುವಾರೈತಿ ಉಸೀ, ಮೂರು ಹೊತ್ತು ಕಣ್ ಕೆಂಪಗೆ ಮಾಡ್ಕಂಡು ಹಾಡ್ತತಿ, ಗೊತ್ತ? ಹಾಡ್ತತಿ. ಹಾಡಬ್ಯಾಡ ಅಂದ್ರೆ ಕುಣೀತೈತಿ, ಚೌಡವ್ವ ಮಾರವ್ವನ ತಾವ ಹೋಗಿ ಅಡ್ಡ ಬಿದ್ದು ಪೂಜೆ ಮಾಡಿ ಹಾರಾಡ್ತತಿ. ‘ಕುಣಿಬ್ಯಾಡ ಹಾಡಬ್ಯಾಡ’ ಅಂದ್ರ ಮರ ಹತ್ತಿ ಕೂತು ಚಂದ್ರ ಚುಕ್ಕಿಪಕ್ಕಿ ಎಲ್ಲ ಲೆಕ್ಕ ಹಾಕ್ತತಿ-
ಉಷಾ : ಏನದು? ಯಾವ ಪ್ರಾಣಿ?
ರುದ್ರ : ನನ್ನ ಕಂಡ್ರ ಭಾಳ ಆಸೆ ಅದಕ್ಕೆ. ಹೊಲೇರ ಹೊಟ್ಯಾಗ, ಎಂಥ ಹುಡುಗ ಹುಟ್ಟಿದಾನಲ್ಲ ಅಂತ ಎಗರಾಡ್ತತಿ. ಅದಕ್ಕೆ ನಾ ಕುಡದ್ರ ಚಂದ, ಕುಡೀದಿದ್ರ ಚಂದ, ನಿಂತ್ರ ಚಂದ, ಕೂತ್ರ ಚಂದ.
ಉಷಾ : (ಕುತೂಹಲ ತಡೆಯಲಾರದೆ) ಏನದು? ಯಾವದಪ್ಪ ಹೇಳು-
ರುದ್ರ : ನನ್ನ ಅಪ್ಪ! ನನ್ನ ಹೆತ್ತ ಅಪ್ಪ!
(ನಗುವರು. ಹಿಂದುಗಡೆ ಉಜ್ಜ ಸಿಟ್ಟಿನಿಂದ ಎಂಬಂತೆ ಕೈ ತೋರುತ್ತ ಬರುವನು; ಮನಸು ಬದಲಿಸಿ ಮರೆಯಾಗಿ ಹೋಗುವನು)
ಅದು ಹ್ಯಂಗೆ ಅಂವ ಮನಸ್ಯಾಗಿ ಹುಟ್ಟಿದನೋ ಅಂತ… ಬಸವಣ್ಣ ಬಂದ್ರು, “ಉಜ್ಜಪ್ಪ ಶರಣಾಗು” ಅಂದ್ರು. ಹಿಂದೆ ಮುಂದೆ ನೋಡಿದೆ ಆಗಿಬಿಟ್ಟನಲ್ಲ! ಇಬೂತಿ ಹಚ್ಚಿಕೊಂಡು ಓಡಾಡಿದ್ದೇನು, ರುದ್ರಾಕ್ಷಿ ಸರ ಅಂಗಿ ಮ್ಯಾಲೆ ಹಾಕ್ಕಂಡಿದ್ದೇನು, ಗಿಡದಾಗಿನ ಹೂನೆಲ್ಲ ತಂದು ಪೂಜೆ ಮಾಡಿದ್ದೇನು.
(ಅಷ್ಟರಲ್ಲಿ ಉಷಾ ಕಲ್ಲಿನ ಮೇಲೆ ಕೂತು ಗಲ್ಲಕ್ಕೆ ಕೈಯಿಟ್ಟು ಕೇಳುತ್ತಿರುವಳು. ಉಜ್ಜ ನೆಲದ ಮೇಲೆ ಕೂತಿದ್ದಾನೆ)
ಅಪ್ಪನ ಇಬೂತ್ಯಾಗೆ ಅವನು ಗೊತ್ತೇ ಸಿಕ್ತಿರಲಿಲ್ಲ! ಹ್ಯಂಗಪ್ಪ ಇಂವ ಹಿಂಗಾದ ಅಂತ ಅವತ್ತೇ ಸಂಜೆ ನೋಡ್ತೀನಿ- ಮುಡಿಕೆ ಮನೆ ಪಾರೀ ತಾವ ಹಾಡ್ತಿದಾನೆ, ಕುಣೀತ ಕುಡೀತಿದಾನೆ! ಪಾರಿ ಹಿಡ್‌ಕಂಡ್ ತಿರುಗಿಸ್ತಿದಾನೆ! ಆಕೆ ಕಬ್ಬಿನ ಗಾಣಕ್ಕೆ ಸಿಕ್ಕಂಗೆ ಬರ್ರೋ ಅಂತ ಚೀರ್ತಿದಾಳೆ!
ಉಷಾ : ಪಾರಿ ಯಾರು?
ರುದ್ರ : ಪಾತರಗಿತ್ತಿ ಹಡಾಣಿ ಪಾರಿ- ನಿನಗ್ಗೊತ್ತಿಲ್ಲ, ಇದು- ಬಸವಣ್ಣ ಪಾರೀನ್ನೂ ಶರಣಿ ಮಾಡಿದ್ರು- ಅವಳಾದ್ದು ಶರಣಿ ಅಲ್ಲ, ಬೆರಣಿ! ಬಸವಣ್ಣ ಊರಾಚೆಗೆ ಕಾಲು ಹಾಕಿದ್ದೇ ತಡ ಕರಕೊಂಡು ಬಿಟ್ಳು ಅಪ್ಪನ್ನ! ಯಾಕವ್ವ ಪಾರಕ್ಕ ನನ್ನಪ್ಪನ್ನ ನೀನು ಹಿಂಗ್ಮಾಡ್ತಿ, ಅವನ ಹಾರ್ತಕ್ಕೆ ಅವನ್ನ ಬಿಡಬಾರದ- ಅಂದೆ. “ನಿನ್ನಪ್ಪನೇನು ಕಟ್ಟಿಗಂಡೀದೆನಲಾ! ಅವನೇ ಬಂದಾನೆ ತೀಟೆನಾಯಿ ಬಂದಂಗೆ” ಅಂದ್ಲು. ಅಂದು ಬಿಟ್ಟು ಹಾಡಾಕೆ ಹತ್ತಿದಳು….
ಉಷಾ : ಹಾಡಿದಳ?
ರುದ್ರ : ಹ್ಯಂಗೆ ಹಾಡಿದ್ಲು ಅಂತ! ಆಕಿ ಗುಡ್ಲಿನ ಸೂರು ಆಳೆತ್ತರಕ್ಕೆ ಹಾಕಿ ದೊಬಕ್ ಅಂತ ಬಿತ್ತು! ಕಾಲು ಕಿತ್ತರು ನೋಡು ಜನ! (ನಗುವರು) ಅಂಥ ಪದ ಕೇಳ್ತಾ ಅಪ್ಪ ಹಾಯಾಗಿ ತಲೆಯಾಡಿಸ್ತಿದ್ದ!
ಉಷಾ : ನಿಮ್ಮಪ್ಪ ಆಗಬೇಕಾದ್ದು ಶರಣಲ್ಲ.
ರುದ್ರ : ಮತ್ತೇನು? ಅಪ್ಪನ ಮಾತಿರಲಿ ಅತ್ತ; ಬರ್ತೀಯಲ್ಲ? ನಮ್ಮೂರಿಗೆ ಖರೇವಂದ್ರು ಬರ್ತೀಯಲ್ಲ?
ಉಷಾ : ‘ದಶಿ ಮಂದಾಯತೇ ತೇಜೋ ದಕ್ಷಿಣಸ್ಯಾಂ ರವೇರಪಿ’
(ಕಲಿಯುವ ಹುಡುಗನಂತೆ, ಆದರೂ ತನ್ನ ಆಶೆ ಬಿಟ್ಟುಕೊಡದೆ)
ರುದ್ರ : ಹಂಗಂದ್ರೇನು?
ಉಷಾ : ಅರ್ಥ… ನಿನಗೆ ಅರ್ಥವಾಗೋಲ್ಲ.
ರುದ್ರ : ಯಾಕೆ ತಿಳಿಯಾಕಿಲ್ಲ? ನೆಟ್ಟಗೆ ಹೇಳಿದ್ರೆ ಎಲ್ಲ ತಿಳೀತತಿ.
ಉಷಾ : ನೆಟ್ಟಗೆ…ಹೇಳೋಲ್ಲ, ಯಾಕೆಂದ್ರೆ ನಂಗೆ ನೆಟ್ಟಗೆ ಬರೋಲ್ಲ.
ರುದ್ರ : ಸುಳ್ಳು ನಿನಗ್ಗೊತ್ತು.
ಉಷಾ : (ಹಂಗಿಸುತ್ತ) ಬಸವಣ್ಣನವರನ್ನ ಕೇಳು, ಹೇಳ್ತಾರೆ.
‘ದಿಶಿ ಮಂದಾಯತೇ ತೇಜೋ ದಕ್ಷಿಣಸ್ಯಾಂ ರವೇರಪಿ’
ರುದ್ರ : (ನೆನಪಿಡಲು ಪ್ರಯತ್ನಿಸುತ್ತ) ದಿಸಿ… ಮಂದಯತ್ತೆ…..
ಉಷಾ : ಶೂದ್ರ ಮುಂಡೇವಕ್ಕೆ-
ರುದ್ರ : (ಮುಂದುವರಿಸಿ)- ಮಾತು ಬರಾಕಿಲ್ಲ. ತಿಳಿವಳಿಕೆ ಬರಾಕಿಲ್ಲ. ನಾವು ಕತ್ತೆಗಳು, ಕಾಡುಪ್ರಾಣಿಗಳು, ಇವತ್ತಲ್ಲದಿದ್ದರೆ ನಾಳೆ-
ಉಷಾ : (ಮಂದಹಾಸ ಬೀರುತ್ತ) ಇವತ್ತಲ್ಲ ನಾಳೆ ನೀನೂ ಸಹ ನಾಮಕ್ಕೆ ಬದಲು ವಿಭೂತಿ ಹಾಕಿ ಮಂತ್ರ ಮಣ ಮಣ ಹಾಡ್ತಾ ಓಡಾಡ್ತಾ, ದೊಡ್ಡ ಪಂಡಿತರ ಹಾಗೆ ರೇಷ್ಮೆ ಪಂಚೆ ಹಾಕಿಕೊಂಡು ಆಸ್ಥಾನದಲ್ಲಿ ಕೂತು ಜ್ಞಾನದ ತೇಗು-
ರುದ್ರ : (ವ್ಯಂಗ್ಯ ತಿಳಿಯದೆ) ನಮಗೂ ಎಲ್ಲ ಗೊತ್ತಾಗುತ್ತೆ. ನಮ್ಮನ್ನ ಕಲಿತವರಿಂದ ದೂರ ಇಡಾಕಾಗಲ್ಲ; ನಾವು ಬಂದ್ರೆ ಗಾವುದ ದೂರ ಓಡೋ ನೀವೆಲ್ಲಾ ಕೊನೆಗೆ ತಿಳ್ಕೋಬೇಕಾಗುತ್ತದೆ; ಇವರೂ ಮನುಸ್ಯರು ಅಂತ-
ಉಷಾ : ನಾನು ಅದನ್ನೇ ಹೇಳ್ತಿದ್ದೆ. ಎಲ್ಲ ಗುಡಿ, ಮನೆ, ಮಠಗಳಲ್ಲಿ ಓಡಾಡ್ತಿ; ತಿಳೀದ ಜನಕ್ಕೆ ಬುದ್ಧೀ ಹೇಳ್ತಾ ತೃಪ್ತಿ ಪಡ್ತಿ. ದೊರೆಗಳೆದುರು, ವಿದ್ವಾಂಸರೆದುರು ಕೂತು ಮುಗುಳ್ನಗ್ತಿ- ಈಗ ಬಸವಣ್ಣ ಮಾಡ್ತಿದಾರಲ್ಲ?
ರುದ್ರ : ನನ್ನ ಮಕಕ್ಕೆ ಬೇಕಾದ್ರೆ ಉಗಿ. ಬಸವಣ್ಣನ ತಂಟೆಗೆ ಬಂದ್ರೆ-
ಉಷಾ : (ನಗುತ್ತಾ) ಬಂದರೆ….
ರುದ್ರ : ನಿನ್ನನ್ನ ಹೆಬ್ಬರಳಿನಿಂದ ನೆತ್ತಿತಂಕ ಸಿಗದು ತೋರಣ ಕಟ್ಟೀನಿ-
ಉಷಾ : (ನಗುತ್ತಲೇ) ಕಟ್ಟಿ-
ರುದ್ರ : ಕಟ್ಟಿ ಎಲ್ಲರಿಗೂ ತೋರಿಸ್ತೇನಿ-
ಉಷಾ : ತೋರಿಸಿ-
ರುದ್ರ : (ಸ್ಫೋಟಿಸಿ ಅವಮಾನಿತನಾಗಿ) ನಿನಗೆ ಹ್ಯಂಗೆ ಗೊತ್ತಾಗಬೇಕು? ನಿನಗೆ ಹ್ಯಂಗಾದರೂ ಗೊತ್ತಾಗಬೇಕು? ಇವತ್ತು ಹೋದೀತು ಕತ್ತಲು, ನಾಳೆ ಬೆಳಕು ಹರದು ಎಲ್ಲ ಬೆಳ್ಳಂಬೆಳ್ಳಗಾಗಿ ಎಲ್ಲ ನೋಡೇವು ಅಂತ ಕಾಯ್ತಿದೀವಿ: ನಾವೆದ್ದೆವೂ ಅಂದ್ರೆ ಕೆಳಗೆ ಹಾಕಿ ಅಮುಕ್ತೀರಿ ನೀವೆಲ್ಲ! ನಿಮ್ಮನ್ನೆಲ್ಲ ಗೊದ್ದ ಹೊಸಕಿದಂತೆ ಹೊಸಕಿ ಹಾಕ್ತವಿ ನಾವು! ರಕ್ತ ಹೀರಿ-
ಉಷಾ : ರಕ್ತ ಹೀರಿ! ರಕ್ತ ಹೀರೋ ಜನ ನೋಡಿದ್ದೇನೆ ನಾನೂ! ವಿಭೂತಿ ಕಾವಿ ಹಾಕ್ಕೊಂಡು ಅನ್ನ ಛತ್ರದ ಹತ್ರ ನಿಂತು ಬಸವಣ್ಣ ಬಸವಣ್ಣ ಅಂತ ಗೋಳಿಡೋ ಜನ ನೋಡಿದೇನೆ ನಾನು! ಸಂಸ್ಕೃತದ ಮಾತನ್ನೇ ಕನ್ನಡದಲ್ಲಿ ಹೇಳಿಕೊಂಡು ಕುಣಿದಾಡೋ ಜನ ನೋಡಿದ್ದೇನೆ ನಾನು!
ರುದ್ರ : ಇನ್ನಾ ಮಾತು ಬೆಳಸಿದ್ರೆ-
ಉಷಾ : (ಕ್ರಮೇಣ ರೇಗುತ್ತ) ಭಂಡಾರದ ಹಣ ತಗೊಂಡು ಸೋಮಾರಿ ಜಂಗಮ ಜನಕ್ಕೆ ರೊಟ್ಟಿ ಚೂರು ಹಾಕಿದ ಬಸವಣ್ಣ-
ರುದ್ರ : ಉಷಾ!
ಉಷಾ : ತಮ್ಮ ಬಾಲ ಹಿಡಿಯದಿದ್ದವರು ಭವಿಗಳು, ಮೂರ್ಖರು ಅಂತ-
ರುದ್ರ : (ಕೋಪ ಹೆಚ್ಚುತ್ತಿದೆ) ಬಾಯಿ ಮುಚ್ಚು, ಇಲ್ಲದಿದ್ರೆ-
ಉಷಾ : ಜನಕ್ಕೆ ಬೇಕಾದ್ದು ಅನ್ನ, ಬಸವಣ್ಣನವರ ಸಿಹಿಮಾತಲ್ಲ. ಸುಖ-ಬಸವಣ್ಣನವರ ಹೊಸ ಮಂತ್ರಗಳಲ್ಲ-
(ರುದ್ರ ಕೋಪದಿಂದ ಹುಲಿಯಂತೆ ಅವಳ ಕಡೆ ತೆವಳುತ್ತಿದ್ದಾನೆ. ಉಷಾಗೆ ಕೂಡ ಅವನ ಚಲನೆ ಭಯ ಹುಟ್ಟಿಸಿದೆ. ಅವನ ಕ್ರೌರ್ಯವನ್ನು ಹೊಡೆದೆಬ್ಬಿಸುವುದರಲ್ಲಿ ನಿಜವಾದ ರುದ್ರನನ್ನು ಹೊರ ತರುವುದರಲ್ಲಿ ಯಶಸ್ಸು ಗಳಿಸಿದ್ದಾಳೆ; ಈ ಕ್ಷಣದಲ್ಲಿ ಆತ ಬಸವಣ್ಣನವರ ಸಿದ್ಧಾಂತದಿಂದ ದೂರ)
ಉಷಾ : (ತಾತ್ಸಾರದಿಂದ) ಯಾಕೆ ತೆವಳ್ತಿ?
(ಮೌನ)
ಏನು ಮಾಡ್ತಿ?
(ಮೌನ)
ನಿನ್ನಿಂದ ನನ್ನ ಮುಟ್ಟೋಕ್ಕಾಗೋಲ್ಲ.
(ಈಗ ತಮ್ಮಟೆಯ ಸದ್ದು ಆರಂಭವಾಗಿದೆ. ಕಾಡುಪ್ರಾಣಿಗಳ ಆರ್ಭಟದಂತೆ ಗದ್ದಲ. ರುದ್ರ ಬೆವತಿದ್ದಾನೆ; ಉಷಾ ಕೊಂಚ ದೂರ ಸರಿಯುತ್ತಾಳೆ- ಬಂಡೆಯ ಮೇಲೆಯೇ)
ರುದ್ರ : (ಕ್ರೌರ್ಯದಿಂದ) ಯಾಕೆ, ಯಾಕೆ?
ಉಷಾ : (ಗಂಭೀರವಾಗಿ, ಸ್ಪಷ್ಟವಾಗಿ, ಸವಾಲಾಗಿ) ನೀನು ಹೊಲೆಯ.
(ಮೌನ)
ನಾನು ಬ್ರಾಹ್ಮಣ ಸ್ತ್ರೀ.
ರುದ್ರ : (ಹಿಂಜರಿದವನು….. ಸಿಟ್ಟಿನಿಂದ) ಕೊಳಕುಮುಂಡೆ!
(ಎಂದು ಅವಳ ಅಡಿಯ ಬೆರಳು ಹಿಡಿದುಕೊಳ್ಳುವನು. ಉಷಾ ಎಳೆದುಕೊಂಡರೆ ಬಿಡುವುದಿಲ್ಲ)
ಉಷಾ : (ಖಡಾಖಂಡಿತ ಎಂಬಂತೆ) ಬಿಡು.
ರುದ್ರ : ದರಿದ್ರವೇ-
(ಎಂದು ಅವಳ ಕಾಲು ಹಿಡಿದು ಎಳೆಯುವನು. ಈಗಾಗಲೇ ತಮ್ಮಟೆಯ ಸದ್ದು ಹೆಚ್ಚಾಗುತ್ತದೆ. ನೆಲಕ್ಕೆ ಬಿದ್ದ ಅವಳ ಕಾಲುಗಳನ್ನು ಅಪ್ಪಿದೊಡನೆ ಚೀರುವಳು. ತಮ್ಮಟೆಯ ಸದ್ದು ಹೆಚ್ಚಾದಂತೆ ಕೇವಲ ಏದುವ ಸದ್ದು- ಪ್ರೇಕ್ಷಕರಿಗೆ ಕೇಳಿಸಬಹುದು. ಕೇಳಿಸದಿರಬಹುದು. ತಿಂದು ಹಾಕುವವನಂತೆ ಅವಳನ್ನು ಪೂರ್ತಿ ಬಳಸುವನು. ಕ್ರಮೇಣ ಕತ್ತಲು ಆವರಿಸುವುದರೊಂದಿಗೆ ತಮ್ಮಟೆಯ ಗಟ್ಟಿ ಸದ್ದು, ಕತ್ತಲು ಕಡಿಮೆಯಾಗುತ್ತದೆ. ಅದರೊಂದಿಗೆ ತಮ್ಮಟೆಯ ಸದ್ದೂ ಕರಗುತ್ತದೆ)
(ಬೆಳಕಿನಲ್ಲಿ ಮೂರು ದಿಕ್ಕಿನಿಂದ ಸುಮಾ, ರಮಾ, ಉಮಾ ಪ್ರವೇಶ. ವಿಚಿತ್ರ ಅನುಭವಕ್ಕೆ ಸಿಕ್ಕಂತೆ ಮೂವರೂ ದಿಗ್ಭ್ರಾಂತರಾಗಿದ್ದಾರೆ. ರುದ್ರ, ಉಷಾ ಈಗ ರಂಗದ ಮೇಲಿಲ್ಲ. ಮೌನ. ಅವರು ಮಾತು ಆರಂಭಿಸುತ್ತಿದ್ದಂತೆ ಉಜ್ಜನ ಪ್ರವೇಶ- ಸರಿತೋರಿದರೆ ತೆಳು ತಮ್ಮಟೆಯ ಸದ್ದಿನೊಂದಿಗೆ)
ಉಮಾ : (ಕರೆಯುತ್ತಾ) ಉಷಾ! ಏ ಉಷಾ!
ರಮಾ : ಉಷಾ!
ಉಜ್ಜ : (ಪ್ರವೇಶಿಸಿ) ಅಲ್ಲ, ನಮ್ಮ ಹುಡುಗ ಎಲ್ಲೋದಾಂತ! ರುದ್ರೂ!
( ಆ ಮೂವರೂ ಮಾತಾಡುವುದಿಲ್ಲ; ಉಷಾ, ರುದ್ರರಿಂದ ಉತ್ತರವಿಲ್ಲ)
ಬ್ಯಾಡ ಕಣೋ ಹೊನ್ನಾಳಿ ಅಗಸ ಕೆಟ್ಟಂಗೆ ಕೆಟ್ಟೋಗ್ತಿ ಅಂದೆ. ನನ್ನ ಮಾತ್ಯಾಕೆ ಕೇಳ್ಯಾನು? ಅಂಥ ಚಲೊತ್ತಿನ ಜಾಜಿ ಹೂನಂಥ ಕೂಸು ತಡಕೊಂಡಾತ!
(ಹುಡುಗಿಯರನ್ನು ಕುರಿತು)
ಏನ್ರವ್ವ, ಏನು ಸಮಾಚಾರ? ನೀರು ತರ್ತ, ಅಡುಗೆ ಆಡ್ತ, ಜಗಳ ಕಾಯ್ತ, ಹಿಂಗೇ ಇದ್ದು ಬಿಡ್ತೀರೋ, ಏನಾರ ಮದುವಿ ಗಿದುವಿ?
ಉಮಾ : ಮುದಿಯಾ, ನಿನ್ನ ದಾರಿ ನೀನು ನೋಡಿಕೋ-ರಮಾ : ನಮ್ಮ ಮದುವೆ ತಂಟೆ ಯಾಕೆ ಇವನಿಗೆ?
ಸುಮಾ : (ಕರೆಯುತ್ತಾ) ಉಷಾ!
ಉಜ್ಜ : ಅದೇನವ್ವ ನಾನಂತಿರೋದು, ಅದೇನೋ ಅಂತಾರಲ್ಲ ಹೊಲೇರ ಕೈಗೆ ಮೈ ಕೊಡಬ್ಯಾಡ, ಬ್ರಾಂಬ್ರ ಕೈಗೆ ಮನಸ್ ಕೊಡಬ್ಯಾಡ ಅಂತ-
ಉಮಾ : ಲೇ ಹೊಲೆಯಾ, ನೀನು ನಿನ್ನ ದಾರಿ ಹಿಡಿದೆಯೋ ಸರಿ. ಇಲ್ಲದಿದ್ರೆ ಬಿಜ್ಜಳರಿಗೆ ಹೇಳಿ ಈ ರುದ್ರನ ಜೊತೀಗೆ ನಿನ್ನ ಚರ್ಮಾನೂ-
ಉಜ್ಜ : ಬಿಜ್ಜಳರು ಯಾವಾಗಿಂದ ಚರ್ಮ ಸುಲಿಯಾಕೆ ಹತ್ತಿದ್ದವ್ವ? ಅದು ನನ್ನ ಕೆಲಸ! ಹೊಲೇರ ಕೆಲಸ! ನನ್ನ ಮಗ ರುದ್ರ-
ರಮಾ/ಸುಮಾ : ಇವನ ಮಗಂತಲ್ಲೇ-
ಉಮಾ : ಬರ್ರೇ ಆ ಮುದಿಗೊಡ್ಡಿನ ಹತ್ರ ಏನು?
ಉಜ್ಜ : (ಅವರು ಹೋಗಲಿದ್ದಾಗ) ಆ, ಗೊಡ್ಡಾ ನಾನು! ಮುದಿಯನಾ ನಾನು! ಏನ್ರವ್ವೋ ಒಂಚೂರು ನಿಲ್ರಿ.
(ನಿಂತಾಗ)
ನನ್ನ ಮಗ ಎಲ್ಲೋದ ಹೇಳ್ರಿ. ಯಾಕಪ್ಪ ಈ ಸಾವಾಸ ಅಂತ ನಾನು ಅತ್ತಲಾಗೆ ಹೋಗಿ ಅಡಿಕೆ ಕಡೀತ ನಿಂತಿದ್ದೆ. ನೀವು ನೋಡ್ತಾ ನಿಂತಿದ್ದಂಗೆ ಕಾಣ್ತತಿ. ಹೇಳ್ರವ್ವ, ಹುಡುಗಿ ಚೀರತಲ್ಲ ಅಂತ ಬಂದ್ರೆ (ನಗುತ್ತ) ಪತ್ತೇನೇ ಇಲ್ಲ. ದೊಡ್ಡಾಟದ ದೇವರಂಗೆ ಮಂಗಮಾಯ!
ಉಮಾ : ನಿನ್ನ ಹಾಳುಹರಟೆ ಬೇಕಿಲ್ಲ.
ರಮಾ : ಬರ್ರೇ- (ಹೋಗುವರು)
ಉಜ್ಜ : (ಅವರತ್ತ ನೋಡುತ್ತಾ) ಅಲ್ಲ, ಈ ಬ್ರಾಂಬ್ರ ಹೆಂಗಸರಿಗೆ ಏನು ಧಿಮಾಕು- ಗೊಡ್ಡು ಅಂತಾರಲ್ಲ. ಗೊಡ್ಡ ನಾನು? ರುದ್ರನ ಹುಟ್ಟಿಸಿರೋನು ಗೊಡ್ಡ? ಕಿಸಕಿಸ ಮಾತಾಡಿಕೋತ ಹೋಗೇ ಬಿಡ್ತವೆ ಈ ಹಾಳು ಹೆಂಗಸ್ರು. ಬಿಜ್ಜಳರಾಜರ ಹತ್ರ ಏನು ಹೇಳ್ತವೋ!
ನೂರು ತಲೆ ಮಾರವ್ವಂಗೆ ಕೊಟ್ಟೆ ಕೋಳಿ-
ನಾ ಕೊಟ್ಟೇ ಕೋಳಿ-
ಹೊಲೇರುಜ್ಜ ನಾನ್ಕಣವ್ವ ಹೇಳಿ ಕೇಳಿ,
ನಾ ಹೇಳಿ ಕೇಳಿ-

ಮೂರನೆಯ ದೃಶ್ಯ

(ಬಿಜ್ಜಳನ ಮನೆಯ ಮುಂಭಾಗ. ಹತ್ತಾರು ಜನ ಬ್ರಾಹ್ಮಣರು, ಜೈನರು, ಕುತೂಹಲಿಗಳಾದ ಶೂದ್ರರು. ಕೆಲವರು ಬ್ರಾಹ್ಮಣರು ಮತ್ತು ಜೈನರ ಕೈಯಲ್ಲಿ ಭಿತ್ತಿಪತ್ರಗಳಿವೆ: “ಇವತ್ತು ನೀವು, ನಾಳೆ ನಾವು ಬಲಿ” “ಶರಣರಿಗೆ ಧಿಕ್ಕಾರ” “ಸನಾತನ ಧರ್ಮಕ್ಕೇ ಜಯ” “ಜೈನರೂ ಎಚ್ಚರಗೊಳ್ಳಲಿ” “ಅತ್ಯಾಚಾರ!” “ಬಿಜ್ಜಳರ ದುರಾಡಳಿತಕ್ಕೆ ಧಿಕ್ಕಾರ!” “ಸತ್ಯಕ್ಕೇ ಜಯ” “ಸಂಭವಾಮಿ ಯುಗೇ ಯುಗೇ” ಇತ್ಯಾದಿ)
ಬ್ರಾಹ್ಮಣ ೧ : ನಮ್ಮ ಪ್ರಾರ್ಥನೆ-
ಬ್ರಾಹ್ಮಣರು : ಧರ್ಮ ರಕ್ಷಣೆ!
ಬ್ರಾಹ್ಮಣ ೨ : ಹಗಲು ದರೋಡೆ-
ಬ್ರಾಹ್ಮಣರು : ನಿಲ್ಲಬೇಕು.
ವ್ಯಕ್ತಿ ೧ : ಒಂದೀಟು ನಿಲ್ಲಪ್ಪಾ! ನಿಮಗೀಗ ಆಗ್ಬೇಕಾದರೂ ಏನು? ಯಾಕಿಂಗೆ ವದರಿಕೋಳ್ತೀರಿ?
ಬ್ರಾಹ್ಮಣ ೧: ನೀನೇನು ಬಿಜ್ಜಳನೇನೋ?
ಬ್ರಾಹ್ಮಣ ೩ : ಇಲ್ಲಿಂದ ತೊಲಗು.
ಬ್ರಾಹ್ಮಣ ೨ : ಹೋಗಿ ಹೆಂಡ ಕುಡಿದು ಬಾ.
ವ್ಯಕ್ತಿ ೧ : ತೆಲಿಗಿಲಿ ನೆಟ್ಟಗಿಲ್ಲೇನ್ಲೇ ಇವನಿಗೆ-
ವ್ಯಕ್ತಿ ೨ : ವದರಿಕೊಂಡು ಗಂಟಲು ಹರಕಳ್ಳಲಿ ಬಾರೋ.
(ಹಿಂದಕ್ಕೆ ಸರಿಯುವನು -ವ್ಯಕ್ತಿ ೧ರೊಂದಿಗೆ)
ಬ್ರಾಹ್ಮಣ ೧ : ಪಂಡಿತ ಶಾಸ್ತ್ರಿಗಳಿಗೆ-
ಬ್ರಾಹ್ಮಣರು : ಮಾನಭಂಗ.
ಬ್ರಾಹ್ಮಣ ೧ : ಅವರ ಪುತ್ರಿಯ ಮೇಲೆ-
ಬ್ರಾಹ್ಮಣರು : ಅತ್ಯಾಚಾರ!
ಜೈನ ೧ : (“ಜೈನರೂ ಎಚ್ಚರಗೊಳ್ಳಲಿ” ಹಿಡಿದಿರುವಾತ) ಇವತ್ತು ಇವರು-
ಜನರು : ನಾಳೆ ನಾವು!
ಜೈನ ೧ : ಶಿವಶರಣರಿಗೆ-
ಜನರು : ಧಿಕ್ಕಾರ!
ಬ್ರಾಹ್ಮಣ ೧ : ವೇದಪುರಾಣ-
ಬ್ರಾಹ್ಮಣರು : ಪಂಚಪ್ರಾಣ!
ಬ್ರಾಹ್ಮಣ೧ : ಕೊಲ್ಲುತ್ತಿವೆ-
ಬ್ರಾಹ್ಮಣರು : ಕತ್ತೆ ಕೋಣ!
