ಅಪಘಾತ

ಅಂದು ಭಾನುವಾರ, ಡಿಸೆಂಬರ್ ೨೬. ರಾಜು ಮತ್ತು ಕುಸುಮ ಮದುವೆಯಾಗಿ ಅಂದಿಗೆ ೫ ವರ್ಷಗಳಾಗಿತ್ತು. ಆಕಸ್ಮಿಕವಾಗಿ ಅವರ ಬಾಲ್ಯ ಸ್ನೇಹಿತ ಕಿಶೋರ್ ಕೂಡ ಯಾವುದೋ ಬಿಜ಼ಿನೆಸ್ ಟ್ರಿಪ್ ಮೇಲೆ ಬಂದವನು ಆಗ ಅವರ ಜೊತೆಯಲ್ಲೇ ಇದ್ದ. ಸ್ವಭಾವತಃ ಉತ್ಸಾಹಶಾಲಿಯಾದ ಕುಸುಮ, ತಮ್ಮ ವೈವಾಹಿಕ ವಾರ್ಷಿಕೋತ್ಸವವನ್ನು ಸರಳವಾಗಿ ಆದರೆ ಸಂಭ್ರಮದಿಂದ ಆಚರಿಸೋಣವೆಂದುಕೊಂಡಳು. ಪಾಕಶಾಸ್ತ್ರ ಪ್ರವೀಣೆಯಾದ ಅವಳು ಚುರುಕಾಗಿ ಹಬ್ಬದ ಅಡುಗೆಯನ್ನು ಮಾಡಿ ಮುಗಿಸಿದಳು. ಓರಣವಾಗಿ ಜೋಡಿಸಿ, ಅಡುಗೆ ಮನೆಯ ಹದರವನ್ನೆಲ್ಲಾ ಕ್ಲೀನ್ ಮಾಡಿ, ಕಿಟಕಿ ಬಾಗಿಲುಗಳನ್ನು ತೆಗೆದು, ಮನೆಯೊಳಗೆ ತಾಜಾ ಗಾಳಿ ಬರಲು ಅನುವು ಮಾಡಿದಳು. ಇನ್ನೇನು ಊಟಕ್ಕೆ ಕೂರಬೇಕು, ಅಷ್ಟರಲ್ಲಿ ರಾಜು ಬಟ್ಟೆ ಬದಲಾಯಿಸಿ ಕಾರಿನ ಕೀ ತೆಗೆದುಕೊಳ್ಳುತ್ತಿರುವಾಗ, ಕುಸುಮ ಕೇಳಿದಳು: “ಇದೇನ್ರೀ, ಈಗ ಊಟ ಮಾಡೋ ಹೊತ್ತಿನಲ್ಲಿ ಹೊರಟಿದ್ದೀರ? ನೀವು ಯಾವಾಗ್ಲೂ ಹೀಗೇನೆ! ನನ್ನ ಅಡಿಗೆ ಮುಗಿಯೋ ಹೊತ್ತಿಗೆ ನೀವು ಎಲ್ಲೋ ಇರ್ತೀರ! ನಾನು ಕಷ್ಟ ಪಟ್ಟು ಶ್ರದ್ಧೆಯಿಂದ ಮಾದಿದ ಅಡಿಗೆಯೆಲ್ಲಾ, ನೀವು ವಾಪಸ್ ಬರೋ ಹೊತ್ತಿಗೆ ತಣ್ಣಗಾಗಿರುತ್ತೆ.” ಅದಕ್ಕೆ ರಾಜು, “ಕುಸುಮ, ಬೇಜಾರು ಮಾಡಿಕೋಬೇಡ ಕಣೆ. ನೀನು ತಟ್ಟೆ ಇಡೋ ಅಷ್ಟರಲ್ಲಿ, ನಾನು ಹೋಗಿ ಲಕ್ಷ್ಮಿ ಬಜ಼ಾರ್ ನಿಂದ ’ಬಾ ನಲ್ಲೆ, ಮಧುಚಂದ್ರಕೆ’ ವೀಡಿಯೋ ತರ್ತೀನಿ. ಮರ್ಡರ್ ಮಿಸ್ಟರಿ ಮೂವಿ ಚೆನ್ನಾಗಿದೇಂತ ಕಿಶೋರ್ ಹೇಳ್ತಿದ್ದ. ಊಟ ಆದ ಮೇಲೆ, ಅರಾಮವಾಗಿ ಕೂತ್ಕೊಂಡು ನೋಡಬಹುದು”. ಎಂದು ಹೇಳಿ ಹೊರಟ.

ಅಂಗಡಿ ಮನೆಯಿಂದ ಕೇವಲ ೫ ಮೈಲಿ; ೨೮೦ ಫ಼್ರೀವೇ ಮೇಲೆ ಹೋದರಂತೂ ಎರಡೇ ಎಕ್ಸಿಟ್. ಅಲ್ಲಿ ತಲುಪಿ, ಕನ್ನಡ ಕ್ಯಾಸೆಟ್ ಇಟ್ಟಿರುವ ಕಡೆ ನೋಡಿದಾಗ, ಪುಣ್ಯಕ್ಕೆ ಅದು ಅಲ್ಲೇ ಇತ್ತು! ಅದನ್ನು ರೆಂಟ್ ಮಾಡಿಕೊಂಡು ಹೊರಬಂದಾಗ ವೇಳೆ ಸಂಜೆ ಆರೇ ಗಂಟೆಯಾಗಿದ್ದರೂ, ಸಾಕಷ್ಟು ಕತ್ತಲಾಗಿತ್ತು. ಇನ್ನೈದು ನಿಮಿಷಗಳಲ್ಲಿ ಸುಗ್ರಾಸ ಭೋಜನ ಮಾಡಬಹುದೆಂದುಕೊಂಡು, ಖುಷಿಯಾಗಿ ಸಿಳ್ಳೆ ಹಾಕಿಕೊಂಡು, ಫ಼್ರೀ ವೇ ಪ್ರವೇಶಿಸಿ, ೬೦ ಮೈಲಿ ವೇಗದಲ್ಲಿ ಹೋಗುತ್ತಿದ್ದ. ಕಾರ್ ಸ್ಟೀರಿಯೊದಿಂದ ಉಸ್ತಾದ್ ಅಮ್‌ಜದ್ ಅಲಿ ಖಾನರ ಸಾರೋದ್ ವಾದನ ಸುಮಧುರವಾಗಿ ಕೇಳಿ ಬರುತ್ತಿತ್ತು. ಫ಼್ರೀ ವೇ ಪಕ್ಕದಲ್ಲಿ ಲೈಟುಗಳಿಂದ ಝಗಝಗಿಸುತ್ತಿದ್ದ ಕಟ್ಟಡ ರಾಜುವನ್ನು ಆಕರ್ಷಿಸಿತು. ಒಂದೇ ಒಂದು ಕ್ಷಣ, ಕತ್ತನ್ನು ತಿರುಗಿಸಿ ನೋಡಿದಾಗ ’ಓಕ್ ವುಡ್ ಅಪಾರ್ಟಮೆಂಟ್ಸ್’ ಗೋಚರಿಸಿತು. ಈ ಜನ ಕ್ರಿಸ್ಮಸ್ ಸಮಯದಲ್ಲಿ ಎಷ್ಟೊಂದು ಖರ್ಚು ಮಾಡುತ್ತಾರಲ್ಲ ಎಂದುಕೊಂಡು, ಮತ್ತೆ ಮುಂದೆ ನೋಡಲಾರಂಭಿಸಿದಾಗ ಅವನಿಗೆ ಕಾಣಿಸಿತು: ಅತಿ ಪ್ರಖರವಾದ ಪ್ರಕಾಶ, ಮಿಂಚಿನಂತಹ ಏನೋ ಒಂದು ದೊಡ್ಡದು ಅವನ ಎದುರಿಗೇ ಬಂದು ಬಿಟ್ಟಿತು! ಸೂರ್ಯನಂತಹ ಝಳ, ಸಿಡಿಲಿನಂತಹ ಅಘಾತ, ಕಬ್ಬಿಣದ ಪೆಡಂಭೂತ ರಾಜುವನ್ನು ಅಪ್ಪಳಿಸಿತು. ಒಂದು ಕ್ಷಣದಲ್ಲಿ ಪ್ರಪಂಚವೇ ಅವಸಾನಗೊಂಡಂತಾಯಿತು. ಆದುದಾದರೂ ಇಷ್ಟೆ: ಎದುರು ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು, ನಿಯಂತ್ರಣ ತಪ್ಪಿ, ಪಕ್ಕಕ್ಕೆ ಹೊರಳಿ ನೇರವಾಗಿ ಬಂದು, ರಾಜುವಿನ ಕಾರಿಗೆ ಡಿಕ್ಕಿ ಹೊಡೆದುದರ ಪರಿಣಾಮವಾಗಿ, ಆ ಎರಡು ಕಾರುಗಳೂ ಒಂದನ್ನೊಂದು ಅಪ್ಪಿಕೊಂಡು, ವಿಷ್ಣು ಚಕ್ರದಂತೆ ವೇಗವಾಗಿ ಸುತ್ತುತ್ತಿದ್ದಾಗ, ರಾಜುವಿನ ಹಿಂದುಗಡೆಯಿಂದ ಬರುತ್ತಿದ್ದ ಕಾರುಗಳು ತುರ್ತಾಗಿ ಬ್ರೇಕ್ ಹಾಕಿ ಅಪಘಾತಕ್ಕೀಡಾದ ಕಾರುಗಳನ್ನು ಮುಟ್ಟದಂತೆ ಎಲ್ಲೆಲ್ಲೋ ಸರಿದಾಗ ಕೇಳಿ ಬಂದ ಸಿಡಿತ; ಆ ಗರ್ಜನೆಯ ನಂತರ ಒಂದು ಕ್ಷಣ ಸ್ಮಶಾನ ಮೌನ.

