ಮತ್ತೊಬ್ಬನ ಸಂಸಾರ

ನೀರು ಪಂಪುಗಳನ್ನು ಮಾರುವ ನನ್ನ ಸೇಲ್ಸಮನ್ ಕೆಲಸದ ನಿಮಿತ್ತ ಊರೂರು ತಿರುಗುವಾಗ ಎಷ್ಟೋ ಬಾರಿ ಪೀಕೆ ಅಂದರೆ ಪ್ರಮೋದಕುಮಾರ್ ನನಗೆ ಜೊತೆ ಕೊಟ್ಟಿದ್ದರು. ಅವರು ನಮ್ಮ ಕಂಪನಿಯ ಏರಿಯಾ ಸೇಲ್ಸ್ ಮ್ಯಾನೇಜರ್. ನನ್ನ ಕ್ಷೇತ್ರದ ಪ್ರಗತಿಯ ತಪಾಸಣೆ ನಡೆಸುವುದು ನಮ್ಮ ಸಹಪ್ರಯಾಣದ ಮುಖ್ಯ ಕಾರಣ. ಮೋಟರು, ವಾಲ್ವು, ಹಾರ್ಸಪವರ್ ಅಂತ ಮಾತಾಡಿ ಮಾತಾಡಿ, ಪಿಸುಣಾರಿ ಡೀಲರುಗಳ ಜೊತೆ ಹೆಣಗಿ, ಸಂಜೆ ಲಾಡ್ಜಿಗೆ ಹೋಗುವಷ್ಟರಲ್ಲಿ ಸುಸ್ತಾಗಿ ಹೋಗುತ್ತಿತ್ತು. ಪೀಕೆ ಜೊತೆಗಿದ್ದರೆ, ಒಟ್ಟಿಗೇ ಊಟಕ್ಕೆ ಹೋಗುತ್ತಿದ್ದೆವು. ಅನೇಕ ವರ್ಷಗಳಿಂದ ಒಟ್ಟಿಗೇ ಕೆಲಸ ಮಾಡುತ್ತಿರುವ, ಸರಿಸುಮಾರು ಒಂದೇ ವಯಸ್ಸಿನ ನಮ್ಮ ನಡುವೆ ಸ್ನೇಹ ಬೆಳೆದಿತ್ತು. ವರ್ಷವರ್ಷವೂ ಮಾರಾಟ ಏರಿಸುವ ನನ್ನ ಬಗ್ಗೆ ಪೀಕೆಗೆ ಅಭಿಮಾನ. ರೈಲು ನಿಲ್ದಾಣದ ಪಕ್ಕದ ಕ್ವಾರ್ಟರ್ಸಿನಲ್ಲಿ ಕಳೆದ ಪೀಕೆಯ ಬಾಲ್ಯಕಾಲದ ಕತೆಗಳನ್ನು ಕೇಳುವದೆಂದರೆ ನನಗೆ ಖುಷಿ. ಸಿಗ್ನಲ್ಲುಗಳ ಬಗ್ಗೆ ಮತ್ತು ಈಗ ಕಾಣೆಯಾಗಿರುವ ಉಗಿಯಂತ್ರಗಳ ಬಗ್ಗೆ ಅವರಿಗೆ ಎಷ್ಟೊಂದು ತಿಳಿದಿದೆಯೆಂದು ನನಗೆ ಕೌತುಕ. ಹೀಗಾಗಿ ನಮ್ಮ ನಡುವೆ ಯಾವಾಗಲೂ ಧಾರಾಳ ಮಾತು.
‘ಪೀಕೆ, ರೈಲಿನ ಬಗ್ಗೆ ನೀವೊಂದು ಪುಸ್ತಕ ಬರೆಯಬಹುದು. ಪಳಗಿದ ಕತೆಗಾರನ ಹಾಗೆ ನೀವು ಎಷ್ಟೊಂದು ವಿವರಗಳಲ್ಲಿ ಕತೆ ಹೇಳುತ್ತೀರಿ…’ ಎಂದು ನಾನು ಹುರಿದುಂಬಿಸುತ್ತಿದ್ದೆ.
‘ಅಯ್ಯೋ ಬಿಡಿ… ವಿವರ ಇದ್ದ ಮಾತ್ರಕ್ಕೆ ಕತೆಯಾಗುತ್ತದೆಯೇ? ವೈಯಕ್ತಿಕವನ್ನು ಸಾರ್ವತ್ರಿಕಗೊಳಿಸುವ ಕಲೆಯ ಸ್ಪರ್ಶ ಅದಕ್ಕೆ ಬೇಕಲ್ಲ…’ ಅನ್ನುತ್ತಿದ್ದರು. ರೈಲು ಹಳಿಯ ಅಂಚಿನಲ್ಲಿದ್ದ ಅವರ ಮನೆಯ ವಸ್ತುಗಳ ಮೇಲೆ ನಿತ್ಯ ಕೂರುವ ತೆಳ್ಳಗಿನ ಇದ್ದಿಲ ಹುಡಿ, ಜಂತಿಯಿಂದ ತೂಗಿದ ವೈರಿನ ತುದಿಯಲ್ಲಿ ಮಿಣುಕುವ ಮಂದ ಬಲ್ಬು, ಧಡಧಡನೆ ನುಗ್ಗಿ ಬರುವ ಎಕ್ಸಪ್ರೆಸ್ ಗಾಡಿಯ ಗರ್ವದ ಸಿಳ್ಳು, ರಾತ್ರಿಯ ಕಾರ್ಗತ್ತಲಲ್ಲಿ ಕಣ್ಣು ಕುಕ್ಕುವ ಅದರ ಅಲೌಕಿಕ ಹೆಡ್‌ಲೈಟು, ಎಷ್ಟೋ ಸಮಯ ಮುಂಚೆಯೇ, ಹೇಗೋ ಜೀವಕ್ಕೆ ಗೋಚರವಾಗುವ ರೈಲಿನ ಆಗಮನದ ಕಂಪನ – ಇದನ್ನೆಲ್ಲ ಪೀಕೆ ಬಾಲ್ಯಕಾಲದಿಂದ ಹೆಕ್ಕಿ ಹೇಳುವಾಗ ನನಗೆ ಖಾಸನೀಸರ ‘ತಬ್ಬಲಿಗಳು’ ಕತೆ ನೆನಪಾಗುತ್ತಿತ್ತು. ಅಲ್ಲಿ ಮೌನವಾಗಿ ಈರುಳ್ಳಿ ಹೆಚ್ಚುತ್ತ ಕೂತ ಸೊಸೆ ಇಂಥದ್ದೇ ಒಂದು ಮನೆಯಿಂದ ಧಾವಿಸಿ ರೈಲಿನತ್ತ ನುಗ್ಗಿದ್ದಳು. ಆ ಕತೆಯಲ್ಲಿಲ್ಲದ ವಿವರಗಳನ್ನು ಪೀಕೆಯ ಮಾತಿನಲ್ಲಿ ಹುಡುಕುತ್ತಿದ್ದೆ.
