ತದ್ರೂಪ

ಫ಼್ರೆಂಚ್ ಮೂಲ: ಆಗಸ್ತ್ ವೀಯೇ ದ ಲೀಜ್ಲ್-ಆದಮ್
ಕನ್ನಡಕ್ಕೆ: ಎಸ್. ದಿವಾಕರ್

ನವೆಂಬರ್ ತಿಂಗಳಿನ ಒಂದು ಬೂದು ಬಣ್ಣದ ಬೆಳಗ್ಗೆ ನಾನು ಆಣೆಕಟ್ಟೆಯಗುಂಟ ಬಿರಬಿರನೆ ನಡೆದು ಹೋಗುತ್ತಿದ್ದೆ. ತಣ್ಣನೆಯ ಜಿನುಗು ಮಳೆಯಿಂದಾಗಿ ವಾತಾವರಣ ತೇವಗೊಂಡಿತ್ತು. ಕಪ್ಪು ಬಟ್ಟೆಗಳನ್ನು ತೊಟ್ಟ ದಾರಿಹೋಕರು ರೂಪ ಆಕಾರಗಳಿಲ್ಲದ ಕೊಡೆಗಳ ಕೆಳಗೆ ಬರುತ್ತಿದ್ದರು, ಹೋಗುತ್ತಿದ್ದರು.

ಹಳದಿ ಸಿಯೆನ್ ನದಿ ತನ್ನ ವ್ಯಾಪಾರಿ ಹಡಗುಗಳನ್ನು ಹೊತ್ತುಕೊಂಡು ಮುಂದೆ ಸಾಗುತ್ತಿತ್ತು. ಸೇತುವೆಗಳ ಮೇಲೆ ಬೀಸುತ್ತಿದ್ದ ಗಾಳಿ ಪಟ್ಟು ಬಿಡದೆ ಜನರ ಹ್ಯಾಟುಗಳನ್ನು ಹಾರಿಸುತ್ತಿತ್ತು. ಜನರು ಹ್ಯಾಟುಗಳನ್ನು ತಲೆಯ ಮೇಲೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರು. ಅವರ ವಿಲವಿಲ ಒದ್ದಾಟ ಕಲಾವಿದನ ಕಣ್ಣಿಗೆ ನೋವುಂಟುಮಾಡುವ ದೃಶ್ಯ.

ನನ್ನ ವಿಚಾರಗಳು ಮಬ್ಬು ಮಸುಕಾಗಿದ್ದವು. ಹಿಂದಿನ ದಿನ ಗೊತ್ತುಪಡಿಸಿಕೊಂಡಿದ್ದ ಒಂದು ವ್ಯವಹಾರ ಸಂಬಂಧದ ಕೆಲಸ ನನ್ನ ತಲೆ ತಿನ್ನುತ್ತಿತ್ತು. ಸಮಯದ ತುರ್ತು ಬೇರೆ. ಒಂದು ಮನೆಯ ಮುಖ ಮಂಟಪದ ಕೆಳಗೆ ನಿಂತುಕೊಳ್ಳುವುದೆಂದು ತೀರ್ಮಾನಿಸಿದೆ. ಕುದುರೆಗಾಡಿಗೆ ಸನ್ನೆಮಾಡಲು ಅನುಕೂಲವಾಗಿದ್ದ ಜಾಗ ಅದು.

ಅದೇ ಹೊತ್ತಿಗೆ ನನ್ನ ಬದಿಯಲ್ಲೇ ಮಜಬೂತಾದ ಒಂದು ಚಚ್ಚೌಕನೆಯ ಕಟ್ಟಡದ ಪ್ರವೇಶದ್ವಾರ ಕಾಣಿಸಿತು. ಕಲ್ಲಿನಲ್ಲಿ ಅರಳಿರುವಂತೆ ಕಾಣಿಸುತ್ತಿದ್ದ ಆ ಕಟ್ಟಡ ಕವಿದ ಮಂಜಿನಲ್ಲಿ ಮುಳುಗೇಳುವಂತಿತ್ತು. ತೀರ ಒರಟಾದ, ಗಡುಸಾದ ವಾಸ್ತುಶಿಲ್ಪ. ಅದು ಮಂಕುಗೊಳಿಸುವ ಹಾಗು ಭಯ ಹುಟ್ಟಿಸುವ ಹಬೆಯಲ್ಲಿ ಮುಳುಗಿ ಹೋಗಿದ್ದಂತೆ ಕಾಣುತ್ತಿದ್ದರೂ ಒಂದು ರೀತಿಯ ಆದರದ ಆತಿಥ್ಯ ಆಲ್ಲಿರುವಂತೆ ತೋರುತ್ತಿದ್ದುದರಿಂದ ನನಗೊಂದು ಧೈರ್ಯ.

