ಕುಲ ಕುಲ ಕುಲವೆನ್ನುತಿಹರೊ

ರಾಗ — ರೇಗುಪ್ತಿ ತಾಳ — ಅಟ್ಟ

ಕುಲ ಕುಲ ಕುಲವೆನ್ನುತಿಹರೊ |
ಕುಲವಾವುದು ಸತ್ಯ ಸುಜನರಿಗೆ ||ಪ||

ಕೆಸರೊಳು ತಾವರೆ ಪುಟ್ಟಲು ಅದ ತಂದು |
ಕುಸುಮನಾಭನಿಗೆ ಅರ್ಪಿಸರೇನಯ್ಯ? ||
ಪಶುವಿನ ಮಾಂಸದೊಳುತ್ಪತ್ತಿ ಕ್ಷೀರವ |
ವಸುಧೆಯೊಳಗೆ ಭೂಸುರರುಣ್ಣರೇನಯ್ಯ ||೧||

ಆ ಶೌಂಡಲ್ಯ ಪರಾಶರ ಎನಿಪನು |
ವೇಶೆಯಪುತ್ರ ವಶಿಷ್ಠ ಮುನಿ ||
ದಾಸಿಯ ನಂದನ ನಾರದ ಎನಿಪನು |
ಕಾಶ್ಯಪ ಪೌತ್ರನ ಕುಲ ಹೇಳಿರಯ್ಯ ||೨||

ಆತ್ಮನಾವ ಕುಲ ಜೀವನಾವ ಕುಲ |
ತತ್ವೇಂದ್ರಿಯಗಳ ಕುಲ ಪೇಳಿರಯ್ಯ ||
ಆತ್ಮನು ಕಾಗಿನೆಲೆಯಾದಿ ಕೇಶವನೊಲಿದ |
ಭಕ್ತರಿಗೆ ಕುಲವಾವುದು ಹೇಳಿರಯ್ಯ ||೩||


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.