ಆ ಆಸುಪಾಸಿನಲ್ಲಿ ನೋವಿನಿಂದ, ಹೆದರಿಕೆಯಿಂದ, ಅಸಹಾಯಕತೆಯಿಂದ ನರಳುತ್ತಿದ್ದ ಚೀತ್ಕಾರಗಳು, ಕಾರಿನ ಹಾರ್ನ್ ಶಬ್ದ, ದೂರದಲ್ಲೆಲ್ಲೋ ಕೇಳಬರುತ್ತಿದ್ದ ಸೈರನ್ – ಇವೆಲ್ಲಾ ಇದ್ದವು. ಮೊದಲು ನಿಧಾನವಾಗಿ, ನಂತರ ಬೇಗಬೇಗನೇ ಜನರು ತಮ್ಮ ತಮ್ಮ ಕಾರುಗಳಿಂದ ಇಳಿದು, ಅಪಘಾತವನ್ನು ನೋಡಲು ಹೋದರು. ಅಲ್ಲೇ ಒಂದಕ್ಕೊಂದು ಅಂಟಿಕೊಂಡು, ಅಪ್ಪಚ್ಚಿಯಾದ ಕಾರುಗಳನ್ನು ವೀಕ್ಷಿಸಿದರು. ಆ ಕಾರುಗಳಲ್ಲಿ ಇದ್ದವರಾರೂ ಬದುಕಿರಲು ಸಾದ್ಯವೇ ಇಲ್ಲ ಎಂದು ಜನರು ಅಂದುಕೊಳ್ಳುವಷ್ಟರಲ್ಲೇ, ಸೈರನ್ ಶಬ್ದ ತೀರಾ ಹತ್ತಿರ ಬಂದಂತಾಯಿತು.

ಆಷ್ಟರಲ್ಲಿ ಇಬ್ಬರು ಗಂಡಸರು ಅಪಘಾತಕ್ಕೀಡಾದ ಕಾರುಗಳ ಬಳಿ ಎಲ್ಲರಿಗಿಂತ ಮುಂಚೆ ಬಂದರು. ಎದುರಿನಿಂದ ನೇರವಾಗಿ ಬಂದ ಲಿಂಕನ್ ಕಾರು ರಾಜುವಿನ ಟೊಯೋಟಾ ಕಾರಿಗೆ ಡಿಕ್ಕಿ ಹೊಡೆದು, ಅದರೊಳಗೆ ಸೇರಿಕೊಂಡಿತ್ತು. ಎರಡು ಕಾರುಗಳು ಒಂದರೊಳಗೆ ಇನ್ನೊಂದು ಎಷ್ಟು ಚೆನ್ನಾಗಿ ಸೇರಿಕೊಂಡಿತ್ತೆಂದರೆ, ಬಣ್ಣದಿಂದ ಮಾತ್ರ ಅವನ್ನು ಗುರುತಿಸಬಹುದಾಗಿತ್ತು. ಕೆಂಪು ಟೊಯೋಟಾ ಕಾರಿನೊಳಗೆ ತುಂಬಾ ಕತ್ತಲೆಯಾಗಿ, ಒಳಗಡೆ ಏನಿದೆ ಎಂದು ನೋಡಲೂ ಅಸಾಧ್ಯವಾಗಿತ್ತು. ಬಂದವರಲ್ಲಿ ಒಬ್ಬ ಡಾಕ್ಟರ್ ಅಗಿದ್ದ; ಇನ್ನೊಬ್ಬನು ತಾನು ತಂದಿದ್ದ ಫ಼್ಲಾಷ್ ಲೈಟನ್ನು ಟೊಯೋಟಾ ಕಾರಿನೊಳಗೆ ಬಿಟ್ಟು ನೋಡಲಾಗಿ ಕಾಣಿಸಿತು: ಅವನ (ರಾಜುವಿನ) ತಲೆ ಮತ್ತು ಮುಖ ರಕ್ತ ಸಿಂಚನವಾಗಿತ್ತು. ಮೈ ಮೇಲೆ ಎಲ್ಲಾ ಕಡೆ ಘಾಯಗಳಾಗಿತ್ತು; ತಲೆಗೆ ಭಾರೀ ಪೆಟ್ಟಾಗಿರುವುದು ಡಾಕ್ಟರ್ ಗಮನಕ್ಕೆ ಬಂತು. ಒಡೆದು ಹೋದ ಕಿಟಕಿಯ ಮೂಲಕ ಕೈ ಹಾಕಿ ಅವನ ಕುತ್ತಿಗೆಯ ಬಳಿ ಮುಟ್ಟಿ ನೋಡಿದಾಗ, ತುಂಬಾ ದುರ್ಬಲವಾದ ನಾಡಿ ಸಿಕ್ಕಿತು. ಆದರೆ, ಮೂಗಿನ ಬಳಿ ಕೈ ಇಟ್ಟಾಗ, ಉಸಿರಾಟ ಆಡುತ್ತಿರುವುದು ಗೊತ್ತಾಗಲಿಲ್ಲ. ಅವನ ದೇಹ ಸ್ಟೀರಿಂಗ್ ವೀಲ್ ಮತ್ತು ಸೀಟಿನ ಮಧ್ಯೆ ವಿಕಾರವಾಗಿ ಸಿಕ್ಕಿ ಹಾಕಿಕೊಂಡಿದ್ದರಿಂದ, ಉಸಿರಾಟ ಅಕಸ್ಮಾತ್ ನಿಂತರೆ, ತಾನು ಡಾಕ್ಟರ್ ಆಗಿದ್ದರೂ ಏನೂ ಮಾಡುವ ಹಾಗಿರಲಿಲ್ಲ; ಅಸಹಾಯಕನಾಗಿ, ಅಂಬ್ಯುಲೆನ್ಸ್ ಬರುವುದನ್ನೇ ನಿರೀಕ್ಷಿಸತೊಡಗಿದ.

