ಜೋಕುಮಾರಸ್ವಾಮಿ – ೧

ಗಣ್ಣ ಪದ

ಶರಣು ಹೇಳೇನ್ರಿ ಸ್ವಾಮಿ ನಾವು ನಿಮಗ
ಸದ್ದು ಗದ್ದಲ| ಮಾಡಬ್ಯಾಡ್ರಿ ಆಟದೊಳಗ

ಸಣ್ಣ ಹುಡುಗರು ನಾವು ಬಣ್ಣಕ ಹೆದರವರು
ಚೆನ್ನಾಗಿ ಕೇಳರಿ ನಮ್ಮ
ಕೂತೀರಿ ಹೆಣ್ಣು ಗಂಡು ಭರ್ತಿಸಭಾ ಇರಲಿ
ಬುದ್ಧಿವಂತರ ಪ್ರೀತಿ ನಮ್ಮ ಮ್ಯಾಲ

ಭೂಸನೂರಮಠದಯ್ಯಾ ಸಾವಳಗಿ ಶಿವಲಿಂಗಾ
ಇರಲೆಪ್ಪಾ ನಿಮ್ಮ ಪ್ರೀತಿ ನಮ್ಮ ಮ್ಯಾಗ||

ಪೂರ್ವರಂಗ

[ರಂಗದ ಮಧ್ಯದಲ್ಲಿ ತರಕಾರಿ ತುಂಬಿದ ಒಂದು ಬುಟ್ಟಿ, ಅದರ ಮಧ್ಯದಲ್ಲಿ ಒಂದು ಪಡವಲ ಕಾಯನ್ನು ಲಂಬವಾಗಿ ನೆಟ್ಟಿದೆ.]

ಸೂತ್ರಧಾರ: ಕೂತ ನಿಂತಂಥಾ ಬುದ್ಧಿವಂತರಿಗೆಲ್ಲಾ ಶರಣು, ಈ ನಮ್ಮಾ ಹೊಸ ದೇವರು ಕಾಣಿಸ್ತಾನಲ್ಲ- ಹೆಸರು ಜೋಕುಮಾರಸ್ವಾಮಿ ಅಂತ. ಜೋಕುಮಾರನ ಸುದ್ದಿ ನಿಮಗೇನೂ ಹೊಸದಲ್ಲ. ಅದರ ಬ್ಯಾರೆ ದೇವರಿಗೂ ಈ ದೇವರಿಗೂ ಒಂದ ಫರಕ ಐತಿ. ಉಳಿದ ದೇವರು ಸ್ವಲ್ಪ ಮುಖ ಸ್ತುತಿ ಮಾಡಿದರ ಸಾಕು, ಬಾಯಿತುಂಬ ವರ ಕೊಡತಾವ. ಯಾಕೋ ಏನೋ ಒಂದು ವರಾನೂ ಖರೆ ಬರಾಣಿಲ್ಲ. ಅವೂ ಮಂತ್ರಿಗಳ ಮಾತಿನ್ಹಾಂಗ ಹುಸಿ ಹೋಗತಾವಷ್ಟೇ, ಆದರ ಈ ನಮ್ಮ ದೇವರು ನೈವೈದ್ಯ ನೀದಿದರ ಮಾತಾಡ್ಯಾನೂ ಅಂದೀರಿ, ಪೂಜಿಮಾಡಿ ಮ್ಯಾಲ ತೋಳ ತೆಕ್ಕಾಗ ಹಿಡಾಕೊಂಡಾರ, ಕೆಳಗ ಉಡೀತುಂಬ ಮಕ್ಕಳಾ ಕೊಟ್ಟಿರತಾನ! ಇಂಥಾ ವಿಪರೀತ ದೇವರ ಕಥೀನ ಇಂದಿನ ಆಟ.
ಎಲ್ಲಿ? ಅಪೂ ಹಿಮ್ಯಾಳ್ಯಾ-
ಹಿಮ್ಮೇಳ: ಯಾಕ್ಕರದಿ? ಯಾಕ್ಕರದಿ?
ಸೂತ್ರದಾರ: ಆಟದ ಆರಂಭಕ್ಕೆ ಜೋಕುಮಾರಸ್ವಾಮಿ ಪೂಜೆ ಮಾಡಬೇಕು. ಸಾಮಗ್ರಿ ಸಮೇತ ಬಂದು, ಶಾಸ್ತ್ರದ ಪ್ರಕಾರ ಈ ದೇವರನ್ನ ಪೂಜಿಸುವಂಥವನಾಗು.
ಹಿಮ್ಮೇಳ: ದೇವರು ಎಲ್ಲೈತೆಂದಿ?
ಸೂತ್ರಧಾರ: ಇಲ್ಲಿ ಕಾಣ್ಸಾಣಿಲ್ಲ?
ಹಿಮ್ಮೇಳ: ಈ ದೇವರ?
ಸೂತ್ರಧಾರ: ಯಾಕ ಈ ದೇವರಿಗೇನಾಗೇತಿ?
ಹಿಮ್ಮೇಳ: ಆಟದ ಆರಂಭಕ್ಕ ಗಣೇಶನ ಪೂಜೆ ಮಾಡೋದ ಬಿಟ್ಟ, ಇಂಥಾ ದೇವರ ಪೂಜೆ ಮಾಡಂತಿ; ತಿಳಿಬಾರದ? ನಾಕ ಮಂದಿ ಬುದ್ಧಿವಂತರೇನಂದಾರ?
ಸೂತ್ರಧಾರ:

ಹುಚ್ಚಾ, ಎಲ್ಲಾ ದೇವರೂ ಒಂದ ಅಂದಮ್ಯಾಲ ಯಾವ ದೇವರ ಪೂಜೆ ಮಾಡಿದರೇನಾ? ಹಾಂಗ ನೋಡಿದರ ಈ ಜೋಕುಮಾರಸ್ವಾಮಿ ಗಣೇಶಗ ಖಾಸ ತಮ್ಮಂದಿರಾಗಬೇಕು. ಇಂದಿನ ಆಟದ ಕಥೀನೂ ಈ ದೇವರ್‍ದ. ಮೂಲ ದೇವರನ್ನ ಹಾಂಗೆಲ್ಲಾ ಮರೀಬಾರದೇನಪಾ.
ಹಿಮ್ಮೇಳ: ಅಂಥಾದ್ದೇನಪಾ ಇವನ ಮಹಿಮಾ?
ಸೂತ್ರಧಾರ: ಈ ಹೊತ್ತಿನ ಶುಭಮುಹೂರ್ತದಲ್ಲಿ, ಮಕ್ಕಳಿಲ್ಲದ ಬಂಜೇರು ಬಂದು, ಪೂಜಾ ಮಾಡಿ, ಸ್ವಾಮೀನ ಪಲ್ಯಾ ಮಾಡಿ ಗಂಡಗ ತಿನ್ನಿಸಿದರ, ಅಪಾ ಹತ್ತೆಂಟ ಮಕ್ಕಳು ಹಾ ಅನ್ನೂದರೊಳಗ ಹುಟ್ಟುತಾವ!
ಹಿಮ್ಮೇಳ: ಬರೋಬರಿ. ಅದಕ್ಕ ಹೆಂಗಸರ ಬಂದಿಲ್ಲ. ಫೆಮಿಲಿ ಪ್ಲಾನಿಂಗ್ ಸಮಾಚಾರ ನಿನಗ ಗೊತ್ತ ಇಲ್ಲೇನ?
ಸೂತ್ರಧಾರ: ಅಪೂ ಹಿಮ್ಯಾಳ್ಯ, ಗಂದಂದಿರ ಪ್ರೀತಿ ಕಳಕೊಂಡಂಥ ಬಾಲೇರು ಬಂದು, ಸ್ವಾಮೀನ್ನ ಪಲ್ಯ ಮಾಡಿ ತಿನ್ನಿಸಿದರ ಗಂಡಂದಿರೆಲ್ಲ ಹಳೇ ನಾಯಿ ಹಾಂಗ ಮನ್ಯಾಗ ಬಿದ್ದಿರತಾರ!
ಹಿಮ್ಮೇಳ: ಹಾಂಗಿದ್ದರ ಇದು ಭಾಳ ಮಂದಿ ಹೆಂಗಸರಿಗೆ ಗೊತ್ತಿಲ್ಲ ಬಿಡು.
ಸೂತ್ರಧಾರ: ಇಂಥಾ ದೇವರಿಗೆ ಏನೇನೂ ಅನ್ನಬಾರದು. ಪೂಜಾ ಸಾಮಗ್ರಿ ತಗೊಂಬಾ.
ಹಿಮ್ಮೇಳ: ತಾ ಅಂದರ ತಂದೇನಪಾ,- ಅದರ ಮಂದಿ ಬೈದರ ಆ ಬೈಗಳ್ನೆಲ್ಲಾ ನಿನ್ನ ಹೆಸರಿಗೇ ಜಮಾ ಮಾಡಾವ ನಾನು, ತಾ ಅಂದಿ?
ಸೂತ್ರಧಾರ: ತಗೊಂಬರುವಂಥವನಾಗು.
ಹಿಮ್ಮೇಳ: ಘನಲಜ್ಜಿಗೇಡಿ ನೀನೂ! ಏನೇನ ತರಲಿ?
ಸೂತ್ರಧಾರ: ಕರಿಕಿ, ಪತ್ರಿ.
ಹಿಮ್ಮೇಳ: ಕರಿಕಿ ಪತ್ರಿ? ನಿಮ್ಮ ದೇವರು, ಯಾವದಾದರು ದನದ ಜಾತಿ ಇದ್ದಿರಬೇಕೇನ? ಹಾಗಿದ್ದರ ಹೊಲದ ಕಡೆ ಹೊಡದ ಬಿಡಲ್ಲ. ಮೇದ ಬರಲಿ.
ಸೂತ್ರಧಾರ: ಹುಚ್ಚಾ, ಬೆಂಕಿಯಂಥಾ ದೇವರಿಗಿ ಚೇಷ್ಟಾ ಮಾಡಬಾರದು. ಶುಚಿರ್ಭೂತನಾಗಿ ಕರಿಕಿ ಪತ್ರ ತರುವಂಥವನಾಗು.
ಹಿಮ್ಮೇಳ: ಹಾಂಗ ಆಗಲಿ, ಸೂತ್ರಧಾರ ನಾನಾದರು ಕರಿಕಿ ಪತ್ರ ತಂದೇನ್ನೋಡು.
ಸೂತ್ರಧಾರ: ಇನ್ನು ಮ್ಯಾಲೆ ಪನ್ನೀರು ತರುವಂಥವನಾಗು.
ಹಿಮ್ಮೇಳ: ಕಣ್ಣೀರಾ?
ಸೂತ್ರಧಾರ: ಪನ್ನೀರು, ಪನ್ನೀರು.
ಹಿಮ್ಮೇಳ: ತಿಳೀತ ಬಿಡು.
ಸೂತ್ರಧಾರ: ಏನ ತಿಳೀತು.
ಹಿಮ್ಮೇಳ: ಹಜಾಮರ ಬಟ್ಟಲದಾಗಿರತಾವ, ಅದ ನೀರ ಹೌಂದಲ್ಲ?
ಸೂತ್ರಧಾರ: ಹುಚ್ಚಾ, ಪರಿಶುದ್ಧವಾದ ನೀರಿಗೆ ಪನ್ನೀರು ಪನ್ನೀರು ಅಂತಾರ. ಅಂಥಾ ಪನ್ನೀರು ತಗೊಬರುವಂಥವನಾಗು.
ಹಿಮ್ಮೇಳ: ಸೂತ್ರಧಾರ, ಅವನ್ನಾದರೂ ತಂದಿದ್ದೇನ್ನೋಡು.
ಸೂತ್ರಧಾರ: ಇನ್ನು ಮೇಲೆ ಫಲಪುಷ್ಪ ತಗೊಂಡು ಪೂಜಾ ಮಾಡಲಿಕ್ಕೆ ಒಬ್ಬ ಗರತೀನ ಕರಕೊಂಡು ಬರುವಂಥವನಾಗು.
ಹಿಮ್ಮೇಳ: ನಿಮ್ಮ ದೇವರು ಭಾರೀ ತುಟ್ಟೀದಪಾ! ಫಲ ತಂದೇನು, ಪುಷ್ಪ ತಂದೇನು. ಗರತಿ ಬೇಕಂತಿ. ಎಲ್ಲಿಂದ ತರಲಿ? ಶುದ್ಧ ಗರತೀನ ಬೇಕಂದಿ?
ಸೂತ್ರಧಾರ: ಹೌಂದೌಂದು, ಶುದ್ಧ ಗರತೀನ ಆಗಬೇಕು.
ಹಿಮ್ಮೇಳ: ಅದರಾ‌ಅಗ ಸ್ವಲ್ಪ ಬೆರಕಿಯಿದ್ದರ?
ಸೂತ್ರಧಾರ: ಛೇ ಛೇ ಹಾಂಗೆಲ್ಲ ಹೇಳಬಾರದು.
ಹಿಮ್ಮೇಳ: ಸೂತ್ರಧಾರ, ಫಲಪುಷ್ಪ ತಂದೇನ್ನೋಡು. ಗರತಿ ಸಮಾಚಾರ ನನ್ನಿಂದ ಆಗಾಣಿಲ್ಲ ತಗಿ. ಬೇಕಂದರ ಈಗ ಯಾರೂ ಇಲ್ಲ. ನಾನ ಹೆಂಗಸಂತ ತಿಳಕೊಂಡು ಸಾಗಸೋ ಹಾಂಗಿದ್ದರ ಸಾಗಸು.
ಸೂತ್ರಧಾರ: ಅಪಾ, ಹೀಂಗ್ಯಾಂತೀಯೋ?
ಹಿಮ್ಮೇಳ: ಹೆಂಗೇನ? ಇಂಥಾ ದೇವರ ಪೂಜಿಗಿ ಮಾನ ಮರ್‍ಯಾದಿ ಇದ್ದವರು ಯಾರ ಬಂದಾರ ಹೇಳು? ಇದ್ದ ಮಾತ ಹೇಳಬೇಕಂದರ ಈ ಊರಾಗ ಖರೇ ಗರತೇರ ಯಾರಾದರೂ ಇದ್ದರ ಅದು ನಮ್ಮಂಥಾ ನಾಕೈದ ಮಂದಿ ಹುಡುಗೋರಂತ ತಿಳಿ ಮತ್ತ! ಅಲ್ಲಾ, ನಿಮ್ಮ ದೇವರಿಗಿ ಅದ್ಯಾಕಿಷ್ಟ ಹೆಂಗಸರ ಖಯಾಲಿ?
ಸೂತ್ರಧಾರ: ಹಾಂಗ ಆಗಲಿ, ನೀನ ಪೂಜೀ ಮಾಡು.
[ ಸೂತ್ರಧಾರ ಮೇಳದೊಂದಿಗೆ ಹಾಡುತ್ತಾನೆ. ಹಾಡಿನೊಂದಿಗೆ ಹಿಮ್ಮೇಳದವನು ಪೂಜಿ ಮಾಡುತ್ತಾನೆ.]
ಮೇಳ: ಸುವ್ವೀ ಬಾ ಸುಂದರ | ಸ್ವಾಮಿ
ಸುವ್ವೀ ಬಾ ಚಂದಿರ
ಸುವ್ವೀ ಬಾರಯ್ಯಾ ಜೋಕುಮಾರಸ್ವಾಮಿ||