ಒಂದು ಸಂಜೆ ಪೀಕೆಗೆ ಖಾಸನೀಸರ ಕತೆಯ ವಿವರಗಳನ್ನು ಹೇಳಿದೆ. ನನ್ನ ಮನಸ್ಸಿನಿಂದ ಮಾಸಿರದ ಸೊಸೆಯ ಪಾತ್ರವನ್ನು ಮಾತಿಗೆ ತಂದೆ: ‘ಮಾತಾಡದೇ ಮಾಡಿ ತೋರಿಸಿಬಿಟ್ಟಳು. ಹಾಗೆ ಮಾಡಿ, ಮಾತಿಗಿರುವ ಶಕ್ತಿಯನ್ನೂ ತೋರಿಸಿದಳು. ತನ್ನ ಕುಹಕದ ಮಾತಿಗೆ ಅಷ್ಟು ಬಲವಿತ್ತೆಂದು ಅತ್ತೆಗೂ ಗೊತ್ತಿರಲಿಲ್ಲ ನೋಡಿ. ಇದೊಂದು ವಿಘಟನೆಯ ಕತೆ. ಎಲ್ಲದರ ವಿಘಟನೆ – ಸಂಸಾರ, ವ್ಯಕ್ತಿಗಳು, ಸಮಾಜ ಇತ್ಯಾದಿ. ಒಂದೇ ಮನೆಯಲ್ಲಿದ್ದವರು, ಒಂದೇ ಕುಟುಂಬದವರು, ಅವರಿಗೇ ಗೊತ್ತಾಗದ ಹಾಗೆ ಪರಸ್ಪರ ಅಪರಿಚಿತರಾಗಿಬಿಡುತ್ತಾರೆ…’
‘ಕಾಲ ಕೂಡಿ ಬರುವದೆಂದರೆ ಇದೇ. ಎಲ್ಲವೂ ಒಂದೇ ಗಳಿಗೆಯಲ್ಲಿ ಒಂದೇ ಕಡೆ ಸೇರಿ ಬರುವುದು. ಎಷ್ಟೋ ವರ್ಷಗಳಿಂದ ಹಲವಾರು ಸಂಗತಿಗಳು ಬೇರೆ ಬೇರೆಡೆ ಸಿದ್ಧವಾಗುತ್ತ, ಒಂದು ಸಂಜ್ಞೆಯಾದದ್ದೇ ಹಠಾತ್ತನೆ ಜರುಗುವುದು…’ ಎಂದು ಪ್ರತಿಕ್ರಿಯಿಸಿದ ಪೀಕೆ ಗಂಭೀರ ಮೂಡಿನಲ್ಲಿದ್ದರು. ಮಾತಿನದು ಮಾತ್ರವಲ್ಲ, ಮೌನದ ಶಕ್ತಿಯ ಬಗ್ಗೆಯೂ ಹೇಳುತ್ತ, ವಿಘಟನೆ ಎಂಬ ಶಬ್ದವನ್ನು ಮತ್ತೆ ಮತ್ತೆ ಮುಂಚೂಣಿಗೆ ತರುತ್ತ, ಅವರ ಕಾನಪುರದ ಮನೆಯ ಪಕ್ಕದಲ್ಲೇ ಇದ್ದ ಜಾನಕಿರಾಮ ಎಂಬವರ ಬಗ್ಗೆ ಮಾತಾಡಿದರು.
ಪೀಕೆಯ ಅಪ್ಪ ಕಾನಪುರದ ರೇಲ್ವೆ ಆಫೀಸಿಗೆ ವರ್ಗ ಮಾಡಿಸಿಕೊಂಡು ಬಂದಿದ್ದು ಮಕ್ಕಳ ಶಿಕ್ಷಣದ ಸಲುವಾಗಿ. ಸಣ್ಣ ಸಣ್ಣ ಊರುಗಳಲ್ಲಿ ಸ್ಟೇಶನ್ ಮಾಸ್ತರ್ ಆಗಿ ಇಷ್ಟು ಕಾಲ ಕಳೆದಿದ್ದಕ್ಕೆ ಫಲವಾಗಿಯಾದರೂ ಈ ಪೋಸ್ಟಿಂಗ್ ಬೇಕೆಂದು ಯಾರು ಯಾರನ್ನೋ ಕಾಡಿ ಬೇಡಿ ವರ್ಗ ಮಾಡಿಸಿಕೊಂಡಿದ್ದರು. ಕಾನಪುರದ ಹಳೆಯ ಬಡಾವಣೆಯ ಒತ್ತೊತ್ತು ಮನೆಗಳ ಸಾಲಿನಲ್ಲಿ, ಪೀಕೆಯ ಪಕ್ಕದ ಮನೆಯೇ ಜಾನಕಿರಾಮ ಶ್ರೀವಾಸ್ತವ ಅವರದು. ಜಾನಕಿರಾಮ ಎಂಬ ಹೆಸರು ಶ್ರೀವಾಸ್ತವರಲ್ಲಿ ಅತಿವಿರಳ. ಮದ್ರಾಸಿನಲ್ಲಿ ಸರ್ವೀಸಿನಲ್ಲಿದ್ದ ಅವರ ಅಪ್ಪನ ಇಚ್ಛೆಯಂತೆ ಇಟ್ಟ ಹೆಸರು.
ಎರಡೂ ಮನೆಗಳು, ಆ ಕಡೆಯ ಪಿಸುಮಾತು ಸಹ ಇತ್ತ ಕೇಳುವಷ್ಟು ಹತ್ತಿರ. ಸೇಲ್ಸ್‌ಮನ್ ಆಗಿದ್ದ ಜಾನಕಿರಾಮ ನಿಯಮಿತವಾಗಿ ಪ್ರವಾಸ ಹೋಗುತ್ತಿದ್ದರು. ಪೀಕೆಗೆ ಅದೊಂದು ಕುತೂಹಲಕಾರಿಯೂ, ರೋಚಕವೂ ಆದ ಕೆಲಸವಾಗಿ ತೋರುತ್ತಿತ್ತು. ಪ್ರತಿ ಬುಧವಾರ ಕಪ್ಪು ಬ್ಯಾಗಿನಲ್ಲಿ ಬಟ್ಟೆ ತುಂಬಿಕೊಂಡು ಹೊರಟರೆ ಶನಿವಾರ ಸಂಜೆ ಹಿಂತಿರುಗುತ್ತಿದ್ದರು. ತಿಂಗಳ ನಾಲ್ಕು ವಾರದಲ್ಲಿ ನಾಲ್ಕು ದಿಕ್ಕುಗಳಿಗೆ ಪ್ರಯಾಣ ಮಾಡುತ್ತಾರೆ ಎಂದು ಜನ ಅವರ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು.
