ಜೋಕುಮಾರಸ್ವಾಮಿ – ೨

ಋತುಮಾನದ ಹಕ್ಕಿ

[ಸೂಳೆ ಹೊಲೇರ ಶಾರಿಯ ಮನೆಯಂಗಳ. ಗೌಡ್ತಿ ಸೀರೆಯ ಸೆರಗಿನಿಂದ ಅಂಗಳ ಗುಡಿಸುತ್ತ ಬರುವಳು]

ಗೌಡ್ತಿ: ಅವ್ವಾ ಸೂಳೆವ್ವ ತಾಯಿ ಸೂಳೆವ್ವ ಅದಿಯೇನ ಮನೆಯಾಗ || ಬಂಜಿ ಬಂದ ಕರಿಯುತೇನ ಕರುಣಾ ಇಲ್ಲೇಳ ನಿನಗಾ || ಉಟ್ಟ ಸೀರೀ ಸೆರಗಿಂದ ಗುಡಿಸೇನ ನಿನ್ನ ಅಂಗಳಾ|| ಹೊರಗ ಬಂದ ನೋಡವ್ವ ತಾಯಿ ನಿಂತೇನ ಬರಿಯುಡಿದೊಡ್ಡಿ ||
ಶಾರಿ: ಅವಯ್ಯಾ? ಸೂಳಿ ಮನಿ ಅಂಗಳ ಗುಡಿಸುವಂಥಾಕಿ ಈಕಿ ಯಾರಿರ ಬೇಕ? ಯಾರವ್ವ ಎಲೆ ಗೆಳತಿ ಯಾಕವ್ವ ಬಂದಿ ಅಂಗಳ ಗುಡಿಸುತ್ತಿ || ದೊಡ್ಡ ಮನೆತನದಾಕಿ ಏ ಗುಣವಂತಿ ಕಾತಿ ಮಹಾಗರತಿ || ಕೀಳಾ ಸೂಳಿಯ ಮನಿಗಿ ಯಾಕವ್ವ ಬಂದಿ ಕಾಣತಿ ಮಹಾಗರತಿ || ಅವ್ವಾ, ನೋಡೋದಕ್ಕ ಮಹಾಗರತಿ, ಲಕ್ಷಣದಾಕಿ, ನೀ ಯಾರು? ಹೇಳುವಂಥವಳಾಗು.
ಗೌಡ್ತಿ: ತಾಯಿ-
ಶಾರಿ: ಈ ಸೂಳಿಗಿ ನಾಯೀ ಅಂತ ಕರಿಯೋದ ಬಿಟ್ಟು ತಾಯಿ ಅಂತಿ ಯಾರವಾ ನೀನು?
ಗೌಡ್ತಿ: ನಾನು ನಿನ್ಹಾಂಗ ಒಂದ ಹೆಣ್ಣಂತ ತಿಳಿ, ಸಾಕು.
ಶಾರಿ: ಹಾಂಗ ಹತ್ತಬರೆ ತಿಳಿದೇನು. ಅಕ್ಕಾ ಅಂದೇನು, ತಂಗೀ ಅಂದೇನು, ಏನಂದರೇನು? ನೋಡಿದರೆ ಪತಿವರತಿ ಕಾಣತಿ, ಹೆಸರ ಹೇಳು.
ಗೌಡ್ತಿ: ಋತುಮಾನದ ಹಕ್ಕಿ ಒಂದ ನಿನ್ನ ಮನ್ಯಾಗ ಕುಂತೈತಿ. ಅದನ್ನ ಕೊಟ್ಟರ ಹೆಸರ ಹೇಳೇನ್ನೋಡು.
ಶಾರಿ: ಯಾಕವ್ವ ಒಡಪಿನಾಗಿಡ್ತಿ? ಹೆಸರ ಹೇಳದ ಎಷ್ಟೊಂದು ಓಡ್ಯಾದಸ್ತಿ? ಋತುಮಾನದ ಹಕ್ಕಿ ಯಾವುದು; ಎಲ್ಲೈತಿ?
ಗೌಡ್ತಿ: ಮನ್ಯಾಗಿಟ್ಟುಕೊಂಡ ಎಲ್ಲೆಂದರ ಏನ ಹೇಳ್ಲಿ?
ಶಾರಿ: ಒಡಪ ಹೇಳಿ ಯಾಕ ಕೊಲ್ಲತಿ? ನಿನ್ನಿಂದ ನನ್ನ ಮನಿ ಧಗೇತಿ, ಹೆಸರ್‍ಹೇಳು. ಬಂದ ಕಾರಣ ಹೇಳು.
ಗೌಡ್ತಿ: ಅಮ್ಮಾ ನಿನ್ನ ಮನ್ಯಾಗಿನ ಜೋಕುಮಾರಸ್ವಾಮೀನ್ನ ಕೊಟ್ಟರ ಹೆಸರ ಹೇಳೇನ್ನೋಡು.
ಶಾರಿ: [ಕೋಪದಿಂದ] ಯಾವ ಸವತೀನ ನೀನು? ಯಾವ ಜೋಗತೀನ ನೀನು? ನನಗ ಸಾಯಂದೇನ? ಗೋರಿಗಿ ಹೋಗಂದೇನ? ಒಂದ ಒಂದ ಗಿರಾಕಿಲ್ಲ ಕೂಳಿಲ್ಲ ನೀರಿಲ್ಲ ಕೂತೇನು. ಅಂಗಳಾ ಉಡಗೋ ನೆವ ಮಾಡಿ ಬಂದಿ ಯಾವ ಜೋಗತೀನ ನೀನು ಯಾವ ಸವತೀನ ನೀನು? ಜೋಕುಮಾರಸ್ವಾಮಿ ಪಲ್ಲೆ ಮಾಡಿ ಊರ ಗಂಡಸರಿಗೆಲ್ಲ ನೀಡಿ ನನ್ನ ಸೆರಗಿನಾಗ ಹೇಡಮುರಿ ಕಟ್ಟಿ, ನನ್ನ ಬಾಗಲಾಗ ಬಿದ್ದಿರೋ ಹಾಂಗ ಮಾಡೇನಂದರ ಅಂಗಳಾ ಉಡಗೋ ನೆವ ಮಾಡಿ ಬಂದಿ ಯಾವ ಜೋಗತೀನ ನೀನು ಯಾವ ಸವತೀನ ನೀನು? ಸೂಳಿಯಾಗಿ ಇಪ್ಪತ್ತ ರ್ಷಾತು ಒಂದ ಗಳಿಸಲಿಲ್ಲಾ, ಒಂದ ಉಳಿಸಲಿಲ್ಲಾ. ಜೋಕುಮಾರಸ್ವಾಮಿ ದಯದಿಂದ ನೇಣು ಹಾಕಿಕೊಳ್ಳಾಗ ಒಂದು ಹಗ್ಗಾನಾದರೂ ಗಳಿಸಬೇಕಂದರ ಅಂಗಳಾ ಉಡಗೋ ನೆವ ಮಾಡಿ ಬಂದಿ ಯಾವ ಜೋಗತೀನ ನೀನು ಯಾವ ಸವತೀನ ನೀನು? [ನಿರಾಸೆಯಿಂದ ಗೌಡ್ತಿ ಅಳುವಳು] ಅಳೋದಕ್ಕ ಯಾರಿಗಿ ಬರಾಣಿಲ್ಲ? ತತಾ ನಾಲ್ಕ ಕೊಡ. ಹಾ ಅನ್ನೋದರಾಗ ಕಣ್ಣೀರಿನಿಂದ ತುಂಬಿಸ್ತೇನ. ಯಾ ಊರ ಸೂಳಿ? ಯಾ ಓಣಿ ಸೂಳಿ? ಅಂಗಳಾ ಉಡಗೋ ನೆವ ಮಾಡಿ ಬಂದಿ ಯಾವ ಜೋಗತೀನ ನೀನು ಯಾವ ಸವತೀನ ನೀನು?
ಗೌಡ್ತಿ: ತಾಯೀ, ಉಡಿಯೊಡ್ಡಿ ಬೇಡೇನ ಹಿಡಿದೇನ ನಿನ್ನ ಚರಣ ತೋರೀಸ ದಯ ಕರುಣಾ ||
ಶಾರಿ: ಏನ ಹುಚ್ಚಿ! ಕೈಗಿ ಸಿಕ್ಕ ಜೋಕುಮಾರಸ್ವಾಮೀನ್ನ ಯಾವ ಹೆಣ್ಣ ಬಿಟ್ಟಾಳು? ನನಗೂ ವಯಸ್ಸಾಗೇತಿ. ಹೊಟ್ಟೀ ನೆತ್ತಿ ನೋಡಾಕ ನನಗ ನಿನ್ಹಾಂಗ ಯಾರೂ ಹೆಣ್ಣಮಕ್ಕಳೀಲ್ಲ. ಮೊದಲ ನನ್ನ ಮೈ ಉಂಡದ್ದ, ಉಟ್ಟದ್ದ ಠಸಿ ಉಂಡ ತಿರಗಿದ್ದು. ನಾರೋ ಎಣ್ಣೀಲ್ದ ಮಗ್ಗಲ ಮಿಂಡಿಲ್ಲದ ಮಲಗಿದ್ದಲ್ಲ. ಮಿಂಡರನೆಲ್ಲಾ ಎಳಕಂಬರೋ ಮಂತ್ರ ಸಿಕ್ಕೈತಿ, ಹೆಂಗ ಕೊಡ್ಲಿ? ತಗಿ ತಗಿ ಕೊಡಾಣಿಲ್ಲ.
ಗೌಡ್ತಿ: ಅನ್ನಬ್ಯಾಡ ಇಲ್ಲಂತ ಉಡಿತುಂಬ ಮಗಳಂತ || ಉಡಿಯೊಡ್ಡಿ ಬೇಡೇನ ಹಿಡಿದೇನ ನಿನ್ನ ಚರಣ ತೋರೀಸ ದಯ ಕರುಣಾ ||
ಶಾರಿ: ಕರಗೋ ಕರಳ ಇದ್ದಿದ್ದರ ಸೂಳಿ ಆದೇನು? ಕೈಗಿ ಬಂದ ಸೌಭಾಗ್ಯ ಹಾದೀಲೆ ಹೋಗವರಿಗೆ ಹೆಂಗ ಕೊಟ್ಟೇನು?
ಗೌಡ್ತಿ: ಮಕ್ಕಳಿಲ್ಲದ ಬಂಜಿ ಬೇಡೇನ ಸೆರಗೊಡ್ಡಿ || ಉಡಿಯೊಡ್ಡಿ ಬೇಡೇನ ಹಿಡಿದೇನ ನಿನ್ನ ಚರಣ ತೋರೀಸ ದಯ ಕರುಣಾ ||
ಶಾರಿ: ಬಂಜಿ ಅಂದರ ನನಗೂ ಸಂಕತ ಆಗತೈತಿ ಖರೆ. ಅದಕ್ಕ ನಾ ಏನ್ಮಾಡಲಿ? ಅಂಗೈ ಐಶ್ವರ್ಯ ಹೆಂಗ ಕೊಟ್ಟೇನು? ಹುಚ್ಚಿ, ಸೂಳಿ ಮನಿಗಿ ಬಂದಮ್ಯಾಲಾದರೂ ಹುಚ್ಚತನ ಬಿಡಬೇಕಾಗಿತ್ತ. ಹೋಗಲು, ಯಾgಂತ ಹೆಸರ್‍ಹೇಳಿ ಹೋಗು.
ಗೌಡ್ತಿ: ಊರ ಗೌಡನ ಹೇಂತಿ ನಾ ಊರ ಗೌಡತಿ || ಉಡಿಯೊಡ್ಡಿ ಬೇಡೇನ ಹಿಡಿದೇನ ನಿನ್ನ ಚರಣ ತೋರೀಸ ದಯ ಕರುಣಾ ||
ಶಾರಿ: [ ಆಘಾತಗೊಂಡು ] ಊರ ಗೌಡ್ತಿ? ಏನ ಹುಚ್ಚಿ ಇದ್ದೀಯ ಎವ್ವ? ಮಾನ ಮರ್‍ಯಾದಿ ಬಿಟ್ಟ ಸೂಳೀಮನಿಗಿ ಬಂಜಿ ಸೆರಗೊಡ್ಡಿ ಬಂದಿ. ಬಾಳಾದಿನ ಆಗಲಿಲ್ಲಾ ನಿನ್ನ ಮದಿವ್ಯಾಗಿ?
ಗೌಡ್ತಿ: ಇಂದಿಗೆ ಹತ್ತ ವರ್ಷ ತುಂಬ್ಯಾವು.
ಶಾರಿ: ಇನ್ನೂ ಗೌಡನ ಹೊಟ್ಯಾಗಿಂದ ತಿಳೀಲಿಲ್ಲ ಎವ? ಜೋಕುಮಾರಸ್ವಾಮೀನ ಕೊಟ್ಟೇನು. ಆದರ ಗೌಡನಿಂದ ನಿನಗ ಮಕ್ಕಳಾದಾವೇನು?
ಗೌಡ್ತಿ: ಯಾಕಾಗಾಣಿಲ್ಲ? ಎಷ್ಟ ಮಂದಿಗಿ ಆಗ್ಯಾವ !
ಶಾರಿ: ಮಂದಿಗಿ ಆಗ್ಯಾವ ಖರೆ. ಗೌಡನ ಸೊಭಾವ ನಿನಗ ಇನ್ನೂ ಗೊತ್ತ ಆಗಿಲ್ಲ. ಲೋಕದಾಗಿದ್ದದ್ದೆಲ್ಲಾ ತಂದ ಆಗಬೇಕೂನ್ನೋದೊಂದ ಹಂಕಾರ ಬಿಟ್ಟರೆ ಅವನಲ್ಲಿ ಏನೈತಿ? ನನ್ನ ನೋಡಲ್ಲ ಎವ್ವಾ. ಇಡೀ ಆಯುಷ್ಯವೆಲ್ಲ ತೊಗಲ ಬಿಸಿಮಾಡಿಕೊಂಡ ಗಂಡಸರ ತೊಗಲಿಗೆ ತಿಕ್ಕೋದರಾಗ ತೀರಿ ಹೋಯ್ತು ! ಅನುಭವದ…ಮಾತ ಹೇಲಲ್ಯಾ ಎವ್ವಾ? ಬಸಣ್ಯಾನ ನೋಡು. ಅವ ಎಲ್ಲೆಲ್ಲಿ ನೋಡತಾನ ಅಲ್ಲಲ್ಲಿ ಹುಡಿಗೇರಿಗಿ ಬೆವರತೈತಿ. ನಿದ್ಯಾಗ ಬಂದ ಮೈ ಒದ್ದೀ ಮಾಡತಾನ ! ಗೌಡನ್ನೋಡಿದರ ಹಡಿಗೇರ ಬಾಯಿಗೆ ಸೆರಗ ಹಾಕ್ಕೊಂಡು ನಗತಾರ. ಅವನಿಂದ ನಿನಗ ಮಕ್ಕಳಾಗತಾವ? ನಾ ಹೆಂಗಸಾದ ಮೊದಲನೇ ದಿನ ತಾನಮೀಸಲ ಮುರೀತೇನಂತಾ ಗೌಡ ಬಂದ. ಚೀಲ ಬತ್ತಾ ಕೊಟ್ಟಾ, ಮ್ಯಾಲ ಐದು ರೂಪಾಯಿ ಕೊಟ್ಟ. ಪೈಲಾ ಗಿರಾಕಿ ಗೌಡ ಬಂದರೆ ಸೂಳೇರಿಗೆ ಹೆಂಗ ಆಗಬ್ಯಾಡ? ಸೀರಿ ಗಂತ ಸಡ್ಲ ಮಾಡಿಕೊಂಡ ಸಡಗರ ಮಾಡತಾ ದೇವರ ಕ್ವಾಣಿಗೆ ಹೋದರ- ಗೌಡ ಕಂಬಳಿ ಹೊತ್ತಕೊಂಡ ಗೊರಕೀ ಹೊಡೀತಿದ್ದ. ಕಾಲ ಒತ್ತೀಕೋತ ಕುಂತೆ. ಬೆಳಿಗ್ಗೆದ್ದ ಏನೂ ಆಗದವರ್‍ಹಾಂಗ ಹೋದ. ಅಂದಿಂದ ಹತ್ತ ಹದಿನೈದು ಮಂದಿ ಸೂಳೇರ ಮೀಸಲಾ ಮುರದ್ದಾನ.. “ಹೆಂಗರೆ?” ಅಂತ ಕೇಳಿದರ ಎಲ್ಲಾರೂ ನನ್ಹಾಂಗ ಹೇಳತಾರ ! ಹಿಂಗ ಯಾಕ ಮಾಡಿದ ಗೊತ್ತೈತಿ ಎವ್ವಾ?
ಗೌಡ್ತಿ: ಸೂಳೇರ ಮನಿಗಿ ಬಂದದ್ದಕ್ಕ ಕೆಡಕನಿಸಿರಬೇಕು.
ಶಾರಿ: ದಿನಾ ಅವನ ಕಾಲ ತಿಕ್ಕತಿ, ಜಳಕಾ ಮಾಡೋವಾಗ ಬೆನ್ನ ತಿಕ್ಕತಿ. ಅವನ ಹಿಂದ ನೋಡಿದಿ. ಮುಂದ ನೋಡಿದಿ. ಇಷ್ಟೆಲ್ಲಾ ನೋಡಿ ಮತ್ತ ಅವನ್ನ ಪ್ರೀತಿ ಮಾಡೇನಂತಿ- ನೀನೂ ದೊಡ್ಡ ಗರತಿ ಬಿಡು. ಯಾಕ ಹಂಗ ಮಾಡಿದಂದರ- ಕೂಡಲಿ ಬಿಡಲಿ, ಅವ ಮೀಸಲಾ ಮುರಿದಾ ಸೂಳೇರ ಮಕ್ಕಳೆಲ್ಲಾ ಅವನ ಮಕ್ಕಳ ಆಗತಾರೇನವಾ. ಹಾಂಗ ತಿಳಕೊಂಡ ಗೌಡ ಊರ ಮಂದಿಗೆಲ್ಲಾ ‘ ಏ ಮಗನ ಅಂತ ಕರೀತಾನ. ಇಂಥಾ ಗೌಡನಿಂದ ನಿನಗ ಮಕ್ಕಳಾಗತಾವು?
ಗೌಡ್ತಿ: ಜೋಕುಮಾರಸ್ವಾಮೀ ದಯದಿಂದ ಯಾಕಾಗಬಾರದು?
ಶಾರಿ: ಜೋಕುಮಾರಸ್ವಾಮಿನಂತೂ ತಗೊಡ್ಹೋಗು. ಆದರ ಸೂಳೀ ಹೊಚ್ಚಲಾ ಮೆಟ್ಟಿದೀ ಅಂದಮ್ಯಾಲ ಇನ್ನಾದರೂ ಶಾಣ್ಯಾಳಾಗಿ ಬದುಕು. ಇಲ್ಲಿಗೆ ಬಂದದ್ದನ್ನ ಯಾರಿಗೂ ಹೇಳಬ್ಯಾಡ.
ಗೌಡ್ತಿ: ತಾಯೀ, ನಿನ್ನ ಉಪಕಾರ ಹೆಂಗ ತೀರಿಸಲಿ? ನಿನ್ನ ಬಾಯಿಂದ ಒಂದ ಸಲ ಹೇಳು- ನನಗಮಕ್ಕಳಾಗತಾವಂತ.
ಶಾರಿ: ನಿನಗ ಮಕ್ಕಳಾಗತಾವ ಹೋಗು. [ ಗೌಡತಿ ತಲೆಯ ಮೇಳೆ ಜೋಕುಮಾರಸ್ವಾಮಿ ಬುಟ್ಟಿ ಹೊರಿಸುವಳು. ಗೌಡ್ತಿ ಹೊರಡುವಳು. ಸಂಗೀತ ]

