ಈಚಲು ಮರದ ಕೆಳಗೆ

ನನಗೆ ತೆಂಗಿನ ಮರವನ್ನು ಕಂಡರೆ ಮನಸ್ಸಿಗೆ ಹೇಗೆಹೇಗೆಯೋ ಆಗುತ್ತದೆ. ನಮ್ಮ ತೋಟ ಜ್ಞಾಪಕಕ್ಕೆ ಬರುತ್ತದೆ. ರೈತ ಜ್ಞಾಪಕಕ್ಕೆ ಬರುತ್ತಾನೆ. ಮನಸ್ಸಿಗೆ ಸಂಕಟ ತರುವ ನೆನಪಿವು. ಆ ತೋಟದ ಕಾಯನ್ನೂ ನಾನು ತಿನ್ನುವಂತಿಲ್ಲ. ಆ ಎಳನೀರನ್ನೂ ಕುಡಿಯುವಂತಿಲ್ಲ. ಕೊಬ್ಬರಿಯ ಸುದ್ದಿಯೇ ಕಾಣೆ. ಅಲ್ಲಿ ಅವನ್ನು ಅನುಭವಿಸಬೇಕು, ಇಲ್ಲಿ ನಾನು ಈ ಪದಾರ್ಥಗಳನ್ನು ಒಂದಕ್ಕೆ ಹತ್ತರಷ್ಟು ಕೊಟ್ಟು ಕೊಂಡುಕೊಳ್ಳಬೇಕು. ಈ ಕಾಯಿಗಳೆಲ್ಲಾ ನನ್ನ ದಕ್ಷತೆಯನ್ನು ನೋಡಿ ನಗುವಂತೆ ಕಾಣುತ್ತವೆ. ಆದ್ದರಿಂದ ಇವುಗಳ ಮತ್ತು ಈ ಮರಗಳ ದರ್ಶನ ನನಗೆ ಅಪ್ರಿಯ.

ಆದರೆ ಅದರ ಗೆಳೆಯನಾದ ಈಚಲು ಮರವನ್ನು ಕಂಡರೆ ನನಗೆ ಏನೋ ಒಂದು ಅಭಿಮಾನ. ಇದರ ಧೈರ್ಯವೇ ಧೈರ್ಯ, ದಾಷ್ಟೀಕವೇ ದಾಷ್ಟೀಕ. ಇದು ಇಲ್ಲದ ಜಾಗವಿಲ್ಲ. ಮೈದಾನದಲ್ಲಿ ಎಲ್ಲಿ ಸ್ವಲ್ಪ ನೀರಿನ ಆಸರೆ ಇದ್ದರೆ ಅಲ್ಲಿ ಹಾಜರು. ತಾನೇ ಕಾಡಾಗಿ ಬೆಳೆದರೂ ಸರಿಯೆ, ಒಂಟಿಯಾಗಿದ್ದರೂ ಸರಿಯೆ, ಇದು ನಿರ್ಭಯವಾಗಿ ಯಾರ ಹಂಗೂ ನನಗೆ ಬೇಡ, ನನ್ನನ್ನು ತಡೆಯುವವನಾವನು ಎಂದುಕೊಂಡು ಗುಂಗುರುತಲೆಯ ಗರಿಯನ್ನಲ್ಲಾಡಿಸುತ್ತಾ ನಿಂತಿರುತ್ತದೆ. ತರುಗಳಲ್ಲಿ ಇದು ಮ್ಲೇಚ್ಛ, ಕಲ್ಪದ್ರುಮಗಳಲ್ಲಿ ಕೌಶಿಕ ಕಲ್ಪದ್ರುಮ. ಹೊಲದ ಮಧ್ಯದಲ್ಲೋ ಗಿಡದ ಮಧ್ಯದಲ್ಲೋ ತೊರೆಯ ತಡಿಯಲ್ಲೋ ಗುಡಿಯ ತೋಟದಲ್ಲೋ ಹಾಳು ಮಂಟಪದ ಬದಿಯಲ್ಲೋ-ಅಂತೂ ಎಲ್ಲಾದರೂ ಸರಿಯೆ ಇದು ನಿಲ್ಲುವ ನಿಲುವೇ ನಿಲುವು! ಜನಕ್ಕೇನೋ ಇದನ್ನು ಕಂಡರೆ ಅಸಹ್ಯ, ಇದರ ಸೋಂಕು ಮೈಲಿಗೆ. ಆದರೆ ಅವರ ಮೂಗುಮುರಿತಕ್ಕೆ ಸರಿಯಾದ ಬಿಂಕ ಇದಕ್ಕೂ ಉಂಟು. ಕಾಸಿದ ಬಂಗಾರದಂಥ ಬಣ್ಣದ ಹೊಂಬಾಳೆಯನ್ನು ಮೆರೆಸುತ್ತಾ ತನ್ನ ನೀಳವಾದ ಅಲಗಿನಂತಿರುವ ಗರಿಗಳನ್ನು ಗಾಳಿಯಲ್ಲಿ ಅಲುಗಿಸುತ್ತಾ ಸಿತಾರು ಬಾರಿಸುವವನಂತೆ ನಿಂತಿರುವ ಈ ಮ್ಲೇಚ್ಛತರುವಿಲಾಸಿ ನನಗೆ ಯಾವಾಗಲೂ ಹೃದ್ಯನೇ.