ಸೊಪ್ಪಿನ ದೆವರೂ ಬೈಗಳ ಮಂಗಳಾರತಿವನೊ
ಉಪ್ಪು ಹುಳಿ ಖಾರ ನವಿ‌ಅದ್ಯದವನೊ||

ಮಳೆಯಾಗಿ ಬಿದ್ದವನೆ ಸ್ವಾಮಿ ಬೆಳೆಯಾಗಿ ಎದ್ದವನೆ
ಎಳಿನಗಿ ನಕ್ಕವನೆ ಬೇಲಿ ಹೂವಿನೊಳಗೆ||

ಹುಟ್ಟಿದೆರಡ ದಿನಕ ಪಟ್ಣದ ಹುಡಿಗೇರನೆಳೆದವನೆ
ಮದ್ಮಿ ಬಂದಾರೊ ಕುಡಗೋಲ ಹಿಡದಾ||
ಹಿಮ್ಮೇಳ: ಇಂಥಾ ಹಲ್ಕಾ ದೇವರನ್ನ, ಅದೂ ಇಂಥಾ ಸಾರ್ವಜನಿಕ ಸ್ಥಳದೊಳಗ ಹೆಂಗ ಪೂಜೀ ಮಾಡಂತೀಯೋ?
ಸೂತ್ರಧಾರ: ಅದೆಲ್ಲಾ ಮನುಷ್ಯರೊಳಗ ಇರತದೇನಪಾ, ದೇವರೊಳಗ ಸ್ಸಾಚಾ ದೇವರು, ಹಲ್ಕಾ ದೇವ ಇರೋದಿಲ್ಲಾ.
ಹಿಮ್ಮೇಳ: ನೀ ಈ ಹೊತ್ತ ಏನ ಮರತ ಬಂದಿದಿ‌ಈ ತಿಳೀತ ನನಗ.
ಸೂತ್ರಧಾರ: ಅದೇನಪಾ?
ಹಿಮ್ಮೇಳ: ನಾಚಿಕಿ ಹಿಡಿದರ ನಮ್ಮ ದೇವರು ಸಿಟ್ಟಾತಾನ. ಸುಮ್ಮನ ಕೇಳುವಂಥವನಾಗು.
ಸೂತ್ರಧಾರ: ಹೂ ಹೊಡಿ.
ಮೇಳ: ಹುಟ್ಟಿದ್ಮೂರನೆ ದಿನಕ ಮುಟ್ಯಾದ ಹುಡಿಗೇರನೆಳದವನೆ
ಮೂವರು ಬಂದಾರೊ ಕೋಲ ಕೊಡಲಿ ಹಿಡದಾ||

ನಾಕನೆ ದಿನದೊಳಗ ಸ್ವಾಮಿ ಮುದಿಕೇರನೆಳದನೆ
ಮುದುಕರು ಬಂದಾರೊ ಗುಂಡುಕಲ್ಲ ಹಿಡದಾ||

ಹುಟ್ಟಿದೈದನೆ ದಿನಕ ಸ್ವಾಮಿ ಐದೇರನೆಳಾzವನೆ
ಹೈದರು ಬಂದಾರೊ ಹಗ್ಗ ಬಲಿಯ ಹಿಡದಾ||

ಹುಟ್ಟಿದಾರನೆ ದಿನಕ ಸ್ವಾಮಿ ನಾರೇರನೆಳದವನೆ
ಕರದ ತಂದಾರೊ ಐದನೂರ ಮಂದಿ||

ಹಿಮ್ಮೇಳ: ಸಡ್ಲ ಬಿಟ್ಟರ ನೀನೂ ಭಾರಿ ಹಾಡವಪಾ| ಹಾಡಾಗಿ ಯಾರಿಗಿ ಬರಾಣಿಲ್ಲಾ? ಹಾಡ್ಲಿ?-
ಮೋತರದಾಗ ಇದ್ದವನೆ ಥೇಟರದಾಗ ಬಿದ್ದವನೆ
ಮನೆಯಿಲ್ಲೇನಯ್ಯಾ ಮಲಗಲಿಕ್ಕೆ?||

ಸೂತ್ರಧಾರ: ಯಾಕ ನಾ ಚಂದದಿಂದ ಹಾಡಲಿಲ್ಲೇನು?
ಹಿಮ್ಮೇಳ: ಓಹೋ! ಬಾಳ ಚಂದದಿಂದ ಹಾಡಿದಿ. ಅದರ ಸೊಲ್ಪ ಕಡಿಮಿ ಚಂದದಿಂದ ಹಾಡಬಾರದ? ಇಲ್ಲದಿದ್ದರೆ ಕೂತ ಮಂದಿಗಿ ಹಾಡಿನರ್ಥ ತಿಳದರ ಏನ ಮಾಡತಿ? ಇಂಥಾ ಮಾತ ತಿಳೀಧಾಂಗ ಹೇಳಬೇಕೆನಪಾ!
ಸೂತ್ರಧಾರ: ಅಪಾ, ಈ ಯಾವ ಮಹಾದೇವರ ಮಹಿಮೆಯನ್ನು ನಾನು ಗದ್ಯದಲ್ಲಿ ವರ್ಣನೆ ಮಾಡಬೇಕೇನು?
ಹಿಮ್ಮೇಳ: ಇಲ್ಲದಿದ್ದರ ಇದು ಭಾಳ ರಿಸ್ಕೀ ದೇವರೋ ಹುಚ್ಚಾ.
ಸೂತ್ರಧಾರ: ಹಾಂಗಿದ್ದರ ಕೇಳುವಂಥವನಾಗು, ಈ ಯಾವ ನಮ್ಮ ಮಹಾದೇವರು, ಸೊಪ್ಪಿನ ದೇವರು, ಮಳೆ ದೇವರು, ಬಳೆ ದೇವರು, ಬೈಗುಳ ದೇವರು, ಜೋಕುಮಾರಸ್ವಾಮಿ.
ಹಿಮ್ಮೇಳ: ಓಹೋ!
ಸೂತ್ರಧಾರ: ಹುಟ್ಟಿದೆರಡೇ ದಿನದಲ್ಲಿ ಪಟ್ಟಾಣದ ಹುಡಿಗೇರನ್ನ,
ಹಿಮ್ಮೇಳ: ಆಹಾ!
ಸೂತ್ರಧಾರ: ಇಲ್ಲಿ ತಪ್ಪಿದಿ.
ಹಿಮ್ಮೇಳ: ಯಾಕ?
ಸೂತ್ರಧಾರ: ಎಂಥಾ ಅಪರೂಪ ದೇವರ ಬೆನ್ನ ಹತ್ತಿದೀಯೋ? ಮನಶೇರಿಗೊಂದ ಬ್ಯರೆ ಉದ್ಯೋಗಿಲ್ಲಾ ಎಳೀತಾರ, ನಿಮ್ಮ ದೇವರೂ ಎಳೇಯೋದಂದರ! ಹುಡಿಗೇರ್‍ನ ಎಳದಾ, ಮುದಿಕೇರ್‍ನ ಏಲದಾ! ಹೋಗಲಿ, ಅದನ್ನಷ್ಟ ಮುಚ್ಚಿಹೇಳಾಗಾ ಆಗಾಣೀಲ್ಲೇನ?
ಸೂತ್ರಧಾರ: ಎದನ್ನ?
ಹಿಮ್ಮೇಳ: ಎಳದಾ ಎಳದಾ ಅನ್ನೋದನ್ನ? ಇಂಥಾ ಮಾತಿಗಿ ಈ ಕಡೆ ಅಶ್ಲೀಲ ಅಂತಾರೇನಪಾ. ನೋಡಿಲ್ಲಿ ಯರ್‍ಯಾರ ಕುಂತಾರ…ಇಂಥಾ ಮಾನವಂತg ಸಭಾದೊಳಗ ಅಶ್ಲೀಲ ಅನ್ನಬಾರದು. ಅದಕ್ಕೊಂದಾ ಉಪಾಯ ಹೇಳಲ? ಎಳದಾ ಎಳದಾ ಬಂದಲ್ಲೆಲ್ಲಾ ಲವ್ ಮಾಡಿದಾ ಲವ್ ಮಾಡಿದಾ ಅನ್ನು.
ಸೂತ್ರಧಾರ: ಹಾಂಗ ಆಗಲಿ. ಈ ನಮ್ಮ ಮಹಾದೇವರು…
ಹಿಮ್ಮೇಳ: ಸೊಪ್ಪಿನ ದೇವರು ಆ ದೇವರು ಈ ದೇವರು ಇತ್ಯಾದಿ ದೇವರು…ಮುಂದ?
ಸೂತ್ರಧಾರ: ಹುಟ್ಟಿದ ಮೂರನೆ ದಿನದಲ್ಲಿ ಏನು ಮಾಡಿದ?
ಹಿಮ್ಮೇಳ: ಏನು ಮಾಡಿದಾ?
ಸೂತ್ರಧಾರ: ಮುಟ್ಟಾದಂಥಾ…
ಹಿಮ್ಮೇಳ: ಮತ್ತ ಅಶ್ಲೀಲ! ಆ ಪದ ತಗದು ಗಟ್ಟಿ ಹುಡಿಗೇರು ಅನ್ನು
ಸೂತ್ರಧಾರ: ಹುಟ್ಟಿದ ಮೂರನೆ ದಿನದಲಿ ಗಟ್ಟಿ ಹುಡಿಗೇರನ್ನ,
ಹಿಮ್ಮೇಳ: ಲವ್ ಮಾಡಿದಾ
ಸೂತ್ರಧಾರ: ನಾಕನೆ ದಿನ ಮುದಿಕೇರನ್ನ,
ಹಿಮ್ಮೇಳ: ಲವ್ ಮಾಡಿದಾ
ಸೂತ್ರಧಾರ: ಐದನೇ ದಿನದಲ್ಲಿ ಇ‌ಅದನೇರನ್ನ
ಹಿಮ್ಮೇಳ: ಲವ್ ಮಾಡಿದಾ
ಸೂತ್ರಧಾರ: ಆರನೇ ದಿನದಲ್ಲಿ ನಾರೇರನ್ನಾ
ಹಿಮ್ಮೇಳ: ಲವ್ ಮಾಡಿದಾ. ಅಪ್ಪಾ ಸೂತ್ರಧಾರ, ನಿಮ್ಮ ದೇವರು ಪ್ರಾಸಕ್ಕಾಗಿ ಅವರನ್ನೆಲ್ಲ ಲವ್ ಮಾಡಿದ್ನೋ? ಅಥವಾ ನೀನ ಹೊಂದಿಸಿಯೋ? ಇರಲಿ ಮುಂದೇನಾಯ್ತು?
ಸೂತ್ರಧಾರ: ಆವಾಗ ಏಳನೇ ದಿನಾ- ಹೆಂಡಂದಿರ ಗಂಡರು ಕೊಡಲಿ ಹಿಡಕೊಂಡು ಬಂದರು. ಮುದಿಕೇರ ಮುದುಕರು ಗುಂಡುಕಲ್ಲ ಹ್ಹಿಡಕೊಂಬಂದರು. ಐದೇರ ಹೈದರು ಹಗ್ಗದ ಬಲಿ ಹಿಡಕೊಂಬಂದರು. ಹಿಂಗ ಅಲ್ಲರೂ ಎಣಿಸಿ ಐನೂರ ಜನಾ ಆಗಿ ಎಲ್ಲಿ ಬಂದರು?
ಹಿಮ್ಮೇಳ: ಜೋಕುಮಾರಸ್ವಾಮಿ ಹತ್ತರ ಬಂದರು.
ಸೂತ್ರಧಾರ: ಬಂದೇನ ಮಾಡಿದರು?
ಹಿಮ್ಮೇಳ: ಅದಿರ್‍ಲಿ. ಮುಂದಿಂದ ನೀ ಹಾಡಿನಾಗ ಹೇಳೋಡು ಒಳ್ಳೇದೇನಪಾ, ಯಾಕಂದರ ನಿನ್ನ ಗದ್ಯ ಸೊಲ್ಪ ದೇಂಜರಸ್ ಕಾಣತದ
ಹಾಂಗಿದ್ದರ ಕೇವಂಥವನಾಗು. ಆ ಐನೂರ್‍ಮಂದಿ ಜೋಕುಮಾರಸ್ವಾಮಿ ಹತ್ತಿರ ಬಂದೇನ ಮಾಡಿದರು?
ಹಿಮ್ಮೇಳ: ಏನ ಮಾಡಿದರು?
ಮೇಳ: ಎಣಿಸಿ ಐನೂರ್‍ಮಂದಿ ಅವರಿಗಿ ಸಾವಿರ ಕೈಗಳು
ಹಿಡದ ಕಡದಾರೋ ಎಳೀ ದೇವರನ್ನಾ||