ಡೊಳ್ಳ ಹೊಟ್ಟಿ ಉರುಳಿ ಬಿತ್ತೊ

[ರಸ್ತೆ. ಬಸಣ್ಣ ಗುರ್‍ಯಾ ಭೆಟ್ಟಿಯಾಗುವರು]

ಬಸಣ್ಣ ಮಿತ್ರಾ ಗುರಣ್ಣಾ ರಾಮೇರಾಮಪಾ ರಾಮೇರಾಮ.
ಗುರ್‍ಯಾ: ಮಿತ್ರಾ ಬಸಣ್ಣಾ ರಾಮೇರಾಮಪಾ ರಾಮೇರಾಮ.
ಬಸಣ್ಣ ಮಿತ್ರಾ ಗುರಣ್ಣಾ, ನಿನ್ನ ಮುಖಾ ಯಾಕ ಬಾಡೇತಿ? ಹೇಳಬೇಕಾದೀತ ನೋಡು.
ಗುರ್‍ಯಾ: ಮಿತ್ರಾ ಬಸಣ್ಣಾ, ಏನ್ಹೇಳಲಿ? ಬಡತನ ಪಾಪ ಹೌಂದೋ ಅಲ್ಲೊ, ವರಾ ಅಂತೂ ಅಲ್ಲಪಾ.
ಬಸಣ್ಣ: ಯಾಕೋ ಮಿತ್ರಾ, ಎಂದೂ ಇಷ್ಟ ನೊಂದ ಆಡಿದಾವಲ್ಲ, ಇಂದ ಆಡತಿ ಅಂದiಲ ಏನ ಕಾರಣ ಳು.
ಗುರ್‍ಯಾ: ಮಾರಾಯ, ಇಂದ ಗೌಡನ ಕೈಯಾಗ ಸಿಕ್ಕಿದ್ದೆ ! ನಾ ನಿನ್ನ ಹಂತ್ಯಾಕ ಬಂದದ್ದ ಅಧೆಂಗ ಗೊತ್ತಾಗೇತ್ಯೋ ! ಒದ್ದ ಬೆನ್ನ ಕಣ್ಣ ಮಾಡಾಕ ಬಂದಿದ್ದ.
ಬಸಣ್ಣ: ಅಂಜಾಕ ನೀ ಇಷ್ಟ ತಯಾರಿದ್ದರ ಯಾರ ಒದ್ಯಾಣಿಲ್ಲ ಹೇಳು? ಹಾಕ್ಯಾನಿಲ್ಲ ನಿನ್ನ ಹೊಲಕ್ಕ ಬಲಿ.
ಗುರ್‍ಯಾ: ಹಾಕೋದೇನ ಬಂತು? ಆ ಹೊಲ ಈಗ ಅವನ ಹೆಸರಿಗೇ ಆಗೇತಂತ. ಗೌಡಗೊಂದ ದೊಡ್ಡ ಹೊಟ್ಟಿ ಐತೇನಪಾ. ಯಾವತ್ತು ಆ ಹೊಟ್ಯಾಗಿಂದ ಮಾತಾಡತಾನ ಅವ. ನಾವ ಹೇಳಿದ್ದ ಅದಕ್ಕ ಕೇಳಿಸೋದ ಇಲ್ಲ. ಯಾಕಂದರ ಅದಕ್ಕ ಕಿವೀನ ಇಲ್ಲ.
ಬಸಣ್ಣ: ಏನ ಎಬದೊ ! ಕೈಯಾಗಿನ ಹೊಲಾ ಕಾಣಾ ಕಣಾ ಕಳಕೊಳ್ತಿಯಲ್ಲೊ? ಹೊಸ ಹೊಸ ಕಾಯ್ದೆ ಕಾನೂನ ಬಂದಾವಂತ ಹೇಳಬೇಕಿಲ್ಲ?
ಗುರ್‍ಯಾ: ಸಾಲಗಾರರಿಗೆ ಬಾಯಿ ಬರಾಣಿಲ್ಲೋ ಎಪ್ಪಾ !
ಬಸಣ್ಣ: ಹೆದರಬ್ಯಾಡ ಅಧೆಂಗ ಹೊಲ ಕಸೀತಾನ ನಾ ನೋಡತೇನ.
ಗುರ್‍ಯಾ: ಇಂದೇನ ಮಜಾ ಆಯ್ತೋ ಬಸಣ್ಣಾ ! ಗೌಡ ಗುರುಪಾದನ ಮಗಳು ನಿಂಗೀನ ನೋಡಿ ಬಾಯಿ ತೆಗದಿದ್ದಾ ತಗದಿದ್ದಾ ತಗದಿದ್ದಾ, ನಿಂಗಿ ಏನ ಮಾಡಿದಳಂದಿ?
ಬಸಣ್ಣ: ಮಿತ್ರಾ ಏನ ಮಾಡಿದ್ಲು?
ಗುರ್‍ಯಾ: ಥೂ ಥೂ ಥೂ ಅಂತ ಮೂರಬರೆ ಉಗಳು ಹೋದಳಲ್ಲೊ !
ಬಸಣ್ಣ: ಹಾಗಿರಬೇಕ ಇದ್ದರ.
ಗುರ್‍ಯಾ: ನಿಂಗಿ ಹಂತ್ಯಾಕಿದ್ದರ ಇಷ್ಟ ಧೈರ್‍ಯ ಬರತೈತೆ ಹುಡುಗಾ !
ಬಸಣ್ಣ: ಮದಿವ್ಯಾಗತೀಯೇನ?
ಮೇಳ: ಸ್ವಾಮಿ ನಮ್ಮಯ್ ದೇವರೊ
ಢಂ ಢಂ ಇವರ ಹೆಸರೊ ||
[ಗೊಡ ತನ್ನ ನಾಲ್ಕು ಜನರ ಪರಿವಾರದೊಂದಿಗೆ ಬರುವನು]
ಗೌಡ: ಯಾಕೋ ಗುರ್‍ಯಾ, ಇನ್ನೂ ಇಲ್ಲೇ ನಿಂತಿದಿ? ಅಂದಾಂಗ ಇವ ಯಾರ? ಏನಿವನ ಹೆಸರ? ಎಲ್ಲೋ ನೋಡಿಧಾಂಗಿತ್ತಲ್ಲೊ !
ಬಸಣ್ಣಾ: ನನ್ನ ಹೆಸರ ಬೇಕ? ಒಡಪ ಹಾಕಿ ಹೇಳಲೊ? ಹಾಂಗ ಹೇಳಲೊ?
ಒಬ್ಬ: ಇವನ ಬಸಣ್ಯಾರಿ.
[ ಗೌಡ ಅವನನ್ನು ಸುಮ್ಮನಿರಿಸಿ ಮೂಲೆಯಲ್ಲಿ ನಿಂತಿರಲು ನಾಲ್ವರಿಗೆ ಸೂಚಿಸುತ್ತಾನೆ ]
ಗೌಡ: ಓಹೋ ಇವನ ಅಲ್ಲಾ ಬಸಣ್ನಂದರ? ಗುರ್‍ಯಾ ನಾ ಹೇಳಿದ್ದ ಹೇಳಿದೆಯೊ ಇಲ್ಲೊ?
ಗುರ್‍ಯಾ: ಹೇಳಿಲ್ಲರಿ, ಹೇಳತೇನ್ರಿ. ಬಸಣ್ಣಾ, ನಿಮ್ಮಪ್ಪ ದೆವ್ವಿನ ಹೊಲದ ಕೋರಪಾಲ ಕೊಟ್ಟಿಲ್ಲಂತ…
ಬಸಣ್ಣ: ಯಾವನ ಹೊಲಾ? ಏನು ಮಾತು? ಹುಸಾಹುಸಾ ಬೈಲಕಡೆ ಬರೋಬರಿ ಆಗಿಲ್ಲೇನ, ಬಾಯಿಗಿ ಬಂದಾಂಗ ಆಡತಿ? ಯಾವ ಉಳತಾನ ಅವನ ಭೂಮಿ ಮಾಲಕ ಅಂತ ಕಾಯ್ದೆ ಬಂದಾವ, ಹೇಳವಗ.
ಗೌಡ: ಎಲ ಎಲಾ? ಭಾರಿ ವಕೀಲಪಾ ! ಗುರ್‍ಯಾನ ವಕೀಲಕಿ ನೀನ ಹಿಡಿದ್ದೀಯಂತಲ್ಲ? ಕೆಲಸ ಗೆಲ್ಲಸಬೇಕಪಾ ಮತ್ತ.
ಬಸಣ್ಣ: ಅದನ್ನ ನೀ ಹೇಳಬೇಕ ನನಗ?
ಗೌಡ: ಒಂದ ಮಾತ ತಿಳಕೊ, ನಾ ಇದ್ದೀನಂತ ನೀವೆಲ್ಲ ಬದಕೀರಿ.
ನಾಲ್ವರೂ: ಹೌಂದ ಹೌಂದರಿ. ಹೌಂದ ಹೌಂದರಿ.