ಅಷ್ಟರಲ್ಲಿ ಅಂಬ್ಯುಲೆನ್ಸ್, ಎರಡು ಫ಼ೈರ್ ಇಂಜಿನ್ನುಗಳು ಮತ್ತು ಮೂರು ಪೋಲೀಸ್ ಕಾರುಗಳು ಅಲ್ಲಿಗೆ ಬಂದವು. ಪೋಲಿಸಿನವನು ವಾಹನ ಸಂಚಾರವನ್ನು ಪುನರಾರಂಭಿಸಲು ಪ್ರಯತ್ನಿಸುತ್ತಿದ್ದ. ಆಗ ಪೋಲೀಸ್ ಅಲ್ಲಿಗೆ ಬಂದು, “ಕ್ರೋ ಬಾರ್” ಅನ್ನು ಕಿಟಕಿಯ ಒಳಗೆ ತೂರಿಸಿ, ಲಾಕ್ ಆಗಿದ್ದ ಬಾಗಿಲನ್ನು ತೆಗೆದ. ಬ್ಲಾಂಕೆಟ್‌ಅನ್ನು ಉಪಯೋಗಿಸಿ, ಹುಷಾರಾಗಿ ಗಾಜಿನ ಚೂರುಗಳನ್ನು ತೆಗೆದು, ಇಬ್ಬರು ಅವನನ್ನು ಸ್ಟೀರಿಂಗ್ ವೀಲಿನ ಕೆಳಗಿನಿಂದ ತೆಗೆದರು. ನಂತರ ಅವನನ್ನು ಸ್ಟ್ರೆಚರ್ ಮೇಲೆ ಜಾಗರೂಕತೆಯಿಂದ ಮಲಗಿಸಿ, ಅಂಬ್ಯುಲನ್ಸ್ ನಿಲ್ಲಿಸಿದ್ದ ಕಡೆ ಎತ್ತಿಕೊಂಡು ಹೋದರು. ಪ್ರಥಮ ಚಿಕಿತ್ಸೆಯವರು ಆ ಸ್ಥಳಕ್ಕೆ ಆಗಮಿಸಿ, ಅವನಿಗೆ ಐ.ವಿ. ಕೊಡಲಾರಂಭಿಸಿದರು. ಅವನನ್ನು ಅಲ್ಲಿಯೇ ಹತ್ತಿರವಿದ್ದ, ಸಾಂಟಾ ಕ್ಲಾರಾ ಕೈಸರ್ ಆಸ್ಪತ್ರೆಗೆ ಕರೆದುಕೊಂಡು ಹೋದರು.
– ೨ –

ಇತ್ತ ಕಡೆ, ಎರಡು ಗಂಟೆಗಳಾದರೂ ತನ್ನ ಗಂಡ ವಾಪಸಾಗದೇ ಇದ್ದುದು ಸಹಜವಾಗಿಯೇ ಕುಸುಮಳನ್ನು ಚಿಂತೆಗೀಡುಮಾಡಿತ್ತು; ಒಂದು ಅಥವಾ ಒಂದೂವರೆ ಗಂಟೆ ತಡವಾಗಿದ್ದರೆ, ತನ್ನ ಮಾತಿನ ಮಲ್ಲ ಗಂಡ ಯಾರದೋ ಜೊತೆ ಹರಟೆ ಹೊಡೆಯುತ್ತಾ ಇರಬಹುದೆಂದು ಅಂದುಕೊಳ್ಳುತ್ತಿದ್ದಳು. ಹಬ್ಬದ ಅಡುಗೆ ಮಾಡಿಕೊಂದು ಅವನ ನಿರೀಕ್ಷೆಯಲ್ಲಿರುವ ತಮ್ಮನ್ನು ಕಾಯಿಸುತ್ತಿರುವನಲ್ಲಾ ಎಂದು ಸಿಟ್ಟು ಸಹ ಜಾಸ್ತಿಯಾಗುತ್ತಿತ್ತು. ಈ ಭಾವನಾ ರಹಿತ ಗಂಡಸರು ತಮ್ಮ ಹುಟ್ಟು ಹಬ್ಬದ ದಿನದಲ್ಲಾಗಲೀ, ಮದುವೆಯ ವಾರ್ಷಿಕೋತ್ಸವ ದಿನದಲ್ಲಾಗಲೀ, ಏನೂ ಹೆಚ್ಚಿನ ಮಹತ್ವ ತೋರಿಸದೆ ಇರುವುದು, ಅವಳ ದಿಗ್ಭ್ರಮೆ, ಅಸಮಾಧಾನ ಹಾಗೂ ಕ್ರೋಧಗಳಿಗೆ ಕಾರಣಗಳಾಗಿದ್ದವು. ಕಿಶೋರ್ ಹತ್ತಿರ ಮಾತನಾಡಿ, ತನ್ನೆಲ್ಲಾ ಭಾವಗಳನ್ನು ಹೊರ ಹಾಕಿದ್ದಳು. ಇದಾದ ಸ್ವಲ್ಪ ಹೊತ್ತಿನ ನಂತರ, ಹಸಿವೆ ಜಾಸ್ತಿಯಾಗಿ, ಯಾರಿಗೂ ಮಾತನಾಡಲು ಶಕ್ತಿ ಸಹ ಇರಲಿಲ್ಲ. ಆಷ್ಟರಲ್ಲಿ, ದೂರವಾಣಿ ನಿನಾದಿಸಿತು. ತಕ್ಷಣ ಕುಸುಮ ಎದ್ದು ಹೋಗಿ, ಫೊನನ್ನು ಎತ್ತಿಕೊಂದು, “ಹಲೋ” ಎಂದಳು.
“ನಾನು ಬಾಬ್, ಹೈವೇ ಪೆಟ್ರೋಲ್. ಇದು ರಾಜುವಿನ ಮನೆಯೆ?”
“ಹೌದು” ಕುಸುಮ ಭಯಭೀತಳಾಗಿ ಉತ್ತರಿಸಿದಳು.
“ರಾಜುಗೆ ಅಪಘಾತವಾಗಿ, ಅವರ ಸ್ಥಿತಿ ಚಿಂತಾಜನಕವಾಗಿದೆಯೆಂದು ಹೇಳಲು ನಾನು ವಿಷಾದಿಸುತ್ತೇನೆ.”
“ಓ ಮೈ ಗಾಡ್!” ಎಂದು ಹೇಳಿ ಅವಳು ಹಾಗೇ ಕುಸಿದಳು.
“ಮ್ಯಾಡಂ, ಆರ್ ಯು ಆಲ್ ರೈಟ್? ಆವರನ್ನು ಸಾಂಟಾ ಕ್ಲಾರ ಕೈಸರ್ ಗೆ ಕರೆದುಕೊಂಡು ಹೋಗಿದ್ದಾರೆ. ನೀವು ಆದಷ್ಟು ಬೇಗ ಅಲ್ಲಿಗೆ ಹೋಗುವುದು ಒಳ್ಳೆಯದು.” ಎಂದು ಪೋಲೀಸ್ ಹೇಳಿದ.

ಕುಸುಮಳಿಗೆ ಮಾತೇ ಹೊರ ಬರಲಿಲ್ಲ. ಪೋಲಿಸನ ಮಾತುಗಳು ಕಿವಿಯ ಮೇಲೆ ಅಪ್ಪಳಿಸುತ್ತಿತ್ತೇ ವಿನಃ ಅರ್ಥವಾಗುತ್ತಿರಲಿಲ್ಲ. ಇವಳು ಕುಸಿದಿದ್ದನ್ನು ನೋಡಿ, ಕಿಶೋರ್ ದಿಗ್ಬ್ರಾಂತನಾದ. ಅವಳ ಹತ್ತಿರ ಹೋಗಿ ಕೇಳಿದ: “ಏನಾಯಿತು, ಕುಸುಮ?” ಆಕೆ ಒಂದು ನಿಮಿಷ ಉತ್ತರಿಸಲಿಲ್ಲ; ಆಕೆಯ ಕಣ್ಣುಗಳು ಶೂನ್ಯವನ್ನು ನೊಡುತ್ತಿದ್ದವು. “ರಾಜು ಹುಷಾರಾಗಿದ್ದಾನೆ ತಾನೆ?” ಎಂದು ಇನ್ನೊಮ್ಮೆ ಪ್ರಶ್ನಿಸಿದ. ಆದಕ್ಕವಳು “ಅವರಿಗೆ ಆಕ್ಸಿಡೆಂಟ್ ಆಗಿದೆಯಂತೆ. ಸಾಂಟ ಕ್ಲಾರಾ ಕೈಸರ್ ನಲ್ಲಿ…” ಇಷ್ಟೇ ಅವಳಿಗೆ ಹೇಳಕ್ಕೆ ಆಗಿದ್ದು. ಕಟ್ಟಿಕೊಂಡ ದುಃಖ ಪ್ರವಾಹದಂತೆ ಬಂತು; ಜೋರಾಗಿ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದಳು. ರಾಜು ಅವಳ ಬೆನ್ನನ್ನು ಸವರಿ, “ಹೆದರಬೇಡ, ಕುಸುಮ. ರಾಜೂಗೆ ಏನೂ ಆಗಿರುವುದಿಲ್ಲ ಅಂತ ನನಗೆ ಭರವಸೆ ಇದೆ.” ಅವನಿಗೆಷ್ಟೇ ಆಘಾತವಾಗಿದ್ದರೂ, ಅವನ ವ್ಯಾವಹಾರಿಕ ಮನಸ್ಸು ಕಾರ್ಯಶೀಲವಾಗಿತ್ತು. “ನಡಿ ಕುಸುಮ, ಕೈಸರ್‌ಗೆ ಹೋಗೋಣ” ಎಂದು ಹೇಳಿ ಹೊರಡಿಸಿದ. ಓರಣವಾಗಿ ಜೋಡಿಸಿದ್ದ ಅಡುಗೆ ಆರಿ ತಣ್ಣಗಾಗಿತ್ತು, ಆದರೆ ಆಗ ಊಟ ಯಾರಿಗೆ ಬೇಕು? ಮನೆಗಾಗಲೇ ಪ್ರೇತಕಳೆಯ ಗರ ಬಡಿದಿತ್ತು!