ಇದರಿಂದ ನನಗೂ ಇದಕ್ಕೂ ಸರಸಸಂಬಂಧವುಂಟೆಂದು ಯಾರೂ ಭಾವಿಸಬಾರದು. ಇದು ವ್ಯಸನಕ್ಕೆ ಕಾರಣವಾಗಬಹುದೆಂದು ನಾನು ಜಾಗರೂಕನಾಗಿಯೇ ಇದ್ದೇನೆ. ಆದರೆ ಒಂದು ದಿನ ಅದರ ತಲದಲ್ಲಿ ನಾನು ಕುಳಿತು ಕೊಳ್ಳಬೇಕಾಯಿತು. ಸಂದರ್ಭ ಹೀಗೆ: ನಮ್ಮೂರ ತೊರೆ ಎಂದರೆ ನನಗೆ ಪ್ರೀತಿ. ಒಂದು ಬೇಸಗೆಯ ಮಧ್ಯಾಹ್ನ ನಾನು ಅದರ ಕಣಿವೆಯಲ್ಲಿ ಓಡಾಡುತ್ತಿದ್ದೆ. ಗೆಳೆಯರು ಬುತ್ತಿ ತೆಗೆದುಕೊಂಡು ಹಿಂದಿನಿಂದ ಬರುತ್ತೇವೆ ಎಂದಿದ್ದರು. ನಾನು ಒಬ್ಬನೇ ಮುಂದಾಗಿ ಹೊರಟು ಕಾಡುಮೇಡೆಲ್ಲಾ ಸುತ್ತಿ ದಣಿದು ತೊರೆಯ ಸನಿಹಕ್ಕೆ ಬಂದೆ. ಕುಳಿತುಕೊಳ್ಳೋಣ ಎಂದರೆ ಎಲ್ಲೂ ನೆರಳಿಲ್ಲ. ಆದರೆ ಆ ಕಣಿವೆಯ ನಟ್ಟನಡುವೆ ತೊರೆ ಹರಿಯುವ ಜಾಗದಲ್ಲೇ ಒಂದು ದೊಡ್ಡ ಈಚಲುಮರ ನಿಂತಿದೆ. ಅದರ ಕೆಳಗೆ ಒಂದು ಪ್ರಶಸ್ತವಾದ ಬಂಡೆ. ಆ ಬಂಡೆಯನ್ನು ತೊರೆ ತೊಳೆಯುತ್ತಾ ಹರಿಯುತ್ತಿದೆ. ಒಂದು ಮಾರು ದೂರದಲ್ಲಿ ಈ ಜಡೆಯಷ್ಟಗಲದ ನೀರ ಹರಿವು ಒಂದು ಆಳುದ್ದದ ನಾಲಗೆಯ ಕಲ್ಲಿನಿಂದ ಕೆಳಕ್ಕೆ ಧುಮುಕುತ್ತದೆ. ಇದಕ್ಕಿಂತ ಒಳ್ಳೆಯದಾದ ಜಾಗವನ್ನು ಎಲ್ಲಿ ತರೋಣ? ನಾನು ನಿರ್‍ವಾಹವಿಲ್ಲದೆ ಆ ಬಂಡೆಯ ಮೇಲೆ ಕುಳಿತೆ. ಮೇಲೆ ಈಚಲುಮರ. ಕಾಶಕುಸುಮದ ಚಾಮರದಂತೆ ಇದರ ಗರಿಯ ನೆರಳು ಮೃದುವಾಗಿ ನನ್ನ ತಲೆಯ ಮೇಲೆ ಬೀಸುತ್ತಿತ್ತು. ನನಗೇನೋ ಹಾಯಾಯಿತು. ಆದರೆ ಈ ಸ್ವಾದುವಾದ ನೆರಳನ್ನು ಚೆಲ್ಲುತ್ತಿದ್ದ ಮರ ಈಚಲುಮರ! ಒಂಟಿಯಾಗಿದ್ದರೂ ಅದು ದಿಟ್ಟವಾಗಿತ್ತು, ಅದರ ಗರಿಗಳು ಚಟುವಟಿಕೆಯನ್ನು ತೋರುತ್ತಿದ್ದವು. ಆ ಗರಿಗಳು ಸ್ತಬ್ಧವಾಗಿದ್ದಾಗ ಸಿಪಾಯಿಗಳ ಅಟೆನ್‌ಷನ್ ರೀತಿ, ಅಲುಗಾಡುವಾಗ ಕವಾಯತ್ತಿನ ರೀತಿ ತೋರುತ್ತಿದ್ದವು. ಅದು ಹಣ್ಣು ಹಿಡಿದ ಮರ. ಮರಕ್ಕೆ ಆ ಸಮಯದಲ್ಲೂ ಧ್ಯಾನಮೌನಗಳಿದ್ದಂತೆ ಕಾಣಲಿಲ್ಲ. ಸೂರ್ಯ ಸುಟ್ಟರೆ ಸುಡಲಿ, ಹಳ್ಳ ಒಣಗಿದರೆ ಒಣಗಲಿ, ತಾನೇನೋ ತಂಪಾಗಿದ್ದೇನೆ ಸಾಕು ಎನ್ನುವಂತಿತ್ತು ಅದು. ಅದನ್ನು ತುಸು ಕಾಲ ನಿಟ್ಟಿಸಿ ಭಲಾಪ್ಪ ಎಂದೆ.

ತಲೆಯ ಮೇಲೆ ನೆರಳು, ಕಾಲಿನ ಮೇಲೆ ಶೀತಲವಾರಿ, ಸುತ್ತ ನಿದಾಘ ರವಿಕಿರಣ ಸಮುದ್ರ. ನನಗೆ ಸ್ವಲ್ಪ ಜೋಂಪು ಹಿಡಿಯಿತೇನೋ. ಅಥವಾ ಈಚಲುಮರದ ಮಹಿಮೆಯೋ; ಅದೇ ಇರಬೇಕು. ಮನಸ್ಸು ಹಬೆಹಬೆಯಾಗಿ ಎದ್ದು ನನ್ನ ತಲೆಯ ಮೇಲೆ ತೇಲುತ್ತಿರುವಂತೆ ನನಗೆ ತೋರಿತು. ನನ್ನ ದೇಹ ಸ್ಥಿರ, ಮನಸ್ಸು ಅಸ್ಥಿರ; ನಾನು ಹೊಗೆಯಾಡುತ್ತಿದ್ದ ಕಾರ್ಖಾನೆಯ ಚಿಮಣಿಯಂತೆ ವನದೇವತೆಗಳಿಗೆ ಕಂಡಿರಬೇಕು. ಅಂತು ಪ್ರತ್ಯಕ್ಷದ ಕಠೋರ ಋತಕ್ಕೆ ನಾನು ಆಗ ಬದ್ಧನಾಗಿರಲಿಲ್ಲ. ಬಂಡೆಗಳು ದೊಡ್ಡದೊಡ್ಡ ಹಕ್ಕಿಗಳಂತೆ ತೋರಿದವು. ಅವುಗಳ ಪಕ್ಕದಲ್ಲಿದ್ದ ಸಣ್ಣಸಣ್ಣ ಬಂಡೆಗಳು ಅವುಗಳ ಮೊಟ್ಟೆಯಂತೆಯೂ, ಇವು ಅವುಗಳ ಮೇಲೆ ಕಾವು ಕೂತಿರುವಂತೆಯೂ ಕಂಡವು. ಸಿಂದಬಾದ್ ನಾವಿಕನ ಕತೆಯಲ್ಲಿ ಬರುವ ರಣಹದ್ದುಗಳ ಕಣಿವೆಯೆ ಇದು? ನಾನು ಇದರಿಂದ ಪಾರಾಗುವ ಬಗೆ ಹೇಗೆ? ಈ ತರದ ಒಂದು ದಿಗಿಲೂ ನನಗೆ ಬಡಿಯಿತು. ಆಗ ಈಚಲುಮರದ ಗರಿಯು ಮರ್ಮರಿಸುತ್ತಿತ್ತು. ನಾನು ಅದನ್ನು ಗಮನವಿಟ್ಟು ಆಲಿಸಹತ್ತಿದೆ.