ಬಸಣ್ಣ: ಹೊಂದ ಹೌಂದೋ ನನ್ನ ಪರಮೇಶ್ವರಾ, ನಾವು ಬದಿಕಿದ್ದ ನಿನ್ನ ದಯದಿಂದ ಅಲ್ಲ?
ಗೌಡ: ಯಾರ ದಯದಿಂದ ಬದಕೀರಿ ತೋರಸ್ಲೀ? ಗುರ್‍ಯಾ.
ಗುರ್‍ಯಾ: ಓ ಎಪ್ಪಾ.
ಗೌಡ: ಸೊಲ್ಪ ಬಗ್ಗಿ ನಿಲ್ಲೊ.
[ ಗುರ್‍ಯಾ ಬಗ್ಗುವನು. ಗೌಡ ಅವನ ಮೇಲ ಕೂದ್ರುವನು.]
ನೀ ಯಾರ ದಯದಿಂದ ಬದುಕೀಯೋ ಮಗನ?
ಗುರ್‍ಯಾ: ಎಪ್ಪಾ, ನಿಮ್ಮ ದಯದಿಂದರಿ.
ಗೌಡ: ಅದನ್ನವನಿಗೆ ಹೇಳು.
ಗುರ್‍ಯಾ: ಬಸಣ್ಣಾ, ನಾ ಗೌಡನ zಯದಿಂದ ಬದಕೀನೋ.
ಬಸಣ್ಣ: ಹೊ ಹೊ ಹೊ ಹೊ! ಹೊಂದ ಹೌಂದೋ ಗೌಡ. ಮೊ ಮೊದಲ ದೇವರೂ ಹಿಂಗ ಹೇಳತಿದ್ದಾ: ಮಕ್ಕಳ್ರಾ ನೀವೆಲ್ಲ ನನ್ನ ದಯದಿಂದ ಬದಕೀರಿ- ಅಂತ. ಆದರ ಮನ್ನಿ ದೇವಸ್ಥಾನದೊಳಗಿನ ದೇವರ ಕಳವಾಗ್ಯಾವ. ಗೊತ್ತಿಲ್ಲಾ?
ಗೌಡ: ಕದ್ದವರ ಮುಕಳಿ ಕಡೀತಾವ. ಏನ ಮಾಡ್ಯಾರ ಮಖ್ಖಳು?
ಬಸಣ್ಣ: ಛೇ ಛೇ, ಹಂಗೇನಿರಾಕಿಲ್ಲ ತಗಿ.
ಗೌಡ: ಹೌಂದು? ತಡಿ ನಿನಗೂ ಖಾತ್ರಿ ಮಾಡತೇನ. ಇಂದಿನಿಂದ ನೀ ಉಳೋ ಹೊಲ ನಂದು. ಇನ್ನ ಮ್ಯಾಲ ಅಲ್ಲಿ ಕಾಲಿಟ್ಟರೆ ಆ ಕಾಲ ನಿನ್ನವಲ್ಲ ತಿಳಿ.
ಬಸಣ್ಣ: ಗೌಡ ಒಂದ ಮಾತ ಹೇಳಲಿ?
ಗೌಡ: ಏನ ಹೇಳೋದೆಲ್ಲಾ, ಈ ಬಂದೂಕಿಗೆ ಹೇಳಿಕೊ. ನಾ ಅದಕ್ಕೂ ಮಾತ ಕಲಿಸೇನಿ. ಬಂದೂಕ ಏನೇನ ಮಾತಾಡತೈತ್ರೊ?
ನಾಲ್ವರೂ: ಢಂಢಂ ಅಂತೈತ್ರಿ.
ಬಸಣ್ಣಾ: ನನ್ನ ಹಂತ್ಯಾಕೊಂದ ಬಂದೂಕೈತಿ. ಅದರ ನಾ ಗುಂಡು ಹಾಕಿದವರೆಲ್ಲಾ ಸಾಯೋದರ ಬದಲ ಮರಿ ಹಾಕತಾರ! ಹಹ್ಹಹ್ಹ- ನಿಂಗಿ ಹೇಳತಿದ್ಲು: ನಿನ್ನ ತಲ್ಯಾಗ ಬಿಳೀ ಕೂದಲ ಬಂದಾವತ: ಹೌಂದು ಗೌಡಾ?
ಗೌಡ: ತೋರಸಲಿ? ತಾರೋ ಬಂದೂಕ.
[ ಬಂದೂಕು ಇಸಿದುಕೊಳ್ಳುವನು. ಬಸಣ್ಣ ಬಂದೂಕಿನ ತುದಿಗೆ ಕಿವಿ ಹಚ್ಚಿ]
ಬಸಣ್ಣ: ನೋಡೋಣು, ಏನೇನ ಮಾತಾಡತೈತಿ ! ಏನೂ ಕೇಳಸವೊಲ್ದಲ್ಲ.
[ ಬಂದೂಕು ಕಸಿದೆಸೆಯವನು ]
ಹೋಗಲೇ ಬಡಿವಾರ ಬಸೆಟ್ಟಿ. ಹೊಲದಾಗ ಕಾಲಿಟ್ಟರ ಕಾಲ ಮುರೀತಾನಂತ. ನಿನ್ನ ಕಾಲಿಂದೇನ ಕಾಳಜೀನ ಇಲ್ಲೇನ ನಿನಗ? ರಟ್ಟೀ ಮುರದ, ಹೊಟ್ಟಿ ಕಟ್ಟಿ ನಮ್ಮಪ್ಪನು, ನಾನು ಕಾಡು ಕಡದ್ದೇವ. ಮಂದಿ ದೆವ್ವಿನ ಹೊಲಾ ಅಂತಾ ಹಗಲಿ ಆ ಕಡೆ ಹೋಗಾಕ ಹೆದರತಿದ್ದರು ಹಗಲಿ ರಾತ್ರಿ ಅಲ್ಲೇ ಬಿದ್ದಿರತಿದ್ದ ನಮ್ಮಪ್ಪ. ಇಂದ ಬಂದ ಹೊಲಾ ತಂದಂತ.
ಗೌಡ: ಅಜ್ಜಾ ಅರತೆಲಿ, ಮುತ್ಯಾ ಮೂರತೆಲಿ ಗೌಡಿಕಿ ನಮ್ಮದು. ನಿಮ್ಮಪ್ಪ ಬರದ ಬಟ್ಟ ಒತ್ತಿ ಕೊಟ್ಟಾನ, ಹೊಲಾ ನಮ್ಮದು. ಇಂದ ಬಂದೀ ಬದಲ ಮಾಡಾಕ. ಬೇಕಾದ್ದ ಕಾಯ್ದೆ ಬರಲಿ ಕಾನೂನು ಬರಲಿ. ದುಡ್ಡಿದ್ದಾವ ಯಾವತ್ತೂ ದೊಡ್ಡವಾಂತ ತಿಳಕೊ. ಮೂರಲ್ಲ ಅರ ದುಡ್ಡ ಕೊಟ್ಟರ ನಿನ್ನ ಕಾಯ್ದೆ ಕಾನೂನ ನನ್ನ ಕಿಸೇದಾಗ ಬಿದ್ದಾಡತಾವ. ನಾಕ ರೂಪಾಯಿ ಕೊಡತೇನ ನನ್ನ ಬಂದೂಕ ಹೊರಾಕ ಬರತಿ?
ಬಸಣ್ಣ: ಥೇಟ ಗಂಡಸಹಾಂಗ ಮಾತಾಡ್ತೀಯಲ್ಲೊ ಗೌಡಾ. ದೊಡ್ಡ ದೊಡ್ಡ ರಾಜರ ಹಜಾಮರಾಗಿ ಮಂದೀನ ಬೋಳಸತಾರ. ನೀ ಇನ್ನ ನಿನ್ನ ಅಧಿಮಾಕ ಬಿಟ್ಟಿಲ್ಲಲ್ಲ. ತೋರಿಸಲೇನ ನನ್ನ ಕೈ?
[ ಕೈ ತೋಳೇರಿಸಿ ಗುರ್‍ಯಾನೆದುರು ಕುಳಿತು ]
ಗುರ್‍ಯಾ, ಏಳ ಮಗನ ಕಿತ್ತುಕೊಂಡ ಬೇಕಾದ್ದಾಗಲಿ ನಾ ನಿನ್ನ ಬೆನ್ನ ಮ್ಯಾಲಿರತೇನ, ಏಳೊ.
ಗೌಡ: ನಾಯಿಗಿ ತಾ ಯಾರ ಮನಿ ನಾಯಂತ ಗೊತ್ತಿರೋದಿಲ್ಲೇನು? ಹೊಂದಲ್ಲರ್‍ಯೊ?
ನಾಲ್ವರು: ಹೊಂದ ಹೌಂದರಿ
ಒಬ್ಬ: ಒಂದಷ್ಟ ಒರಟ ಜಾತೀ ನಾಯಿಗಿ ಮನಿ ನೆನಪ ಇರಾಣಿಲ್ಲರಿ. ಯಾರ ಕೂಳ ಹಾಕತಾರ ಅವರ ಮನ್ಯಾಗ ಬಿದ್ದಿರತಾವರಿ.
ಬಸಣ್ಣ: ನೋಡೋ, ಅವನ ಮನಿ ನಾಯಾಗಿ ಬೀಳತೀಯೇನೊ? ನಾ ಹುಲಿಯಂಥಾವ ಇದ್ದೇನೇಳೊ ನೋಡಿಕೊಳ್ಳಾಕ.
ಒಬ್ಬ: ನಮ್ಮ ಢಂಢಂ ದೇವರು ಇಲ್ಲೀತನಕ ಒಟ್ಟ ನನ್ನ ಹುಲಿ ಕೊಂದಾರ?
ಇನ್ನೊಬ್ಬ: ಹನ್ನೊಂದ.
ಮತ್ತೊಬ್ಬ: ಇನ್ನ ಒಂದ ಡಜನ್ ಪೂರಾ ಆಗಿಲ್ಲಲ್ಲೊ.
ಬಸಣ್ಣ: ಗುರ್‍ಯಾ, ಏಳೋ, ನಿಂಗಿಯಂಥಾ ನಿಂಗಿ ಹುಸಾ ಅಂದಳಂತಿ. ಗೌಡಗ: ನೀ ಗಂಡಸಾಗಿ ಬಿದ್ದೀಯಲ್ಲೋ? ಏಳೋ.
[ಗುರ್‍ಯಾ ಕಿತ್ತುಕೊಡೇಳುವನು. ಗೌಡಾ ಬೀಳುವನು. ನಾಲ್ವರೂ ಹೌಹಾರಿ ಹಾಡು ಮುಗಿಯುವತನಕ ಇದ್ದ ಭಂಗಿಯಲ್ಲೇ ನಿಶ್ಚಲರಾಗುತ್ತಾರೆ. ಮೇಳ ಹಾಡುತ್ತಿರುವಾಗ ಬರ ಬರುತ್ತ ಗುರ್‍ಯಾ ಕುಣಿಯತೊಡಗುವನು.]
ಮೇಳ: ಡೊಳ್ಳ ಹೊಟ್ಟೆ ಉರುಳಿಬಿತ್ತೋ ಭೂಮಿಮ್ಯಾಗ
ತೇಲಗಣ್ಣ ಮೇಲಗಣ್ಣ
ಮೆತ್ತೀಕೊಂಡೀತಪ್ಪ ಮಣ್ಣ ಮೀಸೀ ಮ್ಯಾಗ

ಸಲಿಗಿ ನಾಯಿ ಬೆನ್ನ ಏರಿ ಆಳೇನಂತಿತ್ತೊ
ಭೂಮಿ ಸೀಮಿ ತಂದ ಅಂತಿತ್ತೊ
ಚಿತ್ತಪಟ್ಟ ಢಡಂಧುಡಿಕಿ ಅಂಗಾತ ಬಿತ್ತೊ ||
[ ಹಾಡು ಮುಗಿದೊಡನೆ ಆ ನಾಲ್ವರೂ ಬಂದು ಗೌಡನನ್ನ ಎತ್ತುತ್ತಾರೆ. ಒಬ್ಬ ತಾನೆ ಗುರ್‍ಯಾನಂತೆ ಬಗ್ಗುತ್ತಾನೆ. ಗೌಡ ಅವನ ಮೇಲೆ ಕೂತಾಗ ಉಳಿದವರು ಗೌಡನನ್ನು ಉಪಚರಿಸುತ್ತಾರೆ ]
ಗೌಡ: ಹಲಕಟ್ಟ ನಾಯಿಗೋಳ್ರಾ, ಬಡವರಂತ ಸಡಲ ಬಿಟ್ಟರ ತಲಿಗೀ ಏರಿ ಬಿಟ್ಟಿರಿ? ಗುರ್‍ಯಾ: ಈ ಕಡೆ ಬರತೀನೊ?…
ಬಸಣ್ಣ: ಇವನ್ಯಾವ ನೊಣಾನೊ, ನೊರಜನೋ- ಇದನ್ನಷ್ಟ ಮಾತಾಡಸರ್‍ಯೋ-
ಒಬ್ಬ: ಯಾಕ ಬಸಣ್ಣ, ಇನ್ನೂ ನಿಮ್ಮಪ್ಪನ ಗೋರಿ ಆರಿಲ್ಲಾ, ಇಷ್ಟರಾಗ ಜೀವ ಬ್ಯಾಸರಾಯ್ತ?
ಬಸಣ್ಣ: ಹೂ ಹೂ ಜೀವ ಬ್ಯಾಸರಾಗಿ ಯಾರಾದರೂ ನಿಮ್ಮಂಥಾ ಶೂರರು ಕೊಂದರೆ ಸಾಯಬೇಖಂತ ಕುಂತೇನ. ನಾ ಒಬ್ಬ ಏನ ಊರಾಗಿನ ಬಡವರೆಲ್ಲ ಕುಂತಾರ.
ಗೌಡ: ಬಿಡಾಡಿ ನಾಯಿ ತಿರಕೊಂಡ ತಿನ್ನಲೀ ಅಂತ ಬಿಟ್ಟರ ಭಾಳಾಯ್ತಪಾ ನಿನ್ನ ಅದ್ದೂರಿ.
ಬಸಣ್ಣ: ಗೌಡ, ಬಾಯಾಗಿನ ಹಲ್ಲ ಮೊದಲ ಎಣಿಸಿಕೊಂಡ ಮಾತಾಡ.
ಗೌಡ: ಇನ್ನೂ ಎಳಕಿದ್ದೀ, ತಿರಿಗ್ಯಾಡಿ ಸೊಕ್ಕಲೀ ಅಂತ ಕೈಕಾದರ ಭಾಳ ಮಾತಾದ್ತೀಯಲ್ಲೋ, ಲಗಾಸರೋ ಮಗನ್ನ.
[ ನಾಲ್ವರೂ ಬಸಣ್ಣನ ಮೇಲೆ ಏರಿ ಹೋಗುವರು. ತುರ್‍ಯಾ ಹೆದರಿ ಚೀರುತ್ತ ಓಡುವನು. ]
ಗುರ್‍ಯಾ: ಅಯ್ಯೋ ಬರ್‍ಯೋ, ಗೌಡ ಬಸಣ್ನನ ಕೊಲ್ಲತಾನ ಬರ್‍ಯೋ…
[ಹೋಗುವನು}
ಗೌಡ: ಏ ಏ ಮಕಳ್ರಾ ಗುರ್‍ಯಾ ಮಂದೀನ ಕರಕೊಂಡ ಬರತಾರ. ಹಿಂದ ಬರ್ರಿ…
[ ನಾಲ್ವರೂ ಹಿಂದೆ ಸರಿಯುತ್ತಾರೆ ಬಸಣ್ಣ ಸೆಡ್ಡು ಹೊಡೆದು]
ಬಸಣ್ಣ: ಖರೆ ಗಂಡಸಿದ್ದರೆ ಯೀನ ಕಳಿಸಬ್ಯಾಡ. ನೀ ಬಾ. ಕೈಗಿ ಕೈ ಹತ್ತಿ ಆಂಯಾಲ ನೋದ ನನ್ನ ಕುವ್ವತ್ತು. ಅದೆಲ್ಲಿ ನಮ್ಮಪ್ಪನ ಕೊಂಧಾಂಗಾಂತ ತಿಳಿದಿಯೇನ?
ಗೌಡ: ಅದ್ಯಾಕೋ ಬರೀ ಗಂಡಸ್ತನದ ಮಾತ ಮಾತಾಡ್ತಿ. ಗಂದಸರದೊಂದ ತರ್ಕ ಹೇಳಲೇನ?
ಬಸಣ್ಣ: ಹೇಳ.
ಗೌಡ: [ಜೇಬಿನಲ್ಲಿಂi ಎಲೆಯಡಿಕೆ ಕೊಡುತ್ತ]
ಹೊಲಾ ನಂದೋ ನಿಂದೋ ಅನ್ನೋದಿಂದ ಖಾತ್ರಿ ಆಗಿ ಹೋಗಲಿ. ನನಗೂ ತಿಳೀಲಿ. ನಿನಗೂ ತಿಳೀಲಿ, ನಾಕು ಮಂದಿಗೂ ತಿಳೀಲಿ. ಇಂದ ಜೋಕುಮಾರ ಹುಣ್ಣಿವಿ. ಆ ಹೊಲದಾಗ ಬೆಳತನಕ ಯಾರ ಮಲಗತಾರ- ಹೊಲ ಅವರದು. ತಯಾರಿದ್ದೀಯೇನ? ತಯಾರಿದ್ದರ ಹಿಡಿ ವೀಳ್ಯ.
ಒಬ್ಬ: ನೋಡಪಾ, ಮೊದಲ ಹುಣ್ಣಿವಿ. ದೆವ್ವಾ, ಭೂತಾ ಭಾಳ, ನಿಮ್ಮಪ್ಪ ಎಲ್ಲಿ ಸತ್ತಂತ ನೆನಪ ಮಾಡಿಕೊ, ಹಿಡಿ.
ಇನ್ನೊಬ್ಬ: ಆ ಯೋಲ ಮಕ್ಕಳ ತಾಯಿ ಕತಿ ಗೊತ್ತೈತಿಲ್ಲೊ ಮತ್ತ?
ಬಸಣ್ಣ: ತಾ ತಯಾರಿದ್ದೇನ.
[ ವೀಳ್ಯ ತಕ್ಕೊಂಡು ಹೋಗುವನು. ಗೌಡ ಒಬ್ಬನನ್ನ ಕರೆದು ಹೇಳುವನು.]
ಗೌಡ: ನೀ ನಮ್ಮ ಮನಿಗಿ ಹೋಗು. ಊಟಾ, ಕಂಬಳಿ ತಗೊಂಬಾ. ಕ್ಳಿದರ ದೆವ್ವಿನ ಹೊಲಕ್ಕ ಮಲಗಾಕ ಹೋಘ್ಯಾರಂತ ಹೇಳು. ಎಲ್ಲಾರೂ ಕೂಡಿ ಹೊಲಕ್ಕ ಮಲಗಾಕ ಹೋಗ್ರಿ. ಕೆಲಸ ಮುಗಸ್ರಿ. ಅದ ಊಟಾ ನೀವು ಮಾಡ್ರಿ. ನಾ ಶಾರೀ ಮನ್ಯಾಗ ಇರತೇನು, ಬಂದ ಹೇಳ್ರಿ. ತಿಳೀತಲ್ಲ.
ಒಬ್ಬ: ಹೂನ್ರಿ.
[ಸಂಗೀತ]

ಜೋಕುಮಾರಸ್ವಾಮಿ

ಗೌಡನ ಮನೆ, ಬಸ್ಸಿ, ಶಿವಿ, ನೀಲಿ ಗೌಡ್ರಿಗಾಗಿ ಕಾಯುತ್ತಿದ್ದಾರೆ. ಅಷ್ಟರಲ್ಲಿ ಗೌಡ್ತಿ ಜೋಕುಮಾರ ಸ್ವಾಮಿಯ ಬುಟ್ಟಿಯೊಂದಿಗೆ ಪ್ರವೇಶಿಸುವಳು.]