ಸಾವಿರ ಕೈಗಳು ಕೈಗೊಂದ ಕೊಡಲಿ ಕುಡಗೋಲು
ಹೊಡದ ಕೊಂದಾರೋ ಎಲೀ ದೇವರನ್ನಾ||

ಕೊಂದಾರೆ ಒಗದಾರೋ ಸ್ವಾಮೀನ ಕಡದಾರೆ ಒಗದಾರೊ
ನೆತ್ತರ ಹರಿದಾವೊ ಹೂಳಿಹಳ್ಳ ತುಂಬಿ||

ನೆತ್ತರ ಬಿದ್ದಲ್ಲಿ ಆಹಾ ಬೆಳಿಗಳು ಎದ್ದಾವೊ
ಮಣ್ಣು ಮಣ್ಣೆಲ್ಲಾ ಹಸಿಹಸರ ತುಬಿ||

[ ಅಷ್ಟರಲ್ಲಿ ಹೊಲೇರ ಶಾರಿ ನರ್ತಿಸುತ್ತಾ ಬಂದು ದೇವರಿಗೆ ನಮಸ್ಕರಿಸಿದೇವರ ಬುಟ್ಟಿ ಹೊರಬೇಕೆನ್ನುವಾಗ ಹಿಮ್ಮೇಳನದವನು ಗಮನಿಸುವನು ]

ಹಿಮ್ಮೇಳ: ನಿಮ್ಮ ದೇವರು ಅಡ್ಡಿಯಿಲ್ಲಪಾ! ಖರೇ ಗಿರಾಕೀನ್ನ ಹಿಡಾಕೊಂಡ ಬಂದಾನ್ನೋಡು.
[ಅವಳ ಬಳಿ ಓಡಿಹೋಗಿ]
ಅಂದವಾದ ಮಂದಿರವನ್ನ ಬಿಟ್ಟು
ಸುಂದರವಾದ ಈ ಸಭಾಂಗಣಕ್ಕೆ ಬಂದು}
ಬಂಧುರವಾದ ಈ ದೇವರನ್ನ ಹೊತ್ತು ಒಯ್ಯುವ
ಸುಂದರೀ ನೀನು ಧಾರು? ನಿನ್ನ ನಾಮಾಂಕಿತವದೇನು?
ಹೇಳುವಂಥವಳಾಗು-
ಶಾರಿ: ಇದ್ಯಾನದ ಪುಸ್ತಕಧಾಂಗ ಮಾತಾಡತೈತಿ!
ಹಿಮ್ಮೇಳ: ಸೂತ್ರಧಾರ, ನೀನ ಬಾರಪಾ, ನಮಗಿದು ಬಗಿಹರಿವೊಲ್ದು!
ಸೂತ್ರಧಾರ: ಅಮ್ಮಾ, ಬಂದಂಥವಳು ನೀನು ಧಾರು? ನಿನ್ನ ನಾಮಾಂಕಿತವೇನು? ಅಂದದಿಂದ ತಿಳಿಸುವಂಥವಳಾಗು.
ಶಾರಿ: ಸೂತ್ರಧಾರ, ತಿಳಿಸಾಕ ಬೇಕು?
ಸೂತ್ರಧಾರ: ಹೌಂದು, ತಿಳಿಸಾಕ ಬೇಕು.
ಶಾರಿ: ಸೂತ್ರಧಾರ, ಮುದುಕರು ಬಂದು ನನಗ ಏ ಪೋರಿ ಏ ಪೋರಿ ಅಂತಾರ, ಸಣ್ಣ ಹುಡುಗರು ಬಂದು ಏ ಮುದಿಕಿ ಏ ಮುದಿಕಿ ಅಂತಾರ. ಎರದೂ ಅಲ್ಲದ ಇಂಥಾ ಸಭ್ಯರು ಬಂದು ಹೊಲೇರ ಸೂಳಿ ಶಾರೀ ಶಾರೀ ಅಂಥಾರ ನೋಡು.
ಸೂತ್ರಧಾರ: ಅಮ್ಮಾ ನೀ ಶಾರವ್ವಂತ ನಮಗಾದರು ತಿಳಿತು, ಕೂತಂಥಾ ರಸಿಕರಿಗಾದರೂ ತಿಳೀತು. ಅದರ ಇಲ್ಲಿಗ್ಯಾಕ ಬಂದಿ? ಜೋಕುಮಾರಸ್ವಾಮಿನ್ನ ಯಾಕೆ ಒಯ್ತಿ? ಅದನ್ನಾದರೂ ತಿಳಿಸುವಂಥವಳಾಗು.
ಶಾರಿ: ಅಪ್ಪಾ, ಸೂತ್ರಧಾರ, ಜೋಕುಮಾರಸ್ವಾಮಿ ದೊಡ್ಡ ದೇವರು. ಬಂಜೇರಿಗೆ ಮಕ್ಕಳಾ ಕೊಡೋ ದೇವರು. ಗಂಡ ಇಲ್ಲದವರಿಗೆ ಗಂಡನ್ನ ಕೊಡೋ ದೇವರು.
ಹಿಮ್ಮೇಳ: ಹೊದು ನಿನಗ ಮಿಂಡನ್ನ ಕೊಡೋ ದೇವರು.
ಶಾರಿ: ಯಾರಾದರೂ ಮಕ್ಕಳಿಲ್ಲದ ಬಂಜೇರು ಬಂದು ಒಯ್ದಾರಂತ ಕಾದ ನೋಡಿದೆ, ಯಾರೂ ಬರಲಿಲ್ಲ. ನಾನಾದರೂ ಒಯ್ತೇನಿ. ನನಗೂ ವಯಸ್ಸಾಗಿ ಗಿರಾಕಿ ಕಡಿಮಿ ಆಗ್ಯಾವ, ಈ ಸ್ವಾಮೀನ್ನ ಪಲ್ಲೇ ಮಾಡಿ ನೀಡಿದರ ಇದ್ದ ಗಿರಾಕಿ ಆದರೂ ನನ್ನ ಮನೀ ಮುಂದ ಬಿದ್ದಿರ್‍ತಾವ!
ಹಿಮ್ಮೇಳ: ಅಂತೂ ದೇವರ ಉಪಯೋಗ ಐತಿ ಅಂಧಂಗಾಯ್ತು.
ಸೂತ್ರಧಾರ: ಶಾರವ್ವ ಹಾಂಗಿದ್ದರ ನೀನಾದರೂ ಸ್ವಾಮೀನ್ನ ಒಯ್ಯುವಂಥವಳಾಗು.
[ಶಾರಿ ಬುಟ್ಟಿ ಹೊರುವಳು]
ಹಿಮ್ಮೇಳ: ಏ ತಡಿ ತಡಿ,
[ ಓಡಿ ಹೋಗಿ ಅವಳ ಹಿಂದೆ ಆಶೀರ್ವಾದ ಮಾಡುವ ಭಂಗಿಯಲ್ಲಿ ನಿಂತುಕೊಡು]
ಮಗನೇ ಸೂತ್ರಧಾರ, ನಿನ್ನ ಪೂಜೆಯಿಂದ ನನಗೆ ಪ್ರೀತಿ ಆಗಿದೆ. ನಿನ್ನ ಆಟ ಸಾಧ್ಯವಾದರೆ ಸುಸೂತ್ರ ಸಾಗಲಿ ಅಂತ ಆಶಿರ್ವಾದ ಮಾಡತೇನು: ಇನ್ನು ಮೇಲೆ ನೀನು ನಿನ್ನ ಆಟ ಸುರುಮಾಡುವಂಥವನಾಗು.
[ಸೂತ್ರಧಾರ ನಮಿಸುತ್ತಾನೆ]