ಬ್ರಾಹ್ಮಣ ೨ : ಬ್ಯಾ ಬ್ಯಾ ಬ್ಯಾ-
ಬ್ರಾಹ್ಮಣರು : ಬ್ಯಾ ಬ್ಯಾ ಬ್ಯಾ
ವ್ಯಕ್ತಿ ೨ : ಯಾರಲಾ ಮಗನೇ ಕತ್ತೆ ಕ್ವಾಣಾ?
ವ್ಯಕ್ತಿ ೪ : ಯಾರಲಾ ಕೊಂದ್ ಹಾಕ್ತಿರೋದು?
ಬ್ರಾಹ್ಮಣ ೩ : ನಿಮ್ಮನ್ನುದ್ದೇಶಿಸಿ ನಾವು ಹೇಳಿಲ್ಲ.
ವ್ಯಕ್ತಿ ೫ : ಮತ್ತೇನು ನಿಮ್ಮಪ್ಪನ್ನೇನೋ-
ಜೈನ : ಹೊಡೆದಾಟಾಗುತ್ತೆ, ಸುಮ್ಮನೆ ಹೋಗಿ, ಯಾರಿಗೆ ತೊಂದರ್ಯಾಗೇತೋ ಅವರು ಕೂಗ್ತಾರೆ. ನಿಮಗೆ ಯಾಕೆ ಹೋಗಿ.
ಬ್ರಾಹ್ಮಣ ೧ : ಹಗಲು ಶರಣ-
ಬ್ರಾಹ್ಮಣರು : ರಾತ್ರಿ ಹೊಲೆಯ.
ಬ್ರಾಹ್ಮಣ ೨ : ನೋಡಲು ಮೊಲ-
ಬ್ರಾಹ್ಮಣರು : ಅಪ್ಪಟ ಹುಲಿ.
ಬ್ರಾಹ್ಮಣ ೧ : ಮಾಡಲೇಬೇಕು-
ಬ್ರಾಹ್ಮಣರು : ಹೊಲೆಯರ ಪಚನ.
ವ್ಯಕ್ತಿ ೪ : ಯಾರಲಾ ಹೊಲಿಯಾ?
ವ್ಯಕ್ತಿ ೫ : ಪಚನ ಮಾಡೋದು ಅಂದ್ರೇನ್ಲ?
ಬ್ರಾಹ್ಮಣ ೧ : ನಿಮಗಲ್ಲ ನಾವು ಹೇಳಿದ್ದು.
ವ್ಯಕ್ತಿ೧ : ಮತ್ತಾರಿಗೋ, ನಿಮ್ಮ ಅಜ್ಜಂಗೇನೋ?
ವ್ಯಕ್ತಿ ೨ : ನಿಮ್ಮವ್ವನ ಮಿಂಡಂಗೇನೋ?
ಬ್ರಾಹ್ಮಣ : ಅಶ್ಲೀಲ ಮಾತಾಡಬೇಡಿ.
ವ್ಯಕ್ತಿ ೫ : ಮತ್ತೆ ಬೈತಾನ್ನೋಡು? ಸೂಳೆಮಗನೆ ಹಂಗಂದ್ರೇನೋ?
ವ್ಯಕ್ತಿ ೪ : ಕೊಡೋ ಅವನಿಗೆ ನಾಕು-
ಬ್ರಾಹ್ಮಣ ೨ : ಅದೇನು ಹೋಳಿಗೆಯಲ್ಲ ಕೊಡೋಕೆ-
ವ್ಯಕ್ತಿ ೪ : ಹೋಳಿಗೆ ಕೊಡ್ತಾರಂತೆ ಮಗಂಗೆ, ಹೋಳಿಗೇ-
ವ್ಯಕ್ತಿ ೧ : ಕರಿಗಡಬು ಆಗಾಕಿಲ್ಲವಾ?
ವ್ಯಕ್ತಿ ೨ : ಯಾಕ್ಲ, ಕರ್ಜಿಕಾಯಿ ತಗೊಳ್ಳೋ, (ನಗುವರು)
ಬ್ರಾಹ್ಮಣ ೧ : (ಘೋಷಣೆ ಕೂಗುತ್ತ) ಹಗಲು ದರೋಡೆ-
ಬ್ರಾಹ್ಮಣರು : ನಿಲ್ಲಬೇಕು!
ಬ್ರಾಹ್ಮಣ ೧ : ಶೂದ್ರರಿಗೆ-
ಬ್ರಾಹ್ಮಣರು : ಧಿಕ್ಕಾರ!
(ಒಬ್ಬ ಶೂದ್ರ ಭಿತ್ತಿಪತ್ರವೊಂದನ್ನು ಕಿತ್ತುಕೊಳ್ಳಲು ಕೈ ಹಾಕುವನು)
ಬ್ರಾಹ್ಮಣ ೧ : ನಮ್ಮನ್ನು ಸ್ಪರ್ಶಿಸಿದರೆ ಒಳ್ಳೆದಾಗಲಿಕ್ಕಿಲ್ಲ.
ಬ್ರಾಹ್ಮಣ ೨ : ಹೋಗಿ, ಸುಮ್ಮನೆ ದಾರಿ ಹಿಡಿದು ಹೋಗಿ.
ವ್ಯಕ್ತಿ ೧ : ಮುಟ್ಟಿದ್ರೆ ಅದೇನಾಗ್ತದೆ ನೋಡ್ತೆನಲೆ.
(ಮುಟ್ಟುವನು)
ಬ್ರಾಹ್ಮಣ ೧ : (ಅವನನ್ನು ಭಿತ್ತಿ ಪತ್ರದಿಂದ ತಿವಿದು) ಮುಟ್ಟಬೇಡ ಅಂದ್ರೆ ಮುಟ್ತಾನೆ- ಹೋಗೋ- ಮುಠ್ಠಾಳ!
ಶೂದ್ರನೊಬ್ಬ: (ಅವನ ಕೆನ್ನೆಗೆ ಕೊಟ್ಟು) ಎಲಾ ನಾಯಿ!
ಬ್ರಾಹ್ಮಣ ೧ : (ತಿರುಗಿ ಕೊಟ್ಟು) ಶೂದ್ರ ಮುಂಡೇದೇ-
(ಜಗಳ ಹೆಚ್ಚಾಗುವುದು)
ಬ್ರಾಹ್ಮಣ ೧ : (ಘೋಷಣೆ) ಶೂದ್ರರ ದಬ್ಬಾಳಿಕೆಗೆ-
ಬ್ರಾಹ್ಮಣರು/ಜೈನರು : ಧಿಕ್ಕಾರ.
(ಜಗಳದಲ್ಲಿ ಯಾರು ಏನು ಮಾಡುತ್ತಿದ್ದಾರೆ ಗೊತ್ತಾಗುವುದಿಲ್ಲ. ಗದ್ದಲ, ಶೂದ್ರನೊಬ್ಬ ದೊಣ್ಣೆ ಎತ್ತಿದ್ದು ಕಾಣಿಸುವುದು; ಸದ್ದು; ಒಬ್ಬ ಸತ್ತು ನೆಲಕ್ಕೆ ಬೀಳುವನು. ಸೈನಿಕರು ಬರುವರು; “ಹೋಗಿ, ಹೊರಟು ಹೋಗಿ” ಎಂದು ಹೇಳುತ್ತಾ ಹೊಡೆಯುವರು. ವ್ಯಕ್ತಿಗಳು ಹೋಗುವರು; ಕೆಲವರು ಶೂದ್ರರು, ಜೈನರು, ಬ್ರಾಹ್ಮಣರು ಇದ್ದಾರೆ. ಈ ಗದ್ದಲವಾಗುತ್ತಿದ್ದಾಗಲೇ ಬಿಜ್ಜಳ ಮನೆಯ ಮೆಟ್ಟಿಲ ಮೇಲೆ ಕಾಣಿಸಿಕೊಳ್ಳುವನು)
ಬಿಜ್ಜಳ : (ಗಟ್ಟಿಯಾಗಿ ಖಂಡಿತವಾಗಿ) ಎಲ್ಲರೂ ನಿಲ್ಲಿ. ಏನಿದೆಲ್ಲ? ಯಾರು ಇದನ್ನು ಆರಂಭಿಸಿದ್ದು?
ಕೆಲವು ಬ್ರಾಹ್ಮಣರು : ಪ್ರಭುಗಳು-
ಕೆಲವು ಬ್ರಾಹ್ಮಣರು : ನ್ಯಾಯ ದೊರಕಿಸಬೇಕು.
ಬಿಜ್ಜಳ: ಎಂಥ ನ್ಯಾಯ? ಯಾತಕ್ಕೆ ಗದ್ದಲ? ದಿನಬೆಳಗಾದರೆ ಬಂದು ಕಿರುಚುವುದು ನಿಮ್ಮ ಉದ್ಯೋಗವಾಗಿಹೋಗಿದೆ. ಮೊನ್ನೆ ಜೈನರು, ನಿನ್ನೆ ಶೈವರು, ಇವತ್ತು ನೀವು. ಯಾಕೆ ಹಾಗೆ ನಿಂತು ನೋಡುತ್ತಿದ್ದೀ? ಬಾಯಿ ಬಿಟ್ಟು ಹೇಳು.
ಬ್ರಾಹ್ಮಣ ೩ : ಪ್ರಭುಗಳು ಮನ್ನಿಸಬೇಕು. ಪ್ರಮಾದವಾಗಿದೆ, ಸನಾತನ ಧರ್ಮಕ್ಕೆ ಕಳಂಕ ಬಂದಿದೆ-
ಬಿಜ್ಜಳ : ಧರ್ಮ! ಧರ್ಮ! ಅದಕ್ಕೆ ಯಾವುದಾದರೊಂದು ಕಳಂಕ ಯಾವಾಗಲೂ ಬಂದೇ ಬರುತ್ತೆ. ಮನುಷ್ಯರಿಗೇನಾಗಿದೆ ಹೇಳು.
ಬ್ರಾಹ್ಮಣ ೧ : ಶೂದ್ರನೊಬ್ಬ ಆಸ್ಥಾನ ಪಂಡಿತರ ಮಗಳ ಮೇಲೆ ಅತ್ಯಾಚಾರ
ಮಾಡಿದ್ದಾನೆ. ಪಂಡಿತರು ಮಗಳನ್ನು ಹುಡುಕಿಸುತ್ತಿದ್ದಾರೆ-
ಬ್ರಾಹ್ಮಣ ೨ : ನಿತ್ಯ ನಮ್ಮ ದೇವಸ್ಥಾನಗಳ ಮೇಲೆ, ಸ್ನಾನಘಟ್ಟಗಳ ಮೇಲೆ ದಾಳಿಯಾಗುತ್ತಿದೆ.
ಬ್ರಾಹ್ಮಣ ೩ : ನಮ್ಮ ಆಚಾರ ವ್ಯವಹಾರಗಳ ಮೇಲೆ ಅತ್ಯಾಚಾರವಾಗುತ್ತಿದೆ.
ಬ್ರಾಹ್ಮಣ ೧ : ಇದು ಜಗತ್ತಿಗೇ ಗೊತ್ತಿರುವ ಸುದ್ದಿ.
ಬಿಜ್ಜಳ : ನಾನು ಹಾಗಾದರೆ ಈ ಜಗತ್ತಿನಲ್ಲಿ ಇಲ್ಲ ಎಂದು ಅರ್ಥವೇನು? ನಿಮ್ಮ ಘೋಷಣೆ ನನ್ನ ಈ ಮನೆಗೆ ಅಲಂಕಾರ ಎಂದು ತಿಳಿದಿದ್ದೀ ಏನು?
(ಹೆಣವನ್ನು ನೋಡಿ) ಈತನನ್ನು ಕೊಂದವರು ಯಾರು?
(ಮೌನ)
(ಬ್ರಾಹ್ಮಣರಿಗೆ) ನೀವೇನು?
ಬ್ರಾಹ್ಮಣ೧ : ಅಲ್ಲ ಪ್ರಭು. ಇಲ್ಲಿ ಸೇರಿದ ಶರಣರು-
ಬ್ರಾಹ್ಮಣ ೨ : (ಇದ್ದಬದ್ದ ಧೈರ್ಯ ಕೂಡಿಸಿಕೊಂಡು ಘೋಷಣೆ) ಶರಣರಿಗೆ-
ಬ್ರಾಹ್ಮಣರು : ಧಿಕ್ಕಾರ!
ಬಿಜ್ಜಳ : (ಅಸಹಾಯಕನಾಗಿ, ಏರಿದ ಸಿಟ್ಟಿನಿಂದ) ಬಾಯಿಮುಚ್ಚು! ಮತ್ತೊಮ್ಮೆ ಕೂಗಿದರೆ ನಿಮ್ಮ ಗಂಟಲು ಕತ್ತರಿಸುತ್ತೇನೆ. (ಶೂದ್ರರಿಗೆ) ನೀವು ಈ ಕಡೆ ಬನ್ನಿ (ಬರುವರು) ನೀವೇನು ಕೊಂದದ್ದು?
ಶೂದ್ರರು : ಅಲ್ಲ ಪ್ರಭು-
ಬಿಜ್ಜಳ : ನೀವು ಶರಣರೇನು?
ಶೂದ್ರರು : ಅಲ್ಲ ಪ್ರಭು.
ಶೂದ್ರರು : ಹೌದು ಪ್ರಭು.
(ಗಜಿಬಿಜಿ ಮಾತಾಡಿಕೊಳ್ಳುವರು)
ಬಿಜ್ಜಳ : ಯಾವನು ಶೂದ್ರ, ಯಾವನು ಶರಣ ಎಂದು ಗೊತ್ತು ಹಚ್ಚುವುದೇ ಕಷ್ಟ. ನಿಮ್ಮ ಶರಣತ್ವದ ಫಲ ಈ ಹೆಣ. (ಬ್ರಾಹ್ಮಣರಿಗೆ) ನೀವೀಗ ಹೋಗಿ.
ಬ್ರಾಹ್ಮಣ ೧ : ಪ್ರಭುಗಳಲ್ಲಿ ವಿಜ್ಞಾಪನೆ-
ಬ್ರಾಹ್ಮಣ ೨ : ನ್ಯಾಯ ದೊರಕಿಸಿಕೊಡಬೇಕು-
ಬಿಜ್ಜಳ : ಆ ಹುಡುಗಿಯ ಹೆಸರೇನು?
ಬ್ರಾಹ್ಮಣ ೧ : ಉಷಾ, ಪ್ರಭು.
ಬಿಜ್ಜಳ : ಹುಡುಗನ ಹೆಸರೇನು?
ಬ್ರಾಹ್ಮಣ ೧ : ರುದ್ರ ಅಂತ ಪ್ರಭು. ಹೊಲೆಯರವನು-
ಬಿಜ್ಜಳ : ನಿಮಗೆ ಎಲ್ಲ ಗೊತ್ತಿರುವಂತಿದೆ! ಹಾಗಾದರೆ ಹೇಳಿ, ಈ ಶವ ಇಲ್ಲಿ ಬೀಳಲು ಯಾರು ಕಾರಣ?
ಬ್ರಾಹ್ಮಣ : ( ತಮ್ಮ ಮೇಲೆ ಬರುವುದು ನೋಡಿ) ಗೊತ್ತಿಲ್ಲ ಪ್ರಭು.
ಬಿಜ್ಜಳ : ಗೊತ್ತಿಲ್ಲ, ಗೊತ್ತಿಲ್ಲ! ಯಾರೊಬ್ಬರಿಗೂ ಗೊತ್ತಿಲ್ಲ! ಹೆಣ ಮಾತ್ರ ಈ ಮನೆಯೆದುರು ದಿನಕ್ಕೊಂದರಂತೆ ಬೀಳುತ್ತವೆ! (ಶೂದ್ರರಿಗೆ) ನಿಮ್ಮ ಶರಣತ್ವ ನನಗೆ ಗೊತ್ತು. (ಬ್ರಾಹ್ಮಣರಿಗೆ) ನೀವು ದೂರನ್ನು ಸರಿಯಾಗಿ ಹೇಳುತ್ತಿಲ್ಲ.
ಬ್ರಾಹ್ಮಣ ೧ : (ಗೊಂದಲದಿಂದ) ಪ್ರಭುಗಳು ಮನ್ನಿಸಬೇಕು!
ಬಿಜ್ಜಳ : ಮತ್ತೆ ಅದೇ ಮಾತು. ಹೇಳಿ ಅದು ಅತ್ಯಾಚಾರ ಯಾಕೆ? ಪ್ರೇಮ ಯಾಕಿರಬಾರದು?
ಬ್ರಾಹ್ಮಣ ೩ : ಸನಾತನ ಧರ್ಮ ಕೆಡಿಸುವುದಕ್ಕೆ ಏನನ್ನು ಬೇಕಾದರೂ ಮಾಡಬಲ್ಲ ಶರಣರಿಗೆ ಪ್ರೇಮ-
ಬಿಜ್ಜಳ : ಉದ್ಧಟತನದ ಮಾತು (ಇನ್ನೊಬ್ಬನಿಗೆ) ನೀನು ಹೇಳು.
ಬ್ರಾಹ್ಮಣ ೨ : ವಾತಾವರಣದಲ್ಲಿ ಎಷ್ಟು ಹಿಂಸೆ ಇದೆಯೆಂದರೆ ಪ್ರೇಮದ ಮಾತು
ಅಸಂಗತವಾಗುತ್ತದೆ, ಪ್ರಭು.
ಬಿಜ್ಜಳ : (ನಕ್ಕು) ಜಾಣ ಬ್ರಾಹ್ಮಣ.
ಬ್ರಾಹ್ಮಣ೪ : ಶವ ಕೂಡ ಸಿಕ್ಕಿಲ್ಲ, ಪ್ರಭು.
ಬಿಜ್ಜಳ : ಯಾರ ಶವ?
ಬ್ರಾಹ್ಮಣ ೩ : ಉಷಾದೇವಿಯ ಶವ-
ಬಿಜ್ಜಳ : ಅವಳು ಸತ್ತಿದ್ದಾಳೋ, ಬದುಕಿದ್ದಾಳೋ ಎಂಬುದಕ್ಕೆ ಮುಂಚೆ ಶವದ ಯೋಚನೆ! ಎಂಥ ಮೂರ್ಖರು ನೀವು! ಹುಡುಗಿಯ ತಂದೆ ಶಾಸ್ತ್ರಿಯವರು ಆಗಲೇ ಅರಮನೆಯಲ್ಲಿದ್ದಾರೆ, ನೀವು ಹೋಗಿ; ಸೈನಿಕರೆ ಈ ಶವವನ್ನು ಎತ್ತಿಕೊಂಡು ಹೋಗಿ. ಈ ಹುಡುಗ-ಹುಡುಗಿಯರನ್ನು ಕರೆತನ್ನಿ. ಸಾಕ್ಷಿಗಳೆಲ್ಲ ಬರಲಿ.
(ಬಿಜ್ಜಳ ಹೋಗುವನು. ಬ್ರಾಹ್ಮಣರೂ ಹೋಗುವರು)
(ಹೊಲೆಯರು ಸುತ್ತುತ್ತ ಹಟ್ಟಿಗೆ ಬಂದಂತೆ, ಅವರು ಗುಜು ಗುಜು ಮಾತಾಡಿಕೊಳ್ಳುತ್ತಿದ್ದಾಗ ರಾಜಭಟನೊಬ್ಬ ಬಂದು)
ಭಟ : ಇಲ್ಲಿ ರುದ್ರ ಎಂಬ ವ್ಯಕ್ತಿ ಯಾರು?
ರುದ್ರ : (ಜನರ ಮಧ್ಯದಿಂದ ಬಂದು) ನಾನು.
ಭಟ : ರುದ್ರನ ಅತ್ಯಾಚಾರಕ್ಕೆ ತುತ್ತಾದ-
ರುದ್ರ : ಬಾಯಿಗೆ ಬಂದಂತೆ ವದರಬೇಡ. ಯಾರು ಬೇಕು ಹೇಳು.
ಭಟ : (ಮೌನತಾಳಿ) ಉಷಾ ಎಂಬ ಹೆಣ್ಣು ಮಗಳು ಇದ್ದಾಳೆಯೋ?
(ಜನ ಗುಜಗುಟ್ಟುವರು, ಉಷಾ ಬಂದು ನಿಲ್ಲುವಳು. ಉಜ್ಜನೂ ಮುಂದೆ ಬರುವನು)
ಉಜ್ಜ : ಏನಪ್ಪಾ ಬೇಕು ನಿಂಗೆ?
ಭಟ : ನಿಮ್ಮಿಬ್ಬರನ್ನೂ ಬಿಜ್ಜಳರು ಬರಹೇಳಿದ್ದಾರೆ.
ಉಷಾ : ಯಾಕೆ?
ಭಟ : ಅದನ್ನು ವಿವರಿಸಲು ವ್ಯವಧಾನವೂ ಇಲ್ಲ ಮತ್ತು ಅದಕ್ಕೆ ರಾಜಾಜ್ಞೆಯೂ ಇಲ್ಲ.
ಉಷಾ : ನಾನು ಬರುವುದಕ್ಕೆ ಆಗುವುದಿಲ್ಲ.
ಭಟ : ನೀನು?
ರುದ್ರ : (ಉಷಾಗೆ) ನೀನು ಯಾಕೆ ಬರೋಕ್ಕಾಗಲ್ಲ?
ಉಷಾ : ನಾನಿನ್ನೂ ಊರು ನೋಡಿಲ್ಲ.
ಹೊಲಗದ್ದೆ ನೋಡಿಲ್ಲ.
ಕಾಡು ನೋಡಿಲ್ಲ.
ಕೆಂಚ : (ದೂರದಲ್ಲಿ ಕುಡಿಯುತ್ತಾ)
ಬನದ ಹಟ್ಟಿ ಗುಡ್ಡದಾಗ ಕುಣೀತೈತಿ
ಹುಲಿ ಕುಣೀತೈತಿ-
ಅದರ ಕಣ್ಣೀನಾಗೇ ಹೊತ್ತು ಉರಿತೇತಿ
ಹೊತ್ತು ಉರಿತೈತಿ-
ಭಟ : (ಉಷಾಗೆ) ಇದು ರಾಜಾಜ್ಞೆಯ ಉಲ್ಲಂಘನೆ.
ಉಷಾ : ಹೌದು.
ಭಟ : ನಿನಗೆ ಶಿಕ್ಷೆಯ ಭಯ ಇರುವಂತಿಲ್ಲ.
ಉಷಾ : ಇಲ್ಲ.
ಭಟ : ಸರಿ. ಬಿಜ್ಜಳರಿಗೆ ಏನನ್ನು ಹೇಳಬೇಕು.
ಉಷಾ : ಕಾಡಿಗೆ ಹೋದದ್ದಾಗಿ ಹೇಳು.
ಭಟ : (ಗಟ್ಟಿಯಾಗಿ) ಹಳ್ಳಿಯ ಸಮಸ್ತರೇ- ನೀವೇ ಸಾಕ್ಷಿ. ನೀವೆಲ್ಲ ಉಷಾ ದೇವಿಯ ಮಾತು ಕೇಳಿದ್ದೀರಿ.
(ಎಂದು ರುದ್ರನ ಜೊತೆಗೆ ಹೋಗುವನು. ಕೆಂಚ ಅರ್ಧಂಬರ್ಧ ಹುಲಿಯ ಕುಣಿತದಲ್ಲಿ ತೊಡಗುವನು.)

ನಾಲ್ಕನೆಯ ದೃಶ್ಯ

(ಬೆಳಕು ಬಂದಾಗ ಬಿಜ್ಜಳನ ಮಂತ್ರಾಲೋಚನೆಯ ಕೋಣೆಯಲ್ಲಿ ಶಾಸ್ತ್ರಿಗಳು, ಸುಮಾ, ಉಮಾ ಮತ್ತು ರಮಾ ಕಾಣಿಸುತ್ತಾರೆ. ಇತ್ತೀಚಿನ ದುರಂತದಿಂದಾಗಿ ಶಾಸ್ತ್ರಿಗಳ ಮುಖ ವೇದನೆಯಿಂದ ತುಂಬಿದೆ. ‘ಬಿಜ್ಜಳ ಮಹಾರಾಜರು ಆಗಮಿಸುತ್ತಿದ್ದಾರೆ, ಸ್ವಾಮಿ’ ಎಂದು ದ್ವಾರಪಾಲಕ ಪ್ರಕಟಪಡಿಸುತ್ತಾನೆ. ಬಿಜ್ಜಳ ಪ್ರವೇಶಿಸುವಾಗ ಮಾತಾಡುತ್ತಲೇ ಇದ್ದಾನೆ. ಶಾಸ್ತ್ರಿ ಮತ್ತು ಹುಡುಗಿಯರು ಎದ್ದು ನಿಂತು ನಮಸ್ಕರಿಸಿದ್ದನ್ನು ಆತ ಗಮನಿಸುವುದಿಲ್ಲ.)
ಬಿಜ್ಜಳ : (ಪ್ರವೇಶಿಸುತ್ತಲೇ) ಏನು ಜನ! ಅವರ ಕೂಗು ಕೇಳಿ ಸಾಮಾನ್ಯರಿಗೆ ಗರ್ಭಪಾತವಾಗಬೇಕು! ಕೂತುಕೊಳ್ಳಿ ಶಾಸ್ತ್ರಿಗಳೆ. ಇದು ನಾನು ತಿಳಿದಿದ್ದಕ್ಕಿಂತ ಗಂಭೀರವಾಗಿದೆ. ಮಾತೆತ್ತಿದರೆ ಧರ್ಮದ ವಿಚಾರ. ಈ ದೇಶದ ಪ್ರತಿಯೊಬ್ಬನೂ ಸ್ವರ್ಗ, ಧರ್ಮ, ಆಧ್ಯಾತ್ಮ ಬಿಟ್ಟು ಬೇರೆ ನಾಲಿಗೆ ಹೊರಳಿಸೋಲ್ಲ. ನಿಮಗೇನನ್ನಿಸುತ್ತೆ ಶಾಸ್ತ್ರಿಗಳೆ, ಜನ ಈ ದಿನಗಳಲ್ಲಿ ಕೂಡ ಉಪ್ಪು, ಮೆಣಸಿನಕಾಯಿ, ಈರುಳ್ಳಿ ವಿಚಾರ ಮಾತಾಡ್ತಾರೆ ಅಂತೀರ?
ಶಾಸ್ತ್ರಿ : (ಗೊಣಗುತ್ತ) ಈರುಳ್ಳಿ ಮಾತು ಹೆಚ್ಚಾಗುತ್ತಿದೆ, ಪ್ರಭು.
ಬಿಜ್ಜಳ : ಏನಂದಿರಿ?
ಶಾಸ್ತ್ರಿ : ಈರುಳ್ಳಿ ಮಾತು ಈಚೆಗೆ ಹೆಚ್ಚಾಗುತ್ತಿದೆ.
(ಹುಡುಗಿಯರು ನಗುವರು)
ಬಿಜ್ಜಳ : ಇದು ಎದ್ದು ಕಾಣುವ ಇನ್ನೊಂದು ಗುಣ. ಬಾಯಿ ಬಿಟ್ಟರೆ ವ್ಯಂಗ್ಯ! ನಿಮ್ಮ ದುಃಖದ ಗಳಿಗೆಯಲ್ಲೂ ಹೇಗೆ ತಮಾಷೆ ಮಾಡಬಲ್ಲಿರಿ! ಮನುಷ್ಯ ಅಂದರೆ ಹೀಗಿರಬೇಕು. ತಮ್ಮ ಭಗವದ್ಗೀತೆ ಇದನ್ನೇ ತಾನೇ ಹೇಳೋದು?
(ವಿಷಯ ಬದಲಿಸುತ್ತ)
ನಿನ್ನೆಯ ಘಟನೆ ನಡೆದಾಗ ಮಗಳು ಎಲ್ಲಿದ್ದಳು?
ಶಾಸ್ತ್ರಿ : ಈ ಮೂವರೂ ಜೊತೆಗಿದ್ದರು ಪ್ರಭು.
(ಬಿಜ್ಜಳ ಹುಡುಗಿಯರತ್ತ ನೋಡುವನು)
ಉಮಾ : ಹೊಳೆಯ ದಂಡೆಯಲ್ಲಿ ಪ್ರಭು.
ಬಿಜ್ಜಳ : ಏನು ಮಾಡುತ್ತಿದ್ದಿರಿ?
ಸುಮಾ : ನೀರು ತರಲು ಹೋಗಿದ್ದೆವು ಪ್ರಭು.
ಬಿಜ್ಜಳ : (ಶಾಸ್ತ್ರಿಗೆ) ಈ ಹುಡುಗಿಯರೇ ಯಾಕೆ ನೀರು ತರಬೇಕು?
ಶಾಸ್ತ್ರಿ : ಮಡಿಯಲ್ಲಿ ನೀರು ತರುವುದು-
ಬಿಜ್ಜಳ : ಮಡಿ, ಮಡಿ! ನಿಮ್ಮ ಮಡಿಯಿಲ್ಲದಿದ್ದರೆ ಯಾವ ವಿಧವೆಯಾದರೂ ನೀರು ತರಬಹುದಿತ್ತು, ಶೂದ್ರನಾದರೂ ತರಬಹುದಿತ್ತು. ಈ ಎಲ್ಲ ಗೋಳು ತಪ್ಪುತ್ತಿತ್ತು. ಘಟನೆ ನಡೆದಾಗ ನೀವು-
ಇರಲಿ. ಅಂಥ ಪ್ರಶ್ನೆ ಎಲ್ಲಕ್ಕೂ ನಿಮ್ಮಲ್ಲಿ ಉತ್ತರ ಇವೆ. ಕಾಲಹರಣ ಬೇಡ. (ಹೆಚ್ಚು ಆರಾಮಾಗಿ ಪ್ರಶ್ನಿಸುತ್ತಾ) ಈಕೆ ಯಾರ ಮಗಳು?ಶಾಸ್ತ್ರಿ : ಶಂಕರ ದೀಕ್ಷಿತರ ಮಗಳು, ಉಮಾ ಅಂತ ಹೆಸರು. ಈಕೆ (ಸುಮಾ ಸೂಚಿಸಿ) ಗೋಪಾಲ ಪಂಡಿತರ ಮಗಳು. (ರಮಾ ಸೂಚಿಸಿ) ಈಕೆ ಶ್ರೀಕಾಂತ ದ್ವಿವೇದಿಗಳ ಮಗಳು.
ಬಿಜ್ಜಳ : ಒಟ್ಟಿನಲ್ಲಿ ಎಲ್ಲರೂ–(ವಿಷಯ ಬದಲಿಸಿ) ಶಾಸ್ತ್ರಿಗಳೆ, ಸುತ್ತಿ ಬಳಸಿ ಮಾತಾಡಬೇಡಿ. ನಿಮಗೆ ಬೇಕಾದದ್ದು ರುದ್ರನ ತಲೆದಂಡ ತಾನೆ? ಈ ಜವಾಬ್ದಾರಿ ನನಗಿರಲಿ. ಈ ನಡುವೆ ಕೆಲವು ಆತಂಕ ಇವೆ; ಬಸವಣ್ಣನವರ ಶರಣ ಸೈನ್ಯ ಕೈ ಕಟ್ಟಿ ಕೂರುವುದಿಲ್ಲ, ಆದರೆ ನಾನು ಸಂಕ್ರಾಂತಿಯ ಬಲಿಯ ಬಗ್ಗೆ ನಿರ್ಧರಿಸಿದ್ದೇನೆ.
(ಅವನ ಮಾತು ಕೇಳಿ ಸ್ತಬ್ಧರಾದ ನಾಲ್ವರು, ಮೌನ)
ಒಂದೊಂದು ಸಲ ನಿಮ್ಮನ್ನೂ ಬಸವಣ್ಣನವರನ್ನೂ ನೋಡಿದರೆ ನಾನೆಂಥ ದಡ್ಡ ಅನ್ನಿಸುತ್ತೆ.
ಶಾಸ್ತ್ರಿ : ಬಸವಣ್ಣನವರು ಭಂಡಾರ ವಹಿಸಿಕೊಂಡ ಮೇಲೆ ನಮ್ಮ ರಾಜ್ಯದ ದೇವಾಲಯಗಳಿಗೆ ಹೊಸ ಕಳೆ ಬಂದಿದೆ.
ಬಿಜ್ಜಳ : ಅನಗತ್ಯ ಕೊಂಕು ಬೇಡ, ಹೇಳಿ.