“ಇಲ್ಲಿ ವಾಸ ಮಾಡುತ್ತಿರುವವರು ತುಂಬ ಜಡವಾದ ಜನ ಇರಬೇಕು. ಹೊಸ್ತಿಲು ನೋಡಿದರೆ ಸ್ವಾಗತಿಸುವ ಹಾಗೆಯೇ ಇದೆ. ಬಾಗಿಲು ತೆರೆದಿದೆಯಲ್ಲವೆ?” ಎಂದುಕೊಂಡೆ.

ಸರಿ, ಸಾಧ್ಯವಾದಷ್ಟೂ ವಿನಯಶೀಲನಾಗಿ, ಸಂತೃಪ್ತಿಯ ಮುಖಮಾಡಿಕೊಂಡು, ಕೈಯಲ್ಲಿ ಹ್ಯಾಟು ಹಿಡಿದುಕೊಂಡ ಆ ಮನೆಯೊಡತಿಯನ್ನು ನೋಡಿದೊಡನೆ ಸವಿನಯವಾಗಿ ಏನೇನು ಹೇಳಬೇಕೆಂದು ಕೂಡಾ ಯೋಚಿಸಿಕೊಂಡು ನಗುನಗುತ್ತ ಒಳಗೆ ಹೋದದ್ದೇ ನಾನೊಂದು ಗಾಜಿನ ಚಾವಣಿಯಿದ್ದ ಕೊಠಡಿಯ ಮುಂದೆ ನಿಂತುಬಿಟ್ಟಿದ್ದೆ. ಗಾಜಿನ ಚಾವಣಿಯಿಂದ ಕೆಳಗಿಳಿಯುತ್ತಿದ್ದ ಬೆಳಕು ತುಸು ಭಯಾನಕವಾಗಿತ್ತು.

ಆ ಕೊಠಡಿಯೊಳಗಿದ್ದ ಕಂಬಗಳ ಮೇಲೆ ಬಟ್ಟೆ ಬರೆಗಳನ್ನೂ ಮಫ್ಲರುಗಳನ್ನೂ ಮತ್ತು ಹ್ಯಾಟುಗಳನ್ನೂ ನೇತುಹಾಕಲಾಗಿತ್ತು. ಎಲ್ಲ ಬದಿಗಳಲ್ಲೂ ಮಾರ್ಬಲ್ ಟೇಬಲುಗಳಿದ್ದವು.

ಅಲ್ಲಿ ಕೆಲವರು ಕಾಲುಗಳನ್ನು ಚಾಚಿಕೊಂಡು, ತಲೆ ಮೇಲೆತ್ತಿ, ಕಣ್ಣುಬಿಟ್ಟುಕೊಂಡು ಅಂಥ ವಿಶೇಷ ಭಾವವನ್ನೇನೂ ಹೊಮ್ಮಿಸದೆ ಧ್ಯಾನಿಸುತ್ತಿರುವ ಹಾಗೆ ಕೂತಿದ್ದರು.

ಅವರದು ಯಾವುದೇ ಚಿಂತೆಯಿಲ್ಲದ ದೃಷ್ಟಿ; ಅವರ ಮುಖಕ್ಕೂ ವಾತಾವರಣಕ್ಕಿದ್ದ ಹಾಗೆ ಬೂದು ಬಣ್ಣ.

ಅವರಲ್ಲಿ ಪ್ರತಿಯೊಬ್ಬನ ಪಕ್ಕದಲ್ಲೂ ತೆರೆದ ಫೈಲುಗಳು, ಹರಡಿಕೊಂಡ ಹಾಳೆಗಳು.