ಢಂ ಡಂ ದೇವರು

ಮೇಳ: ಒಂದ ಊರಾಗಿದ್ದಾನ್ರಿ ಒಬ್ಬ ಗೌಡ ಊರಾಗ ದೊಡ್ಡ ಪುಂಡಾ ಅವನ ಹೊಟ್ಟಿ ಗುಂಡಾ ತಿರಗತಾನ ಯಾವತ್ತೂ ಬಂದೂಕ ಹಿಡಕೊಂಡಾ|| ಊರ ಭೂಮಿ ಸೀಮಿಯ ಯಜಮಾನ ಬಂಗಾರ ಬೆಳ್ಳಿ ಚಿನ್ನ ಚೆಂದುಳ್ಳ ನಿವಳ ಹೆಣ್ಣಾ ಎಲ್ಲಾನೂ ತನ್ನದಂತ ಹೇಳ್ಯಾನ್ರೀ ಹೈವಾನ|| ಅವನಿಗಿದ್ದಾಳ್ರೀ ಒಬ್ಬ ಶ್ರೀಮತಿ ಕರಿಯೋಣ ಗೌಡತಿ ಚೆಮದ ಆಕೃತಿ ಬಾಯಿ ತೆರೆದ ನೋಡತಾಳ್ರಿ ಹಾರ್‍ಯಾಡುವ ಹಕ್ಕಿ|| [ಹಾಡು ಮುಗಿಯುತ್ತಿದ್ದಂತೆ ಗೌಡ ನಾಲ್ಕು ಜನರ ಮೇಲೆ ಬಂದೂಕು ಹೊರಿಸಿಕೊಂಡು ವೈಭವದಿಂದ, ಪ್ರೇಕ್ಷಕರ ಮಧ್ಯದಿಂದ ಬರುತ್ತಾನೆ. ಬದ್ಮೂಕ ಹೊತ್ತವರು, “ಸ್ವಾಮಿ ನಮ್ಮಯ್ ದೇವರೊ| ಢಂಢಂ ಇವರ ಹೆಸರೊ||” ಎಂದು ಹಾಡಿಕೊಂಡು, ನರ್ತಿಸಿಕೊಂಡು ಬರುತ್ತಾರೆ]
ಸೂತ್ರದಾರ: ಅಪ್ಪಾ, ಸುತ್ತ ಪರಿವಾರದೊಂದಿಗೆ ಬಂದಿರತಕ್ಕಂಥಾ ಧೀರಾ ನೀನು ಧಾರು? ನಿನ್ನ ನಾಮಾಂಕಿತವೇನು? ಚೆಂದದಿಂದ ಹೇಳುವಂಥವನಾಗು.
ಆಟದ ಆರಂಭಕ್ಕೆ ಜೋಕುಮಾರಸ್ವಾಮಿ ಪೂಜೆ ಮಾಡಬೇಕು. ಸಾಮಗ್ರಿ ಸಮೇತ ಬಂದು, ಶಾಸ್ತ್ರದ ಪ್ರಕಾರ ಈ ದೇವರನ್ನ ಪೂಜಿಸುವಂಥವನಾಗು. [ಗೊಡ ನಾಲ್ಕು ಜನರ ಕಡೆಗೆ ನೋಡಿ, ಸೂತ್ರಧಾರನಿಗೆ ಉತ್ತರಿಸಲು ಸೂಚಿಸಿ ಮಂಚದ ಮೇಲೆ ಕೂರತ್ತಾನೆ. ನಾಲ್ವರೂ ಂದೂಕು ತಂದು ಸೂತ್ರಧಾರನ ಮುಂದೆ ನಿಲ್ಲಿಸಿ ಅದರ ತುದಿಗೊಂದು ರುಂಬಾಲನ್ನಿಟ್ಟು ಪರಸ್ಪರ ನಗುತ್ತಾರೆ.)
ಒಬ್ಬ: ಇವರು ಯಾರಂದರ…
ಎಲ್ಲರೂ: ಸ್ವಾಮಿ ನಮ್ಮಯ್ ದೇವರೊ ಢಂಢಂ ಇವರ ಹೆಸರೊ ||
ಸೂತ್ರದಾರ: ಇವರ ಹೆಸರು ಢಂ ಢಂ? ಕೂತಂಥಾ ಸಭಿಕರು ಕಾತರರಾಗಿದ್ದಾರೆ. ಇವರೇನ ಮಾಡತಾರ? ಸವಿಸ್ತಾರ ಕಥನಾ ಮಾಡಿ ತಿಳಿಸುವಂಥವನಾಗು.
ಒಬ್ಬ: ಇವರಿಗೆ ಒಂದ ಕುದುರಿ ಐತಿ. ಅದರ ಹಿಂದೊಂದ ಬೋಲ್ಟ ಐತಿ. ಗುರು ಹಿಡಿದರ ಸಾಕು- ಎದುರಿಗೇನಿರೂ ಢಂ ಅಂತ ಒಮ್ಮಿ ಕುಣೀತಾರ; ಮುಗೀತು! ಇಂಥಾ ಮಹಾಸ್ವಾಮಿ ನಮ್ಮ ದೇವರು-
ಎಲ್ಲರೂ: ಸ್ವಾಮಿ ನಮ್ಮಯ್ ದೇವರೊ ಢಂಢಂ ಇವರ ಹೆಸರೊ ||
ಇನ್ನೊಬ್ಬ ಯುದ್ಧದೊಳಗ ಸೈನಿಕರು ಬರೀ ಹೆಣದ ಮ್ಯಾಲ ಹಾರಿಸ್ತಾರಂತ. ನಮ್ಮ ದೇವರು- ಉಹೂ ಗಟ್ಟಿಮುಟ್ಟ ಬಾಳೇವಂತರ ಆಗಬೇಕು. ಒಂದು ದಿವಸ ಒಬ್ಬ ರೋಗಿಷ್ಟನ ಮ್ಯಾಲ ಹಾರಿದರು- ಅದೆಲ್ಲೋ?
ಮತ್ತೊಬ್ಬ: ಅದ? ಆ ದೆವ್ವಿನ ಹೊಲದಾಗೊ!
ಇನ್ನೊಬ್ಬ: ಹೂ ಆ ದೆವ್ವಿನ ಹೊಲದಾಗ ಹಾರಿದರು. ರೋಗಿಷ್ಟನ ಮ್ಯಾಲ ಹಾರೋವಾಗ ನಮ್ಮ ಸ್ವಾಮಿ ಕುಣೀಲಿಲ್ಲ. ಹಾರಲಿಲ್ಲ. ಢಂ ಅನ್ನಲಿಲ್ಲ. ಮೂರ ದಿನಾ ಮಾತಾಡಲಿಲ್ಲ. ಹೋಗಲಿ ಅಂತ ಒಂದ ದಿನ ಹಾಡಾ ಹಗಲಿ ಹೊಲದಾಗ ಕೆಲಸಾ ಮಾಡೋ ಡಜನ್ ಹೊಲೇರನ್ನ ಸಾಲಾಗಿ ನಿಲ್ಲಿಸಿ ಹಾರಿದರು. ಸ್ವಾಮಿ ಕುಣಿದಾಡಿ ಒಮ್ಮೆ ಢಂ ಅಂದರ ಏನುಳೀತ ಹೇಳ್ನೋಡೋಣ.
ಸೂತ್ರಧಾರ: ಒಂದು ಡಜನ್ ಹೆಣಾ!
ಇನ್ನಬ್ಬ ಉಹೂ! ಬ್ಯಾರೇದವರು ಹಾರಿದರ ಹೆಣ ಬಿಳತಾವ. ನಮ್ಮ ಢಂಢಂ ಸ್ವಾಮಿ ಹಾರಿದರ ಇಷ್ಟ ಬೂದಿ: ತಟಕ್ ಹೊಗಿ! ಇಂಥಾ ನಮ್ಮ ಸ್ವಾಮಿ ಮಹಿಮಾ ಏನ್ಹೇಳೋಣು!
ಎಲ್ಲರೂ: ಸ್ವಾಮಿ ನಮ್ಮಯ್ ದೇವರೊ ಢಂಢಂ ಇವರ ಹೆಸರೊ ||
ಸೂತ್ರಧಾರ: ಇದೆಲ್ಲ ಹೊಂದಪಾ, ನಿಮ್ಮ ಸ್ವಾಮಿ ಸ್ವರೂಪ ಏನು?
ಮಗದೊಬ್ಬ: ನಮ್ಮ ಸ್ವಾಮಿ ಢಂ ಢಂ ದೇವರಂದರ ಒಂದ ದೊಡ್ಡ ಹೊಟ್ಟಿ, ಏನ ತಿಂದರೂ ಅರಗಸ್ತಾರ. ನಿಮ್ಮಂಥವರಿಗೆ ಎರಡು, ಬ್ಯಾಡ ನಾಕ ರೊಟ್ಟಿ ಕೊಟ್ಟರೆ ಅಜೀರ್ಣ ಆಗತೈತಿ. ನಮ್ಮ ಸ್ವಾಮಿ ಮನಶೇರ ಮಾಂಸ ತಿಂದ ಅರಗಿಸಿಕೊಳ್ತಾರ! ಕೋಳಿ ಸಿಕ್ಕರಂತೂ ಹಬ್ಬಾ ಮಾಡತಾರ! ಅಂಥಾ ನಮ್ಮ ಸ್ವಾಮಿ-
ಎಲ್ಲರೂ: ಸ್ವಾಮಿ ನಮ್ಮಯ್ ದೇವರೊ ಢಂಢಂ ಇವರ ಹೆಸರೊ ||
ಗೌಡ: ಏನಪಾ ಸೂತ್ರಧಾರ ನಾ ಯಾರಂತಾ ಈಗಲಾದರೂ ತಿಳೀತೊ?
ಸೂತ್ರಧಾರ: ಸ್ವಾಮಿ ತಾವು ಯಾರಂತ ನನಗಾದರೂ ತಿಳೀತು. ಕೂತಂಥಾ ಸಮಾಜವಾದಿಗಳಿಗಾದರೂ ತಿಳಿದು ಬಂತು. [ ನಿಧಾನವಾಗಿ ಬಂದ ಬಸವಣ್ಯಾನನ್ನು ನೋಡಿ] ಈತ ಯಾರು? ಅದ್ಯಾಕ ಹಿಂಗ ನಿಂತಾನ?
ಒಬ್ಬ: ಇದು ನಮ್ಮ ಢಂ ಢಂ ದೇವರು ತಿನ್ನೋ ರೊಟ್ಟಿ,
ಇನ್ನೊಬ್ಬ: ಅಲ್ಲಲ್ಲ, ನಮ್ಮ ಢಂಢಂ ದೇವರಿಗೆ ಹರಕೆ ಬಿಟ್ಟ ಕುರಿ.
ಮತ್ತೊಬ್ಬ: ಅಲ್ಲಲ್ಲ, ನಮ್ಮ ಢಂಢಂ ದೇವರಿಗೆ ಹಾಲು ಕೊಡೊ ಹಸು.
ಗೌಡ್ತಿ: [ಒಳಗಿನಿಂದ ಬಂದು) ಕೇಳಿದೇನ?
ಗೊಡ: ನಿಂದೇನ ಈ ಮಂದ್ಯಾಗ? ಆಮ್ಯಾಲ ಕೇಳತೀನಂತ ಹೋಗು.
ಮಗುದೊಬ್ಬ: [ಗೌಡ್ತಿಯನು ತೋರಿಸುತ್ತ] ಅದು ನಮ್ಮ ಢಂಢಂ ದೇವರ ಹೊಲಾ! [ ಗೌಡ್ತಿ ಒಳ ಹೋಗುವಳು]
ಸೂತ್ರಧಾರ: ಈತನಿಗೇನು ಹೆಸರ ಇಲ್ಲೇನು?
ಒಬ್ಬ: ಹೆಸರ? ಇವನ ಹೆಸರೇನೊ?
ಬಸಣ್ನ: ಬಸಣ್ಣ [ಗೌಡ ತಕ್ಷಣ ಏಳುವನು?]