ಶಾಸ್ತ್ರಿ : ಕೊಂಕಲ್ಲ ಪ್ರಭು. ವಾಸ್ತವ ಸಂಗತಿ ಮುಂದಿಡುತ್ತಿದ್ದೇನೆ. ತ್ರಿಪುರಾಂತಕ ದೇವಾಲಯದಲ್ಲಿ ಹದ್ದು ಕಾಗೆಗಳು ಗೂಡು ಕಟ್ಟಿಕೊಂಡಿವೆ; ಬ್ರಹ್ಮ ದೇವಾಲಯದ ಛಾವಣಿ ಛಿದ್ರವಾಗಿದೆ; ನಾರಸಿಂಹ ಕಟ್ಟಡ ಶಿಥಿಲಗೊಂಡು ಮುಂದಿನ ಮಳೆಗಾಲದಲ್ಲಿ ನೆಲಸಮವಾಗಲಿದೆ. ಅರ್ಚಕರಾಗಲು ಕೂಡ ಜನ ಹಿಂಜರಿಯುತ್ತಿದ್ದಾರೆ; ಮಲಯವತಿ ದೇವಾಲಯದಲ್ಲಿ ಕಳುವಾದ ಒಡವೆ ಸಿಕ್ಕಿಲ್ಲ; ಅಲ್ಲಿಯ ಅರ್ಚಕನ ಮೇಲೆ ತಪ್ಪು ಹೊರಿಸಲಾಗಿದೆ. ಆದರೆ ಅದು ಅರ್ಚಕ ಮಾಡಿದ ಕಳುವಲ್ಲ ಎಂಬುದು ಮಕ್ಕಳಿಗೆ ಕೂಡ ಗೊತ್ತಿದೆ.
ಬಿಜ್ಜಳ : ಆಪಾದನೆಯ ಪಟ್ಟಿಯೇ ಇರುವಂತಿದೆ.
ಶಾಸ್ತ್ರಿ : ಸಂಸ್ಕೃತದ ಒಂದು ಶಬ್ದ ಕೇಳಿದರೂ ಜನ ಸಿಟ್ಟಿಗೇಳುವ, ಗೇಲಿ ಮಾಡುವ ಕಾಲ ಬಂದಿದೆ. ಬ್ರಾಹ್ಮಣರು ಊರು ಬಿಟ್ಟು ಹೋಗುತ್ತಿದ್ದಾರೆ.
(ಮೌನ)
ಶರಣರ ಉದ್ಧಟತನ ಹೆಚ್ಚುತ್ತಿದೆ. ಹೊಲೆಯರು ನದಿಯ ದಂಡೆಯ ಮೇಲೆ ಸಾಲಾಗಿ ನಿಂತು ಬ್ರಾಹ್ಮಣರು ನೀರು ಮುಟ್ಟದಂತೆ ಮಾಡುತ್ತಿದ್ದಾರೆ.
ಬಿಜ್ಜಳ : ಶಾಸ್ತ್ರಿಗಳೆ, ಇದನ್ನು ಕೇಳಿ ಕೇಳಿ ನನಗೆ ಸಾಕಾಗಿಹೋಗಿದೆ.
ಶಾಸ್ತ್ರಿ : ದೊರೆಗಳು ಒಮ್ಮೆ ದೂರು ಕೇಳಿದ ಮೇಲೆ ಮತ್ತೆ ಅದನ್ನೇ ಇನ್ನೊಮ್ಮೆ ಕೇಳುವಂತಾದರೆ-
ಬಿಜ್ಜಳ : (ಕಿರಿಕಿರಿಗೊಂಡು) ಕೇಳುವಂತಾದರೆ?
ಶಾಸ್ತ್ರಿ : ಕ್ಷಮಿಸಬೇಕು, ಪ್ರಭು.
ಬಿಜ್ಜಳ : (ಎದ್ದು) ಯಾಕೆ ಕ್ಷಮೆ? ನಾನು ಮತ್ತೆ ಮತ್ತೆ ಮೊರೆ ಕೇಳಿದರೆ-
ಶಾಸ್ತ್ರಿ : ಹಾಗಲ್ಲ, ಪ್ರಭು.
ಬಿಜ್ಜಳ : ಹೌದು ನಾನು ದುರ್ಬಲ. ಈ ಗೋಳು ಒಂದು ದಿನದ್ದಲ್ಲ. ನೀವೇ ಯಾಕೆ ಕಚ್ಚಾಡಿಕೊಂಡು ಒಂದು ನಿರ್ಧಾರಕ್ಕೆ ಬರಬಾರದು? ಅದು ನಿಮ್ಮಿಂದ ಆಗುವುದಿಲ್ಲ. ನಿಮ್ಮ ಹೆಂಗಸರು ಹೊಲೆಯರನ್ನು ನೋಡದಂತೆ ಯಾಕೆ ಮಾಡಬಾರದು? ಅದು ನಿಮ್ಮಿಂದ ಆಗುವುದಿಲ್ಲ. ಈ ದೇಶದಲ್ಲಿ ಯಾರು ನಿಜವಾದ ಶರಣ, ಯಾರು ಅಲ್ಲ ಅಂತ ಒಂದು ಪಟ್ಟಿ ಯಾಕೆ ಸಿದ್ಧಪಡಿಸಬಾರದು? ಅದು ಆಗುವುದಿಲ್ಲ! ತರುಣಿಯರೇ ಏಳಿ, ಕೊಂಚ ಹೀಗೆ ಬನ್ನಿ (ಅವರು ಮೆಲ್ಲಗೆ ಸುತ್ತುವಂತೆ ಸೂಚಿಸುವನು) ನೀವು ಕೂತಾಗ ಇಷ್ಟು ಚೆನ್ನಾಗಿದ್ದೀರಿ ಅನ್ನಿಸಿರಲಿಲ್ಲ! ವೇದ ಪುರಾಣದ ಸಂತೋಷದಲ್ಲಿ ಬೆಳೆದವರು ತಾನೆ? ಕಾಳಿದಾಸನ ವರ್ಣನೆಗೆ ಅನುಸಾರ ರೂಪುಗೊಂಡವರು ತಾನೆ?
(ಅಷ್ಟರಲ್ಲಿ ಸೇವಕ “ಬಸವಣ್ಣನವರು ಪ್ರಭು” ಎಂದು ತಿಳಿಸುವನು. ಬಿಜ್ಜಳ ಬಸವಣ್ಣನವರನ್ನು ಕರೆತರಲು ಸೂಚಿಸುವನು. ಅಷ್ಟರಲ್ಲಿ ಹುಡುಗಿಯರು ನಿಂತಿರುವರು. ಬಸವಣ್ಣ ಬಂದೊಡನೆ)
ಬಿಜ್ಜಳ : ಬನ್ನಿ ಬಸವಣ್ಣ, ಒಳ್ಳೆಯ ಸಮಯಕ್ಕೆ ಬಂದಿರಿ. ಆಕೆ ನೋಡಿ- ಉಮಾ, ಶಂಕರ ದೀಕ್ಷಿತರ ಮಗಳು, ಇವರಿಬ್ಬರು ಉಮಾದೇವಿಯ ಗೆಳೆತಿಯರು. ಇವರ ಮೂರನೆಯ ಗೆಳೆತಿಯ ಮೇಲೆ ಅತ್ಯಾಚಾರವಾಗಿದೆಯಂತೆ- ಶರಣನೊಬ್ಬನಿಂದ, ಎಂಥ ಮಾತು!
(ಬಸವಣ್ಣನವರ ಪ್ರತಿಕ್ರಿಯೆಗೆ ಕಾಯದೆ, ಶಾಸ್ತ್ರಿಗೆ-)
ನೀವು ನಿಮ್ಮ ಜಾತಿಯ ಬಗ್ಗೆ ಉದ್ದುದ್ದ ಮಾತಾಡಿದ್ದೀರಿ. ಈಗ ಮಾತಾಡಿ- ನಮ್ಮ ಬಸವಣ್ಣ ನಿಮಗೆ ತಕ್ಕ ಉತ್ತರ ಕೊಡುತ್ತಾರೆ. ನನ್ನ ಭಂಡಾರಿ ಬಸವಣ್ಣ ಯಾವುದೊಂದು ಧರ್ಮವನ್ನೂ ನಿರ್ಲಕ್ಷಿಸಬಲ್ಲರು ಅನ್ನಿಸುವುದಿಲ್ಲ; ವಿಶಾಲ ಮನಸ್ಸು ಅವರದು. ಅವರ ಅನುಯಾಯಿಗಳಾದ ಶಿವಶರಣರು ತಪಃಶಕ್ತಿಯುಳ್ಳ ಭಕ್ತರು.
(ಈ ಮಾತುಗಳು ವ್ಯಂಗ್ಯವೇ ಇಲ್ಲವೆಂಬಂತೆ ಹೇಳುತ್ತಿದ್ದಾನೆ)
ಅವರು ಇದ್ದಲ್ಲಿ ಋಷ್ಯಾಶ್ರಮದ ವಾತಾವರಣ ಮೂಡುತ್ತದೆ; ದೇವಾಲಯದ ಪ್ರಶಾಂತತೆ ನೆಲಸುತ್ತದೆ. ಅಲ್ಲವೇ ಶಾಸ್ತ್ರಿಗಳೇ? ಸುಳ್ಳು ಹೇಳಬೇಡಿ.
ಶಾಸ್ತ್ರಿ : ದೊರೆಗಳ ಮಾತನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ-
ಬಿಜ್ಜಳ : ಬಸವಣ್ಣನವರೆ?
ಬಸವಣ್ಣ : (ಯಾವ ಭಾವನೆಯನ್ನೂ ತೋರದೆ) ತಮ್ಮ ಪ್ರಶಂಸೆಗೆ ಕೃತಜ್ಞ ಪ್ರಭು.
ಬಿಜ್ಜಳ : ಆಹಾ! ಪಲಾಯನದ ಮಾತು! ಗಟ್ಟಿ ಗಂಟಲಲ್ಲಿ ನಾನು ಅರಚಿದೊಡನೆ ಒಪ್ಪುತ್ತೀರಿ. ಕೊಂಚ ಮೆತ್ತಗಾದರೆ ನನ್ನ ಬೆನ್ನೇರುತ್ತೀರಿ. ಈ ಮಧ್ಯೆ ನಿಮ್ಮ ಅಭಿಪ್ರಾಯದ ಬೆಳಕಲ್ಲಿ ನಾನು ತಪ್ಪು ಮಾಡುತ್ತೇನೆ. ಆದ್ದರಿಂದ ಪ್ರಜೆಗಳ ಅಭಿಪ್ರಾಯ ಕೇಳಬೇಕೆಂದು ಮನಸ್ಸಾಗುತ್ತದೆ. ಅವರ ಕೂಗು ಕೇಳಿ ಹುಮ್ಮಸ್ಸು ಬರುತ್ತದೆ. ನಮ್ಮ ವರದಿಗಾರ ಭಟ್ಟನ ಹತ್ತಿರ ಕತೆಯೊಂದಿದೆ, ಕೇಳುತ್ತೀರ?
ಶಾಸ್ತ್ರಿ/ಬಸವಣ್ಣ : ನಮ್ಮ ಅಭ್ಯಂತರವಿಲ್ಲ.
ಬಿಜ್ಜಳ : ಕತೆ ಹೇಳುವುದರಲ್ಲಿ ನಿಪುಣ ನಮ್ಮ ಭಟ್ಟ.
(ಕರೆಯುತ್ತ) ಭಟ್ಟಾ! (ಆತ ಬರುವನು)
ಸಭಿಕರು ಸೇರಿದ್ದಾರೆ. ಧರ್ಮಪುರಿಯ ರಾಜನ ಕತೆ ಹೇಳು.
(ಭಟ್ಟನ ಕೈಯಲ್ಲಿ ತಾಳ ಇವೆ; ಹರಿಕಥೆ ಹೇಳುವವರ ಹಾಗೆ ಇದ್ದಾನೆ. ಬಿಜ್ಜಳ ನಿಂತ ಹುಡುಗಿಯರಿಗೆ ಕೂರಲು ಸೂಚಿಸುವನು. ಭಟ್ಟ ಎರಡು ಸಲ ತಾಳ ಹಾಕಿ ಕಥೆ ಆರಂಭಿಸುವನು.)
ಭಟ್ಟ: ನಗರ ಧರ್ಮಪುರಿ. ಅಲ್ಲಿಯ ದೊರೆ, ಅಗ್ನಿರಾಜ.
ಚೆಲುವು ಮೈವೆತ್ತಂತ ದೇಶ, ಕಾರ್ಯಕ್ಕೆ ಹೆಸರಾಂತ ಚಕ್ರವರ್ತಿ-
(ಹಾಡು) ಧರ್ಮಪುರಿಯ ಸೌಭಾಗ್ಯವನ್ನು ಹೇಗೆ
ನಾನು ಬಣ್ಣಿಸಿ
ತೃಪ್ತಿ ಪಡೆವೆ ಸ್ವರ್ಗಸುಖವ ನಿಮ್ಮ
ಗಳಿಗೆ ಉಣ್ಣಿಸಿ;
ಭೂಸ್ವರ್ಗದ ರತ್ನಹಾರ ಎಂದು
ಖ್ಯಾತಿಗೊಂಡಿದೆ;
ಯೌವನದೆದೆ ಚಿಲುಮೆಯಂತೆ
ವಿಂಧ್ಯಶ್ರೇಣಿಯಲ್ಲಿದೆ.
ಹೀಗಿರಲಾಗಿ ಅಗ್ನಿರಾಜನು ಬಹಳ ಕಾಲ ಸಂತೋಷ ಸಾಗರದಲ್ಲಿ ಓಲಾಡುತ್ತಿದ್ದ; ಪ್ರಜೆಗಳ ಅಭಿಪ್ರಾಯದಂತೆ, ಮಂತ್ರಿ ಸಾಮಂತರ ಸೂಚನೆಯಂತೆ, ತನ್ನ ಆತ್ಮಸಾಕ್ಷಿಯ ಅಣತಿಯಂತೆ ರಾಜ್ಯಭಾರ ನಡೆಸುತ್ತಿದ್ದ. ಅಲ್ಲಿ ಅನ್ನ ವಸ್ತ್ರಭೂಷಣಗಳಿಗೆ, ಭಕ್ಷ್ಯ ಭೋಜನ ಧನಕನಕಗಳಿಗೆ ಕೊರತೆಯೆಂಬುದಿರಲಿಲ್ಲ.
ಆ ಅಗ್ನಿರಾಜನಿಗೆ ಒಬ್ಬಳೇ ಮಗಳು. ಹೆಸರು ಕೃತ್ತಿಕೆ. ತ್ರಿಲೋಕ ಸುಂದರಿಯಾದ, ಪ್ರಭಾ ಪುತ್ಥಳಿಯಾದ ಇವಳಿಗೆ ಅನುರೂಪನಾದ ರಾಜಕುಮಾರನಿಗಾಗಿ ಅನ್ವೇಷಣೆ ನಡೆಸಿ ಅಗ್ನಿರಾಜ ಬಹಳವಾಗಿ ಸಂಕಷ್ಟಗಳನ್ನು ಅನುಭವಿಸಿ ನಿರಾಶನಾದ. ಹೀಗಿರಲಾಗಿ ಒಮ್ಮೆ ತನ್ನ ರಾಜೋದ್ಯಾನದಲ್ಲಿ ತುಂಬು ಹುಣ್ಣಿಮೆಯ ಚಂದ್ರನ ಬೆಳಕಲ್ಲಿ ನಿಡುಸುಯ್ಯುತಿರಲಾಗಿ ಉದ್ಯಾನದ ಲತಾ ಸಮೂಹದ ನಡುವೆ ನಿಂತು ಯೌವನದಲ್ಲಿ ಮೈಮರೆತ ತನ್ನ ಪುತ್ರಿಯನ್ನು ಕಂಡು ಅಂದು ಅಗ್ನಿರಾಜನ ಶೋಕ ಉತ್ತುಂಗಸ್ಥಿತಿ ಮುಟ್ಟಿತು.
ಮರುದಿನ ಪ್ರಾತಃಕಾಲ ಅಗ್ನಿರಾಜ ಒಂದು ನಿರ್ಧಾರಕ್ಕೆ ಬಂದ. ತನ್ನ ರಾಜ್ಯದ ಪ್ರತಿಯೊಂದು ನಗರದಲ್ಲಿ ಡಂಗುರ ಸಾರಿಸಿದ. ಡಂಗುರದವರು ಕೂಗಿ ಕೂಗಿ ಹೇಳುತ್ತಾರೆ…ಜನ ಗುಂಪು ಗುಂಪಾಗಿ ನಿಂತು ಉತ್ತರ ಕೊಡುತ್ತಾರೆ….
(ಭಟ್ಟ ಡಂಗೂರದವರನ್ನು ಅನುಕರಿಸುತ್ತಾ ಸುತ್ತ ಹೋಗಿ ತಾಳವನ್ನು ತಮ್ಮಟೆಯಾಗಿ ಬಳಸುತ್ತಾ ಹೇಳುತ್ತಾನೆ.)
ಡಂಗುರ : ಪ್ರಜೆಗಳೇ ಹೇಳಿ, ಈ ರಾಜ್ಯದ ಅತ್ಯಂತ ಸುಂದರವಾದ ವಸ್ತು ಯಾರಿಗೆ ಸೇರಬೇಕು?
ಜನ : (ನೇಪಥ್ಯದಿಂದ ನೂರಾರು ಧ್ವನಿಗಳ ಉತ್ತರ)
ಮಹಾರಾಜರಿಗೇ.
ಡಂಗುರ : ಮತ್ತೊಮ್ಮೆ ಹೇಳಿ. ಈ ದೇಶದ ಪ್ರಭಾಪುತ್ಥಳಿಯಂಥ, ಮಿನುಗು ನಕ್ಷತ್ರದಂಥ ವಸ್ತು ಯಾರಿಗೆ ಸೇರಬೇಕು?
ಜನ : ಮಹಾರಾಜರಿಗೆ, ಮಹಾಪ್ರಭುಗಳಿಗೆ.
ಬಿಜ್ಜಳ : (ಚಪ್ಪಾಳೆ ತಟ್ಟಿ) ಕೇಳಿದಿರಾ? ಹೀಗೆ ಅಗ್ನಿರಾಜನೆಂಬ ಚಕ್ರವರ್ತಿ ತನ್ನ ಮಗಳನ್ನೇ ವರಿಸಿದ. ಈ ವಿಚಾರ ಗೊತ್ತಾದೊಡನೆ ಹೊರಗೆ ಸಂತೋಷ ತೋರುತ್ತಿದ್ದರೂ ಒಳಗೆ ಜನ ಕೋಪದಿಂದ ಕುದಿಯುತ್ತಿದ್ದರು.
ಭಟ್ಟ : (ಮುಂದುವರಿಸುತ್ತ) ಕೋಪದಿಂದ ಕುದಿದ ಪ್ರಜೆಗಳು, ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಎಲ್ಲೆಲ್ಲೂ ಹಬ್ಬಿದ ಕ್ಷಾಮ, ಕ್ರೌರ್ಯ.
ಬಿಜ್ಜಳ : (ಅವನಿಗೆ ಸನ್ನೆ ಮಾಡಿ ನಿಲ್ಲಿಸುತ್ತ) ನನಗೆ ಈ ಕತೆ ಕೇಳಿದ ರಾತ್ರಿ ನಿದ್ರೆ ಬರಲಿಲ್ಲ. ನಾನು ನನ್ನ ಮಗಳನ್ನು ಮದುವೆಯಾಗಿಲ್ಲವೆಂದು ನೀವೆಲ್ಲ ಬಲ್ಲಿರಿ. ಆದರೆ ಕತೆ ಯಾಕೋ ನನ್ನ ಆಳಕ್ಕೆ ಇಳಿದಿತ್ತು. ನನ್ನ ಮನಸ್ಸನ್ನು ಅಲ್ಲಾಡಿಸಿತ್ತು.
ಭಟ್ಟ : ಮಹಾಪ್ರಭು ಬಿಜ್ಜಳರಿಗೆ ಅವೊತ್ತೊಂದು ಕನಸು ಬಿತ್ತು.
ಬಸವಣ್ಣ : ವ್ಯಕ್ತಿ ತನ್ನ ಕನಸನ್ನು ತಾನೇ ಕಾಣುತ್ತಾನೆ, ಅಲ್ಲವೇ ಪ್ರಭು.
ಬಿಜ್ಜಳ : ರಾಜನ ಕನಸು ಹಾಗಲ್ಲ, ಕೇಳಿ.
ಭಟ್ಟ : (ಪದ್ಯ ಹೇಳುವನು- ಹಾಡುವುದಿಲ್ಲ)
ಬಿಜ್ಜಳ ದೊರೆಗಳು ನಿರ್ಧರಿಸಿದರು
ಪ್ರಜೆಗಳ ಬದುಕನು ಈಕ್ಷಿಸಲು
ಜಂಗಮವೇಷದಿ ಅರಮನೆ ಬಿಟ್ಟರು
ನ್ಯಾಯಧರ್ಮಗಳ ರಕ್ಷಿಸಲು;
ಕಗ್ಗತ್ತಲು ಹಬ್ಬಿದೆ ಸುತ್ತ,
ಬೆಳೆದಿವೆ ಭಯಭ್ರಾಂತಿಯ ಹುತ್ತ
ಸದ್ದು, ಗದ್ದಲ, ಕ್ರಾಂತಿ, ರಕ್ತ-
ಬಿಜ್ಜಳ : ಆಮೇಲೆನಾಯ್ತು, ಅಲಂಕಾರವಿಲ್ಲದೆ ಹೇಳು.
ಭಟ್ಟ : ಕಗ್ಗತ್ತಲು ಮುಸುಕಿದೆ. ಜನ ಹಬ್ಬ ಆಚರಿಸುತ್ತಿದ್ದಾರೆ. ದೊಂದಿಯ ಬೆಳಕಲ್ಲಿ ಕುಣಿಯುತ್ತಿದ್ದಾರೆ. ದೊಡ್ಡದಾಗಿ ಹಾಡುತ್ತಿದ್ದಾರೆ. ಬಿಜ್ಜಳ ಪ್ರಭುಗಳು ಅವರ ಹತ್ತಿರ ಹೋದರು, ಅವರೆಲ್ಲ ಕಾವಿಯಲ್ಲಿದ್ದರು; ಮಂತ್ರಗಳನ್ನು ಹಾಡುತ್ತಿದ್ದರು, ಕುಣಿಯುತ್ತಿದ್ದರು. ಅವರ ಕುಣಿತಕ್ಕೆ ಅವರ ಮಾಂಸಖಂಡಗಳು ಮಿಂಚಿನಂತೆ ಹೊಳೆಯುತ್ತಿದ್ದವು. “ನಾನು ದೊರೆ ಬಂದಿದ್ದೇನೆ, ನಿಲ್ಲಿಸಿ” ಅಂದರು ಬಿಜ್ಜಳರು, ಅವರು ನಿಲ್ಲಿಸಲಿಲ್ಲ. ಇನ್ನೂ ಹತ್ತಿರ ಹೋಗಿ ನೋಡಿದರು. ಚಿಕ್ಕ ಮನುಷ್ಯನೊಬ್ಬನ ಸುತ್ತ ವೃತ್ತ ವೃತ್ತವಾಗಿ ಜನ ನರ್ತಿಸುತ್ತ ಬೆಂಕಿಗೆ ಎಣ್ಣೆ ಸುರಿಯುತ್ತಿದ್ದರು. ಜ್ವಾಲೆ ಆಕಾಶಕ್ಕೆ ಚಾಚುತ್ತಿತ್ತು. ಬಿಜ್ಜಳ ನೋಡುತ್ತ ನಿಂತರು. ಅವರ ಕುಣಿತ ಬಿಜ್ಜಳರಿಗೆ ಕೂಡ ಚೆಂದವಾಗಿ ಕಂಡಿತ್ತು. ತಾವೂ ಕುಣಿಯಬೇಕು ಅನ್ನಿಸಿತ್ತು, ಆದರೆ ಬೆಂಕಿ ದೊಡ್ಡದಾಯಿತು; ಗದ್ದಲ ಹೆಚ್ಚಾಯಿತು.
ಬೆಂಕಿ ತಮ್ಮ ಸುತ್ತ ಬೆಳೆಯುತ್ತಿರುವುದು ರಾಜನಿಗೆ ತಿಳಿಯಿತು. ‘ನನ್ನನ್ನು ಸುಡಬೇಡಿ’ ಅಂದರು ರಾಜರು. ಅವರು ಕೇಳಲಿಲ್ಲ, ಬೆಂಕಿ ಆರಿಸಲಿಲ್ಲ. ರುಳ ಹೆಚ್ಚಾಯಿತು. ‘ನಾನು ರಾಜ’ ಎಂದರು ಬಿಜ್ಜಳರು. ಅವರು ಕೇಳಲಿ…..
ಬಿಜ್ಜಳ : ಆಗ ನನ್ನ ಕನಸು ಮುಗಿಯಿತು. ಹೊರಗೆ ಗದ್ದಲವಿತ್ತು. ಬಂದು ನೋಡಿದರೆ ಅತ್ಯಾಚಾರದ ಸುದ್ದಿ! ನನಗೆ ಗೊಂದಲ! ಯಾವುದು ಯಾಕೆ ಎಂಬುದು ಗೊತ್ತಾಗುವುದಿಲ್ಲ. ಹೀಗೆ ಗೊಂದಲ ತುಂಬಿದ ಕ್ಷಣದಲ್ಲಿ ಬಸವಣ್ಣನವರಾಗಿದ್ದರೆ–
ಬಸವಣ್ಣ : (ಗಂಭೀರವಾಗಿ) ನಾನು ಗೊಂದಲದ ವೇಳೆಯಲ್ಲಿ ಸಂಗಮನನ್ನು ನೆನೆಯುತ್ತೇನೆ.
ಬಿಜ್ಜಳ : ಆದರೆ ನಾನು ನಿಮ್ಮ ಕೂಡಲ ಸಂಗಮನನ್ನು ನೆನೆದರೆ ಬ್ರಾಹ್ಮಣರ ಗುಂಪು ಬೊಬ್ಬೆ ಹಾಕುತ್ತದೆ; ಅವರ ಶ್ರೀಹರಿಯನ್ನು ನೆನೆದರೆ ನಿಮ್ಮ ಶರಣರು ಬೊಬ್ಬೆ ಹಾಕುತ್ತಾರೆ. ಏನು ಮಾಡುವುದೆಂದು ಗೊತ್ತಿಲ್ಲದೆ ನಾನು ನನ್ನನ್ನೇ ನೆನೆದುಕೊಳ್ಳುತ್ತೇನೆ. (ನಕ್ಕು) ಒಮ್ಮೆ ಹಾಗೆ ನೆನೆದುಕೊಳ್ಳುತ್ತಿದ್ದಾಗ ಪದ್ಮಿನಿ, (ಬಸವಣ್ಣನವರಿಗೆ) ಪದ್ಮಿನಿ ಯಾರೆಂದು ಗೊತ್ತಲ್ಲ?
ಬಸವಣ್ಣ: ಮಹಾರಾಣಿಯವರು ಯಾರಿಗೆ ಗೊತ್ತಿಲ್ಲ?
ಬಿಜ್ಜಳ : ಮಹಾರಾಣಿಯಲ್ಲ, ಮಹಾ ಹೆಂಗಸು. ಅವಳನ್ನು ನಾನಿನ್ನೂ ಮದುವೆಯಾಗಿಲ್ಲವೆಂದು ಎಷ್ಟು ಸಲ ಹೇಳಬೇಕು?(ವಿಷಯ ಬದಲಿಸುತ್ತ) ಆ ಪದ್ಮಿನಿ ನನ್ನ ಹತ್ತಿರ ಬಂದು, “ದೊರೆಗಳ ಮನಸ್ಸಿನಲ್ಲಿ ಸುಂದರ ಕಲ್ಪನೆ ಮೂಡಿದೆ” ಅಂದಳು. “ಕಲ್ಪನೆಯಲ್ಲ ಪದ್ಮಿನಿ, ವಾಸ್ತವ ಸಂಗತಿ” ಅಂದೆ. ಅದಕ್ಕವಳು, “ಅಂಥ ವಾಸ್ತವ ಕಲ್ಪನೆ ಯಾವುದು?” ಎಂದಳು. “ನಮ್ಮ ರಾಜ್ಯದ ಶರಣರ ಬಗ್ಗೆ ಯೋಚಿಸುತ್ತಿದ್ದೇನೆ. ಕಲ್ಪನೆಯಲ್ಲ” ಅಂದೆ. “ಅಂಥ ಶರಣರ ಕಲ್ಪನೆ ಯಾವುದು?” ಅನ್ನುತ್ತಾಳೆ ಹೆಣ್ಣು! ತಮ್ಮ ಮನಸ್ಸು ಮುಟ್ಟಿದ್ದೆಲ್ಲ ಕಲ್ಪನೆ ಹೆಂಗಸರಿಗೆ. ಬಸವಣ್ಣ, ನಿಮ್ಮ ಕ್ರಾಂತಿ ಆಕೆಗೆ ಕಲ್ಪನೆ!
ಶಾಸ್ತ್ರಿ : ಆದರೆ-
ಬಿಜ್ಜಳ : ಏನು ಶಾಸ್ತ್ರಿಗಳೆ?
ಶಾಸ್ತ್ರಿ : ಶರಣರಿಂದ ಕೊಲೆ, ಅತ್ಯಾಚಾರ, ದರೋಡೆ, ಮೋಸ ನಡೆದಾಗ ಅದು ಕಲ್ಪನೆಯ ಲೋಕದಿಂದ ಈ ಲೋಕಕ್ಕೆ ಬರುತ್ತದೆ ಪ್ರಭು.
ಬಿಜ್ಜಳ : ನನ್ನೆದುರು ನೀವು ಕಿತ್ತಾಡುವುದು ಸಲ್ಲ.
ಬಸವಣ್ಣ: ಶಾಸ್ತ್ರಿಗಳೆ, ನಿಮ್ಮೊಂದಿಗೆ ವಿರಸ ನನಗೆ ಇಷ್ಟವಿಲ್ಲ.
ಬಿಜ್ಜಳ : ವಿರಸವಲ್ಲ. ಹೆಂಗಸರಂತೆ ಶಾಸ್ತ್ರಿಗಳು ಉತ್ಪ್ರೇಕ್ಷಿಸಿದ್ದಾರೆ. ಅಷ್ಟೆ. ಭಟ್ಟ, ನಿನ್ನ ಕಾಲ ಹಾಳು ಮಾಡುವುದಕ್ಕೆ ಇಷ್ಟವಿಲ್ಲ. ಈ ಸುಭಿಕ್ಷದ ಬಗ್ಗೆ ಬಸವಣ್ಣನವರಿಗೆ ವರದಿ ಮಾಡಿ ನಿನ್ನ ಕೆಲಸದ ಮೇಲೆ ನೀನು ಹೋಗು-
ಭಟ್ಟ : (ಯಾಂತ್ರಿಕವಾಗಿ ದೊಡ್ಡ ದನಿಯಲ್ಲಿ ಹೇಳುವನು)
ಶರಣರು ಉಚ್ಛ್ರಾಯಕ್ಕೆ ಬರುತ್ತಿರುವ ಕಳೆದ ಐದು ವರ್ಷ ಹಿಂದಿನ ಐದು ವರ್ಷಗಳಿಗಿಂತ, ಈ ಅವಧಿಯಲ್ಲಿ ಸುಮಾರು ಎರಡು ಸಾವಿರ ಹೆಚ್ಚು ಕೊಲೆ: ನಾನೂರೈವತ್ತು ದರೋಡೆ ಪ್ರಕರಣಗಳು; ಎಂಟುನೂರು ಕಳ್ಳತನ; ಐನೂರ ನಲವತ್ತು ಅತ್ಯಾಚಾರಗಳು; ದೇವಸ್ಥಾನಗಳಿಂದ ಆಭರಣಗಳ ಅಪಹರಣ; ವ್ಯಭಿಚಾರದ ಅಸಂಖ್ಯ ಪ್ರಕರಣಗಳು; ಆರುನೂರು ಆತ್ಮಹತ್ಯೆ ಪ್ರಕರಣಗಳು: ಗಲಭೆಗಳಲ್ಲಿ ಸತ್ತವರು ಅಸಂಖ್ಯ; ಬೆಳೆಗಳನ್ನು ಭಸ್ಮ ಮಾಡಿದ ಪ್ರಸಂಗಗಳು, ಮತೀಯ ಗಲಭೆಗಳು-
ಬಿಜ್ಜಳ : ಸಾಕು ಹೋಗು. (ಹೋಗುವನು) ಶಾಸ್ತ್ರಿಗಳೆ, ತೃಪ್ತಿಯಾಯಿತೆ? ಬಸವಣ್ಣ, ತಾಳ್ಮೆ ಕಳೆದುಕೊಳ್ಳಬೇಡಿ. ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ. ಈಗ ಈ ಹುಡುಗಿಯರನ್ನು ಪ್ರಶ್ನಿಸಬೇಕು. ವ್ಯರ್ಥ ಕಾಲಹರಣವಾಯಿತು.
