ಸುಖ – ದುಃಖ ನಿನ್ನದಯ್ಯಾ

ರಾಗ — ಕೇದಾರಗೌಳ
ತಾಳ — ಅಟ್ಟ

ತನು ನಿನ್ನದು ಜೀವನ ನಿನ್ನದು ರಂಗ |
ಅನುದಿನದಲಿ ಬಾಹ ಸುಖ – ದುಃಖ ನಿನ್ನದಯ್ಯಾ ||ಪ||

ಸವಿನುಡಿ ವೇದ – ಪುರಾಣ ಶಾಸ್ತ್ರಂಗಳ |
ಕಿವಿಯಿಂದ ಕೇಳುವ ಕಥೆ ನಿನ್ನದು ||
ನವಮೋಹನಾಂಗಿಯರ ರೂಪವ ಕಣ್ಣಿಂದ |
ಎವೆಯಿಕ್ಕದಲೆ ನೋಡುವ ನೋಟ ನಿನ್ನದಯ್ಯ ||೧||

ಒಡಗೂಡು ಗಂಧ – ಕಸ್ತೂರಿ ಪರಿಮಳಗಳ |
ಬಿಡದೆ ಲೇಪಿಸಿಕೊಂಬುದು ನಿನ್ನದು ||
ಪಡುರಸದನ್ನಕೆ ನಲಿದಾಡುವ ಜಿಹ್ವೆ |
ಕುಡುರುಚುಗೊಂಡರಾರುಚಿ ನಿನ್ನದಯ್ಯ ||೨||

ಮಾಯಾಪಾಶದ ಬಲೆಯೊಳಗೆ ಸಿಲ್ಕಿರುವಂಥ |
ಕಾಯಪಂಚೇಂದ್ರಿಯಗಳು ನಿನ್ನವು ||
ನ್ಯಾಯದಿ ಕನಕನೊಡೆಯ ಆದಿಕೇಶವ – |
ರಾಯ ನೀನಲ್ಲದೆ ನರರು ಸ್ವತಂತ್ರರೆ ||೩||
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.