ಸ್ವಲ್ಪ ಸಮಯದ ನಂತರ ನಾನು ಯಾರ ಸ್ವಾಗತವನ್ನು ನಿರೀಕ್ಷಿಸುತ್ತಿದ್ದೆನೋ ಆ ಮನೆಯೊಡತಿ ಬೇರೆ ಯಾರೂ ಅಲ್ಲ, ಸ್ವತಃ ಮೃತ್ಯುವೇ ಎಂದು ನನಗೆ ಹೊಳೆದುಬಿಟ್ಟಿತು.

ನನ್ನ ಆತಿಥೇಯರ ಕಡೆ ನೋಡಿದೆ.
ಅವರಲ್ಲಿ ಬಹುಮಂದಿ ತಮ್ಮ ಕಠೋರ ಜೀವನದ ಚಿಂತೆ, ವ್ಯಾಕುಲಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತಮ್ಮತಮ್ಮ ದೇಹಗಳನ್ನೇ ಕೊಂದುಕೊಂಡು, ಅದರಿಂದಲಾದರೂ ತುಸು ನೆಮ್ಮದಿ ದೊರೆಯಬಹುದೆಂದು ನಿರೀಕ್ಷಿಸುತ್ತಿದ್ದುದ್ದು ಸ್ಪಷ್ಟವಾಗಿತ್ತು.

ಅವರ ಅಳಿದುಳಿದ ಪ್ರಾಣಗಳಿಗೆ ಪ್ರಾಣಿಗಳಿಗೆ ಅತ್ಯಗತ್ಯವಾಗಿದ್ದ ಆಹಾರ ಪಾನೀಯಗಳನ್ನು ಒದಗಿಸುವುದಕ್ಕೆಂದೇ ಗೋಡೆಗಳಿಗೆ ಹಿತ್ತಾಳೆಯ ನಲ್ಲಿಗಳನ್ನು ಹೊಂದಿಸಲಾಗಿತ್ತು. ಆ ನಲ್ಲಿಗಳು ಮಾಡುತ್ತಿದ್ದ ಸದ್ದನ್ನು ಆಲಿಸುತ್ತಿದ್ದಂತೆ ಕುದುರೆಗಾಡಿಯೊಂದರ ಗುಡು ಗುಡು ಸದ್ದೂ ಕೇಳತೊಡಗಿತು. ಅದು ಹೊರಗಡೆಯೇ ನಿಲ್ಲುವಂತಿತ್ತು. ನನ್ನ ವ್ಯಾಪಾರಿಗಳು ನನಗಾಗಿ ಕಾಯುತ್ತಿರಬೇಕೆನ್ನಿಸಿದ್ದೇ ಅದರ ಲಾಭಪಡೆಯಲೆಂದು ಹಿಂತಿರುಗಿದೆ.

ಕುದುರೆಗಾಡಿ ಅದಾಗ ಆ ಕಟ್ಟಡ ಬಾಗಿಲ ಬಳಿಯೇ ಸಾವನ್ನು ಕಣ್ಣಾರೆ ಕಂಡು ಮಾತ್ರ ನಂಬಲಿದ್ದ ಕೆಲವರು ವಿದ್ಯಾರ್ಥಿಗಳನ್ನು ಕೆಳಗಿಳಿಸಿತ್ತು.

ನಾನು ಖಾಲಿಗಾಡಿಗಳನ್ನು ನೋಡಿದ್ದೇ ಗಾಡಿಯವನಿಗೆ ಹೇಳಿದೆ : “ದ ಲೊಪೇರಾಗೇ!”
ಆಮೇಲೆ ಸಾಲುಮರಗಳ ರಸ್ತೆಯಲ್ಲಿ ಸಾಗುತ್ತಿರುವಾಗ ದಿಗಂತ ಎಲ್ಲಿದೆಯೆಂದೇ ಕಾಣಿಸುತ್ತಿರಲಿಲ್ಲ. ಹವಾಗುಣವೂ ಎಂದಿಗಿಂತ ಹೆಚ್ಚು ಕಳೆಗುಂದಿದಂತೆ ಅನ್ನಿಸಿತು. ಎಲೆಗಳಿಲ್ಲದೆ ಬೋಳು ಬೋಳಾಗಿದ್ದ ಮರಗಳು ನಿದ್ದೆ ಹೋದಂತಿದ್ದ ಪೋಲೀಸರಿಗೆ ದಾರಿಹೋಕರನ್ನು ತೋರಿಸಿಕೊಡುತ್ತಿರುವಂತೆ ತಮ್ಮ ತಮ್ಮ ಕಪ್ಪು ರೆಂಬೆಗಳ ತುದಿಗಳನ್ನು ಚಾಚಿಕೊಂಡಿದ್ದವು.