ಗೌಡ್ತಿ: ಬಸ್ಸಿ, ನೋದ ಎಷ್ಟು ಅಂಜಿಸಿದಿರಿ ! ಬಾ ಸೊಲ್ಪ ದೂರ ಹೋಘೋದಕ್ಕೂ ಹೊಲೇರ ಶಾರಿ ತಾನ ಜೋಕುಮಾರಸ್ವಾಮೀನ ತರೋದಕ್ಕೂ ಸಮ ಆಯ್ತು. ನನಗ ಬೇಕಂತ ಯಾರೋ ಹೇಳಿದ್ದರಂತ. ತಗೋ ಎಪ್ಪಾ ಅಂದ್ಲು. ಲಗು ಪೂಜಿ ಸುರು ಮಾಡ್ರಿ.
ಬಸ್ಸಿ: ಎಲ್ಲಾ ತಯಾರ ಐತಿ.
[ ಬಸ್ಸಿ, ಶಿವಿ, ನೀಲಿ ಹಾಡತೊಡಗುವರು. ಆಗ ಜೋಕುಮಾರಸ್ವಾಮಿಗೆ, ಅಂದರೆ ಪಡವಲ ಕಾಯಿಗೆ ಕಣ್ಣು, ಮೀಸೆ ಬರೆದು ರುಮಾಲು ಸುತ್ತುತ್ತಾರೆ. ಆಮೇಲೆ ಅದನ್ನು ತಗೊಂಡು ಗೌಡ್ತಿ ಹಾಡಿನ ಭಾಗಗಳನ್ನು ಅಭಿನಯಿಸುತ್ತಾಳೆ. ಆಗ ಅವಳೊಂದಿಗೆ ಉಳಿದವರೂ ನರ್ತಿಸುತ್ತಾರೆ.]
ಬಸ್ಸಿ:
ಶಿವಿ:
ನೀಲಿ: ಚೆಂದಾದ ಹಸರಂಗಿ ದೋತರ ಜರತಾರಿ
ಬಾರಿ ರುಂಬಾಲ ಚೆಲುವಾ

ಜೋಕುಮಾರಸ್ವಾಮೀನ ನೋಡಿಕೊಂಡ ಗೆಳೆತವ್ವ
ಪೂಜಿ ಮಾಡೋಣು ನಡಿಯೇ ||

ಮೀಸ್ಯಾಗ ನಗಿಯೇನ, ಕೆನ್ನಿಯ ಹೊಳಪೇನ
ಹುಬ್ಬ ಕುಣಿಸುವ ತುಂಟಾ
ಬಿಂಕದ ಬಾಲೇರ ತೊಂಕದಮ್ಯಾಲ ಕಣ್ಣ,
ಇವ ಜೋಕುಮಾರ ಏನ ||

ಹವ್ವಲ್ಲೆ ಅಂದರ ಹೌಹಾರಿ ನಿಂತಾನ
ನಾವಲ್ಲೊ ಕರೆದವರಾ
ಬಂಜೇ ನಿಂತಾರೊ ಹುಬ್ಬಿಗಿ ಕೈ ಹಚ್ಚಿ
ದಯಮಾಡೋ ಸ್ವಾಮಿ ನೀನಾ ||

ಎದಿಯಾಗ ಹುಡುಗ್ಯಾರು ಹೂವಿನಾಗ ಮುಚ್ಯಾರು
ಫಲಕೊಡೊ ಮಾದೇವಾ
ಮೇಲಾದ ದೇವರು ಜೋಕುಮಾರಸ್ವಾಮಿಯ
ಪೂಜೆ ಮಾಡೇವು ನಾವಾ ||
ಬಸ್ಸಿ: ಇನ್ನ ಲಗು ಸ್ವಾಮೀನ ಪಲ್ಲೆ ಮಾಡ ಎವ್ವಾ.
ಗೌಡ್ತಿ: ಇನ್ನೇನೂ ಮಾಡೋದ ಉಳಿದಿಲ್ಲ ಹೌಂದಲ್ಲ?
ಬಸ್ಸಿ: ಇಲ್ಲರಿ.
ಗೌಡ್ತಿ: ತಾ ಹಂಗಾದರ.
[ ಮತ್ತೆ ಮೂವರೂ ಹಾಡುವರು. ಗೌಡ್ತಿ ಹಾಡಿನಂತೆ ಅಭಿನಯಿಸುತ್ತ ಪಲ್ಲೆ ಮಾಡುವಳು]
ಬಸ್ಸೀ:
ಶಿವಿ:
ನೀಲಿ: ರನ್ನದ ಮಣಿಮ್ಯಾಗ ಚಿನ್ನದ ಕುಡುಗೋಲ
ಹೆಂಗ ಹೆರಚಲೆ ಸ್ವಾಮಿ

ಅಡ್ಡಡ್ಡ ಹೆರಚಲೆ ಉದ್ದುದ್ದ ಹೆರಚಲೆ
ಹೋಳ ಮಾಡೇನ ಸ್ವಾಮಿ ||

ರನ್ನದ ಒಲಿಮ್ಯಾಗ ಚಿನ್ನದ ಗಡಿಗ್ಯಾಗ
ಕುದಿಯಲಿಟ್ಟೇನ ಸ್ವಾಮಿ
ಕುದಿಸಿ ಬೋನವ ಮಾಡಿ ಅಟ್ಟ ಅಡಗಿಯ ಮಾಡಿ
ಪಲ್ಲೇ ವಡೇನ ಸ್ವಾಮಿ ||

ಬಾ ಎನ್ನ ರುಚಿಗಾರ ಬಾ ಎನ್ನ ಸವಿಗಾರ
ಮಣಿ ಹಾಕಿ ಕಾದೇನೊ
ಜೋಕುಮಾರ ಸ್ವಾಮೀನ ಮೇಲಾದ ದೇವರ
ಪೂಜಿ ವಡೇವ ನಾವಾ||೦
ಗೌಡ್ತಿ: ಬಸ್ಸಿ, ಗೌಡ ಬಂದ್ನೇನ್ನೋಡು.
ಬಸ್ಸಿ: [ ನೋಡಿ ಬಂದು ] ಯಾರೋ ಇತ್ತ ಬರೋಹಾಂಗ ಕಾಣತೈತಿ. ಗೌಡನ ಏನೋ.
ಶಿವಿ: ನಾ ಇನ್ನ ಬರತೇನ್ರವ್ವಾ.
ನೀಲಿ: ನಾನೂ ಬರತೇನ್ರವ್ವಾ.
ಗೌಡ್ತಿ: ಇಲ್ಲೇ ಊಟಾ ಮಾಡಿಕೊಂಡು ಹೋಘೀರಂತ ಕೂಡ್ರೆ.
ಶಿವಿ: ಬ್ಯಾಡ ಎವ್ವಾ ಮಕ್ಕಳ ಹಸದಿರಬೇಕು.
[ಇಬ್ಬರೂ ಹೋಗುವರು]
ಒಬ್ಬ: ಅಮ್ಮಾವ್ರ
ಗೌಡ್ತಿ: ಗೌಡ ಬರಲಿಲ್ಲೇನೊ?
ಒಬ್ಬ: ಇಲ್ಲರಿ
ಗೌಡ್ತಿ: ಎಲ್ಲಿ ಹೋದರು?
ಒಬ್ಬ: ಹೊಲಕ್ಕ ಮಲಗಾಕ ಹೋಗ್ಯಾರ್ರಿ.
ಗೌಡ್ತಿ: ಹೊಲಕ್ಕ?
ಒಬ್ಬ: ಆ ದೆವ್ವಿನ ಹೊಲಾ ಇಲ್ಲರಿ?
ಗೌಡ್ತಿ: ದಿನಾ ಬಿಟ್ಟು ಇಂದ ಯಾಕ ಹೋದ?
ಒಬ್ಬ: ಬಸಣ್ಣನ ಜೋಡಿ ಜಗಳಾಡಿ, ಹೊಲಾ ನಂದಾ ನಾ ಮಲಗಾವಂತ ಹೋದರ್ರಿ. ಹೋಗಿ ಕಂಬಳಿ, ಊಟಾ ತಗೊಂಬಾ ಅಂದರು.
ಗೌಡ್ತಿ: ಥೂ ನನ್ನ ನಶೀಬ ! ಕಂಬಳಿ ತಗೊಢೋಗು.
ಒಬ್ಬ: ಊಟಾನು ಕೊಡಂದಾರ್ರಿ.
ಗೌಡ್ತಿ: ಕಂಬಳಿ ಒಯ್ಯು.
[ಕಂಬಳಿ ಕೊಡುವಳು. ತೆಗೆದುಕೊಂಡು ಹೋಗುವನು]
ಬಸ್ಸಿ: ಇನ್ನ ಮಲಗರಿ ಎವ್ವ. ಹರ್‍ಯಾಗಿಂದ ಮಾಡಿದ್ದೆಲ್ಲಾ ನೀರಾಗ ಹುಣಸೀ ಣ್ಣ ತೊಳಧಾಂಗಾಯ್ತು.
ಗೌಡ್ತಿ: ನೀ ಮಲಗ ನಡಿ. ನನ್ನ ದೈವ ನೀ ಯಾಕೆ ಅನುಭವಿಸಬೇಕು?
ಬಸ್ಸಿ: ಮತ್ತೆ ನೀ ಏನ್ಮಾಡ್ತಿ?
ಗೌಡ್ತಿ: ಇನ್ನೇನ ಮಾಡಲಿ? ಎದಿಮ್ಯಾಲ ಕೈ ಇಟಗೊಂಡ ಮನೀ ಜಂತಿ ಎಣಿಸಿಗೋತ ಮಲಗತೇನ !
ಬಸ್ಸಿ: ಗೌಡಗ ತಿಳೀಬೇಕ್ರವಾ.
ಗೌಡ್ತಿ: [ಆಳುತ್ತ ಹಗಲುಗನಸು ಕಾಣುತ್ತಾ]
ಗೌಡಗ ಇನ್ಹೆಂಗ ಹೇಳಲೇ ನಾ ಹೆಣ್ಣಂತ? ದೂರದ ಹಕ್ಕಿ ಹಾರಿ ಬರತೈತಿ. ! ಗೂಡಿನಾಗ ಕೂರತೈತಿ ! ಆ ನಾಡಿನ ಹಾಡೆಲ್ಲಾ ಹಾಡತೈತಿ ! ಹಾಡ ಕೇಳಿ ಮಣ್ಣಿಗಿ ಕಿವಿ ಮೂಡತಾವು ! ಕಿವಿಗುಂಟ ಮುಖ, ಕೈಕಾಲ ಮೂದತಾವು ! ಹಸರ ಒಡಮುರದ ಹಬ್ಬತೈತಿ !
[ನಿಟ್ಟುಸಿರು ಬಿಟ್ಟು]
ಚಂದ್ರನ ಹಿಂದಿನ ರಾಕ್ಷಸ ಎಲ್ಲಿ ಬಿಡತಾನ ! ಕಣ್ಣಗುರಿ ಹಿಡಿದ ಹಾಡೋ ಹಕ್ಕಿ ಹಿಡಕೊಂಡ ! ಇಕ್ಕ ಈಗ ಮೂಡಿದ ಹಸರ, ಹೂವ ಚಿಗುರೆಲ್ಲಾ ಮಟಾಮಾಯ ! ಅದ ಬೀಳನೆಲ ! ಅದ ಎಲೆ ಉದುರಿಸಿಕೊಂಡ ಗಿಡ ! ಗಿಡದಾಗ ಬರೀ ಗೂಡ ತೂಗ್ಯಾಡತಾವ ! ಆ ಕಡೆ ಈ ಕಡೆ…
[ ಈ ಮಾತು ಹೇಳುತ್ತಿರುವಾಗಲೇ ಬಸ್ಸಿ ಹೋಗಿಬಿಟ್ಟಿರುತ್ತಾಳೇ. ಗೌಡ್ತಿ ನಿಧಾನವಾಗಿ ಹಾಡುತ್ತಾಳೆ]
ದೂರ ನಾಡಿನ ಹಕ್ಕಿ ಹಾರಿ ಬಾ ಗೂಡಿಗೆ
ಗೂಡ ತೂಗ್ಯಾವ ಗಾಳಿಗೆ
ಸುವ್ವಿ ಸುವ್ವಾಲೀ ಸುವ್ವಿ ||

ಬೀಸುವ ಬಿರುಗಾಳಿ ಸುಳಿಯೋ ಸುಂಟರಗಾಳಿ
ನುಸುಳೀ ನೀ ಹಾರಿ ಬಾರಯ್ಯಾ
ಸುವ್ವಿ ಸುವ್ವಾಲೀ ಸುವ್ವಿ ||

ಕಾವಲ ಸೈತಾನ ಗುರಿಯಿಟ್ಟ ಮುದಿಗಣ್ಣ
ತಪ್ಪಿಸಿ ಹಾರಿ ಬಾರಯ್ಯಾ
ಸುವ್ವಿ ಸುವ್ವಾಲೀ ಸುವ್ವಿ ||

ಟೊಂಗಿ ಟೊಂಗಿಯ ಮ್ಯಾಲ ಕುಂತ ರೋಮಾಂಚನ
ಚಿಗುರು ಮೂಡಿಸ ಬಾರಯ್ಯಾ
ಸುವ್ವಿ ಸುವ್ವಾಲೀ ಸುವ್ವಿ ||

ಆ ನಾಡ ಡ ಹಾಡಿ ಮಣ್ಣೀಗಿ ಕಿವಿ ಮೂಡಿ
ಒಡಮುರಿದ ಹಸರ ಹಬ್ಬಾಲಿ
ಸುವ್ವಿ ಸುವ್ವಾಲೀ ಸುವ್ವಿ ||
[ಏನನ್ನೋ ಜ್ಞಾಪಿಸಿಕೊಂಡು ಥಟ್ಟನೆ ಎದ್ದು, ಮಾಡಿದ ಅಡಿಗೆಯನ್ನು ಗಂಟು ಕಟ್ಟಿಕೊಂಡು, ಒಂದು ದಿನ ನೀರಿನ ಚರಿಗೆ ತಗೊಂಡು, ಗಂಟು ತಲೆ ಮೇಲಿಟ್ಟುಕೊಂಡು ಹೊರಡುವಳು. ಸಂಗೀತ.]

ಹಕ್ಕಿ ಸಿಕ್ಕಿತು

[ ಗಿಡ, ಗುಡಿಸಲು, ನಾಲ್ವರೂ ಬಂದೂಕು ತಗೊಂಡು ಬರುತ್ತಾರೆ]