ಬಸವಣ್ಣ : (ಕೊಂಚ ವ್ಯಂಗ್ಯದಿಂದ) ದೊರೆಗಳ ಮನರಂಜನೆಗೆ ಪ್ರಜೆಗಳ ಅಭ್ಯಂತರವಿಲ್ಲ.
ಬಿಜ್ಜಳ : (ನಕ್ಕು) ನಿಮ್ಮ ಮನರಂಜನೆಗೆ ನಾನು ಭಟ್ಟನಿಂದ ಕತೆ ಹೇಳಿಸಿದೆ. ಈಗ ಈ ಅತ್ಯಾಚಾರದ ವಿಚಾರ.
ಬಸವಣ್ಣ : (ಸಂಯಮದಿಂದ; ಸ್ಪಷ್ಟ ಗಂಟಲಲ್ಲಿ) ರುದ್ರ ನಡೆಸಿದ್ದು ಅತ್ಯಾಚಾರವೆಂಬ ಸೂಚನೆ ಕೊಡುತ್ತಿದ್ದೀರಿ. ಅದು ನಿಜವಿದ್ದರೆ ದುರುದೃಷ್ಟಕರ. ಆದರೆ ರುದ್ರನ ಬಗ್ಗೆ ವಿಶ್ವಾಸ ಬೇರೆ ಬಗೆಯದು. (ಹುಡುಗಿಯರಿಗೆ) ತಾಯಿ, ಇದು ಎಷ್ಟು ಮುಖ್ಯ ಪ್ರಶ್ನೆಯೆಂಬುದು ನಿಮಗೆ ಗೊತ್ತಿರಬೇಕು. ಎರಡು ಧರ್ಮಗಳ ಹಿತಾಸಕ್ತಿ ಇಲ್ಲಿದೆ. ರಾಜ್ಯದ ಶಾಂತಿ, ಸೌಖ್ಯ ನಿಮ್ಮ ಉತ್ತರವನ್ನವಲಂಬಿಸಿದೆ. ನೀವು ಕಂಡದ್ದನ್ನು ಕಂಡ ಹಾಗೆ, ಯಾವ ಭಯ ದಾಕ್ಷಿಣ್ಯವೂ ಇಲ್ಲದೆ ಉತ್ತರಿಸಬೇಕು.
ಹೇಳಿ ತಾಯಿ, ಈ ಪ್ರಸಂಗ ನಡೆದ ಸ್ಥಳದಲ್ಲಿ ನೀವಿದ್ದಿರಾ?
ಉಮಾ : ನಾವು ಒಟ್ಟಿಗೆ ನೀರು ತರಲು ಹೋಗಿದ್ದೆವು.
ಬಸವಣ್ಣ : ಆ ಸ್ಥಳದಲ್ಲಿ ನೀವು ರುದ್ರನನ್ನು ನೋಡಿದಿರಾ?
ರಮಾ : ನೋಡಿದೆವು.
ಬಸವಣ್ಣ : ಅವರ ಮಾತು ಕೇಳಿಸಿಕೊಂಡಿರಾ?
ಸುಮಾ : ಇಲ್ಲ, ನಾವು ದೂರಕ್ಕೆ ಹೋದೆವು.
ಬಸವಣ್ಣ : ಹಾಗಾದರೆ ನೀವು ಈ ಘಟನೆಯನ್ನು ಪ್ರತ್ಯಕ್ಷ ಕಂಡವರಲ್ಲ?
ಬಿಜ್ಜಳ : (ಅಸಹನೆಯಿಂದ) ಎಂಥ ಗೊಡ್ಡು ಪ್ರಶ್ನೆ ಕೇಳುತ್ತೀರಿ!
(ಹುಡುಗಿಯರಿಗೆ) ಹುಡುಗಿಯರೇ, ಹೇಳಿ ನೀವು ಬ್ರಾಹ್ಮಣರಲ್ಲವೇ?
ಹುಡುಗಿಯರು : ಹೌದು ಪ್ರಭು.
ಬಿಜ್ಜಳ : ರುದ್ರನ ಬಗ್ಗೆ ನಿಮಗೇನನ್ನಿಸುತ್ತದೆ?
(ಮೌನ)
ಅವನು ಕೇವಲ ಹೊಲೆಯ ಅನ್ನಿಸುತ್ತದೆಯೆ?
(ಮೌನ)
ಅವನು ಸುಂದರ ಅನ್ನಿಸುತ್ತದೆಯೆ?
(ಮೌನ)
ಅವನು ಶರಣ ಅನ್ನಿಸುತ್ತದೆಯೆ?
(ಮೌನ)
ನಾನು ನಿಮ್ಮನ್ನೇ ಕೇಳುತ್ತಿದೇನೆ! ಹೇಳಿ! ಯಾಕೆ ತೆಪ್ಪಗಿದ್ದೀರಿ!
(ಹುಡುಗಿಯರು ಅಳತೊಡಗುವರು)
ಬಸವಣ್ಣ : ಅಳಬೇಡಿ ತಾಯಿ. ದೊರೆಗಳ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಿ.
ದೊರೆಗಳೆದುರು ಸ್ತ್ರೀಯರು ಅತ್ತದ್ದನ್ನು ನೋಡಿದ್ದು ಇದೇ ಮೊದಲು.
ಬಿಜ್ಜಳ : ಬಸವಣ್ಣನವರಿಗೆ ನಗುವುದು ಕೂಡ ಗೊತ್ತಿದೆ. ನನ್ನೆದುರು ಸ್ತ್ರೀಯರು ನಕ್ಕು ನಲಿದಾಡುತ್ತಾರೆ ಅಂತ-
ಬಸವಣ್ಣ : ಹಾಗಲ್ಲ ಸ್ವಾಮಿ, ತಮ್ಮ ಹೃದಯ ಎಷ್ಟು ಮೃದು ಅಂದರೆ-
ಬಿಜ್ಜಳ : (ನಕ್ಕು) ಜಾಣ ಬಸವಣ್ಣ! ಶಾಸ್ತ್ರಿಗಳೇ ನಾನು ಬಸವಣ್ಣನವರೊಂದಿಗೆ ಮಾತಾಡುವುದಿದೆ. ಈ ಅಳುಬುರುಕ ಹುಡುಗಿಯರನ್ನು ನನ್ನ ಅಂತಃಪುರದಲ್ಲಿ ಬಿಟ್ಟು ಹೋಗಿ, ವಿಚಾರಿಸುತ್ತೇನೆ.
(ಶಾಸ್ತ್ರಿ ಮತ್ತು ಹುಡುಗಿಯರು ಹೋಗುವರು)
ಬಸವಣ್ಣನವರೇ, ನಿಮ್ಮ ರಾಜ್ಯದಲ್ಲಿ ಹಾಡಹಗಲಿನಲ್ಲಿ ಕನ್ಯೆಯರ ಮೇಲೆ ಹೊಲೆಯರ ಅತ್ಯಾಚಾರ ನಡೀತಿದೆ.
(ಮೌನ)
ಶರಣರಿಂದ ಇವತ್ತೊಂದು ಕೊಲೆ.
(ಮೌನ)
ಮಾತಾಡಿ.
(ಬಸವಣ್ಣ ಒಬ್ಬರೇ ಇರುವುದರಿಂದ ಹೆಚ್ಚು ಹೆಚ್ಚು ಒತ್ತಿ ಹೇಳುತ್ತಾನೆ. ಪರಿಸ್ಥಿತಿಯನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ)
ಬಸವಣ್ಣ : ಮೊದಲನೆಯದಾಗಿ, ಇದು ನನ್ನ ರಾಜ್ಯವಲ್ಲ, ತಮ್ಮ ರಾಜ್ಯ.
(ಮೌನ)
ಬಿಜ್ಜಳ : ಎರಡನೆಯದಾಗಿ?
(ಮೌನ)
ಬಸವಣ್ಣ : ಎರಡನೆಯದಾಗಿ, ಆತ ಹೊಲೆಯನಲ್ಲ, ಶಿವಭಕ್ತ, ಮೂರನೆಯದಾಗಿ-
(ಮೌನ)
ಬಿಜ್ಜಳ : ಹೇಳಿ.
ಬಸವಣ್ಣ : ಅದು ಅತ್ಯಾಚಾರವಲ್ಲ, ಪ್ರೇಮಪ್ರಕರಣ.
ಬಿಜ್ಜಳ : ತಿಂಗಳ ಕೆಳಗೆ ನಾನು ಒಬ್ಬ ಬ್ರಾಹ್ಮಣನಿಗೆ ತಲೆದಂಡ ವಿಧಿಸಿದೆ.
ಬಸವಣ್ಣ : ಗೊತ್ತು.
ಬಿಜ್ಜಳ : (ಲಕ್ಷಿಸದೆ) ನೀವು ಹೇಳುತ್ತಿರುವಂಥ ಪ್ರೇಮಪ್ರಕರಣಕ್ಕಾಗಿ.
ಬಸವಣ್ಣ : ಅದು ತಮ್ಮ ಚಿತ್ತ.
ಬಿಜ್ಜಳ : ಆದರೆ ಮುಖ್ಯ; ಬ್ರಾಹ್ಮಣ ತಪ್ಪಿತಸ್ಥ ಅಲ್ಲ ಅಂತ ಗೊತ್ತಿದ್ದರೂ ಕೂಡ- ತಲೆದಂಡ ಹಾಕಿದೆ. ಆದರೆ ನನ್ನ ಸಂತೋಷಕ್ಕಾಗಿ ಅಲ್ಲ. ಪ್ರಜೆಗಳ ನೆಮ್ಮದಿಗಾಗಿ.
ಬಸವಣ್ಣ : (ನಗುವನು)
ಬಿಜ್ಜಳ : (ಕೊಂಚ ಅಸಹನೆಯಿಂದ) ಇಷ್ಟು ನಿಮಗೆ ಗೊತ್ತಾದೀತೆಂದು ತಿಳಿದಿದ್ದೇನೆ. ಇವು ಪ್ರೇಮ ಪ್ರಕರಣಗಳಲ್ಲ. ಜಾತಿ ಜಾತಿಗಳ ದಬ್ಬಾಳಿಕೆ. ಅವರು ಪ್ರೇಮಿಸುವುದು ಮನುಷ್ಯರನ್ನಲ್ಲ–ಅತ್ಯಾಚಾರ ನಡೆಸುವುದು ಜಾತಿಗಳ ಮೇಲೆ.
ಬಸವಣ್ಣ : ಅವು ನನಗೆ ಅರ್ಥವಾಗದ ಮಾತುಗಳು.
ಬಿಜ್ಜಳ : ತಪ್ಪು ಮಾಡಿದವರನ್ನು ಹತ್ತಿಕ್ಕಬೇಕಾದ್ದು ನನ್ನ ಕೆಲಸ. ತಪ್ಪು ಇಲ್ಲದಾಗ ಕೂಡ.
ಬಸವಣ್ಣ : (ನಕ್ಕು) ಇಲ್ಲದಾಗ ಕೂಡ?
ಬಿಜ್ಜಳ : ಜನರನ್ನು ಹತೋಟಿಯಲ್ಲಿಡಲು ತಪ್ಪನ್ನು ಹುಡುಕಿಕೊಂಡು ಹೋಗುವುದು ಕರ್ತವ್ಯ.
ಬಸವಣ್ಣ : ದೊರೆಗಳ ಬೇಟೆ ಬೇರೆ ಬೇರೆ ರೂಪ ಪಡೆಯಬಲ್ಲದು.
ಬಿಜ್ಜಳ : ಇದು ತಮಾಷೆಯ ಮಾತಲ್ಲ.
ಬಸವಣ್ಣ : ನನಗೆ ಗೊತ್ತು ಪ್ರಭು.
ಬಿಜ್ಜಳ : ಆದರೆ ನಗುತ್ತಿದ್ದೀರಿ.
ಬಸವಣ್ಣ : ನಾನು ನಗದಿದ್ದರೆ ನಗು ಅನ್ನುತ್ತೀರಿ, ನಕ್ಕರೆ ನಗಬೇಡ ಅನ್ನುತ್ತೀರಿ. ಆದರೆ… ಆದರೆ…..
ಬಿಜ್ಜಳ : ಯಾಕೆ ಗಂಟಲು ಕೆಟ್ಟವರ ಹಾಗೆ ಒದ್ದಾಡುತ್ತೀರಿ?
ಬಸವಣ್ಣ : (ಗಂಭೀರವಾಗಿ) ತಮ್ಮ ಪ್ರಜೆಗಳ ನೆಮ್ಮದಿಗಾಗಿ ಅವರ ತಪ್ಪಿಗಾಗಿ ಹಾತೊರೆಯುವುದಾಗಿ ಹೇಳಿದ್ದೀರಿ. ಆದರೆ ನನ್ನ ಮಾತನ್ನು ಸ್ವಲ್ಪ ಕೇಳಿ. ತಮಗೆ ಅಪ್ರಿಯವೆನಿಸಿದರೂ ಹೇಳಲೇಬೇಕೇಂದು ನನಗನ್ನಿಸಿದೆ.
ಬಿಜ್ಜಳ : ಹೇಳಿ.
ಬಸವಣ್ಣ : ನಾನು ಅಧಿಕಾರಕ್ಕೆ ಅಂಟಿ ಕೂತವನಲ್ಲ. ನೀವು ಇಷ್ಟಪಟ್ಟಾಗ ನನ್ನನ್ನು ಮನೆಗೆ ಕಳಿಸಬಹುದು.
ಬಿಜ್ಜಳ : ನಾಂದಿ ಮುಗಿಯಿತಲ್ಲ, ಹೇಳಿ. (ಕುಳಿತುಕೊಳ್ಳುವನು)
ಬಸವಣ್ಣ : ಅರಮನೆಯ ಪಲ್ಲಂಗದ ಮೇಲೆ ಒರಗಿ ಸುಂದರ ಕಂಠಗಳ ಧ್ವನಿ ಕೇಳುವವರಿಗೆ ಬೀದಿಯ ಗೋಳು ತಟ್ಟುವುದು ಕಷ್ಟ. ತಮ್ಮ ಕಿರೀಟದ ಒಂದು ವಜ್ರ ಈ ದೇಶದ ಅರ್ಧ ಹೊಟ್ಟೆಗಳಿಗೆ ಅನ್ನ ಕೊಡಬಲ್ಲದು. ಚನ್ನಕೇಶವನ ಮುತ್ತಿನ ಹಾರ ಅನೇಕರ ಕಂಬನಿ ಒರಸಬಲ್ಲದು. ಇದನ್ನು ಹಲವೊಮ್ಮೆ ಹೇಳಿದ್ದೇನೆ. ಮತ್ತೆ ಹೇಳುತ್ತಿದ್ದೇನೆ. ಈ ರಾಜ್ಯದ ಪ್ರತಿಯೊಂದು ವಿಗ್ರಹವೂ ಬಡಜನರ ಮೂಕ ವೇದನೆಯ ಘನರೂಪವಾಗಿದೆ. ನಿಮ್ಮ ವೈದಿಕರ ಮಂತ್ರ ಅರಮನೆಯ ಗೋಡೆಗಳೊಳಗೇ ಸುತ್ತಿ ಸತ್ತು ಹೋಗಿದೆ. ಇದನ್ನು ಹೇಗೆ ಸಮರ್ಥಿಸುತ್ತೀರಿ? ನಿಮ್ಮ ಎಲ್ಲ ಕನಸು ಈ ಗೋಳಿನ ಮಧ್ಯದಿಂದ ಆರಂಭವಾಗಬೇಕು.
(ಮೌನ)
ಈ ವ್ಯವಸ್ಥೆಯನ್ನು ಕಾಪಾಡುವುದರಲ್ಲಿ ನಿಮ್ಮ ಆಸಕ್ತಿ. ಇದರಲ್ಲಿ ನಿಮ್ಮ ಸುಖ ಕೂಡ ಅಡಗಿದೆಯೆಂದು ನಿಮಗೆ ಗೊತ್ತು. ಆದ್ದರಿಂದ ಭಟ್ಟರಂಥವರಿಂದ ಕತೆ ಹೇಳಿಸುತ್ತೀರಿ! ಎಲ್ಲರಲ್ಲಿ ಭಯ ಹರಡುತ್ತೀರಿ.
ನನಗೆ ಮಾತ್ರ ಈ ಎಲ್ಲದರ ಹಿಂದಣ ಮೌಢ್ಯ ದುರಂತಮಯವಾಗಿ ಕಾಣುತ್ತದೆ. ಕೊಚ್ಚೆಯಲ್ಲಿ ನರಳುವ ವ್ಯಕ್ತಿ ನಿಮ್ಮತ್ತ ನೋಡಿ ಕೈ ಜೋಡಿಸುತ್ತಾನೆ; ನಿಮ್ಮ ಪ್ರತಿಯೊಂದು ಆಸ್ತಿಯ ಲೆಕ್ಕವಿಡುತ್ತಾನೆ. ನಿಮ್ಮನ್ನು ಆಶ್ಚರ್ಯಪಡಿಸಲೇ ಸ್ವಾಮಿ? ನಿಮ್ಮ ಕಣ್ಣಿಗೆ ಎಲ್ಲೆಲ್ಲೂ ಶರಣರು ಬೀಳುತ್ತಾರೆ; ಯಾಕೆಂದರೆ ಅವರು ಎಚ್ಚೆತ್ತವರು. ಈ ದೇಶದಲ್ಲಿ ಇನ್ನೂ ಮುಕ್ಕಾಲುಭಾಗ ಜನ ಶರಣರಾಗದೆ ಇದ್ದಾರೆ; ನನ್ನ ಮಾತು ಕೇಳಿ ನಗುತ್ತಾರೆ. ಭಟ್ಟರಂತೆ ನಾನು ಕೇಳುತ್ತೇನೆ.
ಪ್ರಜೆಗಳೇ, ನನ್ನ ಪ್ರಶ್ನೆಯನ್ನು ಕೇಳಿ.
(ಭಟ್ಟನಿಗಿಂತ ಹೆಚ್ಚು ಗಂಭೀರವಾಗಿ ಜನರನ್ನುದ್ದೇಶಿಸಿ ಕೇಳುತ್ತಾನೆ)
ಬಿಜ್ಜಳ ಮಹಾರಾಜರ ಪಟ್ಟದ ಕುದುರೆಯ ಬೆಲೆ ಎಷ್ಟು?
ಜನ : (ನೂರಾರು ಕಂಠಗಳು ನೇಪಥ್ಯದಿಂದ) ಲಕ್ಷ ವರಹ.
ಬಸವಣ್ಣ : ಬಿಜ್ಜಳರ ಕಿರೀಟದ ಪಚ್ಚೆಗೆ?
ಜನ : ಲಕ್ಷ ವರಹ.
ಬಸವಣ್ಣ : ಬಿಜ್ಜಳ ಮಹಾರಾಜರು?
ಜನ : ಅಭಿನವ ದೇವೇಂದ್ರ.
ಬಸವಣ್ಣ : (ನಕ್ಕು) ವ್ಯಂಗ್ಯವಾಗಿ ಅಲ್ಲ. ಸಂತೋಷದಿಂದ ಹಾಗೆ ಹೇಳುತ್ತಾರೆ ಜನ! ದೂರದ ನಕ್ಷತ್ರಗಳ ಗುಟ್ಟು ಕಂಡುಹಿಡಿದ ಜ್ಞಾನಿಗಳಂತೆ ಹೆಮ್ಮೆಯಿಂದ
ಹೇಳುತ್ತಾರೆ! ತಮಗೆ ಗೊತ್ತಿದೆಯೋ ಇಲ್ಲವೋ- ಜನ ಮಾತ್ರ ತಮ್ಮ ಕುದುರೆಗಳ ಚುಕ್ಕೆ ಚಿತ್ತಾರಗಳ ಲೆಕ್ಕ ಇಟ್ಟು ಹರ್ಷಿಸುತ್ತಾರೆ; ತಮ್ಮ ಅಂತಃಪುರದ ಹೆಂಗಸರ ಮೂಗುತಿಗಳ ಸೌಂದರ್ಯ ಬಣ್ಣಿಸುತ್ತಾರೆ; ತಮ್ಮ ಹೆಬ್ಬಾಗಿಲ ಕಂಬಗಳನ್ನು ನೆನೆದು ಹಿಗ್ಗುತ್ತಾರೆ. ಆದರೆ ನನಗೆ ಚಳಿಗಾಲದಲ್ಲಿ ಅಂಗೈ ಅಗಲ ಬಟ್ಟೆಯಿಲ್ಲದೆ
ನಡುಗುವ ಹಸುಳೆಗಳನ್ನು ನೋಡಿ ಭಯವಾಗುತ್ತದೆ; ತಮ್ಮ ಸನಾತನಿಗಳ ಮಂತ್ರಗಳ ಗದ್ದಲಗಳ ಕಿವುಡಾದ ಹೊಟ್ಟೆಗಿಲ್ಲದ ಜನ ನೋಡಿ ನನ್ನ ದಿಗ್ಭ್ರಮೆ ಇಮ್ಮಡಿಯಾಗುತ್ತದೆ. ತಮ್ಮ ಕನಸುಗಳು ಮೈ ಪಡೆಯಬೇಕಾದ್ದು ಅಲ್ಲಿ; ಎಲ್ಲರನ್ನೂ ಮೂಕರನ್ನಾಗಿ ಇಡುವುದರಲ್ಲಲ್ಲ. ಮತ್ತೆ ನನ್ನ ಹಳೆಯ ಮಾತು ಹೇಳುತ್ತೇನೆ. ಈ ನಿಮ್ಮ ವ್ಯವಸ್ಥೆಗೆ ಜೀವ ತರುವುದಾದರೆ ನಾನು ತಮ್ಮ ಆಶ್ರಯದಿಂದ ಮುಕ್ತನಾಗಲು ಸಿದ್ಧ; ಈ ನನ್ನ ಜನರಿಗೆ ಕಿಂಚಿತ್ತು ಒಳಿತು ಮಾಡಬಲ್ಲನಾದರೆ ನಾನು ಎಲ್ಲದರಿಂದ ಬಿಡುಗಡೆ ಪಡೆಯಬಲ್ಲೆ.
ಬಿಜ್ಜಳ : (ಮೆಲ್ಲಗೆ, ತನ್ನ ಜವಾಬ್ದಾರಿ ಅರಿತು) ಆದರೆ…. ನನ್ನ ಬಿಡುಗಡೆ ಹೇಗೆ?
ಬಸವಣ್ಣ : ಅದನ್ನು ತಾವು ಬಗೆಹರಿಸಿಕೊಳ್ಳಬೇಕು.
ಬಿಜ್ಜಳ : ನಿಮಗೆ ಬಿಡುಗಡೆ ಸುಲಭ. ವೈದಿಕರ ಜನಿವಾರ ಕಿತ್ತು ಹೊರಬಂದಿರಿ ನೀವು; ಆದರೆ ನನ್ನ ಬಂಧನ ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು.
(ಮೌನ)
ನಾನು ಈ ವ್ಯವಸ್ಥೆಗೆ ಅಂಟಿಕೊಳ್ಳಬೇಕಾಗಿದೆ.
(ಮೌನ)

ವ್ಯವಸ್ಥೆಗಾಗಿ ತಿಂಗಳಿಗೊಂದು ಬಲಿ ಕೊಡಬೇಕಾಗಿದೆ. ಹೇಳಿ, ಶರಣರೆಂದು ಹೇಳಿಕೊಂಡು ಅತ್ಯಾಚಾರ ನಡೆಸುವವರ ಬಗ್ಗೆ ನೀವೇನೆನ್ನುತ್ತೀರಿ?
(ಮೌನ)
ಶರಣತ್ವ ಮುರಿದ ಗಳಿಗೆಯಲ್ಲಿ ಈ ರಾಜ್ಯದ ಗತಿ ಏನು?
(ಮೌನ)
ತಪ್ಪು ಮಾಡಿದ ಒಬ್ಬ ಶೂದ್ರನನ್ನು ಹಿಡಿಯುವುದು ಸುಲಭ; ಆದರೆ ತಪ್ಪು ಮಾಡಿದ ಒಬ್ಬ ಶರಣನನ್ನು ಶಿಕ್ಷಿಸುವುದು ಕಷ್ಟ- ಅಲ್ಲವೆ?
ಬಸವಣ್ಣ : ಅದು ಹೇಗೆ?
ಬಿಜ್ಜಳ : (ಅಣಕಿಸುವ ಕೊಲ್ಲುವ ಧ್ವನಿಯಲ್ಲಿ) ಹೀಗೆ. ತಾವು ತಮ್ಮ ಶರಣರಿಗೆ ಬೊಕ್ಕಸದ ದುಡ್ಡು ಹಂಚಿದಿರಿ. ನಮ್ಮ ಸೈನಿಕರಿಗೆ ಸಂಬಳ ಕೊಡುವ ಹಣವಿರಲಿಲ್ಲ.
ಬಸವಣ್ಣ : ಮೊದಲನೆ ಸುಳ್ಳು.
ಬಿಜ್ಜಳ : ಹೇಳುವವರೆಗೆ ಇರಿ. ಅದು ಹೇಗೋ ಜನಕ್ಕೆ ಗೊತ್ತಾಯಿತು. ನಿಮ್ಮ ಶತ್ರುಗಳೆಲ್ಲ ನನ್ನಲ್ಲಿ ಬಂದು ನಿಮ್ಮ ಮೇಲೆ ತಮ್ಮ ಇಪ್ಪತ್ತಾರನೇ ಚಾಡಿ ಹೇಳಿದರು-
ಬಸವಣ್ಣ : ಆಗ ನೀವು ನನ್ನನ್ನು ಕರೆಸಿ ಕೇಳಿದಿರಿ; ನಾನು ಉತ್ತರಿಸಲಿಲ್ಲ. ನೀವು ನನ್ನ ತಲೆದಂಡ ಕೇಳುವುದು ಸಾಧ್ಯವಿತ್ತು. ಆದರೆ ನೀವು ಕೇಳಲಿಲ್ಲ. ಯಾಕೆಂದರೆ ನಾನು ನಿಮಗೆ ಬೇಕು. ಎರಡನೆಯ ತಪ್ಪು ತಿಳುವಳಿಕೆ.
ಬಿಜ್ಜಳ : ಆದರೆ ಅದಕ್ಕಿಂತ ಮುಖ್ಯ! ನನ್ನಿಂದ ನಿಮ್ಮ ತಲೆ ಹಾರಿಸಲು ಆಗುತ್ತಿರಲಿಲ್ಲ.
ಬಸವಣ್ಣ : ಯಾಕೆ?
ಬಿಜ್ಜಳ : ಚಾಡಿ ಹೇಳಿದವರು ಸಾವಿರವಾದರೆ ಶರಣರು ಹತ್ತಾರು ಸಾವಿರ.
ಬಸವಣ್ಣ : ಅದು ನನ್ನ ತಪ್ಪಾಗಿದ್ದರೆ-
ಬಿಜ್ಜಳ : ಈ ರಾಜ್ಯಕ್ಕೆ ನಾನೋ ದೊರೆ ಅಥವಾ ನೀವೋ ಎಂಬ ಪ್ರಶ್ನೆ ಮತ್ತೆ ಮತ್ತೆ ಏಳುತ್ತದೆ. ಈ ವಿಷಯ ನಿರ್ಧಾರವಾಗಬೇಕು. ಹೇಳಿ, ಈ ರುದ್ರ ಯಾರು?
ಬಸವಣ್ಣ : (ಗಂಭೀರವಾಗಿ, ನಿರ್ದಾಕ್ಷಿಣ್ಯವಾಗಿ) ನಿಮ್ಮ ದೃಷ್ಟಿಯಲ್ಲಿ ಹೊಲೆಯ, ನನ್ನ ದೃಷ್ಟಿಯಲ್ಲಿ ಶರಣ.
ಬಿಜ್ಜಳ : ಶರಣ! ಶರಣ! ಆತ ಹೇಗೆ ಶರಣ?
ಬಸವಣ್ಣ : ತಮ್ಮ ಪ್ರಜೆಗಳ ಬಗ್ಗೆ ತಮಗೆ ಭಟ್ಟ ಮಾಹಿತಿ ಕೊಡುವನೆಂದಿದ್ದೆ.
ಬಿಜ್ಜಳ : ಶರಣನಾಗಲು ಏನು ಯೋಗ್ಯತೆ ಬೇಕು?
ಬಸವಣ್ಣ : ಹಾಗಾದರೆ ಭಟ್ಟ ಮಾಹಿತಿ ಕೊಟ್ಟಿಲ್ಲ?
ಬಿಜ್ಜಳ : ನನ್ನ ಪ್ರಶ್ನೆಗೆ ಉತ್ತರ ಹೇಳಿ?
ಬಸವಣ್ಣ : ನನ್ನ ಮಾತು ಮೊದಲು ಕೇಳಿ. ಅಗ್ನಿರಾಜನ ಕತೆಯಲ್ಲಿ ಮುಖ್ಯವಾದದ್ದನ್ನು ಭಟ್ಟ ಹೇಳಲಿಲ್ಲ.
ಬಿಜ್ಜಳ : ಯಾವುದನ್ನ?
ಬಸವಣ್ಣ : ತನ್ನ ಮಗಳಲ್ಲಿ ಅನುರಕ್ತನಾದ ಅಗ್ನಿರಾಜ ಮೊದಲು ಅಭಿಪ್ರಾಯ ಕೇಳಿದ್ದು ರಾಜ್ಯದ ಸುಶಿಕ್ಷಿತರನ್ನು, ಅವರು ಆ ಮದುವೆ ಸಲ್ಲದು ಅಂದರು. ಅದಕ್ಕೆ ರಾಜ ಆ ವಿದ್ಯಾವಂತರನ್ನೆಲ್ಲ ರಾಜ್ಯದಿಂದ ಅಟ್ಟಿದ. ಆಮೇಲೆ-
ಬಿಜ್ಜಳ : ಆಮೇಲೇನು?
ಬಸವಣ್ಣ : ಮಗಳನ್ನು ಮದುವೆಯಾಗಿ ಅಟ್ಟಹಾಸದಿಂದ ಮೆರೆದ.
ಬಿಜ್ಜಳ : ನೀವಿನ್ನೂ ಈ ರುದ್ರ ಯಾರೆಂದು ಹೇಳಿಲ್ಲ.
ಬಸವಣ್ಣ : ನೀವೇ ಕೇಳಿಕೊಳ್ಳಬಹುದು, ಇನ್ನು.
ಬಿಜ್ಜಳ : ಉದ್ಧಟತನದ ಮಾತು.
ಬಸವಣ್ಣ : ನಿಮಗೆ ಹಾಗೆ ಕಾಣಿಸುತ್ತದೆ.
ಬಿಜ್ಜಳ : ಮತ್ತೆ ಕೆಣಕುತ್ತಿದ್ದೀರಿ.
ಬಸವಣ್ಣ : ಸತ್ಯ ನಿಮಗೆ ಉದ್ಧಟತನದ್ದು. ಉದಾಹರಣೆಗೆ-
ಬಿಜ್ಜಳ : ಏನು?
ಬಸವಣ್ಣ : ಹೊರಗಡೆ ಕೆಲವೇ ನಿಮಿಷಗಳ ಹಿಂದೆ ಆದ ಕೊಲೆ-
ಬಿಜ್ಜಳ : ನಿಮ್ಮ ಶರಣರು ಮಾಡಿದ್ದು.