ಮಧುರವಲ್ಲದಿದ್ದರೂ ಸ್ಪಷ್ಟವಾದ ಮರ್ಮರದ ಮೂಲಕ ಅದು ಹೇಳುತ್ತಿದ್ದುದು ಮಹರ್ಷಿ ವ್ಯಾಸರ ಮಾತು: ‘ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನೇಚ್ಛಂತಿ ಮಾನವಾಃ’ ಎಂದು. ಈಚಲುಮರಕ್ಕೆ ನಮ್ಮ ಪುರಾತನ ಪವಿತ್ರ ಸಂಸ್ಕೃತಿಯ ಸುಭಾಷಿತ ಹೇಗೆ ತಿಳಿಯಿತು? ಪುರಾಣಪ್ರವಚನ ನಡೆಯುವ ಸ್ಥಳಗಳಲ್ಲಿ ಇದಕ್ಕೆ ಇರುವುದಕ್ಕೆ ಅವಕಾಶವಿಲ್ಲ. ಅಥವಾ ಇದು ಇರುವೆಡೆಯಲ್ಲಿ ಪುರಾಣಶ್ರವಣ ನಡೆಯುವುದಿಲ್ಲ. ನಾರಿಕೇಳಕ್ಕೆ ಈ ಆರ್ಯ ಸಂಸ್ಕೃತಿಯ ಗಂಧ ಸಹಜವಾಗಿಯೇ ಉಂಟು. ಅದರ ಸಂತಾನವಿಲ್ಲದ ಪೂಜೆ ಎಲ್ಲಿ, ಪುರಸ್ಕಾರವೆಲ್ಲಿ, ವೈದಿಕ ಕರ್ಮವೆಲ್ಲಿ, ಫಲದಾನವೆಲ್ಲಿ? ಸಂಸ್ಕೃತ ಅದರ ರಸಗತವಾಗಿದ್ದರೆ ಅದರಲ್ಲೇನೂ ಆಶ್ಚರ್ಯವಿಲ್ಲ. ನನ್ನ ತೀರ್ಥರೂಪರು ಶಿಷ್ಯರಿಗೆ ಧರ್ಮಶಾಸ್ತ್ರ ಪ್ರವಚನವನ್ನು ಮಾಡುತ್ತಿದ್ದಾಗ, ಎಷ್ಟೋ ರಹಸ್ಯಗಳನ್ನು ಅಟ್ಟದ ಮೇಲಿದ್ದ ತೆಂಗಿನ ಹಣ್ಣುಗಳುಶಿಷ್ಯರಿಗಿಂತ ಹೆಚ್ಚಾಗಿಯೇ ಗ್ರಹಿಸಿದ್ದುವೆಂದು ನನ್ನ ನಂಬಿಕೆ. ತೆಂಗಿನ ಮರ್ಮರದಲ್ಲಿ ವೇದಘೋಷದ ಹೊಳಲಿದೆ, ಸಂಸ್ಕೃತದ ಶೈಲಿಯಿದೆ. ಈಚಲುಮರಕ್ಕೆ ಈ ವೇದಭಾಷೆಯ ಪರಿಚಯ ಹೇಗಾಯಿತು ವಿಶ್ವಾಮಿತ್ರನಿಂದ ಕಲಿಯಿತೆ? ಇದು ರಾವಣನಂಥ ಬ್ರಾಹ್ಮಣಮರವೇ ಆಗಿರಬಹುದೇ? ಇದು ಎಂಥ ಪಂಡಿತವಕ್ಕಿಗೆ ಆಶ್ರಯ ಕೊಟ್ಟಿರಬಹುದು. ಇಂಥ ಮಡಿಜಾಗದಲ್ಲಿ ಇದು ಬೀಡುಮಾಡಿಕೊಂಡು ದೇವಭಾಷೆ ಮಾಡುತ್ತಿದೆಯಲ್ಲಾ? ಇದನ್ನು ಎಂತು ಸಹಿಸುವುದು? ಇದನ್ನು ಏಕೆ ಕದಿದುಹಾಕದೇ ಉಳಿಸಿಕೊಂಡಿದಾರೆ? ಇತ್ಯಾದಿ ದುರ್ಭಾವನೆಗಳು ನನ್ನಲ್ಲಿ ಉತ್ಪನ್ನವಾದವು. ಆದರೆ ತರು ಮರ್ಮರಿಸುವುದನ್ನು ನಿಲ್ಲಿಸಲಿಲ್ಲ. ಶ್ರೀ ಗೊರೂರು ಅವರ ಎಮ್ಮೆಗೆ ಮಾತು ಮಾತ್ರ ತಿಳಿಯುತ್ತಿತ್ತು. ಆ ಕೌಶಿಕ ಕಾಮಧೇನುವಿಗಿಂತ ಈ ಕೌಶಿಕ ಕಲ್ಪದ್ರುಮ ಹೆಚ್ಚು ಕುಶಲ. ಇದು ಮನಸ್ಸನ್ನೂ ಅರಿಯಬಲ್ಲದು.

“ನಿನ್ನನ್ನು ಅರಸಿಕೊಂಡು ನಾನು ಬರಲಿಲ್ಲ, ನನ್ನನ್ನು ಅರಸಿಕೊಂಡು ನೀನು ಬಂದಿದೀಯೆ. ಆದರೆ ನನಗೆ ಕೆಡುಕನ್ನು ಯೋಚಿಸುತ್ತಿದ್ದೀಯೆ. ನನಗೆ ಯಾರ ಆಶ್ರಯವೂ ಬೇಕಿಲ್ಲ. ನನಗೆ ಯಾರ ಹಂಗೂ ಇಲ್ಲ. ಯಾರ ಬೆದರಿಕೆಗೂ ನಾನು ಸಗ್ಗುವಂತಿಲ್ಲ. ನನಗೆ ಇಷ್ಟ ಬಂದ ಕಡೆ ನಾನು ಬೆಳೆಯುತ್ತೇನೆ. ನನಗೆ ಸಂಸ್ಕಾರದ ಬೆಂಬಲವಿದೆ ಎಂದು ನೀನು ತಿಳಿದುಕೊಂಡಿರಬಹುದು. ಯಾವ ಫಾರೆಸ್ಟು ಡಿಪಾರ್ಟಮೆಂಟ್ ಎಷ್ಟು ಖರ್ಚುಮಾಡಿ ನನ್ನನ್ನು ಹುಟ್ಟುಹಾಕಿ ಬೆಳೆಸಿದೆ? ಬೆರಳು ಮಡಿಸು. ಅಷ್ಟಕ್ಕೂ ಸಂಸ್ಕಾರಕ್ಕೇ ಅಲ್ಲವೇ ನನ್ನ ಬೆಂಬಲ? ನನ್ನ ರಸದಿಂದ ತಾನೇ ನಿಮಗೆ ಜ್ಞಾನ, ಮಿಕ್ಕವರಿಗೆ ಅಜ್ಞಾನ? ನಿಮ್ಮ ಜ್ಞಾನವೇ ಲೇಸೋ, ಅವರ ಅಜ್ಞಾನವೇ ಲೇಸೋ ಯಾರು ಹೇಳಬಲ್ಲರು? ಎರಡು ಒಂದೇ ನಾಣ್ಯದ ಎರಡು ಮುಖಗಳು. ತಲೆ ನೀವು, ತಳ ಅವರು. ನಿಮ್ಮಿಬ್ಬರ ಬುದ್ಧಿಯ ಟಂಕಸಾಲಿಗ ನಾನು. ನನ್ನ ವಿಷಯದಲ್ಲಿ ನೀನು ಗೌರವದಿಂದಿರಬೇಕು. ಆದರೆ ಮನುಷ್ಯಸ್ವಭಾವವೇ ಹೀಗೆ. ಹಾ-“ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯ ನೇಚ್ಛಂತಿ ಪುಣ್ಯಂ ಮಾನವಾಃ” ಎಂದು ನಿಡುಸುಯ್ಯುತ್ತಾ ಮೌನವಾಯಿತು ಈ ಕೌಶಿಕಕಲ್ಪದ್ರುಮ.