ಹಿಂದೊಮ್ಮೆ ಇಲ್ಲಿಗೆ ಬಂದಾಗ ಕಿಶೋರ್ ಕೈಸರ್‌ಅನ್ನು ನೋಡಿದ್ದರಿಂದ, ಅವನೇ ಡ್ರೈವ್ ಮಾಡಿಕೊಂದು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದುಕೊಂಡು ಬಂದ. ಇಬ್ಬರೂ ಅದರೊಳಗೆ ಹುಚ್ಚರಂತೆ ಓಡಿದರು. ಆ ಘಟಕ ಚಟುವಟಿಕೆಗಳಿಂದ ಜೀವಂತವಾಗಿತ್ತು. ಕಿಶೋರ್ ಸೀದ ಸ್ವಾಗತಕಾರಿಣಿಯ ಬಳಿ ಹೋಗಿ, ರಾಜುವಿನ ಬಗ್ಗೆ ವಿಚಾರಿಸಿದ. ಅದಕ್ಕವಳು, “ರಾಜುವಿನ ತಲೆಗೆ ತೀವ್ರವಾದ ಘಾಯ ಆಗಿದೆ. ನಮ್ಮ ನರಮಂಡಲ ತಜ್ಙರು ಈಗ ಅವನನ್ನು ಪರೀಕ್ಷಿಸುತ್ತಿದ್ದಾರೆ. ನೀವು ಅಲ್ಲಿ ಕುಳಿತಿರಿ, ನಿಮ್ಮನ್ನು ಅವರು ಸಂಪರ್ಕಿಸುತ್ತಾರೆ.” ಎಂದು ಹೇಳಿದಳು.

ಕುಸುಮಳಿಗೆ ಕೂಡಲೇ ಹೋಗಿ ರಾಜು ಯಾವ ಸ್ಥಿತಿಯಲಿದ್ದಾನೆಂದು ನೋಡುವ ಆತಂಕ, ತವಕ ಜಾಸ್ತಿಯಾಗುತ್ತಿತ್ತು; ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಕಿಶೋರ್ ಕೂಡ ಕುಸುಮಳಿಗೆ ಸಮಾಧಾನ ಮಾಡುವ ಮನಃಸ್ಥಿತಿ ಹೊಂದಿರಲಿಲ್ಲ. ಆದರೆ ಅವರುಗಳು ಈಗ ಕಾಯದೇ ವಿಧಿ ಇರಲಿಲ್ಲ.

ಹೀಗೆ ಎಷ್ಟು ಹೊತ್ತು ಕಳೆಯಿತೋ, ಅವರಾರಿಗೂ ತಿಳಿಯಲಿಲ್ಲ. ಆಷ್ಟರಲ್ಲಿ ಒಬ್ಬಳು ನರ್ಸ್ ಮತ್ತು ನ್ಯೂರೋ ಸರ್ಜನ್ ಅವರಲ್ಲಿಗೆ ಬಂದರು. “ಈಗ ನಾವು ರಾಜುವನ್ನು ನೋಡಬಹುದೆ?” ಎಂದು ಕಿಶೋರ್ ಅಸಹನೆಯಿಂದಲೇ ಪ್ರಶ್ನಿಸಿದ. ಆಗ ಅವರು, “ನಾವು ಮೊದಲು ರಾಜುವಿನ ಬಗ್ಗೆ ಅವನ ಹೆಂಡತಿಗೆ ವಿವರಿಸಬೇಕು” ಎಂದು ಹೇಳಿ ಕಾನ್ಫರನ್ಸ್ ರೂಮಿನ ಕಡೆ, ಹೆಜ್ಜೆ ಹಾಕಿದರು. ಇವರ ವಿವರಣೆ ಈಗ ಯಾರಿಗೆ ಬೇಕು, ಬೇಗ ನೋಡಲು ಬಿಡಬಾರದೆ? ಎಂದು ಇಬ್ಬರಿಗೂ ಅನಿಸದಿರಲಿಲ್ಲ. ಆದರೆ, ಈ ದೇಶದಲ್ಲಿ ಪ್ರತಿಯೊಂದಕ್ಕೂ ಕಾನೂನು, ಸಲೀಸಾಗಿ ಸಾಯಲೂ ಬಿಡುವುದಿಲ್ಲವಲ್ಲ?

ಮುಂದೆ ಬರಲಿರುವ ಯಾವುದೋ ಒಂದು ದುರ್ಘಟನೆಯನ್ನು ಸಾರಿ ಹೇಳುವಂತೆ, ಆ ಕಾನ್ಫರನ್ಸ್ ರೂಮು ಪ್ರೇತಕಳೆಯನ್ನು ಪ್ರತಿಬಿಂಬಿಸುತ್ತಿತ್ತು. ರೂಮಿನ ಮಧ್ಯದಲ್ಲಿದ್ದ ಓವಲ್ ಟೇಬಲ್ಲಿನ ಸುತ್ತ ಮೂರು ಜನ ಸರ್ಜಿಕಲ್ ಗೌನ್ ಮತ್ತು ಕ್ಯಾಪ್ ಧರಿಸಿ ಕುಳಿತಿದ್ದರು, ಅವರ ಮಾಸ್ಕ್‌ಗಳು ಕುತ್ತಿಗೆಯ ಕೆಳಗೆ ನೇತಾಡುತ್ತಿದ್ದವು. ಅವರಲ್ಲಿ ಒಬ್ಬರ ಗೌನ್ ರಕ್ತದಿಂದ ಕೆಂಪಾಗಿದ್ದುದನ್ನು ಕುಸುಮ ಗಮನಿಸಿ. ’ದೇವರೇ, ಅದು ತನ್ನ ಗಂಡನದಾಗಿರದಿರಲಿ!” ಎಂದು ಪ್ರಾರ್ಥಿಸಿದಳು. ಇನ್ನು ತದೆದುಕೊಳ್ಳಲಾರದೆ, ಕಿಶೋರ್, “ರಾಜು ಹೇಗಿದ್ದಾನೆ?” ಎಂದು ಕೇಳಿಯೇ ಬಿಟ್ಟ! ಆದರೆ, ಅದಕ್ಕೆ ಅವರು ನೀಡುವ ಉತ್ತರ ಪ್ರಶ್ನೆಯಷ್ಟು ಸರಳವಾಗಿರಲಿಲ್ಲ.

