ತೊರೆದು ಜೀವಿಸಬಹುದೆ ಹರಿ

ರಾಗ — ಕೇದಾರಗೌಳ ತಾಳ — ಝಂಪೆ

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ |
ಮರೆಯ ಮಾತೇಕಿನ್ನು ಅರಿತು ಪೇಳುವೆನು ||ಪ||

ತಾಯಿ – ತಂದೆಯ ಬಿಟ್ಟು ತಪವ ಮಾಡಲುಬಹುದು |
ದಾಯಾದಿ ಬಂಧುಗಳ ಬಿಡಲುಬಹುದು ||
ರಾಯ ತಾ ಮುನಿದರೆ ರಾಜ್ಯವನು ಬಿಡಬಹುದು |
ಕಾಯಜನ ಪಿತ ನಿನ್ನ ಅಡಿಯ ಬಿಡಲಾಗದು ||೧||

ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು |
ಪಡೆದ ಕ್ಷೇತ್ರವ ಬಿಟ್ಟು ಪೋಗಬಹುದು ||
ಮಡದಿ – ಮಕ್ಕಳ ಕಡೆಗೆ ತೊಲಗಿಸಿಯೆ ಬಿಡಬಹುದು |
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು ||೨||

ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು |
ಮಾನದಲಿ ಮನವ ತಗ್ಗಿಸಲುಬಹುದು ||
ಪ್ರಾಣನಾಯಕನಾದ ಆದಿಕೇಶವರಾಯ |
ಶ್ರೀಕೃಷ್ಣ ನಿನ್ನಡಿಯ ಬಿಡಲಾಗದೊ ||೩||
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.