ಗೌಡ: ಬಸಣ್ಣ? ಬಾರೋ ಬಸಣ್ನಾ…ಏ ಹೋಗ್ರೋ ಆಂಯಾಲ ಬರೀರಂತ ಹೋಗ್ರಿ. ಬಾರೋ ಬಸಣ್ಣಾ, ಬಂದ ಹೊರಗ ನಿಂತೀiಲ್ಲೋ? ಬಾ ಬಾ ಒಳಗ ಜೂರ ಬಾ. ಬೀಡಿ ಸೇದತೀಯೇನ? [ಇಬ್ಬರೂ ರಂಗದ ಒಂದು ಬದಿಗೆ ಸರಿಯುವರು. ಸೂತ್ರಧಾರ ಮೇಳದೊಡನೆ ಒಂದಾಗುವನು.] ನಿಮ್ಮಪ್ಪ ಸತ್ತದ್ದ ಭಾಳ ಮನಸಿಗೆ ಹಚ್ಚಿಕೊಂಡೀಯೊ ಏನೋ! ನಿಮ್ಮಪ್ಪ ಹೋದದ್ದಕ್ಕ ನನಗ ಹಳಹಳಿ ಆಗಿಲ್ಲಂತ ತಿಳೀಬ್ಯಾಡಪಾ ಮತ್ತ. ಏನ ಮುದುಕ ಏನಮುದುಕ ನಿಮ್ಮಪ್ಪ! ದಿನ ಬೆಳಗಾದರ ಗೌಡರ ಅಂತ ಬರತಿದ್ದಾ, ಬೀದಿ ಇಸಕೊಂಡ ಸೇದತಿದ್ದಾ. ಆದರ ಏನು ಮಾಡೋದು ಮುದುಕ ಭಾರೀ ಹಠಮಾರಿ. ಒಬ್ಬರ ಮಾತ ಕೇಳಾವಲ್ಲ. ಗಿಣೀಗೀ ಹೇಳಿಧಾಂಗ ಹೇಳಿದೆ; ಮುದುಕಾ ಆ ಹೊಲದಾಗ ಮಲಗಬ್ಯಾಡೊ; ಅಲ್ಲಿ ದೆವ್ವ ಐತಿ, ಪಿಶಾಚಿ ಐತಿ, ಏಳ ಮಕ್ಕಳ ತಾಯಿ ಐತಿ- ಅಂತ. ಕೇಳಿದನ ನನ್ನ ಮಾತ? ಉಹೂ! ದೆವ್ವಾ, ಪಿಶಾಚಿ ಮನಶೇರಷ್ಟ ಕೆಟ್ಟ ಇರಾಣಿಲ್ಲೊ ಹುಡುಗಾ ಅಂದ. ಹೋದ. ಬೆಳಿಗ್ಗೆದ್ದ ಮಾತಾಡಿಸಬೇಕಂತ ಹೋದರ ನಿಮ್ಮಪ್ಪ ಅಲ್ಲೆಲ್ಲಿರತಾನ! ಕೂತಕೊಳ್ಳೋ ಹಾಂಗ ನಿಂತ ಇದೀಯಲ್ಲ. ನೀ ಆಷ್ಟೇನೂ ಚಿಂತೀ ಮಾಡಬ್ಯಾಡ. ನಮ್ಮ ಮನ್ಯಾಗ ಇದ್ದೀಯಂತ ಬಿಡು.
ಬಸಣ್ಣ: ನಮ್ಮಪ್ಪ ಹೆಂಗ ಸತ್ತಂತ ನನಗೆ ಗೊತ್ತ ಐತಿ.
ಗೌಡ: ನಿನಗಷ್ಟಾ ಎನ, ಊರಿಗೂರ ತಿಳಿದೈತಿ. ಆ ಹೊಲದ ನೆಲ ಬಾಳ ಬಿರಸೈತಿ ಅಂತ ಯಾರಿಗಿ ಗೊತ್ತಿಲ್ಲ. ನಿನ್ನಿ ಗುರ್‍ಯಾನ ಎರಡ ಕುರಿ ಹೋದವಂತ ಕೇಳೀಯೇನ?
ಬಸಣ್ಣ: ನಮ್ಮಪ್ಪ ಹೆಂಗ ಸಂತ್ತಂತ ನನಗ ಗೊತ್ತೈತಿ.
ಗೌಡ: ಂiiಕೋ ಹುಚ್ಚ, ನನ್ನ ಮ್ಯಾಲ ಸಂಶೇ ಇದ್ದಾಂಗ ಮಾತಾದ್ತಿ. ಮನಸಿಗಿ ಭಾಳ ಹಚ್ಚಿಕೊಂಡೀಯಲ್ಲ, ಅದಕ್ಕ ಹಿಂಗಾಗತೈತಿ. ಬಾಬಾ, ಒಂದ ಬೀಡಿ ಸೇದ ಬಾ, ಬರೋಬರಿ ಬುದ್ಧಿ ಬರತೈತಿ.
ಬಸಣ್ಣ: ಒಂದ ಗಟ್ಟೀಮುಟ್ಟ ಮಾತ ಹೇಳತೇನ ಕೇಳ ಗೌಡ: ನಮ್ಮಪ್ಪ ಹೆಂಗ ಸತ್ತಂತ ನನಗ ಗೊತ್ತೈತಿ. ಕಾಡ ಕಡದ ಹೆಂಗ ಹೊಲ ಮಾಡಿದಾಂತ ಗೊತ್ತೈತಿ; ಅ ಹೊಲಾ ನಾ ಬಿಡಾಣಿಲ್ಲಾಂತ ನನಗ ಗೊತ್ತೈತಿ.
ಗೌಡ: ಇಷ್ಟ ಗೊತ್ತಿದ್ದಾವ ನಿಮ್ಮಪ್ಪ ಸಾಲ ಒಯ್ದಿದ್ದ ಗೊತ್ತೈತಿಲ್ಲೊ?
ಬಸಣ್ಣ: ತಿರಗಾಮುರಗಾ ಎರಡುನೂರ ರೂಪಾಯಿ ಸಾಲ; ಇಪ್ಪತ್ತವರ್ಷ ಅರ್ಧಾರಾಶಿ ಅಳದ ಕೊಟ್ಟಾ, ಇನ್ನ ತೀರಿಲ್ಲ ನಿನ್ನ ಸಾಲ?
ಗೌಡ: ಹೋಗಲಿ, ಆ ಹೊಲ ಯಾರ ಹೆಸರಿಗಿ ಐತೆಂತ ಗೊತ್ತೈತಿ?
ಬಸಣ್ನ: ಅದೆಲ್ಲಾ ನಂಗೊತ್ತಿಲ್ಲ. ಹೊಲಾ ನದ್ಮು, ನಾ ಉಳತೇನ. ಇನ್ನೇನ ಬಾಕಿ ಉಳಿದಿದ್ದರೂ ನನ್ನ ಬೆನ್ನಿಗಿ ಹೇಳ.
ಗೌಡ: ಹಾಂಗಿದ್ದರೆ ನೀ ಹೇಳೋಡು ನನಗ್ಗೊತ್ತಿಲ್ಲಾ. ಏನ ಹೇಳೋದೆಲ್ಲಾ ಈ ಬಂದೂಕಿಗೆ ಹೇಳ. [ ಬಸಣ್ಣಾ ಬಂದೂಕನ್ನೊದ್ದು ಹೋಗುವನು. ಗೌಡ್ತಿ ಆ ಸಮಯಕ್ಕೆ ಸರಿಯಾಗಿ ಬಂದು ನೋಡಿ ಬಸಣ್ಣ ಹೋದ ಮೇಲೆ ಮಾತನಾಡುವಳು]
ಗೌಡ್ತಿ: ಕೇಳಿದೇನ? [ದೂರದಲ್ಲಿ ಗುರ್‍ಯಾ ಬರುವುದನ್ನು ನೋಡಿ ಒಬ್ಬ, ಮತ್ತೊಬ್ಬ, ಇನ್ನೊಬ್ಬ, ಮಗದೊಬ್ಬ ಎದ್ದು ಬರುವರು. ಗೌಡ್ತಿ ಕೂಡಲೇ ಒಳಗೆ ಹೋಗುವಳು.]
ಒಬ್ಬ: ದೇವರೂ, ಹೊರಗ ಗುರ್‍ಯಾ ಬಂದ ನಿಂತಾನ್ರಿ.
ಗೌಡ: ಕರಕೊಂಬಾ ಒಳಗ. [ಗುರ್‍ಯಾ ಹೆದರುತ್ತಾ ಒಳಬರುತ್ತಾನೆ] ಬಾರೋ ಗುರ್‍ಯಾ, ಏ ಏ ಕುರಿ ಹೆದರೈತಿ ಹೋಗ್ರೊ. [ನಾಲ್ವರೂ ಹಿಂದೆ ಸರಿಯುವರು]
ಗುರ್‍ಯಾ: ದೇವರೂ ನಿನ್ನಿ ನನ್ನ ಎರಡು ಕುರಿ, ಆಳಮಕ್ಕಳು ತಿಂದರಂತೆ.
ಗೌಡ: ಯಾರ ಆಳುಮಕ್ಕಳೋ ಮಗನ?
ಗುರ್‍ಯಾ: ನಿಮ್ಮ ಆಳುಮಳು. ಅಲ್ಲಿದ್ದಾರಲ್ಲರಿ, ಅವರ
ಗೌಡ: ಯಾಕಲ ಮಗನ, ನಾಲಿಗಿ ಭಾಳ ಉದ್ದ ಬಿಡತಿ? ನಿನ್ನ ಕುರಿ ಯಾಕಡೆ ಮೇಯಾಕೆ ಬಿಟ್ಟಿದ್ದಿ? ಆ ದೆವ್ವಿನ ಹೊಲದ ಕಡೆ ಬಿಟ್ಟಿದ್ದಿಲ್ಲಾ?
ಗುರ್‍ಯಾ: ಹೂನ್ರಿ.
ಗೌಡ: ಅಲ್ಲಿ ಮೇಯಾಕ ಬಿಟ್ಟಿ; ದೆವ್ವ ಬಂದ ಜುರೀ ಮುರೀತು. ನಿಮ್ಮ ಆಳುಗೋಳಾ ಮುರದ ತಿಂದರಂತ ಹೇಳಾಕ ಬಂದಿ ಹೌಂದಲ್ಲ. ಮಗನ ಬಸಣ್ಯಾನ ಅಪ್ಪ್ನಂಥ ಅಪ್ಪನ್ನ ದೆವ್ವ ಮುರೀತು. ನಿನ್ನ ಕುರಿ ಬಿಟ್ಟೀತ? ಮತ್ತೆ ಊರ ತುಂಬೆಲ್ಲ ಸುದ್ದಿ! ಊರಾಗ ಏನ ಸತ್ತರೂ ಇಲ್ಲಾ ಗೌಡ ಕೊಂದಿರಬೇಕು, ಇಲ್ಲಾ ಅವನ ಆಳ ಕೊಂದಿರಬೇಕು. ಮಕ್ಕಳ್ರಾ ಊರ ಗೌಡರೆಂದರ ಕಿಮ್ಮತ್ತಿಲ್ಲಾ? ತಡಿ ನಿನ್ಗ ಹೇಳತೇನ- ಯಾರ ಕೊಂದರಂತ- [ಬಂದೂಕು ತೆಗೆದುಕೊಳ್ಳುವನು]
ಗುರ್‍ಯಾ: ನಾ ಅಲ್ಲರಿ; ಹಾಂಗಂತ ಬಸಣ್ಯಾ ಹೇಳಿದ.
ಗೌಡ: ಬಸಣ್ಯಾ ಹೇಳಿದ? ಖರೆ ಹೇಳ ಮಗನ ಯಾಕ ಬಂದಿದ್ದಿ?
ಗುರ್‍ಯಾ: [ಏನು ಹೇಳುವುದಕ್ಕೂ ತೋಚದೆ] ಯಾಕಿಲ್ಲರಿ, ಯಾಕಂದರ ನಿಮ್ಮ ಕಾಲ ತಿಕ್ಕಾಕ ಬಂದಿದ್ದೆ.
ಗೌಡ: ಹೌಂದು? ಬಾ, ತಿಕ್ಕಬಾ ಹಂಗಾದರ. [ಗುರ್‍ಯಾ ಹೆದರುತ್ತ ಗೌಡನ ಕಾಲು ತಿಕ್ಕುವನು] ಗುರ್‍ಯಾ, ಏ ಮಗನ ನಾ ಯಾರೋ?
ಗುರ್‍ಯಾ: ಊರ ಗೌಡರು.
ಗೌಡ: ನೀ ಯಾರೋ?
ಗುರ್‍ಯಾ: ನಿಮ್ಮ ಆಳರಿ.
ಗೌಡ: ಹೆದರಿದಿ?
ಗುರ್‍ಯಾ: ಇಲ್ಲರಿ.
ಗೌಡ: ಮಗನ, ಊರ ಗೌಡ ನನಗ ಹೆದರಾಣಿಲ್ಲ? ಆ ಬಸಣ್ಯಾಗ ಹೆದರ್‍ತಿ ಹೌಂದಲ್ಲ?
ಗುರ್‍ಯಾ: ಇಲ್ಲರಿ
ಗೌಡ: ನನಗೂ ಹೆದ್ರಾಣಿಲ್ಲ, ಬಸಣ್ಯಾಗೂ ಹೆದರಾಣಿಲ್ಲ, ಅಷ್ಟ ಪುಧಾರಿ ಆಗಿಬಿಟ್ಟಿ?
ಗುರ್‍ಯಾ: ನಿಮಗ ಹೆದರತೇನ್ರಿ.
ಗೌಡ: ನನಗ ಹೆದರಿದರ ಬಣ್ಯಾನ ಹಂತ್ಯಾಕ ಯಾಕ ಹೋಗಿದ್ದೀ? ಬೊಗಳತೀಯಲ್ಲ.
ಗುರ್‍ಯಾ: ಬೊಗಳತೇನ್ರಿ.
ಗೌಡ: ಬಸಣ್ಯಾನ ಹಂತ್ಯಾಕ ಹೋಗಿದ್ದೀ?
ಗುರ್‍ಯಾ: ಅವನ ನಿನ್ನ ಹಂತ್ಯಾಕ ಬಂದಿದ್ದಾ?
ಗುರ್‍ಯಾ: ಹೂನ್ರಿ.
ಗೌಡ: ನೀ ಏನಂದಿ? ಅವ ಏನಂದ? ಒಂದೂ ಬಿಡದ ಹೇಳಿದ್ರೆ,- ಬರೋ ಬರಿ, ಇಲ್ಲದಿದ್ದರ ಮಗನ ನಿನ್ನ ಚರ್ಮಾ ಸುಲೀತೇನ.