ಚಳಿಯಿರಲಿ, ಮಳೆ ಬರಲಿ, ಮಂಜು ಮುಸುಕಿರಲಿ, ಅವರು ಬುಧವಾರ ಬೆಳಿಗ್ಗೆ ಎಡಗೈಯಲ್ಲಿ ಬ್ಯಾಗು ಹಿಡಿದು ಹೊರಟರೇ. ಆ ದಿನ ಬೆಳಗಿನ ಐದೂವರೆಗೆ ಅವರ ಮನೆಯಿಂದ ಸದ್ದುಗಳು ಶುರುವಾಗುವವು. ಉಳಿದ ದಿನಗಳಲ್ಲಿ ಎಂಟೂವರೆಯ ಹೊತ್ತಿನ ಸದ್ದುಗದ್ದಲದಲ್ಲಿ ಅಡಗಿ ಹೋಗುವ ಜಾನಕಿರಾಮರ ಪೂಜೆಯ ಮಂತ್ರಗಳು, ಬುಧವಾರ ಮಾತ್ರ, ಬೆಳಗಿನ ನಿಶ್ಯಬ್ದದಲ್ಲಿ ದೇವರಿಗೆ ಫಿರ್ಯಾದು ಕೊಡುವವನ ಗೊಣಗಾಟದ ಹಾಗೆ ಮನೆಯಾಚೆ ಕೇಳುತ್ತಿದ್ದವು. ಹಿನ್ನೆಲೆಯಲ್ಲಿ ಅಡಿಗೆ ಮನೆಯ ಪಾತ್ರೆಗಳ ತಾಕಲಾಟದ ರಿಂಗಣವಿರುತ್ತಿತ್ತು. ಏಳು ಗಂಟೆಗೆ ಸರಿಯಾಗಿ ಅವರು ಮನೆಯಿಂದ ಹೊರಡುವರು. ಬ್ಯಾಗಿನ ಭಾರದಿಂದಲೋ ಏನೋ, ಅವರ ಎಡಭುಜ ತುಸು ಕೆಳಗೆ ವಾಲಿದಂತೆ ಕಾಣಿಸುವುದು. ನಡುವೆ ಬೈತಲೆ ತೆಗೆದು ಬಾಚಿದ ಎಣ್ಣೆಗೂದಲು, ಬಿಳಿಯ ಶರ್ಟು, ಕಪ್ಪು ಪ್ಯಾಂಟು, ಕಪ್ಪು ಶೂ ಧರಿಸಿ, ಚಳಿಗಾಲವಾಗಿದ್ದರೆ ಮೇಲೊಂದು ಕೋಟು ಹಾಕಿಕೊಂಡು, ಬೆಳಗಿನ ಮಂಜಿನಲ್ಲಿ ಅವರು ಕರಗಿ ಹೋಗುವ ನೋಟ, ಸಿನೇಮಾದ ಕೊನೆಯ ದೃಶ್ಯದಲ್ಲಿ ತೋರಿಸುವ ತ್ಯಾಗಮಯಿ ನಾಯಕನ ನಡಿಗೆಯಂತೆ ತೋರುವುದು. ಶನಿವಾರ ಸಂಜೆ ಅವರು ಪ್ರವಾಸದಿಂದ ಮರಳಿ ಬರುವರು. ಬೀದಿಯ ಯಾರ ಜೊತೆಯೂ ಅಗತ್ಯವಿಲ್ಲದೇ ಒಂದೇ ಒಂದು ಮಾತನ್ನೂ ಆಡದ ಜಾನಕಿರಾಮ, ಇಡೀ ಭಾನುವಾರ, ಒಂದಾದ ಮೇಲೊಂದು ಪೇಪರು ಓದುತ್ತ ಮನೆಯೊಳಗೇ ಕಳೆಯುವರು. ವಾರದ ಮೊದಲ ಎರಡು ದಿನ ಅವರಿಗೆ ಕಾನಪುರ ಶಹರದಲ್ಲಿ ಕೆಲಸ. ಬುಧವಾರದಿಂದ ಮತ್ತೆ ಅವರ ಪ್ರವಾಸ ಶುರು. ಈ ಮೌನಮುನಿ, ಅದು ಹೇಗೆ ಸೇಲ್ಸಮನ್ ಆದನೋ ಎಂದು ಪೀಕೆಯ ಅಪ್ಪ ಆಗಾಗ ಅಂದದ್ದುಂಟು.
ಜಾನಕಿರಾಮರ ಹೆಂಡತಿಗೆ ಯಾವಾಗಲೂ ಹೊರೆಗಟ್ಟಲೇ ಮನೆ ಕೆಲಸ. ಯಾವುದರಿಂದಲೋ ತಪ್ಪಿಸಿಕೊಳ್ಳುತ್ತಿರುವ ಹಾಗೆ ಸದಾ ಕಾರ್ಯನಿರತಳಾಗಿರುತ್ತಿದ್ದಳು. ವಿರಾಮದ ಸಾವಧಾನದಲ್ಲಿ ಹುಟ್ಟುವ ಅವಕಾಶಕ್ಕೆ ಅಂಜಿದಂತಿದ್ದ ಅವಳು ಒಂದು ಕ್ಷಣ ಕೂಡ ಏನೂ ಮಾಡದೇ ಕೂತಿದ್ದನ್ನು ಕಂಡವರಿಲ್ಲ. ಬೀದಿಯ ಯಾವುದೇ ಮನೆಯವರಿಗೆ ಸಹಾಯ ಬೇಕಾದರೂ ತಾನೇ ಮುಂದಾಗಿ ಒದಗಿ ಬರುವಳು.
ಜಾನಕಿರಾಮರಿಗೆ ಇಬ್ಬರು ಮಕ್ಕಳು. ಮಗ ಅಶೋಕ ಪೀಕೆಯ ವಯಸ್ಸಿನವನೇ. ಮಗಳು ಎರಡು ವರ್ಷ ಚಿಕ್ಕವಳು. ಹೆಸರು ನವನೀತಾ. ಅಪ್ಪ ಮನೆಯಲ್ಲಿರುವಷ್ಟು ಹೊತ್ತು ಬಾಲ ಮುದುರಿಕೊಂಡು ಇರುತ್ತಿದ್ದ ಅಶೋಕ, ಅಪ್ಪನ ಬೆನ್ನು ನೋಡಿದ್ದೇ ತನ್ನ ಪ್ರತಾಪ ಶುರು ಮಾಡುತ್ತಿದ್ದ. ಅವನ ಕೂಗಾಟ ರಂಪ ಜೋರು ಎಲ್ಲ ಅಮ್ಮ ಮತ್ತು ತಂಗಿಯ ಮೇಲೆ. ಅಪ್ಪ ಇಲ್ಲದ ದಿನಗಳಲ್ಲಿ ಹಾಸಿಗೆಯಿಂದಲೇ ಅವನ ಆಜ್ಞೆಗಳು ಶುರುವಾಗುತ್ತಿದ್ದವು. ಉಳಿದ ದಿನಗಳಲ್ಲಿ ಮಾತ್ರ ಸದ್ದಿಲ್ಲದೇ ಎದ್ದು ಓದಲು ಕೂತು, ತಾನೇ ತಯಾರಾಗಿ ಶಾಲೆಗೆ ಹೊರಡುವನು. ಅಪ್ಪನಿದ್ದಾಗ ಸಂಭಾವಿತನಂತಿರುವವನು, ಇಲ್ಲದಾಗ ಮಾತ್ರ ಎಲ್ಲರ ತಾಳ್ಮೆಯ ಪರೀಕ್ಷೆಯನ್ನು ಸತತ ಮಾಡುತ್ತಿದ್ದನು. ಪೀಕೆಯನ್ನು ಗೋಳು ಹುಯ್ದುಕೊಳ್ಳುವದಕ್ಕಂತೂ ಲೆಕ್ಕವಿಲ್ಲ. ಒಂದು ಸಲ, ಪೀಕೆಯ ನೋಟ್‌ಬುಕ್ಕಿನಲ್ಲಿ ಶಾಲೆಯ ಹುಡುಗಿಯ ಹೆಸರಿನಲ್ಲಿ ತಾನೇ ಬರೆದ ಪತ್ರ ಇಟ್ಟು ಪೀಕೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸಿದ್ದ. ಪೆನ್ನು ಕದಿಯುವುದು, ನೋಟ್‌ಬುಕ್ ಅಡಗಿಸಿಡುವದು, ಶರ್ಟಿಗೆ ಹಿಂದಿನಿಂದ ಶಾಯಿ ಮೆತ್ತುವುದು, ಹುಡುಗಿಯರಿಗೆ ಕೇಳಿಸುವಂತೆ ಪೀಕೆಯ ಹೆಸರು ಹಿಡಿದು ಅಶ್ಲೀಲ ಮಾತುಗಳನ್ನು ಕೂಗುವುದು – ಹೀಗೆ ಜಾಡು ಬಿಡದೇ ನಡೆಸುತ್ತಿದ್ದ ಅವನ ಹಿಂಸಾಚಾರವನ್ನು ಯಾರಲ್ಲಿಯೂ ಹೇಳಿಕೊಳ್ಳುವಂತಿರಲಿಲ್ಲ. ಬಿಡುವಿಲ್ಲದೇ ದುಡಿಯುತ್ತ ಊರೂರು ಸುತ್ತುವ ಜಾನಕಿರಾಮರನ್ನು, ಮಕ್ಕಳ ಪುಂಡಾಟಿಕೆಯ ಬಗ್ಗೆ ದೂರು ಹೇಳಲು ಭೇಟಿಮಾಡುವುದು ಕ್ಷುಲ್ಲಕವೆನ್ನಿಸುತ್ತಿತ್ತು. ಎಷ್ಟೋ ಸಲ ಶನಿವಾರದವರೆಗೆ ಕಾಯುವಲ್ಲಿ ಸಿಟ್ಟು ಇಳಿದಿರುತ್ತಿತ್ತು. ಒಂದೆರಡು ಬಾರಿ ಅವರ ತನಕ ದೂರು ಒಯ್ದವರು, ಜಾನಕಿರಾಮರ ದೀರ್ಘ ಮೌನವನ್ನು ಭರಿಸಲಾಗದೇ, ಇನ್ನು ಅವರ ಬಳಿ ಈ ಸಂಗತಿ ಎತ್ತದಿರುವ ನಿರ್ಧಾರ ಕೈಗೊಂಡಿದ್ದರು.
ಅಶೋಕನ ತಂಗಿ ನವನೀತಾಳ ಸಮಯವೆಲ್ಲ ತನ್ನ ಪಾಡಿಗೆ ತಲೆ ಬಾಚಿಕೊಳ್ಳುತ್ತಲೋ, ಮೆಹಂದಿ ಹಚ್ಚಿಕೊಳ್ಳುತ್ತಲೋ, ಉಗುರಿಗೆ ಬಣ್ಣ ಹಚ್ಚುತ್ತಲೋ ಕಳೆದು ಹೋಗುತ್ತಿತ್ತು. ಅಣ್ಣನಿಂದಲೇ ಕಲಿತವಳ ಹಾಗೆ, ಅಪ್ಪ ಇದ್ದಾಗ ಮಾತ್ರ ಅಮ್ಮನ ಕೆಲಸದಲ್ಲಿ ಕೈಕೂಡಿಸುವ ಶಾಸ್ತ್ರ ಮಾಡುವಳು. ಇಲ್ಲದಿದ್ದರೆ ಅಮ್ಮ ದುಡಿದು ಬಸವಳಿದರೂ ಗಮನಿಸದೇ, ಭೂಲೋಕ ವಿಹಾರಕ್ಕೆ ಬಂದ ಗಂಧರ್ವ ಕನ್ನಿಕೆಯಂತೆ ವರ್ತಿಸುತ್ತಿದ್ದಳು. ಕೆಲವೊಮ್ಮೆ ಅಶೋಕ ಅವಳನ್ನು ನಿಗ್ರಹಿಸಲು ನೋಡುತ್ತಿದ್ದ. ಅವಳ ಅಲಂಕಾರಗಳನ್ನು, ಖುಷಿಯ ಲಹರಿಗಳನ್ನು ಕಂಡರೆ ಸಂಶಯದಿಂದ ಉರಿಯುತ್ತಿದ್ದ. ಅವಳು ಮಾತ್ರ ತಾನು ಬೇರೆಲ್ಲೋ ಸಂದವಳಂತೆ, ಎಲ್ಲದರಿಂದ ಅಭಾದಿತಳಾಗಿ ಉಳಿಯುತ್ತಿದ್ದಳು.
ಅಶೋಕ ಕಾಲೇಜಿಗೆ ಸೇರಿಕೊಳ್ಳುವ ದಿನ ಬಂತು. ಅವನ ಹತ್ತನೇ ಕ್ಲಾಸಿನ ಅಂಕಗಳನ್ನು ನೋಡಿ, ಇವನು ಹೇಗೋ ಬಿ‌ಎ ಮುಗಿಸಿದರೆ ಸಾಕು ಎಂದು ಜಾನಕಿರಾಮ ಬಾಯಿಬಿಟ್ಟೇ ಹೇಳಿದರು. ಶಾಲೆಯಂತೆ ಮಾಸ್ತರರ ಕಣ್ಣಳತೆಯಲ್ಲಿಯೇ ಇರಬೇಕಾದ ಅಗತ್ಯವಿಲ್ಲದ್ದರಿಂದ ಕಾಲೇಜಿಗೆ ಬಂದೊಡನೆ ಅಶೋಕನ ಸ್ವಾತಂತ್ರ್ಯದ ಕಲ್ಪನೆ ಬದಲಾಯಿತು. ಒಂದೇ ವಾರದಲ್ಲೇ ಅವನಿಗೆ ಕಾಲೇಜಿನ ರುಚಿ ಹತ್ತಿತು. ಅತ್ಯಂತ ಕಡಿಮೆ ಶ್ರಮ ಬೇಡುವ ವಿಷಯಗಳನ್ನು ಓದುವ ಉದ್ದೇಶದಿಂದ ಅವನು ಹಿಂದಿಯನ್ನು ಆರಿಸಿಕೊಂಡಿದ್ದ. ಪಠ್ಯ ಒಂದೇ ಆದುದರಿಂದ ಹಿಂದಿ ಭಾಷೆಯ ಕ್ಲಾಸನ್ನು ಮಾತ್ರ ಸಾಯನ್ಸ್ ವರ್ಗದ ಜೊತೆ ಸೇರಿಸಿದ್ದರು. ಹಾಗಾಗಿ ಆ ದೊಡ್ಡ ಕ್ಲಾಸಿಗೆ ಹಾಜರಿ ತಗೊಳ್ಳುವದೆಂದರೆ ಕಷ್ಟದ ಕೆಲಸ.