ಒಬ್ಬ: ಕುರಿ ಬಂದಿಲ್ಲೇನ್ರೋ?
ಇನ್ನೊಬ್ಬ: ಅದೆಲ್ಲಿ ಬರತೈತಿ ! ಕಾಣಾಕಾಣಾ ಸಾಯಾಕ ಯಾರ್ ಅಬರತಾರ ಹೇಳು?
ಮತ್ತೊಬ್ಬ: ಹಸಿವಾಗೈತಿ ನೀ ಊಟಾ ಯಾಕೊ ತರಲಿಲ್ಲ?
ಒಬ್ಬ: ಗೌಡ್ತಿ, ಕೊಡೋದಿಲ್ಲಂದಳಪಾ, ಕಂಬಳಿ ಕೊಟ್ಟಳು ತಗೊಂಬಂದೆ.
ಮಗುದೊಬ್ಬ: ಇನ್ನೇನ ಬೆಳತನಕ ಹಸದ ಇಲ್ಲೇ ಕುಂತಿರೋದ?
ಒಬ್ಬ: ಬೆಳತನಕಾ ಯಾಕೋ ಬಸಣ್ಯಾ ಈಗ ಬರತಾನ ತಡಿ.
ಇನ್ನೊಬ್ಬ: ಬರತಾನಂದಿ?
ಮತ್ತೊಬ್ಬ: ಇನ್ನೊಂದ ತಾಸೆರಡತಾಸ ನೋಡಿ ಹೋಗೋಣಂತ.
ಮಗುದೊಬ್ಬ: ಆಮ್ಯಾಲ ಬಂದರ?
ಒಬ್ಬ: ಅವ ಅಂಜುಬುರುಕಲ್ಲ, ತಡೀರೋ ಬಂದ ಬರತಾನ.
ಒಬ್ಬ: ಪಾಪ ಪುಣ್ಯ ನಮಗ್ಯಾಕಪಾ? ನಾವಂದರ ಹೇಳಿಕೇಳಿ ಗೌಡರ ನಾಯಿಗೊಳೇನಪಾ ! ಬೊಗಳೆಂದರೆ ಬೊಗೊಳಿದಾ. ಕಚ್ಚಂದರ ಕಚ್ಚಿದಾ.
ಇನ್ನೊಬ್ಬ: ಹಾಂಗ ನೋಡಿದರ ಬಸಣ್ಯಾಂದೇನ ತಪ್ಪೈತಿ?
ಮಗುದೊಬ್ಬ: ಸಾಲಾ ಇಸಕೊಂಡ ಹೊಲಾ ಬರಕೊಟ್ಟಿದ್ದ ತನಗ ಗೊತ್ತ ಇಲ್ಲಂತಾನಲ್ಲೊ?
ಇನ್ನೊಬ್ಬ: ಅಲ್ರೊ, ನೀವ ನೋಡೀರಿ. ನಮ್ಮ ಗೌಡ, ಎಷ್ಟೆಷ್ಟ ಮಂದಿ ಹೊಲಾ ಹಂಗಂಗ ಮುಣಗಿಸಿಕೊಂಡಾನಂತ. ಮತ್ತೆ ಬಸಣ್ಯಾಂದ ತಪ್ಪಂತೀರಿ.
ಒಬ್ಬ: ಅದೆಲ್ಲಾ ನಂಗ್ಯಾಕಪಾ? ಹೇಳಿದಷ್ಟ ಮಾಡಿದರಾಯ್ತು. ಗೌಡರ ಚಾಕರಿ ಹಿಡಿಯೋವಾಗ “ ಗೌಡರ ನಿಮ್ಮ ಅನ್ನಕ್ಕ ನಾ ಎಂದೂ ಎರಡ ಬಗಿಯೋದಿಲ್ಲರಿ” ಅಂತ ಹನುಮಪ್ಪನ ಬೂದಿ ಮುಟ್ಟೀವಿ. ನೆನಪೈತಿಲ್ಲ?
ಇನ್ನೊಬ್ಬ: ಆತ ಬಿಡ್ರಪಾ.
[ ಒಮ್ಮೆಲೆ ಅವರ ಮಧ್ಯದಲ್ಲಿ ಬಸಣ್ಯಾ ಮೇಲಿನಿಂದ ಜಿಗಿಯುತ್ತಾನೆ. ಎಲ್ಲರೂ ಗಡಬಡಿಸಿ ಎದುರಿಸಬೇಕೆನ್ನುವಷ್ಟರಲ್ಲಿ ಬಸಣ್ಯಾ ಬಂದೂಕು ಕಸಿದುಕೊಂಡಿರುತ್ತಾನೆ. ಎಲ್ಲರೂ ಹೆದರಿ ಚೆಲ್ಲಾಪಿಲ್ಲಿಯಾಗುತ್ತಾರೆ ]
ಬಸಣ್ನ: [ಬಂದೂಕು ತೋರಿಸುತ್ತ ]
ನಮ ದೇವರ ಹೆಸರೇನ ಗೊತ್ತೈತಿ? ಢಂಢಂ ದೇವರು ! ಇವಗ ಇಲ್ಲೊಂದು ಕುದುರಿ ಐತಿ. ಅದರ ಹಿಂದೊಂದು ಬೋಲ್ಟ್ ಐತಿ. ಅದುರಿಗಿ ಯಾರಿದ್ದರೂ ಸ್ವಾಮಿ ಒಮ್ಮೆ ಢಂ ಅಂದರಾಯ್ತು. ಎದುರಿಗಿದ್ದವರು ಏನ ಮಾಡ್ತಾರ ಹೇಳ್ರಿ?…ಮರಿ ಹಾಕ್ತಾರ ಮರಿ. ಸೂಳೀ ಮಕ್ಕಳ್ರಾ. ಗೌಡಾ ಎಲ್ಲಿದ್ದಾನ ಹೇಳ್ತೀರಿಲ್ಲ?
ಒಬ್ಬ: [ಹೆದರುತ್ತ] ಶಾರೀ ಮನ್ಯಾಗ.
ಬಸಣ್ಣ: ನನ್ನ ಮುಗಿಸಬೇಕಂತ ಕಳಿಸಿದ್ದ ಹೌಂದಲ್ಲ?
ಒಬ್ಬ: ಬಸಣ್ನಾ…
ಬಸಣ್ಣ: ನಮ್ಮಪ್ಪನ್ನ ಇಲ್ಲಿ ದೆವ್ವ ಕೊಂದಿತ್ತಲ್ಲ?
ಒಬ್ಬ: ಬಸಣ್ಣಾ ನಮ್ಮನ್ನ ಕೊಲ್ಲಬ್ಯಾಡೋ, ನಿನ್ನ ಕಾಲ ಬೀಳತೇವೊ !
ಇನ್ನೊಬ್ಬ: ಬಸಣ್ನಾ, ತಪ್ಪಾಯ್ತೋ ಎಪ್ಪಾ, ನೀ ಹೇಳಿಧಾಂಗ ಕೇಳ್ತೀವೊ.
ಬಸಣ್ಣ: ಹೇಳಿಧಾಂಗ ಕೇಳ್ತೀರಿ?
ಇನ್ನೊಬ್ಬ: ಹೂನ ಎಪ್ಪ.
ಬಸಣ್ಣ: ಹಾಂಗಾದರೆ ಕುಂಡೀ ಎಳಕೊಂಡ ಗೌಡಗ ಸುದ್ದೀ ಹೇಳಿ, ಅವನ ಚಾಕರಿ ಬಿಡತ್ತೀರಿ?
ಒಬ್ಬ: ಬಂದೂಕ ಕೊಡ್ತಿ ಹಂಗಾದರ?
ಬಸಣ್ಣ: ಬಂದೂಕ ಬೇಕ?
[ಗುರಿ ಹಿಡಿಯುವನು]
ಎಲ್ಲರೂ: ಬ್ಯಾಡೋ ಎಪ್ಪಾ, ಬ್ಯಾಡೋ.
ಬಸಣ್ಣ: ಹೂ ಎಳಕೊಂಡ ಹೋಗ್ರಿ ಮತ್ತ. ಇನ್ನೊಮ್ಮಿ ಈ ಕಡೆ ಕಾಲ ಹಾಕಿದರೆ ನಿಮ್ಮನ್ನ ಜೀವ ಸಹಿತ ಬಿಡಾಣಿಲ್ಲ…
[ಎಲ್ಲರೂ ಕುಂಡಿ ಎಳೆಯುತ್ತ ಹೋಗುವರು. ಸ್ವಲ್ಪ ಹೊತ್ತು ಅತ್ತಿತ್ತ ಅಡ್ಡಾಡಿ ಅವರು ಬಿಟ್ಟು ಹೋದ ಕಂಬಳಿ ಹೊತ್ತುಕೊಂಡು ಗುಡಿಸಿಲಲ್ಲಿ ಮಲಗುತ್ತಾನೆ. ತುಸು ಹೊತ್ತಾದ ಬಳಿಕ ಗೌಡ್ತಿ ಊಟ ತಗೊಂಡು ಬರುತ್ತಾಳೆ]
ಗೌಡ್ತಿ: ಆಳಿಗಿ ಹೇಳಿಕಳಸದ ಒಂದ ಗಳಿಗಿ ನೀನ ಮನೀಗಿಬಂದಿದ್ದರ ಏನಾಗತಿತ್ತ? ಊಟ ಮಾಡಿ ಬರತಿರಲಿಲ್ಲಾ? ಬಸಣ್ಯಾನ ಜೋಡಿ ಜಗಳಾ ಮಾಡಿದೆಂತ, ಇಲ್ಲಿ ಬಂದೆಂತ. ಜಗಳಾ ನಾಳಿ ಮಾಡಿದ್ದರ ಆಗತಿರಲಿಲ್ಲಾ? ಎಷ್ಟ ಹೇಳೀನಿ, ಇಂದ ಬರಾಕ ಬೇಕ ಊತಕ್ಕಂತ. ಮುದ್ದಾಂ ತಪ್ಪಿಸಿದಾಂಗ ಮಾಡತಿ. ಏಳ ಊಟ ಮಾಡೇಳ.
[ಗುಡಿಸಲ ಅಸ್ಪಷ್ಟ ಬೆಳಕಿನಲ್ಲೇ ಊಟ ಬಡಿಸುವಳು. ಬಸಣ್ಣ ಸುಮ್ಮನೆ ಊಟಾ ಮಾಡುವನು]
ಹೊರಗ ಹೆಂತಾ ಚೆಂದ ಬೆಳದಿಂಗಳೈತಿ. ಹೊರಗ ಬಂದ ಉಣಬಾರದ? ಗೌಡ, ನನ್ನ ಖುಷಿ ಹೆಂಗ ದೊಡ್ಡಾವಾಗಿ ಮೂಡ್ಯಾವ ! ಏನೋ ಗಿಣಿ ಹಾಂಗ ಕೂಗತೈತಿ ! ಅದ್ಯಾವ ಹಕ್ಕಿ? ಯಾಕ ಮಾತಾಡವೊಲ್ಲಿ? ನಾ ಒಬ್ಬಾಕೀನ ಮನೀ ಬಿಟ್ಟ ಬಂದದ್ದಕ್ಕ ಸಿಟ್ಟ ಮಾಡೀದಿ ಹೌಂದಲ್ಲ? ಗೌಡಾ ನನ್ನ ಕರಳ ಬ್ಯಾನಿ ಹೆಂಗ ತಿಳಿಸಲಿ? ನೀ ಮೊದಲು ಗಂಡಸು; ಮಕ್ಕಳಬ್ಯಾಡಾ, ಮನೀ ಬ್ಯಾಡಾ. ಇದ್ದೇನಂತಿ ಒಂದ ಗೂಗಿ ಹಾಂಗ, ನಾ ಎಷ್ತಂದರೂ ಹೆಂಗಸು. ಮಕ್ಕಳಿಲ್ಲದ ಹೆಂಗಿದ್ದೇನು? ಬಸಣ್ಯಾನ ಹಂತ್ಯಾಕ ಒಂದ ಗಿಣಿ ಐತೆಂತ, ಬಸ್ಸಿ ಹೇಳಿದ್ಲು. ಮಂದೀ ಗಿಣಿ ನಮ್ಮ ಗಿಣಿ ಹೆಂಗಾದೀತು? ನಮ್ಮ ಗಿಣಿ ನನಗೀಗ ಕಣ್ಣ ಮುಂದ ಕಾಣಾಕ ಹತ್ತೈತಿ. ಇನ್ನ ಉಣ್ಣೋದ ಮುಗಿಲಿಲ್ಲೇನ ಅಂದರ?
[ಬಣ್ಣ ಗೌಡ್ತಿಯ ಸೆರಗು ಹಿಡಿದೆಳೆಯುವನು. ಗೌಡ್ತಿ ಸಂಭ್ರಮಿಸುತ್ತ ಹೊರಗೋಡಿ ಬರುವಳು. ಹಾಡು ಸಾಗುತ್ತಿದ್ದಂತೆ ಸೆರಗು ಎಳೆದವನು ಗೌಡನಲ್ಲವೆಂದು ತಿಳಿದು ಬೆಚ್ಚಿ ತಪ್ಪಿಸಿಕೊಳ್ಳಲೆತ್ನ್ಸಿ‌ಉವಳು]
ಬಸಣ್ಣ: ಏನ ಬಗಿ ಬಯಲಕ ಬಿದ್ದೇ ಭಾಳಾ ದಿನಕಾ
ಹುಣಿವೀ ಚಂದ್ರ ಮೂಡಿಧಾಂಗ ಮರತೇಕಾ
ಕಣ್ಣೀಗಿ ದೀಪಾ ಹಚ್ಚಿಧಾಂಗ ನಿನ್ನ ಬೆಳಕಾ ||

ತೋಳ ತೊಡಿ ನಿವಳ ಸುದ್ದಾ ಬಾಳೆದಿಂಡಾ
ಎದೀಮ್ಯಾಗ ನಿಂಬೀ ಹಣ್ಣಾ
ಬಂದ ಸಿಕ್ಕೆ ಕೈಲಾಸ ಹರದ ಬಿದ್ದಾಂಗ ||

ಏನ ಹೆಣ್ಣ ದಿನ ಬಣ್ಣ ನಡಸಣ್ಣಾ
ಮಾವಿನ ಹೋಳಿನಂಥಾ ಕಣ್ಣಾ
ಕಯ ಮ್ಯಾಲೆ ಕೈಯ ಹೊಡದ ಬಾರ ಕೂಡೋಣ ||
ಗೌಡ್ತಿ: ಯಾಕೋ ಚೆಲುವಾ? ಯಾರ ಮುಂದಾ ಮಾತಾಡ್ತಿ ಗೊತ್ತೈತಿಲ್ಲ? ಗಂಡುಳ್ಳ ಗರತಿ. ಊರ ಗೌಡತೀನ ತರಿಬಿ ಕೇಳತಿ; ಎಚ್ಚರಿದ್ದೀಯಲ್ಲೋ? ಗೌಡ ಎಲ್ಲಿದ್ದಾನ ಹೇಳತೀಯಲ್ಲ?
ಬಸಣ್ಣ: ಅಬಬಬ ! ನನ್ನ ಸರದಾರ ಗೌಡ ಬೇಕಾಗಿದ್ದಾ? ಹೊಲೇರ ಶಾರಿ ಮನಿಗಿ ಹೋಗಬೇಕ್ಲಿ? ಅಲ್ಲೇ ಬಿದ್ದಾನಂತ !
ಗೌಡ್ತಿ: ಈ ಕಂಬಳಿ ಹೆಂಗ ಬಂತು ನಿನ್ನ ಹಂತ್ಯಾಕ?
ಬಸಣ್ಣ: ನಮ್ಮಪ್ಪನ್ನ ಕೊಲ್ಲಿಸಿಧಾಂಗ ನನ್ನ ಕೊಲ್ಲಿಸಬೇಕಂತ ನಾಕ ಮಂದಿ ನಾಯಿಗಳನ್ನ ಕಳಿಸಿದ್ದಾ. ಅವರೆಲ್ಲಾ ಹೆದರಿಕೊಂಡ ಬಂದೂಕ ಕಂಬಳಿ ಬಿಟ್ಟು ಹೋದರು.
ಗೌಡ್ತಿ: ಇಂಥ ಪುಂಡ ನೀ ಯಾವನೋ? ಹೆಸರೇನ? ಕುಲ ಏನ? ಗೋತ್ರ ಏನ? ಹೇಳು.
ಬಸಣ್ಣಾ: [ನಗುತ್ತ] ಮಾತಿನಾಗ ಹೇಳಲೊ? ಹಾಡಿನಾಗ ಹೇಳಲೊ?
ಗೌಡ್ತಿ: [ಹೆಜ್ಜೆ ಮುಂದಿಟ್ಟು] ಹಲ್ಲ ಕಿಸಿಬ್ಯಾಡ. ಜೀವದ ಮ್ಯಾಲಿನ ಆಸೆ ಬಿಟ್ಟ ಹೇಳ ನನ್ನ ಕಾಲಿಗಿ
ಬಸಣ್ಣ: ಕಾಲ ಗೆಜ್ಜಿ ಝಣಾಝಣಾ ಹೆಜ್ಜಿ ಎದಿಮ್ಯಾಗ ಚೆಲ್ಲಿ
ಕೇಳತಿ ನಮ್ಮ ಹೆಸರಾ
ನಮ್ಮ ಹೆಸರಾ
ನಮ್ಮ ಹೆಸರ ಬರಕೊಳ್ಳ ನಿನ್ನ ಎದಿಯೊಳಗ ||

ಊರ ಬಾಲೇರ ತುಂಬಾ ನಮ್ಮ ಹೆಸರಾ
ಅವರು ಹೇಳತಾರ
ಬಾಲೇರ ಕರೀತಾರ
ಕದ್ದ ಹೇಳತಾರ
ಬಂದ ಹೋಗೋ ಬಸಣ್ಯಾ ದೊರಿ ||

ಊರ ಮುಕೇರ ಬಾಯಿತುಂಬ ನಮ್ಮ ಹೆಸರಾ
ಅವರು ಹೇಳತಾರ
ಅವರು ಕರೀತಾರ
ಬಂದ ಹೋಗೋ ಜೋಕುಮಾರ ||
ಹುಡಿಗಿ ನಾ ಹೇಳಿದ್ದಾದರೂ ತಿಳದ ಬಂತೇನ? ಊರ ಬಾಲೇರಿಗೆಲ್ಲಾ ನನ ಹೆಸರ ಬಸಣ್ಣಾ ಅಂತ ಗೊತ್ತು. ಗರತೇರಿಗೆ ಗೊತ್ತು. ಮ್ಯಾಲ ಮುದುಕೇರಿಗೆ ಗೊತ್ತು. ಗೊತ್ತಿದ್ದೂ ಗೊತ್ತಿಲ್ಲದವರ್‍ಹಾಂಗ ಹಗಣಾ ಮಾಡಬ್ಯಾಡ. ಅಂತಃಕರಣದಿಂದ ಬಾಯಿ ತೆರೆದ ಕೇಳತೇನು. ಇಲ್ಲನ್ನಬ್ಯಾಡ, ಗುಡಿಸಲ ಬಂದ ನಾಕ್ ಅಮಾತ ಮಾತಾಡಿ, ಎಲಿ ಅಡಿಕಿ ತಿಂದ ಹೋಗಂತಿದ್ದೇನ್ನೋಡು.
ಗೌಡ್ತಿ: ಇದು ಯಾರದವ್ವ ಮಾನಗೇಡಿ ಮೂಳಾ
ಬಾಯಾಗ ಇಲ್ಲ ಕಾಳಾ
ತಿನ್ನಾಕ ಇಲ್ಲ ಕೂಳಾ
ಮುಂದ ನಿಂತ ಜೊಲ್ಲ ಸುರಿಸಿ ನೆಕ್ಕೀತ ನನ್ನ ಕಾಲಾ ||

ನಾ ಹಂಡುಳ್ಳ ಗರತಿ ಶೀಲವಂತಿ
ಮೈಮ್ಯಾಲ ಏರಿ ಬರತಿ
ತಿವದೇನೋ ಮೋತಿ ಮೋತಿ
ಬಾಯಿ ತೊಳದ ಮಾತನಾಡೋ ಕಿತ್ತೇನೋ ನಿನ್ನ ಮೀಸಿ ||

ನಾವು ಊರ ಗೌಡಾರು ಸಾವ್ಕಾರ
ಗಂಡ ಸರದಾರ
ಕೇಳುವುದಲ್ಲೋ ತಲಾ
ಕಡದಾನೊ ಹಾಡಾಹಗಲಿ ಮಾಡ್ಯಾನೊ ಚೂರ ಚೂರಾ ||
ಬಸಣ್ಣ: ಓಹೊಹೊಹೊಹೊ! ನಿನ್ನ ಸರದಾರ ಗಂಡನ ಸುದ್ದೀ ಹೇಳಿದಿ? ನಿನ್ನ ಬಾದ್ದೂರ ಗಂಡನ ಸುದ್ದಿ ಹೇಳಿದಿ? ಯಾವ ನಿನ್ನ ಗಂಡ? ತಾನೂ ಗಂಡಸಂತ ತೋರಿಸೋದಕ್ಕ ಊರ ಬಾಲೇರ್‍ನ ಎಳ‌ಎಳದ ಓಡಿಹೋಗ್ತಾನ, ಅವನ ಅಲ್ಲೇನ ನಿನ್ನ ಗಂಡ? ಸೂಳೇರ ಮೀಸಲಾ ಮುರಿಯೋ ದಿನ ಕಂಬಳಿ ಹೊತ್ತ ಮಲಗತಾನ ಅವನ ಅಲ್ಲೇನ ನಿನ್ನ ಬಾದ್ದೂರ? ಹೇಂತಿ ಹತ್ತ ವರ್ಶ ಬಾಯಿ ತೆರೆದರೂ ಒಂದ ಮಾತಾಡೊ ಗಿಣಿ ತರಲಿಕ್ಕಾಗಲಿಲ್ಲ. ಅವನ ಅಲ್ಲೇನ ನಿನ್ನ ಗಂಡ?