ಗುರ್‍ಯಾ: ಬಸಣ್ಯಾ ಅಂದ: ಯಾಕೋ ಗುರ್‍ಯಾ ಗೌಡಗ ಹೊಲಾ ಮಾರಿದೆಂತಲ್ಲೊ? ನಾ ಅಂದೆ: ಇಲ್ಲಪಾ, ಗೌಡರು ಸಾಲಾ ಕೊಟ್ಟಿದ್ದರು. ಸಾಲದಾಗ ಹೊಲ ಮುರಕೊಂಡರು ಬಸಣ್ಯಾ ಅಂದ: ಎಷ್ಟು ಸಾಲಿತ್ತು? ನಾ ಅಂದೆ: ಮುನ್ನೂರು ರೂಪಾಯಿ ಇತ್ತು. ಅಂವ ಅಂದ: ಮುನ್ನೂರು ರೂಪಾಯಿ ಸಾಲದಾಗ ಐದ ಎಕರೆ ಜಮೀನ ಹೆಂಗ ಮಾರಿದಿ?
ಗೌಡ: ನಾಯಿ ಮಗನ, ನಿನಗ ಗೊತ್ತಿಲ್ಲ? ಮುನ್ನೂರ ರೂಪಾಯಿ ಕೊಟ್ಟು ಎಷ್ಟು ದಿನಾ ಆಯ್ತು?
ಗುರ್‍ಯಾ: ಮೂರ ನಾಕ ವರ್ಷಾಯ್ತರಿ.
ಗೌಡ: ಮೂರು ನಾಕ ವರ್ಷಾ? ತರಸಲೀ ಕಾಗದ ಪತ್ರ? ಹತ್ತ ವರ್ಷಾತ ಹತ್ತ!
ಗುರ್‍ಯಾ: ನಾ ಆಗಿನ್ನೂ ಸಣ್ಣಾನಿದ್ದೆ.
ಗೌಡ: ಸಣ್ಣಾನಿದ್ದರ ಹೊಟ್ಟಿಗಿ ಅನ್ನ ಉಣ್ಣತಿದ್ಯೊ, ಶಗಣಿ ತಿನತಿದ್ಯೊ? ಬರದ ಕಾಗದ ಪತ್ರ ಸುಳ್ಳ ಹೇಳತಾವು? ನಿನ್ನ ಹೆಬ್ಬೆಟ್ಟಿನ ಗುರುತು ಸುಳ್ಳು ಹೇಳತೈತಿ? ದುರುಗವ್ವನ ಜಾತ್ರಿ ಅಮಾಸಿಗಿ ಒಯ್ಯಲಿಲ್ಲಾ ಹಣ?
ಗುರ್‍ಯಾ: ಹೌಂದ ಅಂದ ಅಮಾಸಿ ಇತ್ತರಿ. [ಹಿಂದೆ ಕುಳಿತ ನಾಲ್ವರೂ ಏಳುವರು]
ಗೌಡ: ಆ ಅಮಾಸಿ ಆಗಿ ಎಷ್ಟು ವರ್ಷಾದುವೋ ಮಗನ?
ಗುರ್‍ಯಾ: ಹತ್ತು ವರ್ಷಾದುವರಿ.
ಗೌಡ: ಹತ್ತು ವರ್ಷ ಅಸಲಾ ಬಡ್ಡಿ ಎಷ್ಟ ಆಯ್ತು?
ಗುರ್‍ಯಾ: ಐದ ಎಕರೆ ಆಯ್ತರಿ. [ಮತ್ತೆ ನಾಲ್ವರು ಹಿಂದೆ ಹೋಗಿ ಕೂರುವರು]
ಗೌಡ: ಹತ್ತ ಎಕರೆ ಆಗತ್ತಿತ್ತ, ಸೂಳೀ ಮಗನ ಬಡವ ನಮ್ಮ ಮನ್ಯ್ರಾಗ ದುಡಕೊಂಡಿರ್‍ಲೀ ಅಂತ ಬಿಟ್ಟೇನ ಬಾ, ಭೂಮಿ ಸೀಮೀ ಆಳೋ ಗೌಡಂದರ ಕಿಮ್ಮತ್ತಿಲ್ಲಾ? ನಾನು ಮನಸ್ಸ ಮಾಡಿದರೆ ನೀ ಅಲ್ಲ, ಬಸಣ್ಯಾ ಸೈತ ಮಣ್ಣ ಮುಕ್ಕಿ ಹೋಗತಾನ, ತಿಳೀತಿಲ್ಲ?
ಗುರ್‍ಯಾ: ತಿಳಿತ್ರಿ.
ಗೌಡ: ಏನ ತಿಳೀತ?
ಗುರ್‍ಯಾ: ಮಣ್ಣು ಮುಕ್ಕತಾನ್ರಿ.
ಗೌಡ: ಹೋಗಿ ಬಸಣ್ಯಾಗ ಹೇಳು: ಹೋದ ವರ್ಷದ ಕೋರಪಾಲ ನಿಮ್ಮಪ್ಪ ಕೊಟ್ಟಿಲ್ಲಾ, ಕೊಡದಿದ್ದರೆ ಹೊಲದಾಗ ಕಾಲ ಇಡಬ್ಯಾಡಾಂತ ಹೇಳು.
ಗುರ್‍ಯಾ: ಹೂನ್ರಿ.
ಗೌಡ: ಯಾವಾಗ ಹೋಗ್ತಿ?
ಗುರ್‍ಯಾ: ಈಗ ಹೋಗತೇನ್ರಿ.
ಗೌಡ: ಕಾಲ ತಿಕ್ಕಿ ಹೋಗ. [ಶಿವಿ, ಬಸ್ಸಿ ಬಂದು ಗೌಡನನ್ನು ನೋಡಿದೊಡನೆ ಮುದುಡಿ ಕೊಂಡು ಒಳಗೆ ಹೋಗುವರು. ಆಮೇಲೆ ನಿಂಗಿ ಬಂದು ಚಪ್ಪಲಿ ಕಳೆಯುತ್ತಿರುವಳು]
ಗೌಡ: ಯಾರದೋ ಗುರ್‍ಯಾ ಈ ಕೋಳಿ? ಏ ಹುಡುಗಿ ನಿಲ್ಲು. [ನಿಂಗಿ ಸೆರಗು ಮರೆ ಮಾಡಿಕೊಂಡು ನಿಲ್ಲುವಳು]
ಗುರ್‍ಯಾ: ಈಕಿ ಗುರುಪಾದನ ಮಗಳ್ರಿ.
ಗೌಡ: ಭರ್ತಿ ವಯಸ್ಸಿಗಿ ಬಂದಾಳಲ್ಲೋ, ನೋಡು ಎಷ್ಟು ತುಳುಕ್ಯಾಡತಾಳೊ? ಮದುವೆಯಾಗಿಲ್ಲೇನ ಇನ್ನೂ?
ಗುರ್‍ಯಾ: ಇನ್ನೂ ಇಲ್ಲರಿ.
ಗೌಡ: ಏನ ಹುಡುಗಿ ನಿನ್ನ ಹೆಸರ?
ಗುರ್‍ಯಾ: ಗೌಡರ ಕೇಳತಾರ ಹೇಳಲ್ಲ; ಊರ ಗೌಡ ಹೆಸರ ಕೇಳೋದ ಹೆಚ್ಚೊ? ನೀ ಹೇಳೋದ ಹೆಚ್ಚೊ?
ಗೌಡ: ಹೆದರತಾಳೋ ಎನೋ! ಅಂತೂ ನೋಡಿದವರ ಬಾಯಾಗ ನೀರ ಬರೋಹಾಂಗ ಮಸ್ತ ತುಂಬಿಕೊಂqಳ ಬಿಡು. ಹೆದರಿದಿ ಏನ?
ನಿಂಗಿ: [ಸೆರಗು ಚೆಲ್ಲಿ] ಹೆದರಾಕ ನೀ ಏನ ಹುಲಿ ಅಲ್ಲ, ಕರಡಿ ಅಲ್ಲ. ಊರಗೌಡ ಹೆಸರ ಕೇಳ್ಯಾನಂತ ನನ್ನ ಬಾಯಾಗೇನೂ ಜೊಲ್ಲ ಬಂದಿಲ್ಲದ ಆ… [ಯಿ ತೆರೆದು ಅಣಕಿಸುವಳು]
ಗೌಡ: ಏ ಹುಚ್ಚ ಹುಡಿಗೀ, ಯಾರ ಜೋಡಿ ಮಾತಾಡ್ತಿ, ಕಣ್ಣ ಬರೋಬರಿ ಕಾಣ್ತವಿಲ್ಲ?
ನಿಂಗಿ: ಕಾಣದೇನ? ಹೊರಗ ಸೂರ್ಯನ ಬೆಳಕ ಐತಿ, ನನಗೂ ಎರಡು ಕಣ್ಣದಾವು; ಹೇಳಲಿ? ಇದ ಊರು‌ಅ ಗೌಡನ ಮಸಡಿ, ಇವು ನನ್ನ ಚಪ್ಪಲಿ. [ಹೊರದಲನುವಾಗುವಳು]
ಗೌಡ: ತಡಿ, ಏ ಹುಡುಗಿ, ನಿಮ್ಮಪ್ಪಗ ಹೇಳು,ಈ ಊರಾಗಿನ ಎರೀನೆಲ ಯಾವುದೂ ನಾ ಬಿಟ್ಟೀಲ್ಲಂತ ಹೇಳು.
ನಿಂಗಿ: ಸೂರ್ಯನಂಥಾ ಸೂರ್ಯ ಮುಟ್ಟದ ಭೂಮಿ ಇದ ಊರಾಗ ಬೇಕಾದಷ್ಟ ಬಿದ್ದೈತಿ, ತಿಳಕೊ. [ಸರ್ರನೆ ಹೊರಗೆ ನಡೆವಳು]
ಗೌಡ: ನಮ್ಮ ಮನೀಗಿ ಬಂದ ನನಗ ಇಷ್ಟ ಧಿಮಾಕ ತೋರಿಸಿ ಹಾರಿ ಹೋಯ್ತಲ್ಲೋ ಕೋಳಿ ! ಗುರ್‍ಯಾ-
ಗುರ್‍ಯಾ: ಎಪ್ಪಾ.
ಗೌಡ: ಈಕೀನ ಮದವೆಯಾಗತೀಯೇನೋ?
ಗುರ್‍ಯಾ: ಎಪ್ಪಾ…
ಗೌಡ: ಈಕೀನ ಮದುವ್ಯಾಗತೀಯೇನೊ?
ಗುರ್‍ಯಾ: ಹ ಹ ಹ…
ಗೌಡ: ಮೂರು ರೂಪಾಯಿಗಿ ಈಕೀನ್ನ ಮಾರತೇನ, ತಗೊಳ್ತಿ?
ಗುರ್‍ಯಾ: ಹೆ ಹೆ ಹೆ….
ಗೌಡ: ಹೋಗು, ಮಸಾಲಿ ಹಾಕು. ಹಲ್ಲಿಗಿ ರುಚಿ ಹತ್ತೋಹಾಂಗ ಪಲ್ಲೆ ಮಾಡು. ನನ್ನ ಹೆಸರ್‍ಹೇಳಿ ತಿನ್ಹೋಗ, ತಿನ್ನಾಕ ಆಗದಿದ್ದರ ನನಗ ಕೊಡ. ಎನಂತಿ?
ಗುರ್‍ಯಾ: ಹೆ ಹೆ ಹೆ…
ಗೌಡ: ಬಾಯ್ಮುಚ್ಚೋ ಸೂಳೀಮಗನ. ಹಲ್ಲ ಕಿಸದರ ಹೆಣ್ಣ ಒಲೀತಾವು! ನಿನ್ನಂಥಾ ನಾಯೀನ್ನೋಡಿ ಯಾವಾಕಿ ಬೆನ್ನ ಹತ್ಯಾಳೋ! ಬೆಳದ ನಿಂತೀ ಮಗನ ನಿನ್ನ ವಯಸ್ಸೆಷ್ಟ?
ಗುರ್‍ಯಾ: ಪಂಚವೀಸರಿ
ಗೌಡ: ಹೆಂಗಸಿನ ಮೊಣಕಾಲ ನೋಡೀಯೇನ?
ಗುರ್‍ಯಾ: ಇಲ್ಲರಿ.
ಗೌಡ: ನಿನ್ನಂಥವಗ ಏನ ತಿಳದೀತೋ? ಗುರ್‍ಯಾ, ಈ ಕಾಡಕೋಳಿ ಹಿಡೀಬೇಕಲ್ಲೊ.
ಗುರ್‍ಯಾ: ಕಾಡಕೋಳಿ ಹೆಂಗ ಹಿಡೀಬೇಕೂನ್ನೋದು ನನಗ ಗೊತ್ತೈತ್ರಿ.
ಗೌಡ: ಹೊಂದು? ಹೆಂಗ ಹೇಳು.
ಗುರ್‍ಯಾ: ಪಂಜರದಾಗೊಂದು ಹುಂಜಿನ ಗೊಂಬಿ ಇಟ್ಟಗೋಬೇಕ್ರಿ. ಇಟ್ಟಕೊಂಡ ಅಡವಿಗಿ ಹೋಗಬೇಕ್ರಿ. ಹೋಗಿ ಅಡವಿ ನಡುವ ಪಂಜರ ತೂಗ ಹಾಕಬೇಕ್ರಿ. ತೂಗಹಾಕಿ ಹುಂಜಧಾಂಗ ಕು ಕೂ ಕೂ ಅಂತ ಕ್ಯಾಕಿ ಹಾಕಬೇಕ್ರಿ. ಕ್ಯಾಕಿ ಹಾಕಿದರ ಕಾಡಕೋಳಿ ಬರತಾವರಿ. ಬಂದ ಕೂಡ್ಲೆ ಗುಂಡ ಹಾಕಬೇಕ್ರಿ.
ಗೌಡ: ಇಷ್ಟಾದರೂ ತಿಳಕೊಂದೀಯಲ್ಲ.