ಕ್ಲಾಸು ತಪ್ಪಿಸಿಕೊಳ್ಳುವುದನ್ನು ಶೌರ್ಯದ ಪ್ರತೀಕವೆಂದು ಭಾವಿಸಿದ್ದರಿಂದ ಕಾಲೇಜು ಶುರುವಾಗಿ ಹತ್ತು ದಿನಗಳಾದರೂ ಅಶೋಕ ಹಿಂದಿ ಕ್ಲಾಸಿಗೆ ಹೋಗಿರಲಿಲ್ಲ. ಕೊನೆಗೂ ಹೋಗಲು ಮನಸ್ಸು ಮಾಡಿದ್ದು ಸಾಯನ್ಸ್ ಹುಡುಗಿಯರೂ ಸಹ ಅಲ್ಲಿ ಬರುತ್ತಾರೆಂಬ ಆಕರ್ಷಣೆಯಿಂದ. ಆ ಮೊದಲ ದಿನ ‘ಅಶೋಕ ಶ್ರೀವಾಸ್ತವಾ’ ಎಂದು ಹಾಜರಿ ಕರೆದಾಗ ಇಬ್ಬರು ‘ಯಸ್ ಸರ್’ ಅಂದರು. ಇನ್ನೊಬ್ಬರ ಹೆಸರಿನಲ್ಲಿ ಹಾಜರಿ ಹಾಕುವವರು ಸಿಕ್ಕಿಬೀಳುವ ಕ್ರಮವೇ ಇದಾಗಿದ್ದರಿಂದ ಮೇಷ್ಟ್ರು ಇನ್ನೊಮ್ಮೆ ಹೆಸರು ಕರೆದು, ಹಾಜರಿ ಪುಸ್ತಕದಿಂದ ತಲೆ ಎತ್ತಿ ಎದುರಿಗಿದ್ದ ವಿದ್ಯಾರ್ಥಿ ಸಮೂಹವನ್ನು ನೋಡಿದರು. ಕ್ಲಾಸಿನ ಎರಡು ಕಡೆಯಿಂದ ಯಸ್ ಸರ್ ಎಂಬ ದನಿ ಬಂತು. ‘ಎದ್ದು ನಿಲ್ಲಿ’ ಎಂದಿದ್ದೇ ಇಬ್ಬರು ಹುಡುಗರು ಎದ್ದರು. ಅಶೋಕ ತನ್ನ ಹೆಸರಿನ ಇನ್ನೊಬ್ಬನನ್ನು ತುಸು ಅಸಮಾಧಾನದಿಂದ ನೋಡಿದ. ಆ ಹುಡುಗ ಇವನನ್ನು ಕೌತುಕದಿಂದ ನೋಡತೊಡಗಿದ.
‘ಏನಪ್ಪಾ ನಿನ್ನ ನಡುವಿನ ಇನಿಶಿಯಲ್’ ಎಂದು ಮೇಷ್ಟ್ರು ಅಶೋಕನನ್ನು ಕೇಳಿದರು.
‘ಜೆ ಸರ್’
‘ನಿನ್ನದೇನು?’ ಎಂದು ಮೇಷ್ಟ್ರು ಇನ್ನೊಬ್ಬನನ್ನು ಕೇಳಿದರು.
‘ಜೆ ಸರ್’ ಅಂತ ಅವನು ಅಂದದ್ದೇ ಇಡೀ ಕ್ಲಾಸು ಗುಸುಗುಸು ನಕ್ಕಿತು.
ಮೇಷ್ಟ್ರಿಗೆ ಅಪಾಯದ ಸುಳಿವು ಹತ್ತಿತು.
‘ಜೆ ಅಂದರೆ?’
‘ಜಾನಕಿರಾಮ್ ಸರ್’
‘ನಿನ್ನದು?’
‘ಅದೇ ಸರ್. ಜಾನಕಿರಾಮ್’
ಈ ಸಲ ಇಡೀ ಕ್ಲಾಸು ಭೋರ್ಗರೆಯಿತು. ಇವರು ಬೇಕೆಂದೇ ಹರಾಮಖೋರತನ ಮಾಡುತ್ತಿದ್ದಾರೇನೋ ಎಂದು ಮೇಷ್ಟ್ರಿಗೆ ಅನುಮಾನವಾಯಿತು. ಹಾಜರಿ ಪುಸ್ತಕದಲ್ಲಿ ಮತ್ತೆ ನೋಡಿದರು. ಅಲ್ಲಿ ಇಬ್ಬರು ಅಶೋಕ ಶ್ರೀವಾಸ್ತವರಿದ್ದರು.
‘ಯಾವ ಸೆಕ್ಷನ್ನು?’ ಎಂದು ಅಳುಕಿನಿಂದಲೇ ಕೇಳಿದರು.
‘ನನ್ನದು ಸಾಯನ್ಸ್ ಸರ್’ ಎಂದ ಮುಂದೆ ನಿಂತ ಹುಡುಗ.
‘ನನ್ನದು ಆರ್‍ಟ್ಸ್’
ಸದ್ಯ ಇಷ್ಟಾದರೂ ವ್ಯತ್ಯಾಸವಿದೆಯೆಂದು ಅವರಿಗೆ ಸಂತೋಷವಾಯಿತು. ಈ ಜಾಲದಿಂದ ಹೊರಹೋದರೆ ಸಾಕಾಗಿತ್ತು. ‘ಸರಿ ನಿನಗೆ ಸಾಯನ್ಸ್ ಅಶೋಕ ಮತ್ತು ಅವನಿಗೆ ಆರ್‍ಟ್ಸ್ ಅಶೋಕ ಎಂದು ಕರೆಯುತ್ತೇನೆ’ ಎಂದು ಅಷ್ಟಕ್ಕೇ ಪ್ರಸಂಗ ಮುಗಿಸಿದರು. ಹಾಜರಿ ಪುಸ್ತಕದಲ್ಲಿ ಹುಡುಗರ ಹೆಸರಿನ ಮುಂದೆ ಸಣ್ಣ ಗುರುತು ಹಾಕಿಕೊಂಡರು.
ಆ ದಿನ ಮಧ್ಯಾಹ್ನ ಆ ಇನ್ನೊಬ್ಬ ಹುಡುಗ ಕ್ಯಾಂಟೀನಿನಲ್ಲಿ ಕಾಣಿಸಿದಾಗ ಜೊತೆಯಲ್ಲಿದ್ದ ಹುಡುಗರು ‘ನೋಡೋ ನಿನ್ನ ಡಬಲ್ ರೋಲ್’ ಎಂದು ಅಶೋಕನನ್ನು ರೇಗಿಸಿದರು. ಆತ ಒಬ್ಬನೇ ಕೂತು ಪೂರಿ ತಿನ್ನುತ್ತಿದ್ದ. ಬೆಳಗಿನ ಘಟನೆಯಿಂದ ಅಶೋಕನಿಗೆ ರೋಸಿಹೋಗಿತ್ತು. ಹುಂಬತನದ ಮತ್ತಿನಲ್ಲಿ ಅಶೋಕ ಅವನ ಬಳಿ ಹೋಗಿ ‘ಹಲೋ, ನನ್ನ ಡಬಲ್ ರೋಲ್…’ ಎಂದು ವಿನಾಕಾರಣ ಜಗಳಕ್ಕೆ ಕಾಲು ಕೆದರಿದ.