ಹುಡಿಗಿ ಬಾಯಿ ತೆರೆದ ಚಾಲಿವರದ
ಗಂಟ ಬಿದ್ದೇನ ನಾನಾ |
ಪಂಟ ಹೇಳಬ್ಯಾಡ ನಗನಗತ
ತೋರಿಸ ದಯ ಕರುಣಾ ||

ಈ ಜನುಮದಾಗ ಏನೈತಿ
ಹತ್ತೇತಿ ನಿನ್ನ ಭ್ರಾಂತಿ
ಒಲ್ಲೊನೆನಬ್ಯಾಡ ನಗನಗತ
ನೀ ಯಾವ ದೊಡ್ಡ ಗರತಿ ||

ನಿನ್ನ ಅಂಗೈಯಾಗ ಹಿಡಕೊಳ್ಳ
ಆಡಿಸ ನನ್ನ ಪ್ರಾಣ |
ನೆವ ಹೇಳಬ್ಯಾಡ ಓಡಿ ಬಂದ
ಮಾಡಾಕ ಗೆಳಿತನಾ ||

ಗೌಡ್ತಿ: ಬಸಣ್ಯಾ, ಕಾಣಾ ಕಾಣಾ ಇಂಥ ಪಾಪಕ್ಕ ಹೆಂಗ ಮನಸ ಮಾಡಿದಿ? ಹೇಲ್ತೇನ ಕೇಳು.
ಬಸಣ್ಣ: ಹುಡಿಗಿ ಚೆಮದಿಂದ ಹೇಳುವಂಥವಳಾಗು.
ಗೌಡ್ತಿ: ಅನ್ಯರ ಹೆಣ್ಣೊ ನಾನಾ
ಕರೀಬ್ಯಾಡೋ ಬಸಣ್ಯಾ ನನ್ನ
ಏನಾದ ಗೊತ್ತಿಲ್ಲೇನೋ ರಾವಣ ||

ನಗಿ ಮಾಡಿ ಓಡಿ ಬಂದಿ
ಕೈಯೊಡ್ಡಿ ಬಾಯಿ ತೆರದಿ
ತಿಳಕೊಳ್ಳೊ ಬುದ್ದಿಗೇಡಿ ರೀತಿ ನಡತಿ ||

ಗಂಡೂಳ್ಳ ಗರತಿ ನಾನಾ
ಹರಸೀಯೊ ಒಗತನಾ
ಪುಣ್ಯ ಪಾಪ ತಿಳಕೊಳ್ಳೊ ಹೈವಾನ ||
ಬಸಣ್ಣ: ಜೋಕುಮಾರಸ್ವಾಮಿ ಪಲ್ಲೇವ
ಉಂಡಂಯಾಗೆಲ್ಲಿ ಪುಣ್ಯೇವ ಪಾಪ
ನಮಗ ಹೇಳಬ್ಯಾಡ |
ನಮಗ ತೋರಬ್ಯಾಡ ಶಾಸ್ತ್ರದ ಹಳೇಗಂಟ ||

ನಾನು ಓದೇನ ಪುಸ್ತೆಕ ನೂರಾರಾ
ಎಲ್ಲ ಹೇಳತಾವ |
ಎಲ್ಲ ಹೇಳತಾವ ಕೂಡಬೇಕ ಗಂಡುಹೆಣ್ಣಾ ||

ತಗೊ ಕೊಡತೇನ ನನ್ನ ಹಳಿ ರುಂಬಾಲ
ಗಂಟಿ ಕಟ್ಟಿ ಇಡ
ಗಂಟಿ ಕಟ್ಟಿ ಇಡ ಶಾಸ್ತ್ರದ ಪುಸ್ತೇಕ ||

ಹುಡಿಗಿ ನಾ ಹೆಳಿದ್ದಾದರೂ ತಿಳದ ಬಂತೇನ? ಜೋಕುಮಾರಸ್ವಾಮಿ ಪಲ್ಲೆ ಉಂಡಂಯಾಲೆ ಪುಣ್ಯೆ ಎಲ್ಲಿ? ಪಾಪ ಎಲ್ಲಿ? ಬಂದ ಜೋಕುಮಾರಸ್ವಾಮಿ ಪಲ್ಲೆ ಉಣಿಸಿದಿ; ಬಿಟ್ಟೇನು? ನೀ ನೀಡಿದ್ದ ಉಂಡಮ್ಯಾಲ ಅಲ್ಲೇನ ಇಷ್ಟೇಲ್ಲಾ ಗರ್ದಿಗಮ್ಮತ್ ಆದದ್ದ? ಮಾತಾಡೋ ಗಿಣಿ ಇದ್ದವರನ್ನ ಬಿಡತಿ, ಎಲ್ಲೆಲ್ಲೋ ಹುಡಕತಿ, ಹೆಂಗ ಸಿಕ್ಕೀತು? ಬಾ, ಗೆಣಿತಾನ ಮಾಡ, ಬೇಡು ಎಂಥಾವ ಬೇಕ ಅಂಥಾ ಹಕ್ಕಿ-

ಕಾದ ಮೇದ ಹೆಣ್ಣ ನೀನಾ ನೋಡವಲ್ಲಿ
ಕರಿತೇನ ಕಾಲ ಬಿದ್ದಾ ಬಾ ಬಾg ಪೋರಿ ||

ಹಾರ್‍ಯಾಡು ಹಕ್ಕಿಯ ಹಿಡದ ಕೊಟ್ಟೇನ ನಿನಗಾ
ಮಾತಾಡೊ ಅರಗಿಣಿಯ ತಂದ ಕೊಟ್ಟೇನ ನಿನಗಾ
ಮುಡಿಸೇನ ಹೂವಾ ಚಿಗುರಾ | ಎಲೆ ಗುಡಿಗಿ
ಕರಿತೇನ ಕಾಲ ಬಿದ್ದಾ ಬಾ ಬಾg ಪೋರಿ ||

ಹೌದಂಬೊ ಹಂಗಾಮ ಹುಣ್ಣಿಮಿ ಚಂದ್ರಾಮ
ಬಿಡ ಬಿಡ ಬಡಿವಾರ ಕೇಳ ಹಕ್ಕಿಯ ಹಾಡಾ
ಬೀಸ್ಯಾವ ಮೂಡಗಾಳಿ || ಎಲೆ ಹುಡುಗಿ
ಕರಿತೇನ ಕಾಲ ಬಿದ್ದಾ ಬಾ ಬಾg ಪೋರಿ ||

ಹುಡಿಗೀ ತಿಳಿತೇನ? ಹತ್ತ ವರ್ಷ ಹಕ್ಕಿ ಬೇಕಂತ ಹಂಬಲಿಸಿದಿ. ಹಕ್ಕಿ ಹಾರಿ ಬಂದ ತೊಡೀ ಮ್ಯಾಲ ಕುಂತೇನನ್ನೋ ಕಾಲಕ್ಕ ಬ್ಯಾಡಂತಿ! ನಿನ ಕರಳಾ ನಿಂದಾ?
ಗೌಡ್ತಿ: ಏನ ಮಾಡ್ಲಿ? ಒಂದ ಕಡೆ ಹಾಡೋ ಹಕ್ಕಿ. ಇನ್ನೊಂದ ಕಡೆ ಕಣ್ಣಾಗ ಚೂರಿ ಇಟ್ಟುಕೊಂಡ ಗಂಡ! ಬಸಣ್ಯಾ, ನಡುವ ನೀ ಬಂದ ಯಾಕ ಜೀವಾ ಕೊಡತಿ? ನನ್ನ ಎಡ್ಯಾಗ ಇದ್ದದ್ದ ಉಣ್ಣತೇನು? ಸುಮ್ಮನ ದಾರಿ ಬಿಡ.
ಬಸಣ್ಣ: ನನ್ನ ಎಡ್ಯಾಗಿದ್ದದ್ದ ಉಂಡಮ್ಯಾಲ ಅಲ್ಲೇನ ಇಷ್ಟೆಲ್ಲ ಆದದ್ದು? ಹೋಗತಿದ್ದರ ಹೋಗು ಬ್ಯಾಡನ್ನಾಣಿಲ್ಲ. ನಾನೂ ಒಲ್ಲೆನ್ನೋ ಹೆಣ್ಣ ಎಳದಾವಲ್ಲ. ಹಾಂಗ ಹೋಗೋವಾಗ ಹೊಲೇರ ಶಾರೀ ಮನೀಗಷ್ಟ ಹೋಗು. ಗೌಡ ಬಿದ್ದಾನ ಎಬ್ಬಿಸಿಕೊಂಡ ಹೊದೀಯಂತೆ.
ಗೌಡ್ತಿ: ಹೊಲಕ್ಕ ಮಲಗಾಕ ಹೋಗತೇನಂದ ಅಲ್ಲಿ ಹೆಂಗ ಹೋಗಿ ಬಿದ್ದಿದ್ದಾನೊ !
ಬಸಣ್ಣ: ನಿನಗ ಇನ್ನೊಂದ ಸುದ್ದಿ ತಿಳಿದಿಲ್ಲ. ಗೌಡಗ ಈಗ ಗುರುಪಾದನ ಮಗಳು ನಿಂಗಿ ಬೇಕಾಗ್ಯಾಳಂತ.
ಗೌಡ್ತಿ: ಏನಂದಿ?
ಬಸಣ್ಣ: ಅಲ್ಲೇ ಶಾರೀನ ಕೇಳ್ಹೋಗು.
[ಗಿಣಿ ಚೀರಿದ ಸದ್ದು]
ಗೌಡ್ತಿ: ಗುಡಸಲದೊಳಗ ಯಾವುದೋ ಹಕ್ಕಿ ಚೀರಿಧಾಂಗಾಯ್ತಲ್ಲಾ?
ಬಸಣ್ಣ: ಅದ ನನ್ನ ಮಾತಾಡೋ ಗಿಣಿ. ರಾತ್ರಿ ಇಲ್ಲೇ ತಂದಿಟ್ಟಕೊಂಡಿದ್ದೆ. ಪಂಜರ ಉರುಳಿಬಿತ್ತೊ, ಹಾವ ಕಂಡಿತೊ !
ಗೌಡ್ತಿ: ಲಗು ಹೋಗಿ ಏನಾಗೇತಿ ನೋಡಿ ಬಾ.
ಬಸಣ್ಣ: ನಿನಗ ಬ್ಯಾಡಾದ ಮ್ಯಾಲ ಗಿಣಿ ಇದ್ದರೆಷ್ಟು ಬಿಟ್ಟರೆಷ್ಟು?
ಗೌಡ್ತಿ: ಬ್ಯಾಡಾಂತ ನಾ ಎಲ್ಲಿ ಹೇಳಿದೆ?
ಬಸಣ್ಣ: ಬಾ ಹಾಂಗಾದರ.
[ಗುಡಿಸಿಲಲ್ಲಿ ಹೋಗಿ ಗಿಣಿಯುಳ್ಳ ಪಂಜರ ತರುತ್ತಾನೆ. ಗೌಡ್ತಿ ನೋಡಿ ಸಂಭ್ರಮಿಸುತ್ತಾಳೆ.]
ಗೌಡ್ತಿ: ಏನಾಗಿಲ್ಲ, ಹೌಂದಲ್ಲ?
ಬಸಣ್ಣ: ಏನಿಲ್ಲ.
ಗೌಡ್ತಿ: ಇದ ಮಾತಾಡತೈತಿ?
ಬಸಣ್ಣ: ನೀ ಇನ್ನೂ ಇದರ ಮಾತ ಕೇಳಿಲ್ಲ. ಇದರ ಮಾತ ಕೇಳಿ ಊರ ಹುಡುಗೇರ ಹಾಂಗ ಬಾಯ್ತಗೀತಾರ! ಎಂತೆಂಥಾ ಕತೀ ಹೇಳತೈತಿ !
ಗೌಡ್ತಿ: ಇನ್ನ ನನಗ ಮಾತ್ರ ಈ ಗಿಣಿ ಮಾತ, ಕತಿ ಕೇಳಿಸಬೇಕು-
ಬಸಣ್ಯಾ, ಬಸಣ್ಯಾ-
ಗುಡಿಸಲದೊಳೀಕ
ಪ್ರಿಯಾ ಬಳೀಕ
ಹೋಗೋಣು ನಡಿ
ಮಾತನಾಡೋಣ ಹಕ್ಕಿಯ ಜೋಡಿ ||

ಮೂಡಗಾಳಿ ಬೀಸ್ಯಾವೊ
ಹೂವ ಹಸರ ಚಿಗರ್‍ಯಾವೆಕೇಳಿ ಬಂದಾವೊ ಹಕ್ಕಿಯ ಹಾಡಾ
ಮಾತನಾಡೋಣ ಹಕ್ಕಿಯ ಕೂಡಾ ||
[ಸಂಗೀತ]

ಢಂಢಂ ದೇವರ ಸೋಲು

ಮೇಳ : ತಿರಗತಾನ ಗೌಡ ಹಗಲಿ ರಾತ್ರಿ
ಅಂದಾನ ಅದಕ ಪಿರತಿ
ಕೋಳೀಯ ಬೆನ್ನ ಹತ್ತಿ
ನಿಂಗೀಯ ಬೆನ್ನ ಹತ್ತಿ
ಹಾಕತಾನ ಹತ್ತೆಂಟ ಬಲಿ ಹರದಾವ ಮೂಲಿ ಮೂಲಿ||

ಆರ ತಿಂಗಳ ತಿರಿಗ್ಯಾನ ಹುಂಜ ಆಗಿ
ದಿನಾ ಬೆಳಗ ಕೂಗಿ
ಬಿಟ್ಟನ ಹೊಲ ಮನಿ
ಮರತಾನ ನಾಚೀಕಿ
ಕೋಳಿ ಗುರಿವ್ಯಾನ ಬುಟ್ಟಿಯೊಳಗ ಹಾರಿ ಕುಂತಿತ್ತ ಬೆರಕಿ||

[ಈ ಹಾಡು ಹೇಳುತಿರುವಂತೆ ಗೌಡ ನಿಂಗಿಯ ಬೆನ್ನು ಹತ್ತಿ ಓಡಿಸಿಕೊಂಡು ಬರುವುದು, ಅವಳು ತಪ್ಪಿಸಿಕೊಳ್ಳುವುದು, ರಂಗದ ಸುತ್ತ ಓಡಾಡುವುದು ನಡೆದಿರುತ್ತದೆ.]

ಗೌಡ: ಆರು ತಿಂಗಳಾಯ್ತು, ತಪ್ಪಿಸ್ಯಾಡಿ ತಿರಿಗಿದಿ. ನಿನ್ನ ನೋಡಿದ ದಿನಾನ ಮಸಾಲಿ ಕೊಂಡ ಇಟ್ಟೀದೇನು ಇಂದ ಸಿಗಬಿದ್ದೆ ನನ್ನ ಕೋಳೇ! ಇನ್ನ ಹಟ ಹಿಡೀಬ್ಯಾಡ, ನಡಿ ಹೋಗೋಣು.

ನಿಂಗಿ: ಮಾನಗೇಡಿ, ಮಸಾಲಿ ಒಯ್ದ ನಿನ್ನ ಹೆಂಡತಿ ಮ್ಯಾಲ ಹಾಕಿ ನೆಕ್ಕೋ ಹೋಗ. ಇದ ಅನ್ನಾಣ ಅಂದಿ; ಇನ್ನೊಮ್ಮಿ ಅಂದರ ಅದ ಮಸಾಲಿ ನಿನಗ ಹಾಕೇನ.

ಗೌಡ: ನಾ ಹೇಳೋದೂ ಅದ ಮತ್ತ. ನನಗ ನೀ ಹಾಕು, ನಿನಗ ನಾ ಹಾಕತೇನು. ಇಂದ ಎಲ್ಲಾ ಜೀವಂತ ನನ್ನ ಅಂಗೈಯಾಗಿರತಿ, ಇಲ್ಲ ಸತ್ತ ಗೊರಕಿ ಹೋಗಿರಿತಿ.

ನಿಂಗಿ: ಹೌಂದು? ಅವಯ್ಯಾ! ಇವ ಎಂಥ ಶೂರ ಇದ್ದಿದ್ದಾನ? ಶೂರಾ ಮೀಸೀ ತೀದಿಕೊಳ್ಲಾ, ಮಂಡಾಗ್ಯಾವ?

ಗೌಡ: ನೀ ನನ್ನ ಅಂಗೈಯಾಗ ಬಂದಮ್ಯಾಲ ನಿನಗ ಆಡಾಕ ಇರಲೆಂತ ಹಾಂಗ ಬಿಟ್ಟೇನ, ಬಾ.