ಬಿಸಿಲು ಧಗೆ ಹೆಚ್ಚಿತ್ತು. ಅದನ್ನು ಸ್ಪರ್ಧಿಸುವಂತೆ ಹೊಟ್ಟೆಯಲ್ಲಿ ಹಸಿವು. ಈ ಸ್ಥಿತಿಯಲ್ಲಿ ಬುದ್ಧಿಮಾಂದ್ಯ ಸಹಜ.
ನಾತ್ಯಶ್ನತಸ್ತು ಯೋಗೋಸ್ತಿ
ನಚೈಕಾನ್ತಮನಶ್ನತಃ
ಬುದ್ಧದೇವನಿಗೆ ಪ್ರಜ್ಞೆ ಬಂದದ್ದು ಸುಜಾತೆಯ ತಂದಿದ್ದ ಹಾಲನ್ನು ಕುಡಿದ ಮೇಲೆ ತಾನೆ. ನನಗೆ ಬರುವ ಬುತ್ತಿ ಇನ್ನೂ ಬಂದಿಲ್ಲ. ಗೆಳೆಯರು ಮರೆತರೋ ಇಲ್ಲ ದಾರಿತಪ್ಪಿದರೋ ಕಾಣೆ. ಈ ಮರ ಜಾಣಮರ. ಇದರೊಡನೆ ಸಂಭಾಷಣೆ ನಡೆಸುವಷ್ಟು ಚೈತನ್ಯ ನನ್ನಲ್ಲಿ ಇಲ್ಲ. ಸೌಜನ್ಯಕ್ಕೋಸ್ಕರ ಅದು ಆಡುವುದನ್ನೆ ನಾನು ಲಾಲಿಸಬೇಕಾಯಿತು.

“ನಿನ್ನ ಬುದ್ಧಿ ಈಗ ನೆಟ್ಟಗಿಲ್ಲ, ದಿಟ. ನಾನು ಏನು ಮಾಡಲಿ? ಅದು ಯಾವಾಗ ತಾನೆ ನೆಟ್ಟಗಿದೆ? ನಿಮ್ಮ ಜೀವ ಮೂರು ಸ್ಥಾಯಿಗಳಲ್ಲಿ ನಡೆಯುತ್ತಿದೆ.-ನಿದ್ರಾ, ಸ್ವಪ್ನ, ಜಾಗೃತಿ. ಈ ಮೂರನ್ನೂ ಒಟ್ಟಿಗೆ ಒಂದೇ ಕಾಲದಲ್ಲಿ ಹೊಂದಿಸಿ ಅನುಭವಿಸಬೇಕೆಂದೇ ನಿಮ್ಮ ಜಾತಿಯ ಸತತ ಪ್ರಯತ್ನ. ಸ್ವಪ್ನ ಜಾಗೃತಿ ಇವುಗಳನ್ನು ಬೆರೆಸಿ ಅನುಭವಿಸುವುದು ಅಷ್ಟು ದುಷ್ಕರವಲ್ಲ. ಇದಕ್ಕೆ ನಿದ್ರೆಯನ್ನು ಬೆರೆಸಿಕೊಳ್ಳುವುದು-ಅದು ರಾಮಕೃಷ್ಣರಂಥ ಮಹಾ ಯೋಗಿಗಳಿಗೆ ಮಾತ್ರ ಸಾಧ್ಯ. ನಿನ್ನಂಥವರ ಪ್ರಯತ್ನ ಜಾಗ್ರದವಸ್ಥೆಯಲ್ಲಿ ಸ್ವಪ್ನಾವಸ್ಥೆಯನ್ನು ತಂದುಕೊಳ್ಳುವುದರಲ್ಲಿ ಮುಗಿಯುತ್ತದೆ. ಅದು ಹಾಲು, ಇದು ನೊರೆ. ರಸಿಕರಿಗೆ ಇಂಥ ನೊರೆಹಾಲು ಹೃದ್ಯ. ನಿದ್ರೆ ತರುವುದರಲ್ಲೂ ನೀನು ಗಟ್ಟಿಗ-ಇರಲಿ-ಅಂತೂ ನೀನು ಯತ್ನಶಾಲಿ. ಆದರೆ ನನ್ನಷ್ಟು ಕುಶಲನಲ್ಲ. ನನ್ನ ರಸಸಂಸರ್ಗದಿಂದ ಎಲ್ಲರ ಚೈತನ್ಯಕ್ಕೂ ಜಾಗ್ರದವಸ್ಥೆಯಲ್ಲಿಯೇ ಸ್ವಪ್ನಾವಸ್ಥೆ ನಿಸ್ಸಂಶಯವಾಗಿ ಪ್ರಾಪ್ತವಾಗುತ್ತದೆ. ಅದು ನಿದ್ರಾಂತವೂ ಆಗುತ್ತದೆ. ನಿನ್ನ ಕಸುಬೂ ನನ್ನ ಕಸುಬೂ ಒಂದೇ. ಏಕೆ, ನಿನಗಿಂತ ನಾನು ಹೆಚ್ಚು ಕುಶಲ. ಆದರೆ ನಿಮ್ಮ ಸಮಾಜದಲ್ಲಿ ನಿನಗಿಂತ ನನಗೆ ಹೆಚ್ಚು ತಿರಸ್ಕಾರ. ಏಕೋ ಕಾಣೆ. ಇದರಿಂದ ನನಗೇನೂ ವಿಷಾದವಿಲ್ಲ. ಇದನ್ನು ನಾನು ನಿನಗೆ ಹಾಕಿಕೊಳ್ಳುವ ಅರ್ಜಿ ಎಂದು ತಿಳಿದುಕೊಳ್ಳಬೇಡ. ಇದ್ದ ಸಂಗತಿಯನ್ನು ಹೇಳಿದೆ ಅಷ್ಟೆ.