ಅವನು ಹಲೋ ಅಂದು, ತಲೆಯಾಡಿಸಿ ಕ್ಷಣಕಾಲ ತಡೆದು, ಪೂರಿಯ ಮತ್ತೊಂದು ತುಂಡು ಬಾಯಿಗಿಟ್ಟು ಅಗಿಯುತ್ತ ಇವನ ಮೋರೆ ನೋಡಿದ. ಹೇಗೆ ಜಗಳ ಮುಂದುವರಿಸಬೇಕೋ ತಿಳಿಯದೇ ಅಶೋಕ ತಡವರಿಸುತ್ತ, ‘ನಿನ್ನ ಅಪ್ಪನ ಹೆಸರೇನು?’ ಅಂದ.
ಆತ ಹೆದರಿದವನಂತೆ ತೋರಿದರೂ, ಶಾಂತವಾಗಿ ಉತ್ತರಿಸಿದ. ‘ಜಾನಕಿರಾಮ ಶ್ರೀವಾಸ್ತವ’.
‘ಅವರೇನು ಮಾಡುತ್ತಾರೆ?’ ಅಶೋಕ ಪ್ರಯಾಸದಿಂದ ಕೇಳಿದ.
‘ಸೇಲ್ಸ್‌ಮನ್’ ಎಂದು ಅವನು ಹೇಳಿದ್ದೇ ಅಶೋಕನ ಬಾಯಿ ಬಂದಾಗಿಬಿಟ್ಟಿತು. ಇನ್ನೂ ಹೆಚ್ಚಿಗೆ ವಿವರ ಕೇಳುವ ಧೈರ್ಯವಾಗಲಿಲ್ಲ. ತನ್ನನ್ನು ರೇಗಿಸಲು ಇವನು ಹೀಗೆ ಹೇಳುತ್ತಿಲ್ಲ ತಾನೆ ಅನಿಸಿತು. ಮೋರೆ ನೋಡಿದರೆ ಸಂಭಾವಿತನಂತೆ ಕಾಣುತ್ತಿದ್ದ. ತಲೆತಗ್ಗಿಸಿ ಅವನು ಸಾವಧಾನವಾಗಿ ಪೂರಿಯ ಇನ್ನೊಂದು ತುಂಡು ಬಾಯಿಗಿಟ್ಟುಕೊಂಡ.

* * *

ಮನೆಗೆ ಬಂದ ನಂತರ ಅಶೋಕ ಅಮ್ಮನ ಮೇಲೆ ವಿನಾಕಾರಣ ರೇಗಾಡಿದ. ಆ ದಿನ ಬುಧವಾರ. ಜಾನಕಿರಾಮ ಶ್ರೀವಾಸ್ತವ ವಾರದ ಪ್ರವಾಸದಲ್ಲಿದ್ದರು. ಅವರು ಬರುವುದು ಶನಿವಾರ ಸಂಜೆಯೇ. ಬಂದು, ಮಾಡಬೇಕಾದ್ದೇನೂ ಇಲ್ಲ. ಆದರೂ.
ಅಮ್ಮನ ಬಳಿ ಹೇಳಲೇ ಅಂದುಕೊಂಡ. ಏನು ಹೇಳುವುದೋ ಗೊತ್ತಾಗಲಿಲ್ಲ. ತಂಗಿಯನ್ನು ನೋಡಿ ಸಿಡಿಮಿಡಿ ಮಾಡಿದ. ಸಂಜೆ ಹೊರಗೆ ಹೋದವನು ಬಹಳ ಹೊತ್ತು ಒಬ್ಬನೇ ಸುತ್ತಾಡಿ ಮರಳಿದ.
ಆದರೆ, ಮಾರನೆಯ ದಿನವೇ, ಸುದ್ದಿ ಬಿರುಗಾಳಿಯಂತೆ ಹರಡಿ ಮನೆಯವರೆಗೂ ಬಂದು ತಲುಪಿತು. ಸಾರಾಂಶ ಇಷ್ಟೇ: ಜಾನಕೀರಾಮನಿಗೆ ಎರಡು ಸಂಸಾರಗಳಿವೆ. ಕಳೆದ ಇಪ್ಪತ್ತು ವರ್ಷಗಳಿಂದ ಇದು ನಡೆದಿದೆ. ಇದೇ ಊರಿನ ಇನ್ನೊಂದು ಕೊನೆಯಲ್ಲಿ ಆ ಮನೆ ಇದೆ. ಎರಡೂ ಸಂಸಾರಗಳಲ್ಲಿ ಮಕ್ಕಳ ಹೆಸರುಗಳು ಸಹ ಒಂದೇ ಆಗಿವೆ. ಇಬ್ಬರೂ ಮಕ್ಕಳು ಒಂದೇ ಕಾಲೇಜಿಗೆ ಹೋದಾಗ ಹಾಜರಿ ತಗೊಳ್ಳುವ ಹೊತ್ತಿಗೆ ಕಳ್ಳ ಸಿಕ್ಕಿಬಿದ್ದಿದ್ದಾನೆ. ಇದು ಎಂಟನೆಯ ಆಶ್ಚರ್ಯವಲ್ಲದೇ ಮತ್ತೇನು? ವಾರವಾರವೂ ಟುಣುಟುಣು ಕುಣಕೊಂಡು ಹೋಗುತ್ತಿದ್ದುದು ಇದಕ್ಕೇ ಏನು? ಪಾಪ, ಹೆಂಡತಿ ಮಕ್ಕಳು ಈಗ ಈ ಊರಲ್ಲಿ ಹೇಗೆ ಮೋರೆ ಎತ್ತಿ ನಡೆದಾಡುತ್ತಾರೆ?

ಸುದ್ದಿ ಕಿವಿಗೆ ಬಿದ್ದಾಗ ಮೊದಮೊದಲು ಯಾರೂ ನಂಬಲಿಲ್ಲ. ಸರಿಯಾಗಿ ಮುಖ ಎತ್ತಿ ತನ್ನ ಹೆಂಡತಿಯ ಮೋರೆಯನ್ನೇ ನೋಡದವನು, ಬೇರೊಂದು ಸಂಸಾರ, ಅದೂ ಗುಟ್ಟಾಗಿ ನಡೆಸುತ್ತಿದ್ದಾನೆಂದರೆ! ಇಷ್ಟು ವರ್ಷ ಜಾಗರೂಕತೆಯಿಂದ ಇದ್ದವನು ಈಗ ಯಾಕೆ ಉದಾಸೀನ ಮಾಡಿ ಒಂದೇ ಕಾಲೇಜಿಗೆ ಇಬ್ಬರನ್ನೂ ಸೇರಿಸಿದ. ಗುಟ್ಟಾಗಿಡುವ ಇರಾದೆಯಿದ್ದರೆ ಒಬ್ಬ ಮಗನನ್ನು ಇನ್ನೊಂದು ಕಾಲೇಜಿಗೆ ಕಳಿಸಬಹುದಿತ್ತಲ್ಲ. ಅವನಿಗೆ ಇನ್ನೊಂದು ಸಂಸಾರ ಇರುವ ಸಾಧ್ಯತೆಯ ಎದುರಿಗೆ ಈ ತುಬ್ಬುಗಾರಿಕೆ ಮಾಡಿದವರು ಯಾರು, ಕಾಲೇಜಿನಲ್ಲೇ ಇದು ಮೊಟ್ಟ ಮೊದಲ ಬಾರಿಗೆ ಬೆಳಕಿಗೆ ಬಂದಿದ್ದೋ, ಅದನ್ನು ಮನೆಯವರೆಗೂ ಬಂದು ಅವನ ಹೆಂಡತಿಗೆ ಹೇಳಿದವರು ಯಾರು ಇದೆಲ್ಲ ಅಸ್ಪಷ್ಟವಾಗಿಯೇ ಉಳಿಯಿತು.