ಜೋರಾಗಿ ಓಡುತ್ತಿತ್ತು ಕುದುರೆಗಾಡಿ.

ಗಾಡಿಯ ಕಿಟಕಿಯಿಂದ ನೋಡಿದರೆ ರಸ್ತೆಯಲ್ಲಿ ನಡೆಯುತ್ತಿದ್ದವರು ಹರಿಯುತ್ತಿರುವ ನೀರಿನ ಹಾಗೆ ಕಾಣಿಸುತ್ತಿದ್ದರು.

ನಾನು ತಲುಪಬೇಕಾಗಿದ್ದ ಸ್ಥಳವನ್ನು ಮುಟ್ಟಿದ್ದೇ ಕಾಲು ಹಾದಿಯ ಮೇಲೆ ಧುಮುಕಿ ಆರ್ಕೇಡಿನೊಳಕ್ಕೆ ನುಗ್ಗಿಹೋದೆ. ಅಲ್ಲಿ ಏನೇನೋ ಕೆಲಸಕಾರ್ಯಗಳಲ್ಲಿ ಮುಳುಗಿಹೋಗಿದ್ದ ಜನರು ತುಂಬಿ ಹೋಗಿದ್ದರು.

ಕಡೆಗೆ ನನ್ನೆದುರಿಗೇ ಕೆಫೆಯೊಂದರ ಬಾಗಿಲು ಕಾಣಿಸಿತು. ಅದು ಆಮೇಲೆ ಪ್ರಸಿದ್ಧವಾದ ಅಗ್ನಿ ಅನಾಹುತವೊಂದರಲ್ಲಿ ಉರಿದುಹೋಯಿತು.

(ಯಾಕೆಂದರೆ ಬದುಕೆನ್ನುವುದು ಒಂದು ಕನಸೇ ತಾನೆ!) ಕೆಫೆ ಒಂದು ರೀತಿಯ ಷೆಡ್ಡಿನ ಹಿಂಭಾಗದಲ್ಲಿ ಚಚ್ಚೌಕನೆಯ ಕಮಾನಿನ ಕೆಳಗೆ ಮುದುರಿಕೊಂಡು ಕೂತಿತ್ತು.
“ನನ್ನ ವ್ಯಾಪಾರಸ್ಥರು ಕೈಯಲ್ಲಿ ಗ್ಲಾಸುಗಳನ್ನು ಹಿಡಿದುಕೊಂಡು ವಿಧಿಯನ್ನು ನಿರ್ಲಕ್ಷಿಸುವ ಹಾಗೆ ಕಣ್ಣುಗಳನ್ನು ಮಿಂಚಿಸುತ್ತಾ ನನಗಾಗಿ ಇಲ್ಲಿ ಕಾದಿರಬಹುದು” ಎಂದುಕೊಂಡೆ.
ಅದರಂತೆ ನಾನು ಬಾಗಿಲ ಹಿಡಿಯನ್ನು ತಿರುಗಿಸಿದ್ದೇ ತಡ ಕಿಟಕಿಗಳ ಮೂಲಕ ಭಯಾನಕ ಬೆಳಕು ಬರುತ್ತಿದ್ದ ಒಂದು ಕೊಠಡಿಯಲ್ಲಿ ನಿಂತುಬಿಟ್ಟಿದ್ದೆ.
ಆ ಕೊಠಡಿಯಲ್ಲಿದ್ದ ಕಂಬಗಳ ಮೇಲೆ ಬಟ್ಟೆ ಬರೆಗಳನ್ನೂ ಮಫ್ಲರುಗಳನ್ನೂ ಹ್ಯಾಟುಗಳನ್ನೂ ನೇತುಹಾಕಲಾಗಿತ್ತು. ಎಲ್ಲ ಬದಿಗಳಲ್ಲೂ ಮಾರ್ಬಲುಗಳಿದ್ದವು.