ಈಚಲಮರ ಇಷ್ಟು ವಾಚಾಳನೆಂದು ನನಗೆ ಗೊತ್ತಿರಲಿಲ್ಲ. ನಾನೂ ಅದೂ ಒಂದೇ ಕಸುಬಿನವರೆಂದು ಅದು ಹೇಳಿದ್ದನ್ನು ಕೇಳಿ ನನಗೆ ಸ್ವಲ್ಪ ರೇಗಿತು. ಸರಸ್ವತೀಪ್ರಸಾದರೂಪನಾದ ನನ್ನ ಸಾರಸ್ವತ ಸಂಪತ್ತೆಲ್ಲಿ? ಅಜ್ಞಾನಾಂಧ ತಮಸ್ಸನ್ನು ಪ್ರಕೋಪನ ಮಾಡುವ ಅದರ ಸುರೆಯೆಲ್ಲಿ? ಆದರೆ ಅದರ ಮಾತಿನಲ್ಲಿ ಸತ್ಯಾಂಶವಿಲ್ಲದೆ ಇರಲಿಲ್ಲ. ಜಾಗ್ರದವಸ್ಥೆಯಲ್ಲಿ ಸ್ವಪ್ನವನ್ನು ತಂದು ನೆಲೆಗೊಳಿಸುವುದಲ್ಲವೇ ಎಲ್ಲಾ ಕವಿಗಳ ಕಾರ್ಯ? ಅಲ್ಲಿ ಜೀವನದ ಮೂರರಲ್ಲಿ ಎರಡು ಸ್ಥಿತಿಗಳ ಸಮಗ್ರ ದೃಷ್ಟಿ ಸಿಕ್ಕುತ್ತದೆ. ಆದರಿಂದಲೇ ಪ್ರತ್ಯಕ್ಷಕ್ಕಿಂತ ಕಾವ್ಯವೇ ಸತ್ಯಕ್ಕೆ ಹೆಚ್ಚು ಸಮೀಪವಾಗಿದೆ. ಸುರೆಯ ಗುರಿಯೂ ಇದೆಯೇ? ಮದ್ಯಮತ್ತ ಕಾಣುವುದು ತಾನೆ ಏನನ್ನು? ಸುರಾಮತ್ತತೆಯಲ್ಲಿ ಸ್ವಪ್ನ ಜಾಗೃತಿಗಳ ಸಾಮರಸ್ಯವಿದೆಯೇ? ನಾನೂ ಈ ಈಚಲಮರವೂ ಹೇಗೆ ಒಂದೇ ಕಸುಬಿನವರು? ನನ್ನದು ಸತ್ಯಾನ್ವೇಷಣೆ-ಇದರದೊ?

ಹೀಗೆಂದುಕೊಳ್ಳುತ್ತಿರುವಾಗ ಈಚಲುಮರ ತನ್ನ ಗರಿಗಳನ್ನು ಸದ್ದು ಮಾಡತೊಡಗಿತು.

“ನೀನು ನನ್ನಿಕಾರನೋ? ನಾನಲ್ಲವೋ? ಈ ಒಂದೇ ಒಂದು ಉದಾಹರಣೆಯನ್ನು ತೆಗೆದುಕೊ. ಭೂಮಿ ಸುತ್ತುತ್ತದೆಯೋ-ಸೂರ್ಯನೋ? ಭೂಮಿಯೇ-ಸೂರ್ಯನಲ್ಲ-ಎಂಬ ತತ್ವ ನಿಮ್ಮ ಜಾಗ್ರದಾವಸ್ಥೆಯಲ್ಲಿ ನೆಲೆಗೊಳ್ಳುವುದಕ್ಕೆ ಎಷ್ಟೊಂದು ವರ್ಷಗಳ ಕಾಲ ಹಿಡಿಯಿತು! ಲೆಕ್ಕ ಮಾಡು. ಇದು ನಿಮಗಿನ್ನೂ ಅನಿಮಿತ ಸತ್ಯ. ನಾನೋ, ಒಂದೇ ನಿಮಿಷದಲ್ಲಿ ಇದನ್ನು ಅನುಭೂತ ಸತ್ಯವನ್ನಾಗಿ ಮಾಡಬಲ್ಲೆ. ಈ ನೆಲ ಅಸ್ಥಿರ, ಏಕೆ, ಎಲ್ಲವೂ ಅಸ್ಥಿರ, ಒಂದು ಕ್ಷಣದಲ್ಲಿ ಇದ್ದ ಹಾಗೆ ಯಾವುದೂ ಮತ್ತೊಂದು ಕ್ಷಣದಲ್ಲಿ ಇಲ್ಲ. ಇಷ್ಟನ್ನು ತಿಳಿದುಕೊಳ್ಳುವುದಕ್ಕಾಗಿ ಗೌತಮಬುದ್ಧ ಎಷ್ಟು ಕಾಲ, ಎಷ್ಟು ಕಷ್ಟಪಟ್ಟ. ಅವನದೇನು ತಪ್ಪು. ಆತ ಆಶ್ರಯಿಸಿದ ಮರ ಅಷ್ಟು ಮೊದ್ದು. ಆದರೆ ಈ ಕ್ಷಣಿಕತ್ವವಾದ ನನ್ನ ರಕ್ತಗತವಾಗಿದೆ. ಜಗತ್ತೇ ಬರಿ ಭ್ರಮೆ. ಅದರ ಭ್ರಮಣ ಮಾತ್ರ ಸತ್ಯ. ನೀವು ಜಾಗ್ರದಾವಸ್ಥೆಯಲ್ಲಿ ಯಾವುದನ್ನು ಋತು ಎನ್ನುತ್ತೀರೋ ಅದೆ ಮಾಯೆ. ನೋಡು, ಈ ಸುಡುವ ಸೂರ್ಯನಿದ್ದಾನೆ ಇಲ್ಲಿ, ಈ ಮಾಯೆಗೆ ಈತನೇ ಮಾಯಾವಿ. ಮಾಯೆ ಎಂದರೆ ಏನು ನಿನಗೆ ಗೊತ್ತೆ?”

