ಕನಸಿನಲ್ಲಿ

ಕರ ಕರ ಕರ ಕೊರೆವ ಚಳಿ
ಕೋಳೀಮರಿ ಕುಯ್ದ ಹಾಗೆ;
ಮರ ಮರ ಮರ ಮರವಟ್ಟಿತು
ಥರ ಥರ ಥರ ಧರೆ ನಡುಗಿತು
ಇರುಳು ಕೆರಳಿ ಹೊಡಮರಳಿತು!
ತಾರೆಯೊಂದು ತಿರೆಗುರುಳಿತು.
ಏನಾಯಿತು! ಏಕಾಯಿತು?
ಎನುತಿರ ಓ ರೈಲು ಬಂತು!

ಗಡ ಗಡ ಗಡ ಮೈ ನಡುಗಿಸಿ
ಕಂದರದಲಿ ಕಣ್ಣು ಮುಚ್ಚಿ
ಕಂಬಿ ತಪ್ಪಿ ಉರುಳಿತು,
ಮೂರು ಸಾರೆ ಹೂರಳಿತು!

ಅಬ್ಬಾ, ಅಯ್ಯಯ್ಯೊ ಎಂದು
ನಿಂತ ನಾಲ್ಕು ಜನರು ನಾವು
ಗಾಡಿಯನ್ನು ಮೇಲಕೆತ್ತಿ
ಹಳಿಯ ಮೇಲೆ ಬಿಟ್ಟೆವು.

ಜನರಿಲ್ಲದ ಮಾಲುಗಾಡಿ
ಕೈಬಿಟ್ಟೊಡೆ ಕೈಕೊಟ್ಟಿತು
ಎಲ್ಲಿ ಎಲ್ಲಿ, ನಿಲ್ಲು ನಿಲ್ಲು
ಎನಲು ನಮ್ಮ ಗುಲ್ಲು,

ಹಲ್ಲು ಮಸೆದು ಹೊಟ್ಟೆ ಹೊಸೆದು
ಓಡಿತಯ್ಯ ರೈಲು!
*****