ಅಲ್ಲಿ ಕೆಲವರು ಕಾಲುಗಳನ್ನು ಚಾಚಿಕೊಂಡು, ತಲೆ ಮೇಲೆತ್ತಿ, ಕಣ್ಣುಬಿಟ್ಟುಕೊಂಡು ಅಂಥ ವಿಶೇಷ ಭಾವವನ್ನೇನೂ ಹೊಮ್ಮಿಸದೆ ಧ್ಯಾನಿಸುತ್ತಿರುವ ಹಾಗೆ ಕೂತಿದ್ದರು.

ಅವರ ಮುಖಕ್ಕೂ ವಾತಾವರಣಕ್ಕಿದ್ದ ಹಾಗೆಯೇ ಬೂದುಬಣ್ಣ ; ಅವರದು ಯಾವುದೇ ಚಿಂತೆಯಿಲ್ಲದ ದೃಷ್ಟಿ.
ಅವರಲ್ಲಿ ಪ್ರತಿಯೊಬ್ಬನ ಪಕ್ಕದಲ್ಲೂ ತೆರೆದ ಫೈಲುಗಳು, ಹರಡಿಕೊಂಡ ಹಾಳೆಗಳು.
ನಾನು ಅವರ ಕಡೆ ನೋಡಿದೆ.
ಅವರಲ್ಲಿ ಬಹುಮಂದಿ ಸಹಿಸಲಸಾಧ್ಯವಾದ ಆತ್ಮಸಾಕ್ಷಿಯ ಹುಚ್ಚಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತಮ್ಮ ತಮ್ಮ “ಆತ್ಮ”ಗಳನ್ನೇ ಕೊಂದುಕೊಂಡು, ಅದರಿಂದಲಾದರೂ ತುಸು ನೆಮ್ಮದಿ ದೊರೆಯಬಹುದೆಂದು ನಿರೀಕ್ಷಿಸುತ್ತಿದ್ದುದ್ದು ಸ್ಪಷ್ಟವಾಗಿತ್ತು.
ಅವರ ಅಳಿದುಳಿದ ಪ್ರಾಣಗಳಿಗೆ ಅತ್ಯಗತ್ಯವಾಗಿದ್ದ ಆಹಾರ ಪಾನೀಯಗಳನ್ನು ಒದಗಿಸುವುದಕ್ಕೆಂದೇ ಗೋಡೆಗಳಿಗೆ ಹಿತ್ತಾಳೆಯ ನಲ್ಲಿಗಳನ್ನು ಹೊಂದಿಸಲಾಗಿತ್ತು. ಆ ನಲ್ಲಿಗಳು ಮಾಡುತ್ತಿದ್ದ ಸದ್ದನ್ನು ಆಲಿಸುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ಕುದುರೆಗಾಡಿಯ ಗುಡುಗುಡು ಸದ್ದಿನ ನೆನಪು ಮರುಕಳಿಸಿತು.
“ಗಾಡಿಯವನು ಎಷ್ಟೋ ಹೊತ್ತಿನವರೆಗೆ ಸುತ್ತಿ ಸುಳಿದು ಹೊರಟ ಜಾಗಕ್ಕೇ ನನ್ನನ್ನು ಮತ್ತೆ ಕರೆದುತಂದಿರಬೇಕಾದರೆ ಅವನಿಗೆ ಸಮಯ ಕಳೆದಂತೆ ಒಂದು ಬಗೆಯ ಮಯಕವಾಗಿರಬೇಕು. ಏನಾದರೂ ಆಗಿರಲಿ, ಎರಡನೆಯ ಬಾರಿ ನೋಡಿದ್ದು ಮಾತ್ರ ಮೊದಲು ನೋಡಿದ್ದುದಕ್ಕಿಂತ ಹೆಚ್ಚು ಅಮಂಗಲಕರ”ಎನ್ನಿಸಿತು.

ಆದ್ದರಿಂದ ನಾನು ಮೌನವಾಗಿಯೇ ಗಾಜಿನ ಬಾಗಿಲನ್ನು ಮುಚ್ಚಿ, ಯಾವುದೇ ವಹಿವಾಟು ನಡೆಸಕೂಡದೆಂದು ಕಟ್ಟುನಿಟ್ಟಾಗಿ ತೀರ್ಮಾನಿಸಿದವನೇ ಮನೆಗೆ ಹೋಗಿಬಿಟ್ಟೆ.
*****

ಕೀಲಿಕರಣ: ಸೀತಾಶೇಖರ್. ಸಹಾಯ ರಮೇಶ್ ಎಚ್ ಎಸ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.