ಬಸವಣ್ಣ : ಬಹಳ ಸಲ ನಿಮ್ಮನ್ನು ನಾನು ಮೂರ್ಖ ಅಂದಿಲ್ಲ. ಈಗ ಅನ್ನಬೇಕಾಗಿದೆ.
ಬಿಜ್ಜಳ : ಹೀಗೆ ನನ್ನನ್ನು ಬೈದು….
ಬಸವಣ್ಣ : ನಾನು ತಪ್ಪಿಸಿಕೊಳ್ಳಲಾರೆ, ಅಲ್ಲವೆ? ಆದರೆ ಈ ಕೊಲೆ ಮಾಡಿದ್ದು ಶರಣರಲ್ಲ, ಬ್ರಾಹ್ಮಣರು.
ಬಿಜ್ಜಳ : (ನಂಬದೆ, ಆಶ್ಚರ್ಯ ಹತ್ತಿಕ್ಕಿ) ನಿಮಗೆ ಹೇಗೆ ಗೊತ್ತಾಯಿತು?
ಬಸವಣ್ಣ : ನಾನು ಜನರ ಜೊತೆಗಿದ್ದೇನೆ, ನೆನಪಿರಲಿ, ಅವರ ಉಸಿರಿನ ಲಯಬದ್ಧತೆ ಕೂಡ ನಾನು ಬಲ್ಲೆ. ಕೊಲೆ ಮಾಡಿ ಆಪಾದನೆಯನ್ನ ದೊಡ್ಡದು ಮಾಡೋದಕ್ಕೆ ಯತ್ನಿಸಿದ್ದಾರೆ.
ಬಿಜ್ಜಳ : ಇದನ್ನ ನಂಬಬಹುದೇ?
ಬಸವಣ್ಣ : (ಹೊರಟು) ನಂಬಬೇಡಿ. ನಾನು ಹೊರಟೆ. ಈ ಅಧಿಕಾರ ನನಗೆ ಬೇಡವೆಂದು ಅನೇಕ ಸಲ ಹೇಳಿದ್ದೇನೆ. ಹೇಳಿ ಹೇಳಿ ನನಗೇ ನನ್ನ ಮಾತಲ್ಲಿ ನಂಬಿಕೆ ಹೊರಟು ಹೋಗುತ್ತಿದೆ. ಅತ್ತ ಇತ್ತ ಸುಳಿವ ಮನಸ್ಸಿಗೆ ಕಡಿವಾಣ ಹಾಕಬೇಕಾಗಿದೆ. ನನ್ನನ್ನು ನಾನು ಹೆಳವನ್ನ ಮಾಡಿಕೊಳ್ಳಬೇಕಾಗಿದೆ. ದಯವಿಟ್ಟು ನನ್ನನ್ನು ನಂಬಿ. ನನ್ನನ್ನು ಈ ಬಂಧನಗಳಿಂದ ಬಿಡಿಸಿ.
(ಮೌನ, ಬಸವಣ್ಣ ನಿಧಾನಕ್ಕೆ ಮಾತಾಡುವನು)
ನನ್ನನ್ನು ವಿಶ್ವಾಸದಿಂದ ನಡೆಸಿಕೊಂಡಿದ್ದೀರಿ. ನಮ್ಮಿಬ್ಬರ ಮನಸ್ಸು ಕಹಿಯಾಗುವುದಕ್ಕೆ ಮುನ್ನ ನಾನು ಹೊರಡಬೇಕು.
(ಹೋಗುತ್ತಿರುವನು)
ಬಿಜ್ಜಳ : ಬಸವಣ್ಣಾ!
(ಬಸವಣ್ಣ ನಿಲ್ಲುವನು)
ಹೋಗಕೂಡದು.
(ಮೌನ, ಧ್ವನಿ ತಗ್ಗಿಸಿ)
ಇದು- ಅಪ್ಪಣೆಯಲ್ಲ, ಬೇಡಿಕೆ.
(ಮೌನ)
ನಾನು ಯಾರನ್ನೂ ಎಂದೂ ಬೇಡಿಲ್ಲ. ಬೇಡುತ್ತಿದ್ದೇನೆ. ಇತ್ತ ತಿರುಗಿ.
(ಬಸವಣ್ಣ ತಿರುಗಿ ಕತ್ತು ತಗ್ಗಿಸಿ ನಿಂತಿರುವನು)
ನೀವಿಲ್ಲದೆ ನನಗೆ ಬದುಕಿಲ್ಲ ಅನ್ನುವುದು ನಿಮಗೆ ಗೊತ್ತಿದೆ. ನಾನು ನಿಮ್ಮ ಶರಣನಲ್ಲ, ಆದರೂ ನನ್ನ ಮಾತಲ್ಲಿ ನಂಬಿಕೆಯಿದೆ ನಿಮಗೆ. ಪುಸ್ತಕ, ಹೆಂಗಸು, ಸ್ನೇಹಿತರು, ಸಿಂಹಾಸನ- ಎಲ್ಲ ತೊರೆದು ನಿಮ್ಮೊಂದಿಗೆ ಮೈ ಮರೆತಿದ್ದೇನೆ, ನಾನು. ನೀವು ದೇವಸ್ಥಾನದೊಳಗೆ ಕಾಲಿಡುವುದಿಲ್ಲ, ಶರಣರಲ್ಲದವರ ಮನೆಯತ್ತ ತಿರುಗಿ ಕೂಡ ನೋಡುವುದಿಲ್ಲ, ಬಿದ್ದ ಬಸದಿಗಳನ್ನು ಕಟ್ಟಿಸುವುದಿಲ್ಲ- ಆದರೆ ಅದೆಲ್ಲದರ ವಿರುದ್ಧ ಒಂದು ಮಾತಾಡಿಲ್ಲ ನಾನು.
(ಮೌನ)
ನಿಮ್ಮ ಕೆಲಸದಲ್ಲಿ ನನಗೆ ನಂಬಿಕೆಯಿದೆ. ಆದರೆ ನಿಮ್ಮಿಂದ ಹೊರಳಿ ಜನರನ್ನು ನೋಡಿದೊಡನೆ ನನಗೆ ನಗೆ ಬರುತ್ತದೆ. ಅಸಹ್ಯವಾಗುತ್ತದೆ, ನೀವು ಇಲ್ಲಿಂದ ಹೋದರೆ ಸಹಸ್ರಾರು ಜನ ಶರಣರು ತಬ್ಬಲಿಗಳಾಗುತ್ತಾರೆ.
(ಮೌನ)
ನನಗೆ ಮತ್ತೊಂದರಲ್ಲಿ ನಂಬಿಕೆಯಿದೆ.
ಬಸವಣ್ಣ : ಯಾವುದರಲ್ಲಿ?
ಬಿಜ್ಜಳ : ನನ್ನ ಅಧಿಕಾರದಲ್ಲಿ.
ಬಸವಣ್ಣ : ಈಗೇನು ಮಾಡಬೇಕು ನಾನು?
ಬಿಜ್ಜಳ : ಹೇಳಿ, ಒಬ್ಬ ಶರಣನಾಗಿದ್ದಾನೆ ಎಂಬುದಕ್ಕೆ ಏನು ಗುರುತು?
ಬಸವಣ್ಣ : ಅಂಥ ಪ್ರಶ್ನೆಗಳು ಸುಲಭ, ಚರ್ಚೆಗೆ ಕಷ್ಟ.
ಬಿಜ್ಜಳ : ಕಷ್ಟ! ಯಾಕೆ ಕಷ್ಟ! ಎಂಥ ಭಾವನೆಯನ್ನೂ ಮಾತಲ್ಲಿ ತುರುಕಿ ಒಪ್ಪಿಸಬಲ್ಲ ನಿಮಗೆ ಹೇಗೆ ಕಷ್ಟ?
(ಮೌನ. ಕ್ರೌರ್ಯದಿಂದ)
ನೀನು ಬ್ರಾಹ್ಮಣ! ಸಂಸ್ಕೃತದಿಂದ ರಾಜಮಹಾರಾಜರನ್ನು ಹತೋಟಿಯಲ್ಲಿಡುತ್ತಿದ್ದ ನೀನು ಈಗ ಕನ್ನಡದಿಂದ ಶೂದ್ರರನ್ನು ಶರಣರನ್ನಾಗಿಸಿ ಹತೋಟಿಯಲ್ಲಿಡುತ್ತೀದ್ದೀ!
ಬಸವಣ್ಣ : ಅದು ದೊಡ್ಡ ಆಪಾದನೆ. ತಮ್ಮ ದಂಡದಿಂದ ಹತೋಟಿ ಸಾಧ್ಯವಾಗದೇ ಹೋದರೆ-
ಬಿಜ್ಜಳ : ಆಪಾದನೆಯಲ್ಲ, ಸತ್ಯ. ಎಲ್ಲರೂ ಶರಣರಾಗಲು, ಇದ್ದಕ್ಕಿದ್ದಂತೆ ಭಕ್ತರಾಗಲು ಹೇಗೆ ಸಾಧ್ಯ? ಕುಡಿಯುವ, ಕೊಂದು ತಿನ್ನುವ ಅಭ್ಯಾಸ ನಿಮ್ಮ ಮಾತುಗಳಿಂದ ತೊಳೆದುಹೋಗುತ್ತದೆಂದು ನಂಬುವುದು ಹೇಗೆ ಸಾಧ್ಯ? ಬಸವಣ್ಣ, ನೀವು ಕುರಿ ಕೊಲ್ಲುವುದನ್ನು ತಪ್ಪಿಸಿದರೆ ಈ ಜನ ಮನುಷ್ಯರನ್ನು ಕೊಲ್ಲುತ್ತಾರೆ! ನಾವಿವತ್ತು ನಿಮ್ಮ ರುದ್ರನನ್ನು ಬಲಿಕೊಡದಿದ್ದರೆ ಈ ಜನ ನನ್ನನ್ನು ಬಲಿ ಕೊಡುತ್ತಾರೆ
(ಧ್ವನಿ ತಗ್ಗಿಸಿ) ನಿಮ್ಮ ಕಾವಿ ಧರಿಸಿದ ಶರಣ ಜನ ಸಾಲುಸಾಲಾಗಿ ಊಟದ ಮನೆಗೆ ಹೋಗುತ್ತಿರುವುದನ್ನು ನೋಡಿ ನಕ್ಕಿದ್ದೇನೆ ಬಸವಣ್ಣ. ಭಕ್ತರಿಗೆ ಹೊಟ್ಟೆ ಕೂಡ ಇದೆಯೆಂಬುದನ್ನು ಕಂಡು ವಿಸ್ಮಯಗೊಂಡಿದ್ದೇನೆ. ಅವರ ಈ ಭಜನೆಯ ಗದ್ದಲ ನನಗೆ ತಮಾಷೆ ಅನ್ನಿಸಿದೆ. ಈ ಊಟ, ಈ ಭಜನೆಯ ಅವಸರದಲ್ಲಿ ಪಾಳುಬಿದ್ದ ಗದ್ದೆಗಳನ್ನು ನೀವು ನೋಡಿಲ್ಲ. ಬ್ರಾಹ್ಮಣರ ಮಂತ್ರಗಳಂತೆಯೇ
ಶರಣರ ವಚನಗಳು ಕೂಡ ಉತ್ತು ಬೆಳೆ ಕೊಡಲಾರವು.
ನಾಳೆ ಸಂಕ್ರಾಂತಿ, ಸೂರ್ಯ ತನ್ನ ಪಥ ಬದಲಿಸುವ ವೇಳೆ, ಭೂಮಿಗೆ ರಕ್ತ ಎರೆಯಬೇಕು.
ಬಸವಣ್ಣ : ಈ ರಕ್ತದಾಹ ನನಗೆ ಅರ್ಥವಾಗುತ್ತಿಲ್ಲ.
ಬಿಜ್ಜಳ : ತಮ್ಮ ಅಹಿಂಸೆಯ ಹುಚ್ಚು ಕೂಡ ನನಗೆ ಅರ್ಥವಾಗುತ್ತಿಲ್ಲ. ಯೋಚಿಸಿ. ಮುಂಗಾರಲ್ಲಿ ಹೊಡೆವ ಸಿಡಿಲಿಗೆ ಹಿಂಸೆ, ಅಹಿಂಸೆಯ ಪರಿವೆಯಿಲ್ಲ! ಉಕ್ಕುವ ಸಮುದ್ರ ಸಾವಿರಾರು ಜೀವಗಳನ್ನು ಕೊಂದು ಹಿಂಸೆ, ಅಹಿಂಸೆಯ ತೊಳಲಾಟವಿಲ್ಲದೆ ಹಿಂದಕ್ಕೆ ಸರಿಯುತ್ತದೆ, ಬಿರುಗಾಳಿಗೆ ಸಿಕ್ಕ ಮರ ಬಿದ್ದೊಡನೆ ಅಕ್ಕಪಕ್ಕದ ಹಕ್ಕಿ ಪಕ್ಷಿಗಳು ನೆಲಕ್ಕೆ ಬಿದ್ದು ಸಾಯುತ್ತವೆ. ಭೂಮಿಯ ಒಡಲಿಂದ ಕತ್ತು ಚಾಚುವ ಸಸಿಗಳು ಹಲವೊಮ್ಮೆ ಶಕ್ತಿ ಸಾಲದೆ ಕಮರಿಹೋಗುತ್ತವೆ. ಸಂಕ್ರಾಂತಿಯಂದು ಸೂರ್ಯ ದಕ್ಷಿಣಕ್ಕೆ ಸರಿಯುತ್ತಾನೆ, ಗರ್ಭಿಣಿ ಭೂಮಿತಾಯಿಯ ಬಯಕೆ ತೀರಿಸಬೇಕಾದ್ದು ನನ್ನ ಕರ್ತವ್ಯ.
(ಹೊರಗಡೆ ಘೋಷಣೆಗಳ ಗದ್ದಲ ಶುರುವಾಗುತ್ತದೆ)
ವ್ಯಾಘ್ರ ಇದ್ದಕ್ಕಿದ್ದಂತೆ ಕೂಗುತ್ತಿದೆ….
ಬಸವಣ್ಣ : ಮನುಷ್ಯ ಜಗತ್ತು ಬಿಟ್ಟು ದೊರೆಗಳು ನಿಸರ್ಗದ ಸಂಕೇತಗಳಲ್ಲಿ ಮುಳುಗುತ್ತಿದ್ದೀರಿ.
ಬಿಜ್ಜಳ : ಅದು ಕೇವಲ ವ್ಯಂಗ್ಯವಾದೀತು-
ಬಸವಣ್ಣ : ಹೇಗೆ? ಹೇಗೆ ವ್ಯಂಗ್ಯ? ಸಮುದ್ರ, ಬಿರುಗಾಳಿ, ಬಿರು ಮಳೆಗಳ ಉದಾಹರಣೆಯಲ್ಲಿ ವಾಸ್ತವ ಸ್ಥಿತಿಯಿಂದ ತಪ್ಪಿಸಿಕೊಳ್ಳುವವನು ಮನುಷ್ಯ ಮಾತ್ರ. ಇಂಥ ಹೋಲಿಕೆಗಳು ಸಮುದ್ರದ ಆಸಕ್ತಿ ಕೆರಳಿಸಬಲ್ಲವೆಂದು ನನಗನ್ನಿಸುವುದಿಲ್ಲ. ತಮಗೂ ಗೊತ್ತಿರಬೇಕು- ಹುಲಿಗಳ ಜಗತ್ತಿನಲ್ಲಿ ಬಡ ಹುಲಿ ಶ್ರೀಮಂತ ಹುಲಿ ಪುರೋಹಿತ ಹುಲಿ ಹೊಲೆಯ ಹುಲಿ ಇರುವುದಿಲ್ಲ; ಇದೆಲ್ಲಾ ಮನುಷ್ಯರಲ್ಲಿ ಮಾತ್ರ. ಸಮುದ್ರಕ್ಕೆ ಕೂಡ ಮೇಲು-ಕೀಳಿನ ಪರಿವೆಯಿಲ್ಲ. ಸೂರ್ಯ ಅರಮನೆ, ದೇವಸ್ಥಾನಗಳ ಮೇಲೆ ಮಾತ್ರ ಬೆಳಗುವುದಿಲ್ಲ. ಆದರೆ ಅದು ಮನುಷ್ಯನ ಕೈಯಲ್ಲಿದ್ದಿದ್ದರೆ ಅದನ್ನೂ ಮಾಡಿಸುತ್ತಿದ್ದ.
ಬಿಜ್ಜಳ : ಅದನ್ನೇ ನಾನು ಹೇಳುತ್ತಿರುವುದು (ಎಂದು ತರ್ಕದ ಸೋಲಿನಿಂದ ನಕ್ಕು) ನನಗೆ ನಿಮ್ಮಷ್ಟು ಸೊಗಸಾಗಿ ಹೇಳಬರುವುದಿಲ್ಲ- ಅಷ್ಟೇ, (ಹೆಚ್ಚು ಗಂಭೀರವಾಗಿ) ನಾನು ಮತ್ತು ನೀವು ಮಾಡುವ ಎಲ್ಲ ವರ್ಗೀಕರಣ ಮೀರಿ ಸೂರ್ಯ ಬೆಳಗುತ್ತಾನೆ; ಅಂದರೆ- ನಮ್ಮ ಪಾಠ, ಪ್ರವಚನ… ವಚನಗಳನ್ನು ಮೀರಿ ಜೀವಶಕ್ತಿ ಉಕ್ಕುತ್ತದೆ. ಇದಕ್ಕೆ ಅಡ್ಡ ಬಂದಾತ… ಜೀವ ವಿರೋಧಿ ತಾನೆ?
(ದೂತನೊಬ್ಬ ಪ್ರವೇಶಿಸುತ್ತಾನೆ)
ದೂತ : ಪ್ರಭುಗಳು ಮನ್ನಿಸಬೇಕು. ತಮ್ಮ ಅಪ್ಪಣೆಯಂತೆ ರುದ್ರನನ್ನು
ಕರೆತರಲಾಗಿದೆ.
ಬಿಜ್ಜಳ: ಉಡುಗಿ ಎಲ್ಲಿ?
ದೂತ: ಷಾದೇವಿ ಬರಲು ನಿರಾಕರಿಸಿದರು.
ಬಸವಣ್ಣ : ಆಕೆ?
ದೂತ: ಕೆ ಬೇಟೆಗೆ ಹೋದರು.
ಬಿಜ್ಜಳ: ಅರಿ, ಹೋಗು, ರುದ್ರನನ್ನು ಕಳುಹಿಸು. (ದೂತ ಹೋಗುವನು) ನೋಡಿದಿರಾ! ನಮ್ಮ ಮಾತಿಗೆ ಉದಾಹರಣೆ ದೊರೆಯುತ್ತಿದೆ!
ನಗುವನು)
ಬಸವಣ್ಣ: ಉಡುಗಿ ವಿಚಿತ್ರವಾಗಿ ತೋರುತ್ತಾಳೆ.
ಬಿಜ್ಜಳ : ದರೆ ನನಗೆ ಮಾತ್ರ ಕ್ಷಣಕ್ಷಣಕ್ಕೆ ಈ ಪ್ರಕರಣದಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ! ಈ ‘ಪ್ರೇಮ’ ನಿಜಕ್ಕೂ ಗೂಢಾರ್ಥಗಳಿಂದ ಕೂಡಿದೆ.
ರುದ್ರ ಬರುವನು. ಬಿಜ್ಜಳ ಹೆಚ್ಚು ಲವಲವಿಕೆಯಿಂದಿದ್ದಾನೆ)
ರ್ರುದ್ರ : ಉದ್ರ ಅಂತ ಪ್ರಭು.
ಬಿಜ್ಜಳ : ಇನ್ನ ಹೆಂಡತಿ ಯಾಕೆ ಬರಲಿಲ್ಲ.
ರ್ರುದ್ರ : ಅಂದಿನ್ನೂ ಮದುವ್ಯಾಗಿಲ್ಲ ಸ್ವಾಮಿ.
ಬಿಜ್ಜಳ : ತುಂಟತನದಿಂದ) ನೀನಿನ್ನೂ ಮದುವೆಯಾಗದ ಹುಡುಗಿ ಯಾಕೆ ಬರಲಿಲ್ಲ?
ರ್ರುದ್ರ : ಕೀಗೆ ತುಂಬಾ ದಣಿವಾಗಿತ್ತು ಸ್ವಾಮಿ.
ಬಿಜ್ಜಳ : ಉಳ್ಳು, ಆಕೆ ಬೇಟೆಗೆ ಹೋದಳೆಂದು ನನ್ನ ಸೇವಕ ಹೇಳುತ್ತಾನೆ. ಬ್ರಾಹ್ಮಣರ ಹುಡುಗಿಯೊಬ್ಬಳು ಬೇಟೆಗೆ ಹೋದದ್ದು ಇದೇ ಮೊದಲ ಸಲ, ಅಲ್ಲವೇ ಬಸವಣ್ಣ? ಅಥವಾ ಎರಡನೆ ಸಲವೋ?
ಬಸವಣ್ಣ : ಆವೇ ಹೇಳಬೇಕು.
ಬಿಜ್ಜಳ : ತ….ಆಕೆಯ ಮೊದಲ ಬೇಟೆ, ಅಲ್ಲವೆ? (ರುದ್ರನಿಗೆ) ನೀನು ಶರಣ ಆದದ್ದು ಯಾವಾಗ?
ರ್ರುದ್ರ : ಊರು ವಾರದ ಕೆಳಗೆ ಪ್ರಭು.
ಬಿಜ್ಜಳ : ಈನು ಶರಣ ಅನ್ನೋದಕ್ಕೆ ಗುರುತೇನು?
ರ್ರುದ್ರ : ಎಲ್ಲ ಗುರುತನ್ನ ಕಿತ್ತೊಗೆಯೋದೆ ಶರಣತನ ಅಂದ-
ಬಿಜ್ಜಳ : ಂತ ಬಸವಣ್ಣ ಹೇಳಿದ್ದಾರೆ. ಉತ್ತರಿಸಿ, ಶರಣನಾಗಲು ನಿನ್ನ ಯೋಗ್ಯತೆ ಏನು?
ರ್ರುದ್ರ : ಉತ್ತರಕ್ಕಾಗಿ ತಡಕಾಡುತ್ತ) ಯಂಥೋರೂ ಶರಣ ಆಗ್ಬಹುದು ಅಂತ-
ಬಿಜ್ಜಳ : ಂತ ಬಸವಣ್ಣ ಹೇಳಿದ್ದಾರೆ!
ಬಸವಣ್ಣ : ಉದ್ರ ಎದೆಗೆಡಬೇಡ, ಪ್ರಭುಗಳು ನಿನ್ನ ಮೇಲೆ ಕೋಪಗೊಂಡಿದ್ದಾರೆ-
ಬಿಜ್ಜಳ : ಉಳ್ಳು, ನನಗೇಕೆ ಕೋಪ ಬರಬೇಕು? ನೀವೇ ಹೇಳಿ ಬಸವಣ್ಣ, ನನಗೇಕೆ ಕೋಪ ಬರಬೇಕು?
ಬಸವಣ್ಣ : ಗತಾನೆ ತಾವು ರುದ್ರನ ಅತ್ಯಾಚಾರ-
ಬಿಜ್ಜಳ : ತತ್ತರಿಸುತ್ತ)- ಅತ್ಯಾಚಾರ! ನೋಡಿ, ನಿಮ್ಮ ಬಾಯಲ್ಲೇ ಅತ್ಯಾಚಾರದ ಮಾತು ಬರುತ್ತವೆ. ಈ ಮಾತುಗಳೇ ಒಂದು ಸಮಸ್ಯೆ. ಪ್ರೇಮಾ, ಕಾಮ, ಅತ್ಯಾಚಾರ, ವ್ಯಕ್ತಿಪ್ರೇಮ, ಜಾತಿಪ್ರೇಮ, ನಿಷ್ಕಾಮ ಪ್ರೇಮ- ಯಾವುದನ್ನ ಮಾಡಲು ಹೋಗಿ ಯಾವುದನ್ನ ಮಾಡುತ್ತೇವೋ ದೇವರೇ ಬಲ್ಲ; ಅದರಲ್ಲಿ ನಿನ್ನದು ಯಾವುದು?
ರ್ರುದ್ರ : ಂದರೆ….
ಬಸವಣ್ಣ : ಓಡಿದಿರಾ ಪ್ರಭು! ಪ್ರೇಮಿಸಿದ ವ್ಯಕ್ತಿಗೆ ತನ್ನ ಪ್ರೇಮದ ವಿಚಾರವೇ ಗೊತ್ತಿಲ್ಲ! ಅದಕ್ಕೆ ಹೆಸರಿಟ್ಟು ಪಾಪ ಮಾಡುವವರು ನಮ್ಮಂಥವರು.
ಬಿಜ್ಜಳ : ನಾದರೂ ಇರಲಿ; ನಾಳೆ ಸಂಕ್ರಾಂತಿ ಹಬ್ಬಕ್ಕೆ ನಾನು ಮತ್ತು ಬಸವಣ್ಣ ನಿಮ್ಮ ಊರಿಗೆ ಬರುತ್ತೇವೆ.
ಬಸವಣ್ಣ : ರಭುಗಳು ನನಗೆ ತಿಳಿಸಿರಲಿಲ್ಲ.
ಬಿಜ್ಜಳ : ಗ ತಿಳಿಸುತ್ತಿದ್ದೇನೆ.
ಬಸವಣ್ಣ: ಗಲಿ ಪ್ರಭು.
ರ್ರುದ್ರ : ಅಂತೋಷ ಪ್ರಭು.
ಬಸವಣ್ಣ : ಓಗು. ದೊರೆಗಳ ಆಗಮನಕ್ಕೆ ಊರಲ್ಲಿ ಸಿದ್ಧತೆ ನಡೆಸು-
ರುದ್ರ ಹೊರಡುವನು)
ಬಿಜ್ಜಳ : ಇಲ್ಲು, ನಾಳೆ ನಾನು ಮುಖ್ಯವಲ್ಲ. ಬಸವಣ್ಣ ನಿಮ್ಮ ಅತಿಥಿ. ಶರಣ ಬಸವಣ್ಣನವರ ಆಗಮನಕ್ಕೆ ಸಿದ್ಧತೆ ಮಾಡು. ನಿಮ್ಮೂರ ಶರಣರನ್ನು ನಾನು ನೋಡಬೇಕಾಗಿದೆ. ಶರಣರ ಸಭೆಯಲ್ಲಿ ಭಾಗವಹಿಸಬೇಕೆಂದು ಆಸೆಯಾಗಿದೆ.
ರ್ರುದ್ರ : ಪ್ಪಣೆ ಪ್ರಭು.
(ರುದ್ರ ಹೋಗುವನು)
ಬಿಜ್ಜಳ : ಗ ನಮ್ಮ ಜಗಳ ಬಗೆಹರಿಯಿತು. ದಯವಿಟ್ಟು ಮತ್ತೆ ನನ್ನ ಮನಸ್ಸು ಕಲಕುವ ಶರಣಗಿರಣರ ವಿಚಾರ ಎತ್ತಬೇಡಿ.
ಬಸವಣ್ಣ : ಆನಿನ್ನು ಹೋಗಿ-
ಹೊರಡುವನು)
ಬಿಜ್ಜಳ : ಊತುಕೊಳ್ಳಿ. ನೀವಿಲ್ಲದಿದ್ದಾಗ ನನಗೆ ಏಕಾಂತತೆಯ ಭಯ. ಏನನ್ನಾದರೂ ಮಾತಾಡಿ.
ಬಸವಣ್ಣ ನಿಲ್ಲುವನು)
ಬಸವಣ್ಣ : ರಭುಗಳಿಗೆ ವಿಶ್ರಾಂತಿ ಬೇಕೆಂದು ಕಾಣುತ್ತದೆ.
ಬಿಜ್ಜಳ : ಅತ್ತೆ ನನ್ನ ಕಿರೀಟ, ವಜ್ರ, ಆನೆ, ಕುದುರೆಗಳ ಲೆಕ್ಕ ಹಾಕಿ ನನಗೆ ತಲೆನೋವು ತರಬೇಡಿ.
ಬಸವಣ್ಣ : ಕೂತು ಯೋಚಿಸಿ) ಆಶ್ಚರ್ಯ ಪ್ರಭು. ನಾನು ಸಮಾಜದ ಅನ್ಯಾಯ, ದಬ್ಬಾಳಿಕೆಗಳನ್ನು ಪ್ರತಿಭಟಸಿತ್ತೇನೆ. ಆದರೆ ಅನ್ಯಾಯಕ್ಕೆ ತುತ್ತಾದ ಜನ ಬಂದು ಕಿರೀಟ, ಒಬ್ಬ ರಾಜರನ್ನ ನೋಡಿ ತಮ್ಮೆಲ್ಲ ನೋವನ್ನು ಮರೆಯುವುದನ್ನು ನೋಡಿ ಬೆರಗಾಗಿದ್ದೇನೆ. ಇದನ್ನು ಹೇಗೆ ವಿವರಿಸಲಿ? ಅವರಿಗೆ ಇದರಿಂದ ಸಂತೋಷವಾಗುವುದಾದರೆ ಅದನ್ನು ಸಂತೋಷವಲ್ಲ ಎಂದು ಹೇಗೆ ಹೇಳಲಿ?
ಬಿಜ್ಜಳ : ನಿಜವಾದ ಪ್ರೀತಿಯಿಂದ) ಇದು ನಿಜವಾದ ಬಸವಣ್ಣ. ನನ್ನ ವ್ಯವಸ್ಥೆ, ನಿಮ್ಮ ಕ್ರಾಂತಿ- ಎರಡನ್ನೂ ಮೀರಿದ್ದು ಇದ್ದೀತು- ಅಲ್ಲವೆ?
ಬಸವಣ್ಣ : ಅನ್ನ ಮಾತಲ್ಲೇ ನನ್ನನ್ನು ಸಿಕ್ಕಿಸಿ ಬೇಕಾದರೆ ಸಾಯಿಸಿ, ಆದರೆ-
ಬಿಜ್ಜಳ : ದರೆಗೀದರೆಯ ಸೆರೆಯಲ್ಲಿ ಸಿಕ್ಕು ನರಳಬೇಡಿ. ಕೊಂಚ ಮಂದಹಾಸ ಬೀರಿ ಬಸವಣ್ಣ. ನಾನು ನನ್ನ ಮಾತಲ್ಲಿ ಸಿಕ್ಕು, ನೀವು ನಿಮ್ಮ ಮಾತಲ್ಲಿ ಸಿಕ್ಕು ಸಾಯುತ್ತೇವೆ. ಇಲ್ಲಿ ಪಟ್ಟ ಸುಖ ಮಾತ್ರ ಎಲ್ಲೆಲ್ಲೂ ಹಬ್ಬುತ್ತೆ, ಆದರೆ-
ಬಸವಣ್ಣ : ಇಮ್ಮ ಆದರೆಗೀದರೆ-
ಬಿಜ್ಜಳ : ಇಮ್ಮ ಪ್ರಭಾವ! ಮೊದಲು ನಿಮ್ಮನ್ನು ಮೆಚ್ಚಿದ್ದು ಕೇವಲ ನಿಮಗಾಗಿ! ಆಮೇಲೆ ನಿಮ್ಮ ಮಾತೂ ನನ್ನ ಬೆನ್ನಟ್ಟಿದವು. ನಿಮ್ಮ ಹಾಗೆ ಕೊಂಚವೂ ನಗದೆ, ಹೀಗೆ ಹಲ್ಲುಕಚ್ಚಿ-
ಇದ್ದಕ್ಕಿದ್ದಂತೆ ನಕ್ಕು)
ಅರತೇಬಿಟ್ಟಿದ್ದೇ ! ಓ ಹೋ ಹೋ!
ಬಸವಣ್ಣ : ನು?
ಬಿಜ್ಜಳ : ಅನ್ನ ಹಲ್ಲೊಂದು ಬಿದ್ದುಹೋಗಿದೆ! ಚಕ್ರವರ್ತಿಯ ಹಲ್ಲು ಬಿದ್ದಿದೆ! ನಿನ್ನೆ ರಾತ್ರಿ ಆ ಕೇರಳದ ಜನ-
ಬಸವಣ್ಣ : ತುಂಟತನದಿಂದ) ಜನ ಅಲ್ಲ, ಕೇರಳದ ಹುಡುಗಿಯರು-
ಬಿಜ್ಜಳ : ಓಡಿ! ನೋಡಿ! ನೀವೇ ನನ್ನ ಅಶ್ಲೀಲ ಯೋಚನೆಗೆ ಕಾರಣ!