ನಿಂಗಿ: ಅವಯ್ಯಾ! ಇವ ಎಂಥಾ ಧೀರ ಇದ್ದಿದ್ದಾನ! ಧೀರಾ, ಬಸಣ್ಯಾ ಬಸಣ್ಯಾ ಬಂದಾನ ದೂರ ಸರಿ.

ಗೌಡ: ಹುಚ್ಚಿ, ಎಷ್ಟಂತ ಚಾಷ್ಟಿ ಮಾಡತಿ? ನಿನಗ ಮೊದಲ ಗೊತ್ತೈತಿ. ನಾಮನಸ್ಸ ಇಟ್ಟಿದ್ದ ಯಾವುದೂ ಬಿಟ್ಟಿಲ್ಲಂತ. ಮತ್ತ ಓಡ್ಯಾಡಸ್ತಿ, ಕಾಣಬಾರದ? ನಿನ್ನ ಸಲುವಾಗಿ ಮನಿಮಾರ ಬಿಟ್ಟ, ಹೊಲಾ ಬಿಟ್ಟ, ನೆಲಾ ಬಿಟ್ಟ, ಲಜ್ಜಿಗೇಡ್ಯಾಗಿ ತಿರಗತೇನು. ಊರ ಹುಡುಗೇರಿಗೆಲ್ಲಾ ಅದೊಂದು ಬಸಣ್ಯಾನ ಹುಚ್ಚು. ಅವನ ಬೆನ್ನ ಹತ್ತಿ ಏನ ಸುಖ ಸುರಕೊಳ್ತಿ? ತಿನ್ನಾಕ ಕೂಳಿಲ್ಲಾ, ನನ್ನ ಹೊಲಾ ಮಾಡಿಕೊಂಡ ಬಿದ್ದಾನ. ಅವ ಏನು ಕೊಟಾನು? ನನ್ನ ಬೆನ್ನ ಹತ್ತಿ ಬಾ. ಏನ ಬೇಕ ಅದನ್ನ ಬೇಡು, ಬೇಕಾದ್ದ ಬ್ಯಾಡಾದ್ದ ಉಡು, ಉಣ್ಣು, ತೊಡು ಬೇಕಂದರ ತಗೊ ಹಜಾರ ರೂಪಾಯಿ ಸಂಚಕಾರ!- ಕಿಣ್ ಕಿಣ್ ಕಿಣ್ ಕೇಳಿಸ್ತು?

ನಿಂಗಿ: ಕೇಳಿಸ್ತು.
ಗೌಡ: ಬಾ ಹಂಗಾರ ಬೆನ್ನ ಹತ್ತಿ.
ನಿಂಗಿ: (ಒಲಿದವರಂತೆ ಅಭಿನಯಿಸುತ್ತ) ನಿನ್ನ ಬೆನ್ನ ಹತ್ತಿ ಬಂದರ ನಮ್ಮವ್ವಾ ನಮ್ಮಪ್ಪಾ ಏನಂದಾರು?
ಗೌಡ: ಹೇಳಿ ಕೇಳಿ ಬಡವರು, ಗೌಡನ ಮುಂದ ನನ್ನ ಏನಂದಾರು? ಬೆನ್ನ ಹತ್ತಿ ಬಾ, ದೋ ಮಜಲ ಮನಿ ಕಟ್ಟಿಸಿಕೊಡತೇನ. ತೂಗ ಮಂಚ ಮಾಡಿಸಿ ತೂಗಾಕೊಂದ ತೊತ್ತಾದರೂ ಇಡತೇನ. ಅದೂ ಬ್ಯಾಡೆಂದರ ಕಾಜಿನ ಕಪಾಟ ಮಾಡಿಸಿ ಅದರಾಗ ಇಡತೇನ. ಬೇಕಂದರ ಒಬ್ಬ ಗಂಡನ್ನ ಮಾಡತೇನ.
ನಿಂಗಿ: ಗಂಡನ್ನ ಮಾಡತಿ? ನಿನ್ನ ಜೋಡಿ ಇದ್ದಮ್ಯಾಲ ನನ್ನ ಯಾರ ಮಾಡಿಕೊಂಡಾರು?

ಗೌಡ: ಯಾಕ ಚಿಂತೀ ಮಾಡತಿ? ನಮ್ಮ ಗುರ್‍ಯಾ ಇದ್ದಾನ್ನೋಡು, ಅವಗ ನಿನ್ನ ಮದಿವೀ ಮಾಡತೇನ. ಹೆಸರ ಗಂಡಂದಾ, ಮಸರ ನಂದಾ, ಏನಂತಿ?

ನಿಂಗಿ: ಹಂಗಾದರ ಗುರ್‍ಯಾ ಇಲ್ಲೇ ಇದ್ದಾನ ಕರೀಲಿ? ಗುರ್‍ಯಾ….
[ಗುರ್‍ಯಾ ಪ್ರವೇಶಿಸುವನು. ಗೌಡ ಅವನನ್ನು ನೋಡಿ ಹೆದರುವನು.]
ಗುರ್‍ಯಾ: ಸರಣ್ರೀ ಗೌಡಪ್ಪಾ…ನೀವು ಹೀಂಗ ಹೇಳ್ತೀರಂತ ತಿಳಕೊಂಡ ನಾ ಈಕೀನ ಮದೀವ್ಯಾಗಾವಿದ್ದೇನ್ರಿ.

ಗೌಡ: ಏ ಸೂಳೀಮಗನ ಬಾರೋ ಇಲ್ಲಿ.

ಗುರ್‍ಯಾ: ಹೌಂದರಿ? ನಾ ನಮ್ಮಪ್ಪಗ ಹುಟ್ಟಿದಾವಂತ ತಿಳಕೊಂಡಿದ್ದೆ. ನಮ್ಮಪ್ಪ ನಿವ ಏನ್ರಿ ಮತ್ತ!

ಗೌಡ: ಯಾಕೋ ಮಗನ?

ಗುರ್‍ಯಾ: ಹಾ! ನಾ ಹೇಳೆದಿಲ್ರೆ. ನೀವ ನಮ್ಮಪ್ಪಂತ? ಯಾಕ್ಕರದಿ ಎಪ್ಪ?

ಗೌಡ: ಯಾಕೋ, ನಾಲಿಗಿ ಭಾಳ ಉದ್ದ ಬಿಡತಿ, ಈ ರಂಡೀ ಮುಂದ?

ಗುರ್‍ಯಾ: ಈಕಿ ರಂಡಿ ಅಲ್ಲರಿ. ನಾನ ಈಕಿ ಗಂಡ. ಇನ್ನ ಮದಿವ್ಯಾಗಿಲ್ಲರಿ. ನಿಶ್ಚಯ ಕಾರ್‍ಯ ಎಲ್ಲಾ ಮುಗದೈತ್ರಿ.

ಗೌಡ: ನಿನಗ ಈ ನಿಂಗಿಗೇ ಮದಿವಿ? ಯಾಕೋ, ಊರಾಗಿನ ಗಂಡಸರು ನಾವೆಲ್ಲಾ ಸತ್ತಿವೇನೊ?
[ನಿಂಗಿ ನಗುವಳು]
ಗುರ್‍ಯಾ: ಯಾಕ ನಾ ಗಂಡಸಲ್ಲರಿ?
ಗೌಡ: ಏ ಲಫಂಗಾ, ಬಾಯ್ಮುಚ್ಚತೀಯೊ?……
ಗುರ್‍ಯಾ: ಎಲೀ ಇವರ! ಸುಳ್ಳಲ್ಲರೀ, ತಡೀರಿ, ಏ ಹೇಂತೇ ಇಲ್ಲಿ ಬಾರ. ಗೌಡರಿಗಿ ನಮ್ಮ ಮದಿವ್ಯಾಗಿನ್ನೂ ವಿಶ್ವಾಸಾಗಿಲ್ಲಂತ. ನನ್ನ ಕಾಲ ಬೀಳು.
[ನಿಂಗಿ ಗುರ್‍ಯಾನ ಕಾಲಿಗೆ ಬೀಳುವಳು. ಆಶೀರ್ವದಿಸುತ್ತ]
ಮನೀತುಂಬ ಮಕ್ಕಳಾ ಹಡದು ನಕ್ಕೋತ ಸಾಯುವಂಥಾವಳಾಗು-

ಗೌಡ: ನನ್ನ ಅನ್ನಾ ಉಂಡ ನನಗ ಎದರ ಮಾತಾಡೋವಷ್ಟ ಧೈರ್ಯ ಬಂತೇನೋ ನಿನಗ?

ಗುರ್‍ಯಾ: ಈ ಹೆಣ್ಣು ಭಾಳ ಕೆರ್ರರಿ. ಇದರ ಹಂತ್ಯಾಕಿದ್ದರ ಭಲೆ ಕೆಟ್ಟ ಧೈರ್ಯ ಬರತೈತಿ. ಅದಕ್ಕ ಮದಿವ್ಯಾಗತೇನ್ರಿ, ಅಲ್ಲೇನ?
[ಇಬ್ಬರೂ ನಗುವರು]
ಗೌಡ: ನಗಬ್ಯಾಡ, ನಿನ್ನ ಸಿಗದ ಹಾಕತೇನೀಗ.
ಗುರ್‍ಯಾ: ಏನರೆ ಹೇಳಬೇಕಾದರ ನಾವು ಮಾತಾಡೋದೆ ಇಲ್ಲರಿ. ಬರೀ ನಗತೇವ.
ನಗ್ಯಾಗ ಏನ ಬೇಕಾದ್ದ ತಿಳಸ್ತೇವ. ಈಗ ತೋರಸ್ಲ್ರಿ?
[ಪ್ರಶ್ನಾರ್ಥಕವಾಗಿ ನಗುವನು]
ಹೌಂದರಿ? ನಾ ಈಗ ಏನ ಕೇಳಿದೆ ಅಂದರ: ಹೇಂತೇ ಗೌಡರ ಬಂದೂಕು ಹೆಂಗ ಮಾತಾಡತೈತಿ?
[ನಿಂಗಿ ಕುಲುಕುಲು ನಗುವಳು].
ನಿಂಗಿ ಏನಂದಳಂದರ; ಪುಸ್‌ಪುಸ್ ಮಾಡತೈತಂತ!
ಗೌಡ: ಮಗನ ನಿಂಗ ಜೀವ ಬ್ಯಾಸರಾಗೇತೇನೊ?
ಗುರ್‍ಯಾ: ಆಗಿತ್ತರಿ. ನಿಂಗೀನ ಮದಿವ್ಯಾದರ ಬ್ಯಾಸರ ಹೋಗತೈತೇನಂತ ಹೊಲಕ್ಕ ಹೋದೆ. ಹೊಲಕ್ಕ ಅವಳೂ ಬಂದಿದ್ದಳು. ನಂದೂ ನಶೀಬ ನೋಡ್ರಿ. ನೀವು ಆರ ತಿಂಗಳಿಂದ ಬಂದೂಕ ಹಿಡಕೊಂಡ, ಚಿನ್ನ, ಬೆಳ್ಳಿ ಹಿಡಕೊಂಡ ಹುಂಜಧಾಂಗ ಕೂಗೇ ಕೂಗಿದಿರಿ. ಅಕೇನೂ ತಿರಗಿ ನೋಡಲಿಲ್ಲ. ನೋಡೋಣಂತ ನಾನೂ ಹುಂಜಧಾಂಗ ಕೂಗಿದೆ. ಕೋಳಿ ಸನೇಕ ಬಂತು. ಗಪ್ಪನ ಹಿಡಕೊಂಡ ಮೈಮ್ಯಾಲ ಕೈಯಾಡಿಸಿದರ ಹೇಳಿ ಬಿಟ್ಟಿತಲ್ಲ: ಮಾವಾ-ಅಂತ. ಅದಕ್ಕ ಮದಿವ್ಯಾಗತೇನ್ರಿ. ನಕ್ಕೋತ ಹೇಳ್ತೀನಂತ ಸುಳ್ಳಂದೀರಿ ಮತ್ತ. ಖರೇನ ನಿಶ್ಚಯ ಆಗೇತ್ರಿ. ಕೇಳ್ರಿ ಬಸಣ್ಯಾನ ಬೇಕಂದರ, ಅವನ ಹಿರಿಯಾ ಆಗಿದ್ದ.
ಗೌಡ: ನನಗ ಬಸಣ್ಯಾಂದೂ ಈ ರಂಡೀದೂ ಗೊತ್ತೈತೊ.
ಗುರ್‍ಯಾ: ಹೌಂದರಿ? ಬದಣ್ಯಾ ಈಗ ಆರ ತಿಂಗಳಿಂದ ನಿಮ್ಮ ಹೊಲದಾಗಮಲಗತಾನ ಗೊತ್ತೈತ್ರಿ?
ಗೌಡ: ನಾಯಿ ಮಗನ;
[ಒದೆಯ ಹೋಗುವನು ಗುರ್‍ಯಾ ಅದೇ ಕಾಲು ಹಿಡಿದೆಳೆದಾಗ ಗೌಡ ಬೀಳುವನು.]
ಗುರ್‍ಯಾ: ನಾಯಿ ಮಗಾ ನಾನೋ ನೀನೋ ಲುಚ್ಚಾ?
ನಿಂಗಿ: ಗಂಡಾ, ಗೌಡರಿಗಿ ಹಿಂಗೆಲ್ಲಾ ಮಾತಾಡಬಾರದು.
ಗುರ್‍ಯಾ: ಹೌಂದಲ್ಲ! ಗೌಡರ ಬಸಣ್ಯಾನ ಹಂತ್ಯಾಕೊಂದು ಗಿಣಿ ಇತ್ತ ನೋಡ್ರಿ; ಅದನ್ನ ಗೌಡ್ತಿಗೆ ಕೊಟ್ಟಾನ್ರಿ. ಗೌಡ್ತಿ ಅದನ್ನೇನೋ ನುಂಗಿದಳಂತೆ, ಈಗ ಮೂರು ತಿಂಗಳಿಂದ ಗೌಡ್ತಿ ಹೊಟ್ಟಿ ಹಿಂಗಾಗೇತಂತ! ಅಲ್ಲೇನ ಹೇಂತೆ?
ನಿಂಗಿ: ನೋಡಿದರ ತಿಳೀತೈತಲ್ಲ.
ಗೌಡ: ಮಡಸ ನನ ಮಗನ. ಈ ಸುದ್ದಿ ಖರೇ ಇದ್ದರ ಬರೋಬರಿ. ಇಲ್ಲದಿದ್ದರ ಕಣ್ಣೀರ ಸುರಿಸೇನಂದರೂ ಒಂದ ಕಣ್ಣಿಡಾಣಿಲ್ಲ ನಿನ್ನ ಮುಖದಾಗ! ಮರೀಬ್ಯಾಡ.
[ಹೋಗುವನು.]
ಗುರ್‍ಯಾ: ಏ ಇನ್ನ ಚಪ್ಪಾಳಿ ಹೊಡೆದ ನಗತೇವು; ತಡೀರಿ
[ಇಬ್ಬರೂ ಚಪ್ಪಾಳೆ ತಟ್ಟಿ ಕುಣಿಯುವರು.]
[ಸಂಗೀತ]

ಕಡಿದಾರೊ ಸ್ವಾಮೀನ

[ಹೊಲ, ಗುಡಿಸಲು, ಬಸಣ್ಯಾ ಕೂತಿದ್ದಾನೆ. ಗೌಡ್ತಿ ಓಡುತ್ತ ಬರುತ್ತಾಳೆ]