‘ಹಳ್ಳಕ್ಕೆ ಬಿದ್ದವನನ್ನು ಕಲ್ಲಿನಿಂದ ಹೊಡೆ’ ಎಂಬ ಗಾದೆಗೆ ಅನುಸಾರವಾಗಿ, ಕ್ಷುಧ್ರಾಶಾಂತವಾದ ನನ್ನ ಬುದ್ಧಿಯ ಮೇಲೆ ಈಚಲುಮರ ಇಂಥ ಗಾಢವಾದ ಪ್ರಶ್ನೆಯನ್ನು ಎಸೆಯಬೇಕೆ? ಆದರೆ ಅದು ಮ್ಲೇಚ್ಛತರು. ಕರುಣೆಯನ್ನು ಬೇಡದು-ಕರುಣೆಯನ್ನು ತೋರದು. ನನಗೆ ಗೊತ್ತಿಲ್ಲವೆಂದು ನಾನು ಶರಣಾಗತನಾದೆ.

“ಪಾಪ, ಪಾಪ, ಮಾಯೆಯ ಸ್ವರೂಪವನ್ನು ತಿಳಿದುಕೊಳ್ಳಬೇಕಾದರೆ ಕಷ್ಟ. ಈಗ ಸ್ವಲ್ಪ ಎದ್ದು ನಿಂತುಕೋ-ಮೊಳಕಾಲುಗಳ ಸಂದಿಯಲ್ಲಿ ತಲೆಯನ್ನು ಹಾಕು-ಸುತ್ತ ನೋಡು. ಜಗತ್ತು ಹೇಗೆ ಕಾಣುತ್ತದೆ ಹೇಳು. ಅನೇಕ ಪ್ರಾಣಿಗಳಿಗೆ ಜಗದ ಸತ್ಯ ಈ ರೀತಿ ತೋರುತ್ತದೆ. ನಿನಗೆ ಈ ದೃಷ್ಟಿ ಮಾಯೆ. ಹೀಗೆ ಮಾಯೆ ಪರಸ್ಪರ ದೃಷ್ಟಿ ಭೇದದಿಂದ ಉತ್ಪನ್ನವಾದ ಸತ್ಯ ಪರಿಸ್ಥಿತಿ. ನಿನಗೆ ಗೊತ್ತಿರುವುದು ಏಳುಬಣ್ಣ. ಅದರೀಚೆ ಆಚೆ ಎಷ್ಟೋ ಬಣ್ಣಗಳಿವೆ. ಅದನ್ನು ಕಾಣಬಲ್ಲವರಿಗೆ ಜಗತ್ತು ಬೇರೆ ತರವಾಗಿ ತೋರುತ್ತದೆ. ಎಷ್ಟು ಪ್ರಾಣಿಗಳಿವೆಯೋ ಅಷ್ಟು ಲೋಕಗಳು. ಒಂದರದು ಇನ್ನೊಂದಕ್ಕೆ ಭ್ರಮೆ. ಈಗ ಮೇಲೆ ಈ ಸೂರ್ಯನನ್ನೇ ನೋಡು. ಇಲ್ಲಿ, ಸುಡುತ್ತಾ ಬೆಳ್ಳಗೆ ನೋಡುವುದಕ್ಕೆ ಅಸಾಧ್ಯನಾಗಿದ್ದಾನೆ. ಅಲ್ಲೋ? ಕೆಂಪಗೆ ತಣ್ಣಗೆ ಮೂಡುತ್ತಾ ಇದ್ದಾನೆ. ಅಲ್ಲಿರುವವರು ನಡವಳಿಕೆಗೂ ಇಲ್ಲಿರುವವರ ನಡವಳಿಕೆಗೂ ಅರ್ಥಾರ್ಥ ಸಂಬಂಧವಿಲ್ಲ. ಮೈಮುರಿತ, ಆಕಳಿಕೆ, ಕಾಫಿ ರೈಲು, ದೇವಸ್ಥಾನ, ಕೆರೆ, ಗಂಟೆ, ಸ್ಕೂಲು, ಸಂಧ್ಯಾವಂದನೆ, ಮಿಲ್ಲು, ಮಂಜಿನಹನಿ, ಹಕ್ಕಿಯ ಚಿಲಿಪಿಲಿ ಇತ್ಯಾದಿ, ಇತ್ಯಾದಿ ಹುಚ್ಚಾಟಗಳು ಅಲ್ಲಿ. ಅದರಾಚೆ ಏನೂ ಇಲ್ಲ-ನಿದ್ರೆ. ಇಲ್ಲಿನವರಂತೆ ಅಲ್ಲಿನವರು, ಅಲ್ಲಿನವರಂತೆ ಇಲ್ಲಿನವರು, ನಡೆದರೋ?”

ಈಗ ಈಚಲುಮರ ಗಹಗಹಿಸಿ ನಕ್ಕಿತು. ಈ ಎರಡು ಸತ್ಯಸ್ಥಿತಿಗಳ ಬೆರಕೆಯೇ ಹುಚ್ಚು ಎನ್ನಿಸಿಕೊಳ್ಳುವ ಸ್ಥಿತಿಯೇ! ನಾನೂ ಬೆರಗಾದೆ. ಈಚಲುಮರದ ಗರಿ ಪುನಃ ಸದ್ದುಮಾಡತೊಡಗಿತು.

“ಅಲ್ಲಿನ ಸತ್ಯ ಇಲ್ಲಿನ ಬೆರಗು-ಇಲ್ಲಿನ ಸತ್ಯ ಅಲ್ಲಿನ ಬೆರಗು. ಇಕೊ ಇದೇ ಸಮಯಕ್ಕೆ ಸೂರ್ಯ ಈ ಕಡೆ ಕೆಂಪಗೆ ಮುಳುಗುತ್ತಲೂ ಇದಾನೆ. ಇಲ್ಲಿನ ಪರಿಸ್ಥಿತಿಯೇ ಬೆರೆ. ಇದನ್ನು ವರ್ಣಿಸುವುದು ಆತ್ಮಪ್ರಶಂಸೆ ಆಗುವುದರಿಂದ ನಿನ್ನ ಊಹೆಗೆ ಬಿಟ್ಟಿದ್ದೆನೆ. ಈಗ ಬೆಳಿಗ್ಗೆಯೋ ಮಧ್ಯಾಹ್ನವೋ? ಸಂಜೆಯೋ ಸತ್ಯವಾಗಿ ಹೇಳು ನೋಡೋಣ. ಸೂರ್ಯನನ್ನೇ ಕೇಳೋಣವೇ? ಪಾಪ, ಅವನಿಗೂ ಭ್ರಮೆ. ಏಕೆಂದರೆ, ಆತ ಈ ಎರಡು ಸಂಧ್ಯೆಗಳನ್ನೂ ಎರಡು ಕಂಕುಳಲ್ಲಿಯೂ ಯಾವಾಗಲೂ ಇರುಕಿಕೊಂಡೇ ಇದಾನೆ, ಅರ್ಧನಾರೀಶ್ವರನಿಗಿಂತ ಒಂದು ಕೈ ಹೆಚ್ಚು ಈತ. ಆದರೆ ಆತನನ್ನು ಕೇಳಿದರೆ ‘ಇಲ್ಲ-ಹಾಗಂದರೇನು?’ ಎಂದೇ ಕೇಳುತ್ತಾನೆ. ತನ್ನ ಮಾಯೆ ತನಗೇ ಗೊತ್ತಿಲ್ಲದ ದೇವರು ಇದು. ಒಂದು ನಿಲುವಿನಲ್ಲಿ ಎಲ್ಲವೂ ಸತ್ಯ ಸಮೂಹವೆ ಭ್ರಮೆ ಅಥವಾ ಬೆರಗು ಎನ್ನಿಸಿಕೊಳ್ಳುತ್ತದೆ. ಈ ಭ್ರಮಸಮಷ್ಟಿಯನ್ನು ವ್ಯಷ್ಟಿವ್ಯಷ್ಟಿಯಾಗಿ ದುರ್ಬೀನಿನಲ್ಲಿ ನೋಡುವಮ್ತೆ ನೋಡು-ಆಗ ಒಂದೊಂದೂ ಸತ್ಯವೇ. ನನ್ನ ರಸದಿಂದ ತೇಜಸ್ವಿಯಾಗಿರುವವನ ನಡೆಯನ್ನೂ ನುಡಿಯನ್ನೂ ನಿರುಕಿಸು. ಆತ ಹೆಗೆ ನಡೆಯುತ್ತಾನೋ, ನುಡಿಯುತ್ತಾನೋ, ಅವುಗಳನ್ನೆಲ್ಲಾ ಯಾರೋ ಎಲ್ಲೋ ಅಂತೂ ಮಾಡುತ್ತಲೂ ಇದಾರೆ, ನುಡಿಯುತ್ತಲೂ ಇದ್ದಾರೆ. ಅವನ ಎಲ್ಲಾ ಸ್ಥಿತಿಗೂ ಲೋಕದಲ್ಲಿ ಸತ್ಯ ಪ್ರತೀಕವನ್ನು ಕಾಣಬಹುದು. ಹೀಗಿರುವಾಗ, ಆತ ಸತ್ಯಸ್ವರೂಪನಲ್ಲದೆ ಮತ್ತೇನು? ಅವನು ತೋರುವುದು ಸತ್ಯದ ಸಮಗ್ರ ದರ್ಶನವನ್ನಲ್ಲವೇ? ಈ ನಿಲುವಿಗೇರಲು ಯಾರು ಬಯಸುವುದಿಲ್ಲ? ಬಲ್ಲವನಿಗೆ ಈ ಸಮಗ್ರ ದರ್ಶನದಲ್ಲಿಯೇ ಪ್ರೀತಿ ಮತ್ತು ಉತ್ಸಾಹ. ಯೋಗಿಗೆ ತನ್ನ ತುರಿಯಾವಸ್ಥೆಯಲ್ಲಿ ಈ ಸ್ಥಿತಿ ಮತ್ತು ಈ ದರ್ಶನ ಲಭಿಸುತ್ತದೆ.
ಕರ್‍ಮಣ್ಯಭಿಪ್ರವೃತ್ತೋಪಿ ನೈವ ಕಿಂಚಿತ್ ಕರೋತಿ ಸಃ
ಎನ್ನುವ ಸ್ಥಿತಿ ಅವನದು. ಆದರೆ ಆತ ಸಾಹಸಿ. ಆತನಿಗೆ ತೋಳು ತೀಟೆ ಇದೆ. ಈ ಕಡೆಯಿಂದ ಆ ಕಡೆಗೆ-ಪ್ರತ್ಯಕ್ಷದಿಂದ ಪರೋಕ್ಷಜ್ಞಾನದ ದಡಕ್ಕೆ ಈಜಿಕೊಂಡು ಹೋಗುತ್ತಾನೆ. ನನ್ನ ರಸಸಿದ್ಧನೂ ಅಷ್ಟೆ. ತೆಪ್ಪವಿರುವಾಗ ಬಹು ಅಸಮರ್ಪಕವಾದ ಸ್ಥಿತಿ ಎಂದೇ ನಮ್ಮಿಬ್ಬರದೂ ಮತ ಮತ್ತು ವಾದ. ಆದರೆ ನನ್ನ ರಸಾನುಭವ ಬೇಕು ಎಲ್ಲರಿಗೂ-ರಸ ಬೇಡ. ನಿಮ್ಮಿರವೇ ಹೀಗೆ-ಪುಣ್ಯಸ್ಯಫಲ……ಮಾನವಾಃ| ನಾವೇನು ಮಾಡೋಣ.”

ಈ ಮಾತು ಕೇಳಿ ನನಗೇನೋ ದಿಗ್‌ಭ್ರಮೆ ಹಿಡಿಯಿತು. ಮಾನವನಿಗೂ ಈ ಈಚಲುಮರಕ್ಕೂ ಇದರ ಅನುಬಂಧಿಗಳ ರಸಕ್ಕೂ ಇರುವ ಅತ್ಯಂತ ಮೋಹಕವಾದ ಸಂಬಂಧ ಈ ಸದ್ಧರ್ಶನಾಪೇಕ್ಷೆಯಲ್ಲಿ ಬೇರೂರಿದೆಯೇ! ಎಂದುಕೊಂಡೆ. ಆಮೇಲೆ ಈಚಲುಗರಿಗಳ ಮೂಲಕ ಸೂರ್ಯನನ್ನು ನಿಟ್ಟಿಸುತ್ತಾ ‘ಎಲ ಎಲ ಮಾಯಾವಿ!’ ಎಂದೆ. ಏಕಕಾಲದಲ್ಲಿ ಎಷ್ಟು ವೇಷ ಹಾಕಬಲ್ಲ ಇವ! ಈತನ ನಿಜಸ್ವರೂಪವೇನೋ. ಆದರೆ ಇವನ ಈ ಭ್ರಮೆ ಇಲ್ಲದೆ ಜಗತ್ತೇ ನಡೆಯುವ ಹಾಗಿಲ್ಲ. ಭೂಮಿ ನಿಂತಿದೆ ಎಂದೇ ನಾವು ನಡೆಯಬೇಕು. ನಮ್ಮ ತಲೆ ತಿರುಗಿದಾಗ ಮಾತ್ರ ಅದು ಅಸ್ಥಿರ. ಅದರ ಸತ್ಯಸ್ವರೂಪ ನಮಗೆ ತಿಳಿಯಬೇಕಾದರೆ ಇಂಥ ವಿಷಮಾವಸ್ಥೆಯಲ್ಲಿ ಮಾತ್ರ ಸಾಧ್ಯ. ಅದಕ್ಕೆಯೇ ಇದೇ ಸತ್ಯ ಎಂದು ಸ್ಥಾಪಿಸುವ ಮತಸ್ಥಾಪಕರೆಲ್ಲರೂ ತಪಶ್ಚರ್‍ಯೆಯಿಂದ ವಿಶಮಾವಸ್ಥೆಯನ್ನು ತಂದುಕೊಳ್ಳುತ್ತಾರೋ ಏನೋ! ಕೆಲವರಿಗೆ ಇದು ಪ್ರಕೃತಿದತ್ತವಾಗಿಯೂ ಬರುತ್ತದೆ. ಇಂಥ ವಿಷಮರಿಂದಲೇ ಜಗತ್ತು ನಡೆಯುತ್ತಿದೆ. ಸುರಾಗ್ರಹಣ ಮಾಡುವುದೂ ಈ ವಿಷಮಾವಸ್ಥೆಯನ್ನು ಪಡೆಯಬೇಕೆಂದೇ? ಈ ಈಚಲಮರವೂ ಸತ್ಯನಾರಾಯಣಾಶ್ರಯವೇ? ಇದಕ್ಕೂ ನಾವು ಪ್ರದಕ್ಷಿಣೆ ಮಾಡಬೇಕೇ? ಎಂದುಕೊಳ್ಳುತ್ತಿರುವಾಗ ಅದು:

ನನ್ನಲ್ಲಿಯೂ ದೇವತಾಂಶವುಂಟು” ಎಂದು ಮರ್ಮರಿಸಿತು. “ನಾನು ಅನೇಕರಿಗೆ ಮನೆದೇವರು. ನೀನು ವ್ರಾತ್ಯ, ನಿನಗೆ ಗೊತ್ತಿಲ್ಲದಿರಬಹುದು. ನನಗೂ ಪೂಜೆಪುರಸ್ಕಾರಗಳುಂಟು. ನೀನರಿತಿರುವಷ್ಟು ನಿಕೃಷ್ಟನಲ್ಲ ನಾನು. ನನಗೂ ನಿನಗೂ ಎಷ್ಟೋ ಬಗೆಯಲ್ಲಿ ಸಾಮರಸ್ಯವಿದೆ. ನಿನ್ನಂತೆ ನನಗೂ ಬಯಲು ಕಾಡೇ ಇಷ್ಟ. ನಿನ್ನಂತೆ ನಾನೂ ಸ್ವಪ್ನ ಪ್ರಚೋದಕ, ಸತ್ಯಪ್ರಿಯ. ಆದರೆ ನಿನ್ನ ‘ಮಡಿ’ ಭಾವ ನನಗಿಲ್ಲ. ನಾನು ನಿನ್ನಷ್ಟು ಅಸಹಾಯನೂ ಅಲ್ಲ. ನನಗಿಷ್ಟ ಬಂದಕಡೆ ನಾನು ಹೋಗುತ್ತೇನೆ, ನೆಲಸುತ್ತೇನೆ. ಸಿಕ್ಕಿದ ಜಾಗದಲ್ಲಿ ಬೆಳೆಯುತ್ತೇನೆ. ನಾನು ಯೋಗಿಯಂತೆ ಸ್ವತಂತ್ರ. ಇದುವರೆಗೂ ಯಾರೂ ಎಲ್ಲೂ ನನ್ನನ್ನು ಪೋಷಿಸಿ ಬೆಳೆಸಿಲ್ಲ. ನಾನು ಸತ್ತರೆ ಅತ್ತವರೂ ಇಲ್ಲ. ಇದುವರೆಗೆ ಹೀಗೇ ನಡೆಯಿತು. ಆದರೆ ನಿಮ್ಮ ಈ ಸ್ವರಾಜ್ಯದಲ್ಲಿ ನನಗೇನಾಗುತ್ತದೊ. ಆದುದು ಆಗಲಿ. ನಾನೇನು ಪರೋಪಜೀವಿಯೇ? ನಿರ್ಭಯ-ಹಾಗೂ ಉಪಕಾರಿ. ಅಂತೂ ಏನಾದರೂ ಆಗಲಿ-ಅನುಭವಿಸುವುದನ್ನು ಅನುಭವಿಸಿಯೇ ತೀರಬೇಕಲ್ಲ. ನಹುಶನಂಥ ಮಹಾರಾಜನಿಗೆ ಇಂದ್ರಪದವಿ ಬಂದಾಗ ಮಹರ್ಷಿಗಳೇ ಪಲ್ಲಕ್ಕಿ ಹೊರಬೇಕಾಯಿತಂತೆ. ಇನ್ನು ಜನಕ್ಕೆ ಇಂದ್ರಪದವಿ ಬಂದಾಗ ಕೇಳಬೇಕೆ? ನನ್ನಿಂದ ಬೆಲ್ಲ ಮಾಡಿಸಿದರೂ ಮಾಡಿಸಿದರೇ! ಆ ಕಥೆ ಇರಲಿ, ಈಗ ಹಸಿದಿದೆಯೇ-ಇಗೋ ತಿನ್ನು” ಎಂದು ಮರ್ಮರಿಸಿ ಸುಮ್ಮನಾಯಿತು. ಈ ಕಾಂತಾರ ಖರ್ಜೂರ ವೃಕ್ಷ.

ನಾನು ಆಶ್ಚರ್ಯದಿಂದಲೂ ಆಶೆಯಿಂದಲೂ ತಲೆಯನ್ನು ಮೇಲಕ್ಕೆತ್ತಿದೆ. ಕಾಗೆಯೊಂದು ಈಚಲುಹಣ್ಣನ್ನು ಮುಖದ ಮೆಲೆ ಕೆಡವಿ ಹಾರಿಹೋಯಿತು. ಅದು ಬಿದ್ದ ಏಟಿಗೆ ‘ಹಾ’ ಎಂದು ಮುಖ ಮುಚ್ಚಿಕೊಂಡೆ. ಎಷ್ಟಾದರೂ ಈಚಲುಮರ ಈಚಲುಮರವೇ-ಆದರೆ ಹಣ್ಣು ರುಚಿಯಾಗಿತ್ತು. ಏನು ದೈತ್ಯ ಮರವಯ್ಯಾ ಇದು ಎಂದು ಆ ಹಣ್ಣನ್ನು ಚೀಪುತ್ತಿರುವಾಗ ನನ್ನ ಗೆಳೆಯರು ಬಂದು ನನ್ನ ಸುತ್ತ ನಿಂತು ನಗುತ್ತಿದ್ದರು.

ಅಂದಿನಿಂದ ನನಗೂ ಈ ವೃಕ್ಷಕ್ಕೂ ಸ್ನೇಹ ಬೆಳೆದಿದೆ. ಈ ಸ್ನೇಹ ಹೇಗೆ ತಿರುಗುತ್ತದೆಯೋ ನೋಡಬೇಕು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.