“ಶ್ರೀಮತಿ ರಾಜು, ಅವನಿನ್ನೂ ಬದುಕಿದ್ದಾನೆ. ರಾಜುವಿನ ತಲೆಗೆ ತುಂಬಾ ದೊಡ್ಡ ಘಾಯ ಹಾಗೂ ಆಘಾತ ಆಗಿದೆ. ರಾಜು ತುಂಬ ಧೀರನಾದ್ದರಿಂದ ಇನ್ನೂ ಬದುಕಿದ್ದಾನೆ, ಬೇರೆಯವರಾಗಿದ್ದರೆ ಇಷ್ತು ಹೊತ್ತಿಗೆ ಕೊನೆಯುಸಿರೆಳೆದಿರುತ್ತಿದ್ದರು! ಇದು ಒಂದು ಶುಭ ಸೂಚನೆ, ಆದರೂ ನಾವಿನ್ನೂ ತುಂಬ ದೂರ ಹೊಗಬೇಕಾಗಿದೆಯೆಂದು ಎಚ್ಚರಿಸಬೇಕಾಗಿದೆ!”

“ಮೂಲಭೂತವಾಗಿ ರಾಜುವಿಗೆ ಎರಡು ಬಗೆಯ ಘಾಯಗಳಾಗಿವೆ: ಮೊದಲನೆಯದು, ಅಪಘಾತವಾದಾಗ ಮಿದುಳು ತಲೆ ಬುರುಡೆಯೊಳಗೆ ಅಸ್ತವ್ಯಸ್ತವಾಗಿ, ನರ್ವ್ ಫ಼ೈಬರ್ಸ್ ಹಿಗ್ಗಿಸಲ್ಪಟ್ಟು, ರಕ್ತ ನಾಳಗಳು ಹರಿಯಲ್ಪಟ್ಟಿವೆ. ಇನ್ನು ಎರಡನೆಯ ಘಾಯ, ಆಪಘಾತವಾದ ಕೆಲವೇ ಕ್ಷಣಗಳ ನಂತರ, ಯಾವುದೋ ಒಂದು ಚೂಪಾದ ಉಕ್ಕಿನ ಚೂರು ಬುರುಡೆಯನ್ನು ಸೀಳಿಕೊಂಡು, ವಾತಾವರಣಕ್ಕೆ ಮಿದುಳನ್ನು ಬಹಿರಂಗ ಪಡಿಸಿದೆ. ಇದನ್ನು ನಾವು ’ಓಪನ್ ಊಂಡ್’ ಎಂದು ಕರೆಯುತ್ತೇವೆ.”

ಕುಸುಮಳಿಗೆ ಇನ್ನು ಮುಂದೆ ಕೇಳಲಾಗಲಿಲ್ಲ. ಕಣ್ಣು ಮುಚ್ಚಿ, ಪಕ್ಕದಲ್ಲಿ ಕುಳಿತಿದ್ದ ಕಿಶೋರನ ಕೈಯನ್ನು ಹಿಡಿದು ಭದ್ರವಾಗಿ ಅಮುಕಿದಳು. ತಾಂತ್ರಿಕ ವಿದ್ಯಾರ್ಥಿಯಾದ ಕಿಶೋರನಿಗೆ ಕೂಡ – ಇವರು ಎಷ್ಟೇ ಸ್ಪಷ್ಟವಾಗಿ ವೈದ್ಯಕೀಯ ವಿವರಗಳನ್ನು ನೀಡುತ್ತಿದ್ದರೂ – ಆಷ್ಟೊಂದು ಅರ್ಥವಾದಂತೆ ಅನ್ನಿಸಲಿಲ್ಲ. ತನ್ನ ಪ್ರಾಣ ಸ್ನೇಹಿತ ಮರಣ ಶಯ್ಯೆಯಲ್ಲಿರುವಾಗ, ಇವರ ಉಪನ್ಯಾಸವನ್ನು ಕೇಳುವ ದೌರ್ಭಾಗ್ಯ ಬಂದಿದೆಯೆಲ್ಲ ಎಂದು ಕಳವಳಿಸುತ್ತಿದ್ದ.

ಕಣ್ಣು ಮುಚ್ಚಿದ್ದನ್ನು ಕಂಡು, ಇವಳೇನಾದರೂ ಮೂರ್ಛೆ ಹೋದಳೇನೋ ಎಂದು ಆ ವೈದ್ಯ ಮಹಾಶಯರಿಗೆ ಆತಂಕವಾಯಿತು. ಕೂದಲೇ ಅವರು, “ಶ್ರೀಮತಿ ರಾಜು, ನೀವು ಸರಿಯಾಗಿದ್ದೀರಿ ತಾನೆ?” ಎಂದು ಪ್ರಶ್ನಿಸಿ, ಅವಳನ್ನೇ ಸೂಕ್ಷ್ಮವಾಗಿ ಅವಲೋಕಿಸತೊಡಗಿದರು. ಕುಸುಮ ನಿಧಾನವಾಗಿ ಕಣ್ಣು ಬಿಟ್ಟು ಹೌದೆಂದು ತಲೆಯಾಡಿಸಿದಳು.
ಈ ವಿವರಣೆಗಳನ್ನು ನೀಡುವುದು — ಅವರಿಗೆಷ್ಟು ಅಹಿತವಾದರೂ — ಅವನ ಆದ್ಯ ಕರ್ತವ್ಯವೆಂದು ಚೆನ್ನಾಗಿ ಗೊತ್ತಿತ್ತು: “ಬುರುಡೆ ಸೀಳಿದ್ದರಿಂದ, ರಾಜು ಸಾಕಷ್ಟು ರಕ್ತ ಕಳೆದುಕೊಂದು, ಅವನ ಬಿ.ಪಿ. ಕಡಿಮೆಯಾಗಿದೆ. ಮೆದುಳಿಗೆ ರಕ್ತ ಸಂಚಾರ ಕಡಿಮೆಯಾಗಿ, ಆಮ್ಲಜನಕದ ವಿತರಣೆ ಕುಂಠಿತವಾಗಿರುವುದರಿಂದ, ಅಲ್ಲಿ ಎಷ್ಟು ಹಾನಿ ಆಗಿದೆಯೆಂದು ಈಗಲೇ ಹೇಳಲು ಸಾಧ್ಯವಿಲ್ಲ.”

ಕುಸುಮ ಮಾತನಾಡುವ ಸ್ಥಿತಿಯಲ್ಲಿ ಖಂಡಿತ ಇಲ್ಲ ಎಂದು ಕಿಶೋರನಿಗೆ ಗೊತ್ತಿತ್ತು. ಇವರ ವೈಜ್ಙಾನಿಕ ವಿವರಣೆಗಳು ಯಾರಿಗೆ ಬೇಕು? ಬದುಕುತ್ತಾನೋ ಇಲ್ಲವೋ, ಅಷ್ಟು ಹೇಳಿದ್ದರೆ ಸಾಕಾಗಿತ್ತು. ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಕೇಳಿಯೇ ಬಿಟ್ಟ: “ರಾಜುವನ್ನು ಉಳಿಸಿ ಕೊಡುವಿರಾ, ಡಾಕ್ಟರ್?”

ಸರ್ಜನ್ ಇವನ ಪ್ರಶ್ನೆಯಿಂದ ಉತ್ತೇಜಿತನಾಗಿ ಮುಂದುವರೆಸಿದ: “ಮೆದುಳಿನಲ್ಲೇನದರೂ ರಕ್ತ ಹೆಪ್ಪು ಗಟ್ಟಿದೆಯೆ ಅಥವಾ ಊದಿಕೊಂಡಿದೆಯೇ ಎಂದು ಶಸ್ತ್ರ ಚಿಕಿತ್ಸೆ ಮಾಡುವವರೆಗೆ ಗೊತ್ತಾಗುವುದಿಲ್ಲ; ಆದ್ದರಿಂದ ನಿಮ್ಮ ಪ್ರಶ್ನೆಗೆ ನೇರವಾಗಿ ಈಗ ಉತ್ತರ ಹೇಳಲು ಸಾಧ್ಯವಿಲ್ಲ. ಸ್ಥೂಲವಾಗಿ ಹೇಳುವುದಾದರೆ, ಈ ಮೂರು ಬಗೆಯ ಸಾಧ್ಯತೆಗಳಿವೆ: ಮೊದಲನೆಯದಾಗಿ, ಇವನು ಉಳಿಯದಿರಬಹುದು ಅಥವಾ ಉಳಿದರೂ ಶಾಶ್ವತವಾಗಿ ’ಕೋಮಾ’ ಸ್ಥಿತಿಯಲ್ಲಿರಬಹುದು. ಎರಡನೆಯದಾಗಿ, ಇವನು ಬದುಕಿ ಉಳಿದರೂ, ಚಾಲನೆ ಕುಂಠಿತಗೊಳ್ಳಬಹುದು, ವ್ಯಕ್ತಿತ್ವ ಬದಲಾಗಬಹುದು ಅಥವಾ ನೆನಪಿನ ಶಕ್ತಿ ಕಳೆದುಕೊಳ್ಳಬಹುದು. ಕೊನೆಯದಾಗಿ, ಅವನು ಯಾವುದೋ ಒಂದು ಪವಾಡದ ಬೆಂಬಲದಿಂದ ಬದುಕುಳಿದು, ಸಹಜವಾದ ಜೀವನವನ್ನು ಪುನರಾರಂಭಿಸಬಹುದು.”