ಬಸವಣ್ಣ : ಒಳ್ಳೇ ಕಾರ್ಯದಲ್ಲಿ ಹಲ್ಲು ಬಿದ್ದಿದೆ. ಅದಕ್ಕೆ-
ಬಿಜ್ಜಳ : ಈವೆಷ್ಟೇ ಗಂಭೀರವಾಗಿ ಕಂಡರೂ-
ಗಂಭೀರವಾಗಿ, ಸ್ಪಷ್ಟವಾಗಿ, ತನಗೇ ಎಂಬಂತೆ)
ಬಸವಣ್ಣ : ಆಂಭೀರ್ಯ! ನಿಜವಾದ ಗಾಂಭೀರ್ಯ ನೋವಿನಲ್ಲಿದೆ ಬಿಜ್ಜಳರೇ. ನನ್ನ ನೋವು ಒಂದು ಬಗೆಯದಲ್ಲ. (ಹೆಚ್ಚು ಲವಲವಿಕೆಯಿಂದ) ಉದಾಹರಣೆಗೆ, ನಿಮ್ಮ ಹಲ್ಲನ್ನು ಎಲ್ಲಿ ಎಸೆದಿರಿ? ನಾಳೆ ಚಕ್ರವರ್ತಿಗೆ ಹಲ್ಲು ಬಿದ್ದಿದೆ ಅಂತ ಡಂಗುರ ಸಾರಿ; ಇಡೀ ದೇಶವೇ ಆಶ್ಚರ್ಯ ಸಂಭ್ರಮದಿಂದ ಎದ್ದು ನಿಲ್ಲುತ್ತದೆ. ನಾಳೆ ನಾನು ಜೋಳದ ರಾಶಿಯನ್ನು ಮುತ್ತಾಗಿಸಲಿ; ಇಡೀ ದೇಶವೇ ನನ್ನ ಮನೆಯೆದುರು ನೆರೆಯುತ್ತದೆ. ಅಂಥ ವೇಳೆಯಲ್ಲಿ ನನ್ನ ಧೈರ್ಯವೆಲ್ಲ ಹೊರಟು ಹೋಗಿ ಭಿಕಾರಿಯಂತಾಗಿ ಸಂಗಮನ ಮರೆ ಹೋಗುತ್ತೇನೆ. ಕೆಲವು ಸಲ ಈ ಜನರ ಗೋಡೆಗೆ ತಲೆ ಚಚ್ಚಿಕೊಳ್ಳುತ್ತಾ-
ಬಿಜ್ಜಳ : ನಕ್ಕು) ಈಗ ನಿಮ್ಮ ಮುಖ ಹೇಗೆ ಕಾಣುತ್ತೆ!
ಬಸವಣ್ಣ : ಮಂದ ನಗೆ) ಹೇಗೆ?
ಬಿಜ್ಜಳ : ಯೋಚಿಸುತ್ತಾ) ಚಂದ್ರನ ಹಾಗೆ?-ಛಿ!
ಬಸವಣ್ಣ : ಆಕೆ?
ಬಿಜ್ಜಳ : ಉಖ ನಿಜಕ್ಕೂ ಚಂದ್ರನ ಹಾಗೆ ಗುಂಡಗಿದ್ದರೆ, ಸೀಳಿದ್ದರೆ, ಬಾಗಿದ್ದರೆ, ಎಷ್ಟು ಅಸಹ್ಯ! ಅದಕ್ಕೆ ನೋಡಿ ನನಗೆ ಕಾವ್ಯ ವರ್ಣನೆ ಬೇಸರ ತರುತ್ತೆ.
ಬಸವಣ್ಣ : ಮುಗುಳ್ನಗುತ್ತ) ಕಾವ್ಯ ಬದುಕಿಗೆ ಕಂಪು ಕೊಡುತ್ತೆ ಪ್ರಭು.
ಬಿಜ್ಜಳ : ಔದು. ಕೆಲವರಿಗೆ ಕಂಪು ಕಾವ್ಯದಿಂದ ಬರುತ್ತೆ, ಮತ್ತೆ ಕೆಲವರಿಗೆ ಕನ್ಯೆಯರಿಂದ ಬರುತ್ತೆ, ಕನ್ಯೆಯರಿಗೆ ಅಭಾವ ಬಂದಾಗ ಕಾವ್ಯಕ್ಕೆ, ಧರ್ಮಕ್ಕೆ ಹೋಗುತ್ತೇವೆ. ನಿಮ್ಮ ಹರ್ಷದ ಗಳಿಗೆಯಲ್ಲಿ ಹೇಳಿದ್ದೀರಿ- ನೆನಪಿದೆಯ: ಗಂಧವತೀ ಪೃಥವೀ.
ಬಸವಣ್ಣ : ಎನಪಿಲ್ಲ.
ಬಿಜ್ಜಳ : ಈವು ಮಾತಾಡುತ್ತೀರಿ; ನಾನು ಮಾತಿನ ಹಿಂದಿನ ಕಂಪ ಹುಡುಕುತ್ತೇನೇ. ಬಡವರ ಚಿಂದಿಬಟ್ಟೆಗಳ ಮೇಲೆ ಕಣ್ಣು ನೆಟ್ಟ ನಿಮಗೆ ಅವರ ಗಂಧವತೀ ಪೃಥಿವಿಯ ಇರವು ಹೇಗೆ ತಿಳಿಯಬೇಕು-
ಬಸವಣ್ಣ : ಅನ್ನ ಮಾತಲ್ಲಿ ನನ್ನ ಸಿಕ್ಕಿಸಬೇಡಿ-
ಬಿಜ್ಜಳ : ಧ್ವನಿಯೆತ್ತರಿಸಿ, ಮುಖ್ಯಾಂಶಕ್ಕೆ ಬಂದು) ಭೂಮಿಯ ವಾಸನೆ ನೋಡಿ ಎಷ್ಟು ದಿನವಾಯಿತು! ಹುಡುಗಿಯೊಬ್ಬಳು ಈ ವಾಸನೆಗೆ ಮರುಳಾಗಬಹುದೆಂಬ ಸಂದೇಹ ಕೂಡ ನಿಮಗೆ ಬರುತ್ತಿಲ್ಲ.
ಬಸವಣ್ಣ ಕುತೂಹಲದಿಂದ ನೋಡುತ್ತಿದ್ದಾಗ)
ಆಳೆಯ ಸಂಕ್ರಾಂತಿ ನಮಗೆ ಮತ್ತೊಮ್ಮೆ ಭೂಮಿಯ ವಾಸನೆ ತರಬೇಕು. ಮಾತಿನಲ್ಲಿ ಮುಳುಗಿದ ನಮಗೆ ನಾಳೆ ರುದ್ರನ ರಕ್ತ ಭೂಮಿಯ ನೆನಪು ಮಾಡಿಕೊಡಬೇಕು!
ಕತ್ತಲು)

ಐದನೆಯ ದೃಶ್ಯ

ಮೊದಲನೆ ದೃಶ್ಯದಂತೆ. ಸಂಕ್ರಾಂತಿ ಹಬ್ಬದ ಸಿದ್ಧತೆ ನಡೆದಿದೆ. ಗರಿಯುಳ್ಳ ಕಬ್ಬು ಮತ್ತು ಮಾವಿನ ಸೊಪ್ಪು ಕಟ್ಟುತ್ತಿರುವ ಹಳ್ಳಿಗರು. ಮೊದಲ ಮತ್ತು ಮೂರನೆ ದೃಶ್ಯದ ‘ವ್ಯಕ್ತಿ’ಗಳೂ ಇದ್ದಾರೆ. ಉಜ್ಜ ಉತ್ಸಾಹದಿಂದ ಹಾಡಿಕೊಳ್ಳುತ್ತ ಕೆಲಸ ಮಾಡುವವರಿಗೆ ನೆರವಾಗುತ್ತಿದ್ದಾನೆ. ನಾಲ್ಕೈದು ಜನ ಅವನ ಮೇಳದಂತೆ-ಕೆಲಸ ಮಾಡುತ್ತಲೇ-ಹಾಡಿನ ಸಾಲುಗಳನ್ನು ಪುನರುಚ್ಚರಿಸುತ್ತಾರೆ)
ಉಜ್ಜ : (ಹಾಡುವನು)
ಗೆದ್ದೇ ಗೆಲ್ತಾನಂತ ನಾನು ಮುಂಚೆ ಹೇಳಿದ್ದೆ! ಮಗ,
ಕಡವೆ ದಾಟಿ ಬರ್ತಾನಂತ ಕೂಗಿ ಹೇಳಿದ್ದೆ;
ಏಳು ಹೆಡೆಯ ಹಾವ ಹಿಡಿದು ಬರ್ತಾನಂದಿದ್ದೆ ! ಮಗ,
ಹತ್ತು ಮೆಟ್ಟಿನ ಹುಲಿಯ ಗೆದ್ದು ಬರ್ತಾನಂದಿದ್ದೆ….
ಹೊಲೇರ ಹಟ್ಟಿ ಹ್ಯಂಗೆ ನೋಡು ಚಂದಾಗೈತಿ! ಈಗ
ಊರ ಮುಂದಲ ಕರೀಯವ್ವ ಕುಣದಂಗೈತಿ…
ಗೆದ್ದೇ ಗೆಲ್ತಾನಂತ ನಾನು….
ವ್ಯಕ್ತಿ ೧ : ಪದ ಹೇಳ್ತಾ ಕುಂತುಬಿಟ್ಯಲ್ಲ ಉಜ್ಜಣ್ಣ, ಮಗ ಎಲ್ಲಿ?
ಉಜ್ಜ : (ಹಾಡುವನು)
ಆಜರವನ ಕರೆಸಿಕೊಂಡು ಪಗಡಿಯಾಡ್ತಾರೋ!
ಅಂಗ, ಆಜುಬಾಜಿನ ಜನಗಳೆಲ್ಲ ಕುಣಿದಾಡ್ತಾರೋ-
ವ್ಯಕ್ತಿ ೨: ಈ ಮುದುಕ ನೆಟ್ಟಗೆ ಮಾತಾಡದ್ನೆ ಮರತಂಗೈತಿ ಮಾರಾಯ.
ಉಜ್ಜ : (ಇನ್ನೂ ಜೋರಾಗಿ)
ಅಸವಣ್ಣಾರು ಅವನ ಜೋತಿ ಓಡಾಡ್ತಾರೋ!
ಅಂಗ, ಹೊಲ್ಯಾರ ಹುಡುಗ ಮಚ್ಚಿಕಳ್ಳಲೇ,
ಇಂಗ್ಯಾತಕೋ.
ವ್ಯಕ್ತಿ ೪ : ವನಿಗೆ ಹುಚ್ಚೇ ಹತ್ತೆತಿ ಕಣೋ.
ವ್ಯಕ್ತಿ ೩: ಹುಜ್ಜಪ್ಪ, ಹುಜ್ಜಪ್ಪ, ನಿನ್ನ ಪದ ಕೇಳಿ ಕೇಳಿ ನಮ್ಮ ಕಿವಿ ತೂತು ಬಿದ್ದು ಹೋಗಿದಾವೆ, ಗೊತ್ತಾತಾ? ಸಂಕ್ರಾಂತಿ ಹಬ್ಬ ಬಂತು ಅಂತ ಅದ್ಯಾಕಪ್ಪ ಅಷ್ಟು ಹಿಗ್ಗತೀ?
ವ್ಯಕ್ತಿ ೧ : ಸಂಕ್ರಾಂತಿ ಅಂತ ಅಲ್ಲಪ್ಪ. ಮಗಂಗೊಂದು ಹೆಣ್ಣು ಸಿಗ್ತು ಅಂತ.
ವ್ಯಕ್ತಿ ೪ : ಅಲ್ಲ ಕಣಲೇ, ಇವತ್ತಿಗೆ ಹೆಂಡಗಿಂಡ ಕಂಡಗಿಂಡ ಎಲ್ಲ ನಿಲ್ಲಸಬೇಕಲ್ಲ?
ವ್ವ್ಯಕ್ತಿ ೫ : ಹೂ ನಿನ್ನ ! ಸೊಸಿ ಕಣೋ, ಸೊಸಿ ನೆನಸಿಕೊಂಡು ಅಂತಾನೆ ಪದ.
ವ್ಯಕ್ತಿ ೪ : ಅಲ್ಲೊ ಉಜ್ಜಣ್ಣ, ನಿನ್ನ ಸೊಸೀ ಎಲ್ಲಿ, ಕಣ್ಣೀಗೆ ಬೀಳ್ತಿಲ್ಲವಲ್ಲ?
ಉಜ್ಜ : ನನ್ನ ಸೊಸೀ ನಿನ್ನ ಕಣ್ಣೀಗೆ ಹೆಂಗಲೇ ಬೀಳ್ತಾಳೆ, ಹುಚ್ಚನನ ಮಗನೆ. ನೀನೇನು ನನ್ನ ಸೊಸೀ ಮಂಗನ ಮುಸುಡಿ ಈರಭದ್ರಿ ಅಂತ ತಿಳಿದ್ಯಾ? ಆ ಮುಡಿಕಮನಿ ಹೂಸುಬುರುಕಿ ಅಂತ ತಿಳಕೊಂಡ್ಯ? ಅಗಸೆಮನಿ ಒಂಟಿಕಾಲಿನ ಕರಿಬಸವಿ ಅಂದು ಕೊಂಡ್ಯ? ಪಂಡಿತರ ಮಗಳು ಕಣೋ ಬೆಳವ, ಪಂಡಿತ್ರ ಮಗಳು? ಹಾರವಯ್ಯನ ಹಕ್ಕೀನ ಹಾರಿಸಿಕೊಂಡು ಬಂದು ಮಡಿಕ್ಕೊಂಡವನೆ ಭೀಮಸೇನ ಮಗ, ನೋಡಾಕೆ ಆಸ್ಯಾದ್ರೆ ಆ ಬೇಲಿ ತಾವ ಓತಿಕಾಟನ ಹಂಗೆ ಕುಂತು ಪಿಳಿಪಿಳಿ ಕಣ್ ಬಿಟ್ಟು ನೋಡ್ತೀರು. ಕೆಂಚನ ಸಂಗಡ ಗದ್ದೀತಾವ ಹೋಗ್ಯಾಳ ಗದ್ದೀತಾವ!
ವ್ಯಕ್ತಿ ೪ ಆ , ಆಗಲೇ ಗದ್ದೀತಾವ ಹೋದಳಾ? ಅಲ್ಲ ಬ್ಯಾಟಿ ಆಡಾಕೆ ಹೋದ್ಲು ಅಂತ-
ಉಜ್ಜ : ಗದ್ದಿಕಡಿಂದ ಗಿಡಕ್ಕೋಗ್ತಾಳೆ. ಗಿಡಕ್ಕೆ ಹೋಗಿ ಬ್ಯಾಟಿ ಆಡಿಕಂಡು ಬರ್ತಾಳೆ, ಗೊತ್ತಾತಾ?
ಈ ಮಾತು ಕೇಳಿ ಜನ ಕುತೂಹಲದಿಂದ ಹೆಚ್ಚು ಗದ್ದಲ ಮಾಡುತ್ತ ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುವರು)
ವ್ಯಕ್ತಿ ೧ : ಬ್ಯಾಟಿಗೆ ಹೋದಳಂತಲ್ಲಪ್ಪ ಈ ಪ್ಯಾಟಿ ಹುಡುಗಿ!
ವ್ಯಕ್ತಿ ೨ : ಬ್ಯಾಟಿ ಬಿಡ್ರಿ ಅಂದ್ರಲ್ಲ ಬಸಣ್ಣಾರು!
ವ್ಯಕ್ತಿ ೩ : ಬ್ಯಾಟಿ ಹ್ಯಂಗಪ್ಪ ಬಿಡಾಕಾದೀತು, ನನ್ನ ಬಾಯಾಗೆ ಆಗಲೇ ನೀರು ಸುರಿಯಾಕ ಹತ್ತೇತಿ, ಸುಮ್ಕಿರಲೇ.
ವ್ಯಕ್ತಿ ೨ : ಮತ್ಯಾಕಪ್ಪ ಬಸವಣ್ಣಗೆ ಮಾತು ಕೊಡಬೇಕಿತ್ತು?
ವ್ಯಕ್ತಿ ೩ : ಮಾತಿಗೆ ಮಾತಾತು, ಕೆಲಸಕ್ಕೆ ಕೆಲಸಾತು. ಹಂಗೈತಿ ಹೊಡೆತ!
(ಎಂದು ಚಪ್ಪಾಳೆ ತಟ್ಟಿ ನಗುವನು)
ವ್ಯತ್ತಿ ೨ ಲ್ಲಪ್ಪ ಉಜ್ಜಣ್ಣ, ನಿನ್ನ ಮಗಂಗೆ ರಾಜರು ಹೇಳಿಕಳಿಸಿದ್ರು ಅಂದ್ಯಲ್ಲಪ್ಪ, ಖರೇನಾ?
ವ್ಯಕ್ತಿ ೪ : ನಿಂತ ಕಾಲುಮ್ಯಾಲೆ ನಿಂತಂಗೇ ಬಂದುಬಿಡು ಅಂದ್ರಂತೆ, ಹೌದಾ?
ವ್ಯಕ್ತಿ ೧ : ರುದ್ರ ಉಟ್ಟಬಟ್ಟ್ಯಾಗೆ ಒಂದೇ ಕಿರ್ದಿಗೆ ಕಾಲುಕಿತ್ತನಂತೆ?
ವ್ಯಕ್ತಿ ೨ : ಏನು ಮಾಡ್ತಾರೋ ರಾಜರು ಅಂತ ಅಂಜಿದನಂತೆ?
ಉಜ್ಜ : ಯಾಕಪ್ಪ ಹೆದರಿಕಂತಾನೇ? ಅವನೇನು ನಿನ್ನಂಗೆ ಗುಬ್ಬಚ್ಚೀನ?
ವ್ಯಕ್ತಿ ೨ : ನಂಗ್ಯಾಕೋ ಗುಬ್ಬಚ್ಚೀಂತಿ, ತರಲೆ ಮುದುಕ?
ವ್ಯಕ್ತಿ ೧ : ನಿನ್ನ ಮಾತು ಅತೀ ಆತು ಕಣೋ ಉಜ್ಜಣ್ಣ.
ಉಜ್ಜ : ನೀವು ಕೇಳೋದ್ಯಾಕೆ, ಮಾತು ಬ್ಯಾಡ ಅನ್ನೋದ್ಯಾಕೆ. ಒಳ್ಳೆ ಪಡಿಸೆಂಟು ನನಮಕ್ಕಳ ಸಾವಾಸ…..
ವ್ವ್ಯಕ್ತಿ ೫ : ಮಂಗಗಳ ಸುದ್ಯಾಕೆ ಹೇಳಪ್ಪ.
ವ್ಯಕ್ತಿ ೧ : ಬ್ಯಾಸರಾಗೇತಿ ಹೇಳಪ್ಪ.
ವ್ಯಕ್ತಿ ೨ : ಬ್ಯಾಡಾಂದ್ರೆ ಬಿಡ್ತೀಯಾ ನೀನು, ಹೇಳು, ಹೇಳು, ಹೇಳು, ಹೇಳಿ ಸಾಯಿಸ್ತಿ ನಮ್ಮ, ಹೇಳು.
ಎಲ್ಲರೂ : ಏಳಪ್ಪ, ಸುಮ್ಕಿರಲೇ ಹೇಳ್ಳಿ. ಹೇಳಪ್ಪ, ಹೇಳು-
ಉಜ್ಜ : ನನ್ನ ಮಾತು ಬೇಕಾದ್ರೆ ಒಂದು ತೊಟ್ಟು ಚೌಡವ್ವನ ಕೊಡು.
ವ್ಯಕ್ತಿ ೨ : ಈ ಹದ್ದಿನ ತಲಿಗಿಲಿ ನೆಟ್ಟಗಿಲ್ಲ ಕಣೋ.
ವ್ಯಕ್ತಿ ೩ : ಹಂಗಂದ್ರೇನಪ್ಪ?
ಉಜ್ಜ : ಚೌಡವ್ವ ಅಂದ್ರೆ ತಿಳೀದ ನೀವು ಹೆಂಗಪ್ಪ ನನ್ನ ಮಾತು ತಿಳ್ಕಂತೀರಿ?
ವ್ಯಕ್ತಿ ೨ : ಗೊತ್ತಪ್ಪ, ನಿನ್ನ ಚೌಡವ್ವ ಗೊತ್ತಿಲ್ಲವಾ? ಕೆಂಚ ಬಂದನೇನು ನೋಡ್ರೋ ಅವನ ಹತ್ರ ಚೌಡವ್ವ ಇರತತಿ.
ವ್ಯಕ್ತಿ ೪ : ಹಂಗಂದ್ರೇನೂಂತ-
ವ್ಯಕ್ತಿ ೨ : ಹಂಗಂದ್ರೆ ಹೆಂಡ, ಭೂತ ಅಂದ್ರೆ ಕಂಡ. ತಿಳೀತ?
ಒಬ್ಬ ಅಷ್ಟರಲ್ಲಿ ಗುಡಿಸಲಿಗೆ ಹೋಗಿ ಹೆಂಡ ತಂದಿರುವನು)
ವ್ವ್ಯಕ್ತಿ ೫ : ಕಾ ತಗೋ, ನಿನ್ನ ಚೌಡವ್ವ.
ಉಜ್ಜ : (ಆನಂದದಿಂದ) ತಂದ್ಯ ಚೌಡವ್ವನ್ನ. (ಕುಡಿಯುವನು) ಹ್ಞು ಕೇಳ್ರಪ್ಪ. (ಗದ್ದಲ ಮಾಡುತ್ತಿರುವ ಜನರನ್ನು ಕುರಿತು) ಕೇಳ್ರೋ ನನ್ನ ಸರದಾರ್ರ! ನನ್ನ ಸೊಸೀ-
ವ್ಯಕ್ತಿ ೨ : ಅಲ್ಲಪ್ಪ ಬಸವಣ್ಣಾರು-
ಉಜ್ಜ : ಮಾತೆತ್ತಿದರೆ ಬಸಣ್ಣ, ಬಸಣ್ಣ ಅಂತ ಗುಬ್ಬೀ ಹಂಗೇ ಬಾಯ್ಬಿಡ್ತೀಯಲ್ಲಲೇ-
ಎಂದು ವ್ಯಕ್ತಿ ೨ಕ್ಕೆ ಗುದ್ದುವನು. ಗುದ್ದಿಸಿಕೊಂಡವನು ‘ಹೋ’ ಎಂದು ಸರಿಯುವನು; ಇತರರು ನಗುವರು. ಉಜ್ಜ ಮಾತ್ರ ಬಹಳ ಗಂಭೀರವಾಗಿ)
ಏಳ್ರೋ ಕೆಲಸಕ್ಕೆ ಬಾರದ ದಡ್ಡ ನನಮಕ್ಕಳಾ! ಕೇಳ್ರಿ. ನೆನ್ನೆ ಸಂಜೀಕಡೀಗೆ ನನ್ನ ಮಗ ಹೊಂಟನಲ್ಲ-
ವ್ಯಕ್ತಿ೧ ಔದಪ್ಪ, ಹೊಳೀ ಕಡೆ ಹೊಂಟ, ಹುಡುಗೀತಾವ-
ಉಜ್ಜ : (ಹೆಮ್ಮೆಯಿಂದ ಸುಳ್ಳು ಸೇರಿಸುತ್ತ) ಹ್ಯಂಗೆ ಹೊಂಟ ಅಂತೀ- ಆ ಹುಡುಗೀ ಹೊತ್ತುಕಂಡ್ ಬರದಿದ್ರೆ ನಾ ಉಜ್ಜಣ್ಣನ ಮಗ ಅಲ್ಲ ಅಂತ ಹೊಂಟ. ನಂಗೂ ಅನುಮಾನಿತ್ತು- ಇಂವ ನನ ಮಗನೇನೋ ಸೈ- ಆದರ ಈ ಹಾರವರ ಹೆಣ್ಣ ಹ್ಯಂಗಪ್ಪ ತರತಾನೆ ಅಂತ ನಾನೂ ಹೊಂಟೆ. ಅವನು ಮುಂದೆ, ನಾನು ಹಿಂದೆ; ಮಗ ಮಾಡಾಕೆ, ನಾ ನೋಡಾಕೆ, ಅಲ್ಲಿ ನೋಡ್ತೀನಿ-
ವ್ಯಕ್ತಿ ೨ : (ಹೊಡೆಸಿಕೊಂಡ ಸಿಟ್ಟಿನಿಂದ) ಅದೆಲ್ಲಾ ಗೊತ್ತು ಬಿಡೋ.
ಉಜ್ಜ : ಗೊತ್ತಿದ್ರೆ ಇನ್ನೊಂದು ಪಟ ಕೇಳಿದ್ರೆ ನಿನ್ನಜ್ಜನ ಗಂಟೇನು ಹೋಗ್ತದೋ? ಕೇಳು. ಹುಡುಗಿ ಅಂತಾಳೆ. “ನಿಮ್ಮೂರಾಗೆ ಏನೇನೈತಿ?” ಅಂತ. ರುದ್ರ ಅಂತಾನೆ “ನಮ್ಮಪ್ಪ ಅದಾನೆ, ನಮ್ಮ ಆಕಳದಾವೆ, ನಮ್ಮ ಜನ ಅದಾರೆ” ಅಂತ. ಹುಡುಗಿ ಬಾಯಿಬಾಯಿ ಬಿಟ್ಕಂಡು ಕೇಳ್ತವಳೆ! ಇನ್ನೇನು ಬಂದ ಕೆಲಸ ಆತಲ್ಲ ಅಂತ ನಾ ಮನೀಗೆ ಬಂದೆ. ಬೈಗಾಗಿತ್ತು. ಪಡವಲ ದಿಕ್ಕೆಲ್ಲ ಹರೇದ ಹೆಂಗಸಿನ ತುಟೀ ಹಂಗೆ ಕೆಂಪಗಾಗೈತಿ. ಜಂಗಳಿ ದನ ಧಡಧಡ ಊರಿಗೆ ಬರತಾ ಇದಾವೆ. ಆಕಾಸದಾಗೆ ಚುಕ್ಕಿ ಮಿನಮಿನ ಅಂತ ಮಕ್ಕಳಂಗೆ ನಗ್ತಿದಾವೆ….
ವ್ಯಕ್ತಿ ೩ : ಅದೆಲ್ಲ ಇರ್ಲಿ, ಹೇಳಪ್ಪ.
ಉಜ್ಜ : ಜಗಲಿ ಮ್ಯಾಲೆ ಕುಂತು ನೋಡ್ತೀನಿ- ದೂರದಾಗೆ ಬರ್ತೀದಾನೆ ನನ್ನ ಸರದಾರ! ಅವನ ಮಗ್ಗುಲಾಗೆ ಹುಡುಗಿ! ಕೈ ತಗಂಡು ಹಿಂಗೆ (ಎಂದು ಒಬ್ಬನ ಸೊಂಟಕ್ಕೆ ಕೈ ಹಾಕಿ ತೋರುವನು) ಆಕೀ ಸೊಂಟದ ಸುತ್ತ ಹಾಕಿದಾನೆ. ಹ್ಯಂಗಿದಾಳೆ ಹುಡುಗಿ- ಥಳಥಳ ಬೆಳಗಿಟ್ಟ ಗಿಂಡಿ ಹಂಗೆ ಹೊಳೀತಿದಾಳೆ! ಎಲಾ ಮಗನೆ ಹೊಲೇರ ಹಟ್ಟಿಗೆ ಚೌಡವ್ವ ಬಂದಂಗಾತು ಅಂತ ತಕತಕ ಕುಣೀತಿದೇನಿ ನಾನು! ನಾ ಕುಣೀತಿದ್ರೆ ಆಕೆ ಏನ್ ಮಾಡಿದ್ಲು ಗೊತ್ತ?
ವ್ಯಕ್ತಿಗಳು : ಏನು ಮಾಡಿದ್ಲು? ಏನು ಮಾಡಿದ್ಲು?
ಉಜ್ಜ : (ಪ್ರದರ್ಶಿಸುತ್ತ) ಧಡಧಡ ಓಡಿ ಬಂದು ನನ್ನ ರಟ್ಟೆ ಹಿಡಕಂಡು ಕುಣಿಯಾಕ್ ಹತ್ತಿದ್ಲು! ಕುಣದ್ಲು, ಕುಣದ್ಲು, ಕುಣದ್ಲು- ನನ್ನ ತಲೆ ಗಿರಾಗಿರಾ ತಿರುಗೋತಂಕ ನನ್ನ ಮಗ ನಿಂತು ನೋಡ್ತಾ ಹೊಟ್ಟೇಕಿಚ್ಚು ಪಡೋತಂಕ ಕುಣದ್ಲು! ನನ್ನ ಕಿವಿ ತಾವ ಅಂತಾಳೆ, “ಮಾವಯ್ಯ, ಮಾವಯ್ಯ” ಅಂತ ನಾನಂತನೀ, “ಅಮ್ಮಯ್ಯ, ಅಮ್ಮಯ್ಯ” ಅಂತ.
ಇಬ್ಬರು ಮ್ಯಾಲೇನಾತು? ಆಮ್ಯಾಲೆ?
ಉಜ್ಜ : ಹೇಳೋತಂಕ ಮುಚ್ಚಕಂಡಿರು! “ಬಾರವ್ವ ಸೊಸಿ, ಒಳಗೆ” ಅಂದೆ. ನಗ್ತಾಳೆ, ನನ್ನ ಸೊಸಿ ನಗ್ತಾಳೆ. ಬಾಳೆಗಿಡ ಗೊನಿ ಬಿಟ್ಟಂಗೆ! ಬರತಾಳ ಒಳಗೆ- ಗಂಗಾಳ ಚೆಂಬು, ಚಟ್ಟಿಗೆ, ಗುಡಾಣ, ಬಾಂಡ್ಳಿ, ಬಲೆ, ಕುಕ್ಕೆ- ಎಲ್ಲಾ ಮುಟ್ಟುತಾಳೆ. ಮುಟ್ಟಿ ಮುಟ್ಟಿ ನೋಡ್ತಾಳೆ! ಆರು ತಿಂಗಳ ಕೂಸಿನಂಗೆ! ಕೋಳೀ ಕುಕ್ಕೆ ತಗದು ತತ್ತೀ ಕೈಯಾಗೆ ಹಿಡಕಂಡು ಮುಸಮುಸ ನಗ್ತಾಳೆ! ಕಂಬಳಿ ಹೊದ್ಕೊಂಡು ಎಷ್ಟು ಬೆಚ್ಚಗೈತಿ!” ಅಂತ ಉಲ್ದಾಡ್ತಾಳೆ!
ವ್ಯಕ್ತಿ ೪ : ಸೊಸಿ ಅಂದ್ರೆ ಹಿಂಗಿರಬಕಪ್ಪ.
ಉಜ್ಜ : ಮತ್ತೆ! ಮತ್ತೆ! ಆ ಕೆಂಚ-
ವ್ಯಕ್ತಿ ೨ : ಹಡಾಣಿ ಕೆಂಚ! ಅವನೂ ಸರಣನಲ್ಲವೇನೋ?
ಬಸವಣ್ಣ-
ಉಜ್ಜ : ಶರಣಾಗಾನ ಸುಮ್ಮಕಿರಲೇ ಬಸ್ಯಾರಿಕೆ!