ಶನಿವಾರ ಸಂಜೆ ಜಾನಕೀರಾಮ ಪ್ರವಾಸದಿಂದ ಹಿಂತಿರುಗುವ ಹೊತ್ತಿಗೆ ಅವರ ಹೆಂಡತಿ ಮತ್ತು ಮಕ್ಕಳು ಸ್ಫೋಟಕ್ಕೆ ಕಾದ ಜ್ವಾಲಾಮುಖಿಯಂತೆ ಕಾಯುತ್ತಿದ್ದರು. ಅವರು ಬಂದು ಬಟ್ಟೆಗಳನ್ನು ಬ್ಯಾಗಿನಿಂದ ತೆಗೆದು ಒಗೆಯಲು ಹಾಕಿದರು. ಸ್ನಾನ ಮಾಡಿ ಬಂದರು. ಗಂಡನನ್ನು ಕಣ್ಣಾರೆ ಕಾಣುವ ಮೊದಲು ನಾನಾ ಬಗೆಯಲ್ಲಿ ತಯಾರಿ ಮಾಡಿಕೊಂಡ ಮಾತುಗಳೆಲ್ಲ ಅವರ ಹೆಂಡತಿಯ ಗಂಟಲಲ್ಲೇ ಉಳಿದುಬಿಟ್ಟವು. ಎರಡು ಬಾರಿ ಹೇಳಲು ಹೋದರೂ ಆಗದೇ ಚಹಾ ಕೊಡಲು ಹೋದಾಗ ಹೇಳಲೇ ಬೇಕು ಅಂದುಕೊಂಡು, ಹಾಗೆ ನಿಶ್ಚಯಿಸಿದೊಡನೆ ಕೈ ನಡುಗಿ, ಬಶಿಯೊಳಗಿದ್ದ ಕಪ್ಪು ಗಡಗಡ ಸದ್ದು ಮಾಡಿತು. ಬಾಯಿ ತೆರೆಯಲು ವಿಫಲಳಾದ ಅವಳು ಸೀದಾ ದೇವರ ಕೋಣೆಗೆ ಹೋಗಿ, ದೇವರ ಮುಂದೆ ಕೂತು ಅಳತೊಡಗಿದಳು. ಸ್ವಲ್ಪ ಹೊತ್ತಿನ ಬಳಿಕ ಒಳಗೆ ಬಂದ ಜಾನಕೀರಾಮ ‘ಏನಾಯಿತು?’ ಅಂದರು. ಬಿಕ್ಕಳಿಸುತ್ತ ಅವಳು ತುಂಡು ತುಂಡು ಮಾತುಗಳಲ್ಲಿ ಹೇಳಿದ್ದನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಅವರಿಗೆ ಸ್ವಲ್ಪ ಹೊತ್ತಾಯಿತು.

‘ನಿನಗೆ ತಲೆ ಕೆಟ್ಟಿದೆಯೇನು?’ ಎಂಬ ಕೂಗಿಗೆ ಅವಳು ಬಡಬಡಿಸುವುದನ್ನು ನಿಲ್ಲಿಸಿದಳು. ಅವರು ಹಾಗೆ ಕೂಗಿದ್ದನ್ನು ಮೊದಲ ಬಾರಿಗೆ ಅವರೆಲ್ಲ ಕೇಳಿದ್ದರು. ಅವಳ ಯಾವ ಮಾತಿಗೆ ಅವರು ಹೀಗೆ ಪ್ರತಿಕ್ರಿಯಿಸಿದರೆನ್ನುವುದು ಅಮಲು ತಲೆಗೇರಿದಂತಿದ್ದ ಹೆಂಡತಿಗೂ, ಪಕ್ಕದ ಕೋಣೆಯಿಂದ ಕದ್ದು ಕೇಳಿಸಿಕೊಳ್ಳುತ್ತಿದ್ದ ಮಕ್ಕಳಿಗೂ ಗೊತ್ತಾಗಲಿಲ್ಲ. ಮತ್ತೇನೂ ಮಾತಾಡದೇ ಹೊರಗೆ ಹೋಗಿ ಪೇಪರಿನಲ್ಲಿ ತೊಡಗಿಕೊಂಡರು. ಅವರು ಅದನ್ನೆಲ್ಲ ಒಪ್ಪಿಕೊಂಡರೋ, ನಿರಾಕರಿಸಿದರೋ ಗೊತ್ತೇ ಆಗಲಿಲ್ಲ.

ಬೀದಿಯವರಿಗೆಲ್ಲ ಮಾತಾಡಲು ಇದೊಂದು ಬಿಸಿ ಸಂಗತಿಯಾಯಿತು. ಆ ಇನ್ನೊಂದು ಸಂಸಾರದ ವಿವರಗಳು ಚರ್ಚಿಸಲ್ಪಟ್ಟವು. ಎಷ್ಟೋ ಸಂಗತಿಗಳು ನಂಬಲು ಅಸಾಧ್ಯವೆಂಬಷ್ಟು ಬೇರೆ ಯಾರದೋ ಅನಿಸುವಂತಿದ್ದವು. ಹೆಂಡತಿಯ ಜೊತೆಯ ಅನ್ಯೋನ್ಯತೆ, ಮನೆಯ ತಾರಸಿಯ ಮೇಲೆ ಕೂತು ಇಬ್ಬರೂ ಚಾ ಕುಡಿಯುವುದು, ಮಕ್ಕಳಿಗೆ ಪಾಠ ಹೇಳಿಕೊಟ್ಟು ಚೆನ್ನಾಗಿ ಓದಿಸುವುದು ಇತ್ಯಾದಿ. ಮಕ್ಕಳು ಬಹಳ ಒಳ್ಳೆಯ ಸ್ವಭಾವದವರಂತೆ. ಮಗಳು ಚಿತ್ರ ಬಿಡಿಸುತ್ತಾಳಂತೆ. ಯಾವಾಗಲೂ ಗಂಟು ಮೋರೆಯ, ಮಾತೇ ಆಡದ ಇವರು ಹೆಂಡತಿಯ ಜೊತೆ ತಾರಸಿಯ ಮೇಲೆ ಕೂತು ನಗುವುದು ಕೂಡ ಕಲ್ಪನೆಗೆ ಹೊರತಾಗಿರಲಿಲ್ಲ. ಇತ್ತೀಚೆಗೆ ಮನೆಗೆ ಅತ್ಯುತ್ತಮ ಫರದೆಗಳನ್ನು ಸ್ವತಃ ನಿಂತು ಹಾಕಿಸಿದರಂತೆ. ಹೂತೋಟ ಅವರೇ ಮಾಡಿಸಿದ್ದಂತೆ. ಅವತಾರ ಪುರುಷನ ಹಾಗೆ ಅಲ್ಲಿ ಹೋಗಿ ರೂಪಾಂತರ ಹೊಂದಬಹುದಾದ ಅವರ ಸಾಧ್ಯತೆಗಳೆಲ್ಲದರ ಬಗ್ಗೆ ಮಾತುಗಳು ಸ್ವಚ್ಛಂದ ಹರಿದವು.