ಬಸಣ್ಯಾ: ಬಾ ಬಾರ ಗೆಣತಿ, ಎಷ್ಟ ಹೊತ್ತ ಹಾದಿ ನೋಡಿದೆ…
ಗೌಡ್ತಿ: ಬಸಣ್ಯಾ-
ಬಸಣ್ಣ: ಯಾಕ?
ಗೌಡ್ತಿ: ಗೌಡಗ ನಮ್ಮ ಸುದ್ದಿ ಎಲ್ಲಾ ಗೊತ್ತಾಗೇತಿ.
ಬಸಣ್ಣಾ: ಆದರ ಆಗಲೇಳು, ಅದಕ್ಯಾಕ ಚಿಂತೀ ಮಾಡತಿ? ಬಂದ ನನ್ನ ಮನ್ಯಾಗಿದ್ದೀಯಂತ.
ಗೌಡ್ತಿ: ಗೌಡ ನಿನ್ನ ಬಿಟ್ಟಾನು?
ಬಸಣ್ಣಾ: ಹುಚ್ಚೀ, ಹಾದ್ಯಾನ ನಾಯಿ ಬೊಗಳಿದರ, ಹಾರ್‍ಯಾಡೋ ನೊಣದ ರೆಕ್ಕಿ ಬಡದರ, ಸಾಯತೇನಂತ ತಿಳಾದ್ದೀಯೇನ? ಗೊತ್ತಾದರ ಆಗಲಿ, ನಿನ್ನ ಗಂಡನ ಪುಂಡತನ ನನಗ ಗೊತ್ತಿಲ್ಲದ್ದೇನು? ಒಂದ ಗುಟರ್ ಹಾಕಿದರ ಬಂದೂಕ ಚೆಲ್ಲಿ ಓಡಿಹೋಗತಾನ.
ಗೌಡ್ತಿ: ನಿನ್ನಿ ನನಗ ಕನಸೇನ ಬಿದ್ದಿತ್ತ ಗೊತ್ತೈತಿ.
ಬಸಣ್ಣ: ಏನ ಬಿದ್ದಿತ್ತು?
ಗೌಡ್ತಿ: ಕನಸಿನ್ಯಾಗೊಂದು ಅಡಿವ್ಯಾಗಿತ್ತು. ಅಡಿವ್ಯಾಗೊಂದ ಗವೀ ಇತ್ತು. ನಿನ್ನ ಬಿರಸ ಎದಿ ನನ್ನ ಮೆತ್ತಾನ ಎದ್ಯಾಗ ಮೂಡಿಧಾಂಗ, ಮಿರಗ ಮೋಡದೊಳಗ ಮಿಂಚ ಹರದಾಡಿಧಾಂಗ, ಬಿದರಿನೊಳಗ ಬಿಚ್ಚಾನ ಗಾಳಿ ತುಂಬಿಧಾಂಗ ಅನ್ನಿಸಿ, ಗವ್ಯಾಗಿಂದ ನೀ ‘ಏ ಹುಡಿಗಿ’ ಅಂತ ಕರಧಾಂಗಾಯ್ತು. ಅಷ್ಟರಾಗ ಒಂದ ಒಣ ಒಡಕ ಬಿದರ ಗೂಗೀ ಹಾಂಗ ಸಿಳ್ಳ ಹಾಕಿದ್ದ ಕೇಳಿಸ್ತು. ಎಚ್ಚರಾದಾಗ ಗೌಡ ಸಿಳ್ಳ ಹಾಕ್ಕೊಂಡ ಹೊರಗ ಆಡ್ಡಾಡತಿದ್ದಾ. ಬಸಣ್ಯಾ, ಇದ ನಮ್ಮ ಕಡೀ ಭೇಟಿ ಆಯ್ತಲ್ಲೋ!
ಬಸಣ್ಣಾ: ಛೇ, ಛೇ ನೀ ಭಾರಿ ಹೆದರಾಕಿ ಬಿಡು.
ಗೌಡ್ತಿ: ದಿನಾ ನಾ ಹೇಳಿದ್ದ ಎಷ್ಟ ಚಂದ ಕೇಳತಿದ್ದಿ. ಇಂದ್ಯಾಕ ನನ್ನ ನಂಬವೊಲ್ಲಿ? ದಿನಾ ರಾತ್ರಿ ಬೆಳಗಿ ಈ ಮಣ್ಣ ಸೇರಿ ಬೆಳಗಿದಿ. ಕಾಣ ಕಾಣ ಇಂದ ನನ್ನ Pಣ್ಣಿದಿರಿಗೇ ನೀ ಮುಣಗೋದನ್ನ ಹೆಂಗ ನೋಡಲಿ? ಅವರೆಲ್ಲಾ ಇಂದ ನಿನ್ನ ಕೊಲ್ಲಬೇಕಂತ ಮಸತ್ತ ಮಾಡ್ಯಾರ. ಐನೂರ ಮಂದಿ ಚಂಡಾಲರನ್ನ ಕೂಡಿಕೊಂಡ ಗೌಡ ಇಂದ ಕಡ್ಯಾಕ ಬರತಾನು. ಲಗು ತಪ್ಪಿಸಿಕೊಂಡು ಓಡೇಳು.
ಬಸಣ್ಣ: ಅಯ್ಯಯ್ಯಯ್ಯ ! ಐನೂರ ಮಂದಿ ಚಂಡಾಲರ. ಬರಲಿ ಬಿಡ, ಅವರಪ್ಪ ತಾಯಿ ಹಾಲ ಕುಡದವರಲ್ಲಾ, ನಾ ಏನೂ ನಾಯೀ ಹಾಲ ಕುಡದ ಬೆಳೇದಿಲ್ಲಾ. ನೀ ಹಾ ಅನ್ನೋದರಾಗ ಅವರ ಮೀಶೀಗೆಲ್ಲ ಮಣ್ಣ ಹಚ್ಚಿ ಕಳಸ್ತೇನ.
ಗೌಡ್ತಿ: ಅಯ್ಯೋ! ನೀ ಕೆಡಿಸಿದ ಗರತೇರ ಗಂಡರೆಲ್ಲಾ ಕೂಡಿ, ರಂಡೇರ ಮಿಂಡರೆಲ್ಲಾ ಕೂಡಿ ಬರತಾರಂತ. ಏಳೋ, ನನ್ನ ಮಾತ ಕೇಳೊ.
ಬಸಣ್ಣ: ಬರಲಿ, ಬರಲಿ. ಅವರ ಹೆಂಡರೆಲ್ಲಾ ನನ್ನ ಮೈ ರುಚಿ ನೋಡ್ಯಾರ. ಇವರು ನನ್ನ ಕೈ ರುಚೀನಾದರೂ ನೋಡಲಿ.
ಗೌಡ್ತಿ: ಬಸಣ್ಯಾ, ದೂರ ಕೊಳ್ಳೀ ಬೆಳಕ ಕಂಡ್ಹಂಗಾತು. ಲಗು ಏಳು.
ಬಸಣ್ಣ: ಅದ ಕೊಳ್ಳಿದೆವ್ವ, ಬಿಡ. ದಿನಾ ಈ ಹುಣಸೀ ಮರಕ್ಕ ಆರತೀ ಬೆಳಗಾಕ ಬರತಾವ.
ಗೌಡ್ತಿ: ಅಯ್ಯೋ, ನಾ ಹೆಂಗ ಹೇಳಿದರ ನನ್ನ ಮಾತ ನಂಬ್ತೀಯೋ? ಬಸಣ್ಯಾ ಇದು ವಾದ ಮಾಡೋ ಯಾಳೇ ಅಲ್ಲ.
ಬಸಣ್ಣ: ಅವರಿಲ್ಲಿ ಬಂದರೂ ನಾ ಇಲ್ಲೇ ಇರಾವ. ಧೈರ್ಯ ಆಗದಿದ್ದರ ನೀ ನಡಿ.
ಗೌಡ್ತಿ: ಅಯ್ಯೋ ಬಸಣ್ಯಾ! ಮಾಡಲ್ಹೆಂಗಾ
ಮಾಡಲ್ಹೆಂಗಾ ಗೌಡ ಕಡಿಯ ಬಂದಾ ||

ಪುಂಡ ಚಂಡಾಲರ ಕೈಯಾಗ ಕುಡಗೋಲ
ಕಡೆದ ಬಿಡತೇನಂತ ಮಾಡ್ಯಾರ ಹುಯ್ಯಾಲಾ
ಮಾಡಲ್ಹೆಂಗಾ | ಗೌಡ ಕಡಿಯ ಬಂದಾ ||

ಅಡವಿ ಅರಣ್ಯಾದಾಗ ಅತ್ತ ಕರಿಯುವರಿಲ್ಲಾ
ಬಾಳಗೊಡಸದ ಮಂದಿ ಬುದ್ದಿ ಹೇಳವರಿಲ್ಲಾ
ಮಾಡಲ್ಹೆಂಗಾ | ಗೌಡ ಕಡಿಯ ಬಂದಾ ||
[ದೂರದಿಂದ ಕಿರುಚುವಿಕೆ ಕೇಳಿಸುತ್ತದೆ]
ಬಸಣ್ಯಾ, ಕಣ್ಣ ತೆರೆದ ನೋಡೋ, ಕೊಳ್ಳಿದೆವ್ವಲ್ಲ, ಕೊಲೆಗಡುಕರೋ ಅವರು ಹೆಂಗ ಬೋರ್‍ಯಾಡತಾರ ನೋಡೋ! ಅವರು ಐನೂರು ಮಂದಿ, ನೀ ಒಬ್ಬ ಎದಕ್ಕ ಈಡಾದಿ?
ಬಸಣ್ಣ: ಹೌಂದಲ್ಲ. ನೋದು. ಈ ಕಡೆ ಕೊಳ್ಳಿ ಕಾಣಸೋದಿಲ್ಲ. ಓಡು-
ಗೌಡ್ತಿ: ನಿನ್ನ ಬಿಟ್ಟು ಹೆಂಗ ಹೋಗಲಿ?
ಬಸಣ್ಣಾ: ಮಾತಾಡೋ ಗಿಣಿ ಇದ್ದಲ್ಲಿ ನಾ ಮತ್ತ ಬಂದ ಬರತೇನ. ಓಡಿ ಹೋಗು.
ಗೌಡ್ತಿ: ಓಡಿದರ ಇಬ್ಬರೂ ಕೂಡಿ ಓಡೋಣು, ಹೋಡರ ನನ್ನ ಜೀವಾನೂ ನಿನ್ನ ಜೋಡಿ ಹೋಗಲಿ.
ಬಸಣ್ಣ: ನಮ್ಮಿಬ್ಬರ ಜೀವಕ್ಕಿಂತ ಗಿಣೀ ಜೀವ ದೊಡ್ದದಲ್ಲೇನ? ಓಡಿ ಗಿಣೀ ಜೀವಾ ಉಳಿಸೋದ ಬಿಟ್ಟಿದೀ. ಏನೇನೋ ವಾದ ಮಾಡ್ತಿ. ಗಿಣಿ ಇದ್ದಲ್ಲಿ ನಾ ಇದ್ದ ಇರತೇನ ಓಡು.
ಗೌಡಿ: ಓಡಂದಿ?
ಬಸಣ್ಣ: ಲಗು.
ಗೌಡ್ತಿ: ನೀ?
ಬಸಣ್ಣ: ಮತ್ತದ ಹಾಡ್ತಿ.
ಗೌಡ್ತಿ: ಓಡಲಿ?
ಬಸಣ್ಣ: ಲಗು ಓದು.
[ಗೌಡ್ತಿ ಓಡುವಳು. ಅವಳು ಹೋದ ದಿಕ್ಕನ್ನೇ ತುಸು ಹೊತ್ತು ನೋಡಿ]
ಹುಚ್ಚ ಹುಡುಗಿ ತನ್ನ ಹೊಟ್ಯಾಗಿನ ನನ್ನ ಮರತಾಳ!
[ಸುತ್ತ ನೋಡಿ ಗಿಡಕ್ಕೆ ತೂಗು ಹಾಕಿದ್ದ ಕುಡಗೋಲು ತೆಗೆದುಕೊಳ್ಳುವನು. ಧೈರ್ಯದಿಂದ ಮುನ್ನುಗ್ಗುವಷ್ಟರಲ್ಲಿ ಅವನು ನುಗ್ಗಿದಲ್ಲೆಲ್ಲ ಕೊಳ್ಳಿ, ಕುಡಗೋಲು ಹಿಡಿದವರು ಕಾಣಿಸಿಕೊಳ್ಳುತ್ತಾರೆ. ಬಸಣ್ಣ ಗಾಬರಿಯಾಗದಿದ್ದರೂ ಧೈರ್ಯ ತಂದುಕೊಂಡು ಮಾತಾನಾಡುತ್ತಾನೆ.]
ಏನ ಗೌಡರು, ಹೊಲದ ಕಡೆಗೆ ಬಂದಿರಿ?
[ಎಂದು ಹೇಳುತ್ತಿರುವತೆಯೇ ಒಬ್ಬ ಹಿಂದಿನಿಂದ ಒಂದು ಗೌಡನ ಸೂಚನೆಯಂತೆಯೆ ಏಟು ಹಾಕುತ್ತಾನೆ. ಬಸಣ್ಯಾ ಮೂರ್ಛೆ ಬೀಳುತ್ತಾನೆ. ಎಲ್ಲರೂ ಕಿರುಚುತ್ತ ಕೊರಡಿನಂತೆ ಅವನನ್ನು ಹೊತ್ತು ಹಾಡುತ್ತ ನರ್ತಿಸುತ್ತಾರೆ.]
ಎಲ್ಲರೂ: ಊರ ಪುಂಡ ಮಿಂಡನ ಮಗನ ಕಡಿ ಕಡಿ
ಹಿಂಗ ಗೌಡ್ತಿ ಕರದಾಳೋ ಬಸಣ್ಯಾ ನಡೀ ನಡೀ ||

ಮಾತಾಡೋ ಗಿಣಿ ತೋರಿ
ಹುಡಿಗೇರನೆಳೆದವನ
ಮಲಗಿದ್ದ ಹೊಲ ಎಲ್ಲ
ತಂದಂತ ಅಂದವನ ||

ಒಂದ ಏಟಿಗೆ ಇವನ
ನಾಕೆಂಟ ಮಾಡೋಣ

ಹದ್ದೀಗೆ ಹಾಕೋಣ
ಕೆಸರ ಮಣ್ಣ ಮಾಡೋಣ ||
[ ಹಾಡು ಮುಗಿದ ಮೇಲೆ ಹಾಗೇ ಕೆಳಕ್ಕೆ ಚೆಲ್ಲಿ ಬಂದೂಕಿನಿಂದ ಗೌಡ ಬಸಣ್ಯಾನನ್ನು ಇರಿಯುತ್ತಾನೆ. ಬಸಣ್ಯಾ ‘ಆ’ ಎಂದು ಕಿರುಚಿದಾಗ ರಂಗವೆಲ್ಲ ಸ್ತಬ್ಧವಾಗುತ್ತದೆ. ಬಸಣ್ಯಾ ಸತ್ತನೆಂದು ಖಾತ್ರಿಯಾದ ಮೇಲೆ ಗೌಡ ತನ್ನ ಚಂಡಾಲರೊಂದಿಗೆ ಮರೆಯಾಗುತ್ತಾನೆ. ಬಸಣ್ಯಾನಿಗೆ ಸಹಾಯ ಮಾಡಲೆಂದೇ ಓಡಿಬಂದ ಗುರ್‍ಯಾನಿಗೆ ತಾನು ಮಾಡಿದ್ದು ಗೊತ್ತಾಗಿ ಪಶ್ಚಾತ್ತಾಪವಾಗುತ್ತದೆ. ಶ್ರದ್ಧಾಂಜಲಿಯೆಂಬಂತೆ ತನ್ನ ತಲೆಮ್ಯಾಲಿನ ರುಂಬಾಲನ್ನು ಹೆಣಕ್ಕೆ ಹೊಚ್ಚಿ ಬಸಣ್ಯಾ ಹಿಡಿದ ಕುಡಗೋಲನ್ನು ನಿರ್ಧಾರದಿಂದ ಕೈಗ್ತೆಕೊಳ್ಳುತ್ತಾನೆ. ನಿಶ್ಶಬ್ದದೊಳಗಿಂದ ಸೂತ್ರಧಾರನ ಹಾಡು ಉಕ್ಕುತ್ತದೆ]
ಮೇಳ: ಎಣಿಸಿ ಐನೂರ್‍ಮಂದಿ ಅವರಿಗಿ ಸಾವಿರ ಕೈಗಳು
ಹಿಡದ ಕಡಿದಾರು ಎಳೀದೇವರನ್ನಾ ||
ಸಾವಿರ ಕೈಗಳು ಕೈಗೊಂದ ಕೊಡಲಿ ಕುಡಗೋಲು
ಹೊಡದ ಕೊಂದಾರೋ ಎಳೀದೇವರನ್ನಾ ||

ಕೊಂದಾರೆ ಒಗೆದಾರೊ ಸ್ವಾಮೀನ ಕಡದಾರೆ ಒಗೆದಾರೊ
ನೆತ್ತರ ಹರದಾವೊ ಹೊಳಿ ಹಳ್ಳ ತುಂಬಿ ||
ನೆತ್ತರ ಬಿದ್ದಲ್ಲಿ ಆಹಾ ಬೆಳಿಗಳು ಎದ್ದಾವೊ
ಮಣ್ಣು ಮಣ್ಣೆಲ್ಲಾ ಹಸಿಹಸಿರ ತುಂಬಿ||

ಒಳ್ಳೇಯ ಸರ್ಕಾರ ನಮ್ಮ ದೇಶವನಾಳಲಿ
ಮನಿಮನಿ ತುಂಬಲಿ ಆಡೋ ಮಕ್ಕಳಿಂದ
ಹೊಲ ಉಳೋ ರೈತ ಅವನೆ ನೆಲದೊಡೆಯನಾಗಲಿ
ದೇಶ ತುಂಬಲಿ ಧನಧಾನ್ಯದಿಂದ ||

ಸುವ್ವೀ ಬಾ ಸುಂದರಾ ಸ್ವಾಮೀ
ಸುವ್ವೀ ಬಾ ಚಂದಿರಾ
ಸುವ್ವೀ ಬಾರಯ್ಯ ಜೋಕುಮಾರಸ್ವಾಮಿ ||

ಮಂಗಲಂ
*****
ಮುಗಿಯಿತು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.