ಗುರ್‍ಯಾ: ಆದರ ನಿಮ್ಮಂಥಾ ಖರೆ ಹುಂಜ ಕೂಗಿದರೂ ಕೋಳಿ ಹುಸಾ ಅಂದ ಹೋಯ್ತಲ್ರಿ.
ಗೌಡ: ಬಾಯ್ಮುಚ್ಚು, ಏ ಮಗನ ಬಾಯಿಲ್ಲಿ, ಕಿವಿ ಹಿಡಕೊ, [ಗೌಡ ಹೇಳಿದಂತೆ ಗುರ್‍ಯಾ ಮಾಡುವನು] ಕೂಡ್ರು, ಏಳ, ಕೂರ, ಏಳ…ಕಾಲ ತಿಕ್ಕ. [ಗುರ್‍ಯಾ ಗೌಡನ ಕಾಲು ತಿಕ್ಕ ತೊಡಗುವನು] ಗುರ್‍ಯಾ, ಈ ಊರಾಗಿನ ಮಂದಿ ಯಾರಿಗಿ ಹೆಚ್ಚ ಕಿಮ್ಮತ್ತ ಕೊಡತಾರೊ? ನನಗೊ? ಬಸಣ್ಯಾಗೊ?
ಗುರ್‍ಯಾ: ನಿಮಗರಿ.
ಗೌಡ: ಖರೆ ಹೇಳ.
ಗುರ್‍ಯಾ: ಗಂಡಸರ ನಿಮಗ ಹೆದರತಾರ್ರಿ. ಹೆಂಗಸರ ಬಸಣ್ಯಾಗ ಹೆದರತಾರ್ರಿ.
ಗೌಡ: ಹೌಂದು? ಬಸಣ್ಯಾ ಮುಟ್ಟದ ಹೆಣ್ಣ ಯಾವುದು ಹೇಳು?
ಗುರ್‍ಯಾ: ಆಗಳೆ ಹೋದಳಲ್ಲರಿ.
ಗೌಡ: ಹೊಂದು? ಬಸಣ್ಯಾಗ ಏನಮಾಳ ಆಕಿ?
ಗುರ್‍ಯಾ: ಅಣ್ಣಾ ಅಂತಾಳ್ರಿ.
ಗೌಡ: ಹೊಂದು? ನನಗ ಮಾಮಾ ಅಂತಾಳ ಹೋಗು, ಗುರುಪಾದ್ಯಾ ಹೇಳು-
ಗುರ್‍ಯಾ: ಹೂನ್ರಿ
ಗೌಡ: ಏನ್ಹೇಳ್ತಿ?
ಗುರ್‍ಯಾ:: ಗೌಡರ ನಾಲಿಗಿ ಹೊಲಸಾಗೇತಿ. ತಿನ್ನಾಗ ನಿನ್ನ ಕೋಳಿ ಕೊಡಂತ ಹೇಳತೇನ್ರಿ.
ಗೌಡ: ನಾನು ಹಿಂದಿಂದ ಬರತೇನ್ನಡಿ. [ಗೌಡ ಹೋಗುವನು. ಗೌಡ ಬಂದೂಕು ತೆಗ್ದುಕೊಳ್ಳುತ್ತಿರುವಾಗ ಗೊಡ್ತಿ ಬರುವಳು]
ಗೌಡ್ತಿ ಯಾಕ, ಇಂದ ಎಲ್ಲಿಗಾದರೂ ಹೋಗ್ತಿಯೇನ?
ಗೌಡ: ಹಾಕಿದಿ ಹೌಂದಲ್ಲ, ಅಡ್ಡಬಾಯಿ? ಹೇಳಿಲ್ಲಾ ಹೊರಗ ಹೊಂಟಾಗ ಎಲ್ಲಿ, ಯಾಕ ಕೇಳಬಾರದಂತ?
ಗೌಡ್ತಿ: ಇಂದ ರಾತ್ರೀನಾದರೂ ಮನೀಗಿ ಬರ್‍ತೀಯಲ್ಲ?
ಗೌಡ: ಎಲೀ ಇವಳ, ಏನ ಕರಳ ಹರದ ಬೀಳವರ್‍ಹಾಂಗ ಕಾಳಜಿ ಮಾಡತಾಳೊ! ಒಂದು ಬೀಡಿ ಸೇದೋದರೊಳಗ ನಿಂದೆಲ್ಲ ಮುಗೀಬೇಕ ನೋದ: ಕೇಳತೇನ. [ಬೀಡಿ ಹೊತ್ತಿಸುವನು]
ಗೌಡ್ತಿ: ಇಂದ ಜೋಕುಮಾರಸ್ವಾಮಿ ಹುಣ್ಣಿವಿ. ಇಂದಿಗಿ ನಮ್ಮ ಮದಿವ್ಯಾಗಿ ಹತ್ತ ವರ್ಷ ತುಂಬಿದವು.
ಗೌಡ: ತುಂಬಲಿ
ಗೌಡ್ತಿ: ಅಂದ ಹುಣ್ಣಿವಿ ದಿನ ಇಷ್ಟ ದೊಡ್ಡ ಚಂದ್ರ ಮೂಡಿದ್ದಾ.
ಗೌಡ: ಮೂಡಿದ್ದಾ.
ಗೌಡ್ತಿ: ಅಂದ ನಮ್ಮವ್ವ- ಮುದಿನ ಜೋಕುಮಾರಸ್ವಾಮಿ ಹುಣ್ಣಿವಿಗೆಂದರ ಈ ಮನ್ಯಾಗೊಂದ ಗಂಡ ಆಡತಿರಬೇಕಪಾ ಅಳಿಯಾ-ಅಂದಿದ್ಲು.
ಗೌಡ: ಹೊಂದು? ನನಗ ನೆನಪ ಇಲ್ಲ.
ಗೌಡ್ತಿ: ನಿನ್ನಿ ರಾತ್ರಿ ನನಗೊಂದ ಕನಸ ಬಿದ್ದಿತ್ತು.
ಗೌಡ: ಹೌಂದು? ಮತ್ತೇನ ಕನಸಕಂಡಿ?
ಗೌಡ್ತಿ: ಹುಣ್ಣಿವಿ ಚಂದ್ರ ಮೂಡಿದ್ದಾ. ನಮ್ಮ ಹೊಲದಾಗಿನ ಗಿಡದಾಗೊಂದ ಪಂಚರಂಗಿ ಗಿಣೀ ಕಂತಿತ್ತು. ಬೆಳದಿಂಗಳದಾಗ ಸೈತ ಅದರ ಬಣ್ಣ ಥಳಾ ಥಳಾ ಹೊಳೀತಿತ್ತು. ಅಷ್ಟರಾಗ ಯಾಕೋ ಏನೋ ಎಲ್ಲಾ ಮಂದಿ ನಗಾಕ ಸುರು ಮಾಡಿದರು. ಮ್ಯಾಲ ನೋಡಿದರ ನಮ್ಮ ಚಂದ್ರ ಸಣ್ಣಸಣ್ಣವಾಗಿ ಸವುಕಳಿ ಪಾವಲಿಯಷ್ಟ ಕಾಣತಿದ್ದ. ನನ್ನ ನೀ ಇಷ್ಟೊಂದು ಯಾಕ ಮರತಿ?
ಗೌಡ: ಎರಡರೊಳಗ ಒಂದಂತೂ ಖರೆ: ಇಲ್ಲಾ ನಿನಗೈನ್ನೂ ಎಚ್ಚರಾಗಿಲ್ಲ. ಇಲ್ಲಾ ನಿನಗ ಜ್ವರ ಬಂದಿರಬೇಕು. ನಾ ನಿನಗ ಹೇಳೇನಿ, ಹೆಚ್ಚ ವಿಚಾರ ಮಾಡಬ್ಯಾಡ- ಅಂತ. ನಿನ್ನಪ್ಪ ವಿಚಾರ ಮಾಡಿದರ ನನ್ನ ತಲ್ಯಾಗಿನ ಕೂದಲು ಉಳದಾವು?
ಗೌಡ್ತಿ: ನಿನಗ ಹೆಂಗಸಿನ ತಳಮಳ ಹೆಂಗ ತಿಳೀಬೇಕು?
ಗೌಡ: ಏನ ತಿಳಸಿ ಹೇಳಲ್ಲ. ತಗೋ ಇನ್ನೊಂದಬೀಡಿ ಹೊತ್ತಸ್ತೇನ-ಹೇಳು.
ಗೌಡ್ತಿ: ನನ್ನ ಮಾತ ನೀ ನಡೆಸಿಕೊಡೋದ ಅಷ್ಟರಾಗ ಐತಿ ಬಿಡ. ಪಾವಲಿ ಚಂದ್ರನ ಹಿಂದೊಬ್ಬ ಮುದುಕ ಚೂರಿಯಂಥಾ ಕಣ್ಣ ತಕ್ಕೊಂಡ ಗಿಣೀಗೆ ಗುರಿ ಹಿಡಕೊಂಡ ಕುಂತಿದ್ದ.
ಗೌಡ: ನೀ ಇನ್ನ ಕನಸಿನಾಗಿಂದ ಎಚ್ಚರ ಆಗಿಲ್ಲ- [ನಿದ್ದೆಯಲ್ಲಿದ್ದವರನ್ನು ಎಬ್ಬಿಸುವಂತೆ] ಏ ಎಚ್ಚರಾಗ ಏಳ-
ಗೌಡ್ತಿ: ಗೊತ್ತೈತಿ ಬಿಡ. ಮದಿವ್ಯಾಗಿ ಹತ್ತ ವರ್ಷಾಯ್ತು. ಏನಾದರೂ ನದಿಸಿಕೊಡಂತ ಕೇಳನೇನ ಹೇಳು?
ಗೌಡ: ನಿನಗೇನ ಕಡಿಮಿ ಅಗೈತಿ. ಅದಾದರೂ ಹೇಳ.
ಗೌಡ್ತಿ: ಎಲ್ಲಾ, ಎಲ್ಲಾ ಐತಿ. ಹೊಟ್ಟಿ ತುಂಬಾ ಊಟ, ಮೈ ತುಂಬ ಬಟ್ಟಿ! ಗುರುಪಾದನ ಮಗಳು ಏನಂದಳು ಗೊತ್ತೈತಿ?
ಗೌಡ: ಏನಂದಳು?
ಗೌಡ್ತಿ: ಅಡವಿ ತುಂಬ ಹೊಲಾ, ಊರ ತುಂಬಾ ಮನೀ ಇದ್ರ ಮನ್ಯಾಗೊಂದ ಕೂಸಿಲ್ಲಾ ಕುನ್ನಿಲ್ಲಾ…
ಗೌಡ: ಅಂದ್ಲು? ಅದಕ್ಕೇನಾದರೂ ವ್ಯವಸ್ಥಾ ಮಾಡೋಣಲ್ಲ.
ಗೌಡ್ತಿ: ನನ್ನ ಮದುವ್ಯಾಗುವಾಗ್ಲೂ ಹಿಂಗ ಅಂದಿದ್ದಿ!
ಗೌಡ: ಹೌಂದು? ನನಗ ನೆನಪ ಇಲ್ಲ. ಈ ಸಲ ಮರೆಯೋದಿಲ್ಲಂತ ಆಕಿಗಿ ಹೇಳು.
ಗೌಡ್ತಿ: ಇಂದ ಜೋಕುಮಾರನ ಹುಣ್ಣಿವಿ. ಚೆಲೋ ದಿನ. ಪೂಜಿ ಮಾಡಿ ಜೋಕುಮಾರಸ್ವಾಮಿ ಪಲ್ಯ ಮಾಡಿ ತಿಂದ್ರ ಮಕ್ಕಳಾಗತಾವಂತ. ಅದಕ್ಕ ಊಟಕ್ಕ ಮನೀಗೇ ಬರಾಬೇಕು ವುತ್ತ.
ಗೌಡ: ಓಹೋ ! ಅದಕ್ಕ ಹೆಂಗಸರ ಬಂದಾರೇನ ಮನೀಗಿ?
ಗೌಡ್ತಿ: ಹೂ.
ಗೌಡ: ಗುರುಪಾದನ ಮಗು ಅದಕ್ಕ ಬಂದಿದ್ದಳೇನ?
ಗೌಡ್ತಿ: ಹೂ, ಆಕಿ ಹೆಸರೇನಂದಿ?
ಗೌಡ್ತಿ: ನಿಂಗಿ.
ಗೌಡ: ಹೂ ಆಗಲಿ ಸಂಜಿ ಊಟಕ್ಕ ಮನೀಗೇ ಬರ್‍ತೀನಾಯ್ತ?
ಗೌಡ್ತಿ: ಹಾಂಗ ಒಂದ ಗಿಣಿ ಸಿಕ್ಕರೆ ನೋಡತಿಯೇನ?
ಗೌಡ: ಒಂದು ಕೆಲಸಾ ಮಾಡತಿ
ಗೌಡ್ತಿ: ಒಂದ್ಯಾಕ ಹತ್ತ ಹೇಳಲ್ಲ
ಗೌಡ: ಹತ್ತ ಬ್ಯಾಡ, ಒಂದ ಸಾಕ, ಮಾಡ್ತಿ?
ಗೌಡ್ತಿ: ಏನ ಹೇಳಲ್ಲ.
ಗೌಡ: ಬಾಯ್ಮುಚ್ಚಿಕೊಂಡು ಒಳಗ ಹೋಗ್ತಿ? [ಹೊರಡುವನು. ಮೇಳದವರು ‘ಸ್ವಾಮಿ ನಮ್ಮಯ್ ದೇವರೊ! ಢಂಢಂ ಇವರ ಹೆಸರೊ ||’ ಎಂದ್ಮು ಹಾಡುವರು.| ಸಂಗೀತ