ಡಾಕ್ಟರ್ ಹೇಳಿದ ಕೊನೇ ವಿವರಣೆ ಮಾತ್ರ ಇವರಿಬ್ಬರಿಗೂ ಅರ್ಥವಾದಂತಾಯಿತು. ಘೊರ ವಾಸ್ತವಿಕತೆಯನ್ನು ಎದುರಿಸಲು ಸಿದ್ಧನಾದಂತೆ ತೋರಿದ ಕಿಶೊರ್ ಕೇಳಿದ: “ನಾವು ಮುಂದೇನು ಮಾಡಬೇಕು ಹೇಳಿ, ಡಾಕ್ಟರ್?”
ಅದಕ್ಕವರು ಹೇಳಿದರು: ” ಈಗ ನಮಗೆ ಹೆಚ್ಚು ಸಮಯವಿಲ್ಲ. ಶ್ರೀಮತಿ ರಾಜು, ನೀವು ಈ ಪೇಪರ್ಸ್‌ಗೆ ಸೈನ್ ಮಾಡಿದರೆ, ನಾವು ಕೂಡಲೇ ಶಸ್ತ್ರ ಚಿಕಿತ್ಸೆಯನ್ನು ಆರಂಭಿಸುತ್ತೇವೆ.”

ಕಿಶೋರ್ ಸರ್ಜನ್ಸ್ ಸಿದ್ಧಪಡಿಸಿದ ಪೇಪರ್ಸನ್ನು ಶೀಘ್ರವಾಗಿ ಓದಿದ. ಅದರಲ್ಲಿನ ವಿವರಗಳು ಹೀಗಿತ್ತು: “ಅಪಘಾತಕ್ಕೊಳಗದ ರಾಜುವಿನ ನೈಜ ಸ್ಥಿತಿಯ ವಿವರಣೆ. ತಮ್ಮೆಲ್ಲಾ ಅನುಭವ, ಕೌಶಲ್ಯ ಹಾಗೂ ಜಾಣ್ಮೆಯನ್ನು ಉಪಯೊಗಿಸಿಕೊಂಡು ವೈದ್ಯರು ಶಸ್ತ್ರ ಚಿಕಿತ್ಸೆ ಯನ್ನು ಮಾಡುತ್ತಾರೆ. ದುರ್ದೈವವಶಾತ್ ಅವರು ತಮ್ಮ ಕ್ರಿಯೆಯಲ್ಲಿ ವಿಫಲರಾದರೆ, ಅವರು ಜವಾಬ್ದಾರರಲ್ಲ ಎಂಬುದು ಸಹ ನಮೂದಾಗಿತ್ತು. ಅವರಿಗೆ ಆಪರೇಷನ್ ಮಾಡುವ ಹಾಗೂ ಸಮಯೋಚಿತವಾಗಿ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ನೀದಲಾಗಿದೆ.” ಸಹಜವಾಗಿ ತಮ್ಮ ಹಿತರಕ್ಷಣೆಯನ್ನು ಕಾಪಾಡಿಕೊಳ್ಳುವುದಕ್ಕೆಂದೇ ಮೀಸಲಾಗಿದ್ದಂತೆ ತೊರಿತು, ಆ ಶಸ್ತ್ರ ಚಿಕಿತ್ಸಾ ಪರವಾನಗಿ ಪತ್ರ!

ಕಿಶೋರ್ ಸಹಿ ಮಾಡಬಹುದೆಂದ ಕೂದಲೇ, ಕುಸುಮ ಹಿಂದು ಮುಂದು ನೋಡದೆ ಸಹಿ ಮಾಡಿದಳು. ತನ್ನ ಗಂಡನನ್ನು ಈ ಗಂಡಾಂತರದಿಂದ ಪಾರು ಮಾಡಪ್ಪ ಎಂದು ದೇವರನ್ನು ಮನಸ್ಸಿನಲ್ಲಿ ಲಕ್ಷ ಬಾರಿ ಪ್ರಾರ್ಥಿಸಿದಳು.

“ರಾಜುವನ್ನು ಉಳಿಸಲು ನಾವು ಸಕಲ ಪ್ರಯತ್ನವನ್ನು ಮಾಡುತ್ತೇವೆಂದು ನಾನು ನಿಮಗೆ ವಚನ ನೀಡುತ್ತೇನೆ. ನಮ್ಮ ಈ ನ್ಯೂರೋ ಸರ್ಜಿಕಲ್ ಟೀಂ, ಈ ರಾಜ್ಯದಲ್ಲೇ ಅತ್ಯುತ್ತಮವಾದುದು.” ಎಂದು ಆತ್ಮವಿಶ್ವಾಸದಿಂದ ಬೀಗಿ ಹೇಳಿದ. “ಈಗ ನಾವು ರಾಜುವನ್ನು ನೋಡಬಹುದೆ?” ಎಂದು ಕಿಶೋರ್ ಕೇಳಿದ. ಅದಕ್ಕವರು, “ನೀವು ಬೇಕಾದರೆ ಅವನನ್ನೀಗ ನೋದಬಹುದು. ಆದರೆ ಅವನೀಗ ಪ್ರಜ್ಙಾ ಸ್ಥಿತಿಯಲ್ಲಿಲ್ಲ. ಅವನು ನಿಮಗೆ ತಾನಿರುವ ಸ್ಥಿತಿಗಿಂತ ಕೆಟ್ಟದಾಗಿ ಕಾಣಬಹುದು!”

ತೀವ್ರ ಶುಶ್ರೂಷಾ ಘಟಕದಲ್ಲಿ ಇಬ್ಬರು ಡಾಕ್ಟರು ಮತ್ತು ನರ್ಸ್‌ಗಳಿಂದ ಸುತ್ತುವರೆದ ರಾಜುವನ್ನು ನೋದಿದಾಗ, ಈ ಚೀಫ಼್ ಸರ್ಜನ್ ಹೇಳಿದ ಯಾವ ಮಾತುಗಳೂ ಸಹ ಅವರನ್ನು ಮಾನಸಿಕವಾಗಿ ಸಿದ್ಧ ಮಾಡಲಿಲ್ಲ ಎನಿಸಿತು. ಅವನ ಗಂಟಲಲ್ಲೊಂದು ಉಸಿರಾಟದ ನಳಿಕೆ, ಇನ್ನೊಂದು ಮೂಗಿನೊಳಗೆ, ರಕ್ತ ಒದಗಿಸುವ ಮತ್ತೊಂದು ನಳಿಕೆ ಬಲ ತೋಳಿಗೆ, ಐ.ವಿ. ಇನ್ನೊಂದು ತೊಳಿಗೆ ಅಂಟಿಸಲ್ಪಟ್ಟಿದವು. ಮಾನಿಟರ್‌ಗಳು ಅವನ ಸಕಲ ಜೈವಿಕ ಕ್ರಿಯೆಗಳನ್ನು ಚಾಚೂ ತಪ್ಪದೆ ಗಮನಿಸುತ್ತಿದ್ದವು. ಈ ಎಲ್ಲದರ ಮಧ್ಯೆ ರಾಜು ದೀರ್ಘ ನಿದ್ದೆಯಲ್ಲಿದ್ದ. ಅವನ ಮುಖ ಎಷ್ಟು ಕೊಚ್ಚಿ ಹೋಗಿತ್ತೆಂದರೆ, ಸ್ವತಃ ಕುಸುಮಳಿಗೇ ಗುರುತು ಸಿಗಲಿಲ್ಲ. ರಾಜುವಿನ ತಲೆಯ ಸುತ್ತ ರೋಗಾಣು ರಹಿತ ಸ್ವಚ್ಛ ಹೊದಿಕೆಯನ್ನು ಮುಚ್ಚಲಾಗಿತ್ತು. ಇನ್ನು ಸ್ವಲ್ಪ ಸಮಯದಲ್ಲೇ, ತಲೆಯ ಚಿಪ್ಪನ್ನು ಪೂರ ತೆಗೆದು, ಶಸ್ತ್ರ ಚಿಕಿತ್ಸೆಯನ್ನು ಮಾಡುವವರಿದ್ದರು. ಈ ಹೃದಯ ವಿದ್ರಾವಕ ದೃಶ್ಯ ನೋಡಿ, ಇಬ್ಬರೂ ದೀರ್ಘ ಅಶ್ರು ತರ್ಪಣ ಮಾಡಿ, ಡಾಕ್ಟರ್ ಸೂಚನೆಯ ಮೇರೆಗೆ ಹೊರ ಬಂದರು.