ಊಡಲಮನಿ ನಿಂಗಿ ಶರಣ್ಯಾಗ್ತಾಳಂತೆ! ಅಗಸೆಮನಿ ಕುಂಟಿ ವಚನ ಹಾಡ್ತಾಳಂತೆ! ಈರಭದ್ರಿ ಬಸಣ್ಣೋರ ಹಿಂದೆ ಹೋಗ್ತಾಳಂತೆ! ನನ್ನ ಸೊಸೀ ನೋಡ್ರೋ, ಗಿಣೀ ಹಂಗೆ ಹಾಡ್ತಾಳೆ, ನವಲಿನಂಗೆ ಕುಣೀತಾಳೆ, ಮೊಗೀನಂಗೆ ಮಾತಾಡ್ತಾಳೆ! ಬ್ಯಾಟೀ ಆಡ್ತಾಳೆ! (ನಕ್ಕು) ಬ್ರಾಂಬ್ರ ಜಾತಿಗೆ ಕಲ್ಲು ಬಿತ್ತು! ಅಲ್ಲೋ ನಿಂಗ್ಯ, ನಿನ್ನ ಸೊಸೀ ನನ್ನ ಸೊಸೀ ಇದುರು ಒಂದು ಗುಂಜಿನ ತೂಕ ಬಂದಾಳೇನು! ಆ? ಅಲ್ಲೋ, ಊರ ಮರ್ವಾದಿ ನೋಡ್ರೋ! ಈ ಹೊಲೇರ ಹಟ್ಯಾಗೆ ಬ್ರಾಂಬ್ರು.
ವ್ಯಕ್ತಿ೧ ಆಲಿಡಾಕಿಲ್ಲ, ಬ್ರಾಂಬ್ರು.
ವ್ಯಕ್ತಿ ೩ : ನೋಡಿದ್ರೆ ಹೋಗಿ ಮೈ ತೊಳಕಂತಾರೆ ಅಂತೀನಿ.
ವ್ಯಕ್ತಿ ೪ : ಚಣಕ್ಕನೆ ಹಾರಿ ಮಂತ್ರ ಹೇಳ್ತಾರಪ್ಪ!
ವ್ಯಕ್ತಿ ೨ ನೆನಪಿಸುತ್ತ) ಅಲ್ಲಪ್ಪ, ನಿನ್ನ ರುದ್ರ-
ವ್ಯಕ್ತಿ ೩ : ಬಿಜ್ಜಳ ರಾಜರು ಕರಿಸಿದ್ರಂತೆ?
ಉಜ್ಜ : ಅದ ಹೇಳಾಕೇ ಅಲ್ಲ ಬಂದದ್ದು… ಮಗ ರುದ್ರ (ಜಾಗ ತೋರಿಸಿ) ಇಲ್ಲಿ ನಿಂತಿದ್ದ. ಬಂದ ಒಬ್ಬ ರಾಜರ ಬಂಟ. ಅವನ ನೋಡಿ ಸೊಸೀ ಕೆಂಡ ಆದಳು. ಅವನು ಹಿಂಗೆ ಮಿಮಿರ ನೋಡ್ತಾನೆ, ಸೊಸೀ ಹಿಂಗೆ ತಿನ್ನೋಳಂಗೆ ನೋಡ್ತಾಳೆ. ಬಂಟ ಅಂತಾನೆ “ಇಲ್ಲಿ ರುದ್ರ ಅಂಬೋನು ಯಾರು?” ನನ್ಮಗ “ನಾನೇ ರುದ್ರ” ಅಂತಾನೆ. “ರಾಜರು ನಿನ್ನ ಕರೀತಿದಾರೆ, ಬಾ” ಅಂತಾನೆ. ರುದ್ರ ಹೊರಟು ನಿಂತಾನೆ, ಆಗ ಸೊಸಿ-
ವ್ಯಕ್ತಿಗಳು : ನಂದ್ಲು? ಏನಂದ್ಲು?
ಉಜ್ಜ : (ನಾಟಕವನ್ನೇ ಆಡುತ್ತಿದ್ದಾನೆ) “ಅವನು ಬರಲ್ಲ ಹೋಗು” “ಯಾಕವ್ವ ಯಾಕೆ ಬರಾಕಿಲ್ಲ, ಅವನ ಜೋಡಿ ನೀನೂ ಬರಬೇಕಂತೆ ಬಾ” “ನಾನ್ಯಾಕೆ ಬರ್ಲಿ? ನಾನ್ಯಾತಕ್ಕಂತೆ?” “ಯಾತಕ್ಕೆ ಗೀತಕ್ಕೆ ಕೇಳಬ್ಯಾಡ, ತ್ಯಪ್ಪಗೆ ಬಾ” ಅಂತಾನೆ ಸರದಾರ. ಅದಕ್ಕಂತಾಳೆ ಸೊಸಿ “ಕಪಿ ತರ ಬಂದೆ, ಕಪಿ ತರ ಹೋಗು. ನಾ ಬ್ಯಾಟಿಗೆ ಹೋಗ್ತೇನಿ.”
ವ್ಯಕ್ತಿ ೪ : ಮಗ ಸುಂಕೇ ಹೋದ್ನ?
ಉಜ್ಜ : ಹೊಂಟ ಮಗ, ಸೊಸಿ “ಬ್ಯಾಡ, ಹೋಗಬ್ಯಾಡ” ಅಂದ್ಲು. ಮಗ ಅಂತಾನೆ, “ಕಲ್ಯಾಣದಾಗ ಶರಣರ ಕೆಲಸೈತಿ, ಹೋಗಾಕೇ ಬೇಕು” “ಹಾಳಾಗಿ ಹೋಗು” ಅಂತಾಳೆ ಸೊಸಿ! “ಕೆಂಚಾ, ಕೆಂಚಾ” ಅಂದ್ಲು, ಕೆಂಚ ಬಂದ. ಸೊಸಿ ಅಂತಾಳೆ, “ಬ್ಯಾಟಿಗೆ ಹೋಗಾನ ಹೊಲ್ಡು”.
ವ್ಯಕ್ತಿ ೨ : ಅಲ್ಲಪ್ಪ ಸಂಕ್ರಾಂತಿ ಹೊತ್ತಿಗೆ ಬಸವಣ್ಣ-
ಉಜ್ಜ : (ಕೆಟ್ಟದ್ದನ್ನು ನೆನೆದವನಂತೆ) ಅದೇನ್ಲೇ ಮಂಗ? ಯಂಥದೋ ಬಸಣ್ಣ? ನಿಂಗೆ ಬ್ಯಾರೇ ಮಾತೇ ಬರಲ್ಲವೇನೋ? ಇವತ್ತು ರಾತ್ರಿ ತಂಕ ಚೌಡವ್ವ, ನಾಳೆ ಬಸಣ್ಣ! ಅಲ್ಲ (ಕುಡಿದು) ಕುಡಿಬ್ಯಾಡ ಅಂತಾರೆ, ತಿನ್ನಬ್ಯಾಡಾಂತಾರೆ, ಮಲಗಬ್ಯಾಡಾಂತಾರೆ, ವದರಬ್ಯಾಡಾಂತಾರೆ- ಅಂತಾರೆ, ಅಂತಾರೆ! ಬಸಣ್ಣ, ನೀವು ಹೊತ್ತಿನಂಗೆ, ಬೆಳದಿಂಗ್ಳಪ್ಪನಂಗೆ, ಚೌಡವ್ವನಂಗೆ! ಇವತ್ತೊಂದಿನ ನನ್ನ ಕೈ ಬಿಡಪ್ಪ!
ಜನ ಗುಜುಗುಜು ಮಾತಾಡಿಕೊಳ್ಳುವರು. ಹೊರಗೆ ಮತ್ತು ರಂಗದ ಮೇಲೆ ಸದ್ದಾಗುವುದು. ಉಜ್ಜ ಮೇಲಿನ ಮಾತುಗಳನ್ನು ಗಟ್ಟಿಯಾಗಿ ಹೇಳಬೇಕಾಗುತ್ತದೆ. ಮಾತು ನಿಷ್ಪ್ರಯೋಜಕವಾಗಿ ಹಾಡಹತ್ತುವನು. ಜನರ ಗಮನ ಮಾತ್ರ ಬೇರೆ ಕಡೆಗೆ ಹೋಗುತ್ತಿದೆ)
ಔಡವ್ವ, ಭೂತಪ್ಪ, ಕೊಳ್ಳೀಯ ದೆವ್ವಪ್ಪ,
ಉಣಿದಾರ್ರಿ ದಿನಾಲು ನನ್ನ ಸುತ್ತ;
ಅಸವಣ್ಣ ಬರುತಾರೆ, “ಉಜ್ಜಣ್ಣ” ಅನುತಾರೆ,
ಅಪ್ಪಿದರೆ ಕೊಯ್ಯುತಾರೆ ನನ್ನ ಕತ್ತ!
ಹುಡುಗನೊಬ್ಬ ಜನರೆಲ್ಲರ ಗದ್ದಲ ಮೀರಿಸಿ ಕೂಗುತ್ತ ಬರುತ್ತಾನೆ- ಸಾರಿ ಹೇಳುವವನಂತೆ. ಜನ ಅವನನ್ನು ಪ್ರಶ್ನಿಸುತ್ತಾರೆ)
ಹುಡುಗ ಬ್ಯಾಟಿಂದ ಬರ್ತದಾರೆ ಬ್ಯಾಟಿಂದ. ಕೇಳ್ರಪೋ ಬರ್ತದಾರೆ!
ವ್ಯಕ್ತಿಗಳು : ಅತ್ತಣಾಗಿಂದ? ಎಲ್ಲದಾರೋ?
ಹುಡುಗ ಎಂಗನ ಗುಡ್ಡದಿಂದ ಬಂದ್ರು! ಬಂದ್ರು!
ದೂರದಲ್ಲಿ ತಮ್ಮಟೆಯ ಸದ್ದು ಕೇಳಿಬರುತ್ತದೆ. ಅದು ಜನರ ಮತ್ತು ಹುಡುಗನ ಮಾತಿನೊಂದಿಗೆ ಹತ್ತಿರ, ಹತ್ತಿರ ಬರುತ್ತದೆ)
ಉಜ್ಜ : (ಎಲ್ಲರಿಗೂ ಗೊತ್ತಾಗಲಿ ಎಂಬ ಕಾರಣಕ್ಕೆ) ಲೇ ಹುಚ್ಚ, ಯಾರೋ ಬರ್ತಿರೋದು?
ಹುಡುಗ ಸಮ್ಮ ಕೆಂಚ ಬರ್ತದಾರೆ! ಹುಲಿ ಹಿಡ್ಕಂಡು ಬರ್ತದಾರೆ, ತಮ್ಮಟೆ ಹೊಡಿತಾ ಬರ್ತದಾರೆ!
ವ್ಯಕ್ತಿಗಳು : ಹುಡುಗನನ್ನು ಹಿಡಿದುಕೊಂಡು, ಕುತೂಹಲ ತಾಳಲಾರದೆ)
ಎಲ್ಲಿ ಸಿಗ್ತಲೆ ಹುಲಿ?
ಯಾರೋ ಹೊಡೆದದ್ದು?
ಹ್ಯಂಗೆ ಹಿಡದ್ರೋ?
ಹುಡುಗ ಇಡ್ರಪೋ, ಕೆಂಗನ ಗುಡ್ಡದ ತಾವ ಹಿಡದ್ರಂತೆ! ಹಿಡದ್ರಂತಪೋ ಹುಲೀನ!
ವ್ಯಕ್ತಿಗಳು : ಇಡದ್ರಂತೋ, ಹೊಡೆದ್ರಂತೋ
ಹುಲೀನೋ ಕಿರಬಾನೋ?
ಮರೀನೋ, ದೊಡ್ಡದೋ?
ಹುಡುಗ ಎಲ್ಲ ಮಾಹಿತಿಯನ್ನು ವದರುತ್ತಾ) ದೊಡ್ಡ ಹುಲೀನ್ರಿ, ಹಿಡದಾರ್ರೀ, ಕಿರುಬಲ್ರೀ, ನಿಮ್ಮ ಕಿವಿ ಕೇಳಸಲ್ಲವಾ? ಹುಲಿ! ಹುಲಿ! ಬಿಡ್ರೀ ನಾ ಹೋಗ್ತನೀ!
ಹುಡುಗ ಬಿಡಿಸಿಕೊಂಡು ಓಡುವನು)
ವ್ಯಕ್ತಿಗಳು ಕುತೂಹಲದಿಂದ ಹೊರಗೆ ನೋಡುತ್ತಾ ಮಾತಾಡುವರು. ತಮ್ಮಟೆಯ ಸದ್ದು ಹತ್ತಿರ ಬರುತ್ತ ದೊಡ್ಡದಾಗಿ ಇವರ ಮಾತೂ ದೊಡ್ಡದಾಗಿ ಕೊನೆಗೆ ಮಾತು ಕೇಳಿಸದಾಗುವುದು)
ವ್ಯಕ್ತಿ ೧ : ಅರೆ, ಹೌದ್ರೋ, ಹುಲೀನೆ!
ಉಜ್ಜ : ಹ್ಯಂಗೈತೆ ನೋಡ್ರೋ ನನ್ನ ಸೊಸೀ ಹುಲಿ!
ವ್ಯಕ್ತಿಗಳು : ಅಂಕ್ರಾಂತಿ ದಿನವೇ ಹುಲಿ ಬಂದಂಗಾತು?
ಬಸವಣ್ಣ ಬಂದ್ರೆ ಏನಂತಾರೆ ಅಂತ!
ಉಜ್ಜನ ಸೊಸೆ ಜೋರೈದಾಳೆ ಕಣೋ!
ಉಜ್ಜ : ಹೆಂಡ್ತಿ ನೋಡಾಕೆ ನನ್ ಮಗ ಇದ್ದಿದ್ರೆ!
ವ್ಯಕ್ತಿ ೨ : ಅಲ್ಲ, ರುದ್ರ ಇಷ್ಟತ್ತು ಏನ್ಮಾಡ್ತಾನೆ, ಅಂತ!
ಜೋಡು ತಮ್ಮಟೆಯ ಸದ್ದು ಹತ್ತಿರ ಹತ್ತಿರ ಬಂದು ಮೇಲಿನ ಮಾತಿನಿಂದ ಮುಂದಕ್ಕೆ ಕೇಳಿಸದಂತಾಗುತ್ತದೆ. ಇನ್ನೇನು ಹುಲಿ ರಂಗಕ್ಕೆ ಪ್ರವೇಶಿಸಬೇಕು ಅನ್ನುವಾಗ ಭೀಕರ ಸದ್ದು. ಜನರ ಗುಂಪು ದೊಡ್ಡದಾಗುತ್ತದೆ. ಜನ ದಾರಿಬಿಡುತ್ತಿದ್ದಂತೆ ಕೆಂಚ ಹುಲಿ ವೇಷದಲ್ಲಿ ಗತ್ತಿನ ಹೆಜ್ಜೆ ಹಾಕಿ ಕುಣಿಯುತ್ತ ಪ್ರವೇಶಿಸುತ್ತಾನೆ. ಅವನು ಹೆಜ್ಜೆ ಹಾಕುತ್ತ ಮುಂದೆ ಬಂದಂತೆ ಅವನ ಕೊರಳಿನ ದಪ್ಪ ಹಗ್ಗ ಕಾಣಿಸುತ್ತದೆ; ಹಿಡಿದ ವ್ಯಕ್ತಿ ಉಷಾ ತರುವಾಯ ಕಾಣಿಸುತ್ತಾಳೆ. ಪೂರ್ತಿ ಹಳ್ಳಿ ಉಡುಪು ಧರಿಸಿದ್ದಾಳೆ; ಅವಳ ಭುಜದ ಮೇಲೆ ಸತ್ತ ಕಾಡುಕೋಳಿಗಳಿವೆ. ತಮ್ಮಟೆಯ ಲಯಕ್ಕೆ ತಕ್ಕಂತೆ ಸುತ್ತಣ ಜನರೊಂದಿಗೆ, ಅವರನ್ನು ಹುರಿದುಂಬಿಸುತ್ತ ಚಪ್ಪಾಳೆ ತಟ್ಟುತ್ತಿದ್ದಾಳೆ. ತಮ್ಮಟೆ, ಚಪ್ಪಾಳೆ, ಸಾಧ್ಯವಾದರೆ, ತಮಾಷೆಯ ಪರಿಣಾಮ ಆಗದಂತೆ ಶಿಳ್ಳೆ, ಕೇಕೆಯ ಪ್ರೋತ್ಸಾಹದೊಂದಿಗೆ ನೃತ್ಯ-ನಿರ್ದೇಶಕನ ಸಾಮರ್ಥ್ಯ ಅವಲಂಬಿಸಿ- ಎರಡು ಮೂರು ನಿಮಿಷ ಸಾಗಬೇಕು.
ಋತ್ಯ ತೀವ್ರ ಸ್ಥಿತಿ ಮುಟ್ಟಿದಾಗ ಇಬ್ಬರು ಕಾವಿಬಟ್ಟೆಯ ಶರಣರು ಬಂದು ರಂಗದ ಎಡಭಾಗದಿಂದ ಏನನ್ನೋ ಸಾರಿ ಹೇಳುವಂತೆ ತೋರುತ್ತದೆ. ಅವರ ಸದ್ದಿಗೆ ಜನ ಮಣಿಯದಿರಲು ಒಬ್ಬಿಬ್ಬರನ್ನು ಹಿಡಿದು ಅಲ್ಲಾಡಿಸುವರು. ಅದರಿಂದಲೂ ಸದ್ದು ನಿಲ್ಲದಿರಲು ಕೊನೆಗೆ ತಮ್ಮಟೆಯ ಕೋಲು ಕಸಿದುಕೊಳ್ಳುವರು. ಸದ್ದು ನಿಲ್ಲುತ್ತದೆ; ಜನರ ಗಮನ ಅವರ ಕಡೆ ಹೋಗುತ್ತದೆ)
ಶರಣ ೧ : ಏಳಿ, ಎಲ್ಲರೂ ಕೇಳಿ (ಕೊಂಚ ಗದ್ದಲ) ಎಲ್ಲರೂ ಸದ್ದು ಮಾಡದೆ ಕೇಳಬೇಕು! ಇನ್ನು ಕೆಲವೇ ಕ್ಷಣಗಳಲ್ಲಿ ಇಲ್ಲಿಗೆ ಜಗಜ್ಯೋತಿ ಬಸವಣ್ಣನವರು ಬಿಜ್ಜಳ ಮಹಾರಾಜರೊಂದಿಗೆ ಆಗಮಿಸುತ್ತಾರೆ. ನಿಮ್ಮ ಶರಣನಾದ ರುದ್ರನ ಆಮಂತ್ರಣದ ಮೇರೆಗೆ ಬರುತ್ತಿದ್ದಾರೆ.
ಮುಂದಿನ ಮಾತು ಸಾಗುತ್ತಿದ್ದಾಗ ಉಷಾ ಸ್ತಬ್ಧಳಾಗಿ ನಿಲ್ಲುವಳು)
ಲ್ಲರೂ ಭಜನೆಗೆ ಸಿದ್ಧರಾಗಬೇಕೆಂದೂ ಇದು ಶರಣರ ಆದರ್ಶ ಗ್ರಾಮವೆಂಬುದನ್ನು ಬಿಜ್ಜಳರಿಗೂ ಬಸವಣ್ಣನವರಿಗೂ ಸಿದ್ಧಪಡಿಸಿ ತೋರಬೇಕೆಂದೂ ರುದ್ರ ತಿಳಿಸಿದ್ದಾನೆ. ನಿಮ್ಮ ಮುಂದಾಳು ರುದ್ರನಿಗೆ ಯಾವ ಬಗೆಯಲ್ಲೂ ನಿರಾಶೆಯಾಗದಂತೆ ಸಿದ್ಧತೆಯಾಗಬೇಕೆಂದು ಅಪ್ಪಣೆಯಾಗಿದೆ.
ಮೌನ)
ಕೆಂಚ : ಯಾರದ್ದು ಬುದ್ದಿ ಅಪ್ಪಣೆ?
ಶರಣ ೨ : ಅಹಾರಾಜ ಬಿಜ್ಜಳರು ಮತ್ತು ಬಸವೇಶ್ವರರ ಅಪ್ಪಣೆ.
ಉಜ್ಜ : ಇನ್ನೆಷ್ಟು ತಾಸಿನಾಗೆ ಬಂದಾರು, ಶರಣಪ್ಪ?
ಶರಣ ೧ : ಆವ ಗಳಿಗೆಯಲ್ಲಾದರೂ ಬರಬಹುದು.
ಉಜ್ಜ : (ಕುಡಿದಿರುವುದರಿಂದ) ಒಂಚೂರು ತಡಮಾಡಿದ್ರೇನಾಗ್ತಿತ್ತು?
ಶರಣ ೨ : ದನ್ನು ನಿರ್ಧರಿಸುವವರು ನಾವಲ್ಲ.
ವ್ಯಕ್ತಿ ೨ : ರುದ್ರ ಏನು ಮಾಡ್ತಿದ್ದ ಅಲ್ಲಿ?
ಶರಣ ೧; ತ ಬಸವಣ್ಣನವರ ಜೊತೆಗಿದ್ದಾನೆ.
ವ್ಯಕ್ತಿ ೨ : ಏನು ಮಾಡ್ತಿದಾನೆ?
ಶರಣ ೨ : ಅರಣರಿಗೆ ಕೈತುಂಬ ಕೆಲಸ ಇರುತ್ತೆ.
ವ್ಯಕ್ತಿ ೩ : ಎಲ್ರೂ ಬಟ್ಟೆ ಬದಲಿಸ್ಕೋಳ್ರೋ.
ಜನ ತ್ವರೆಯಿಂದ ಓಡಾಡುವರು)
ವ್ವ್ಯಕ್ತಿ ೫ : , ಅದು ನನ್ನ ಅಂಗಿ ಕಣೋ.
ಉಜ್ಜ : ಲೇ ಕೆಂಚ.
ಕೆಂಚ ಆಗಲೇ ತ್ವರೆಯಿಂದ ಓಡಾಡುತ್ತಿರುವನು)
ಓಗಿ ನಿನ್ನ ಚಿಟ್ಟೆಪಟ್ಟೆ ಬಣ್ಣ ತ್ವಳಕೋ, ಹುಡುಗಾ! ಹುಡುಗಾ! ಒಂದು ಚರಿಗೆ ನೀರು ತತ್ತ- ನನ್ನ ತಲೀಮ್ಯಾಲೆ ಹಾಕು!
ವ್ಯಕ್ತಿ ೧ : ಧೋತ್ರ ಹಂಗೇ ಇರ್ಲಿ ಬಿಡಲೇ- ಅಂಗಿ ಬ್ಯಾರಾದ್ರೆ ಸಾಕು.
ಮಾತಾಡುತ್ತಲೇ ಲಗುಬಗೆಯಿಂದ ಜನ ಹೊರಗೋಡಿ ಒಳಗೆ ಬಂದು ಬಟ್ಟೆಗಳನ್ನು ಬದಲಿಸುತ್ತಿದ್ದಾರೆ. ಉಷಾ ಈಗ ತನ್ನ ಕೈಯಲ್ಲಿರುವ ಹಗ್ಗ ಹಾಗೆ ಹಿಡಿದು ನಿಂತಿರುವಳು; ಕೆಂಚ ನಿಧಾನಕ್ಕೆ ತನ್ನ ಬಣ್ಣ ಒರೆಸಿಕೊಂಡು ಅಂಗಿ ಹಾಕಿಕೊಳ್ಳುವನು. ಹುಡುಗ ಪಾತ್ರೆಯಲ್ಲಿ ನೀರು ತಂದು ಉಜ್ಜನ ತಲೆ ಮೇಲೆ ಸುರಿಯುವನು. ಜನ ಅಂಗಿಗಳಿಗಾಗಿ ಕಚ್ಚಾಡುತ್ತ ಸಿಡುಕಾಡುತ್ತ ಗದ್ದಲ ಮಾಡುತ್ತ ಹಾಕಿಕೊಳ್ಳುತ್ತಿದ್ದಾರೆ. ಸೊಂಟದ ಕೆಳಗಿನ ಬಟ್ಟೆಗಳು ಹಾಗೇ ಇವೆ. ಈ ಮಧ್ಯೆ ಕೆಲವರು ಬಿಜ್ಜಳ ಬಸವಣ್ಣನವರಿಗಾಗಿ ಮಂಚ ಹಾಕಿ ಅದರ ಮೇಲೆ ಕುಳಿತುಕೊಳ್ಳಲು ಬೆತ್ತದ ಮೋಡ ಇಡುತ್ತಾರೆ. ಎಲ್ಲ ಸಿದ್ಧವಾಗಿದೆ. ಉಷಾ ಮಾತ್ರ ಹಾಗೇ ನಿಂತಿದ್ದಾಳೆ. ಉಜ್ಜ ಪೇಚಾಡುತ್ತ ಓಡಾಡುತ್ತಿದ್ದಾನೆ, ಅವನಿಗೆ ಅಂಗಿ ಸಿಕ್ಕುವುದೇ ಇಲ್ಲ. “ನಂಗೇ ಅಂಗಿಲ್ಲ- ಹುಡುಗ, ಲೇ ಅಂಗೀ” ಎಂದು ಕೂಗಾಡುತ್ತಿದ್ದಾನೆ. ಅಷ್ಟರಲ್ಲಿ ಹೊರಗಡೆ ಸದ್ದು, ಸೇವಕ ಪ್ರವೇಶಿಸುತ್ತಾನೆ)
ಸೇವಕ ಆಜಾಧಿರಾಜ, ಭುಜಬಲಮಲ್ಲ,
ವೈರೀಭಕಂಠೀರವ,
ತ್ರಿಭುವನ ಮಲ್ಲ,
ಭುವನೈಕ ವೀರ,
ಬಿಜ್ಜಳ ಮಹಾರಾಜರು ಆಗಮಿಸುತ್ತಿದ್ದಾರೆ-
ಬಿಜ್ಜಳ, ಬಸವಣ್ಣ, ಅಂಗರಕ್ಷಕರು, ರುದ್ರ ಮುಂತಾದವರ ಪ್ರವೇಶ. ಬೇಕಾದರೆ “ಬಿಜ್ಜಳರಿಗೆ- ಜಯವಾಗಲಿ” “ಬಸವಣ್ಣನವರಿಗೆ ಜಯವಾಗಲಿ” ಎಂದು ಘೋಷವಿರಬಹುದು. ಮುಂದಿನ ಸ್ಥಳಗಳಲ್ಲಿ ಕೂರುವ ದೃಶ್ಯ; ಉಷಾ ರಂಗದ ಅಂಚಿನಲ್ಲಿ ಆಸಕ್ತಿ ಇಲ್ಲದೆ ಕೂತಿದ್ದಾಳೆ; ಉಜ್ಜ ತೋಯ್ದ ಬಟ್ಟೆಯಲ್ಲಿ ಎದ್ದು ಕಾಣುತ್ತಾನೆ. ನಿಶ್ಯಬ್ದವನ್ನು ಕಲಕಿ ವಚನಗಾನ ಆರಂಭವಾಗುತ್ತದೆ)
ಬಸವಣ್ಣ ಮತ್ತು ಹಲವರು : ಕಳಬೇಡ, ಕೊಲಬೇಡ-
ಸಭಿಕರು ಅಳಬೇಡ, ಕೊಲಬೇಡ-
ಬಸವಣ್ಣ ಮತ್ತು ಹಲವರು : ಉಸಿಯ ನುಡಿಯಲು ಬೇಡ-
ಸಭಿಕರು ಉಸಿಯ ನುಡಿಯಲು ಬೇಡ-
ಬಸವಣ್ಣ ಮತ್ತು ಹಲವರು : ಉನಿಯಬೇಡ-
ಸಭಿಕರು ಉನಿಯಬೇಡ-
ಬಸವಣ್ಣ ಮತ್ತು ಹಲವರು : ಅನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ-
ಸಭಿಕರು ಅನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಉಜ್ಜ : ಇದಿರ ಹಳಿಯಲು ಬೇಡ, ತನ್ನ ಬಣ್ಣಿಸ-
ಉಜ್ಜ ಮಾತ್ರ ಕೊನೆಯ ಸಾಲನ್ನು ಕೊಂಚ ಗಟ್ಟಿ ಕಂಠದಲ್ಲಿ ತಪ್ಪು ಹೇಳಿದ್ದಾನೆ; ಬಸವಣ್ಣ ಗಮನಿಸಿ ಮತ್ತೆ ಅದೇ ಸಾಲು ಹೇಳುತ್ತಾರೆ; ಗೊಂದಲದಿಂದ ಉಜ್ಜ “ಇದಿರಬೇಡ- ಇದಿರಬೇಡ-” ಮುಂತಾಗಿ ಹೇಳಿ ಇನ್ನೂ ಹದಗೆಡಿಸುತ್ತಾನೆ. ಸಭಿಕರು “ಯಾರು?” “ಯಾಕೆ?” “ಉಜ್ಜ” ಇತ್ಯಾದಿ ಮಾತಾಡಿಕೊಂಡು ಕೊಂಚ ಗುಜುಗುಜು)
ರ್ರುದ್ರ : ವಚನವನ್ನು ಗಂಭೀರವಾಗಿ ಮಾತಾಡಿ ಮುಗಿಸುತ್ತಾನೆ)
ಅನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗದ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲ ಸಂಗಮ ದೇವನೊಲಿಸುವ ಪರಿ-
ಂತ ನಮ್ಮ ಬಸವದೇವರು ಅಪ್ಪಣೆ ಕೊಡಿಸಿದ್ದಾರೆ. ನಾವು ಮರಿಬಾರದಂಥ ಒಂದು ಮಾತು ಅಂದ್ರೆ ನಾವು ಬಸವನ ಮಕ್ಕಳು; ಶಿವಶರಣರು. ಅವರು ಹಾಕಿದ ಗೆರೆ ದಾಟಬಾರ್ದು; ಅವರ ಮಾತಿಗೆ ಚಕಾರ ಎತ್ತಬಾರ್ದು. ಇವತ್ತು ಸಂಕ್ರಾಂತಿ. ಬಸವಣ್ಣನವರಿಗೆ ನಾವು ಮಾತು ಕೊಟ್ಟಿದ್ದೇವೆ; ಅದಕ್ಕೆ ತಕ್ಕಂತೆ ನಾವು ಮನುಷ್ಯರ ಥರ, ಶರಣರ ಥರ ನಡಕೋಬೇಕು. ನಮ್ಮ ಹಳೇ ಜಾಡು ಬದಲಿಸಿ ಹೊಸ ದಾರಿ ಹಿಡಿಬೇಕು. ನಮ್ಮ ದೊರೆಗಳು ಸಹಿತ ನಮ್ಮನ್ನು ಹರಸೋಕೆ ದಯಮಾಡಿಸಿದಾರೆ; ಬಿಜ್ಜಳ ಮಹಾರಾಜರು-
ಬಿಜ್ಜಳ : ಅವನ ಮಾತನ್ನು ಅಷ್ಟಕ್ಕೆ ಕತ್ತರಿಸಿ) ಅದಕ್ಕಿಂತ ಮುಂಚೆ ಮಾಡಬೇಕಾದ ಕೆಲಸ ಬೇಕಾದಷ್ಟಿದೆ ರುದ್ರ. ಉಷಾ ಎಲ್ಲಿ?