ಮೂಡಿಬಾರಯ್ಯ ಗಿಣಿರಾಮ

ಮೇಳ: ವುಡಿ ಬಾರಯ್ಯ ಬಾರೋ ಗಿಣಿರಾಮ|| ಮೂಡಣ ಗಾಳಿಗೆ ಸುಖಿಸಿ ಚಂದ್ರ| ಬೆಳದಿಂಗಳೊಳು ಭರಿತನಾಗಿ ಬಿರಿತಂಥ ಭೂಮಿಗೆ ಚಿಗುರ ಹೂವಿನ ಚೈತ್ರ ಬೇರೆ ನಾಡಿನ ಹಕ್ಕಿ ಬಾರೊ|| ಎದಿಯೊಳಗ ತುಂಬ್ಯಾವ ಮಳಲಾ ಜೋತ| ಬಿದ್ದಾವ ಒಣಗಿಡಕ ಗೂಡಾ ಮೂರು ಸಂಜೆಯ ರಾತ್ರಿ ಕೂಗ್ಯಾವ ಮರಿಗೂಸ ಹೌಹಾರಿ ನಿಂತೇನ ಬಾರೊ|| [ಪಡಸಾಲೆಯಲ್ಲಿ ಗೌಡ್ತಿ, ಒಳಗಡೆ ಅಡಿಗೆ ಮನೆಯಲ್ಲಿಬಸ್ಸಿಯಿದ್ದಾಳೆ. ಬಸ್ಸಿ ಒಳಗಿಂದಲೇ ಮಾತಾತ್ತಾಳೆ]
ಗೌಡ್ತಿ: ಬಸ್ಸೀ-
ಬಸ್ಸಿ: ಬಂದಿನೇ ಎವ್ವ.
ಗೌಡ್ತಿ: ಲಗೂ ಬಾ, ಸುಣ್ಣವಾಗ ಎಷ್ಟು ಹೊತ್ತ ಕೈ ಹಾಕಿಕೊಂಡ ಕೂರತೀಯೆ?
ಬಸ್ಸಿ: ಕೈ ಒರಸಿಕೊಂಡರ ಮುಗೀತ.
ಗೌಡ್ತಿ: ಬಾ ಇನ್ನ ನೆಲಾ ಗೂಡಸಬೇಕು. ಹೊಚ್ಚಲಾ ತೊಳೀಬೇಕು.
ಬಸ್ಸಿ: [ಹೊರಗೆ ಬಂದು] ನೀ ಜಳಕಾ ಮಾಡಿದಿ?
ಗೌಡ್ತಿ: ಯಾಕಮಾಡಿಧಾಂಗ ಕಾನ್ಸಾನಿಲ್ಲಾ? ಎಷ್ಟ ಮಾಡಿದರೂ ಅಷ್ಟ, ಅಂಗಾಲಿನಿಂದ ನೆತ್ತೀತನಕ ನೀರಡಿಸಿಧಾಂಗ ಆಗತೈತಿ. ಗೌಡ ಬರೂರಾಗ ಎಲ್ಲ ಮುಗೀ ಬೇಕ. ಶಿವೀಗಿ ಏನ ಹೇಳಿ ಕಳಿಸಿದೆ [ ಮುಂದಿನ ಮಾತು ನಡೆದಾಗ ಬಸ್ಸಿ ನೆಲ ಗುಡಿಸುವುದು, ರಂಗವಲ್ಲಿ ಹಾಕುವುದು. ಒಲೆ ಹೂಡುವುದು ಮಾಡುತ್ತಾಳೆ. ಗೌಡ್ತಿ ಆಗೀಗ ನೆರವಾಗುತ್ತಾಳೆ.]
ಗೌಡ್ತಿ: ಬಸ್ಸೀ.
ಬಸ್ಸಿ: ಯಾಕವ್ವ?
ಗೌಡ್ತಿ: ಈ ಪೂಜಿ ಬರೋಬರಿ ಆದರ ಮಕ್ಕಳಾದಾವೇನ?
ಬಸ್ಸಿ: ಎವ್ವಾ ಸುಳ್ಳ ಯಾಕ ಹೇಳೇನು? ತೆಗ್ಗಿನ ಮನೆ ದೇವೀರಿಲ್ಲಾ?
ಗೌಡ್ತಿ: ನನ್ನ ಮದಿವೀ ದಿನಾನ ಮದಿವ್ಯಾಗಿತ್ತು: ಆಕೀನ ಹೌಂದಲ್ಲ?
ಬಸ್ಸಿ: ಅದ ದೇವೀರಿ.
ಗೌಡ್ತಿ: ಆಕಿಗಿ ಮಕ್ಕಳಾಗ್ಯಾವಲ್ಲ?
ಬಸ್ಸಿ: ಹೌಂದ ಖರೆ, ಅದೂ ಒಂದು ದೊಡ್ಡ ಕತೀನ ಎವ್ವ. ಆಕೀಗೂ ನಿನ್ಹಾಂಗ ಭಾಳ ದಿನಾ ಮಕ್ಕಳ ಆಗಲಿಲ್ಲಾ. ಇನ್ನೊಂದ ಮದಿವ್ಯಾಗಬೇಕಂತ ಗಂಡ ತಯ್ಯಾರಾದ. ಅಲ್ಲಿಲ್ಲಿ ಕನ್ಯಾ ನೋಡಿ ಬಂದರು. ಒಂದ ದಿನಾ ದೇವೀರಿ ಹೊಲಕ್ಕ ಬಂದ ಮಾರಿಗಿ ಸೆರಗ ಹಾಕಿಕೊಂಡ ಅಳತಿದ್ದಳು. ‘ಯಾಕ ಮಗಳ ಹಿಂಗ ಅಳತಿ? ಅಂದೆ.’ ಏನ ಹೇಳ್ಲೆ ಹಡದವ್ವಾ, ನನ್ನ ಗಂಡ ಇನ್ನೊಂದ ಮದುವ್ಯಾಗತಾನಂತ. ದೇವರು ನನ್ನ ಹಣ್ಯಾಗ ಮಕ್ಕಳು ಬರದಿಲ್ಲ.’ ಅಂದ್ಲು. ನೀ ಏನ ಹೇಳ ಎವ್ವಾ, ಬಂಜಿ ಯಾರಾ, ತಾಯಿ ಯಾರಾ ನನಗ ತಿಳೀದ ಇರತೈತಿ. ಅಷ್ಟು ದೂರ ನಿಂತರ ಇಲ್ಲಿ ಹರಗಿದ ಹೊಲಧಾಂಗ ನಾರತಿದ್ದಳು ದೇವೀರಿ.
ಗೌಡ್ತಿ: ಎದಕ್ಕೆಲ್ಲಾ ಒಂದೊಂದ ಹಂಗಾಮ ಇರತಾವ. ಹೌಂದನ್ನೊ ಹಂಗಾಮ ಮೀರಿದರ ಹೆಂಗ ಹೇಳು?
ಬಸ್ಸಿ: ನೀ ಏನ ಅನ್ನು. ಸಾವಿರ ಕೊಟ್ಟರೂ ಗೌಡನ ನಡಾವಳಿ ಹೇಳಬ್ಯಾಡ ತಗಿ. ಊರ ತುಂಬ ಹೊಲಾ ಇಟ್ಟ್ಟುಕೊಂಡ ಏನ ಮಾಡೊದೈತಿ? ಸತ್ತಮ್ಯಾಲ ಇದನ್ನೆಲ್ಲಾ ಯಾರಿಗಿ ಮಾಡತಾನ ಹೇಳು, ತಿಳೀಬಾರದ? ಮನ್ಯಾಗ ಎಳೀ ಹುಡುಗಿ, ಹಣೀಮ್ಯಾಲ ಕೈ ಇಟ್ಟೂಕೊಂಡ ಸೋ ಅಂತ ಹಾಡಿಕೊಂಡ ಕುಂತಿರ್‍ತಿ. ಹೇಂತೀ ಮುಖಾ ನೋಡೋ ಅಂದರ ಸೂಳೇರ ಮಣಕಾಲ ನೋಡೇನು ಅಂತಾನ!
ಗೌಡ್ತಿ: ಎದಕ್ಕೆಲ್ಲಾ ದೈವಬಲಾ ಬೇಕ ಬಾ.
ಬಸ್ಸಿ: ಎವ್ವಾ, ಮೊದಲ ನನ್ನ ಬಾಯಿ ಕಡಿಮೀದ ಅದನ್ಯಾಕ ಮಾಟಾಡಸ್ತಿ? ಬೀಜ ಬಲಾನ ‘ಇಲ್ಲದಿದ್ದರ ದೈ‌ಅವಬಲ ಏನ ಮಾಡೀತು? ಹೆಂಗಸಿನ ಹೊಟ್ಟೀ ಮ್ಯಾಲಿನ ಗೆರೀ ಅಳಸಾಕ ತಾಕತ್ತ ಬೇಕೇನವ! ಬರಿ ಬಾಯ್ಲೆ ಜಬರ ಮಾಡಿದರ ಏ ಬಂತು? ನೋಡಬಾರದ ನನ್ನ ಗಂಡನ್ನ? ಮದಿವ್ಯಾಗಿ ಇಷ್ಟು ವರ್ಷಾಯ್ತು- ಒಂದ ದಿನಾ ನನಗ ಬಾರಕೋಲ ತೋರಿಸೋಲ್ಲ. ಆದರೂ ಇನ್ನ ಅಲ್ಲಿ ಬರ್‍ತಾನಂದರ ಇಲ್ಲಿ ಗಾಳಿ ಹೊಕ್ಕ ಬಳ್ಳಿಹಾಂಗ ನಡಗತೇನ. ಸುಳ್ಳಲ್ಲ ಎವ್ವಾ ಅವನ ಉಚ್ಚೀ ದಾಟಿದರ ಮುದಿಕೇರ ಸೈತ ಬಸಿರಾಗತಾರ!
ಗೌಡ್ತಿ: ಬೇಡೀ ಬಂದೀ ಬಾ, ಸೆರಗೊಡ್ಡಿದರ ಶಿವಾ ನನ್ನ ಉಡ್ಯಾಗ ಕಸಬರಿಕಿ ಹಾಕಿ ಕಳಿಸ್ಯಾನ.
ಬಸ್ಸಿ: ಅಷ್ಟ ಯಾಕ ಮನಸಿಗಿ ಹಳಹಳಿ ಮಾಡಿಕೊಳ್ತಿ? ಈ ಪೂಜಿ ಹುಸಿಹೋದರ ನನ್ನ ಹೆಸರ ಬಸ್ಸಿ ಅಲ್ಲಾ ಅಂತ ತಿಳಿ
ಗೌಡ್ತಿ: ಅಂಧಾಂಗ ದೇವೀರಿಗಿ ಏನ ಹೇಳಿದಿ?
ಬಸ್ಸಿ: ಹಾ! ದೇವೀರಿ ಕಣ್ಣೀರ ಹಾಕಿ ಅಳತಿದ್ಲು–‘ಯಾಕ ಮಗಳ’ ಅಂದೆ. ‘ಏನ ಹೇಳ್ಲೆ ಹಡದವ್ವಾ, ನನ್ನ ಗಂಡ ನನ್ನ ಮ್ಯಾಲೊಂದ ಸ್ವತೀನ ತರತಾನಂತ’- ಅಂದ್ಲು. ಸವತೀನ ಯಾಕ ತರತಾನಂತ?’ ‘ನನಗ ಬಂಜೀ ಅಂತ ಬೈಯಾಕ’ ಅಂತ್ಹೇಳಿ ಅಳಾಕ ಶುರು ಮಾಡಿದಳು. ಗಂಡಸರ ಹಂತ್ಯಾಕ ಬಂದರ – ನಾನ ನೋಡೇನಲ್ಲ ಎವ್ವಾ- ದೇವೀರಿ ಕಣ್ಣ, ಬಳ್ಳೀ ಎಲೀ ಹಾಂಗ ನಡಗತಾವ! ಮಕ್ಕಳಾಗಣಿಲ್ಲಂದರ ಹೆಂಗ ನಂಬಲಿ?
ಗೌಡ್ತಿ: ಎಷ್ಟ ಸಲ ಹೇಳೇನಿ: ಈ ಮನೀಗಿ ಮಕ್ಕಳ ಬೇಕೋ ಗೌಡಾ-ಅಂತ. ಹೇಳಿದಾಗೊಮ್ಮಿ ‘ದಣಿದೀದಿ ಆರಾಮ ತಗೋ ಹೋಗಂತಾನ.’ ಹಾಡಾಹಗಲಿ ಮಕ್ಕಳ ಸೈತ ಈ ಕಡೆ ಬರಾಕ ಹೆದರತಾವ. ಮನ್ನಿ ಉಡೀತುಂಬ ಹುರಗಡ್ಡಿ ತಗೊಂಡ ಆದೋ ಮಕ್ಕಳ್ನ ಕರದ ಕರದೆ. ಒಂದ ಒಂದು ಹೊಲ್ಯ್ರಾರ ಕೂಸಾದರೂ ತಿರಿಗಿ ನೋಡೀತೇನ! ಓಡಿಹೋಗೋ ಮಕ್ಕಳ್ನ ನೋಡಿ ಎದಿ ಬೆವರಿತು. ಅಂಗಳದಾಗ ಹುರಗಡ್ಡಿ ಚೆಲ್ಲಿ ತಲೀಂಯಾಲ ಕೈಹೊತ್ತ ‘ಶಿವನ ಏನ ಹೆಣ್ಣಿನ ಜನ್ಮ?’ ಅಂದೆ. ನನ್ನ ಉಸಿರಿನ ಜಳ ಶಿವನಿಗೆ ಎಲ್ಲಿ ತಾಗೀತ ಹೇಳು? ಅವನ ಎದ್ಯಾಗ ಬರೀ ಕಲ್ಲ ತುಂಬ್ಯಾವೊ ಏನೋ?
ಬಸ್ಸಿ: ನೋಡ ಎವ್ವಾ, ನನಗ ಎಂಥಾ ಹೊಲತಿ ಅನ್ನವೊಲ್ಯಾಕ, ವನೀ ಅಂದ ಮ್ಯಾಲ ಕಲಕಲ ಸಪ್ಪಳಿರಬೇಕು. ಮಕ್ಕಳು ಅಳತಿರಬೇಕು. ತಾಯಿ, ಮಕ್ಕಳಿಗಿ ದೆವ್ವಿನ ಅಂಜಿಕಿ ಹಾಕತಿರಬೇಕು- ಅಂದರ ಚೆಂದ. ಇದೇನ ತಾಯಿ? ರಾತ್ರಿ ಈ ಕಡೆ ಬಂದರ ಒಂದ ಮನಿ, ಒಂದ ದೀಪ-ಮಿಣಕ್ ಮಿಣಕ್! ಈಗ ಆರಲ್ಯೋ? ಆಗ ಆರಲ್ಯೋ? ಶಿವನ್ನ ಕರೀಲ್ಯೋ? ಶಂಭೋ ಅನ್ನಲ್ಯೋ? ಮನ್ಯಾಗ ಮದ್ಮ್ದಿ ಇದ್ದಾರೊ ಇಲ್ಲ‌ಓ! ಇದ್ದವರೆಲ್ಲಾ ಬರೀ ನಿಟ್ಟುಸಿರಿನಾಗ ಮಾತಾಡತಾರೊ!
ಗೌಡ್ತಿ: ದೇವೀರಿಗಿ ಏನ ಹೇಳಿದಿ?
ಬಸ್ಸಿ: ಚಿಂತೀ ಮಾಡಬ್ಯಾಡ ಮಗಳ, ಜೋಕುಮಾರಸ್ವಾಮೀ ಪೂಜೀ ಮಾಡು ಅಂದೆ. ಪೂಜಿ ಮಾಡಿ ಸ್ವಾಮೀನ್ನ ಪಲ್ಲೆ ವಡಿ ಗಂಡಗ ನೀಡಿದಳು. ತಿಂದ್ನೋ ಇಲ್ಲೊ? ತಲೀ ಕೆಟ್ಟವರ್‍ಹಾಂಗ ಬಾಯಿ ತೆರಕೊಂಡ ದೇವೀರಿ ಸೀರಿ ಸೆರಗಿನಾಗ ಇರತಿದ್ದ! ಆಮ್ಯಾಲ ಏನ ಕೇಳ್ತಿ? ಬುಧವಾರಕೊಂದ, ಶನಿವಾರಕೊಂದ ಕೂಸ ಕೂಸ! ಹಡಿಯೋ ದಂದರ ತತ್ತಿ‌ಇಟ್ಟಷ್ಟ ಸರಳ ಎವ್ವಾ!
ಗೌಡ್ತಿ: ಆಕೀಗೂ ಜೋಕುಮಾರ ಸ್ವಾಮೀಂದ ಮಕ್ಕಳಾದುವು?
ಬಸ್ಸಿ: ಜೋಕುಮಾರಸ್ವಾಮಿ ಸಣ್ಣ ದೇವರಲ್ಲ ಎವ್ವಾ.
ಗೌಡ್ತಿ: ಬಸ್ಸೀ, ಯಾವುದಾದರೂ ಮನ್ಯಾಗ ಗಿಣಿ ಐತೇನಾ?
ಬಸ್ಸಿ: ಗಿಣೀ? ಹಾ! ಬಸಣ್ಯಾ ಇಲ್ಲಾ ಎವ್ವಾ? ಅವನ ಹಂತ್ಯಾಕೊಂದು ಗಿಣಿ ಐತಿ, ಭಾಳ ಚಂದ ಐತಿ. ಪಂಜರದಾಗಿಂದ ಬಿಟ್ಟರೂ ಹಾರಿ ಹೋಗಾಣಿಲ್ಲ- ಅವನ ಹೆಗಲ ಮ್ಯಾಲ ಕುಂತಿರತೈತಿ.
ಗೌಡ್ತಿ: ಹೌಂದೇನ?
ಬಸ್ಸಿ: ಎವ್ವಾ, ಅದಕ್ಕ ಮಾತ ಬ್ಯಾರಿ ಕಲಿಸ್ಯಾನ. ತೊದಲಿ ತೊದಲಿ ಎಂಥಾ ಚೆಂದ ಮಾತಾಡತೈತಿ!
ಗೌಡ್ತಿ: ಆಯ್ ಶಿವನ! ಖರೆ ಏನ?
ಬಸ್ಸಿ: ಖರೇಖರೇನ. ಊರ ಹುಡುಗೀರೆಲ್ಲಾ ನೀರ ತರಾಕ ಹೋದಾಗೊಮ್ಮಿ ಅದನ್ನ ಮಾತಾಡಿಸಿ ಬರತಾರ! [ಶಿವಿ ಬರುವಳು]
ಶಿವಿ: ಕೆಲಸ ಕೆಟ್ಟಿತಲ್ಲ ಎವ್ವ
ಗೌಡ್ತಿ: ಯಾಕ?
ಶಿವಿ: ನಾವು ಹೋಗೋದರೊಳಗ ಹೊಲೇರ ಶಾರಿ ಹೋಗಿದ್ದಳಂತ ಆ ಸೂತ್ರಧಾರನ ಹಂತ್ಯಾಕ. ಜೋಕುಮಾರಸ್ವಾಮೀನ್ನ ಇಸಕೊಂಡು ಹೋದಳಂತ.
ಗೌಡ್ತಿ: ಹಾಂಗ ನೀ ಹೊಲಗೇರಿಗ್ಯಾಕ ಹೋಗಿ ಬರಲಿಲ್ಲ?
ಶಿವಿ: ಹೊಲಗೇರಿಗೆ ಹ್ಯಾಂಗ ಹೋಗ?
ಗೌಡ್ತಿ: ನನ್ನ ಸಲುವಾಗಿ ಹೋಗ ಇನ್ನೊಂದ ವರ್ಷದ ತನಕ ಸ್ವಾಮೀ ಹೆಸರಿನಿಂದ ಹಾಂಗ ಹೆಂಗ ಕುಂತಿರಲಿ? ನಿನಗ ಉಡೀತುಂಬ ಆಯಾರ ಮಾಡತೇನ ಹೋಗ
ಶಿವಿ: ಗಂಡುಳ್ಳ ಗರತೇರ ಸೂಳೀ ಮನೀಗಿ ಹೆಂಗ ಹೋದಾರೂ ಎವ್ವಾ!
ಗೌಡ್ತಿ: ಖರೆ, ತಾ ಸಾಯದ ಸ್ವರ್ಗ ಸಿಣಿಲ್ಲಂತ. ಇಲ್ಲೇ ಇರ್ರಿ; ಬರತೇನ. [ಸಂಗೀತ]
*****

ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.