ಅಷ್ಟು ಹೊತ್ತಿಗಾಗಲೇ ರಾತ್ರಿ ಹತ್ತು ಗಂಟೆಯಾಗಿತ್ತು. ಇವರ್‍ಯಾರಿಗೂ ಊಟದ ಬಗ್ಗೆ ಕಾಳಜಿ ಇರಲಿಲ್ಲ. ಇಬ್ಬರೂ ಮಾತನಾಡದೆ, ಲಾಬಿಯ ಛಾವಣಿಯನ್ನೇ ಶೂನ್ಯ ದೃಷ್ಟಿಯಿಂದ ನೋಡುತ್ತಾ ಕುಳಿತರು. ಒಂದೊಂದು ನಿಮಿಷವೂ, ಒಂದೊಂದು ಯುಗದಷ್ಟು ದೀರ್ಘವಾಯಿತು. ಆಪರೇಷನ್ ಶುರುವಾಗಿ ಕೆಲವೇ ಗಂಟೆಗಳು ಕಳೆದಿರಬೇಕು. ಆಷ್ಟರಲ್ಲಿ ನರ್ಸ್ ಇವರಲ್ಲಿಗೆ ಬಂದು, ರಾಜುವಿಗೆ ಇನ್ನಷ್ಟು ರಕ್ತದ ಅವಶ್ಯಕತೆ ಇದೆಯೆಂದೂ, ಇವರಿಬ್ಬರಲ್ಲಿ ಯಾರಿಗಾದರೂ ರಕ್ತದಾನದ ಇಚ್ಛೆ ಇದೆಯೇ ಎಂದು ಕೇಳಿದಳು. ಕಿಶೋರ್ ಹಿಂದೆ ಮುಂದೆ ನೊಡದೆ, ರಕ್ತ ನೀಡಲು ಅವಳೊಡನೆ ತೆರಳಿದ. ಅದೃಷ್ಟವಶಾತ್, ಇಬ್ಬರದೂ ಒಂದೇ ರಕ್ತದ ಗುಂಪು ಆದ್ದರಿಂದ, ಹೋದ ಅರ್ಧ ಗಂಟೆಯೊಳಗೆ ರಕ್ತ ಕೊಟ್ಟು, ಕಿಶೋರ್ ಹೊರ ಬಂದ.

ಇದಾದ ಎರಡು ಗಂಟೆಗಳ ನಂತರ, ಚೀಫ಼್ ಸರ್ಜನ್ ಇವರಲ್ಲಿಗೆ ಬಂದು ವಿವರಿಸಲಾರಂಭಿಸಿದ: “ಶ್ರೀಮತಿ ರಾಜು, ಶಸ್ತ್ರ ಚಿಕಿತ್ಸೆಯನ್ನು ನಾವು ಯಶಸ್ವಿಯಾಗಿ ಮುಗಿಸಿದ್ದೇವೆ. ರಾಜುವಿನ ಸ್ಥಿತಿ ಈಗ ಸಮರ್ಪಕವಾಗಿದೆ. ಈಗ ಅವನನ್ನು ಆಪರೇಶನ್ ಥಿಯೇಟರ್‌ನಿಂದ ರಿಕವರಿ ರೂಂಗೆ ವರ್ಗಾಯಿಸಿದ್ದೇವೆ. ಇನ್ನು ಮುಂದಿನ ೪೮ ಗಂಟೆಗಳಲ್ಲಿ ಸರ್ಜರಿಯ ನಿಜವಾದ ಫಲಿತಾಂಶ ಹೊರ ಬೀಳುತ್ತದೆ. ನಾವೀಗಲೇ ಅವನು ಬದುಕ ಬಲ್ಲನೇ ಎಂದು ಹೆಳಲು ಕಷ್ಟವಾಗುತ್ತದೆ. ಇದುವರೆವಿಗಂತೂ ಎಲ್ಲವೂ ತೃಪ್ತಿಕರವಾಗಿದೆಯೆಂದು ಮಾತ್ರ ನಾವು ಹೇಳಬಹುದು. ಕಾದು ನೋಡೋಣ!”

ಇವರು ಅವನಿಗೆ ಹೃತ್ಪೂರ್ವಕ ಧನ್ಯವಾದಗಳನ್ನರ್ಪಿಸಿದರು. ಆಷ್ತು ಹೊತ್ತಿಗಾಗಲೇ, ಬೆಳಕು ಹರಿದಿತ್ತು. ಪ್ರಾತಃರ್ವಿಧಿಗಳನ್ನು ಪೂರೈಸಿಕೊಂಡು ಬರೋಣವೆಂದು, ಕುಸುಮ ಮತ್ತು ಕಿಶೋರ್ ಮನೆಗೆ ತೆರಳಿದರು.
– ೩ –

ಪುನಃ ಅವರು ಆಸ್ಪತ್ರೆಗೆ ಮರಳಿದಾಗ ಬೆಳಿಗ್ಗೆ ೧೧ ಗಂಟೆಯಾಗಿತ್ತು. ಅಷ್ಟು ಹೊತ್ತಿಗೆ ರಾಜುವನ್ನು ರಿಕವರಿ ರೂಂನಿಂದ ತೀವ್ರ ಶುಶ್ರೂಷಾ ಘಟಕಕ್ಕೆ ಬದಲಾಯಿಸಿದ್ದರು. ಸ್ವಾಗತಾಧಿಕಾರಿಣಿಯಲ್ಲಿ ವಿಚಾರಿಸಿಕೊಂಡು ರಾಜುವಿದ್ದ ಕಡೆಗೆ ನಡೆದರು. ರಾಜುವಿಗಿನ್ನೂ ಪ್ರಜ್ಙೆ ಬಂದಿರಲಿಲ್ಲ. ಮುಖದ ಮೇಲಿನ ಗಾಯಗಳನ್ನು ಸ್ವಚ್ಛಗೊಳಿಸಲಾಗಿತ್ತು. ತಲೆಗೆ ದೊಡ್ಡ ಬ್ಯಾಂಡೇಜನ್ನು ಹಾಕಿದ್ದರು. ಮಿಕ್ಕೆಲ್ಲಾ ನಳಿಕೆಗಳು ಮತ್ತು ಮಾನಿಟರ್‌ಗಳು ಹಾಗೇ ಇದ್ದವು. ನರ್ಸ್ ಆಗಾಗ್ಗೆ ಬಂದು ಇವನನ್ನು ನೋಡಿಕೊಂದು ಹೋಗುತ್ತಿದ್ದುದಲ್ಲದೆ, ಇವನ ಮೂಲಭೂತ ಅಂಗಾಂಗಗಳ ಕಾರ್ಯವನ್ನು ತಾನಿರುವ ಕಡೆಯಿಂದಲೇ ಮಾನಿಟರ್ ಮುಖಾಂತರ ಅವಲೋಕಿಸುತ್ತಿದ್ದಳು. ಕುಸುಮ ಮತ್ತು ಕಿಶೋರ್ ಅವನ ಪಕ್ಕದಲ್ಲಿ ಮಾತಿಲ್ಲದೆ ಕೂತಿದ್ದು, ಸಾಕಷ್ಟು ಕಣ್ಣೀರು ಹರಿಸಿ, ಪರಿಸ್ಥಿತಿ ಅಸಹನೀಯವಾದಾಗ, ಲಾಂಜಿಗೈತಂದರು.