ಜನರ ಗುಜುಗುಜು. ಉಷಾ ಎದ್ದು ನಿಲ್ಲುವಳು)
ದ್ದೀಯಾ! ಕೂತುಕೋ ತಾಯಿ. ನಿಮ್ಮೆಲ್ಲರ ಸಮ್ಮುಖದಲ್ಲಿ ನಾನಿವತ್ತು-
ಉಷಾ ಕೂರುವಳು)
ಬಿಜ್ಜಳನ ಮಾತು ಕತ್ತರಿಸುತ್ತ. ಆದರೆ ಅದು ಗೊತ್ತಾಗದಷ್ಟು ಗಂಭೀರವಾಗಿ)
ಬಸವಣ್ಣ : ಅರಣರೆ, ನಿಮ್ಮನ್ನು ನೋಡಿ ನನಗೆ ಸಂತೋಷವಾಗಿದೆ. ಇಂದು ಇಲ್ಲಿ ಬಹುಮುಖ್ಯ ಕಾರ್ಯವಿದೆ. ಅದು ಎಷ್ಟು ಮುಖ್ಯ ಎಂಬುದು ನಿಮಗೆ ಇನ್ನು ಒಂದೆರಡು ಕ್ಷಣದಲ್ಲೇ ಗೊತ್ತಾಗುತ್ತದೆ. ಅದಕ್ಕೆ ಮುಂಚೆ ಎರಡು ಮಾತು. ನನಗೆ ಬಂದ ಸುದ್ದಿಯ ಪ್ರಕಾರ-
ಬಿಜ್ಜಳ : ನಗುತ್ತ) ತಮಗೂ ಗೂಢಚಾರರು ಇರುವಂತಿದೆ-
ಬಸವಣ್ಣ : ಅರಣರ ಬಗ್ಗೆ ಶರಣರಿಂದ ಗೊತ್ತಾಗುತ್ತದೆ, ಪ್ರಭು. (ಸಭೆಗೆ) ನಾನು ಎಲ್ಲವನ್ನೂ ಕೂಲಂಕಷವಾಗಿ ಯೋಚಿಸಿದ್ದೇನೆ, ನಮ್ಮ ದೊರೆ ಬಿಜ್ಜಳ ಪ್ರಭುಗಳೊಂದಿಗೆ ಚರ್ಚಿಸಿದ್ದೇನೆ. ನೀವು ಶರಣರಾಗಬೇಕೆಂದು ಎಂದೂ ಒತ್ತಾಯ ಪಡಿಸಿದವನಲ್ಲ ನಾನು; ಅಂದಮೇಲೆ ನಿಮ್ಮ ತಪ್ಪುಗಳನ್ನು ಟೀಕಿಸಲು ಹಿಂಜರಿದವನಲ್ಲ, ಮನಸ್ಸು ಚಂಚಲ; ಅದು ಶರಣತ್ವದಿಂದ ಜಾರುವುದು, ಸಂಗಮನಿಂದ ದೂರ ಸರಿಯುವುದು ಸುಲಭ. ಈ ಬಗೆಯ ‘ಸುಲಭ’ಕ್ಕೆ ನಿಮ್ಮಲ್ಲಿ ಹಲವರು ತುತ್ತಾಗಿದ್ದಾರೆ; ನನಗೆ ಕೊಟ್ಟ ಆಶ್ವಾಸನೆಯನ್ನು ಮುರಿದಿದ್ದಾರೆ. ರಾಜ್ಯದಲ್ಲಿ ಶರಣರ ಲಾಂಛನದಲ್ಲಿ ಕೊಲೆ, ಸುಲಿಗೆ, ವ್ಯಭಿಚಾರ ಅತಿಯಾಗಿದೆ; ಎಲ್ಲೆಲ್ಲೂ ಕಗ್ಗತ್ತಲು ಹಬ್ಬುತ್ತಿದೆ. ಇದು ಬಿಜ್ಜಳರನ್ನೂ ಕಾಡುತ್ತಿರುವ ಸಮಸ್ಯೆ. ನನ್ನಿಂದ ಯಾರಿಗಾದರೂ ಕಿಂಚಿತ್ತು ಅನ್ಯಾಯವಾದರೆ ನಿಮ್ಮ ಅಣ್ಣ ನಾನಲ್ಲ; ನನ್ನ ಆದರ್ಶಜೀವಿಗಳು ನೀವಲ್ಲ. ನಾವೆಲ್ಲ ಪರಸ್ಪರರ ಕಣ್ಣು ತಪ್ಪಿಸಿ ತಪ್ಪು ಮಾಡಬಹುದು. ಆದರೆ ನಮ್ಮ ಕಣ್ಣುಗಳಿಂದ ನಮಗೆ ಬಿಡುಗಡೆಯಿಲ್ಲ; ಸಂಗಮನಿಗೆ ಮೋಸ ಮಾಡಲು ಆಗುವುದಿಲ್ಲ.
ಬಸವಣ್ಣ ಉಜ್ಜನ ಕಡೆಗೆ ನೋಡುವನು. ಉಜ್ಜ ಎದ್ದು ನಿಂತು ತಲೆ ತಗ್ಗಿಸುವನು)
ರ್ರುದ್ರ : ಅಪ್ಪನಿಗೆ) ನೀನಿವತ್ತು ಮನಸ್ಸು ಮಾಡಬೇಕು-
ಉಜ್ಜ : (ಬಸವಣ್ಣನಿಗೆ) ನನ್ನೊಡೆಯ, ನನ್ನಾಣೆ-
ಬಸವಣ್ಣ : ಆಕು. ಈಗಲಾದರೂ ನನ್ನೆದುರು ಭಾಷೆ ಕೊಡು. ಸಂಕ್ರಾಂತಿ ನಿನ್ನ ಬದುಕಲ್ಲಿ ಅರ್ಥಪೂರ್ಣವಾಗಲಿ (ರುದ್ರನಿಗೆ) ರುದ್ರ-
ರುದ್ರ ಪ್ರಮಾಣ ಮಾಡಿಸಲು ಉದ್ಯುಕ್ತ)
ರ್ರುದ್ರ : ಉಜ್ಜನ ಹತ್ತಿರ ಹೋಗಿ) ಶರಣ, ನಾನಂದಂತೆ ಅನ್ನು.
ಉಜ್ಜ ತಲೆತಗ್ಗಿಸಿ ನಿಂತು ರುದ್ರನ ಮಾತು ಒಪ್ಪಿಸುವನು)
ರ್ರುದ್ರ : ಆನು ಉಜ್ಜ.
ಉಜ್ಜ : ನಾನು ಉಜ್ಜ.
ರ್ರುದ್ರ : ಆನು ಇವತ್ತಿನಿಂದ ಹೊಲೆಯನಲ್ಲ.
ಉಜ್ಜ : ನಾನು ಇವತ್ತಿನಿಂದ ಹೊಲೇನಲ್ಲ.
ರ್ರುದ್ರ : ವತ್ತಿನಿಂದ ಸಾಯೋತಂಕ-
ಉಜ್ಜ : ಇವತ್ತಿನಿಂದ ಹೋಯಾತಂಕ-
ರ್ರುದ್ರ : ಅಸವದೇವರ ಮಾತು ದಾಟುವುದಿಲ್ಲ.
ಉಜ್ಜ : ಬಸವದೇವರ- ದೇವರ-
ರ್ರುದ್ರ : ಆತು ದಾಟಾಕಿಲ್ಲ-
ಉಜ್ಜ : ಮಾತು ದಾಟಾಕಿಲ್ಲ-
ರ್ರುದ್ರ : ಆ ಶರಣ, ನಾ ಭಕ್ತ-
ಉಜ್ಜ : ನಾ ಶ್ಯರಣ, ನಾ ಬಕ್ತ-
ರ್ರುದ್ರ : ಆ ಕೊಲ್ಲಾಕಿಲ್ಲ, ಕುಡಿಯಾಕಿಲ್ಲ, ತಿನ್ನಾಕಿಲ್ಲ.
ಉಜ್ಜ : (ಮೌನ)
ರ್ರುದ್ರ : ಆ ಕೊಲ್ಲಾಕಿಲ್ಲ.
ಉಜ್ಜ : (ಮೌನ)
ಜನ ಹೇಳಿಕೊಡುವರು-‘ಕೊಲ್ಲಾಕಿಲ್ಲ ಅನ್ನೋ’ ‘ಅಸ್ಟೂ ಗೊತ್ತಿಲ್ಲೇನ್ಲ?’ ಹಾಳು ಮುದುಕ, ಇತ್ಯಾದಿ. ಉಜ್ಜ ಕಲ್ಲಿನಂತೆ ನಿಂತೇ ಇದ್ದಾನೆ. ಬಿಜ್ಜಳ ಮುಗುಳ್ನಗುತ್ತಿದ್ದಾನೆ. ಜನರ ಗದ್ದಲ. ರುದ್ರ ಗಟ್ಟಿಯಾಗಿ ರೇಗಿದ ಧ್ವನಿಯಲ್ಲಿ ಮಾತಾಡುತ್ತಿದ್ದಾನೆ)
ರ್ರುದ್ರ : ಒಲ್ಲಾಕಿಲ್ಲ!
ಉಜ್ಜ : (ಮಾತಾಡುವುದಿಲ್ಲ)
ರ್ರುದ್ರ : ಇನ್ನ ಗಂಟಲಿಗೇನಾಗೇತಿ? ಹೇಳು.
ಜನ ‘ಹೇಳೋ’ ‘ಹೇಳೋ’ ಅನ್ನುವರು)
ರ್ರುದ್ರ : ಸಿಟ್ಟಿನಿಂದ) ವದರು!
ಅಲ್ಲಾಡಿಸುವನು)
ಉಷಾ ಎದ್ದು ನಿಂತು ತನ್ನ ಕೈನ ಹಗ್ಗ ಧಡ್ಡನೆ ಎಸೆಯುವಳು; ಎಲ್ಲರ ಗಮನ ಆಕೆಯ ಕಡೆಗೆ ಹರಿಯುವುದು)
ಬಿಜ್ಜಳ : ನು ತಾಯಿ?
ರ್ರುದ್ರ : ನು?
ಉಷಾ ಹಿಂಸೆ ಸಾಕು. ಇದು ವಿಚಿತ್ರ ಹಿಂಸೆ.
ರ್ರುದ್ರ : ಂಥ ಹಿಂಸೆ?
ಉಷಾ ಸ್ಪಷ್ಟವಾಗಿ ನಿಶ್ಯಬ್ದವನ್ನು ಸೀಳಿ) ಕೆಲವರಿಂದ ಕೆಲವು ರೀತಿಯ ಪ್ರಮಾಣ ಮಾತ್ರ ಸಾಧ್ಯ. ಅದು ಗೊತ್ತಾಗದ ನೀನೆಂಥ ಶರಣ?
ರುದ್ದ ಗಂಡಸಿನ ಸೊಕ್ಕಿನಿಂದ) ನಿಂಗಿದು ತಿಳಿಯೊಲ್ಲ, ತೆಪ್ಪಗಿರು.
ಉಷಾ ಆಕೆ?
ಬಿಜ್ಜಳ : ಬಗೆಹರಿಸುತ್ತಾ) ಈ ಬಗ್ಗೆ ಭಿನ್ನಾಭಿಪ್ರಾಯ ಇರುವಂತಿದೆ ಬಸವಣ್ಣ, ನೀವು ಮಧ್ಯೆ ಪ್ರವೇಶಿಸದಿದ್ದರೆ ಎಲ್ಲ ಬಗೆಹರಿಸುತ್ತೇನೆ.
ಬಸವಣ್ಣ : ಅಗೆಹರಿಸಿ ಪ್ರಭು.
ಬಿಜ್ಜಳ : ತೀರ್ಮಾನಿಸುವ ಧಾಟಿಯಲ್ಲಿ) ಈಗ, ನಾನು ಮಾತಾಡುವುದಕ್ಕೆ ಮುಂಚೆ ಉಷಾದೇವಿಯ ಪ್ರಮಾಣ ಏಕೆ ತೆಗೆದುಕೊಳ್ಳಬಾರದು?
ಜನ ‘ಹೆಂಗಸಿಂದ್ಯಾಕೆ’‘ತಗಳ್ರೀ’‘ಮಾತಂದ್ರೆ ಮಾತಪ್ಪ’ ಅನ್ನುವರು; ಉಷಾ ಎದ್ದು ನಿಲ್ಲುವಳು)
ಬಿಜ್ಜಳ : ಣೆ ತೆಗೆದುಕೊಳ್ಳುತ್ತೀಯಾ ತಾಯಿ?
ಉಷಾ ಖಂಡಿತವಾಗಿ) ಇಲ್ಲ ಪ್ರಭು.
ಬಿಜ್ಜಳ : ಅತ್ಯುತ್ಸಾಹದಿಂದ, ಸಭೆಗೆ) ಕೇಳಿ, ನಾನು ಮತ್ತು ಬಸವಣ್ಣ ಮುಖ್ಯ ಕೆಲಸದ ಮೇಲೆ ಬಂದಿದ್ದೇವೆ. ರುದ್ರ ನಿಮ್ಮ ಮುಖಂಡ, ಈ ಊರ ಶರಣರ ಮುಂದಾಳು. ಈತನ ಮೇಲೆ ನಮ್ಮ ರಾಜ್ಯದ ಒಂದು ಪಂಗಡ ಕೆಲವು ಆಪಾದನೆ ಮಾಡಿದೆ; ನಾನು ಮಾತ್ರ ಅದನ್ನು ನಂಬಿಲ್ಲ. ಶರಣರ ಶರಣತ್ವದ ಬಗ್ಗೆ ನನಗೆ ಸಂದೇಹ ಇಲ್ಲ; ರುದ್ರನ ಶರಣತ್ವದಲ್ಲಿ ಸಹ ಸಂದೇಹವೇ ಇಲ್ಲ. ಆದರೆ ರಾಜ್ಯದ ಕಟ್ಟಳೆ, ವ್ಯವಸ್ಥೆ ಕಾಪಾಡಬೇಕಾದ್ದು ನನ್ನ ಕರ್ತವ್ಯ. ಆಪಾದನೆ ಬಂದಾಗ ಅದನ್ನು ಗಮನಿಸಬೇಕಾದ್ದು ನನ್ನ ಜವಾಬ್ದಾರಿ. ಇಲ್ಲಿಂದ ಕೊಂಚ ದೂರದಲ್ಲಿಯೇ ಈ ಸಭೆಯ ತೀರ್ಮಾನಕ್ಕಾಗಿ ಈ ಪಂಗಡದ ಜನ ಕಾಯುತ್ತಿದ್ದಾರೆ; ನೀವು ಕಿವಿಗೊಟ್ಟು ಕೇಳಿದರೆ ಅದರ ಬಡಿತ ನಿಮಗೆ ಕೇಳಿಸೀತು. ಆಡಳಿತ ಯಂತ್ರ ನಡೆಸುವ ನಾನು ಯಾವ ಧರ್ಮಕ್ಕೂ ಸೇರಿದವನಲ್ಲ. ಇನ್ನೊಂದು ಅರ್ಥದಲ್ಲಿ ಎಲ್ಲ ಧರ್ಮಗಳೂ ನನ್ನವು. ಇದನ್ನು ನೀವು ನೆನಪಿಡಬೇಕು. ರುದ್ರನ ಪ್ರೇಮ ಪ್ರಕರಣವನ್ನು ಜನ ಹಲವು ರೀತಿಯಲ್ಲಿ ನೋಡುತ್ತಿದ್ದಾರೆ; ಇದು ಪ್ರೇಮವೋ, ಕಾಮವೋ, ನಿಜವೋ, ಸುಳ್ಳೋ ನಾವು ಈಗ ನೋಡಬೇಕಾಗಿದೆ. ಅತ್ಯಾಚಾರಕ್ಕೆ ಈ ರಾಜ್ಯದಲ್ಲಿ ಶಿಕ್ಷೆ ತಲೆದಂಡ.
ಷಾ, ಕೊಂಚ ಮುಂದೆ ಬಾ. ನನ್ನ ಭಾರ ನಿನಗೆ ಗೊತ್ತಿದೆ. ನನ್ನ ವಿಶ್ವಾಸವೂ ನಿನಗೆ ಗೊತ್ತಿದೆ. ನಿನ್ನನ್ನು ಬರಹೇಳಿದಾಗ ನೀನು ಬರಲಿಲ್ಲ, ಅದು ಸಾಮಾನ್ಯವಾಗಿ ರಾಜಾಜ್ಞೆಯ ಉಲ್ಲಂಘನೆ. ಆದರೆ ನಾನು ನಿನ್ನನ್ನು ಕ್ಷಮಿಸಿದ್ದೇನೆ. ನಿನ್ನ ಪ್ರೇಮಕ್ಕೆ-ಅದು ಪ್ರೇಮವಾಗಿದ್ದರೆ- ನನ್ನ ಸಂಪೂರ್ಣ ಬೆಂಬಲವಿದೆ. ಹೇಳು ರುದ್ರನದು ಪ್ರೇಮವೋ ಬಲತ್ಕಾರವೋ?
ಮೌನ, ಎಲ್ಲರೂ ಉಷಾ ಕಡೆ ನೋಡುತ್ತಿದ್ದಾರೆ)
ಏಳು, ಮಾತಾಡು, ನನ್ನ ಪೂರ್ಣ ರಕ್ಷಣೆಯಿದೆ.
ಉಷಾ ಸ್ಪಷ್ಟವಾಗಿ, ಗಂಭೀರವಾಗಿ) ಬಲಾತ್ಕಾರ.
ಎಲ್ಲೆಲ್ಲೂ ಗದ್ದಲ, ಕೆಲವರು ಏಳಲು ಯತ್ನಿಸುವರು. ಬಸವಣ್ಣನವರೂ ಎದ್ದು ನಿಲ್ಲುವರು. ‘ಹುಚ್ಚಿ’‘ಹಾದರಗಿತ್ತಿ’‘ಹಾರವರ ರಂಡೆ’ ಇತ್ಯಾದಿ ಗದ್ದಲ. ಬಿಜ್ಜಳ ಗದ್ದಲವಾಗಲು ಕೊಂಚ ಕಾಲ ಕೊಡುವನು. ಆಮೇಲೆ ಚಪ್ಪಾಳೆ ತಟ್ಟಿ, ಗದ್ದಲ ನಿಲ್ಲದಿರಲು ಎತ್ತರಿಸಿದ ಕಂಠದಲ್ಲಿ, ಎಲ್ಲರಿಗೂ ಕೇಳಿಸುವಂತೆ-)
ಬಿಜ್ಜಳ : ದು ಬಲತ್ಕಾರದ ಪ್ರಕರಣವೆಂದು ಉಷಾದೇವಿ ಹೇಳಿದ್ದಾಳೆ; ರುದ್ರ
ಮರಣದಂಡನೆಗೆ ಗುರಿಯಾಗಿದ್ದಾನೆ.
ಈಗಾಗಲೇ ಗದ್ದಲ ಮಾಡುತ್ತಿರುವ ಉಜ್ಜ ಎದ್ದು ನಿಂತು ಕೂಗತೊಡಗುತ್ತಾನೆ. ಜನ ಅವನನ್ನು ಹಿಡಿದುಕೊಂಡರೂ ಅವನು ಕಿತ್ತಾಡುತ್ತಾ ಕೂಗಾಡುತ್ತಿದ್ದಾನೆ-)
ಉಜ್ಜ : ಸುಳ್ಳು! ಆಕಿ ಸುಳ್ಳು ಬೊಗಳ್ತಿದಾಳೆ! ನಾನು ಕಣ್ಣಾರೆ ಕಂಡಿದೀನಿ! (ಹಿಡಿದವರೊಂದಿಗೆ ಜಗಳವಾಡುತ್ತ) ಬಿಡ್ರೊ ನನ್ನ, ನನ್ನ ಮಗ ಸಾಯಾಕೆ ನಾ ಬಿಡಲ್ಲ! ಕೊಲ್ಲಬ್ಯಾಡ್ರೋ ನನ್ನ ಮಗನ್ನ! ಕೊಲ್ಲಬ್ಯಾಡ್ರೋ ಅವ ಏನೂ ಮಾಡಿಲ್ಲ!
ರ್ರುದ್ರ : ಗಟ್ಟಿಯಾಗಿ ತನ್ನೆಲ್ಲ ಕ್ರೋಧದಿಂದ) ಸಾಕು, ನಿನ್ನ ವದರಾಟ ನಿಲ್ಸು.
ಉಜ್ಜ : ಯಾಕೆ? ಮಾತಾಡಬ್ಯಾಡಂತೀ?
ರ್ರುದ್ರ : ಅಸವಣ್ಣ ಅದಾರೆ, ದೊರೆ ಅದಾರೆ, ಅವರಿಗೆಲ್ಲ ಗೊತ್ತೈತಿ.
ಉಜ್ಜ : ಗೊತ್ತಾಗಲ್ಲ! ಅವರಿಗೆ ಹ್ಯಂಗೆ ಗೊತ್ತಾದೀತು? ಹ್ಯಂಗಪ್ಪ ಗೊತ್ತಾಗ್ತತಿ ನನ್ನ ದುಕ್ಕ? ಕೂಗ್ತನಿ-ಪರಪಂಚಕ್ಕೆ ಕೇಳಂಗೆ ಕೂಗ್ತನಿ- ಮೋಸ! ಎಲ್ರೂ ಕೂಡಿ ನನ್ನ ಮಗನ್ನ ಕೊಲ್ತಾರೆ!
ರ್ರುದ್ರ : ಅವನನ್ನು ಹಿಡಿದು ಗಟ್ಟಿಯಾಗಿ) ಕೊಂದ್ರೆ ಸಾಯೋನು ನಾನು, ನೀನಲ್ಲ. ಬಸವಣ್ಣ ಸಾಯಿ ಅಂದ್ರೆ ನಾ ಸಾಯ್ತಿನಿ.
ಉಜ್ಜ : (ದುಃಖ, ಕೋಪದಿಂದ) ಹೆತ್ತವನ ಹೊಟ್ಯುರಿ ನಿಂಗೆ ಹ್ಯಂಗೆ ಗೊತ್ತಾದೀತು?
ಬಿಜ್ಜಳನಿಗೆ) ಸುಳ್ಳ ಬೊಗಳ್ತಾನೆ ನನ್ನೊಡೆಯಾ. ನಾನೇ ಕಣ್ಣಾರೆ ನೋಡೀನಿ. ಆಕಿ ಮಾತು ನಂಬಬೇಡಿ ನನ್ನೊಡೆಯಾ.
ಬಿಜ್ಜಳ : ಉಳ್ಳು ಹೇಳಿದರೆ ನಿನ್ನ ತಲೆ ಹಾರುತ್ತೆ. ಹೇಳು ನೀನೆಲ್ಲಿದ್ದೆ ಆಗ?
ಉಜ್ಜ : ಹೊಳೀತಾವ-
ಬಸವಣ್ಣ : ಗಟ್ಟಿ, ಗಂಭೀರ ಕಂಠದಲ್ಲಿ) ರುದ್ರ , ಇತ್ತ ಬಾ (ಬರುವನು) ಯಾಕೆ ಹೀಗಾಯಿತು ? (ಮೌನ)
ಕೆ ಹೇಳಿದ್ದು ಸುಳ್ಳಲ್ಲವೆ? (ಮೌನ)
ಇನಗೆ ಗೊತ್ತಿದೆ. ಆಕೆಗೆ ಗೊತ್ತಿದೆ. ನಿನ್ನನ್ನು ಬಲ್ಲ ಎಲ್ಲರಿಗೂ ಗೊತ್ತಿದೆ.
(ಮುನಿಸಿನಿಂದ) ಬಲಾತ್ಕಾರ ಮಾಡಿದ್ದು ಆಕೆ; ನೀನಲ್ಲ.
ಬಿಜ್ಜಳ : ಗ ಅವನಿಗೆ ಹೇಳಿಕೊಟ್ಟು ಪ್ರಯೋಜನವಿಲ್ಲ. ಆದರೂ-ಮಾತಾಡು ರುದ್ರ. (ಮೌನ)
ಬಸವಣ್ಣ : ಆತಾಡು. ಮಾತಾಡುವುದಕ್ಕೆ ನಿನಗೇನಾಗಿದೆ?
ರ್ರುದ್ರ : ಅನಗೆ ಏನೂ ಗೊತ್ತಾಗ್ತಿಲ್ಲ ಸ್ವಾಮಿ (ಧ್ವನಿಯೆತ್ತರಿಸಿ ಸ್ಪಷ್ಟವಾಗಿ) ಏನೂ
ತಿಳೀತಿಲ್ಲ.
ಬಸವಣ್ಣ : ಲ್ಲ, ಗೊತ್ತಾಗ್ತಿದೆ, ಹೇಳಲು ಹೆದರಿಕೆ. ಹೆಣ್ಣು ಬಲಾತ್ಕಾರ ಮಾಡಿದಳು ಅಂತ ಒಪ್ಪಿಕೊಳ್ಳೋದಕ್ಕೆ ಹೆದರಿಕೆ. ನಿನ್ನ ಗಂಡಸುತನದ ಬಗ್ಗೆ ಹೆಮ್ಮೆ ನಿನಗೆ; ಜನ ನಕ್ಕಾರೆಂಬ ಭಯ ನಿನಗೆ, ನಿನ್ನ ಶೂದ್ರತ್ವದ ಬಗ್ಗೆ ಅಹಂಕಾರ, ಅದಕ್ಕೇ ನಿನ್ನ ಧ್ವನಿ ಹೊರಡುತ್ತಿಲ್ಲ.
ರ್ರುದ್ರ : ಅನ್ನ ಮನಸ್ಸಿನ್ನೂ ಯಾಕೆ ಗೊತ್ತಾತ್ತಿಲ್ಲ? ನನಗೆ ಏನೂ ತಿಳೀತಿಲ್ಲ. ಅಂತ ಯಾಕೆ ಗೊತ್ತಾಗ್ತಿಲ್ಲ? (ಮೌನ. ಉಷಾ ಹತ್ತಿರ ಹೋಗಿ)
ಆಕೆ ? ಏನಾಗಿತ್ತು ನಿಂಗೆ? (ಮೌನ)
ಅನ್ನ ತಲೆದಂಡ ಯಾಕೆ ಬೇಕಾಗಿತ್ತು? ಯಾಕೆ ಹಾಗೆ ನಗ್ತಾ ನಗ್ತಾ ಮಾತಾಡ್ತಿದ್ದೆ? ಯಾಕೆ ನನ್ನ ಮೆಚ್ಚಿ ಪದ ಹೇಳ್ತಿದ್ದೆ.
ಬಿಜ್ಜಳ : ಔದೆ ಉಷಾ? ನಿಜವೆ?
ಉಷಾ ಔದು.
ಬಿಜ್ಜಳ : ಆಗಾದರೆ ಹ್ಯಾಗೆ ಬಲಾತ್ಕಾರ?
ಉಷಾ ಮೌನ) ನನ್ನ ಬಳಿ ಮಾತಾಡುತ್ತಿದ್ದವ ಬೇರೆ. ಆತ ಬಂದು ಮೈಮೇಲೆ ಬಿದ್ದ. ಆತ ನನಗೆ ಬೇಕಾದವನಾಗಿದ್ದ; ಆದರೆ ನಾನು ಎದ್ದು ನೋಡಿದಾಗ ಆತ ಇರಲಿಲ್ಲ. ಅಲ್ಲಿದ್ದವನು ಶರಣ ರುದ್ರ. ಇದು ಅತ್ಯಾಚಾರವಲ್ಲದೆ ಮತ್ತೇನು?
ಬಿಜ್ಜಳ : ಈನು ಬದಲಾವಣೆ ಬಗ್ಗೆ ಹೇಳುತ್ತಿದ್ದೀ.
ಉಷಾ ಔದು ಪ್ರಭು.
ಬಿಜ್ಜಳ : ಈನು ಕಂಡದ್ದು ಬೇರೆ, ಆಮೇಲೆ ಇದ್ದದ್ದು ಬೇರೆ.
ಉಷಾ ಔದು ಪ್ರಭು.
ಬಿಜ್ಜಳ : ರುದ್ರ ಬೇರೆ, ಈ ರುದ್ರ ಬೇರೆ.
ಉಷಾ ದುಃಖದಿಂದ) ಹೌದು ಪ್ರಭು.
ಬಸವಣ್ಣ : ಆನು ಮಾತಾಡಲೇ?
ಬಿಜ್ಜಳ : ಗಮನಿಸದವನಂತೆ) ಇಂದು ಸಂಕ್ರಾಂತಿ. ನಿನ್ನೆ ನೋಡಿದ್ದು ಇವತ್ತಿಲ್ಲ. ಇವತ್ತಿನದು ನಾಳೆ ಬೇರೆಯಾಗಿರುತ್ತದೆ. ಈ ರಾಜ್ಯಕ್ಕೆ ಇವತ್ತಿನಿಂದ ಶಾಂತಿ ದೊರೆಯಬೇಕು. ರುದ್ರನ ತಲೆದಂಡ ನಮ್ಮೆಲ್ಲರಿಗೆ ಪಾಠವಾಗಬೇಕು; ನಮ್ಮ ಧರ್ಮ, ಪ್ರೇಮ, ಕಾಮದ ಬಗ್ಗೆ ನಮ್ಮ ಮನಸ್ಸು ಹೆಚ್ಚು ನಿಷ್ಠುರವಾಗಿ ಸೂಕ್ಷ್ಮವಾಗಿ ಯೋಚಿಸುವಂತಾಗಬೇಕು. ನನ್ನ ಈ ರಾಜ್ಯಕ್ಕೆ ಪ್ರೇಮ, ಮತ್ತಷ್ಟು ಪ್ರೇಮ ಬೇಕು. ಇದು ನಮ್ಮ ರಾಜ್ಯದ ಎಲ್ಲರಿಂದ ದೊರೆಯಬೇಕಾಗಿದೆ. ಶೂದ್ರರಿಂದ, ಶರಣರಿಂದ, ವೈದಿಕರಿಂದ, ಜಿನಪಂಥಿಗಳಿಂದ -ಎಲ್ಲರಿಂದ ಪ್ರೇಮ, ವಿಶ್ವಾಸ ದೊರೆಯಬೇಕಾಗಿದೆ.
ಗ ನೀವು ನಿಮ್ಮ ನಿಮ್ಮ ಮನೆಗಳಿಗೆ ಹೋಗಿ. ರುದ್ರ ಮತ್ತು ಅವನ ತಂದೆ ನಮ್ಮ ಹತೋಟಿಯಲ್ಲಿರಲಿ.
ಎಲ್ಲರೂ ಹೋಗುವರು. ಸೈನಿಕರು ರುದ್ರ ಮತ್ತು ಉಜ್ಜನನ್ನು ಕರೆದೊಯ್ಯುವರು. ರಂಗದ ಅಂಚಿನಲ್ಲಿ ಉಷಾ ಮತ್ತು ಕೆಂಚ ಇದ್ದಾರೆ. ಅಲ್ಲಿ ಮಬ್ಬುಗತ್ತಲಿದೆ. ಹೋಗುವ ಮುನ್ನ ಬಿಜ್ಜಳ ಮತ್ತು ಬಸವಣ್ಣ ಮಾತಾಡುತ್ತಾರೆ)
ಬಸವಣ್ಣ : ಅತೀವ ನೋವಿನಿಂದ) ಇದು ತಲೆದಂಡವಲ್ಲ, ಕೊಲೆ.
ಬಿಜ್ಜಳ : ದಕ್ಕಿಂತ ಮುಖ್ಯ ಪ್ರಶ್ನೆ. ಯಾರು ಮಾಡಿದ ಕೊಲೆ? ನಿಮ್ಮ ಉತ್ತರ ನನಗೆ ಗೊತ್ತು; ನನ್ನ ಉತ್ತರ ನಿಮಗೆ ಗೊತ್ತು. ಅದು ಕೇವಲ ವಾದವಾದೀತು. ಬಸವಣ್ಣ, ವಾದವನ್ನು ಮೀರಿದ್ದು ತಾನೇ ಸತ್ಯ?
ಬಸವಣ್ಣ : ಅನ್ನ ಮಾತಿಗೆ ನೀವು ಅವಕಾಶ ಕೊಡಲಿಲ್ಲ.
ಬಿಜ್ಜಳ : ಕುರುಡ ನೆವ) ಉಷಾ ಪ್ರೀತಿ ಕೂಡ ಮಾತಿಗೆ ಮೀರಿದ್ದು, ಅಲ್ಲವೆ? ಬನ್ನಿ.
ಹೋಗುವರು. ಕತ್ತಲಿನಿಂದ ಉಷಾ ಮೆಲ್ಲಗೆ ಬೆಳಕಿನ ಹತ್ತಿರ ಬರುವಳು. ಬೆಳಕು ಕ್ರಮೇಣ ಮಂದವಾಗುತ್ತಿದೆ. ಕೆಂಚ ನಿಧಾನಕ್ಕೆ ರಂಗಮಧ್ಯಕ್ಕೆ ಬರುತ್ತಾನೆ. ಉಷಾ ವೇದಿಕೆಯ ಅಂಚಿನಲ್ಲಿ ಕೂತು ಬಿಕ್ಕಿ ಬಿಕ್ಕಿ ಅಳುವಳು. ತಮ್ಮಟೆಯ ಸದ್ದು ಮೆಲ್ಲಗೆ ಆರಂಭವಾಗುವುದು. ಕೆಂಚ ಉಷಾಳ ಸುತ್ತ ಮೆತ್ತಗೆ ಕುಣಿಯುತ್ತಾನೆ- ಹುಲಿಯ ನೆನಪು ಬರುವಂತೆ. ಕತ್ತಲು ಹಬ್ಬಿದಂತೆ ತಮ್ಮಟೆಯ ಸದ್ದು ಹೆಚ್ಚಾಗುತ್ತದೆ).
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.