ಎರಡು ದಿನಗಳ ಬಳಿಕ ಜಾನಕಿರಾಮರ ಹೆಂಡತಿ ಪೀಕೆಯ ಅಮ್ಮನ ಬಳಿ ತನ್ನ ದುಃಖ ತೋಡಿಕೊಂಡಳು. ‘ನೋಡಿ ಇವರು ಹೀಗೆ ಮಾಡಿಬಿಟ್ಟರು. ಅವರಿವರ ಮಾತು ಕಿವಿಗೆ ಬಿದ್ದಾಗ ಎಷ್ಟು ನಿಜವೋ ಸುಳ್ಳೋ ಗೊತ್ತಾಗುವುದಿಲ್ಲ. ನನ್ನ ತಮ್ಮನಿಗೆ ಈ ವಿಷಯ ಗೊತ್ತಾಗಿ ನಿನ್ನೆ ಬಂದಿದ್ದ. ಪೋಲೀಸ್ ಕೇಸು ಹಾಕು, ಎರಡು ಮದುವೆಯಾದದ್ದು ಸಾಬೀತಾದರೆ ಜೈಲು ಕಾಣಿಸುತ್ತಾರೆ ಅಂದ. ನಮಗೇನೂ ಕಡಿಮೆ ಮಾಡದ ಹಾಗೆ ನಡೆಸಿಕೊಂಡು ಹೋಗುತ್ತಾರೆ ಎಂದು ಯಾವಾಗಲೂ ಹೇಳುತ್ತಿದ್ದೆ. ಈಗ ನಮ್ಮ ಸಂಸಾರದ ವಿಷಯ ಎತ್ತಿದರೆ ನಾಚಿಕೆಯಾಗುತ್ತದೆ. ನೋಡಿ, ಆ ಮಕ್ಕಳು ಓದಿನಲ್ಲಿ ಮುಂದು, ನಮ್ಮವನು ನಿಗಾ ಇಲ್ಲದೇ ಪೋಲಿ ಬಿದ್ದಿದ್ದಾನೆ. ಒಂದು ದಿವಸ ಮನೆಯಲ್ಲಿ ಏನಿದೆ ಇಲ್ಲ ಎಂದು ನೋಡಿದವರಲ್ಲ. ಅಲ್ಲಿ ತರಕಾರಿ ಕೊಳ್ಳಲು ಚೀಲ ಹಿಡಿದು ಅವಳ ಹಿಂದೆ ಹೋಗುತ್ತಾರಂತೆ…’. ಈ ಸಾಧ್ಯತೆಗಳು ಊಹೆಗೆ ನಿಲುಕುವವರೆಗೂ ಯಾವ ದೊಡ್ಡ ಊನಗಳೂ ಕಾಣದಿದ್ದ ಸಂಸಾರದಲ್ಲಿ ಒಮ್ಮೆಲೇ ವೈಫಲ್ಯದ ಬಿರುಕುಗಳು ಕಂಡಿದ್ದವು.

ಪೀಕೆಯ ಅಮ್ಮ ಸಮಾಧಾನ ಹೇಳಿ ‘ಪೋಲೀಸು ಕೇಸು ಅಂತ ದುಡುಕಬೇಡಿ. ನಿಮ್ಮದೇ ಎರಡನೇ ಮದುವೆಯಾಗಿದ್ದರೆ ನಿಮಗೇ ತೊಂದರೆ. ಆಮೇಲೆ ಖಾಯಂ ಆಗಿ ಅಲ್ಲಿಯೇ ಹೋದಾರು’ ಅಂದರು. ಈ ಒಂದು ಸಹಜ ಮಾತಿನಿಂದ ಇಡೀ ಸನ್ನಿವೇಶವೇ ಬದಲಾಗಿ ಹೋಯಿತು. ಇಂಥ ಹೊಸ ಸಾಧ್ಯತೆಯ ಉದಯವಾಗಿದ್ದೇ, ಇಲ್ಲಿಯ ತನಕ ತಾವು ಕದನಕ್ಕೆ ನಿಂತ ನೈತಿಕ ನೆಲೆಯ ಅಸಂಗತತೆ ಥಟ್ಟನೆ ಎದುರು ನಿಂತಿತು. ಇದೇ ಮೊದಲ ಮದುವೆಯೆಂದು ಸಾಧಿಸಲು ಅಗತ್ಯವಾದ ಪುರಾವೆಗಳನ್ನು, ಅವರ ಯಾವ ವರ್ತನೆ ಒದಗಿಸಬಹುದೆಂದು ಹುಡುಕಿದಷ್ಟೂ ಅದು ಸಿಗದೇ ಹೋಯಿತು. ಏನನ್ನು ಯೋಚಿಸಿದರೂ ಅದು ಎಲ್ಲಿಯೂ ಆಗಬಹುದಾಗಿತ್ತು ಅನಿಸತೊಡಗಿತು.

ಇಷ್ಟೆಲ್ಲ ನಡೆದಾಗ ಜಾನಕಿರಾಮರ ಪ್ರತಿಕ್ರಿಯೆ ಏನು ಅನ್ನುವುದು ಯಾರಿಗೂ ಸರಿಯಾಗಿ ಗೊತ್ತಾಗಲಿಲ್ಲ. ಕಾಲೇಜಿನ ಘಟನೆಯ ಪ್ರಸ್ತಾಪ ಬಂದಾಗ ‘ಅವರು ಮತ್ತೊಬ್ಬನ ಮಕ್ಕಳು’ ಅಂದನಂತೆ ಎಂಬ ವದಂತಿಯಿತ್ತು. ಆದರೂ ಜಾನಕಿರಾಮರನ್ನು ನೇರವಾಗಿ ಕೇಳುವ ಧೈರ್ಯ ಯಾರೂ ಮಾಡಲಿಲ್ಲ.

ಬುಧವಾರ ಬಂತು. ಪ್ರತಿ ವಾರದಂತೆ ಆ ಬೆಳಗಿನ ಹೊತ್ತು ಕೂಡ ಜಾನಕಿರಾಮರ ಮನೆಯಲ್ಲಿ ಹೊತ್ತು ಮೂಡುವ ಮುಂಚೆಯೇ ಚಟುವಟಿಕೆಗಳು ಆರಂಭವಾದವು. ಹೊರಗಡೆ ದಟ್ಟ ಮಂಜು ಕವಿದಿತ್ತು. ಏಳು ಗಂಟೆಗೆ ಸರಿಯಾಗಿ ಜಾನಕಿರಾಮ ತನ್ನ ಕಪ್ಪು ಬ್ಯಾಗು ಹಿಡಿದುಕೊಂಡು, ತಿರುವಿನ ಮಂಜಿನಲ್ಲಿ ಕರಗಿ ಹೋಗಿದ್ದನ್ನು, ಬೀದಿಯ ಜನ ಅವರವರ ಮನೆಯಿಂದ, ಕಿಟಕಿಗಳ ಹಿಂದೆ ಅವಿತು ನಿಂತು ನೋಡಿದರು.
*****
೨೬ ಡಿಸೆಂಬರ್ ೨೦೦೩, ಬೆಂಗಳೂರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.