ಅದೇ ಸಮಯದಲ್ಲಿ, ಒಬ್ಬ ಪೋಲೀಸಿನವನು ಸ್ವಾಗತಾಧಿಕಾರಿಣಿಯ ಬಳಿ ನಿಂತಿದ್ದು ಕಾಣಿಸಿತು. ಕಿಶೋರನಿಗೆ ಏನೋ ಹೊಳೆದಂತಾಗಿ, ಕುಸುಮಳನ್ನು ಅವನಿರುವಲ್ಲಿಗೆ ಕರೆದುಕೊಂದು ಹೋಗಿ, ಅವನಿಗೆ ನಮಸ್ಕರಿಸಿ, ತಾನು ರಾಜುವಿನ ಅಪಘಾತದ ವರದಿಯನ್ನು ತಿಳಿಯಲು ಬಯಸುವುದಾಗಿ ತಿಳಿಸಿದ. ಅದೃಷ್ಟವಶಾತ್ ಆ ಪೋಲೀಸ್, ಹಿಂದಿನ ದಿನ ರಾಜುವನ್ನು ಆಸ್ಪತ್ರೆಗೆ ಸೇರಿಸಿದವನೇ ಆಗಿದ್ದರಿಂದ, ಅವನಿಗೆ ಅಪಘಾತದ ವಿವರಗಳೆಲ್ಲಾ ತಿಳಿದಿತ್ತು. ಕುಸುಮಳ ನಾಮಧೇಯವನ್ನು ಖಚಿತ ಪಡಿಸಿಕೊಂದ ನಂತರ, ಅಪಘಾತದ ವರದಿಯನ್ನು ಆಮೂಲಾಗ್ರವಾಗಿ ವಿವರಿಸಿದ. ಸಧ್ಯ, ಅಪಘಾತದಲ್ಲಿ ರಾಜುವಿನದೇನೂ ತಪ್ಪಿಲ್ಲವೆಂಬ ಅಂಶ ಕಿಶೋರನಿಗೆ ಸ್ವಲ್ಪ ಸಮಾಧಾನ ತಂದರೂ, ಬೇರೆ ಯಾರದೋ ತಪ್ಪಿಗೆ ತನ್ನ ಪ್ರಾಣ ಮಿತ್ರ ಜೀವ ತೆರಬೇಕಾಗಿ ಬರಬಹುದಲ್ಲ ಎಂದು ಯೋಚಿಸಿ ವಿಷಣ್ಣನಾದ. ಕುಸುಮಳಂತೂ ಜೀವಂತ ಶವವಾಗಿದ್ದಳು; ಸಧ್ಯ, ತನ್ನ ಗಂಡ ಬದುಕಿದರೆ ಸಾಕೆಂದು ಕ್ಷಣ ಕ್ಷಣಕ್ಕೂ ಭಗವಂತನನ್ನು ಪ್ರಾರ್ಥಿಸುತ್ತಿದ್ದಳು. ನಂತರ ಅವರು ಲಾಬಿಗೆ ಬಂದು ಕುಳಿತರು.

ಅಷ್ಟರಲ್ಲಿ ರಾಜುವಿನ ರಕ್ತದೊತ್ತಡ ಬೀಳುತ್ತಾ ಹೋಯಿತು. ಇದನ್ನೇ ಗಮನಿಸುತ್ತಿದ್ದ ನರ್ಸ್ ಕೂದಲೇ ರಾಜುವಿನ ಬಳಿಗೆ ಓಡಿ, ಅವನನ್ನು ತಪಾಸಣೆ ಮಾಡಿದಳು. ಪರಿಸ್ಥಿತಿ ವಿಕೋಪಕ್ಕೆ ಹೋದಂತೆ ಅವಳಿಗನ್ನಿಸಿತು. ಕೂಡಲೇ ಓಡಿ ಹೋಗಿ ವೈದ್ಯರುಗಳನ್ನು ಕರೆತಂದಳು. ಅವರೆಲ್ಲರೂ ಕೂಡಲೇ ಅವನನ್ನು ಸುತ್ತುವರೆದು, ಹೋಗುತ್ತಿರುವ ಪ್ರಾಣವನ್ನು ತಡೆಯಲು ಸರ್ವ ವಿಧದಲ್ಲೂ ಹೆಣಗಾಡಿದರು. ಬಿ.ಪಿ. ಸೊನ್ನೆಯಾಯಿತು, ಉಸಿರಾಟ ನಿಂತೇ ಹೊಯಿತು! ಕೂಡಲೇ ಉಸಿರಾಟವನ್ನು ಪುನರಾರಂಭ ಮಾಡುವ ಯಂತ್ರವನ್ನು ಎದೆಯ ಮೇಲಿಟ್ಟು, “ಧಡ್ ಧಡ್’ ಎಂದು ಆಘಾತ ಕೊಟ್ಟರು. ಅವರೆಷ್ಟು ಪ್ರಯತ್ನಿಸಿದರೂ, ರಾಜುವಿನ ಪ್ರಾಣ ಪಕ್ಷಿ ಹಿಂದಿರಗಲೇ ಇಲ್ಲ!

ಕೂದಲೆ, ಆ ವೈದ್ಯ ಮುಖ್ಯಸ್ಥರೆನಿಸಿದವರು, ಕುಸುಮ ಮತ್ತು ಕಿಶೋರ್ ಕುಳಿತಿರುವೆದೆಗೆ ಬಂದು, ನಿರ್ವಿಕಾರಚಿತ್ತರಾಗಿ ಹೇಳತೊಡಗಿದರು: “ಕೆಲವೇ ಕ್ಷಣಗಳ ಕೆಳಗೆ, ರಾಜುವಿನ ಸ್ಥಿತಿಯಲ್ಲಿ ಕಾಂಪ್ಲಿಕೇಶನ್ ಆಯಿತು. ಮೆದುಳಿನಲ್ಲಿ ತೀವ್ರವಾಗಿ ರಕ್ತ ಹೆಪ್ಪುಗಟ್ಟಿತು. ಮೆದುಳಿನ ’ಓಪನ್ ವೂಂಡ್’ ಸುತ್ತ ತುಂಬ ಊದಿಕೊಂಡುಬಿಟ್ಟಿತು. ಸರ್ಜರಿಯ ನಂತರ ಇದು ಆಗಿದೆ ಹಾಗೂ ರಾಜುವಿನ ದೇಹಸ್ಥಿತಿ ಸಮರ್ಪಕವಾಗಿ ಪ್ರತಿಕ್ರಿಯಿಸಲಿಲ್ಲ. ಇದರ ಪರಿಣಾಮವಾಗಿ – ನಾವೆಷ್ಟೇ ಪ್ರಯತ್ನಿಸಿದರೂ – ರಾಜುವನ್ನು ಉಳಿಸಿಕೊಳ್ಳಾಲಾಗಲಿಲ್ಲ ಎಂದು ತೀವ್ರ ವಿಷಾದಪೂರ್ವಕವಾಗಿ ನಿಮಗೆ ತಿಳಿಸುತ್ತಿದ್ದೇವೆ.”

ಕುಸುಮ ಎಚ್ಚರ ತಪ್ಪಿ ಕೆಳಗುರುಳಿದಳು, ಕಿಶೋರ್ ಸ್ಥಂಭೀಭೂತನಾದ.
*****
ಗ್ರಂಥ ಋಣ: ’ಹೃದಯ’ – ವಿಶ್ವನಾಥ್ ಹುಲಿಕಲ್, ಮನೋಹರ ಗಂಥ ಮಾಲಾ, ಧಾರವಾಡ, ಆಗಸ್ಟ್ ೧೫, ೨೦೦೩

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.